०६८ सीतया स्वदशाचिन्तनम्

वाचनम्
ಭಾಗಸೂಚನಾ

ಸೀತೆಯ ಸಂದೇಹವನ್ನು ನಿವಾರಿಸಿದ ಬಗೆಯನ್ನು ಹನುಮಂತನು ಶ್ರೀರಾಮನಿಗೆ ಹೇಳಿದುದು

(ಶ್ಲೋಕ - 1

ಮೂಲಮ್

ಅಥಾಹಮುತ್ತರಂ ದೇವ್ಯಾ ಪುನರುಕ್ತಃ ಸಸಂಭ್ರಮಃ ।
ತವ ಸ್ನೇಹಾನ್ನರವ್ಯಾಘ್ರ ಸೌಹಾರ್ದಾದನುಮಾನ್ಯ ವೈ ॥

ಅನುವಾದ

ಹನುಮಂತನು ಶ್ರೀರಾಮನಲ್ಲಿ ಪುನಃ ಹೀಗೆ ಹೇಳುತ್ತಾನೆ ಎಲೈ ನರಶ್ರೇಷ್ಠನೇ! ನಿನಗೆ ನನ್ನ ಮೇಲೆ ಇರುವ ಪ್ರೇಮಾದರಗಳನ್ನು, ಸೌಹಾರ್ದವನ್ನು ನೋಡಿ, ಆ ದೇವಿಯು ನನ್ನಲ್ಲಿ ಆದರದಿಂದ ಪುನಃ ಇಂತೆಂದಳು.॥1॥

(ಶ್ಲೋಕ - 2

ಮೂಲಮ್

ಏವಂ ಬಹುವಿಧಂ ವಾಚ್ಯೋ ರಾಮೋ ದಾಶರಥಿಸ್ತ್ವಯಾ ।
ಯಥಾ ಮಾಮಾಪ್ನು ಯಾಚ್ಛೀಘ್ರಂ ಹತ್ವಾ ರಾವಣಮಾಹವೇ ॥

ಅನುವಾದ

‘‘ಎಲೈ ಹನುಮಂತನೇ! ದಶರಥಕುಮಾರನಾದ ಶ್ರೀರಾಮನು ಯುದ್ಧದಲ್ಲಿ ರಾವಣನನ್ನು ಸಂಹರಿಸಿ ಶೀಘ್ರವಾಗಿ ನನ್ನನ್ನು ಕರೆದೊಯ್ಯುವಂತೆ ಅವನಲ್ಲಿ ಅನೇಕಪ್ರಕಾರದಿಂದ ಹೇಳು.॥2॥

(ಶ್ಲೋಕ - 3

ಮೂಲಮ್

ಯದಿ ವಾ ಮನ್ಯಸೇ ವೀರ ವಸೈಕಾಹಮರಿಂದಮ ।
ಕಸ್ಮಿಂಶ್ಚಿತ್ ಸಂವೃತೇ ದೇಶೇ ವಿಶ್ರಾಂತಃ ಶ್ವೋ ಗಮಿಷ್ಯಸಿ ॥

ಅನುವಾದ

ಮಹಾವೀರಾ! ಶತ್ರುಸಂಹಾರಕಾ! ನಿನಗೆ ಸಮ್ಮತವಾದರೆ ಒಂದು ದಿನದ ಮಟ್ಟಿಗಾದರೂ ಇಲ್ಲಿ ಇರು. ಯಾವುದಾದರೊಂದು ರಹಸ್ಯ ಪ್ರದೇಶದಲ್ಲಿ ವಿಶ್ರಾಂತಿ ಪಡೆದು ನಾಳೆ ಹೊರಡಬಹುದು.॥3॥

(ಶ್ಲೋಕ - 4

ಮೂಲಮ್

ಮಮ ಚಾಪ್ಯಲ್ಪಭಾಗ್ಯಾಯಾಃ ಸಾಂನಿಧ್ಯಾತ್ತವ ವಾನರ ।
ಅಸ್ಯ ಶೋಕವಿಪಾಕಸ್ಯ ಮುಹೂರ್ತಂ ಸ್ಯಾದ್ವಿಮೋಕ್ಷಣಮ್ ॥

