००१ रामेण हनुमत्कार्यश्लाघनम्

वाचनम्
ಭಾಗಸೂಚನಾ

ಶ್ರೀರಾಮನು ಹನುಮಂತನನ್ನು ಪ್ರಶಂಸಿಸಿ, ಅವನನ್ನು ಅಪ್ಪಿಕೊಂಡು, ಸಮುದ್ರವನ್ನು ದಾಟುವುದು ಹೇಗೆ ಎಂದು ಚಿಂತಿತನಾದುದು

ಮೂಲಮ್ - 1

ಶ್ರುತ್ವಾ ಹನುಮತೊ ವಾಕ್ಯಂ ಯಥಾವದಭಿಭಾಷಿತಮ್ ।
ರಾಮಃ ಪ್ರೀತಿಸಮಾಯುಕ್ತೋ ವಾಕ್ಯಮುತ್ತರಮಬ್ರವೀತ್ ॥

ಅನುವಾದ

ಹನುಮಂತನು ಯಥಾವತ್ತಾಗಿ ಹೇಳಿದ ಮಾತನ್ನು ಕೇಳಿ ಭಗವಾನ್ ಶ್ರೀರಾಮನು ಬಹಳ ಸಂತೋಷಗೊಂಡು, ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ಕೃತಂ ಹನೂಮತಾ ಕಾರ್ಯಂ ಸುಮಹದ್ಭುವಿ ದುರ್ಲಭಮ್ ।
ಮನಸಾಪಿ ಯದನ್ಯೇನ ನ ಶಕ್ಯಂ ಧರಣೀತಲೇ ॥

ಅನುವಾದ

ಹನುಮಂತನು ಬಹಳ ದೊಡ್ಡ ಕಾರ್ಯವನ್ನು ಮಾಡಿರುವನು. ಭೂತಳದಲ್ಲಿ ಇಂತಹ ಕಾರ್ಯ ಮಾಡುವುದು ತುಂಬಾ ಕಠಿಣವಾಗಿದೆ. ಜಗತ್ತಿನಲ್ಲಿ ಇಂತಹ ಕಾರ್ಯವನ್ನು ಮಾಡಲು ಮನಸ್ಸಿನಲ್ಲಿ ಯೋಚಿಸು ವವನೂ ಕೂಡ ಬೇರೆ ಯಾರು ಇರಬಲ್ಲನು.॥2॥

ಮೂಲಮ್ - 3

ನ ಹಿ ತಂ ಪರಿಪಶ್ಯಾಮಿ ಯಸ್ತರೇತ ಮಹೋದಧಿಮ್ ।
ಅನ್ಯತ್ರ ಗರುಡಾದ್ವಾಯೋರನ್ಯತ್ರ ಚ ಹನೂಮತಃ ॥

ಅನುವಾದ

ಗರುಡ, ವಾಯು, ಹನುಮಂತ ಇವರನ್ನು ಬಿಟ್ಟು ಈ ಮಹಾಸಾಗರ ವನ್ನು ಹಾರಿಹೋಗುವವನು ಬೇರೆ ಯಾರನ್ನೂ ನಾನು ನೋಡುವುದಿಲ್ಲ.॥3॥

ಮೂಲಮ್ - 4½

ದೇವದಾನವಯಕ್ಷಾಣಾಂ ಗಂಧರ್ವೋರಗರಕ್ಷಸಾಮ್ ।
ಅಪ್ರಧೃಷ್ಯಾಂ ಪುರೀಂ ಲಂಕಾಂ ರಾವಣೇನ ಸುರಕ್ಷಿತಾಮ್ ।
ಪ್ರವಿಷ್ಟಃ ಸತ್ತ್ವಮಾಶ್ರಿತ್ಯ ಜೀವನ್ ಕೋ ನಾಮ ನಿಷ್ಕೃಮೇತ್ ॥

