०५६ हनुमता पुनरशोकवनगमनम्

वाचनम्
ಭಾಗಸೂಚನಾ

ಹನುಮಂತನು ಸೀತೆಯನ್ನು ಸಂದರ್ಶಿಸಿ ಕಿಷ್ಕಿಂಧೆಗೆ ಹಿಂದಿರುಗಿದುದು

ಮೂಲಮ್ - 1

ತತಸ್ತಾಂ ಶಿಂಶಪಾಮೂಲೇ ಜಾನಕೀಂ ಪರ್ಯವಸ್ಥಿತಾಮ್ ।
ಅಭಿವಾದ್ಯಾಬ್ರವೀದ್ಧಿಷ್ಟ್ಯಾ ಪಶ್ಯಾಮಿ ತ್ವಾಮಿಹಾಕ್ಷತಾಮ್ ॥

ಅನುವಾದ

ಬಳಿಕ ಹನುಮಂತನು ಶಿಂಶುಪಾವೃಕ್ಷದ ಬುಡದಲ್ಲಿ ಕುಳಿತಿದ್ದ ಜಾನಕಿಯ ಬಳಿಗೆ ಬಂದು ಪಾದಾಭಿವಂದನೆಯನ್ನು ಗೈದು - ಅಮ್ಮಾ! ದೈವಾನುಗ್ರಹದಿಂದ ಯಾವುದೇ ಅಪಾಯಕ್ಕೂ ಗುರಿಯಾಗದೆ ಕ್ಷೇಮವಾಗಿರುವ ನಿನ್ನನ್ನು ನೋಡುತ್ತಿದ್ದೇನೆ ಎಂದು ಹೊರಡಲನುವಾದನು.॥1॥

ಮೂಲಮ್ - 2

ತತಸ್ತಂ ಪ್ರಸ್ಥಿತಂ ಸೀತಾ ವೀಕ್ಷಮಾಣಾ ಪುನಃ ಪುನಃ ।
ಭರ್ತೃಸ್ನೇಹಾನ್ವಿತಂ ವಾಕ್ಯಂ ಹನೂಮಂತಮಭಾಷತ ॥

ಅನುವಾದ

ಹಾಗೆ ಹೊರಟುನಿಂತ ಹನುಮಂತನನ್ನು ಸೀತೆಯು ವಾತ್ಸಲ್ಯಪೂರ್ಣವಾದ ದೃಷ್ಟಿಯಿಂದ ಅಡಿಗಡಿಗೂ ನೋಡುತ್ತಾ ಪತಿಪ್ರೇಮ ಸೂಚಕವಾದ ಮಾತನ್ನು ಇಂತೆಂದಳು -॥2॥

ಮೂಲಮ್ - 3

ಕಾಮಮಸ್ಯ ತ್ವಮೇವೈಕಃ ಕಾರ್ಯಸ್ಯ ಪರಿಸಾಧನೇ ।
ಪರ್ಯಾಪ್ತಃ ಪರವೀರಘ್ನ ಯಶಸ್ಯಸ್ತೇ ಬಲೋದಯಃ ॥

ಅನುವಾದ

ಶತ್ರುಸಂಹಾರಕಾ! ನೀನೊಬ್ಬನೇ ಈ ಎಲ್ಲ ರಾಕ್ಷಸರನ್ನು ಸಂಹರಿಸಿ, ನನ್ನನ್ನು ವಿಮೋಚನೆಗೊಳಿಸಲು ಸಮರ್ಥನಾಗಿರುವೆ. ಇದರಿಂದ ಕೀರ್ತಿ ಪ್ರತಿಷ್ಠೆಗಳು ನಿನಗೇ ಸಿಗಬಹುದು. ಆದರೆ ಶ್ರೀರಾಮನಿಗೆ ಲಭಿಸಲಾರವು.॥3॥

ಮೂಲಮ್ - 4

ಶರೈಃ ಸುಸಂಕುಲಾಂ ಕೃತ್ವಾ ಲಂಕಾಂ ಪರಬಲಾರ್ದನಃ ।
ಮಾಂ ನಯೇದ್ಯದಿ ಕಾಕುತ್ಥಃ ತತ್ತಸ್ಯ ಸದೃಶಂ ಭವೇತ್ ॥

ಅನುವಾದ

ಅರಿವೀರ ಭಯಂಕರನಾದ ಶ್ರೀರಾಮನು ತನ್ನ ಬಾಣಗಳಿಂದ ಲಂಕೆಯನ್ನು ಅಲ್ಲೋಲ-ಕಲ್ಲೋಲವಾಗಿಸಿ, ನನ್ನನ್ನು ಕರೆದುಕೊಂಡು ಹೋದರೆ ಅದೇ ಅವನ ಪರಾಕ್ರಮಕ್ಕೆ ತಕ್ಕುದಾದುದು.॥4॥

