वाचनम्
ಭಾಗಸೂಚನಾ
ಹನುಮಂತನು ಸೀತೆಯ ದುರವಸ್ಥೆಯನ್ನು ತಿಳಿಸುತ್ತಾ ಲಂಕೆಯ ಆಕ್ರಮಣಕ್ಕಾಗಿ ವಾನರರನ್ನು ಉತ್ತೇಜಿಸಿದುದು
ಮೂಲಮ್ - 1
ಏತದಾಖ್ಯಾಯ ತತ್ ಸರ್ವಂ ಹನುಮಾನ್ ಮಾರುತಾತ್ಮಜಃ ।
ಭೂಯಃ ಸಮುಪಚಕ್ರಾಮ ವಚನಂ ವಕ್ತುಮುತ್ತರಮ್ ॥
ಅನುವಾದ
ವಾಯುಪುತ್ರನಾದ ಹನುಮಂತನು ಹೀಗೆ ಎಲ್ಲ ವಿಷಯಗಳನ್ನು ಕಪಿನಾಯಕರಿಗೆ ಹೇಳಿ, ಅವರ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಇನ್ನೂ ಕೆಲವು ಮಾತುಗಳನ್ನು ಹೇಳಲು ಪಕ್ರಮಿಸಿದನು.॥1॥
ಮೂಲಮ್ - 2
ಸಲೋ ರಾಘವೋದ್ಯೋಗಃ ಸುಗ್ರೀವಸ್ಯ ಚ ಸಂಭ್ರಮಃ ।
ಶೀಲಮಾಸಾದ್ಯ ಸೀತಾಯಾ ಮಮ ಚ ಪ್ರವಣಂ ಮನಃ ।
ಆರ್ಯಾಯಾಃ ಸದೃಶಂ ಶೀಲಂ ಸೀತಾಯಾಃ ಪ್ಲವಗರ್ಷಭಾಃ ॥
ಅನುವಾದ
ವಾನರಶ್ರೇಷ್ಠರೇ! ಶ್ರೀರಾಮನ ಪ್ರಯತ್ನವು ಸಫಲವಾಯಿತು. ಸುಗ್ರೀವನ ಕಾರ್ಯೋತ್ಸಾಹವೂ ಫಲಿಸಿತು. ರಾಮ-ಸುಗ್ರೀವರ ಮೈತ್ರಿಯು ಧೃಢವಾಯಿತು. ಸೀತಾದೇವಿಯ ಪಾತಿವ್ರತ್ಯವನ್ನು ತಿಳಿದು ನನ್ನ ಮನಸ್ಸು ಭಕ್ತಿಯಿಂದ ಪರವಶವಾಯಿತು.ಸೌಶೀಲ್ಯ ಪಾತಿವ್ರತ್ಯ ಮುಂತಾದ ವಿಷಯದಲ್ಲಿ ಆರ್ಯೆಯಾದ ಸೀತಾದೇವಿಗೆ ಸೀತಾದೇವಿಯೇ ಸಾಟಿ. ಇವುಗಳು ಬೇರೆ ಯಾರಲ್ಲೂ ಇರಲು ಸಾಧ್ಯವೇ ಇಲ್ಲ.॥2॥
ಮೂಲಮ್ - 3
ತಪಸಾ ಧಾರಯೇಲ್ಲೋಕಾನ್ ಕ್ರುದ್ಧೋ ವಾ ನಿರ್ದಹೇದಪಿ ।
ಸರ್ವಥಾತಿಪ್ರವೃದ್ಧೋಸೌ ರಾವಣೋ ರಾಕ್ಷಸಾಧಿಪಃ ॥
ಅನುವಾದ
ರಾಕ್ಷಸರಾಜನಾದ ರಾವಣನೂ ತನ್ನ ತಪಶ್ಶಕ್ತಿಯಿಂದ ಮೂರು ಲೋಕಗಳನ್ನಾದರೂ ಧರಿಸಬಲ್ಲನು. ಕೋಪಗೊಂಡರೆ ಮೂರು ಲೋಕಗಳನ್ನೂ ದಹಿಸಬಲ್ಲನು. ಅವನು ಎಲ್ಲ ವಿಧದಿಂದಲೂ ದೊಡ್ಡವನೇ. ಸೀತಾದೇವಿಯ ಶರೀರವನ್ನು ಮುಟ್ಟಿಯೂ ಆತನು ತನ್ನ ತಪಸ್ಸಿನಿಂದಾಗಿ ವಿನಾಶಹೊಂದಲಿಲ್ಲ.॥3॥
ಮೂಲಮ್ - 4
ತಸ್ಯ ತಾಂ ಸ್ಪೃಶತೋ ಗಾತ್ರಂ ತಪಸಾ ನ ವಿನಾಶಿತಮ್ ।
ನ ತದಗ್ನಿಶಿಖಾ ಕುರ್ಯಾತ್ ಸಂಸ್ಪೃಷ್ಟಾ ಪಾಣಿನಾ ಸತೀ ॥
