वाचनम्
ಭಾಗಸೂಚನಾ
ಹನುಮಂತನು ಸೀತಾದೇವಿಯ ಬಗ್ಗೆ ಚಿಂತಿಸಿದುದು, ಅದರ ಪರಿಹಾರ
ಮೂಲಮ್ - 1
ಲಂಕಾಂ ಸಮಸ್ತಾಂ ಸಂದೀಪ್ಯ ಲಾಂಗೂಲಾಗ್ನಿಂ ಮಹಾಬಲಃ ।
ನಿರ್ವಾಪಯಾಮಾಸ ತದಾ ಸಮುದ್ರೇ ಹರಿಸತ್ತಮಃ ॥
ಅನುವಾದ
ಮಹಾಬಲಶಾಲಿಯಾದ ಹನುಮಂತನು ಲಂಕೆಯೆಲ್ಲವನ್ನು ಸುಟ್ಟು ಬೂದಿಮಾಡಿ, ಬಾಲದ ಬೆಂಕಿಯನ್ನು ಸಮುದ್ರದಲ್ಲಿ ಅದ್ದಿ ಆರಿಸಿದನು. ಈ ವಿಧವಾಗಿ ಬುದ್ಧಿಶಾಲಿಯಾದ ಆಂಜನೇಯ ಸ್ವಾಮಿಯು ಎಲ್ಲ ರಾಕ್ಷಸರಿಗೆ ಬುದ್ಧಿಕಲಿಸಿದನು.॥1॥
ಮೂಲಮ್ - 2
ಸಂದೀಪ್ಯಮಾನಾಂ ವಿಧ್ವಸ್ತಾಂ ತ್ರಸ್ತರಕ್ಷೋಗಣಾಂ ಪುರೀಮ್ ।
ಅವೇಕ್ಷ್ಯ ಹನುಮಾನ್ ಲಂಕಾಂ ಚಿಂತಯಾಮಾಸ ವಾನರಃ ॥
ಅನುವಾದ
ಲಂಕಾನಗರವು ಅಗ್ನಿಜ್ವಾಲೆಗಳಿಂದ ಭಸ್ಮವಾಗಿ ಹೋಯಿತು. ಅಲ್ಲಿದ್ದ ರಾಕ್ಷಸರೆಲ್ಲರೂ ಭಯದಿಂದ ನಡುಗಿಹೋಗಿದ್ದರು. ಅಂತಹ ಲಂಕೆಯನ್ನು ನೋಡಿದ ಬಳಿಕ ವಾನರೋತ್ತಮನಾದ ಹನುಮಂತನು ಹೀಗೆ ಆಲೋಚಿಸತೊಡಗಿದನು.॥2॥
ಮೂಲಮ್ - 3
ತಸ್ಯಾಭೂತ್ ಸುಮಹಾಂಸ್ತ್ರಾಸಃ ಕುತ್ಸಾ ಚಾತ್ಮನ್ಯಜಾಯತ ।
ಲಂಕಾಂ ಪ್ರದಹತಾ ಕರ್ಮ ಕಿಂಸ್ವಿತ್ ಕೃತಮಿದಂ ಮಯಾ ॥
ಅನುವಾದ
ಅಯ್ಯೋ! ಈ ಲಂಕೆಯನ್ನು ಭಸ್ಮಮಾಡಿ ನಾನು ಎಂತಹ ತಪ್ಪುಕೆಲಸ ಮಾಡಿದೆ? ಎಂದು ಪಶ್ಚಾತ್ತಾಪಪಡುತ್ತಾ, ಹನುಮಂತನು ತನ್ನನ್ನು ನಿಂದಿಸಿಕೊಂಡನು.॥3॥
ಮೂಲಮ್ - 4
ಧನ್ಯಾಸ್ತೇ ಪುರುಷಶ್ರೇಷ್ಠಾ ಯೇ ಬುದ್ಧ್ಯಾ ಕೋಪಮುತ್ಥಿತಮ್ ।
ನಿರುಂಧಂತಿ ಮಹಾತ್ಮಾನೋ ದೀಪ್ತಮಗ್ನಿಮಿವಾಂಭಸಾ ॥
ಅನುವಾದ
ಉರಿಯುತ್ತಿರುವ ಬೆಂಕಿಯನ್ನು ನೀರಿನಿಂದ ನಂದಿಸುವಂತೆ-ಹೃದಯಾಂತರಾಳದಿಂದ ಉಕ್ಕಿಬರುವ ಕೋಪವನ್ನು ಬುದ್ಧಿಪೂರ್ವಕವಾಗಿ ತಡೆಯುವ ಮಹಾತ್ಮರೇ ನಿಜವಾಗಿ ಧನ್ಯರು.॥4॥
ಮೂಲಮ್ - 5
ಕ್ರುದ್ಧಃ ಪಾಪಂ ನ ಕುರ್ಯಾತ್ ಕಃ ಕ್ರುದ್ಧೋ ಹನ್ಯಾದ್ಗುರೂನಪಿ ।
ಕ್ರುದ್ಧಃ ಪರುಷಯಾ ವಾಚಾ ನರಃ ಸಾಧೂನಧಿಕ್ಷಿಪೇತ್ ॥
ಅನುವಾದ
ಕೋಪಗೊಂಡ ಯಾವನು ತಾನೇ ಪಾಪವನ್ನು ಮಾಡುವುದಿಲ್ಲ? ಕೋಪಗೊಂಡವನು ಕಾರ್ಯಾಕಾರ್ಯಗಳ ವಿವೇಚನೆಯೇ ಇಲ್ಲದೆ ಗುರುಹಿರಿಯರನ್ನು ಸಂಹರಿಸುತ್ತಾನೆ. ಸತ್ಪುರುಷರನ್ನು ಕ್ರೂರವಾದ ಮಾತುಗಳಿಂದ ಹೀಯಾಳಿಸುತ್ತಾನೆ.॥5॥
