वाचनम्
ಭಾಗಸೂಚನಾ
ದಧಿಮುಖನು ಸುಗ್ರೀವನ ಸಂದೇಶವನ್ನು ತಿಳಿಸಿ, ಅಂಗದ ಹನುಮದಾದಿಗಳನ್ನು ಕಿಷ್ಕಿಂಧೆಗೆ ಕಳಿಸಿಕೊಟ್ಟುದುದು, ಹನುಮಂತನು ಶ್ರೀರಾಮನಿಗೆ ಪ್ರಣಾಮಮಾಡಿ ಸೀತಾದರ್ಶನದ ಸಮಾಚಾರವನ್ನು ತಿಳಿಸಿದುದು
ಮೂಲಮ್ - 1
ಸುಗ್ರೀವೇಣೈವಮುಕ್ತಸ್ತು ಹೃಷ್ಟೋ ದಧಿಮುಖಃ ಕಪಿಃ ।
ರಾಘವಂ ಲಕ್ಷ್ಮಣಂ ಚೈವ ಸುಗ್ರೀವಂ ಚಾಭ್ಯವಾದಯತ್ ॥
ಅನುವಾದ
ವಾನರನಾದ ದಧಿಮುಖನು ಸುಗ್ರೀವನ ಆಜ್ಞೆಯನ್ನು ಹೊಂದಿ, ಸಂತೋಷಪಟ್ಟುಕೊಂಡು ರಾಮಲಕ್ಷ್ಮಣರಿಗೂ, ಸುಗ್ರೀವನಿಗೂ ಅಭಿವಾದನ ಮಾಡಿದನು.॥1॥
ಮೂಲಮ್ - 2
ಸ ಪ್ರಣಮ್ಯ ಚ ಸುಗ್ರೀವಂ ರಾಘವೌ ಚ ಮಹಾಬಲೌ ।
ವಾನರೈಃ ಸಹಿತೈಃ ಶೂರೈರ್ದಿವಮೇವೋತ್ಪಪಾತ ಹ ॥
ಅನುವಾದ
ರಾಜನಾದ ಸುಗ್ರೀವನಿಗೂ, ಮಹಾಬಲಶಾಲಿಗಳಾದ ರಾಮ-ಲಕ್ಷ್ಮಣರಿಗೂ ನಮಸ್ಕರಿಸಿ, ಬಳಿಕ ಆ ದಧಿಮುಖನು ಅನುಚರರೊಂದಿಗೆ ಆಕಾಶಕ್ಕೆ ನೆಗೆದನು.॥2॥
ಮೂಲಮ್ - 3
ಸ ಯಥೈವಾಗತಃ ಪೂರ್ವಂ ತಥೈವ ತ್ವರಿತಂ ಗತಃ ।
ನಿಪತ್ಯ ಗಗನಾದ್ಭೂಮೌ ತದ್ವನಂ ಪ್ರವಿವೇಶ ಹ ॥
ಅನುವಾದ
ಆ ದಧಿಮುಖನು ಹಿಂದೆ ಸುಗ್ರೀವನ ಬಳಿಗೆ ಬಂದ ಹಾಗೇ ತ್ವರಿತವಾಗಿ ಹಾರಿಹೋಗಿ ಆಕಾಶದಿಂದ ಭೂಮಿಗೆ ಇಳಿದು, ಮಧುವನವನ್ನು ಪ್ರವೇಶಿಸಿದನು.॥3॥
ಮೂಲಮ್ - 4
ಸ ಪ್ರವಿಷ್ಟೋ ಮಧುವನಂ ದದರ್ಶ ಹರಿಯೂಥಪಾನ್ ।
ವಿಮದಾನುತ್ಥಿತಾನ್ ಸರ್ವಾನ್ ಮೇಹಮಾನಾನ್ ಮಧೂದಕಮ್ ॥
ಅನುವಾದ
ಆ ವೇಳೆಗೆ ಕಪಿನಾಯಕರು ಕುಡಿದಿದ್ದ ಮಧುವನ್ನು ಮೂತ್ರದ ಮೂಲಕ ವಿಸರ್ಜಿಸುತ್ತಿದ್ದರು. ಹೀಗೆ ಎಲ್ಲರ ಅಮಲು ಇಳಿದು, ಸ್ವಸ್ಥಚಿತ್ತರಾಗಿದ್ದ ಅವರನ್ನು ದಧಿಮುಖನು ನೋಡಿದನು.॥4॥
ಮೂಲಮ್ - 5
ಸ ತಾನುಪಾಗಮದ್ವೀರೋ ಬದ್ಧ್ವಾ ಕರಪುಟಾಂಜಲಿಮ್
ಉವಾಚ ವಚನಂ ಶ್ಲಕ್ಷ್ಣಮಿದಂ ಹೃಷ್ಟವದಂಗದಮ್ ॥
ಅನುವಾದ
ಬಳಿಕ ವೀರನಾದ ಅವನು ಕೈಗಳೆರಡನ್ನು ಜೋಡಿಸಿ ಸಂತೋಷಭರಿತನಾಗಿ ಕಪಿ ನಾಯಕರ ಬಳಿಗೆ ಹೋದನು. ಅತ್ಯಂತ ಸಂತಸದ ಮುಖ ಭಾವದಿಂದ ಅಂಗದನ ಬಳಿ ಇಂತೆಂದನು.॥5॥
ಮೂಲಮ್ - 6
ಸೌಮ್ಯ ರೋಷೋ ನ ಕರ್ತವ್ಯೋ ಯದೇಭಿರಭಿವಾರಿತಃ
