०६७ हनुमता रामाय सीतासन्देशकथनम्

वाचनम्
ಭಾಗಸೂಚನಾ

ಪುನಃ ಹನುಮಂತನು ಸೀತೆಯ ಸಂದೇಶವನ್ನು ಶ್ರೀರಾಮನಿಗೆ ಹೇಳಿದುದು

ಮೂಲಮ್ - 1

ಏವಮುಕ್ತಸ್ತು ಹನುಮಾನ್ ರಾಘವೇಣ ಮಹಾತ್ಮನಾ ।
ಸೀತಾಯಾ ಭಾಷಿತಂ ಸರ್ವಂ ನ್ಯವೇದಯತ ರಾಘವೇ ॥

ಅನುವಾದ

ಮಹಾನುಭಾವನಾದ ಶ್ರೀರಾಮನು ಹೀಗೆ ಹೇಳಲು, ಹನುಮಂತನು ಸೀತಾದೇವಿಯು ಹೇಳಿದ ಮಾತುಗಳೆಲ್ಲವನ್ನು ಅವಳ ಮಾತಿನಲ್ಲೇ ಹೇಳತೊಡಗಿದನು.॥1॥

ಮೂಲಮ್ - 2

ಇದಮುಕ್ತವತೀ ದೇವೀ ಜಾನಕೀ ಪುರುರ್ಷಭ ।
ಪೂರ್ವವೃತ್ತಮಭಿಜ್ಞಾನಂ ಚಿತ್ರಕೂಟೇ ಯಥಾತಥಮ್ ॥

ಅನುವಾದ

ಓ ಪುರುಷಶ್ರೇಷ್ಠಾ! ಹಿಂದೆ ನೀನು ಚಿತ್ರಕೂಟದಲ್ಲಿದ್ದಾಗ ಜರುಗಿದ ವೃತ್ತಾಂತವನ್ನು ನಿನ್ನ ನೆನಪಿಗಾಗಿ ಹೇಗೆ ನಡೆಯಿತೋ ಹಾಗೇ ಹೇಳಿರುವಳು. ॥2॥

ಮೂಲಮ್ - 3

ಸುಖಸುಪ್ತಾ ತ್ವಯಾ ಸಾರ್ಧಂ ಜಾನಕೀ ಪೂರ್ವಮುತ್ಥಿತಾ ।
ವಾಯಸಃ ಸಹಸೋತ್ಪತ್ಯ ವಿರರಾದ ಸ್ತನಾಂತರೇ ॥

ಅನುವಾದ

ಒಮ್ಮೆ ನಿನ್ನೊಡನೆ ಸುಖವಾಗಿ ಮಲಗಿದ್ದ ಜಾನಕಿಯು, ನೀನು ಏಳುವ ಮೊದಲೇ ಎದ್ದುಬಿಟ್ಟಿದ್ದಳು. ಆಗ ಒಂದು ಕಾಗೆಯು ಅನಿರೀಕ್ಷಿತವಾಗಿ ಹಾರಿ ಬಂದು ಸೀತಾದೇವಿಯ ವಕ್ಷಸ್ಥಳವನ್ನು ಗಾಯಗೊಳಿಸಿತು,॥3॥

ಮೂಲಮ್ - 4

ಪರ್ಯಾಯೇಣ ಚ ಸುಪ್ತಸ್ತ್ವಂ ದೇವ್ಯಂಕೇ ಭರತಾಗ್ರಜ ।
ಪುನಶ್ಚ ಕಿಲ ಪಕ್ಷೀ ಸ ದೇವ್ಯಾ ಜನಯತಿ ವ್ಯಥಾಮ್ ॥

ಅನುವಾದ

ಭರತಾಗ್ರಜನೇ! ಪರ್ಯಾಯವಾಗಿ ಮಲಗುವ ಈ ಕ್ರಮವನ್ನು ಅನುಸರಿಸಿ ನೀನು ಅವಳ ತೊಡೆಯ ಮೇಲೆ ತಲೆಯಿಟ್ಟು ಮಲಗಿದೆಯಂತೆ. ಆ ಕಾಗೆಯು ಪುನಃ ಬಂದು ಸೀತೆಗೆ ತೊಂದರೆ ಕೊಡತೊಡಗಿತು.॥4॥

ಮೂಲಮ್ - 5

ಪುನಃ ಪುನರುಪಾಗಮ್ಯ ವಿರರಾದ ಭೃಶಂ ಕಿಲ ।
ತತಸ್ತ್ವಂ ಬೋಧಿತಸ್ತಸ್ಯಾಃ ಶೋಣಿತೇನ ಸಮುಕ್ಷಿತಃ ॥

ಅನುವಾದ

ಆ ಕಾಗೆಯು ಬಾರಿ-ಬಾರಿಗೆ ಸಮೀಪಕ್ಕೆ ಬಂದು ಅವಳನ್ನು ಹೆಚ್ಚಾಗಿ ಗಾಯಗೊಳಿಸಿತು. ಆಗ ಗಾಯದಿಂದ ಹರಿಯುತ್ತಿದ್ದ ರಕ್ತದ ಸ್ಪರ್ಶದಿಂದ ನೀನು ಎಚ್ಚರಗೊಂಡೆ.॥5॥

ಮೂಲಮ್ - 6

ವಾಯಸೇನ ಚ ತೇನೈವಂ ಸತತಂ ಬಾಧ್ಯಮಾನಯಾ ।
ಬೋಧಿತಃ ಕಿಲ ದೇವ್ಯಾ ತ್ವಂ ಸುಖಸುಪ್ತಃ ಪರಂತಪ ॥

ಅನುವಾದ

ಶತ್ರುಸಂಹಾರಕನಾದ ಎಲೈ ರಾಮಾ! ಆ ಕಾಗೆಯಿಂದ ಪದೇ-ಪದೇ ಬಾಧೆಪಡುತ್ತಿದ್ದ ಸೀತಾದೇವಿಯು, ಸುಖವಾಗಿ ಮಲಗಿದ್ದ ನಿನ್ನನ್ನು ಎಚ್ಚರಿಸಿದಳು.॥6॥

