वाचनम्
ಭಾಗಸೂಚನಾ
ಜಾಂಬವಂತರ ಪ್ರಶ್ನೆಗಳಿಗೆ ಹನುಮಂತನು ಲಂಕೆಯ ಯಾತ್ರೆಯನ್ನು ಸಮಗ್ರವಾಗಿ ವರ್ಣಿಸಿದುದು
ಮೂಲಮ್ - 1
ತತಸ್ತಸ್ಯ ಗಿರೇಃ ಶೃಂಗೇ ಮಹೇಂದ್ರಸ್ಯ ಮಹಾಬಲಾಃ ।
ಹನುಮತ್ಪ್ರಮುಖಾಃ ಪ್ರೀತಿಂ ಹರಯೋ ಜಗ್ಮುರುತ್ತಮಾಮ್ ॥
ಅನುವಾದ
ಅನಂತರ ಮಹೇಂದ್ರಪರ್ವತದ ಶಿಖರಕ್ಕೆ ತೆರಳಿದ, ಮಹಾಬಲಿಷ್ಠರಾದ ಹನುಮಂತನೇ ಮೊದಲಾದ ವಾನರರೆಲ್ಲರೂ ಸೇರಿ ಪರಮಸಂತೋಷವನ್ನು ಹೊಂದಿದರು.॥1॥
ಮೂಲಮ್ - 2
ಪ್ರೀತಿಮತ್ಸೂಪವಿಷ್ಟೇಷು ವಾನರೇಷು ಮಹಾತ್ಮಸು ।
ತಂ ತತಃ ಪ್ರೀತಿಸಂಹೃಷ್ಟಃ ಪ್ರೀತಿಮಂತಂ ಮಹಾಕಪಿಮ್ ॥
ಮೂಲಮ್ - 3
ಜಾಂಬವಾನ್ ಕಾರ್ಯವೃತ್ತಾಂತಮಪೃಚ್ಛದನಿಲಾತ್ಮಜಮ್ ।
ಕಥಂ ದೃಷ್ಟಾ ತ್ವಯಾ ದೇವೀ ಕಥಂ ವಾ ತತ್ರ ವರ್ತತೇ ॥
ಮೂಲಮ್ - 4
ತಸ್ಯಾಂ ವಾ ಸ ಕಥಂವೃತ್ತಃ ಕ್ರೂರಕರ್ಮಾ ದಶಾನನಃ ।
ತತ್ತ್ವತಃ ಸರ್ವಮೇತನ್ನಃ ಪ್ರಬ್ರೂಹಿ ತ್ವಂ ಮಹಾಕಪೇ ॥
ಅನುವಾದ
ಮಹಾತ್ಮರಾದ ವಾನರರು ಸಂತೋಷಭರಿತರಾಗಿ ಕುಳಿತುಕೊಂಡ ಬಳಿಕ, ಹನುಮಂತನ ವಿಷಯದಲ್ಲಿ ಪರಮ ಸಂತೋಷಭರಿತನಾದ ಜಾಂಬವಂತರು, ಮಹಾಕಪಿಯಾದ ಹನುಮಂತನನ್ನು ಸೀತಾದರ್ಶನಾದಿ ಶ್ರೀರಾಮನ ಕಾರ್ಯದ ವಿಷಯವಾಗಿ ಹೀಗೆ ಪ್ರಶ್ನಿಸಿದನು - ವಾಯುಪುತ್ರನೇ! ನೀನು ಸೀತಾದೇವಿಯನ್ನು ಹೇಗೆ ಕಂಡೆ? ಅವಳು ಅಲ್ಲಿ ಹೇಗಿದ್ದಾಳೆ? ಅವಳ ವಿಷಯದಲ್ಲಿ ಕ್ರೂರಕರ್ಮಿಯಾದ ರಾವಣನು ಹೇಗೆ ನಡೆದುಕೊಳ್ಳುತ್ತಿರುವನು? ಓ ಮಹಾ ಕಪೀಶ್ವರಾ! ಈ ಎಲ್ಲ ವಿಷಯಗಳನ್ನು ಯಥಾವತ್ತಾಗಿ ವಿವರಿಸು.॥2-4॥
ಮೂಲಮ್ - 5
ಸಂಮಾರ್ಗಿತಾ ಕಥಂ ದೇವೀ ಕಿಂ ಚ ಸಾ ಪ್ರತ್ಯಭಾಷತ ।
ಶ್ರುತಾರ್ಥಾಶ್ಚಿಂತಯಿಷ್ಯಾಮೋ ಭೂಯಃ ಕಾರ್ಯವಿನಿಶ್ಚಯಮ್ ॥
ಅನುವಾದ
ನೀನು ಸೀತೆಯನ್ನು ಹೇಗೆ ಹುಡುಕಿದೆ? ಅವಳು ಕಳಿಸಿದ ಸಂದೇಶವೇನು? ಎಲ್ಲ ವಿಷಯಗಳನ್ನು ಸರಿಯಾಗಿ ತಿಳಿದುಕೊಂಡ ಬಳಿಕ ಮುಂದೆ ಯಾವ ಕಾರ್ಯವನ್ನು ಮಾಡಬೇಕೆಂಬುದರ ಬಗೆಗೆ ನಿಶ್ಚಯಿಸೋಣ.॥5॥
ಮೂಲಮ್ - 6
ಯಶ್ಚಾರ್ಥಸ್ತತ್ರ ವಕ್ತವ್ಯೋ ಗತೈರಸ್ಮಾಭಿರಾತ್ಮವಾನ್ ।
ರಕ್ಷಿತವ್ಯಂ ಚ ಯತ್ತತ್ರ ತದ್ಭವಾನ್ ವ್ಯಾಕರೋತು ನಃ ॥
ಅನುವಾದ
ನಾವೆಲ್ಲರೂ ಶ್ರೀರಾಮನ ಬಳಿಗೆ ಹೋದಾಗ, ಅವನಿಗೆ ತಿಳಿಸುವ ವಿಷಯವನ್ನು, ತಿಳಿಸದಿರುವ ವಿಷಯವನ್ನು ಬುದ್ಧಿವಂತನಾದ ನೀನೇ ನಮಗೆ ಸ್ಪಷ್ಟವಾಗಿ ತಿಳಿಸಬೇಕು.॥6॥
ಮೂಲಮ್ - 7
ಸ ನಿಯುಕ್ತಸ್ತತಸ್ತೇನ ಸಂಪ್ರಹೃಷ್ಟತನೂರುಹಃ ।
ಪ್ರಣಮ್ಯ ಶಿರಸಾ ದೇವ್ಯೈ ಸೀತಾಯೈ ಪ್ರತ್ಯಭಾಷತ ॥
ಅನುವಾದ
ಜಾಂಬವಂತನು ಹೀಗೆ ಪ್ರಾರ್ಥಿಸಿದಾಗ, ಹನುಮಂತನು ಲಂಕಾಪಟ್ಟಣದಲ್ಲಿ ತನಗಾದ ಅನುಭವವನ್ನು ಸ್ಮರಿಸಿ ಪುಳಕಿತನಾಗಿ, ಸೀತಾದೇವಿಗೆ ಮನಸ್ಸಿನಲ್ಲೇ ನಮಸ್ಕರಿಸಿ, ಹೀಗೆ ನುಡಿಯಲು ಉಪಕ್ರಮಿಸಿದನು.॥7॥
ಮೂಲಮ್ - 8
ಪ್ರತ್ಯಕ್ಷಮೇವ ಭವತಾಂ ಮಹೇಂದ್ರಾಗ್ರಾತ್ ಖಮಾಪ್ಲುತಃ ।
ಉದಧೇರ್ದಕ್ಷಿಣಂ ಪಾರಂ ಕಾಂಕ್ಷಮಾಣಃ ಸಮಾಹಿತಃ ॥
ಅನುವಾದ
ಕಪಿಶ್ರೇಷ್ಠರೇ! ನಾನು ಸಮುದ್ರದ ದಕ್ಷಿಣ ತೀರಕ್ಕೆ ಹೋಗಬೇಕೆಂದು ಸನ್ನದ್ಧನಾಗಿ ಮಹೇಂದ್ರಪರ್ವತದ ಶಿಖರದಿಂದ ಆಕಾಶಕ್ಕೆ ನೆಗೆದುದನ್ನು ನೀವೆಲ್ಲ ಸ್ವತಃ ನೋಡಿದ್ದೀರಿ ತಾನೆ.॥8॥
ಮೂಲಮ್ - 9
ಗಚ್ಛತಶ್ಚ ಹಿ ಮೇ ಘೋರಂ ವಿಘ್ನರೂಪಮಿವಾಭವತ್ ।
ಕಾಂಚನಂ ಶಿಖರಂ ದಿವ್ಯಂ ಪಶ್ಯಾಮಿ ಸುಮನೋಹರಮ ॥
ಅನುವಾದ
ಹಾಗೆ ನಾನು ಹೋಗುತ್ತಿರುವಾಗ ದಾರಿಯಲ್ಲಿ ನನಗೆ ಒಂದು ಮಹಾವಿಘ್ನವು ಇದಿರಾಯಿತು. ಅತ್ಯಂತ ಮನೋಹರವಾದ, ದಿವ್ಯವಾದ ಒಂದು ಭಂಗಾರದ ಶಿಖರವನ್ನು ನೋಡಿದೆನು.॥9॥
ಮೂಲಮ್ - 10
ಸ್ಥಿತಂ ಪಂಥಾನಮಾವೃತ್ಯ ಮೇನೇ ವಿಘ್ನಂ ಚ ತಂ ನಗಮ್ ।
ಉಪಸಂಗಮ್ಯ ತಂ ದಿವ್ಯಂ ಕಾಂಚನಂ ನಗಸತ್ತಮಮ್ ॥
ಅನುವಾದ
ನನ್ನ ದಾರಿಗೆ ಅಡ್ಡಲಾಗಿ ನಿಂತಿದ್ದ ಆ ಪರ್ವತವು ಒಂದು ವಿಘ್ನವೆಂದೇ ನಾನು ಬಗೆದು, ದಿವ್ಯವಾದ ಆ ಸುವರ್ಣ ಶಿಖರವನ್ನು ಸಮೀಪಿಸಿದೆನು.॥10॥
ಮೂಲಮ್ - 11
ಕೃತಾ ಮೇ ಮನಸಾ ಬುದ್ಧಿರ್ಭೇತ್ತವ್ಯೋಯಂ ಮಯೇತಿ ಚ ।
ಪ್ರಹತಂ ಚ ಮಯಾ ತಸ್ಯ ಲಾಂಗೂಲೇನ ಮಹಾಗಿರೇಃ ॥
ಮೂಲಮ್ - 12
ಶಿಖರಂ ಸೂರ್ಯಸಂಕಾಶಂ ವ್ಯಶೀರ್ಯತ ಸಹಸ್ರಧಾ ।
ವ್ಯವಸಾಯಂ ಚ ತಂ ಬುದ್ಧ್ವಾಸಹೋವಾಚ ಮಹಾಗಿರಿಃ ॥
ಮೂಲಮ್ - 13
ಪುತ್ರೇತಿ ಮಧುರಾಂ ವಾಣೀಂ ಮನಃ ಪ್ರಹ್ಲಾದಯನ್ನಿವ ।
ಪಿತೃವ್ಯಂ ಚಾಪಿ ಮಾಂ ವಿದ್ದಿ ಸಖಾಯಂ ಮಾತರಿಶ್ವನಃ ॥
ಅನುವಾದ
ಬಳಿಕ ಅದನ್ನು ಭೇದಿಸಿಬಿಡಬೇಕೆಂದೂ ನಿಶ್ಚಯಿಸಿದೆ. ಒಡನೆಯೇ ಸೂರ್ಯಸದೃಶವಾಗಿದ್ದ ಆ ಗಿರಿ ಶಿಖರವನ್ನು ನನ್ನ ಬಾಲದಿಂದ ಅಪ್ಪಳಿಸಿದಾಗ ಅದು ಕೆಳಕ್ಕೆ ಬಿದ್ದುಹೋಯಿತು. ಆ ನನ್ನ ಸಾಹಸಕಾರ್ಯವನ್ನು ತಿಳಿದುಕೊಂಡು, ಆ ಮಹಾಗಿರಿಯು ಮಗು! ಕುಮಾರಾ! ಎಂದು ಮನಸ್ಸಿಗೆ ಆಹ್ಲಾದವನ್ನುಂಟುಮಾಡುವ ಮಧುರವಚನವನ್ನು ಹೇಳಿತು. ನಾನು ನಿನ್ನ ತಂದೆಯಾದ ವಾಯುದೇವರಿಗೆ ಸ್ನೇಹಿತನು. ನಿನಗೆ ಚಿಕ್ಕಪ್ಪನೆಂದೇ ಭಾವಿಸು.॥11-13॥
ಮೂಲಮ್ - 14
ಮೈನಾಕಮಿತಿ ವಿಖ್ಯಾತಂ ನಿವಸಂತಂ ಮಹೋದಧೌ ।
ಪಕ್ಷವಂತಃ ಪುರಾ ಪುತ್ರ ಬಭೂವುಃ ಪರ್ವತೋತ್ತಮಾಃ ।
ಛಂದತಃ ಪೃಥಿವೀಂ ಚೇರುರ್ಬಾಧಮಾನಾಃ ಸಮಂತತಃ ॥
ಅನುವಾದ
ನಾನು ಮೈನಾಕನೆಂಬ ಹೆಸರಿನಿಂದ ಪ್ರಸಿದ್ಧನಾಗಿರುವೆನು. ಸಮುದ್ರದಲ್ಲಿ ನಾನು ವಾಸವಾಗಿದ್ದೇನೆ. ಮಗು! ಹಿಂದೆ ಪರ್ವತಗಳಿಗೆ ರೆಕ್ಕೆಗಳಿದ್ದವು. ಅವು ಎಲ್ಲ ಪ್ರಾಣಿಗಳಿಗೆ ತೊಂದರೆಕೊಡುತ್ತಾ ಸ್ವೇಚ್ಛೆಯಾಗಿ ಭೂಮಿಯಲ್ಲಿ ಸಂಚರಿಸುತ್ತಿದ್ದವು. ॥14॥
ಮೂಲಮ್ - 15
ಶ್ರುತ್ವಾನಗಾನಾಂ ಚರಿತಂ ಮಹೇಂದ್ರಃ ಪಾಕಶಾಸನಃ ।
ಚಿಚ್ಛೇದ ಭಗವಾನ್ ಪಕ್ಷಾನ್ ವಜ್ರೇಣೈಷಾಂ ಸಹಸ್ರಶಃ ॥
ಮೂಲಮ್ - 16
ಅಹಂ ತು ಮೋಕ್ಷಿತಸ್ತಸ್ಮಾತ್ತವ ಪಿತ್ರಾ ಮಹಾತ್ಮನಾ ।
ಮಾರುತೇನ ತದಾ ವತ್ಸ ಪ್ರಕ್ಷಿಪೋಽಸ್ಮಿ ಮಹಾರ್ಣವೇ ॥
ಅನುವಾದ
ಪರ್ವತಗಳ ಆ ಉಪಟಳವನ್ನು ತಪ್ಪಿಸಲು ಸುರಪತಿಯಾದ ದೇವೇಂದ್ರನು ತನ್ನ ವಜ್ರಾಯುಧದಿಂದ ಸಾವಿರಾರು ಪರ್ವತಗಳ ರೆಕ್ಕೆಗಳನ್ನು ಕತ್ತರಿಸಿ ತುಂಡು-ತುಂಡಾಗಿಸಿದನು. ಆದರೆ ನಾನು ಮಾತ್ರ ನಿನಗೆ ತಂದೆಯೂ, ಮಹಾತ್ಮನೂ ಆದ ವಾಯುದೇವರಿಂದ ರಕ್ಷಿತನಾಗಿ ಸಮುದ್ರದಲ್ಲಿ ವಾಸವಾಗಿದ್ದೇನೆ.॥15-16॥
ಮೂಲಮ್ - 17
ರಾಮಸ್ಯ ಚ ಮಯಾ ಸಾಹ್ಯೇ ವರ್ತಿತವ್ಯಮರಿಂದಮ ।
ರಾಮೋ ಧರ್ಮಭೃತಾಂ ಶ್ರೇಷ್ಠೋ ಮಹೇಂದ್ರಸಮವಿಕ್ರಮಃ ॥
ಮೂಲಮ್ - 18
ಏತಚ್ಛ್ರುತ್ವಾ ವಚಸ್ತಸ್ಯ ಮೈನಾಕಸ್ಯ ಮಹಾತ್ಮನಃ ॥
ಮೂಲಮ್ - 19
ಕಾರ್ಯಮಾವೇದ್ಯ ತು ಗಿರೇರುದ್ಯತಂ ಚ ಮನೋ ಮಮ ।
ತೇನ ಚಾಹಮನುಜ್ಞಾತೋ ಮೈನಾಕೇನ ಮಹಾತ್ಮನಾ ॥
ಮೂಲಮ್ - 20
ಸ ಚಾಪ್ಯಂತರ್ಹಿತಃ ಶೈಲೋ ಮಾನುಷೇಣ ವಪುಷ್ಮತಾ ।
ಶರೀರೇಣ ಮಹಾಶೈಲಃ ಶೈಲೇನ ಚ ಮಹೋದಧೌ ॥
ಅನುವಾದ
ಅಂದು ನಿನ್ನ ತಂದೆಯು ಮಾಡಿದ ಉಪಕಾರವನ್ನು ಸ್ಮರಿಸಿಕೊಂಡು ಇಂದು ನಾನು ನಿನಗೆ ಉಪಕಾರ ಮಾಡಲು ಬಂದಿರುವೆನು. ಹಾಗೆಯೇ ಶ್ರೀರಾಮನು ಧರ್ಮಾತ್ಮರಲ್ಲಿ ಶ್ರೇಷ್ಠನು. ದೇವೇಂದ್ರನಂತೆ ಪರಾಕ್ರಮಶಾಲಿಯು. ಎಲೈ ಶತ್ರು ಸಂಹಾರಕಾ! ಅಂತಹ ಶ್ರೀರಾಮನಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ. ವಾನರರೇ! ಮಹಾತ್ಮನಾದ ಮೈನಾಕನು ಹೇಳಿದ ಮಾತನ್ನು ಕೇಳಿ, ನಾನು ತೊಡಗಿರುವ ಕಾರ್ಯವನ್ನು ಅವನಿಗೆ ತಿಳಿಸಿ ಮುಂದೆ ಹೋಗಲು ಅವನ ಅನುಮತಿಯನ್ನು ಪಡೆದುಕೊಂಡೆನು. ಸುಂದರವಾದ ಮನುಷ್ಯ ಶರೀರವನ್ನು ಧರಿಸಿ ಬಂದಿದ್ದ ಮೈನಾಕನು ಪುನಃ ಪರ್ವತ ಶರೀರವನ್ನೇ ಧರಿಸಿ ಮಹಾಸಮುದ್ರ ಗರ್ಭದಲ್ಲಿ ಸೇರಿಕೊಂಡೆನು.॥17-20॥
ಮೂಲಮ್ - 21
ಉತ್ತಮಂ ಜವಮಾಸ್ಥಾಯ ಶೇಷಂ ಪಂಥಾನಮಾಸ್ಥಿತಃ ।
ತತೋಹಂ ಸುಚಿರಂ ಕಾಲಂ ವೇಗೇನಾಭ್ಯಗಮಂ ಪಥಿ ॥
ಅನುವಾದ
ಉಳಿದಿದ್ದ ಮಾರ್ಗವನ್ನು ದಾಟಲು ನಾನು ಅತಿಶಯವಾದ ವೇಗವನ್ನು ಆಶ್ರಯಿಸಿ, ಬಹಳ ಹೊತ್ತಿನವರೆಗೆ ಹೆಚ್ಚಿನ ವೇಗದಿಂದಲೇ ಪ್ರಯಾಣ ಮಾಡಿದೆನು.॥21॥
ಮೂಲಮ್ - 22
ತತಃ ಪಶ್ಯಾಮ್ಯಹಂ ದೇವೀಂ ಸುರಸಾಂ ನಾಗಮಾತರಮ್ ।
ಸಮುದ್ರಮಧ್ಯೇ ಸಾ ದೇವೀ ವಚನಂ ಮಾಮಭಾಷತ ॥
ಅನುವಾದ
ಆಗ ನಾನು ಸರ್ಪಗಳ ಮಾತೆಯಾದ ಸುರಸಾದೇವಿಯನ್ನು ಸಮುದ್ರದ ಮಧ್ಯದಲ್ಲಿ ಕಂಡೆನು. ಅವಳು ನನ್ನ ಬಳಿ ಇಂತೆಂದಳು.॥22॥
ಮೂಲಮ್ - 23
ಮಮ ಭಕ್ಷಃ ಪ್ರದಿಷ್ಟಸ್ತ್ವಮಮರೈರ್ಹರಿಸತ್ತಮ ।
