०६२ दधिमुखेन किष्किन्धानिवर्तनम्

वाचनम्
ಭಾಗಸೂಚನಾ

ವಾನರಶ್ರೇಷ್ಠರು ಮಧುವನದ ರಕ್ಷಕರನ್ನೂ, ದಧಿಮುಖನನ್ನೂ ಪರಾಭವಗೊಳಿಸಿದುದು, ದಧಿಮುಖನು ಸೇವಕರೊಡನೆ ದೂರು ಕೊಡಲು ಸುಗ್ರೀವನ ಬಳಿಗೆ ಹೋದುದು

ಮೂಲಮ್ - 1

ತಾನುವಾಚ ಹರಿಶ್ರೇಷ್ಠೋ ಹನುಮಾನ್ ವಾನರರ್ಷಭಃ ।
ಅವ್ಯಗ್ರಮನಸೋ ಯೂಯಂ ಮಧು ಸೇವತ ವಾನರಾಃ ।
ಅಹಮಾವಾರಯಿಷ್ಯಾಮಿ ಯುಷ್ಮಾಕಂ ಪರಿಪಂಥಿನಃ ॥

ಅನುವಾದ

ದಧಿಮುಖನು ತಡೆಯುತ್ತಿದ್ದರೂ, ವಾನರಶ್ರೇಷ್ಠನಾದ ಹನುಮಂತನು ತನ್ನ ಸಂಗಾತಿಗಳಿಗೆ ಇಂತೆಂದನು ವಾನರಶ್ರೇಷ್ಠರೇ! ನೀವು ಪ್ರಶಾಂತಚಿತ್ತರಾಗಿ ಮಧುವನ್ನು ಪಾನಮಾಡಿರಿ. ನಿಮ್ಮನ್ನು ತಡೆಯಲು ಬಂದವರನ್ನು ನಾನು ನಿವಾರಿಸುವೆನು.॥1॥

ಮೂಲಮ್ - 2

ಶ್ರುತ್ವಾ ಹನುಮತೋ ವಾಕ್ಯಂ ಹರೀಣಾಂ ಪ್ರವರೋಂಗದಃ ।
ಪ್ರತ್ಯುವಾಚ ಪ್ರಸನ್ನಾತ್ಮಾ ಪಿಬಂತು ಹರಯೋ ಮಧು ॥

ಮೂಲಮ್ - 3

ಅವಶ್ಯಂ ಕೃತಕಾರ್ಯಸ್ಯ ವಾಕ್ಯಂ ಹನುಮತೋ ಮಯಾ ।
ಅಕಾರ್ಯಮಪಿ ಕರ್ತವ್ಯಂ ಕಿಮಂಗ ಪುನರೀದೃಶಮ್ ॥

ಅನುವಾದ

ಹನುಮಂತನ ಮಾತನ್ನು ಕೇಳಿ ಕಪಿಶ್ರೇಷ್ಠನಾದ ಅಂಗದನು ಸಂಗಡಿಗರಿಗೆ ಹೇಳುತ್ತಾನೆ ಎಲೈ ಕಪಿಶ್ರೇಷ್ಠರೇ! ಪ್ರಸನ್ನ ಮನಸ್ಸಿನಿಂದ ಮಧುವನ್ನು ಸ್ವೀಕರಿಸಿರಿ. ಕೃತಕೃತ್ಯನಾಗಿ ಬಂದಿರುವ ಹನುಮಂತನ ಮಾತನ್ನು ನಾನು ಅವಶ್ಯವಾಗಿ ಪಾಲಿಸುತ್ತೇನೆ. ಅದು ಅಕಾರ್ಯವಾದರೂ ನನಗೆ ಘನ ಕಾರ್ಯವೇ ಸರಿ. ಹೀಗಿರುವಾಗ ಇಂತಹ ವಿಷಯದಲ್ಲಿ ಹೇಳುವುದೇನಿದೆ? ॥2-3॥

ಮೂಲಮ್ - 4

ಅಂಗದಸ್ಯ ಮುಖಾಚ್ಛ್ರುತ್ವಾ ವಚನಂ ವಾನರರ್ಷಭಾಃ ।
ಸಾಧು ಸಾಧ್ವಿತಿ ಸಂಹೃಷ್ಟಾ ವಾನರಾಃ ಪ್ರತ್ಯಪೂಜಯನ್ ॥

ಅನುವಾದ

ಆ ವಾನರ ವೀರರು ಅಂಗದನ ಮುಖದಿಂದ ಹೊರಟ ಆ ಮಾತನ್ನು ಕೇಳಿ ‘‘ಸಾಧು-ಸಾಧು’’ ಬಹಳ ಒಳ್ಳೆಯದು ಎಂದು ಹೇಳುತ್ತಾ ಹೆಚ್ಚಾದ ಸಂತೋಷದಿಂದ ಅವನನ್ನು ಅಭಿನಂದಿಸಿದರು.॥4॥