ಅನುವಾದ

ದೇವತೆ, ದಾನವ, ಯಕ್ಷ, ಗಂಧರ್ವರು, ನಾಗರು, ರಾಕ್ಷಸರು-ಇವರಲ್ಲಿ ಯಾರೂ ಆಕ್ರಮಣ ಮಾಡಲು ಅಸಂಭವವಾದ, ರಾವಣನಿಂದ ರಕ್ಷಿತವಾದ ಲಂಕೆಯನ್ನು ತನ್ನ ಪರಾಕ್ರಮದ ಭರವಸೆಯಿಂದ ಪ್ರವೇಶಿಸಿ, ಜೀವಂತವಾಗಿ ಯಾರು ತಾನೇ ಹೊರಟು ಬರಬಲ್ಲನು.॥4॥

ಮೂಲಮ್ - 5½

ಕೋ ವಿಶೇತ್ಸುದುರಾಧರ್ಷಾಂ ರಾಕ್ಷಸೈಶ್ಚ ಸುರಕ್ಷಿತಾಮ್ ॥
ಯೋ ವೀರ್ಯಬಲಸಂಪನ್ನೋ ನ ಸಮಃ ಸ್ಯಾದ್ಧನೂಮತಃ ।

ಅನುವಾದ

ಹನುಮಂತನಂತೆ ಬಲ-ಪರಾಕ್ರಮವಿಲ್ಲದವನು ರಾಕ್ಷಸರಿಂದ ಸುರಕ್ಷಿತವಾದ ಅತ್ಯಂತ ದುರ್ಜಯ ಲಂಕೆಯನ್ನು ಯಾರು ತಾನೇ ಪ್ರವೇಶಿಸಬಲ್ಲನೇ.॥5॥

ಮೂಲಮ್ - 6

ಭೃತ್ಯಕಾರ್ಯಂ ಹನುಮತಾ ಸುಗ್ರೀವಸ್ಯ ಕೃತಂ ಮಹತ್ ।
ಏವಂ ವಿಧಾಯ ಸ್ವಬಲಂ ಸದೃಶಂ ವಿಕ್ರಮಸ್ಯ ಚ ॥

ಅನುವಾದ

ಹನುಮಂತನು ಸಮುದ್ರವನ್ನು ದಾಟಿದುದೇ ಮೊದಲಾದ ಕಾರ್ಯಗಳಿಂದ ತನ್ನ ಪರಾಕ್ರಮಕ್ಕನುರೂಪ ಬಲವನ್ನು ಪ್ರಕಟಿಸಿ, ಓರ್ವ ನಿಜ ಸೇವಕನ ಯೋಗ್ಯ ಕಾರ್ಯ ಮಾಡಿ ಸುಗ್ರೀವನ ದೊಡ್ಡ ಕೆಲಸವನ್ನು ನೆರವೇರಿಸಿರುವನು.॥6॥

ಮೂಲಮ್ - 7

ಯೋ ಹಿ ಭೃತ್ಯೋ ನಿಯುಕ್ತಃ ಸನ್ ಭರ್ತ್ರಾ ಕರ್ಮಣಿ ದುಷ್ಕರೇ ।
ಕುರ್ಯಾತ್ತದನುರಾಗೇಣ ತಮಾಹುಃ ಪುರುಷೋತ್ತಮಮ್ ॥

ಅನುವಾದ

ದುಷ್ಕರ ಕಾರ್ಯದಲ್ಲಿ ಒಡೆಯನಿಂದ ನಿಯುಕ್ತನಾಗಿ, ಅದನ್ನು ಪೂರ್ಣ ಗೊಳಿಸಿ ಅದಕ್ಕೆ ಅನುಕೂಲವಾದ ಇನ್ನೊಂದು ಕಾರ್ಯವನ್ನೂ ಕೂಡ (ಮುಖ್ಯಕಾರ್ಯಕ್ಕೆ ವಿರೋಧ ವಲ್ಲದ) ನೆರವೇರಿಸುವ ಸೇವಕನೇ ಉತ್ತಮನೆಂದು ಹೇಳಲಾಗಿದೆ.॥7॥

ಮೂಲಮ್ - 8

ಯೋ ನಿಯುಕ್ತಃ ಪರಂ ಕಾರ್ಯಂ ನ ಕುರ್ಯಾನ್ನೃಪತೇಃ ಪ್ರಿಯಮ್ ।
ಭೃತ್ಯೋ ಯುಕ್ತಃ ಸಮರ್ಥಶ್ಚ ತಮಾಹುರ್ಮಧ್ಯಮಂ ನರಮ್ ॥

