०६१ कपिभिः मधुवने विश्रान्तिः

वाचनम्
ಭಾಗಸೂಚನಾ

ವಾನರರೆಲ್ಲರೂ ಮಧುವನಕ್ಕೆ ಹೋಗಿ ಯಥೇಚ್ಛವಾಗಿ ಮಧುಪಾನಮಾಡಿ ಫಲಗಳನ್ನು ಭಕ್ಷಿಸಿದುದು

ಮೂಲಮ್ - 1

ತತೋ ಜಾಂಬವತೋ ವಾಕ್ಯಮಗೃಹ್ಣಂತ ವನೌಕಸಃ ।
ಅಂಗದಪ್ರಮುಖಾ ವೀರಾ ಹನೂಮಾಂಶ್ಚ ಮಹಾಕಪಿಃ ॥

ಅನುವಾದ

ಬಳಿಕ ಅಂಗದನೇ ಮೊದಲಾದ ಕಪಿವೀರರೂ, ಮಹಾಕಪಿಯಾದ ಹನುಮಂತನೂ, ಜಾಂಬವಂತನೂ ಹೇಳಿದ ಮಾತನ್ನು ಅಂಗೀಕರಿಸಿದರು.॥1॥

ಮೂಲಮ್ - 2

ಪ್ರೀತಿಮಂತಸ್ತತಃ ಸರ್ವೇ ವಾಯುಪುತ್ರಪುರಃಸರಾಃ ।
ಮಹೇಂದ್ರಾದ್ರಿಂ ಪರಿತ್ಯಜ್ಯ ಪುಪ್ಲುವುಃ ಪ್ಲವಗರ್ಷಭಾಃ ॥

ಅನುವಾದ

ಅನಂತರ ಕಪಿಶ್ರೇಷ್ಠರೆಲ್ಲರೂ ಅತ್ಯಂತ ಸಂತೋಷದಿಂದ ವಾಯುಪುತ್ರನಾದ ಹನುಮಂತನ್ನು ಮುಂದಿರಿಸಿಕೊಂಡು ಮಹೇಂದ್ರ ಪರ್ವತವನ್ನು ಬಿಟ್ಟು ಮೇಲಕ್ಕೆಹಾರಿದರು.॥2॥

ಮೂಲಮ್ - 3

ಮೇರುಮಂದರಸಂಕಾಶಾ ಮತ್ತಾ ಇವ ಮಹಾಗಜಾಃ ।
ಛಾದಯಂತ ಇವಾಕಾಶಂ ಮಹಾಕಾಯಾ ಮಹಾಬಲಾಃ ॥

ಅನುವಾದ

ಮಹಾಕಾಯರಾದ, ಮಹಾಬಲಿಷ್ಠರಾದ, ಮೇರುಮಂದರ ಪರ್ವತಗಳಂತೆ ಕಾಣುತ್ತಿದ್ದ, ಮದಿಸಿದ ಸಲಗಗಳಂತಿದ್ದ ಕಪಿ ವೀರರು ಆಕಾಶವನ್ನೇ ಮುಚ್ಚಿಬಿಡುವರೋ ಎಂಬಂತೆ ಹಾರಿಕೊಂಡು ಹೋಗುತ್ತಿದ್ದರು.॥3॥

ಮೂಲಮ್ - 4

ಸಭಾಜ್ಯಮಾನಂ ಭೂತೈಸ್ತಮಾತ್ಮವಂತಂ ಮಹಾಬಲಮ್ ।
ಹನುಮಂತಂ ಮಹಾವೇಗಂ ವಹಂತ ಇವ ದೃಷ್ಟಿಭಿಃ ॥

ಅನುವಾದ

ಸಕಲ ಪ್ರಾಣಿಗಳಿಂದ ಗೌರವಿಸಲ್ಪಡುತ್ತಿರುವವನೂ, ಮಹಾಪ್ರಾಜ್ಞಶಾಲಿಯೂ, ಅತುಳ ಬಲ ಸಂಪನ್ನನೂ, ಶೀಘ್ರವಾಗಿ ಸಾಗುತ್ತಿದ್ದ ಆ ಹನುಮಂತನನ್ನು ಅವರೆಲ್ಲರೂ ದಿಟ್ಟಿಸಿ ನೋಡುತ್ತಾ ತಮ್ಮ ಕಣ್ಣುಗಳ ನೋಟದಿಂದಲೇ ಒಯ್ಯುತ್ತಿರುವರೋ ಎಂಬಂತೆ ಅವನ ಕುರಿತು ಆದರಭಾವದಿಂದ ಅವನನ್ನೇ ನೋಡುತ್ತಿದ್ದರು.*॥4॥