ಮೂಲಮ್ - 7

ತಾಂ ತು ದೃಷ್ಟ್ವಾ ಮಹಾಬಾಹೋ ದಾರಿತಾಂ ಚ ಸ್ತನಾಂತರೇ ।
ಆಶೀವಿಷ ಇವ ಕ್ರುದ್ಧೋ ನಿಃಶ್ವಸನ್ನಭ್ಯಭಾಷಥಾಃ ॥

ಅನುವಾದ

ಎಲೈ ಮಹಾಬಾಹುವೇ! ವಕ್ಷಸ್ಥಳದಲ್ಲಿ ಗಾಯಗೊಂಡ ಸೀತೆಯನ್ನು ನೋಡಿದ ನೀನು, ರೊಚ್ಚಿಗೆದ್ದ ವಿಷಸರ್ಪದಂತೆ ಬುಸುಗುಟ್ಟುತ್ತಾ ನೀನು ಹೀಗೆ ಹೇಳಿದೆಯಂತೆ. ॥7॥

ಮೂಲಮ್ - 8

ನಖಾಗ್ರೈಃ ಕೇನ ತೇ ಭೀರು ದಾರಿತಂ ತು ಸ್ತನಾಂತರಮ್ ।
ಕಃ ಕ್ರೀಡತಿ ಸರೋಷೇಣ ಪಂಚವಕ್ತ್ರೇಣ ಭೋಗಿನಾ ॥

ಅನುವಾದ

ಎಲೈ ಭಯಸ್ವಭಾವದವಳೇ! ನಿನ್ನ ವಕ್ಷಸ್ಥಳದಲ್ಲಿ ಉಗುರುಗಳಿಂದ ಗಾಯಮಾಡಿದವರು ಯಾರು? ಕೋಪಗೊಂಡ ಐದು ಹೆಡೆಯ ಸರ್ಪದೊಡನೆ ಆಟವಾಡುವವರಾರು? ॥8॥

ಮೂಲಮ್ - 9

ನಿರೀಕ್ಷಮಾಣಃ ಸಹಸಾ ವಾಯಸಂ ಸಮವೈಕ್ಷಥಾಃ ।
ನಖೈಃ ಸರುಧಿರೈಸ್ತೀಕ್ಷ್ಣೈಸ್ತಾಮೇವಾಭಿಮುಖಂ ಸ್ಥಿತಮ್ ॥

ಅನುವಾದ

ಹೀಗೆ ಹೇಳಿ ಸುತ್ತಲೂ ದೃಷ್ಟಿಹರಿಸಿದಾಗ ರಕ್ತಸಿಕ್ತವಾದ ನಖಗಳಿಂದ ಒಡಗೊಂಡ ಒಂದು ಕಾಗೆಯು ಇದಿರಲ್ಲೇ ಕುಳಿತಿರುವುದನ್ನು ಕಂಡೆಯಂತೆ.॥9॥

ಮೂಲಮ್ - 10

ಸುತಃ ಕಿಲ ಸ ಶಕ್ರಸ್ಯ ವಾಯಸಃ ಪತತಾಂ ವರಃ ।
ಧರಾಂತರಚರಃ ಶೀಘ್ರಂ ಪವನಸ್ಯ ಗತೌ ಸಮಃ ॥

ಅನುವಾದ

ಪಕ್ಷಿಗಳಲ್ಲಿ ಶ್ರೇಷ್ಠವಾದ, ವಾಯುವೇಗದಿಂದ ಸಂಚರಿಸುವ ಆ ಕಾಗೆಯು ಇಂದ್ರಕುಮಾರನಾದ ಜಯಂತನು. ನೀನು ನೋಡುತ್ತಿರುವಂತೆ ಅದು ಬೇರೆ ಪ್ರದೇಶಕ್ಕೆ ಹಾರಿಹೋಯಿತು. ॥10॥

ಮೂಲಮ್ - 11

ತತಸ್ತಸ್ಮಿನ್ ಮಹಾಬಾಹೋ ಕೋಪಸಂವರ್ತಿತೇಕ್ಷಣಃ ।
ವಾಯಸೇ ತ್ವಂ ಕೃಥಾಃ ಕ್ರೂರಾಂ ಮತಿಂ ಮತಿಮತಾಂ ವರ ॥

ಅನುವಾದ

ಎಲೈ ಮಹಾಬಾಹುವೇ! ಪ್ರಜ್ಞಾವಂತರಲ್ಲಿ ಶ್ರೇಷ್ಠನಾದವನೇ! ಕೋಪದಿಂದ ಆ ವಾಯಸವನ್ನು ದುರುಗಟ್ಟಿ ನೋಡುತ್ತಾ ನೀನು, ಸೀತಾದೇವಿಗೆ ಅಪಕಾರವನ್ನು ಎಸಗಿದವನನ್ನು ಕ್ರೂರವಾಗಿ ಶಿಕ್ಷಿಸಲು ಮನಮಾಡಿದೆ. ॥11॥

ಮೂಲಮ್ - 12

ಸ ದರ್ಭಂ ಸಂಸ್ತರಾದ್ಗೃಹ್ಯ ಬ್ರಹ್ಮಾಸ್ತ್ರೇಣ ಹ್ಯಯೋಜಯಃ ।
ಸ ದೀಪ್ತ ಇವ ಕಾಲಾಗ್ನಿರ್ಜಜ್ವಾಲಾಭಿಮುಖಃ ಖಗಮ್ ॥

