०५४ हनूमता लङ्कादहनम्

वाचनम्
ಭಾಗಸೂಚನಾ

ಲಂಕಾದಹನವು ರಾಕ್ಷಸರ ವಿಲಾಪ

ಮೂಲಮ್ - 1

ವೀಕ್ಷಮಾಣಸ್ತತೋ ಲಂಕಾಂ ಕಪಿಃ ಕೃತಮನೋರಥಃ ।
ವರ್ಧಮಾನಸಮುತ್ಸಾಹಃ ಕಾರ್ಯಶೇಷಮಚಿಂತಯತ್ ॥

ಅನುವಾದ

ಇಷ್ಟಾರ್ಥವನ್ನು ಪೂರೈಸಿಕೊಂಡ, ಹೆಚ್ಚುತ್ತಿರುವ ಉತ್ಸಾಹದಿಂದ ಕೂಡಿದ್ದ ಮಾರುತಿಯು, ಲಂಕಾಪಟ್ಟಣವನ್ನೇ ನೋಡುತ್ತಾ, ಉಳಿದಿರುವ ಕಾರ್ಯದ ಬಗ್ಗೆ ಆಲೋಚಿಸತೊಡಗಿದನು.॥1॥

ಮೂಲಮ್ - 2

ಕಿಂ ನು ಖಲ್ವವಶಿಷ್ಟಂ ಮೇ ಕರ್ತವ್ಯಮಿಹ ಸಾಂಪ್ರತಮ್ ।
ಯದೇಷಾಂ ರಕ್ಷಸಾಂ ಭೂಯಃ ಸಂತಾಪಜನನಂ ಭವೇತ್ ॥

ಅನುವಾದ

ಈ ಸಮಯದಲ್ಲಿ ನಾನು ಮಾಡಬೇಕಾಗಿರುವ ಯಾವ ಕಾರ್ಯವು ಉಳಿದಿದೆ? ಇಲ್ಲಿರುವ ಎಲ್ಲ ರಾಕ್ಷಸರಿಗೆ ಮತ್ತಷ್ಟು ತಾಪವನ್ನುಂಟುಮಾಡುವ ಯಾವ ಕಾರ್ಯವನ್ನು ಮಾಡಲಿ?॥2॥

ಮೂಲಮ್ - 3

ವನಂ ತಾವತ್ ಪ್ರಮಥಿತಂ ಪ್ರಕೃಷ್ಟಾ ರಾಕ್ಷಸಾ ಹತಾಃ ।
ಬಲೈಕದೇಶಃ ಕ್ಷಪಿತಃ ಶೇಷಂ ದುರ್ಗವಿನಾಶನಮ್ ॥

ಅನುವಾದ

ಅಶೋಕವನವನ್ನು ಹಾಳುಮಾಡಿದ್ದಾಯಿತು. ಬಲಿಷ್ಠರಾದ ರಾಕ್ಷಸರನ್ನು ಕೊಂದದ್ದೂ ಆಯಿತು. ರಾಕ್ಷಸ ಸೈನ್ಯದ ಒಂದು ಭಾಗವನ್ನು ನಾಶಗೊಳಿಸಿಯೂ ಆಯಿತು. ಇನ್ನು ಉಳಿದಿರುವುದೆಂದರೆ ಲಂಕೆಯ ನಾಶ.॥3॥

ಮೂಲಮ್ - 4

ದುರ್ಗೇ ವಿನಾಶಿತೇ ಕರ್ಮ ಭವೇತ್ ಸುಖಪರಿಶ್ರಮಮ್ ।
ಅಲ್ಪಯತ್ನೇನ ಕಾರ್ಯೇಽಸ್ಮಿನ್ ಮಮ ಸ್ಯಾತ್ ಸಫಲಃ ಶ್ರಮಃ ॥

ಅನುವಾದ

ದುರ್ಗ (ಲಂಕೆ)ವನ್ನು ವಿನಾಶಗೊಳಿಸುವುದು ಪೂರ್ತಿಯಾದರೆ, ನಾನು ಇಷ್ಟರವರೆಗೆ ಗೈದ - (ಸಮುದ್ರೋಲ್ಲಂಘನ, ಸೀತಾದೇವಿಯ ದರ್ಶನ, ಅಶೋಕಾವನದ ಧ್ವಂಸ, ರಾಕ್ಷಸರೊಡನೆ ಯುದ್ಧ, ರಾವಣನೊಡನೆ ಮಾತುಕತೆ) ಕಾರ್ಯಗಳು ಅನಾಯಾಸವಾಗಿ ನೆರವೇರಿದಂತೆ, ಅಲ್ಪ ಪ್ರಯತ್ನದ ಈ ನನ್ನ ಕಾರ್ಯವೂ ಕೂಡ ಪೂರ್ತಿಯಾದರೆ ನನ್ನ ಎಲ್ಲ ಶ್ರಮಗಳು ಸಾರ್ಥಕವಾದಂತೆಯೇ.॥4॥

ಮೂಲಮ್ - 5

ಯೋ ಹ್ಯಯಂ ಮಮ ಲಾಂಗೂಲೇ ದೀಪ್ಯತೇ ಹವ್ಯವಾಹನಃ ।
ಅಸ್ಯ ಸಂತರ್ಪಣಂ ನ್ಯಾಯ್ಯಂ ಕರ್ತುಮೇಭಿರ್ಗೃಹೋತ್ತಮೈಃ ॥

ಅನುವಾದ

ನನ್ನ ಬಾಲದಲ್ಲಿ ಪ್ರಜ್ವಲಿಸುತ್ತಿರುವ ಯಜ್ಞೇಶ್ವರನಿಗೆ ಈ ಮಹಾಭವನಗಳನ್ನು ಆಹುತಿಯಾಗಿ ಸಮರ್ಪಿಸುವುದು ನ್ಯಾಯವೇ ಆಗಿದೆ.॥5॥

