वाचनम्
ಭಾಗಸೂಚನಾ
ಹನುಮಂತನು ಲಂಕೆಯ ದುರ್ಗ, ಸೈನ್ಯ-ವಿಭಾಗ ಮತ್ತು ಸಂಕ್ರಮ ಮೊದಲಾದುವನ್ನು ವರ್ಣಿಸಿ, ಭಗವಾನ್ ಶ್ರೀರಾಮನಲ್ಲಿ ಸೈನ್ಯವು ಹೊರಡುವಂತೆ ಆಜ್ಞಾಪಿಸಲು ಪ್ರಾರ್ಥಿಸಿದುದು
ಮೂಲಮ್ - 1
ಸುಗ್ರೀವಸ್ಯ ವಚಃ ಶ್ರುತ್ವಾ ಹೇತುಮತ್ ಪರಮಾರ್ಥವತ್ ।
ಪ್ರತಿಜಗ್ರಾಹ ಕಾಕುತ್ಸ್ಥೋ ಹನೂಮಂತಮಥಾಬ್ರವೀತ್ ॥
ಅನುವಾದ
ಸುಗ್ರೀವನ ಈ ಯುಕ್ತಿಯುಕ್ತವಾದ ಉತ್ತಮ ಮಾತನ್ನು ಕೇಳಿ ಶ್ರೀರಾಮಚಂದ್ರನು ಅದನ್ನು ಸ್ವೀಕರಿಸಿ, ಮತ್ತೆ ಹನುಮಂತನಲ್ಲಿ ಹೇಳಿದನು.॥1॥
ಮೂಲಮ್ - 2
ತಪಸಾ ಸೇತುಬಂಧೇನ ಸಾಗರೋಚ್ಛೋಷಣೇನ ಚ ।
ಸರ್ವಥಾಪಿ ಸಮರ್ಥೋಽಸ್ಮಿ ಸಾಗರಸ್ಯಾಸ್ಯ ಲಂಘನೇ ॥
ಅನುವಾದ
ನಾನು ತಪಸ್ಸಿನಿಂದ ಸೇತುವೆ ಕಟ್ಟಿ, ಸಮುದ್ರವನ್ನು ಒಣಗಿಸಿ, ಎಲ್ಲ ರೀತಿಯಿಂದ ಮಹಾಸಾಗರವನ್ನು ದಾಟಿ ಹೋಗಲು ಸಮರ್ಥನಾಗಿದ್ದೇನೆ.॥2॥
ಮೂಲಮ್ - 3
ಕತಿ ದುರ್ಗಾಣಿ ದುರ್ಗಾಯಾ ಲಂಕಾಯಾಸ್ತದ್ ಬ್ರವೀಷ್ವ ಮೇ ।
ಜ್ಞಾತುಮಿಚ್ಛಾಮಿ ತತ್ ಸರ್ವಂ ದರ್ಶನಾದಿವ ವಾನರ ॥
ಅನುವಾದ
ವಾನರವೀರನೇ! ಆ ದುರ್ಗಮ ಲಂಕಾಪುರಿಯಲ್ಲಿ ಎಷ್ಟು ದುರ್ಗಗಳಿವೆ? ಕಣ್ಣಿಗೆ ಕಟ್ಟುವಂತೆ ಎಲ್ಲವನ್ನು ಸ್ಪಷ್ಟವಾಗಿ ತಿಳಿಸು. ಅದನ್ನು ತಿಳಿಯಲು ನಾನು ಬಯಸುತ್ತಿರುವೆನು.॥3॥
ಮೂಲಮ್ - 4
ಬಲಸ್ಯ ಪರಿಮಾಣಂ ಚ ದ್ವಾರದುರ್ಗಕ್ರಿಯಾಮಪಿ ।
ಗುಪ್ತಿಕರ್ಮ ಚ ಲಂಕಾಯಾ ರಕ್ಷಸಾಂ ಸದನಾನಿ ಚ ॥
ಮೂಲಮ್ - 5
ಯಥಾಸುಖಂ ಯಥಾವಚ್ಚ ಲಂಕಾಯಾಮಸಿದೃಷ್ಟವಾನ್ ।
ಸರ್ವಮಾಚಕ್ಷ್ವ ತತ್ವೇನ ಸರ್ವಥಾ ಕುಶಲೇ ಹ್ಯಸಿ ॥
ಅನುವಾದ
