०६३ सुग्रीव-दधिमुखसंवादः

वाचनम्
ಭಾಗಸೂಚನಾ

ಅಂಗದಾದಿಗಳು ಮಧುವನವನ್ನು ಧ್ವಂಸಮಾಡಿದ ವಾರ್ತೆಯನ್ನು ದಧಿಮುಖನು ಸುಗ್ರೀವನಿಗೆ ಹೇಳಿದುದು, ಅದರಿಂದ ಅಂಗದಾದಿಗಳು ಕೃತಕೃತ್ಯರಾಗಿ ಬಂದಿರುವರೆಂದು ಸುಗ್ರೀವನು ಊಹಿಸಿದುದು

ಮೂಲಮ್ - 1

ತತೋ ಮೂರ್ಧ್ನಾ ನಿಪತಿತಂ ವಾನರಂ ವಾನರರ್ಷಭಃ ।
ದೃಷ್ಟೈವೋದ್ವಿಗ್ನ ಹೃದಯೋ ವಾಕ್ಯಮೇತದುವಾಚ ಹ ॥

ಅನುವಾದ

ವಾನರಪ್ರಭುವಾದ ಸುಗ್ರೀವನು ತನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದ ದಧಿಮುಖನನ್ನು ನೋಡಿ, ಉದ್ವಿಗ್ನಚಿತ್ತನಾಗಿ ಇಂತೆಂದನು—॥1॥

ಮೂಲಮ್ - 2

ಉತ್ತಿಷ್ಠೋತ್ತಿಷ್ಠ ಕಸ್ಮಾತ್ತ್ವಂ ಪಾದಯೋಃ ಪತಿತೋ ಮಮ ।
ಅಭಯಂ ತೇ ಭವೇದ್ವೀರ ಸರ್ವಮೇವಾಭಿಧೀಯತಾಮ್ ॥

ಅನುವಾದ

ದಧಿಮುಖನೇ! ಏಳು! ಎದ್ದೇಳು! ಹಿರಿಯವನಾದ ನೀನು ನನ್ನ ಕಾಲುಗಳಿಗೆ ಏಕೆ ನಮಸ್ಕರಿಸುತ್ತಿರುವೆ? ನಿನಗೆ ಅಭಯವನ್ನು ನೀಡಿರುವೆನು. ಏನು ನಡೆದಿದೆಯೇ ಅದೆಲ್ಲವನ್ನು ಸಮಗ್ರವಾಗಿ ಹೇಳು.॥2॥

ಮೂಲಮ್ - 3

ಕಿಂ ಸಂಭ್ರಮಾದ್ದಿತಂ ಕೃತ್ಸ್ನಂ ಬ್ರೂಹಿ ಯದ್ವಕ್ತು ಮರ್ಹಸಿ ।
ಕಚ್ಚಿನ್ಮಧುವನೇ ಸ್ವಸ್ತಿ ಶ್ರೋತುವಿಚ್ಛಾಮಿ ವಾನರ ॥

ಅನುವಾದ

ಎಲೈ ದಧಿಮುಖನೇ! ಏಕೆ ಭಯಪಡುವೆ? ನೀನು ಹೇಳಬೇಕಾಗಿರುವುದನ್ನು ಧೈರ್ಯವಾಗಿ ಹೇಳು ಮಧುವನದಲ್ಲಿ ಎಲ್ಲವೂ ಸುವ್ಯವಸ್ಥೆಯಿಂದ ಇರುವುದಲ್ಲವೆ? ಇವೆಲ್ಲವನ್ನು ನಿನ್ನಿಂದ ಕೇಳ ಬಯಸುತ್ತೇನೆ.॥3॥

ಮೂಲಮ್ - 4

ಸ ತು ವಿಶ್ವಾಸಿತಸ್ತೇನ ಸುಗ್ರೀವೇಣ ಮಹಾತ್ಮ ನಾ ।
ಉತ್ಥಾಯ ಸುಮಹಾಪ್ರಾಜ್ಞೋ ವಾಕ್ಯಂ ದಧಿಮುಖೋಬ್ರವೀತ್ ॥

ಅನುವಾದ

ಮಹಾತ್ಮನಾದ ಸುಗ್ರೀವನು ದಧಿಮುಖನಿಗೆ ಹೀಗೆ ಆಶ್ವಾಸನೆಯನ್ನಿತ್ತ ಬಳಿಕ, ಮಹಾ ಪ್ರಾಜ್ಞನಾದ ಅವನು ಎದ್ದು ಹೀಗೆ ಹೇಳತೊಡಗಿದನು.॥4॥

