वाचनम्
ಭಾಗಸೂಚನಾ
ಸುಗ್ರೀವನು ಶ್ರೀರಾಮನನ್ನು ಪ್ರೋತ್ಸಾಹಿಸಿದುದು
ಮೂಲಮ್ - 1
ತಂ ತು ಶೋಕಪರಿದ್ಯೂನಂ ರಾಮಂ ದಶರಥಾತ್ಮಜಮ್ ।
ಉವಾಚ ವಚನಂ ಶ್ರೀಮಾನ್ ಸುಗ್ರೀವಃ ಶೋಕನಾಶನಮ್ ॥
ಅನುವಾದ
ಹೀಗೆ ಶೋಕ ಸಂತಪ್ತನಾದ ದಶರಥನಂದನ ಶ್ರೀರಾಮನಲ್ಲಿ ಸುಗ್ರೀವನು ಅವನ ಶೋಕವನ್ನು ನಿವಾರಿಸುವಂತಹ ಮಾತನ್ನು ಹೇಳಿದನು.॥1॥
ಮೂಲಮ್ - 2
ಕಿಂ ತ್ವಯಾ ತಪ್ಯತೇ ವೀರ ಯಥಾನ್ಯಃ ಪ್ರಾಕೃತಸ್ತಥಾ ।
ಮೈವಂ ಭೂಸ್ತ್ಯಜ ಸಂತಾಪಂ ಕೃತಘ್ನ ಇವ ಸೌಹೃದಮ್ ॥
ಅನುವಾದ
ವೀರವರನೇ! ನೀನು ಇತರ ಸಾಧಾರಣ ಮನುಷ್ಯನಂತೆ ಏಕೆ ಚಿಂತಿತನಾಗಿರುವೆ? ನೀನು ಹೀಗೆ ಚಿಂತಿಸಬಾರದು. ಕೃತಘ್ನನು ಸೌಹೃದನನ್ನು ತ್ಯಜಿಸಿದಂತೆ ನೀನು ಈ ಸಂತಾಪವನ್ನು ತ್ಯಜಿಸಿಬಿಡು.॥2॥
ಮೂಲಮ್ - 3
ಸಂತಾಪಸ್ಯ ಚ ತೇಸ್ಥಾನಂ ನಹಿ ಪಶ್ಯಾಮಿ ರಾಘವ ।
ಪ್ರವೃತ್ತಾವುಪಲಬ್ಧಾಯಾಂ ಜ್ಞಾತೆ ಚ ನಿಲಯೇ ರಿಪೋಃ ॥
ಅನುವಾದ
ರಘುನಂದನ! ಸೀತೆಯ ಸಮಾಚಾರ ಸಿಕ್ಕಿದೆ ಹಾಗೂ ಶತ್ರುವಿನ ನಿವಾಸದ ಸುಳಿವು ಸಿಕ್ಕಿರುವಾಗ ನಿನ್ನ ದುಃಖ, ಚಿಂತೆಯ ಯಾವ ಕಾರಣವೂ ನನಗೆ ತೋರುವುದಿಲ್ಲ.॥3॥
ಮೂಲಮ್ - 4
ಮತಿಮಾನ್ ಶಾಸ್ತ್ರವಿತ್ ಪ್ರಾಜ್ಞಃ ಪಂಡಿತಶ್ಚಾಸಿ ರಾಘವ ।
ತ್ಯಜೇಮಾಂ ಪ್ರಾಕೃತಾಂ ಬೃದ್ಧಿಂ ಕೃತಾತ್ಮೇವಾರ್ಥದೂಷಿಣೀಮ್ ॥
ಅನುವಾದ
ರಘುಕುಲಭೂಷಣ! ನೀನು ಬುದ್ಧಿವಂತನೂ, ಶಾಸ್ತ್ರಗಳನ್ನು ತಿಳಿದವನೂ, ವಿಚಾರಕುಶಲನೂ, ಪಂಡಿತನೂ ಆಗಿರುವೆ. ಆದ್ದರಿಂದ ಕೃತಾತ್ಮಾ ಪುರುಷನಂತೆ ಈ ಅರ್ಥದೂಷಕ ಪ್ರಾಕೃತ ಬುದ್ಧಿಯನ್ನು ತ್ಯಜಿಸು.॥4॥
ಮೂಲಮ್ - 5
ಸಮುದ್ರಂ ಲಂಘಯಿತ್ವಾ ತು ಮಹಾನಕ್ರ ಸಮಾಕುಲಮ್ ।