ನೀನು ರಾವಣನ ಸೈನ್ಯದ ಪರಿಮಾಣ, ಪುರಿಯ ಬಾಗಿಲುಗಳು ದುರ್ಗಮವಾದ ಸಾಧನೆಗಳು, ಲಂಕೆಯ ರಕ್ಷಣೆಯ ಉಪಾಯ ಹಾಗೂ ರಾಕ್ಷಸರ ಭವನಗಳು- ಇದೆಲ್ಲವನ್ನು ಸುಖವಾಗಿ ಯಥಾವತ್ತಾಗಿ ನೋಡಿರುವೆ. ಆದ್ದರಿಂದ ಅದೆಲ್ಲವನ್ನೂ ಸರಿಯಾಗಿ ತಿಳಿಸು; ಏಕೆಂದರೆ ನೀನು ಎಲ್ಲ ವಿಧದಿಂದ ಕುಶಲನಾಗಿರುವೆ.॥4-5॥
ಮೂಲಮ್ - 6
ಶೃತ್ವಾ ರಾಮಸ್ಯ ವಚನಂ ಹನೂಮಾನ್ ಮಾರುತಾತ್ಮಜಃ ।
ವಾಕ್ಯಂ ವಾಕ್ಯವಿದಾಂ ಶ್ರೇಷ್ಠೋ ರಾಮಂ ಪುನರಥಾಬ್ರವೀತ್ ॥
ಅನುವಾದ
ಶ್ರೀರಘುನಾಥನ ಈ ಮಾತನ್ನು ಕೇಳಿ ಮಾತಿನ ಮರ್ಮಜ್ಞನಾದ, ವಿದ್ವಾಂಸರಲ್ಲಿ ಶ್ರೇಷ್ಠನಾದ, ಪವನಕುಮಾರ ಹನುಮಂತನು ಶ್ರೀರಾಮನಲ್ಲಿ ಪುನಃ ಹೇಳಿದನು.॥6॥
ಮೂಲಮ್ - 7
ಶ್ರೂಯತಾಂ ಸರ್ವಮಾಖ್ಯಾಸ್ಯೇ ದುರ್ಗಕರ್ಮ ವಿಧಾನತಃ ।
ಗುಪ್ತಾ ಪುರೀ ಯಥಾ ಲಂಕಾ ರಕ್ಷಿತಾ ಚ ಯಥಾ ಬಲೈಃ ॥
ಮೂಲಮ್ - 8
ರಾಕ್ಷಸಾಶ್ಚ ಯಥಾ ಸ್ನಿಗ್ಧಾ ರಾವಣಸ್ಯ ಚ ತೇಜಸಾ ।
ಪರಾಂ ಸಮೃದ್ಧಿಂ ಲಂಕಾಯಾಃ ಸಾಗರಸ್ಯ ಚ ಭೀಮತಾಮ್ ॥
ಮೂಲಮ್ - 9
ವಿಭಾಗಂ ಚ ಬಲೌಘಸ್ಯ ನಿರ್ದೇಶಂ ವಿಹನಸ್ಯ ಚ ।
ಏವಮುಕ್ತ್ವಾ ಕಪಿಶ್ರೇಷ್ಠಃ ಕಥಯಾಮಾಸ ತತ್ವತಃ ॥
ಅನುವಾದ
ಭಗವಂತನೇ! ಎಲ್ಲವನ್ನು ನಾನು ಹೇಳುವೆನು, ಕೇಳು. ಲಂಕೆಯ ದುರ್ಗಗಳು ಹೇಗೆ ನಿರ್ಮಾಣಗೊಂಡಿವೆ? ಲಂಕಾಪುರಿಯ ರಕ್ಷಣೆ ಹೇಗೆ ಮಾಡಲಾಗಿದೆ? ಹೇಗೆ ಅದು ಸೈನ್ಯದಿಂದ ಸುರಕ್ಷಿತವಾಗಿದೆ? ರಾವಣನ ತೇಜದಿಂದ ಪ್ರಭಾವಿತರಾದ ರಾಕ್ಷಸರು ಅವನ ಕುರಿತು ಹೇಗೆ ಸ್ನೇಹವಿರಿಸಿರುವರು? ಲಂಕೆಯ ಸಮೃದ್ಧಿ ಎಷ್ಟು ಉತ್ತಮವಾಗಿದೆ? ಸಮುದ್ರವು ಎಷ್ಟು ಭಯಂಕರವಾಗಿದೆ? ಕಾಲಾಳು ಸೈನಿಕರು ಎಲ್ಲೆಲ್ಲಿ ನಿಲ್ಲಿಸಿರುವರು? ಅಲ್ಲಿಯ ವಾಹನಗಳ ಸಂಖ್ಯೆ ಎಷ್ಟು? ಇದೆಲ್ಲವನ್ನು ನಾನು ವರ್ಣಿಸುವೆನು. ಹೀಗೆ ಹೇಳಿ ಕಪಿಶ್ರೇಷ್ಠ ಹನುಮಂತನು ಅಲ್ಲಿಯ ಸಂಗತಿಯನ್ನು ಸರಿಯಾಗಿ ತಿಳಿಸಲು ಪ್ರಾರಂಭಿಸಿದನು.॥7-9॥