ಮೂಲಮ್ - 5

ಪೂಜಯಿತ್ವಾಂಗದಂ ಸರ್ವೇ ವಾನರಾ ವಾನರರ್ಷಭಮ್ ।
ಜಗ್ಮುರ್ಮಧುವನಂ ಯತ್ರ ನದೀವೇಗಾ ಇವ ದ್ರುತಮ್ ॥

ಅನುವಾದ

ಕಪಿವರನಾದ ಅಂಗದನನ್ನು ಶ್ಲಾಘಿಸಿದ ವಾನರ ವೀರರೆಲ್ಲರೂ ನದಿಯ ಪ್ರವಾಹದಂತೆ ಪುನಃ ಮಧುವನಕ್ಕೆ ರಭಸದಿಂದ ಮುನ್ನುಗ್ಗಿದರು.॥5॥

ಮೂಲಮ್ - 6

ತೇ ಪ್ರವಿಷ್ಟಾ ಮಧುವನಂ ಪಾಲಾನಾಕ್ರಮ್ಯ ವೀರ್ಯತಃ ॥

ಮೂಲಮ್ - 7

ಅತಿಸರ್ಗಾಚ್ಚ ಪಟವೋ ದೃಷ್ಟ್ವಾ ಶ್ರುತ್ವಾ ಚ ಮೈಥಿಲೀಮ್ ।
ಪಪುಃ ಸರ್ವೇ ಮಧು ತದಾ ರಸವತ್ಫಲಮಾದದುಃ ॥

ಅನುವಾದ

ಹನುಮಂತನು ಸೀತೆಯನ್ನು ನೋಡಿಬಂದಿದ್ದನು. ಈ ಶುಭವಾರ್ತೆಯನ್ನು ಕೇಳಿ ಸಮರ್ಥರಾದ ಕಪಿನಾಯಕರು ಸಂತೋಷ ಭರಿತರಾಗಿದ್ದರು. ಅಂಗದನ ಆಜ್ಞೆಯಂತೆ ನಿರ್ಭಯರಾಗಿ ಆ ವಾನರರು ಮಧುವನವನ್ನು ಪ್ರವೇಶಿಸಿದ ಬಳಿಕ ವನಪಾಲಕರ ಮಾತನ್ನು ಮೀರಿ, ಎಲ್ಲರೂ ಮಧುಪಾನ ಮಾಡಿದರು. ರಸಭರಿತವಾದ ಹಣ್ಣುಗಳನ್ನು ತೃಪ್ತಿಯಾಗಿ ತಿಂದರು.॥6-7॥

ಮೂಲಮ್ - 8

ಉತ್ಪತ್ಯ ಚ ತತಃ ಸರ್ವೇ ವನಪಾಲಾನ್ ಸಮಾಗತಾನ್ ।
ತಾಡಯಂತಿ ಸ್ಮ ಶತಶಃ ಸಕ್ತಾನ್ ಮಧುವನೇ ತದಾ ॥

ಅನುವಾದ

ಮಧುವನದ ರಕ್ಷಣೆಯಲ್ಲಿ ನಿರತರಾಗಿದ್ದ ನೂರಾರು ವನಪಾಲಕರು ಕಪಿನಾಯಕರನ್ನು ತಡೆಯುವಾಗ, ಅವರೆಲ್ಲರನ್ನು ಚೆನ್ನಾಗಿ ಥಳಿಸಿದರು.॥8॥

ಮೂಲಮ್ - 9

ಮಧೂನಿ ದ್ರೋಣಮಾತ್ರಾಣಿ ಬಾಹುಭಿಃ ಪರಿಗೃಹ್ಯ ತೇ ।
ಪಿಬಂತಿ ಸಹಿತಾಃ ಸರ್ವೇ ನಿಘ್ನಂತಿ ಸ್ಮ ತಥಾಪರೇ ॥

ಅನುವಾದ

ಕೆಲವು ವಾನರರು ಒಟ್ಟಾಗಿ ಸೇರಿ ಜೇನುಗೂಡುಗಳನ್ನು ತೋಳುಗಳಿಂದಲೇ ತಬ್ಬಿಕೊಂಡು ಕೊಳಗಟ್ಟಲೆ ಜೇನನ್ನು ಕುಡಿಯುತ್ತಿದ್ದರು. ನಂತರ ಅ ಗೂಡನ್ನು ಮನಬಂದಲ್ಲಿಗೆ ಎಸೆದುಬಿಡುತ್ತಿದ್ದರು.॥9॥

ಮೂಲಮ್ - 10

ಕೇಚಿತ್ ಪೀತ್ವಾಪವಿಧ್ಯಂತಿ ಮಧೂನಿ ಮಧುಪಿಂಗಲಾಃ ।
ಮಧೂಚ್ಛಿಷ್ಟೇನ ಕೇಚಿಚ್ಚ ಜಘ್ನುರನ್ಯೋನ್ಯಮುತ್ಕಟಾಃ ॥

ಅನುವಾದ

ಜೇನಿನಂತೆ ಪಿಂಗಳವರ್ಣವುಳ್ಳ ಕೆಲವು ಕಪಿಗಳು ಹೆಚ್ಚು ಕುಡಿಯಲಾರದೆ ಮಧುವನ್ನು ನೆಲಕ್ಕೆ ಚೆಲ್ಲುತ್ತಿದ್ದರು. ಮದೋತ್ಕಟರಾದ ಕೆಲವರು ಜೇನುಗೂಡುಗಳಿಂದಲೇ ಪರಸ್ಪರವಾಗಿ ಹೊಡೆದಾಡುತ್ತಿದ್ದರು.॥10॥