ಅನುವಾದ

ಆಗ ಆಸನದಿಂದ ಒಂದು ದರ್ಭೆಯನ್ನು ಕಿತ್ತುಕೊಂಡು ಅದನ್ನು ಬ್ರಹ್ಮಾಸ್ತ್ರವಾಗಿ ಮಂತ್ರಿಸಿ ಪ್ರಯೋಗಿಸಿದೆ. ಆ ದರ್ಭಾಸವು ದೇದೀಪ್ಯಮಾನವಾಗಿ ಕಾಲಾಗ್ನಿಯಂತೆ ಉರಿಯುತ್ತಾ, ಕಾಗೆಯು ಹೋದದಿಕ್ಕಿನತ್ತ ಮುಖಮಾಡಿತು.॥12॥

ಮೂಲಮ್ - 13

ಕ್ಷಿಪ್ತವಾಂಸ್ತ್ವಂ ಪ್ರದೀಪ್ತಂ ಹಿ ದರ್ಭಂ ತಂ ವಾಯಸಂ ಪ್ರತಿ ।
ತತಸ್ತು ವಾಯಸಂ ದೀಪ್ತಃ ಸ ದರ್ಭೋಽನುಜಗಾಮ ಹ ॥

ಅನುವಾದ

ಪ್ರಜ್ವಲಿಸುತ್ತಿರುವ ದರ್ಭೆಯನ್ನು (ಬ್ರಹ್ಮಾಸ್ತ್ರವನ್ನು) ನೀನು ಕಾಗೆಯ ಮೇಲೆ ಪ್ರಯೋಗಿಸಿದಾಗ ಆ ಅಸ್ತ್ರವು ಬೆಂಕಿಯನ್ನು ಉಗುಳುತ್ತಾ ಕಾಗೆಯನ್ನು ಹಿಂಬಾಲಿಸಿತು.॥13॥

ಮೂಲಮ್ - 14

ಸ ಪಿತ್ರಾ ಚ ಪರಿತ್ಯಕ್ತಃ ಸುರೈಶ್ಚ ಸಮಹರ್ಷಿಭಿಃ ।
ತ್ರಿನ್ ಲೋಕಾನ್ ಸಂಪರಿಕ್ರಮ್ಯ ತ್ರಾತಾರಂ ನಾಧಿಗಚ್ಛತಿ ॥

ಅನುವಾದ

ಆ ಇಷಿಕಾಸ್ತ್ರವು ಅಟ್ಟಿಸಿಕೊಂಡು ಬರುವಾಗ ವಾಯಸಕ್ಕೆ ತಂದೆಯಾದ ಇಂದ್ರನೂ, ದೇವತೆಗಳೂ, ಮಹರ್ಷಿಗಳೂ ಅವನಿಗೆ ಆಶ್ರಯಕೊಡದೇ ಹೊರದಬ್ಬಿದರು. ಮೂರು ಲೋಕಗಳಲ್ಲಿ ತಿರುಗಿದರೂ, ಅದಕ್ಕೆ ರಕ್ಷಿಸುವವರು ಯಾರೂ ದೊರೆಯಲಿಲ್ಲ.॥14॥

ಮೂಲಮ್ - 15

ಪುನರೇವಾಗತಃ ತ್ರಸ್ತಃ ತ್ವತ್ಸ ಕಾಶಮರಿಂದಮ ।
ಸ ತಂ ನಿಪತಿತಂ ಭೂಮೌ ಶರಣ್ಯಃ ಶರಣಾಗತಮ್ ॥

ಮೂಲಮ್ - 16

ವಧಾರ್ಹಮಪಿ ಕಾಕುತ್ಸ್ಥ ಕೃಪಯಾ ಪರ್ಯಪಾಲಯಃ ॥

ಅನುವಾದ

ಎಲೈ ಶತ್ರುಸಂಹಾರಕಾ! ಆ ಕಾಗೆಯು ಪ್ರಾಣಭಯದಿಂದ ಕೊನೆಗೆ ನೀನಿದ್ದಲ್ಲಿಗೆ ಬಂದಿತು. ಅನನ್ಯ ಶರಣ್ಯನಾದ ನಿನಗೆ ಶರಣಾಗಿ ಭೂಮಿಯ ಮೇಲೆ ಬಿದ್ದು ಮೊರೆಯಿಟ್ಟಿತು. ಕಾಕುಸ್ಥನಾದ ಎಲೈ ರಘುರಾಮಾ! ಆ ಕಾಗೆಯು ವಧೆಗೆ ಯೋಗ್ಯವಾಗಿದ್ದರೂ ಕನಿಕರದಿಂದ ನೀನು ಅದನ್ನು ರಕ್ಷಿಸಿದೆ. ॥15-16॥

ಮೂಲಮ್ - 17

ಮೋಘಮಸ್ತ್ರಂ ನ ಶಕ್ಯಂ ತು ಕರ್ತುಮಿತ್ಯೇವ ರಾಘವ ।
ಭವಾಂಸ್ತಸ್ಯಾಕ್ಷಿ ಕಾಕಸ್ಯ ಹಿನಸ್ತಿ ಸ್ಮ ಸ ದಕ್ಷಿಣಮ್ ॥

ಅನುವಾದ

ಬಿಟ್ಟ ಅಸ್ತ್ರವು ನಿಷ್ಫಲವಾಗದೆಂದು ನೀನು ಕಾಗೆಗೆ ಹೇಳಿ ಅದರ ಬಲಗಣ್ಣನ್ನು ಆ ಬ್ರಹ್ಮಾಸ್ತ್ರಕ್ಕೆ ಗುರಿಯಾಗಿಸಿ, ಒಂದು ಕಣ್ಣನ್ನು ವಿನಾಶಗೊಳಿಸಿದೆ. ॥17॥