ಮೂಲಮ್ - 10
ಹೃಷ್ಟಪ್ರಮುದಿತಾ ಲಂಕಾ ಸತ್ತದ್ವಿಪಸಮಾಕುಲಾ ।
ಮಹತೀ ರಥಸಂಪೂರ್ಣಾ ರಕ್ಷೋಗಣನಿಷೇವಿತಾ ॥
ಅನುವಾದ
ಪ್ರಭೋ ಲಂಕಾಪುರಿಯು ಹರ್ಷ, ಆಮೋದ-ಪ್ರಮೋದಗಳಿಂದ ತುಂಬಿದೆ. ಆ ವಿಶಾಲಪುರಿಯು ಮತ್ತಗಜಗಳಿಂದ ವ್ಯಾಪ್ತವಾಗಿದ್ದು, ಅಸಂಖ್ಯ ರಥಗಳಿಂದ ತುಂಬಿದ್ದು, ರಾಕ್ಷಸರ ಸಮುದಾಯಗಳು ಅದರಲ್ಲಿ ವಾಸಿಸುತ್ತವೆ.॥10॥
ಮೂಲಮ್ - 11
ದೃಢಬದ್ಧಕಪಾಟಾನಿ ಮಹಾಪರಿಘವಂತಿ ಚ ।
ಚತ್ವಾರಿ ವಿಪುಲಾನ್ಯಸ್ಯಾ ದ್ವಾರಾಣಿ ಸುಮಹಾಂತಿ ಚ ॥
ಅನುವಾದ
ಆ ಪುರಿಗೆ ಬಹಳ ಅಗಲ-ಎತ್ತರವಾದ ನಾಲ್ಕು ದ್ವಾರಗಳಿವೆ. ಅವುಗಳಲ್ಲಿ ಬಲವಾದ ಬಾಗಿಲುಗಳಿದ್ದು, ದೊಡ್ಡ-ದೊಡ್ಡದಾದ ಅಗಣಿಗಳಿಂದ ಭದ್ರಪಡಿಸಿವೆ.॥11॥
ಮೂಲಮ್ - 12
ತತ್ರೇಷೂಪಲಯಂತ್ರಾಣಿ ಬಲವಂತಿ ಮಹಾಂತಿ ಚ ।
ಅಗತಂ ಪ್ರತಿಸೈನ್ಯಂ ತೈಸ್ತತ್ರ ಪ್ರತಿನಿವಾರ್ಯತೇ ॥
ಅನುವಾದ
ಆ ದ್ವಾರಗಳಲ್ಲಿ ವಿಶಾಲ ವಾದ, ದೊಡ್ಡದಾದ ಪ್ರಬಲ ಯಂತ್ರಗಳನ್ನಿಟ್ಟಿರುವರು. ಅವು ಕಬ್ಬಿಣದ ಗುಂಡುಗಳನ್ನು, ಬಾಣಗಳನ್ನು ಮಳೆಗರೆಯುತ್ತವೆ. ಇದರಿಂದ ಶತ್ರುಸೈನ್ಯವು ಮುಂದಕ್ಕೆ ಬರದಂತೆ ತಡೆಯುತ್ತವೆ.॥12॥
ಮೂಲಮ್ - 13
ದ್ವಾರೇಷು ಸಂಸ್ಕೃತಾ ಭೀಮಾಃ ಕಾಲಾಯಸಮಯಾಃ ಶಿತಾಃ ।
ಶತಶೋ ರಚಿತಾ ವೀರೈಃ ಶತಘ್ನ್ಯೋ ರಕ್ಷಸಾಂ ಗಣೈಃ ॥
ಅನುವಾದ
ವೀರ ರಾಕ್ಷಸರು ಕಬ್ಬಿಣದಿಂದ ತಯಾರಿಸಿದ ಭಯಂಕರ ಹಾಗೂ ಹರಿತವಾದ, ಚೆನ್ನಾಗಿ ಸಂಸ್ಕರಿಸಿದ ನೂರಾರು ಶತಘ್ನಿಗಳು (ಕಬ್ಬಿಣದ ಮುಳ್ಳುಗಳಿಂದ ತುಂಬಿದ ನಾಲ್ಕು ಮೊಳ ಉದ್ದದ ಗದೆ) ಆ ಬಾಗಿಲುಗಳಲ್ಲಿ ಇರಿಸಿರುವರು.॥13॥