ಮೂಲಮ್ - 5
ಜನಕಸ್ಯಾತ್ಮಜಾ ಕುರ್ಯಾದ್ಯತ್ ಕ್ರೋಧಕಲುಷೀಕೃತಾ ।
ಜಾಂಬವತ್ಪ್ರಮುಖಾನ್ ಸರ್ವಾನನುಜ್ಞಾಪ್ಯ ಮಹಾಹರೀನ್ ॥
ಅನುವಾದ
ಜನಕಾತ್ಮಜೆಯಾದ ಸೀತಾದೇವಿಯು ಕೋಪಗೊಂಡರೆ, ಕೇವಲ ತನ್ನ ಕರಸ್ಪರ್ಶದಿಂದಲೇ ಏನನ್ನಾದರೂ ಭಸ್ಮವಾಗಿಸಬಲ್ಲಳು. ಆ ರೀತಿ ಅಗ್ನಿಯಿಂದಲೂ ಸಾಧ್ಯವಾಗದು. ಅಗ್ನಿಯ ಜ್ವಾಲೆಗಿಂತಲೂ ಸೀತಾದೇವಿಯ ಕೋಪವು ವಿಶಿಷ್ಟವಾದುದು.॥5॥
ಮೂಲಮ್ - 6
ಅಸ್ಮಿನ್ನೇವಂಗತೇ ಕಾರ್ಯೇ ಭವತಾಂ ಚ ನಿವೇದಿತೇ ।
ನ್ಯಾಯ್ಯಂ ಸ್ಮ ಸಹ ವೈದೇಹ್ಯಾ ದ್ರಷ್ಟುಂ ತೌ ಪಾರ್ಥಿವಾತ್ಮಜೌ ॥
ಅನುವಾದ
ಇಷ್ಟರವರೆಗೆ ಜರುಗಿದ ಎಲ್ಲ ಕಾರ್ಯವಿಶೇಷಗಳನ್ನು ನಿಮಗೆ ವಿವರಿಸಿರುವೆ. ಜಾಂಬವಂತನೇ ಮೊದಲಾದ ವಾನರ ಪ್ರಮುಖರೆಲ್ಲರ ಅನುಜ್ಞೆಗನುಸಾರವಾಗಿ - ಸೀತೆಯನ್ನು ಬಿಡಿಸಿ ತಂದು, ಅವಳೊಡನೆ ನಾವು ಆ ರಾಮ-ಲಕ್ಷ್ಮಣರನ್ನು ಸಂದರ್ಶಿಸುವುದು ಯುಕ್ತವೆಂದು ಕಾಣುತ್ತದೆ.॥6॥
ಮೂಲಮ್ - 7
ಅಹಮೇಕೋಽಪಿ ಪರ್ಯಾಪ್ತಃ ಸರಾಕ್ಷಸಗಣಾಂ ಪುರೀಮ್ ।
ತಾಂ ಲಂಕಾಂ ತರಸಾ ಹಂತುಂ ರಾವಣಂ ಚ ಮಹಾಬಲಮ್ ॥
ಅನುವಾದ
ಆ ಲಂಕೆಯಲ್ಲಿರುವ ಎಲ್ಲ ರಾಕ್ಷಸ ಸಮೂಹಗಳನ್ನು, ಲಂಕೆಯನ್ನು ಧ್ವಂಸಮಾಡಲು, ಮಹಾಬಲಶಾಲಿಯಾದ ರಾವಣನನ್ನು ಸಂಹರಿಸಲು ನಾನೊಬ್ಬನೇ ಸಾಕು.॥7॥
ಮೂಲಮ್ - 8
ಕಿಂ ಪುನಃ ಸಹಿತೋ ವೀರೈರ್ಬಲವದ್ಬಿಃ ಕೃತಾತ್ಮಭಿಃ ।
ಕೃತಾಸೈಃ ಪ್ಲವಗೈಃ ಶೂರೈರ್ಭವದ್ಭಿರ್ವಿಜಯೈಷಿಭಿಃ ॥
ಅನುವಾದ
ಹೀಗಿರುವಾಗ, ವಿಜಯೇಚ್ಛುಗಳಾದ, ವೀರರಾದ, ಬಲಿಷ್ಠರಾದ, ಜಿತೇಂದ್ರಿಯರಾದ, ಅಸ್ತ್ರವಿಶಾರದರಾದ, ಮಹಾ ಶಕ್ತಿಶಾಲಿಗಳಾದ ನಿಮ್ಮೊಡನೆ ಹೋದರೆ ಮತ್ತೆ ಹೇಳುವುದೇನಿದೆ?॥8॥
ಮೂಲಮ್ - 9
ಅಹಂ ತು ರಾವಣಂ ಯುದ್ಧೇ ಸಸೈನ್ಯಂ ಸಪುರಃಸರಮ್ ।
ಸಹಪುತ್ರಂ ವಧಿಷ್ಯಾಮಿ ಸಹೋದರಯುತಂ ಯುಧಿ ॥
ಅನುವಾದ