ಮೂಲಮ್ - 6

ತತಃ ಪ್ರದೀಪ್ತಲಾಂಗೂಲಃ ಸವಿದ್ಯುದಿವ ತೋಯದಃ ।
ಭವನಾಗ್ರೇಷು ಲಂಕಾಯಾ ವಿಚಚಾರ ಮಹಾಕಪಿಃ ॥

ಅನುವಾದ

ಹೀಗೆ ಯೋಚಿಸಿದ ಬಳಿಕ ಬಾಲದ ಅಗ್ನಿಜ್ವಾಲೆಗಳಿಂದ ಬೆಳಗುತ್ತಿದ್ದ ಹನುಮಂತನು ಮಿಂಚಿನಿಂದ ಕೂಡಿದ ಮೇಘದಂತೆ ಪ್ರಕಾಶಿಸುತ್ತಾ, ಲಂಕಾನಗರದ ಭವನಾಗ್ರಗಳಲ್ಲಿ ಸಂಚರಿಸತೊಡಗಿದನು.॥6॥

ಮೂಲಮ್ - 7

ಗೃಹಾದ್ಗೃಹಂ ರಾಕ್ಷಸಾನಾಮುದ್ಯಾನಾನಿ ಚ ವಾನರಃ ।
ವೀಕ್ಷಮಾಣೋ ಹ್ಯಸಂತ್ರಸ್ತಃ ಪ್ರಾಸಾದಾಂಶ್ಚ ಚಚಾರ ಸಃ ॥

ಅನುವಾದ

ಒಬ್ಬ ರಾಕ್ಷಸನ ಮನೆಯಿಂದ ಮತ್ತೊಬ್ಬ ರಾಕ್ಷಸನ ಮನೆಗೂ, ಒಂದು ಕೈದೋಟದಿಂದ ಮತ್ತೊಂದು ಕೈದೋಟಕ್ಕೂ ಹೋಗುತ್ತಾ, ಉಪ್ಪರಿಗೆ ಮನೆಗಳನ್ನು ನೋಡುತ್ತಾ ನಿರ್ಭಯನಾಗಿ ಸಂಚರಿಸುತ್ತಿದ್ದನು.॥7॥

ಮೂಲಮ್ - 8

ಅವಪ್ಲುತ್ಯ ಮಹಾವೇಗಃ ಪ್ರಹಸ್ತಸ್ಯ ನಿವೇಶನಮ್ ।
ಅಗ್ನಿಂ ತತ್ರ ಸ ನಿಕ್ಷಿಪ್ಯ ಶ್ವಸನೇನ ಸಮೋ ಬಲೀ ॥

ಅನುವಾದ

ಮಹಾಬಲಪರಾಕ್ರಮಶಾಲಿಯೂ, ವಾಯುವೇಗದಂತೆ ವೇಗವುಳ್ಳವನೂ ಆದ ಹನುಮಂತನು ಮೊದಲಿಗೆ ಪ್ರಹಸ್ತನ ಮನೆಗೆ ಹೋಗಿ ಅದಕ್ಕೆ ಬೆಂಕಿಯಿಟ್ಟನು. (ಅವನು ರಾಜ್ಯದ ಪ್ರಧಾನಮಂತ್ರಿಯಾದ್ದರಿಂದ ಅವನ ಮನೆಯಿಂದಲೇ ಪ್ರಾರಂಭಿಸಿ ಲಂಕಾದಹನ ಕಾರ್ಯಕ್ರಮಕ್ಕೆ ನಾಂದಿಹಾಡಿದನು.)॥8॥

ಮೂಲಮ್ - 9

ತತೋಽನ್ಯತ್ಪುಪ್ಲುವೇ ವೇಶ್ಮ ಮಹಾಪಾರ್ಶ್ವಸ್ಯ ವೀರ್ಯವಾನ್ ।
ಮುಮೋಚ ಹನುಮಾನಗ್ನಿಂ ಕಾಲಾನಲಶಿಖೋಪಮಮ್ ॥

ಅನುವಾದ

ಬಳಿಕ ಮಹಾಶಕ್ತಿವಂತನಾದ ಮಾರುತಿಯು ಅಲ್ಲೇ ಸಮೀಪದಲ್ಲಿದ್ದ ಮಹಾಪಾರ್ಶ್ವನ ಭವನಕ್ಕೆ ನೆಗೆದು, ಪ್ರಳಯಾಗ್ನಿಯಂತಿರುವ ಬಾಲದ ಬೆಂಕಿಯಿಂದ ಅದನ್ನು ಉರಿಸಿದನು.॥9॥

ಮೂಲಮ್ - 10

ವಜ್ರದಂಷ್ಟ್ರಸ್ಯ ಚ ತಥಾ ಪುಪ್ಲುವೇ ಸ ಮಹಾಕಪಿಃ ।
ಶುಕಸ್ಯ ಚ ಮಹಾತೇಜಾಃ ಸಾರಣಸ್ಯ ಚ ಧೀಮತಃ ॥

ಮೂಲಮ್ - 11

ತಥಾ ಚೇಂದ್ರಜಿತೋ ವೇಶ್ಮ ದದಾಹ ಹರಿಯೂಥಪಃ ।
ಜಂಬುಮಾಲೇಃ ಸುಮಾಲೇಶ್ಚ ದದಾಹ ಭವನಂ ತತಃ ॥

ಅನುವಾದ

ಹಾಗೆಯೇ ಮಹಾತೇಜಶ್ಶಾಲಿಯೂ, ವಾನರೋತ್ತಮನೂ ಆದ ಹನುಮಂತನು ಕ್ರಮವಾಗಿ ಒಂದಾದಮೇಲೆ ಮತ್ತೊಂದರಂತೆ, ವಜ್ರದಂಷ್ಟ್ರನ ಭವನವನ್ನು, ಪ್ರಜ್ಞಾಶಾಲಿಯಾದ ಶುಕನ, ಸಾರಣನ ಮನೆಗಳಿಗೆ ಬೆಂಕಿಯಿಟ್ಟನು. ಅನಂತರ ಇಂದ್ರಜಿತುವಿನ ಪ್ರಾಸಾದವನ್ನು, ಜಂಬುಮಾಲಿ, ಸುಮಾಲಿ ಇವರ ಮನೆಗಳನ್ನು ಬೆಂಕಿಗೆ ಆಹುತಿಯಾಗಿಸಿದನು.॥10-11॥