ಅತಸ್ತ್ವಾಂ ಭಕ್ಷಯಿಷ್ಯಾಮಿ ವಿಹಿತಸ್ತ್ವಂ ಚಿರಸ್ಯ ಮೇ ॥
ಅನುವಾದ
ವಾನರೋತ್ತಮನೇ! ದೇವತೆಗಳು ನಿನ್ನನ್ನು ನನಗೆ ಆಹಾರವನ್ನಾಗಿಸಿ ಕಲ್ಪಿಸಿದ್ದಾರೆ. ಬಹಳ ಕಾಲದಿಂದಲೂ ನಿನ್ನನ್ನೇ ನಾನು ನಿರೀಕ್ಷಿಸುತ್ತಿದ್ದೆನು. ಆದುದರಿಂದ ನಿನ್ನನ್ನು ನಾನೀಗಲೇ ಭಕ್ಷಿಸುತ್ತೇನೆ.॥23॥
ಮೂಲಮ್ - 24
ಏವಮುಕ್ತಃ ಸುರಸಯಾ ಪ್ರಾಂಜಲಿಃ ಪ್ರಣತಃ ಸ್ಥಿತಃ ।
ವಿವರ್ಣವದನೋ ಭೂತ್ವಾ ವಾಕ್ಯಂ ಚೇದಮುದೀರಯನ್ ॥
ಅನುವಾದ
ಸುರಸೆಯು ಹೀಗೆ ಹೇಳಲು ನನ್ನ ಮುಖವು ವಿವರ್ಣವಾಯಿತು. ಅವಳ ಮುಂದೆ ಕೈಮುಗಿದು ನಮಸ್ಕರಿಸಿ ಹೀಗೆ ಹೇಳಿದೆನು.॥24॥
ಮೂಲಮ್ - 25
ರಾಮೋ ದಾಶರಥಿಃ ಶ್ರೀಮಾನ್ ಪ್ರವಿಷ್ಟೋ ದಂಡಕಾವನಮ್ ।
ಲಕ್ಷ್ಮಣೇನ ಸಹ ಭ್ರಾತ್ರಾ ಸೀತಯಾ ಚ ಪರಂತಪಃ ॥
ಅನುವಾದ
ತಾಯೇ! ಸರ್ವಗುಣಪೂರ್ಣನೂ, ಅರಿಮರ್ದನನೂ, ದಶರಥನ ಕುಮಾರನೂ ಆದ ಶ್ರೀರಾಮನು ಸಹೋದರ ಲಕ್ಷ್ಮಣ ಹಾಗೂ ಧರ್ಮಪತ್ನಿಯಾದ ಸೀತಾದೇವಿಯೊಂದಿಗೆ ದಂಡಕಾರಣ್ಯವನ್ನು ಪ್ರವೇಶಿಸಿದನು.॥25॥
ಮೂಲಮ್ - 26
ತಸ್ಯ ಸೀತಾ ಹೃತಾ ಭಾರ್ಯಾ ರಾವಣೇನ ದುರಾತ್ಮನಾ ।
ತಸ್ಯಾಃ ಸಕಾಶಂ ದೂತೋಹಂ ಗಮಿಷ್ಯೇ ರಾಮಶಾಸನಾತ್ ॥
ಅನುವಾದ
ದುರ್ಮಾರ್ಗಿಯಾದ ರಾವಣನು ಸೀತಾದೇವಿಯನ್ನು ಅಪಹರಿಸಿಕೊಂಡು ಹೋಗಿರುವನು. ನಾನು ಶ್ರೀರಾಮನ ಅಪ್ಪಣೆಯಂತೆ, ಅವನ ದೂತನಾಗಿ ಸೀತೆಯ ಬಳಿಗೆ ಹೋಗುತ್ತಿದ್ದೇನೆ.॥26॥
ಮೂಲಮ್ - 27
ಕರ್ತುಮರ್ಹಸಿ ರಾಮಸ್ಯ ಸಾಹಾಯ್ಯಂ ವಿಷಯೇ ಸತಿ
ಅಥವಾ ಮೈಥಿಲೀಂ ದೃಷ್ಟ್ವಾ ರಾಮಂ ಚಾಕ್ಲಿಷ್ಟಕಾರಿಣಮ್ ॥
ಮೂಲಮ್ - 28
ಆಗಮಿಷ್ಯಾಮಿ ತೇ ವಕಂ ಸತ್ಯಂ ಪ್ರತಿಶೃಣೋಮಿ ತೇ
ಏವಮುಕ್ತಾ ಮಯಾ ಸಾ ತು ಸುರಸಾ ಕಾಮರೂಪಿಣೀ ॥
ಅನುವಾದ
ಶ್ರೀರಾಮನ ರಾಜ್ಯದಲ್ಲೇ ಇರುವ ನೀನು ಅವನಿಗೆ ಸಹಾಯಮಾಡುವುದು ಯುಕ್ತವೇ ಆಗಿದೆ. ಒಂದು ವೇಳೆ ನೀನು ನನ್ನನ್ನು ಭಕ್ಷಿಸಲೇಬೇಕೆಂದಿದ್ದರೆ, ನಾನು ಲಂಕಾಪಟ್ಟಣಕ್ಕೆ ಹೋಗಿ ಸೀತೆಯನ್ನು ನೋಡಿ ಅವಳ ಕ್ಷೇಮ ಸಮಾಚಾರವನ್ನು ಅಸಹಾಯಶೂರನಾದ ಶ್ರೀರಾಮನಿಗೆ ನಿವೇದಿಸಿದ ಬಳಿಕ ನಿನಗೆ ಆಹಾರವಾಗಿ ಪುನಃ ಇಲ್ಲಿಗೆ ಬರುತ್ತೇನೆ. ಸತ್ಯದ ಮೇಲೆ ಆಣೆಯಿಟ್ಟು ಈ ಮಾತನ್ನು ಹೇಳುತ್ತಿದ್ದೇನೆ, ನನ್ನ ಮಾತನ್ನು ನಂಬು ಎಂದು ಕಾಮರೂಪಿಣಿಯಾದ ಆ ಸುರಸೆಯಲ್ಲಿ ಹೇಳಿದೆನು.॥27-28॥
ಮೂಲಮ್ - 29
ಅಬ್ರವೀನ್ನಾತಿವರ್ತೇತ ಕಶ್ಚಿದೇಷ ವರೋ ಮಮ ।
ಏವಮುಕ್ತಃ ಸುರಸಯಾ ದಶಯೋಜನಮಾಯತಃ ॥
ಮೂಲಮ್ - 30
ತತೋರ್ಧಗುಣವಿಸ್ತಾರೋ ಬಭೂವಾಹಂ ಕ್ಷಣೇನ ತು ।
ಮತ್ಪ್ರಮಾಣಾಧಿಕಂ ಚೈವ ವ್ಯಾದಿತಂ ತು ಮುಖಂ ತಯಾ ॥
ಅನುವಾದ
ಆಗ ಸುರಸೆಯು ‘ಯಾರೂ ನನ್ನಿಂದ ತಪ್ಪಿಸಿಕೊಂಡು ಹೋಗಲಾರರು. ಇದು ನನಗೆ ದೇವತೆಗಳು ಕೊಟ್ಟಿರುವ ವರವಾಗಿದೆ’ ಎಂದು ಸುರಸೆಯು ಹೇಳಿದಾಗ, ಹತ್ತು ಯೋಜನಗಳಷ್ಟು ಗಾತ್ರವಿದ್ದ ನನ್ನ ಶರೀರವನ್ನು ಹದಿನೈದು ಯೋಜನಗಳಷ್ಟು ದೊಡ್ಡದಾಗಿ ಬೆಳೆಸಿಕೊಂಡೆನು. ನಾನಿದ್ದ ಶರೀರಗಾತ್ರಕ್ಕಿಂತಲೂ ಅಗಲವಾಗಿ ಸುರಸೆಯು ಬಾಯಿತೆರೆದಳು.॥29-30॥
ಮೂಲಮ್ - 31
ತದ್ದೃಷ್ಟ್ವಾ ವ್ಯಾದಿತಂ ಚಾಸ್ಯಂ ಹ್ರಸ್ವಂ ಹ್ಯಕರವಂ ವಪುಃ ।
ತಸ್ಮಿನ್ ಮುಹೂರ್ತೇ ಚ ಪುನರ್ಬಭೂವಾಂಗುಷ್ಠಮಾತ್ರಕಃ ॥
ಮೂಲಮ್ - 32
ಅಭಿಪತ್ಯಾಶು ತದ್ವಕಂ ನಿರ್ಗತೋಹಂ ತತಃ ಕ್ಷಣಾತ್ ।
ಅಬ್ರವೀತ್ ಸುರಸಾ ದೇವೀ ಸ್ವೇನ ರೂಪೇಣ ಮಾಂ ಪುನಃ ॥
ಅನುವಾದ
ಅವಳು ವಿಶಾಲವಾಗಿ ತೆರೆದ ಬಾಯಿಯನ್ನು ನೋಡಿ, ನಾನು ಕೂಡಲೇ ಹೆಬ್ಬೆರಳಿನ ಗಾತ್ರದಷ್ಟು ಸೂಕ್ಷ್ಮಶರೀರವನ್ನು ತಾಳಿ, ಅತಿವೇಗವಾಗಿ ಅವಳ ಬಾಯಿಯಲ್ಲಿ ಪ್ರವೇಶಿಸಿ ಕ್ಷಣಮಾತ್ರದಲ್ಲಿ ಹೊರಗೆ ಬಂದೆನು. ಬಳಿಕ ಸುರಸಾ ದೇವಿಯು ತನ್ನ ದಿವ್ಯವಾದ ನಿಜರೂಪವನ್ನು ತಾಳಿ ಇಂತೆಂದಳು -॥31-32॥
ಮೂಲಮ್ - 33
ಅರ್ಥಸಿದ್ಧೆ ಹರಿಶ್ರೇಷ್ಠ ಗಚ್ಛ ಸೌಮ್ಯ ಯಥಾಸುಖಮ್ ।
ಸಮಾನಯ ಚ ವೈದೇಹೀಂ ರಾಘವೇಣ ಮಹಾತ್ಮನಾ ॥
ಅನುವಾದ
ಎಲೈ ವಾನರೋತ್ತಮನೇ! ಸತ್ಪುರುಷನೇ! ಶ್ರೀರಾಮನ ಕಾರ್ಯಸಿದ್ಧಿಗಾಗಿ ಸುಖವಾಗಿ ಹೋಗಿ ಬಾ, ಮಹಾತ್ಮನಾದ ಶ್ರೀರಾಮನೊಡನೆ ಸೀತಾದೇವಿಯ ಸಮಾಗಮವನ್ನುಂಟುಮಾಡು.॥33॥
ಮೂಲಮ್ - 34
ಸುಖೀ ಭವ ಮಹಾಬಾಹೋ ಪ್ರೀತಾಸ್ಮಿ ತವ ವಾನರ ।
ತತೋಹಂ ಸಾಧು ಸಾಧ್ವೀತಿ ಸರ್ವಭೂತೈಃ ಪ್ರಶಂಸಿತಃ ॥
ಅನುವಾದ
ಎಲೈ ಮಹಾಬಾಹುವೇ! ಕಪಿಸತ್ತಮಾ! ನಿನ್ನ ವಿಷಯದಲ್ಲಿ ನಾನು ಸುಪ್ರೀತಳಾಗಿರುವೆನು. ಸುಖಿಯಾಗಿರು. ಅದೇ ಸಮಯದಲ್ಲಿ ಎಲ್ಲ ಪ್ರಾಣಿಗಳು ನನ್ನನ್ನು ಸಾಧು-ಸಾಧು ಎಂದು ಪ್ರಶಂಸೆಮಾಡಿದರು.॥34॥
ಮೂಲಮ್ - 35
ತತೋಂತರಿಕ್ಷಂ ವಿಪುಲಂ ಪ್ಲು ತೋಹಂ ಗರುಡೋ ಯಥಾ ।
ಛಾಯಾ ಮೇ ನಿಗೃಹೀತಾ ಚ ನ ಚ ಪಶ್ಯಾಮಿ ಕಿಂಚನ ॥
ಮೂಲಮ್ - 36
ಸೋಹಂ ವಿಗತವೇಗಸ್ತು ದಿಶೋ ದಶ ವಿಲೋಕಯನ್ ।
ನ ಕಿಂಚಿತ್ತತ್ರ ಪಶ್ಯಾಮಿ ಯೇನ ಮೇಪಹೃತಾ ಗತಿಃ ॥
ಅನುವಾದ
ಅನಂತರ ನಾನು ವಿಶಾಲವಾದ ಆಕಾಶದಲ್ಲಿ ಗರುಡನಂತೆ ಹಾರುತ್ತಾ ಮುಂದೆ ಹೋಗುತ್ತಿದ್ದೆನು. ಅಷ್ಟರಲ್ಲಿ ನನ್ನ ನೆರಳನ್ನು ಯಾರೋ ಗಟ್ಟಿಯಾಗಿ ಹಿಡಿದು ಎಳೆಯುತ್ತಿರುವಂತಾಯಿತು. ಅದರಿಂದ ನನ್ನ ವೇಗವು ಕುಂಠಿತವಾಯಿತು. ಎಲ್ಲ ದಿಕ್ಕುಗಳಿಗೂ ಕಣ್ಣುಹಾಯಿಸಿ ನೋಡಿದರೂ ನನ್ನ ಗಮನವನ್ನು ತಡೆದವರು ಯಾರೂ ನನಗೆ ಕಂಡುಬರಲಿಲ್ಲ.॥35-36॥
ಮೂಲಮ್ - 37
ತತೋ ಮೇ ಬುದ್ಧಿರುತ್ಪನ್ನಾ ಕಿಂ ನಾಮ ಗಮನೇ ಮಮ ।
ಈದೃಶೋ ವಿಘ್ನ ಉತ್ಪನ್ನೋ ರೂಪಂ ಯತ್ರ ನ ದೃಶ್ಯತೇ ॥
ಅನುವಾದ
ಎಷ್ಟು ನೋಡಿದರೂ ಇಲ್ಲಿ ಯಾರೂ ಕಾಣುತ್ತಿಲ್ಲವಲ್ಲ. ನನ್ನ ಗಮನಕ್ಕೆ ಇಂತಹ ವಿಘ್ನವನ್ನೊಡ್ಡಿದವರು ಯಾರು? ಏನೋ ಕಾರಣ ವಿರಬೇಕು.॥37॥
ಮೂಲಮ್ - 38
ಅಧೋಭಾಗೇನ ಮೇ ದೃಷ್ಟಿಃ ಶೋಚತಾ ಪಾತಿತಾ ಮಯಾ ।
ತತೋದ್ರಾಕ್ಷಮಹಂ ಭೀಮಾಂ ರಾಕ್ಷಸೀಂ ಸಲಿಲೇಶಯಾಮ್ ॥
ಅನುವಾದ
ಹೀಗೆ ಆಲೋಚಿಸುತ್ತಿರುವಾಗ ನನ್ನ ದೃಷ್ಟಿಯು ಕೆಳಗೆ ಸಮುದ್ರದ ಕಡೆಗೆ ಹೋಯಿತು. ಅಲ್ಲಿ ಸಮುದ್ರಜಲದಲ್ಲಿ ಭಯಂಕರಾಕಾರದ ಓರ್ವ ರಾಕ್ಷಸಿಯು ಕಂಡುಬಂದಳು.॥38॥
ಮೂಲಮ್ - 39
ಪ್ರಹಸ್ಯ ಚ ಮಹಾನಾದಮುಕ್ತೋಹಂ ಭೀಮಯಾ ತಯಾ ।
ಅವಸ್ಥಿತಮಸಂಭ್ರಾಂತಮಿದಂ ವಾಕ್ಯಮಶೋಭನಮ್ ॥
ಅನುವಾದ
ಅವಳು ನನ್ನನ್ನು ನೋಡಿ ಅಟ್ಟಹಾಸದಿಂದ ನಗುತ್ತಾ ಗಟ್ಟಿಯಾಗಿ ಗರ್ಜಿಸಿದಳು. ಸ್ವಲ್ಪವಾದರೂ ಭ್ರಾಂತಿ ಗೊಳ್ಳದೆ ಸ್ಥಿರವಾಗಿದ್ದ ನನ್ನ ಬಳಿ ಘೋರರಕ್ಕಸಿಯಾದ ಅವಳು ಅಶುಭವಾದ ಈ ಮಾತನ್ನು ಹೇಳಿದಳು.॥39॥
ಮೂಲಮ್ - 40
ಕ್ವಾಸಿ ಗಂತಾ ಮಹಾಕಾಯ ಕ್ಷುಧಿತಾಯಾ ಮಮೇಪ್ಸಿತಃ ।
ಭಕ್ಷಃ ಪ್ರೀಣಯ ಮೇ ದೇಹಂ ಚಿರಮಾಹಾರವರ್ಜಿತಮ್ ॥
ಅನುವಾದ
ಎಲೈ ಮಹಾಕಾಯನೇ! ಎಲ್ಲಿಗೆ ಹೋಗುತ್ತಿರುವೆ? ಹಸಿದಿರುವ ನಾನು ನಿನ್ನನ್ನೇ ಬಯಸುತ್ತಿರುವೆನು. ಬಹಳ ದಿವಸಗಳಿಂದಲೂ ಆಹಾರವೇ ಇಲ್ಲದಿರುವ ನನಗೆ ಆಹಾರವಾಗಿ ತೃಪ್ತಿಗೊಳಿಸು.॥40॥
ಮೂಲಮ್ - 41
ಬಾಢಮಿತ್ಯೇವ ತಾಂ ವಾಣೀಂ ಪ್ರತ್ಯಗೃಹ್ಣಾಮಹಂ ತತಃ ।
ಆಸ್ಯಪ್ರಮಾಣಾದಧಿಕಂ ತಸ್ಯಾಃ ಕಾಯಮಪೂರಯಮ್ ॥
ಅನುವಾದ
ಹಾಗೆಯೇ ಆಗಲೆಂದು ಅವಳ ಮಾತನ್ನು ಒಪ್ಪಿಕೊಂಡು ಅವಳ ಶರೀರಗಾತ್ರಕ್ಕಿಂತ ಎಷ್ಟೋ ದೊಡ್ಡದಾಗಿ ನನ್ನ ಶರೀರವನ್ನು ಬೆಳೆಸಿದೆನು.॥41॥
ಮೂಲಮ್ - 42
ತಸ್ಯಾಶ್ಚಾಸ್ಯಂ ಮಹದ್ಬೀಮಂ ವರ್ಧತೇ ಮಮ ಭಕ್ಷಣೇ ।
ನ ಚ ಮಾಂ ಸಾ ತು ಬುಬುಧೇ ಮಮ ವಾ ನಿಕೃತಂ ಕೃತಮ್ ॥
ಅನುವಾದ
ನನ್ನನ್ನು ಭಕ್ಷಿಸಲು ಅವಳೂ ತನ್ನ ಮುಖವನ್ನು ಭಯಂಕರವಾಗಿ ಅಗಲವಾಗಿಸಿದಳು. ನಾನು ಕಾಮರೂಪಿಯೆಂದಾಗಲೀ, ವಿಕೃತ ಶರೀರವನ್ನು ಧರಿಸಬಲ್ಲವನೆಂದಾಗಲೀ, ಅವಳು ತಿಳಿಯದೇ ಹೋದಳು.॥42॥
ಮೂಲಮ್ - 43
ತತೋಹಂ ವಿಪುಲಂ ರೂಪಂ ಸಂಕ್ಷಿಪ್ಯ ನಿಮಿಷಾಂತರಾತ್ ।
ತಸ್ಯಾ ಹೃದಯಮಾದಾಯ ಪ್ರಪತಾಮಿ ನಭಃಸ್ಥಲಮ್ ॥
ಅನುವಾದ
ಬಳಿಕ ನಾನು ನನ್ನ ಮಹಾಕಾಯವನ್ನು ಸಣ್ಣದಾಗಿಸಿಕೊಂಡು ಮರುಕ್ಷಣದಲ್ಲಿ ಅವಳ ಮುಖದಲ್ಲಿ ಪ್ರವೇಶಿಸಿ, ಅವಳ ಎದೆಯನ್ನು ಸೀಳಿ, ಕೂಡಲೇ ಆಕಾಶಕ್ಕೆ ಎಗರಿದೆನು.॥43॥
ಮೂಲಮ್ - 44
ಸಾ ವಿಸೃಷ್ಟಭುಜಾ ಭೀಮಾ ಪಪಾತ ಲವಣಾಂಭಸಿ ।
ಮಯಾ ಪರ್ವತಸಂಕಾಶಾ ನಿಕೃತ್ತಹೃದಯಾ ಸತೀ ॥
ಅನುವಾದ
ಪರ್ವತದಂತೆ ವಿಶಾಲವಾದ ಶರೀರ ಇದ್ದ ಆಕೆಯ ಗುಂಡಿಗೆ ಭೇದಿಸಿದಾಗ, ಭುಜಸಂಧಿಗಳು ಶಿಥಿಲವಾಗಿ, ಅವಳ ಕಳೇಬರವು ಆ ಉಪ್ಪುನೀರ ಸಮುದ್ರದಲ್ಲಿ ಬಿದ್ದುಹೋಯಿತು.॥44॥