ಟಿಪ್ಪನೀ
  • ಹನುಮಂತನ ಸಮುದ್ರೋಲ್ಲಂಘನದ ಮೊದಲು ವಾನರರೆಲ್ಲರೂ ಪ್ರಾಯೋಪವೇಶದಿಂದ ಸಾಯಲು ಸಿದ್ಧರಾಗಿ ದುಃಖಿಸುತ್ತಿದ್ದರು. ಆದರೆ ಮಾರುತಿಯು ಸೀತಾನ್ವೇಷಣಾದಿ ಕಾರ್ಯಗಳೆಲ್ಲವನ್ನು ಸಾಧಿಸಿ ಬಂದು ಅವರೆಲ್ಲರ ಪ್ರಾಣಗಳನ್ನು ಕಾಪಾಡಿದನು. ಅದರಿಂದಾಗಿ ವಾರರರೆಲ್ಲರೂ ಹರ್ಷೋಲ್ಲಾಸದಿಂದ ರೆಪ್ಪೆ ಮಿಟುಕಿಸದೇ ಪೂಜ್ಯಭಾವದಿಂದ ಆ ಪಾವಮಾನಿಯನ್ನು ನೋಡುತ್ತಾ ಇದ್ದರು.
ಮೂಲಮ್ - 5

ರಾಘವೇ ಚಾರ್ಥನಿರ್ವೃತ್ತಿಂ ಕರ್ತುಂ ಚ ಪರಮಂ ಯಶಃ ।
ಸಮಾಧಾಯ ಸಮೃದ್ಧಾರ್ಥಾಃ ಕರ್ಮಸಿದ್ಧಿಭಿರುನ್ನತಾಃ ॥

ಮೂಲಮ್ - 6

ಪ್ರಿಯಾಖ್ಯಾನೋನ್ಮುಖಾಃ ಸರ್ವೇ ಸರ್ವೇ ಯುದ್ಧಾಭಿನಂದಿನಃ ।
ಸರ್ವೇ ರಾಮಪ್ರತೀಕಾರೇ ನಿಶ್ಚಿತಾರ್ಥಾ ಮನಸ್ವಿನಃ ॥

ಅನುವಾದ

‘‘ಸೀತೆಯ ಜಾಡನ್ನು ತಿಳಿಯುವ ಕಾರ್ಯವು ಸಿದ್ಧಿಸಿದುದರಿಂದ ದೊಡ್ಡ ಯಶಸ್ಸನ್ನು ಹೊಂದಿ, ವಾನರರೆಲ್ಲರೂ ಕೃತಾರ್ಥರಾಗಿದ್ದರು. ಕಾರ್ಯಸಾಫಲ್ಯಲಾಭದಿಂದ ಅವರ ಮನಸ್ಸುಗಳು ಉತ್ಸಾಹ ಭರಿತರಾವಾಗಿದ್ದವು. ಈ ಸಂತೋಷ ವಾರ್ತೆಯನ್ನು ಶ್ರೀರಾಮನಿಗೆ, ಸುಗ್ರೀವನಿಗೆ ತಿಳಿಸಲು ನಾಮುಂದು-ತಾಮುಂದು ಎಂದು ಸಾಗುತ್ತಿದ್ದಾರೆ. ರಾವಣನನ್ನು ಯುದ್ಧದಲ್ಲಿ ಕೊಲ್ಲಲು ಎಲ್ಲರೂ ಉತ್ಸಾಹಿಗಳಾಗಿದ್ದಾರೆ. ಸುಗ್ರೀವನನ್ನು ರಾಜನನ್ನಾಗಿಸಿದ ಶ್ರೀರಾಮನಿಗೆ ಪ್ರತ್ಯುಪಕಾರವನ್ನು ಮಾಡಲು ಒಂದೇ ಮನಸ್ಸಿನಿಂದ ಕಟಿಬದ್ಧರಾಗಿದ್ದರು.॥5-6॥

