००४ रामेण लङ्काप्रस्थाने मुहूर्तनियोजनम्

वाचनम्
ಭಾಗಸೂಚನಾ

ಶ್ರೀರಾಮನೊಂದಿಗೆ ವಾನರ ಸೈನ್ಯದ ಪ್ರಯಾಣ ಮತ್ತು ಸಮುದ್ರ ತೀರದಲ್ಲಿ ಬೀಡುಬಿಟ್ಟಿದುದು

ಮೂಲಮ್ - 1

ಶೃತ್ವಾ ಹನೂಮತೋ ವಾಕ್ಯಂ ಯಥಾವದನುಪೂರ್ವಶಃ ।
ತತೋಽಬ್ರವಿನ್ಮಹಾತೇಜಾ ರಾಮಃ ಸತ್ಯಪರಾಕ್ರಮಃ ॥

ಅನುವಾದ

ಹನುಮಂತನ ಮಾತನ್ನು ಆಮೂಲಾಗ್ರವಾಗಿ ಕೇಳಿ ಸತ್ಯಪರಾಕ್ರಮಿ ಮಹಾತೇಜಸ್ವೀ ಭಗವಾನ್ ಶ್ರೀರಾಮನು ಇಂತೆಂದನು.॥1॥

ಮೂಲಮ್ - 2

ಯನ್ನಿವೇದಯಸೇ ಲಂಕಾಂ ಪುರೀಂ ಭೀಮಸ್ಯ ರಕ್ಷಸಃ ।
ಕ್ಷಿಪ್ರಮೇನಾಂ ವಧಿಷ್ಯಾಮಿ ಸತ್ಯಮೇತದ್ ಬ್ರಿವೀಮಿ ತೇ ॥

ಅನುವಾದ

ಹನುಮಂತನೇ! ನೀನು ವರ್ಣಿಸಿದ ಭಯಾನಕ ರಾಕ್ಷಸರ ಆ ಲಂಕೆಯನ್ನು ನಾನು ಬೇಗನೇ ನಾಶಮಾಡಿ ಬಿಡುವೆನೆಂದು ಸತ್ಯವಾಗಿ ಹೇಳುತ್ತೇನೆ.॥2॥

ಮೂಲಮ್ - 3

ಅಸ್ಮಿನ್ ಮುಹೂರ್ತೇ ಸುಗ್ರೀವ ಪ್ರಯಾಣಮಭಿರೇಚಯ ।
ಯುಕ್ತೋ ಮುಹೂರ್ತೇ ವಿಜಯೇ ಪ್ರಾಪ್ತೋ ಮಧ್ಯಂ ದಿವಾರಕಃ ॥

ಅನುವಾದ

ಸುಗ್ರೀವನೇ! ಸೂರ್ಯನು ನಡುನೆತ್ತಿಗೆ ಬಂದಿರುವನು, ಈ ವಿಜಯ ಎಂಬ ಮುಹೂರ್ತವು ನಮ್ಮ ಪ್ರಯಾಣಕ್ಕೆ ಉಪಯುಕ್ತವಾಗಿದೆ, ಅದಕ್ಕಾಗಿ ಇದೇ ಮುಹೂರ್ತದಲ್ಲಿ ಹೊರಡುವ ಸಿದ್ಧತೆ ಮಾಡು.॥3॥

ಮೂಲಮ್ - 4

ಸೀತಾಂ ಹೃತ್ವಾ ತು ತದ್ ಯಾತು ಕ್ವಾಸೌ ಯಾಸ್ಯತಿ ಜೀವಿತಃ ।
ಸೀತಾ ಶ್ರುತ್ವಾಭಿಯಾನಂ ಮೇ ಆಶಾಮೇಷ್ಯತಿ ಜೀವಿತೇ ।
ಜೀವಿತಾಂತೇಽಮೃತಂ ಸ್ಪೃಷ್ಟ್ವಾ ಪೀತ್ವಾಮೃತಮಿವಾತುರಃ ॥

ಅನುವಾದ

ರಾವಣನು ಸೀತೆಯನ್ನು ಕದ್ದುಕೊಂಡು ಎಲ್ಲಿಗೆ ಹೋದರೂ, ಅವನು ಜೀವಂತವಾಗಿರಲಾರನು. ಸಿದ್ಧಾದಿಗಳಿಂದ ಲಂಕೆಯ ಮೇಲೆ ನನ್ನ ಆಕ್ರಮಣದ ಸಮಾಚಾರವನ್ನು ಕೇಳಿ ಜೀವನದ ಅಂತ್ಯ ಸಮೀಪಿಸಿದಾಗ ರೋಗಿಯ ಅಮೃತವನ್ನು ಸ್ಪರ್ಶಿಸಿದರೆ, ಇಲ್ಲವೇ ಅಮೃತೋಪಮ ಔಷಧಿಯನ್ನು ಕಡಿದರೆ ಬದುಕುವ ಆಸೆ ಉಂಟಾಗುವಂತೆ ಸೀತೆಯು ಬದುಕಿರುವ ಆಸೆ ತಳೆಯುವಳು.॥4॥

ಮೂಲಮ್ - 5

ಉತ್ತರಾ ಫಾಲ್ಗುನೀ ಹ್ಯದ್ಯ ಶ್ವಸ್ತು ಹಸ್ತೇನ ಯೋಕ್ಷ್ಯತೇ ।
ಅಭಿಪ್ರಯಾಮ ಸುಗ್ರೀವ ಸರ್ವಾನೀಕ ಸಮಾವೃತಾಃ ॥

ಅನುವಾದ

ಇಂದು ಉತ್ತರಾಲ್ಗುಣಿ ಎಂಬ ನಕ್ಷತ್ರವಿದೆ. ನಾಳೆ ಹಸ್ತನಕ್ಷತ್ರದೊಂದಿಗೆ ಚಂದ್ರನ ಯೋಗವಾಗುವುದು. ಅದಕ್ಕಾಗಿ ಸುಗ್ರೀವನೇ! ನಾವು ಇಂದೇ ಎಲ್ಲ ಸೈನ್ಯದೊಂದಿಗೆ ಪ್ರಯಾಣ ಮಾಡೋಣ.॥5॥

ಮೂಲಮ್ - 6

ನಿಮಿತ್ತಾನಿ ಚ ಪಶ್ಯಾಮಿ ಯಾನಿ ಪ್ರಾದುರ್ಭವಂತಿ ವೈ ।
ನಿಹತ್ಯ ರಾವಣಂ ಸೀತಾಮಾನಯಿಷ್ಯಾಮಿ ಜಾನಕೀಮ್ ॥

ಅನುವಾದ

ಈಗ ಪ್ರಕಟವಾದ ಶಕುನ ಗಳನ್ನು ನೋಡಿದರೆ, ನಾನು ಅವಶ್ಯವಾಗಿ ರಾವಣನನ್ನು ವಧಿಸಿ ಜನಕನಂದಿನೀ ಸೀತೆಯನ್ನು ಕರೆತರುವೆ ಎಂದು ವಿಶ್ವಾಸ ಉಂಟಾಗುತ್ತಿದೆ.॥6॥

ಮೂಲಮ್ - 7

ಉಪರಿಷ್ಟಾದ್ಧಿ ನಯನಂ ಸ್ಫುರಮಾಣಮಿಮಂ ಮಮ ।
ವಿಜಯಂ ಸಮನುಪ್ರಾಪ್ತಂ ಶಂಸತೀವ ಮನೋರಥಮ್ ॥

ಅನುವಾದ

ಇದಲ್ಲದೆ ನನ್ನ ಬಲಗಣ್ಣು ಅದರುತ್ತಿದೆ. ಅದೂ ಕೂಡ ನನ್ನ ವಿಜಯಪ್ರಾಪ್ತಿಯನ್ನು ಮತ್ತು ಮನೋರಥ ಸಿದ್ಧಿಯನ್ನು ಸೂಚಿಸುತ್ತಿದೆ.॥7॥

ಮೂಲಮ್ - 8

ತತೋ ವಾನರರಾಜೇನ ಲಕ್ಷ್ಮಣೇನ ಸುಪೂಜಿತಃ ।
ಉವಾಚರಾಮೋ ಧರ್ಮಾತ್ಮಾ ಪುನರಪ್ಯರ್ಥಕೋವಿದಃ ॥

ಅನುವಾದ

ಇದನ್ನು ಕೇಳಿ ವಾನರರಾಜ ಸುಗ್ರೀವ ಮತ್ತು ಲಕ್ಷ್ಮಣರೂ ಅದನ್ನು ತುಂಬಾ ಆದರಿಸಿದರು. ಬಳಿಕ ನೀತಿನಿಪುಣ ಧರ್ಮಾತ್ಮಾ ಶ್ರೀರಾಮನು ಹೇಳಿದನು.॥8॥

ಮೂಲಮ್ - 9

ಅಗ್ರೇ ಯಾತು ಬಲಸ್ಯಾಸ್ಯ ನೀಲೋ ಮಾರ್ಗಮವೇಕ್ಷಿತುಮ್ ।
ವೃತಃ ಶತಸಹಸ್ರೇಣ ವಾನರಾಣಾಂ ತರಸ್ವಿನಾಮ್ ॥

ಅನುವಾದ

ಈ ಸೈನ್ಯದ ಮುಂದುಗಡೆ ಒಂದು ಲಕ್ಷ ಶೀಘ್ರಗಾಮಿ ವಾನರರಿಂದ ಒಡಗೂಡಿ ಸೇನಾಪತಿ ನೀಲನು ಮಾರ್ಗತೋರಿಸಲು ಹೊರಡಲಿ.॥9॥

ಮೂಲಮ್ - 10

ಫಲಮೂಲವತಾ ನೀಲ ಶೀತಕಾನನವಾರಿಣಾ ।
ಪಥಾ ಮಧುಮತಾ ಚಾಶು ಸೇನಾಂ ಸೇನಾಪತೇ ನಯ ॥

ಅನುವಾದ

ಸೇನಾಪತಿ ನೀಲನೇ! ನೀನು ಸಮಸ್ತ ಸೈನ್ಯವನ್ನು-ಫಲ-ಮೂಲಗಳು ಧಾರಾಳವಾಗಿ ಇರುವ, ನೆರಳು ಉಳ್ಳ ನಿಬಿಡವಾದ ವನಗಳಿರುವ, ತಣ್ಣೀರು ಮತ್ತು ಜೇನು ಸಿಗುವ ಮಾರ್ಗದ ಮೂಲಕ ಬೇಗನೆ ನಡೆಸಿಕೊಂಡು ಹೋಗು.॥10॥

ಮೂಲಮ್ - 11

ದೂಷಯೇಯುರ್ದುರಾತ್ಮಾನಃ ಪಥಿ ಮೂಲ ಫಲೋದಕಮ್ ।
ರಾಕ್ಷಸಾಃ ಪಥಿ ರಕ್ಷೇಥಾಸ್ತೇಭ್ಯಸ್ತ್ವಂ ನಿತ್ಯಮುದ್ಯತಃ ॥

ಅನುವಾದ

ದುರಾತ್ಮಾ ರಾಕ್ಷಸನು ದಾರಿಯಲ್ಲಿನ ಫಲ-ಮೂಲ-ಜಲಗಳನ್ನು ವಿಷದಿಂದ ದೂಷಿತಗೊಳಿಸುವ ಸಂಭವವಿರುತ್ತದೆ; ಆದ್ದರಿಂದ ನೀನು ಮಾರ್ಗದಲ್ಲಿ ಸತತ ಎಚ್ಚರವಾಗಿದ್ದು, ಆ ವಸ್ತುಗಳನ್ನು ರಕ್ಷಿಸಬೇಕು.॥11॥

ಮೂಲಮ್ - 12

ನಿಮ್ನೇಷು ವನದುರ್ಗೇಷು ವನೇಷು ಚ ವನೌಕಸಃ ।
ಅಭಿಪ್ಲುತ್ಯಾಭಿಪಶ್ಯೇಯುಃ ಪರೇಷಾಂ ನಿಹಿತಂ ಬಲಮ್ ॥

ಅನುವಾದ

ದುರ್ಗಮವನ, ಹೊಂಡಗಳು, ಸಾಧಾರಣ ಕಾಡು ಇರುವಲ್ಲಿ ವಾನರು ನೆಗೆಯುತ್ತಾ-ಓಡಿಹೋಗಿ ಎಲ್ಲಾದರೂ ಶತ್ರುಗಳ ಸೈನ್ಯ ಅಡಗಿಲ್ಲವಲ್ಲ ಎಂದು ನೋಡಲಿ. (ನಾವು ಮುಂದೆ ಹೋದಾಗ ಶತ್ರುಗಳು ಹಿಂದಿನಿಂದ ಆಕ್ರಮಿಸುವಂತೆ ಆಗಬಾರದು..॥12॥

ಮೂಲಮ್ - 13

ಯತ್ತು ಫಲ್ಗು ಬಲಂ ಕಿಂಚಿತ್ ತದತ್ರೈವೋಪಪದ್ಯತಾಮ್ ।
ಏತದ್ಧಿ ಕೃತ್ಯಂ ಘೋರಂ ನೋ ವಿಕ್ರಮೇಣ ಪ್ರಯುಜ್ಯತಾಮ್ ॥

ಅನುವಾದ

ಸೈನ್ಯದಲ್ಲಿರುವ ಬಾಲಕರು, ವೃದ್ಧರೂ ಮೊದಲಾದ ದುರ್ಬಲರು ಕಿಷ್ಕಿಂಧೆಯಲ್ಲೇ ಉಳಿಯಲಿ. ಏಕೆಂದರೆ ನಮ್ಮ ಯುದ್ಧರೂಪೀ ಕಾರ್ಯವು ಬಹಳ ಭಯಂಕರವಾಗಿದೆ. ಆದ್ದರಿಂದ ಇದಕ್ಕಾಗಿ ಬಲ-ವಿಕ್ರಮ ಸಂಪನ್ನ ಸೈನ್ಯವೇ ಪ್ರಯಾಣ ಮಾಡಬೇಕು.॥13॥

ಮೂಲಮ್ - 14

ಸಾಗರೌಘನಿಭಂ ಭೀಮಮಗ್ರಾನಿಕಂ ಮಹಾಬಲಾಃ ।
ಕಪಿಸಿಂಹಾಃ ಪ್ರಕರ್ಷಂತು ಶತಶೋಽಥ ಸಹಸ್ರಶಃ ॥

ಅನುವಾದ

ನೂರಾರು, ಸಾವಿರಾರು ಮಹಾಬಲ ಕಪಿಕೇಸರೀ ವೀರರು ಮಹಾಸಾಗರದ ಜಲರಾಶಿಯಂತೆ ಭಯಂಕರ ಹಾಗೂ ಅಪಾರ ವಾನರ ಸೈನ್ಯದ ಮುಂದುಗಡೆ ನಡೆಸಿಕೊಂಡು ಹೋಗಲಿ.॥14॥

ಮೂಲಮ್ - 15

ಗಜಶ್ಚ ಗಿರಿಸಂಕಾಶೋ ಗವಯಶ್ಚ ಮಹಾಬಲಃ ।
ಗವಾಕ್ಷಶ್ಚಾಗ್ರತೋ ಯಾತು ಗವಾಂ ದೃಪ್ತ ಇವಾರ್ಷಭಃ ॥

ಅನುವಾದ

ಪರ್ವತದಂತಹ ವಿಶಾಲಕಾಯ ಗಜ, ಮಹಾಬಲಿ ಗವಯ, ಮತ್ತಗೂಳಿಯಂತೆ ಪರಾಕ್ರಮಿ ಗವಾಕ್ಷ ಇವರು ಸೈನ್ಯದ ಮುಂದೆ ಮುಂದೆ ನಡೆಯಲಿ.॥15॥

