वाचनम्
ಭಾಗಸೂಚನಾ
ಸಮುದ್ರವನ್ನು ದಾಟಿಬಂದ ಹನುಮಂತನು ಜಾಂಬವಾದಿಗಳೊಡನೆ ಸೇರಿದುದು
ಮೂಲಮ್ - 1
ಆಪ್ಲುತ್ಯ ಚ ಮಹಾವೇಗಃ ಪಕ್ಷವಾನಿವ ಪರ್ವತಃ ।
ಸಚಂದ್ರಕುಮುದಂ ರಮ್ಯಂ ಸಾರ್ಕಕಾರಂಡವಂ ಶುಭಮ್ ।
ತಿಷ್ಯಶ್ರವಣಕಾದಂಬಮಭ್ರಶೈವಾಲಶಾದ್ವಲಮ್ ॥
ಮೂಲಮ್ - 2
ಪುನರ್ವಸುಮಹಾಮೀನಂ ಲೋಹಿತಾಂಗಮಹಾಗ್ರಹಮ್ ।
ಐರಾವತಮಹಾದ್ವೀಪಂ ಸ್ವಾತೀಹಂಸವಿಲೋಲಿತಮ್ ॥
ಮೂಲಮ್ - 3
ವಾತಸಂಘಾತಜಾತೋರ್ಮಿ ಚಂದ್ರಾಂಶುಶಿಶಿರಾಂಬುಮತ್ ।
ಭುಜಂಗಯಕ್ಷಗಂಧರ್ವಪ್ರಬುದ್ಧ ಕಮಲೋತ್ಪಲಮ್ ॥
ಮೂಲಮ್ - 4
ಹನುಮಾನ್ ಮಾರುತಗತಿರ್ಮಹಾನೌರಿವ ಸಾಗರಮ್ ।
ಅಪಾರಮಪರಿಶ್ರಾಂತಃ ಪುಪ್ಲುವೇ ಗಗನಾರ್ಣವಮ್ ॥
ಅನುವಾದ
ಸಮುದ್ರದಂತೆಯೇ ಇದ್ದ ಆಕಾಶಸಾಗರವನ್ನು ಹನುಮಂತನು ರೆಕ್ಕೆಗಳಿರುವ ಪರ್ವತದಂತೆ ದಾಟಿದನು. ಆ ಆಕಾಶಸಾಗರದಲ್ಲಿ ಸರ್ಪ, ಯಕ್ಷ, ಗಂಧರ್ವರೇ ಅರಳಿದ ಕಮಲ-ಕನ್ನೈದಿಲೆಗಳಂತಿದ್ದರು. ಚಂದ್ರನೇ ಬಿಳಿಯ ನೈದಿಲೆಯಾಗಿದ್ದನು. ಸೂರ್ಯನು ನೀರುಕೋಳಿಯ ರೂಪದಲ್ಲಿದ್ದನು. ಪುಷ್ಯ-ಶ್ರವಣ ನಕ್ಷತ್ರಗಳೇ ಕಲಹಂಸಗಳು. ಮೋಡಗಳೇ ಪಾಚಿ ಮತ್ತು ಹಸಿರುಹುಲ್ಲು. ಪುನರ್ವಸು ನಕ್ಷತ್ರವೇ ತಿಮಿಂಗಿಲವು. ಅಂಗಾರಕನು ದೊಡ್ಡ ಮೊಸಳೆಯು. ಐರಾವತವು ಒಂದು ಮಹಾದ್ವೀಪದಂತಿತ್ತು. ಸ್ವಾತಿ ನಕ್ಷತ್ರವು ವಿಲಾಸದಿಂದ ಕೂಡಿದ ರಾಜಹಂಸವು. ಬೀಸುತ್ತಿದ್ದ ಬಿರುಗಾಳಿಯು ಸಾಗರದ ತೆರೆಗಳಂತಿದ್ದಿತು. ಚಂದ್ರನ ಕಿರಣಗಳು ಶೀತಲವಾದ ನೀರಿನಂತಿದ್ದುವು. ಅಂತಹ ಅಪಾರವಾದ ಆಕಾಶಸಾಗರವನ್ನು ಮಹಾವೇಗವಂತನಾದ ಹನುಮಂತನು ಸಮುದ್ರವನ್ನು ದಾಟುವ ದೊಡ್ಡ ಹಡಗಿನಂತೆ ಸ್ವಲ್ಪವೂ ಆಯಾಸವಿಲ್ಲದೆ ಲೀಲಾಜಾಲವಾಗಿ ದಾಟಿದನು. ॥1-4॥
ಮೂಲಮ್ - 5
ಗ್ರಸಮಾನ ಇವಾಕಾಶಂ ತಾರಾಧಿಪಮಿವೋಲ್ಲಿಖನ್ ।
ಹರನ್ನಿವ ಸನಕ್ಷತ್ರಂ ಗಗನಂ ಸಾರ್ಕಮಂಡಲಮ್ ॥
ಮೂಲಮ್ - 6
ಮಾರುತಸ್ಯಾತ್ಮಜಃ ಶ್ರೀಮಾನ್ ಕಪಿರ್ವ್ಯೋಮಚರೋ ಮಹಾನ್ ।
ಹನುಮಾನ್ ಮೇಘಜಾಲಾನಿ ವಿಕರ್ಷನ್ನಿವ ಗಚ್ಛತಿ ॥
ಅನುವಾದ
ವಾಯುಸೂನುವೂ, ಶುಭಲಕ್ಷಣ ಸಂಪನ್ನನೂ, ವಾನರೋತ್ತಮನೂ ಆದ ಹನುಮಂತನು ಹಾರಿಕೊಂಡು ಬರುತ್ತಿದ್ದಾಗ, ಆಕಾಶವನ್ನೇ ನುಂಗಿಬಿಡುವನೋ ಎಂಬಂತೆಯೂ, ಚಂದ್ರನನ್ನೇ ಒರೆಸುತ್ತಿರುವನೋ ಎಂಬಂತೆಯೂ, ನಕ್ಷತ್ರಮಂಡಲ, ಸೂರ್ಯಮಂಡಲದಿಂದೊಡಗೂಡಿದ ಅಂತರಿಕ್ಷವನ್ನು ಅಪಹರಿಸುತ್ತಿರುವನೋ ಎಂಬಂತೆ ಕಾಣುತ್ತಿತ್ತು. ಅಪಾರವಾದ ಸಮುದ್ರವನ್ನು ಹಾರಿಕೊಂಡು ದಾಟುವಾಗ, ಮೇಘಗಳ ಸಮೂಹವನ್ನೇ ಸೆಳೆದುಕೊಂಡು ಹೋಗುತ್ತಿರುವನೋ ಎಂಬಂತೆ ಅತ್ಯಂತ ರಭಸದಿಂದ ಹೋಗುತ್ತಿದ್ದನು.॥5-6॥