ಮೂಲಮ್ - 12

ರಶ್ಮಿಕೇತೋಶ್ಚ ಭವನಂ ಸೂರ್ಯಶತ್ರೋಸ್ತಥೈವ ಚ ।
ಹ್ರಸ್ವಕರ್ಣಸ್ಯ ದಂಷ್ಟ್ರಸ್ಯ ರೋಮಶಸ್ಯ ಚ ರಕ್ಷಸಃ ॥

ಮೂಲಮ್ - 13

ಯುದ್ಧೋನ್ಮತ್ತಸ್ಯ ಮತ್ತಸ್ಯ ಧ್ವಜಗ್ರೀವಸ್ಯ ರಕ್ಷಸಃ ।
ವಿದ್ಯುಜ್ಜಿಹ್ವಸ್ಯ ಘೋರಸ್ಯ ತಥಾ ಹಸ್ತಿಮುಖಸ್ಯ ಚ ॥

ಮೂಲಮ್ - 14

ಕರಾಲಸ್ಯ ವಿಶಾಲಸ್ಯ ಶೋಣಿತಾಕ್ಷಸ್ಯ ಚೈವ ಹಿ ।
ಕುಂಭಕರ್ಣಸ್ಯ ಭವನಂ ಮಕರಾಕ್ಷಸ್ಯ ಚೈವ ಹಿ ॥

ಮೂಲಮ್ - 15

ಯಜ್ಞಶತ್ರೋಶ್ಚ ಭವನಂ ಬ್ರಹ್ಮಶತ್ರೋಸ್ತಥೈವ ಚ ।
ನರಾಂತಕಸ್ಯ ಕುಂಭಸ್ಯ ನಿಕುಂಭಸ್ಯ ದುರಾತ್ಮನಃ ॥

ಮೂಲಮ್ - 16

ವರ್ಜಯಿತ್ವಾ ಮಹಾತೇಜಾ ವಿಭೀಷಣಗೃಹಂ ಪ್ರತಿ ।
ಕ್ರಮಮಾಣಃ ಕ್ರಮೇಣೈವ ದದಾಹ ಹರಿಪುಂಗವಃ ॥

ಅನುವಾದ

ಬಳಿಕ ಮುಂದು - ಮುಂದಕ್ಕೆ ಹಾರಿಕೊಂಡು ಹೋಗುತ್ತಾ, ರಶ್ಮಿಕೇತು, ಸೂರ್ಯಶತ್ರು, ಹ್ರಸ್ವಕರ್ಣ, ದಂಷ್ಟ್ರ, ರೋಮಶ, ಯುದ್ಧೋನ್ಮತ್ತ, ಮತ್ತ, ಧ್ವಜಗ್ರೀವ, ವಿದ್ಯುಜ್ಜಿಹ್ವ, ಘೋರ, ಹಸ್ತಿಮುಖ, ಕರಾಲ, ಪಿಶಾಚ, ಶೋಣಿತಾಕ್ಷ, ಕುಂಭಕರ್ಣ, ಮಕರಾಕ್ಷ, ನರಾಂತಕ, ಕುಂಭ, ದುರಾತ್ಮನಾದ ನಿಶುಂಭ, ಯಜ್ಞ, ಶತ್ರು, ಬ್ರಹ್ಮಶತ್ರು ಇವರೆಲ್ಲರ ಸೌಧಗಳನ್ನು ಅನುಕ್ರಮವಾಗಿ ಸುಟ್ಟುಹಾಕಿದನು. ಆದರೆ ಕೃತಜ್ಞತೆಯಿಂದ ಮಾರುತಿಯು ವಿಭೀಷಣನ ಪ್ರಾಸಾದವನ್ನು ಮಾತ್ರ ಸುಡಲಿಲ್ಲ. (ಏಕೆಂದರೆ ವಿಭೀಷಣನು ರಾಜಸಭೆಯಲ್ಲಿ ತನ್ನ ಪರವಾಗಿ ಧರ್ಮವಚನಗಳನ್ನು ಆಡಿದ್ದನು.)॥12-16॥

ಮೂಲಮ್ - 17

ತೇಷು ತೇಷು ಮಹಾರ್ಹೇಷು ಭವನೇಷು ಮಹಾಯಶಾಃ ।
ಗೃಹೇಷ್ವೃದ್ಧಿಮತಾಮೃದ್ಧಿಂ ದದಾಹ ಸ ಮಹಾಕಪಿಃ ॥

ಅನುವಾದ

ಮಹಾಕೀರ್ತಿಶಾಲಿಯಾದ ವಾನರೋತ್ತಮನು - ಐಶ್ವರ್ಯ ಸಂಪನ್ನರಾದ ರಾಕ್ಷಸರ ಎಲ್ಲ ಭವನಗಳನ್ನೂ, ಬಹುಮೂಲ್ಯವಾದ ಹರ್ಮ್ಯಗಳಲ್ಲಿ ಇದ್ದ ಮಣಿ-ರತ್ನಾದಿ ಸಮಸ್ತ ಸಂಪತ್ತನ್ನು ಭಸ್ಮಮಾಡಿಬಿಟ್ಟನು. (ಮೊದಲು ಅಗ್ನಿ-ವಾಯುಗಳು ರಾವಣನಿಗೆ ಭಯಪಟ್ಟು ಹೆಚ್ಚು ಬೀಸದೇ, ಉರಿಯದೇ ಮಂದವಾಗಿದ್ದವು. ಈಗ ಸೀತಾದೇವಿಯ ಪ್ರಭಾವದಿಂದ, ಹನುಮಂತನ ಉತ್ಕರ್ಷದಿಂದ ಜೋರಾಗಿ ವಿಜೃಂಭಿಸಿದವು.)॥17॥

