वाचनम्
ಭಾಗಸೂಚನಾ
ಹನುಮಂತನು ಶ್ರೀರಾಮನಿಗೆ ಸೀತೆಯ ಸಮಾಚಾರವನ್ನು ತಿಳಿಸಿದುದು
ಮೂಲಮ್ - 1
ತತಃ ಪ್ರಸ್ರವಣಂ ಶೈಲಂ ತೇ ಗತ್ವಾ ಚಿತ್ರಕಾನನಮ್ ।
ಪ್ರಣಮ್ಯ ಶಿರಸಾ ರಾಮಂ ಲಕ್ಷ್ಮಣಂ ಚ ಮಹಾಬಲಮ್ ॥
ಮೂಲಮ್ - 2
ಯುವರಾಜಂ ಪುರಸ್ಕೃತ್ಯ ಸುಗ್ರೀವಮಭಿವಾದ್ಯ ಚ ।
ಪ್ರವೃತ್ತಿಮಥ ಸೀತಾಯಾಃ ಪ್ರವಕ್ತುಮುಪಚಕ್ರಮುಃ ॥
ಅನುವಾದ
ಬಳಿಕ ಆ ಕಪಿನಾಯಕರೆಲ್ಲರೂ ಯುವರಾಜನಾದ ಅಂಗದನ ನಾಯಕತ್ವದಲ್ಲಿ ಚಿತ್ರತರವಾದ ಕಾಡುಗಳಿಂದ ಕೂಡಿದ್ದ ಪ್ರಸ್ರವಣ ಪರ್ವತವನ್ನು ಸೇರಿ, ಅಲ್ಲಿ ಶ್ರೀರಾಮನಿಗೂ ಮಹಾಬಲನಾದ ಲಕ್ಷ್ಮಣನಿಗೂ ತಲೆಬಾಗಿ ನಮಸ್ಕರಿಸಿ, ರಾಜನಾದ ಸುಗ್ರೀವನಿಗೆ ವಂದಿಸಿ, ಸೀತಾದೇವಿಯ ವೃತ್ತಾಂತವನ್ನು ಹೇಳಲು ಉಪಕ್ರಮಿಸಿದರು—॥1-2॥
ಮೂಲಮ್ - 3
ರಾವಣಾಂತಃಪುರೇ ರೋಧಂ ರಾಕ್ಷಸೀಭಿಶ್ಚ ತರ್ಜನಮ್ ।
ರಾಮೇ ಸಮನುರಾಗಂ ಚ ಯಶ್ಚಾಯಂ ಸಮಯಃ ಕೃತಃ ॥
ಮೂಲಮ್ - 4
ಏತದಾಖ್ಯಾಂತಿ ತೇ ಸರ್ವೇ ಹರಯೋ ರಾಮಸಂನಿಧೌ ।
ವೈದೇಹೀಮಕ್ಷತಾಂ ಶ್ರುತ್ವಾ ರಾಮಸ್ತೂತ್ತರಮಬ್ರವೀತ್ ॥
ಅನುವಾದ
ರಾವಣನ ಅಂತಃಪುರಕ್ಕೆ ಸೇರಿದ ಅಶೋಕವನದಲ್ಲಿ ಸೀತೆಯನ್ನು ಬಂಧಿಸಿಟ್ಟಿರುವುದನ್ನು, ರಾಕ್ಷಸಿಯರು ಅವಳನ್ನು ಭಯಪಡಿಸುವುದನ್ನು, ಸೀತೆಗೆ ಶ್ರೀರಾಮನ ಮೇಲೆ ಇರುವ ಅನುರಾಗವನ್ನೂ, ರಾವಣನು ತನ್ನ ವಶಳಾಗಲು, ಸೀತೆಗೆ ಕೊಟ್ಟಿರುವ ಕಾಲದ ಗಡುವನ್ನೂ ಹೀಗೆ ಕಪಿನಾಯಕರು ಶ್ರೀರಾಮನ ಸನ್ನಿಧಿಯಲ್ಲಿ ಅರಿಕೆಮಾಡಿಕೊಂಡರು. ವೈದೇಹಿಯು ಕ್ಷೇಮವಾಗಿರುವಳೆಂದು ಕೇಳಿ ಶ್ರೀರಾಮಚಂದ್ರನು ಹೀಗೆ ಪ್ರಶ್ನಿಸಿದನು.॥3-4॥