ಮೂಲಮ್ - 14
ಸೌವರ್ಣಸ್ತು ಮಹಾಂಸ್ತಸ್ಯಾಃ ಪ್ರಾಕಾರೋ ದುಷ್ಪ್ರಧರ್ಷಣಃ ।
ಮಣಿವಿದ್ರುಮವೈದೂರ್ಯ ಮುಕ್ತಾವಿರಚಿತಾಂತರಃ ॥
ಅನುವಾದ
ಆ ಪುರಿಯ ಸುತ್ತಲೂ ಬಂಗಾರದಿಂದ ಮಾಡಿದ ಎತ್ತರವಾದ ಗೋಡೆ ಇದೆ, ಅದನ್ನು ಮುರಿಯುವುದು ಬಹಳ ಕಠಿಣವಾಗಿದೆ. ಅದರಲ್ಲಿ ಮಣಿ, ಹವಳ, ನೀಲ, ಮುತ್ತುಗಳನ್ನು ಜೋಡಿಸಿ ಅಲಂಕರಿಸಿರುವರು.॥14॥
ಮೂಲಮ್ - 15
ಸರ್ವತಶ್ಚ ಮಹಾಭೀಮಾಃ ಶೀತತೋಯಾ ಮಹಾಶುಭಾಃ ।
ಅಗಾಧಾ ಗ್ರಾಹವತ್ಯಶ್ಚ ಪರಿಖಾ ಮೀನಸೇವಿತಾಃ ॥
ಅನುವಾದ
ಕೋಟೆಯ ಸುತ್ತಲೂ ಮಹಾಭಯಂಕರ ಶತ್ರುಗಳಿಗೆ ಅಮಂಗಲಕರವಾದ, ತಣ್ಣೀರಿನಿಂದ ತುಂಬಿದ ಬಹಳ ಆಳವಾದ ಕಂದಕಗಳಿದ್ದು, ಅದರಲ್ಲಿ ದೊಡ್ಡ ದೊಡ್ಡ ಮೀನು, ಮೊಸಳೆಗಳು ತುಂಬಿವೆ.॥15॥
ಮೂಲಮ್ - 16
ದ್ವಾರೇಷು ತಾಸಾಂ ಚತ್ವಾರಃ ಸಂಕ್ರಮಾಃ ಪರಮಾಯಾತಾಃ ।
ಯಂತ್ರೈರೂಪೇತಾ ಬಹುಭಿರ್ಮಹದ್ಭಿರ್ಗೃಹಪಂಕ್ತಿಭಿಃ ॥
ಅನುವಾದ
ಮೇಲೆ ಹೇಳಿದ ನಾಲ್ಕು ಬಾಗಿಲುಗಳ ಎದುರಿಗೆ ಕಂದಕಗಳನ್ನು ದಾಟಲು ಬಹಳ ವಿಸ್ತೃತವಾದ ನಾಲ್ಕು ಸಂಕ್ರಮ (ಮರದ ಸೇತುವೆ)ಗಳಿವೆ. ಅವುಗಳಲ್ಲಿ ಅನೇಕ ದೊಡ್ಡ-ದೊಡ್ಡ ಯಂತ್ರಗಳನ್ನು ಜೋಡಿಸಿರುವರು. ಪ್ರಾಕಾರದ ಬಳಿಯಲ್ಲೇ ಮನೆಗಳ ಸಾಲುಗಳನ್ನು ಕಟ್ಟಿರುವರು.॥16॥
ಮೂಲಮ್ - 17
ತ್ರಾಯಂತೇ ಸಂಕ್ರಮಾಸ್ತತ್ರ ಪರಸೈನ್ಯಾಗತೇ ಸತಿ ।
ಯಂತ್ರೈಸ್ತೈರವಕೀರ್ಯಂತೇ ಪರಿಖಾಸು ಸಮಂತತಃ ॥
ಅನುವಾದ