ಮೂಲಮ್ - 11

ಅಪರೇ ವೃಕ್ಷಮೂಲೇ ತು ಶಾಖಾಂ ಗೃಹ್ಯ ವ್ಯವಸ್ಥಿತಾಃ ।
ಅತ್ಯರ್ಥಂ ಚ ಮದಗ್ಲಾನಾಃ ಪರ್ಣಾನ್ಯಾಸ್ತೀರ್ಯ ಶೇರತೇ ॥

ಅನುವಾದ

ಕೆಲವರು ಮರಗಳ ಬುಡದಲ್ಲಿ ರೆಂಬೆಗಳನ್ನು ಹಿಡಿದುಕೊಂಡು ನಿಂತಿದ್ದರು, ಮಿತಿಮೀರಿ ಮಧುಪಾನ ಮಾಡಿದ್ದ ಕೆಲವರು ಎಲೆಗಳನ್ನು ಹಾಸಿಕೊಂಡು ಮಲಗಿಬಿಟ್ಟಿದ್ದರು.॥11॥

ಮೂಲಮ್ - 12

ಉನ್ಮತ್ತಭೂತಾಃ ಪ್ಲವಗಾ ಮಧುಮತ್ತಾಶ್ಚ ಹೃಷ್ಟವತ್ ।
ಕ್ಷಿಪಂತಿ ಚ ತದಾನ್ಯೋನ್ಯಂ ಸ್ಖಲಂತಿ ಚ ತಥಾಪರೇ ॥

ಅನುವಾದ

ಮಧುಪಾನದಿಂದ ಮತ್ತರಾದ ಕೆಲವು ವಾನರರು ಹುಚ್ಚುಹಿಡಿದವರಂತೆ ಒಬ್ಬರು ಮತ್ತೊಬ್ಬರನ್ನು ಎತ್ತಿ ಎಸೆಯುತ್ತಿದ್ದರು. ಕೆಲವರು ಮದೋನ್ಮತ್ತರಾಗಿ ತತ್ತರಿಸಿ ಬೀಳುತ್ತಿದ್ದರು.॥12॥

ಮೂಲಮ್ - 13

ಕೇಚಿತ್ ಕ್ಷ್ವೇಲಾಂ ಪ್ರಕುರ್ವಂತಿ ಕೇಚಿತ್ ಕೂಜಂತಿ ಹೃಷ್ಟವತ್ ।
ಹರಯೋ ಮಧುನಾ ಮತ್ತಾಃ ಕೇಚಿತ್ ಸುಪ್ತಾ ಮಹೀತಲೇ ॥

ಅನುವಾದ

ಕೆಲವರು ಸಿಂಹದಂತೆ ಗರ್ಜಿಸುತ್ತಿದ್ದರು. ಕೆಲವರು ಆನಂದಾತಿರೇಕದಿಂದ ಕೇಕೆಹಾಕುತ್ತಿದ್ದರು. ಮಧುಪಾನದಿಂದ ಮತ್ತರಾದ ಕೆಲವರು ನೆಲದ ಮೇಲೆಯೇ ಮಲಗಿಬಿಟ್ಟಿದ್ದರು.॥13॥

ಮೂಲಮ್ - 14

ಕೃತ್ವಾ ಕಿಂಚಿತ್ ಹಸಂತ್ಯನ್ಯೇ ಕೇಚಿತ್ ಕುರ್ವಂತಿ ಚೇತರತ್ ।
ಕೃತ್ವಾ ಕಿಂಚಿತ್ ವದಂತ್ಯನ್ಯೇ ಕೇಚಿದ್ಬುಧ್ಯಂತಿ ಚೇತರತ್ ॥

ಅನುವಾದ

ಕೆಲವರು ವಿಕೃತಚೇಷ್ಟೆಗಳನ್ನು ಮಾಡಿ ನಗುತ್ತಿದ್ದರು. ಮತ್ತೆ ಕೆಲವರು ಕುಣಿಯುವುದೂ, ನಗುವುದೂ, ಅಣಕಿಸುವುದೂ, ಮೊದಲಾದ ಅನೇಕವಿಧವಾದ ಚೇಷ್ಟೆಗಳನ್ನು ಮಾಡುತ್ತಿದ್ದರು. ಕೆಲವರು ಮಧುಪಾನದಿಂದ ಮತ್ತರಾಗಿ ಮಾಡುವುದೊಂದು ಹೇಳುವುದು ಮತ್ತೊಂದು ಹೀಗೆ ಹರಟುತ್ತಿದ್ದರು.॥14॥

ಮೂಲಮ್ - 15

ಯೇಪ್ಯತ್ರ ಮಧುಪಾಲಾಃ ಸ್ಯುಃ ಪ್ರೇಷ್ಯಾ ದಧಿಮುಖಸ್ಯ ತು ।
ತೇಪಿ ತೈರ್ವಾನರೈರ್ಭೀಮೈಃ ಪ್ರತಿಷಿದ್ಧಾ ದಿಶೋ ಗತಾಃ ॥