ಮೂಲಮ್ - 45
ಶೃಣೋಮಿ ಖಗತಾನಾಂ ಚ ಸಿದ್ಧಾನಾಂ ಚಾರಣೈಃ ಸಹ ।
ರಾಕ್ಷಸೀ ಸಿಂಹಿಕಾ ಭೀಮಾ ಕ್ಷಿಪ್ರಂ ಹನುಮತಾ ಹತಾ ॥
ಅನುವಾದ
ಆಗ ಹನುಮಂತನು ಭಯಂಕರಳಾಗಿದ್ದ ಸಿಂಹಿಕಾ ರಾಕ್ಷಸಿಯನ್ನು ಕ್ಷಣಮಾತ್ರದಲ್ಲಿ ಸಂಹರಿಸಿದನು ಎಂದು ಖೇಚರರಾದ ಸಿದ್ಧರೂ, ಚಾರಣರೂ ಹೇಳುತ್ತಿದ್ದ ಮಾತನ್ನು ನಾನು ಕೇಳಿದೆನು.॥45॥
ಮೂಲಮ್ - 46
ತಾಂ ಹತ್ವಾ ಪುನರೇವಾಹಂ ಕೃತ್ಯಮಾತ್ಯಯಿಕಂ ಸ್ಮರನ್ ।
ಗತ್ವಾ ಚಾಹಂ ಮಹಾಧ್ವಾನಂ ಪಶ್ಯಾಮಿ ನಗಮಂಡಿತಮ್ ।
ದಕ್ಷಿಣಂ ತೀರಮುದಧೇರ್ಲಂಕಾ ಯತ್ರ ಚ ಸಾ ಪುರೀ ॥
ಮೂಲಮ್ - 47
ಅಸ್ತಂ ದಿನಕರೇ ಯಾತೇ ರಕ್ಷಸಾಂ ನಿಲಯಂ ಪುರಮ್ ।
ಪ್ರವಿಷ್ಟೋಹಮವಿಜ್ಞಾತೋ ರಕ್ಷೋಭಿರ್ಭಿಮವಿಕ್ರಮೈಃ ॥
ಅನುವಾದ
ಹೀಗೆ ನಾನು ಅವಳನ್ನು ಸಂಹರಿಸಿದ ಬಳಿಕ -ಛಾಯಾಗ್ರಹಣದ ಮೂಲಕ ಅವಳು ನನ್ನನ್ನು ಕೊಲ್ಲಲು ಗೈದ ಪ್ರಯತ್ನವನ್ನು ನೋಡಿ, ಪ್ರಾಣಾಂತಿಕವಾದ ಕರ್ಮವನ್ನು ನೆನೆದು, ಆಕಾಶಮಾರ್ಗದಿಂದ ಮುಂದರಿದೆನು. ಸ್ವಲ್ಪದೂರ ಹೋದಾಗ ವೃಕ್ಷಗಳಿಂದಲೂ, ಪರ್ವತಗಳಿಂದಲೂ ಸಮಲಂಕೃತವಾದ ಲಂಕೆಯ ಸಮುದ್ರದ ದಕ್ಷಿಣ ತೀರವನ್ನು ನೋಡಿದೆನು. ಸೂರ್ಯನು ಮುಳುಗಿದ ನಂತರ ಮಹಾಪರಾಕ್ರಮಿಗಳಾದ ರಾಕ್ಷಸರಿಗೂ ತಿಳಿಯದ ರೀತಿಯಲ್ಲಿ ನಾನು ನಿಶಾಚರರ ನಿಲಯವಾದ ಲಂಕೆಯನ್ನು ಪ್ರವೇಶಿಸಿದೆನು.॥46-47॥
ಮೂಲಮ್ - 48
ತತ್ರ ಪ್ರವಿಶತಶ್ಚಾಪಿ ಕಲ್ಪಾಂತಘನಸಂನಿಭಾ ।
ಅಟ್ಟಹಾಸಂ ವಿಮುಂಚಂತೀ ನಾರೀ ಕಾಪ್ಯುತ್ಥಿತಾ ಪುರಃ ॥
ಅನುವಾದ
ನಾನು ಲಂಕೆಯನ್ನು ಪ್ರವೇಶಿಸುತ್ತಿರುವಂತೆ ಪ್ರಳಯಕಾಲದ ಮೇಘದಂತಿದ್ದ ಓರ್ವ ಸ್ತ್ರೀಯು ವಿಕಟಾಟ್ಟಹಾಸವನ್ನು ಮಾಡುತ್ತಾ ನನ್ನೆದುರಿಗೆ ಬಂದು ನಿಂತಳು.॥48॥
ಮೂಲಮ್ - 49
ಜಿಘಾಂಸಂತೀಂ ತತಸ್ತಾಂ ತು ಜ್ವಲದಗ್ನಿಶಿರೋರುಹಾಮ್ ॥
ಮೂಲಮ್ - 50
ಸವ್ಯಮುಷ್ಟಿಪ್ರಹಾರೇಣ ಪರಾಜಿತ್ಯ ಸುಭೈರವಾಮ್ ।
ಪ್ರದೋಷಕಾಲೇ ಪ್ರವಿಶಂ ಭೀತಯಾಹಂ ತಯೋದಿತಃ ॥
ಅನುವಾದ
ನನ್ನನ್ನು ಸಂಹರಿಸಲು ಬಂದಿದ್ದ ಪ್ರಜ್ವಲಿಸುವ ಅಗ್ನಿಯಂತೆಯೇ ಇದ್ದ, ತಲೆಕೂದಲುಗಳನ್ನು ಹೊಂದಿದ್ದ, ಮಹಾಭಯಂಕರಳಾಗಿದ್ದ, ಅವಳನ್ನು ನಾನು ಎಡಗೈಯ ಮುಷ್ಟಿಯಿಂದ ಮೆಲ್ಲಗೆ ಹೊಡೆದು ಪರಾಜಿತಗೊಳಿಸಿದೆ. ಪ್ರದೋಷಕಾಲದಲ್ಲಿ ಲಂಕೆಯನ್ನು ಪ್ರವೇಶಿಸುತ್ತಿರುವ ನನ್ನನ್ನು ನೋಡಿ, ಹೆದರಿದ ಅವಳು ನನ್ನ ಬಳಿ ಇಂತೆಂದಳು.॥49-50॥
ಮೂಲಮ್ - 51
ಅಹಂ ಲಂಕಾಪುರೀ ವೀರ ನಿರ್ಜಿತಾ ವಿಕ್ರಮೇಣ ತೇ ।
ಯಸ್ಮಾತ್ತಸ್ಮಾದ್ವಿಜೇತಾಸಿ ಸರ್ವರಕ್ಷಾಂಸ್ಯಶೇಷತಃ ॥
ಅನುವಾದ
ಎಲೈ ಮಹಾವೀರಾ! ನಾನು ಲಂಕಾಪುರಾಧಿ ದೇವತೆಯು, ಭುಜಬಲ ಪರಾಕ್ರಮಗಳಿಂದ ನೀನು ನನ್ನನ್ನು ಜಯಿಸಿರುವೆ. ನನ್ನನ್ನೇ ಗೆದ್ದಿರುವ ನಿನಗೆ ಈ ರಾಕ್ಷಸರು ಯಾವ ಲೆಕ್ಕ? ಅದರಿಂದ ನೀನು ಎಲ್ಲ ರಾಕ್ಷಸರನ್ನು ನಿಃಶೇಷವಾಗಿ ಜಯಿಸುವೆ. ॥51॥
ಮೂಲಮ್ - 52
ತತ್ರಾಹಂ ಸರ್ವರಾತ್ರಂ ತು ವಿಚಿನ್ವನ್ ಜನಕಾತ್ಮಜಾಮ್ ।
ರಾವಣಾಂತಃಪುರಗತೋ ನ ಚಾಪಶ್ಯಂ ಸುಮಧ್ಯಮಾಮ್ ॥
ಅನುವಾದ
ಅವಳು ಹೀಗೆ ಹೇಳಿದ ಬಳಿಕ ನಾನು ಲಂಕೆಯನ್ನು ಪ್ರವೇಶಿಸಿ, ರಾತ್ರಿಯಿಡೀ ಸೀತಾದೇವಿಯನ್ನು ಹುಡುಕುತ್ತಾ, ರಾವಣನ ಅಂತಃಪುರಕ್ಕೂ ಹೋದೆನು. ಆದರೆ ಅಲ್ಲಿಯೂ ಅವಳು ಕಂಡು ಬರಲಿಲ್ಲ.॥52॥
ಮೂಲಮ್ - 53
ತತಃ ಸೀತಾಮಪಶ್ಯಂಸ್ತು ರಾವಣಸ್ಯ ನಿವೇಶನೇ ।
ಶೋಕಸಾಗರಮಾಸಾದ್ಯ ನ ಪಾರಮುಪಲಕ್ಷಯೇ ॥
ಅನುವಾದ
ಹೀಗೆ ರಾವಣನ ಅರಮನೆಯಲ್ಲಿ ಸೀತೆಯನ್ನು ಕಾಣದೆ ನಾನು ಅಂತ್ಯವಿಲ್ಲದ ಶೋಕಸಾಗರದಲ್ಲಿ ಮುಳುಗಿದೆನು.॥53॥
ಮೂಲಮ್ - 54
ಶೋಚತಾ ಚ ಮಯಾ ದೃಷ್ಟಂ ಪ್ರಾಕಾರೇಣ ಸಮಾವೃತಮ್ ।
ಕಾಂಚನೇನ ವಿಕೃಷ್ಟೇನ ಗೃಹೋಪವನಮುತ್ತಮಮ್ ॥
ಅನುವಾದ
ಶೋಕಮಗ್ನನಾದ ನನಗೆ ವಿಶಾಲವಾದ, ಭಂಗಾರದ ಪ್ರಾಕಾರಗಳುಳ್ಳ, ಶ್ರೇಷ್ಠವಾದ ಒಂದು ಗೃಹೋದ್ಯಾನವು ಕಂಡುಬಂತು.॥54॥
ಮೂಲಮ್ - 55
ಸಪ್ರಾಕಾರಮವಪ್ಲು ತ್ಯ ಪಶ್ಯಾಮಿ ಬಹುಪಾದಪಮ್ ।
ಅಶೋಕವನಿಕಾಮಧ್ಯೇ ಶಿಂಶಪಾಪಾದಪೋ ಮಹಾನ್ ॥
ಮೂಲಮ್ - 56
ತಮಾರುಹ್ಯ ಚ ಪಶ್ಯಾಮಿ ಕಾಂಚನಂ ಕದಲೀವನಮ್ ।
ಅದೂರೇ ಶಿಂಶಪಾವೃಕ್ಷಾತ್ ಪಶ್ಯಾಮಿ ವರರ್ಣಿನೀಮ್ ॥
ಅನುವಾದ
ಆಗ ನಾನು ಪ್ರಾಕಾರವನ್ನು ಹಾರಿ ಒಳಕ್ಕೆ ಹೋಗಿ, ಅನೇಕ ವೃಕ್ಷ ಪಂಕ್ತಿಗಳಿಂದ ಕೂಡಿದ ಅಶೋಕವನವನ್ನು ನೋಡಿದೆನು. ಅದರ ಮಧ್ಯದಲ್ಲೊಂದು ದೊಡ್ಡದಾದ ಶಿಂಶುಪಾವೃಕ್ಷವಿತ್ತು. ಆ ಮರವನ್ನು ಹತ್ತಿ ಅತ್ತಿತ್ತ ನೋಡುತ್ತಿದ್ದಾಗ ಸುವರ್ಣಮಯವಾದ ಬಾಳೆಯ ತೋಟವು ಕಾಣಿಸಿತು. ಆ ಶಿಂಶುಪಾವೃಕ್ಷದ ಸಮೀಪದಲ್ಲಿಯೇ ವರವರ್ಣಿನಿಯಾದ ಸೀತಾದೇವಿಯನ್ನು ನೋಡಿದೆನು.॥55-56॥
ಮೂಲಮ್ - 57
ಶ್ಯಾಮಾಂ ಕಮಲಪತ್ರಾಕ್ಷೀಮುಪವಾಸಕೃಶಾನನಾಮ್ ।
ತದೇಕವಾಸಃಸಂವೀತಾಂ ರಜೋಧ್ವಸ್ತಶಿರೋರುಹಾಮ್ ॥
ಅನುವಾದ
ಅವಳು ಹರೆಯ ಪ್ರಾಯದವಳಂತೆ ಕಾಣುತ್ತಿದ್ದಳು. ಅವಳ ಕಣ್ಣುಗಳು ಕಮಲದಳಗಳಂತೆ ವಿಶಾಲವಾಗಿದ್ದವು. ನಿರಂತರ ಉಪವಾಸದಿಂದಾಗಿ ಕೃಶಳಾಗಿದ್ದು, ಮುಖಬಾಡಿಹೋಗಿತ್ತು. ಒಂದೇ ವಸ್ತ್ರವನ್ನುಟ್ಟಿದ್ದು, ಆಕೆಯ ತಲೆಕೂದಲು ಧೂಳಿಧೂಸರಿತವಾಗಿದ್ದುವು.॥57॥
ಮೂಲಮ್ - 58
ಶೋಕಸಂತಾಪದೀನಾಂಗೀಂ ಸೀತಾಂ ಭರ್ತೃಹಿತೇ ಸ್ಥಿತಾಮ್ ।
ರಾಕ್ಷಸೀಭಿರ್ವಿರೂಪಾಭಿಃ ಕ್ರೂರಾಭಿರಭಿಸಂವೃತಾಮ್ ॥
ಮೂಲಮ್ - 59
ಮಾಂಸಶೋಣಿತಭಕ್ಷಾಭಿರ್ವ್ಯಾಘ್ರೀಭಿರ್ಹರಿಣೀಮಿವ ।
ಸಾ ಮಯಾ ರಾಕ್ಷಸೀಮಧ್ಯೇ ತರ್ಜ್ಯಮಾನಾ ಮುಹುರ್ಮುಹುಃ ॥
ಅನುವಾದ
ಅವಳ ಅವಯವಗಳೆಲ್ಲವೂ ಶೋಕ-ಸಂತಾಪಗಳಿಂದ ಕುಗ್ಗಿ ಹೋಗಿದ್ದವು. ಪತಿಯ ಹಿತಚಿಂತನೆಯಲ್ಲೇ ಆಸಕ್ತಳಾಗಿದ್ದಳು. ಭಯಂಕರ ರೂಪವುಳ್ಳ, ರಕ್ತಮಾಂಸಗಳನ್ನು ಭಕ್ಷಿಸುವಂತಹ ಕ್ರೂರರಾದ ರಾಕ್ಷಸ ಸ್ತ್ರೀಯರಿಂದ ಸುತ್ತುವರಿಯಲ್ಪಟ್ಟು ಸೀತಾದೇವಿಯು ‘ಹೆಣ್ಣುಹುಲಿಗಳ ಮಧ್ಯೆ ಸಿಕ್ಕಿಕೊಂಡಿರುವ ಹುಲ್ಲೆಯಂತೆ’ ಇದ್ದಳು. ದುಃಖಿತೆಯಾದ ಅವಳನ್ನು ರಾಕ್ಷಸಿಯರು ಪದೇ-ಪದೇ ಹೆದರಿಸುತ್ತಿದ್ದರು. ಅಂತಹ ಸೀತಾದೇವಿಯನ್ನು ನಾನು ನೋಡಿದೆನು.॥58-59॥
ಮೂಲಮ್ - 60
ಏಕವೇಣೀಧರಾ ದೀನಾ ಭರ್ತೃಚಿಂತಾಪರಾಯಣಾ ।
ಭೂಮಿಶಯ್ಯಾ ವಿವರ್ಣಾಂಗೀ ಪದ್ಮಿನೀವ ಹಿಮಾಗಮೇ ॥
ಅನುವಾದ
ತೈಲಸಂಸ್ಕಾರಗಳಿಲ್ಲದೆ (ಎಣ್ಣೆ ಗಾಣದೆ) ಅವಳ ಕೇಶರಾಶಿಯು ಒಂದೇ ಜಡೆಯಾಗಿ ಮಾರ್ಪಟ್ಟಿತ್ತು. ಯಾವಾಗಲೂ ಪತಿಯನ್ನೇ ಸ್ಮರಿಸುತ್ತಿದ್ದಳು. ಬರೀ ನೆಲದಲ್ಲಿ ಕುಳಿತಿದ್ದಳು. ಮಂಜುಕವಿದಪದ್ಮದಂತೆ ಸೀತಾದೇವಿಯು ವಿವರ್ಣಳಾಗಿದ್ದಳು. ॥60॥
ಮೂಲಮ್ - 61
ರಾವಣಾದ್ವಿನಿವೃತ್ತಾರ್ಥಾ ಮರ್ತವ್ಯಕೃತನಿಶ್ಚಯಾ ।
ಕಥಂಚಿನ್ಮೃಗಶಾವಾಕ್ಷೀ ತೂರ್ಣಮಾಸಾದಿತಾ ಮಯಾ ॥
ಅನುವಾದ
ರಾವಣನಿಂದ ಅಪಹರಿಸಲ್ಪಟ್ಟ ಅವಳು ತಾನು ಸಾಯಲೇಬೇಕೆಂದು ನಿಶ್ಚಯಿಸಿದ್ದಳು. ಜಿಂಕೆಯ ಮರಿಯಂತೆ ಚಂಚಲವಾದ ಕಣ್ಣುಗಳನ್ನು ಹೊಂದಿದ್ದ ಅಂತಹ ಸೀತಾದೇವಿಯನ್ನು ನಾನು ಹೇಗೋ ಬೇಗನೇ ನೋಡಿದೆನು.॥61॥
ಮೂಲಮ್ - 62
ತಾಂ ದೃಷ್ಟ್ವಾ ತಾದೃಶೀಂ ನಾರೀಂ ರಾಮಪತ್ನೀಂ ಯಶಸ್ವಿನೀಮ್ ।
ತತ್ರೈವ ಶಿಂಶಪಾವೃಕ್ಷೇ ಪಶ್ಯನ್ನಹಮವಸ್ಥಿತಃ ॥
ಅನುವಾದ
ಯಶಸ್ವಿನಿಯಾದ ಶ್ರೀರಾಮನ ಭಾರ್ಯೆಯನ್ನು ಕಂಡು ನಾನು ಆ ಶಿಂಶುಪಾ ವೃಕ್ಷದಲ್ಲಿಯೇ ಕುಳಿತು ಅವಳ ಚರ್ಯೆಗಳನ್ನು ವೀಕ್ಷಿಸುತ್ತಾ ಕುಳಿತೆನು.॥62॥
ಮೂಲಮ್ - 63
ತತೋ ಹಲಹಲಾಶಬ್ದಂ ಕಾಂಚೀನೂಪುರಮಿಶ್ರಿತಮ್ ।
ಶೃಣೋಮ್ಯಧಿಕಗಂಭೀರಂ ರಾವಣಸ್ಯ ನಿವೇಶನೇ ॥
ಅನುವಾದ
ಅನಂತರ ರಾವಣನ ಅರಮನೆಯಿಂದ - ಒಡ್ಯಾಣಗಳ ಧ್ವನಿಗಳೂ, ನೂಪುರಗಳ ನಿನಾದಗಳೂ ಸೇರಿ ಗಂಭೀರವಾಗಿದ್ದ, ಕಲ-ಕಲ ಧ್ವನಿಗಳನ್ನು ನಾನು ಕೇಳಿದೆನು.॥63॥
ಮೂಲಮ್ - 64
ತತೋಹಂ ಪರಮೋದ್ವಿಗ್ನಃ ಸ್ವರೂಪಂ ಪ್ರತಿಸಂಹರನ್ ।
ಅಹಂ ತು ಶಿಂಶಪಾವೃಕ್ಷೇ ಪಕ್ಷೀವ ಗಹನೇ ಸ್ಥಿತಃ ॥
ಅನುವಾದ
ಆಗ ನಾನು ಅತ್ಯಂತ ಉದ್ವಿಗ್ನನಾಗಿ ನನ್ನ ರೂಪವನ್ನು ಮತ್ತು ಚಿಕ್ಕದಾಗಿಸಿಕೊಂಡು ಶಿಂಶುಪಾವೃಕ್ಷದ ನಿಬಿಡವಾದ ಎಲೆಗಳ ಮಧ್ಯದಲ್ಲಿ ಪಕ್ಷಿಯಂತೆ ಉಡುಗಿ ಕುಳಿತಿದ್ದೆ.॥64॥
ಮೂಲಮ್ - 65
ತತೋ ರಾವಣದಾರಾಶ್ಚ ರಾವಣಶ್ಚ ಮಹಾಬಲಃ ।
ತಂ ದೇಶಂ ಸಮನುಪ್ರಾಪ್ತಾ ಯತ್ರ ಸೀತಾಭವತ್ ಸ್ಥಿತಾ ॥
ಅನುವಾದ
ಬಳಿಕ ಮಹಾಬಲಶಾಲಿಯಾದ ರಾವಣನು ತನ್ನ ಅನೇಕ ಭಾರ್ಯೆಯರೊಂದಿಗೆ ಸೀತಾದೇವಿಯಿರುವ ಪ್ರದೇಶಕ್ಕೆ ಆಗಮಿಸಿದನು.॥65॥