ಮೂಲಮ್ - 6
ವಾಚ್ಯಾವಾಚ್ಯಂ ಪ್ರಕುಪಿತೋ ನ ವಿಜಾನಾತಿ ಕರ್ಹಿಚಿತ್ ।
ನಾ ಕಾರ್ಯಮಸ್ತಿ ಕ್ರುದ್ಧಸ್ಯ ನಾವಾಚ್ಯಂ ವಿದ್ಯತೇ ಕ್ವಚಿತ್ ॥
ಅನುವಾದ
ಕೋಪಗೊಂಡವನಿಗೆ ಯಾವ ಮಾತನ್ನು ಆಡಬೇಕು, ಯಾವುದನ್ನು ಆಡಬಾರದು ಎಂಬ ಪರಿಜ್ಞಾನವು ಇರುವುದಿಲ್ಲ. ಅವನು ಮಾಡಬಾರದೆನ್ನುವ ಕಾರ್ಯವಿಲ್ಲ ; ಆಡಬಾರದೆನ್ನುವ ಮಾತು ಇಲ್ಲ.॥6॥
ಮೂಲಮ್ - 7
ಯಃ ಸಮುತ್ಪತಿತಂ ಕ್ರೋಧಂ ಕ್ಷಮಯೈವ ನಿರಸ್ಯತಿ ।
ಯಥೋರಗಸ್ತ್ವಚಂ ಜೀರ್ಣಾಂ ಸ ವೈ ಪುರುಷ ಉಚ್ಯತೇ ॥
ಅನುವಾದ
ಹೃದಯಾಂತರಾಳದಿಂದ ಹುಟ್ಟಿಬಂದ ಹುಚ್ಚುಕೋಪವನ್ನು, ಹಾವು ತನ್ನ ಪೊರೆಯನ್ನು ಕಳಚಿಹಾಕುವಂತೆ, ಕ್ಷಮೆಯನ್ನಾಶ್ರಯಿಸಿ ತೊರೆಯುವವನೇ ನಿಜವಾದ ಪುರುಷನೆನಿಸಿಕೊಳ್ಳುವನು.॥7॥
ಮೂಲಮ್ - 8
ಧಿಗಸ್ತು ಮಾಂ ಸುದುರ್ಬುದ್ಧಿಂ ನಿರ್ಲಜ್ಜಂ ಪಾಪಕೃತ್ತಮಮ್ ।
ಅಚಿಂತಯಿತ್ವಾ ತಾಂ ಸೀತಾಮಗ್ನಿದಂ ಸ್ವಾಮಿಘಾತಕಮ್ ॥
ಅನುವಾದ
ಛೀ! ನಾನೆಂತಹ ಬುದ್ಧಿಹೀನನು? ನಾಚಿಕೆಯಿಲ್ಲದವನು! ಎಂತಹ ಮಹಾಪಾಪಿ ನಾನು! ಮುಂದಿನದನ್ನು ಆಲೋಚಿಸದೆ, ಸೀತಾದೇವಿಯನ್ನು ಬೆಂಕಿಗಾಹುತಿಗೈದು, ಸ್ವಾಮಿದ್ರೋಹಕ್ಕೆ ಪಾತ್ರನಾದೆನಲ್ಲ!॥8॥
ಮೂಲಮ್ - 9
ಯದಿ ದಗ್ಧಾ ತ್ವಿಯಂ ಲಂಕಾ ನೂನಮಾರ್ಯಾಪಿ ಜಾನಕೀ ।
ದಗ್ಧಾ ತೇನ ಮಯಾ ಭರ್ತುರ್ಹತಂ ಕಾರ್ಯಮಜಾನತಾ ॥
ಅನುವಾದ
ಈ ಲಂಕೆಯು ಸಂಪೂರ್ಣವಾಗಿ ಸುಟ್ಟುಹೋಗಿರುವಾಗ ಜಾನಕಿಯು ನಿಜವಾಗಿಯೂ ಇದರಲ್ಲೇ ಬೆಂದುಹೋಗಿರಬಹುದು. ಅಜ್ಞಾನ ವಶದಿಂದ ನಾನು ಮಾಡಿದ ಈ ಕಾರ್ಯದಿಂದ ನನ್ನ ಸ್ವಾಮಿ ಕಾರ್ಯಕ್ಕೆ ಭಂಗ ಬಂದಂತಾಯಿತಲ್ಲ !॥9॥
ಮೂಲಮ್ - 10
ಯದರ್ಥಮಯಮಾರಂಭಸ್ತತ್ಕಾರ್ಯಮವಸಾದಿತಮ್ ।
ಮಯಾ ಹಿ ದಹತಾ ಲಂಕಾಂ ನ ಸೀತಾ ಪರಿರಕ್ಷಿತಾ ॥
ಅನುವಾದ
ನಾನು ಲಂಕೆಗೆ ಬೆಂಕಿಯನ್ನಿಟ್ಟಿದುದರಿಂದ ಸೀತಾಮಾತೆಯ ರಕ್ಷಣೆಗೆ ಭಂಗವೇರ್ಪಟ್ಟಂತಾಯಿತು. ಅದರಿಂದ ನಾನು ಮಾಡಿದ ಎಲ್ಲ ಪ್ರಯತ್ನಗಳು ವ್ಯರ್ಥವಾಗಿ ಹೋದುವು.॥10॥
ಮೂಲಮ್ - 11