ಮೂಲಮ್ - 16

ಯಾತು ವಾನರವಾಹಿನ್ಯಾ ವಾನರಃ ಪ್ಲವತಾಂ ಪತಿಃ ।
ಪಾಲಯನ್ ದಕ್ಷಿಣಂ ಪಾರ್ಶ್ವಮೃಷಭೋ ವಾನರರ್ಷಭಃ ॥

ಅನುವಾದ

ಹಾರುತ್ತಾ, ನೆಗೆಯುತ್ತಾ ನಡೆಯುವ ಕಪಿಗಳ ಪಾಲಕ ವಾನರ ಶ್ರೇಷ್ಠ ಋಷಭನು ಈ ವಾನರ ಸೈನ್ಯದ ಬಲಭಾಗವನ್ನು ರಕ್ಷಿಸುತ್ತಾ ನಡೆಯಲಿ.॥16॥

ಮೂಲಮ್ - 17

ಗಂಧಹಸ್ತೀವ ದುರ್ಧರ್ಷಸ್ತರಸ್ವೀ ಗಂಧಮಾದನಃ ।
ಯಾತು ವಾನರವಾಹಿನ್ಯಾಃ ಸವ್ಯಂ ಪಾರ್ಶ್ವಮಧಿಷ್ಠಿತಃ ॥

ಅನುವಾದ

ಗಂಧಹಸ್ತಿಯಂತೆ ದುರ್ಜಯ ಮತ್ತು ವೇಗಶಾಲೀ ವಾನರ ಗಂಧಮಾದನನು ಈ ಕಪಿ ಸೈನ್ಯದ ಎಡಭಾಗದಲ್ಲಿದ್ದು ರಕ್ಷಿಸುತ್ತಾ ನಡೆಯಲಿ.॥17॥

ಮೂಲಮ್ - 18

ಯಾಸ್ಯಾಮಿ ಬಲಮಧ್ಯೇಽಹಂ ಬಲೌಘಮಭಿಹರ್ಷಯನ್ ।
ಅಧಿರುಹ್ಯ ಹನೂಮಂತಮೈರಾವತಮಿವೇಶ್ವರಃ ॥

ಅನುವಾದ

ದೇವೇಂದ್ರನು ಐರಾವತ ಆನೆಯನ್ನೇರಿ ಹೋಗುವಂತೆ ನಾನು ಹನುಮಂತನ ಹೆಗಲೇರಿ ಸೈನ್ಯದ ನಡುವೆ ಇದ್ದು, ಇಡೀ ಸೈನ್ಯದ ಹರ್ಷವನ್ನು ಹೆಚ್ಚಿಸುತ್ತಾ ನಡೆಯುವೆನು.॥18॥

ಮೂಲಮ್ - 19

ಅಂಗದೇನೈಷ ಸಂಯಾತು ಲಕ್ಷ್ಮಣಶ್ಚಾಂತಕೋಪಮಃ ।
ಸಾರ್ವಭೌಮೇನ ಭೂತೇಶೋ ದ್ರವಿಣಾಧಿಪತಿರ್ಯಥಾ ॥

ಅನುವಾದ

ಧನಾಧ್ಯಕ್ಷ ಕುಬೇರನು ಸಾರ್ವಭೌಮ ಎಂಬ ದಿಗ್ಗಜವನ್ನೇರಿ ಪ್ರಯಾಣಿಸುವಂತೆ ಕಾಲನಂತೆ ಪರಾಕ್ರಮಿ ಲಕ್ಷ್ಮಣನು ಅಂಗದನ ಹೆಗಲೇರಿ ಪ್ರಯಾಣ ಮಾಡಲಿ.॥19॥

ಮೂಲಮ್ - 20

ಜಾಂಬವಾಂಶ್ಚ ಸುಷೇಣಶ್ಚ ವೇಗದರ್ಶೀ ಚ ವಾನರಃ ।
ಋಕ್ಷರಾಜೋ ಮಹಾಬಾಹುಃ ಕುಕ್ಷಿಂ ರಕ್ಷಂತು ತೇ ತ್ರಯಃ ॥

ಅನುವಾದ

ಮಹಾಬಾಹು ಋಕ್ಷರಾಜ ಜಾಂಬವಂತನು ಸುಷೇಣ ಮತ್ತು ವೇಗದರ್ಶಿ ವಾನರ ಇವರು ಮೂವರೂ ವಾನರ ಸೈನ್ಯದ ಹಿಂಭಾಗವನ್ನು ರಕ್ಷಿಸಲಿ.॥20॥

ಮೂಲಮ್ - 21

ರಾಘವಸ್ಯ ವಚಃ ಶ್ರುತ್ವಾ ಸುಗ್ರೀವೋ ವಾಹಿನೀಪತಿಃ ।
ವ್ಯಾದಿದೇಶ ಮಹಾವೀರ್ಯೋ ವಾನರಾನ್ವಾನರರ್ಷಭಃ ॥

ಅನುವಾದ

ರಘುನಾಥನ ಈ ಮಾತನ್ನು ಕೇಳಿ ಮಹಾಪರಾಕ್ರಮಿ ವಾನರ ಶಿರೋಮಣಿ ಸೇನಾಪತಿ ಸುಗ್ರೀವನು ಆ ವಾನರರಿಗೆ ಯಥೋಚಿತವಾಗಿ ಆಜ್ಞಾಪಿಸಿದನು.॥21॥

ಮೂಲಮ್ - 22

ತೇ ವಾನರಗಣಾಃ ಸರ್ವೇ ಸಮುತ್ಪತ್ಯ ಮಹೌಜಸಃ ।
ಗುಹಾಭ್ಯಃ ಶಿಖರೇಭ್ಯಶ್ಚ ಆಶು ಪುಪ್ಲುವಿರೇ ತದಾ ॥

ಅನುವಾದ

ಆಗ ಆ ಸಮಸ್ತ ಮಹಾಬಲಿ ವಾನರರು ತಮ್ಮ ಗುಹೆಗಳಿಂದ, ಶಿಖರ ಗಳಿಂದ ಶೀಘ್ರವಾಗಿ ಹೊರಟು ನೆಗೆಯುತ್ತಾ, ಹಾರುತ್ತಾ ನಡೆಯತೊಡಗಿದರು.॥22॥

ಮೂಲಮ್ - 23

ತತೋ ವಾನರರಾಜೇನ ಲಕ್ಷ್ಮಣೇನ ಚ ಪೂಜಿತಃ ।
ಜಗಾಮ ರಾಮೋ ಧರ್ಮಾತ್ಮಾ ಸಸೈನ್ಯೋ ದಕ್ಷಿಣಾಂ ದಿಶಮ್ ॥

ಅನುವಾದ

ಅನಂತರ ವಾನರರಾಜ ಸುಗ್ರೀವ ಮತ್ತು ಲಕ್ಷ್ಮಣರು ಆದರದಿಂದ ಒತ್ತಾಯಿಸಿದಾಗ ಸೈನ್ಯಸಹಿತ ಧರ್ಮಾತ್ಮಾ ಶ್ರೀರಾಮಚಂದ್ರನು ದಕ್ಷಿಣ ದಿಕ್ಕಿಗೆ ಹೊರಟನು.॥23॥

ಮೂಲಮ್ - 24

ಶತೈಃ ಶತಸಹಸ್ರೈಶ್ಚ ಕೋಟಿಭಿಶ್ಚಾಯುತೈರಪಿ ।
ವಾರಣಾಭೈಶ್ಚ ಹರಿಭಿರ್ಯಯೌ ಪರಿವೃತಸ್ತದಾ ॥

ಅನುವಾದ

ಪ್ರಯಾಣಿಸುತ್ತಿದ್ದ ಶ್ರೀರಾಮ ಹಿಂದೆ ಆ ವಿಶಾಲ ವಾನರ ವಾಹಿನೀ ನಡೆಯತೊಡಗಿತು. ಆ ಸೈನ್ಯದ ಎಲ್ಲ ವೀರರು ಸುಗ್ರೀವನಿಂದ ಪಾಲಿಸಲ್ಪಟ್ಟಿದ್ದರಿಂದ ಹೃಷ್ಟ-ಪುಷ್ಟ ಹಾಗೂ ಪ್ರಸನ್ನರಾಗಿದ್ದರು.॥25॥

ಮೂಲಮ್ - 25

ತಂ ಯಾಂತಮನುಯಾಂತೀ ಸಾ ಮಹತೀ ಹರಿವಾಹಿನೀ ।
ಹೃಷ್ಟಾಃ ಪ್ರಮುದಿತಾಃ ಸರ್ವೇ ಸುಗ್ರೀವೇಣಾಪಿ ಪಾಲಿತಾಃ ॥

ಮೂಲಮ್ - 26

ಆಪ್ಲವಂತಃ ಪ್ಲವಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ।
ಕ್ಷ್ವೇಲಂತೋ ವಿನದಂತಶ್ಚ ಜಗ್ಮುರ್ವೈ ದಕ್ಷಿಣಾಂ ದಿಶಮ್ ॥

ಅನುವಾದ

ಅವರಲ್ಲಿ ಕೆಲವು ವಾನರರು ಆ ಸೈನ್ಯವನ್ನು ರಕ್ಷಿಸುತ್ತಾ ನೆಗೆಯುತ್ತಾ -ಕುಣಿಯುತ್ತಾ ಎಲ್ಲೆಡೆ ಸುತ್ತಾಡುತ್ತಿದ್ದರು. ಕೆಲವು ಮಾರ್ಗಶೋಧಕರು ಕುಣಿಯುತ್ತಾ ಮುಂದೆ ಹೋಗುತ್ತಿದ್ದರು. ಕೆಲವರು ಮೇಘದಂತೆ ಗುಡುಗುಟ್ಟುತ್ತಾ, ಕೆಲವರು ಸಿಂಹದಂತೆ ಗರ್ಜಿಸುತ್ತಾ, ಕೆಲವರು ಕಿರುಚಾಡುತ್ತಾ ದಕ್ಷಿಣ ದಿಕ್ಕಿನತ್ತ ಮುಂದುವರಿದರು.॥25-26॥

ಮೂಲಮ್ - 27

ಭಕ್ಷಯಂತಃ ಸುಗಂಧೀನಿ ಮಧೂನಿ ಚ ಫಲಾನಿ ಚ ।
ಉದ್ವಹಂತೋ ಮಹಾವೃಕ್ಷಾನ್ ಮಂಜರೀ ಪುಂಜಧಾರಿಣಃ ॥

ಅನುವಾದ

ಅವರು ಸುಗಂಧಿತ ಮಧುವನ್ನು ಕುಡಿಯುತ್ತಾ, ಮಧುರ ಫಲಗಳನ್ನು ತಿನ್ನುತ್ತಾ, ಹೂವುಗುಚ್ಚಗಳುಳ್ಳ ವಿಶಾಲವೃಕ್ಷಗಳನ್ನು ಕಿತ್ತು ಹೆಗಲಲ್ಲಿರಿಸಿಕೊಂಡು ನಡೆಯುತ್ತಿದ್ದರು.॥27॥

ಮೂಲಮ್ - 28

ಅನ್ಯೋನ್ಯಂ ಸಹಸಾದೃಪ್ತಾ ನಿರ್ವಹಂತಿ ಕ್ಷಿಪಂತಿ ಚ ।
ಪತತಶ್ಚೋತ್ಪತಂತ್ಯನ್ಯೇ ಪಾತಯಂತ್ಯಪರೇ ಪರಾನ್ ॥

ಅನುವಾದ

ಕೆಲವು ಮದಮತ್ತ ವಾನರರು ವಿನೋದಕ್ಕಾಗಿ ಒಬ್ಬರನ್ನು ಮತ್ತೊಬ್ಬರನ್ನು ಹೊತ್ತುಕೊಂಡಿದ್ದರು. ಕೆಲವರು ತಮ್ಮ ಮೇಲೆ ಏರಿದ ವಾನರರನ್ನು ದೂರಕ್ಕೆ ತಳ್ಳಿ ಬಿಡುತ್ತಿದ್ದರು. ಕೆಲವರು ನಡೆಯುತ್ತಾ ಮೇಲಕ್ಕೆ ನೆಗೆಯುತ್ತಿದ್ದರು ಹಾಗೂ ಮತ್ತೊಬ್ಬ ವಾನರರಿಗೆ ಢಿಕ್ಕಿ ಹೊಡೆದು ಕೆಳಕ್ಕೆ ಬೀಳಿಸುತ್ತಿದ್ದರು.॥28॥

ಮೂಲಮ್ - 29

ರಾವಣೋ ನೋ ನಿಹಂತವ್ಯಃ ಸರ್ವೇ ಚ ರಜನೀಚರಾಃ ।
ಇತಿ ಗರ್ಜಂತಿ ಹರಯೋ ರಾಘವಸ್ಯ ಸಮೀಪತಃ ॥

ಅನುವಾದ

ಶ್ರೀರಘುನಾಥನ ಸನಿಹದಲ್ಲಿ ನಡೆಯುತ್ತಿದ್ದಾಗ - ‘ನಾವು ರಾವಣನನ್ನು ಕೊಲ್ಲಬೇಕು. ಸಮಸ್ತ ನಿಶಾಚರರನ್ನು ಸಂಹಾರಮಾಡಬೇಕು’ ಎಂದು ಗರ್ಜಿಸುತ್ತಿದ್ದರು.॥29॥

ಮೂಲಮ್ - 30

ಪುರಸ್ತಾದೃಷಭೋ ನೀಲೋ ವೀರಃ ಕುಮುದ ಏವ ಚ ।
ಪಂಥಾನಂ ಶೋಧಯಂತಿ ಸ್ಮ ವಾನರೈರ್ಬಹುಭಿಃ ಸಹ ॥

ಅನುವಾದ

ಎಲ್ಲರಿಗಿಂತ ಮುಂದೆ ಋಷಭ, ನೀಲ ಮತ್ತು ವೀರ ಕುಮುದ ಇವರು ಅಸಂಖ್ಯವಾನರರೊಂದಿಗೆ ದಾರಿಯನ್ನು ಸರಿಪಡಿಸುತ್ತಾ ಹೋಗುತ್ತಿದ್ದರು.॥30॥

ಮೂಲಮ್ - 31

ಮಧ್ಯೇ ತು ರಾಜಾ ಸುಗ್ರೀವೋ ರಾಮೋ ಲಕ್ಷ್ಮಣ ಏವ ಚ ।
ಬಲಿಭಿರ್ಬಹುಭಿರ್ಭೀಮೈರ್ವೃತಃ ಶತ್ರುನಿಬರ್ಹಣಃ ॥

ಅನುವಾದ

ಸೈನ್ಯದ ಮಧ್ಯ ಭಾಗದಲ್ಲಿ ಶತ್ರುಸೂದನರಾದ ರಾಜಾ ಸುಗ್ರೀವ, ಶ್ರೀರಾಮ ಮತ್ತು ಲಕ್ಷ್ಮಣರು ಅನೇಕ ಬಲಶಾಲಿ ಹಾಗೂ ಭಯಂಕರ ವಾನರರಿಂದ ಸುತ್ತುವರೆದು ಸಾಗುತ್ತಿದ್ದರು.॥31॥