ಮೂಲಮ್ - 66
ತಂ ದೃಷ್ಟ್ವಾಥ ವರಾರೋಹಾ ಸೀತಾ ರಕ್ಷೋಗಣೇಶ್ವರಮ್ ।
ಸಂಕುಚ್ಯೋರೂ ಸ್ತನೌ ಪೀನೌ ಬಾಹುಭ್ಯಾಂ ಪರಿರಭ್ಯ ಚ ॥
ಅನುವಾದ
ಸೌಂದರ್ಯವತಿಯಾದ ಸೀತಾ ದೇವಿಯು ರಾಕ್ಷಸೇಶ್ವರನಾದ ರಾವಣನನ್ನು ನೋಡಿ, ಕೂಡಲೇ ತನ್ನ ತೊಡೆಗಳನ್ನು ಮಡಚಿಕೊಂಡು, ವಕ್ಷಸ್ಥಳವನ್ನು ಬಾಹುಗಳಿಂದ ಮುಚ್ಚಿಕೊಂಡು ಕುಳಿತಳು.॥66॥
ಮೂಲಮ್ - 67
ವಿತ್ರಸ್ತಾಂ ಪರಮೋದ್ವಿಗ್ನಾಂ ವೀಕ್ಷಮಾಣಾಂ ತತಸ್ತತಃ ।
ತ್ರಾಣಂ ಕಂಚಿದಪಶ್ಯಂತೀಂ ವೇಪಮಾನಾಂ ತಪಸ್ವಿನೀಮ್ ॥
ಅನುವಾದ
ಆಗ ಸೀತಾದೇವಿಯು ಬಹಳ ಭೀತಳಾಗಿದ್ದಳು, ಉದ್ವಿಗ್ನಳಾಗಿದ್ದಳು. ಯಾರಾದರೂ ತನ್ನ ರಕ್ಷಣೆಗೆ ಬರುವರೇ ಎಂಬ ಕಾತರದಿಂದ ಅತ್ತ-ಇತ್ತ ನೋಡುತ್ತಿದ್ದಳು. ರಕ್ಷಕರಾರನ್ನೂ ಕಾಣದೆ ತಪಸ್ವಿನಿಯಾದ ಸೀತಾದೇವಿಯು ನಡುಗಿಹೋದಳು. ॥67॥
ಮೂಲಮ್ - 68
ತಾಮುವಾಚ ದಶಗ್ರೀವಃ ಸೀತಾಂ ಪರಮದುಃಖಿತಾಮ್ ।
ಅವಾಕ್ಷಿರಾಃ ಪ್ರಪತಿತೋ ಬಹು ಮನ್ಯಸ್ವ ಮಾಮಿತಿ ॥
ಮೂಲಮ್ - 69
ಯದಿ ಚೇತ್ತ್ವಂ ತು ದರ್ಪಾನ್ಮಾಂ ನಾಭಿನಂದಸಿ ಗರ್ವಿತೇ ।
ದ್ವೌ ಮಾಸಾವಂತರಂ ಸೀತೇ ಪಾಸ್ಯಾಮಿ ರುಧಿರಂ ತವ ॥
ಅನುವಾದ
ಅಂತಹ ಅತ್ಯಂತ ದುಃಖಿತೆಯಾಗಿದ್ದ ಸೀತಾದೇವಿಯ ಎದುರು ದಶಕಂಠನು ನೆಲಮುಟ್ಟಿ ತಲೆಬಾಗಿ, ಎಲೈ ಸೀತೇ! ನನ್ನ ಪ್ರೇಮವನ್ನು ಆದರಿಸು ಎಂದು ಪ್ರಾರ್ಥಿಸಿಕೊಂಡನು. (ಹೀಗೆ ಹೇಳಿದ ರಾವಣನನ್ನು ಸೀತಾದೇವಿಯು ಪೂರ್ಣವಾಗಿ ತಿರಸ್ಕರಿಸಿದಳು. ಇದರಿಂದ ಕೋಪಗೊಂಡ ರಾವಣನು -) ‘‘ಎಲೈ ಗರ್ವಿಷ್ಠಳಾದ ಹೆಣ್ಣೇ! ಒಂದು ವೇಳೆ ನೀನು ದರ್ಪದಿಂದ ನನ್ನನ್ನು ಆದರಿಸದಿದ್ದರೆ, ಎರಡು ತಿಂಗಳು ಕಳೆದ ಬಳಿಕ ನಿನ್ನ ರಕ್ತವನ್ನು ಕುಡಿಯುವೆನು.’’॥68-69॥
ಮೂಲಮ್ - 70
ಏತಚ್ಛ್ರುತ್ವಾ ವಚಸ್ತಸ್ಯ ರಾವಣಸ್ಯ ದುರಾತ್ಮನಃ ।
ಉವಾಚ ಪರಮಕ್ರುದ್ಧಾ ಸೀತಾ ವಚನಮುತ್ತಮಮ್ ॥
ಅನುವಾದ
ದುರ್ಮಾರ್ಗಿಯಾದ ರಾವಣನು ಹೇಳಿದ ಮಾತನ್ನು ಕೇಳಿ, ಸೀತಾದೇವಿಯು ಪರಮಕ್ರುದ್ಧಳಾಗಿ - ಪಾತಿವ್ರತ್ಯ ತೇಜದಿಂದ ಒಡಗೊಂಡ, ಉತ್ತಮವಾದ ಈ ಮಾತನ್ನು ಹೇಳಿದಳು.॥70॥
ಮೂಲಮ್ - 71
ರಾಕ್ಷಸಾಧಮ ರಾಮಸ್ಯ ಭಾರ್ಯಾಮಮಿತತೇಜಸಃ ।
ಇಕ್ಷ್ವಾಕುಕುಲನಾಥಸ್ಯ ಸ್ನುಷಾಂ ದಶರಥಸ್ಯ ಚ ॥
ಮೂಲಮ್ - 72
ಅವಾಚ್ಯಂ ವದತೋ ಜಿಹ್ವಾ ಕಥಂ ನ ಪತಿತಾ ತವ ।
ಕಿಂಸ್ವಿದ್ವೀರ್ಯಂ ತವಾನಾರ್ಯ ಯೋ ಮಾಂ ಭರ್ತುರಸನ್ನಿಧೌ ॥
ಮೂಲಮ್ - 73
ಅಪಹೃತ್ಯಾಗತಃ ಪಾಪ ತೇನಾದೃಷ್ಟೋ ಮಹಾತ್ಮನಾ ।
ನ ತ್ವಂ ರಾಮಸ್ಯ ಸದೃಶೋ ದಾಸ್ಯೇಪ್ಯಸ್ಯ ನ ಯುಜ್ಯಸೇ ॥
ಅನುವಾದ
‘‘ಎಲೈ ರಾಕ್ಷಸಾಧಮಾ! ನಾನು ಮಹಾತೇಜಸ್ವಿಯಾದ ಶ್ರೀರಾಮನ ಭಾರ್ಯೆಯು. ಇಕ್ಷ್ವಾಕುವಂಶ ಪ್ರಭುವಾದ ದಶರಥನಿಗೆ ಸೊಸೆಯು. ಅಂತಹ ನನ್ನ ಕುರಿತು ಆಡಬಾರದ ಮಾತನ್ನು ಆಡುವ ನಿನ್ನ ನಾಲಿಗೆ ಏಕೆ ಕಳಚಿಬೀಳುವುದಿಲ್ಲ? ಎಲೈ ಅನಾರ್ಯನೇ! ನನ್ನ ಪತಿಯು ನನ್ನ ಬಳಿಯಿಲ್ಲದಿರುವಾಗ, ಆ ಮಹಾಮಹಿಮನ ಕಣ್ಣು ತಪ್ಪಿಸಿ, ಕಳ್ಳನಂತೆ ನನ್ನನ್ನು ಅಪಹರಿಸಿಕೊಂಡು ಬಂದಿರುವ ನಿನ್ನ ಪರಾಕ್ರಮವಾದರೂ ಏತರದು? ನೀನು ಯಾವ ರೀತಿಯಿಂದಲೂ ಶ್ರೀರಾಮನಿಗೆ ಸಮನಾಗಲಾರೆ. ಅದಿರಲಿ, ಅವನ ದಾಸನಾಗಲೂ ಕೂಡ ನೀನು ಅಯೋಗ್ಯನೇ ಸರಿ.॥71-73॥
ಮೂಲಮ್ - 74
ಯಜ್ಞೀಯಃ ಸತ್ಯವಾದೀ ಚ ರಣಶ್ಲಾಘೀ ಚ ರಾಘವಃ ।
ಜಾನಕ್ಯಾ ಪರುಷಂ ವಾಕ್ಯಮೇವಮುಕ್ತೋ ದಶಾನನಃ ।
ಜಜ್ವಾಲ ಸಹಸಾ ಕೋಪಾಚ್ಚಿತಾಸ್ಥ ಇವ ಪಾವಕಃ ॥
ಅನುವಾದ
ಆ ರಘುವಂಶ ಪ್ರಭುವು ಯಾಗದೀಕ್ಷಿತನೂ, ಸತ್ಯವಾಕ್ಯಪರಿಪಾಲಕನೂ, ಯುದ್ಧದಲ್ಲಿ ಸಾಟಿಯಿಲ್ಲದ ವೀರನೂ, ಶತ್ರುಗಳೂ ಕೂಡ ಅವನ ರಣಕೌಶಲ್ಯವನ್ನು ಕೊಂಡಾಡುವರು.’’ ಸೀತಾದೇವಿಯು ಹೇಳಿದ ಈ ಕಠೋರ ವಚನಗಳನ್ನು ಕೇಳಿದ ರಾವಣನು ಕೋಪದಿಂದ ಚಿತಾಗ್ನಿಯಂತೆ ಉರಿದುಬಿದ್ದನು.॥74॥
ಮೂಲಮ್ - 75
ವಿವೃತ್ಯ ನಯನೇ ಕ್ರೂರೇ ಮುಷ್ಟಿಮುದ್ಯಮ್ಯ ದಕ್ಷಿಣಮ್ ।
ಮೈಥಿಲೀಂ ಹಂತುಮಾರಬ್ಧಃ ಸೀಭಿರ್ಹಾಹಾಕೃತಂ ತದಾ ॥
ಅನುವಾದ
ಆಗ ಅವನು ಕ್ರೂರವಾದ ಎರಡೂ ಕಣ್ಣುಗಳನ್ನು ಹಿಗ್ಗಿಸಿಕೊಂಡು, ಬಲಮುಷ್ಟಿಯನ್ನು ಬಿಗಿದು, ಮೇಲೆತ್ತಿ, ಸೀತಾದೇವಿಯನ್ನು ಕೊಲ್ಲಲು ಮುಂದಾದನು. ಇದನ್ನು ನೋಡಿದ ರಾವಣನ ಸ್ತ್ರೀಯರೆಲ್ಲರರೂ ಹಾಹಾಕಾರ ಮಾಡಿದರು.॥75॥
ಮೂಲಮ್ - 76
ಸ್ತ್ರೀಣಾಂ ಮಧ್ಯಾತ್ ಸಮುತ್ಪತ್ಯ ತಸ್ಯ ಭಾರ್ಯಾ ದುರಾತ್ಮನಃ ॥
ಮೂಲಮ್ - 77
ವರಾ ಮಂದೋದರೀ ನಾಮ ತಯಾ ಸ ಪ್ರತಿಷೇಧಿತಃ ।
ಉಕ್ತಶ್ಚ ಮಧುರಾಂ ವಾಣೀಂ ತಯಾ ಸ ಮದನಾರ್ದಿತಃ ॥
ಮೂಲಮ್ - 78
ಸೀತಯಾ ತವ ಕಿಂ ಕಾರ್ಯಂ ಮಹೇಂದ್ರಸಮವಿಕ್ರಮ ।
ಮಯಾ ಸಹ ರಮಸ್ವಾದ್ಯ ಮದ್ವಿಶಿಷ್ಟಾ ನ ಜಾನಕೀ ॥
ಮೂಲಮ್ - 79
ದೇವಗಂಧರ್ವಕನ್ಯಾಭಿರ್ಯಕ್ಷಕನ್ಯಾಭಿರೇವ ಚ ।
ಸಾರ್ಧಂ ಪ್ರಭೋ ರಮಸ್ವೇಹ ಸೀತಯಾ ಕಿಂ ಕರಿಷ್ಯ ಸಿ ॥
ಅನುವಾದ
ಆ ದುಷ್ಟನ ಭಾರ್ಯೆಯರಲ್ಲಿನ ಮಂಡೋದರಿಯು ಮುಂದಕ್ಕೆ ಬಂದು, ರಾವಣೇಶ್ವರನನ್ನು ಸಮೀಪಿಸಿ ಕಾಮಾತುರನಾಗಿದ್ದ ಅವನನ್ನು ತಡೆದು, ಮಧುರ ವಚನಗಳಿಂದ ಇಂತೆಂದಳು. ದೇವೇಂದ್ರನಂತೆ ಪರಾಕ್ರಮ ವುಳ್ಳವನೇ! ಸೀತೆಯಿಂದ ನಿನಗೇನಾಗಬೇಕಾಗಿದೆ? ಆರ್ಯನೇ! ನನ್ನೊಡನೆ ವಿಹರಿಸು. ರೂಪದಲ್ಲಾಗಲೀ, ಲಾವಣ್ಯದಲ್ಲಾಗಲೀ, ಸೀತೆಯು ನನಗಿಂತ ಸುಂದರಿಯೇನಲ್ಲ. ಒಡೆಯಾ! ಹಾಗಿಲ್ಲದಿದ್ದರೆ, ದೇವ, ಗಂಧರ್ವ - ಯಕ್ಷ ಕನ್ಯೆಯರೊಡನೆ ಹಾಯಾಗಿ ಕ್ರೀಡಿಸು. ಒಲ್ಲದ ಸೀತೆಯನ್ನು ಕಟ್ಟಿಕೊಂಡು ಏನು ಮಾಡುವೆ?॥76-79॥
ಮೂಲಮ್ - 80
ತತಸ್ತಾಭಿಃ ಸಮೇತಾಭಿರ್ನಾರೀಭಿಃ ಸ ಮಹಾಬಲಃ ।
ಪ್ರಸಾದ್ಯ ಸಹಸಾ ನೀತೋ ಭವನಂ ಸ್ವಂ ನಿಶಾಚರಃ ॥
ಅನುವಾದ
ಅನಂತರ ಮಂಡೋದರಿಯೊಡನೆ ಆ ಸ್ತ್ರೀಯರೆಲ್ಲರೂ ಮಹಾಬಲಿಷ್ಠನಾದ ರಾವಣನನ್ನು ನಯ-ವಿನಯ ಮಾತುಗಳಿಂದ ಸಮಾಧಾನಗೊಳಿಸಿ, ಅವನನ್ನು ಅರಮನೆಗೆ ಕರೆದೊಯ್ದರು.॥80॥
ಮೂಲಮ್ - 81
ಯಾತೇ ತಸ್ಮಿನ್ ದಶಗ್ರೀವೇ ರಾಕ್ಷಸ್ಯೋ ವಿಕೃತಾನನಾಃ ।
ಸೀತಾಂ ನಿರ್ಭತ್ಸ ಯಾಮಾಸುರ್ವಾಕ್ಯೈಃ ಕ್ರೂರೈಃ ಸುದಾರುಣೈಃ ॥
ಅನುವಾದ
ಆ ರಾವಣನು ಹೊರಟುಹೋದ ಬಳಿಕ ವಿಕಾರವಾದ ಮುಖಗಳುಳ್ಳ ರಾಕ್ಷಸಿಯರೆಲ್ಲರೂ ಕ್ರೂರವಾದ ಹಾಗೂ ಅತ್ಯಂತ ದಾರುಣವಾದ ಮಾತುಗಳಿಂದ ಸೀತಾದೇವಿಯನ್ನು ಭಯಪಡಿಸಲು ಪ್ರಾರಂಭಿಸಿದರು.॥81॥
ಮೂಲಮ್ - 82
ತೃಣವದ್ಭಾಷಿತಂ ತಾಸಾಂ ಗಣಯಾಮಾಸ ಜಾನಕೀ ।
ತರ್ಜಿತಂ ಚ ತದಾ ತಾಸಾಂ ಸೀತಾಂ ಪ್ರಾಪ್ಯ ನಿರರ್ಥಕಮ್ ॥
ಅನುವಾದ
ಅವರ ಮಾತುಗಳನ್ನು ಸೀತೆಯು ಹುಲ್ಲುಕಡ್ಡಿಯಂತೆ ನಿಕೃಷ್ಟವಾಗಿ ಕಂಡಳು. ಅವರ ಗರ್ಜನೆಗಳನ್ನು ಲೆಕ್ಕಿಸಲೇ ಇಲ್ಲ. ಇದರಿಂದ ಅವಳ ಮೇಲೆ ಯಾವ ಪರಿಣಾಮವನ್ನು ಉಂಟುಮಾಡಲಿಲ್ಲ.॥82॥
ಮೂಲಮ್ - 83
ವೃಥಾ ಗರ್ಜಿತನಿಶ್ಚೇಷ್ಟಾ ರಾಕ್ಷಸ್ಯಃ ಪಿಶಿತಾಶನಾಃ ।
ರಾವಣಾಯ ಶಶಂಸುಸ್ತಾಃ ಸೀತಾವ್ಯವಸಿತಂ ಮಹತ್ ॥
ಅನುವಾದ
ಹಸಿಮಾಂಸವನ್ನು ಭಕ್ಷಿಸುವ ಆ ರಾಕ್ಷಸಿಯರು ತಮ್ಮ ಗರ್ಜನೆಗಳೆಲ್ಲ ವ್ಯರ್ಥವಾಗಿರುವುದನ್ನು ನೋಡಿ, ಅವರು ಏನೂ ಮಾಡಲಾಗದೆ, ಸೀತಾದೇವಿಯ ಚರ್ಯೆಯನ್ನು ರಾವಣನಿಗೆ ತಿಳಿಸಿದರು.॥83॥
ಮೂಲಮ್ - 84
ತತಸ್ತಾಃ ಸಹಿತಾಃ ಸರ್ವಾ ವಿಹತಾಶಾ ನಿರುದ್ಯಮಾಃ ।
ಪರಿಕ್ಷಿಪ್ಯ ಸಮಂತಾತ್ ತಾಂ ನಿದ್ರಾವಶಮುಪಾಗತಾಃ ॥
ಅನುವಾದ
ಬಳಿಕ ಅವರೆಲ್ಲರೂ ಭಗ್ನಮನೋರಥರಾಗಿ ಎಲ್ಲ ಪ್ರಯತ್ನವನ್ನು ನಿಲ್ಲಿಸಿ, ಸೀತೆಯ ಸುತ್ತಲೂ ಸೇರಿ ನಿದ್ರಾವಶರಾದರು. ॥84॥
ಮೂಲಮ್ - 85
ತಾಸು ಚೈವ ಪ್ರಸುಪ್ತಾಸು ಸೀತಾ ಭರ್ತೃಹಿತೇ ರತಾ ।
ವಿಲಪ್ಯ ಕರುಣಂ ದೀನಾ ಪ್ರಶುಶೋಚ ಸುದುಃಖಿತಾ ॥
ಅನುವಾದ
ಅವರೆಲ್ಲರೂ ಗಾಢನಿದ್ರೆಯಲ್ಲಿದ್ದಾಗ, ಪತಿಯ ಹಿತದಲ್ಲೇ ರತಳಾಗಿದ್ದ, ಅತ್ಯಂತ ದುಃಖಿತೆಯಾಗಿದ್ದ ಸೀತಾದೇವಿಯು, ಕರುಣಾಜನಕವಾದ ರೀತಿಯಲ್ಲಿ ಗೋಳಾಡುತ್ತಾ ಶೋಕಿಸಿದಳು.॥85॥
ಮೂಲಮ್ - 86
ತಾಸಾಂ ಮಧ್ಯಾತ್ ಸಮುತ್ಥಾಯ ತ್ರಿಜಟಾ ವಾಕ್ಯಮಬ್ರವೀತ್ ।
ಆತ್ಮಾನಂ ಖಾದತ ಕ್ಷಿಪ್ರಂ ನ ಸೀತಾ ವಿನಶಿಷ್ಯತಿ ।
ಜನಕಸ್ಯಾತ್ಮಜಾ ಸಾಧ್ವೀ ಸ್ನುಷಾ ದಶರಥಸ್ಯ ಚ ॥
ಅನುವಾದ
ಆ ರಾಕ್ಷಸಿಯ ಮಧ್ಯದಲ್ಲಿದ್ದ ತ್ರಿಜಟೆ ಎಂಬುವಳು ಉಳಿದವರೆಲ್ಲರಿಗೂ ಹೀಗೆ ಹೇಳಿದಳು - ರಾಕ್ಷಸಿಯರೇ! ಜನಕರಾಜನ ಮಗಳೂ, ದಶರಥಮಹಾರಾಜರ ಸೊಸೆಯೂ ಆದ ಮಹಾಸಾಥ್ವಿಯಾದ ಸೀತಾದೇವಿಯನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಆಸೆಯನ್ನು ತೀರಿಸಿಕೊಳ್ಳಬೇಕಾದರೆ ನನ್ನನ್ನೇ ನೀವೆಲ್ಲರೂ ತಿಂದುಬಿಡಿರಿ.॥86॥