ಮೂಲಮ್ - 5

ನೈವರ್ಕ್ಷರಜಸಾ ರಾಜನ್ನ ತ್ವಯಾ ನಾಪಿ ವಾಲಿನಾ ।
ವನಂ ನಿಸೃಷ್ಟಪೂರ್ವಂ ಹಿ ಭಕ್ಷಿತಂ ತಚ್ಛ ವಾನರೈಃ ॥

ಅನುವಾದ

ಮಹಾರಾಜಾ! ನಿಮ್ಮ ತಂದೆ ಋಕ್ಷರಜಸನಾಗಲೀ, ನಿನ್ನಣ್ಣನಾದ ವಾಲಿಯಾಗಲೀ, ನಿನ್ನ ಆಳ್ವಿಕೆಯಲ್ಲಾಗಲೀ, ಇಷ್ಟರವರೆಗೆ ಮಧುವನವನ್ನು ಯಥೇಚ್ಛವಾಗಿ ಭಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆದರೆ ಆ ವನವನ್ನು ಇಂದು ವಾನರರು ಭಗ್ನಗೊಳಿಸಿದರು.॥5॥

ಮೂಲಮ್ - 6

ಏಭಿಃ ಪ್ರಧರ್ಷಿತಾಶ್ಚೆವ ವಾನರಾ ವನರಕ್ಷಿಭಿಃ ।
ಮಧೂನ್ಯಚಿಂತಯಿತ್ವೇಮಾನ್ ಭಕ್ಷಯಂತಿ ಪಿಬಂತಿ ಚ ॥

ಅನುವಾದ

ನಾನು ನನ್ನ ಈ ಸೇವಕರೊಡನೆ ಅವರನ್ನು ತಡೆಯಲು ಬಹಳವಾಗಿ ಪ್ರಯತ್ನಿಸಿದೆ. ಆದರೆ ಅವರು ನಮ್ಮನ್ನು ಲೆಕ್ಕಿಸದೆ ವನದಲ್ಲಿದ್ದ ಮಧುವನ್ನೆಲ್ಲ ಕುಡಿದುಬಿಟ್ಟರು. ಹಣ್ಣುಗಳನ್ನೆಲ್ಲ ತಿಂದುಬಿಟ್ಟರು.॥6॥

ಮೂಲಮ್ - 7

ಶಿಷ್ಟಮತ್ರಾಪವಿಧ್ಯಂತಿ ಭಕ್ಷಯಂತಿ ತಥಾಪರೇ ।
ನಿವಾರ್ಯಮಾಣಾಸ್ತೇ ಸರ್ವೇ ಭ್ರುಕುಟಿಂ ದರ್ಶಯಂತಿ ಹಿ ॥

ಅನುವಾದ

ಕೆಲವರು ಮಧುವನ್ನು ಕುಡಿದು, ಮಿಕ್ಕಿದುದನ್ನು ಅಲ್ಲಲ್ಲೇ ಎಸೆದುಬಿಡುತ್ತಿದ್ದರು. ಮತ್ತೆ ಕೆಲವರು ಭಕ್ಷಿಸುತ್ತಿದ್ದಾರೆ. ಕೆಲವರು ಪಡೆಯಲು ಬಳಿಗೆ ಹೋದವರನ್ನು ಹುಬ್ಬುಗಂಟಿಕ್ಕಿ ಬೆದರಿಸುತ್ತಿದ್ದರು.॥7॥

ಮೂಲಮ್ - 8

ಇಮೇ ಹಿ ಸಂರಬ್ಧ ತರಾಸ್ತಥಾ ತೈಃ ಸಂಪ್ರಧರ್ಷಿತಾಃ ।
ವಾರಯಂತೋ ವನಾತ್ತಸ್ಮಾತ್ ಕ್ರುದ್ಧೆರ್ವಾನರಪುಂಗವೈಃ ॥

ಅನುವಾದ

ಅವರ ಈ ಹೀನಕಾರ್ಯದಿಂದ ಕೋಪಗೊಂಡ ನಮ್ಮ ಕಾವಲುಗಾರರು ಅವರೊಡನೆ ಸಂಘರ್ಷಿಸಿದರು. ಕ್ರುದ್ಧರಾಗಿದ್ದ ಅವರೆಲ್ಲರೂ ನಮ್ಮನ್ನು ಮಧುವನದಿಂದ ಹೊರಗಟ್ಟಿದರು.॥8॥