ಮೂಲಮ್ - 7

ಪ್ಲವಮಾನಾಃ ಖಮುತ್ಪತ್ಯ ತತಸ್ತೇ ಕಾನನೌಕಸಃ ।
ನಂದನೋಪಮಮಾಸೇದುರ್ವನಂ ದ್ರುಮಲತಾಯುತಮ್ ॥

ಅನುವಾದ

ಆಗ ಆ ವಾನರರೆಲ್ಲರೂ ಆಕಾಶಮಾರ್ಗದಿಂದ ಮುಂದೆ ಸಾಗುತ್ತಿರುವಂತೆ, ವೃಕ್ಷಲತೆಗಳಿಂದ ಸಮೃದ್ಧವಾದ, ನಂದನವನದಂತೆ ಇದ್ದ ಮಧುವನವನ್ನು ಸೇರಿದರು.॥7॥

ಮೂಲಮ್ - 8

ಯತ್ತನ್ಮಧುವನಂ ನಾಮ ಸುಗ್ರೀವಸ್ಯಾಭಿರಕ್ಷಿತಮ್ ।
ಅಧೃಷ್ಯಂ ಸರ್ವಭೂತಾನಾಂ ಸರ್ವಭೂತಮನೋಹರಮ್ ॥

ಅನುವಾದ

ಆ ಮಧುವನವು ರಾಜನಾದ ಸುಗ್ರೀವನಿಗೆ ಸೇರಿದ್ದು, ಅವನ ರಕ್ಷಣೆಯಲ್ಲೇ ಇತ್ತು. ಅದು ಎಲ್ಲ ಪ್ರಾಣಿಗಳಿಗೂ ಆಹ್ಲಾದಕರವಾಗಿತ್ತು. ಆದರೆ ಸುಗ್ರೀವನ ಭಯದಿಂದ ಯಾರೂ ಕೂಡ ಅದನ್ನು ಮುಟ್ಟುತ್ತಿರಲಿಲ್ಲ.॥8॥

ಮೂಲಮ್ - 9

ಯದ್ರಕ್ಷತಿ ಮಹಾವೀರ್ಯಃ ಸದಾ ದಧಿಮುಖಃ ಕಪಿಃ ।
ಮಾತುಲಃ ಕಪಿಮುಖ್ಯಸ್ಯ ಸುಗ್ರೀವಸ್ಯ ಮಹಾತ್ಮನಃ ॥

ಅನುವಾದ

ದಧಿಮುಖನೆಂಬ ವಾನರನು ಮಹಾತ್ಮನಾದ, ವಾನರಪ್ರಭು ಸುಗ್ರೀವನಿಗೆ ಸೋದರಮಾವನು. ಆ ಮಹಾವೀರನು ಆ ವನವನ್ನು ನಿರಂತರವಾಗಿ ರಕ್ಷಿಸುತ್ತಿದ್ದನು.॥9॥

ಮೂಲಮ್ - 10

ತೇ ತದ್ವನಮುಪಾಗಮ್ಯ ಬಭೂವುಃ ಪರಮೋತ್ಕಟಾಃ ।
ವಾನರಾ ವಾನರೇಂದ್ರಸ್ಯ ಮನಃಕಾಂತತಮಂ ಮಹತ್ ॥

ಅನುವಾದ

ವಾನರೇಂದ್ರನಾದ ಸುಗ್ರೀವನಿಗೆ ಮಾನಸೋಲ್ಲಾಸವನ್ನು ಕೊಡುವ ಆ ಮಹಾವನವನ್ನು ಸಮೀಪಿಸುತ್ತಿರುವಂತೆ ವಾನರರೆಲ್ಲರೂ ಮಧುಪಾನ ಮಾಡಲು ಉತ್ಸುಕರಾದರು.॥10॥

ಮೂಲಮ್ - 11

ತತಸ್ತೇ ವಾನರಾ ಹೃಷ್ಟಾ ದೃಷ್ಟ್ವಾ ಮಧುವನಂ ಮಹತ್ ।
ಕುಮಾರಮಭ್ಯಯಾಚಂತ ಮಧೂನಿ ಮಧುಪಿಂಗಲಾಃ ॥

ಅನುವಾದ

ಬಳಿಕ ಮಧುವಿನಂತೆ ಪಿಂಗಳವರ್ಣದವರಾಗಿದ್ದ ಆ ವಾನರರೆಲ್ಲರೂ ಮಧುವನ್ನು ನೋಡಿ ಪರಮ ಸಂತೋಷಭರಿತರಾಗಿ, ಮಧುವನ್ನು ಕುಡಿಯಲಿಕ್ಕಾಗಿ ಅಂಗದನನ್ನು ಬೇಡಿಕೊಂಡರು.॥11॥