ಮೂಲಮ್ - 5
ಕ್ವ ಸೀತಾ ವರ್ತತೇ ದೇವೀ ಕಥಂ ಚ ಮಯಿ ವರ್ತತೇ ।
ಏತನ್ಮೇ ಸರ್ವಮಾಖ್ಯಾತ ವೈದೇಹೀಂ ಪ್ರತಿ ವಾನರಾಃ ॥
ಅನುವಾದ
‘‘ವಾನರ ಶ್ರೇಷ್ಠರೇ! ಸೀತೆಯು ಎಲ್ಲಿದ್ದಾಳೆ? ನನ್ನ ವಿಷಯದಲ್ಲಿ ಅವಳ ಅಭಿಪ್ರಾಯ ಹೇಗಿದೆ? ಅವಳಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ವಿಶದವಾಗಿ ಹೇಳಿರಿ.’’॥5॥
ಮೂಲಮ್ - 6
ರಾಮಸ್ಯ ಗದಿತಂ ಶ್ರುತ್ವಾ ಹರಯೋ ರಾಮಸಂನಿಧೌ ।
ಚೋದಯಂತಿ ಹನೂಮಂತಂ ಸೀತಾವೃತ್ತಾಂತಕೋವಿದಮ್ ॥
ಅನುವಾದ
ಶ್ರೀರಾಮನ ಸನ್ನಿಧಿಯಲ್ಲಿದ್ದ ಕಪಿನಾಯಕರು ಸೀತಾದೇವಿಯ ವೃತ್ತಾಂತವನ್ನು ಚೆನ್ನಾಗಿ ತಿಳಿದಿದ್ದ ಹನುಮಂತನನ್ನು ಪ್ರಚೋದಿಸುತ್ತಾ ‘ಶ್ರೀರಾಮನ ಪ್ರಶ್ನೆಗಳಿಗೆ ನೀನೇ ವಿವರಿಸು’ ಎಂದು ಅವನನ್ನು ತಿವಿದರು.॥6॥
ಮೂಲಮ್ - 7
ಶ್ರುತ್ವಾ ತು ವಚನಂ ತೇಷಾಂ ಹನುಮಾನ್ ಮಾರುತಾತ್ಮಜಃ ।
ಪ್ರಣಮ್ಯ ಶಿರಸಾ ದೇವ್ಯೈ ಸೀತಾಯೈ ತಾಂ ದಿಶಂ ಪ್ರತಿ ।
ಉವಾಚ ವಾಕ್ಯಂ ವಾಕ್ಯಜ್ಞಃ ಸೀತಾಯಾ ದರ್ಶನಂ ಯಥಾ ॥
ಅನುವಾದ
ಆ ವಾನರರ ಮಾತನ್ನು ಕೇಳಿ, ವಾಯುಪುತ್ರನಾದ ಹನುಮಂತನು-ಸೀತಾದೇವಿಗೂ, ಅವಳಿದ್ದ ದಕ್ಷಿಣದಿಕ್ಕಿಗೂ ತಲೆಬಾಗಿ ನಮಸ್ಕರಿಸಿದನು. ಮತ್ತೆ ವಾಕ್ಚತುರನಾದ ಆ ಮಾರುತಿಯು ತನಗೆ ಸೀತಾದೇವಿಯ ದರ್ಶನ ಹೇಗಾಯಿತೆಂಬುದನ್ನು ಹೇಳತೊಡಗಿದನು.॥7॥
ಮೂಲಮ್ - 8
ಸಮುದ್ರಂ ಲಂಘಯಿತ್ವಾಹಂ ಶತಯೋಜನಮಾಯತಮ್ ।
ಅಗಚ್ಛಂ ಜಾನಕೀಂ ಸೀತಾಂ ಮಾರ್ಗಮಾಣೋ ದಿದೃಕ್ಷಯಾ ॥
ಅನುವಾದ
ಪ್ರಭುವೇ! ನಾನು ನೂರು ಯೋಜನಗಳಷ್ಟು ವಿಸ್ತಾರವಾಗಿದ್ದ ದಕ್ಷಿಣಸಮುದ್ರವನ್ನು ಲಂಘಸಿ, ಜನಕನ ಮಗಳಾದ ಸೀತಾದೇವಿಯನ್ನು ನೋಡಲೋಸುಗ ಅವಳನ್ನು ಹುಡುಕುತ್ತಾ ಹೊರಟೆನು.॥8॥