ಮೂಲಮ್ - 18

ಸರ್ವೇಷಾಂ ಸಮತಿಕ್ರಮ್ಯ ರಾಕ್ಷಸೇಂದ್ರಸ್ಯ ವೀರ್ಯವಾನ್ ।
ಆಸಸಾದಾಥ ಲಕ್ಷ್ಮೀವಾನ್ ರಾವಣಸ್ಯ ನಿವೇಶನಮ್ ॥

ಅನುವಾದ

ಸರ್ವಶುಭಲಕ್ಷಣ ಸಂಪನ್ನನಾದ, ಮಹಾವೀರನಾದ ಹನುಮಂತನು - ಎಲ್ಲರ ಮನೆಗಳನ್ನು ಅಗ್ನಿಗೆ ಆಹುತಿಯನ್ನಾಗಿಸಿದ ಬಳಿಕ, ರಾಕ್ಷಸ ರಾಜನಾದ ರಾವಣನ ಮಹಾಪ್ರಾಸಾದವನ್ನು ಸೇರಿದನು.॥18॥

ಮೂಲಮ್ - 19

ತತಸ್ತಸ್ಮಿನ್ ಗೃಹೇ ಮುಖ್ಯೇ ನಾನಾರತ್ನವಿಭೂಷಿತೇ ।
ಮೇರುಮಂದರಸಂಕಾಶೇ ಸರ್ವಮಂಗಲಶೋಭಿತೇ ॥

ಮೂಲಮ್ - 20

ಪ್ರದೀಪ್ತಮಗ್ನಿಮುತ್ಸೃಜ್ಯ ಲಾಂಗೂಲಾಗ್ರೇ ಪ್ರತಿಷ್ಠಿತಮ್ ।
ನನಾದ ಹನುಮಾನ್ ವೀರೋ ಯುಗಾಂತೇ ಜಲದೋ ಯಥಾ ॥

ಅನುವಾದ

ವೀರನಾದ ಹನುಮಂತನು - ಮೇರುಮಂದರ ಪರ್ವತದಂತೆ ಮಹೋನ್ನತ ವಾಗಿರುವ, ಸರ್ವವಿಧವಾದ ಶುಭಲಕ್ಷಣಗಳಿಂದ ಕೂಡಿರುವ, ನಾನಾವಿಧ ರತ್ನಗಳಿಂದ ಅಲಂಕೃತವಾಗಿದ್ದ ಆ ಮುಖ್ಯಪ್ರಾಸಾದಕ್ಕೆ ತನ್ನ ಬಾಲದ ತುದಿಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನಿಟ್ಟು, ಪ್ರಳಯಕಾಲದ ಕಾಲಮೇಘದಂತೆ ಗರ್ಜಿಸಿದನು.॥19-20॥

ಮೂಲಮ್ - 21

ಶ್ವಸನೇನ ಚ ಸಂಯೋಗಾದತಿವೇಗೋ ಮಹಾಬಲಃ ।
ಕಾಲಾಗ್ನಿರಿವ ಸಂದೀಪ್ತಃ ಪ್ರಾವರ್ಧತ ಹುತಾಶನಃ ॥

ಅನುವಾದ

ಮಹಾಬಲಶಾಲಿಯಾದ ಅಗ್ನಿದೇವನು ವಾಯುವಿನ ಸಹಯೋಗದಿಂದ ಪ್ರಳಯಕಾಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ಎಲ್ಲ ಕಡೆಗಳಲ್ಲಿಯೂ ಹರಡಿಕೊಂಡನು.॥21॥

ಮೂಲಮ್ - 22

ಪ್ರವೃದ್ಧಮಗ್ನಿಂ ಪವನಸ್ತೇಷು ವೇಶ್ಮ ಸ್ವಚಾರಯತ್ ।
ಅಭೂಚ್ಛ್ವಸನಸಂಯೋಗಾದತಿವೇಗೋ ಹುತಾಶನಃ ॥

ಅನುವಾದ

ರಾಕ್ಷಸರ ಮನೆಗಳಲ್ಲಿ ಪ್ರಜ್ವಲಿಸುತ್ತಿದ್ದ ಅಗ್ನಿಯನ್ನು ವಾಯುವು ತನ್ನ ಪ್ರಭಾವದಿಂದ ಸರ್ವತ್ರ ಹರಡಲು ಸಹಕರಿಸಿದನು. ॥22॥

ಮೂಲಮ್ - 23

ತಾನಿ ಕಾಂಚನಜಾಲಾನಿ ಮುಕ್ತಾಮಣಿಮಯಾನಿ ಚ ।
ಭವನಾನಿ ವ್ಯಶೀರ್ಯಂತ ರತ್ನವಂತಿ ಮಹಾಂತಿ ಚ ॥

ಅನುವಾದ

ಸುವರ್ಣಮಯವಾದ ಗವಾಕ್ಷಗಳಿಂದಲೂ, ಮುಕ್ತಾಮಣಿಗಳಿಂದಲೂ, ರತ್ನರಾಶಿಗಳಿಂದಲೂ, ಸಮೃದ್ಧವಾಗಿದ್ದ ಎಲ್ಲ ಮಹಾಸೌಧಗಳನ್ನು ಅಗ್ನಿಯು ವಿನಾಶಗೊಳಿಸಿದನು.॥23॥