ಅನುವಾದ

ಎಲೈ ಪರಾಕ್ರಮಶಾಲಿಯೇ! ನೀನು ಇಲ್ಲೇ ಸಮೀಪದಲ್ಲಿ ಇದ್ದರೆ ಮಂದಭಾಗ್ಯಳಾದ ನನಗೆ ಈ ಅಂತ್ಯವಿಲ್ಲದ ಶೋಕವು ಒಂದು ಕ್ಷಣಕಾಲವಾದರೂ ದೂರಾಗಬಹುದು.॥4॥

(ಶ್ಲೋಕ - 5

ಮೂಲಮ್

ಗತೇ ಹಿ ತ್ವಯಿ ವಿಕ್ರಾಂತೇ ಪುನರಾಗಮನಾಯ ವೈ ।
ಪ್ರಾಣಾನಾಮಪಿ ಸಂದೇಹೋ ಮಮ ಸ್ಯಾನ್ನಾತ್ರ ಸಂಶಯಃ ॥

ಅನುವಾದ

ಪರಾಕ್ರಮಶಾಲಿಯಾದ ನೀನು ಹೋಗಿ, ಮರಳಿ ಇಲ್ಲಿಗೆ ಬರುವವರೆಗೆ ನನ್ನ ಪ್ರಾಣಗಳು ಉಳಿಯುವುದು ಸಂದೇಹಾಸ್ಪದವೇ. ಇದರಲ್ಲಿ ಸಂಶಯವೇ ಇಲ್ಲ.॥5॥

(ಶ್ಲೋಕ - 6

ಮೂಲಮ್

ತವಾದರ್ಶನಜಃ ಶೋಕೋ ಭೂಯೋ ಮಾಂ ಪರಿತಾಪಯೇತ್ ।
ದುಃಖಾದ್ದುಃಖಪರಾಭೂತಾಂ ದುರ್ಗತಾಂ ದುಃಖಭಾಗಿನೀಮ್ ॥

ಅನುವಾದ

ಎಲೈ ಮಹಾವೀರನೇ! ನೀನು ಇಲ್ಲಿಂದ ಹೋದೊಡನೆ ನಿನ್ನ ದರ್ಶನ ಭಾಗ್ಯವು ನನಗೆ ದೂರವಾಗುವುದು. ಅದರಿಂದ ಈಗಿರುವ ದುಃಖವು ಇಮ್ಮಡಿಯಾಗುವುದು. ಅದು ಇನ್ನೂ ನನ್ನನ್ನು ಬಾಧಿಸುವುದು. ಆ ವಿಧವಾಗಿ ನನ್ನ ದುಃಖ ಪರಂಪರೆಯು ಹೆಚ್ಚುತ್ತಾಹೋದೀತು.॥6॥

ಮೂಲಮ್ - 7

ಅಯಂ ಚ ವೀರ ಸಂದೇಹಸ್ತಿಷ್ಠ ತೀವ ಮಮಾಗ್ರತಃ ।
ಸುಮಹಾಂಸ್ತ್ವತ್ಸಹಾಯೇಷು ಹರ್ಯೃಕ್ಷೇಷು ಹರೀಶ್ವರ ॥

ಮೂಲಮ್ - 8

ಕಥಂ ನು ಖಲು ದುಷ್ಪಾರಂ ತರಿಷ್ಯಂತಿ ಮಹೋದಧಿಮ್ ।
ತಾನಿ ಹರ್ಯೃಕ್ಷಸೈನ್ಯಾನಿ ತೌ ವಾ ನರವರಾತ್ಮಜೌ ॥