ರಾವಣನನ್ನೂ, ಆತನ ಸೈನ್ಯವನ್ನೂ, ಅಂಗರಕ್ಷಕರನ್ನೂ, ಪುತ್ರರನ್ನೂ, ಸಹೋದರ ಕುಂಭಕರ್ಣನನ್ನು, ಹೀಗೆ ಎಲ್ಲರನ್ನೂ ಯುದ್ಧದಲ್ಲಿ ನಾನೊಬ್ಬನೇ ಮಣ್ಣುಗೂಡಿಸಬಲ್ಲೆ.॥9॥
ಮೂಲಮ್ - 10
ಬ್ರಾಹ್ಮಮೈಂದ್ರಂ ಚ ರೌದ್ರಂ ಚ ವಾಯವ್ಯಂ ವಾರುಣಂ ತಥಾ ।
ಯದಿ ಶಕ್ರಜಿತೋಸಾಣಿ ದುರ್ನಿರೀಕ್ಷ್ಯಾಣಿ ಸಂಯುಗೇ ॥
ಮೂಲಮ್ - 11
ತಾನ್ಯಹಂ ವಿಧಮಿಷ್ಯಾಮಿ ನಿಹನಿಷ್ಯಾಮಿ ರಾಕ್ಷಸಾನ್ ।
ಭವತಾಮಭ್ಯನುಜ್ಞಾತೋ ವಿಕ್ರಮೋ ಮೇ ರುಣದ್ಧಿ ತಮ್ ॥
ಅನುವಾದ
ಇಂದ್ರಜಿತುವು ಯುದ್ಧದಲ್ಲಿ ಬ್ರಹ್ಮಾಸ್ತ್ರ, ಐಂದ್ರಾಸ್ತ್ರ, ರೌದ್ರಾಸ್ತ್ರ, ವಾಯವ್ಯಾಸ್ತ್ರ, ವಾರುಣಾಸ್ತ್ರ, ಮುಂತಾದ ದೊಡ್ಡ-ದೊಡ್ಡ ಅಸ್ತ್ರಗಳನ್ನು ಪ್ರಯೋಗಿಸಿದರೂ, ಅವೆಲ್ಲವನ್ನು ನಾನು ವಿನಾಶಗೊಳಿಸಿ, ಎಲ್ಲ ರಾಕ್ಷಸರನ್ನು ಧ್ವಂಸಮಾಡುವೆನು. ನನ್ನ ಪರಾಕ್ರಮವು ಅಲ್ಲಿಗೆ ಹೋಗಲು ಆತುರಪಡಿಸುತ್ತಿದೆ. ಆದರೆ ನಿಮ್ಮ ಅನುಮತಿ ಇಲ್ಲವಲ್ಲ! ನಿಮ್ಮ ಆಜ್ಞೆ ಆಗುವುದೇ ತಡವಾಗಿದೆ.॥10-11॥
ಮೂಲಮ್ - 12
ಮಯಾತುಲಾ ವಿಸೃಷ್ಟಾ ಹಿ ಶೈಲವೃಷ್ಟಿರ್ನಿರಂತರಾ ।
ದೇವಾನಪಿ ರಣೇ ಹನ್ಯಾತ್ ಕಿಂ ಪುನಸ್ತಾನ್ನಿಶಾಚರಾನ್ ॥
ಅನುವಾದ
ನಾನು ಯುದ್ಧದಲ್ಲಿ ನಿರಂತರವಾಗಿ ಸುರಿಸುವ ಕಲ್ಲುಗಳ ಮಳೆಯಿಂದ ದೇವತೆಗಳೂ ಕೂಡ ಹತರಾಗುವರು. ಹೀಗಿರುವಾಗ ರಾಕ್ಷಸರ ವಿಷಯದಲ್ಲಿ ಹೇಳುವುದೇನಿದೆ?॥12॥
ಮೂಲಮ್ - 13
ಸಾಗರೋಪ್ಯತಿಯಾದ್ವೇಲಾಂ ಮಂದರಃ ಪ್ರಚಲೇದಪಿ ।
ನ ಜಾಂಬವಂತಂ ಸಮರೇ ಕಂಪಯೇದರಿವಾಹಿನೀ ॥
ಅನುವಾದ
ಎಂದಾದರೂ ಸಮುದ್ರವು ತನ್ನ ಎಲ್ಲೆಯನ್ನು ಮೀರಬಹುದು. ಮಂದರಪರ್ವತವು ಚಲಿಸಬಹುದು, ಆದರೆ ಯುದ್ಧದಲ್ಲಿ ಜಾಂಬವಂತರನ್ನು ಮಾತ್ರ ಎದುರಿಸಿ ನಿಲ್ಲಬಲ್ಲವನು ಶತ್ರುಸೈನ್ಯದಲ್ಲಿ ಯಾರೂ ಇರಲಾರನು.॥13॥
ಮೂಲಮ್ - 14
ಸರ್ವರಾಕ್ಷಸಸಂಘಾನಾಂ ರಾಕ್ಷಸಾ ಯೇ ಚ ಪೂರ್ವಕಾಃ ।