ಅನುವಾದ

ದಧಿಮುಖನ ಅನುಚರರಾದ ವನಪಾಲಕರು ಭಯಂಕರವಾಗಿ ಕಾಣುತ್ತಿದ್ದ ಅಂಗದಾದಿ ಪ್ರಮುಖ ಕಪಿನಾಯಕರಿಂದ ಏಟು ತಿಂದು ಅಲ್ಲಿಂದ ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿಹೋದರು.॥15॥

ಮೂಲಮ್ - 16

ಜಾನುಭಿಸ್ತು ಪ್ರಕೃಷ್ಟಾಶ್ಚ ದೇವಮಾರ್ಗಂ ಚ ದರ್ಶಿತಾಃ ।
ಅಬ್ರುವನ್ ಪರಮೋದ್ವಿಗ್ನಾ ಗತ್ವಾ ದಧಿಮುಖಂ ವಚಃ ॥

ಅನುವಾದ

ಅಂಗದನ ಕೆಲವು ಅನುಯಾಯಿಗಳು ದಧಿಮುಖನ ಸೇವಕರನ್ನು ಮಂಡಿಗಳಿಂದಲೇ ಹೊಡೆದು ನೆಲಕ್ಕೆ ಕೆಡಹಿದರು. ಕೆಲವರನ್ನು ಆಗಸಕ್ಕೆ ಎಸೆದರು. ಹೀಗೆ ನಾನಾ ಪ್ರಕಾರವಾಗಿ ಪೆಟ್ಟುತಿಂದು ಭಯಗೊಂಡು ಒಡೆಯನ ಬಳಿಗೆ ಬಂದು ಹೇಳಿದರು.॥16॥

ಮೂಲಮ್ - 17

ಹನೂಮತಾ ದತ್ತವರೈರ್ಹತಂ ಮಧುವನಂ ಬಲಾತ್ ।
ವಯಂ ಚ ಜಾನುಭಿಃ ಕೃಷ್ಟಾ ದೇವಮಾರ್ಗಂ ಚ ದರ್ಶಿತಾಃ ॥

ಅನುವಾದ

ಸ್ವಾಮೀ! ಹನುಮಂತನ ಅನುಜ್ಞೆಯನ್ನು ಪಡೆದು, ಅವನ ಅನುಯಾಯಿಗಳು ಮಧುವನವನ್ನೇ ಧ್ವಂಸಮಾಡಿಬಿಟ್ಟರು. ನಮ್ಮನ್ನು ಮಂಡಿಗಳ ಮಧ್ಯದಲ್ಲಿ ಒತ್ತಿಹಿಡಿದು ಪೀಡಿಸಿ, ಆಕಾಶಕ್ಕೆ ಎಸೆದರು.॥17॥

ಮೂಲಮ್ - 18

ತತೋ ದಧಿಮುಖಃ ಕ್ರುದ್ಧೋ ವನಪಸ್ತತ್ರ ವಾನರಃ ।
ಹತಂ ಮಧುವನಂ ಶ್ರುತ್ವಾ ಸಾಂತ್ವಯಾಮಾಸ ತಾನ್ ಹರೀನ್ ॥

ಅನುವಾದ

ಮಧುವನದ ಮುಖ್ಯ ರಕ್ಷನಾದ ದಧಿಮುಖನು ಅವರ ಮಾತನ್ನು ಕೇಳಿ ಪರಮಕ್ರುದ್ಧನಾದನು. ಪೆಟ್ಟು ತಿಂದು ಬಂದಿದ್ದ ಸೇವಕರನ್ನು ಸವಿಮಾತಿಗಳಿಂದ ಸಮಾಧಾನಗೊಳಿಸಿ ಇಂತೆಂದನು.॥18॥

ಮೂಲಮ್ - 19

ಇಹಾಗಚ್ಛತ ಗಚ್ಛಾಮೋ ವಾನರಾನ್ ಬಲದರ್ಪಿತಾನ್ ।
ಬಲೇನ ವಾರಯಿಷ್ಯಾಮೋ ಮಧು ಭಕ್ಷಯತೋ ವಯಮ್ ॥

ಅನುವಾದ

‘‘ಬನ್ನಿರಿ, ನಾವು ಅಲ್ಲಿಗೆ ಹೋಗೋಣ. ಮಧುವನ್ನು ಕುಡಿದ ಬಲಗರ್ವಿತರಾದ ಆ ವಾನರರ ಬಳಿಗೆ ಹೋಗಿ, ಅವರನ್ನು ಬಲಪ್ರದರ್ಶನದಿಂದ ಹಿಮ್ಮೆಟ್ಟಿಸೋಣ.॥19॥