ಅನುವಾದ

ಎಲೈ ಕಪಿವರಾ! ನೀನು ಸರ್ವಸಮರ್ಥನೇ. ನಿನ್ನ ವಿಷಯದಲ್ಲಿ ಸಂದೇಹವೇ ಇಲ್ಲ. ಆದರೆ ನಿನಗೆ ಸಹಾಯಕರಾದ ಭಲ್ಲೂಕ-ವಾನರರ ವಿಷಯದಲ್ಲಿ ನನಗೆ ಸಂದೇಹವೇ ಕಾಡುತ್ತಿದೆ. ದಾಟಲಶಕ್ಯವಾದ ಈ ಮಹೋದಧಿಯನ್ನು ಆ ವಾನರ-ಭಲ್ಲೂಕ ಸೈನ್ಯವು, ಆ ದಶರಥ ಕುಮಾರರೀರ್ವರು ಹೇಗೆ ದಾಟುವರು?॥7-8॥

ಮೂಲಮ್ - 9

ತ್ರಯಾಣಾಮೇವ ಭೂತಾನಾಂ ಸಾಗರಸ್ಯಾಸ್ಯ ಲಂಘನೇ ।
ಶಕ್ತಿಃ ಸ್ಯಾದ್ವೈ ನತೇಯಸ್ಯ ವಾಯೋರ್ವಾ ತವ ವಾನಘ ॥

ಅನುವಾದ

ಪ್ರಪಂಚದಲ್ಲಿರುವ ಪ್ರಾಣಿಗಳಲ್ಲಿ ಗರುಡ, ವಾಯು ಮತ್ತು ನೀನು ಹೀಗೆ ಮೂವರಿಗೇ ಮಾತ್ರ ಮಹಾಸಮುದ್ರವನ್ನು ದಾಟುವ ಶಕ್ತಿಯಿದೆಯೆಂದು ನಾನು ಭಾವಿಸುತ್ತೇನೆ.॥9॥

ಮೂಲಮ್ - 10

ತದಸ್ಮಿನ್ ಕಾರ್ಯನಿರ್ಯೋಗೇ ವೀರೈವಂ ದುರತಿಕ್ರಮೇ ।
ಕಿಂ ಪಶ್ಯಸಿ ಸಮಾಧಾನಂ ತ್ವಂ ಹಿ ಕಾರ್ಯವಿದಾಂ ವರಃ ॥

ಅನುವಾದ

ಕಾರ್ಯಸಾಧಕರಲ್ಲಿ ಶ್ರೇಷ್ಠನಾದ ಎಲೈ ಮಹಾವೀರಾ! ಆದ್ದರಿಂದ ದಾಟಲು ಇಷ್ಟು ಅಶಕ್ಯವಾದ ಸಮುದ್ರವನ್ನು ದಾಟುವ ವಿಷಯದಲ್ಲಿ ನೀನು ಯಾವ ಉಪಾಯವನ್ನು ಆಲೋಚಿಸಿರುವೆ? ತಿಳಿಸು.॥10॥

ಮೂಲಮ್ - 11

ಕಾಮಮಸ್ಯ ತ್ವಮೇವೈಕಃ ಕಾರ್ಯಸ್ಯ ಪರಿಸಾಧನೇ ।
ಪರ್ಯಾಪ್ತಃ ಪರವೀರಘ್ನ ಯಶಸ್ಯಸ್ತೇ ಬಲೋದಯಃ ॥

ಅನುವಾದ

ಎಲ್ಲ ರಾಕ್ಷಸರನ್ನು ಸಂಹರಿಸಿ ನನ್ನನ್ನು ವಿಮೋಚನೆಗೊಳಿಸುವ ಕಾರ್ಯವನ್ನು ಸಾಧಿಸಲು ನೀನೋರ್ವನೇ ಸಾಕು. ಆದರೆ ಹೀಗೆ ಮಾಡುವುದರಿಂದ ನಿನಗೆ ಯಶಸ್ಸು ಲಭಿಸೀತು. ನನಗಾಗಲೀ, ಶ್ರೀರಾಮನಿಗಾಗಲೀ ಯಶಸ್ಸು ಲಭಿಸಲಾರದು.॥11॥

ಮೂಲಮ್ - 12

ಬಲೈಃ ಸಮಗ್ರೈರ್ಯದಿ ಮಾಂ ಹತ್ವಾ ರಾವಣಮಾಹವೇ ।
ವಿಜಯಾ ಸ್ವಾಂ ಪುರೀಂ ರಾಮೋ ನಯೇತ್ತತ್ ಸ್ಯಾದ್ಯಶಸ್ಕರಮ್ ॥