ಮೂಲಮ್ - 18

ರಾಮ ತ್ವಾಂ ಸ ನಮಸ್ಕೃತ್ಯ ರಾಜ್ಞೇ ದಶರಥಾಯ ಚ ।
ವಿಸೃಷ್ಟಸ್ತು ತದಾ ಕಾಕಃ ಪ್ರತಿಪೇದೇ ಸ್ವಮಾಲಯಮ್ ॥

ಅನುವಾದ

ಎಲೈ ರಾಮನೇ! ಆ ವಾಯಸವು ನಿನಗೂ, ದಶರಥ ಮಹಾರಾಜನಿಗೂ ನಮಸ್ಕರಿಸಿ ನಿನ್ನ ಅನುಮತಿಯನ್ನು ಪಡೆದು ತನ್ನ ವಾಸಸ್ಥಳಕ್ಕೆ ಹೊರಟುಹೋಯಿತು. ॥18॥

ಮೂಲಮ್ - 19

ಏವಮಸ್ತ್ರವಿದಾಂ ಶ್ರೇಷ್ಠಃ ಸತ್ತ್ವವಾನ್ ಶೀಲವಾನಪಿ ।
ಕಿಮರ್ಥಮಸ್ತ್ರಂ ರಕ್ಷಃಸು ನ ಯೋಜಯತಿ ರಾಘವಃ ॥

ಅನುವಾದ

ರಾಘವಾ! ಸೀತಾದೇವಿಯು ನೆನಪಿಗಾಗಿ ಈ ಕಥೆಯನ್ನು ಹೇಳಿ, ನನ್ನನ್ನು ಇಂತು ಪ್ರಶ್ನಿಸಿದಳು ಅಸ್ತ್ರವಿದ್ಯೆಯಲ್ಲಿ ಕೋವಿದನೂ, ಶ್ರೇಷ್ಠನೂ, ಬಲಶಾಲಿಯೂ, ಉತ್ತಮಶೀಲ ಸಂಪನ್ನನೂ ಆದ ಶ್ರೀರಾಮನು ರಾಕ್ಷಸರ ಮೇಲೆ ಅಸ್ತ್ರಗಳನ್ನು ಏಕೆ ಪ್ರಯೋಗಿಸುವುದಿಲ್ಲ?॥19॥

ಮೂಲಮ್ - 20

ನ ನಾಗಾ ನಾಪಿ ಗಂಧರ್ವಾ ನಾಸುರಾ ನ ಮರುದ್ಗಣಾಃ ।
ನ ಚ ಸರ್ವೇ ರಣೇ ಶಕ್ತಾ ರಾಮಂ ಪ್ರತಿ ಸಮಾಸಿತುಮ್ ॥

ಅನುವಾದ

ನಾಗಗಳಾಗಲೀ, ಗಂಧರ್ವರಾಗಲೀ, ಅಸುರರಾಗಲೀ, ದೇವತೆಗಳಾಗಲೀ, ಇವರೆಲ್ಲರೂ ಸೇರಿದರೂ ರಣರಂಗದಲ್ಲಿ ಶ್ರೀರಾಮನನ್ನು ಎದುರಿಸಲು ಸಮರ್ಥರಲ್ಲ.॥20॥

ಮೂಲಮ್ - 21

ತಸ್ಯ ವೀರ್ಯವತಃ ಕಶ್ಚಿದ್ಯದ್ಯಸ್ತಿ ಮಯಿ ಸಂಭ್ರಮಃ ।
ಕ್ಷಿಪ್ರಂ ಸುನಿಶಿತೈರ್ಬಾಣೈರ್ಹನ್ಯ ತಾಂ ಯುಧಿ ರಾವಣಃ ॥

ಅನುವಾದ

ಮಹಾಪರಾಕ್ರಮಶಾಲಿಯಾದ ಶ್ರೀರಾಮನಿಗೆ ನನ್ನ ವಿಷಯದಲ್ಲಿ ಕೊಂಚವಾದರೂ ಕನಿಕರವಿರುವುದಾದರೆ, ನಿಶಿತವಾದ ಬಾಣಗಳಿಂದ ಈಗಲೇ ರಾವಣನನ್ನು ಸಂಹರಿಸಲೀ.॥21॥

ಮೂಲಮ್ - 22

ಭ್ರಾತುರಾದೇಶಮಾಜ್ಞಾಯ ಲಕ್ಷ್ಮಣೋ ವಾ ಪರಂತಪಃ ।
ಸ ಕಿಮರ್ಥಂ ನರವರೋ ನ ಮಾಂ ರಕ್ಷತಿ ರಾಘವಃ ॥

ಅನುವಾದ

ಶತ್ರುಭಯಂಕರನೂ, ನರೋತ್ತಮನೂ, ರಘುವಂಶಜನೂ ಆದ ಲಕ್ಷ್ಮಣನಾದರೂ ಅಣ್ಣನ ಆಜ್ಞೆಯನ್ನು ಪಡೆದು ನನ್ನನ್ನು ರಕ್ಷಿಸಲು ಏಕೆ ಬರುತ್ತಿಲ್ಲ?॥22॥

ಮೂಲಮ್ - 23

ಶಕ್ತೌ ತೌ ಪುರುಷವ್ಯಾಘ್ರೌ ವಾಯ್ವಗ್ನಿಸಮತೇಜಸೌ ।
ಸುರಾಣಾಮಪಿ ದುರ್ಧರ್ಷೌ ಕಿಮರ್ಥಂ ಮಾಮುಪೇಕ್ಷತಃ ॥