ಅಜ್ಞಾನಾದ್ರಕ್ಷಿಭಿಃ ಕ್ರೊಧಾದ್ಭವಂತಃ ಪ್ರತಿಷೇಧಿತಾಃ ॥
ಅನುವಾದ
ಸೌಮ್ಯನೇ! ಅಜ್ಞಾನದ ಕಾರಣದಿಂದ ಈ ವನಪಾಲಕರು ಕೋಪಗೊಂಡು ನಿಮ್ಮೆಲ್ಲರನ್ನೂ ತಡೆದರು. ಹೀಗೆ ಅವರು ತಿಳಿಯದೆ ನಿಮ್ಮನ್ನು ತಡೆದುದಕ್ಕಾಗಿ ನೀನು ನನ್ನ ಮೇಲಾಗಲೀ, ಇವರ ಮೇಲಾಗಲೀ ಕೋಪಗೊಳ್ಳಬಾರದು.॥6॥
ಮೂಲಮ್ - 7
ಯುವರಾಜಸ್ತ್ವ ಮೀಶಶ್ಚ ವನಸ್ಯಾಸ್ಯ ಮಹಾಬಲ ।
ಮೌರ್ಖ್ಯಾತ್ ಪೂರ್ವಂ ಕೃತೋ ।
ದೋಷಸ್ತಂ ಭವಾನ್ ಕ್ಷಂತುಮರ್ಹತಿ ॥
ಅನುವಾದ
ಎಲೈ ಬಲಶಾಲಿಯೇ! ನೀನು ಯುವರಾಜನು. ಈ ಮಧುವನಕ್ಕೆ ಅಧಿಪತಿಯು ಬಹಳ ದೂರ ಪ್ರಯಾಣಮಾಡಿದ ಕಾರಣ
ನೀವು ಬಹಳವಾಗಿ ಬಳಲಿರುವಿರಿ. ಆದುದರಿಂದ ನಿನ್ನದೇ ಆಗಿರುವ ಮಧುವನ್ನು ನೀನು ಯಥೇಚ್ಛವಾಗಿ ಕುಡಿಯಬಹುದು. ನಾನು ಕೇವಲ ಮೂರ್ಖತನದಿಂದ ನಿನ್ನ ಮೇಲೆ ಕೋಪಗೊಂಡೆನು. ಅದನ್ನು ನೀನು ಕ್ಷಮಿಸು.॥7॥
ಮೂಲಮ್ - 8
ಆಖ್ಯಾತಂ ಹಿ ಮಯಾ ಗತ್ವಾ ಪಿತೃವ್ಯಸ್ಯ ತವಾನಘ ।
ಇಹೋಪಯಾತಂ ಸರ್ವೇಷಾಮೇತೇಷಾಂ ವನಚಾರಿಣಾಮ್ ॥
ಮೂಲಮ್ - 9
ಸ ತ್ವದಾಗಮನಂ ಶ್ರುತ್ವಾ ಸಹೈಭಿರ್ಹರಿಯೂಥಪೈಃ ।
ಪ್ರಹೃಷ್ಟೋ ನ ತು ರುಷ್ಟೋಽಸೌ ವನಂ ಶ್ರುತ್ವಾ ಪ್ರಧರ್ಷಿತಮ್ ॥
ಅನುವಾದ
ಎಲೈ ಪಾಪರಹಿತನೇ! ನಾನು ನಿನ್ನ ಚಿಕ್ಕಪ್ಪನ ಬಳಿಗೆ ಹೋಗಿ ನೀವೆಲ್ಲರೂ ಬಂದಿರುವುದನ್ನು ಹೇಳಿದೆನು. ಈ ವಾನರ ಪ್ರಮುಖರೊಂದಿಗೆ ನೀವು ಬಂದಿರುವ ವಿಷಯವನ್ನು ಕೇಳಿ, ನಮ್ಮ ರಾಜನು ಸಂತೋಷಗೊಂಡನು. ಮಧುವನವನ್ನು ಧ್ವಂಸಮಾಡಿದ ವಾರ್ತೆಯನ್ನು ಕೇಳಿಯೂ, ವಾನರ ಪ್ರಭುವೂ, ಚಿಕ್ಕಪ್ಪನೂ ಆದ ಸುಗ್ರೀವನು ಕೋಪಗೊಳ್ಳಲಿಲ್ಲ. ನಿನ್ನ ಮೇಲೆ ಹೆಚ್ಚಾಗಿ ಸಂತೋಷಪಟ್ಟನು.॥8-9॥
ಮೂಲಮ್ - 10
ಪ್ರಹೃಷ್ಟೋ ಮಾಂ ಪಿತೃವ್ಯಸ್ತೇ ಸುಗ್ರೀವೋ ವಾನರೇಶ್ವರಃ ।
ಶೀಘ್ರಂ ಪ್ರೇಷಯ ಸರ್ವಾಂಸ್ತಾನಿತಿ ಹೋವಾಚ ಪಾರ್ಥಿವಃ ॥
ಅನುವಾದ
ಆ ಪ್ರಭುವು ತುಂಬಾ ಸಂತಸಗೊಂಡು ‘‘ಅವರೆಲ್ಲರನ್ನು ಬೇಗನೇ ಇಲ್ಲಿಗೆ ಕಳಿಸು’’ ಎಂದು ನನಗೆ ಆದೇಶಿಸಿರುವನು.॥10॥
ಮೂಲಮ್ - 11
ಶ್ರುತ್ವಾ ದಧಿಮುಖಸ್ಯೈ ತದ್ವಚನಂ ಶ್ಲಕ್ಷ್ಣ ಮಂಗದಃ ।
ಅಬ್ರವೀತ್ತಾನ್ ಹರಿಶ್ರೇಷ್ಠೋ ವಾಕ್ಯಂ ವಾಕ್ಯವಿಶಾರದಃ ॥