ಅನುವಾದ

ಶ್ರೀರಾಮನು ಇಲ್ಲಿಗೆ ಬಂದು ಯುದ್ಧದಲ್ಲಿ ರಾವಣನನ್ನೂ, ಅವನ ಸಮಸ್ತ ಬಲವನ್ನೂ ರಣರಂಗದಲ್ಲಿ ಸಂಹರಿಸಿ ವಿಜೇತನಾಗಿ, ನನ್ನನ್ನು ಅಯೋಧ್ಯೆಗೆ ಕರಕೊಂಡು ಹೋದರೆ ಅದು ಆ ಪ್ರಭುವಿಗೂ, ನನಗೂ ಯಶಸ್ಕರವು.॥12॥

ಮೂಲಮ್ - 13

ಯಥಾಹಂ ತಸ್ಯ ವೀರಸ್ಯ ವನಾದುಪಧಿನಾ ಹೃತಾ ।
ರಕ್ಷಸಾ ತದ್ಭಯಾದೇವ ತಥಾ ನಾರ್ಹತಿ ರಾಘವಃ ॥

ಅನುವಾದ

ಆ ಶ್ರೀರಾಮನಿಗೆ ಭಯಪಟ್ಟು ರಾಕ್ಷಸನಾದ ರಾವಣನು ವಂಚನೆಯಿಂದ ನನ್ನನ್ನು ಅರಣ್ಯದಿಂದ ಅಪಹರಿಸಿ ತಂದನು. ಈಗ ಆ ರಾಮನು ಹಾಗೆ ಮಾಡಕೂಡದು. ತಾನು ಸ್ವತಃ ಬಾರದೆ ಹನುಮಂತನ ಮೂಲಕ ಪತ್ನಿಯನ್ನು ಪಡೆಯುವುದು ಆತನು ಸಹಿಸನು. ಏಕೆಂದರೆ ಆತನು ವೀರನು. ನಾನು ವೀರಪತ್ನಿಯು.॥13॥

ಮೂಲಮ್ - 14

ಬಲೈಸ್ತು ಸಂಕುಲಾಂ ಕೃತ್ವಾ ಲಂಕಾಂ ಪರಬಲಾರ್ದನಃ ।
ಮಾಂ ನಯೇದ್ಯದಿ ಕಾಕುತ್ಸ್ಥಃ ತತ್ ತಸ್ಯ ಸದೃಶಂ ಭವೇತ್ ॥

ಅನುವಾದ

ಶ್ರೀರಾಮನು ತನ್ನ ಬಲದಿಂದ ಶತ್ರುಬಲವನ್ನು ಧೂಳಿಪಟವೆಸಗಿ, ಲಂಕೆಯನ್ನು ನಿರ್ನಾಮ ಗೈದು ನನ್ನನ್ನು ಸ್ವಯಂ ಅವನು ಕರಕೊಂಡುಹೋದರೆ ಅದು ಆ ವೀರನಿಗೆ ತಕ್ಕುದಾದುದು.॥14॥

ಮೂಲಮ್ - 15

ತದ್ಯಥಾ ತಸ್ಯ ವಿಕ್ರಾಂತಮನುರೂಪಂ ಮಹಾತ್ಮನಃ ।
ಭವತ್ಯಾಹವಶೂರಸ್ಯ ತಥಾ ತ್ವಮುಪಪಾದಯ ॥

ಅನುವಾದ

ರಣವೀರನೂ, ಮಹಾತ್ಮನೂ ಆದ ಶ್ರೀರಾಮನ ಪರಾಕ್ರಮಕ್ಕೆ ತಕ್ಕುದಾದ ಕಾರ್ಯಸಾಧನೆಯ ರೀತಿಯನ್ನು ನೀನು ರೂಪಿಸಬೇಕು.॥15॥

ಮೂಲಮ್ - 16

ತದರ್ಥೋಪಹಿತಂ ವಾಕ್ಯಂ ಪ್ರಶ್ರಿತಂ ಹೇತುಸಂಹಿತಮ್ ।
ನಿಶಮ್ಯಾಹಂ ತತಃ ಶೇಷಂ ವಾಕ್ಯಮುತ್ತರಮಬ್ರುವಮ್ ॥