ಶತ್ರುಗಳ ಸೈನ್ಯಗಳು ಬಂದಾಗ ಯಂತ್ರಗಳಿಂದ ಆ ಸೇತುವೆಗಳನ್ನು ರಕ್ಷಿಸಲಾಗುತ್ತದೆ ಹಾಗೂ ಯಂತ್ರಗಳಿಂದಲೇ ಅವರನ್ನು ಕಂದಕಗಳಲ್ಲಿ ಕೆಡುಹಲಾಗುತ್ತದೆ ಮತ್ತು ಅಲ್ಲಿಗೆ ಬಂದಿರುವ ಸೈನ್ಯವನ್ನು ದೂರಕ್ಕೆ ಎಸೆಯಲಾಗುತ್ತದೆ.॥17॥
ಮೂಲಮ್ - 18
ಏಕಸ್ತ್ವಕಂಪ್ಯೋ ಬಲವಾನ್ ಸಂಕ್ರಮಃ ಸುಮಹಾದೃಢಃ ।
ಕಾಂಚನೈರ್ಬಹುಭಿಃ ಸ್ತಂಭೈರ್ವೇದಿಕಾಭಿಶ್ಚ ಶೋಭಿತಃ॥
ಅನುವಾದ
ಅವುಗಳಲ್ಲಿ ಒಂದು ಸಂಕ್ರಮವಾದರೋ ಬಹಳ ಸುದೃಢ ಮತ್ತು ಅಭೇದ್ಯವಾಗಿದೆ. ಅಲ್ಲಿ ಬಹಳ ದೊಡ್ಡ ಸೈನ್ಯ ಇರುತ್ತದೆ. ಅದು ಚಿನ್ನದ ಅನೇಕ ಕಂಬಗಳಿಂದ, ಬುರುಜುಗಳಿಂದ ಸುಶೋಭಿತವಾಗಿದೆ.॥18॥
ಮೂಲಮ್ - 19
ಸ್ವಯಂ ಪ್ರಕೃತಿಮಾಪನ್ನೋಯುಯುತ್ಸೂ ರಾಮ ರಾವಣಃ ।
ಉತ್ಥ್ಥಿತಶ್ಚಾಪ್ರಮತ್ತಶ್ಚ ಬಲಾನಾಮನುದರ್ಶನೇ ॥
ಅನುವಾದ
ರಘುನಾಥನೇ! ರಾವಣನು ಯುದ್ಧಕ್ಕಾಗಿ ಎಂದೂ ಕ್ಷುಬ್ಧನಾಗಿರುವುದಿಲ್ಲ, ಸ್ವಸ್ಥ ಮತ್ತು ಧೀರನಾಗಿರುತ್ತಾನೆ. ಅವನು ಸೈನ್ಯಗಳನ್ನು ಪದೇ-ಪದೇ ನಿರೀಕ್ಷಿಸುತ್ತಾ ಸದಾ ಎಚ್ಚರವಾಗಿ ಇರುತ್ತಾನೆ.॥19॥
ಮೂಲಮ್ - 20
ಲಂಕಾ ಪುನರ್ನಿರಾಲಂಬಾ ದೇವದುರ್ಗಾ ಭಾಯಾವಹಾ ।
ನಾದೇಯಂ ಪಾರ್ವತಂ ವಾನ್ಯಂ ಕೃತ್ರಿಮಂ ಚ ಚತುರ್ವಿಧಮ್ ॥
ಅನುವಾದ
ಲಂಕೆಯನ್ನು ಆಕ್ರಮಿಸಲು ಯಾವುದೇ ಅವಲಂಬನೆ ಇಲ್ಲ. ಅದು ದೇವತೆಗಳಿಗೂ ದುರ್ಗಮ ಮತ್ತು ಭಯಾನಕವಾಗಿದೆ. ಅದರ ಸುತ್ತಲೂ ನದೀ, ಪರ್ವತ, ವನ ಮತ್ತು ಕೃತ್ರಿಮ (ಕಂದಕಗಳು-ಪ್ರಾಕಾರಗಳು) ಹೀಗೆ ನಾಲ್ಕು ಪ್ರಕಾರದ ದುರ್ಗಗಳಿವೆ.॥20॥
ಮೂಲಮ್ - 21
ಸ್ಥಿತಾ ಪಾರೇ ಸಮುದ್ರಸ್ಯ ದೂರಪಾರಸ್ಯ ರಾಘವ ।
ನೌಪಥಶ್ಚಾಪಿ ನಾಸ್ತ್ಯತ್ರ ನಿರುದ್ದೇಶಶ್ಚ ಸರ್ವತಃ ॥
ಅನುವಾದ