ಮೂಲಮ್ - 24

ತಾನಿ ಭಗ್ನವಿಮಾನಾನಿ ನಿಪೇತುರ್ಧರಣೀತಲೇ ।
ಭವನಾನೀವ ಸಿದ್ಧಾನಾಮಂಬರಾತ್ ಪುಣ್ಯಸಂಕ್ಷಯೇ ॥

ಅನುವಾದ

ಪುಣ್ಯವು ಕ್ಷಯಿಸಿದ ನಂತರ ಆಕಾಶದಿಂದ ಸಿದ್ಧರ ಭವ್ಯಭವನಗಳು ಕೆಳಕ್ಕೆ ಬೀಳುವಂತೆ, ಲಂಕೆಯ ಎತ್ತರವಾದ ಪ್ರಾಸಾದಗಳು ಉರಿದು ನೆಲಸಮವಾದವು.॥24॥

ಮೂಲಮ್ - 25

ಸಂಜಜ್ಞೇ ತುಮುಲಃ ಶಬ್ದೋ ರಾಕ್ಷಸಾನಾಂ ಪ್ರಧಾವತಾಮ್ ।
ಸ್ವಗೃಹಸ್ಯ ಪರಿತ್ರಾಣೇ ಭಗ್ನೋತ್ಸಾಹೋರ್ಜಿತಶ್ರಿಯಾಮ್ ॥

ಅನುವಾದ

ಸ್ವಗೃಹಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದವರೂ, ಉತ್ಸಾಹ, ಬಲ, ಸಂಪತ್ತನ್ನು ಕಳಕೊಂಡವರಾದ ರಾಕ್ಷಸರು - ಅಯ್ಯೋ! ಎಂದು ವಿಕಾರವಾಗಿ ಕೂಗುತ್ತಾ ಓಡುತ್ತಿದ್ದರು.॥25॥

ಮೂಲಮ್ - 26

ನೂನಮೇಷೋಽಗ್ನಿರಾಯಾತಃ ಕಪಿರೂಪೇಣ ಹಾ ಇತಿ ।
ಕ್ರಂದಂತ್ಯಃ ಸಹಸಾ ಪೇತುಃ ಸ್ತನಂಧಯಧರಾಃ ಸ್ತ್ರಿಯಃ ॥

ಅನುವಾದ

ನಿಜವಾಗಿ ಅಗ್ನಿಯೇ ಕಪಿಯರೂಪವನ್ನು ಧರಿಸಿ ನಮ್ಮೆಲ್ಲರನ್ನು ಸುಟ್ಟುಹಾಕಲು ಬಂದಿರುವನು. ಎಂದು ಕೂಗಿಕೊಳ್ಳುತ್ತಾ ಮಕ್ಕಳನ್ನೆತ್ತಿಕೊಂಡಿದ್ದ ಕೆಲವು ಸ್ತ್ರೀಯರು ಕೆಳಗುರುಳಿದರು.॥26॥

ಮೂಲಮ್ - 27

ಕಾಶ್ಚಿದಗ್ನಿಪರೀತಾಂಗ್ಯೋ ಹರ್ಮ್ಯೇಭ್ಯೋ ಮುಕ್ತಮೂರ್ಧಜಾಃ ।
ಪತಂತ್ಯೋ ರೇಜಿರೇಽಭ್ರೇಭ್ಯಃ ಸೌದಾಮಿನ್ಯ ಇವಾಂಬರಾತ್ ॥

ಅನುವಾದ

ಅಗ್ನಿಯಿಂದ ಸಮಾವೃತರಾದ ಕೆಲವು ಸ್ತ್ರೀಯರು ಕೆದರಿದ ಕೂದಲುಗಳಿಂದ ಎತ್ತರವಾದ ಉಪ್ಪರಿಗೆಗಳಿಂದ ಕೆಳಕ್ಕೆ ಬೀಳುವಾಗ, ಆಕಾಶದಿಂದ ಕೆಳಗೆ ಬೀಳುವ ಮಿಂಚಿನಂತೆ ಗೋಚರಿಸುತ್ತಿದ್ದವು.॥27॥

ಮೂಲಮ್ - 28

ವಜ್ರವಿದ್ರುಮವೈದೂರ್ಯಮುಕ್ತಾರಜತಸಂಹಿತಾನ್ ।
ವಿಚಿತ್ರಾನ್ ಭವನಾದ್ಧಾತೂನ್ ಸ್ಯಂದಮಾನಾನ್ ದದರ್ಶ ಸಃ ॥

ಅನುವಾದ

ವಜ್ರ, ಹವಳ, ವೈಡೂರ್ಯ, ಮುತ್ತು, ಬೆಳ್ಳಿ ಮುಂತಾದುವುಗಳಿಂದ ಸಮೃದ್ಧವಾಗಿದ್ದು, ವಿಚಿತ್ರವಾದ ಭವನಗಳು ಅಗ್ನಿಗೆ ಆಹುತಿಯಾಗುವುದನ್ನು, ಸುವರ್ಣವೇ ಮುಂತಾದ ಧಾತುಗಳು ಕರಗಿ ಹರಿಯುತ್ತಿ ರುವುದನ್ನು ಹನುಮಂತನು ನೋಡಿದನು. ॥28॥