ಈಷತ್ಕಾರ್ಯಮಿದಂ ಕಾರ್ಯಂ ಕೃತಮಾಸೀನ್ನ ಸಂಶಯಃ ।
ತಸ್ಯ ಕ್ರೋಧಾಭಿಭೂತೇನ ಮಯಾ ಮೂಲಕ್ಷಯಃ ಕೃತಃ ॥
ಅನುವಾದ
ಸೀತಾನ್ವೇಷಣೆಯ ಮಹತ್ಕಾರ್ಯವನ್ನು ಪೂರ್ತಿಗೊಳಿಸಿದೆ. ಸೀತಾದೇವಿಯ ಸಂದೇಶವನ್ನು ಶ್ರೀರಾಮನಿಗೆ ನಿವೇದಿಸುವ ಒಂದು ಸಣ್ಣ ಕಾರ್ಯ ಮಾತ್ರ ಉಳಿದಿತ್ತು. ಆದರೆ ಕೋಪಾವಿಷ್ಟನಾದ ನಾನು ಮಾಡಬಾರದುದನ್ನು ಮಾಡಿ ಮೂಲವನ್ನೇ ವಿನಾಶ ಮಾಡಿಬಿಟ್ಟೆನು. ಇದರಲ್ಲಿ ಸಂಶಯವೇ ಇಲ್ಲ.॥11॥
ಮೂಲಮ್ - 12
ವಿನಷ್ಟಾ ಜಾನಕೀ ವ್ಯಕ್ತಂ ನ ಹ್ಯದಗ್ಧಃ ಪ್ರದೃಶ್ಯತೇ ।
ಲಂಕಾಯಾಂ ಕಶ್ಚಿದುದ್ದೇಶಃ ಸರ್ವಾ ಭಸ್ಮೀಕೃತಾ ಪುರೀ ॥
ಅನುವಾದ
ಲಂಕಾಪಟ್ಟಣವೆಲ್ಲವೂ ಭಸ್ಮವಾಗಿದೆ. ಸುಡದೇ ಇರುವ ಒಂದು ಗೇಣು ಸ್ಥಳವೂ ಇಲ್ಲ. ಅದರಿಂದಾಗಿ ಸೀತಾದೇವಿಯು ವಿನಾಶ ಹೊಂದಿರಬಹುದೇ?॥12॥
ಮೂಲಮ್ - 13
ಯದಿ ತದ್ವಿಹತಂ ಕಾರ್ಯಂ ಮಮ ಪ್ರಜ್ಞಾವಿಪರ್ಯಯಾತ್ ।
ಇಹೈವ ಪ್ರಾಣಸಂನ್ಯಾಸೋ ಮಮಾಪಿ ಹ್ಯದ್ಯ ರೋಚತೇ ॥
ಅನುವಾದ
ಹೀಗೆ ನಾನು ಪ್ರಾರಂಭಿಸಿದ್ದ ಕಾರ್ಯವನ್ನು ಬುದ್ಧಿಯ ವಿಪರ್ಯಾಸದಿಂದ ನಾನೇ ಹಾಳುಮಾಡಿಬಿಟ್ಟೆನು. (ಸೀತಾದೇವಿಯ ಪ್ರಾಣಗಳಿಗೆ ಮುಪ್ಪುತಂದಿರುವುದರಿಂದ ) ಇದರಿಂದ ಈಗಲೇ ಇಲ್ಲಿಯೇ ನಾನು ಪ್ರಾಣತ್ಯಾಗ ಮಾಡುವುದೇ ಯುಕ್ತವಾಗಿದೆ. ॥13॥
ಮೂಲಮ್ - 14
ಕಿಮಗ್ನೌ ನಿಪತಾಮ್ಯದ್ಯ ಆಹೋಸ್ವಿದ್ಬಡವಾಮುಖೇ ।
ಶರೀರಮಿಹ ಸತ್ತ್ವಾನಾಂ ದದ್ಮಿ ಸಾಗರವಾಸಿನಾಮ್ ॥
ಅನುವಾದ
ಅಯ್ಯೋ! ನಾನಿನ್ನು ಹೇಗೆ ಅಸುನೀಗಲಿ? ಬೆಂಕಿಯಲ್ಲಿ ಬೀಳಲೇ? ಸಮುದ್ರದಲ್ಲಿರುವ ಬಡವಾಗ್ನಿಯಲ್ಲಿ ಬಿದ್ದು ಪ್ರಾಣತೊರೆಯಲೇ? ಅಥವಾ ನನ್ನ ಶರೀರವನ್ನು ಸಾಗರ ಜಲಜಂತುಗಳಿಗೆ ಆಹಾರವಾಗಿ ಅರ್ಪಿಸಿ ಬಿಡಲೇ?॥14॥
ಮೂಲಮ್ - 15
ಕಥಂ ಹಿ ಜೀವತಾ ಶಕ್ಯೋ ಮಯಾ ದ್ರಷ್ಟುಂ ಹರೀಶ್ವರಃ ।
ತೌ ವಾ ಪುರುಷಶಾರ್ದೂಲೌ ಕಾರ್ಯಸರ್ವಸ್ವಘಾತಿನಾ ॥
ಅನುವಾದ
ಸರ್ವಕಾರ್ಯವನ್ನು ಹಾಳುಗೆಡಹಿದ ನಾನು ಜೀವಂತನಾಗಿ ಹರೀಶ್ವರನಾದ ಸುಗ್ರೀವನನ್ನು ಹೇಗೆ ನೋಡಲಿ? ಪುರುಷಸಿಂಹರಾದ ರಾಮ-ಲಕ್ಷ್ಮಣರಿಗೆ ಹೇಗೆ ಮುಖತೋರಲಿ?॥15॥
ಮೂಲಮ್ - 16