ಮೂಲಮ್ - 12

ತತಃ ಕುಮಾರಸ್ತಾನ್ ವೃದ್ಧಾನ್ ಜಾಂಬವತ್ಪ್ರಮುಖಾನ್ ಕಪೀನ್ ।
ಅನುಮಾನ್ಯ ದದೌ ತೇಷಾಂ ನಿಸರ್ಗಂ ಮಧುಭಕ್ಷಣೇ ॥

ಅನುವಾದ

ಆಗ ಯುವರಾಜನಾದ ಅಂಗದನು ವೃದ್ಧರಾದ ಜಾಂಬವಂತರೇ ಮೊದಲಾದ ಪ್ರಮುಖ ಕಪಿವೀರರೊಂದಿಗೆ ಸಮಾಲೋಚಿಸಿ, ಅವರಿಗೆ ಮಧುಪಾನಕ್ಕಾಗಿ ಅನುಮತಿಯನ್ನು ಕೊಟ್ಟನು.॥12॥

ಮೂಲಮ್ - 13

ತತಶ್ಚಾನುಮತಾಃ ಸರ್ವೇ ಸಂಪ್ರಹೃಷ್ಟಾ ವನೌಕಸಃ ।
ಮುದಿತಾಃ ಪ್ರೇರಿತಾಶ್ಚಾಪಿ ಪ್ರನೃತ್ಯಂತೋಭವಂಸ್ತತಃ ॥

ಅನುವಾದ

ಯುವರಾಜ ಕುಮಾರ ಅಂಗದನ ಅನುಮತಿಯನ್ನು ಪಡೆದ ಆ ಎಲ್ಲ ಕಪೀಶ್ವರರು ಮಧುಪಾನದಿಂದ ಅತ್ಯಂತ ಸಂತುಷ್ಟರಾಗಿ ಆನಂದೋತ್ಸಾಹದಿಂದ ಮತ್ತರಾಗಿ ನೃತ್ಯವಾಡತೊಡಗಿದರು.॥13॥

ಮೂಲಮ್ - 14

ಗಾಯಂತಿ ಕೇಚಿತ್ ಪ್ರಣಮಂತಿ ಕೇಚಿತ್
ನೃತ್ಯಂತಿ ಕೇಚಿತ್ ಪ್ರಹಸಂತಿ ಕೇಚಿತ್ ।
ಪತಂತಿ ಕೇಚಿದ್ವಿಚರಂತಿ ಕೇಚಿತ್
ಪ್ಲವಂತಿ ಕೇಚಿತ್ ಪ್ರಲಪಂತಿ ಕೇಚಿತ್ ॥

ಅನುವಾದ

ಆ ವಾನರರಲ್ಲಿ ಕೆಲವರು ಹಾಡುತ್ತಿದ್ದರು. ಕೆಲವರು ನೃತ್ಯವಾಡುತ್ತಿದ್ದರು. ಕೆಲವರು ಕಿಲ-ಕಿಲನೇ ನಗುತ್ತಿದ್ದರು. ಕೆಲವರು ಕೈಮುಗಿಯುತ್ತಿದ್ದರು. ಕೆಲವರು ಮೇಲಿನಿಂದ ಕೆಳಕ್ಕೆ ಧುಮುಕುತ್ತಿದ್ದರು. ಕೆಲವರು ಅಲ್ಲಲ್ಲಿ ತಿರುಗಾಡುತ್ತಿದ್ದರು. ಕೆಲವರು ನೆಗೆಯುತ್ತಿದ್ದರು. ಕೆಲವರು ಮನಬಂದಂತೆಗಳಹುತ್ತಿದ್ದರು.॥14॥

ಮೂಲಮ್ - 15

ಪರಸ್ಪರಂ ಕೇಚಿದುಪಾಶ್ರಯಂತೇ
ಪರಸ್ಪರಂ ಕೇಚಿದುಪಾಕ್ರಮಂತೇ ।
ಪರಸ್ಪರಂ ಕೇಚಿದುಪಬ್ರುವಂತೇ
ಪರಸ್ಪರಂ ಕೇಚಿದುಪಾರಮಂತೇ ॥

