वाचनम्
ಭಾಗಸೂಚನಾ
ಚೂಡಾಮಣಿಯನ್ನು ನೋಡಿ, ಸೀತೆಯ ಮಾತನ್ನು ಕೇಳಿ, ಶ್ರೀರಾಮನು ವಿಲಪಿಸಿದುದು
ಮೂಲಮ್ - 1
ಏವಮುಕ್ತೋ ಹನುಮತಾ ರಾಮೋ ದಶರಥಾತ್ಮಜಃ ।
ತಂ ಮಣಿಂ ಹೃದಯೇ ಕೃತ್ವಾ ಪ್ರರುರೋದ ಸಲಕ್ಷ್ಮಣಃ ॥
ಅನುವಾದ
ಹನುಮಂತನು ಈ ವಿಧವಾಗಿ ತಿಳಿಸಿದ ಬಳಿಕ ದಶರಥನ ಕುಮಾರನಾದ ಶ್ರೀರಾಮನು ಆ ಚೂಡಾಮಣಿಯನ್ನು ಎದೆಗಪ್ಪಿಕೊಂಡು ಲಕ್ಷ್ಮಣನೊಂದಿಗೆ ಅಳತೊಡಗಿದನು.॥1॥
ಮೂಲಮ್ - 2
ತಂ ತು ದೃಷ್ಟ್ವಾ ಮಣಿಶ್ರೇಷ್ಠಂ ರಾಘವಃ ಶೋಕಕರ್ಶಿತಃ ।
ನೇತ್ರಾಭ್ಯಾಮಶ್ರುಪೂರ್ಣಾಭ್ಯಾಂ ಸುಗ್ರೀವಮಿದಮಬ್ರವೀತ್ ॥
ಅನುವಾದ
ಶ್ರೀರಾಮನು ಉತ್ಕೃಷ್ಟವಾದ ಆ ಚೂಡಾಮಣಿಯನ್ನು ನೋಡಿ, ಶೋಕಾಕುಲನಾಗಿ, ಕಣ್ಣೀರ ತುಂಬಿಕೊಂಡು ಸುಗ್ರೀವನ ಬಳಿ ಇಂತೆಂದನು.॥2॥
ಮೂಲಮ್ - 3
ಯಥೈವ ಧೇನುಃ ಸ್ರವತಿ ಸ್ನೇಹಾದ್ವತ್ಸಸ್ಯ ವತ್ಸಲಾ ।
ತಥಾ ಮಮಾಪಿ ಹೃದಯಂ ಮಣಿರತ್ನಸ್ಯ ದರ್ಶನಾತ್ ॥
ಅನುವಾದ
ವಾತ್ಸಲ್ಯಮಯಿಯಾದ ಹಸುವು ಕರುವನ್ನು ಕಂಡೊಡನೆ ಹಾಲುಸ್ರವಿಸುವಂತೆ, ಉತ್ತಮೋತ್ತಮವಾದ ಈ ಚೂಡಾಮಣಿಯನ್ನು ನೋಡುತ್ತಲೇ ನನ್ನ ಹೃದಯವು ದ್ರವಿಸುತ್ತಿದೆ.॥3॥
ಮೂಲಮ್ - 4
ಮಣಿರತ್ನಮಿದಂ ದತ್ತಂ ವೈದೇಹ್ಯಾಃ ಶ್ವಶುರೇಣ ಮೇ ।
ವಧೂಕಾಲೇ ಯಥಾಬದ್ಧಮಧಿಕಂ ಮೂರ್ಧ್ನಿ ಶೋಭತೇ ॥
ಅನುವಾದ
ಮಾವರಾದ ಜನಕ ಮಹಾರಾಜರು ಜಾನಕಿಯ ವಿವಾಹ ಸಮಯದಲ್ಲಿ ಅವಳ ತಾಯಿಯ ಮೂಲಕ ನಮ್ಮ ತಂದೆಯವರ ಸಮಕ್ಷಮದಲ್ಲಿ ಅವಳಿಗೆ ತೊಡಿಸಿದ್ದರು. ಅದನ್ನು ಅವಳು ಶಿರದಲ್ಲಿ ಧರಿಸಿದಾಗ ಆ ಮಣಿಯ ಶೋಭೆಯು ಇಮ್ಮಡಿಸಿತ್ತು.॥4॥