ಅನುವಾದ

ಒಂದು ಕಾರ್ಯದಲ್ಲಿ ನಿಯುಕ್ತನಾಗಿ ಯೋಗ್ಯತೆ, ಸಾಮರ್ಥ್ಯವಿದ್ದರೂ ಸ್ವಾಮಿಯ ಮತ್ತೊಂದು ಕಾರ್ಯವನ್ನು ಮಾಡದವನು (ಸ್ವಾಮಿಯು ಹೇಳಿದಷ್ಟೇ ಮಾಡಿ ಮರಳುವ) ಮಧ್ಯಮ ಶ್ರೇಣಿಯ ಸೇವಕನೆಂದು ತಿಳಿಸಲಾಗಿದೆ.॥8॥

ಮೂಲಮ್ - 9

ನಿಯುಕ್ತೋ ನೃಪತೇಃ ಕಾರ್ಯಂ ನ ಕುರ್ಯಾದ್ಯಃ ಸಮಾಹಿತಃ ।
ಭೃತ್ಯೋ ಯುಕ್ತಃ ಸಮರ್ಥಶ್ಚ ತಮಾಹುಃ ಪುರುಷಾಧಮಮ್ ॥

ಅನುವಾದ

ಒಡೆಯನಿಂದ ಯಾವುದೇ ಕಾರ್ಯದಲ್ಲಿ ನಿಯುಕ್ತನಾಗಿ ತನ್ನಲ್ಲಿ ಯೋಗ್ಯತೆ, ಸಾಮರ್ಥ್ಯ ಇದ್ದರೂ ಆ ಕಾರ್ಯವನ್ನು ಮಾಡದವನು ಅಧಮ ಸೇವಕನೆಂದು ಹೇಳಲಾಗಿದೆ.॥9॥

ಮೂಲಮ್ - 10

ತನ್ನಿಯೋಗೇ ನಿಯುಕ್ತೇನ ಕೃತಂ ಕೃತ್ಯಂ ಹನೂಮತಾ ।
ನ ಚಾತ್ಮಾ ಲಘುತಾಂ ನೀತಃ ಸುಗ್ರೀವಶ್ಚಾಪಿ ತೋಷಿತಃ ॥

ಅನುವಾದ

ಹನುಮಂತನು ಒಡೆಯನ ಒಂದು ಕಾರ್ಯದಲ್ಲಿ ನಿಯುಕ್ತನಾಗಿ ಜೊತೆಗೆ ಮತ್ತೊಂದು ಮಹತ್ವಪೂರ್ಣ ಕಾರ್ಯವನ್ನು ಪೂರ್ಣಗೊಳಿಸಿ, ತನ್ನ ಗೌರವದಲ್ಲಿ ಕೊರತೆಯಾಗದಂತೆ, ಬೇರೆಯವರ ದೃಷ್ಟಿಯಲ್ಲಿ ಸಣ್ಣವನಾಗದೆ, ಸುಗ್ರೀವನನ್ನು ಪೂರ್ಣವಾಗಿ ಸಂತುಷ್ಟಗೊಳಿಸಿದನು.॥10॥

ಮೂಲಮ್ - 11

ಅಹಂ ಚ ರಘುವಂಶಶ್ಚ ಲಕ್ಷ್ಮಣಶ್ಚ ಮಹಾಬಲಃ ।
ವೈದೇಹ್ಯಾ ದರ್ಶನೇನಾದ್ಯ ಧರ್ಮತಃ ಪರಿರಕ್ಷಿತಾಃ ॥

ಅನುವಾದ

ಇಂದು ಹನುಮಂತನು ವಿದೇಹನಂದಿನೀ ಸೀತೆಯನ್ನು ಹುಡುಕಿ, ತನ್ನ ಕಣ್ಣುಗಳಿಂದ ನೋಡಿ ಧರ್ಮಕ್ಕನುಸಾರ ನನ್ನನ್ನು, ಸಮಸ್ತ ರಘುವಂಶವನ್ನು ಮತ್ತು ಮಹಾಬಲಿ ಲಕ್ಷ್ಮಣನನ್ನು ರಕ್ಷಿಸಿರುವನು.॥11॥