ಮೂಲಮ್ - 9
ತತ್ರ ಲಂಕೇತಿ ನಗರೀ ರಾವಣಸ್ಯ ದುರಾತ್ಮನಃ ।
ದಕ್ಷಿಣಸ್ಯ ಸಮುದ್ರಸ್ಯ ತೀರೇ ವಸತಿ ದಕ್ಷಿಣೇ ॥
ಮೂಲಮ್ - 10
ತತ್ರ ಸೀತಾ ಮಯಾ ದೃಷ್ಟಾ ರಾವಣಾಂತಃಪುರೇ ಸತೀ ।
ಸಂನ್ಯಸ್ಯ ತ್ವಯಿ ಜೀವಂತೀ ರಾಮಾ ರಾಮ ಮನೋರಥಮ್ ॥
ಅನುವಾದ
ದಕ್ಷಿಣ ಸಮುದ್ರದ ದಕ್ಷಿಣತೀರದಲ್ಲಿ ದುರಾತ್ಮನಾದ ರಾವಣನ ಆಡಳಿತಕ್ಕೆ ಒಳಪಟ್ಟ ‘ಲಂಕೆ’ ಎಂಬ ಒಂದು ಪಟ್ಟಣವಿದೆ. ಅಲ್ಲಿ ರಾವಣನ ಅಂತಃಪುರಕ್ಕೆ ಸೇರಿದ ಅಶೋಕವನದಲ್ಲಿದ್ದ ಸಾಧ್ವಿಯಾದ ಸೀತಾದೇವಿಯನ್ನು ನಾನು ನೋಡಿದೆನು. ಸೀತಾದೇವಿಯು ತನ್ನ ಮನೋರಥಗಳೆಲ್ಲವನ್ನು, ನಿನ್ನಲ್ಲಿಯೇ ಮುಡುಪಾಗಿಟ್ಟು ಪ್ರಾಣಗಳನ್ನು ಧರಿಸಿರುವಳು.॥9-10॥
ಮೂಲಮ್ - 11
ದೃಷ್ಟಾ ಮೇ ರಾಕ್ಷಸೀಮಧ್ಯೇ ತರ್ಜ್ಯಮಾನಾ ಮುಹುರ್ಮುಹುಃ ।
ರಾಕ್ಷಸೀಭಿರ್ವಿರೂಪಾಭೀ ರಕ್ಷಿತಾ ಪ್ರಮದಾವನೇ ॥
ಅನುವಾದ
ನಾನು ನೋಡಿದಾಗ ಅವಳ ಸುತ್ತಲೂ ರಾಕ್ಷಸ ಸ್ತ್ರೀಯರು ಸೇರಿ, ಅವಳನ್ನು ಪದೇ-ಪದೇ ಭಯಪಡಿಸುತ್ತಿದ್ದರು. ವಿಕೃತಾಕಾರರಾದ ಆ ರಾಕ್ಷಸಿಯರು ಪ್ರಮದಾವನದಲ್ಲಿ ಅವಳನ್ನು ಕಾವಲು ಕಾಯುತ್ತಿದ್ದಾರೆ.॥11॥
ಮೂಲಮ್ - 12
ದುಃಖಮಾಪದ್ಯತೇ ದೇವೀ ತಥಾದುಃಖೋಚಿತಾ ಸತೀ ।
ರಾವಣಾಂತಃಪುರೇ ರುದ್ಧಾ ರಾಕ್ಷಸೀಭಿಃ ಸುರಕ್ಷಿತಾ ॥
ಮೂಲಮ್ - 13
ಏಕವೇಣೀಧರಾ ದೀನಾ ತ್ವಯಿ ಚಿಂತಾಪರಾಯಣಾ ।
ಅಧಃಶಯ್ಯಾ ವಿವರ್ಣಾಂಗೀ ಪದ್ಮಿನೀವ ಹಿಮಾಗಮೇ ॥
ಅನುವಾದ