ಮೂಲಮ್ - 12
ಶಂಕೇ ಶ್ರುತೋಯಂ ವೃತ್ತಾಂತೋ ರಾಮೇಣ ಹರಿಯೂಥಪಾಃ ।
ತತ್ಕ್ಷಮಂ ನೇಹ ನಃ ಸ್ಥಾತುಂ ಕೃತೇ ಕಾರ್ಯೇ ಪರಂತಪಾಃ ॥
ಅನುವಾದ
ದಧಿಮುಖನು ಆಡಿದ ಈ ಮೃದುವಚನಗಳನ್ನು ಕೇಳಿ, ವಾಕ್ಯವಿಶಾರದನೂ, ವಾನರ ಪ್ರಮುಖನೂ ಆದ ಅಂಗದನು ತನ್ನ ಸಹಚರ ವಾನರರಿಗೆ ಮೃದುಮಧುರವಾಗಿ ಹೀಗೆ ಹೇಳಿದನು ಎಲೈ ವಾನರಯೋಧರೇ! ಈ ವೃತ್ತಾಂತವನ್ನು ಶ್ರೀರಾಮನೂ ಕೂಡ ಕೇಳಿರುವನೆಂದು ನಾನು ಭಾವಿಸುತ್ತೇನೆ. ಏಕೆಂದರೆ ಈ ದಧಿಮುಖನು ಅತ್ಯಂತ ಪ್ರಹೃಷ್ಟನಾಗಿ ನಮ್ಮೊಡನೆ ಮಾತಾಡುತ್ತಿದ್ದಾನೆ. ಎಲೈ ವೀರರೇ ಕಾರ್ಯ ಸಿದ್ಧಿಯಾದ ಬಳಿಕ ನಮಗೆ ಇಲ್ಲಿ ಒಂದು ಕ್ಷಣವೂ ಕೂಡ ಇರುವುದು ಯುಕ್ತವಲ್ಲ.॥11-12॥
ಮೂಲಮ್ - 13
ಪೀತ್ವಾ ಮಧು ಯಥಾಕಾಮಂ ವಿಶ್ರಾಂತಾ ವನಚಾರಿಣಃ ।
ಕಿಂ ಶೇಷಂ ಗಮನಂ ತತ್ರ ಸುಗ್ರೀವೋ ಯತ್ರ ಮೇ ಗುರುಃ ॥
ಅನುವಾದ
ವಾನರರೆಲ್ಲರೂ ಯಥೇಚ್ಛವಾಗಿ ಮಧುವನ್ನು ಪಾನಮಾಡಿರುವಿರಿ. ವಿಶ್ರಾಂತಿಯನ್ನು ಪಡೆದಿರುವಿರಿ. ಇನ್ನು ನಮಗೆ ಇಲ್ಲೇನು ಕೆಲಸವಿದೆ? ನಮ್ಮ ರಾಜನಾದ ಸುಗ್ರೀವನಿದ್ದೆಡೆಗೆ ಹೋಗಬೇಕಾದ ಕಾರ್ಯಮಾತ್ರ ಉಳಿದಿದೆ.॥13॥
ಮೂಲಮ್ - 14
ಸರ್ವೇ ಯಥಾ ಮಾಂ ವಕ್ಷ್ಯಂತಿ ಸಮೇತ್ಯ ಹರಿಯೂಥಪಾಃ ।
ತಥಾಸ್ಮಿ ಕರ್ತಾ ಕರ್ತವ್ಯೇ ಭವದ್ಭಿಃ ಪರವಾನಹಮ್ ॥
ಮೂಲಮ್ - 15
ನಾಜ್ಞಾಪಯಿತುಮೀಶೋಹಂ ಯುವರಾಜೋಽಸ್ಮಿ ಯದ್ಯಪಿ ।
ಅಯುಕ್ತಂ ಕೃತಕರ್ಮಾಣೋ ಯೂಯಂ ಧರ್ಷಯಿತುಂ ಮಯಾ ॥
ಅನುವಾದ
‘‘ಎಲೈ ವಾನರವೀರರೇ! ನಾನು ನಿಮ್ಮೆಲ್ಲರ ಅಧೀನನೇ ಆಗಿರುವೆನು. ನೀವೆಲ್ಲ ಸೇರಿ ಏನು ಮಾಡಬೇಕೆಂದು ನಿರ್ಣಯಿಸುವಿರೋ ಅದರಂತೆ ನಾನೂ ನಡೆದುಕೊಳ್ಳುವೆನು. ನಾನು ಯುವರಾಜನೇ ಆಗಿದ್ದರೂ ನಿಮಗೆ ಆಜ್ಞೆಯನ್ನು ನೀಡುವಷ್ಟು ಸ್ವತಂತ್ರವಲ್ಲ. ಮೇಲಾಗಿ ನಿಯೋಜಿಸಿದ ಕಾರ್ಯದಲ್ಲಿ ಕೃತಕೃತ್ಯರಾಗಿರುವ ನಿಮ್ಮನ್ನು ಹೀಗೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸುವುದೂ ಸರಿಯಲ್ಲ.’’॥14-15॥
ಮೂಲಮ್ - 16
ಬ್ರುವತಶ್ಚಾಂಗದಸ್ಯೈವಂ ಶ್ರುತ್ವಾ ವಚನಮವ್ಯಯಮ್ ।