ಅನುವಾದ

ಪುರುಷಶ್ರೇಷ್ಠರೂ, ಶಕ್ತಿವಂತರೂ, ವಾಯು-ಅಗ್ನಿಗಳ ತೇಜಸ್ಸಿಗೆ ಸಮಾನರಾದವರೂ, ದೇವತೆಗಳಿಂದಲೂ ಎದುರಿಸಲು ಅಸಾಧ್ಯರಾದ ರಾಮ-ಲಕ್ಷ್ಮಣರು ನನ್ನನ್ನೇಕೆ ಉಪೇಕ್ಷಿಸುತ್ತಿದ್ದಾರೆ?॥23॥

ಮೂಲಮ್ - 24

ಮಮೈವ ದುಷ್ಕೃತಂ ಕಿಂಚಿನ್ಮಹದಸ್ತಿ ನ ಸಂಶಯಃ ।
ಸಮರ್ಥೌ ಸಹಿತೌ ಯನ್ಮಾಂ ನಾವೇಕ್ಷೇತೇ ಪರಂತಪೌ ॥

ಅನುವಾದ

ನನ್ನ ಅಪಾರವಾದ ದುಷ್ಕೃತಿಯ ಫಲವೇ ಈ ನನ್ನ ದುಃಸ್ಥಿತಿಗೆ ಕಾರಣವಾಗಿರಬೇಕು. ಇದರಲ್ಲಿ ಸಂಶಯವೇ ಇಲ್ಲ. ಶತ್ರುತಾಪಕರಾದ ರಾಮ-ಲಕ್ಷ್ಮಣರು ಒಬ್ಬೊಬ್ಬರೂ ಸರ್ವಸಮಥರರಾಗಿದ್ದಾರೆ. ಆದರೆ ಇಬ್ಬರೂ ಜೊತೆಗಿದ್ದರೂ ನನ್ನನ್ನು ರಕ್ಷಿಸಲು ಏಕೆ ಉದಾಸೀನರಾಗಿದ್ದಾರೆ?॥24॥

ಮೂಲಮ್ - 25

ವೈದೇಹ್ಯಾ ವಚನಂ ಶ್ರುತ್ವಾ ಕರುಣಂ ಸಾಶ್ರು ಭಾಷಿತಮ್ ।
ಪುನರಪ್ಯಹಮಾರ್ಯಾಂ ತಾಮಿದಂ ವಚನಮಬ್ರುವಮ್ ॥

ಅನುವಾದ

ರಾಘವಾ! ಕಂಬನಿದುಂಬಿದ ಕಣ್ಣುಗಳಿಂದ ಕೂಡಿದ್ದ ವೈದೇಹಿಯ ಈ ಕರುಣಾಜನಕವಾದ ಮಾತುಗಳನ್ನು ಕೇಳಿ, ಆರ್ಯೆಯಾದ ಅವಳಿಗೆ ನಾನು ಹೀಗೆ ಹೇಳಿದೆನು.॥25॥

ಮೂಲಮ್ - 26

ತ್ವಚ್ಛೋಕವಿಮುಖೋ ರಾಮೋ ದೇವಿ ಸತ್ಯೇನ ತೇ ಶಪೇ ।
ರಾಮೇ ದುಃಖಾಭಿಭೂತೇ ತು ಲಕ್ಷ್ಮಣಃ ಪರಿತಪ್ಯತೇ ॥

ಅನುವಾದ

‘‘ದೇವೀ! ನಾನು ಸತ್ಯದಮೇಲೆ ಆಣೆಯಿಟ್ಟು ಹೇಳುತ್ತೇನೆ. ನಿನ್ನ ವಿರಹಶೋಕದಿಂದಾಗಿ ಶ್ರೀರಾಮನು ನಿದ್ರಾಹಾರಗಳಿಂದಲೂ ವಿಮುಖನಾಗಿದ್ದಾನೆ. ಅವನು ದುಃಖಿಸುತ್ತಿದ್ದರೆ ಲಕ್ಷ್ಮಣನೂ ದುಃಖದಿಂದ ಪರಿತಪಿಸುತ್ತಾನೆ.॥26॥

ಮೂಲಮ್ - 27

ಕಥಂಚಿದ್ಭವತೀ ದೃಷ್ಟಾ ನ ಕಾಲಃ ಪರಿಶೋಚಿತುಮ್ ।
ಇಮಂ ಮುಹೂರ್ತಂ ದುಃಖಾನಾಮಂತಂ ದ್ರಕ್ಷ್ಯಸಿ ಭಾಮಿನಿ ॥

ಅನುವಾದ

ಹೇಗೋ ದೈವಯೋಗದಿಂದ ನಾನು ನಿನ್ನನ್ನು ನೋಡಿದೆನು. ಆದುದರಿಂದ ದುಃಖಿಸಲು ಇದು ಸಮಯವಲ್ಲ. ಈ ಮುಹೂರ್ತದಲ್ಲೇ ನೀನು ಈ ಎಲ್ಲ ದುಃಖಗಳ ಕೊನೆಯನ್ನು ಕಾಣುವೆ.॥27॥

ಮೂಲಮ್ - 28

ತಾವುಭೌ ನರಶಾರ್ದೂಲೌ ರಾಜಪುತ್ರಾವನಿಂದಿತೌ ।
ತ್ವದ್ದರ್ಶನಕೃತೋತ್ಸಾಹೌ ಲಂಕಾಂ ಭಸ್ಮೀಕರಿಷ್ಯತಃ ॥

ಮೂಲಮ್ - 29

ಹತ್ವಾ ಚ ಸಮರೇ ರೌದ್ರಂ ರಾವಣಂ ಸಹಬಾಂಧವಮ್ ।
ರಾಘವಸ್ತ್ವಾಂ ವರಾರೋಹೇ ಸ್ವಾಂ ಪುರೀಂ ನಯಿತಾ ಧ್ರುವಮ್ ॥