ಮೂಲಮ್ - 9

ತತಸ್ತೈರ್ಬಹುಭಿರ್ವೀರೈರ್ವಾನರೈರ್ವಾನರರ್ಷಭ ।
ಸಂರಕ್ತನಯನೈಃ ಕ್ರೋಧಾದ್ಧರಯಃ ಪ್ರವಿಚಾಲಿತಾಃ ॥

ಅನುವಾದ

ಎಲೈ ಕಪಿರಾಜನೇ! ಬಳಿಕ ಅಂಗದಾದಿ ವಾನರ ಪ್ರಮುಖ ವೀರರು ಹೆಚ್ಚು ಮಂದಿಯಿದ್ದರು. ಅವರೆಲ್ಲರೂ ಕ್ರೋಧಾವೇಶದಿಂದ ಕಣ್ಣುಗಳನ್ನು ಕೆಂಪಗಾಗಿಸಿ ವನಪಾಲಕರಾದ ನಮ್ಮನ್ನು ಚೆನ್ನಾಗಿ ಥಳಿಸಿದರು.॥9॥

ಮೂಲಮ್ - 10

ಪಾಣಿಭಿರ್ನಿಹತಾಃ ಕೇಚಿತ್ ಕೇಚಿಜ್ಜಾನುಭಿರಾಹತಾಃ ।
ಪ್ರಕೃಷ್ಟಾಶ್ಚ ಯಥಾಕಾಮಂ ದೇವಮಾರ್ಗಂ ಚ ದರ್ಶಿತಾಃ ॥

ಅನುವಾದ

ಅವರು ನಮ್ಮ ಸೇವಕರನ್ನು ಕೈಗಳಿಂದಲೇ ಪ್ರಹರಿಸುತ್ತಿದ್ದರು. ಕೆಲವರು ಮೊಣಕಾಲುಗಳ ಮಧ್ಯದಲ್ಲಿ ಅವಚಿ, ಅತ್ತಲಿತ್ತ ಎಳೆದಾಡುತ್ತಿದ್ದರು. ಕೆಲವರು ಮನಬಂದಂತೆ ಆಕಾಶವನ್ನು ತೋರಿ ಮೇಲಕ್ಕೆಸೆಯುತ್ತಿದ್ದರು.॥10॥

ಮೂಲಮ್ - 11

ಏವಮೇತೇ ಹತಾಃ ಶೂರಾಸ್ತ್ವಯಿ ತಿಷ್ಠತಿ ಭರ್ತರಿ ।
ಕೃತ್ಸ್ನಂ ಮಧುವನಂ ಚೈವ ಪ್ರಕಾಮಂ ತೈಃ ಪ್ರಭಕ್ಷ್ಯತೇ ॥

ಅನುವಾದ

ನಿನ್ನಂತಹ ಒಡೆಯನಿರುವಾಗಲೂ ನಮ್ಮಲ್ಲಿ ಅನೇಕ ಶೂರರು ಅಸುನೀಗಿದರು. ಮಧುವನದಲ್ಲಿದ್ದ ಎಲ್ಲ ಮಧುವನ್ನು ಉಚ್ಛೃಂಖಲರಾಗಿ ಕುಡಿಯುತ್ತಲೇ ಇದ್ದಾರೆ. ಹಣ್ಣುಗಳನ್ನು ತಿನ್ನುತ್ತಲೇ ಇದ್ದಾರೆ.॥11॥

ಮೂಲಮ್ - 12

ಏವಂ ವಿಜ್ಞಾಪ್ಯಮಾನಂ ತು ಸುಗ್ರೀವಂ ವಾನರರ್ಷಭಮ್ ।
ಅಪೃಚ್ಛತ್ತಂ ಮಹಾಪ್ರಾಜ್ಞೋ ಲಕ್ಷ್ಮಣಃ ಪರವೀರಹಾ ॥

ಅನುವಾದ

ದಧಿಮುಖನು ಸುಗ್ರೀವರಾಜನ ಮುಂದೆ ಹೀಗೆ ವಿಜ್ಞಾಪಿಸಿಕೊಳ್ಳುತ್ತಿದ್ದಾಗ, ಶತ್ರುಹಂತಕನಾದ, ಮಹಾಪ್ರಾಜ್ಞನಾದ ಲಕ್ಷ್ಮಣ ಸ್ವಾಮಿಯು ಆ ವಾನರ ಪ್ರಭುವನ್ನು ಇಂತು ಪ್ರಶ್ನಿಸಿದನು.॥12॥