ಮೂಲಮ್ - 5

ತದ್ಯಥಾ ತಸ್ಯ ವಿಕ್ರಾಂತಮನುರೂಪಂ ಮಹಾತ್ಮನಃ ।
ಭವೇದಾಹವಶೂರಸ್ಯ ತಥಾ ತ್ವಮುಪಪಾದಯ ॥

ಅನುವಾದ

ರಣಧೀರನಾದ, ಮಹಾತ್ಮನಾದ ಶ್ರೀರಾಮನ ಪರಾಕ್ರಮಕ್ಕೆ ಯೋಗ್ಯವಾದ ಕಾರ್ಯ ವಿಧಾನವನ್ನು ನೀನು ರೂಪಿಸಬೇಕು.

ಮೂಲಮ್ - 6

ತದರ್ಥೋಪಹಿತಂ ವಾಕ್ಯಂ ಪ್ರಶ್ರಿತಂ ಹೇತುಸಂಹಿತಮ್ ।
ನಿಶಮ್ಯ ಹನುಮಾಂಸ್ತಸ್ಯಾ ವಾಕ್ಯಮುತ್ತರಮಬ್ರವೀತ್ ॥

ಅನುವಾದ

ಅರ್ಥವತ್ತಾದ, ಸ್ನೇಹಯುಕ್ತವಾದ ಹಾಗೂ ಯುಕ್ತಿಯುಕ್ತವಾದ ಸೀತಾದೇವಿಯ ಮಾತುಗಳನ್ನು ಕೇಳಿ ಹನುಮಂತನು ಸಮಾಧಾನಕರವಾದ ಉತ್ತರವನ್ನು ನೀಡಿದನು.॥6॥

ಮೂಲಮ್ - 7

ಕ್ಷಿಪ್ರಮೇಷ್ಯತಿ ಕಾಕುತ್ಸ್ಥೋಹರ್ಯೃಕ್ಷಪ್ರವರೈರ್ವೃತಃ ।
ಯಸ್ತೇ ಯುಧಿ ವಿಜಿತ್ಯಾರೀನ್ ಶೋಕಂ ವ್ಯಪನಯಿಷ್ಯತಿ ॥

ಅನುವಾದ

ತಾಯೇ! ಕಪಿ-ಕರಡಿಗಳ ಸೈನ್ಯಕ್ಕೆ ಅಧಿಪತಿಯಾಗಿರುವ, ಹಾರುವವರಲ್ಲಿ ಶ್ರೇಷ್ಠನಾದ, ಸತ್ತ್ವಸಂಪನ್ನನಾದ ಸುಗ್ರೀವನು ನಿನ್ನ ವಿಮೋಚನೆಯ ಸಲುವಾಗಿ ದೃಢಪ್ರತಿಜ್ಞನಾಗಿರುವನು.॥7॥

ಮೂಲಮ್ - 8

ಏವಮಾಶ್ವಾಸ್ಯ ವೈದೇಹೀಂ ಹನುಮಾನ್ ಮಾರುತಾತ್ಮಜಃ ।
ಗಮನಾಯ ಮತಿಂ ಕೃತ್ವಾ ವೈದೇಹೀಮಭ್ಯವಾದಯತ್ ॥

ಅನುವಾದ

ವಾಯುಪುತ್ರನಾದ ಹನುಮಂತನು ಹೀಗೆ ಹೇಳಿ ವೈದೇಹಿಯನ್ನು ಸಮಾಧಾನಗೊಳಿಸಿ* ಹೊರಡಲು ಸಿದ್ಧನಾಗಿ ಪುನಃ ಸೀತೆಗೆ ಅಭಿವಾದನವನ್ನು ಮಾಡಿದನು.॥8॥

ಟಿಪ್ಪನೀ
  • ಇಲ್ಲಿ ಶೋಕಾಕುಲೆಯಾದ ಸೀತಾದೇವಿಯನ್ನು ಸಮಾಧಾನಗೊಳಿಸಿ, ಅಲ್ಲಿ ವಿರಹಾತುರನಾದ ಶ್ರೀರಾಮನಿಗೆ ಸಮಾಧಾನಗೊಳಿಸುವ ಹನುಮಂತನು ನಿಜವಾಗಿ ಧನ್ಯಾತ್ಮನೇ ಸರಿ.
ಮೂಲಮ್ - 9

