०६० जाम्बवता मार्गदर्शनम्

वाचनम्
ಭಾಗಸೂಚನಾ

ಲಂಕೆಯನ್ನು ಜಯಿಸಿ ಸೀತೆಯನ್ನು ಕರೆತರುವುದರಲ್ಲಿ ಅಂಗದನ ಉತ್ಸಾಹ, ಜಾಂಬವಂತರ ಅಸಮ್ಮತಿ

ಮೂಲಮ್ - 1

ತಸ್ಯ ತದ್ವಚನಂ ಶ್ರುತ್ವಾ ವಾಲಿಸೂನುರಭಾಷತ ।
ಅಯುಕ್ತಂ ತು ವಿನಾ ದೇವೀಂ ದೃಷ್ಟವದ್ಭಿಶ್ಚ ವಾನರಾಃ ॥

ಮೂಲಮ್ - 2

ಸವಿಾಪಂ ಗಂತುಮಸ್ಮಾಭೀ ರಾಘವಸ್ಯ ಮಹಾತ್ಮನಃ ।
ವಾಯುಸೂನೋರ್ಬಲೇನೈನ ದಗ್ಧಾ ಲಂಕೇತಿ ನಃ ಶ್ರುತಮ್ ।
ದೃಷ್ಟಾ ದೇವೀ ನ ಚಾನೀತಾ ಇತಿ ತತ್ರ ನಿವೇದನಮ್ ॥

ಮೂಲಮ್ - 3

ಅಯುಕ್ತಮಿವ ಪಶ್ಯಾಮಿ ಭವದ್ಭಿಃ ಖ್ಯಾತವಿಕ್ರಮೈಃ ।
ನ ಹಿ ನಃ ಪ್ಲವನೇ ಕಶ್ಚಿನ್ನಾಪಿ ಕಶ್ಚಿತ್ ಪರಾಕ್ರಮೇ ॥

ಮೂಲಮ್ - 4

ತುಲ್ಯಃ ಸಾಮರದೈತ್ಯೇಷು ಲೋಕೇಷು ಹರಿಸತ್ತಮಾಃ ।
ತೇಷ್ವೇವಂ ಹತವೀರೇಷು ರಾಕ್ಷಸೇಷು ಹನೂಮತಾ ॥

ಮೂಲಮ್ - 5

ಕಿಮನ್ಯದತ್ರ ಕರ್ತವ್ಯಂ ಗೃಹಿತ್ವಾ ಯಾಮ ಜಾನಕೀಮ್ ।
ರಾಮಲಕ್ಷ್ಮಣಯೋರ್ಮಧ್ಯೇ ನ್ಯಸ್ಯಾಮ ಜನಕಾತ್ಮಜಾಮ್ ॥