ಮಯಾ ಖಲು ತದೇವೇದಂ ರೋಷದೋಷಾತ್ ಪ್ರದರ್ಶಿತಮ್ ।
ಪ್ರಥಿತಂ ತ್ರಿಷು ಲೋಕೇಷು ಕಪಿತ್ವಮನವಸ್ಥಿತಮ್ ॥
ಅನುವಾದ
ಕೋಪದ ದೋಷದಿಂದಾಗಿ, ಮೂರು ಲೋಕಗಳಲ್ಲಿ ವಾನರರಿಗೆ ಪ್ರಸಿದ್ಧವಾಗಿರುವ ಕಪಿತ್ವದ ಸಹಜ ಬುದ್ಧಿ ಚಂಚಲತ್ವವನ್ನೇ ನಾನು ಪ್ರದರ್ಶಿಸಿದೆನಲ್ಲ !॥16॥
ಮೂಲಮ್ - 17
ಧಿಗಸ್ತು ರಾಜಸಂ ಭಾವಮನೀಶಮನವಸ್ಥಿತಮ್ ।
ಈಶ್ವರೇಣಾಪಿ ಯದ್ರಾಗಾನ್ಮಯಾ ಸೀತಾ ನ ರಕ್ಷಿತಾ ॥
ಅನುವಾದ
ಹಿಡಿತಕ್ಕೊಳಪಡದ ಅಸ್ಥಿರತೆಯ ರಾಜಸ ಭಾವಕ್ಕೆ ಧಿಕ್ಕಾರ ವಿರಲಿ. ನಾನು ಜಿತೇಂದ್ರಿಯನಾಗಿ, ಸರ್ವಸಮರ್ಥನಾಗಿದ್ದರೂ, ಕ್ರೋಧಕ್ಕೆ ವಶನಾಗಿ ಬುದ್ಧಿಗೆಟ್ಟು ಸೀತಾದೇವಿಯನ್ನು ರಕ್ಷಿಸದೆ ಹೋದೆನಲ್ಲ !॥17॥
ಮೂಲಮ್ - 18
ವಿನಷ್ಟಾಯಾಂ ತು ಸೀತಾಯಾಂ ತಾವುಭೌ ವಿನಶಿಷ್ಯತಃ ।
ತಯೋರ್ವಿನಾಶೇ ಸುಗ್ರೀವಃ ಸಬಂಧುರ್ವಿನಶಿಷ್ಯತಿ ॥
ಅನುವಾದ
ಸೀತಾದೇವಿಯ ವಿನಾಶದಿಂದಾಗಿ ರಾಮ-ಲಕ್ಷ್ಮಣರಿಬ್ಬರೂ ವಿನಾಶಹೊಂದುವರು. ರಾಜಕುಮಾರರ ವಿನಾಶದಿಂದ ಸುಗ್ರೀವನೂ ಬಂಧುಗಳೊಡನೆ ವಿನಾಶ ಹೊಂದುವನು.॥18॥
ಮೂಲಮ್ - 19
ಏತದೇವ ವಚಃ ಶ್ರುತ್ವಾ ಭರತೋ ಭ್ರಾತೃವತ್ಸಲಃ ।
ಧರ್ಮಾತ್ಮಾ ಸಹಶತ್ರುಘ್ನಃ ಕಥಂ ಶಕ್ಷ್ಯತಿ ಜೀವಿತುಮ್ ॥
ಅನುವಾದ
ಈ ದಾರುಣವಾದ ವಾರ್ತೆಯನ್ನು ಕೇಳಿದ ಬಳಿಕ ಭ್ರಾತೃವತ್ಸಲನೂ, ಧರ್ಮಾತ್ಮನೂ ಆದ ಭರತ ಹಾಗೂ ಶತ್ರುಘ್ನರೂ ಜೀವಿಸಿರಲಾರರು.॥19॥
ಮೂಲಮ್ - 20
ಇಕ್ಷ್ಯ್ವಾಕುವಂಶೇ ಧರ್ಮಿಷ್ಠೇ ಗತೇ ನಾಶಮಸಂಶಯಮ್ ।
ಭವಿಷ್ಯಂತಿ ಪ್ರಜಾಃ ಸರ್ವಾಃ ಶೋಕಸಂತಾಪಪೀಡಿತಾಃ ॥
ಅನುವಾದ
ಈ ಪರಿಯಾಗಿ ಧರ್ಮಸಂಪನ್ನವಾದ ಇಕ್ಷ್ವಾಕುವಂಶವೇ ಸಂಪೂರ್ಣವಾಗಿ ವಿನಾಶ ಹೊಂದಿದ ನಂತರ ಎಲ್ಲ ಪ್ರಜೆಗಳು ಶೋಕಸಂತಾಪಗಳಿಂದ ಪೀಡಿತರಾಗುತ್ತಾರೆ.॥20॥
ಮೂಲಮ್ - 21
ತದಹಂ ಭಾಗ್ಯರಹಿತೋ ಲುಪ್ತಧರ್ಮಾರ್ಥಸಂಗ್ರಹಃ ।
ರೋಷದೋಷಪರೀತಾತ್ಮಾ ವ್ಯಕ್ತಂ ಲೋಕವಿನಾಶನಃ ॥
ಅನುವಾದ