ಮೂಲಮ್ - 87
ಸ್ವಪ್ನೋ ಹ್ಯದ್ಯ ಮಯಾ ದೃಷ್ಟೋ ದಾರುಣೋ ರೊಮಹರ್ಷಣಃ ।
ರಕ್ಷಸಾಂ ಚ ವಿನಾಶಾಯ ಭರ್ತುರಸ್ಯಾ ಜಯಾಯ ಚ ॥
ಮೂಲಮ್ - 88
ಅಲಮಸ್ಮಾನ್ ಪರಿತ್ರಾತುಂ ರಾಘವಾದ್ರಾಕ್ಷಸೀಗಣಮ್ ।
ಅಭಿಯಾಚಾಮ ವೈದೇಹೀಮೇತದ್ಧಿ ಮಮ ರೋಚತೇ ॥
ಅನುವಾದ
ನಾನು ಈಗತಾನೇ ಭಯಂಕರವೂ, ರೋಮಾಂಚಕರವಾಗಿಯೂ ಇದ್ದ ಸ್ವಪ್ನವೊಂದನ್ನು ಕಂಡೆನು. ಅದು ರಾಕ್ಷಸರ ವಿನಾಶವನ್ನೂ, ಸೀತಾಪತಿಯಾದ ಶ್ರೀರಾಮನಿಗೆ ಜಯವನ್ನೂ ಸೂಚಿಸುತ್ತಿತ್ತು. ಆ ರಾಮನಿಂದ ರಾಕ್ಷಸ ಸ್ತ್ರೀಯರನ್ನು ರಕ್ಷಿಸಲಿಕ್ಕಾಗಿ ಇವಳೇ ಸಮರ್ಥಳು. ಆದ್ದರಿಂದ ನಾವೆಲ್ಲರೂ ಈಕೆಯನ್ನು ಬೇಡಿಕೊಳ್ಳುವುದೇ ಸಮುಚಿತವೆಂದು ನನಗೆ ತೋರುತ್ತದೆ.॥87-88॥
ಮೂಲಮ್ - 89
ಯಸ್ಯಾ ಹ್ಯೇವಂವಿಧಃ ಸ್ವಪ್ನೋ ದುಃಖಿತಾಯಾಃ ಪ್ರದಶ್ಯತೇ ।
ಸಾ ದುಃಖೈರ್ವಿವಿಧೈರ್ಮುಕ್ತಾ ಸುಖಮಾಪ್ನೋತ್ಯನುತ್ತಮಮ್ ॥
ಮೂಲಮ್ - 90
ಪ್ರಣಿಪಾತಪ್ರಸನ್ನಾ ಹಿ ಮೈಥಿಲೀ ಜನಕಾತ್ಮಜಾ ।
ಅಲಮೇಷಾ ಪರಿತ್ರಾತುಂ ರಾಕ್ಷಸ್ಯೋ ಮಹತೋ ಭಯಾತ್ ॥
ಅನುವಾದ
ದುಃಖಿತಳಾದವಳೊಬ್ಬಳ ಸಂಬಂಧವಾಗಿ ಈ ವಿಧವಾದ ಕನಸು ಬಿದ್ದಲ್ಲಿ, ಅವಳು ದುಃಖದಿಂದ ಬಿಡುಗಡೆ ಹೊಂದಿ ಉತ್ತಮವಾದ ಸುಖವನ್ನು ಪಡೆಯುತ್ತಾಳೆ. ನನ್ನ ಅಭಿಪ್ರಾಯದಂತೆ ಕಾಲಿಗೆ ಬೀಳುವುದರಿಂದ ಜನಕನ ಮಗಳಾದ ಸೀತಾದೇವಿಯು ಪ್ರಸನ್ನಳಾಗುವಳು. ಈ ಸಮಯದಲ್ಲಿ ಸೀತೆಯೊಬ್ಬಳೇ ಮಹಾಭಯದಿಂದ ನಮ್ಮನ್ನು ರಕ್ಷಿಸಲು ಸಮರ್ಥಳಾಗಿದ್ದಾಳೆ.॥89-90॥
ಮೂಲಮ್ - 91
ತತಃ ಸಾ ಹ್ರೀಮತೀ ಬಾಲಾ ಭರ್ತುರ್ವಿಜಯಹರ್ಷಿತಾ ।
ಅವೋಚದ್ಯದಿ ತತ್ತಥ್ಯಂ ಭವೇಯಂ ಶರಣಂ ಹಿ ವಃ ॥
ಅನುವಾದ
ಪತಿಗೆ ವಿಜಯವಾಗುವುದೆಂಬ ಕನಸಿನ ವೃತ್ತಾಂತವನ್ನು ತ್ರಿಜಟೆಯಿಂದ ಕೇಳಿದ ಮಾತ್ರದಿಂದ ಹರ್ಷಿತಳಾದ ಸೀತಾದೇವಿಯು ಲಜ್ಜಾನ್ವಿತೆಯಾಗಿ ಹೇಳಿದಳು - ‘‘ನೀನು ಹೇಳುತ್ತಿರುವುದು ನಿಜವಾದರೆ ನಾನು ನಿಮಗೆ ಅಭಯವನ್ನೀಯುವೆನು.’’॥91॥
ಮೂಲಮ್ - 92
ತಾಂ ಚಾಹಂ ತಾದೃಶೀಂ ದೃಷ್ಟ್ವಾ ಸೀತಾಯಾ ದಾರುಣಾಂ ದಶಾಮ್ ।
ಚಿಂತಯಾಮಾಸ ವಿಕ್ರಾಂತೋ ನ ಚ ಮೇ ನಿರ್ವೃತಂ ಮನಃ ॥
ಅನುವಾದ
ಸೀತಾದೇವಿಯ ಅಂತಹ ಅತಿದಾರುಣವಾದ ಪರಿಸ್ಥಿತಿಯನ್ನು ಕಂಡು ನಾನು ಪರಾಕ್ರಮಶಾಲಿಯಾಗಿದ್ದರೂ, ಹೆಚ್ಚಾಗಿ ದುಃಖಾಕ್ರಾಂತನಾದೆನು. ನಾನಾವಿಧವಾಗಿ ಆಲೋಚಿಸುತ್ತಾ ಇರುವ ನನ್ನ ಮನಸ್ಸಿಗೆ ಶಾಂತಿಯಿರಲಿಲ್ಲ.॥92॥
ಮೂಲಮ್ - 93
ಸಂಭಾಷಣಾರ್ಥಂ ಚ ಮಯಾ ಜಾನಕ್ಯಾಶ್ಚಿಂತಿತೋ ವಿಧಿಃ ।
ಇಕ್ಷ್ಯಾಕೂಣಾಂ ಹಿ ವಂಶಸ್ತು ತತೋ ಮಮ ಪುರಸ್ಕೃತಃ ॥
ಮೂಲಮ್ - 94
ಶ್ರುತ್ವಾ ತು ಗದಿತಾಂ ವಾಚಂ ರಾಜರ್ಷಿಗಣಪೂಜಿತಾಮ್ ।
ಪ್ರತ್ಯಭಾಷತ ಮಾಂ ದೇವೀ ಬಾಷ್ಪೆಃ ಪಿಹಿತಲೋಚನಾ ॥
ಅನುವಾದ
ಸೀತೆಯೊಡನೆ ಸಂಭಾಷಿಸುವ ಸಲುವಾಗಿ ನಾನಾವಿಧವಾದ ಮಾರ್ಗಗಳನ್ನು ಯೋಚಿಸಿದೆನು. ಅನಂತರ ನಾನು ಇಕ್ಷ್ವಾಕುವಂಶದರಸರ ಮಹಿಮೆಯನ್ನು ವರ್ಣಿಸತೊಡಗಿದೆನು. ರಾಜರ್ಷಿಗಳ ಪರಂಪರೆಯನ್ನು ಹಾಡಿದುದನ್ನು ಕೇಳಿದ ಸೀತಾದೇವಿಯು ಕಣ್ಣುಗಳಿಂದ ಕಣ್ಣೀರಸುರಿಸುತ್ತಾ ನನ್ನನ್ನು ಇಂತು ಪ್ರಶ್ನಿಸಿದಳು.॥93-94॥
ಮೂಲಮ್ - 95
ಕಸ್ತ್ವಂ ಕೇನ ಕಥಂ ಚೇಹ ಪ್ರಾಪ್ತೋ ವಾನರಪುಂಗವ ॥
ಮೂಲಮ್ - 96
ಕಾ ಚ ರಾಮೇಣ ತೇ ಪ್ರೀತಿಸ್ತನ್ಮೇ ಶಂಸಿತುಮರ್ಹಸಿ ।
ತಸ್ಯಾಸ್ತದ್ವಚನಂ ಶ್ರುತ್ವಾ ಹ್ಯಹಮಪ್ಯಬ್ರವಂ ವಚಃ ॥
ಅನುವಾದ
‘‘ವಾನರ ಶ್ರೇಷ್ಠನೇ! ನೀನು ಯಾರು? ಯಾರು ನಿನ್ನನ್ನು ಇಲ್ಲಿಗೆ ಕಳಿಸಿದವರು? ಇಲ್ಲಿಗೆ ಹೇಗೆ ಬಂದೆ? ಶ್ರೀರಾಮನ ವಿಷಯದಲ್ಲಿ ನಿನಗಿರುವ ಪ್ರೀತಿಯು ಎಂತಹುದು? ಈ ಎಲ್ಲ ವಿಷಯಗಳನ್ನು ವಿವರಿಸಿ ಹೇಳು.’’ ಸೀತಾದೇವಿಯು ಹೀಗೆ ಹೇಳಿದ ಮಾತನ್ನು ಕೇಳಿ ನಾನು ಇಂತೀಪರಿಯಲ್ಲಿ ಉತ್ತರಿಸಿದೆ-॥95-96॥
ಮೂಲಮ್ - 97
ದೇವಿ ರಾಮಸ್ಯ ಭರ್ತುಸ್ತೇ ಸಹಾಯೋ ಭೀಮವಿಕ್ರಮಃ ।
ಸುಗ್ರೀವೋ ನಾಮ ವಿಕ್ರಾಂತೋ ವಾನರೇಂದ್ರೋ ಮಹಾಬಲಃ ॥
ಅನುವಾದ
‘‘ದೇವೀ! ಸುಗ್ರೀವನು ವಾನರರಿಗೆ ಪ್ರಭುವು. ನಿನ್ನ ಪತಿಯಾದ ಶ್ರೀರಾಮನಿಗೆ ಸಹಾಯಕನು. ಅವನು ಮಹಾ ಬಲಪರಾಕ್ರಮ ಸಂಪನ್ನನು.॥97॥
ಮೂಲಮ್ - 98
ತಸ್ಯ ಮಾಂ ವಿದ್ಧಿ ಭೃತ್ಯಂ ತ್ವಂ ಹನುಮಂತಮಿಹಾಗತಮ್ ।
ಭರ್ತ್ರಾಹಂ ಪ್ರೇಶಿತಸ್ತುಭ್ಯಂ ರಾಮೇಣಾಕ್ಲಿಷ್ಟಕರ್ಮಣಾ ॥
ಅನುವಾದ
ನಾನು ಆ ಸುಗ್ರೀವನಿಗೆ ಸಚಿವನು. ನನ್ನನ್ನು ಹನುಮಂತನೆಂದು ಕರೆಯುವರು. ಅಸಹಾಯ ಶೂರನೂ, ನಿನಗೆ ಪತಿಯೂ ಆದ ಶ್ರೀರಾಮಚಂದ್ರಪ್ರಭುವು ನಿನ್ನನ್ನು ಹುಡುಕಲು ಕಳಿಸಿದ್ದರಿಂದ ನಾನು ಇಲ್ಲಿಗೆ ಬಂದಿರುವೆನು.॥98॥
ಮೂಲಮ್ - 99
ಇದಂ ಚ ಪುರುಷವ್ಯಾಘ್ರಃ ಶ್ರೀಮಾನ್ ದಾಶರಥಿಃ ಸ್ವಯಮ್ ।
ಅಂಗುಲೀಯಮಭಿಜ್ಞಾನಮದಾತ್ತುಭ್ಯಂ ಯಶಸ್ವಿನಿ ॥
ಅನುವಾದ
ಪೂಜ್ಯಳೇ! ಪುರುಷಶ್ರೇಷ್ಠನೂ, ಸರ್ವಗುಣಸಂಪನ್ನನೂ, ದಾಶರಥಿಯೂ ಆದ ಶ್ರೀರಾಮನು ಗುರುತಿಗಾಗಿ ಈ ಮುದ್ರೆಯುಂಗುರವನ್ನು ನಿನಗಾಗಿ ಸ್ವತಃ ಕೊಟ್ಟಿರುವನು. ಇದನ್ನು ಸ್ವೀಕರಿಸು.॥99॥
ಮೂಲಮ್ - 100
ತದಿಚ್ಛಾಮಿ ತ್ವಯಾಜ್ಞಪ್ತಂ ದೇವಿ ಕಿಂ ಕರವಾಣ್ಯಹಮ್ ।
ರಾಮಲಕ್ಷಘ್ಮಿಣಯೋಃ ಪಾರ್ಶ್ಚಂ ನಯಾಮಿ ತ್ವಾಂ ಕಿಮುತ್ತರಮ್ ॥
ಅನುವಾದ
ನಾನೇನು ಮಾಡಬೇಕೋ ಎಂಬುದನ್ನು ಆಜ್ಞಾಪಿಸು. ರಾಮ-ಲಕ್ಷ್ಮಣರ ಸನ್ನಿಧಿಗೆ ನಿನ್ನನ್ನು ಕೊಂಡುಹೋಗಲೇ? ನಿನ್ನ ಅಪ್ಪಣೆಯಾಗಲಿ.’’॥100॥
ಮೂಲಮ್ - 101
ಏತಚ್ಛ್ರುತ್ವಾ ವಿದಿತ್ವಾ ಚ ಸೀತಾ ಜನಕನಂದಿನೀ ।
ಆಹ ರಾವಣಮುತ್ಸಾದ್ಯ ರಾಘವೋ ಮಾಂ ನಯತ್ವಿತಿ ॥
ಅನುವಾದ
ಅಮ್ಮಾ! ಜನಕನಂದಿನಿಯಾದ ಸೀತಾದೇವಿಯು ನನ್ನ ಮಾತುಗಳನ್ನು ಕೇಳಿ, ವಿಷಯವನ್ನು ಗ್ರಹಿಸಿ, ‘‘ರಾಘವನು ರಾವಣನನ್ನು ಸಂಹರಿಸಿ ನನ್ನನ್ನು ಕರೆದೊಯ್ಯುವುದೇ ಯುಕ್ತವು’’ ಎಂದು ಹೇಳಿದಳು.॥101॥
ಮೂಲಮ್ - 102
ಪ್ರಣಮ್ಯ ಶಿರಸಾ ದೇವೀಮಹಮಾರ್ಯಾಮನಿಂದಿತಾಮ್ ।
ರಾಘವಸ್ಯ ಮನೋಹ್ಲಾದಮಭಿಜ್ಞಾನಮಯಾಚಿಷಮ್ ॥
ಅನುವಾದ
ಆಗ ನಾನು ಪೂಜ್ಯಳಾದ ಸೀತಾದೇವಿಗೆ ಸಾಷ್ಟಾಂಗ ನಮಸ್ಕಾರಗೈದು, ಶ್ರೀರಾಮನ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವ ಗುರುತೊಂದನ್ನು ಕೊಡುವಂತೆ ಪ್ರಾರ್ಥಿಸಿದೆನು.॥102॥
ಮೂಲಮ್ - 103
ಅಥ ಮಾಮಬ್ರವೀತ್ ಸೀತಾ ಗೃಹ್ಯತಾಮಯಮುತ್ತಮಃ ।
ಮಣಿರ್ಯೇನ ಮಹಾಬಾಹೂ ರಾಮಸ್ತ್ವಾಂ ಬಹು ಮನ್ಯತೇ ॥
ಅನುವಾದ
ನನ್ನ ಪ್ರಾರ್ಥನೆಯನ್ನು ಮನ್ನಿಸಿ ಸೀತಾದೇವಿಯು - ‘‘ಸರ್ವೋತ್ಕೃಷ್ಟವಾದ ಈ ಚೂಡಾಮಣಿಯನ್ನು ತೆಗೆದುಕೋ. ಇದನ್ನು ನೋಡಿ ಆಜಾನುಬಾಹುವಾದ ಶ್ರೀರಾಮನು ನಿನ್ನನ್ನು ಬಹುವಾಗಿ ಮೆಚ್ಚಿಕೊಳ್ಳುವನು’’ ಎಂದು ನನಗೆ ಹೇಳಿದಳು.॥103॥
ಮೂಲಮ್ - 104
ಇತ್ಯುಕ್ತ್ವಾ ತು ವರಾರೋಹಾ ಮಣಿಪ್ರವರಮದ್ಭುತಮ್ ।
ಪ್ರಾಯಚ್ಛತ್ ಪರಮೋದ್ವಿಗ್ನಾ ವಾಚಾ ಮಾಂ ಸಂದಿದೇಶ ಹ ॥
ಅನುವಾದ
ಹೀಗೆ ಹೇಳಿ ಸೌಂದರ್ಯರಾಶಿಯಾದ ಸೀತಾದೇವಿಯು ಅತ್ಯಾಶ್ಚರ್ಯಕರವಾದ ಚೂಡಾಮಣಿಯನ್ನು ನನಗೆ ಕೊಟ್ಟಳು. ರಕ್ಕಸಿಯರ ಭಯದಿಂದ ಉದ್ವಿಗ್ನಳಾಗಿ ಶ್ರೀರಾಮನಿಗೆ ಮಾತ್ರವೇ ತಿಳಿದಿದ್ದ ಅನೇಕ ವಿಷಯಗಳನ್ನು ನನ್ನೊಡನೆ ಹೇಳಿದಳು. ॥104॥
ಮೂಲಮ್ - 105
ತತಸ್ತಸ್ಯೈ ಪ್ರಣಮ್ಯಾಹಂ ರಾಜಪುತ್ರೈ ಸಮಾಹಿತಃ ।
ಪ್ರದಕ್ಷಿಣಂ ಪರಿಕ್ರಾಮನ್ನಿಹಾಭ್ಯುದ್ಗತಮಾನಸಃ ॥
ಅನುವಾದ
ಬಳಿಕ ನಾನು ಸಮಾಧಾನ ಚಿತ್ತನಾಗಿ ಜನಕನ ಪುತ್ರಿಯಾದ ಸೀತಾದೇವಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿ ಇಲ್ಲಿಗೆ ಹಿಂದಿರುಗಿ ಬರಲು ಸಿದ್ಧನಾದೆನು.॥105॥
ಮೂಲಮ್ - 106
ಉಕ್ತೋಹಂ ಪುನರೇವೇದಂ ನಿಶ್ಚಿತ್ಯ ಮನಸಾ ತಯಾ ।
ಹನುಮನ್ ಮಮ ವೃತ್ತಾಂತಂ ವಕ್ತುಮರ್ಹಸಿ ರಾಘವೇ ॥
ಅನುವಾದ
ಆಗ ಸೀತಾದೇವಿಯು ಚೆನ್ನಾಗಿ ಆಲೋಚಿಸಿ ಪುನಃ ನನ್ನ ಬಳಿ ಇಂತೆಂದಳು - ‘‘ಎಲೈ ಮಾರುತೀ! ಇಲ್ಲಿ ನಾನು ಸಂಕಟ ಪರಿಸ್ಥಿತಿಯಲ್ಲಿರುವುದನ್ನು ರಾಘವನಿಗೆ ಹೇಳು.॥106॥
ಮೂಲಮ್ - 107
ಯಥಾ ಶ್ರುತ್ವೈವ ನ ಚಿರಾತ್ತಾವುಭೌ ರಾಮಲಕ್ಷ್ಮಣೌ ।
ಸುಗ್ರೀವಸಹಿತೌ ವೀರಾಪುಪೇಯಾತಾಂ ತಥಾ ಕುರು ॥
ಮೂಲಮ್ - 108