ಅನುವಾದ

ಕೆಲವರು ಒಬ್ಬರಿಗೊಬ್ಬರು ಆಶ್ರಯಿಸಿಕೊಂಡಿದ್ದರು. ಕೆಲವರು ಒಬ್ಬರನ್ನೊಬ್ಬರ ಬೆನ್ನಮೇಲೆ ನೆಗೆಯುತ್ತಿದ್ದರು. ಕೆಲವರು ಪರಸ್ಪರವಾಗಿ ಮಾತಾಡಿಕೊಳ್ಳುತ್ತಿದ್ದರು. ಕೆಲವರು ಪರಸ್ಪರ ಆಟವಾಡುತ್ತಿದ್ದರು.॥15॥

ಮೂಲಮ್ - 16

ದ್ರುಮಾದ್ದುರಮಂ ಕೇಚಿದಭಿದ್ರವಂತಿ
ಕ್ಷಿತೌ ನಗಾಗ್ರಾನ್ನಿ ಪತಂತಿ ಕೇಚಿತ್ ।
ಮಹೀತಲಾತ್ ಕೇಚಿದುದೀರ್ಣವೇಗಾ
ಮಹಾದ್ರುಮಾಗ್ರಾಣ್ಯಭಿಸಂಪತಂ ತಿ ॥

ಅನುವಾದ

ಕೆಲವರು ಒಂದು ಮರದಿಂದ ಮತ್ತೊಂದು ಮರಕ್ಕೆ ಜಿಗಿಯುತ್ತಿದ್ದರು, ಕೆಲವರು ಮರಗಳ ತುದಿಯಿಂದ ಕೆಳಗೆ ಭೂಮಿಗೆ ಧುಮುಕುತ್ತಿದ್ದರು. ಮತ್ತೆ ಕೆಲವು ವೇಗಶಾಲಿಗಳಾದ ಕಪಿಗಳು ನೆಲದಿಂದ ನೇರವಾಗಿ ಮರದತುದಿಗೆ ಹಾರುತ್ತಿದ್ದರು.॥16॥

ಮೂಲಮ್ - 17

ಗಾಯಂತಮನ್ಯಃ ಪ್ರಹಸನ್ನು ಪೈತಿ
ಹಸಂತಮನ್ಯಃ ಪ್ರರುದನ್ನು ಪೈತಿ ।
ರುದಂತಮನ್ಯಃ ಪ್ರಣದನ್ನು ಪೈತಿ
ನದಂತಮನ್ಯಃ ಪ್ರಣುದನ್ನು ಪೈತಿ ॥

ಅನುವಾದ

ಒಬ್ಬ ವಾನರನು ಗಾನಮಾಡುತ್ತಿದ್ದರೆ ಮತ್ತೊಬ್ಬ ವಾನರನು ಹಾಸ್ಯಮಾಡುತ್ತಾ ಅವನ ಬಳಿಗೆ ಹೋಗುತ್ತಿದ್ದನು. ಒಬ್ಬ ವಾನರನು ನಗುತ್ತಾ ಹೋಗುತ್ತಿದ್ದರೆ, ಮತ್ತೊಬ್ಬ ವಾನರನು ಅವನ ಬಳಿಗೆ ಅಳುತ್ತಾ ಹೋಗುವನು. ಅಳುತ್ತಿರುವ ವಾನರನನ್ನು ಮತ್ತೊಬ್ಬನು ತಿವಿಯುತ್ತಿದ್ದನು.॥17॥

ಮೂಲಮ್ - 18

ಸಮಾಕುಲಂ ತತ್ ಕಪಿಸೈನ್ಯಮಾಸೀ
ನ್ಮಧುಪ್ರಪಾನೋತ್ಕಟಸತ್ತ್ವಚೇಷ್ಟಮ್ ।
ನ ಚಾತ್ರ ಕಶ್ಚಿನ್ನ ಬಭೂವ ಮತ್ತೋ
ನ ಚಾತ್ರ ಕಶ್ಚಿನ್ನ ಬಭೂವ ತೃಪ್ತಃ ॥