ಪ್ರಹೃಷ್ಟಮನಸೋ ವಾಕ್ಯಮಿದಮೂಚುರ್ವನೌಕಸಃ ॥
ಮೂಲಮ್ - 17
ಏವಂ ವಕ್ಷ್ಯತಿ ಕೋ ರಾಜನ್ ಪ್ರಭುಃ ಸನ್ ವಾನರರ್ಷಭ ।
ಐಶ್ಚರ್ಯಮದಮತ್ತೋ ಹಿ ಸರ್ವೋಹಮಿತಿ ಮನ್ಯತೇ ॥
ಮೂಲಮ್ - 18
ತವ ಚೇದಂ ಸುಸದೃಶಂ ವಾಕ್ಯಂ ನಾನ್ಯಸ್ಯ ಕಸ್ಯಚಿತ್ ।
ಸಂನತಿರ್ಹಿ ತವಾಖ್ಯಾತಿ ಭವಿಷ್ಯಚ್ಛುಭಯೋಗ್ಯತಾಮ್ ॥
ಅನುವಾದ
ಅಂಗದ ಉತ್ತಮೋತ್ತಮವಾದ ಮಾತುಗಳನ್ನು ಕೇಳಿ ವಾನರರೆಲ್ಲರೂ ಪರಮ ಸಂತುಷ್ಟರಾಗಿ ಇಂತು ನುಡಿದರು ವಾನರೋತ್ತಮನಾದ ಎಲೈ ಯುವರಾಜಾ! ಈ ಮಾತುಗಳು ನಿನಗೆ ಅನುರೂಪವಾಗಿಯೇ ಇವೆ. ಪ್ರಭುವಾಗಿದ್ದುಕೊಂಡು ಯಾರೂ ಇಂತಹ ವಿನಮ್ರ ಮಾತುಗಳನ್ನು ಹೇಳುವುದಿಲ್ಲ. ಸಾಮಾನ್ಯವಾಗಿ ಐಶ್ಚರ್ಯಮದದ ಮತ್ತಿನಿಂದ ‘ಎಲ್ಲವೂ ನನ್ನಿಂದಲೇ ಆಯಿತು’ ಎಂದು ಭಾವಿಸುತ್ತಾರೆ. ಈ ನಿನ್ನ ವಿನಯವು ಮುಂದೆ ನಿನಗೆ ಶುಭೋದಯವು ತರಲಿದೆ ಎಂಬುದನ್ನು ಸೂಚಿಸುತ್ತದೆ.॥16-18॥
ಮೂಲಮ್ - 19
ಸರ್ವೇ ವಯಮಪಿ ಪ್ರಾಪ್ತಾಸ್ತತ್ರ ಗಂತುಂ ಕೃತಕ್ಷಣಾಃ ।
ಸ ಯತ್ರ ಹರಿವೀರಾಣಾಂ ಸುಗ್ರೀವಃ ಪತಿರವ್ಯಯಃ ॥
ಮೂಲಮ್ - 20
ತ್ವಯಾ ಹ್ಯನುಕ್ತೈರ್ಹರಿಭಿರ್ನೈವ ಶಕ್ಯಂ ಪದಾತ್ ಪದಮ್ ।
ಕ್ವಚಿದ್ಗಂತುಂ ಹರಿಶ್ರೇಷ್ಠ ಬ್ರೂಮಃ ಸತ್ಯಮಿದಂ ತು ತೇ ॥
ಅನುವಾದ
ನಿನ್ನೊಡನೆ ಇರುವ ನಾವೆಲ್ಲರೂ ಕೂಡ ಶುಭಲಕ್ಷ್ಮಣಸಂಪನ್ನನೂ, ವಾನರ ಯೋಧರಿಗೆ ನಿರಂತರ ಪ್ರಭುವಾದ ಸುಗ್ರೀವನ ಬಳಿಗೆ ಹೋಗಲು ಉತ್ಸುಕರಾಗಿದ್ದೇವೆ. ಎಲೈ ಶ್ರೇಷ್ಠಾ! ಆದರೆ ನಿನ್ನ ಅಪ್ಪಣೆಯಿಲ್ಲದೆ ಕಪಿನಾಯಕರಾರೂ ಒಂದು ಹೆಜ್ಜೆಯೂ ಮುಂದಿಡಲಾರರು. ಇದನ್ನು ನಾವು ಸತ್ಯವಾಗಿ ಹೇಳುತ್ತಿದ್ದೇವೆ.॥19-20॥
(ಶ್ಲೋಕ - 21
ಮೂಲಮ್
ಏವಂ ತು ವದತಾಂ ತೇಷಾಮಂಗದಃ ಪ್ರತ್ಯಭಾಷತ ।
ಬಾಢಂ ಗಚ್ಛಾಮ ಇತ್ಯುಕ್ತ್ವಾ ಉತ್ಪಪಾತ ಮಹೀತಲಾತ್ ॥
ಅನುವಾದ
ಹೀಗೆ ಅವರೆಲ್ಲರೂ ಒಕ್ಕೊರಳಿನಿಂದ ಹೇಳಲು, ಅಂಗದನು - ‘ಸರಿ, ನಾವಿನ್ನು ಹೊರಡೋಣ’ ಎಂದು ಅವರೆಲ್ಲರಿಗೂ ಸುಗ್ರೀವನ ಬಳಿಗೆ ಹೋಗಲು ಅನುಮತಿಯನ್ನಿತ್ತನು. ಒಡನೆಯೇ ಮಹಾಬಲಶಾಲಿಗಳಾದ ಎಲ್ಲ ಕಪಿವೀರರು ಒಂದೇ ನೆಗೆತಕ್ಕೆ ಆಕಾಶಕ್ಕೆ ಹಾರಿದರು.॥21॥