ಯದ್ಯನ್ಯಥಾ ಭವೇದೇತದ್ದೌ ಮಾಸೌ ಜೀವಿತಂ ಮಮ ।
ನ ಮಾಂ ದ್ರಕ್ಷ್ಯತಿ ಕಾಕುತ್ಸ್ಥೋ ಮ್ರಿಯೇ ಸಾಹಮನಾಥವತ್ ॥
ಅನುವಾದ
ಮಹಾವೀರನಾದ ರಾಮ-ಲಕ್ಷ್ಮಣರಿಬ್ಬರೂ ಸುಗ್ರೀವನಿಂದೊಡಗೊಂಡು ಬಹುಬೇಗನೇ ಇಲ್ಲಿಗೆ ಬರುವಂತೆ ಮಾಡು. ನಾನು ಇನ್ನು ಎರಡು ತಿಂಗಳು ಮಾತ್ರ ಬದುಕಿರುವೆನು. ಅದು ಕಳೆದ ಬಳಿಕ ಶ್ರೀರಾಮನು ಇಲ್ಲಿಗೆ ಬಂದರೂ ನನ್ನನ್ನು ನೋಡಲಾರನು. ನಾನು ಈ ರಾಕ್ಷಸರ ಮಧ್ಯೆ ಅನಾಥೆಯಂತೆ ಪ್ರಾಣತ್ಯಾಗ ಮಾಡುವೆನು.’’॥107-108॥
ಮೂಲಮ್ - 109
ತಚ್ಛ್ರುತ್ವಾ ಕರುಣಂ ವಾಕ್ಯಂ ಕ್ರೋಧೋ ಮಾಮಭ್ಯವರ್ತತ ।
ಉತ್ತರಂ ಚ ಮಯಾ ದೃಷ್ಟಂ ಕಾರ್ಯಶೇಷಮನಂತರಮ್ ॥
ಅನುವಾದ
ವಾನರರೇ! ಸೀತಾದೇವಿಯ ದೈನ್ಯಪೂರ್ಣ ವಚನಗಳನ್ನು ಕೇಳಿ, ರಾವಣನ ವಿಷಯದಲ್ಲಿ ತಡೆಯಲಾರದ ಕೋಪವು ಬಂತು. ಇನ್ನು ಮಾಡಬೇಕಾದ ಕಾರ್ಯದ ಬಗ್ಗೆ ಆಲೋಚಿಸಿದೆನು.॥109॥
ಮೂಲಮ್ - 110
ತತೋವರ್ಧತ ಮೇ ಕಾಯಸ್ತದಾ ಪರ್ವತಸಂನಿಭಃ ।
ಯುದ್ಧಕಾಂಕ್ಷೀ ವನಂ ತಚ್ಚ ವಿನಾಶಯಿತುಮಾರಭೇ ॥
ಅನುವಾದ
ಬಳಿಕ ನನ್ನ ಶರೀರವನ್ನು ಪರ್ವತೋಪಮವಾಗಿ ಬೆಳೆಸಿದನು. ರಾಕ್ಷಸರೊಡನೆ ಯುದ್ಧ ಮಾಡಬೇಕೆಂಬ ಇಚ್ಛೆಯಿಂದ ಆ ವನವನ್ನು ಧ್ವಂಸಗೊಳಿಸ ತೊಡಗಿದೆನು.॥110॥
ಮೂಲಮ್ - 111
ತದ್ಭಗ್ನಂ ವನಷಂಡಂ ತು ಭ್ರಾಂತತ್ರಸ್ತಮೃಗದ್ವಿಜಮ್ ।
ಪ್ರತಿಬುದ್ಧಾ ನಿರೀಕ್ಷಂತೇ ರಾಕ್ಷಸ್ಯೋ ವಿಕೃತಾನನಾಃ ॥
ಅನುವಾದ
ಕ್ಷಣಮಾತ್ರದಲ್ಲಿ ಆ ವನಪ್ರದೇಶವು ಭಗ್ನವಾಯಿತು. ಮೃಗ-ಪಕ್ಷಿಗಳೂ ಆಕ್ರಾಂತರಾಗಿ ಅರಚುತ್ತಿದ್ದವು. ವಿಕಾರವಾದ ಮುಖವುಳ್ಳ ರಾಕ್ಷಸಿಯರು ಎಚ್ಚರಗೊಂಡು ದುರುಗಟ್ಟಿ ನೋಡುತ್ತಿದ್ದರು.॥111॥
ಮೂಲಮ್ - 112
ಮಾಂ ಚ ದೃಷ್ಟ್ವಾ ವನೇ ತಸ್ಮಿನ್ ಸಮಾಗಮ್ಯ ತತಸ್ತತಃ ।
ತಾಃ ಸಮಭ್ಯಾಗತಾಃ ಕ್ಷಿಪ್ರಂ ರಾವಣಾಯಾಚಚಕ್ಷಿರೇ ॥
ಅನುವಾದ
ಆ ವನದಲ್ಲಿ ಅಲ್ಲಲ್ಲಿದ್ದ ರಾಕ್ಷಸಿಯರು ಗುಂಪಾಗಿ ಸೇರಿ, ಗಾಬರಿಯಿಂದ ನನ್ನನ್ನೂ, ಧ್ವಂಸವಾದ ವನವನ್ನೂ ನೋಡಿ, ಒಡನೆಯೇ ರಾವಣನಲ್ಲಿಗೆ ಹೋಗಿ ದೂರಿತ್ತರು.॥112॥
ಮೂಲಮ್ - 113
ರಾಜನ್ ವನಮಿದಂ ದುರ್ಗಂ ತವ ಭಗ್ನಂ ದುರಾತ್ಮನಾ ।
ವಾನರೇಣ ಹ್ಯವಿಜ್ಞಾಯ ತವ ವೀರ್ಯಂ ಮಹಾಬಲ ॥
ಅನುವಾದ
ಓ ಮಹಾಬಲಶಾಲಿಯಾದ ಮಹಾರಾಜಾ! ನಿನ್ನ ಬಲ ಪರಾಕ್ರಮವನ್ನು ಅರಿಯದ ದುರಾತ್ಮನಾದ ವಾನರರೊಬ್ಬನು ದುರ್ಗಮವಾಗಿದ್ದ ನಿನ್ನ ಅಶೋಕವನವನ್ನು ಹಾಳುಮಾಡಿಬಿಟ್ಟಿದ್ದಾನೆ.॥113॥
ಮೂಲಮ್ - 114
ದುರ್ಬುದ್ದೇಸ್ತಸ್ಯ ರಾಜೇಂದ್ರ ತವ ವಿಪ್ರಿಯಕಾರಿಣಃ ।
ವಧಮಾಜ್ಞಾಪಯ ಕ್ಷಿಪ್ರಂ ಯಥಾಸೌ ವಿಲಯಂ ವ್ರಜೇತ್ ॥
ಅನುವಾದ
ರಾಜೇಂದ್ರಾ! ನಿಶ್ಚಯವಾಗಿಯೂ ನಿನಗೆ ಅಪಕಾರ ಮಾಡುತ್ತಿರುವ ಆ ದುರ್ಬುದ್ಧಿಯ ವಾನರನನ್ನು ವಧಿಸಲು ಆಜ್ಞೆಯನ್ನು ಕೊಡು. ಅವನು ಜೀವ ಸಹಿತ ಮರಳಿ ಹೋಗಬಾರದು.॥114॥
ಮೂಲಮ್ - 115
ತಚ್ಛ್ರುತ್ವಾ ರಾಕ್ಷಸೇಂದ್ರೇಣ ವಿಸೃಷ್ಟಾ ಭೃಶದುರ್ಜಯಾಃ ।
ರಾಕ್ಷಸಾಃ ಕಿಂಕರಾ ನಾಮ ರಾವಣಸ್ಯ ಮನೋನುಗಾಃ ॥
ಅನುವಾದ
ವನವಿಧ್ವಂಸ ವಾರ್ತೆಯನ್ನು ಕೇಳುತ್ತಲೇ ರಾವಣೇಶ್ವರನು ಅತ್ಯಂತ ದುರ್ಜಯರೆನಿಸಿದ್ದ, ತನ್ನ ಮನಸ್ಸಿಗೆ ಅನುಗುಣವಾಗಿ ನಡೆದು ಕೊಳ್ಳುತ್ತಿದ್ದ, ಕಿಂಕರರೆಂಬ ರಾಕ್ಷಸರನ್ನು ನನ್ನ ಬಳಿಗೆ ಯುದ್ಧಕ್ಕಾಗಿ ಕಳಿಸಿಕೊಟ್ಟನು.॥115॥
ಮೂಲಮ್ - 116
ತೇಷಾಮಶೀತಿಸಾಹಸ್ರಂ ಶೂಲಮುದ್ಗರಪಾಣಿನಾಮ್ ।
ಮಯಾ ತಸ್ಮಿನ್ ವನೋದ್ದೇಶೇ ಪರಿಘೇಣ ನಿಷೂದಿತಮ್ ॥
ಅನುವಾದ
ಶೂಲ, ಮುದ್ಗರಗಳೇ ಮುಂತಾದ ಆಯುಧಗಳನ್ನು ಹಿಡಿದಿದ್ದ ಆ ಎಂಭತ್ತು ಸಾವಿರ ಕಿಂಕರ ರಾಕ್ಷಸರು ಆ ವನಪ್ರದೇಶಕ್ಕೆ ಬಂದರು. ಅವರೆಲ್ಲರನ್ನೂ ನಾನು ಲಾಳಮಂಡಿಗೆಯಿಂದಲೇ ಸಂಹರಿಸಿದೆನು.॥116॥
ಮೂಲಮ್ - 117
ತೇಷಾಂ ತು ಹತಶೇಷಾ ಯೇ ತೇ ಗತ್ವಾ ಲಘುವಿಕ್ರಮಾಃ ।
ನಿಹತಂ ಚ ಮಹತ್ ಸೈನ್ಯಂ ರಾವಣಾಯಾಚಚಕ್ಷಿರೇ ॥
ಅನುವಾದ
ಅವರಲ್ಲಿ ಅಳಿದುಳಿದಿದ್ದ ಅಲ್ಪಬಲರಾದ ಕೆಲವು ರಾಕ್ಷಸರು ರಾವಣನ ಬಳಿಗೆ ಓಡಿಹೋಗಿ ನಮ್ಮ ಮಹಾ ಸೈನ್ಯವೆಲ್ಲವೂ ಮಣ್ಣುಗೂಡಿಹೋಯಿತು ಎಂದು ಅವನಲ್ಲಿ ಮೊರೆಯಿಟ್ಟರು.॥117॥
ಮೂಲಮ್ - 118
ತತೋ ಮೇ ಬುದ್ಧಿ ರುತ್ಪನ್ನಾ ಚೈತ್ಯಪ್ರಾಸಾದಮಾಕ್ರಮಮ್ ।
ತತ್ರಸ್ಥಾನ್ ರಾಕ್ಷಸಾನ್ ಹತ್ವಾ ಶತಂ ಸ್ತಂಭೇನ ವೈ ಪುನಃ ।
ಲಲಾಮಭೂತೋ ಲಂಕಾಯಾಃ ಸ ಚ ವಿಧ್ವಂಸಿತೋ ಮಯಾ ॥
ಅನುವಾದ
ಅನಂತರ ಅಲ್ಲೇ ಇದ್ದ ಉತ್ತಮವಾದೊಂದು ಚೈತ್ಯ ಪ್ರಾಸಾದವನ್ನು ವಿನಾಶಗೊಳಿಸಲು ನನಗೆ ಮನಸ್ಸಾಯಿತು. ಆ ಚೈತ್ಯ ಪ್ರಾಸಾದವನ್ನು ಕಾಯುತ್ತಿದ್ದ ನೂರಾರು ರಾಕ್ಷಸರನ್ನು ಅದರ ಒಂದು ವಜ್ರಕಂಬದಿಂದಲೇ ಕೊಂದುಬಿಟ್ಟೆನು. ಲಂಕಾನಗರಕ್ಕೆ ತಿಲಕಪ್ರಾಯವಾದ ಆ ಚೈತ್ಯಪ್ರಾಸಾದವನ್ನು ಕ್ಷಣಮಾತ್ರದಲ್ಲಿ ಪೂರ್ತಿಯಾಗಿ ಧ್ವಂಸಮಾಡಿದೆನು.॥118॥
ಮೂಲಮ್ - 119
ತತಃ ಪ್ರಹಸ್ತಸ್ಯ ಸುತಂ ಜಂಬುಮಾಲಿನಮಾದಿಶತ್ ।
ರಾಕ್ಷಸೈರ್ಬಹುಭಿಃ ಸಾರ್ಧಂ ಘೋರರೂಪೈರ್ಭಯಾನಕೈಃ ॥
ಅನುವಾದ
ಬಳಿಕ ರಾವಣನು ಘೋರರೂಪದಿಂದ ಭಯವನ್ನುಂಟು ಮಾಡುವ ಅನೇಕ ರಾಕ್ಷಸರೊಡನೆ ಪ್ರಹಸ್ತನ ಮಗನಾದ ಜಂಬುಮಾಲಿಯನ್ನು ನನ್ನೊಡನೆ ಯುದ್ಧಕ್ಕಾಗಿ ಕಳಿಸಿದನು.॥119॥
ಮೂಲಮ್ - 120
ತಮಹಂ ಬಲಸಂಪನ್ನಂ ರಾಕ್ಷಸಂ ರಣಕೋವಿದಮ್ ।
ಪರಿಘೇಣಾತಿಘೋರೇಣ ಸೂದಯಾಮಿ ಸಹಾನುಗಮ್ ॥
ಅನುವಾದ
ಮಹಾಬಲಶಾಲಿಯೂ, ರಣಕೋವಿದನೂ ಆದ ಆ ಜಂಬುಮಾಲಿಯನ್ನೂ ಅವನ ಅನುಯಾಯಿಗಳ ಸಹಿತ ಭಯಂಕರವಾದ ಪರಿಘದಿಂದಲೇ ಸಂಹರಿಸಿಬಿಟ್ಟೆನು.॥120॥
ಮೂಲಮ್ - 121
ತಚ್ಛ್ರುತ್ವಾ ರಾಕ್ಷಸೇಂದ್ರಸ್ತು ಮಂತ್ರಿಪುತ್ರಾನ್ ಮಹಾಬಲಾನ್ ॥
ಮೂಲಮ್ - 122
ಪದಾತಿಬಲಸಂಪನ್ನಾನ್ ಪ್ರೇಷಯಾಮಾಸ ರಾವಣಃ ।
ಪರಿಘೇಣೈವ ತಾನ್ ಸರ್ವಾನ್ನಯಾಮಿ ಯಮಸಾದನಮ್ ॥
ಅನುವಾದ
ಪ್ರಹಸ್ತನ ಮಗ ಜಂಬುಮಾಲಿಯು ಹತನಾದನೆಂಬ ವಾರ್ತೆಯನ್ನು ಕೇಳಿ ರಾವಣನು ಮಹಾಬಲಶಾಲಿಗಳಾದ ಮಂತ್ರಿಪುತ್ರರನ್ನು, ಪದಾತಿ ಸೈನ್ಯದೊಂದಿಗೆ ಬೇಗನೇ ಯುದ್ಧಮಾಡಲು ಕಳಿಸಿದನು. ಅವರೆಲ್ಲರನ್ನೂ ಕ್ಷಣಮಾತ್ರದಲ್ಲಿ ನಾನು ಪರಿಘದಿಂದ ಪ್ರಹರಿಸಿ ಯಮನಾಲಯಕ್ಕೆ ಅಟ್ಟಿದೆನು.॥121-122॥
ಮೂಲಮ್ - 123
ಮಂತ್ರಿಪುತ್ರಾನ್ ಹತಾನ್ ಶ್ರುತ್ವಾ ಸಮರೇ ಲಘುವಿಕ್ರಮಾನ್ ।
ಪಂಚ ಸೇನಾಗ್ರಗಾನ್ ಶೂರಾನ್ ಪ್ರೇಷಯಾಮಾಸ ರಾವಣಃ ॥
ಅನುವಾದ
ಮಹಾಪರಾಕ್ರಮಿಗಳಾದ ಮಂತ್ರಿಪುತ್ರರು ರಣರಂಗದಲ್ಲಿ ಮಡಿದ ವಾರ್ತೆಯನ್ನು ಕೇಳಿದ ರಾವಣನು ಮಹಾಶೂರರಾದ ಐವರು ಸೇನಾಪತಿಗಳನ್ನು ಚತುರಂಗ ಸೈನ್ಯದೊಂದಿಗೆ ಕಳಿಸಿದನು.॥123॥
ಮೂಲಮ್ - 124
ತಾನಹಂ ಸಹಸೈನ್ಯಾನ್ ವೈ ಸರ್ವಾನೇವಾಭ್ಯಸೂದಯಮ್ ।
ತತಃ ಪುನರ್ದಶಗ್ರೀವಃ ಪುತ್ರಮಕ್ಷಂ ಮಹಾಬಲಮ್ ।
ಬಹುಭೀ ರಾಕ್ಷಸೈಃ ಸಾರ್ಧಂ ಪ್ರೇಷಯಾಮಾಸ ರಾವಣಃ ॥
ಅನುವಾದ
ನಾನು ಆ ಸೇನಾನಾಯಕರನ್ನೂ, ಅವರೊಡನೆ ಬಂದಿದ್ದ ಸೈನ್ಯವನ್ನೂ ಕ್ಷಣಾರ್ಧದಲ್ಲಿ ಮಣ್ಣುಗೂಡಿಸಿದೆನು. ಬಳಿಕ ರಾವಣನು-ಮಹಾಪರಾಕ್ರಮಶಾಲಿಯಾದ ತನ್ನ ಮಗನಾದ ಅಕ್ಷಕುಮಾರನನ್ನು ಅನೇಕ ರಾಕ್ಷಸರೊಡನೆ ಯುದ್ಧಕ್ಕಾಗಿ ಕಳಿಸಿದನು.॥124॥
ಮೂಲಮ್ - 125
ತಂ ತು ಮಂದೋದರೀಪುತ್ರಂ ಕುಮಾರಂ ರಣಪಂಡಿತಮ್ ॥
ಮೂಲಮ್ - 126
ಸಹಸಾ ಖಂ ಸಮುತ್ಕ್ರಾಂತಂ ಪಾದಯೋಶ್ಚ ಗೃಹೀತವಾನ್ ।
ತಮಾಸೀನಂ ಶತಗುಣಂ ಭ್ರಾಮಯಿತ್ವಾ ವ್ಯಪೇಷಯಮ್ ॥
ಅನುವಾದ
ಮಂಡೋದರಿಯ ಸುತನೂ, ರಣಕೋವಿದನೂ ಆದ ಆ ಅಕ್ಷಕುಮಾರನು ಖಡ್ಗವನ್ನು ಧರಿಸಿ ಉತ್ಸಾಹದಿಂದ ಆಕಾಶದ ಕಡೆಗೆ ನೆಗೆದನು. ಕೂಡಲೇ ನಾನು ಅವನ ಎರಡೂ ಕಾಲುಗಳನ್ನು ಹಿಡಿದುಕೊಂಡು ನೂರಾರು ಬಾರಿ ರಭಸದಿಂದ ತಿರುಗಿಸುತ್ತಾ ಅವನನ್ನು ರಾವಣನ ಬಳಿಗೆ ಬೀಸಿ ಎಸೆದೆನು. ಅವನು ನೆಲಕ್ಕೊರಗಿ ಚೂರು-ಚೂರು ಆದನು.॥125-126॥
ಮೂಲಮ್ - 127
ತಮಕ್ಷಮಾಗತಂ ಭಗ್ನಂ ನಿಶಮ್ಯ ಸ ದಶಾನನಃ ।
ತತ ಇಂದ್ರಜಿತಂ ನಾಮ ದ್ವಿತೀಯಂ ರಾವಣಃ ಸುತಮ್ ।
ವ್ಯಾದಿದೇಶ ಸುಸಂಕ್ರುದ್ಧೋ ಬಲಿನಂ ಯುದ್ಧದುರ್ಮದಮ್ ॥
ಅನುವಾದ
ನನ್ನ ಕೈಯಲ್ಲಿ ಅಕ್ಷಕುಮಾರನೂ ಕೂಡ ನಿಧನ ಹೊಂದಿದ ವಾರ್ತೆಯನ್ನು ಕೇಳಿ ಪರಮಕ್ರುದ್ಧನಾಗಿ ದಶಕಂಠನಾದ ರಾವಣನು ಮಹಾಬಲಿಷ್ಠನೂ, ಯುದ್ಧೋನ್ಮತ್ತನೂ ಆದ ‘ಇಂದ್ರಜಿತು’ ಎಂಬ ತನ್ನ ಇನ್ನೊಬ್ಬ ಮಗನನ್ನು ನನ್ನೊಡನೆ ಯುದ್ಧಕ್ಕಾಗಿ ಕಳಿಸಿದನು.॥127॥
ಮೂಲಮ್ - 128