ಮೂಲಮ್ - 32

ಹರಿಃ ಶತಬಲಿರ್ವೀರಃ ಕೋಟಿಭಿರ್ದಶಭಿರ್ವೃತಃ ।
ಸರ್ವಾಮೇಕೋ ಹ್ಯವಷ್ಟಭ್ಯ ರರಕ್ಷ ಹರಿವಾಹಿನೀಮ್ ॥

ಅನುವಾದ

ಶತಬಲಿ ಎಂಬ ಓರ್ವ ವೀರವಾನರನು ಹತ್ತುಕೋಟಿ ವಾನರರೊಂದಿಗೆ ಇಡೀ ಸೈನ್ಯವನ್ನು ನಿಯಂತ್ರಿಸುತ್ತಾ ಅದನ್ನು ರಕ್ಷಿಸುತ್ತಿದ್ದನು.॥32॥

ಮೂಲಮ್ - 33

ಕೋಟೀಶತಪರೀವಾರಃ ಕೇಸರೀ ಪನಸೋ ಗಜಃ ।
ಅರ್ಕಶ್ಚ ಬಹುಭಿಃ ಪಾರ್ಶ್ಚಮೇಕಂ ತಸ್ಯಾಭಿರಕ್ಷತಿ ॥

ಅನುವಾದ

ನೂರು ಕೋಟಿ ವಾನರರಿಂದ ಸುತ್ತುವರಿದ ಕೇಸರಿ ಮತ್ತು ಪನಸ ಇವರು ಸೈನ್ಯದ ದಕ್ಷಿಣಭಾಗವನ್ನು ರಕ್ಷಿಸುತ್ತಾ, ಅನೇಕ ವಾನರ ಸೈನಿಕರೊಂದಿಗೆ ಗಜ ಮತ್ತು ಅರ್ಕ ಇವರು ಆ ಸೈನ್ಯದ ಇನ್ನೊಂದು ಎಡಭಾಗವನ್ನು ರಕ್ಷಿಸುತ್ತಿದ್ದರು.॥33॥

ಮೂಲಮ್ - 34

ಸುಷೇಣೋ ಜಾಂಬವಾಂಶ್ಚೈವ ಋಕ್ಷೈರ್ಬಹುಭಿರಾವೃತೌ ।
ಸುಗ್ರೀವಂ ಪುರತಃ ಕೃತ್ವಾ ಜಘನಂ ಸಂರರಕ್ಷತುಃ ॥

ಅನುವಾದ

ಅಸಂಖ್ಯ ಕರಡಿಗಳಿಂದ ಸುತ್ತುವರಿದ ಸುಷೇಣ ಮತ್ತು ಜಾಂಬವಂತ ಸುಗ್ರೀವನನ್ನು ಮುಂದು ಮಾಡಿ ಸೈನ್ಯದ ಹಿಂಭಾಗವನ್ನು ರಕ್ಷಿಸುತ್ತಿದ್ದರು.॥34॥

ಮೂಲಮ್ - 35

ತೇಷಾಂ ಸೇನಾಪತಿರ್ವೀರೋ ನೀಲೋ ವಾನರಪುಂಗವಃ ।
ಸಂಪತನ್ ಪ್ಲವತಾಂ ಶೇಷ್ಠಸ್ತದ್ ಬಲಂ ಪರ್ಯವಾರಯತ್ ॥

ಅನುವಾದ

ಅವರೆಲ್ಲರ ಸೇನಾಪತಿ ಕಪಿಶ್ರೇಷ್ಠ ವಾನರಶಿರೋಮಣಿ ವೀರ ನಳನು ಆ ಸೈನ್ಯವನ್ನು ಎಲ್ಲೆಡೆಗಳಿಂದ ರಕ್ಷಿಸುತ್ತಾ, ನಿಯಂತ್ರಿಸುತ್ತಿದ್ದನು.॥35॥

ಮೂಲಮ್ - 36

ದರೀಮುಖಃ ಪ್ರಜಂಘಶ್ಚ ಜಂಭೋಽಥ ರಭಸಃ ಕಪಿಃ ।
ಸರ್ವತಶ್ಚ ಯಯುರ್ವೀರಾಸ್ತ್ವರಯಂತಃ ಪ್ಲವಂಗಮಾನ್ ॥

ಅನುವಾದ

ದಧಿಮುಖ, ಪ್ರಜಂಘ, ಜಂಭ ಮತ್ತು ರಭಸ - ಈ ವೀರರು ಎಲ್ಲ ಕಡೆಗಳಿಂದ ವಾನರರನ್ನು ಬೇಗನೇ ಮುಂದುವರಿಯುವಂತೆ ಪ್ರೇರೇಪಿಸುತ್ತಾ ನಡೆಯುತ್ತಿದ್ದರು.॥36॥

ಮೂಲಮ್ - 37

ಏವಂ ತೇ ಹರಿಶಾರ್ದೂಲ ಗಚ್ಛಂತಿ ಬಲದರ್ಪಿತಾಃ ।
ಅಪಶ್ಯಂತ ಗಿರಿಶ್ರೇಷ್ಠಂ ಸಹ್ಯಂ ಗಿರಿಶತಾಯುತಂ ॥

ಅನುವಾದ

ಈ ಪ್ರಕಾರ ಆ ಬಲೋನ್ಮತ್ತ ಕಪಿ ಕೇಸರಿಗಳು ಸರಿಯಾಗಿ ಮುಂದುವರಿಯುತ್ತಿದ್ದರು. ನಡೆಯುತ್ತಾ ನಡೆಯುತ್ತಾ ಸುತ್ತಲೂ ನೂರಾರು ಪರ್ವತಗಳುಳ್ಳ ಪರ್ವತ ಶ್ರೇಷ್ಠ ಸಹ್ಯಾದ್ರಿಯನ್ನು ನೋಡಿದರು.॥37॥

ಮೂಲಮ್ - 38

ಸರಾಂಸಿ ಚ ಸುಫುಲ್ಲಾನಿ ತಟಾಕಾನಿ ವರಾಣಿ ಚ ।
ರಾಮಸ್ಯ ಶಾಸನಂ ಜ್ಞಾತ್ವಾ ಭೀಮಕೋಪಸ್ಯ ಭೀತವತ್ ॥

ಮೂಲಮ್ - 39½

ವರ್ಜಯನ್ ನಾಗರಾಭ್ಯಾಶಾಂ ಸ್ತಥಾ ಜನಪದಾನಪಿ ।
ಸಾಗರೌಘನಿಭಂ ಭೀಮಂ ತದ್ ವಾನರಬಲಂ ಮಹತ್ ॥
ನಿಃಸಸರ್ಪ ಮಹಾಘೋರಂ ಭೀಮಘೋಷಮಿವಾರ್ಣವಮ್ ।

ಅನುವಾದ

ದಾರಿಯಲ್ಲಿ ಅವರಿಗೆ ಅನೇಕ ಮನೋಹರ ಕಮಲಗಳು ಅರಳಿದ ಸುಂದರ ಸರೋವರಗಳು ಕಂಡು ಬಂದವು. ದಾರಿಯಲ್ಲಿ ಯಾರೂ ಯಾವುದೇ ಉಪದ್ರವಮಾಡಬಾರದೆಂದು ಶ್ರೀರಾಮನ ಆಜ್ಞೆಯಿತ್ತು. ಭಯಂಕರ ಕೋಪವುಳ್ಳ ಶ್ರೀರಾಮಚಂದ್ರನ ಈ ಆದೇಶವನ್ನು ತಿಳಿದು ಸಮುದ್ರದ ಪ್ರವಾಹದಂತೆ ಅಪಾರ ಹಾಗೂ ಭಯಂಕರವಾಗಿ ಕಂಡುಬರುವ ಈ ವಿಶಾಲ ವಾನರ ಸೈನ್ಯವು ಭಯಗೊಂಡು ನಗರಗಳ ಬಳಿಯ ಸ್ಥಾನಗಳ್ನು ಮತ್ತು ದೇಶಗಳನ್ನು ದೂರಗಳಿಂದಲೇ ಬಿಡುತ್ತಾ ಹೋಗುತ್ತಿತ್ತು. ವಿಕಟ ಗರ್ಜನೆಯಿಂದಾಗಿ ಭಯಂಕರ ಶಬ್ದವುಳ್ಳ ಸಮುದ್ರದಂತೆ ಅದು ಮಹಾಘೋರವಾಗಿ ಅನಿಸುತ್ತಿತ್ತು.॥38-39॥

ಮೂಲಮ್ - 40½

ತಸ್ಯ ದಾಶರಥೇಃ ಪಾರ್ಶ್ವೇ ಶೂರಾಸ್ತೇ ಕಪಿಕುಂಜರಾಃ ॥
ತೂರ್ಣಮಾಪುಪ್ಲುವುಃ ಸರ್ವೇ ಸದಶ್ವಾ ಇವ ಚೋದಿತಾಃ ।

ಅನುವಾದ

ಆ ಎಲ್ಲ ಶೂರವೀರ ಕಪಿಕುಂಜರರು ಪಳಗಿಸಿದ ಉತ್ತಮ ಕುದುರೆಗಳಂತೆ ನೆಗೆಯುತ್ತಾ, ಕುಣಿಯುತ್ತಾ ಕೂಡಲೇ ದಶರಥನಂದನ ಶ್ರೀರಾಮನ ಬಳಿಗೆ ತಲುಪುತ್ತಿದ್ದರು.॥40॥

ಮೂಲಮ್ - 41½

ಕಪಿಭ್ಯಾಮುಹ್ಯಮಾನೌ ತೌ ಶುಶುಭಾತೇ ನರರ್ಷಭೌ ॥
ಮಹದ್ಭ್ಯಾಮಿವ ಸಂಸ್ಪೃಷ್ಟೌ ಗ್ರಹಾಭ್ಯಾಂ ಚಂದ್ರಭಾಸ್ಕರೌ ।

ಅನುವಾದ

ಹನುಮಂತ ಮತ್ತು ಅಂಗದ ಇವರು ಹೊರುತ್ತಿದ್ದ ನರಶ್ರೇಷ್ಠ ಶ್ರೀರಾಮ ಮತ್ತು ಲಕ್ಷ್ಮಣರು ಮಹಾಗ್ರಹರಾದ ಶುಕ್ರ ಮತ್ತು ಬೃಹಸ್ಪತಿಯವರಿಂದ ಕೂಡಿದ ಚಂದ್ರ-ಸೂರ್ಯರಂತೆ ಶೋಭಿಸುತ್ತಿದ್ದರು.॥41॥

ಮೂಲಮ್ - 42½

ತತೋ ವಾನರರಾಜೇನ ಲಕ್ಷ್ಮಣೇನ ಚ ಪೂಜಿತಃ ॥
ಜಗಾಮ ರಾಮೋ ಧರ್ಮಾತ್ಮಾ ಸಸೈನ್ಯೋ ದಕ್ಷಿಣಾಂ ದಿಶಮ್ ।

ಅನುವಾದ

ಆಗ ವಾನರರಾಜ ಸುಗ್ರೀವ ಮತ್ತು ಲಕ್ಷ್ಮಣನಿಂದ ಸಮ್ಮಾನಿತನಾದ ಧರ್ಮಾತ್ಮಾ ಶ್ರೀರಾಮನು ಸೈನ್ಯ ಸಹಿತ ದಕ್ಷಿಣದ ಕಡೆಗೆ ಮುಂದರಿಯುತ್ತಿದ್ದನು.॥42॥

ಮೂಲಮ್ - 43½

ತಮಂಗದಗತೋ ರಾಮಂ ಲಕ್ಷ್ಮಣಃ ಶುಭಯಾ ಗಿರಾ ॥
ಉವಾಚ ಪರಿಪೂರ್ಣಾರ್ಥಂ ಪೂರ್ಣಾರ್ಥ ಪ್ರತಿಭಾನವಾನ್ ।

ಅನುವಾದ

ಅಂಗದನ ಹೆಗಲ ಮೇಲೆ ಕುಳಿತ ಲಕ್ಷ್ಮಣನು ಶಕುನಗಳಿಂದ ಕಾರ್ಯ ಸಿದ್ಧಿಯ ಮಾತನ್ನು ಚೆನ್ನಾಗಿ ತಿಳಿಯುತ್ತಿದ್ದನು. ಅವನು ಪೂರ್ಣಕಾಮ ಭಗವಾನ್ ಶ್ರೀರಾಮನಲ್ಲಿ ಮಂಗಲಮಯ ವಾಣಿಯಲ್ಲಿ ಹೇಳಿದನು.॥43॥

ಮೂಲಮ್ - 44

ಹೃತಾಮವಾಪ್ಯ ವೈದೇಹೀಂ ಕ್ಷಿಪ್ರಂ ಹತ್ವಾ ಚ ರಾವಣಮ್ ॥

ಮೂಲಮ್ - 45½

ಸಮೃದ್ಧಾರ್ಥಃ ಸಮೃದ್ಧಾರ್ಥಾಮಯೋಧ್ಯಾಂ ಪ್ರತಿಯಾಸ್ಯಸಿ ।
ಮಹಾಂತೀ ಚ ನಿಮಿತ್ತಾನಿ ದಿವಿ ಭೂಮೌ ಚ ರಾಘವ ॥
ಶುಭಾನಿ ತವ ಪಶ್ಯಾಮಿ ಸರ್ವಾಣ್ಯೇವಾರ್ಥಸಿದ್ಧಯೇ ।

ಅನುವಾದ

ರಘುನಂದನ! ನನಗೆ ಭೂಮಿಯಲ್ಲಿ ಮತ್ತು ಆಕಾಶದಲ್ಲಿ ಅನೇಕ ಒಳ್ಳೊಳ್ಳೆಯ ಶಕುನಗಳು ಕಾಣುತ್ತಿವೆ. ಇವೆಲ್ಲವೂ ನಿಮ್ಮ ಮನೋರಥ ಸಿದ್ಧಿಯನ್ನು ಸೂಚಿಸುತ್ತವೆ. ನೀನು ಬೇಗನೇ ರಾವಣನನ್ನು ಕೊಂದು, ಕಳೆದು ಹೋದ ಸೀತೆಯನ್ನು ಪಡೆಯುವಿರಿ ಮತ್ತು ಸಫಲ ಮನೋರಥರಾಗಿ ಸಮೃದ್ಧಶಾಲಿ ಅಯೋಧ್ಯೆಯನ್ನು ಪ್ರವೇಶಿಸುವೆ.॥44-45॥

ಮೂಲಮ್ - 46

ಅನುವಾತಿ ಶುಭೋ ವಾಯುಃ ಸೇನಾಂ ಮೃದುಹಿತಃ ಸುಖಃ ॥

ಮೂಲಮ್ - 47

ಪೂರ್ಣವಲ್ಗುಸ್ವರಾಶ್ಚೇಮೇ ಪ್ರವದಂತಿ ಮೃಗದ್ವಿಜಾಃ ।
ಪ್ರಸನ್ನಾಶ್ಚ ದಿಶಃ ಸರ್ವಾ ವಿಮಲಶ್ಚ ದಿವಾಕರಃ ॥