ಅನುವಾದ

ಆ ವಾನರರೆಲ್ಲರೂ ಅತಿಯಾದ ಮಧುಪಾನ ಮಾಡಿದ್ದರಿಂದ ಅವರ ಮನಸ್ಸು ಚಂಚಲವಾಗಿತ್ತು. ಅವರ ವಿಕಾರವಾದ ಚೇಷ್ಟೆಗಳು ವನದ ಎಲ್ಲೆಡೆ ವ್ಯಾಪಿಸಿತು. ಅವರಲ್ಲಿ ಮಧುಪಾನದಿಂದ ಮತ್ತನಾಗದವನು ಒಬ್ಬನೂ ಉಳಿಯಲಿಲ್ಲ. ತೃಪ್ತಿಹೊಂದದವರೂ ಯಾರೂ ಇರಲಿಲ್ಲ.॥18॥

ಮೂಲಮ್ - 19

ತತೋ ವನಂ ತೈಃ ಪರಿಭಕ್ಷ್ಯಮಾಣಂ
ದ್ರುಮಾಂಶ್ಚ ವಿಧ್ವಂಸಿತಪತ್ರಪುಷ್ಪಾನ್ ।
ಸವಿಾಕ್ಷ್ಯ ಕೋಪಾದ್ಧಧಿವಕನಾಮಾ
ನಿವಾರಯಾಮಾಸ ಕಪಿಃ ಕಪೀಂಸ್ತಾನ್ ॥

ಅನುವಾದ

ಹೀಗೆ ಆ ಮಧುವನದಲ್ಲಿದ್ದ ಹಣ್ಣು-ಹಂಪಲುಗಳನ್ನು ತಿನ್ನುತ್ತಾ, ಮಧುವನ್ನು ಯಥೇಚ್ಛವಾಗಿ ಕುಡಿಯುತ್ತಾ, ಮದದಿಂದ ಕೊಬ್ಬಿ ವೃಕ್ಷಗಳ ಎಲೆಗಳನ್ನು, ಹೂವುಗಳನ್ನು ಕಿತ್ತುಹಾಕುವುದನ್ನು ನೋಡಿದ ವನಪಾಲಕನಾದ ದಧಿಮುಖನು ಎಲ್ಲ ಕಪಿನಾಯಕರನ್ನು ಹೊರಗಟ್ಟಲು ಪ್ರಯತ್ನಿಸಿದನು.॥19॥

ಮೂಲಮ್ - 20

ಸ ತೈಃ ಪೃವೃದ್ಧೈಃ ಪರಿಭರ್ತ್ಸ್ಯಮಾನೋ
ವನಸ್ಯ ಗೋಪ್ತಾ ಹರಿವೀರವೃದ್ಧಃ ।
ಚಕಾರ ಭೂಯೋ ಮತಿಮುಗ್ರತೇಜಾ
ವನಸ್ಯ ರಕ್ಷಾಂ ಪ್ರತಿ ವಾನರೇಭ್ಯಃ ॥

ಅನುವಾದ

ವಾನರ ವೀರರು ವೃದ್ಧನೂ, ವನಸಂರಕ್ಷಕನೂ ಆದ ಆ ದಧಿಮುಖನ ಮಾತನ್ನು ಯಾರೂ ಲೆಕ್ಕಿಸದೆ ಅವರು ವಿಪರೀತವಾಗಿ ವರ್ತಿಸುತ್ತಾ ಅವನನ್ನೇ ಭಯಪಡಿಸತೊಡಗಿದರು. ಆದರೆ ಮಹಾಪರಾಕ್ರಮಿಯಾದ ದಧಿಮುಖನು ಅವರೆಲ್ಲರನ್ನು ಎದುರಿಸಿ ವನವನ್ನು ರಕ್ಷಿಸಲು ಪುನಃ ಪ್ರಯತ್ನಿಸಿದನು.॥20॥

ಮೂಲಮ್ - 21

ಉವಾಚ ಕಾಂಶ್ಚಿತ್ ಪರುಷಾಣಿ ಧೃಷ್ಟ
ಮಸಕ್ತಮನ್ಯಾಂಶ್ಚ ತಲೈರ್ಜಘಾನ ।
ಸಮೇತ್ಯ ಕೈಶ್ಚಿತ್ ಕಲಹಂ ಚಕಾರ
ತಥೈವ ಸಾಮ್ನೋಪಜಗಾಮ ಕಾಂಶ್ಚಿತ್ ॥