ಸುಖವಾಗಿರಲು ಯೋಗ್ಯಳಾದ ಅವಳು ನಿನ್ನ ವಿಯೋಗದಿಂದಾಗಿ ಅತ್ಯಂತ ದುಃಖಿತೆಯಾಗಿದ್ದಾಳೆ. ರಾವಣಾಂತಃಪುರದಲ್ಲಿ ಬಂದಿಯಾಗಿರುವ ಅವಳನ್ನು ರಾಕ್ಷಸಿಯರು ಪಹರೆ ಕಾಯುತ್ತಿದ್ದಾರೆ. ಅವಳ ಕೂದಲುಗಳು ಜಡೆಗಟ್ಟಿ ಒಂದೇ ಜಡೆಯಂತಾಗಿದೆ. ದೀನಳಾಗಿರುವ ಅವಳು ನಿನ್ನನ್ನೇ ಸದಾಕಾಲ ಚಿಂತಿಸುತ್ತಾ ಇದ್ದಾಳೆ.॥12-13॥
ಮೂಲಮ್ - 14
ರಾವಣಾದ್ವಿನಿವೃತ್ತಾರ್ಥಾ ಮರ್ತವ್ಯಕೃತನಿಶ್ಚಯಾ ।
ದೇವೀ ಕಥಂಚಿತ್ ಕಾಕುತ್ಸ್ಥ ತ್ವನ್ಮನಾ ಮಾರ್ಗಿತಾ ಮಯಾ ॥
ಅನುವಾದ
ಅವಳು ನೆಲದ ಮೇಲೆ ಮಲಗುವಳು. ಹಿಮಪಾತದಿಂದ ಕುಂದಿದ ಕಮಲದಂತೆ ಅವಳ ಅಂಗಾಂಗಗಳು ಕಾಂತಿಹೀನವಾಗಿವೆ. ರಾವಣನು ಅಪಹರಿಸಿಕಕೊಂಡು ಹೋದಕಾರಣ, ನಿನ್ನಿಂದ ದೂರಾದ ಆಕೆಯು ತನುವನ್ನು ತ್ಯಜಿಸುವ ನಿರ್ಣಯ ಮಾಡಿಕೊಂಡಿರುವಳು. ಕಾಕುತ್ಸನಾದ ಶ್ರೀರಾಮಾ! ನಿನ್ನಲ್ಲಿಯೇ ನೆಟ್ಟಮನಸ್ಸುಳ್ಳ ಅವಳನ್ನು ನಾನು ಅತಿ ಪ್ರಯಾಸದಿಂದಲೇ ಹುಡುಕಿದೆನು.॥14॥
ಮೂಲಮ್ - 15
ಇಕ್ಷ್ವಾಕುವಂಶವಿಖ್ಯಾತಿಂ ಶನೈಃ ಕೀರ್ತಯತಾನಘ ।
ಸಾ ಮಯಾ ನರಶಾರ್ದೂಲ ವಿಶ್ವಾಸಮುಪಪಾದಿತಾ ॥
ಅನುವಾದ
ಪುಣ್ಯ ಪುರುಷಾ! ಅವಳಿಗೆ ನನ್ನಲ್ಲಿ ವಿಶ್ವಾಸ ಉಂಟಾಗಲು ಇಕ್ಷ್ವಾಕುವಂಶದ ಖ್ಯಾತಿಯನ್ನು ಅವಳಿಗೆ ಕೇಳಿಸುವಂತೆ ಕ್ರಮವಾಗಿ ಹೇಳಿದೆನು. ಎಲೈ ಮಹಾಪುರುಷಾ! ಅದರಿಂದ ಅವಳಿಗೆ ನನ್ನಲ್ಲಿ ವಿಶ್ವಾಸಮೂಡಿತು.॥15॥
ಮೂಲಮ್ - 16
ತತಃ ಸಂಭಾಷಿತಾ ದೇವೀ ಸರ್ವಮರ್ಥಂ ಚ ದರ್ಶಿತಾ ।
ರಾಮಸುಗ್ರೀವಸಖ್ಯಂ ಚ ಶ್ರುತ್ವಾ ಪ್ರೀತಿಮುಪಾಗತಾ ॥
ಅನುವಾದ
ಆಗ ಆ ತಾಯಿಯು ನನ್ನೊಡನೆ ಮಾತಾಡಿದಳು. ಅವಳಿಗೆ ನಾನು ಎಲ್ಲ ವಿಷಯಗಳನ್ನು ತಿಳಿಸಿದೆ. ನಿನಗೂ ಹಾಗೂ ಸುಗ್ರೀವನಿಗೂ ಸಖ್ಯವಾದುದನ್ನು ಕೇಳಿ, ಸೀತೆಯು ಪರಮಹರ್ಷಿತಳಾದಳು.॥16॥