ಮೂಲಮ್ - 48

ಉಶನಾ ಚ ಪ್ರಸನ್ನಾರ್ಚಿರನು ತ್ವಾಂ ಭಾರ್ಗವೋ ಗತಃ ।
ಬ್ರಹ್ಮರಾಶಿರ್ವಿಶುದ್ಧಶ್ಚ ಶುದ್ಧಾಶ್ಚ ಪರಮರ್ಷಯಃ ।
ಅರ್ಚಿಷ್ಮಂತಃ ಪ್ರಕಾಶಂತೇ ಧ್ರುವಂ ಸರ್ವೇ ಪ್ರದಕ್ಷಿಣಮ್ ॥

ಅನುವಾದ

ನೋಡು, ಸೈನ್ಯದ ಹಿಂದೆ ಶೀತಲ, ಮಂದ, ಹಿತವಾದ ಮತ್ತು ಸುಖಮಯ ವಾಯು ಬೀಸುತ್ತಾ ಇವೆ. ಈ ಪಶು ಮತ್ತು ಪಕ್ಷಿಗಳು ಪೂರ್ಣ ಮಧುರಸ್ವರದಲ್ಲಿ ಕೂಗುತ್ತಿವೆ. ಎಲ್ಲ ದಿಕ್ಕು ದಿಕ್ಕುಗಳು ಪ್ರಸನ್ನವಾಗಿವೆ. ಸೂರ್ಯನು ನಿರ್ಮಲವಾಗಿ ಕಂಡು ಬರುತ್ತಿರುವನು. ಭೃಗನಂದನ ಶುಕ್ರನೂ ತನ್ನ ಉಜ್ವಲ ಪ್ರಭೆಯಿಂದ ಹೊಳೆಯುತ್ತಿದ್ದು ನಮ್ಮ ಹಿಂದಿನ ದಿಕ್ಕಿನಲ್ಲಿ ಪ್ರಕಾಶಿಸುತ್ತಿರುವನು. ಸಪ್ತಋಷಿಗಳಿಂದ ಶೋಭಿಸುವ ಧ್ರುವ ನಕ್ಷತ್ರವೂ ನಿರ್ಮಲವಾಗಿ ಕಾಣುತ್ತಿದೆ. ಶುದ್ಧ ಮತ್ತು ಪ್ರಕಾಶಮಾನ ಸಮಸ್ತ ಸಪ್ತಋಷಿಗಳು ಧ್ರುವನಿಗೆ ಪ್ರದಕ್ಷಿಣೆ ಮಾಡುತ್ತಾ ಇದ್ದಾರೆ.॥46-48॥

ಮೂಲಮ್ - 49

ತ್ರಿಶಂಕುರ್ವಿಮಲೋ ಭಾತಿ ರಾಜರ್ಷಿಃ ಸಪುರೋಹಿತಃ ।
ಪಿತಾಮಹಃ ಪುರೋಽಸ್ಮಾಕಮಿಕ್ಷ್ವಾಕೂಣಾಂ ಮಹಾತ್ಮನಾಮ್ ॥

ಅನುವಾದ

ನಮ್ಮ ಜೊತೆಗೇ ಮಹಾಮನಾ ಇಕ್ಷ್ವಾಕು ವಂಶೀಯರ ಪಿತಾಮಹ ರಾಜರ್ಷಿ ತ್ರಿಶಂಕು ತನ್ನ ಪುರೋಹಿತ ವಸಿಷ್ಠರೊಂದಿಗೆ ನಮ್ಮ ಎದುರಿಗೇ ನಿರ್ಮಲ ಕಾಂತಿಯಿಂದ ಪ್ರಕಾಶಿಸುತ್ತಿರುವನು.॥49॥

ಮೂಲಮ್ - 50

ವಿಮಲೇ ಚ ಪ್ರಕಾಶೇತೇ ವಿಶಾಖೇ ನಿರುಪದ್ರವೇ ।
ನಕ್ಷತ್ರಂ ಪರಮಸ್ಮಾಕಮಿಕ್ಷ್ವಾಕೂಣಾಂ ಮಹಾತ್ಮನಾಮ್ ॥

ಅನುವಾದ

ಮಹಾಮನಸ್ವೀ ಇಕ್ಷ್ವಾಕುವಂಶಿಯರಾದ ನಮಗೆ ಎಲ್ಲಕ್ಕಿಂತ ಉತ್ತಮವಾದ ವಿಶಾಖಾ ಎಂಬ ಯುಗಲ ನಕ್ಷತ್ರವು ನಿರ್ಮಲ ಹಾಗೂ ಉಪದ್ರವಶೂನ್ಯ (ಮಂಗಳನೇ ಆದಿ ದುಷ್ಟಗ್ರಹಗಳಿಂದ ಆಕ್ರಾಂತನಾಗದೆ) ನಾಗಿ ಪ್ರಕಾಶಿಸುತ್ತಿರುವನು.॥50॥

ಮೂಲಮ್ - 51

ನೈರ್ಋತಂ ನೈರ್ಋತಾನಾಂ ಚ ನಕ್ಷತ್ರಮಭಿಪೀಡ್ಯತೇ ।
ಮೂಲೋ ಮೂಲವತಾ ಸ್ಪೃಷ್ಟೋ ಧೂಪ್ಯತೇ ಧೂಮಕೇತುನಾ ॥

ಅನುವಾದ

ರಾಕ್ಷಸರ ನಕ್ಷತ್ರವಾದ ಮೂಲಾ, ಅದರ ದೇವತೆ ನಿಋತಿಯು ಅತ್ಯಂತ ಪೀಡಿತವಾಗಿದೆ. ಆ ಮೂಲಾ ನಕ್ಷತ್ರದ ನಿಯಾಮಕ ಧೂಮಕೇತುವಿನಿಂದ ಆಕ್ರಾಂತವಾಗಿ ಸಂತಾಪಕ್ಕೆ ಭಾಗಿಯಾಗುತ್ತಿದೆ.॥51॥

ಮೂಲಮ್ - 52

ಸರ್ವಂ ಚೈತದ್ ವಿನಾಶಾಯ ರಾಕ್ಷಸಾನಾಮುಪಸ್ಥಿತಮ್ ।
ಕಾಲೇ ಕಾಲಗೃಹೀತಾನಾಂ ನಕ್ಷತ್ರಂ ಗ್ರಹಪೀಡಿತಮ್ ॥

ಅನುವಾದ

ಇದೆಲ್ಲವೂ ರಾಕ್ಷಸರ ವಿನಾಶಕ್ಕಾಗಿಯೇ ಉಪಸ್ಥಿತವಾಗಿದೆ. ಏಕೆಂದರೆ ಕಾಲಪಾಶದಲ್ಲಿ ಬಂಧಿತರಾದವರ ನಕ್ಷತ್ರವು ಸಮಯಾನುಸಾರ ಗ್ರಹಗಳಿಂದ ಪೀಡಿತವಾಗುತ್ತಾ ಇರುತ್ತದೆ.॥52॥

ಮೂಲಮ್ - 53

ಪ್ರಸನ್ನಾಃ ಸುರಸಾಶ್ಚಾಪೋ ವನಾನಿ ಫಲವಂತಿ ಚ ।
ಪ್ರವಾಂತಿ ನಾಧಿಕಾ ಗಂಧಾ ಯಥರ್ತುಕುಸುಮಾ ದ್ರುಮಾಃ ॥

ಅನುವಾದ

ಜಲವು ಸ್ವಚ್ಛ ಮತ್ತು ಉತ್ತಮ ರಸದಿಂದ ಪೂರ್ಣವಾಗಿ ಕಾಣುತ್ತಿದೆ, ಕಾಡಿನಲ್ಲಿ ಸಾಕಷ್ಟು ಫಲಗಳು ದೊರೆಯುತ್ತಿವೆ. ಸುಗಂಧಿತ ವಾಯು ಹೆಚ್ಚು ತೀವ್ರವಾಗಿ ಬೀಸುತ್ತಿಲ್ಲ. ವೃಕ್ಷಗಳಲ್ಲಿ ಋತುಗಳನು ಸಾರ ಹೂವುಗಳು ಅರಳಿವೆ.॥53॥

ಮೂಲಮ್ - 54

ವ್ಯೆಢಾನಿ ಕಪಿಸೈನ್ಯಾನಿ ಪ್ರಕಾಶಂತೋಽಧಿಕಂ ಪ್ರಭೋ ।
ದೇವಾನಾಮಿವ ಸೈನ್ಯಾನಿ ಸಂಗ್ರಾಮೆ ತಾರಕಾಮಯೇ ।
ಏವಮಾರ್ಯಂ ಸಮೀಕ್ಷೈತತ್ ಪ್ರೀತೋ ಭವಿತುಮರ್ಹಸಿ ॥

ಅನುವಾದ

ಪ್ರಭೋ! ವ್ಯೂಹಬದ್ಧ ವಾನರ ಸೈನ್ಯವು ಬಹಳ ಶೋಭಾಸಂಪನ್ನವಾಗಿ ಅನಿಸುತ್ತಿದೆ. ತಾರಕಾಮಯ ಸಂಗ್ರಾಮದ ಸಂದರ್ಭದಲ್ಲಿ ದೇವತೆಗಳ ಸೈನ್ಯವು ಉತ್ಸಾಹ ಸಂಪನ್ನವಾಗಿದ್ದಂತೆ ಇಂದು ಈ ವಾನರ ಸೈನ್ಯವೂ ಇದೆ. ಆರ್ಯ! ಇಂತಹ ಶುಭ ಲಕ್ಷಣವನ್ನು ನೋಡಿ ನೀನು ಸಂತೋಷಪಡಬೇಕು.॥54॥

ಮೂಲಮ್ - 55

ಇತಿ ಭ್ರಾತರಮಾಶ್ವಾಸ್ಯ ಹೃಷ್ಟಃ ಸೌಮಿತ್ರಿರಬ್ರವೀತ್ ।
ಅಥಾವೃತ್ಯ ಮಹೀಂ ಕೃತ್ಸ್ನಾಂ ಜಗಾಮ ಹರಿವಾಹಿನೀ ॥

ಅನುವಾದ

ತನ್ನಣ್ಣ ಶ್ರೀರಾಮನಿಗೆ ಆಶ್ವಾಸನೆಯನ್ನು ಕೊಡುತ್ತಾ ಹರ್ಷಗೊಂಡ ಸುಮಿತ್ರಾಕುಮಾರ ಲಕ್ಷ್ಮಣನು ಈ ಪ್ರಕಾರ ಹೇಳುತ್ತಿದ್ದಾಗ ವಾನರರ ಸೈನ್ಯವು ಅಲ್ಲಿಯ ಪ್ರದೇಶವನ್ನು ತುಂಬಿ ಮುಂದುವರಿಯತೊಡಗಿತು.॥55॥

ಮೂಲಮ್ - 56

ಋಕ್ಷವಾನರಶಾರ್ದೂಲೈರ್ನಖದ್ರಂಷ್ಟ್ರಾಯುಧೈರಪಿ ।
ಕರಾಗ್ರೈಶ್ಚರಣಾಗ್ರೈಶ್ಚ ವಾನರೈರುದ್ಧತಂ ರಜಃ ॥

ಅನುವಾದ

ಆ ಸೈನ್ಯದಲ್ಲಿ ಕೆಲವು ಕರಡಿಗಳಿದ್ದವು. ಕೆಲವು ಸಿಂಹದಂತೆ ಪರಾಕ್ರಮಿ ವಾನರರಿದ್ದರು. ಉಗುರು, ಹಲ್ಲುಗಳೇ ಅವರ ಆಯುಧವಾಗಿತ್ತು. ಆ ಎಲ್ಲ ವಾನರ ಸೈನಿಕರು ಕೈ-ಕಾಲುಗಳಿಂದ ಧೂಳನ್ನು ಹಾರಿಸುತ್ತಿದ್ದರು.॥56॥

ಮೂಲಮ್ - 57½

ಭೀಮಮಂತರ್ದಧೇ ಲೋಕಂ ನಿವಾರ್ಯ ಸವಿತುಃ ಪ್ರಭಾಮ್ ।
ಸಪರ್ವತವನಾಕಾಶಂ ದಕ್ಷಿಣಾಂ ಹರಿವಾಹಿನೀ ॥
ಛಾದಯಂತೀ ಯಯೌ ಭೀಮಾ ದ್ಯಾಮಿವಾಂಬುದಸಂತತಿಃ ।

ಅನುವಾದ

ಅವರು ಹಾರಿಸಿದ ಧೂಳಿನಿಂದ ಸೂರ್ಯನು ಮರೆಯಾಗಿ ಹೋದನು. ಮೇಘಗಳು ಆಕಾಶವನ್ನು ಮುಚ್ಚಿ ಮುಂದುವರಿಯುವಂತೆ ಆ ಭಯಂಕರ ವಾನರ ಸೈನ್ಯವು ವನ, ಪರ್ವತ, ಆಕಾಶ ಸಹಿತ ದಕ್ಷಿಣ ದಿಕ್ಕನ್ನು ಆಚ್ಛಾದಿಸಿ ಮುಂದೆ ಹೋಗುತ್ತಿತ್ತು.॥57॥

ಮೂಲಮ್ - 58½

ಉತ್ತರಂತ್ಯಾಶ್ಚ ಸೇನಾಯಾಃ ಸತತಂ ಬಹುಯೋಜನಮ್ ॥
ನದೀ ಸ್ರೋತಾಂಸಿ ಸರ್ವಾಣಿ ಸಸ್ಯಂದುರ್ವಿಪರೀತವತ್ ।

ಅನುವಾದ

ಆ ವಾನರ ಸೈನ್ಯವು ಯಾವುದಾದರೂ ನದಿಯನ್ನು ದಾಟುವಾಗ ಅನೇಕ ಯೋಜನ ದವರೆಗೆ ಆ ನದಿಯ ಪ್ರವಾಹ ಹಿಂದಕ್ಕೆ ಹರಿಯುತ್ತಿತ್ತು.॥58॥

ಮೂಲಮ್ - 59

ಸರಾಂಸಿ ವಿಮಲಾಂಭಾಂಸಿ ದ್ರುಮಾಕೀರ್ಣಾಂಶ್ಚ ಪರ್ವತಾನ್ ॥

ಮೂಲಮ್ - 60½

ಸಮಾನ್ ಭೂಮಿಪ್ರದೇಶಾಂಶ್ಚ ವಿನಾನಿ ಫಲವಂತಿ ಚ ।
ಮಧ್ಯೇನ ಚ ಸಮಂತಾಚ್ಚ ತಿರ್ಯಕ್ ಚಾಧಶ್ಚ ಸಾವಿಶತ್ ॥
ಸಮಾವೃತ್ಯ ವಹೀಂ ಕೃತ್ಸ್ನಾಂ ಜಗಾಮ ಮಹತೀ ಚಮೂಃ ।

ಅನುವಾದ

ಆ ವಿಶಾಲ ಸೈನ್ಯವು ನಿರ್ಮಲ ನೀರುಳ್ಳ ಸರೋವರ, ವೃಕ್ಷಗಳಿಂದ ತುಂಬಿರುವ ಪರ್ವತ, ಸಮತಟ್ಟಾದ ಪ್ರದೇಶ ಮತ್ತು ಹಣ್ಣುಗಳಿಂದ ತುಂಬಿರುವ ವನ-ಈ ಎಲ್ಲ ಸ್ಥಾನಗಳನ್ನು ಅತ್ತ-ಇತ್ತ, ಕೆಳಗೆ-ಮೇಲೆ ಎಲ್ಲ ಪ್ರದೇಶಗಳನ್ನು ಆವರಿಸಿ ನಡೆಯುತ್ತಿತ್ತು.॥59-60॥