ಅನುವಾದ

ರಾಘವಾ! ಅರ್ಥವತ್ತಾದ ಮತ್ತು ಯುಕ್ತಿಯುಕ್ತವಾದ ಸೀತಾದೇವಿಯ ಆ ಮಾತನ್ನು ಕೇಳಿ ನಾನು ಕೊನೆಯದಾಗಿ ಹೀಗೆ ಹೇಳಿದೆ.॥16॥

ಮೂಲಮ್ - 17

ದೇವಿ ಹರ್ಯೃಕ್ಷಸೈನ್ಯಾನಾಮೀಶ್ವರಃ ಪ್ಲವತಾಂ ವರಃ ।
ಸುಗ್ರೀವಃ ಸತ್ತ್ವಸಂಪನ್ನಃ ತವಾರ್ಥೇ ಕೃತನಿಶ್ಚಯಃ ॥

ಅನುವಾದ

ಅಮ್ಮಾ! ವಾನರ-ಭಲ್ಲೂಕ ಸೈನ್ಯಗಳಿಗೆ ಒಡೆಯನೂ, ಕಪಿಶ್ರೇಷ್ಠನೂ, ಮಹಾಬಲಶಾಲಿಯೂ ಆದ ಸುಗ್ರೀವನು ನಿನ್ನನ್ನು ಶ್ರೀರಾಮನ ಬಳಿಗೆ ಸೇರಿಸುವಲ್ಲಿ ದೃಢವಾಗಿ ನಿಶ್ಚಯಿಸಿಕೊಂಡಿರುವನು.॥17॥

ಮೂಲಮ್ - 18

ತಸ್ಯ ವಿಕ್ರಮಸಂಪನ್ನಾಃ ಸತ್ತ್ವವಂತೋ ಮಹಾಬಲಾಃ ।
ಮನಃಸಂಕಲ್ಪಸಂಪಾತಾ ನಿದೇಶೇ ಹರಯಃ ಸ್ಥಿತಾಃ ॥

ಅನುವಾದ

ಮಹಾಪರಾಕ್ರಮವಂತರಾದ, ಮಹಾ ಬಲಶಾಲಿಗಳಾದ ವಾನರರು ಸುಗ್ರೀವನ ಆಜ್ಞೆಗೆ ಬದ್ಧರಾಗಿರುವರು. ಅವರು ಅವನ ಮನಸ್ಸಿನಲ್ಲಿ ಸಂಕಲ್ಪ ಉಂಟಾಗುತ್ತಲೇ ಇಲ್ಲಿಗೆ ಆಗಮಿಸುವರು.॥18॥

ಮೂಲಮ್ - 19

ಯೇಷಾಂ ನೋಪರಿ ನಾಧಸ್ತಾನ್ನ ತಿರ್ಯಕ್ ಸಜ್ಜತೇ ಗತಿಃ ।
ನ ಚ ಕರ್ಮಸು ಸೀದಂತಿ ಮಹತ್ ಸ್ವಮಿತತೇಜಸಃ ॥

ಅನುವಾದ

ಆ ವಾನರರು ಆಕಾಶದಲ್ಲಾಗಲೀ, ಪಾತಾಳದಲ್ಲಾಗಲೀ, ಭೂಮಿಯ ಮೇಲಾಗಲೀ ನಿರಾತಂಕವಾಗಿ ಸಂಚರಿಸಬಲ್ಲರು. ಅಮಿತ ತೇಜಶ್ಶಾಲಿಯಾದ ಆ ವಾನರರು ಎಂತಹ ಘನ ಕಾರ್ಯವಾದರೂ ಅನಾಯಾಸವಾಗಿ ಮಾಡಬಲ್ಲರು.॥19॥

ಮೂಲಮ್ - 20

ಅಸಕೃತ್ತೈರ್ಮಹಾಭಾಗೈರ್ವಾನರೈರ್ಬಲದರ್ಪಿತೈಃ ।
ಪ್ರದಕ್ಷಿಣೀಕೃತಾ ಭೂಮಿರ್ವಾಯುಮಾರ್ಗಾನುಸಾರಿಭಿಃ ॥