ಅನುವಾದ

ಪೂಜ್ಯರೂ, ರಾಜಕುಮಾರರೂ ಆದ ಆ ನರವರರಿಬ್ಬರೂ ನಿನ್ನ ದರ್ಶನಪಡೆಯಲು ಕಾತುರರಾಗಿದ್ದಾರೆ. ಅವರು ಶತ್ರುವಾದ ರಾವಣನನ್ನು ಅವನ ಪರಿವಾರವನ್ನೂ ಸಮರಾಂಗಣದಲ್ಲಿ ಸಂಹರಿಸಿ, ಲಂಕೆಯನ್ನು ಭಸ್ಮಮಾಡಿಬಿಡುವರು. ಅಮ್ಮಾ! ಶ್ರೀರಾಮನು ನಿನ್ನನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವುದು ಸತ್ಯವು.॥28-29॥

ಮೂಲಮ್ - 30

ಯತ್ತು ರಾಮೋ ವಿಜಾನೀಯದಭಿಜ್ಞಾನಮನಿಂದಿತೇ ।
ಪ್ರೀತಿಸಂಜನನಂ ತಸ್ಯ ಪ್ರದಾತುಂ ತ್ವಮಿಹಾರ್ಹಸಿ ॥

ಮೂಲಮ್ - 31

ಸಾಭಿವೀಕ್ಷ್ಯ ದಿಶಃ ಸರ್ವಾ ವೇಣ್ಯುದ್ಗ್ರಥನಮುತ್ತಮಮ್ ।
ಮುಕ್ತ್ವಾವಸ್ತ್ರಾದ್ದ ದೌ ಮಹ್ಯಂ ಮಣಿಮೇತಂ ಮಹಾಬಲ ॥

ಅನುವಾದ

ತಾಯೀ! ನಾನು ನಿನ್ನನ್ನು ಸಂದರ್ಶಿಸಿ ಬಂದಿರುವ ಬಗ್ಗೆ ಶ್ರೀರಾಮನಿಗೆ ಪ್ರೀತಿಯನ್ನು ಊಂಟುಮಾಡುವ ಹಾಗೂ ನೆನಪನ್ನು ಕೊಡುವ ಯಾವುದಾದರೂ ಅಭಿಜ್ಞಾನವನ್ನು ನನಗೆ ಕೊಡು ಎಂದು ಪ್ರಾರ್ಥಿಸಿದಾಗ, ಮಹಾಬಲಶಾಲಿಯಾದ ರಾಘವಾ! ಸೀತಾದೇವಿಯು ಸುತ್ತಲೂ ಕಣ್ಣುಹಾಯಿಸಿ, ತನ್ನ ಶಿರೋಭೂಷಣವಾದ ಈ ಅಮೂಲ್ಯವಾದ ಚೂಡಾಮಣಿಯನ್ನು ಸೆರಗಿನ ಗಂಟಿನಿಂದ ಹೊರತೆಗೆದು ನನಗೆ ಕೊಟ್ಟಳು.॥30-31॥

ಮೂಲಮ್ - 32

ಪ್ರತಿಗೃಹ್ಯ ಮಣಿಂ ದಿವ್ಯಂ ತವ ಹೇತೋ ರಘೂದ್ವಹ ।
ಶಿರಸಾ ತಾಂ ಪ್ರಣಮ್ಯಾರ್ಯಾಮಹಮಾಗಮನೇ ತ್ವರೇ ॥

ಅನುವಾದ

ರಾಘವಾ! ನಿನ್ನ ಸಲುವಾಗಿ ಆ ದಿವ್ಯಮಣಿಯನ್ನು ಪಡೆದು, ಪೂಜ್ಯಳಾದ ಆ ದೇವಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅಲ್ಲಿಂದ ಹೊರಡಲನುವಾದೆನು. ॥32 ॥

ಮೂಲಮ್ - 33

ಗಮನೇ ಚ ಕೃತೋತ್ಸಾಹಮವೇಕ್ಷ್ಯ ವರವರ್ಣಿನೀ ।
ವಿವರ್ಧಮಾನಂ ಚ ಹಿ ಮಾಮುವಾಚ ಜನಕಾತ್ಮಜಾ ॥

ಅನುವಾದ

ಉತ್ಸಾಹದಿಂದ ಮರಳಿ ಪ್ರಯಾಣಕ್ಕೆ ಉತ್ಸುಕನಾಗಿ ಸಮುದ್ರವನ್ನು ದಾಟಲು ಶರೀರವನ್ನು ದೊಡ್ಡದಾಗಿ ಬೆಳೆಸಿಕೊಂಡಿದ್ದ ನನ್ನನ್ನು ನೋಡಿ, ಆ ಸಾಧ್ವಿಯಾದ ಸೀತಾದೇವಿಯು ಪುನಃ ಇಂತೆಂದಳು. ॥33॥

ಮೂಲಮ್ - 34

ಅಶ್ರುಪೂರ್ಣಮುಖೀ ದೀನಾ ಬಾಷ್ಪಸಂದಿಗ್ಧಭಾಷಿಣೀ ।
ಮಮೋತ್ಪತನಸಂಭ್ರಾಂತಾ ಶೋಕವೇಗಸಮಾಹತಾ ॥

ಮೂಲಮ್ - 35

ಮಾಮುವಾಚ ತತಃ ಸೀತಾ ಸಭಾಗ್ಯೋಽಸಿ ಮಹಾಕಪೇ ।
ಯದ್ದ್ರಕ್ಷ್ಯಸಿ ಮಹಾಬಾಹುಂ ರಾಮಂ ಕಮಲಲೋಚನಮ್ ।
ಲಕ್ಷ್ಮಣಂ ಚ ಮಹಾಬಾಹುಂ ದೇವರಂ ಮೇ ಯಶಸ್ವಿನಮ್ ॥