ತತಃ ಸ ಕಪಿಶಾರ್ದೂಲಃ ಸ್ವಾಮಿಸಂದರ್ಶನೋತ್ಸು ಕಃ ।
ಆರುರೋಹ ಗಿರಿಶ್ರೇಷ್ಠಮರಿಷ್ಟಮರಿಮರ್ದನಃ ॥

ಅನುವಾದ

ವೈದೇಹಿಯನ್ನು ನಮಸ್ಕರಿಸಿ, ಬಳಿಕ ಶ್ರೀರಾಮನ ದರ್ಶನಕ್ಕಾಗಿ ಕುತೂಹಲಿಯಾಗಿದ್ದ ಹನುಮಂತನು ಪುನಃ ಸಮುದ್ರದ ಮೇಲ್ಭಾಗದಿಂದ ಹಿಂದಿರುಗಲು ನಿಶ್ಚಯಿಸಿದನು. ಶತ್ರುಸೂದನಾದ ಹನುಮಂತನು ಅರಿಷ್ಟವೆಂಬ ಪರ್ವತವನ್ನು ಹತ್ತಿದನು. ॥9॥

ಮೂಲಮ್ - 10

ತುಂಗಪದ್ಮಕಜುಷ್ಟಾಭಿರ್ನೀಲಾಭಿರ್ವನರಾಜಿಭಿಃ ।
ಸೋತ್ತರೀಯಮಿವಾಂಭೋದೈಃ ಶೃಂಗಾಂತರವಿಲಂಬಿಭಿಃ ॥

ಅನುವಾದ

ಆ ಪರ್ವತವು ಎತ್ತರವಾದ ಪದ್ಮಕವೆಂಬ ವೃಕ್ಷಗಳಿಂದ ಕೂಡಿದ್ದು, ನೀಲವರ್ಣದ ವನಶ್ರೀಯಿಂದ ಶೋಭಿಸುತ್ತಿತ್ತು. ಅದರ ಶಿಖರಗಳ ನಡುವೆ ಜೋಲಾಡುತ್ತಿದ್ದ ಮೇಘಗಳಿಂದ ಅದು ಉತ್ತರೀಯವನ್ನು ಹೊದ್ದುಕೊಂಡಿದೆಯೋ ಎಂಬಂತೆ ಕಾಣುತ್ತಿತ್ತು.॥10॥

ಮೂಲಮ್ - 11

ಬೋಧ್ಯಮಾನಮಿವ ಪ್ರೀತ್ಯಾ ದಿವಾಕರಕರೈಃ ಶುಭೈಃ ।
ಉನ್ಮಿಷಂತಮಿವೋದ್ಧೂತೈರ್ಲೋಚನೈರಿವ ಧಾತುಭಿಃ ॥

ಅನುವಾದ

ಆ ಪರ್ವತದಲ್ಲಿ ಬಿದ್ದಿರುವ ಸೂರ್ಯರಶ್ಮಿಗಳು ಮಲಗಿದವನನ್ನು ಎಚ್ಚರಿಸುತ್ತಿರುವಂತೆ ಪರ್ವತವನ್ನು ಎಚ್ಚರಗೊಳಿಸುತ್ತಿತ್ತೊ ಎಂಬಂತಿತ್ತು. ಆ ಪರ್ವತದಲ್ಲಿ ಹೊಳೆಯುತ್ತಿದ್ದ ಗೈರಿಕಾದಿ ಧಾತುಗಳು, ಅದು ಕಣ್ಣುತೆರೆದು ನೋಡುತ್ತಿದೆಯೋ ಎಂಬಂತಿತ್ತು. ॥11॥

ಮೂಲಮ್ - 12

ತೋಯೌಘನಿಃಸ್ವನೈರ್ಮಂದ್ರೈಃ ಪ್ರಾಧೀತಮಿವ ಪರ್ವತಮ್ ।
ಪ್ರಗೀತಮಿವ ವಿಸ್ಪಷ್ಟೈರ್ನಾನಾಪ್ರಸ್ರವಣಸ್ವನೈಃ ॥

ಅನುವಾದ

ಅಲ್ಲಿದ್ದ ಚಿಲುಮೆಗಳಿಂದ ಹೊರಬರುತ್ತಿದ್ದ ಇಂಪಾದ ನಿನಾದವು ಪರ್ವತವೇನಾದರೂ ಗಾಯನಮಾಡುತ್ತಿದೆಯೋ ಎಂಬಂತಿತ್ತು. ॥12॥

ಮೂಲಮ್ - 13

ದೇವದಾರುಭಿರತ್ಯುಚ್ಚೆರೂರ್ಧ್ವಬಾಹುಮಿವ ಸ್ಥಿತಮ್ ।
ಪ್ರಪಾತಜಲನಿರ್ಘೋಷೈಃ ಪ್ರಾಕ್ರುಷ್ಟಮಿವ ಸರ್ವತಃ ॥