ಮೂಲಮ್ - 7
ಪಾಂಡರಾರುಣವರ್ಣಾನಿ ನೀಲಮಾಂಜಿಷ್ಠಕಾನಿ ಚ ।
ಹರಿತಾರುಣವರ್ಣಾನಿ ಮಹಾಭ್ರಾಣಿ ಚಕಾಶಿರೇ ॥
ಅನುವಾದ
ಆಗ ಗಗನದಲ್ಲಿ ಮೇಘಗಳು, ಬಿಳುಪು, ಎಣ್ಣೆಗೆಂಪು, ಕಪ್ಪು, ಕೆಂಪು, ಹಸಿರು ಮುಂತಾದ ಬಣ್ಣಗಳಿಂದ ಪ್ರಕಾಶಿಸುತ್ತಿದ್ದವು. ॥7॥
ಮೂಲಮ್ - 8
ಪ್ರವಿಶನ್ನಭ್ರಜಾಲಾನಿ ನಿಷ್ಕ್ರಮಂಶ್ಚ ಪುನಃ ಪುನಃ ।
ಪ್ರಚ್ಛನ್ನಶ್ಚ ಪ್ರಕಾಶಶ್ಚ ಚಂದ್ರಮಾ ಇವ ಲಕ್ಷ್ಯತೇ ॥
ಅನುವಾದ
ಪದೇ-ಪದೇ ಮೇಘಗಳಲ್ಲಿ ಪ್ರವೇಶಿಸಿ ಹೊರಬರುತ್ತಿದ್ದ ಹನುಮಂತನು-ಮೇಘಗಳೆಡೆಯಲ್ಲಿ ಮಂಕಾಗಿಯೂ, ಹೊರಬರುತ್ತಲೇ ಪ್ರಕಾಶಮಾನ ಚಂದ್ರನಂತೆ ಕಾಣುತ್ತಿದ್ದನು.॥8॥
ಮೂಲಮ್ - 9
ವಿವಿಧಾಭ್ರಘನಾಪನ್ನಗೋಚರೋ ಧವಲಾಂಬರಃ ।
ದೃಶ್ಯಾದೃಶ್ಯತನುರ್ವೀರಸ್ತದಾ ಚಂದ್ರಾಯತೇಂಬರೇ ॥
ಅನುವಾದ
ಬಿಳಿಯ ಬಟ್ಟೆಯನ್ನು ಧರಿಸಿದ್ದ ಹನುಮಂತನು - ದಟ್ಟವಾಗಿದ್ದ ಮೇಘಗಳ ಬಳಿಯಿಂದ ಹಾದುಹೋಗುವಾಗ, ಒಮ್ಮೊಮ್ಮೆ ಕಂಡುಬರುತ್ತಾ, ಒಮ್ಮೊಮ್ಮೆ ಕಾಣದಿರುವ ಚಂದ್ರನಂತೆ ಗೋಚರಿಸುತ್ತಿದ್ದನು.॥9॥
ಮೂಲಮ್ - 10
ತಾರ್ಕ್ಷ್ಯಾಯಮಾಣೋ ಗಗನೇ ಬಭಾಸೇ ವಾಯುನಂದನಃ ।
ದಾರಯನ್ ಮೇಘವೃಂದಾನಿ ನಿಷ್ಪತಂಶ್ಚ ಪುನಃ ಪುನಃ ॥
ಅನುವಾದ
ವಾಯುಪುತ್ರನಾದ ಹನುಮಂತನು-ಮೇಘಗಳನ್ನು ಸೀಳಿಕೊಂಡು ಒಳನುಗ್ಗುತ್ತಾ, ಹೊರಬರುತ್ತಾ ಇರುವ ಗರುಡನಂತೆ ಆಕಾಶದಲ್ಲಿ ವೇಗವಾಗಿ ಸಾಗುತ್ತಿದ್ದನು.॥10॥
ಮೂಲಮ್ - 11
ನದನ್ನಾದೇನ ಮಹತಾ ಮೇಘಸ್ವನಮಹಾಸ್ವನಃ ।
ಪ್ರವರಾನ್ ರಾಕ್ಷಸಾನ್ ಹತ್ವಾ ನಾಮ ವಿಶ್ರಾವ್ಯ ಚಾತ್ಮನಃ ॥
ಅನುವಾದ
ಮೇಘನಿನಾದದಂತೆ ಮಹಾಧ್ವನಿಯನ್ನು ಮಾಡುತ್ತಿದ್ದ ಮಾರುತಿಯು ಘೋರನಾದವನ್ನು ಮಾಡುತ್ತಾ, ಪ್ರಮುಖ ರಾಕ್ಷಸರನ್ನು ಸಂಹರಿಸಿ ತನ್ನ ಹೆಸರನ್ನು (ನಾನು ರಾಮನ ಬಂಟ, ನನ್ನ ಹೆಸರು ಹನುಮಂತ) ಪ್ರಕಟಪಡಿಸಿದನು.॥11॥
ಮೂಲಮ್ - 12
ಆಕುಲಾಂ ನಗರೀಂ ಕೃತ್ವಾ ವ್ಯಥಯಿತ್ವಾ ಚ ರಾವಣಮ್ ।
ಅರ್ದಯಿತ್ವಾ ಬಲಂ ಘೋರಂ ವೈದೇಹೀಮಭಿವಾದ್ಯ ಚ ।
ಆಜಗಾಮ ಮಹಾತೇಜಾಃ ಪುನರ್ಮಧ್ಯೇನ ಸಾಗರಮ್ ॥
ಅನುವಾದ
ಹೆಚ್ಚಾದ ತೇಜಶ್ಶಾಲಿಯಾದ ಹನುಮಂತನು ಲಂಕೆಯನ್ನು ಅಸ್ತವ್ಯಸ್ತಗೊಳಿಸಿ, ರಾವಣನಿಗೆ ಮನೋವ್ಯಥೆಯನ್ನು ತಂದಿಟ್ಟನು. ಘೋರವಾದ ರಾಕ್ಷಸಬಲವನ್ನು ಚೆಂಡಾಡಿದನು. ಬಳಿಕ ಸೀತಾದೇವಿಗೆ ಪಾದಾಭಿವಂದನೆಗೈದು, ಮಹಾಸಮುದ್ರ ಮಧ್ಯಭಾಗಕ್ಕೆ ತಲುಪಿದನು.॥12॥
ಮೂಲಮ್ - 13
ಪರ್ವತೇಂದ್ರಂ ಸುನಾಭಂ ಚ ಸಮುಪಸ್ಪೃಶ್ಯ ವೀರ್ಯವಾನ್ ।
ಜ್ಯಾಮುಕ್ತ ಇವ ನಾರಾಚೋ ಮಹಾವೇಗೋಭ್ಯುಪಾಗತಃ ॥