ರಘುನಂದನ! ಅದು ಬಹಳ ದೂರದವರೆಗೆ ಚಾಚಿದ ಸಮುದ್ರದ ದಕ್ಷಿಣ ತೀರದಲ್ಲಿ ನೆಲೆಸಿದೆ. ಅಲ್ಲಿಗೆ ಹೋಗಲು ನಾವೆಯ ಮಾರ್ಗವೂ ಇಲ್ಲ. ಏಕೆಂದರೆ ಅದರ ಗುರಿಯ ದಿಕ್ಕೇ ತಿಳಿಯುವುದಿಲ್ಲ.॥21॥
ಮೂಲಮ್ - 22
ಶೈಲಾಗ್ರೇ ರಚಿತಾ ದುರ್ಗಾ ಸಾ ಪೂರ್ದೇವಪುರೋಪಮಾ ।
ವಾಜಿವಾರಣಸಂಪೂರ್ಣಾ ಲಂಕಾ ಪರಮದುರ್ಜಯಾ ॥
ಅನುವಾದ
ಆ ದುರ್ಗಮ ಪುರಿಯು ಪರ್ವತದ ಶಿಖರದಲ್ಲಿ ನೆಲೆಸಿದೆ ಹಾಗೂ ದೇವಪುರಿಯಂತೆ ಸುಂದರವಾಗಿ ಕಂಡುಬರುತ್ತದೆ. ಆನೆ, ಕುದುರೆಗಳಿಂದ ತುಂಬಿದ ಆ ಲಂಕೆಯು ಅತ್ಯಂತ ದುರ್ಜಯವಾಗಿದೆ.॥22॥
ಮೂಲಮ್ - 23
ಪರಿಖಾಶ್ಚ ಶತಘ್ನ್ಯಶ್ಚ ಯಂತ್ರಾಣಿ ವಿವಿಧಾನಿ ಚ ।
ಶೋಭಯಂತಿ ಪುರೀಂ ಲಂಕಾಂ ರಾವಣಸ್ಯ ದುರಾತ್ಮನಃ ॥
ಅನುವಾದ
ಕಂದಕಗಳೂ, ಶತಘ್ನಿಗಳೂ, ಬಗೆ-ಬಗೆಯ ಯಂತ್ರಗಳು ದುರಾತ್ಮಾ ರಾವಣನ ಆ ಲಂಕೆಯ ಶೋಭೆ ಹೆಚ್ಚಿಸಿವೆ.॥23॥
ಮೂಲಮ್ - 24
ಅಯುತಂ ರಕ್ಷಸಾಮತ್ರ ಪೂರ್ವದ್ವಾರಂ ಸಮಾಶ್ರಿತಮ್ ।
ಶೂಲಹಸ್ತಾ ದೂರಾಧರ್ಷಾಃ ಸರ್ವೇ ಖಡ್ಗಾಗ್ರಯೋಧಿನಃ ॥
ಅನುವಾದ
ಲಂಕೆಯ ಪೂರ್ವದ ಬಾಗಿಲಲ್ಲಿ ಕೈಗಳಲ್ಲಿ ಶೂಲಗಳನ್ನು ಧರಿಸಿದ ಹತ್ತು ಸಾವಿರ ರಾಕ್ಷಸರು ಇರುತ್ತಾರೆ. ಅವರು ಅತ್ಯಂತ ದುರ್ಜಯರೂ, ಯುದ್ಧದಲ್ಲಿ ಖಡ್ಗಗಳಿಂದ ಕಾದಾಡುವವರಾಗಿದ್ದಾರೆ.॥24॥
ಮೂಲಮ್ - 25
ನಿಯುತಂ ರಕ್ಷಸಾಮತ್ರ ದಕ್ಷಿಣದ್ವಾರಮಾಶ್ರಿತಮ್ ।
ಚತುರಂಗೇಣ ಸೈನ್ಯೇನ ಯೋಧಾಸ್ತತ್ರಾಪ್ಯನುತ್ತಮಾಃ ॥
ಅನುವಾದ
ಲಂಕೆಯ ದಕ್ಷಿಣ ದ್ವಾರದಲ್ಲಿ ಚತುರಂಗ ಸೈನ್ಯದೊಂದಿಗೆ ಒಂದು ಲಕ್ಷ ರಾಕ್ಷಸ ಯೋಧರು ಸಿದ್ಧರಾಗಿದ್ದಾರೆ. ಆ ಸೈನಿಕರೂ ಬಹಳ ಪರಾಕ್ರಮಶಾಲಿಗಳಾಗಿದ್ದಾರೆ.॥25॥
ಮೂಲಮ್ - 26