ಲಂಕಾಮಾರೋಹಯಿಷ್ಯಾಮೋ ಹನಿಷ್ಯಾಮಶ್ಚ ತೇ ರಿಪುಮ್ ॥
ಅನುವಾದ
ದೊಡ್ಡ-ದೊಡ್ಡ ಮೊಸಳೆಗಳಿಂದ ತುಂಬಿದ ಸಮುದ್ರವನ್ನು ಹಾರಿಹೋಗಿ ನಾವು ಲಂಕೆಯನ್ನು ಆಕ್ರಮಿಸುವೆವು ಮತ್ತು ನಿನ್ನ ಶತ್ರುವನ್ನು ನಾಶಮಾಡುವೆವು.॥5॥
ಮೂಲಮ್ - 6
ನಿರುತ್ಸಾಹಸ್ಯ ದೀನಸ್ಯ ಶೋಕಪರ್ಯಾಕುಲಾತ್ಮನಃ ।
ಸರ್ವಾರ್ಥಾ ವ್ಯವಸೀದಂತಿ ವ್ಯಸನಂ ಚಾಧಿಗಚ್ಛತಿ ॥
ಅನುವಾದ
ಉತ್ಸಾಹಶೂನ್ಯ, ದೀನ, ಮನಸ್ಸಿನ ಶೋಕದಿಂದ ವ್ಯಾಕುಲನಾಗಿರುವವನ ಎಲ್ಲ ಕೆಲಸಗಳು ಕೆಟ್ಟುಹೋಗುತ್ತವೆ ಹಾಗೂ ದೊಡ್ಡ ವಿಪತ್ತಿಗೆ ಸಿಲುಕಿಕೊಳ್ಳುತ್ತಾನೆ.॥6॥
ಮೂಲಮ್ - 7
ಇಮೇ ಶೂರಾಃ ಸಮರ್ಥಾಶ್ಚ ಸರ್ವತೋ ಹರಿಯೂಥಪಾಃ ।
ತ್ವತ್ಪ್ರಿಯಾರ್ಥಂ ಕೃತೋತ್ಸಾಹಾಃ ಪ್ರವೇಷ್ಟುಮಪಿ ಪಾವಕಮ್ ।
ಏಷಾಂ ಹರ್ಷೇಣ ಜಾನಾಮಿ ತರ್ಕಶ್ಚಾಪಿ ದೃಢೇ ಮಮ ॥
ಅನುವಾದ
ಈ ವಾನರಯೂಥಪತಿಗಳು ಎಲ್ಲ ರೀತಿಯಿಂದ ಸಮರ್ಥ, ಶೂರ-ವೀರರಾಗಿದ್ದಾರೆ. ನಿನ್ನ ಪ್ರಿಯಕಾರ್ಯ ವನ್ನು ಮಾಡಲು ಇವರ ಮನಸ್ಸಿನಲ್ಲಿ ಉತ್ಸಾಹವಿದೆ. ಇವರು ನಿನಗಾಗಿ ಉರಿಯುವ ಬೆಂಕಿಯನ್ನು ಪ್ರವೇಶಿಸುವರು, ಸಮುದ್ರವನ್ನು ದಾಟಲು ಮತ್ತು ರಾವಣನನ್ನು ಕೊಲ್ಲಲು ಉತ್ಸುಕರಾಗಿದ್ದಾರೆ. ಇವರ ಹರ್ಷೋತ್ಸಾಹವನ್ನು ನಾನು ಬಲ್ಲೆನು; ಈ ವಿಷಯದಲ್ಲಿ ನನ್ನ ತರ್ಕ (ನಿಶ್ಚಯ) ಸುದೃಢವಾಗಿದೆ.॥7॥
ಮೂಲಮ್ - 8
ವಿಕ್ರಮೇಣ ಸಮಾನೇಷ್ಯೇ ಸೀತಾಂ ಹತ್ವಾ ಯಥಾ ರಿಪುಮ್ ।
ರಾವಣಂ ಪಾಪಕರ್ಮಾಣಂ ತಥಾ ತ್ವಂ ಕರ್ತುಮರ್ಹಸಿ ॥
ಅನುವಾದ
ನಾವು ಪರಾಕ್ರಮಪೂರ್ವಕ ನಮ್ಮ ಶತ್ರು ಪಾಪಾಚಾರೀ ರಾವಣನನ್ನು ವಧಿಸಿ ಸೀತೆಯನ್ನು ಇಲ್ಲಿಗೆ ಕರೆತರುವಂತೆ ನೀನು ಮಾಡು.॥8॥