ಮೂಲಮ್ - 12

ಇದಂ ತು ಮಮ ದೀನಸ್ಯ ಮನೋ ಭೂಯಃ ಪ್ರಕರ್ಷತಿ ।
ಯದಿಹಾಸ್ಯ ಪ್ರಿಯಾಖ್ಯಾತುರ್ನ ಕುರ್ಮಿ ಸದೃಶಂ ಪ್ರಿಯಮ್ ॥

ಅನುವಾದ

ಇಲ್ಲಿ ನನಗೆ ಪ್ರಿಯ ಸಂವಾದವನ್ನು ಹೇಳಿದವನಿಗೆ ಯಾವುದಾದರೂ ಪ್ರಿಯಕಾರ್ಯ ಮಾಡದಾದೆನಲ್ಲ! ಎಂದು ಮನಸ್ಸಿನಲ್ಲಿ ಸಂಕೋಚವಾಗುತ್ತಿದೆ. ಅವನಿಗೆ ಯೋಗ್ಯ ಪುರಸ್ಕಾರ ಕೊಡಲು ಇಂದು ನನ್ನ ಬಳಿ ಏನೂ ಇಲ್ಲವಲ್ಲ.॥12॥

ಮೂಲಮ್ - 13

ಏಷ ಸರ್ವಸ್ವಭೂತಸ್ತು ಪರಿಷ್ವಂಗೋ ಹನೂಮತಃ ।
ಮಯಾ ಕಾಲಮಿಮಂ ಪ್ರಾಪ್ಯದತ್ತಸ್ತಸ್ಯ ಮಹಾತ್ಮನಃ ॥

ಅನುವಾದ

ಈಗ ಈ ಮಹಾತ್ಮಾ ಹನುಮಂತನಿಗೆ ನಾನು ಕೇವಲ ನನ್ನ ಗಾಢವಾದ ಆಲಿಂಗವನ್ನೇ ಕೊಡುವೆನು; ಏಕೆಂದರೆ ಇದೇ ನನ್ನ ಸರ್ವಸ್ವವಾಗಿದೆ.॥13॥

ಮೂಲಮ್ - 14

ಇತ್ಯುಕ್ತ್ವಾ ಪ್ರೀತಿಹೃಷ್ಟಾಂಗೋ ರಾಮಸ್ತಂ ಪರಿಷಸ್ವಜೇ ।
ಹನೂಮಂತಂ ಕೃತಾತ್ಮಾನಂ ಕೃತಕಾರ್ಯಮುಪಾಗತಮ್ ॥

ಅನುವಾದ

ಹೀಗೆ ಹೇಳುತ್ತಾ ರಘುನಾಥನ ಸರ್ವಾಂಗವು ಪ್ರೇಮದಿಂದ ಪುಲಕಿತಗೊಂಡಿತು ಮತ್ತು ನನ್ನ ಆಜ್ಞೆಯ ಪಾಲನೆಯಲ್ಲಿ ಸಲನಾಗಿ ಮರಳಿದ ಪವಿತ್ರಾತ್ಮಾ ಹನುಮಂತನನ್ನು ಬಿಗಿದಪ್ಪಿಕೊಂಡನು.॥14॥

ಮೂಲಮ್ - 15

ಧ್ಯಾತ್ವಾ ಪುನರುವಾಚೇದಂ ವಚನಂ ರಘುಸತ್ತಮಃ ।
ಹರೀಣಾಮೀಶ್ವರಸ್ಯಾಪಿ ಸುಗ್ರೀವಸ್ಯೋಪಶೃಣ್ವತಃ ॥

ಅನುವಾದ

ಮತ್ತೆ ಸ್ವಲ್ಪ ಹೊತ್ತು ವಿಚಾರಮಾಡಿ ರಘುವಂಶ ಶಿರೋಮಣಿ ಶ್ರೀರಾಮನು ವಾನರರಾಜ ಸುಗ್ರೀವನು ಕೇಳುವಂತೆ ಹೀಗೆ ಹೇಳಿದನು.॥15॥