ಮೂಲಮ್ - 61½

ತೇ ಹೃಷ್ಟ್ವದನಾಃ ಸರ್ವೇ ಜಗ್ಮುರ್ಮಾರುತರಂಹಸಃ ॥
ಹರಯೋ ರಾಘವಸ್ಯಾರ್ಥೇ ಸಮಾರೋಪಿತ ವಿಕ್ರಮಾಃ ।

ಅನುವಾದ

ಆ ಸೈನ್ಯದ ಎಲ್ಲ ವಾನರರು ಪ್ರಸನ್ನವದನರಾಗಿ, ವಾಯುವಿನಂತೆ ವೇಗಶಾಲಿಗಳಾಗಿದ್ದರು. ರಘುನಾಥನ ಕಾರ್ಯಸಿದ್ಧಿಗಾಗಿ ಅವರ ಪರಾಕ್ರಮ ಉಕ್ಕಿ ಹರಿಯುತ್ತಿತ್ತು.॥61॥

ಮೂಲಮ್ - 62½

ಹರ್ಷಂ ವೀರ್ಯಂ ಬಲೋದ್ರೇಕಾನ್ ದರ್ಶಯಂತಃ ಪರಸ್ಪರಮ್ ॥
ಯೌವನೋತ್ಸೇಕಜಾದ್ ದರ್ಪಾದ್ ವಿವಿಧಾಂಶ್ಚಕ್ರುರಧ್ವನಿ ।

ಅನುವಾದ

ಅವರು ಯೌವನದ ಉತ್ಸಾಹ ಮತ್ತು ಅಭಿಮಾನಜನಿತ ದರ್ಪದಿಂದಾಗಿ ಪರಸ್ಪರ ಉತ್ಸಾಹ, ಪರಾಕ್ರಮ ಹಾಗೂ ನಾನಾ ರೀತಿಯ ಬಲ-ಸಂಬಂಧೀ ಉತ್ಕರ್ಷವನ್ನು ತೋರಿಸುತ್ತಿದ್ದರು.॥62॥

ಮೂಲಮ್ - 63

ತತ್ರ ಕೇಚಿತ್ ಧ್ರುತಂ ಜಗ್ಮುರುತ್ಪೇತುಶ್ಚ ತಥಾಪರೇ ॥

ಮೂಲಮ್ - 64

ಕೇಚಿತ್ ಕಿಲಕಿಲಾಂ ಚಕ್ರುರ್ವಾನರಾ ವನಗೋಚರಾಃ ।
ಪ್ರಾಸ್ಫೋಟಯಂಶ್ಚ ಪುಚ್ಛಾನಿ ಸಂನಿಜಘ್ನುಃ ಪದಾನ್ಯಪಿ ॥

ಅನುವಾದ

ಅವರಲ್ಲಿ ಕೆಲವರು ವೇಗವಾಗಿ ನೆಲದಲ್ಲಿ ನಡೆಯುತ್ತಿದ್ದರೆ, ಕೆಲವರು ಆಕಾಶ ಮಾರ್ಗದಲ್ಲಿ ಹಾರಿಹೋಗುತ್ತಿದ್ದರು. ಎಷ್ಟೋ ವನವಾಸೀ ವಾನರರು ಕಿರಿಚುತ್ತಾ, ನೆಲಕ್ಕೆ ತಮ್ಮ ಬಾಲವನ್ನು ಅಪ್ಪಳಿಸುತ್ತಾ, ಕಾಲುಗಳನ್ನು ಅಪ್ಪಳಿಸುತ್ತಿದ್ದರು.॥63-64॥

ಮೂಲಮ್ - 65

ಭುಜಾನ್ ವಿಕ್ಷಿಪ್ಯ ಶೈಲಾಂಶ್ಚ ದ್ರುಮಾನನ್ಯೇ ಬಭಂಜಿರೇ ।
ಆರೋಹಂತಶ್ಚ ಶೃಂಗಾಣಿ ಗಿರೀಣಾಂ ಗಿರಿಗೋಚರಾಃ ॥

ಅನುವಾದ

ಕೆಲವರು ತಮ್ಮ ಬಾಹುಗಳನ್ನು ಚಾಚಿ ಪರ್ವತ-ಶಿಖರಗಳನ್ನು ಮತ್ತು ಮರಗಳನ್ನು ಕಿತ್ತುಹಾಕುತ್ತಿದ್ದರು. ಪರ್ವತಗಳಲ್ಲಿ ಸಂಚರಿಸುವ ಅನೇಕ ವಾನರರು ಬೆಟ್ಟಗಳ ತುದಿಗೆ ಹತ್ತುತ್ತಿದ್ದರು.॥65॥

ಮೂಲಮ್ - 66

ಮಹಾನಾದಾನ್ ಪ್ರಮುಂಚಂತಿ ಕ್ಷ್ವೇಡಾಮನ್ಯೇ ಪ್ರಚಕ್ರಿರೇ ।
ಊರುವೇಗೈಶ್ಚ ಮಮೃದುರ್ಲತಾಜಾಲಾನ್ಯನೇಕಶಃ ॥

ಅನುವಾದ

ಕೆಲವರು ಜೋರಾಗಿ ಗರ್ಜಿಸಿದರೆ, ಕೆಲವರು ಸಿಂಹನಾದ ಮಾಡುತ್ತಿದ್ದರು. ಕೆಲವರು ತಮ್ಮ ತೊಡೆಗಳ ವೇಗದಿಂದ ಅನೇಕ ಗಿಡ-ಬಳ್ಳಿಗಳನ್ನು ಹೊಸಕಿಹಾಕುತ್ತಿದ್ದರು.॥66॥

ಮೂಲಮ್ - 67½

ಜೃಂಭಮಾಣಾಶ್ಚ ವಿಕ್ರಾಂತಾ ವಿಚಿಕ್ರೀಡುಃ ಶಿಲಾದ್ರುಮೈಃ ।
ತತಃ ಶತಸಹಸ್ರೈಶ್ಚ ಕೋಟಿಭಿಶ್ಚ ಸಹಸ್ರಶಃ ॥
ವಾನರಾಣಾಂ ಸುಘೋರಾಣಾಂ ಶ್ರೀಮತ್ಪರಿವೃತಾ ಮಹೀ ।

ಅನುವಾದ

ಆ ಎಲ್ಲ ವಾನರರು ಬಹಳ ಪರಾಕ್ರಮಿಗಳಾಗಿದ್ದರು. ಆಲಸ್ಯವನ್ನು ಹೋಗಲಾಡಿಸಲು ಮೈಮುರಿಯುತ್ತ ಬಂಡೆ ಗಳೊಂದಿಗೆ, ದೊಡ್ಡ ದೊಡ್ಡ ಮರಗಳೊಂದಿಗೆ ಆಡುತ್ತಿದ್ದರು. ಆ ಸಾವಿರಾರು ಕೋಟಿ ವಾನರರಿಂದ ತುಂಬಿದ ಇಡೀ ಪೃಥ್ವಿಯು ಬಹಳ ಶೋಭಿಸುತ್ತಿತ್ತು.॥67॥

ಮೂಲಮ್ - 68

ಸಾ ಸ್ಮ ಯಾತಿ ದಿವಾರಾತ್ರಂ ಮಹತೀ ಹರಿವಾಹಿನೀ ॥

ಮೂಲಮ್ - 69

ಪ್ರಹೃಷ್ಟಮುದಿತಾಃಸರ್ವೇ ಸುಗ್ರೀವೇಣಾಭಿಪಾಲಿತಾಃ ।
ವಾನರಾಸ್ತ್ವರಿತಾ ಯಾಂತಿ ಸರ್ವೇ ಯುದ್ಧಾಭಿನಂದಿನಃ ।
ಪ್ರಮೋಕ್ಷಯಿಷವಃ ಸೀತಾಂ ಮುಹೂರ್ತಂ ಕ್ವಾಪಿ ನಾವಸನ್ ॥

ಅನುವಾದ

ಹೀಗೆ ಆ ವಿಶಾಲ ವಾನರ ಸೈನ್ಯವು ಹಗಲು-ರಾತ್ರಿ ನಡೆಯುತ್ತಾ ಇತ್ತು. ಸುಗ್ರೀವನಿಂದ ರಕ್ಷಿತರಾದ ಎಲ್ಲ ವಾನರರು ಹೃಷ್ಟ- ಪುಷ್ಟ ಮತ್ತು ಸಂತೋಷವಾಗಿದ್ದರು. ಎಲ್ಲರೂ ಉತ್ಸಾಹದಿಂದ ನಡೆಯುತ್ತಿದ್ದರು. ಎಲ್ಲರೂ ಯುದ್ಧವನ್ನು ಅಭಿನಂದಿಸುತ್ತಾ, ಸೀತೆಯನ್ನು ರಾವಣನ ಬಂಧನದಿಂದ ಬಿಡಿಸಲು ಬಯಸುತ್ತಿದ್ದರು. ಅದಕ್ಕಾಗಿ ಅವರು ದಾರಿಯಲ್ಲಿ ಎಲ್ಲಿಯೂ ಮುಹೂರ್ತ ಮಾತ್ರವೂ ವಿಶ್ರಾಂತಿ ಪಡೆಯಲಿಲ್ಲ.॥68-69॥

ಮೂಲಮ್ - 70

ತತಃ ಪಾದಪಸಂಬಾಧಂ ನಾನಾ ವನಸಮಾಯುತಮ್ ।
ಸಹ್ಯಪರ್ವತಮಾಸಾದ್ಯ ವಾನರಾಸ್ತೇ ಸಮಾರುಹನ್ ॥

ಅನುವಾದ

ನಡೆಯುತ್ತಾ ದಟ್ಟ ವೃಕ್ಷಗಳಿಂದ ವ್ಯಾಪ್ತವಾದ, ಅನೇಕಾನೇಕ ಕಾಡುಗಳಿಂದ ಕೂಡಿದ ಸಹ್ಯಪರ್ವತದ ಬಳಿಗೆ ಬಂದು ಅವರೆಲ್ಲ ವಾನರರೂ ಅದರ ಮೇಲೆ ಹತ್ತಿದರು.॥70॥

ಮೂಲಮ್ - 71

ಕಾನನಾನಿ ವಿಚಿತ್ರಾಣಿ ನದೀಪ್ರಸ್ರವಣಾನಿ ಚ ।
ಪಶ್ಚನ್ನಪಿ ಯಯೌ ರಾಮಃ ಸಹ್ಯಸ್ಯ ಮಲಯಸ್ಯ ಚ ॥

ಅನುವಾದ

ಶ್ರೀರಾಮಚಂದ್ರನು ಸಹ್ಯ ಮತ್ತು ಮಲಯಾಚಲದ ವಿಚಿತ್ರ ವನಗಳನ್ನು, ನದಿಗಳನ್ನು ಹಾಗೂ ಜಲಪಾತಗಳ ಶೋಭೆಯನ್ನು ನೋಡುತ್ತಾ ಪ್ರಯಾಣಿಸುತ್ತಿದ್ದನು.॥71॥

ಮೂಲಮ್ - 72

ಚಂಪಕಾಂಸ್ತಿಲಕಾಂಶ್ಚೂತಾನಶೋಕಾನ್ ಸಿಂದುವಾರಕಾನ್ ।
ತಿನಿಶಾನ್ ಕರವೀರಾಂಶ್ಚ ಭಂಜಂತಿ ಸ್ಮ ಪ್ಲವಂಗಮಾಃ ॥

ಅನುವಾದ

ಆ ವಾನರರು ದಾರಿಯಲ್ಲಿ ಸಿಕ್ಕಿದ ಸಂಪಿಗೆ, ತಿಲಕ, ಮಾವು, ಅಶೋಕ, ಸಿಂದುವಾರ, ಕರವೀರ ಮೊದಲಾದ ಮರಗಳನ್ನು ಮುರಿದುಬಿಡುತ್ತಿದ್ದರು.॥72॥

ಮೂಲಮ್ - 73

ಅಂಕೋಲಾಂಶ್ಚ ಕರಂಜಾಂಶ್ಚ ಪ್ಲಕ್ಷನ್ಯಗ್ರೋಧಪಾದಪಾನ್ ।
ಜಂಬೂಕಾಮಲಕಾನ್ ನೀಪಾನ್ ಭಂಜಂತಿ ಸ್ಮ ಪ್ಲವಂಗಮಾಃ ॥

ಅನುವಾದ

ನೆಗೆಯುತ್ತಾ ನಡೆಯುವ ಆ ವಾನರ ಸೈನಿಕರು ದಾರಿಯ ಅಂಕೋಲ, ಕರಂಜ, ಆಲ, ಜಂಬೂ, ನೆಲ್ಲಿ ಮತ್ತು ಕದಂಬ ಮೊದಲಾದ ವೃಕ್ಷಗಳನ್ನು ಮುರಿದು ಹಾಕುತ್ತಿದ್ದರು.॥73॥

ಮೂಲಮ್ - 74

ಪ್ರಸ್ತರೇಷು ಚ ರಮ್ಯೇಷು ವಿವಿಧಾಃ ಕಾನನದ್ರುಮಾಃ ।
ವಾಯುವೇಗ ಪ್ರಚಲೀತಾಃ ಪುಷ್ಪೈರವಕಿರಂತಿ ತಾನ್ ॥

ಅನುವಾದ

ರಮಣೀಯ ಬಂಡೆಗಳ ಮೇಲೆ ಹುಟ್ಟಿದ ಅನೇಕ ರೀತಿಯ ಕಾಡು ಮರಗಳು ಗಾಳಿಗೆ ತೂರಾಡುತ್ತಾ ಆ ವಾನರರ ಮೇಲೆ ಹೂವುಗಳ ಮಳೆಗರೆಯುತ್ತಿದ್ದವು.॥7.॥

ಮೂಲಮ್ - 75

ಮಾರುತಃ ಸುಖಸಂಸ್ಪರ್ಶೋ ವಾತಿ ಚಂದನ ಶೀತಲಃ ।
ಷಟ್ಪದೈರನುಕೂಜದ್ಭಿರ್ವನೇಷು ಮಧುಗಂಧಿಷು ॥

ಅನುವಾದ

ಮಧುವಿನಿಂದ ಸುಗಂಧಿತವಾದ ವನಗಳಲ್ಲಿ ಝೆಂಕರಿಸುವ ದುಂಭಿಗಳ ಜೊತೆಗೆ ಸುಗಂಧಿತವಾದ ಶೀತಲ, ಮಂದಾನಿಲವು ಬೀಸುತ್ತಿತ್ತು.॥7.॥

ಮೂಲಮ್ - 76½

ಅಧಿಕಂ ಶೈಲರಾಜಸ್ತು ಧಾತುಭಿಸ್ತು ವಿಭೂಷಿತಃ ।
ಧಾತುಭ್ಯಃ ಪ್ರಸೃತೋ ರೇಣುರ್ವಾಯುವೇಗೇನ ಘಟ್ಟಿತಃ ॥
ಸುಮಹದ್ವಾನರಾನೀಕಂ ಛಾದಯಾಮಾಸ ಸರ್ವತಃ ।