ಮೂಲಮ್ - 9
ಸೇತುರತ್ರ ಯಥಾ ಬದ್ಧ್ಯೇದ್ಯಥಾ ಪಶ್ಯೇಮ ತಾಂ ಪುರೀಮ್ ।
ತಸ್ಯ ರಾಕ್ಷಸರಾಜಸ್ಯ ತಥಾ ತ್ವಂ ಕುರು ರಾಘವ ॥
ಅನುವಾದ
ರಘುನಂದನ! ಸಮುದ್ರಕ್ಕೆ ಸೇತುವೆ ಕಟ್ಟಿ, ಆ ರಾಕ್ಷಸ ರಾಜನ ಲಂಕೆಯನ್ನು ನಾವು ನೋಡುವಂತೆ ನೀನು ಏನಾದರೂ ಉಪಾಯ ಮಾಡು.॥9॥
ಮೂಲಮ್ - 10
ದೃಷ್ಟ್ವಾ ತಾಂ ಹಿ ಪುರೀಂ ಲಂಕಾಂ ತ್ರಿಕೂಟಶಿಖರೇ ಸ್ಥಿತಾಮ್ ।
ಹತಂ ಚ ರಾವಣಂ ಯುದ್ಧೇ ದರ್ಶನಾದವಧಾರಯ ॥
ಅನುವಾದ
ತ್ರಿಕೂಟಾಚಲದ ಶಿಖರದಲ್ಲಿ ನೆಲೆಸಿದ ಲಂಕೆಯು ಒಮ್ಮೆ ಕಂಡುಬಂದರೆ, ಯುದ್ಧದಲ್ಲಿ ರಾವಣನನ್ನು ಕಂಡಂತೆ ಹಾಗೂ ಅವನು ಸತ್ತಂತೆ, ನೀನು ಖಂಡಿತವಾಗಿ ತಿಳಿ.॥10॥
ಮೂಲಮ್ - 11
ಅಬದ್ಧ್ವಾ ಸಾಗರೇ ಸೇತುಂ ಘೋರೇ ಚ ವರುಣಾಲಯೇ ।
ಲಂಕಾಂ ನ ಮರ್ದಿತುಂ ಶಕ್ಯಾ ಸೇಂದ್ರೈರಪಿ ಸುರಾಸುರೈಃ ॥
ಅನುವಾದ
ವರುಣನ ಆಲಯವಾದ ಘೋರ ಸಮುದ್ರಕ್ಕೆ ಸೇತುವೆ ಕಟ್ಟದೆ, ಇಂದ್ರಸಹಿತ ಸಮಸ್ತ ದೇವತೆಗಳು ಮತ್ತು ಅಸುರರೂ ಲಂಕೆಯನ್ನು ಸೋಲಿಸಲಾರರು.॥11॥
ಮೂಲಮ್ - 12
ಸೇತುಬಂಧಃ ಸಮುದ್ರೇ ಚ ಯಾವಲ್ಲಂಕಾ ಸಮೀಪತಃ ।
ಸರ್ವಂ ತೀರ್ಣಾಂ ಚ ಮೇ ಸೈನ್ಯಂ ಜಿತಮಿತ್ಯುಪಧಾರಯ ।
ಇಮೇ ಹಿ ಸಮರೇ ವೀರಾ ಹರಯಃ ಕಾಮರೂಪಿಣಃ ॥
ಅನುವಾದ
ಆದ್ದರಿಂದ ಲಂಕೆಯವರೆಗೆ ಸಮುದ್ರಕ್ಕೆ ಸೇತುವೆ ಕಟ್ಟಿದರೆ ನಮ್ಮ ಎಲ್ಲ ಸೈನ್ಯ ಆಚೆಯ ದಡ ಸೇರಿ, ನಮ್ಮ ಗೆಲುವಾಯಿತೆಂದೇ ನೀನು ತಿಳಿ; ಏಕೆಂದರೆ ಕಾಮರೂಪಿಗಳಾದ ಈ ವಾನರರು ಯುದ್ಧದಲ್ಲಿ ಭಾರೀ ಕಾರ್ಯವನ್ನು ತೋರಿಸುವವರಾಗಿದ್ದಾರೆ.॥12॥
ಮೂಲಮ್ - 13
ತದಲಂ ವಿಕ್ಲವಾಂ ಬುದ್ಧಿಂ ರಾಜನ್ ಸರ್ವಾರ್ಥನಾಶಿನೀಮ್ ।