ಮೂಲಮ್ - 13

ಕಿಮಯಂ ವಾನರೋ ರಾಜನ್ ವನಪಃ ಪ್ರತ್ಯುಪಸ್ಥಿತಃ ।
ಕಂ ಚಾರ್ಥಮಭಿನಿರ್ದಿಶ್ಯ ದುಃಖಿತೋ ವಾಕ್ಯಮಬ್ರವೀತ್ ॥

ಅನುವಾದ

ಎಲೈ ವಾನರರಾಜನೇ! ವನಪಾಲಕನಾದ ಈ ವಾನರನು ಇಲ್ಲಿಗೇಕೆ ಬಂದಿರುವನು? ಇವನ ದುಃಖಕ್ಕೆ ಕಾರಣವೇನು? ಯಾವ ವಿಷಯವಾಗಿ ನಿನ್ನೊಡನೆ ಮಾತಾಡುತ್ತಿದ್ದಾನೆ?॥13॥

ಮೂಲಮ್ - 14

ಏವಮುಕ್ತಸ್ತು ಸುಗ್ರೀವೋ ಲಕ್ಷ್ಮಣೇನ ಮಹಾತ್ಮನಾ ।
ಲಕ್ಷ್ಮಣಂ ಪ್ರತ್ಯುವಾಚೇದಂ ವಾಕ್ಯಂ ವಾಕ್ಯವಿಶಾರದಃ ॥

ಅನುವಾದ

ಮಹಾತ್ಮನಾದ ಲಕ್ಷ್ಮಣನು ಈ ವಿಧವಾಗಿ ಪ್ರಶ್ನಿಸಿದಾಗ, ವಾಕ್ಯವಿಶಾರದನಾದ ಸುಗ್ರೀವನು ಹೀಗೆ ಉತ್ತರಿಸಿದನು.॥14॥

ಮೂಲಮ್ - 15

ಆರ್ಯ ಲಕ್ಷ್ಮಣ ಸಂಪ್ರಾಹ ವೀರೋ ದಧಿಮುಖಃ ಕಪಿಃ ।
ಅಂಗದಪ್ರಮುಖೈರ್ವೀರೈರ್ಭಕ್ಷಿತಂ ಮಧು ವಾನರೈಃ ॥

ಅನುವಾದ

ಪೂಜ್ಯನಾದ ಲಕ್ಷ್ಮಣಾ! ಅಂಗದನೇ ಮೊದಲಾದ ವೀರರು ಮಧುವನದಲ್ಲಿದ್ದ ಮಧುವನ್ನು ಪಾನಮಾಡಿ, ಫಲಗಳನ್ನು ಭಕ್ಷಿಸಿದರೆಂದು ಈ ದಧಿಮುಖನು ಹೇಳುತ್ತಿದ್ದಾನೆ.॥15॥

ಮೂಲಮ್ - 16

ವಿಚಿತ್ಯ ದಕ್ಷಿಣಾಮಾಶಾಮಾಗತೈರ್ಹರಿಪುಂಗವೈಃ ।
ನೈಷಾಮಕೃತಕೃತ್ಯಾನಾಮೀದೃಶಃ ಸ್ಯಾದುಪಕ್ರಮಃ ।
ಆಗತೈಶ್ಚ ಪ್ರಮಥಿತಂ ಯಥಾ ಮಧುವನಂ ಹಿ ತೈಃ ॥

ಅನುವಾದ

ದಕ್ಷಿಣ ದಿಕ್ಕಿಗೆ ಹೋದ ಇವರುಗಳು ತಮ್ಮ ಕಾರ್ಯವಾದ ಸೀತಾನ್ವೇಷಣೆಯನ್ನು ಸಫಲಗೊಳಿಸದಿದ್ದರೆ ಇವರು ಈ ರೀತಿ ಮಧುವನವನ್ನು ನುಗ್ಗಿ ಮಧುಪಾನ ಮಾಡುತ್ತಿರಲಿಲ್ಲ.॥16॥