ಅನುವಾದ
ಮಹಾವೀರನೂ, ಮಹಾಶಕ್ತಿಶಾಲಿಯೂ ಆದ ಹನುಮಂತನು ಮಾರ್ಗಮಧ್ಯದಲ್ಲಿ ಮೈನಾಕ ಮಹಾಪರ್ವತವನ್ನು ಸ್ಪರ್ಶಿಸಿ, ನಾಣಿನಿಂದ ಹೊರಚಿಮ್ಮಿದ ಬಾಣದಂತೆ ಅತಿವೇಗವಾಗಿ ಸಮುದ್ರದ ಉತ್ತರತೀರಕ್ಕೆ ಆಗಮಿಸಿದನು.॥13॥
ಮೂಲಮ್ - 14
ಸ ಕಿಂಚಿದನುಸಂಪ್ರಾಪ್ತಃ ಸಮಾಲೋಕ್ಯ ಮಹಾಗಿರಿಮ್ ।
ಮಹೇಂದ್ರಂ ಮೇಘಸಂಕಾಶಂ ನನಾದ ಹರಿಪುಂಗವಃ ॥
ಅನುವಾದ
ಆ ವಾನರೋತ್ತಮನು ಮೇಘಸದೃಶವಾದ ಮಹೇಂದ್ರ ಪರ್ವತವು ಸಮೀಪಿಸುತ್ತಲೇ, ಅದನ್ನು ನೋಡಿ ಮಹಾಧ್ವನಿಯನ್ನು ಮಾಡಿದನು.॥14॥
ಮೂಲಮ್ - 15
ಸ ಪೂರಯಾಮಾಸ ಕಪಿರ್ದಿಶೋ ದಶ ಸಮಂತತಃ ।
ನದನ್ನಾ ದೇನ ಮಹತಾ ಮೇಘಸ್ವನಮಹಾಸ್ವನಃ ॥
ಅನುವಾದ
ಆಗ ಹನುಮಂತನು ಮೇಘದಂತೆ ಮಾಡಿದ ಗಂಭೀರವಾದ ನಾದವು ಹತ್ತು ದಿಕ್ಕುಗಳಲ್ಲಿ ತುಂಬಿ ಪ್ರತಿಧ್ವನಿಸಿತು.॥15॥
ಮೂಲಮ್ - 16
ಸ ತಂ ದೇಶಮನುಪ್ರಾಪ್ತಃ ಸುಹೃದ್ದರ್ಶನಲಾಲಸಃ ।
ನನಾದ ಹರಿಶಾರ್ದೂಲೋ ಲಾಂಗೂಲಂ ಚಾಪ್ಯಕಂಪಯತ್ ॥
ಅನುವಾದ
ಅಂಗದನೇ ಮೊದಲಾದ ಮಿತ್ರರನ್ನು ನೋಡುವ ಲಾಲಸೆಯಿಂದ ಇದ್ದ ಹನುಮಂತನು ಅವರಿದ್ದ ಸ್ಥಳಕ್ಕೆ ಬಂದು ಸಿಂಹಗರ್ಜನೆ ಗೈದು, ಬಾಲವನ್ನು ಅಲ್ಲಾಡಿಸಿದನು.॥16॥
ಮೂಲಮ್ - 17
ತಸ್ಯ ನಾನದ್ಯಮಾನಸ್ಯ ಸುಪರ್ಣಾಚರಿತೇ ಪಥಿ ।
ಲತೀವಾಸ್ಯ ಘೋಷೇಣ ಗಗನಂ ಸಾರ್ಕಮಂಡಲಮ್ ॥
ಅನುವಾದ
ಗರುಡನು ಸಂಚರಿಸುವ ಮಾರ್ಗದಲ್ಲಿ ನಿಂತು ನಿನಾದ ಮಾಡುತ್ತಿದ್ದ ಹನುಮಂತನ ಮುಖದಿಂದ ಹೊರಟ ಗರ್ಜನೆಯಿಂದ ಸೂರ್ಯಮಂಡಲ ಸಹಿತ ಆಕಾಶವೇ ಸೀಳಿ ಹೋಗುವುದೋ ಎಂಬಂತೆ ಕಾಣುತ್ತಿತ್ತು.॥17॥
ಮೂಲಮ್ - 18
ಯೇ ತು ತತ್ರೋತ್ತರೇ ತೀರೇ ಸಮುದ್ರಸ್ಯ ಮಹಾಬಲಾಃ ।
ಪೂರ್ವಂ ಸಂವಿಷ್ಠಿತಾಃ ಶೂರಾ ವಾಯುಪುತ್ರದಿದೃಕ್ಷವಃ ॥
ಮೂಲಮ್ - 19
ಮಹತೋ ವಾಯುನುನ್ನಸ್ಯ ತೋಯದಸ್ಯೇವ ಗರ್ಜಿತಮ್ ।
ಶುಶ್ರುವುಸ್ತೇ ತದಾ ಘೋಷಮೂರುವೇಗಂ ಹನೂಮತಃ ॥
ಅನುವಾದ
ಇಷ್ಟರವರೆಗೆ ಸಮುದ್ರದ ಉತ್ತರತೀರದಲ್ಲಿ ಸೇರಿರುವ ಮಹಾಬಲಶಾಲಿಗಳಾದ ಅಂಗದಾದಿ ವಾನರ ವೀರರು ವಾಯುಪುತ್ರನ ದರ್ಶನಕ್ಕಾಗಿ ಎದುರು ನೋಡುತ್ತಿದ್ದರು. ಆಗ ಅವರು ಬಿರುಗಾಳಿಯಿಂದ ಪ್ರೇರಿತವಾದ ಮೇಘಗಳ ಗರ್ಜನೆಯಂತಿದ್ದ ಹನುಮಂತನ ಮಹಾನಾದವನ್ನೂ, ಅವನ ಮಹಾವೇಗದಿಂದ ಉಂಟಾದ ಶಬ್ದವನ್ನು ಕೇಳಿದರು.॥18-19॥
ಮೂಲಮ್ - 20
ತೇ ದೀನವದನಾಃ ಸರ್ವೇ ಶುಶ್ರುವುಃ ಕಾನನೌಕಸಃ ।
ವಾನರೇಂದ್ರಸ್ಯ ನಿರ್ಘೋಷಂ ಪರ್ಜನ್ಯನಿನದೋಪಮಮ್ ॥
ಅನುವಾದ
ಇಷ್ಟರವರೆಗೆ ದೀನವಾದ ಮನಸ್ಸಿನಿಂದ ಕೂಡಿದ್ದ ಆ ಕಪಿನಾಯಕರೆಲ್ಲರೂ ಮೇಘಗರ್ಜನೆಗೆ ಸಮಾನವಾಗಿದ್ದ ವಾನರೋತ್ತಮನ ಗರ್ಜನೆಯನ್ನು ಕೇಳಿ ಉತ್ಸಾಹಿತರಾದರು.॥20॥