ನಿಜವಾಗಿಯೂ ನಿರ್ಭಾಗ್ಯನಾದ ನಾನೇ ಇವೆಲ್ಲಕ್ಕೂ ಕಾರಣನು. ಧರ್ಮಾರ್ಥಗಳ ತಿಳಿವಳಿಕೆಯಿಂದ ಹೀನನಾದವನು. ರೋಷವೆಂಬ ದೋಷದಿಂದ ಅಭಿಭೂತನಾಗಿರುವವನು. ಇದರಿಂದ ನಾನೇ ಲೋಕವಿನಾಶಕ - ಅಂದರೆ ಕಿಷ್ಕಿಂಧೆಯಿಂದ ಅಯೋಧ್ಯೆಯವರೆಗಿನ ಎಲ್ಲ ಪ್ರಜೆಗಳನ್ನು ಬಾಧಿಸಿದೆ ಎಂಬುದು ಸ್ಪಷ್ಟವಾಯಿತು.॥21॥
ಮೂಲಮ್ - 22
ಇತಿ ಚಿಂತಯತಸ್ತಸ್ಯ ನಿಮಿತ್ತಾನ್ಯುಪಪೇದಿರೇ ।
ಪೂರ್ವಮಪ್ಯುಪಲಬ್ಧಾನಿ ಸಾಕ್ಷಾತ್ ಪುನರಚಿಂತಯತ್ ॥
ಅನುವಾದ
ಹೀಗೆ ನಾನಾ ವಿಧವಾಗಿ ಯೋಚಿಸುತ್ತಿದ್ದ ಹನುಮಂತನಿಗೆ ಹಿಂದೆ ಕಾಣಿಸಿದಂತೆ ಅನೇಕ ಶುಭಶಕುನಗಳು ಸಾಕ್ಷಾತ್ತಾಗಿ ಕಾಣಿಸಿಕೊಂಡವು. ಅವುಗಳನ್ನು ನೋಡಿ, ಪುನಃ ಹನುಮಂತನು ಬೇರೆ ರೀತಿಯಿಂದ ಯೋಚಿಸತೊಡಗಿದನು.॥22॥
ಮೂಲಮ್ - 23
ಅಥವಾ ಚಾರುಸರ್ವಾಂಗೀ ರಕ್ಷಿತಾ ಸ್ವೇನ ತೇಜಸಾ ।
ನ ನಶಿಷ್ಯತಿ ಕಲ್ಯಾಣೀ ನಾಗ್ನಿರಗ್ನೌ ಪವರ್ತತೇ ॥
ಅನುವಾದ
ಮಂಗಳ ಸ್ವರೂಪಿಣಿಯೂ, ಸರ್ವಾಂಗ ಸುಂದರಿಯೂ ಆದ ಸೀತಾದೇವಿಯ ದಿವ್ಯತೇಜಸ್ಸೇ (ಪಾತಿವ್ರತ್ಯಧರ್ಮ) ಅವಳನ್ನು ರಕ್ಷಿಸುತ್ತದೆ. ಅಗ್ನಿಯು ಅಗ್ನಿಯನ್ನು ಸುಡದು. ಅದರಿಂದ ಅವಳು ನಾಶವಾಗಿರಲಾರಳು.॥23॥
ಮೂಲಮ್ - 24
ನ ಹಿ ಧರ್ಮಾತ್ಮನಸ್ತಸ್ಯ ಭಾರ್ಯಾಮಮಿತತೇಜಸಃ ।
ಸ್ವಚಾರಿತ್ರಾಭಿಗುಪ್ತಾಂ ತಾಂ ಸ್ಪ್ರಷ್ಟುಮರ್ಹತಿ ಪಾವಕಃ ॥
ಅನುವಾದ
ಸೀತಾ ದೇವಿಯು - ಧರ್ಮಸ್ವರೂಪನೂ, ಹೆಚ್ಚಿನ ತೇಜಃಶಾಲಿಯೂ ಆದ ಶ್ರೀರಾಮನ ಭಾರ್ಯೆಯು. ಪಾತಿವ್ರತ್ಯವೆಂಬ ಭದ್ರಕವಚವೇ ಅವಳನ್ನು ರಕ್ಷಿಸುತ್ತಿದೆ. ಅಂತಹ ಜಾನಕಿದೇವಿಯನ್ನು ಸುಡಲು ಅಗ್ನಿಯಲ್ಲಿ ಶಕ್ತಿಯಿಲ್ಲ*.॥24॥
ಟಿಪ್ಪನೀ
.* (1) ಯದಾದಿತ್ಯಗತಂ ತೇಜೋ ಜಗದ್ಭಾಸಯತೇಖಿಲಮ್ ಯಚ್ಛಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿಮಾಮಕಮ್ ॥
(ಗೀತಾ 15-12)
ಸಮಸ್ತ ಜಗತ್ತನ್ನು ಪ್ರಕಾಶಿಸುವ ಸೂರ್ಯನ ತೇಜವೂ, ಚಂದ್ರನ ತೇಜವೂ, ಅಗ್ನಿಯ ತೇಜಸ್ಸೂ (ದಾಹಕ ಶಕ್ತಿಯು) ನನ್ನದೇ ತೇಜಸ್ಸಾಗಿದೆ ಎಂದು ಭಗವಂತನು ಹೇಳುತ್ತಿದ್ದಾನೆ. ಅಗ್ನಿಯೊಳಗಿಪ್ಪ ದಾಹಕ ಶಕ್ತಿಯು ನೀನೇ ಆದ್ದರಿಂದ ಶ್ರೀರಾಮನ ಸ್ವರೂಪವಾದ ಅಗ್ನಿಯು ರಾಮಪತ್ನಿಯನ್ನು ಹೇಗೆ ಸುಟ್ಟೀತು?.