ಮೂಲಮ್ - 29

ನಾಗ್ನಿಸ್ತೃಪ್ಯತಿ ಕಾಷ್ಠಾನಾಂ ತೃಣಾನಾಂ ಚ ಯಥಾ ತಥಾ ।
ಹನೂಮಾನ್ ರಾಕ್ಷಸೇಂದ್ರಾಣಾಂ ವಧೇ ಕಿಂಚಿನ್ನ ತೃಪ್ಯತಿ ॥

ಅನುವಾದ

ಅಗ್ನಿಯು ಕಟ್ಟಿಗೆಗಳಿಂದಾಗಲೀ, ಹುಲ್ಲಿನಿಂದಾಗಲೀ, ತೃಪ್ತನಾಗದಿರುವಂತೆ; ಹನುಮಂತನು ರಾಕ್ಷಸರ ಎಷ್ಟು ಭವನಗಳನ್ನು ಸುಟ್ಟರೂ ತೃಪ್ತನಾಗಲಿಲ್ಲ. ಹನುಮಂತನ ಕೈಯಿಂದ ಹತರಾದ ರಾಕ್ಷಸರ ಶವಗಳಿಂದ ಭೂಮಿಗೂ ತೃಪ್ತಿಯಾಗಲಿಲ್ಲ.॥29॥

ಮೂಲಮ್ - 30

ನ ಹನೂಮದ್ವಿಶಸ್ತಾನಾಂ ರಾಕ್ಷಸಾನಾಂ ವಸುಂಧರಾ ।
ಕ್ವಚಿತ್ ಕಿಂಶುಕಸಂಕಾಶಾಃ ಕ್ವಚಿಚ್ಛಾಲ್ಮಲಿಸನ್ನಿಭಾಃ ॥

ಅನುವಾದ

ಅಲ್ಲಿ ಉರಿಯುತ್ತಿದ್ದ ಕೆಲವು ಅಗ್ನಿಜ್ವಾಲೆಗಳು ಮುತ್ತುಗದ ಹೂವಿನಂತೆ ಕೆಂಪಗಿದ್ದವು. ಮತ್ತೆ ಕೆಲವು ಜ್ವಾಲೆಗಳು ಗೋಧೂಮ ಬಣ್ಣದಿಂದಿದ್ದರೆ, ಇನ್ನು ಕೆಲವುಗಳು ತಾವರೆಯಂತಹ ಕುಂಕುಮ ಬಣ್ಣದಿಂದ ಪ್ರಕಾಶಿಸುತ್ತಿದ್ದವು.॥30॥

ಮೂಲಮ್ - 31

ಕ್ವಚಿತ್ ಕುಂಕುಮಸಂಕಾಶಾಃ ಶಿಖಾ ವಹ್ನೇಶ್ಚಕಾಶಿರೇ ।
ಹನೂಮತಾ ವೇಗವತಾ ವಾನರೇಣ ಮಹಾತ್ಮನಾ ॥

ಅನುವಾದ

ಮಹಾತ್ಮನೂ, ಮಹಾಬಲ ಪರಾಕ್ರಮಗಳುಳ್ಳವನೂ, ವಾನರೋತ್ತಮನೂ ಆದ ಹನುಮಂತನಿಂದ ಆ ಲಂಕಾನಗರವು - ರುದ್ರನಿಂದ ತ್ರಿಪುರಗಳು ದಗ್ಧವಾಗುವಂತೆ ಸುಟ್ಟು ಹೋಗುತ್ತಿತ್ತು.॥31॥

ಮೂಲಮ್ - 32

ಲಂಕಾಪುರಂ ಪ್ರದಗ್ಧಂ ತದ್ರುದ್ರೇಣ ತ್ರಿಪುರಂ ಯಥಾ ॥

ಅನುವಾದ

ಮಹಾಶಕ್ತಿಶಾಲಿಯಾದ ಹನುಮಂತನು ಉರಿಸಿದ - ಭೀಮಪರಾಕ್ರಮಿಯಾದ ಅಗ್ನಿಯು ತ್ರಿಕೂಟಾಚಲದಲ್ಲಿ ನೆಲೆಸಿದ್ದ ಲಂಕಾನಗರದಲ್ಲಿ ವಲಯಾಕಾರದಲ್ಲಿ ಪ್ರಜ್ವಲಿಸುತ್ತಾ ಎಲ್ಲ ರಾಕ್ಷಸರ ಮನೆಗಳಲ್ಲಿ ವಿಜೃಂಭಿಸಿದನು.॥32॥

ಮೂಲಮ್ - 33

ತತಸ್ತು ಲಂಕಾಪುರಪರ್ವತಾಗ್ರೇ
ಸಮುತ್ಥಿತೋ ಭೀಮಪರಾಕ್ರಮೋಽಗ್ನಿಃ ।
ಪ್ರಸಾರ್ಯ ಚೂಡಾವಲಯಂ ಪ್ರದೀಪ್ತೋ
ಹನೂಮತಾ ವೇಗವತಾ ವಿಸೃಷ್ಟಃ ॥

ಮೂಲಮ್ - 34

ಯುಗಾಂತಕಾಲಾನಲತುಲ್ಯವೇಗಃ
ಸಮಾರುತೋಽಗ್ನಿರ್ವವೃಧೇ ದಿವಿಸ್ಪೃಕ್ ।
ವಿಧೂಮರಶ್ಮಿರ್ಭವನೇಷು ಸಕ್ತೋ
ರಕ್ಷಃಶರೀರಾಜ್ಯಸಮರ್ಪಿತಾರ್ಚಿಃ ॥

ಮೂಲಮ್ - 35

ಆದಿತ್ಯ ಕೋಟಿಸದೃಶಃ ಸುತೇಜಾ
ಲಂಕಾಂ ಸಮಸ್ತಾಂ ಪರಿವಾರ್ಯ ತಿಷ್ಠನ್ ।
ಶಬ್ದೈರನೇಕೈರಶನಿಪ್ರರೂಢೈ-
ರ್ಭಿಂದನ್ನಿವಾಂಡಂ ಪ್ರಬಭೌ ಮಹಾಗ್ನಿಃ ॥