ಅನುವಾದ

ಮಹಾಭಾಗ್ಯಶಾಲಿಗಳೂ, ಹೆಚ್ಚಿನ ಬಲಶಾಲಿಗಳೂ, ವಾಯು ಮಾರ್ಗದಲ್ಲಿ ಸಂಚರಿಸುವವರೂ ಆದ ಆ ವಾನರರು ಅನೇಕ ಬಾರಿ ಈ ಭೂಮಂಡಲವನ್ನು ಸುತ್ತಿಬಂದಿರುವರು.॥20॥

ಮೂಲಮ್ - 21

ಮದ್ವಿಶಿಷ್ಟಾಶ್ಚ ತುಲ್ಯಾಶ್ಚ ಸಂತಿ ತತ್ರ ವನೌಕಸಃ ।
ಮತ್ತಃ ಪ್ರತ್ಯವರಃ ಕಶ್ಚಿನ್ನಾಸ್ತಿ ಸುಗ್ರೀವಸನ್ನಿಧೌ ॥

ಅನುವಾದ

ನನಗಿಂತ ಹೆಚ್ಚಾದ ಪರಾಕ್ರಮಿಗಳೂ, ನನಗೆ ಸಮಾನರಾದವರೂ, ಸುಗ್ರೀವನ ಬಳಿಯಲ್ಲಿ ಅನೇಕ ವಾನರರಿದ್ದಾರೆ. ಆದರೆ ನನಗಿಂತ ಕಡಿಮೆ ಪರಾಕ್ರಮವುಳ್ಳವರೂ ಯಾರೂ ಇಲ್ಲ.॥21॥

ಮೂಲಮ್ - 22

ಅಹಂ ತಾವದಿಹ ಪ್ರಾಪ್ತಃ ಕಿಂ ಪುನಸ್ತೇ ಮಹಾಬಲಾಃ ।
ನ ಹಿ ಪ್ರಕೃಷ್ಟಾಃ ಪ್ರೇಷ್ಯಂತೇ ಪ್ರೇಷ್ಯಂತೇ ಹೀತರೇ ಜನಾಃ ॥

ಅನುವಾದ

ಕಡಿಮೆ ಬಲವಿರುವ ನಾನೇ ಇಲ್ಲಿಗೆ ಬಂದಿರುವಾಗ ಮಹಾ ಬಲಿಷ್ಠರಾದ ಕಪಿಶ್ರೇಷ್ಠರ ವಿಷಯದಲ್ಲಿ ಹೇಳುವುದೇನಿದೆ? ಇಂತಹ ಸಾಮಾನ್ಯವಾದ ಕಾರ್ಯಗಳಿಗೆ ರಾಜರು ಶ್ರೇಷ್ಠರಾದವರನ್ನು ಯಾವಾಗಲೂ ಕಳಿಸುವುದಿಲ್ಲ. ಸಾಮಾನ್ಯ ಜನರನ್ನೇ ಕಳುಹಿಸುತ್ತಾರೆ. (ಇಲ್ಲಿ ಹನುಮಂತನ ವಿನಯ, ದಾಸತ್ವ, ಪ್ರಕಟವಾಗಿ ಸೀತೆಗೆ ಭರವಸೆ ಹುಟ್ಟಿಸಿದುದು.)॥22॥

ಮೂಲಮ್ - 23

ತದಲಂ ಪರಿತಾಪೇನ ದೇವಿ ಮನ್ಯುರ್ವ್ಯಪೈತು ತೇ ।
ಏಕೋತ್ಪಾತೇನ ತೇ ಲಂಕಾಮೇಷ್ಯಂತಿ ಹರಿಯೂಥಪಾಃ ॥

ಅನುವಾದ

ದೇವೀ! ಇನ್ನು ತಮ್ಮ ಪರಿತಾಪವನ್ನು ಬಿಡಿರಿ. ನಿಮ್ಮ ದೈನ್ಯವು ದೂರವಾಗಲೀ. ಆ ವಾನರರೆಲ್ಲರೂ ಒಂದೇ ನೆಗೆತಕ್ಕೆ ಲಂಕೆಗೆ ಬರುತ್ತಾರೆ.॥23॥