ಮೂಲಮ್ - 22
ಉತ್ಪತಂತಮನೂತ್ಪೇತುಃ ಸರ್ವೇ ತೇ ಹರಿಯೂಥಪಾಃ ।
ಕೃತ್ವಾಕಾಶಂ ನಿರಾಕಾಶಂ ಯಂತ್ರೋತ್ ಕ್ಷಿಪ್ತಾ ಇವಾಚಲಾಃ ॥
ಅನುವಾದ
ಆ ವಾನರರೆಲ್ಲರೂ ಹಾರುತ್ತಿರುವ ಅಂಗದನನ್ನು ಅನುಸರಿಸಿ, ಯಂತ್ರದಿಂದ ಚಿಮ್ಮಲ್ಪಟ್ಟ ಕಲ್ಲು ಬಂಡೆಗಳಂತೆ ಆಕಾಶದಲ್ಲಿ ಸ್ವಲ್ಪವೂ ಜಾಗವೇ ಇಲ್ಲದಂತೆ ವ್ಯಾಪಿಸಿಬಿಟ್ಟರು. ಅಂದರೆ ಆಕಾಶದಲ್ಲೆಲ್ಲ ಅವರೇ ಕಂಡು ಬರುತ್ತಿದ್ದರು.॥22॥
ಮೂಲಮ್ - 23
ಅಂಗದಂ ಪುರತಃ ಕೃತ್ವಾ ಹನುಮಂತಂ ಚ ವಾನರಮ್ ।
ತೇಂಬರಂ ಸಹಸೋತ್ಪತ್ಯ ವೇಗವಂತಃ ಪ್ಲವಂಗಮಾಃ ।
ವಿನದಂತೋ ಮಹಾನಾದಂ ಘನಾ ವಾತೇರಿತಾ ಯಥಾ ॥
ಅನುವಾದ
ಯುವರಾಜನಾದ ಅಂಗದನನ್ನೂ, ಕಪಿಶ್ರೇಷ್ಠನಾದ ಹನುಮಂತನನ್ನು ಮುಂದೆಮಾಡಿಕೊಂಡು, ರಿವ್ವನೆ ಆಕಾಶಕ್ಕೆಗರಿ ವಾಯುವಿನಿಂದ ಪ್ರೇರಿತವಾದ ಮೇಘಗಳಂತೆ ಗಟ್ಟಿಯಾಗಿ ಶಬ್ದಮಾಡುತ್ತಾ ಸುಗ್ರೀವನ ಬಳಿಗೆ ಸಾರಿದರು.॥23॥
ಮೂಲಮ್ - 24
ಅಂಗದೇ ಸಮನುಪ್ರಾಪ್ತೇ ಸುಗ್ರೀವೋ ವಾನರಾಧಿಪಃ ।
ಉವಾಚ ಶೋಕೋಪಹತಂ ರಾಮಂ ಕಮಲಲೋಚನಮ್ ॥
ಮೂಲಮ್ - 25
ಸಮಾಶ್ವಸಿಹಿ ಭದ್ರಂ ತೇ ದೃಷ್ಟಾ ದೇವೀ ನ ಸಂಶಯಃ ।
ನಾಗಂತುಮಿಹ ಶಕ್ಯಂ ತೈರತೀತೇ ಸಮಯೇ ಹಿ ನಃ ॥
ಅನುವಾದ
ಅಂಗದಾದಿಗಳು ತಮ್ಮ ಬಳಿಗೆ ಬರುತ್ತಿರುವುದನ್ನು ನೋಡಿ, ವಾನರೇಂದ್ರನಾದ ಸುಗ್ರೀವನು ಸೀತಾವಿರಹಶೋಕದಿಂದ ಪರಿತಪಿಸುತ್ತಿದ್ದ ಕಮಲಾಕ್ಷನಾದ ಶ್ರೀರಾಮನಲ್ಲಿ ಹೇಳಿದನು ‘‘ರಾಘವಾ! ಸಮಾಧಾನವನ್ನು ಹೊಂದು, ನಿನಗೆ ಮಂಗಳವಾಗಲೀ; ಸೀತೆಯನ್ನು ನೋಡಿಕೊಂಡೇ ಇದೋ, ಅಂಗದಾದಿಗಳು ಬರುತ್ತಿದ್ದಾರೆ. ಇದರಲ್ಲಿ ಸಂದೇಹವೇ ಇಲ್ಲ. ಎಲೈ ಶುಭದರ್ಶನನೇ! ಹಾಗಿಲ್ಲದಿದ್ದರೆ ಅವಧಿತೀರಿದ ಬಳಿಕ ಇವರುಗಳು ಇಲ್ಲಿಗೆ ಬರುವುದು ಅಸಂಭವವೇ.॥24-25॥
ಮೂಲಮ್ - 26
ನ ಮತ್ಸಕಾಶಮಾಗಚ್ಛೇತ್ ಕೃತ್ಯೇ ಹಿ ವಿನಿಪಾತಿತೇ ।
ಯುವರಾಜೋ ಮಹಾಬಾಹುಃ ಪ್ಲವತಾಂ ಪ್ರವರೋಂಗದಃ ॥
ಅನುವಾದ