ಅನುವಾದ

ಹೊಗೆಯಿಲ್ಲದ ಜ್ವಾಲೆಗಳಿಂದ ಕೂಡಿದ್ದ, ರಾಕ್ಷಸರ ಶರೀರಗಳೆಂಬ ಆಹುತಿಗಳಿಂದ ತೃಪ್ತಿಗೊಳ್ಳುತ್ತಿದ್ದ ಅಗ್ನಿಯು, ಗಾಳಿಯ ಸಹಾಯದಿಂದ ಕ್ಷಣ-ಕ್ಷಣಕ್ಕೂ ವೃದ್ಧಿಹೊಂದಿತ್ತು. ಪ್ರಳಯಕಾಲದ ಅಗ್ನಿಯಂತೆ ಆಕಾಶವನ್ನು ಮುಟ್ಟುತ್ತಿತ್ತು. ಆ ಮಹಾಗ್ನಿಯು ಕೋಟಿ ಸೂರ್ಯರ ತೇಜಸ್ಸಿನಂತೆ ಸಮಗ್ರವಾದ ಲಂಕೆಯನ್ನು ವ್ಯಾಪಿಸಿಬಿಟ್ಟಿತು. ಸಿಡಿಲಿನ ಶಬ್ದದಂತೆ ಭಯಂಕರವಾದ ಶಬ್ದಮಾಡುತ್ತಾ ಬ್ರಹ್ಮಾಂಡವನ್ನೇ ಭೇದಿಸು ತ್ತಿರುವುದೋ ಎಂಬಂತೆ ಕಾಣುತ್ತಿತ್ತು. ತೀವ್ರವಾದ ಕಾಂತಿಯುಳ್ಳ, ಮುತ್ತುಗದ ಹೂವುಗಳಂತೆ ಕೆಂಪಾದ ಅಗ್ನಿಜ್ವಾಲೆಗಳು ಆಕಾಶದವರೆವಿಗೂ ವ್ಯಾಪಿಸಿದವು. ಬೆಂಕಿಯು ಆರಿಹೋದ ಬಳಿಕ ಹುಟ್ಟಿದ ಹೊಗೆಯ ಸಾಲುಗಳಿಂದ ಸಮಾವೃತವಾದ ಮೇಘಗಳು ಕನ್ನೈದಿಲೆ ಹೂಗಳಂತೆ ಪ್ರಕಾಶಿಸುತ್ತಿದ್ದವು.॥33-35॥

ಮೂಲಮ್ - 36

ತತ್ರಾಂಬರಾದಗ್ನಿರತಿಪ್ರವೃದ್ಧೋ
ರೂಕ್ಷಪ್ರಭಃ ಕಿಂಶುಕಪುಷ್ಪಚೂಡಃ ।
ನಿರ್ವಾಣಧೂಮಾಕುಲರಾಜಯಶ್ಚ
ನೀಲೋತ್ಪಲಾಭಾಃ ಪ್ರಚಕಾಶಿರೇಽಭ್ರಾಃ ॥

ಮೂಲಮ್ - 37

ವಜ್ರೀ ಮಹೇಂದ್ರಸ್ತ್ರಿದಶೇಶ್ವರೋ ವಾ
ಸಾಕ್ಷಾದ್ಯಮೋ ವಾ ವರುಣೋನಿಲೋ ವಾ ।
ರುದ್ರೋಽಗ್ನಿರರ್ಕೋ ಧನದಶ್ಚ ಸೋಮೋ
ನ ವಾನರೋಽಯಂ ಸ್ವಯಮೇವ ಕಾಲಃ ॥

ಮೂಲಮ್ - 38

ಕಿಂ ಬ್ರಹ್ಮಣಃ ಸರ್ವಪಿತಾಮಹಸ್ಯ
ಸರ್ವಸ್ಯ ಧಾತುಶ್ಚತುರಾನನಸ್ಯ ।
ಇಹಾಗತೋ ವಾನರರೂಪಧಾರೀ
ರಕ್ಷೋಪಸಂಹಾರಕರಃ ಪ್ರಕೋಪಃ ॥

ಮೂಲಮ್ - 39

ಕಿಂ ವೈಷ್ಣವಂ ವಾ ಕಪಿರೂಪಮೇತ್ಯ
ರಕ್ಷೋವಿನಾಶಾಯ ಪರಂ ಸುತೇಜಃ ।
ಅನಂತಮವ್ಯಕ್ತಮಚಿಂತ್ಯಮೇಕಂ
ಸ್ವಮಾಯಯಾ ಸಾಂಪ್ರತಮಾಗತಂ ವಾ ॥