ಅನುವಾದ

ಹನುಮಂತನ ಮಾತುಗಳನ್ನು ಕೇಳಿ ವಾಲಿಯ ಮಗನಾದ ಅಂಗದನು ಇಂತೆಂದನು ವಾನರಶ್ರೇಷ್ಠರೇ! ಸೀತಾದೇವಿಯನ್ನು ಕಂಡ ಬಳಿಕವೂ ಕೂಡ ನಾವು ಅವಳಿಲ್ಲದೆ ಮಹಾತ್ಮನಾದ ಶ್ರೀರಾಮಚಂದ್ರನ ಬಳಿಗೆ ಹೋಗುವುದು ಸೂಕ್ತವಾಗಿ ಕಾಣುವುದಿಲ್ಲ. ವಾಯುಪುತ್ರನಾದ ಹನುಮಂತನ ಪರಾಕ್ರಮದಿಂದಲೇ ಲಂಕೆಯು ಸುಟ್ಟುಹೋಗಿದೆ ಎಂದು ನಾವು ಕೇಳಿದ್ದೇವೆ. ‘‘ಸೀತಾದೇವಿಯನ್ನು ನೋಡಿದೆವು ಆದರೆ ಕರೆತರಲಿಲ್ಲ’’ ಎಂದು ಶ್ರೀರಾಮನಿಗೆ ನಿವೇದಿಸಿಕೊಳ್ಳುವುದು, ನಮ್ಮಂತಹ ಪರಾಕ್ರಮಿಗಳಿಗೆ, ಖ್ಯಾತರಾದವರಿಗೆ ತಕ್ಕುದಲ್ಲವೆಂದೇ ನನ್ನ ಅಭಿಪ್ರಾಯವು. ಎಲೈ ವಾನರೋತ್ತಮರಿರಾ! ಆಕಾಶಕ್ಕೆ ಹಾರುವುದರಲ್ಲಾಗಲೀ, ಪರಾಕ್ರಮದಲ್ಲಾಗಲೀ, ಮೂರು ಲೋಕಗಳಲ್ಲಿ, ದೇವ-ದಾನವರಲ್ಲಿಯೂ ಕೂಡ ನಮಗೆ ಸಮಾನರಾದವರೂ ಯಾರೂ ಇಲ್ಲ. ಆದುದರಿಂದ ನಾವೀಗಲೇ ಲಂಕೆಗೆ ಹೋಗಿ ರಾಕ್ಷಸರೆಲ್ಲರನ್ನು ಜಯಿಸಿ, ರಣರಂಗದಲ್ಲಿ ಆ ರಾವಣನನ್ನು ಸಂಹರಿಸಿ, ಕೃತ-ಕೃತ್ಯರಾಗಿ, ಸಂತುಷ್ಟವಾದ ಮನಸ್ಸಿನಿಂದ ಸೀತಾದೇವಿಯನ್ನು ಕರಕೊಂಡು ಶ್ರೀರಾಮನ ಬಳಿಗೆ ಹೋಗೋಣ. ಹನುಮಂತನು ಅಲ್ಲಿ ರಾಕ್ಷಸ ವೀರರೆಲ್ಲರನ್ನು ಕೊಂದಿರುವನು. ಇನ್ನು ನಮಗೆ ಅಲ್ಲಿ ಮಾಡಬೇಕಾದುದೇನಿದೆ? ಜಾನಕೀದೇವಿಯನ್ನು ಕರಕೊಂಡು ಬರುವುದು ಮಾತ್ರ ಉಳಿದಿದೆ. ಶ್ರೀರಾಮ-ಲಕ್ಷ್ಮಣರ ಮಧ್ಯದಲ್ಲಿ ಸೀತಾದೇವಿಯನ್ನು ನಿಲ್ಲಿಸೋಣ.॥1-5॥

ಮೂಲಮ್ - 6

ಕಿಂ ವ್ಯಲೀಕೈಸ್ತು ತಾನ್ ಸರ್ವಾನ್ ವಾನರಾನ್ ವಾನರರ್ಷಭಾನ್ ।
ವಯಮೇವ ಹಿ ಗತ್ವಾ ತಾನ್ ಹತ್ವಾ ರಾಕ್ಷಸಪುಂಗವಾನ್ ।
ರಾಘವಂ ದ್ರಷ್ಟುಮರ್ಹಾಮಃ ಸುಗ್ರೀವಂ ಸಹಲಕ್ಷಘ್ಮಿಣಮ್ ॥

ಅನುವಾದ

ಈ ಎಲ್ಲ ವಾನರರಿಗೆ, ವಾನರ ಪ್ರಮುಖರಿಗೆ ಕಷ್ಟ ಕೊಡುವುದು ಏಕೆ? ನಾವೇ ಲಂಕೆಗೆ ಹೋಗಿ ರಾಕ್ಷಸರೆಲ್ಲರನ್ನು ಸಂಹರಿಸಿ, ಸೀತಾದೇವಿಯನ್ನು ಕರಕೊಂಡು ಬಂದು. ಲಕ್ಷ್ಮಣ ಸಮೇತನಾದ ಶ್ರೀರಾಮನನ್ನು, ಸುಗ್ರೀವನನ್ನು ನೋಡುವುದು ಯುಕ್ತವೆಂದು ನನಗೆ ತೋರುತ್ತದೆ.॥6॥