(2) ಪ್ರಹ್ಲಾದನು ಹಿರಣ್ಯಕಶಿಪುವಿನ ಬಳಿ ಹೇಳುವ ಸಂದರ್ಭ -
ರಾಮನಾಮ ಜಪತಾಂ ಕುತೋ ಭಯಂ ಸರ್ವತಾಪಶಮನನೈಕ ಭೇಷಜಮ್ ।
ಪಶ್ಯತಾತ ಮಮಗಾತ್ರ ಸನ್ನಿಧೌ ಪಾವಕೋಪಿಸಲಿಲಾಯತೇಧುನಾ ॥
(ವಿಷ್ಣುಪುರಾಣ)
ರಾಮನಾಮವನ್ನು ಜಪಿಸುವವರಿಗೆ ಭಯವು ಖಂಡಿತವಾಗಿಯೂ ಇಲ್ಲ. ಇದು ಎಲ್ಲ ವಿಧವಾದ ತಾಪಗಳನ್ನು ಹರಿಸುವ ದಿವ್ಯೌಷಧವು. ಅಪ್ಪಾ! ಇಲ್ಲಿ ನನ್ನ ಶರೀರವನ್ನು ನೋಡು. ಅಗ್ನಿದೇವರೂ ಕೂಡ ಸುಡದೆ ಅನುಗ್ರಹಿಸಿದ್ದಾನೆ. ಕ್ಷಣ-ಕ್ಷಣವೂ ಶ್ರೀರಾಮನ ನಾಮಸ್ಮರಣೆ ಮಾಡುವವರಿಗೆ ಅಗ್ನಿಯಿಂದ ಯಾವ ಭಯವೂ ಇರದು.
ಮೂಲಮ್ - 25
ನೂನಂ ರಾಮಪ್ರಭಾವೇಣ ವೈದೇಹ್ಯಾಃ ಸುಕೃತೇನ ಚ ।
ಯನ್ಮಾಂ ದಹನಕರ್ಮಾಯಂ ನಾದಹದ್ಧವ್ಯವಾಹನಃ ॥
ಅನುವಾದ
ದಹಿಸುವ ಧರ್ಮವುಳ್ಳ ಅಗ್ನಿಯು ಶ್ರೀರಾಮನ ಪ್ರಭಾವದಿಂದಲೂ, ವೈದೇಹಿಯ ಸುಕೃತದಿಂದಲೂ ನನ್ನನ್ನೇ ಸುಡಲಿಲ್ಲ. ಅಂತಿರುವಾಗ ಸೀತೆಯನ್ನು ಹೇಗೆ ತಾನೇ ಮುಟ್ಟುವನು?॥25॥
ಮೂಲಮ್ - 26
ತ್ರಯಾಣಾಂ ಭರತಾದೀನಾಂ ಭ್ರಾತ ೄಣಾಂ ದೇವತಾ ಚ ಯಾ ।
ರಾಮಸ್ಯ ಚ ಮನಃಕಾಂತಾ ಸಾ ಕಥಂ ವಿನಶಿಷ್ಯತಿ ॥
ಅನುವಾದ
ಭರತ - ಲಕ್ಷ್ಮಣ - ಶತ್ರುಘ್ನರಿಗೆ ದೇವತಾಸ್ವರೂಪಳಾಗಿರುವ, ಶ್ರೀರಾಮನ ಪ್ರಾಣೇಶ್ವರಿಯಾದ ಜಾನಕಿದೇವಿಯು ಅಗ್ನಿಗೆ ಆಹುತಿಯಾಗುವುದು ಅಸಂಭವವು.॥26॥
ಮೂಲಮ್ - 27
ಯದ್ವಾ ದಹನಕರ್ಮಾಯಂ ಸರ್ವತ್ರ ಪ್ರಭುರವ್ಯಯಃ ।
ನ ಮೇ ದಹತಿ ಲಾಂಗೂಲಂ ಕಥಮಾರ್ಯಾಂ ಪ್ರಧಕ್ಷ್ಯತಿ ॥
ಅನುವಾದ
ಅಷ್ಟೇ ಅಲ್ಲ, ಸುಡುವ ಸ್ವಭಾವವುಳ್ಳ, ಪ್ರಭುವಾದ, ಅವ್ಯಯನಾದ ಈ ಯಜ್ಞೇಶ್ವರನು ನನ್ನ ಬಾಲವನ್ನೇ ಸುಡದಿರುವಾಗ ಆರ್ಯೆಯಾದ ಸೀತಾದೇವಿಯನ್ನು ಹೇಗೆ ದಹಿಸಬಲ್ಲನು?॥27॥
ಮೂಲಮ್ - 28
ಪುನಶ್ಚಾಚಿಂತಯತ್ತತ್ರ ಹನುಮಾನ್ ವಿಸ್ಮಿತಸ್ತದಾ ।
ಹಿರಣ್ಯನಾಭಸ್ಯ ಗಿರೇರ್ಜಲಮಧ್ಯೇ ಪ್ರದರ್ಶನಮ್ ॥
ಅನುವಾದ