ಅಂಗದನ ಅಮಿತೋತ್ಸಾಹವನ್ನು ನೋಡಿದರೆ ಇವರು ಕೃತಕೃತ್ಯರಾಗಿಯೇ ಬಂದಿರುವರೆಂದು ನನಗೆ ಅನಿಸುತ್ತದೆ. ಕಾರ್ಯವೇನಾದರು ಕೆಟ್ಟುಹೋಗಿದ್ದರೆ, ಅಥವಾ ಅವರು ಕೃತಕೃತ್ಯರಾಗದಿದ್ದರೆ ಯುವರಾಜನಾದ ಅಂಗದನು ನನ್ನ ಬಳಿಗೆ ಖಂಡಿತವಾಗಿ ಬರುತ್ತಿರಲಿಲ್ಲ. ಮಹಾಬಾಹುವಾದ, ಯುವರಾಜನಾದ ಅಂಗದನು ಹಾರುವವರಲ್ಲಿ ಶ್ರೇಷ್ಠನಾಗಿರುವನು.॥26॥
ಮೂಲಮ್ - 27
ಯದ್ಯಪ್ಯಕೃತಕೃತ್ಯಾನಾಮೀದೃಶಃ ಸ್ಯಾದುಪಕ್ರಮಃ ।
ಭವೇತ್ ಸ ದೀನವದನೋ ಭ್ರಾಂತವಿಪ್ಲುತಮಾನಸಃ ॥
ಅನುವಾದ
ವಾನರರೇನಾದರೂ ಕೃತಕೃತ್ಯರಾಗದೆ ಇದ್ದಿದ್ದರೆ ಹೀಗೆ ಅವರು ಅಟ್ಟಹಾಸದಿಂದ ಬರಲು ಸಾಧ್ಯವಾಗುತ್ತಿರಲಿಲ್ಲ. ಆಗ ಅಂಗದನು ದೈನ್ಯವಾದ ಮುಖವುಳ್ಳವನೂ, ಭ್ರಾಂತಚಿತ್ತನೂ, ಆಗಿರುತ್ತಿದ್ದನು.॥27॥
ಮೂಲಮ್ - 28
ಪಿತೃಪೈತಾಮಹಂ ಚೈತತ್ ಪೂರ್ವಕೈರಭಿರಕ್ಷಿತಮ್ ।
ನ ಮೇ ಮಧುವನಂ ಹನ್ಯಾದಹೃಷ್ಟಃ ಪ್ಲವಗೇಶ್ವರಃ ॥
ಅನುವಾದ
ಅವರೇನಾದರೂ ಸೀತೆಯನ್ನು ಕಾಣದೇ ಇಲ್ಲಿಗೆ ಬಂದಿದ್ದರೆ, ಪಿತೃ-ಪಿತಾಮಹಸಂಬಂಧವಾದ ಹಿಂದಿನವರಿಂದಲೂ ರಕ್ಷಿಸಲ್ಪಟ್ಟ ಮಧುವನವನ್ನು ಹೀಗೆ ಧ್ವಂಸ ಮಾಡುತ್ತಿರಲಿಲ್ಲ. (ಏಕೆಂದರೆ ಅಂಗದನು ಯುವ ರಾಜನಲ್ಲವೆ?) ॥28॥
ಮೂಲಮ್ - 29
ಕೌಸಲ್ಯಾ ಸುಪ್ರಜಾ ರಾಮ ಸಮಾಶ್ವಸಿಹಿ ಸುವ್ರತ ।
ದೃಷ್ಟಾ ದೇವೀ ನ ಸಂದೇಹೋ ನ ಚಾನ್ಯೇನ ಹನೂಮತಾ ॥
ಅನುವಾದ
ಕೌಸಲ್ಯಾದೇವಿಗೆ ಆನಂದವನ್ನು ಕೊಡುವಂತಹ ರಾಮಾ! ನಿಯಮನಿಷ್ಠೆಗಳುಳ್ಳವನೇ! ಸಮಾಧಾನವನ್ನುಹೊಂದು. ಸೀತಾದೇವಿಯನ್ನು ಕಂಡುಬಂದಿರುವುದರಲ್ಲಿ ಸಂದೇಹವೇ ಇಲ್ಲ. ಅವಳನ್ನು ಹನುಮಂತನೇ ದರ್ಶಿಸಿರುವನು.॥29॥
ಮೂಲಮ್ - 30
ನ ಹ್ಯನ್ಯಃ ಕರ್ಮಣೋ ಹೇತುಃ ಸಾಧನೇಸ್ಯ ಹನೂಮತಃ ।
ಹನೂಮತಿ ಹಿ ಸಿದ್ಧಿಶ್ಚ ಮತಿಶ್ಚ ಮತಿಸತ್ತಮ ।
ವ್ಯವಸಾಯಶ್ಚ ವೀಯಂ ಚ ಸೂರ್ಯೇ ತೇಜ ಇವ ಧ್ರುವಮ್ ॥
ಅನುವಾದ
ಎಲೈ ಪ್ರಜ್ಞಾಶಾಲಿಯೇ! ಈ ಕಾರ್ಯವನ್ನು ಸಫಲಗೊಳಿಸುವಲ್ಲಿ ಹನುಮಂತನಲ್ಲದೇ ಬೇರೆ ಯಾರೂ ಕಾರಣರಲ್ಲ. ಏಕೆಂದರೆ, ಸೂರ್ಯನಲ್ಲಿ ಸಹಜವಾಗಿ ತೇಜವು ಇರುವಂತೆ ಹನುಮಂತನಲ್ಲಿ ಕಾರ್ಯದಕ್ಷತೆ. ಪ್ರಜ್ಞೆ, ಪ್ರಯತ್ನಶೀಲತೆ, ಪರಾಕ್ರಮಗಳು ಸಹಜವಾಗಿವೆ.॥30॥
ಮೂಲಮ್ - 31
ಜಾಂಬವಾನ್ಯತ್ರ ನೇತಾ ಸ್ಯಾದಂಗದಶ್ಚ ಬಲೇಶ್ವರಃ ।