ಮೂಲಮ್ - 24

ಮಮ ಪೃಷ್ಠಗತೌ ತೌ ಚ ಚಂದ್ರಸೂರ್ಯಾವಿವೋದಿತೌ ।
ತ್ವತ್ಸಕಾಶಂ ಮಹಾಭಾಗೇ ನೃಸಿಂಹಾವಾಗಮಿಷ್ಯತಃ ॥

ಅನುವಾದ

ಮಹಾಭಾಗ್ಯಶಾಲಿನಿಯೇ! ಉದಯಿಸುತ್ತಿರುವ ಸೂರ್ಯಚಂದ್ರರಂತೆ ತೇಜೋಮೂರ್ತಿಗಳಾದ ನರೇಂದ್ರರಾದ ರಾಮ-ಲಕ್ಷ್ಮಣರು ನನ್ನ ಭುಜಗಳ ಮೇಲೆ ಕುಳಿತುಕೊಂಡು ಇಲ್ಲಿಗೆ ಬರುತ್ತಾರೆ.॥24॥

ಮೂಲಮ್ - 25

ಅರಿಘ್ನಂ ಸಿಂಹಸಂಕಾಶಂ ಕ್ಷಿಪ್ರಂ ದ್ರಕ್ಷ್ಯಸಿ ರಾಘವಮ್ ।
ಲಕ್ಷ್ಮಣಂ ಚ ಧನುಷ್ಪಾಣಿಂ ಲಂಕಾದ್ವಾರಮುಪಸ್ಥಿತಮ್ ॥

ಅನುವಾದ

ಶತ್ರುಸೂದನನೂ, ಸಿಂಹಪರಾಕ್ರಮಿಯೂ ಆದ ರಾಮಚಂದ್ರ ಪ್ರಭುವನ್ನು ಮತ್ತು ಧನುಷ್ಪಾಣಿಯಾದ ಲಕ್ಷ್ಮಣಸ್ವಾಮಿಯನ್ನು ಲಂಕಾದ್ವೀಪದಲ್ಲಿ ಬಂದು ನಿಲ್ಲುವುದನ್ನು ಬೇಗನೇ ಕಾಣುವೆ.॥25॥

ಮೂಲಮ್ - 26

ನಖದಂಷ್ಟ್ರಾಯುಧಾನ್ ವೀರಾನ್ ಸಿಂಹಶಾರ್ದೂಲವಿಕ್ರಮಾನ್ ।
ವಾನರಾನ್ ವಾರಣೇಂದ್ರಾಭಾನ್ ಕ್ಷಿಪ್ರಂ ದ್ರಕ್ಷ್ಯಸಿ ಸಂಗತಾನ್ ॥

ಅನುವಾದ

ನಖಗಳೂ, ದಂತಗಳೂ ಆಯುಧವುಳ್ಳವರೂ ಹುಲಿ-ಸಿಂಹಗಳಂತೆ ಪರಾಕ್ರಮಶಾಲಿಗಳೂ, ಮಹಾವೀರರೂ, ಗಜೇಂದ್ರನಂತೆ ಮಹಾಕಾಯರೂ, ಬಲಶಾಲಿಗಳೂ ಆದ ವಾನರರನ್ನು ಬೇಗನೇ ಇಲ್ಲಿ ನೀನು ನೊಡಲಿರುವೆ.(ಈಗ ಶ್ರೀರಾಮ-ಲಕ್ಷ್ಮಣರು ಇಬ್ಬರೇ ಆಗಿರದೆ ಇಂತಹ ಭಾರೀ ಸುಗ್ರೀವನ ಸೇನೆಯು ಅವರ ಸಹಾಯಕ್ಕಿದೆ. ಈ ಸೈನ್ಯಕ್ಕೆ ಯಾವುದೇ ಆಹಾರದ, ಅಸ್ತ್ರಶಸ್ತ್ರಗಳ ಆವಶ್ಯಕತೆ ಇಲ್ಲ.)॥26॥