ಆಗ ಹನುಮಂತನು ಹಿಂದೆ ನಡೆದುದೆಲ್ಲವನ್ನು ಪುನಃ ಜ್ಞಾಪಿಸಿಕೊಂಡನು. ಸಮುದ್ರವನ್ನು ಹಾರುತ್ತಿದ್ದಾಗ ಮೈನಾಕ ಪರ್ವತವು ರಾಮ ಕಾರ್ಯಕ್ಕಾಗಿ ಹೋಗುತ್ತಿದ್ದ ನನಗೆ ಸಹಾಯ ಮಾಡಲಿಕ್ಕಾಗಿ ಸಮುದ್ರದಿಂದ ಮೇಲಕ್ಕೆದ್ದು, ಬಂದುದು ಸ್ಮರಣೆಗೆ ಬಂತು. ಹಾಗಿರುವಾಗ ಅಗ್ನಿಯು ಏಕೆ ಸಹಾಯ ಮಾಡಲಾರನು?॥28॥
ಮೂಲಮ್ - 29
ತಪಸಾ ಸತ್ಯವಾಕ್ಯೇನ ಅನನ್ಯತ್ವಾಚ್ಚ ಭರ್ತರಿ ।
ಅಪಿ ಸಾ ನಿರ್ದಹೇದಗ್ನಿಂ ನ ತಾಮಗ್ನಿಃ ಪ್ರಧಕ್ಷ್ಯತಿ ॥
ಅನುವಾದ
ತಪಸ್ಸಿನಿಂದಲೂ, ಸತ್ಯನಿಷ್ಠೆಯಿಂದಲೂ, ಪತಿಯ ವಿಷಯದಲ್ಲಿ ಅನನ್ಯವಾದ ಭಾವವಿರುವುದರಿಂದಲೂ, ಸೀತಾದೇವಿಯು ಅಗ್ನಿಯನ್ನು ಕೂಡ ದಹಿಸಲು ಸಮರ್ಥಳಾಗಿರುವಳು. ಆದರೆ ಅಗ್ನಿಯು ಎಂದಿಗೂ ಅವಳನ್ನು ದಹಿಸಲಾರದು.॥29॥
ಮೂಲಮ್ - 30
ಸ ತಥಾ ಚಿಂತಯಂಸ್ತತ್ರ ದೇವ್ಯಾ ಧರ್ಮಪರಿಗ್ರಹಮ್ ।
ಶುಶ್ರಾವ ಹನುಮಾನ್ ವಾಕ್ಯಂ ಚಾರಣಾನಾಂ ಮಹಾತ್ಮನಾಮ್ ॥
ಅನುವಾದ
ಸೀತಾದೇವಿಯ ಧರ್ಮತತ್ಪರತೆಯನ್ನು ಹನುಮಂತನು ಹೀಗೆ ಯೋಚಿಸುತ್ತಿರುವಾಗ ಮಹಾತ್ಮರಾದ ಚಾರಣರು ಆಕಾಶದಲ್ಲಿ ಆಡಿಕೊಳ್ಳುತ್ತಿದ್ದ ಮಾತುಗಳನ್ನು ಕೇಳಿದನು.॥30॥
ಮೂಲಮ್ - 31
ಅಹೋ ಖಲು ಕೃತಂ ಕರ್ಮ ದುಷ್ಕರಂ ಹಿ ಹನೂಮತಾ ।
ಅಗ್ನಿಂ ವಿಸೃಜತಾಭೀಕ್ಷ್ಣಂ ಭೀಮಂ ರಾಕ್ಷಸಸದ್ಮನಿ ॥
ಅನುವಾದ
‘‘ರಾಕ್ಷಸರಿಗೆ ರಾಜನಾದ ರಾವಣನ ಪ್ರಾಸಾದವನ್ನು (ಲಂಕೆಯನ್ನು) ಭಯಂಕರವಾದ ಬೆಂಕಿಯನ್ನಿಟ್ಟು ಅದನ್ನು ಪೂರ್ಣವಾಗಿ ಸುಟ್ಟುಬಿಟ್ಟು ಹನುಮಂತನು ಅತ್ಯಂತ ದುಷ್ಕರವಾದ ಕಾರ್ಯವನ್ನು ಮಾಡಿರುವನು. ಇದು ಎಂತಹ ಆಶ್ಚರ್ಯಮಯವಾದುದು. ॥31॥
ಮೂಲಮ್ - 32
ಪ್ರಪಲಾಯಿತರಕ್ಷಃಸ್ತ್ರೀಬಾಲವೃದ್ಧ ಸಮಾಕುಲಾ ।
ಜನಕೋಲಾಹಲಾಧ್ಮಾತಾ ಕ್ರಂದಂತೀವಾದ್ರಿಕಂದರೇ ॥
ಅನುವಾದ
ರಾಕ್ಷಸ ಸ್ತ್ರೀಯರೂ, ಬಾಲಕರೂ, ವೃದ್ಧರೂ ಮೊದಲಾದವರು ಕೋಲಾಹಲದಿಂದ ಅತ್ತ-ಇತ್ತ ಓಡಾಡುತ್ತಿದ್ದರು. ಅವರ ಆಕ್ರಂದನವು ಲಂಕೆಯಲ್ಲೆಲ್ಲ ಪ್ರತಿಧ್ವನಿಸಿತು. ಆಗ ಲಂಕೆಯೇ ಪರ್ವತದ ಗುಹೆಯಲ್ಲಿ ಮುಖವಿಟ್ಟು ರೋದಿಸುತ್ತಿರುವಂತಿತ್ತು. ॥32॥