ಹನುಮಾಂಶ್ಚಾಪ್ಯಧಿಷ್ಠಾತಾ ನ ತಸ್ಯ ಗತಿರನ್ಯಥಾ ॥
ಮೂಲಮ್ - 32
ಮಾ ಭೂಶ್ಚಿಂತಾಸಮಾಯುಕ್ತಃ ಸಂಪ್ರತ್ಯಮಿತವಿಕ್ರಮ ।
ತತಃ ಕಿಲಕಿಲಾಶಬ್ದಂ ಶುಶ್ರಾವಾಸನ್ನಮಂಬರೇ ॥
ಅನುವಾದ
ಯಾವುದೇ ಕಾರ್ಯಸಾಧನೆಯಲ್ಲಿ ಮಹಾವೀರನಾದ ಜಾಂಬವಂತನು ನೇತಾರನೂ, ಮಹಾಬಲಶಾಲಿಯಾದ ಅಂಗದನು ಸೇನಾನಾಯಕನೂ, ವಾಯುಸುತನಾದ ಹನುಮಂತನು ಕಾರ್ಯಸಾಧಕನೂ ಆಗಿರುವರೋ ಆ ಕಾರ್ಯವು ಸಿದ್ಧಿಸಲೇಬೇಕು. ಅದರಿಂದಾಗಿ ಅಮಿತ ಪರಾಕ್ರಮಿಶಾಲಿಯಾದ ಎಲೈ ಶ್ರೀರಾಮಾ! ಇನ್ನಾದರೂ ನೀನು ಚಿಂತಿಸಬೇಡ.॥31-32॥
ಮೂಲಮ್ - 33
ಹನುಮತ್ಕರ್ಮದೃಪ್ತಾನಾಂ ನರ್ದತಾಂ ಕಾನನೌಕಸಾಮ್ ।
ಕಿಷ್ಕಿಂಧಾಮುಪಯಾತಾನಾಂ ಸಿದ್ಧಿಂ ಕಥಯತಾಮಿವ ॥
ಮೂಲಮ್ - 34
ತತಃ ಶ್ರುತ್ವಾ ನಿನಾದಂ ತಂ ಕಪೀನಾಂ ಕಪಿಸತ್ತಮಃ ।
ಆಯತಾಂಚಿತಲಾಂಗೂಲಃ ಸೋಭವದ್ ಹೃಷ್ಟಮಾನಸಃ ॥
ಅನುವಾದ
ಸುಗ್ರೀವನು ಶ್ರೀರಾಮನಿಗೆ ಹೀಗೆ ಸಮಾಧಾನವನ್ನು ಹೇಳುತ್ತಿರುವಾಗಲೇ-ಹನುಮಂತನು ತನ್ನ ಕಾರ್ಯವನ್ನು ಸಾಧಿಸಿ ಬಂದಿರುವನೆಂದು ಹೇಳುತ್ತಿರುವರೋ ಎಂಬಂತೆ, ಗರ್ಜನೆ ಮಾಡಿಕೊಂಡು ಕಿಷ್ಕಿಂಧಾಪಟ್ಟಣದ ಕಡೆಗೆ ಬರುತ್ತಿದ್ದ ಕಪಿನಾಯಕರ ಕಿಲ-ಕಿಲಶಬ್ದಗಳನ್ನು ಸುಗ್ರೀವನು ಹತ್ತಿರದಿಂದಲೇ ಕೇಳಿದನು. ಬಳಿಕ ವಾನರ ಪ್ರಭುವಾದ ಸುಗ್ರೀವನು ಕಪೀಶ್ವರರ ನಿನಾದವನ್ನು ಕೇಳಿ, ತನ್ನ ಬಾಲವನ್ನು ನೆಟ್ಟಗೆ ಮೇಲಕ್ಕೆತ್ತಿ ಪರಮಾನಂದವನ್ನು ಪ್ರಕಟಿಸಿದನು.॥33-34॥
ಮೂಲಮ್ - 35
ಆಜಗ್ಮು ಸ್ತೇಪಿ ಹರಯೋ ರಾಮದರ್ಶನಕಾಂಕ್ಷಿಣಃ ।
ಅಂಗದಂ ಪುರತಃ ಕೃತ್ವಾ ಹನೂಮಂತಂ ಚ ವಾನರಮ್ ॥
ಅನುವಾದ
ಶ್ರೀರಾಮನ ದರ್ಶನಾಕಾಂಕ್ಷಿಗಳಾದ ಆ ಎಲ್ಲ ಕಪಿನಾಯಕರೂ ಅಂಗದನನ್ನೂ, ಹನುಮಂತನನ್ನೂ ಮುಂದೆ ಮಾಡಿಕೊಂಡು ಆಗಮಿಸಿದರು.॥35॥
ಮೂಲಮ್ - 36
ತೇಂಗದಪ್ರಮುಖಾ ವೀರಾಃ ಪ್ರಹೃಷ್ಟಾಶ್ಚ ಮುದಾನ್ವಿತಾಃ ।
ನಿಪೇತುರ್ಹರಿರಾಜಸ್ಯ ಸಮೀಪೇ ರಾಘವಸ್ಯ ಚ ॥
ಅನುವಾದ
ಮಹಾವೀರರಾದ ಆ ಅಂಗದಾದಿ ಪ್ರಮುಖರು ಹೆಚ್ಚಾದ ಸಂತೋಷಭರಿತರಾಗಿ, ಕಪಿರಾಜನಾದ ಸುಗ್ರೀವನು, ಪುರುಷೋತ್ತಮನಾದ ಶ್ರೀರಾಮನು ಇದ್ದ ಪ್ರದೇಶದಲ್ಲಿ ಬಂದಿಳಿದರು.॥36॥