ಮೂಲಮ್ - 5
ಅಯಂ ಹಿ ಜಲಸಂಭೂತೋ ಮಣಿಃ ಸಜ್ಜನಪೂಜಿತಃ ।
ಯಜ್ಞೇ ಪರಮತುಷ್ಟೇನ ದತ್ತಃ ಶಕ್ರೇಣ ಧೀಮತಾ ॥
ಅನುವಾದ
ಸಮುದ್ರದಲ್ಲಿ ಹುಟ್ಟಿರುವ ಈ ಚೂಡಾಮಣಿಯನ್ನು ದೇವತೆಗಳು ಪೂಜಿಸುತ್ತಿದ್ದರು. ಜನಕನು ಮಾಡಿದ ಯಜ್ಞಕ್ಕಾಗಿ, ಧೀಶಾಲಿಯಾದ ದೇವೇಂದ್ರನು ಮೆಚ್ಚಿ ಅದನ್ನು ಬಹುಮಾನವಾಗಿ ಕೊಟ್ಟಿದ್ದನು.॥5॥
ಮೂಲಮ್ - 6
ಇಮಂ ದೃಷ್ಟ್ವಾ ಮಣಿಶ್ರೇಷ್ಠಂ ಯಥಾ ತಾತಸ್ಯ ದರ್ಶನಮ್ ।
ಅದ್ಯಾಸ್ಮ್ಯವಗತಃ ಸೌಮ್ಯ ವೈದೇಹಸ್ಯ ತಥಾ ವಿಭೋಃ ॥
ಅನುವಾದ
ಎಲೈ ಸೌಮ್ಯನೇ! ವಿಶಿಷ್ಟವಾದ ಈ ಚೂಡಾಮಣಿಯನ್ನು ನೋಡಿದಾಗ ಇಂದು ನನಗೆ ತಂದೆಯಾದ ದಶರಥನ, ಮಾವನಾದ ಜನಕನ ದರ್ಶನವಾದಂತಾಯಿತು.॥6॥
ಮೂಲಮ್ - 7
ಅಯಂ ಹಿ ಶೋಭತೇ ತಸ್ಯಾಃ ಪ್ರಿಯಾಯಾ ಮೂರ್ಧ್ನಿ ಮೇ ಮಣಿಃ ।
ಅಸ್ಯಾದ್ಯ ದರ್ಶನೇನಾಹಂ ಪ್ರಾಪ್ತಾಂ ತಾಮಿವ ಚಿಂತಯೇ ॥
ಅನುವಾದ
ಈ ಚೂಡಾಮಣಿಯು ನನ್ನ ಪ್ರೇಯಸಿಯಾದ ಸೀತಾದೇವಿಯ ತಲೆಯಲ್ಲಿ ಅತ್ಯಂತ ಶೋಭಾಯಮಾನವಾಗಿ ಕಾಣುತ್ತಿದ್ದಿತು. ಇಂದು ಇದನ್ನು ನೋಡಿ ಅವಳನ್ನೇ ಹೊಂದಿದಂತೆ ಭಾವಿಸುತ್ತೇನೆ.॥7॥
ಮೂಲಮ್ - 8
ಕಿಮಾಹ ಸೀತಾ ವೈದೇಹೀ ಬ್ರೂಹಿ ಸೌಮ್ಯ ಪುನಃ ಪುನಃ ।
ಪಿಪಾಸುಮಿವ ತೋಯೇನ ಸಿಂಚಂತೀ ವಾಕ್ಯವಾರಿಣಾ ॥
ಅನುವಾದ
ಎಲೈ ಮಾರುತಿಯೇ! ಸೀತಾದೇವಿಯು ಹೇಳಿದ ಮಾತುಗಳನ್ನು ಪುನಃ - ಪುನಃ ತಿಳಿಸು. ಬಾಯಾರಿದವನು ನೀರಿನಿಂದ ತೃಪ್ತಿ ಹೊಂದುವಂತೆ, ಆ ಮಧುರ ವಚನಗಳಿಂದ ನನಗೆ ಸಮಾಧಾನವಾಗುತ್ತದೆ.॥8॥