ಪುರುಷಸ್ಯ ಹಿ ಲೋಕೇಽಸ್ಮಿನ್ ಶೋಕಃ ಶೌರ್ಯಾಪಕರ್ಷಣಃ ॥
ಅನುವಾದ
ಆದ್ದರಿಂದ ರಾಜನೇ! ನೀನು ಈ ವ್ಯಾಕುಲಬುದ್ಧಿಯನ್ನು ಆಶ್ರಯಿಸದೆ, ಬುದ್ಧಿಯ ವ್ಯಾಕುಲತೆಯನ್ನು ತ್ಯಜಿಸು. ಏಕೆಂದರೆ ಇದು ಎಲ್ಲ ಕಾರ್ಯಗಳನ್ನು ಕೆಡಿಸುತ್ತದೆ. ಈ ಜಗತ್ತಿನಲ್ಲಿ ಶೋಕವು ಪುರುಷನ ಶೌರ್ಯವನ್ನು ನಾಶಮಾಡುತ್ತದೆ.॥13॥
ಮೂಲಮ್ - 14
ಯತ್ತು ಕಾರ್ಯಂ ಮನುಷ್ಯೇಣ ಶೌಟೀರ್ಯಮವಲಂಬ್ಯತಾಮ್ ।
ತದಲಂಕರಣಾಯೈವ ಕರ್ತುರ್ಭವತಿ ಸತ್ವರಮ್ ॥
ಅನುವಾದ
ಮನುಷ್ಯನು ಶೌರ್ಯವನ್ನು ಆಶ್ರಯಿಸಬೇಕು; ಏಕೆಂದರೆ ಅದು ಕರ್ತೃನನ್ನು ಬೇಗನೇ ಅಲಂಕೃತಗೊಳಿಸುವುದು- ಆವನ ಅಭೀಷ್ಟ ಫಲದ ಸಿದ್ಧಿಯನ್ನು ಮಾಡಿಕೊಡುತ್ತದೆ.॥14॥
ಮೂಲಮ್ - 15
ಅಸ್ಮಿನ್ ಕಾಲೇ ಮಹಾಪ್ರಾಜ್ಞ ಸತ್ತ್ವಮಾತಿಷ್ಠ ತೇಜಸಾ ।
ಶೂರಾಣಾಂ ಹಿ ಮನುಷ್ಯಾಣಾಂ ತ್ವದ್ವಿಧಾನಾಂ ಮಹಾತ್ಮನಾಮ್ ।
ವಿನಷ್ಟೇ ವಾ ಪ್ರಣಷ್ಟೇ ವಾ ಶೋಕಃ ಸರ್ವಾರ್ಥನಾಶನಃ ॥
ಅನುವಾದ
ಆದ್ದರಿಂದ ಮಹಾಪ್ರಾಜ್ಞ ಶ್ರೀರಾಮನೇ! ನೀನು ಈಗ ತೇಜದೊಂದಿಗೆ ಧೈರ್ಯವನ್ನು ಆಶ್ರಯಿಸು. ಯಾವುದೇ ವಸ್ತು ಕಳೆದುಹೋದರೆ, ನಾಶವಾದರೆ ಅದಕ್ಕಾಗಿ ನಿನ್ನಂತಹ ಶೂರ-ವೀರ ಮಹಾತ್ಮಾ ಪುರಷರು ಶೋಕಿಸಬಾರದು; ಏಕೆಂದರೆ ಶೋಕವು ಎಲ್ಲ ಕಾರ್ಯಗಳನ್ನು ಹಾಳು ಮಾಡುತ್ತವೆ.॥15॥
ಮೂಲಮ್ - 16
ತತ್ವಂ ಬುದ್ಧಿಮತಾಂ ಶ್ರೇಷ್ಠಃ ಸರ್ವಶಾಸ್ತ್ರಾರ್ಥಕೋವಿದಃ ।
ಮದ್ವಿಧೈಃ ಸಚಿವೈಃಸಾರ್ಧಮರಿಂ ಜೇತುಂ ಸಮರ್ಹಸಿ ॥
ಅನುವಾದ
ನೀನು ಬುದ್ಧಿವಂತರಲ್ಲಿ ಶ್ರೇಷ್ಠ ಮತ್ತು ಸಮಸ್ತ ಶಾಸ್ತ್ರಗಳ ಮರ್ಮಜ್ಞನಾಗಿರುವೆ. ಆದ್ದರಿಂದ ನಮ್ಮಂತಹ ಮಂತ್ರಿಗಳ, ಸಹಾಯಕರೊಂದಿಗೆ ಇದ್ದು ಶತ್ರುಗಳ ಮೇಲೆ ವಿಜಯವನ್ನು ಪಡೆಯಬಲ್ಲೆ.॥16॥