ಮೂಲಮ್ - 37
ಹನುಮಾಂಶ್ಚ ಮಹಾಬಾಹುಃ ಪ್ರಣಮ್ಯ ಶಿರಸಾ ತತಃ ।
ನಿಯತಾಮಕ್ಷತಾಂ ದೇವೀಂ ರಾಘವಾಯ ನ್ಯವೇದಯತ್ ॥
ಅನುವಾದ
ಮಹಾಬಾಹುವಾದ ಹನುಮಂತನು ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ‘‘ಸಾಧ್ವಿಯಾದ ಸೀತಾದೇವಿಯೂ ಕ್ಷೇಮವಾಗಿರುವಳು’’ ಎಂದು ವಿನಂತಿಸಿಕೊಂಡನು.॥37॥
ಮೂಲಮ್ - 38
ದೃಷ್ಟಾ ದೇವಿತಿ ಹನುಮದ್ವದನಾದಮೃತೋಪಮಮ್ ।
ಆಕರ್ಣ್ಯ ವಚನಂ ರಾಮೋ ಹರ್ಷಮಾಪ ಸಲಕ್ಷಣಃ ॥
ಅನುವಾದ
ಹನುಮಂತನ ಮುಖಾರವಿಂದ ಬಂದ ‘‘ದೃಷ್ಟಾದೇವೀ - ಸೀತೆಯನ್ನು ಕಂಡೆನು’’ ಈ ಅಮೃತೋಪಮವಾದ ಮಾತನ್ನು ಕೇಳಿ ರಾಮ-ಲಕ್ಷ್ಮಣರಿಬ್ಬರೂ ಪರಮಸಂತುಷ್ಟರಾದರು.॥38॥
ಮೂಲಮ್ - 39
ನಿಶ್ಚಿತಾರ್ಥಸ್ತತಃ ತಸ್ಮಿನ್ ಸುಗ್ರೀವಃ ಪವನಾತ್ಮ ಜೇ ।
ಲಕ್ಷ್ಮಣಃ ಪ್ರೀತಿಮಾನ್ ಪ್ರೀತಂ ಬಹುಮಾನಾದವೈಕ್ಷತ ॥
ಅನುವಾದ
ಹನುಮಂತನ ವಿಷಯದಲ್ಲಿ ನಿಶ್ಚಿತವಾದ ಅಭಿಪ್ರಾಯವನ್ನು ಹೊಂದಿದ್ದ ಹಾಗೂ ಅವನ ಕಾರ್ಯದಿಂದ ಸುಪ್ರೀತನಾಗಿದ್ದ ಸುಗ್ರೀವನನ್ನು ಲಕ್ಷ್ಮಣನು ಅತ್ಯಂತಗೌರವ ಭಾವನೆಯಿಂದ ಕಂಡನು.*॥39॥
ಟಿಪ್ಪನೀ
- ಲಕ್ಷ್ಮಣನಿಗೆ ಸಂತೋಷವಾಗಲು ಮುಖ್ಯಕಾರಣಗಳು-ರಾಮಕಾರ್ಯಕ್ಕಾಗಿ ಹನುಮಂತನನ್ನು ಕಳಿಸಿದುದು, ಸುಗ್ರೀವನೇ. ಅಲ್ಲದೆ ಅವನು ಕಪಿಗಳ ರಾಜನಾಗಿದ್ದನು. ಹನುಮಂತನು ಈ ಕಾರ್ಯವನ್ನು ಸಾಧಿಸಬಲ್ಲನೆಂಬ ವಿಶ್ವಾಸವುಳ್ಳವನೂ ಸುಗ್ರೀವನೇ. ಅದರಿಂದ ಗೌರವಾದರಗಳಿಗೆ ಅರ್ಹನಾಗಿದ್ದಾನೆ.
ಮೂಲಮ್ - 40
ಪ್ರೀತ್ಯಾ ಚ ರಮಮಾಣೋಥ ರಾಘವಃ ಪರವೀರಹಾ ।
ಬಹುಮಾನೇನ ಮಹತಾ ಹನುಮಂತಮವೈಕ್ಷತ ॥
ಅನುವಾದ
ಶತ್ರುಸಂಹಾರಕನಾದ ಶ್ರೀರಾಮನು ಹನುಮಂತನ ವಿಷಯದಲ್ಲಿ ಅಪಾರವಾದ ಪ್ರೀತಿಯನ್ನು ಹೊಂದಿ ಅವನನ್ನು ಅತ್ಯಂತ ಗೌರವಭಾವದಿಂದ ವೀಕ್ಷಿಸಿದನು.॥40॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಚತುಃಷಷ್ಠಿತಮಃ ಸರ್ಗಃ ॥ 64 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಅರವತ್ತನಾಲ್ಕನೆಯ ಸರ್ಗವು ಮುಗಿಯಿತು.