ಮೂಲಮ್ - 9
ಇತಸ್ತು ಕಿಂ ದುಃಖತರಂ ಯದಿಮಂ ವಾರಿಸಂಭವಮ್ ।
ಮಣಿಂ ಪಶ್ಯಾಮಿ ಸೌಮಿತ್ರೇ ವೈದೇಹೀಮಾಗತಂ ವಿನಾ ॥
ಅನುವಾದ
ಲಕ್ಷ್ಮಣಾ! ವೈದೇಹಿಯಿಲ್ಲದೆ, ಸಮುದ್ರದಲ್ಲಿ ಹುಟ್ಟಿದ ಈ ಚೂಡಾಮಣಿಯನ್ನು ಮಾತ್ರವೇ ನಾನು ನೊಡುತ್ತಿರುವೆನಲ್ಲ! ಇದಕ್ಕಿಂತ ದುಃಖಕರವಾದುದು ಮತ್ತೇನಿದೆ?॥9॥
ಮೂಲಮ್ - 10
ಚಿರಂ ಜೀವತಿ ವೈದೇಹೀ ಯದಿ ಮಾಸಂ ಧರಿಷ್ಯತಿ ।
ನ ಜೀವೇಯಂ ಕ್ಷಣಮಪಿ ವಿನಾ ತಾಮಸಿತೇಕ್ಷಣಾಮ್ ॥
ಅನುವಾದ
ಎಲೈ ಸೌಮ್ಯನಾದ ಲಕ್ಷ್ಮಣಾ! ಸೀತಾದೇವಿಯು ನಿನ್ನ ವಿರಹದಲ್ಲಿ ಒಂದು ತಿಂಗಳು ಕಾಲಮಾತ್ರ ಬದುಕಿರುವೆನು ಎಂದು ಹೇಳಿದುದು ಇದು ತುಂಬಾ ದೀರ್ಘವಾದ ಸಮಯವೇ ಸರಿ! ಆದರೆ ಮನೋಹರವಾದ ಕಣ್ಣುಗಳುಳ್ಳ ಜಾನಕಿಯು ಇಲ್ಲದೆ ನಾನು ಕ್ಷಣಕಾಲವಾದರೂ ಜೀವಿಸಿರಲಾರೆನು.॥10॥
ಮೂಲಮ್ - 11
ನಯ ಮಾಮಪಿ ತಂ ದೇಶಂ ಯತ್ರ ದೃಷ್ಟಾ ಮಮ ಪ್ರಿಯಾ ।
ನ ತಿಷ್ಠೇಯಂ ಕ್ಷಣಮಪಿ ಪ್ರವೃತ್ತಿಮುಪಲಭ್ಯ ಚ ॥
ಅನುವಾದ
ಸೀತೆಯ ವೃತ್ತಾಂತ ತಿಳಿದ ಮೇಲೆ ಕ್ಷಣಮಾತ್ರವಾದರೂ ನಾನಿಲ್ಲಿರಲಾರೆನು. ಹನುಮಂತಾ! ಅವಳನ್ನು ನೀನು ಕಂಡಲ್ಲಿಗೆ ನನ್ನನ್ನು ಕರಕೊಂಡು ಹೋಗು.॥11॥
ಮೂಲಮ್ - 12
ಕಥಂ ಸಾ ಮಮ ಸುಶ್ರೋಣೀ ಭೀರುಭೀರುಃ ಸತೀ ಸದಾ ।
ಭಯಾವಹಾನಾಂ ಘೋರಾಣಾಂ ಮಧ್ಯೇ ತಿಷ್ಠತಿ ರಕ್ಷಸಾಮ್ ॥
ಅನುವಾದ
ಶುಭಾಂಗಿಯೂ, ಭೀರುಸ್ವಭಾವದವಳೂ, ಸಾಧ್ವಿಯೂ ಆದ ಸೀತೆಯು ಭಯಂಕರ ಸ್ವರೂಪರಾದ ಆ ಘೋರರಕ್ಕಸಿಯರ ಮಧ್ಯದಲ್ಲಿ ಹೇಗೆ ತಾನೇ ಜೀವಿಸಿದ್ದಾಳೆ?॥12॥