ಮೂಲಮ್ - 20

ಶ್ರುತ್ವಾ ದಧಿಮುಖಸ್ಯೇದಂ ವಚನಂ ವಾನರರ್ಷಭಾಃ ।
ಪುನರ್ವೀರಾ ಮಧುವನಂ ತೇನೈವ ಸಹಿತಾ ಯಯುಃ ॥

ಅನುವಾದ

ವೀರರಾದ ಆ ವಾನರ ಪುಂಗವರು ದಧಿಮುಖನ ಮಾತನ್ನು ಕೇಳಿ ಕೂಡಲೇ ಅವನೊಡನೆ ವೇಗವಾಗಿ ಮಧುವನಕ್ಕೆ ಹೋದರು.॥20॥

ಮೂಲಮ್ - 21

ಮಧ್ಯೇ ಚೈಷಾಂ ದಧಿಮುಖಃ ಪ್ರಗೃಹ್ಯ ತರಸಾ ತರುಮ್ ।
ಸಮಭ್ಯದಾವದ್ವೇಗೇನ ತೇ ಚ ಸರ್ವೇ ಪ್ಲವಂಗಮಾಃ ॥

ಅನುವಾದ

ಸೇವಕರ ಮಧ್ಯದಲ್ಲಿದ್ದ ದಧಿಮುಖನು ಹಾದಿಯಲ್ಲಿ ಸಿಕ್ಕಿದ ವೃಕ್ಷವೊಂದನ್ನು ಕಿತ್ತುಕೊಂಡು, ವೇಗವಾಗಿ ಮಧುವನದ ಕಡೆಗೆ ಧಾವಿಸಿದನು. ಅವನ ಸೇವಕರೂ ಹಾಗೆಯೇ ವೃಕ್ಷಗಳನ್ನು ಎತ್ತಿಕೊಂಡು ಹಿಂಬಾಲಿಸಿದರು.॥21॥

ಮೂಲಮ್ - 22

ತೇ ಶಿಲಾಃ ಪಾದಪಾಂಶ್ಚಾಪಿ ಪರ್ವತಾಂಶ್ಚಾಪಿ ವಾನರಾಃ ।
ಗೃಹೀತ್ವಾಭ್ಯಗಮನ್ ಕ್ರುದ್ಧಾ ಯತ್ರ ತೇ ಕಪಿಕುಂಜರಾಃ ॥

ಅನುವಾದ

ಕ್ರುದ್ಧರಾದ ಆ ವಾನರರು ಕಲ್ಲುಬಂಡೆಗಳನ್ನೂ, ವೃಕ್ಷಗಳನ್ನೂ, ಪರ್ವತಗಳನ್ನೂ ಎತ್ತಿಕೊಂಡು ಅಂಗದಾದಿ ವಾನರ ಪ್ರಮುಖರಿರುವಲ್ಲಿಗೆ ತೆರಳಿದರು.॥22॥

ಮೂಲಮ್ - 23

ತೇ ಸ್ವಾಮಿವಚನಂ ವೀರಾ ಹೃದಯೇಷ್ವವಸಜ್ಯ ತತ್ ।
ತ್ವರಯಾ ಹ್ಯಭ್ಯಧಾವಂತ ಸಾಲತಾಲಶಿಲಾಯುಧಾಃ ॥

ಅನುವಾದ

ಆ ವೀರರೆಲ್ಲರೂ ತಮ್ಮ ಸ್ವಾಮಿಯಾದ ದಧಿಮುಖನು ಹೇಳಿದ್ದ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಮಧುವನವನ್ನು ಧ್ವಂಸ ಮಾಡಿದವರನ್ನು ಶಿಕ್ಷಿಸಲು, ಸಾಲ-ತಾಲವೃಕ್ಷಗಳನ್ನೂ, ಬಂಡೆಗಳನ್ನೂ ಆಯುಧಗಳನ್ನಾಗಿ ಮಾಡಿಕೊಂಡು ವೇಗವಾಗಿ ಹೊರಟರು.॥23॥

ಮೂಲಮ್ - 24

ವೃಕ್ಷಸ್ಥಾಂಶ್ಚ ತಲಸ್ಥಾಂಶ್ಚ ವಾನರಾನ್ ಬಲದರ್ಪಿತಾನ್ ।
ಅಭ್ಯಕ್ರಾಮಂಸ್ತತೋ ವೀರಾಃ ಪಾಲಾಸ್ತತ್ರ ಸಹಸ್ರಶಃ ॥

ಅನುವಾದ

ಸಾವಿರಾರು ಸಂಖ್ಯೆಯಲ್ಲಿದ್ದ ಆ ವನಪಾಲಕರು, ಮರಗಳ ಮೇಲೆ ಕುಳಿತ್ತಿದ್ದ, ನೆಲದ ಮೇಲೆ ಮಲಗಿದ್ದ, ಬಲಗರ್ವಿತರಾದ ಅಂಗದನೇ ಮೊದಲಾದ ವಾನರರನ್ನು ಏಕಕಾಲದಲ್ಲಿ ಆಕ್ರಮಿಸಿದರು.॥24॥