ಅನುವಾದ

ಎತ್ತರವಾಗಿ ಬೆಳೆದಿದ್ದ ದೇವದಾರು ವೃಕ್ಷಗಳಿಂದ, ಆ ಪರ್ವತವು ಕೈಗಳೆತ್ತಿ ತಪಸ್ಸು ಮಾಡುವಂತಿದ್ದ ಮುನಿಯಂತೆ ಕಾಣುತ್ತಿತ್ತು. ಅಲ್ಲಿದ್ದ ದೊಡ್ಡ-ದೊಡ್ಡ ಜಲಪಾತಗಳ ಭೋರ್ಗರೆಯುವ ಶಬ್ದಗಳನ್ನು ಕೇಳಿದರೆ, ಆ ಪರ್ವತವು ಗಟ್ಟಿಯಾಗಿ ಅರಚುತ್ತಿದೆಯೋ ಎಂಬಂತಿತ್ತು.॥13॥

ಮೂಲಮ್ - 14

ವೇಪಮಾನಮಿವ ಶ್ಯಾಮೈಃ ಕಂಪಮಾನೈಃ ಶರದ್ವನೈಃ ।
ವೇಣುಭಿರ್ಮಾರುತೋದ್ಧೂತೈಃ ಕೂಜಂತಮಿವ ಕೀಚಕೈಃ ॥

ಅನುವಾದ

ಪರ್ವತ ಸುತ್ತಲೂ ಶ್ಯಾಮಲ ವರ್ಣದ ಶರತ್ಕಾಲದಲ್ಲಿ ಸೊಂಪಾಗಿ ಬೆಳೆದಿದ್ದ ವನಗಳಿದ್ದವು. ಗಾಳಿಗೆ ಆ ವೃಕ್ಷಗಳು ಅಲುಗಾಡುತ್ತಿರುವಾಗ ಪರ್ವತವೇ ಕಂಪಿಸುತ್ತಿದೆ ಎಂಬಂತಿತ್ತು. ಪರ್ವತದಲ್ಲಿದ್ದ ಬಿದಿರಿನ ಮೇಳಿಗಳಿದ್ದು ಗಾಳಿಯಿಂದ ಅದರಿಂದ ಉಂಟಾದ ಧ್ವನಿಯು, ವೇಣುವಾದನ ಮಾಡುತ್ತಿದೆಯೋ ಎಂಬಂತಿತ್ತು.॥14॥

ಮೂಲಮ್ - 15

ನಿಃಶ್ಚಸಂತಮಿವಾಮರ್ಷಾದ್ಘೋರೈರಾಶೀವಿಷೋತ್ತಮೈಃ ।
ನೀಹಾರಕೃತಗಂಭೀರೈರ್ಧ್ಯಾಯಂತಮಿವ ಗಹ್ವರೈಃ ॥

ಅನುವಾದ

ಭಯಂಕರವಾದ ವಿಷಸರ್ಪಗಳು ಬುಸುಗುಟ್ಟುವುದನ್ನು ನೋಡಿದರೆ ಆ ಪರ್ವತವು ಕೋಪದಿಂದ ನಿಟ್ಟುಸಿರುಬಿಡುತ್ತಿದೆಯೋ ಎಂಬಂತಿತ್ತು. ಮಂಜಿನಿಂದ ಆವೃತವಾದ ಗಂಭೀರವಾದ ಗುಹೆಗಳಿಂದ ಅದು ಇಂದ್ರಿಯ ನಿಗ್ರಹಗೈದು ಧ್ಯಾನಮಗ್ನನಾದ ಮುನಿಯಂತೆ ಇತ್ತು.॥15॥

ಮೂಲಮ್ - 16

ಮೇಘಪಾದನಿಭೈಃ ಪಾದೈಃ ಪ್ರಕ್ರಾಂತಮಿವ ಸರ್ವತಃ ।
ಜೃಂಭಮಾಣಮಿವಾಕಾಶೇ ಶಿಖರೈರಭ್ರಶಾಲಿಭಿಃ ॥

ಅನುವಾದ

ಮೇಘಗಳ ಖಂಡಗಳಂತೆ ಕಾಣುತ್ತಿದ್ದ ಸಣ್ಣ-ಸಣ್ಣ ಶಿಖರಗಳಿಂದ ಆವೃತವಾಗಿದ್ದ ಆ ಪರ್ವತವು ಪ್ರಯಾಣ ಹೊರಟಿರುವಂತೆಯೇ ಕಾಣುತ್ತಿತ್ತು. ಮೇಘ-ಮಾಲೆಗಳನ್ನು ಧರಿಸಿದ್ದ ಶಿಖರಗಳಿಂದ ಕೂಡಿದ್ದ ಪರ್ವತವು ಆಕಳಿಸುತ್ತಾ ಮೈಮುರಿಯುತ್ತಿದೆಯೋ ಎಂಬಂತೆ ಕಾಣುತ್ತಿತ್ತು.॥16॥