ಮೂಲಮ್ - 21
ನಿಶಮ್ಯ ನದತೋ ನಾದಂ ವಾನರಾಸ್ತೇ ಸಮಂತತಃ ।
ಬಭೂವುರುತ್ಸುಕಾಃ ಸರ್ವೇ ಸುಹೃದ್ದರ್ಶನಕಾಂಕ್ಷಿಣಃ ॥
ಅನುವಾದ
ತಮ್ಮ ಮಿತ್ರನಾದ ಹನುಮಂತನ ದರ್ಶನಕ್ಕೆ ಕಾತರರಾಗಿದ್ದ ಆ ವಾನರರೆಲ್ಲರೂ ನಾಲ್ಕು ದಿಕ್ಕುಗಳಲ್ಲಿಯೂ ವ್ಯಾಪಿಸಿರುವ ಹನುಮಂತನ ಸಿಂಹನಾದವನ್ನು ಕೇಳಿ ಉತ್ಸಾಹಭರಿತರಾದರು.॥21॥
ಮೂಲಮ್ - 22
ಜಾಂಬವಾಂಸ್ತು ಹರಿಶ್ರೇಷ್ಠಃ ಪ್ರೀತಿಸಂಹೃಷ್ಟಮಾನಸಃ ।
ಉಪಾಮಂತ್ರ್ಯ ಹರೀನ್ ಸರ್ವಾನಿದಂ ವಚನಮಬ್ರವೀತ್ ॥
ಅನುವಾದ
ಕರಡಿಗಳ ಒಡೆಯನಾದ ಜಾಂಬವಂತರು ಸಂತೋಷಭರಿತ ಮನಸ್ಸಿನಿಂದ ಕೂಡಿದವರಾಗಿ ಎಲ್ಲ ವಾನರವೀರರನ್ನು ಬಳಿಗೆ ಕರೆದು ಇಂತು ನುಡಿದರು.॥22॥
ಮೂಲಮ್ - 23
ಸರ್ವಥಾ ಕೃತಕಾರ್ಯೋಸೌ ಹನೂಮಾನ್ನಾತ್ರ ಸಂಶಯಃ ।
ನ ಹ್ಯಸ್ಯಾಕೃತಕಾರ್ಯಸ್ಯ ನಾದ ಏವಂವಿಧೋ ಭವೇತ್ ॥
ಅನುವಾದ
ಸಹೃದಯರೇ! ಹನುಮಂತನು ಕೃತ-ಕೃತ್ಯನಾಗಿಯೇ ಹಿಂದಿರುಗುತ್ತಿರುವನು. ಇದರಲ್ಲಿ ಸಂದೇಹವೇ ಇಲ್ಲ. ಹೋದ ಕಾರ್ಯವನ್ನು ಸಾಧಿಸದಿದ್ದರೆ ಈ ವಿಧವಾದ ಗರ್ಜನೆಯನ್ನು ಅವನು ಮಾಡುತ್ತಿರಲಿಲ್ಲ.॥23॥
ಮೂಲಮ್ - 24
ತಸ್ಯ ಬಾಹೂರುವೇಗಂ ಚ ನಿನಾದಂ ಚ ಮಹಾತ್ಮನಃ ।
ನಿಶಮ್ಯ ಹರಯೋ ಹೃಷ್ಟಾಃ ಸಮುತ್ಪೇತುಸ್ತತಸ್ತತಃ ॥
ಅನುವಾದ
ಮಹಾತ್ಮನಾದ ಆ ಹನುಮಂತನ ತೋಳುಗಳ ವೇಗದ ಶಬ್ದವನ್ನೂ, ತೊಡೆಗಳ ವೇಗದ ಶಬ್ದವನ್ನೂ ಕೇಳಿ ಸಂತುಷ್ಟರಾದ ಕಪಿನಾಯಕರೆಲ್ಲರೂ ಅತ್ತಿಂದಿತ್ತ ಕುಣಿದಾಡಿದರು.॥24॥
ಮೂಲಮ್ - 25
ತೇ ನಗಾಗ್ರಾನ್ ನಗಾಗ್ರಾಣಿ ಶಿಖರಾಚ್ಛಿಖರಾಣಿ ಚ ।
ಪ್ರಹೃಷ್ಟಾಃ ಸಮಪದ್ಯಂತ ಹನೂಮಂತಂ ದಿದೃಕ್ಷವಃ ॥
ಅನುವಾದ
ಅವರೆಲ್ಲರೂ ಸಂತೋಷಾತಿರೇಕದಿಂದ ಹನುಮಂತನನ್ನು ನೋಡಲು ಕುತೂಹಲಿಗಳಾಗಿ ಆ ಮರದಿಂದ ಈ ಮರಕ್ಕೆ, ಆ ಪರ್ವತ ಶಿಖರದಿಂದ ಈ ಪರ್ವತಶಿಖರಕ್ಕೆ ಹಾರಾಡಿದರು.॥25॥
ಮೂಲಮ್ - 26
ತೇ ಪ್ರೀತಾಃ ಪಾದಪಾಗ್ರೇಷು ಗೃಹ್ಯ ಶಾಖಾಃ ಸುವಿಷ್ಟಿತಾಃ ।
ವಾಸಾಂಸೀವ ಪ್ರಶಾಖಾಶ್ಚ ಸಮಾವಿಧ್ಯಂತ ವಾನರಾಃ ॥
ಅನುವಾದ
ಆ ವಾನರರು ಸಂತೋಷದಲ್ಲಿ ಮುಳುಗಿಹೋಗಿ, ಮರದ ರೆಂಬೆಗಳನ್ನು ಹಿಡಿದುಕೊಂಡು ಎಲ್ಲರೂ ಒಂದೆಡೆ ಸೇರಿದರು. ಬಟ್ಟೆಯನ್ನೆತ್ತಿ ಬೀಸುತ್ತಾ ಅತಿಥಿಯನ್ನು ಸ್ವಾಗತಿಸುವಂತೆ ಮರಗಳ ತುದಿಯ ಸಣ್ಣ-ಸಣ್ಣ ರೆಂಬೆಗಳನ್ನು ಅಲ್ಲಾಡಿಸುತ್ತಿದ್ದರು. ॥26॥
ಮೂಲಮ್ - 27
ಗಿರಿಗಹ್ವರಸಂಲೀನೋ ಯಥಾ ಗರ್ಜತಿ ಮಾರುತಃ ।
ಏವಂ ಜಗರ್ಜ ಬಲವಾನ್ ಹನೂಮಾನ್ ಮಾರುತಾತ್ಮಜಃ ॥
ಅನುವಾದ