ಮೂಲಮ್ - 17
ನಿಯತಃ ಸಮುದಾಚಾರೋ ಭಕ್ತಿಶ್ಚಾಸ್ಯಾಸ್ತಥಾ ತ್ವಯಿ ॥
ಮೂಲಮ್ - 18
ಏವಂ ಮಯಾ ಮಹಾಭಾಗಾ ದೃಷ್ಟಾ ಜನಕನಂದಿನೀ ।
ಉಗ್ರೇಣ ತಪಸಾ ಯುಕ್ತಾ ತ್ವದ್ಭಕ್ತ್ಯಾ ಪುರುಷರ್ಷಭ ॥
ಅನುವಾದ
ಪಾತಿವ್ರತ್ಯ ಧರ್ಮಾಚರಣೆಯಿಂದ, ನಿನ್ನಲ್ಲಿರುವ ಭಕ್ತಿ-ಪ್ರಪತ್ತಿಗಳಿಂದ ಅವಳು ಸ್ಥಿರವಾಗಿದ್ದಾಳೆ. ಎಲೈ ಪುರುಷ ಶ್ರೇಷ್ಠಾ! ಪೂಜ್ಯರಾದ ಆ ಜನಕನಂದಿನಿಯು ನಿನ್ನ ಪ್ರಾಪ್ತಿಗಾಗಿ ಉಗ್ರವಾದ ತಪಸ್ಸನ್ನು ಆಚರಿಸುತ್ತಾ, ನಿನ್ನಲ್ಲಿ ಅತ್ಯಂತ ಭಕ್ತಿ ಭಾವದಿಂದ ಇರುವ ಆ ಸಾಧ್ವಿಯನ್ನು ನಾನು ದರ್ಶಿಸಿದೆನು.॥17-18॥
ಮೂಲಮ್ - 19
ಅಭಿಜ್ಞಾನಂ ಚ ಮೇ ದತ್ತಂ ಯಥಾವೃತ್ತಂ ತವಾಂತಿಕೇ ।
ಚಿತ್ರಕೂಟೇ ಮಹಾಪ್ರಾಜ್ಞ ವಾಯಸಂ ಪ್ರತಿ ರಾಘವ ॥
ಅನುವಾದ
ಮಹಾಪ್ರಾಜ್ಞನಾದ ಶ್ರೀರಾಮಾ! ಅವಳು ಚಿತ್ರಕೂಟಪರ್ವತದಲ್ಲಿ ನಿನ್ನೊಡನಿರುವಾಗ ಜರುಗಿದ ಕಾಕ ವೃತ್ತಾಂತವನ್ನು ನೆನಪಿಗಾಗಿ ನಿನಗೆ ತಿಳಿಸಲು ಅವಳು ವಿವರಿಸಿರುವಳು.॥19॥
ಮೂಲಮ್ - 20
ವಿಜ್ಞಾಪ್ಯಶ್ಚ ನರವ್ಯಾಘ್ರೋ ರಾಮೋ ವಾಯುಸುತ ತ್ವಯಾ ।
ಅಖಿಲೇನೇಹ ಯದ್ದೃಷ್ಟಮಿತಿ ಮಾಮಾಹ ಜಾನಕೀ ॥
ಅನುವಾದ
‘‘ಎಲೈ ಮಾರುತಿ! ನೀನಿಲ್ಲಿ ನೋಡಿರುವುದನ್ನೆಲ್ಲ ಯಥಾವತ್ತಾಗಿ ನರೋತ್ತಮನಾದ ಶ್ರೀರಾಮನಲ್ಲಿ ಬಿನ್ನವಿಸಿಕೊ’’ ಎಂದು ಜಾನಕಿ ದೇವಿಯು ನನ್ನೊಡನೆ ಹೇಳಿರುವಳು.॥20॥
ಮೂಲಮ್ - 21
ಅಯಂ ಚಾಸ್ಮೈ ಪ್ರದಾತವ್ಯೋ ಯತ್ನಾತ್ ಸುಪರಿರಕ್ಷಿತಃ ।
ಬ್ರುವತಾ ವಚನಾನ್ಯೇವಂ ಸುಗ್ರೀವಸ್ಯೋಪಶೃಣ್ವತಃ ॥