ಮೂಲಮ್ - 17

ಕೂಟೈಶ್ಚ ಬಹುಧಾಕೀರ್ಣೈಃ ಶೋಭಿತಂ ಬಹುಕಂದರೈಃ ।
ಸಾಲತಾಲಾಶ್ವಕರ್ಣೈಶ್ಚ ವಂಶೈಶ್ಚ ಬಹುಭಿರ್ವೃತಮ್ ॥

ಅನುವಾದ

ಆ ಪರ್ವತವು ಅನೇಕ ಶಿಖರಗಳಿಂದ, ಗುಹೆಗಳಿಂದ ಶೋಭಿಸುತ್ತಿತ್ತು. ಅದು ಸಾಲವೃಕ್ಷಗಳಿಂದಲೂ, ತಾಳೆಮರಗಳಿಂದಲೂ, ಬಿಳಿಮತ್ತೀ ಮರಗಳಿಂದಲೂ, ಬಿದಿರು ಮೆಳೆಗಳಿಂದಲೂ, ವ್ಯಾಪ್ತವಾಗಿತ್ತು.॥17॥

ಮೂಲಮ್ - 18

ಲತಾವಿತಾನೈರ್ವಿತತೈಃ ಪುಷ್ಪವದ್ಭಿರಲಂಕೃತಮ್ ।
ನಾನಾಮೃಗಗಣಾಕೀರ್ಣಂ ಧಾತುನಿಷ್ಯಂದಭೂಷಿತಮ್ ।
ಬಹುಪ್ರಸ್ರವಣೋಪೇತಂ ಶಿಲಾಸಂಚಯಸಂಕಟಮ್ ॥

ಅನುವಾದ

ಎಲ್ಲ ಕಡೆಗಳಲ್ಲಿ ಪುಷ್ಪಲತೆಗಳಿಂದ ಸಮಲಂಕೃತವಾಗಿತ್ತು. ಆ ಗಿರಿಯು ವಿವಿಧ ಮೃಗಗಳ ಗುಂಪುಗಳಿಂದಲೂ, ಗೈರಿಕಾದಿ ಧಾತುಗಳ ಸ್ರಾವದಿಂದ ಒಪ್ಪುತ್ತಿತ್ತು. ಅಲ್ಲಲ್ಲಿ ಅನೇಕ ಜಲಪಾತಗಳಿಂದ ಶೋಭಿಸಸುತ್ತಿದ್ದು, ರಾಶಿ-ರಾಶಿ ಬಿದ್ದಿದ್ದ ಕಲ್ಲುಬಂಡೆಗಳಿಂದ ಕೂಡಿತ್ತು.॥18॥

ಮೂಲಮ್ - 19

ಮಹರ್ಷಿಯಕ್ಷಗಂಧರ್ವಕಿಂನರೋರಗಸೇವಿತಮ್ ।
ಲತಾಪಾದಪಸಂಬಾಧಂ ಸಿಂಹಾಧ್ಯುಷಿತಕಂದರಮ್ ॥

ಅನುವಾದ

ಮಹರ್ಷಿಗಳಿಂದ, ಯಕ್ಷರಿಂದ, ಗಂಧರ್ವ-ಕಿನ್ನರ-ನಾಗ ಇವರುಗಳಿಂದ ಅದು ಸೇವಿಸಲ್ಪಡುತ್ತಿತ್ತು. ಲತಾವೃಕ್ಷಗಳ ಸಮುದಾಯಗಳಿಂದ ಶೋಭಿಸುತ್ತಿತ್ತು. ಆ ಪರ್ವತದ ಗುಹೆಗಳಲ್ಲಿ ಸಿಂಹಗಳು ವಾಸವಾಗಿದ್ದವು.॥19॥

ಮೂಲಮ್ - 20

ವ್ಯಾಘ್ರಸಂಘಸಮಾಕೀರ್ಣಂ ಸ್ವಾದುಮೂಲಫಲದ್ರುಮಮ್ ॥

ಅನುವಾದ

ದೊಡ್ಡದಾದ ಹುಲಿಗಳ ಗುಂಪಿನಿಂದ ಅದು ಕೂಡಿದ್ದಿತು. ರುಚಿಕರವಾದ ಗೆಡ್ಡೆ-ಗೆಣಸುಗಳೂ, ಫಲ ವೃಕ್ಷಗಳೂ ಇದ್ದವು. ॥20॥

ಮೂಲಮ್ - 21

ತಮಾರು ರೋಹ ಹನುಮಾನ್ ಪರ್ವತಂ ಪ್ಲವಗೋತ್ತಮಃ ।
ರಾಮದರ್ಶನಶೀಘ್ರೇಣ ಪ್ರಹರ್ಷೇಣಾಭಿಚೋದಿತಃ ॥

ಅನುವಾದ

ಸೀತಾದರ್ಶನ ಶುಭವಾರ್ತೆಯನ್ನು, ಅವಳ ಸಂದೇಶವನ್ನು ಶ್ರೀರಾಮನಿಗೆ ಮುಟ್ಟಿಸಲು ಆತುರನಾದ ವಾಯುನಂದನ ಹನುಮಂತನು ಆ ಅರಿಷ್ಟ ಗಿರಿಯನ್ನು ಹತ್ತಿದನು.॥21॥

ಮೂಲಮ್ - 22

ತೇನ ಪಾದತಲಾಕ್ರಾಂತಾ ರಮ್ಯೇಷು ಗಿರಿಸಾನುಷು ।
ಸಘೋಷಾಃ ಸಮಶೀರ್ಯಂತ ಶಿಲಾಶ್ಚೂರ್ಣೀಕೃತಾಸ್ತತಃ ॥

ಅನುವಾದ

ರಮ್ಯವಾದ ಆ ಪರ್ವತ ಶಿಖರದಲ್ಲಿ ಮಾರುತಿಯು ತನ್ನ ಕಾಲನ್ನಿಟ್ಟಾಕ್ಷಣವೇ ಅಲ್ಲಿದ್ದ ದೊಡ್ಡ ಬಂಡೆಕಲ್ಲುಗಳು ಚಟ-ಚಟಾ ಎಂಬ ಭಾರೀ ಶಬ್ದಗಳನ್ನು ಮಾಡುತ್ತಾ ನುಚ್ಚು-ನೂರಾಗಿ ಹೋದುವು.॥22॥

ಮೂಲಮ್ - 23

ಸ ತಮಾರುಹ್ಯ ಶೈಲೇಂದ್ರಂ ವ್ಯವರ್ಧತ ಮಹಾಕಪಿಃ ।
ದಕ್ಷಿಣಾದುತ್ತರಂ ಪಾರಂ ಪ್ರಾರ್ಥಯನ್ ಲವಣಾಂಭಸಃ ॥

ಅನುವಾದ

ವೀರನಾದ ಆ ವಾಯುನಂದನನು ಪರ್ವತವನ್ನು ಹತ್ತಿದ ಬಳಿಕ, ದಕ್ಷಿಣ ದಿಕ್ಕಿನಿಂದ ಉತ್ತರಕ್ಕೆ ಹೋಗಲು ಬಯಸಿ ತನ್ನ ಶರೀರವನ್ನು ಬೃಹದಾಕಾರವಾಗಿ ಬೆಳೆಸಿದನು.॥23॥

ಮೂಲಮ್ - 24

ಅಧಿರುಹ್ಯ ತತೋ ವೀರಃ ಪರ್ವತಂ ಪವನಾತ್ಮಜಃ ।
ದದರ್ಶ ಸಾಗರಂ ಭೀಮಂ ಮೀನೋರಗನಿಷೇವಿತಮ್ ॥

ಅನುವಾದ

ಪರ್ವತದಲ್ಲಿ ಹತ್ತಿನಿಂದ ಮಾರುತಿಯು ಇದಿರ್ಗಡೆ ಇರುವ ಮೀನುಗಳಿಂದಲೂ, ಸರ್ಪಗಳಿಂದಲೂ ಕೂಡಿದ ಭಯಂಕರವಾದ ಸಮುದ್ರವನ್ನು ನೋಡಿದನು.॥24॥

ಮೂಲಮ್ - 25

ಸ ಮಾರುತ ಇವಾಕಾಶಂ ಮಾರುತಸ್ಯಾತ್ಮಸಂಭವಃ ।
ಪ್ರಪೇದೇ ಹರಿಶಾರ್ದೂಲೋ ದಕ್ಷಿಣಾದುತ್ತರಾಂ ದಿಶಮ್ ॥

ಅನುವಾದ

ವಾಯುಸುತನಾದ ಆ ಕಪಿವರನು ಆಕಾಶಮಾರ್ಗವಾಗಿ ದಕ್ಷಿಣದಿಂದ ಉತ್ತರಕ್ಕೆ ವಾಯುವೇಗದಿಂದ ಹೊರಟನು.॥25॥

ಮೂಲಮ್ - 26

ಸ ತದಾ ಪೀಡಿತಸ್ತೇನ ಕಪಿನಾ ಪರ್ವತೋತ್ತಮಃ ।
ರರಾಸ ಸಹ ತೈರ್ಭೂತೈಃ ಪ್ರವಿಶನ್ ವಸುಧಾತಲಮ್ ।
ಕಂಪಮಾನೈಶ್ಚ ಶಿಖರೈಃ ಪತದ್ಭಿರಪಿ ಚ ದ್ರುಮೈಃ ॥