ಮೂಲಮ್ - 25

ಅಥ ದೃಷ್ಟ್ವಾ ದಧಿಮುಖಂ ಕ್ರುದ್ಧಂ ವಾನರಪುಂಗವಾಃ ।
ಅಭ್ಯಧಾವಂತ ವೇಗೇನ ಹನುಮತ್ಪ್ರಮುಖಾಸ್ತದಾ ॥

ಅನುವಾದ

ಬಳಿಕ ಹನುಮಂತನೇ ಮೊದಲಾದ ವಾನರ ಪ್ರಮುಖರು ಕ್ರುದ್ಧನಾಗಿದ್ದ ದಧಿಮುಖನನ್ನು ನೋಡಿ, ಕೂಡಲೇ ಅವನನ್ನು ಎದುರಿಸಿದರು.॥25॥

ಮೂಲಮ್ - 26

ತಂ ಸವೃಕ್ಷಂ ಮಹಾಬಾಹುಮಾಪತಂತಂ ಮಹಾಬಲಮ್ ।
ಆರ್ಯಕಂ ಪ್ರಾಹರತ್ತತ್ರ ಬಾಹುಭ್ಯಾಂ ಕುಪಿತೋಂಗದಃ ॥

ಅನುವಾದ

ಮಹಾಬಲಶಾಲಿಯೂ, ಹೆಚ್ಚಾದ ಬಾಹುಪರಾಕ್ರಮವುಳ್ಳ ಆ ದಧಿಮುಖನು ವೃಕ್ಷಗಳನ್ನೆತ್ತಿಕೊಂಡು ಬರುತ್ತಿರುವಾಗ, ಕ್ರುದ್ಧನಾದ ಅಂಗದನು ತೊಳುಗಳಿಂದ ಬಲವಾಗಿ ಪ್ರಹರಿಸಿದನು.॥26॥

ಮೂಲಮ್ - 27

ಮದಾಂಧಶ್ಚ ನ ವೇದೈನಮಾರ್ಯಕೋಯಂ ಮಮೇತಿ ಸಃ ।
ಅಥೈನಂ ನಿಷ್ಪಿಪೇಷಾಶು ವೇಗವದ್ವಸುಧಾತಲೇ ॥

ಅನುವಾದ

ಮಧುವನ್ನು ಕುಡಿದು ವಮದಾಂಧನಾಗಿದ್ದ ಅಂಗದನಿಗೆ ದಧಿಮುಖನು ತನಗೆ ಹಿರಿಯವನೂ, ತಾತನೂ ಎಂದೂ ತಿಳಿಯಲಿಲ್ಲ. ಅವನನ್ನು ನೆಲಕ್ಕೆ ಕೆಡವಿ, ಅರೆದುಬಿಟ್ಟನು.॥27॥

ಮೂಲಮ್ - 28

ಸಭಗ್ನ ಬಾಹೂರುಭುಜೋ ವಿಹ್ವಲಃ ಶೋಣಿತೋಕ್ಷಿತಃ ।
ಮುಮೋಹ ಸಹಸಾ ವೀರೋ ಮುಹೂರ್ತಂ ಕಪಿಕುಂಜರಃ ॥

ಅನುವಾದ

ಅಂಗದನ ಏಟಿನಿಂದಾಗಿ ವಾನರವೀರನಾದ ದಧಿಮುಖನ ಬಾಹುಗಳು, ಭುಜಗಳು, ತೊಡೆಗಳು ನುಗ್ಗುನುಗ್ಗಾದವು. ಅವನ ದೇಹವು ರಕ್ತಸಿಕ್ತವಾಯಿತು. ಅವನು ಮುಹೂರ್ತ ಕಾಲದವರೆಗೆ ಮೂರ್ಛಿತನಾಗಿ ಬಿದ್ದಿದ್ದನು.॥28॥

ಮೂಲಮ್ - 29

ಸ ಸಮಾಶ್ವಸ್ಯ ಸಹಸಾ ಸಂಕ್ರುದ್ಧೋ ರಾಜಮಾತುಲಃ ।
ವಾನರಾನ್ ವಾರಯಾಮಾಸ ದಂಡೇನ ಮಧುಮೋಹಿತಾನ್ ॥

ಅನುವಾದ

ಸುಗ್ರೀವನ ಸೋದರಮಾವನಾದ ದಧಿಮುಖನು ಸ್ವಲ್ಪಹೊತ್ತಿನಲ್ಲಿ ಚೇತರಿಸಿಕೊಂಡು, ಕ್ರುದ್ಧನಾಗಿ ದಂಡವನ್ನು ಕೈಯಲ್ಲಿ ಹಿಡಿದು ಮಧುಪಾನಮತ್ತರಾದ ವಾನರರನ್ನು ಹಿಂದಕ್ಕಟ್ಟಿದನು.॥29॥

ಮೂಲಮ್ - 30

ಸ ಕಥಂಚಿದ್ವಿಮುಕ್ತಸ್ತೈರ್ವಾನರೈರ್ವಾನರರ್ಷಭಃ ।
ಉವಾಚೈಕಾಂತಮಾಶ್ರಿತ್ಯ ಭೃತ್ಯಾನ್ ಸ್ವಾನ್ ಸಮುಪಾಗತಾನ್ ॥