ಮೂಲಮ್ - 33
ದಗ್ಧೇಯಂ ನಗರೀ ಸರ್ವಾ ಸಾಟ್ಟಪ್ರಾಕಾರತೋರಣಾ ।
ಜಾನಕೀ ನ ಚ ದಗ್ಧೇತಿ ವಿಸ್ಮಯೋಽದ್ಭುತ ಏವ ನಃ ॥
ಅನುವಾದ
ಕೋಟೆ, ಪ್ರಾಕಾರ, ಬುರುಜುಗಳಿಂದ, ಮಹಾದ್ವಾರ ತೋರಣಗಳಿಂದ ಕೂಡಿದ ಈ ಲಂಕೆಯೆಲ್ಲವೂ ಸುಟ್ಟುಹೋಗಿದೆ. ಆದರೆ ಸೀತಾದೇವಿಯು ಮಾತ್ರ ದಗ್ಧವಾಗಲಿಲ್ಲ. ಇದು ಅತ್ಯದ್ಭುತವಾಗಿ ಕಾಣುತ್ತದೆ. ಆಶ್ಚರ್ಯಕರವೇ ಆಗಿದೆ.’’॥33॥
ಮೂಲಮ್ - 34
ಇತಿ ಶುಶ್ರಾವ ಹನುಮಾನ್ ವಾಚಂ ತಾಮಮೃತೋಪಮಾಮ್ ।
ಬಭೂವ ಚಾಸ್ಯ ಮನಸೋ ಹರ್ಷಸ್ತತ್ಕಾಲಸಂಭವಃ ॥
ಅನುವಾದ
ಅಮೃತತುಲ್ಯವಾದ ಆ ಚಾರಣರ ಮಾತುಗಳನ್ನು ಕೇಳಿದಾಗ ತಕ್ಷಣವೇ ಹನುಮಂತನ ಮನಸ್ಸು ಪರಮಾನಂದ ಭರಿತವಾಯಿತು.॥34॥
ಮೂಲಮ್ - 35
ಸ ನಿಮಿತ್ತೈಶ್ಚ ದೃಷ್ಟಾರ್ಥೈಃ ಕಾರಣೈಶ್ಚ ಮಹಾಗುಣೈಃ ।
ಋಷಿವಾಕ್ಯೈಶ್ಚ ಹನುಮಾನ್ ಅಭವತ್ ಪ್ರೀತಮಾನಸಃ ॥
ಅನುವಾದ
ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಶುಭಫಲಪ್ರದವಾದ ಶಕುನಗಳಿಂದಲೂ, ಸೀತೆಯ ಪಾತಿವ್ರತ್ಯ, ಶ್ರೀರಾಮನ ಪ್ರಭಾವ, ಇವೇ ಮೊದಲಾದ ಕಾರಣಗಳಿಂದಲೂ, ಚಾರಣರ ಮಾತುಗಳಿಂದಲೂ, ಸೀತೆಯು ಕ್ಷೇಮವಾಗಿರುವಳೆಂದು ತಿಳಿದು, ಹನುಮಂತನ ಮನಸ್ಸು ಪ್ರಸನ್ನವಾಯಿತು.॥35॥
ಮೂಲಮ್ - 36
ತತಃ ಕಪಿಃ ಪ್ರಾಪ್ತಮನೋರಥಾರ್ಥಃ
ತಾಮಕ್ಷತಾಂ ರಾಜಸುತಾಂ ವಿದಿತ್ವಾ ।
ಪ್ರತ್ಯಕ್ಷತಸ್ತಾಂ ಪುನರೇವದೃಷ್ಟ್ವಾ
ಪ್ರತಿಪ್ರಯಾಣಾಯ ಮತಿಂ ಚಕಾರ ॥
ಅನುವಾದ
ಯಜ್ಞೇಶ್ವರನಿಂದ ರಾಜಪುತ್ರಿಯಾದ ಸೀತೆಗೆ ಯಾವ ತೊಂದರೆಯೂ ಆಗಿಲ್ಲವೆಂದರಿತು ತನ್ನ ಇಷ್ಟಾರ್ಥವನ್ನು ನೆರವೇರಿಸಿಕೊಂಡ ಹನುಮಂತನು, ಪುನಃ ಸೀತೆಯನ್ನು ಸಂದರ್ಶಿಸಿ ಕಿಷ್ಕಿಂಧೆಗೆ ಹಿಂದಿರುಗಲು ನಿಶ್ಚಯಿಸಿದನು.॥36॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪಂಚಪಂಚಾಶಃ ಸರ್ಗಃ ॥ 55 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತೈದನೆಯ ಸರ್ಗವು ಮುಗಿಯಿತು.