ಅನುವಾದ

ಆ ಪರ್ವತರಾಜವು ಗೈರಿಕಾದಿ ಧಾತುಗಳಿಂದ ಅಲಂಕೃತವಾಗಿ ಬಹಳ ಶೋಭಿಸುತ್ತಿತ್ತು. ಆ ಧಾತುಗಳಿಂದ ಹರಡಿದ ಧೂಳು ವಾಯುವೇಗದಿಂದ ಹಾರಿ ಆ ವಿಶಾಲ ವಾನರ ಸೈನ್ಯವನ್ನೆಲ್ಲ ಮುಚ್ಚಿಬಿಟ್ಟಿತ್ತು.॥7.॥

ಮೂಲಮ್ - 77

ಗಿರಿಪ್ರಸ್ಥೇಷು ರಮ್ಯೇಷು ಸರ್ವತಃ ಸಂಪ್ರಪುಷ್ಪಿತಾಃ ॥

ಮೂಲಮ್ - 78

ಕೇತಕ್ಯಃ ಸಿಂಧುವಾರಾಶ್ಚ ವಾಸಂತ್ಯಶ್ಚ ಮನೋರಮಾಃ ।
ಮಧವ್ಯೋ ಗಂಧಪೂರ್ಣಾಶ್ಚ ಕುಂದಗುಲ್ಮಾಶ್ಚ ಪುಷ್ಪಿತಾಃ ॥

ಅನುವಾದ

ರಮಣೀಯ ಪರ್ವತಶಿಖರಗಳ ಮೇಲೆ ಎಲ್ಲೆಡೆ ಅರಳಿದ ಕೆದಗೆ, ಜಾಜಿ, ವಾಸಂತೀ ಬಳ್ಳಿಗಳು ಬಹಳ ಮನೋಹರವಾಗಿ ಇದ್ದವು. ಅರಳಿದ ಮಲ್ಲಿಗೆಯ ಬಳ್ಳಿಗಳು ಪರಿಮಳದಿಂದ ತುಂಬಿದ್ದವು. ಕುಂದ ಪುಷ್ಪಗಳ ಗಿಡಗಳು ಹೂವುಗಳಿಂದ ತುಂಬಿ ನಳಿನಳಿಸುತ್ತಿದ್ದವು.॥77-78॥

ಮೂಲಮ್ - 79

ಚಿರಿಬಿಲ್ವಾ ಮಧೂಕಾಶ್ಚ ವಂಜುಲಾ ಬಕುಲಾಸ್ತಥಾ ।
ರಂಜಕಾಸ್ತಿಲಕಾಶ್ಚೈವ ನಾಗವೃಕ್ಷಾಶ್ಚ ಪುಷ್ಪಿತಾಃ ॥

ಅನುವಾದ

ಕಾಡುಬಿಲ್ವ, ಇಪ್ಪೆಮರ, ಅಶೋಕ, ರಂಜಕ, ತಿಲಕ, ನಾಗಕೇಸರ ಮೊದಲಾದ ವೃಕ್ಷಗಳು ಹೂವುಗಳಿಂದ ತುಂಬಿದ್ದವು.॥7.॥

ಮೂಲಮ್ - 80

ಚೂತಾಃ ಪಾಟಲಿಕಾಶ್ಚೈವ ಕೋವಿದಾರಾಶ್ಚ ಪುಷ್ಪಿತಾಃ ।
ಮುಚುಲಿಂದಾರ್ಜುನಾಶ್ಚೈವ ಶಿಂಶಪಾಃ ಕುಟಜಾಸ್ತಥಾ ॥

ಮೂಲಮ್ - 81

ಹಿಂತಾಲಾಸ್ತಿನಿಶಾಶ್ಚೈವ ಚೂರ್ಣಕಾ ನೀಪಕಾಸ್ತಥಾ ।
ನೀಲಾಶೋಕಾಶ್ಚ ಸರಲಾ ಅಂಕೋಲಾಃ ಪದ್ಮಕಾಸ್ತಥಾ ॥

ಅನುವಾದ

ಮಾವು, ಪಾದರಿ, ಕೋವಿದಾರಗಳೂ ಹೂವುಗಳಿಂದ ತುಂಬಿದ್ದವು. ಅರ್ಜುನ, ಶಿಂಶಿಷಾ, ಕುಟಜ, ಹಿಂತಾಲ, ಚೂರ್ಣಕ, ಕದಂಬ, ನಿಲಾಶೋಕ, ಸರಲ, ಅಂಕೋಲ ಮತ್ತು ಪದ್ಮಕ ವೃಕ್ಷಗಳೂ ಕೂಡ ಸುಂದರ ಪುಷ್ಪಗಳಿಂದ ಸುಶೋಭಿತವಾಗಿದ್ದವು.॥80-81॥

ಮೂಲಮ್ - 82

ಪ್ರಿಯಮಾಣೈಃ ಪ್ಲವಂಗೈಸ್ತು ಸರ್ವೇ ಪರ್ಯಾಕುಲೀಕೃತಾಃ ।
ವಾಪ್ಯಸ್ತಸ್ಮಿನ್ ಗಿರೌ ರಮ್ಯಾಃ ಪಲ್ವಲಾನಿ ತಥೈವ ಚ ॥

ಮೂಲಮ್ - 83

ಚಕ್ರವಾಕಾನುಚರಿತಾಃ ಕಾರಂಡವನಿಷೇವಿತಾಃ ।
ಪ್ಲವೈ ಕ್ರೌಂಚೈಶ್ಚ ಸಂಕೀರ್ಣಾ ವರಾಹಮೃಗಸೇವಿತಾಃ ॥

ಅನುವಾದ

ಸಂತೋಷ ಗೊಂಡ ಆ ವಾನರರು ಆ ಎಲ್ಲ ವೃಕ್ಷಗಳನ್ನು ಆವರಿಸಿಬಿಟ್ಟಿದ್ದವು. ಆ ಪರ್ವತದಲ್ಲಿ ಅನೇಕ ರಮಣೀಯ ಕಲ್ಯಾಣಿಗಳು, ಸಣ್ಣ-ಪುಟ್ಟ ಜಲಾಶಯಗಳು ಇದ್ದವು. ಅವುಗಳಲ್ಲಿ ಚಕ್ರವಾಕ, ನೀರುಕೋಳಿಗಳು ವಿಹರಿಸುತ್ತಿದ್ದವು. ನೀರು ಕಾಗೆ ಮತ್ತು ಕ್ರೌಂಚಗಳೂ ತುಂಬಿದ್ದವು ಹಾಗೂ ಹಂದಿಗಳು, ಜಿಂಕೆಗಳು ಅವುಗಳಲ್ಲಿ ನೀರು ಕುಡಿಯುತ್ತಿದ್ದವು.॥82-83॥

ಮೂಲಮ್ - 84

ಋಕ್ಷೈಸ್ತರಕ್ಷುಭಿಃ ಸಿಂಹೈಃ ಶಾರ್ದೂಲೈಶ್ಚ ಭಯಾವಹೈಃ ।
ವ್ಯಾಲೈಶ್ಚ ಬಹುಭಿರ್ಭೀಮೈಃ ಸೇವ್ಯಮಾನಾಃ ಸಮಂತತಃ ॥

ಅನುವಾದ

ಕರಡಿ, ಚಿರತೆ, ಸಿಂಹ, ಭಯಂಕರ ಹುಲಿ ಭಾರೀ ಭೀಷಣರಾದ ಅಸಂಖ್ಯ ದುಷ್ಟ ಆನೆಗಳು ಎಲ್ಲ ಕಡೆಗಳಿಂದ ಬಂದು-ಬಂದು ಆ ಜಲಾಶಯಗಳನ್ನು ಸೇವಿಸುತ್ತಿದ್ದರು.॥8.॥

ಮೂಲಮ್ - 85

ಪದ್ಮೈಃ ಸೌಗಂಧಿಕೈಃ ಫುಲ್ಲೈಃ ಕುಮುದೈಶ್ಚೋತ್ಪಲೈಸ್ತಥಾ ।
ವಾರಿಜೈರ್ವಿವಿಧೈಃ ಪುಷ್ಪೈ ರಮ್ಯಾಸ್ತತ್ರ ಜಲಾಶಯಾಃ ॥

ಅನುವಾದ

ಅರಳಿದ ಸುಗಂಧಿತ ಕಮಲ, ಕುಮುದ, ಉತ್ಪಲ ಹಾಗೂ ನೀರಿನಲ್ಲಿ ಅರಳುವ ಬಗೆ-ಬಗೆಯ ಇತರ ಪುಷ್ಪಗಳಿಂದ ಅಲ್ಲಿಯ ಸರೋವರಗಳು ತುಂಬಾ ರಮಣೀಯವಾಗಿ ಕಾಣುತ್ತಿದ್ದವು.॥85॥

ಮೂಲಮ್ - 86

ತಸ್ಯ ಸಾನುಷು ಕೂಜಂತಿ ನಾನಾ ದ್ವಿಜಗಣಾಸ್ತಥಾ ।
ಸ್ನಾತ್ವಾ ಪೀತ್ವೋದಕಾನ್ಯತ್ರ ಜಲೇ ಕ್ರೀಡಂತಿ ವಾನರಾಃ ॥

ಅನುವಾದ

ಆ ಪರ್ವತದ ಶಿಖರಗಳಲ್ಲಿ ನಾನಾ ರೀತಿಯ ಪಕ್ಷಿಗಳು ಕಲರವ ಮಾಡುತ್ತಿದ್ದವು. ವಾನರರು ಆ ಜಲಾಶಯಗಳಲ್ಲಿ ಮಿಂದು, ನೀರು ಕುಡಿಯುತ್ತಾ, ಜಲಕ್ರೀಡೆಯಾಡುತ್ತಿದ್ದವು.॥86॥

ಮೂಲಮ್ - 87

ಅನ್ಯೋನ್ಯಂ ಪ್ಲಾವಯಂತಿ ಸ್ಮ ಶೈಲಮಾರುಹ್ಯ ವಾನರಾಃ ।
ಫಲಾನ್ಯಮೃತಗಂಧೀನಿ ಮೂಲಾನಿ ಕುಸುಮಾನಿ ಚ ॥

ಮೂಲಮ್ - 88½

ಬಭಂಜುರ್ವಾನರಸ್ತತ್ರ ಪಾದಪಾನಾಂ ಮದೋತ್ಕಟಾಃ ।
ದ್ರೋಣಮಾತ್ರಪ್ರಮಾಣಾನಿ ಲಂಬಮಾನಾನಿ ವಾನರಾಃ ॥
ಯಯುಃ ಪಿಬಂತಃ ಸ್ವಸ್ಥಾಸ್ತೇ ಮಧೂನಿ ಮಧುಪಿಂಗಲಾಃ ।

ಅನುವಾದ

ಅವು ಪರಸ್ಪರ ನೀರನ್ನು ಎರಚಿಕೊಳ್ಳುತ್ತಿದ್ದವು. ಕೆಲವು ವಾನರರು ಪರ್ವತದ ಮೇಲೆ ಹತ್ತಿ ಅಲ್ಲಿಯ ಮರಗಳ ಅಮೃತತುಲ್ಯ ಸಹಿಯಾದ ಫಲ-ಮೂಲಗಳನ್ನು ಹೂವುಗಳನ್ನು ಕೀಳುತ್ತಿದ್ದರು. ಜೇನಿನ ಬಣ್ಣವುಳ್ಳ ಎಷ್ಟೋ ಉನ್ಮತ್ತ ವಾನರರು ಮರಗಳಲ್ಲಿ ತೂಗುತ್ತಿದ್ದ ಜೇನಿನ ಹೊಟ್ಟುಗಳಿಂದ ಜೇನನನ್ನು ದೊನ್ನೆಗಳಲ್ಲಿ ಕಿತ್ತು ಅದನ್ನು ಕುಡಿಯುತ್ತಾ ಸಂತೋಷವಾಗಿ ನಡೆಯುತ್ತಿದ್ದವು.॥87-88॥

ಮೂಲಮ್ - 89½

ಪಾದಪಾನವಭಂಜಂತೋ ವಿಕರ್ಷಂತಸ್ತಥಾ ಲತಾಃ ॥
ವಿಧಮಂತೋ ಗಿರಿವರಾನ್ ಪ್ರಯಯುಃ ಪ್ಲವಗರ್ಷಭಾಃ ।

ಅನುವಾದ

ಮರಗಳನ್ನು ಮುರಿಯುತ್ತಾ, ಬಳ್ಳಿಗಳನ್ನು ಕೀಳುತ್ತಾ, ದೊಡ್ಡ ದೊಡ್ಡ ಪರ್ವತಗಳನ್ನು ಪ್ರತಿಧ್ವನಿಸುತ್ತಾ, ಆ ಶ್ರೇಷ್ಠವಾನರರು ತೀವ್ರಗತಿಯಾಗಿ ಮುಂದರಿಯುತ್ತಿದ್ದವು.॥89॥

ಮೂಲಮ್ - 90½

ವೃಕ್ಷೇಭ್ಯೋಽನ್ಯೇ ತು ಕಪಯೋ ನದಂತೋ ಮಧು ದರ್ಪಿತಾಃ ॥
ಅನ್ಯೇ ವೃಕ್ಷಾನ್ ಪ್ರಪದ್ಯಂತೇ ಪ್ರಪಿಬಂತ್ಯಪಿ ಚಾಪರೇ ।

ಅನುವಾದ

ಇತರ ವಾನರರು ದರ್ಪದಿಂದ ಮರಗಳಿಂದ ಜೇನುಗೂಡುಗಳನ್ನು ಕೀಳುತ್ತಾ ಜೋರಾಗಿ ಗರ್ಜಿಸುತ್ತಿದ್ದವು. ಕೆಲವು ವಾನರರು ಮರಗಳನ್ನು ಹತ್ತಿ ಜೇನು ಕುಡಿಯುತ್ತಿದ್ದವು.॥90॥

ಮೂಲಮ್ - 91

ಬಭೂವ ವಸುಧಾತೈಸ್ತು ಸಂಪೂರ್ಣಾ ಹರಿಪುಂಗವೈಃ ।
ಯಥಾ ಕಮಲಕೇದಾರೈಃ ಪಕ್ವೈರಿವ ವಸುಂಧರಾ ॥

ಅನುವಾದ

ಆ ವಾನರ ಶಿರೋಮಣಿಗಳಿಂದ ತುಂಬಿದ ಅಲ್ಲಿಯ ಭೂಮಿಯು ಬೆಳೆದುನಿಂತ ಧಾನ್ಯದ ಹೊಲಗಳಂತೆ ಶೋಭಿಸುತ್ತಿತ್ತು.॥91॥

ಮೂಲಮ್ - 92

ಮಹೇಂದ್ರಮಥ ಸಂಪ್ರಾಪ್ಯ ರಾಮೋ ರಾಜೀವಲೋಚನಃ ।
ಆರುರೋಹ ಮಹಾಬಾಹುಃ ಶಿಖರಂ ದ್ರುಮಭೂಷಿತಮ್ ॥

ಅನುವಾದ

ಕಮಲನಯನ ಮಹಾಬಾಹು ಶ್ರೀರಾಮನು ಮಹೇಂದ್ರ ಪರ್ವತದ ಬಳಿಗೆ ಹೋಗಿ, ಬಗೆ-ಬಗೆಯ ವೃಕ್ಷಗಳಿಂದ ಸುಶೋಭಿತ ಅದರ ಶಿಖರವನ್ನು ಏರಿದನು.॥92॥