ಮೂಲಮ್ - 13
ಶಾರದಸ್ತಿಮಿರೋನ್ಮುಕ್ತೋ ನೂನಂ ಚಂದ್ರ ಇವಾಂಬುದೈಃ ।
ಆವೃತಂ ವದನಂ ತಸ್ಯಾ ನ ವಿರಾಜತಿ ರಾಕ್ಷಸೈಃ ॥
ಅನುವಾದ
ಕತ್ತಲೆಯಿಂದ ಕೂಡಿದ ಮೋಡಗಳಿಂದ ಆವೃತನಾದ ಶರತ್ಕಾಲದ ಚಂದ್ರನಂತೆ, ರಾಕ್ಷಸರಿಂದ ಆವೃತಳಾಗಿರುವ ಸೀತಾದೇವಿಯ ಮುಖವು ಪ್ರಕಾಶಿಸಲಾರದು. ಇದು ನಿಶ್ಚಯವು.॥13॥
ಮೂಲಮ್ - 14
ಕಿಮಾಹ ಸೀತಾ ಹನುಮಂಸ್ತತ್ತ್ವತಃ ಕಥಯಾದ್ಯ ಮೇ ।
ಏತೇನ ಖಲು ಜೀವಿಷ್ಯೇ ಭೇಷಜೇನಾತುರೋ ಯಥಾ ॥
ಅನುವಾದ
ಮಾರುತಿಯೇ! ಸೀತೆಯು ಏನು ಹೇಳಿದಳೆಂಬುದನ್ನು ಪುನಃ ಹೇಳು. ರೋಗಿಯಾದವನು ಔಷಧಿಯಿಂದ ಜೀವಿಸಿರುವಂತೆ, ನಾನು ಅವಳ ಮಾತುಗಳನ್ನು ಕೇಳಿಕೊಂಡು ಜೀವಿಸಿರುತ್ತೇನೆ.॥14॥
ಮೂಲಮ್ - 15
ಮಧುರಾ ಮಧುರಾಲಾಪಾ ಕಿಮಾಹ ಮಮ ಭಾಮಿನೀ ।
ಮದ್ವಿಹೀನಾ ವರಾರೋಹಾ ಹನುಮನ್ ಕಥಯಸ್ವ ಮೇ ।
ದುಃಖಾದ್ದುಃಖತರಂ ಪ್ರಾಪ್ಯ ಕಥಂ ಜೀವತಿ ಜಾನಕೀ ॥
ಅನುವಾದ
ಎಲೈ ಹನುಮಂತಾ! ನನ್ನಿಂದ ಅಗಲಿರುವ ಸುಂದರ ಶರೀರವುಳ್ಳ, ಮಧುರ ಸ್ವಭಾವದವಳೂ, ಮಧುರವಾಗಿ ಮಾತಾಡುವವಳೂ ಆದ ನನ್ನ ಪ್ರಿಯೆಯು ಏನು ಹೇಳಿದಳು? ಅವೆಲ್ಲವನ್ನು ಅವಳ ಮಾತಿನಲ್ಲೇ ಹೇಳು. ಅತ್ಯಂತ ದುಃಖಕ್ಕೀಡಾಗಿರುವವಳು ಹೇಗೆ ಜೀವಿಸಿರುವಳೋ ಕಾಣೆ!॥15॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಷಟ್ಷಷ್ಠಿತಮಃ ಸರ್ಗಃ ॥ 66 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಅರವತ್ತಾರನೆಯ ಸರ್ಗವು ಮುಗಿಯಿತು.