ಮೂಲಮ್ - 16

ಸರ್ವಥಾ ಸುಕೃತಂ ತಾವತ್ ಸೀತಾಯಾಃ ಪರಿಮಾರ್ಗಣಮ್ ।
ಸಾಗರಂ ತು ಸಮಾಸಾದ್ಯ ಪುನರ್ನಷ್ಟಂ ಮನೋ ಮಮ ॥

ಅನುವಾದ

ಬಂಧುಗಳೇ! ಸೀತಾನ್ವೇಷಣೆಯ ಕಾರ್ಯವಾದರೋ ಚೆನ್ನಾಗಿ ನೆರವೇರಿತು; ಆದರೆ ಸಮುದ್ರದ ದುಸ್ತರವನ್ನು ಯೋಚಿಸುವಾಗ ನನ್ನ ಮನಸ್ಸಿನ ಉತ್ಸಾಹ ಪುನಃ ಉಡುಗಿ ಹೋಯಿತು.॥16॥

ಮೂಲಮ್ - 17

ಕಥಂ ನಾಮ ಸಮುದ್ರಸ್ಯ ದುಷ್ಪಾರಸ್ಯ ಮಹಾಂಭಸಃ ।
ಹರಯೋ ದಕ್ಷಿಣಂ ಪಾರಂ ಗಮಿಷ್ಯಂತಿ ಸಮಾಗತಾಃ ॥

ಅನುವಾದ

ಮಹಾ ಜಲರಾಶಿಯಿಂದ ತುಂಬಿದ ಸಮುದ್ರವನ್ನು ದಾಟುವುದು ಬಹಳ ಕಠಿಣ ಕೆಲಸವಾಗಿದೆ. ಇಲ್ಲಿ ನೆರೆದಿರುವ ಈ ವಾನರರು ಸಮುದ್ರದ ದಕ್ಷಿಣ ತೀರಕ್ಕೆ ಹೇಗೆ ಹೋಗಬಲ್ಲರು.॥17॥

ಮೂಲಮ್ - 18

ಯದ್ಯಪ್ಯೇಷು ತು ವೃತ್ತಾಂತೋ ವೈದೇಹ್ಯಾ ಗದಿತೋ ಮಮ ।
ಸಮುದ್ರಪಾರಗಮನೇ ಹರಿಣಾಂ ಕಿಮಿವೋತ್ತರಮ್ ॥

ಅನುವಾದ

ನನ್ನ ಸೀತೆಯು ಇದೇ ಸಂದೇಹವನ್ನು ವ್ಯಕ್ತಗೊಳಿಸಿದ್ದಳು, ಅದರ ವೃತ್ತಾಂತವನ್ನು ಈಗತಾನೇ ನಾನು ಕೇಳಿದೆ. ಈ ವಾನರರು ಸಮುದ್ರವನ್ನು ದಾಟುವ ವಿಷಯದಲ್ಲಿ ಉಂಟಾದ ಈ ಪ್ರಶ್ನೆಯ ವಾಸ್ತವಿಕ ಉತ್ತರವೇನಿದೆ.॥18॥

ಮೂಲಮ್ - 19

ಇತ್ಯುಕ್ತ್ವಾ ಶೋಕಸಂಭ್ರಾಂತೋ ರಾಮಃ ಶತ್ರುನಿಬರ್ಹಣಃ ।
ಹನೂಮಂತಂ ಮಹಾಬಾಹುಸ್ತತೋ ಧ್ಯಾನಮುಪಾಗಮತ್ ॥

ಅನುವಾದ

ಹನುಮಂತನಲ್ಲಿ ಹೀಗೆ ಹೇಳಿ ಶತ್ರುಸೂದನ ಮಹಾಬಾಹು ಶ್ರೀರಾಮನು ಶೋಕಾಕುಲನಾಗಿ ಬಹಳ ಚಿಂತಿತ ನಾದನು.॥19॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಯುದ್ಧಕಾಂಡದಲ್ಲಿ ಮೊದಲನೆಯ ಸರ್ಗ ಪೂರ್ಣವಾಯಿತು. ॥1॥