ಮೂಲಮ್ - 93

ತತಃ ಶಿಖರ ಮಾರುಹ್ಯ ರಾಮೋ ದಶರಥಾತ್ಮಜಃ ।
ಕೂರ್ಮಮೀನಸಮಾಕೀರ್ಣಮಪಶ್ಯತ್ ಸಲಿಲಾಶಯಮ್ ॥

ಅನುವಾದ

ಮಹೇಂದ್ರ ಪರ್ವತದ ಶಿಖರದ ಮೇಲೆ ಹತ್ತಿದ ದಶರಥನಂದನ ಭಗವಾನ್ ಶ್ರೀರಾಮನು ಆಮೆಗಳಿಂದ ಮತ್ತು ಮೀನುಗಳಿಂದ ತುಂಬಿದ ಸಮುದ್ರವನ್ನು ನೋಡಿದನು.॥93॥

ಮೂಲಮ್ - 94

ತೇ ಸಹ್ಯಂ ಸಮತಿಕ್ರಮ್ಯ ಮಲಯಂ ಚ ಮಹಾಗಿರಿಮ್ ।
ಆಸೇದುರಾನುಪೂರ್ವ್ಯೇಣ ಸಮುದ್ರಂ ಭೀಮನಿಃಸ್ವನಮ್ ॥

ಅನುವಾದ

ಈ ಪ್ರಕಾರ ಅವರು ಸಹ್ಯ ಹಾಗೂ ಮಲಯಾಚಲವನ್ನು ದಾಟಿ ಕ್ರಮವಾಗಿ ಮಹೇಂದ್ರ ಪರ್ವತದ ಸಮೀಪ ಭಯಂಕರ ಶಬ್ದಮಾಡುತ್ತಿದ್ದ ಸಮುದ್ರತೀರಕ್ಕೆ ಬಂದು ತಲುಪಿದರು.॥94॥

ಮೂಲಮ್ - 95

ಅವರುಹ್ಯ ಜಗಾಮಾಶು ವೇಲಾವನಮನುತ್ತಮಮ್ ।
ರಾಮೋ ರಮಯತಾಂ ಶ್ರೇಷ್ಠಃ ಸಸುಗ್ರೀವಃ ಸಲಕ್ಷ್ಮಣಃ ॥

ಅನುವಾದ

ಆ ಪರ್ವತದಿಂದ ಇಳಿದು ಭಕ್ತರ ಮನಸ್ಸನ್ನು ರಮಿಸುವುದರಲ್ಲಿ ಶ್ರೇಷ್ಠನಾದ ಶ್ರೀರಾಮನು ಸುಗ್ರೀವ ಮತ್ತು ಲಕ್ಷ್ಮಣರೊಂದಿಗೆ ಅವಸರವಾಗಿ ಸಮುದ್ರತೀರದ ಪರಮೋತ್ತಮ ವನವನ್ನು ಹೊಕ್ಕನು.॥95॥

ಮೂಲಮ್ - 96

ಅಥ ಧೌತೋಪಲತಲಾಂ ತೋಯೌಘೈಃ ಸಹಸೋತ್ಥಿತೈಃ ।
ವೇಲಾಮಾಸಾದ್ಯ ವಿಪುಲಾಂ ರಾಮೋ ವಚನಮಬ್ರವೀತ್ ॥

ಅನುವಾದ

ಆಗಲೆ ಎದ್ದ ಅಲೆಗಳಿಂದ ತೀರದ ಶಿಲೆಗಳು ತೊಳೆದಿದ್ದವು, ಆ ವಿಸ್ತಾರವಾದ ಸಿಂಧುತೀರಕ್ಕೆ ತಲುಪಿ ಶ್ರೀರಾಮನು ಹೇಳಿದನು.॥96॥

ಮೂಲಮ್ - 97

ಏತೇ ವಯಮನುಪ್ರಾಪ್ತಾಃ ಸುಗ್ರೀವ ವರುಣಾಲಯಮ್ ।
ಇಹೇದಾನೀಂ ವಿಚಿಂತಾ ಸಾ ಯಾ ನಃ ಪೂರ್ವಮುಪಸ್ಥಿತಾ ॥

ಅನುವಾದ

ಸುಗ್ರೀವನೇ! ನೋಡು, ನಾವೆಲ್ಲರೂ ಸಮುದ್ರ ತೀರಕ್ಕೆ ಬಂದುಬಿಟ್ಟೆವು. ಈಗ ಮೊದಲೇ ನಮ್ಮ ಮನಸ್ಸಿನಲ್ಲಿದ್ದ ಅದೇ ಚಿಂತೆಯು ಉಂಟಾಗಿದೆ.॥97॥

ಮೂಲಮ್ - 98

ಅತಃ ಪರಮತೀರೋಽಯಂ ಸಗಾರಃ ಸರಿತಾಂ ಪತಿಃ ।
ನ ಚಾಯಮಾನುಪಾಯೇನ ಶಕ್ಯಸ್ತರಿತುಮರ್ಣವಃ ॥

ಅನುವಾದ

ಮುಂದಾದರೋ ಆಚೆಯ ದಡವೇ ಕಾಣದಿರುವ, ಸರಿತೆಗಳ ಸ್ವಾಮಿ ಮಹಾಸಾಗರವೇ ಇದೆ. ಈಗ ಸರಿಯಾದ ಯಾವುದೇ ಉಪಾಯವಿಲ್ಲದೆ ಸಮುದ್ರವನ್ನು ದಾಟುವುದು ಅಸಂಭವವಾಗಿದೆ.॥98॥

ಮೂಲಮ್ - 99

ತದಿಹೈವ ನಿವೇಶೋಽಸ್ತು ಮಂತ್ರಃ ಪ್ರಸ್ತೂಯತಾಮಿಹ ।
ಯಥೇದಂ ವಾನರಬಲಂ ಪರಂ ಪಾರಮವಾಪ್ನುಯಾತ್ ॥

ಅನುವಾದ

ಆದ್ದರಿಂದ ಸೈನ್ಯವು ಇಲ್ಲೇ ಬೀಡು ಬಿಡಲಿ. ನಾವೆಲ್ಲ ಇಲ್ಲಿ ಕುಳಿತು ಯಾವ ರೀತಿಯಿಂದ ಈ ವಾನರ ಸೈನ್ಯವು ಸಮುದ್ರವನ್ನು ದಾಟಬಲ್ಲದು ಎಂದು ವಿಚಾರಮಾಡುವಾ.॥99॥

ಮೂಲಮ್ - 100

ಇತೀವ ಸ ಮಹಾಬಾಹುಃ ಸೀತಾಹರಣಕರ್ಶಿತಃ ।
ರಾಮಃ ಸಾಗರಮಾಸಾದ್ಯ ವಾಸಮಾಜ್ಞಾಪಯತ್ ತದಾ ॥

ಅನುವಾದ

ಈ ಪ್ರಕಾರ ಸೀತಾಪಹಾರದ ಶೋಕದಿಂದ ದುರ್ಬಲನಾದ ಮಹಾಬಾಹು ಶ್ರೀರಾಮನು ಸಮುದ್ರದ ತೀರಕ್ಕೆ ತಲುಪಿ ಎಲ್ಲ ಸೈನ್ಯಕ್ಕೆ ಅಲ್ಲೇ ಉಳಿಯುವಂತೆ ಅಪ್ಪಣೆ ಮಾಡಿದನು.॥100॥

ಮೂಲಮ್ - 101

ಸರ್ವಾಃ ಸೇನಾ ನಿವೇಶ್ಯಂತಾಂ ವೇಲಾಯಾಂ ಹರಿಪುಂಗವ ।
ಸಂಪ್ರಾಪ್ತೋ ಮಂತ್ರಕಾಲೋ ನಃ ಸಾಗರಸ್ಯೇಹ ಲಂಘನೇ ॥

ಅನುವಾದ

ಅವನು ಹೇಳಿದನು - ಕಪಿಶ್ರೇಷ್ಠರೇ! ಸಮಸ್ತ ಸೈನ್ಯಗಳನ್ನು ಸಮುದ್ರತೀರದಲ್ಲಿ ನೆಲೆಗೊಳಿಸಲಾಗುವುದು. ಈಗ ಇಲ್ಲಿ ನಮಗೆ ಸಮುದ್ರೋಲ್ಲಂಘದ ಉಪಾಯದ ಕುರಿತು ಯೋಚಿಸುವ ಕಾಲ ಬಂದಿದೆ.॥101॥

ಮೂಲಮ್ - 102

ಸ್ವಾಂ ಸ್ವಾಂ ಸೇನಾಂ ಸಮುತ್ಸೃಜ್ಯ ಮಾ ಚ ಕಶ್ಚಿತ್ ಕುತೋ ವ್ರಜೇತ್ ।
ಗಚ್ಛಂತು ವಾನರಾಃ ಶೂರಾ ಜ್ಞೇಯಂ ಛನ್ನಂ ಭಯಂ ಚ ನಃ ॥

ಅನುವಾದ

ಈಗ ಯಾವನೇ ಸೇನಾಪತಿಯೂ ಯಾವುದೇ ಕಾರಣದಿಂದ ತನ್ನ ಸೈನ್ಯವನ್ನು ಬಿಟ್ಟು ಎಲ್ಲಿಗೂ ಹೋಗಬಾರದು. ಎಲ್ಲ ಶೂರವೀರ ವಾನರ ಸೇನಾಪತಿಗಳು ಸೈನ್ಯದ ರಕ್ಷಣೆಗಾಗಿ ಸರಿಯಾದ ಸ್ಥಾನಗಳಲ್ಲಿ ಇರಬೇಕು. ನಮ್ಮ ಮೇಲೆ ರಾಕ್ಷಸರ ಮಾಯೆಯಿಂದ ಗುಪ್ತಭಯ ಬರಬಲ್ಲದು, ಇದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು.॥102॥

ಮೂಲಮ್ - 103

ರಾಮಸ್ಯ ವಚನಂ ಶೃತ್ವಾ ಸುಗ್ರೀವಃ ಸಹಲಕ್ಷ್ಮಣಃ ।
ಸೇನಾಂ ನಿವೇಶಯತ್ ತೀರೇಸಾಗರಸ್ಯ ದ್ರುಮಾಯುತೇ ॥

ಅನುವಾದ

ಶ್ರೀರಾಮಚಂದ್ರನ ಈ ಮಾತನ್ನು ಕೇಳಿ ಲಕ್ಷ್ಮಣ ಸಹಿತ ಸುಗ್ರೀವನು ವೃಕ್ಷಗಳಿಂದ ಸುಶೋಭಿತ ಸಾಗರ ತಟದಲ್ಲಿ ಸೈನ್ಯವನ್ನು ನಿಲ್ಲಿಸಿದನು.॥103॥

ಮೂಲಮ್ - 104

ವಿರರಾಜಸಮೀಪಸ್ಥಂ ಸಾಗರಸ್ಯ ಚ ತದ್ ಬಲಮ್ ।
ಮಧುಪಾಂಡುಜಲಃ ಶ್ರೀಮಾನ್ ದ್ವಿತೀಯ ಇವ ಸಾಗರಃ ॥

ಅನುವಾದ

ಸಮುದ್ರತೀರದಲ್ಲಿ ಬೀಡು ಬಿಟ್ಟ ವಿಶಾಲ ಸೈನ್ಯವು ಜೇನಿನಂತೆ ಪಿಂಗಲವರ್ಣದ ಜಲದಿಂದ ತುಂಬಿದ ಮತ್ತೊಂದು ಸಾಗರದಂತೆ ಶೋಭಿಸುತ್ತಿತ್ತು.॥104॥

ಮೂಲಮ್ - 105

ವೇಲಾವನಮುಪಾಗಮ್ಯ ತತಸ್ತೇ ಹರಿಪುಂಗವಾಃ ।
ನಿವಿಷ್ಟಾಶ್ಚ ಪರಂ ಪಾರಂ ಕಾಂಕ್ಷಮಾಣಾ ಮಹೋದಧೇಃ ॥

ಅನುವಾದ

ಸಾಗರ ತಟದ ವನಕ್ಕೆ ಸಾಗಿದ ಆ ಎಲ್ಲ ಶ್ರೇಷ್ಠ ವಾನರರು ಸಮುದ್ರವನ್ನು ದಾಟುವ ಅಭಿಲಾಷೆಯನ್ನಿಟ್ಟುಕೊಂಡು ಅಲ್ಲೇ ಉಳಿದುಕೊಂಡರು.॥105॥

ಮೂಲಮ್ - 106

ತೇಷಾಂ ನಿವಿಶಮಾನಾನಾಂ ಸೈನ್ಯಸಂನಾಹನಿಃ ಸ್ವನಃ ।
ಅಂತರ್ಧಾಯ ಮಹಾನಾದಮರ್ಣವಸ್ಯ ಪ್ರಶುಶ್ರುವೇ ॥

ಅನುವಾದ

ಅಲ್ಲಿ ನೆಲೆಸಿದ ಶ್ರೀರಾಮಾದಿಗಳ ಸೈನ್ಯದ ಸಂಚರಣದಿಂದ ಉಂಟಾದ ಕೋಲಾಹಲವು ಮಹಾಸಾಗರದ ಗರ್ಜನೆಯನ್ನು ಮೀರಿ ಕೇಳಿಸುತ್ತಿತ್ತು.॥106॥

ಮೂಲಮ್ - 107

ಸಾ ವಾನರಾಣಾಂ ಧ್ವಜಿನೀ ಸುಗ್ರೀವೇಣಾಭಿಪಾಲಿತಾ ।
ತ್ರಿಧಾ ನಿವಿಷ್ಟಾ ಮಹತೀ ರಾಮಸ್ಯಾರ್ಥಪರಾಭವತ್ ॥

ಅನುವಾದ

ಸುಗ್ರೀವನಿಂದ ಸುರಕ್ಷಿತವಾದ ಆ ವಾನರರ ವಿಶಾಲಸೈನ್ಯವು ಶ್ರೀರಾಮಚಂದ್ರನ ಕಾರ್ಯಸಾಧನೆಯಲ್ಲಿ ತತ್ಪರವಾಗಿ ಕರಡಿಗಳು, ಗೋಲಾಂಗುಲರು, ವಾನರರು ಹೀಗೆ ಮೂರು ಭಾಗಗಳಲ್ಲಿ ವಿಭಕ್ತವಾಗಿ ಉಳಕೊಂಡಿತ್ತು.॥107॥

ಮೂಲಮ್ - 108

ಸಾ ಮಹಾರ್ಣವಮಾಸಾದ್ಯ ಹೃಷ್ಟಾ ವಾನರವಾಹಿನೀ ।
ವಾಯುವೇಗಸಮಾಧೂತಂ ಪಶ್ಯಮಾನಾ ಮಹಾರ್ಣವಮ್ ॥

ಅನುವಾದ

ಮಹಾಸಾಗರದಿಂದ ತೀರಕ್ಕೆ ತಲುಪಿದ ಆ ವಾನರ ಸೈನ್ಯವು ವಾಯುವೇಗದಿಂದ ಅಲ್ಲೋಲಕಲ್ಲೋಲವಾದ ಸಮುದ್ರದ ಶೋಭೆಯನ್ನು ನೋಡುತ್ತಾ ತುಂಬಾ ಹರ್ಷಗೊಂಡಿತ್ತು.॥108॥