ಅಲಮೇಕೋ ವಿನಾಶಾಯ ವೀರೋ ವಾಲಿಸುತಃ ಕಪಿಃ ॥
ಅನುವಾದ
ಎಲ್ಲ ರಾಕ್ಷಸ ಸಮೂಹಗಳನ್ನು, ಮಾತ್ರವಲ್ಲ, ಅವರ ತಾತಮುತ್ತಾತರೆಲ್ಲರನ್ನು ನಾಶಗೊಳಿಸಲು ವಾಲಿಯ ಸುತನೂ, ಮಹಾವೀರನೂ ಆದ ಅಂಗದನೋರ್ವನೇ ಸಾಕು.॥14॥
ಮೂಲಮ್ - 15
ಪನಸಸ್ಯೋರುವೇಗೇನ ನೀಲಸ್ಯ ಚ ಮಹಾತ್ಮನಃ ।
ಮಂದರೋಪಿ ವಿಶೀರ್ಯೇತ ಕಿಂ ಪುನರ್ಯುಧಿ ರಾಕ್ಷಸಾಃ ॥
ಅನುವಾದ
ವಾನರ ವೀರನಾದ ಪನಸನೂ, ಮಹಾಪರಾಕ್ರಮಶಾಲಿಯಾದ ನೀಲನೂ, ಇವರು ತಮ್ಮ ಬಲಪರಾಕ್ರಮದಿಂದ ಮಂದರ ಪರ್ವತವನ್ನು ಕೂಡ ನುಚ್ಚುನೂರಾಗಿಸಬಲ್ಲರು. ಅಂತಿರುವಾಗ ಅವರಿಗೆ ಈ ರಾಕ್ಷಸರೊಂದು ಲೆಕ್ಕವೇ?॥15॥
ಮೂಲಮ್ - 16
ಸದೇವಾಸುರಯಕ್ಷೇಷು ಗಂಧರ್ವೋರಗಪಕ್ಷಿಷು ।
ಮೈಂದಸ್ಯ ಪ್ರತಿಯೋದ್ಧಾರಂ ಶಂಸತ ದ್ವಿವಿದಸ್ಯ ವಾ ॥
ಅನುವಾದ
ದೇವಾಸುರರಲ್ಲಾಗಲೀ, ಯಕ್ಷ-ಗಂಧರ್ವರಲ್ಲಾಗಲೀ, ಸರ್ಪ-ಪಕ್ಷಿಗಳಲ್ಲಾಗಲೀ, ಮೈಂದ-ದ್ವಿವಿದರನ್ನು ಎದುರಿಸಿ ಯುದ್ಧಮಾಡುವವರು ಯಾರಿದ್ದಾರೆಂದು ಹೇಳಿರಿ.॥16॥
ಮೂಲಮ್ - 17
ಅಶ್ವಿಪುತ್ರೌ ಮಹಾಭಾಗಾವೇತೌ ಪ್ಲವಗಸತ್ತವೌ ।
ಏತಯೋಃ ಪ್ರತಿಯೋದ್ಧಾರಂ ನ ಪಶ್ಯಾಮಿ ರಣಾಜಿರೇ ॥
ಅನುವಾದ
ಅಶ್ವಿನೀ ದೇವತೆಗಳ ಪುತ್ರರಾದ ಮಹಾಬಲಶಾಲಿಗಳಾದ, ವಾನರೋತ್ತಮರಾದ ಮೈಂದ-ದ್ವಿವಿದರನ್ನು ರಣರಂಗದಲ್ಲಿ ಎದುರಿಸಿ ಯುದ್ಧ ಮಾಡುವ ಯೋಧರನ್ನು ನಾನು ನೋಡಿಲ್ಲ.॥17॥
ಮೂಲಮ್ - 18
ಪಿತಾಮಹವರೋತ್ಸೇಕಾತ್ ಪರಮಂ ದರ್ಪಮಾಸ್ಥಿತೌ ।
ಅಮೃತಪ್ರಾಶಿನಾವೇತೌ ಸರ್ವವಾನರಸತ್ತವೌ ॥
ಮೂಲಮ್ - 19
ಅಶ್ವಿನೋರ್ಮಾನನಾರ್ಥಂ ಹಿ ಸರ್ವಲೋಕಪಿತಾಮಹಃ ।
ಸರ್ವಾವಧ್ಯತ್ವಮತುಲಮನಯೋರ್ದತ್ತವಾನ್ ಪುರಾ ॥
ಅನುವಾದ
ಇವರಿಬ್ಬರೂ ಬ್ರಹ್ಮದೇವರ ವರಬಲದಿಂದ ರಣೋತ್ಸಾಹಿಗಳಾಗಿದ್ದಾರೆ. ಇವರು ಅಮೃತಪಾನ ಮಾಡಿದವರು. ಎಲ್ಲ ವಾನರರಲ್ಲಿಯೂ ಶ್ರೇಷ್ಠರಾಗಿದ್ದಾರೆ. ಅಶ್ವಿನೀದೇವತೆಗಳ ಗೌರವಾರ್ಥವಾಗಿ ಬ್ರಹ್ಮದೇವರು ಹಿಂದೆ ಇವರಿಗೆ ಯಾರಿಂದಲೂ ಮರಣವು ಬಾರದಿರಲೆಂಬ ಅಮೋಘವಾದ ವರವನ್ನು ಕೊಟ್ಟಿರುವರು.॥18-19॥