ಮೂಲಮ್ - 17

ಧರ್ಷಿತಂ ಚ ವನಂ ಕೃತ್ಸ್ನಮುಪಯುಕ್ತಂ ಚ ವಾನರೈಃ ।
ವನಂ ಯದಭಿಪನ್ನಂ ತೈಃ ಸಾಧಿತಂ ಕರ್ಮ ವಾನರೈಃ ॥

ಮೂಲಮ್ - 18

ದೃಷ್ಟಾ ದೇವೀ ನ ಸಂದೇಹೋ ನ ಚಾನ್ಯೇನ ಹನೂಮತಾ ।
ನ ಹ್ಯನ್ಯಃ ಸಾಧನೇ ಹೇತುಃ ಕರ್ಮಣೋಽಸ್ಯ ಹನೂಮತಃ ॥

ಅನುವಾದ

ಅಂಗದಾದಿ ವಾನರರು ತಮ್ಮನ್ನು ಅಡ್ಡಿಪಡಿಸಿದ ವನ ಪಾಲಕರನ್ನು ತಮ್ಮ ಮೊಣಕಾಲುಗಳಲ್ಲಿ ಬಲವಾಗಿ ಅಪ್ಪಚ್ಚಿಗೈದರು. ಮಹಾಬಲಶಾಲಿಯಾದ ಈ ದಧಿಮುಖ ವಾನರನನ್ನು ವನರಕ್ಷಣೆಗಾಗಿ, ವನಪಾಲಕರ ಮುಖಂಡನಾಗಿಯೂ ನಿಯಮಿಸಿದ್ದೆವು. ಅಂತಹ ಪ್ರಮುಖನಿಗೂ ಕೂಡ ಲಕ್ಷಕ್ಕೆ ತಾರದೆ ಈ ರೀತಿ ಮಾಡಬೇಕಿದ್ದರೆ ಸೀತೆಯನ್ನು ಕಂಡುಬಂದಿದ್ದಾರೆಂದೇ ತಿಳಿಯುತ್ತದೆ. ಇದರಲ್ಲಿ ಸಂದೇಹವೇ ಇಲ್ಲ. ಅವಳನ್ನು ನೋಡಿದವನೂ ಕೂಡ ಹನುಮಂತನೇ ಆಗಿರಬೇಕು ಎಂದು ಅನಿಸುತ್ತದೆ.॥17-18॥

ಮೂಲಮ್ - 19

ಕಾರ್ಯಸಿದ್ಧಿರ್ಮತಿಶ್ಚೆವ ತಸ್ಮಿನ್ ವಾನರಪುಂಗವೇ ।
ವ್ಯವಸಾಯಶ್ಚ ವೀರ್ಯಂ ಚ ಶ್ರುತಂ ಚಾಪಿ ಪ್ರತಿಷ್ಠಿತಮ್ ॥

ಅನುವಾದ

ಆ ಹನುಮಂತನಲ್ಲಿ ಕಾರ್ಯಸಾಧನ ಕೌಶಲ್ಯವು, ಪ್ರಜ್ಞೆಯು, ಪ್ರಯತ್ನಸಾಮರ್ಥ್ಯವು, ಶಾಸ್ತ್ರಜ್ಞಾನ ಇವೆಲ್ಲವುಗಳು ನೆಲೆಸಿವೆ. ಅದರಿಂದ ಈ ಕಾರ್ಯವನ್ನು ಸಾಧಿಸಿದವನು ಹನುಮಂತನೇ ಅಲ್ಲದೆ ಬೇರೆ ಯಾರೂ ಅಲ್ಲ.॥19॥

ಮೂಲಮ್ - 20

ಜಾಂಬವಾನ್ ಯತ್ರ ನೇತಾ ಸ್ಯಾದಂಗದಶ್ಚ ಮಹಾಬಲಃ ।
ಹನೂಮಾಂಶ್ಚಾಪ್ಯಧಿಷ್ಠಾತಾ ನ ತಸ್ಯ ಗತಿರನ್ಯಥಾ ॥

ಅನುವಾದ

ಪ್ರಜ್ಞಾಶಾಲಿಯಾದ ಜಾಂಬವಂತನು ನೇತಾರನಾಗಿರುವ, ಬಲಶಾಲಿಯಾದ ಅಂಗದನ ನಾಯಕತ್ವವಿರುವ, ಹನುಮಂತನು ಕಾರ್ಯ ನಿರ್ವಾಹಕನಾಗಿರುವ ಕಾರ್ಯವು ತಪ್ಪದೆ ಸಫಲವಾಗಿಯೇ ತೀರುವುದು. ಬೇರೇನು ಆಗಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ (ತಮ್ಮ ಕಾರ್ಯವು ಫಲಸಿದ ಬಗ್ಗೆ ) ಆ ಸಂತೋಷದಿಂದ ಅಂಗದಾದಿ ಪ್ರಮುಖವೀರರು ಆ ಮಧುವನವನ್ನು ಭಗ್ನಗೊಳಿಸಿರುವರು.॥20॥