ತಚ್ಛಾಪ್ಯಹಂ ಬಲಂ ಸರ್ವಂ ತಂ ಚ ರಾಕ್ಷಸಪುಂಗವಮ್ ।
ನಷ್ಟೌಜಸಂ ರಣೇ ಕೃತ್ವಾ ಪರಂ ಹರ್ಷಮುಪಾಗಮಮ್ ॥
ಅನುವಾದ
ಅವನೊಡನೆ ಬಂದಿದ್ದ ಮಹಾಸೈನ್ಯವನ್ನೂ, ಇಂದ್ರಜಿತುವನ್ನೂ ಯುದ್ಧದಲ್ಲಿ ನಿಸ್ತೇಜಗೊಳಿಸಿ ನಾನು ಅತ್ಯಂತ ಹರ್ಷಿತನಾದೆನು. ॥128॥
ಮೂಲಮ್ - 129
ಮಹತಾ ಹಿ ಮಹಾಬಾಹುಃ ಪ್ರತ್ಯಯೇನ ಮಹಾಬಲಃ ॥
ಮೂಲಮ್ - 130
ಪ್ರೇಷಿತೋ ರಾವಣೇನೈವ ಸಹ ವೀರೈರ್ಮದೋತ್ಕಟೈಃ ।
ಸೋವಿಷಹ್ಯಂ ಹಿ ಮಾಂ ಬುದ್ಧ್ವಾಸ್ವಸೈನ್ಯಂ ಚಾವಮರ್ದಿತಮ್ ॥
ಮೂಲಮ್ - 131
ಬ್ರಾಹ್ಮೇಣಾಸೇಣ ಸ ತು ಮಾಂ ಪ್ರಾಬಧ್ನಾಚ್ಚಾತಿವೇಗಿತಃ ।
ರಜ್ಜುಭಿಶ್ಚಾಭಿಬಧ್ನಂತಿ ತತೋ ಮಾಂ ತತ್ರ ರಾಕ್ಷಸಾಃ ॥
ಅನುವಾದ
ಜಯಿಸಿಯೇ ತೀರುವೆನೆಂಬ ಪರಮ ವಿಶ್ವಾಸದಿಂದ ಮದೋತ್ಕಟರಾದ ರಾಕ್ಷಸ ಸೈನ್ಯದೊಂದಿಗೆ ರಾವಣನಿಂದ ಕಳುಹಲ್ಪಟ್ಟಿದ್ದ, ಮಹಾಬಾಹುವಾದ ಇಂದ್ರಜಿತುವು ತನ್ನ ಸೈನ್ಯವು ಸಂಪೂರ್ಣವಾಗಿ ಭಗ್ನವಾದುದನ್ನು ಕಂಡು, ನಾನು ಅಜೇಯನು ಎಂದು ಅರಿತು, ಅತ್ಯಂತ ಶೀಘ್ರವಾಗಿ ಬ್ರಹ್ಮಾಸ್ತ್ರದಿಂದ ನನ್ನನ್ನು ಬಂಧಿಸಿದನು. ಅವನ ಅನುಚರರಾದ ರಾಕ್ಷಸರು ನನ್ನನ್ನು ಹಗ್ಗದಿಂದ ಕಟ್ಟಿದರು.॥129-131॥
ಮೂಲಮ್ - 132
ರಾವಣಸ್ಯ ಸಮೀಪಂ ಚ ಗೃಹೀತ್ವಾ ಮಾಮುಪಾನಯನ್ ।
ದೃಷ್ಟ್ವಾ ಸಂಭಾಷಿತಶ್ಚಾಹಂ ರಾವಣೇನ ದುರಾತ್ಮನಾ ॥
ಅನುವಾದ
ಬಳಿಕ ಅವರು ನನ್ನನ್ನು ರಾವಣನ ಬಳಿಗೆ ಕರಕೊಂಡು ಹೋದರು. ದುಷ್ಟನಾದ ರಾವಣನು ನನ್ನನ್ನು ನೋಡಿ, ನನ್ನೊಡನೆ ಸಂಭಾಷಿಸಿದನು.॥132॥
ಮೂಲಮ್ - 133
ಪೃಷ್ಟಶ್ಚ ಲಂಕಾಗಮನಂ ರಾಕ್ಷಸಾನಾಂ ಚ ತಂ ವಧಮ್ ।
ತತ್ಸರ್ವಂ ಚ ಮಯಾ ತತ್ರ ಸೀತಾರ್ಥಮಿತಿ ಜಲ್ಪಿತಮ್ ॥
ಮೂಲಮ್ - 134
ತಸ್ಯಾಸ್ತು ದರ್ಶನಾಕಾಂಕ್ಷೀ ಪ್ರಾಪ್ತಸ್ತ್ವದ್ಭವನಂ ವಿಭೋ ।
ಮಾರುತಸ್ಯೌರಸಃ ಪುತ್ರೋ ವಾನರೋ ಹನುಮಾನಹಮ್ ॥
ಮೂಲಮ್ - 135
ರಾಮದೂತಂ ಚ ಮಾಂ ವಿದ್ಧಿ ಸುಗ್ರೀವಸಚಿವಂ ಕಪಿಮ್ ।
ಸೋಹಂ ದೂತ್ಯೇನ ರಾಮಸ್ಯ ತ್ವತ್ಸಕಾಶಮಿಹಾಗತಃ ॥
ಅನುವಾದ
ರಾವಣನು ನಾನು ಲಂಕೆಗೆ ಬಂದುದರ ಹಾಗೂ ರಾಕ್ಷಸರನ್ನು ಕೊಂದ ಕಾರಣವನ್ನು ಕೇಳಿದನು. ಆಗ ನಾನು ಸೀತಾದೇವಿಯ ನಿಮಿತ್ತದಿಂದ ಬಂದಿರುವೆನು. ಎಲೈ ರಾಜಾ! ಅವಳನ್ನು ದರ್ಶಿಸಲು ಬಂದು ಕ್ರಮವಾಗಿ ನಿನ್ನ ಅರಮನೆಗೂ ಬಂದಿರುವೆನು. ನಾನು ವಾಯುಪುತ್ರನು, ವಾನರನು, ಹನುಮಂತನೆಂಬುದು ನನ್ನ ಹೆಸರು. ನಾನು ಶ್ರೀರಾಮನ ಬಂಟನೂ, ಸುಗ್ರೀವನ ಸಚಿವನೂ ಆಗಿರುವೆ. ರಾಮನ ರಾಯಭಾರಿಯಾಗಿ ನಿನ್ನ ಬಳಿಗೆ ಬಂದಿರುವೆನು.॥133-135॥
ಮೂಲಮ್ - 136
ಶ್ರುಣುಚಾಪಿ ಸಮಾದೇಶಂ ಯದಹಂ ಪ್ರಬ್ರವೀಮಿ ತೇ ।
ರಾಕ್ಷಸೇಶ ಹರೀಶಸ್ತ್ವಾಂ ವಾಕ್ಯಮಾಹ ಸಮಾಹಿತಮ್ ॥
ಅನುವಾದ
ಎಲೈ ರಾಕ್ಷಸರಾಜಾ! ಸುಗ್ರೀವನು ನಿನ್ನ ಹಿತವನ್ನು ಬಯಸಿ, ಒಂದು ಸಂದೇಶವನ್ನು ಕಳಿಸಿರುವನು. ಅದನ್ನು ನಿನಗೆ ಅರಿಕೆ ಮಾಡಿಕೊಳ್ಳುವೆನು. ಶ್ರದ್ಧೆಯಿಂದ ಕೇಳು.॥136॥
ಮೂಲಮ್ - 137
ಸುಗ್ರೀವಶ್ಚ ಮಹಾತೇಜಾಃ ಸ ತ್ವಾಂ ಕುಶಲಮಬ್ರವೀತ್ ।
ಧರ್ಮಾರ್ಥಕಾಮಸಹಿತಂ ಹಿತಂ ಪಥ್ಯಮುವಾಚ ಚ ॥
ಅನುವಾದ
ಮಹಾ ತೇಜಃಶಾಲಿಯಾದ ಸುಗ್ರೀವನು ನಿನ್ನ ಕ್ಷೇಮವನ್ನು ಕೇಳಿರುವನು. ನಿನಗೆ ಹೇಳಿ ಕಳಿಸಿದ ಹಿತಕರವಾದ, ಧರ್ಮಾರ್ಥಯುಕ್ತವಾದ ಸಂದೇಶವು ಇಂತಿದೆ, ಕೇಳು.॥137॥
ಮೂಲಮ್ - 138
ವಸತೋ ಋಶ್ಯಮೂಕೆ ಮೇ ಪರ್ವತೇ ವಿಪುಲದ್ರುಮೇ ।
ರಾಘವೋ ರಣವಿಕ್ರಾಂತೋ ಮಿತ್ರತ್ವಂ ಸಮುಪಾಗತಃ ॥
ಅನುವಾದ
‘ಅಸಂಖ್ಯಾತವಾದ ವೃಕ್ಷಗಳಿಂದ ನಿಬಿಡವಾಗಿರುವ ಋಷ್ಯಮೂಕ ಪರ್ವತದಲ್ಲಿ ವಾಸಿಸುತ್ತಿರುವ ನನಗೆ ರಣವಿಕ್ರಾಂತನಾದ ರಾಘವನೊಂದಿಗೆ ಅಗ್ನಿಸಾಕ್ಷಿಯಾಗಿ ಮೈತ್ರಿಯು ಏರ್ಪಟ್ಟಿತು.॥138॥
ಮೂಲಮ್ - 139
ತೇನ ಮೇ ಕಥಿತಂ ರಾಜ್ಞಾ ಭಾರ್ಯಾ ಮೇ ರಕ್ಷಸಾ ಹೃತಾ ।
ತತ್ರ ಸಾಹಾಯ್ಯಮಸ್ಮಾಕಂ ಕಾರ್ಯಂ ಸರ್ವಾತ್ಮನಾ ತ್ವಯಾ ॥
ಅನುವಾದ
ಆ ರಾಮಚಂದ್ರಪ್ರಭುವು - ‘ನನ್ನ ಭಾರ್ಯೆಯನ್ನು ಓರ್ವ ರಾಕ್ಷಸನು ಅಪಹರಿಸಿರುವನು. ಅವಳನ್ನು ಹುಡುಕಲು ನೀವು ತ್ರಿಕರಣಪೂರ್ವಕವಾಗಿ ಸಹಾಯಮಾಡಬೇಕು’, ಎಂದು ನನ್ನ ಬಳಿ ಹೇಳಿದನು.॥139॥
ಮೂಲಮ್ - 140
ಮಯಾ ಚ ಕಥಿತಂ ತಸ್ಮೈ ವಾಲಿನಶ್ಚ ವಧಂ ಪ್ರತಿ ।
ತತ್ರ ಸಾಹಾಯ್ಯಹೇತೋರ್ಮೇ ಸಮಯಂ ಕರ್ತುಮರ್ಹಸಿ ॥
ಅನುವಾದ
ಆಗ ನಾನು ವಾಲಿಯನ್ನು ವಧಿಸಬೇಕಾಗಿರುವ ವಿಷಯವನ್ನು ಹೇಳಿದೆನು. ಹೀಗೆ ಪರಸ್ಪರ ಸಹಾಯಮಾಡುವ ಸಲುವಾಗಿಯೇ ಇಬ್ಬರೂ ಪ್ರತಿಜ್ಞಾ ಬದ್ಧರಾದೆವು.’’॥140॥
ಮೂಲಮ್ - 141
ವಾಲಿನಾ ಹೃತರಾಜ್ಯೇನ ಸುಗ್ರೀವೇಣ ಸಹ ಪ್ರಭುಃ ।
ಚಕ್ರೇಗ್ನಿಸಾಕ್ಷಿಕಂ ಸಖ್ಯಂ ರಾಘವಃ ಸಹಲಕ್ಷ್ಮಣಃ ॥
ಮೂಲಮ್ - 142
ತೇನ ವಾಲಿನಮುತ್ಪಾಟ್ಯ ಶರೇಣೈಕೇನ ಸಂಯುಗೇ ।
ವಾನರಾಣಾಂ ಮಹಾರಾಜಃ ಕೃತಃ ಸ ಪ್ಲವತಾಂ ಪ್ರಭುಃ ॥
ಅನುವಾದ
ರಾವಣೇಶ್ವರಾ! ವಾಲಿಯಿಂದ ರಾಜ್ಯವನ್ನು ಕಳಕೊಂಡಿದ್ದ ಸುಗ್ರೀವನು - ಲಕ್ಷ್ಮಣ ಸಮೇತನಾದ ಶ್ರೀರಾಮನೊಡನೆ ಅಗ್ನಿಸಾಕ್ಷಿಯಾಗಿ ಸಖ್ಯಮಾಡಿಕೊಂಡನು. ಶ್ರೀರಾಮನು ಯುದ್ಧದಲ್ಲಿ ಒಂದೇ ಒಂದು ಬಾಣದಿಂದ ವಾಲಿಯನ್ನು ಸಂಹರಿಸಿ ಸುಗ್ರೀವನನ್ನು ವಾನರರಿಗೆ ರಾಜನನ್ನಾಗಿಸಿದನು.॥141-142॥
ಮೂಲಮ್ - 143
ತಸ್ಯ ಸಾಹಾಯ್ಯಮಸ್ಮಾಭಿಃ ಕಾರ್ಯಂ ಸರ್ವಾತ್ಮನಾ ತ್ವಿಹ ।
ತೇನ ಪ್ರಸ್ಥಾಪಿತಸ್ತುಭ್ಯಂ ಸವಿಾಪಮಿಹ ಧರ್ಮತಹ ॥
ಅನುವಾದ
ಈಗ ಎಲ್ಲ ವಿಧದಿಂದ ಆ ಪ್ರಭುವಿಗೆ ಸಹಾಯ ಮಾಡುವುದು ನಮ್ಮ ಧರ್ಮ. ಅದಕ್ಕಾಗಿ ಸುಗ್ರೀವನು ತನ್ನ ಮಿತ್ರ ಧರ್ಮವನ್ನು ಅನುಸರಿಸಿ, ನನ್ನನ್ನು ನಿನ್ನಲ್ಲಿಗೆ ಕಳಿಸಿರುವನು.॥143॥
ಮೂಲಮ್ - 144
ಕ್ಷಿಪ್ರಮಾನೀಯತಾಂ ಸೀತಾ ದೀಯತಾಂ ರಾಘವಾಯ ಚ ।
ಯಾವನ್ನ ಹರಯೋ ವೀರಾ ವಿಧಮಂತಿ ಬಲಂ ತವ ॥
ಅನುವಾದ
ರಾಕ್ಷಸೇಶ್ವರಾ! ಕಪಿಶ್ರೇಷ್ಠರು ನಿನ್ನ ಸೈನ್ಯವನ್ನು ಧ್ವಂಸಮಾಡುವ ಮೊದಲೇ ನೀನು ಸೀತೆಯನ್ನು ಕರೆತಂದು ಶ್ರೀರಾಮನಿಗೆ ಒಪ್ಪಿಸುವುದು ಯೋಗ್ಯವಾಗಿದೆ.॥144॥
ಮೂಲಮ್ - 145
ವಾನರಾಣಾಂ ಪ್ರಭಾವೋ ಹಿ ನ ಕೇನ ವಿದಿತಃ ಪುರಾ ।
ದೇವತಾನಾಂ ಸಕಾಶಂ ಚ ಯೇ ಗಚ್ಛಂತಿ ನಿಮಂತ್ರಿತಾಃ ॥
ಅನುವಾದ
ನಾನೀಗ ತೋರಿರುವ ಪರಾಕ್ರಮವು ಎಲ್ಲ ವಾನರರಲ್ಲಿಯೂ ಇದೆ. ವಾನರರಲ್ಲಿರುವ ಬಲಪರಾಕ್ರಮವನ್ನು ಯಾರು ಅರಿಯರು? ಅತುಲಪರಾಕ್ರಮಿಗಳಾದ ವಾನರರು ಆಹ್ವಾನಿತರಾದರೆ ದೇವತೆಗಳಿಗೂ ಸಹಾಯಕರಾಗಿ ಹೋಗಬಲ್ಲರು.॥145॥
ಮೂಲಮ್ - 146
ಇತಿ ವಾನರರಾಜಸ್ತ್ವಾಂ ಆಹೇತ್ಯಭಿಹಿತೋ ಮಯಾ ।
ಮಾಮೈಕ್ಷತ ತತಃ ಕ್ರುದ್ಧಶ್ಚಕ್ಷುಷಾ ಪ್ರದಹನ್ನಿವ ॥
ಅನುವಾದ
ವಾನರರಾಜನಾದ ಸುಗ್ರೀವನು ನಿನಗೆ ಇದನ್ನೇ ಹೇಳಿಕಳುಹಿಸಿರುವನು ಎಂದು ನಾನು ರಾವಣನಲ್ಲಿ ಹೇಳಿದಾಗ ಅವನು ಅತ್ಯಂತ ಕ್ರುದ್ಧನಾಗಿ ತನ್ನ ಕಣ್ಣಿನಿಂದಲೇ ನನ್ನನ್ನು ಸುಟ್ಟುಬಿಡುವನೋ ಎಂಬಂತೆ ದುರುಗುಟ್ಟಿ ನೋಡಿದನು.॥146॥
ಮೂಲಮ್ - 147
ತೇನ ವಧ್ಯೋಹಮಾಜ್ಞಪ್ತೋ ರಕ್ಷಸಾ ರೌದ್ರಕರ್ಮಣಾ ।
ಮತ್ಪ್ರಭಾವಮವಿಜ್ಞಾಯ ರಾವಣೇನ ದುರಾತ್ಮನಾ ॥
ಅನುವಾದ
ದುರಾತ್ಮನೂ, ಕ್ರೂರಕರ್ಮಿಯೂ ಆದ ರಾವಣನು ನನ್ನ ಶಕ್ತಿ-ಸಾಮರ್ಥ್ಯಗಳನ್ನು ಅರಿಯದೆ ನನ್ನನ್ನು ವಧಿಸಲು ಆಜ್ಞೆಮಾಡಿದನು.॥147॥
ಮೂಲಮ್ - 148
ತತೋ ವಿಭೀಷಣೋ ನಾಮ ತಸ್ಯ ಭ್ರಾತಾ ಮಹಾಮತಿಃ ।
ತೇನ ರಾಕ್ಷಸರಾಜೋಸೌ ಯಾಚಿತೋ ಮಮ ಕಾರಣಾತ್ ॥
ಅನುವಾದ
ಬಳಿಕ ರಾವಣನ ತಮ್ಮನೂ, ಬುದ್ಧಿವಂತನೂ ಆದ ವಿಭೀಷಣನು ನನ್ನ ರಕ್ಷಣೆಯ ಕುರಿತು ರಾಕ್ಷಸರಾಜನನ್ನು ಹೀಗೆ ಪ್ರಾರ್ಥಿಸಿಕೊಂಡನು.॥148॥
ಮೂಲಮ್ - 149
ನೈವಂ ರಾಕ್ಷಸಶಾರ್ದೂಲ ತ್ಯಜ್ಯತಾಮೇಷ ನಿಶ್ಚಯಃ ।
ರಾಜಶಾಸವ್ಯಪೇತೋ ಹಿ ಮಾರ್ಗಃ ಸಂಸೇವ್ಯತೇ ತ್ವಯಾ ॥
ಅನುವಾದ
ರಾಕ್ಷಸಶ್ರೇಷ್ಠನಾದ ರಾವಣೇಶ್ವರಾ! ಹೀಗೆಂದೂ ಮಾಡಬಾರದು. ಈ ದೂತನನ್ನು ವಧಿಸಬೇಕೆಂಬ ನಿನ್ನ ನಿಶ್ಚಯವನ್ನು ಬಿಟ್ಟುಬಿಡು. ನಿನ್ನ ಆಜ್ಞೆಯು ರಾಜಧರ್ಮಕ್ಕೆ ವಿರುದ್ಧವಾದುದು.॥149॥
ಮೂಲಮ್ - 150
ದೂತವಧ್ಯಾ ನ ದೃಷ್ಟಾ ಹಿ ರಾಜಶಾಸೇಷು ರಾಕ್ಷಸ ।
ದೂತೇನ ವೇದಿತವ್ಯಂ ಚ ಯಥಾರ್ಥಂ ಹಿತವಾದಿನಾ ॥
ಅನುವಾದ
ಅಣ್ಣಾ! ರಾಜನೀತಿಶಾಸಗಳಲ್ಲಿ ದೂತನನ್ನು ವಧಿಸುವ ವಿಧಿಯೂ ಎಲ್ಲಿಯೂ ಕಂಡು ಬರುವುದಿಲ್ಲ. ಒಡೆಯನು ಹೇಳಿ ಕಳಿಸಿದಂತೆ ಹೇಳಲು ಬಂದಿರುವ ದೂತನಿಂದ ಶತ್ರುಪಕ್ಷದವರ ಅಭಿಪ್ರಾಯವನ್ನು ತಿಳಿದುಕೊಳ್ಳಬೇಕು.॥150॥