ಮೂಲಮ್ - 20
ವರೋತ್ಸೇಕೇನ ಮತ್ತೌ ಚ ಪ್ರಮಥ್ಯ ಮಹತೀಂ ಚಮೂಮ್ ।
ಸುರಾಣಾಮಮೃತಂ ವೀರೌ ಪೀತವಂತೌ ಪ್ಲವಂಗವೌ ॥
ಅನುವಾದ
ಶ್ರೇಷ್ಠವಾದ ಆ ವರದಿಂದ ದರ್ಪಿಷ್ಠರಾದ ಈ ವಾನರೋತ್ತಮರು ದೇವತೆಗಳ ಮಹಾಸೈನ್ಯವನ್ನು ಕೂಡ ಜಯಿಸಿ ಅಮೃತವನ್ನು ಪ್ರಾಶನ ಮಾಡಿದವರು.॥20॥
ಮೂಲಮ್ - 21
ಏತಾವೇವ ಹಿ ಸಂಕ್ರುದ್ಧೌ ಸವಾಜಿರಥಕುಂಜರಾಮ್ ।
ಲಂಕಾಂ ನಾಶಯಿತುಂ ಶಕ್ತೌ ಸರ್ವೇ ತಿಷ್ಠಂತು ವಾನರಾಃ ॥
ಅನುವಾದ
ಉಳಿದ ವಾನರರೆಲ್ಲರೂ ಇರಲಿ ಬಿಡಿ. ವೀರಾವೇಶದಿಂದ ಇವರೇನಾದರೂ ಯುದ್ಧಕ್ಕೆ ತೊಡಗಿದರೆ ಲಂಕೆಯನ್ನೂ, ಲಂಕೆಯ ರಥಾಶ್ವ-ಗಜಪದಾತಿಗಳಿಂದ ಕೂಡಿದ ಸೈನ್ಯವನ್ನು ಇಲ್ಲವಾಗಿಸಲು ಇವರಿಬ್ಬರೇ ಸಾಕು.॥21॥
ಮೂಲಮ್ - 22
ಮಯೈವ ನಿಹತಾ ಲಂಕಾ ದಗ್ಧಾ ಭಸ್ಮೀಕೃತಾ ಪುನಃ ।
ರಾಜಮಾರ್ಗೇಷು ಸರ್ವತ್ರ ನಾಮ ವಿಶ್ರಾವಿತಂ ಮಯಾ ॥
ಅನುವಾದ
ಈಗಾಗಲೇ ಆ ಲಂಕೆಯನ್ನು ನಾನೇ ಸುಟ್ಟು ಭಸ್ಮಮಾಡಿಬಿಟ್ಟಿರುವೆನು. ಅಲ್ಲಿಯ ಎಲ್ಲ ರಾಜಮಾರ್ಗಗಳಲ್ಲಿಯೂ ನನ್ನ ಒಡೆಯನಾದ ಶ್ರೀರಾಮನ ಜಯಘೋಷವನ್ನು ಸಾರಿ ಬಂದಿರುವೆನು.॥22॥
ಮೂಲಮ್ - 23
ಜಯತ್ಯತಿಬಲೋ ರಾಮೋ ಲಕ್ಷ್ಮಣಶ್ಚ ಮಹಾಬಲಃ ।
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ ॥
ಮೂಲಮ್ - 24
ಅಹಂ ಕೋಸಲರಾಜಸ್ಯ ದಾಸಃ ಪವನಸಂಭವಃ ।
ಹನುಮಾತಿನಿ ಸರ್ವತ್ರ ನಾಮ ವಿಶ್ರಾವಿತಂ ಮಯಾ ॥
ಅನುವಾದ
ನಿರುಪಮಾನ ಪರಾಕ್ರಮಶಾಲಿಯಾದ ಶ್ರೀರಾಮಚಂದ್ರ ಪ್ರಭುವಿಗೆ ಜಯವಾಗಲೀ. ಮಹಾಬಲಶಾಲಿಯಾದ ಲಕ್ಷ್ಮಣನಿಗೆ ಜಯವಾಗಲೀ. ಶ್ರೀರಾಮಾನುಗ್ರಹಕ್ಕೆ ಪಾತ್ರನಾದ, ವಾನರ ರಾಜನಾದ ಸುಗ್ರೀವನಿಗೆ ಜಯವಾಗಲೀ. ವಾಯುಪುತ್ರನಾದ ನಾನು ಕೋಸಲಾಧಿಪತಿಯಾದ ಶ್ರೀರಾಮನ ದಾಸನು. ನನ್ನ ಹೆಸರು ಹನುಮಂತನೆಂದು ಎಲ್ಲ ರಾಕ್ಷಸರಿಗೆ ತಿಳಿಸಿ ಬಂದಿರುವೆನು.॥23-24॥