ಪರ್ವತ ಗುಹೆಗಳಲ್ಲಿ ಪ್ರವೇಶಿಸುವ ವಾಯುವು ಪ್ರತಿಧ್ವನಿಸುವಂತೆ, ಬಲಶಾಲಿಯಾದ, ವಾಯು ನಂದನನಾದ ಹನುಮಂತನು ಗರ್ಜಿಸಿದನು.॥27॥
ಮೂಲಮ್ - 28
ತಮಭ್ರಘನಸಂಕಾಶಮಾಪತಂತಂ ಮಹಾಕಪಿಮ್ ।
ದೃಷ್ಟ್ವಾತೇ ವಾನರಾಃ ಸರ್ವೇ ತಸ್ಥುಃ ಪ್ರಾಂಜಲಯಸ್ತದಾ ॥
ಅನುವಾದ
ದಟ್ಟವಾದ ಮೇಘಗಳಿಂದ ಕೆಳಗೆ ಭೂಮಿಗೆ ಬರುತ್ತಿದ್ದ ಮಹಾಕಪಿಯಾದ ಹನುಮಂತನನ್ನು ಕಂಡು, ಆ ವಾನರರೆಲ್ಲರೂ ಕರಜೋಡಿಸಿಕೊಂಡು ಸ್ವಾಗತವನ್ನು ಕೋರಲು ಅವನ ಇದಿರಾಗಿ ನಿಂತರು.॥28॥
ಮೂಲಮ್ - 29
ತತಸ್ತು ವೇಗವಾಂಸ್ತಸ್ಯ ಗಿರೇರ್ಗಿರಿನಿಭಃ ಕಪಿಃ ।
ನಿಪಪಾತ ಮಹೇಂದ್ರಸ್ಯ ಶಿಖರೇ ಪಾದಪಾಕುಲೇ ॥
ಅನುವಾದ
ಹೆಚ್ಚಾದ ಶಕ್ತಿವಂತನೂ, ಪರ್ವತಸದೃಶನೂ ಆದ ಹನುಮಂತನು ವೃಕ್ಷಗಳಿಂದ ನಿಬಿಡವಾದ ಆ ಮಹೇಂದ್ರಪರ್ವತದ ಶಿಖರದಲ್ಲಿ ಬಂದಿಳಿದನು.॥29॥
ಮೂಲಮ್ - 30
ಹರ್ಷೇಣಾಪೂರ್ಯಮಾಣೋಸೌ ರಮ್ಯೇ ಪರ್ವತನಿರ್ಝರೆ ।
ಛಿನ್ನ ಪಕ್ಷ ಇವಾಕಾಶಾತ್ ಪಪಾತ ಧರಣೀಧರಃ ॥
ಅನುವಾದ
ಹರ್ಷದಿಂದ ಉಬ್ಬಿಹೋದ ಮಾರುತಿಯು - ರೆಕ್ಕೆಗಳು ಕತ್ತರಿಸಿದ ಪರ್ವತವು ಕೆಳಕ್ಕೆ ಬೀಳುವಂತೆ ಪರ್ವತದ ರಮ್ಯವಾದ ಝರಿಗಳಿದ್ದ ಪ್ರದೇಶದಲ್ಲಿ ಇಳಿದನು.॥30॥
ಮೂಲಮ್ - 31
ತತಸ್ತೇ ಪ್ರೀತಮನಸಃ ಸರ್ವೇ ವಾನರಪುಂಗವಾಃ ।
ಹನೂಮಂತಂ ಮಹಾತ್ಮಾನಂ ಪರಿವಾರ್ಯೋಪತಸ್ಥಿರೇ ॥
ಅನುವಾದ
ಆಗ ಪರಮಾನಂದಭರಿತರಾದ ಅಂಗದಾದಿ ವಾನರೋತ್ತಮರೆಲ್ಲರೂ ಮಹಾತ್ಮನಾದ ಹನುಮಂತನ ಬಳಿ ಸಾರಿ ಸುತ್ತಲೂ ನೆರೆದರು.॥31॥
ಮೂಲಮ್ - 32
ಪರಿವಾರ್ಯ ಚ ತೇ ಸರ್ವೇ ಪರಾಂ ಪ್ರೀತಿಮುಪಾಗತಾಃ
ಪ್ರಹೃಷ್ಟವದನಾಃ ಸರ್ವೇ ತಮರೋಗಮುಪಾಗತಮ್ ॥
ಅನುವಾದ
ಕ್ಷೇಮವಾಗಿ ಮರಳಿಬಂದ ಹನುಮಂತನನ್ನು ನೋಡಿದ ಬಳಿಕ ಅವರೆಲ್ಲರ ಮುಖಗಳು ಪ್ರಸನ್ನವಾದುವು. ಅವನ ಸುತ್ತಲೂ ಸೇರಿದ ಅವರೆಲ್ಲರೂ ಎಣೆಯಿಲ್ಲದ ಆನಂದವನ್ನು ಅನುಭವಿಸಿದರು.॥32॥
ಮೂಲಮ್ - 33
ಉಪಾಯನಾನಿ ಚಾದಾಯ ಮೂಲಾನಿ ಚ ಲಾನಿ ಚ ।
ಪ್ರತ್ಯರ್ಚಯನ್ ಹರಿಶ್ರೇಷ್ಠಂ ಹರಯೋ ಮಾರುತಾತ್ಮಜಮ್ ॥
ಅನುವಾದ
ಅಂಗದಾದಿ ವಾನರರು ಕಂದಮೂಲ ಫಲಗಳನ್ನು ತಂದು, ಅವನ್ನು ಕಪಿವರನಾದ ಹನುಮಂತನಿಗೆ ಕಾಣಿಕೆಯಾಗಿ ಸಮರ್ಪಿಸಿ, ಅವನನ್ನು ಭಕ್ತಿಯಿಂದ ಪೂಜಿಸಿದರು.॥33॥
ಮೂಲಮ್ - 34
ಹನೂಮಾಂಸ್ತು ಗುರೂನ್ ವೃದ್ಧಾನ್ ಜಾಂಬವತ್ಪ್ರಮುಖಾಂಸ್ತದಾ ।
ಕುಮಾರಮಂಗದಂ ಚೈವ ಸೋವಂದತ ಮಹಾಕಪಿಃ ॥
ಅನುವಾದ
ಅನಂತರ ಕೆಲವು ವಾನರರು ಸಂತೋಷದ ಆಧಿಕ್ಯದಿಂದ ಜಯಘೋಷ ಮಾಡಿದರು. ಮತ್ತೆ ಕೆಲವರು ಕಿಲ-ಕಿಲ ಶಬ್ದಗಳನ್ನು ಮಾಡಿದರು. ಇನ್ನೂ ಕೆಲವರು ಹನುಮಂತನಿಗೆ ಕುಳಿತುಕೊಳ್ಳಲು ರೆಂಬೆಗಳನ್ನು ಮುರಿದು ತಂದಿಟ್ಟರು.॥34॥