ಪ್ರಯುತಂ ರಕ್ಷಸಾಮಾತ್ರ ಪಶ್ಚಿಮದ್ವಾರಮಾಶ್ರಿತಮ್ ।
ಚರ್ಮಖಡ್ಗಧರಾಃ ಸರ್ವೇ ತಥಾ ಸರ್ವಾಸ್ತ್ರಕೋವಿದಾಃ ॥
ಅನುವಾದ
ಪುರಿಯ ಪಶ್ಚಿಮದ ಬಾಗಿಲಲ್ಲಿ ಕತ್ತಿ-ಗುರಾಣಿಗಳನ್ನು ಹಿಡಿದು ಹತ್ತು ಲಕ್ಷ ರಾಕ್ಷಸರು ವಾಸಿಸುತ್ತಾರೆ. ಅವರೆಲ್ಲರೂ ಸಮಸ್ತ ಅಸ್ತ್ರಗಳ ಜ್ಞಾನಿಗಳಾಗಿದ್ದಾರೆ.॥26॥
ಮೂಲಮ್ - 27
ನ್ಯರ್ಬುದಂ ರಕ್ಷಸಾಮತ್ರ ಉತ್ತರ ದ್ವಾರಮಾಶ್ರಿತಮ್ ।
ರಥಿನಶ್ಚಾಶ್ವವಾಹಾಶ್ಚ ಕುಲಪುತ್ರಾಃ ಸುಪೂಜಿತಾಃ ॥
ಅನುವಾದ
ಆ ಪುರಿಯ ಉತ್ತರ ದ್ವಾರದಲ್ಲಿ ಹತ್ತು ಕೋಟಿ ರಾಕ್ಷಸರಿದ್ದಾರೆ. ಅವರಲ್ಲಿ ಕೆಲವರು ರಥಿಗಳು, ಕೆಲವರು ಅಶ್ವಾರೋಹಿಗಳಿದ್ದಾರೆ. ಅವರೆಲ್ಲರೂ ಉತ್ತಮ ಕುಲೋತ್ಪನ್ನರೂ, ಪ್ರಶಂಸನೀಯ ವೀರರಾಗಿದ್ದಾರೆ.॥27॥
ಮೂಲಮ್ - 28
ಶತಶೋಽಥ ಸಹಸ್ರಾಣಿ ಮಧ್ಯಮಂ ಸ್ಕಂಧಮಾಶ್ರಿತಾಃ ।
ಯಾತುಧಾನಾ ದುರಾಧರ್ಷಾಃ ಸಾಗ್ರಕೋಟಿಶ್ಚ ರಕ್ಷಸಾಮ್ ॥
ಅನುವಾದ
ಲಂಕೆಯ ಮಧ್ಯಭಾಗದಲ್ಲಿ ನೂರಾರು ಸಾವಿರ ದುರ್ಜಯ ರಾಕ್ಷಸರಿದ್ದಾರೆ. ಅವರ ಸಂಖ್ಯೆ ಒಂದು ಕೋಟಿಗೂ ಹೆಚ್ಚಾಗಿದೆ.॥28॥
ಮೂಲಮ್ - 29
ತೇ ಮಯಾ ಸಂಕ್ರಮಾ ಭಗ್ನಾಃ ಪರಿಖಾಶ್ಚಾವಪೂರಿತಾಃ ।
ದಗ್ಧಾ ಚ ನಗರೀ ಲಂಕಾ ಪ್ರಾಕಾರಾಶ್ಚಾವಸಾದಿತಾಃ ।
ಬಲೈಕದೇಶಃ ಕ್ಷಪಿತೋ ರಾಕ್ಷಸಾನಾಂ ಮಹಾತ್ಮನಾಮ್ ॥
ಅನುವಾದ
ಆದರೆ ನಾನು ಆ ಎಲ್ಲ ಸೇತುವೆಗಳನ್ನು ಮುರಿದುಬಿಟ್ಟಿರುವೆ, ಕಂದಕಗಳನ್ನು ಮುಚ್ಚಿಬಿಟ್ಟಿದ್ದೇನೆ, ಲಂಕೆಯನ್ನು ಸುಟ್ಟುಬಿಟ್ಟಿರುವೆ. ಅದರ ಪ್ರಾಕಾರಗಳನ್ನು ಕೆಡಹಿದ್ದೇನೆ. ಇಷ್ಟೇ ಅಲ್ಲ, ಅಲ್ಲಿ ವಿಶಾಲ ಸೈನ್ಯದ ನಾಲ್ಕನೆಯ ಒಂದು ಭಾಗವನ್ನು ನಾಶಮಾಡಿ ಬಿಟ್ಟಿರುವೆನು.॥29॥
ಮೂಲಮ್ - 30