ಮೂಲಮ್ - 151
ಸುಮಹತ್ಯಪರಾಧೇ ಪಿ ದೂತಸ್ಯಾತುಲವಿಕ್ರಮ ।
ವಿರೂಪಕರಣಂ ದೃಷ್ಟಂ ನ ವಧೋಸ್ತೀಹ ಶಾಸತಃ ॥
ಅನುವಾದ
ಸಾಟಿಯಿಲ್ಲದ ಪರಾಕ್ರಮಿಯೇ! ದೂತನಾದವನು ಎಂತಹ ಅಪರಾಧ ಮಾಡಿದರೂ ಅವನನ್ನು ಅಂಗಭಂಗಗೈದು ವಿಕೃತರೂಪನನ್ನಾಗಿಸಬಹುದು ಎಂದು ಶಾಸ್ತ್ರಗಳಲ್ಲಿದೆ. ಆದರೆ ಕೊಲ್ಲಬೇಕೆಂಬುದು ಎಲ್ಲಿಯೂ ಇಲ್ಲ.॥151॥
ಮೂಲಮ್ - 152
ವಿಭೀಷಣೇನೈವಮುಕ್ತೋ ರಾವಣಃ ಸಂದಿದೇಶ ತಾನ್ ।
ರಾಕ್ಷಸಾನೇತದೇವಾಸ್ಯ ಲಾಂಗೂಲಂ ದಹ್ಯ ತಾಮಿತಿ ॥
ಅನುವಾದ
ಕಪಿಶ್ರೇಷ್ಠರೇ! ವಿಭಿಷಣನು ಹೀಗೆ ಹೇಳಲು ರಾವಣನು - ‘‘ಅದು ಸರಿ. ತುಂಬಾ ಒಳ್ಳೆಯದು. ಹಾಗೇ ಮಾಡೋಣ - ಇವನ ಬಾಲಕ್ಕೆ ಬೆಂಕಿಕೊಡಿರಿ’’ ಎಂದು ರಾಕ್ಷಸರಿಗೆ ಆಜ್ಞಾಪಿಸಿದನು.॥152॥
ಮೂಲಮ್ - 153
ತತಸ್ತಸ್ಯ ವಚಃ ಶ್ರುತ್ವಾ ಮಮ ಪುಚ್ಛಂ ಸಮಂತತಃ ।
ವೇಷ್ಟಿತಂ ಶಣವಲ್ಕೈಶ್ಚ ಜೀರ್ಣೈಃ ಕಾರ್ಪಾಸಕೈಃ ಪಟೈಃ ॥
ಅನುವಾದ
ರಾವಣನ ಅಪ್ಪಣೆಯಂತೆ ರಾಕ್ಷಸರು ತತ್ಕ್ಷಣ ಹಳೆಯದಾದ ಗೋಣೀತಾಟು, ಹತ್ತಿಬಟ್ಟೆಗಳು, ರೇಶ್ಮೆಬಟ್ಟೆಗಳು ನನ್ನ ಬಾಲಕ್ಕೆ ಸುತ್ತಿದರು.॥153॥
ಮೂಲಮ್ - 154
ರಾಕ್ಷಸಾಃ ಸಿದ್ಧಸಂನಾಹಾಸ್ತತಸ್ತೇ ಚಂಡವಿಕ್ರಮಾಃ ।
ತದಾದಹಂತ ಮೇ ಪುಚ್ಛಂ ನಿಘ್ನಂತಃ ಕಾಷ್ಠಮುಷ್ಟಿಭಿಃ ॥
ಅನುವಾದ
ಉಗ್ರಪರಾಕ್ರಮಿಗಳಾಗಿದ್ದ ಆ ರಾಕ್ಷಸರು ನನ್ನನ್ನು ವಿರೂಪಗೊಳಿಸಲು ಹೀಗೆ ಸನ್ನಾಹ ಮಾಡಿ ನನ್ನ ಬಾಲಕ್ಕೆ ಬೆಂಕಿಯನ್ನು ಹೊತ್ತಿಸಿ, ದೊಣ್ಣೆಗಳಿಂದಲೂ, ಮುಷ್ಟಿಗಳಿಂದಲೂ ತಿವಿಯಲು ಪ್ರಾರಂಭಿಸಿದರು.॥154॥
ಮೂಲಮ್ - 155
ಬದ್ಧಸ್ಯ ಬಹುಭಿಃ ಪಾಶೈರ್ಯಂತ್ರಿತಸ್ಯ ಚ ರಾಕ್ಷಸೈಃ ।
ನ ಮೇ ಪೀಡಾ ಭವೇತ್ ಕಾಚಿದ್ದಿದೃಕ್ಷೋರ್ನಗರೀಂ ದಿವಾ ॥
ಅನುವಾದ
ರಾಕ್ಷಸರು ನನ್ನನ್ನು ಹಗ್ಗಗಳಿಂದ ಬಲವಾಗಿ ಬಂಧಿಸಿದ್ದರೂ, ಹಗಲಿನಲ್ಲಿ ಲಂಕೆಯನ್ನು ನೋಡಲು ಬಯಸಿದ ನನಗೆ ಯಾವ ವಿಧವಾದ ಪೀಡೆಯೂ ಆಗಲಿಲ್ಲ.॥155॥
ಮೂಲಮ್ - 156
ತತಸ್ತೇ ರಾಕ್ಷಸಾಃ ಶೂರಾ ಬದ್ಧಂ ಮಾಮಗ್ನಿ ಸಂವೃತಮ್ ।
ಅಘೋಷಯನ್ ರಾಜಮಾರ್ಗೇ ನಗರದ್ವಾರಮಾಗತಾಃ ॥
ಅನುವಾದ
ಬಳಿಕ ಶೂರನಾದ ಆ ರಾಕ್ಷಸರು ಬಂಧಿತನಾಗಿ ಅಗ್ನಿಯಿಂದ ಸುತ್ತುವರಿಯಲ್ಪಟ್ಟಿದ್ದ ನನ್ನನ್ನು ನಗರದ ಮಹಾದ್ವಾರಕ್ಕೆ ಕರೆತಂದು, ರಾಜಮಾರ್ಗದಲ್ಲಿ ನಿಲ್ಲಿಸಿ, ‘‘ನೋಡಿರಿ, ಈ ಕಪಿಯನ್ನು, ಬಾಲದಲ್ಲಿ ಬೆಂಕಿಯಿರುವ ಇವನನ್ನು ನೋಡಿರಿ’’ ಎಂದು ಸಾರಿ ಹೇಳುತ್ತಿದ್ದರು.॥156॥
ಮೂಲಮ್ - 157
ತತೋಹಂ ಸುಮಹದ್ರೂಪಂ ಸಂಕ್ಷಿಪ್ಯ ಪುನರಾತ್ಮನಃ ।
ವಿಮೋಚಯಿತ್ವಾ ತಂ ಬಂಧಂ ಪ್ರಕೃತಿಸ್ಥಃ ಸ್ಥಿತಃ ಪುನಃ ॥
ಅನುವಾದ
ಅನಂತರ ನಾನು ನನ್ನ ದೊಡ್ಡರೂಪವನ್ನು ಸಣ್ಣದಾಗಿಸಿಕೊಂಡಾಗ ಕಟ್ಟಿದ್ದ ಕಟ್ಟುಗಳೆಲ್ಲ ಕಳಚಿಬಿದ್ದವು. ಬಳಿಕ ನಾನು ಹಿಂದಿನ ಬೃಹದ್ರೂಪವನ್ನೇ ಧರಿಸಿದೆನು.॥157॥
ಮೂಲಮ್ - 158
ಆಯಸಂ ಪರಿಘಂ ಗೃಹ್ಯ ತಾನಿ ರಕ್ಷಾಂಸ್ಯಸೂದಯಮ್ ।
ತತಸ್ತನ್ನಗರದ್ವಾರಂ ವೇಗೇನಾಪ್ಲುತವಾನಹಮ್ ॥
ಅನುವಾದ
ಮರುಕ್ಷಣದಲ್ಲಿ ಅಲ್ಲೇ ಇದ್ದ ಕಬ್ಬಿಣದ ಅಗಳಿಯನ್ನೆತ್ತಿಕೊಂಡು ನನ್ನ ಸುತ್ತಲೂ ಇದ್ದ ಎಲ್ಲ ರಾಕ್ಷಸರನ್ನು ಸಂಹರಿಸಿ, ಮಹಾದ್ವಾರದ ಮೇಲ್ಭಾಗಕ್ಕೆ ಎಗರಿದೆನು.॥158॥
ಮೂಲಮ್ - 159
ಪುಚ್ಛೇನ ಚ ಪ್ರದೀಪ್ತೇನ ತಾಂ ಪುರೀಂ ಸಾಟ್ಟಗೋಪುರಾಮ್ ।
ದಹಾಮ್ಯಹಮಸಂಭ್ರಾಂತೋ ಯುಗಾಂತಾಗ್ನಿರಿವ ಪ್ರಜಾಃ ॥
ಅನುವಾದ
ನನ್ನ ಬಾಲದ ಬೆಂಕಿಯಿಂದ ಬುರುಜುಗಳಿಂದಲೂ, ಗೋಪುರಗಳಿಂದಲೂ ಕೂಡಿದ ಆ ಲಂಕಾಪಟ್ಟಣವನ್ನು ಸ್ವಲ್ಪವೂ ಸಂದೇಹ-ಭ್ರಾಂತಿಗಳಿಲ್ಲದೆ ಪ್ರಳಯಕಾಲದಲ್ಲಿ ಅಗ್ನಿಯು ಪ್ರಜೆಗಳನ್ನು ಸುಡುವಂತೆ ಕ್ಷಣಾರ್ಧದಲ್ಲಿ ಸುಟ್ಟು ಬೂದಿ ಮಾಡಿದೆನು. ॥159॥
ಮೂಲಮ್ - 160
ವಿನಷ್ಟಾ ಜಾನಕೀ ವ್ಯಕ್ತಂ ನ ಹ್ಯದಗ್ಧಃ ಪ್ರದೃಶ್ಯತೇ ।
ಲಂಕಾಯಾಂ ಕಶ್ಚಿದುದ್ದೇಶಃ ಸರ್ವಾ ಭಸ್ಮೀಕೃತಾ ಪುರೀ ॥
ಅನುವಾದ
ಆಗ ಲಂಕೆಯಲ್ಲಿ ಸುಟ್ಟುಹೋಗದಿರುವ ಯಾವ ಜಾಗವೂ ಉಳಿಯಲಿಲ್ಲ. ಪಟ್ಟಣವೆಲ್ಲವೂ ಸಂಪೂರ್ಣವಾಗಿ ಬೂದಿಯಾಯಿತು. ಅದರಿಂದಾಗಿ ಸೀತೆಯೂ ವಿನಾಶ ಹೊಂದಿರಬಹುದೆಂದು ನಾನು ಭಾವಿಸಿದೆನು.॥160॥
ಮೂಲಮ್ - 161
ದಹತಾ ಚ ಮಯಾ ಲಂಕಾಂ ದಗ್ಧಾ ಸೀತಾ ನ ಸಂಶಯಃ ।
ರಾಮಸ್ಯ ಹಿ ಮಹತ್ ಕಾರ್ಯಂ ಮಯೇದಂ ವಿತಥೀಕೃತಮ್ ॥
ಅನುವಾದ
ನಾನು ಲಂಕೆಯನ್ನು ಸುಡುವಾಗ ಸೀತೆಯು ಸುಟ್ಟುಹೋಗಿರುವಳು, ಇದರಲ್ಲಿ ಸಂದೇಹವೇ ಇಲ್ಲ. ಶ್ರೀರಾಮನ ಮಹಾಕಾರ್ಯವನ್ನು ನಾನೇ ಹಾಳುಮಾಡಿದಂತಾಯಿತಲ್ಲ.॥161॥
ಮೂಲಮ್ - 162
ಇತಿ ಶೋಕಸಮಾವಿಷ್ಟಶ್ಚಿಂತಾಮಹಮುಪಾಗತಃ ।
ಅಥಾಹಂ ವಾಚಮಶ್ರೌಷಂ ಚಾರಣಾನಾಂ ಶುಭಾಕ್ಷರಾಮ್ ॥
ಅನುವಾದ
ಹೀಗೇ ನಾನು ಯೋಚಿಸುತ್ತಾ ಶೋಕಸಾಗರದಲ್ಲಿ ಮುಳುಗಿ ಹೋದೆನು. ಅಷ್ಟರಲ್ಲಿ - ಆಕಾಶದಲ್ಲಿ ಚಾರಣರು ಆಡಿಕೊಳ್ಳುತ್ತಿದ್ದ ಶುಭ ಮಾತುಗಳನ್ನು ನಾನು ಕೇಳಿದೆನು.॥162॥
ಮೂಲಮ್ - 163
ಜಾನಕೀ ನ ಚ ದಗ್ಧೇತಿ ವಿಸ್ಮಯೋದಂತಭಾಷಿತಾಮ್ ।
ತತೋ ಮೇ ಬುದ್ಧಿರುತ್ಪನ್ನಾ ಶ್ರುತ್ವಾ ತಾಮದ್ಭುತಾಂ ಗಿರಮ್ ।
ಅದಗ್ಧಾ ಜಾನಕೀತ್ಯೇವ ನಿಮಿತ್ತೈ ಶ್ಚೋಪಲಕ್ಷಿತಾ ॥
ಅನುವಾದ
‘‘ಜಾನಕಿಯು ಸುಟ್ಟು ಹೋಗದಿರುವುದೇ ಪರಮಾಶ್ಚರ್ಯ’’ ಎಂದು ಅದ್ಭುತವಾದ ಅವರಾಡಿದ ಮಾತನ್ನು ಕೇಳಿ, ಕಂಡು ಬಂದ ನಿಮಿತ್ತ - ಶಕುನಗಳಿಂದಲೂ ‘ಸೀತೆಯು ದಗ್ಧವಾಗಲಿಲ್ಲ’ ಎಂದು ಸಮಾಧಾನ ಹೊಂದಿದೆನು.॥163॥
ಮೂಲಮ್ - 164
ದೀಪ್ಯಮಾನೇ ತು ಲಾಂಗೋಲೇ ನ ಮಾಂ ದಹತಿ ಪಾವಕಃ ॥
ಮೂಲಮ್ - 165
ಹೃದಯಂ ಚ ಪ್ರಹೃಷ್ಟಂ ಮೇ ವಾತಾಃ ಸುರಭಿಗಂಧಿನಃ ।
ತೈರ್ನಿಮಿತ್ತೈಶ್ಚ ದೃಷ್ಟಾರ್ಥೈಃ ಕಾರಣೈಶ್ಚ ಮಹಾಗುಣೈಃ ॥
ಮೂಲಮ್ - 166
ಋಷಿವಾಕ್ಯೈಶ್ಚ ಸಿದ್ಧಾರ್ಥೈರಭವಂ ಹೃಷ್ಟ ಮಾನಸಃ ।
ಪುನರ್ದೃಷ್ಟ್ವಾ ಚ ವೈದೇಹೀಂ ವಿಸೃಷ್ಟಶ್ಚ ತಯಾ ಪುನಃ ॥
ಅನುವಾದ
ಮೇಲಾಗಿ ನನ್ನ ಬಾಲವು ಹೊತ್ತಿಕೊಂಡು ಉರಿಯುತ್ತಿದ್ದರೂ, ಅಗ್ನಿದೇವರು ನನ್ನನ್ನೇ ಸುಡಲಿಲ್ಲ, ಹೀಗಿರುವಾಗ ಅವನು ಸೀತೆಯನ್ನು ಹೇಗೆ ಸುಡಬಲ್ಲನು? ಎಂಬ ವಿಶ್ವಾಸ ಉಂಟಾಯಿತು. ಆಗ ಬೀಸುತ್ತಿದ್ದ ಗಾಳಿಯೂ ಸುಮನೋಹರವಾದ ಗಂಧವನ್ನು ಹೊರಸೂಸುತ್ತಿದ್ದಿತು. ಪ್ರತ್ಯಕ್ಷವಾಗಿಯೇ ಕಾಣುತ್ತಿದ್ದ ಶುಭ ಶಕುನಗಳಿಂದಲೂ ನನ್ನ ಹೃದಯವು ಪ್ರಸನ್ನವಾಯಿತು. ಅನಂತರ ನಾನು ವೈದೇಹಿಯನ್ನು ಸಂದರ್ಶಿಸಿ ಅವಳಿಂದ ಬೀಳ್ಕೊಂಡೆನು. ಋಷಿಗಳ ವಾಕ್ಯಗಳು ಎಂದಾದರೂ ಸುಳ್ಳಾಗಬಹುದೇ? ॥164-166॥
ಮೂಲಮ್ - 167
ತತಃ ಪರ್ವತಮಾಸಾದ್ಯ ತತ್ರಾರಿಷ್ಟಮಹಂ ಪುನಃ ।
ಪ್ರತಿಪ್ಲವನಮಾರೇಭೇ ಯುಷ್ಮದ್ದರ್ಶನಕಾಂಕ್ಷಯಾ ॥
ಅನುವಾದ
ಕೂಡಲೇ ಲಂಕೆಯ ಸಮೀಪದಲ್ಲಿರುವ ಅರಿಷ್ಟವೆಂಬ ಪರ್ವತಕ್ಕೆ ಬಂದು ನಿಮ್ಮನ್ನು ಕಾಣಬೇಕೆಂಬ ಕುತೂಹಲದಿಂದ ಹಿಂದಕ್ಕೆ ಸಮುದ್ರ ಲಂಘನವನ್ನು ಕೈಗೊಂಡೆನು.॥167॥
ಮೂಲಮ್ - 168
ತತಃ ಪವನಚಂದ್ರಾರ್ಕಸಿದ್ಧಗಂಧರ್ವಸೇವಿತಮ್ ।
ಪಂಥಾನಮಹಮಾಕ್ರಮ್ಯ ಭವತೋ ದೃಷ್ಟವಾನಿಹ ॥
ಅನುವಾದ
ಬಳಿಕ ವಾಯುದೇವರೂ, ಸೂರ್ಯ-ಚಂದ್ರರೂ, ಸಿದ್ಧರು-ಗಂಧರ್ವರೂ, ಸಂಚರಿಸುವ ಗಗನಮಾರ್ಗವನ್ನು ಅತಿಕ್ರಮಿಸಿ ಈ ಉತ್ತರ ತೀರವನ್ನು ಸೇರಿ ನಿಮ್ಮಗಳನ್ನು ನೋಡುತ್ತಿದ್ದೇನೆ.॥168॥
ಮೂಲಮ್ - 169
ರಾಘವಸ್ಯ ಪ್ರಭಾವೇಣ ಭವತಾಂ ಚೈವ ತೇಜಸಾ ।
ಸುಗ್ರೀವಸ್ಯ ಚ ಕಾರ್ಯಾಥಂ ಮಯಾ ಸರ್ವಮನುಷ್ಠಿತಮ್ ॥
ಅನುವಾದ
ಶ್ರೀರಾಮಚಂದ್ರ ಪ್ರಭುವಿನ ಪ್ರಭಾವದಿಂದಲೂ, ನಿಮ್ಮೆಲ್ಲರ ಅನುಗ್ರಹದಿಂದಲೂ, ಸುಗ್ರೀವನ ಕಾರ್ಯಸಿದ್ಧಿಗಾಗಿ ನಾನು ಇವೆಲ್ಲವನ್ನು ನೆರವೇರಿಸಿರುವೆನು.॥169॥
ಮೂಲಮ್ - 170
ಏತತ್ ಸರ್ವಂ ಮಯಾ ತತ್ರ ಯಥಾವದುಪಪಾದಿತಮ್ ।
ಅತ್ರ ಯನ್ನ ಕೃತಂ ಶೇಷಂ ತತ್ ಸರ್ವಂ ಕ್ರಿಯತಾಮಿತಿ ॥
ಅನುವಾದ
ವಾನರ ಶ್ರೇಷ್ಠರೇ! ಲಂಕಾಪಟ್ಟಣದಲ್ಲಿ ನಡೆದ ಎಲ್ಲ ವಿಷಯಗಳನ್ನು ನಾನು ಯಥಾವತ್ತಾಗಿ ಹೇಳಿರುವೆನು. ಅಲ್ಲಿ ನಾನು ಮಾಡದೆ ಉಳಿದಿರುವ ಕಾರ್ಯವನ್ನು ನೀವೆಲ್ಲರೂ ಮಾಡಿರಿ.’’॥170॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಅಷ್ಟಪಂಚಾಶಃ ಸರ್ಗಃ ॥ 58 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತೆಂಟನೆಯ ಸರ್ಗವು ಮುಗಿಯಿತು.