ಮೂಲಮ್ - 35
ಸ ತಾಭ್ಯಾಂ ಪೂಜಿತಃ ಪೂಜ್ಯಃ ಕಪಿಭಿಶ್ಚ ಪ್ರಸಾದಿತಃ ।
ದೃಷ್ಟಾ ಸೀತೇತಿ ವಿಕ್ರಾಂತಃ ಸಂಕ್ಷೇಪೇಣ ನ್ಯವೇದಯತ್ ॥
ಅನುವಾದ
ಮಹಾಕಪಿಯಾದ ಹನುಮಂತನು ಜಾಂಬವಂತರೇ ಮೊದಲಾದ ಹಿರಿಯರನ್ನೂ, ವೃದ್ಧರನ್ನೂ, ರಾಜಕುಮಾರನಾದ ಅಂಗದನನ್ನೂ ಅಭಿನಂದಿಸಿದನು.॥35॥
ಮೂಲಮ್ - 36
ನಿಷಸಾದ ಚ ಹಸ್ತೇನ ಗೃಹೀತ್ವಾ ವಾಲಿನಃ ಸುತಮ್ ।
ರಮಣೀಯೇ ವನೋದ್ದೇಶೇ ಮಹೇಂದ್ರಸ್ಯ ಗಿರೇಸ್ತದಾ ॥
ಅನುವಾದ
ಪೂಜ್ಯನೂ, ಮಹಾಪರಾಕ್ರಮಿಯೂ ಆದ ಹನುಮಂತನನ್ನು ಜಾಂಬವಂತ, ಅಂಗದರಿಬ್ಬರೂ ಪೂಜಿಸಿ, ಗೌರವಿಸಿದರು. ಉಳಿದ ಕಪಿವೀರರೆಲ್ಲರೂ ಆದರದಿಂದ ಶ್ಲಾಘಿಸಿದರು. ಬಳಿಕ ಮಾರುತಿಯು ‘ದೃಷ್ಟಾಸೀತಾ’ (ಕಂಡೆ ಸೀತೆಯನು) ಎಂದು ಸಂಕ್ಷೇಪವಾಗಿ ತಿಳಿಸಿದನು.॥36॥
ಮೂಲಮ್ - 37
ಹನುಮಾನಬ್ರವೀದ್ ಪೃಷ್ಟಸ್ತದಾ ತಾನ್ ವಾನರರ್ಷಭಾನ್ ।
ಅಶೋಕವನಿಕಾಸಂಸ್ಥಾ ದೃಷ್ಟಾ ಸಾ ಜನಕಾತ್ಮಜಾ ॥
ಅನುವಾದ
ಬಳಿಕ ಹನುಮಂತನು ವಾಲಿಯ ಮಗನಾದ ಅಂಗದನ ಕೈ ಹಿಡಿದುಕೊಂಡು ಮಹೇಂದ್ರಪರ್ವತದ ರಮಣೀಯ ವನಪ್ರದೇಶಕ್ಕೆ ಕರಕೊಂಡು ಹೋಗಿ ಕುಳಿತುಕೊಂಡನು.॥37॥
ಮೂಲಮ್ - 38
ರಕ್ಷ್ಯಮಾಣಾ ಸುಘೋರಾಭೀ ರಾಕ್ಷಸೀಭಿರನಿಂದಿತಾ ।
ಏಕವೇಣೀಧರಾ ಬಾಲಾ ರಾಮದರ್ಶನಲಾಲಸಾ ॥
ಅನುವಾದ
ಲಂಕೆಗೆ ಹೋದ ಕಾರ್ಯವೇನಾಯಿತು ಎಂದು ಕಪಿ ನಾಯಕರೆಲ್ಲರೂ ಕುತೂಹಲಿಗಳಾಗಿ ಕೇಳಿದಾಗ, ಹನುಮಂತನು- ‘ಅಶೋಕವನದಲ್ಲಿದ್ದ ಜಾನಕಿಯನ್ನು ನಾನು ನೋಡಿದೆ’ ಎಂದು ಉತ್ತರಿಸಿದನು.॥38॥
ಮೂಲಮ್ - 39
ಉಪವಾಸಪರಿಶ್ರಾಂತಾ ಜಟಿಲಾ ಮಲಿನಾ ಕೃಶಾ ॥
ಮೂಲಮ್ - 40
ತತೋ ದೃಷ್ಟೇತಿ ವಚನಂ ಮಹಾರ್ಥಮಮೃತೋಪಮಮ್ ।
ನಿಶಮ್ಯ ಮಾರುತೇಃ ಸರ್ವೇ ಮುದಿತಾ ವಾನರಾ ಭವನ್ ॥
ಅನುವಾದ
‘ಪೂಜ್ಯಳಾದ ಆ ಸೀತಾಮಾತೆಯನ್ನು ಘೋರರೂಪಿಣಿಯರಾದ ರಾಕ್ಷಸಿಯರು ಕಾವಲು ಕಾಯುತ್ತಿದ್ದಾರೆ. ಅವಳ ಕೂದಲುಗಳು ಜಡೆಗಟ್ಟಿ ಒಂದೇ ಜಡೆಯಾಗಿದೆ. ಅನವರತವೂ ಶ್ರೀರಾಮನ ದರ್ಶನಕ್ಕಾಗಿ ಕಾತರಳಾಗಿದ್ದಾಳೆ. ಜಟಾಧಾರಿಯಾದ, ಮಲಿನವಸ್ತ್ರವನ್ನುಟ್ಟಿದ್ದ, ಉಪವಾಸ ವ್ರತಗಳಿಂದ ಕೃಶಕಾಯಳಾದ ಸೀತೆಯನ್ನು ನಾನು ನೋಡಿದೆನು’ ಎಂಬ ಅರ್ಥವತ್ತಾದ, ಅಮೃತೋಪಮವಾದ ಹನುಮಂತನ ಮಾತನ್ನು ಕೇಳಿದ ವಾನರರೆಲ್ಲರೂ ಪರಮಾನಂದಭರಿತರಾದರು.॥39-40॥
ಮೂಲಮ್ - 41
ಕ್ಷ್ವೇಲಂತ್ಯನ್ಯೇ ನದಂತ್ಯನ್ಯೇ ಗರ್ಜಂತ್ಯನ್ಯೇ ಮಹಾಬಲಾಃ ।
ಚಕ್ರುಃ ಕಿಲಿಕಿಲಾಮನ್ಯೇ ಪ್ರತಿಗರ್ಜಂತಿ ಚಾಪರೇ ॥
ಮೂಲಮ್ - 42