ಮೂಲಮ್ - 21

ಅಂಗದಪ್ರಮುಖೈರ್ವೀರೈರ್ಹತಂ ಮಧುವನಂ ಕಿಲ ।
ವಾರಯಂತಶ್ಚ ಸಹಿತಾಸ್ತಥಾ ಜಾನುಭಿರಾಹತಾಃ ॥

ಮೂಲಮ್ - 22

ಏತದರ್ಥಮಯಂ ಪ್ರಾಪ್ತೋ ವಕ್ತುಂ ಮಧುರವಾಗಿಹ ।
ನಾಮ್ನಾ ದಧಿಮುಖೋ ನಾಮ ಹರಿಃ ಪ್ರಖ್ಯಾತವಿಕ್ರಮಃ ॥

ಅನುವಾದ

ಆ ವಾನರೋತ್ತಮರು ಸೀತಾದೇವಿಯನ್ನು ಹುಡುಕಲು ದಕ್ಷಿಣದಿಕ್ಕಿಗೆ ಹೋದವರು ಕೃತಾರ್ಥರಾಗಿ ಬಂದಿರುವುದರಿಂದ, ಇತರರು ಕಣ್ಣೆತ್ತಿಯೂ ನೋಡಲು ಸಾಧ್ಯವಿಲ್ಲದ ಆ ಮಧುವನವನ್ನು ಅವರು ಭಗ್ನಗೊಳಿಸಿರುವರು. ಆ ಕಪಿವೀರರು ಆ ವನದಲ್ಲಿನ ಫಲಗಳನ್ನು, ಮಧುವನ್ನು ತೃಪ್ತಿಯಾಗಿ ಸೇವಿಸಿರುವರು, ಅದರಿಂದ ಅದು ಪೂರ್ತಿಯಾಗಿ ಧ್ವಂಸವಾಯಿತು. ಅಷ್ಟೇ ಅಲ್ಲ, ಅವರನ್ನು ತಡೆಯಲು ಬಂದ ವನಪಾಲಕರನ್ನು, ದಂಡಿಸಿ, ತೊಡೆಗಳಿಂದ ಅವಚಿಬಿಟ್ಟಿರುವರು. ಇವನು ‘ದಧಿಮುಖ’ನೆಂಬ ವಾನರ ಪ್ರಮುಖನು. ಪ್ರಖ್ಯಾತನಾದ ಪರಾಕ್ರಮಶಾಲಿ. ಇವನು ವನಭಂಗ ವಿಷಯವನ್ನು, ತನ್ನ ಮೃದುಮಧುರ ವಚನಗಳಿಂದ ಈ ಶುಭವಾರ್ತೆಯನ್ನು ತಿಳಿಸಲಿಕ್ಕಾಗಿ ಇಲ್ಲಿಗೆ ಬಂದಿರುವನು.॥21-22॥

(ಶ್ಲೋಕ - 23

ಮೂಲಮ್

ದೃಷ್ಟಾ ಸೀತಾ ಮಹಾಬಾಹೋ ಸೌಮಿತ್ರೇ ಪಶ್ಯ ತತ್ತ್ವತಃ ।
ಅಭಿಗಮ್ಯ ತಥಾ ಸರ್ವೇ ಪಿಬಂತಿ ಮಧು ವಾನರಾಃ ॥

ಅನುವಾದ

ಎಲೈ ಮಹಾಬಾಹುವೇ! ಲಕ್ಷ್ಮಣಾ! ‘‘ಸೀತಾದೇವಿಯು ಕಂಡುಬಂದಿರುವಳು ಇದು ಖಂಡಿತವಾಗಿ ಸತ್ಯವಾಗಿದೆ.’’ ಇದನ್ನು ನೀನು ಪೂರ್ತಿಯಾಗಿ ನಂಬು. ಅಂಗದಾದಿ ವಾನರರೆಲ್ಲರೂ ಕಾರ್ಯವನ್ನು ಸಾಧಿಸಿ ಬಂದು, ಸಂತೋಷದಿಂದ ವನದಲ್ಲಿದ್ದ ಮಧುವನ್ನು ಕುಡಿದುದೇ ಇದಕ್ಕೆ ಸಾಕ್ಷಿಯಾಗಿದೆ.॥23॥