ಮೂಲಮ್ - 7

ತಮೇವಂ ಕೃತಸಂಕಲ್ಪಂ ಜಾಂಬವಾನ್ ಹರಿಸತ್ತಮಃ ।
ಉವಾಚ ಪರಮಪ್ರೀತೋ ವಾಕ್ಯಮರ್ಥವದರ್ಥವಿತ್ ॥

ಅನುವಾದ

ಕಾರ್ಯಸಾಧಕ ನಿಷ್ಣಾತನೂ, ಭಲ್ಲೂಕ ಪ್ರಮುಖನೂ ಆದ ಜಾಂಬವಂತನು ಅಂಗದನ ಸಂಕಲ್ಪವನ್ನು ಕೇಳಿ ಅವನ ಬಳಿ ಅರ್ಥವತ್ತಾದ ಮಾತನ್ನು ಪ್ರೀತಿಯಿಂದ ಹೇಳಿದನು.॥7॥

ಮೂಲಮ್ - 8

ನೈಷಾ ಬುದ್ಧಿರ್ಮಹಾಬುದ್ಧೇ ಯದ್ಬ್ರವೀಷಿ ಮಹಾಕಪೇ ।
ವಿಚೇತುಂ ವಯಮಾಜ್ಞಪ್ತಾ ದಕ್ಷಿಣಾಂ ದಿಶಮುತ್ತಮಾಮ್ ॥

ಮೂಲಮ್ - 9

ನಾನೇತುಂ ಕಪಿರಾಜೇನ ನೈವ ರಾಮೇಣ ಧೀಮತಾ ॥

ಮೂಲಮ್ - 10

ಕಥಂಚಿನ್ನಿರ್ಜಿತಾಂ ಸೀತಾಮಸ್ಮಾಭಿರ್ನಾಭಿರೋಚಯೇತ್ ।
ರಾಘವೋ ನೃಪಶಾರ್ದೂಲಃ ಕುಲಂ ವ್ಯಪದಿಶನ್ ಸ್ವಕಮ್ ॥

ಅನುವಾದ

ಪ್ರಜ್ಞಾಶಾಲಿಯಾದ ಎಲೈ ಅಂಗದಾ! ನೀನು ಹೇಳುತ್ತಿರುವ ಮಾತುಗಳು ಸಮುಚಿತವೆಂದು ಕಂಡುಬರುವುದಿಲ್ಲ. ವಾನರ ಪ್ರಭುವಾದ ಸುಗ್ರೀವನು, ಪ್ರಜ್ಞಾಶಾಲಿಯಾದ ಶ್ರೀರಾಮನು ದಕ್ಷಿಣದಿಕ್ಕಿನಲ್ಲಿ ಸೀತೆಯನ್ನು ಹುಡುಕಲು ಮಾತ್ರ ನಮಗೆ ಆಜ್ಞೆ ಕೊಟ್ಟಿರುವರು. ಅವಳನ್ನು ಕರೆತರುವುದಕ್ಕಲ್ಲ. ಮೇಲಾಗಿ ನಾವು ರಾಕ್ಷಸರನ್ನು ಜಯಿಸಿ ಸೀತೆಯನ್ನು ಕರೆತರುವುದು ಶ್ರೀರಾಮನಿಗೆ ರುಚಿಸದು. ಶ್ರೀರಾಮನು ರಾಜಸಿಂಹನು. ಅವನು ತನ್ನ ಪರಾಕ್ರಮದಿಂದಲೇ ಸೀತಾದೇವಿಯನ್ನು ಕರತರುವನೇ ಹೊರತು, ಬೇರೆಯವರ ಪರಾಕ್ರಮವನ್ನು ಅವಲಂಬಿಸಲಾರನು.॥8-10॥

ಮೂಲಮ್ - 11

ಪ್ರತಿಜ್ಞಾಯು ಸ್ವಯಂ ರಾಜಾ ಸೀತಾವಿಜಯಮಗ್ರತಃ ।
ಸರ್ವೇಷಾಂ ಕಪಿಮುಖ್ಯಾನಾಂ ಕಥಂ ಮಿಥ್ಯಾ ಕರಿಷ್ಯತಿ ॥

ಮೂಲಮ್ - 12

ವಿಲಂ ಕರ್ಮ ಚ ಕೃತಂ ಭವೇತ್ತುಷ್ಟಿರ್ನ ತಸ್ಯ ಚ ।
ವೃಥಾ ಚ ದರ್ಶಿತಂ ವೀರ್ಯಂ ಭವೇದ್ವಾನರಪುಂಗವಾಃ ॥