ಅನುವಾದ

ಆ ಸಮಯದಲ್ಲಿ ಸೀತಾದೇವಿಯ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಆಕೆಯು ದೀನಳಾಗಿದ್ದಳು. ಕಣ್ಣೀರ ಸುರಿಸುತ್ತಿದ್ದುದರಿಂದ ಅವಳ ಮಾತು ಗದ್ಗದವಾಗಿತ್ತು. ನಾನು ಹೊರಟುಬಿಡುವೆನೆಂದು ಗಾಬರಿಗೊಂಡು, ಅತಿಯಾಗಿ ಪರಿತಪಿಸುತ್ತಾ ನನ್ನೊಡನೆ ಹೀಗೆ ಹೇಳಿದಳು ಎಲೈ ಕಪೀಶ್ವರನೇ! ನೀನೇ ಭಾಗ್ಯಶಾಲಿಯೂ. ಮಹಾಬಾಹುವೂ, ಕಮಲಾಕ್ಷನೂ ಆದ ಶ್ರೀರಾಮನನ್ನು, ಭುಜಬಲಸಂಪನ್ನನೂ, ಯಶಸ್ವಿಯೂ, ನನ್ನ ಮೈದುನನೂ ಆದ ಲಕ್ಷ್ಮಣನನ್ನು ನೀನು ಬೇಗನೇ ದರ್ಶಿಸಲಿರುವೆ. ಆ ಭಾಗ್ಯವೂ ನನಗಿಲ್ಲ.॥34-35॥

ಮೂಲಮ್ - 36

ಸೀತಯಾಪ್ಯೇವಮುಕ್ತೋಹಮಬ್ರವಂ ಮೈಥಿಲೀಂ ತಥಾ ।
ಪೃಷ್ಠಮಾರೋಹ ಮೇ ದೇವಿ ಕ್ಷಿಪ್ರಂ ಜನಕನಂದಿನಿ ॥

ಮೂಲಮ್ - 37

ಯಾವತ್ತೇ ದರ್ಶಯಾಮ್ಯದ್ಯ ಸಸುಗ್ರೀವಂ ಸಲಕ್ಷ್ಮಣಮ್ ।
ರಾಘವಂ ಚ ಮಹಾಭಾಗೇ ಭರ್ತಾರಮಸಿತೇಕ್ಷಣೇ ॥

ಅನುವಾದ

ಸೀತೆಯು ನನ್ನಲ್ಲಿ ಹೀಗೆ ಹೇಳಿದಾಗ ನಾನು ಅವಳಲ್ಲಿ ಈ ವಿಧವಾಗಿ ನುಡಿದೆನು ಎಲೈ ಜಾನಕೀದೇವೀ! ಶೀಘ್ರವಾಗಿ ನನ್ನ ಬೆನ್ನ ಮೇಲೆ ಕುಳಿತುಕೊ. ಮಹಾತ್ಮಳೇ! ಕಪ್ಪಾದ ಕಣ್ಣುಳ್ಳವಳೇ! ನಿನ್ನನ್ನು ವೇಗವಾಗಿ ಕೊಂಡುಹೋಗುವೆನು. ನೀನು ಸ್ವಾಮಿಯಾದ ಶ್ರೀರಾಮಚಂದ್ರನನ್ನೂ, ಲಕ್ಷ್ಮಣನನ್ನೂ, ಸುಗ್ರೀವನನ್ನು ಇಂದೇ ದರ್ಶಿಸಬಹುದು.॥36-37॥

(ಶ್ಲೋಕ - 38

ಮೂಲಮ್

ಸಾಬ್ರವೀನ್ಮಾಂ ತತೋ ದೇವೀ ನೈಷ ಧರ್ಮೋ ಮಹಾಕಪೇ ।
ಯತ್ತೇ ಪೃಷ್ಠಂ ಸಿಷೇವೇಹಂ ಸ್ವವಶಾ ಹರಿಪುಂಗವ ॥

(ಶ್ಲೋಕ - 39

ಮೂಲಮ್

ಪುರಾ ಚ ಯದಹಂ ವೀರ ಸ್ಪೃಷ್ಟಾ ಗಾತ್ರೇಷು ರಕ್ಷಸಾ ।
ತತ್ರಾಹಂ ಕಿಂ ಕರಿಷ್ಯಾಮಿ ಕಾಲೇನೋಪನಿಪೀಡಿತಾ ॥

ಅನುವಾದ

ನನ್ನ ಮಾತನ್ನು ಕೇಳಿ ಆ ದೇವಿಯು ಇಂತೆಂದಳು ಎಲೈ ವಾನರೋತ್ತಮಾ! ನಾನಾಗಿಯೇ ನಿನ್ನ ಬೆನ್ನಿನಮೇಲೆ ಕುಳಿತುಬರುವುದು ಧರ್ಮವಲ್ಲ. ಮಹಾವೀರನೇ! ಕಾಲವು ಪ್ರತಿಕೂಲವಾದಾಗ ಪೀಡಿತಳಾದ ನನ್ನ ಶರೀರವನ್ನು ಹಿಂದೆ ರಾಕ್ಷಸನಾದ ರಾವಣನು ಮುಟ್ಟಿದ್ದು ನಿಜ. ಅಂತಹ ದುಃಸ್ಥಿತಿಯಲ್ಲಿ ನಿಸ್ಸಹಾಯಕಳಾದ ನಾನು ಏನುತಾನೇ ಮಾಡಬಹುದು.॥38-39॥

ಮೂಲಮ್ - 40

ಗಚ್ಛ ತ್ವಂ ಕಪಿಶಾರ್ದೂಲ ಯತ್ರ ತೌ ನೃಪತೇಃ ಸುತೌ ।
ಇತ್ಯೇವಂ ಸಾ ಸಮಾಭಾಷ್ಯ ಭೂಯಃ ಸಂದೇಷ್ಟುಮಾಸ್ಥಿತಾ ॥