ಮೂಲಮ್ - 24

ನ ಚಾಪ್ಯದೃಷ್ಟ್ವಾ ವೈದೇಹೀಂ ವಿಶ್ರುತಾಃ ಪುರುಷರ್ಷಭ ।
ವನಂ ದತ್ತವರಂ ದಿವ್ಯಂ ಧರ್ಷಯೇಯುರ್ವನೌಕಸಃ ॥

ಅನುವಾದ

ಪುರುಷಶ್ರೇಷ್ಠನೇ! ಸುವಿಖ್ಯಾತರಾದ ಆ ವಾನರಶ್ರೇಷ್ಠರು ಸೀತಾದೇವಿಯನ್ನು ನೋಡದೆಯೇ ಬಂದಿದ್ದರೆ, ಬ್ರಹ್ಮದೇವರು ವರರೂಪದಲ್ಲಿ ಕೊಟ್ಟಿರುವ ಈ ಮಧುವನವನ್ನು ಖಂಡಿತವಾಗಿ ಹಾಳುಮಾಡುತ್ತಿರಲಿಲ್ಲ.॥24॥

ಮೂಲಮ್ - 25

ತತಃ ಪ್ರಹೃಷ್ಟೋ ಧರ್ಮಾತ್ಮಾ ಲಕ್ಷ್ಮಣಃ ಸಹರಾಘವಃ ।
ಶ್ರುತ್ವಾ ಕರ್ಣಸುಖಾಂ ವಾಣೀಂ ಸುಗ್ರೀವವದನಾಚ್ಯುತಾಮ್ ।
ಪ್ರಾಹೃಷ್ಯತ ಭೃಶಂ ರಾಮೋ ಲಕ್ಷ್ಮಣಶ್ಚ ಮಹಾಬಲಃ ॥

ಅನುವಾದ

ಸುಗ್ರೀವನ ಮುಖಾರವಿಂದದಿಂದ ಹೊರಟ ಕರ್ಣಾನಂದಕರವಾದ ಮಾತನ್ನು ಕೇಳಿ ಧರ್ಮಾತ್ಮರಾದ ರಾಮ-ಲಕ್ಷ್ಮಣರು ಪರಮ ಸಂತೋಷಭರಿತರಾದರು.॥25॥

ಮೂಲಮ್ - 26

ಶ್ರುತ್ವಾ ದಧಿಮುಖಸ್ಯೇದಂ ಸುಗ್ರೀವಸ್ತು ಪ್ರಹೃಷ್ಯ ಚ ।
ವನಪಾಲಂ ಪುನರ್ವಾಕ್ಯಂ ಸುಗ್ರೀವಃ ಪ್ರತ್ಯಭಾಷತ ॥

ಅನುವಾದ

ದಧಿಮುಖನು ಹೇಳಿದ ಮಾತುಗಳನ್ನು ಕೇಳಿ, ಶ್ರೀರಾಮನೂ, ಲಕ್ಷ್ಮಣನೂ ಹೆಚ್ಚಾಗಿ ಆನಂದಿತರಾದರು. ಸುಗ್ರೀವನೂ ಹರ್ಷಭರಿತನಾದನು.॥26॥

ಮೂಲಮ್ - 27

ಸಂತುಷ್ಟನಾದ ಸುಗ್ರೀವನು ದಧಿಮುಖನಲ್ಲಿ ಹೇಳುತ್ತಾನೆ ।
ಪ್ರೀತೋಸ್ಮಿ ಸೋಹಂ ಯದ್ಭುಕ್ತಂ ವನಂ ತೈಃ ಕೃತಕರ್ಮಭಿಃ ।
ಮರ್ಷಿತಂ ಮರ್ಷಣೀಯಂ ಚ ಚೇಷ್ಟಿತಂ ಕೃತಕರ್ಮಣಾಮ್ ॥

ಮೂಲಮ್ - 28

ಇಚ್ಛಾಮಿ ಶೀಘ್ರಂ ಹನುಮತ್ಪ್ರಧಾನಾನ್
ಶಾಖಾಮೃಗಾಂಸ್ತಾನ್ ಮೃಗರಾಜದರ್ಪಾನ್ ।
ದ್ರಷ್ಟುಂ ಕೃತಾರ್ಥಾನ್ ಸಹ ರಾಘವಾಭ್ಯಾಂ
ಶ್ರೋತುಂ ಚ ಸೀತಾಧಿಗಮೇ ಪ್ರಯತ್ನಮ್ ॥