ಅನುವಾದ

ಆಗ ಆ ಅರಿಷ್ಟಾದ್ರಿಯು, ಹನುಮಂತನ ಪಾದಾಘಾತದಿಂದಾಗಿ ಅಲ್ಲಿದ್ದ ವಿಧ-ವಿಧವಾದ ಪ್ರಾಣಿಗಳೊಡನೆ ಆ ಪರ್ವತವು ಬೊಬ್ಬಿರಿಯುತ್ತಾ ಭೂಮಿಯೊಳಗೆ ಸೇರಿಹೋಯಿತು. ಅಲ್ಲಾಡುತ್ತಿದ್ದ ಶಿಖರಗಳಿಂದಲೂ, ಬುಡಮೇಲಾಗಿ ಬೀಳುತ್ತಿದ್ದ ಮಹಾವೃಕ್ಷಗಳಿಂದಲೂ, ಭಾರೀ ಶಬ್ದಮಾಡುತ್ತಾ ಆ ಪರ್ವತವು ಭೂಮಿ ಸಮವಾಯಿತು.॥26॥

ಮೂಲಮ್ - 27

ತಸ್ಯೋರುವೇಗೋನ್ಮಥಿತಾಃ ಪಾದಪಾಃ ಪುಷ್ಪಶಾಲಿನಃ ।
ನಿಪೇತುರ್ಭೂತಲೇ ರುಗ್ಣಾಃ ಶಕ್ರಾಯುಧಹತಾ ಇವ ॥

ಅನುವಾದ

ಹನುಮಂತನ ಭಾರೀ ವೇಗದಿಂದಾಗಿ ವಿನಾಶಗೊಂಡ ಪುಷ್ಪಯುಕ್ತ ವೃಕ್ಷಗಳು, ಇಂದ್ರನ ವಜ್ರಾಯುಧದಿಂದ ತುಂಡರಿಸಲ್ಪಟ್ಟು ಕೆಳಗೆ ಬೀಳುವ ಪರ್ವತಗಳಂತೆ ಕೆಳಗುರುಳಿದವು.॥27॥

ಮೂಲಮ್ - 28

ಕಂದರೋದರಸಂಸ್ಥಾನಾಂ ಪೀಡಿತಾನಾಂ ಮಹೌಜಸಾಮ್ ।
ಸಿಂಹಾನಾಂ ನಿನದೋ ಭೀಮೋ ನಭೋ ಭಿಂದನ್ ಹಿ ಶುಶ್ರುವೇ ॥

ಅನುವಾದ

ಆ ಪರ್ವತದ ಗುಹೆಗಳಲ್ಲಿ ವಾಸವಾಗಿದ್ದ ಮಹಾಪರಾಕ್ರಮವುಳ್ಳ ಸಿಂಹಗಳು, ಹನುಮಂತನ ಪದತಲ ಸಂಘಟನದಿಂದ ಪೀಡಿಸಲ್ಪಟ್ಟು, ಮಾಡಿದ ಘೋರನಿನಾದವು ಆಕಾಶವನ್ನೇ ಸೀಳಿಬಿಡುವುದೋ ಎಂಬಂತೆ ಕೇಳಿಸುತ್ತಿತ್ತು.॥28॥

ಮೂಲಮ್ - 29

ಸ್ರಸ್ತವ್ಯಾವಿದ್ಧವಸನಾ ವ್ಯಾಕುಲೀಕೃತಭೂಷಣಾಃ ।
ವಿದ್ಯಾಧರ್ಯಃ ಸಮುತ್ಪೇತುಃ ಸಹಸಾ ಧರಣೀಧರಾತ್ ॥

ಅನುವಾದ

ಅಂತಹ ಘೋರವಾದ ಶಬ್ದದಿಂದ ಭಯಗೊಂಡು, ಅಸ್ತವ್ಯಸ್ತವಾಗಿದ್ದ ವಸ್ತ್ರಗಳಿಂದ, ಚದುರಿಹೋದ ಆಭರಣಗಳಿಂದ ಕೂಡಿದ್ದ ವಿದ್ಯಾಧರ ಸ್ತ್ರೀಯರು ಒಡನೆಯೇ ಪರ್ವತದಿಂದ ಮೇಲಕ್ಕೆ ಹಾರಿಹೋದರು.॥29॥