ಮೂಲಮ್ - 17
ನಹಿ ಪಶ್ಯಾಮ್ಯಹಂ ಕಂಚಿತ್ ತ್ರೀಷು ಲೋಕೇಷು ರಾಘವ ।
ಗೃಹೀತಧನುಷೋ ಯಸ್ತೇ ತಿಷ್ಠೇದಭಿಮುಖೋ ರಣೇ ॥
ಅನುವಾದ
ರಘುನಂದನ! ರಣಭೂಮಿಯಲ್ಲಿ ಧನುಸ್ಸನ್ನು ಹಿಡಿದು ನಿನ್ನ ಮುಂದೆ ನಿಲ್ಲಬಲ್ಲ ವೀರನು ಈ ಮೂರುಲೋಕಗಳಲ್ಲಿ ಯಾರೂ ಕಂಡುಬರುವುದಿಲ್ಲ.॥17॥
ಮೂಲಮ್ - 18
ವಾನರೇಷು ಸಮಾಸಕ್ತಂ ನ ತೇ ಕಾರ್ಯಂ ವಿಪತ್ಸ್ಯತೇ ।
ಅಚಿರಾದ್ ದ್ರಕ್ಷಸೇ ಸೀತಾಂ ತೀರ್ತ್ವಾ ಸಾಗರಮಕ್ಷಯಮ್ ॥
ಅನುವಾದ
ವಾನರರ ಮೇಲೆ ಇರುವ ನಿನ್ನ ಕಾರ್ಯಭಾರವು ಕೆಟ್ಟುಹೋಗಲಾರದು. ನೀನು ಬೇಗನೇ ಈ ಅಕ್ಷಯ ಸಮುದ್ರವನ್ನು ದಾಟಿ ಸೀತೆಯನ್ನು ದರ್ಶಿಸುವೆ.॥18॥
ಮೂಲಮ್ - 19
ತದಲಂ ಶೋಕಮಾಲಂಬ್ಯ ಕ್ರೋಧಮಾಲಂಬ ಭೂಪತೇ ।
ನಿಶ್ಚೇಷ್ಟಾಃ ಕ್ಷತ್ರಿಯಾ ಮಂದಾಃ ಸರ್ವೇ ಚಂಡಸ್ಯ ಬಿಭ್ಯತಿ ॥
ಅನುವಾದ
ಭೂಪತಿಯೇ! ನೀನು ಹೃದಯದಲ್ಲಿ ಶೋಕಕ್ಕೆ ಸ್ಥಾನ ಕೊಡುವುದು ವ್ಯರ್ಥವಾಗಿದೆ. ಈಗಲಾದರೋ ನೀನು ಶತ್ರುಗಳ ಕುರಿತು ಕ್ರೋಧವನ್ನು ತಾಳು. ಕ್ರೋಧಶೂನ್ಯನಾದ ಕ್ಷತ್ರಿಯನಿಂದ ಯಾವುದೇ ಪ್ರಯತ್ನ ನಡೆಯಲಾರದು. ಆದರೆ ಶತ್ರುವಿನ ಕುರಿತು ರೋಷ ತುಂಬಿರುವವನಿಗೆ ಎಲ್ಲರೂ ಹೆದರುತ್ತಾರೆ.॥19॥
ಮೂಲಮ್ - 20
ಲಂಘನಾರ್ಥಂ ಚ ಘೋರಸ್ಯ ಸಮುದ್ರಸ್ಯ ನದೀಪತೇಃ ।
ಸಹಾಸ್ಮಾಭಿರಿಹೋಪೇತಃ ಸೂಕ್ಷ್ಮಬುದ್ಧಿರ್ವಿಚಾರಯ ॥
ಅನುವಾದ
ನದಿಗಳ ಸ್ವಾಮಿ ಘೋರಸಮುದ್ರವನ್ನು ದಾಟಲು ಯಾವ ಉಪಾಯ ಮಾಡಬಹುದೆಂದು ನೀನು ನಮ್ಮೊಂದಿಗೆ ಕುಳಿತು ವಿಚಾರಮಾಡು; ಏಕೆಂದರೆ ನಿನ್ನ ಬುದ್ಧಿಯು ಬಹಳ ಸೂಕ್ಷ್ಮವಾಗಿದೆ.॥20॥
ಮೂಲಮ್ - 21