ಅನುವಾದ

ಕೆಲವರೊಡನೆ ಧಾಷ್ಟರ್ಘ್ಯಿದಿಂದ ಕಠೋರವಾಗಿಯೇ ಮಾತಾಡಿದನು. ಮತ್ತೆ ಕೆಲವರನ್ನು ಹಿಂದಿನ ಸಂಬಂಧವನ್ನು ಮರೆತು ಅಂಗೈಗಳಿಂದ ಚಚ್ಚಿದನು. ಕೆಲವರೊಡನೆ ಜಗಳಕಾದನು. ಕೆಲವರೊಡನೆ ಒಳ್ಳೆಯ ಮಾತುಗಳನ್ನಾಡಿದನು.॥21॥

ಮೂಲಮ್ - 22

ಸ ತೈರ್ಮದಾತ್ ಸಂಪರಿವಾರ್ಯ ವಾಕ್ಯೈ
ರ್ಬಲಾಚ್ಚ ತೇನ ಪ್ರತಿವಾರ್ಯಮಾಣೈಃ ।
ಪ್ರಧರ್ಷಿತಸ್ತ್ಯಕ್ತಭಯೈಃ ಸಮೇತ್ಯ
ಪ್ರಕೃಷ್ಯತೇ ಚಾಪ್ಯನವೇಕ್ಷ್ಯ ದೋಷಮ್ ॥

ಮೂಲಮ್ - 23

ನಖೈಸ್ತುದಂತೋ ದಶನೈರ್ದಶಂತಃ
ತಲೈಶ್ಚ ಪಾದೈಶ್ಚ ಸಮಾಪಯಂತಃ ।
ಮದಾತ್ ಕಪಿಂ ತಂ ಕಪಯಃ ಸಮಗ್ರಾ
ಮಹಾವನಂ ನಿರ್ವಿಷಯಂ ಚ ಚಕ್ರುಃ ॥

ಅನುವಾದ

ಆದರೆ ಮಧುಪಾದಿಂದ ಮದಿಸಿದ್ದ ಅವರನ್ನು ಹೆಚ್ಚು ಕಾಲ ತಡೆಯಲು ಅವನಿಂದ ಸಾಧ್ಯವಾಗಲಿಲ್ಲ. ಅದರಲ್ಲಿಯೂ ಅಂಗದನೇ ಅನುಮತಿಯಿತ್ತಿದ್ದ ಕಾರಣ ಅವರು ದಧಿಮುಖನ ಜೊತೆಗೆ ಜಗಳಕ್ಕೆ ನಿಂತರು. ತಾವು ಮಾಡುತ್ತಿರುವ ಅಪರಾಧಕ್ಕೆ ರಾಜದಂಡನೆಯಾಗುವುದನ್ನು ಅವರು ಮರೆತಿದ್ದರು. ಅವರೆಲ್ಲ ಸೇರಿ ದಧಿಮುಖನನ್ನು ಹಿಡಿದು ಅತ್ತಿತ್ತ ಎಳೆದಾಡತೊಡಗಿದರು. ಮದಿಸಿದ್ದ ವಾನರರಲ್ಲಿ ಕೆಲವರು ತೊಡೆಗಳ ಮಧ್ಯದಲ್ಲಿ ಸೇರಿಸಿಕೊಂಡು ಪರಚುತ್ತಿದ್ದರು. ಕೆಲವರು ಹಲ್ಲುಗಳಿಂದ ಅವನನ್ನು ಕಚ್ಚುತ್ತಿದ್ದರು. ಕೆಲವರು ಅಂಗೈಗಳಿಂದಲೂ, ಕಾಲುಗಳಿಂದಲೂ ಪ್ರಹರಿಸುತ್ತಿದ್ದರು. ಹೀಗೆ ಅವರೆಲ್ಲರೂ ಆ ಮಧುವನವನ್ನು ಧ್ವಂಸ ಮಾಡಿಬಿಟ್ಟರು.॥22-23॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕಷಷ್ಠಿತಮಃ ಸರ್ಗಃ ॥ 61 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಅರವತ್ತೊಂದನೆಯ ಸರ್ಗವು ಮುಗಿಯಿತು.