ಯೇನ ಕೇನ ತು ಮಾರ್ಗೇಣ ತರಾಮ ವರುಣಾಲಯಮ್ ।
ಹತೇತಿ ನಗರೀ ಲಂಕಾ ವಾನರೈರುಪಧಾರ್ಯತಾಮ್ ॥
ಅನುವಾದ
ನಾವೆಲ್ಲರೂ ಯಾವುದಾದರೂ ಉಪಾಯದಿಂದ ಒಮ್ಮೆ ಸಮುದ್ರವನ್ನು ದಾಟಿ ಹೋದರೆ, ಲಂಕೆಯು ವಾನರರಿಂದ ನಾಶವಾಯಿತೆಂದೇ ತಿಳಿಯಿರಿ.॥30॥
ಮೂಲಮ್ - 31
ಅಂಗದೋ ದ್ವಿವಿದೋ ಮೈಂದೋ ಜಾಂಬವಾನ್ ಪನಸೋ ನಲಃ ।
ನೀಲಃ ಸೇನಾಪತಿಶ್ಚೈವ ಬಲಶೇಷೇಣ ಕಿಂ ತವ ॥
ಅನುವಾದ
ಅಂಗದ, ದ್ವಿವಿದ, ಮೈಂದ, ಜಾಂಬವಂತ, ಪನಸ, ನಲ, ಸೇನಾಪತಿ ನೀಲ-ಇಷ್ಟೆ ವಾನರರು ಲಂಕೆಯನ್ನು ಜಯಿಸಲು ಸಾಲುವಷ್ಟಿದ್ದಾರೆ. ಉಳಿದ ಸೈನ್ಯದಿಂದ ಏನು ಮಾಡುವುದಿದೆ.॥31॥
ಮೂಲಮ್ - 32
ಪ್ಲವಮಾನಾ ಹಿ ಗತ್ವಾ ತ್ವಾಂ ರಾವಣಸ್ಯ ಮಹಾಪುರೀಮ್ ।
ಸಪರ್ವತವಾನಾಂ ಭಿತ್ತ್ವಾ ಸಖಾತಾಂ ಚ ಸತೋರಣಾಮ್ ।
ಸಪ್ರಾಕಾರಾಂ ಸಭವನಾಮಾನಯಿಷ್ಯಂತಿ ರಾಘವ ॥
ಅನುವಾದ
ರಘುನಂದನ! ಈ ಅಂಗದನೇ ಆದಿ ವೀರರು ಆಕಾಶಮಾರ್ಗದಿಂದ ಹಾರಿ ಹೋಗಿ ರಾವಣನ ಲಂಕೆಯನ್ನು ವನ, ಪರ್ವತ, ಕಂದಕ, ಬಾಗಿಲು ಗಳನ್ನು ಪ್ರಾಕಾರಗಳನ್ನು, ಮನೆಗಳ ಸಹಿತ ನಾಶ ಮಾಡಿ ಸೀತೆಯನ್ನು ಇಲ್ಲಿಗೆ ಕರೆದುಕೊಂಡು ಬರುವರು.॥32॥
ಮೂಲಮ್ - 33
ಏವಮಾಜ್ಞಾಪಯ ಕ್ಷಿಪ್ರಂ ಬಲಾನಾಂ ಸರ್ವಸಂಗ್ರಹಮ್ ।
ಮುಹೂರ್ತೇನ ತು ಯುಕ್ತೇನ ಪ್ರಸ್ಥಾನಮಭಿರೋಚಯ ॥
ಅನುವಾದ
ಹೀಗೆ ತಿಳಿದು ನೀನು ಶೀಘ್ರವಾಗಿ ಸಮಸ್ತ ಸೈನಿಕರಿಗೆ ಅವಶ್ಯಕ ವಸ್ತುಗಳೊಂದಿಗೆ ಹೊರಡಲು ಆಜ್ಞೆ ಮಾಡು ಮತ್ತು ಉಚಿತ ಮುಹೂರ್ತದಲ್ಲಿ ಪ್ರಸ್ಥಾನವನ್ನು ಮಾಡು.॥33॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೂರನೆಯ ಸರ್ಗ ಪೂರ್ಣವಾಯಿತು.॥3॥