ಅನುವಾದ

ಆದರೂ ಮುನ್ನುಗ್ಗಿ ಬರುತ್ತಿದ್ದ ಅಂಗದಾದಿಗಳಿಂದ ಬಹಳ ಪ್ರಯಾಸದಿಂದ ತಪ್ಪಿಸಿಕೊಂಡು ಏಕಾಂತಸ್ಥಳಕ್ಕೆ ಹೋಗಿ ತನ್ನ ಅನುಯಾಯಿಗಳಾದ ವಾನರರಿಗೆ ಹೀಗೆ ಹೇಳಿದನು.॥30॥

ಮೂಲಮ್ - 31

ಏತೇ ತಿಷ್ಠಂತು ಗಚ್ಛಾಮೋ ಭರ್ತಾ ನೋ ಯತ್ರ ವಾನರಃ ।
ಸುಗ್ರೀವೋ ವಿಪುಲಗ್ರೀವಃ ಸಹ ರಾಮೇಣ ತಿಷ್ಠತಿ ॥

ಅನುವಾದ

‘ಅಂಗದಾದಿಗಳು ಇಲ್ಲೇ ಇರಲಿ, (ಇವರೊಡನೆ ನಮಗೆ ಕೆಲಸವಿಲ್ಲ.) ನಮಗೆ ಒಡೆಯನೂ, ಕಠೋರ ಶಾಸನಮಾಡುವವನೂ ಆದ ಸುಗ್ರೀವನು ಶ್ರೀರಾಮನೊಂದಿಗೆ ಇರುವಲ್ಲಿಗೆ ನಾವು ಹೋಗೋಣ.॥31॥

ಮೂಲಮ್ - 32

ಸರ್ವಂ ಚೈವಾಂಗದೇ ದೋಷಂ ಶ್ರಾವಯಿಷ್ಯಾಮಿ ಪಾರ್ಥಿವೇ ।
ಅಮರ್ಷೀ ವಚನಂ ಶ್ರುತ್ವಾ ಘಾತಯಿಷ್ಯತಿ ವಾನರಾನ್ ॥

ಅನುವಾದ

ಅಂಗದನು ಮಾಡಿರುವ ಎಲ್ಲ ಅಪರಾಧಗಳನ್ನು ರಾಜನ ಬಳಿ ಹೇಳೋಣ. ನಮ್ಮ ಮಾತನ್ನು ಕೇಳಿ ಕ್ರುದ್ಧನಾಗುವ ದೊರೆಯು ಈ ವಾನರರನ್ನು ಉಗ್ರವಾಗಿ ಶಿಕ್ಷಿಸುವನು.॥32॥

ಮೂಲಮ್ - 33

ಇಷ್ಟಂ ಮಧುವನಂ ಹ್ಯೇತತ್ ಸುಗ್ರೀವಸ್ಯ ಮಹಾತ್ಮನಃ ।
ಪಿತೃಪೈತಾಮಹಂ ದಿವ್ಯಂ ದೇವೈರಪಿ ದುರಾಸದಮ್ ॥

ಅನುವಾದ

ಈ ಮಧುವನವು ಮಹಾತ್ಮನಾದ ಸುಗ್ರೀವನಿಗೆ ಪ್ರಾಣಪ್ರಿಯವಾದುದು. ಇದು ವಂಶ ಪಾರಂಪರ್ಯವಾಗಿ ಇವನಿಗೆ ದೊರಕಿದೆ. ದಿವ್ಯವಾದ ಈ ವನವು ದೇವತೆಗಳಿಂದಲೂ ಪ್ರವೇಶಿಸಲು ದುಸ್ಸಾಧ್ಯವಾಗಿದೆ.॥33॥

ಮೂಲಮ್ - 34

ಸ ವಾನರಾನಿಮಾನ್ ಸರ್ವಾನ್ ಮಧುಲುಬ್ಧಾನ್ ಗತಾಯುಷಃ ।
ಘಾತಯಿಷ್ಯತಿ ದಂಡೇನ ಸುಗ್ರೀವಃ ಸಸುಹೃಜ್ಜನಾನ್ ॥

ಅನುವಾದ

ಪ್ರಾಣಕ್ಕಿಂತಲೂ ಹೆಚ್ಚಾಗಿ ಮಧುವಿನಲ್ಲೇ ಪ್ರೀತಿಯನ್ನಿಟ್ಟಿದ್ದ, ಆಯುಸ್ಸು ಮುಗಿದಿರುವ, ಮಿತ್ರರೊಡನೆ ಕೂಡಿರುವ, ಈ ವಾನರರನ್ನು ನಮ್ಮ ಪ್ರಭುವು ದಂಡಿಸುವನು.॥34॥