ಅನುವಾದ

ಮಾವಾ! ಕಾರ್ಯವನ್ನು ಸಾಧಿಸಿಕೊಂಡು ಬಂದಿರುವ ಅಂಗದಾದಿ ವಾನರ ಪ್ರಮುಖರು ಮಧುವನ್ನು ಪಾನಮಾಡಿದುದಕ್ಕಾಗಿ ನಾನು ಪ್ರೀತನಾಗಿದ್ದೇನೆ. ಈ ಶುಭಸಮಾಚಾರ ತಿಳಿಸಿದ ನಿನ್ನ ಮೇಲೆಯೂ ಪ್ರಸನ್ನನಾಗಿರುವೆನು. ಕಾರ್ಯವನ್ನು ಸಾಧಿಸಿಕೊಂಡು ಬಂದಿರುವ ವಾನರರ ಕೃತ್ಯವನ್ನು (ಮಧುವನವನ್ನು ನಾಶಗೊಳಿಸಿದುದು) ನಾವು ಸಹಿಸಲೇಬೇಕು. ಹನುಮಂತನೇ ಮೊದಲಾದ ವಾನರ ಪ್ರಮುಖರೆಲ್ಲರನ್ನು ಶೀಘ್ರವಾಗಿ ಈ ಕಡೆ ಕಳಿಸಿಕೊಡು. ಸಿಂಹಪರಾಕ್ರಮಿಗಳಾದ ಹನುಮದಾದಿ ವಾನರರೆಲ್ಲರೂ ಕೃತಾರ್ಥರಾಗಿ ಬಂದಿರುವರು. ಅವರೆಲ್ಲರನ್ನು ಬೇಗನೇ ನೋಡಲು ಬಯಸುತ್ತಿರುವೆನು. ಸೀತೆಯನ್ನು ಕಾಣಲು ಅವರುಮಾಡಿರುವ ಪ್ರಯತ್ನವನ್ನು ರಾಮ-ಲಕ್ಷ್ಮಣರೊಡನೆ ಕೇಳಬೇಕೆಂಬ ಕುತೂಹಲವುಳ್ಳವನಾಗಿದ್ದೇನೆ.॥27-28॥

ಮೂಲಮ್ - 29

ಪ್ರೀತಿಸ್ಫೀತಾಕ್ಷೌ ಸಂಪ್ರಹೃಷ್ಟೌ ಕುಮಾರೌ
ದೃಷ್ಟ್ವಾ ಸಿದ್ಧಾರ್ಥೌ ವಾನರಾಣಾಂ ಚ ರಾಜಾ ।
ಅಂಗೈಃ ಸಂಹೃಷ್ಟೈಃ ಕರ್ಮಸಿದ್ಧಿಂ ವಿದಿತ್ವಾ
ಬಾಹ್ವೋರಾಸನ್ನಾಂ ಸೋತಿಮಾತ್ರಂ ನನಂದ ॥

ಅನುವಾದ

ಹೀಗೆ ಹೇಳಿ ಸುಗ್ರೀವನು ದಧಿಮುಖವನ್ನು ಕಳಿಸಿಕೊಟ್ಟನು. ರಾಮಲಕ್ಷ್ಮಣರಿಬ್ಬರೂ ಒಳ್ಳೆಯ ಸಮಾಚಾರವನ್ನು ಕೇಳಿ, ತಮ್ಮ ಮನೋರಥವು ಫಲಿಸಿತೆಂದು ಸಂತೋಷದಿಂದ ಪುಲಕಿತರಾದರು, ಅವರ ಕಣ್ಣುಗಳು ಅರಳಿದ್ದವು. ಅಂತಹ ರಾಮ ಲಕ್ಷ್ಮಣರನ್ನು ನೋಡಿ ಸುಗ್ರೀವನ ಅಂಗಾಂಗಗಳೆಲ್ಲವೂ ಸಂತುಷ್ಟರಾದುವು. ಅದರಿಂದ ಕಾರ್ಯಸಿದ್ಧಿಯಾಗುವುದೆಂದು, ವಿಜಯವು ಹಸ್ತಗತವಾಗುವುದೆಂದು ಭಾವಿಸಿ ಆನಂದತುಂದಿಲನಾದನು.॥29॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ತ್ರಿಷಷ್ಠಿತಮಃ ಸರ್ಗಃ ॥63॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಅರವತ್ತಮೂರನೆಯ ಸರ್ಗವು ಮುಗಿಯಿತು.