ಮೂಲಮ್ - 22
ಏಷ ಚೂಡಾಮಣಿಃ ಶ್ರೀಮಾನ್ ಮಯಾ ಸುಪರಿರಕ್ಷಿತಃ ।
ಮನಃಶಿಲಾಯಾಸ್ತಿಲಕೋ ಗಂಡಪಾರ್ಶ್ವೇ ನಿವೇಶಿತಃ ॥
ಅನುವಾದ
‘‘ಈ ಎಲ್ಲ ವಚನಗಳನ್ನು ಸುಗ್ರೀವನ ಸಮಕ್ಷಮದಲ್ಲಿ ಶ್ರೀರಾಮನಿಗೆ ಹೇಳಬೇಕು. ಈ ಶಿರೋ ಭೂಷಣವನ್ನು ಬಹಳ ಪ್ರಯತ್ನದಿಂದ ರಕ್ಷಿಸಿಕೊಂಡು ಬಂದಿರುವೆನು. ಇದನ್ನು ಶ್ರೀರಾಮನಿಗೆ ಕೊಡಬೇಕು’’ ಎಂದೂ ಹೇಳಿದಳು. ಪ್ರಭುವೇ! ಥಳ-ಥಳಿಸುತ್ತಿರುವ ಈ ಚೂಡಾಮಣಿಯನ್ನು ನಾನು ಬಹಳ ಎಚ್ಚರಿಕೆಯಿಂದ ರಕ್ಷಿಸಿಕೊಂಡು ಬಂದಿದ್ದೇನೆ. ಇದನ್ನು ನೋಡಿದೊಡನೆಯೇ ನಿನಗೆ ನನ್ನ ಸ್ಮರಣೆಯುಂಟಾಗುತ್ತದೆ, ಮಣಿಶಿಲೆಯಿಂದ ನನ್ನ ಗಲ್ಲಕ್ಕೆ ತಿದ್ದಿದ ತಿಲಕವನ್ನು ಹಾಗೆಯೇ ನೀನು ಸ್ಮರಿಸಿಕೊ.॥21-22॥
ಮೂಲಮ್ - 23
ತ್ವಯಾ ಪ್ರನಷ್ಟೇ ತಿಲಕೇ ತಂ ಕಿಲ ಸ್ಮರ್ತುಮರ್ಹಸಿ ।
ಏಷ ನಿರ್ಯಾತಿತಃ ಶ್ರೀಮಾನ್ ಮಯಾ ತೇ ವಾರಿಸಂಭವಃ ॥
ಮೂಲಮ್ - 24
ಏವಂ ದೃಷ್ಟ್ವಾ ಪ್ರಮೋದಿಷ್ಯೇ ವ್ಯಸನೇ ತ್ವಾಮಿವಾನಘ ।
ಜೀವಿತಂ ಧಾರಯಿಷ್ಯಾಮಿ ಮಾಸಂ ದಶರಥಾತ್ಮಜ
ಊರ್ಧ್ವಂ ಮಾಸಾನ್ನ ಜೀವೇಯಂ ರಕ್ಷಸಾಂ ವಶಮಾಗತಾ ॥
ಮೂಲಮ್ - 25
ಇತಿ ಮಾಮಬ್ರವೀತ್ ಸೀತಾ ಕೃಶಾಂಗೀ ಧರ್ಮಚಾರಿಣೀ ।
ರಾವಣಾಂತಃಪುರೇ ರುದ್ಧಾ ಮೃಗೀವೋತ್ಫುಲ್ಲಲೋಚನಾ ॥
ಅನುವಾದ
ಸಮುದ್ರದಲ್ಲಿ ಹುಟ್ಟಿದ್ದ, ಕಾಂತಿಯನ್ನು ಚಿಮ್ಮುತ್ತಿರುವ ಈ ಚೂಡಾಮಣಿಯನ್ನು ನಾನು ನಿನ್ನ ಬಳಿಗೆ ಕಳಿಸಿಕೊಡುತ್ತಿದ್ದೇನೆ. ಎಲೈ ಪಾಪರಹಿತನೇ! ದುಃಖಸಮಯದಲ್ಲಿ ಇದನ್ನು ನೋಡುತ್ತಾ, ನಿನ್ನನ್ನು ನೋಡಿದಷ್ಟೇ ಆನಂದಪಡುತ್ತಿದ್ದೆ. ಎಲೈ ದಾಶರಥಿಯೇ! ನಾನಿನ್ನು ಒಂದು ತಿಂಗಳು ಮಾತ್ರವೇ ಜೀವಿಸಿರುವೆನು. ಮಾಸವು ಕಳೆಯಿತೆಂದರೆ ರಾಕ್ಷಸರ ವಶದಲ್ಲಿರುವ ನಾನು ಜೀವಿಸಿರಲಾರೆನು’’ ಎಂದು ಧರ್ಮಚಾರಿಣಿಯೂ, ಕೃಶಾಂಗಿಯೂ ಆದ ಸೀತಾದೇವಿಯು ನನ್ನೊಡನೆ ಹೇಳಿರುವಳು. ಹೆಣ್ಣು ಜಿಂಕೆಯಂತೆ ವಿಶಾಲ ನೇತ್ರೆಯಾದ ಸೀತಾದೇವಿಯು ರಾವಣಾಂತಃಪುರದಲ್ಲಿ ಬಂದಿಯಾಗಿರುವಳು. ॥23-25॥
ಮೂಲಮ್ - 26
ಏತದೇವ ಮಯಾಖ್ಯಾತಂ ಸರ್ವಂ ರಾಘವ ಯದ್ಯಥಾ ।
ಸರ್ವಥಾ ಸಾಗರಜಲೇ ಸಂತಾರಃ ಪ್ರವಿಧೀಯತಾಮ್ ॥
ಅನುವಾದ
ಹೇ ರಘುವಂಶೋತ್ತಮಾ! ಎಲ್ಲ ವಿಷಯಗಳನ್ನು ಯಥಾವತ್ತಾಗಿ ನಿನಗೆ ಹೇಳಿರುವೆನು. ಸಮುದ್ರವನ್ನು ದಾಟಿ ಲಂಕೆಗೆ ಹೋಗುವ ಉಪಾಯವನ್ನು ಆಲೋಚಿಸ ಬೇಕಾಗಿದೆ. ॥26 ॥
ಮೂಲಮ್ - 27
ತೌ ಜಾತಾಶ್ವಾಸೌ ರಾಜಪುತ್ರೌ ವಿದಿತ್ವಾ
ತಚ್ಛಾಭಿಜ್ಞಾನಂ ರಾಘವಾಯ ಪ್ರದಾಯ ।
ದೇವ್ಯಾ ಚಾಖ್ಯಾತಂ ಸರ್ವಮೇವಾನುಪೂರ್ವ್ಯಾದ್
ವಾಚಾ ಸಂಪೂರ್ಣಂ ವಾಯುಪುತ್ರಃ ಶಶಂಸ ॥
ಅನುವಾದ
ವಾಯುಸುತನಾದ ಹನುಮಂತನು ಈ ವಿಧವಾಗಿ ತನ್ನ ಮಾತಿನ ಕುರಿತು ರಾಮ-ಲಕ್ಷ್ಮಣರಿಗೆ ವಿಶ್ವಾಸವುಂಟಾಗಿದೆ ಎಂದು ತಿಳಿದುಕೊಂಡನು. ಅಭಿಜ್ಞಾನ ರೂಪವಾದ ಚೂಡಾಮಣಿಯನ್ನು ಶ್ರೀರಾಮನಿಗೆ ಸಮರ್ಪಿಸಿದನು. ಸೀತಾದೇವಿಯ ಸಂದೇಶವನ್ನು ಸಕ್ರಮವಾಗಿ ಸಂಪೂರ್ಣವಾಗಿ ಶ್ರೀರಾಮನಿಗೆ ಅರುಹಿದನು. ॥27 ॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪಂಚಷಷ್ಠಿತಮಃ ಸರ್ಗಃ ॥ 65 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಅರವತ್ತೈದನೆಯ ಸರ್ಗವು ಮುಗಿಯಿತು.