ಮೂಲಮ್ - 27

ಶೈಲಾಂಬುದನಿಕಾಶಾನಾಂ ಲಂಕಾಮಲಯಸಾನುಷು ।
ನರ್ದತಾಂ ಕಪಿಮುಖ್ಯಾನಾಮಚಿರಾಚ್ಛ್ರೋಷ್ಯಸಿ ಸ್ವನಮ್ ॥

ಅನುವಾದ

ಪರ್ವತ ಸದೃಶರಾದ ಹಾಗೂ ಮೇಘಸದೃಶರಾದ ಕಪಿಶ್ರೇಷ್ಠರೂ ಲಂಕಾದ್ವೀಪದಲ್ಲಿರುವ ಮಲಯ ಪರ್ವತದ ತಪ್ಪಲುಗಳಲ್ಲಿ ಮಾಡಿವ ಗರ್ಜನೆಯನ್ನು ನೀನು ಬಹಳ ಬೇಗನೇ ಕೇಳಲಿರುವೆ.॥27॥

ಮೂಲಮ್ - 28

ನಿವೃತ್ತವನವಾಸಂ ಚ ತ್ವಯಾ ಸಾರ್ಧಮರಿಂದಮಮ್ ।
ಅಭಿಷಿಕ್ತಮಯೋಧ್ಯಾಯಾಂ ಕ್ಷಿಪ್ರಂ ದ್ರಕ್ಷ್ಯಸಿ ರಾಘವಮ್ ॥

ಅನುವಾದ

ವನವಾಸವನ್ನು ಮುಗಿಸಿ ಅಯೋಧ್ಯೆಯಲ್ಲಿ ನಿನ್ನೊಡನೆ ಪಟ್ಟಾಭಿಷಿಕ್ತನಾಗುವ, ಶತ್ರುಮರ್ದನನಾದ, ಶ್ರೀರಾಮನನ್ನು ನೀನು ಕ್ಷಿಪ್ರವಾಗಿ ಸಂದರ್ಶಿಸುವೆ.॥28॥

ಮೂಲಮ್ - 29

ತತೋ ಮಯಾ ವಾಗ್ಭಿರದೀನಭಾಷಿಣಾ
ಶಿವಾಭಿರಿಷ್ಟಾಭಿರಭಿಪ್ರಸಾದಿತಾ ।
ಜಗಾಮ ಶಾಂತಿಂ ಮಮ ಮೈಥಿಲಾತ್ಮಜಾ
ತವಾಪಿ ಶೋಕೇನ ತದಾಭಿಪೀಡಿತಾ ॥

ಅನುವಾದ

ರಾಘವಾ! ನಾನು ಹೀಗೆ ಹೇಳಲು, ನಿನ್ನ ವಿರಹಶೋಕ ದಲ್ಲಿದ್ದರೂ, ರಾಕ್ಷಸರಿಂದ ಪೀಡಿತಳಾಗಿದ್ದರೂ, ಸಾಧ್ವಿಯಾದ ಮೈಥಿಲಿದೇವಿಯೂ ಹೆಚ್ಚಾದ ಪರಿತಾಪ ಪಡುತ್ತಿದ್ದರೂ, ನಿನ್ನ ಬಲಪರಾಕ್ರಮಗಳನ್ನು ಹೊಗಳುತ್ತಾ, ಅವಳಿಗೆ ತೃಪ್ತಿಕರವಾದ, ಶುಭಸೂಚಕವಾದ ನನ್ನ ಮಾತುಗಳನ್ನು ಕೇಳಿ, ಅವಳು ಮನಶ್ಶಾಂತಿಯನ್ನು ಹೊಂದಿದಳು.॥29॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಅಷ್ಟಷಷ್ಠಿತಮಃ ಸರ್ಗಃ ॥ 68 ॥
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಅರವತ್ತೆಂಟನೆಯ ಸರ್ಗವು ಮುಗಿಯಿತು.
ಸುಂದರಕಾಂಡವು ಸಮಾಪ್ತವಾಯಿತು.