ಮೂಲಮ್ - 109

ದೂರಪಾರಮಸಂಬಾಧಂ ರಕ್ಷೋಗಣನಿಷೇವಿತಮ್ ।
ಪಶ್ಯಂತೋ ವರುಣಾವಾಸಂ ನಿಷೇದುರ್ಹರಿ ಯೂಥಪಾಃ ॥

ಅನುವಾದ

ಮತ್ತೊಂದು ದಡವು ಬಹಳ ದೂರವಾಗಿದ್ದ, ನಡುವಿನಲ್ಲಿ ಯಾವುದೇ ಆಶ್ರಯವಿಲ್ಲದ, ರಾಕ್ಷಸರ ಸಮುದಾಯ ವಾಸಿಸುತ್ತಿದ್ದ ಆ ವರುಣಾಲಯ ಸಮುದ್ರವನ್ನು ನೋಡುತ್ತಾ ಆ ವಾನರ ಯೂಥಪತಿಗಳು ಅದರ ತೀರದಲ್ಲಿ ಕುಳಿತೇ ಇದ್ದರು.॥109॥

ಮೂಲಮ್ - 110

ಚಂಡನಕ್ರಗ್ರಾಹಘೋರಂ ಕ್ಷಪಾದೌ ದಿವಸಕ್ಷಯೇ ।
ಹಸಂತಮಿವ ಫೇನೖಘೃರ್ನೃತ್ಯಂತಮಿವ ಚೋರ್ಮಿಭಿಃ ॥

ಮೂಲಮ್ - 111

ಚಂದ್ರೋದಯೆ ಸಮುದ್ಭೂತಂ ಪ್ರತಿಚಂದ್ರ ಸಮಾಕುಲಮ್ ।
ಚಂಡಾನಿಲಮಹಾಗ್ರಾಹೈಃ ಕೀರ್ಣಂ ತಿಮಿತಿಮಿಂಗಿಲೈಃ ॥

ಅನುವಾದ

ಕ್ರೋಧಗೊಂಡ ಮೊಸಳೆಗಳಿಂದ ಸಮುದ್ರವು ಭಯಂಕರವಾಗಿ ಕಾಣುತ್ತಿತ್ತು. ಸಂಜೆಯ ಪ್ರದೋಷಕಾಲದಲ್ಲಿ ಚಂದ್ರೋದಯವಾದಾಗ ಸಮುದ್ರಕ್ಕೆ ಭರತ ಬಂದಿತ್ತು. ಆಗ ಅದು ನೊರೆಯಿಂದ ಕೂಡಿದ್ದರಿಂದ ನಗುತ್ತಾ, ಉತ್ತಾಲ ತರಂಗಗಳಿಂದ ಕುಣಿಯುತ್ತಿದೆಯೋ ಎಂದೆನಿಸುತ್ತಿತ್ತು. ಚಂದ್ರನ ಪ್ರತಿಬಂಬಗಳಿಂದಾಗಿ ತುಂಬಿರುವಂತೆ ಕಾಣುತ್ತಿತ್ತು. ಪ್ರಚಂಡ ವಾಯುವೇಗದಂತೆ ದೊಡ್ಡ ದೊಡ್ಡ ಮೊಸಳೆಗಳನ್ನು ಮತ್ತು ತಿಮಿ ಎಂಬ ಮೀನುಗಳನ್ನು ನುಂಗಿ ಹಾಕುವ ಮಹಾಭಯಂಕರ ಜಲಜಂತುಗಳಿಂದ ತುಂಬಿರುವಂತೆ ತೋರುತ್ತಿತ್ತು.॥110-111॥

ಮೂಲಮ್ - 112

ದೀಪ್ತಭೋಗೈರಿವಾಕೀರ್ಣಂ ಭುಜಂಗೈರ್ವರುಣಾಲಯಮ್ ।
ಅವಗಾಢಂ ಮಹಾಸತ್ವೈರ್ನಾನಾಶೈಲಸಮಾಕುಲಮ್ ॥

ಅನುವಾದ

ಆ ವರುಣಾಲಯವು ಉರಿಯುವ ಹೆಡೆಗಳುಳ್ಳ ಸರ್ಪಗಳಿಂದ, ವಿಶಾಲಕಾಯ ಜಲಜಂತುಗಳಿಂದ ಹಾಗೂ ನಾನಾ ಪರ್ವತಗಳಿಂದ ವ್ಯಾಪ್ತವಾದಂತೆ ಅನಿಸುತ್ತಿತ್ತು.॥112॥

ಮೂಲಮ್ - 113

ಸುದುರ್ಗಂ ದುರ್ಗಮಾರ್ಗಂ ತಮಗಾಧಮಸುರಾಲಯಮ್ ।
ಮಕರೈರ್ನಾಗಭೋಗೈಶ್ಚ ವಿಗಾಢಾ ವಾತಲೋಲಿತಾಃ ।
ಉತ್ಪೇತುಶ್ಚ ನಿಪೇತುಶ್ಚ ಪ್ರಹೃಷ್ಟಾ ಜಲರಾಶಯಃ ॥

ಅನುವಾದ

ರಾಕ್ಷಸರ ನಿವಾಸಭೂತ ಆ ಅಗಾಧ ಮಹಾಸಾಗರವು ಅತ್ಯಂತ ದುರ್ಗಮವಾಗಿತ್ತು. ಅದನ್ನು ದಾಟಲು ಯಾವುದೇ ದಾರಿ ಅಥವಾ ಸಾಧನೆ ದುರ್ಲಭವಾಗಿತ್ತು. ವಾಯುವೇಗದಿಂದ ಅದರಲ್ಲಿ ಏಳುವ ಚಂಚಲ ಅಲೆಗಳು ಮೊಸಳೆಗಳಿಂದ ಮತ್ತು ವಿಶಾಲಕಾಯ ಸರ್ಪಗಳಿಂದ ವ್ಯಾಪ್ತವಾಗಿದ್ದು ಬಹಳ ಉಲ್ಲಾಸದಿಂದ ಮೇಲಕ್ಕೆದ್ದು, ಕೆಳಕ್ಕೆ ಇಳಿಯುತ್ತಿದ್ದವು.॥113॥

ಮೂಲಮ್ - 114

ಅಗ್ನಿಚೂರ್ಣಾಮವಾವಿದ್ಧಂ ಭಾಸ್ವರಾಂಬು ಮಹೋರಗಮ್ ।
ಸುರಾರಿನಿಲಯಂ ಘೋರಂ ಪಾತಾಲವಿಷಯಂ ಸದಾ ॥

ಮೂಲಮ್ - 115

ಸಾಗರಂ ಚಾಂಬರಪ್ರಖ್ಯಮಂಬರಂ ಸಾಗರೋಪಮಮ್ ।
ಸಾಗರಂ ಚಾಂಬರಂ ಚೇತಿ ನಿರ್ವಿಶೇಷಮದೃಶ್ಯತ ॥

ಅನುವಾದ

ಸಮುದ್ರದ ಜಲಕಣಗಳು ತುಂಬಾ ಹೊಳೆಯುವಂತೆ ಕಾಣುತ್ತಿತ್ತು. ಅದನ್ನು ನೋಡಿದರೆ ಸಾಗರದಲ್ಲಿ ಬೆಂಕಿಯ ಕಿಡಿಗಳೇ ಚೆಲ್ಲಿಬಿಟ್ಟಿವೆಯೋ ಎಂಬಂತೆ ಅನಿಸುತ್ತಿತ್ತು. (ಹರಡಿದ ನಕ್ಷತ್ರಗಳಿಂದ ಆಕಾಶವೂ ಹಾಗೆಯೇ ಕಂಡುಬರುತ್ತಿತ್ತು.) ಸಮುದ್ರದಲ್ಲಿ ದೊಡ್ಡ ದೊಡ್ಡ ಸರ್ಪಗಳಿದ್ದವು. (ಆಕಾಶದಲ್ಲಿಯೂ ರಾಹು ಮೊದಲಾದ ಸರ್ಪಾಕಾರವೇ ನೋಡಲಾಗುತ್ತಿತ್ತು.) ಸಮುದ್ರವು ದೇವದ್ರೋಹಿ ದೈತ್ಯರ ಮತ್ತು ರಾಕ್ಷಸರ ಆವಾಸ ಸ್ಥಾನವಾಗಿತ್ತು. (ಆಕಾಶವೂ ಹಾಗೆಯೇ ಇತ್ತು. ಏಕೆಂದರೆ ಅಲ್ಲಿಯೂ ಅವರ ಸಂಚರಣವಿತ್ತು.) ಎರಡೂ ನೋಡಲು ಭಯಂಕರ ಮತ್ತು ಪಾತಾಳದಂತೆ ಗಂಭೀರವಾಗಿದ್ದವು. ಹೀಗೆ ಸಮುದ್ರವು ಆಕಾಶ ದಂತೆ ಹಾಗೂ ಆಕಾಶವು ಸಮುದ್ರದಂತೆ ಅನಿಸುತ್ತಿತ್ತು. ಸಮುದ್ರ ಮತ್ತು ಆಕಾಶದಲ್ಲಿ ಯಾವುದೇ ಅಂತರವಿರಲಿಲ್ಲ.॥114-115॥

ಮೂಲಮ್ - 116

ಸಂಪೃಕ್ತಂ ನಭಸಾಪ್ಯಂಭಃ ಸಂಪೃಕ್ತಂ ಚ ನಭೋಂಽಭಸಾ ।
ತಾದೃಗ್ರೂಪೇ ಸ್ಮ ದೃಶ್ಯೇತೇ ತಾರಾರತ್ನಸಮಾಕುಲೇ ॥

ಅನುವಾದ

ಜಲವು ಆಕಾಶದೊಂದಿಗೆ ಸೇರಿಹೋಗಿತ್ತು ಹಾಗೂ ಆಕಾಶ ನೀರಿನೊಂದಿಗೆ. ಆಕಾಶದಲ್ಲಿ ನಕ್ಷತ್ರಗಳು ಚೆಲ್ಲಿಹೋಗಿದ್ದರೆ, ಸಮುದ್ರದಲ್ಲಿ ಮುತ್ತುಗಳು ಚೆಲ್ಲಿದ್ದವು. ಅದರಿಂದ ಎರಡೂ ಒಂದೇ ರೀತಿ ಕಾಣುತ್ತಿತ್ತು.॥116॥

ಮೂಲಮ್ - 117

ಸಮುತ್ಪತಿತಮೇಘಸ್ಯ ವೀಚಿಮಾಲಾಕುಲಸ್ಯ ಚ ।
ವಿಶೇಷೋ ನ ದ್ವಯೋರಾಸೀತ್ ಸಾಗರಸ್ಯಾಂಬರಸ್ಯ ಚ ॥

ಅನುವಾದ

ಆಕಾಶದಲ್ಲಿ ಮೋಡಗಳು ತುಂಬಿದ್ದವು, ಸಮುದ್ರವು ತರಂಗ ಮಾಲೆಗಳಿಂದ ವ್ಯಾಪ್ತವಾಗಿತ್ತು. ಆದ್ದರಿಂದ ಸಮುದ್ರ ಮತ್ತು ಆಕಾಶದಲ್ಲಿ ಯಾವುದೇ ಅಂತರ ಉಳಿಯಲಿಲ್ಲ.॥117॥

ಮೂಲಮ್ - 118

ಅನ್ಯೋನ್ಯೈರಹತಾಃ ಸಕ್ತಾಃ ಸಸ್ವನುರ್ಭೀಮನಿಃಸ್ವನಾಃ ।
ಊರ್ಮಯಃ ಸಿಂಧುರಾಜಸ್ಯ ಮಹಾಭೇರ್ಯ ಇವಾಂಬರೇ ॥

ಅನುವಾದ

ಸಿಂಧುರಾಜನ ಅಲೆಗಳು ಪರಸ್ಪರ ಡಿಕ್ಕಿಹೊಡೆದು ಆಕಾಶದಲ್ಲಿ ಮೊಳಗುವ ದೇವತೆಗಳ ದೊಡ್ಡ-ದೊಡ್ಡ ಭೇರಿಗಳಂತೆ ಭಯಾನಕ ಶಬ್ದ ಮಾಡುತ್ತಿದ್ದವು.॥118॥

ಮೂಲಮ್ - 119

ರತ್ನೌಘ ಜಲಸಂನಾದಂ ವಿಷಕ್ತಮಿವ ವಾಯುನಾ ।
ಉತ್ಪತಂತಮಿವ ಕ್ರುದ್ಧಂ ಯಾದೋಗಣ ಸಮಾಕುಲಮ್ ॥

ಅನುವಾದ

ವಾಯುವಿನಿಂದ ಪ್ರೇರಿತವಾಗಿ ರತ್ನಗಳನ್ನು ಚೆಲ್ಲುತ್ತಿದ್ದ ಅಲೆಗಳ ನಿನಾದಯುಕ್ತ ಮತ್ತು ಜಲಜಂತುಗಳಿಂದ ತುಂಬಿದ ಸಮುದ್ರವು ಹೀಗೆ ಮೇಲಕ್ಕೇಳುತ್ತಾ ರೋಷಗೊಂಡಂತೆ ಅನಿಸುತ್ತಿತ್ತು.॥119॥

ಮೂಲಮ್ - 120

ದದೃಶುಸ್ತೇ ಮಹಾತ್ಮಾನೋ ವಾತಾಹತ ಜಲಾಶಯಮ್ ।
ಅನಿಲೋದ್ಧೂತಮಾಕಾಶೇ ಪ್ರವಲಾಂತಮಿವೋರ್ಮಿಭಿಃ ॥

ಅನುವಾದ

ಸಮುದ್ರವು ವಾಯುವಿನ ಹೊಡೆತಕ್ಕೆ ಆಕಾಶದವರೆಗೆ ಮೇಲಕ್ಕೆದ್ದು ಉತ್ತಾಲ ತರಂಗಗಳಿಂದ ನೃತ್ಯಮಾಡುವಂತೆ, ಆ ಮಹಾಮನಸ್ವೀ ವಾನರವೀರರು ನೋಡಿದರು.॥120॥

ಮೂಲಮ್ - 121

ತತೋ ವಿಸ್ಮಯಮಾಪನ್ನಾ ಹರಯೋ ದದೃಶುಃ ಸ್ಥಿತಾಃ ।
ಭ್ರಾಂತೋರ್ಮಿಜಾಲಸಂನಾದಂ ಪ್ರಲೋಲಮಿವ ಸಾಗರಮ್ ॥

ಅನುವಾದ

ಅನಂತರ ಅಲ್ಲಿ ನಿಂತಿದ್ದ ವಾನರರು ಸುತ್ತುತ್ತಿರುವ ತರಂಗ ಸಮೂಹಗಳ ಕಲ-ಕಲನಾದದಿಂದ ಕೂಡಿದ ಮಹಾಸಾಗರವು ಅತ್ಯಂತ ಚಂಚಲವಾಗಿದೆಯೋ ಎಂಬಂತೆ ನೋಡಿದರು. ಇದನ್ನು ನೋಡಿ ಅವರಿಗೆ ತುಂಬಾ ಆಶ್ಚರ್ಯವಾಯಿತು.॥121॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂರನೆಯ ಸರ್ಗ ಪೂರ್ಣವಾಯಿತು. ॥3॥