ಮೂಲಮ್ - 25
ಅಶೋಕವನಿಕಾಮಧ್ಯೇ ರಾವಣಸ್ಯ ದುರಾತ್ಮನಃ ।
ಅಧಸ್ತಾಚ್ಛಿಂಶಪಾವೃಕ್ಷೇ ಸಾಧ್ವೀ ಕರುಣಮಾಸ್ಥಿತಾ ॥
ಅನುವಾದ
ದುರಾತ್ಮನಾದ ರಾವಣನ ಅಶೋಕವನದಲ್ಲಿ, ಶಿಂಶುಪಾವೃಕ್ಷದ ಕೆಳಗೆ ಮಹಾಸಾಧ್ವಿಯಾದ ಸೀತಾದೇವಿಯು ದೀನಳಾಗಿರುವಳು.॥25॥
ಮೂಲಮ್ - 26
ರಾಕ್ಷಸೀಭಿಃ ಪರಿವೃತಾ ಶೋಕಸಂತಾಪಕರ್ಶಿತಾ ।
ಮೇಘಲೇಖಾಪರಿವೃತಾ ಚಂದ್ರಲೇಖೇವ ನಿಷ್ಪ್ರಭಾ ॥
ಅನುವಾದ
ಅವಳ ಸುತ್ತಲೂ ರಾಕ್ಷಸ ಸ್ತ್ರೀಯರು ಸೇರಿ ಕಾವಲು ಕಾಯುತ್ತಿದ್ದಾರೆ. ಅವಳು ಶೋಕಸಂತಪ್ತಳಾಗಿ ಕೃಶಳಾಗಿದ್ದಾಳೆ. ಪೂರ್ಣಚಂದ್ರನಂತೆ ಶೋಭಿಸುತ್ತಿದ್ದರೂ, ಅವಳು ಮೋಡಗಳಿಂದ ಮರೆಯಾದ ಚಂದ್ರರೇಖೆಯಂತೆ ತೇಜೋವಿಹೀನಳಾಗಿದ್ದಾಳೆ. ॥26॥
ಮೂಲಮ್ - 27
ಅಚಿಂತಯಂತೀ ವೈದೇಹೀ ರಾವಣಂ ಬಲದರ್ಪಿತಮ್ ।
ಪತಿವ್ರತಾ ಚ ಸುಶ್ರೋಣೀ ಅವಷ್ಟಬ್ಧಾ ಚ ಜಾನಕೀ ॥
ಅನುವಾದ
ಬಲಗರ್ವಿತನಾದ ರಾವಣನು ಅವಳನ್ನು ಹೀಗೆ ನಿರ್ಬಂಧಿಸಿಟ್ಟಿದ್ದರೂ, ಸೌಂದರ್ಯವತಿಯೂ, ಪತಿವ್ರತಾಶಿರೋಮಣಿಯೂ ಆದ ಜಾನಕಿದೇವಿಯು ಅವನನ್ನು ಲೆಕ್ಕಿಸುವುದೇ ಇಲ್ಲ.॥27॥
ಮೂಲಮ್ - 28
ಅನುರಕ್ತಾ ಹಿ ವೈದೇಹೀ ರಾಮಂ ಸರ್ವಾತ್ಮನಾ ಶುಭಾ ।
ಅನನ್ಯಚಿತ್ತಾ ರಾಮೇ ಚ ಪೌಲೋವಿಾವ ಪುರಂದರೇ ॥
ಅನುವಾದ
ಶುಭಲಕ್ಷಣ ಸಂಪನ್ನೆಯಾದ ಸೀತಾದೇವಿಯು ತ್ರಿಕರಣಶುದ್ಧಿಯಿಂದ ಶ್ರೀರಾಮನಲ್ಲೇ ಅನುರಕ್ತಳಾಗಿರುವಳು. ಶಚಿದೇವಿಯು ಇಂದ್ರನಲ್ಲಿ ಮನಸ್ಸನ್ನು ನೆಟ್ಟಂತೆ ಸೀತಾದೇವಿಯು ಶ್ರೀರಾಮನಲ್ಲೇ ಮನಸ್ಸನ್ನು ನೆಟ್ಟಿರುವಳು.॥28॥
ಮೂಲಮ್ - 29
ತದೇಕವಾಸಃಸಂವೀತಾ ರಜೋಧ್ವಸ್ತಾ ತಥೈವ ಚ ।
ಶೋಕಸಂತಾಪದೀನಾಂಗೀ ಸೀತಾ ಭರ್ತೃಹಿತೇ ರತಾ ।
ಸಾ ಮಯಾ ರಾಕ್ಷಸೀಮಧ್ಯೇ ತರ್ಜ್ಯಮಾನಾ ಮುಹುರ್ಮುಹುಃ ॥
ಮೂಲಮ್ - 30