ಅನುವಾದ

ಆ ಪ್ರಭುವು ಎಲ್ಲ ವಾನರರ ಸಮಕ್ಷಮದಲ್ಲಿ ‘‘ಶತ್ರುವನ್ನು ಜಯಿಸಿ ಸೀತೆಯನ್ನು ಪಡೆಯುವೆನು’’ ಎಂದು ತನ್ನ ವಂಶದ ಮೇಲೆ ಆಣೆಯಿಟ್ಟು ಪ್ರತಿಜ್ಞೆ ಮಾಡಿರುವನು. ನಾವು ಎಲ್ಲಾದರೂ ಸೀತೆಯನ್ನು ಕರೆದುಕೊಂಡು ಬಂದರೆ ಅವನ ಪ್ರತಿಜ್ಞೆ ವ್ಯರ್ಥವಾದೀತು. ಅದರಿಂದ ಅವನಿಗೆ ಸಂತೋಷವೂ ಆಗಲಾರದು. ನಾವು ತೋರಿದ ಪರಾಕ್ರಮವೂ ವ್ಯರ್ಥವಾಗುತ್ತದೆ. ॥11-12॥

ಮೂಲಮ್ - 13

ತಸ್ಮಾದ್ಗಚ್ಛಾಮ ವೈ ಸರ್ವೇ ಯತ್ರ ರಾಮಃ ಸಲಕ್ಷ್ಮಣಃ ।
ಸುಗ್ರೀವಶ್ಚ ಮಹಾತೇಜಾಃ ಕಾರ್ಯಸ್ಯಾಸ್ಯ ನಿವೇದನೇ ॥

ಅನುವಾದ

ಆದುದರಿಂದ ನಾವೆಲ್ಲರೂ ಶ್ರೀರಾಮ-ಲಕ್ಷ್ಮಣರು, ಮಹಾತೇಜಶ್ಶಾಲಿಯಾದ ಸುಗ್ರೀವನು ಇರುವಲ್ಲಿಗೆ ಹೋಗೋಣ. ಇಷ್ಟರವರೆಗೆ ಜರುಗಿದ ಎಲ್ಲ ವಿಷಯಗಳನ್ನು ಅವರಿಗೆ ನಿವೇದಿಸಿಕೊಳ್ಳುವಾ.॥13॥

ಮೂಲಮ್ - 14

ನ ತಾವದೇಷಾ ಮತಿರಕ್ಷಮಾ ನೋ
ಯಥಾ ಭವಾನ್ ಪಶ್ಯತಿ ರಾಜಪುತ್ರ ।
ಯಥಾ ತು ರಾಮಸ್ಯ ಮತಿರ್ನಿವಿಷ್ಟಾ
ತಥಾ ಭವಾನ್ ಪಶ್ಯತು ಕಾರ್ಯಸಿದ್ಧಿಮ್ ॥

ಅನುವಾದ

ರಾಜಪುತ್ರ ಅಂಗದನೇ! ನಿನ್ನ ವಿಚಾರವು ನಿನ್ನ ದೃಷ್ಟಿಗೆ ಮತ್ತು ನಿನ್ನ ಪರಾಕ್ರಮಕ್ಕೆ ಇವೆಲ್ಲವೂ ಯೋಗ್ಯವೇ ಆಗಿದೆ. ಇದೆಲ್ಲವನ್ನು ನಾವು ಅನುಸರಿಸಬಾರದೆಂದೆನೂ ಇಲ್ಲ. ಆದರೆ ಶ್ರೀರಾಮನ ಅಭಿಪ್ರಾಯಕ್ಕನುಸಾರವಾಗಿ ನಾವು ಕಾರ್ಯಸಿದ್ಧಿಗಾಗಿ ಪ್ರಯತ್ನಿಸುವುದು ಯುಕ್ತವಾಗಿದೆ. ಅವನಿಗೆ ಸಂತೋಷವಾಗುವಂತೆ ನಡೆಯುವುದೇ ನಮಗೆಲ್ಲರಿಗೆ ಕರ್ತವ್ಯವಾಗಿದೆ.॥14॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಷಷ್ಠಿತಮಃ ಸರ್ಗಃ ॥ 60 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಅರವತ್ತನೆಯ ಸರ್ಗವು ಮುಗಿಯಿತು.