ಲಂಘಿತೇ ತತ್ರ ತೈಃ ಸೈನ್ಯೈರ್ಜಿತಮಿತ್ಯೇವ ನಿಶ್ಚಿನು ।
ಸರ್ವಂ ತೀರ್ಣ ಚ ಮೇ ಸೈನ್ಯಂ ಜಿತಮಿತ್ಯವಧಾರ್ಯತಾಮ್ ॥
ಅನುವಾದ
ನಮ್ಮ ಸೈನಿಕರು ಸಮುದ್ರವನ್ನು ದಾಟಿಹೋದರೆ ನಮ್ಮ ಗೆಲುವು ನಿಶ್ಚಿತವೆಂದೆ ತಿಳಿ. ಸಮಸ್ತ ಸೈನ್ಯವು ಸಮುದ್ರ ದಾಟಿ ಹೋಗುವುದೇ ನಮ್ಮ ವಿಜಯವೆಂದು ತಿಳಿ.॥21॥
ಮೂಲಮ್ - 22
ಇಮೇ ಹಿ ಹರಯಃ ಶೂರಾಃ ಸಮರೇ ಕಾಮರೂಪಿಣಃ ।
ತಾನರೀನ್ ವಿಧಮಿಷ್ಯಂತಿ ಶಿಲಾಪಾದಪವೃಷ್ಟಿಭಿಃ ॥
ಅನುವಾದ
ಈ ವಾನರರು ಸಂಗ್ರಾಮದಲ್ಲಿ ಭಾರೀ ಶೂರರಿದ್ದಾರೆ. ಇಚ್ಛಾನುಸಾರ ರೂಪ ಧರಿಸಬಲ್ಲರು. ಇವರು ಕಲ್ಲುಗಳ ಮತ್ತು ಮರಗಳ ಮಳೆಗರೆದು ಶತ್ರುಗಳನ್ನು ಸಂಹಾರಮಾಡಿ ಬಿಡುವರು.॥22॥
ಮೂಲಮ್ - 23
ಕಥಂಚಿತ ಪರಿಪಶ್ಯಾಮಿ ಲಂಘಿತಂ ವರುಣಾಲಯಮ್ ।
ಹತಮಿತ್ಯೇವ ತಂ ಮನ್ಯೇ ಯುದ್ಧೇ ಶತ್ರುನಿಬರ್ಹಣ ॥
ಅನುವಾದ
ಶತ್ರುಸೂದನ ಶ್ರೀರಾಮ! ಯಾವುದೇ ವಿಧದಿಂದ ಈ ವಾನರ ಸೈನ್ಯವು ಸಮುದ್ರವನ್ನು ದಾಟಿ ಹೋದುದನ್ನು ನಾನು ನೋಡಿದರೆ ರಾವಣನು ಯುದ್ಧದಲ್ಲಿ ಸತ್ತನೆಂದೇ ತಿಳಿಯುತ್ತೇನೆ.॥23॥
ಮೂಲಮ್ - 24
ಕಿಮುಕ್ತ್ವಾ ಬಹುಧಾ ಚಾಪಿ ಸರ್ವಥಾ ವಿಜಯೀ ಭವಾನ್ ।
ನಿಮಿತ್ತಾನಿ ಚ ಪಶ್ಯಾಮಿ ಮನೋ ಮೇ ಸಂಪ್ರಹೃಷ್ಯತಿ ॥
ಅನುವಾದ
ತುಂಬಾ ಹೇಳುವುದರಿಂದ ಏನು ಲಾಭ? ನೀನು ಸರ್ವಥಾ ವಿಜಯಿಯಾಗುವೆ ಎಂದು ನನಗೆ ವಿಶ್ವಾಸವಿದೆ; ಏಕೆಂದರೆ ನನಗೆ ಅಂತಹ ಶಕುನಗಳು ಕಂಡುಬರುತ್ತಿವೆ ಹಾಗೂ ನನ್ನ ಹೃದಯವೂ ಹರ್ಷೋಲ್ಲಾಸದಿಂದ ತುಂಬಿದೆ.॥24॥
ಅನುವಾದ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಎರಡನೆಯ ಸರ್ಗ ಪೂರ್ಣವಾಯಿತು. ॥2॥