ರಾಕ್ಷಸೀಭಿರ್ವಿರೂಪಾಭಿದೃಷ್ಟಾ ಹಿ ಪ್ರಮದಾವನೇ ।
ಏಕವೇಣೀಧರಾ ದೀನಾ ಭರ್ತೃಚಿಂತಾಪರಾಯಣಾ ॥
ಅನುವಾದ
ಆ ಸೀತಾದೇವಿಯು ಒಂಟಿವಸ್ತ್ರವನ್ನು ಧರಿಸಿರುವಳು. ಅವಳ ಶರೀರವು ಧೂಳಿನಿಂದ ಮಲಿನವಾಗಿದೆ. ಶೋಕಸಂತಾಪಗಳಿಂದಾಗಿ ದೀನಳಾಗಿರುವಳು. ಯಾವಾಗಲೂ ಪತಿಯ ಹಿತವನ್ನೇ ಬಯಸುತ್ತಿರುವಳು. ಅವಳ ಕೂದಲುಗಳು ಜಡೆಗಟ್ಟಿಹೋಗಿವೆ. ಅವಳು ನಿರಂತರವಾಗಿ ತನ್ನ ಪತಿಯನ್ನೇ ಧ್ಯಾನಿಸುತ್ತಿರುವಳು. ಅಶೋಕವನದಲ್ಲಿ ರಾಕ್ಷಸ ಸ್ತ್ರೀಯರ ಮಧ್ಯದಲ್ಲಿರುವ ಆಕೆಯನ್ನು ನಾನು ನೋಡಿದೆನು. ವಿಕೃತಾಕಾರರಾದ ಆ ರಕ್ಕಸಿಯರು ಅವಳನ್ನು ಪದೇ-ಪದೇ ಭಯಪಡಿಸುತ್ತಿರುವರು.॥29-30॥
ಮೂಲಮ್ - 31
ಅಧಃಶಯ್ಯಾ ವಿವರ್ಣಾಂಗೀ ಪದ್ಮಿನೀವ ಹಿಮಾಗಮೇ ।
ರಾವಣಾದ್ವಿನಿವೃತ್ತಾರ್ಥಾ ಮರ್ತವ್ಯಕೃತನಿಶ್ಚಯಾ ॥
ಅನುವಾದ
ಅವಳು ಬರೀನೆಲದಲ್ಲಿ ಕುಳಿತಿರುವಳು. ಅವಳ ಶರೀರವು ಮಂಜು ಮುಸುಕಿದ ಕಮಲದಂತೆ ಕಾಂತಿಹೀನವಾಗಿದೆ. ಅವಳು ರಾವಣನಿಂದ ಪೂರ್ಣವಾಗಿ ವಿಮುಖಳಾಗಿ ಶರೀರವನ್ನು ತ್ಯಜಿಸಲು ನಿಶ್ಚಯಿಸಿಕೊಂಡಿರುವಳು.॥31॥
ಮೂಲಮ್ - 32
ಕಥಂಚಿನ್ಮೃಗಶಾವಾಕ್ಷೀ ವಿಶ್ವಾಸಮುಪಪಾದಿತಾ ।
ತತಃ ಸಂಭಾಷಿತಾ ಚೈವ ಸರ್ವಮರ್ಥಂ ಚ ದರ್ಶಿತಾ ॥
ಅನುವಾದ
ಹೇಗಾದರೂ ಅವಳಿಗೆ ನನ್ನ ಮೇಲೆ ವಿಶ್ವಾಸ ಮೂಡುವಂತೆ ಮಾಡಿದೆನು. ಅವಳೊಡನೆ ಮಾತಾಡಿದೆನು. ಎಲ್ಲ ವಿಷಯಗಳನ್ನು ಅವಳಿಗೆ ತಿಳಿಸಿದೆನು.॥32॥
ಮೂಲಮ್ - 33
ರಾಮಸುಗ್ರೀವಸಖ್ಯಂ ಚ ಶ್ರುತ್ವಾ ಪ್ರೀತಿಮುಪಾಗತಾ ।
ನಿಯತಃ ಸಮುದಾಚಾರೋ ಭಕ್ತಿರ್ಭರ್ತರಿ ಚೋತ್ತಮಾ ॥
ಮೂಲಮ್ - 34
ಯನ್ನ ಹಂತಿ ದಶಗ್ರೀವಂ ಸ ಮಹಾತ್ಮಾ ದಶಾನನಃ ।
ನಿಮಿತ್ತಮಾತ್ರಂ ರಾಮಸ್ತು ವಧೇ ತಸ್ಯ ಭವಿಷ್ಯತಿ ॥
ಅನುವಾದ