ಕೇಚಿದುಚ್ಛ್ರಿತಲಾಂಗೂಲಾಃ ಪ್ರಹೃಷ್ಟಾಃ ಕಪಿಕುಂಜರಾಃ ।
ಅಂಚಿತಾಯತದೀರ್ಘಾಣಿ ಲಾಂಗೂಲಾನಿ ಪ್ರವಿವ್ಯಧುಃ ॥
ಅನುವಾದ
ಅತ್ಯಂತ ಸಂತಸದ ವಾರ್ತೆಯನ್ನು ಕೇಳಿ ಕೆಲವರು ಸಿಂಹನಾದವನ್ನು ಮಾಡಿದರು. ಕೆಲವರು ಜಯಕಾರ ಮಾಡುತ್ತಾ ಕುಣಿದಾಡಿದರು. ಮಹಾಬಲಿಷ್ಠರಾಗಿದ್ದ ಕೆಲವರು ಘರ್ಜಿಸಿದರು. ಕೆಲವರು ಕಲ-ಕಲ ನಿನಾದಗಳನ್ನು ಮಾಡಿದರು. ಕೆಲವರು ಘರ್ಜನೆಗೆ ಪ್ರತಿಘರ್ಜನೆ ಮಾಡಿದರು. ಕೆಲವರು ಬಾಲಗಳನ್ನು ಮೇಲಕ್ಕೆತ್ತಿಕೊಂಡು ಸಂತೋಷದಿಂದ ಕುಣಿದಾಡಿದರು. ಕೆಲವರು ದಪ್ಪವಾಗಿಯೂ, ಉದ್ದವಾಗಿಯೂ ಇದ್ದ ತಮ್ಮ ಬಾಲಗಳನ್ನು ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸಿದರು.॥41-42॥
ಮೂಲಮ್ - 43
ಅಪರೇ ಚ ಹನೂಮಂತಂ ವಾನರಾ ವಾರಣೋಪಮಮ್ ।
ಆಪ್ಲುತ್ಯ ಗಿರಿಶೃಂಗೇಭ್ಯಃ ಸಂಸ್ಪೃಶಂತಿ ಸ್ಮ ಹರ್ಷಿತಾಃ ॥
ಮೂಲಮ್ - 44
ಉಕ್ತವಾಕ್ಯಂ ಹನೂಮಂತಮಂಗದಸ್ತಮಥಾಬ್ರವೀತ್ ।
ಸರ್ವೇಷಾಂ ಹರಿವೀರಾಣಾಂ ಮಧ್ಯೇ ವಾಚಮನುತ್ತಮಾಮ್ ॥
ಅನುವಾದ
ಇನ್ನು ಕೆಲವು ಕಪಿಶ್ರೇಷ್ಠರು ಪರ್ವತ ಶಿಖರಗಳಿಂದ ನೆಗೆದು ಹರ್ಷಿತರಾಗಿ, ಭದ್ರಗಜದಂತೆ ಒಪ್ಪುತ್ತಿದ್ದ ವಾನರಶ್ರೇಷ್ಠನಾದ ಹನುಮಂತನನ್ನು ಅಪ್ಪಿಕೊಂಡರು. ಸೀತೆಯನ್ನು ನೋಡಿದೆ ಎಂಬ ಆನಂದದಾಯಕ ವಾರ್ತೆಯನ್ನು ಹೇಳಿದ ಹನುಮಂತನನ್ನು ಎಲ್ಲರೂ ಪ್ರಶಂಸಿಸಿದರು. ಅಂಗದನು ಆಗ ಎಲ್ಲ ವಾನರರ ಸಮಕ್ಷಮದಲ್ಲಿ ಇಂತೆಂದನು.॥43-44॥
ಮೂಲಮ್ - 45
ಸತ್ತ್ವೇ ವೀರ್ಯೇ ನ ತೇ ಕಶ್ಚಿತ್ ಸಮೋ ವಾನರ ವಿದ್ಯತೇ ।
ಯದವಪ್ಲುತ್ಯ ವಿಸ್ತೀರ್ಣಂ ಸಾಗರಂ ಪುನರಾಗತಃ ॥
ಮೂಲಮ್ - 46
ಜೀವಿತಸ್ಯ ಪ್ರದಾತಾ ನಸ್ತ್ವಮೇಕೋ ವಾನರೋತ್ತಮ ।
ತ್ವತ್ಪ್ರಸಾದಾತ್ ಸಮೇಷ್ಯಾಮಃ ಸಿದ್ಧಾರ್ಥಾ ರಾಘವೇಣ ಹ ॥
ಅನುವಾದ
ಓ ವಾನರಶ್ರೇಷ್ಠನೇ! ಸತ್ತ್ವದಲ್ಲಿ, ವೀರ್ಯದಲ್ಲಿ ನಿನಗೆ ಸಮಾನರಾದವರು ಬೇರೆ ಯಾರೂ ಇಲ್ಲ. ನೂರು ಯೋಜನಗಳ ವಿಸ್ತೀರ್ಣವಾದ ಮಹಾಸಾಗರವನ್ನು ಹಾರಿಕೊಂಡು ಲಂಕೆಗೆ ಹೋಗಿ ಹಿಂದಿರುಗಿ ಬಂದಿರುವೆಯಲ್ಲವೇ? ನೀನೊಬ್ಬನೇ ನಮಗೆ ಜೀವದಾನವನ್ನು ಮಾಡಿರುವವನು. ನಿನ್ನ ಅನುಗ್ರಹದಿಂದಾಗಿ ಕೃತಕೃತ್ಯರಾಗಿರುವ ನಾವುಗಳು ಈಗಲೇ ಶ್ರೀರಾಮನ ಬಳಿಗೆ ಹೋಗೋಣ.॥45-46॥
ಮೂಲಮ್ - 47
ಅಹೋ ಸ್ವಾಮಿನಿ ತೇ ಭಕ್ತಿರಹೋ ವೀರ್ಯಮಹೋ ಧೃತಿಃ ।
ದಿಷ್ಟ್ಯಾ ದೃಷ್ಟಾ ತ್ವಯಾ ದೇವೀ ರಾಮಪತ್ನೀ ಯಶಸ್ವಿನೀ ।
ದಿಷ್ಟ್ಯಾ ತ್ಯಕ್ಷ್ಯತಿ ಕಾಕುತ್ಸ್ಥಃ ಶೋಕಂ ಸೀತಾವಿಯೋಗಜಮ್ ॥
ಅನುವಾದ