ಮೂಲಮ್ - 30

ಅತಿಪ್ರಮಾಣಾ ಬಲಿನೋ ದೀಪ್ತಜಿಹ್ವಾ ಮಹಾವಿಷಾಃ ।
ನಿಪೀಡಿತಶಿರೋಗ್ರೀವಾ ವ್ಯವೇಷ್ಟಂತ ಮಹಾಹಯಃ ॥

ಅನುವಾದ

ಭಾರೀ ಗಾತ್ರವುಳ್ಳ, ಬಲಿಷ್ಠವಾಗಿದ್ದ, ಥಳಥಳಿಸುತ್ತಿದ್ದ ನಾಲಿಗೆಗಳನ್ನೂ, ಮಹಾವಿಷವನ್ನು ಹೊಂದಿದ್ದ ಮಹಾಸರ್ಪಗಳು, ಜಜ್ಜಿಹೋದ ತಲೆಗಳಿಂದ ಕೂಡಿ ಸಂಕಟಪಡುತ್ತಿದ್ದು ಹೊರಳಾಡುತ್ತಿದ್ದವು.॥30॥

ಮೂಲಮ್ - 31

ಕಿನ್ನರೋರಗಗಂಧರ್ವಯಕ್ಷವಿದ್ಯಾಧರಾಸ್ತದಾ ।
ಪೀಡಿತಂ ತಂ ನಗವರಂ ತ್ಯಕ್ತ್ವಾ ಗಗನಮಾಸ್ಥಿತಾಃ ॥

ಅನುವಾದ

ಅಲ್ಲಿ ವಾಸಮಾಡುತ್ತಿದ್ದ ಕಿನ್ನರರೂ, ಉರಗರು, ಗಂಧವರ್ವರೂ, ಯಕ್ಷ, ವಿದ್ಯಾಧರರೆಲ್ಲರೂ ಹನುಮಂತನ ಹೆಜ್ಜೆಯ ತುಳಿತದಿಂದ ಪೀಡಿಸಲ್ಪಟ್ಟ ಪರ್ವತವನ್ನು ತ್ಯಜಿಸಿ ಆಕಾಶವನ್ನು ಸೇರಿದರು.॥31॥

ಮೂಲಮ್ - 32

ಸ ಚ ಭೂಮಿಧರಃ ಶ್ರೀಮಾನ್ ಬಲಿನಾ ತೇನ ಪೀಡಿತಃ ।
ಸವೃಕ್ಷಶಿಖರೋದಗ್ರಃ ಪ್ರವಿವೇಶ ರಸಾತಲಮ್ ॥

ಅನುವಾದ

ಮಹಾಬಲಶಾಲಿಯಾದ ಹನುಮಂತನ ಪಾದಾಘಾತದಿಂದ ಆ ಮಹಾಪರ್ವತವು ದೊಡ್ಡ ವೃಕ್ಷಗಳೊಂದಿಗೆ, ಎತ್ತರವಾದ ಶಿಖರಗಳೊಂದಿಗೆ ರಸಾತಳಕ್ಕೆ ಸೇರಿಹೋಯಿತು.॥32॥

ಮೂಲಮ್ - 33

ದಶಯೋಜನವಿಸ್ತಾರಸ್ತ್ರಿಂಶದ್ಯೋಜನಮುಚ್ಛ್ರಿತಃ ।
ಧರಣ್ಯಾಂ ಸಮತಾಂ ಯಾತಃ ಸ ಬಭೂವ ಧರಾಧರಃ ॥

ಅನುವಾದ

ಹತ್ತು ಯೋಜನೆಗಳಷ್ಟು ವಿಸ್ತಾರವಾಗಿಯೂ, ಮೂವತ್ತು ಯೋಜನೆಗಳು ಎತ್ತರವಾಗಿದ್ದ ಆ ಅರಿಷ್ಟಪರ್ವತವು ಪಾತಾಳಕ್ಕೆ ಕುಸಿದು ನೆಲಸಮವಾಯಿತು.॥33॥

ಮೂಲಮ್ - 34

ಸ ಲಿಲಂಘಯಿಷುರ್ಭೀಮಂ ಸಲೀಲಂ ಲವಣಾರ್ಣವಮ್ ।
ಕಲ್ಲೋಲಾಸ್ಫಾಲವೇಲಾಂತಮುತ್ಪಪಾತ ನಭೋ ಹರಿಃ ॥

ಅನುವಾದ

ತೀರಗಳನ್ನು ತನ್ನ ತರಂಗಗಳಿಂದ ಸತತವಾಗಿ ಬಡಿಯುತ್ತಾ, ಭಯಂಕರವಾಗಿದ್ದ ಆ ಲವಣ ಸಮುದ್ರವನ್ನು ಲೀಲಾಜಾಲವಾಗಿ ದಾಟಲಪೇಕ್ಷಿಸಿ ವಾನರೋತ್ತಮ ಹನುಮಂತನು ಆಗಸಕ್ಕೆ ಹಾರಿದನು.॥34॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಷಟ್ಪಂಚಾಶಃ ಸರ್ಗಃ ॥ 56 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತಾರನೆಯ ಸರ್ಗವು ಮುಗಿಯಿತು.