ರಾಮ-ಸುಗ್ರೀವರ ಮೈತ್ರಿಯನ್ನು ಕೇಳಿ ಅವಳು ಹೆಚ್ಚಾಗಿ ಸಂತೋಷಪಟ್ಟಳು. ಆ ಸೀತಾದೇವಿಯು ಆಚರಿಸುವ ಪವಿತ್ರ ಜೀವನ ವಿಧಾನಗಳೂ, ಭರ್ತನಲ್ಲಿ ಅವಳಿಗಿರುವ ಭಕ್ತಿ-ಪ್ರಪತ್ತಿಗಳೂ ಅನುಪಮವಾದವುಗಳು. ಅಪರಾಧಿಯಾದ ರಾವಣನನ್ನು ಅವಳೇ ಕೊಲ್ಲಬಲ್ಲಳು. ಅವಳ ಪಾತಿವ್ರತ್ಯ ಪ್ರಭಾವದಿಂದ ಅವನು ಈಗಾಗಲೇ ಮೃತಪ್ರಾಯನಾಗಿರುವನು. ಸೀತಾನಿಮಿತ್ತದಿಂದ ಶ್ರೀರಾಮನ ಕೈಯಿಂದ ಅವನು ಸಾಯುವನು. (ಆಗ ಅವನಿಗೇ ಮೋಕ್ಷ ಲಭಿಸುವುದು.) ಅದರಿಂದ ಅವನು ಮಹಾತ್ಮನು.॥33-34॥
ಮೂಲಮ್ - 35
ಸಾ ಪ್ರಕೃತ್ಯೈವ ತನ್ವಂಗೀ ತದ್ವಿಯೋಗಾಚ್ಚ ಕರ್ಶಿತಾ ।
ಪ್ರತಿಪತ್ಪಾಠಶೀಲಸ್ಯ ವಿದ್ಯೇವ ತನುತಾಂ ಗತಾ ॥
ಅನುವಾದ
ಸೀತಾದೇವಿಯು ಸಹಜವಾಗಿಯೇ ಕೃಶಾಂಗಿಯು. ಅದರಲ್ಲಿಯೂ ಶ್ರೀರಾಮನ ಅಗಲುವಿಕೆಯಿಂದ ಅವಳು - ಅನಧ್ಯಾಯದಲ್ಲಿ ವೇದಾಧ್ಯಯನ ಮಾಡಿದವರ* ವಿದ್ಯೆಯಂತೆ ಇನ್ನೂ ಕೃಶಳಾಗಿದ್ದಾಳೆ.॥35॥
ಟಿಪ್ಪನೀ
- ಅಷ್ಟಮಿ, ಚತುರ್ದಶಿ, ಪೌರ್ಣಮಿ, ಅಮಾವಾಸ್ಯಾ, ಪಾಡ್ಯ ಹೀಗೆ ಇವು ಅನಧ್ಯಾಯಗಳು. ಈ ದಿನಗಳಲ್ಲಿ ವೇದಾಧ್ಯಯನ ಮಾಡಬಾರದು. ಈ ಸಂಪ್ರದಾಯವನ್ನು ಉಲ್ಲಂಘಿಸಿ, ವೇದಾಧ್ಯಯನವನ್ನು ಗೈದರೆ ಅದು ಮುಂದಕ್ಕೆ ಸಾಗದು. ಆ ವಿದ್ಯೆಯು ಜೀರ್ಣವಾಗುತ್ತದೆ.
‘‘ಅಮಾವಾಸ್ಯಾ ಗುರುಂ ಹಂತಿ ಶಿಷ್ಯಂ ಹಂತಿ ಚತುರ್ದಶಿ ಉಭಾವಷ್ಟಾಷ್ಟಮೀ ಹಂತಿ ಪ್ರತಿಪತ್ಪಾಠನಾಶಿನಿ॥’’
ಮೂಲಮ್ - 36
ಏವಮಾಸ್ತೇ ಮಹಾಭಾಗಾ ಸೀತಾ ಶೋಕಪರಾಯಣಾ ।
ಯದತ್ರ ಪ್ರತಿಕರ್ತವ್ಯಂ ತತ್ ಸರ್ವಮುಪಪದ್ಯತಾಮ್ ॥
ಅನುವಾದ
ಪೂಜ್ಯಳಾದ ಸೀತಾದೇವಿಯು ಶೋಕಾತುರೆಯಾಗಿ ಹೀಗೆ ದೀನಾವಸ್ಥೆಯಲ್ಲಿದ್ದಾಳೆ. ಆದುದರಿಂದ ಈ ಸಮಯದಲ್ಲಿ ಯಾವ ಪ್ರತಿಕಾರವನ್ನು ಮಾಡಬಹುದು? ಅದನ್ನು ನಾವೆಲ್ಲರೂ ಸೇರಿ ನಿಶ್ಚಯಿಸೋಣ.॥36॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕೋನಷಷ್ಠಿತಮಃ ಸರ್ಗಃ ॥59॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತೊಂಭತ್ತನೆಯ ಸರ್ಗವು ಮುಗಿಯಿತು.