ಮೂಲಮ್ - 35

ವಧ್ಯಾ ಹ್ಯೇತೇ ದುರಾತ್ಮಾನೋ ನೃಪಾಜ್ಞಾಪರಿಭಾವಿನಃ ।
ಅಮರ್ಷಪ್ರಭವೋ ರೋಷಃ ಸಫಲೋ ನೋ ಭವಿಷ್ಯತಿ ॥

ಅನುವಾದ

ರಾಜಾಜ್ಞೆಯನ್ನು ತಿರಸ್ಕರಿಸಿರುವ ದುರಾತ್ಮರಾದ ಇವರೆಲ್ಲರೂ ವಧಾರ್ಹರೇ ಸರಿ. ಇವರು ಮರಣ ಶಿಕ್ಷೆಯನ್ನು ಅನುಭವಿಸಿದಾಗ, ದುಸ್ಸಾಧ್ಯವಾದ ನನ್ನ ಕೋಪವು ಶಾಂತವಾಗಬಹುದು.॥35॥

ಮೂಲಮ್ - 36

ಏವಮುಕ್ತ್ವಾ ದಧಿಮುಖೋ ವನಪಾಲಾನ್ ಮಹಾಬಲಃ ।
ಜಗಾಮ ಸಹಸೋತ್ಪತ್ಯ ವನಪಾಲೈಃ ಸಮನ್ವಿತಃ ॥

ಅನುವಾದ

ಮಹಾಬಲಶಾಲಿಯಾದ ದಧಿಮುಖನು ಆ ವನರಕ್ಷರಲ್ಲಿ ಹೀಗೆ ಹೇಳಿ, ಅವರನ್ನೊಡಗುಡಿ, ತ್ವರಿತವಾಗಿ ಸುಗ್ರೀವನ ಬಳಿಗೆ ಹೋಗಲು ಹೊರಟರು.॥36॥

ಮೂಲಮ್ - 37

ನಿಮೇಷಾಂತರಮಾತ್ರೇಣ ಸ ಹಿ ಪ್ರಾಪ್ತೋ ವನಾಲಯಃ ।
ಸಹಸ್ರಾಂಶುಸುತೋ ಧೀಮಾನ್ ಸುಗ್ರೀವೋ ಯತ್ರ ವಾನರಃ ॥

ಅನುವಾದ

ಅನುಚರರೊಡಗೂಡಿದ ಆ ದಧಿಮುಖನು ಸೂರ್ಯಪುತ್ರನೂ, ಬುದ್ಧಿಶಾಲಿಯೂ ಆದ ಸುಗ್ರೀವನಿದ್ದೆಡೆಗೆ ಕಣ್ಣುರೆಪ್ಪೆ ಹಾಕುವಷ್ಟರಲ್ಲಿ ಬಂದು ಸೇರಿದನು.॥37॥

ಮೂಲಮ್ - 38

ರಾಮಂ ಚ ಲಕ್ಷ್ಮಣಂ ಚೈವ ದೃಷ್ಟ್ವಾ ಸುಗ್ರೀವಮೇವ ಚ ।
ಸಮಪ್ರತಿಷ್ಠಾಂ ಜಗತೀಮಾಕಾಶಾನ್ನಿಪಪಾತ ಹ ॥

ಅನುವಾದ

ಅವನು ಆಕಾಶದಿಂದಲೇ ರಾಮ-ಲಕ್ಷ್ಮಣ-ಸುಗ್ರೀವರನ್ನು ದರ್ಶಿಸಿ, ಒಂದು ಸಮತಲವಾದ ಭೂಮಿಯ ಮೇಲೆ ಅನುಚರರೊಂದಿಗೆ ಇಳಿದನು.॥38॥

ಮೂಲಮ್ - 39

ಸಂನಿಪತ್ಯ ಮಹಾವೀರ್ಯಃ ಸರ್ವೈಸ್ತೈಃ ಪರಿವಾರಿತಃ ।
ಹರಿರ್ದಧಿಮುಖಃ ಪಾಲೈಃ ಪಾಲಾನಾಂ ಪರಮೇಶ್ವರಃ ॥

ಮೂಲಮ್ - 40

ಸ ದೀನವದನೋ ಭೂತ್ವಾ ಕೃತ್ವಾ ಶಿರಸಿ ಚಾಂಜಲಿಮ್ ।
ಸುಗ್ರೀವಸ್ಯ ಶುಭೌ ಮೂರ್ಧ್ನಾ ಚರಣೌ ಪ್ರತ್ಯಪೀಡಯತ್ ॥

ಅನುವಾದ

ಮಹಾವೀರನೂ, ವನಪಾಲಕರಿಗೆ ನಾಯಕನೂ ಆದ ಆ ದಧಿಮುಖ ಕಪಿವರನು ತನ್ನ ಅನುಚರರೊಂದಿಗೆ ಭೂಮಿಗೆ ಇಳಿದ ಬಳಿಕ ಅವನು ದೀನವದನದಿಂದ, ವಿನಮ್ರನಾಗಿ, ಕೈಜೋಡಿಸಿಕೊಂಡು, ರಾಜನಾದ ಸುಗ್ರೀವನ ಪವಿತ್ರ ಚರಣಗಳಲ್ಲಿ ತಲೆಯನ್ನಿಟ್ಟು ನಮಸ್ಕರಿಸಿದನು.॥39-40॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ದ್ವಿಷಷ್ಠಿತಮಃ ಸರ್ಗಃ ॥ 62 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಅರವತ್ತೆರಡನೆಯ ಸರ್ಗವು ಮುಗಿಯಿತು.