ಅಯ್ಯಾ! ನಿನ್ನಲ್ಲಿರುವ ಸ್ವಾಮಿ ಭಕ್ತಿಯು ಅತ್ಯಮೋಘವಾದುದು. ನಿನ್ನಲ್ಲಿರುವ ಪರಾಕ್ರಮ, ಧೈರ್ಯ, ಸಾಹಸಗಳು ಅಚಿಂತ್ಯವಾದುವುಗಳು. ಸಾಧ್ವೀ ಶಿರೋಮಣಿಯಾದ ರಾಮಪತ್ನಿಯಾದ ಸೀತಾದೇವಿಯನ್ನು ನೋಡಿ ಬಂದಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಇಲ್ಲಿ ಜಾನಕಿದೇವಿಯು ಕಳೆದುಹೋದದ್ದರಿಂದ ಉಂಟಾದ ಶ್ರೀರಾಮನ ಶೋಕವು ಈ ವಾರ್ತೆಯನ್ನು ಕೇಳಿ ಪರಿಹಾರವಾಗುವುದು ನಮ್ಮೆಲ್ಲರ ಭಾಗ್ಯಫಲವೇ ಆಗಿದೆ.॥47॥
ಮೂಲಮ್ - 48
ತತೋಂಗದಂ ಹನೂಮಂತಂ ಜಾಂಬವಂತಂ ಚ ವಾನರಾಃ ॥
ಮೂಲಮ್ - 49
ಪರಿವಾರ್ಯ ಪ್ರಮುದಿತಾ ಭೇಜಿರೇ ವಿಪುಲಾಃ ಶಿಲಾಃ ।
ಶ್ರೋತುಕಾಮಾಃ ಸಮುದ್ರಸ್ಯ ಲಂಘನಂ ವಾನರೋತ್ತಮಾಃ ॥
ಮೂಲಮ್ - 50
ದರ್ಶನಂ ಚಾಪಿ ಲಂಕಾಯಾಃ ಸೀತಾಯಾ ರಾವಣಸ್ಯ ಚ ।
ತಸ್ಥುಃ ಪ್ರಾಂಜಲಯಃ ಸರ್ವೇ ಹನುಮದ್ವದನೋನ್ಮುಖಾಃ ॥
ಅನುವಾದ
ಬಳಿಕ ವಾನರರು ಅಂಗದ, ಹನುಮಂತ, ಜಾಂಬವಂತರ ಸುತ್ತಲೂ ಸೇರಿ, ಹೆಚ್ಚಾದ ಸಂತೋಷದಿಂದ ದೊಡ್ಡ-ದೊಡ್ಡ ಬಂಡೆಗಳ ಮೇಲೆ ಆಸೀನರಾದರು. ಹನುಮಂತನು ಸಮುದ್ರವನ್ನು ಲಂಘಿಸಿದುದು, ಲಂಕೆಯಲ್ಲಿ ಹುಡುಕಿದ್ದು, ಸೀತಾ ದೇವಿಯ ದರ್ಶನವಾದುದು, ರಾವಣನಲ್ಲಿ ಮಾತಾಡಿದುದು, ಲಂಕೆಯನ್ನು ಸುಟ್ಟಿದ್ದು ಮುಂತಾದ ವಿಷಯಗಳನ್ನು ಕೇಳುವ ಇಚ್ಛೆಯಿಂದ ಅವರೆಲ್ಲರೂ ಭಕ್ತಿಭಾವದಿಂದ ಹನುಮಂತನಿಗೆ ಎದುರಾಗಿ, ಕೈಜೋಡಿಸಿಕೊಂಡು, ಏಕಾಗ್ರತೆಯಿಂದ ಕಥೆ ಕೇಳಲು ಕಾತುರರಾಗಿದ್ದರು.॥48-50॥
ಮೂಲಮ್ - 51
ತಸ್ಥೌ ತತ್ರಾಂಗದಃ ಶ್ರೀಮಾನ್ ವಾನರೈರ್ಬಹುಭಿರ್ವೃತಃ ।
ಉಪಾಸ್ಯಮಾನೋ ವಿಬುಧೈರ್ದಿವಿ ದೇವಪತಿರ್ಯಥಾ ॥
ಅನುವಾದ
ಶುಭಲಕ್ಷಣ ಸಂಪನ್ನನಾದ ಅಂಗದನು ತನ್ನ ಸುತ್ತಲೂ ಸೇರಿದ ವಾನರರಿಂದ, ಸ್ವರ್ಗದಲ್ಲಿ ದೇವತೆಗಳಿಂದ ಸೇವಿಸಲ್ಪಡುತ್ತಿರುವ ದೇವೇಂದ್ರನಂತೆ, ಸೇವಿತನಾಗಿ ರಾರಾಜಿಸುತ್ತಿದ್ದನು.॥51॥
ಮೂಲಮ್ - 52
ಹನೂಮತಾ ಕೀರ್ತಿಮತಾ ಯಶಸ್ವಿನಾ
ತಥಾಂಗದೇನಾಂಗದಬದ್ಧ ಬಾಹುನಾ ।
ಮುದಾ ತದಾಭ್ಯಾಸಿತಮುನ್ನತಂ ಮಹನ್
ಮಹೀಧರಾಗ್ರಂ ಜ್ವಲಿತಂ ಶ್ರಿಯಾಭವತ್ ॥
ಅನುವಾದ
ಬುದ್ಧಿಶಾಲಿಯೂ, ಕೀರ್ತಿವಂತನೂ, ಮಹಾಪರಾಕ್ರಮಿಯೂ ಆಗಿದ್ದ ಹನುಮಂತನಿಂದಲೂ, ಭುಜಕೀರ್ತಿಗಳಿಂದ ಶೋಭಿತನಾದ ಅಂಗದನಿಂದಲೂ, ಸಂತಸದಿಂದ ಆಶ್ರಯಿಸಲ್ಪಟ್ಟ ಆ ಮಹೇಂದ್ರಪರ್ವತದ ಶಿಖರವು ಅನುಪಮವಾದ ಕಾಂತಿಯಿಂದ ಬೆಳಗುತ್ತಿದ್ದಿತು.॥52॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಸಪ್ತಪಂಚಾಶಃ ಸರ್ಗಃ ॥ 57 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತೇಳನೆಯ ಸರ್ಗವು ಮುಗಿಯಿತು.