ಮೂಲಮ್ - 41

ಹನುಮನ್ ಸಿಂಹಸಂಕಾಶೌ ತಾವುಭೌ ರಾಮಲಕ್ಷ್ಮಣೌ ।
ಸುಗ್ರೀವಂ ಚ ಸಹಾಮಾತ್ಯಂ ಸರ್ವಾನ್ ಬ್ರೂಯಾ ಹ್ಯನಾಮಯಮ್ ॥

ಅನುವಾದ

‘‘ಎಲೈ ಕಪಿವರಾ! ಆ ರಾಜಕುಮಾರರಿಬ್ಬರೂ ಇರುವಲ್ಲಿಗೆ ನೀನೊಬ್ಬನೇ ಬೇಗ ಹೋಗು’’ ಎಂದು ಹೇಳಿ ಮರಳಿ ಅವಳು ನನ್ನ ಬಳಿ ಒಂದು ಸಂದೇಶವನ್ನು ಕಳಿಸಿರುವಳು. ಎಲೈ ಮಾರುತಿಯೇ! ಸಿಂಹಪರಾಕ್ರಮಿಗಳಾದ ಆ ರಾಮ-ಲಕ್ಷ್ಮಣರ ಕ್ಷೇಮ ಸಮಾಚಾರವನ್ನು ನಾನು ಕೇಳಿದೆನೆಂದು ಹೇಳು. ಹಾಗೆಯೇ ಸುಗ್ರೀವನಲ್ಲಿಯೂ, ಅವನ ಅಮಾತ್ಯರಲ್ಲಿಯೂ, ಇತರರೆಲ್ಲರಲ್ಲಿಯೂ ಕುಶಲಪ್ರಸ್ತಾಪವನ್ನು ಕೇಳಿದೆನೆಂದು ಹೇಳು.॥40-41॥

ಮೂಲಮ್ - 42

ಯಥಾ ಚ ಸ ಮಹಾಬಾಹುರ್ಮಾಂ ತಾರಯತಿ ರಾಘವಃ ।
ಅಸ್ಮಾದ್ದುಃಖಾಂಬುಸಂರೋಧಾತ್ತ್ವಂ ಸಮಾಧಾತುಮರ್ಹಸಿ ॥

ಅನುವಾದ

ಮಹಾಬಾಹುವಾದ ಶ್ರೀರಾಮನು ನನ್ನನ್ನು ಈ ದುಃಖಸಮುದ್ರದಿಂದ ಬೇಗನೇ ಪಾರುಮಾಡುವಂತೆ ನೀನು ಅವನಿಗೆ ಹೇಳಿ ಸಮಾಧಾನಮಾಡು.॥42॥

ಮೂಲಮ್ - 43

ಇಮಂ ಚ ತೀವ್ರಂ ಮಮ ಶೋಕವೇಗಂ
ರಕ್ಷೋಭಿರೇಭಿಃ ಪರಿಭರ್ತ್ಸನಂ ಚ ।
ಬ್ರೂಯಾಸ್ತು ರಾಮಸ್ಯ ಗತಃ ಸಮೀಪಂ
ಶಿವಶ್ಚ ತೇಧ್ವಾಸ್ತು ಹರಿಪ್ರವೀರ ॥

ಅನುವಾದ

ಎಲೈ ವಾನರವೀರನೇ! ನನ್ನ ಈ ಇರುವಿಕೆಯನ್ನು, ದುಃಖಾತಿರೇಕಸ್ಥಿತಿಯನ್ನು, ಈ ರಾಕ್ಷಸ ಸ್ತ್ರೀಯರು ಭಯಪಡಿಸುವ ವಿಷಯವನ್ನು ನೀನು ಶ್ರೀರಾಮನ ಬಳಿಗೆ ಹೋದಾಕ್ಷಣವೇ ತಿಳಿಸು. ನಿನ್ನ ಪ್ರಯಾಣವು ಮಂಗಳವಾಗಲೀ. ॥43॥

ಮೂಲಮ್ - 44

ಏತತ್ತವಾರ್ಯಾ ನೃಪರಾಜಸಿಂಹ
ಸೀತಾ ವಚಃ ಪ್ರಾಹ ವಿಷಾದಪೂರ್ವಮ್ ।
ಏತಚ್ಛ ಬುದ್ಧ್ವಾ ಗದಿತಂ ಮಯಾ ತ್ವಂ
ಶ್ರದ್ಧತ್ಸ್ವ ಸೀತಾಂ ಕುಶಲಾಂ ಸಮಗ್ರಾಮ್ ॥

ಅನುವಾದ

ರಾಜಶ್ರೇಷ್ಠನಾದ ರಾಘವಾ! ರಾವಣನಿಂದ ಅಶೋಕವನದಲ್ಲಿ ಬಂಧಿಸಲ್ಪಟ್ಟಿರುವ ಪೂಜ್ಯಳಾದ ಸೀತಾದೇವಿಯು ಈ ಎಲ್ಲ ವಿಷಯಗಳನ್ನು (ನಿನಗೆ ತಿಳಿಸಲು)ವಿಷಾದದಿಂದ ನನ್ನೊಡನೆ ಹೇಳಿದಳು. ಇವೆಲ್ಲವನ್ನು ನೀನು ಗಮನಿಸಿ, ಸೀತಾದೇವಿಯು ಜೀವಿಸಿದ್ದು ಭದ್ರವಾಗಿರುವಳೆಂಬ ವಿಷಯದಲ್ಲಿ ವಿಶ್ವಾಸವನ್ನಿಡು. ॥44॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಸಪ್ತಷಷ್ಠಿತಮಃ ಸರ್ಗಃ ॥ 67 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಅರವತ್ತೇಳನೆಯ ಸರ್ಗವು ಮುಗಿಯಿತು.