ಅನುವಾದ

ಮನೆ-ಮಠಗಳು ಸುಟ್ಟು ನಿರ್ಗತಿಕರಾದ ರಾಕ್ಷಸರು ಈ ರೀತಿಯಾಗಿ ತರ್ಕಿಸುತ್ತಾ ಗೋಳಾಡುತ್ತಿದ್ದರು - ಇವನು ನೋಡಲು ವಾನರನಾಗಿದ್ದರೂ ಖಂಡಿತವಾಗಿಯೂ ಇವನು ವಾನರನಲ್ಲ. ಸಾಕ್ಷಾತ್ ಕಾಲನೇ ಆಗಿರಬೇಕು. ಅಥವಾ ತ್ರಿದಶೇಶ್ವರನಾದ, ವಜ್ರಪಾಣಿಯಾದ ಇಂದ್ರನೇ ಆಗಿರಬೇಕು. ಅಥವಾ ಸಾಕ್ಷಾತ್ ಯಮಧರ್ಮನೇ ಆಗಿರಬೇಕು. ಅಥವಾ ವರುಣ, ವಾಯು, ರುದ್ರ, ಅಗ್ನಿ, ಸೂರ್ಯ, ಕುಬೇರ, ಸೋಮ - ಇವರಲ್ಲಿ ಯಾವನಾದರೂ ಒಬ್ಬನಾಗಿರಬೇಕು. ಸರ್ವರಿಗೂ ಪಿತಾಮಹನಾದ, ಚತುರ್ಮುಖನಾದ, ಲೋಕರಕ್ಷಕನಾದ ಬ್ರಹ್ಮನೇ ಕೋಪಗೊಂಡು ರಾಕ್ಷಸರ ಸಂಹಾರಕ್ಕಾಗಿ ವಾನರ ರೂಪವನ್ನು ಧರಿಸಿ ಇಲ್ಲಿಗೆ ಆಗಮಿಸಿರಬಹುದೇ? ಚಿಂತಿಸಲು ಅವಶ್ಯವಾದ, ಅನಂತವಾದ, ಅದ್ವಿತೀಯವಾದ, ವೈಷ್ಣವ ಮಹಾತೇಜಸ್ಸೇನಾದರೂ ತನ್ನ ಮಾಯೆಯಿಂದ ಕಪಿ ರೂಪವನ್ನು ಧರಿಸಿ ರಾಕ್ಷಸರ ಸಂಹಾರಕ್ಕಾಗಿಯೇ ಇಲ್ಲಿಗೆ ಬಂದಿರಬಹುದೇ?॥36-39॥

ಮೂಲಮ್ - 40

ಇತ್ಯೇವಮೂಚುರ್ಬಹವೋ ವಿಶಿಷ್ಟಾ
ರಕ್ಷೋಗಣಾಸ್ತತ್ರ ಸಮೇತ್ಯ ಸರ್ವೇ ।
ಸಪ್ರಾಣಿಸಂಘಾಂ ಸಗೃಹಾಂ ಸವೃಕ್ಷಾಂ
ದಗ್ಧಾಂ ಪುರೀಂ ತಾಂ ಸಹಸಾ ಸಮೀಕ್ಷ್ಯ ॥

ಅನುವಾದ

ಪ್ರಾಣಿಸಂಕುಲಗಳು, ವೃಕ್ಷಗಳು, ಸೌಧಗಳೊಡಗೂಡಿ ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾದ ಆ ಲಂಕಾನಗರವನ್ನು ನೋಡಿ, ಪ್ರಮುಖ ರಾಕ್ಷಸರೆಲ್ಲರೂ ಅಲ್ಲಲ್ಲಿ ಒಟ್ಟಿಗೆ ಸೇರಿ ವಿಧವಿಧವಾಗಿ ಮಾತಾಡಿಕೊಳ್ಳುತ್ತಿದ್ದರು.॥40॥

ಮೂಲಮ್ - 41

ತತಸ್ತು ಲಂಕಾ ಸಹಸಾ ಪ್ರದಗ್ಧಾ
ಸರಾಕ್ಷಸಾ ಸಾಶ್ವರಥಾ ಸನಾಗಾ ।
ಸಪಕ್ಷಿಸಂಘಾಸಮೃಗಾ ಸವೃಕ್ಷಾ
ರುರೋದ ದೀನಾ ತುಮುಲಂ ಸಶಬ್ದಮ್ ॥

ಅನುವಾದ

ಮತ್ತೆ ರಾಕ್ಷಸರು, ರಥಾಶ್ವ ಗಜಗಳು, ಪಕ್ಷಿಗಳ ಗುಂಪುಗಳು, ಮೃಗಗಳ ಸಮೂಹಗಳು, ವೃಕ್ಷಗಳು, ಹೀಗೆ ಇವೆಲ್ಲದರೊಡನೆ ಭಸ್ಮವಾಗಿಹೋಗಿದ್ದ ಲಂಕೆಯ ಉಳಿದ ಜನರು ದೀನರಾಗಿ ಗಟ್ಟಿಯಾಗಿ ಅಳತೊಡಗಿದರು.॥41॥

ಮೂಲಮ್ - 42

ಹಾ ತಾತ ಹಾ ಪುತ್ರಕ ಕಾಂತ ಮಿತ್ರ
ಹಾ ಜೀವಿತಂ ಭೋಗಯುತಂ ಸುಪುಣ್ಯಮ್ ।
ರಕ್ಷೋಭಿರೇವಂ ಬಹುಧಾ ಬ್ರುವದ್ಭಿಃ
ಶಬ್ದಃ ಕೃತೋ ಘೋರತರಃ ಸುಭೀಮಃ ॥

ಅನುವಾದ

ಅಯ್ಯೋ! ತಂದೆಯೇ! ಅಯ್ಯೋ ಮಗನೇ! ಹಾ ನಾಥಾ! ಎಲೈ ಮಿತ್ರನೇ! ಪುಣ್ಯಫಲರೂಪವಾದ ಓ ಭೋಗಮಯ ಜೀವಿತವೇ! ಎಂದು ವಿಲಾಪಿಸುತ್ತಾ ರಾಕ್ಷಸರೆಲ್ಲರೂ ಅಳುತ್ತಿದ್ದರು. ಅವರ ಅಳುವಿನ ಧ್ವನಿಗಳು ಜೋರಾಗಿಯೂ, ಭಯಂಕರವಾಗಿಯೂ ಇದ್ದವು.॥42॥

ಮೂಲಮ್ - 43

ಹುತಾಶನಜ್ವಾಲಸಮಾವೃತಾ ಸಾ
ಹತಪ್ರವೀರಾ ಪರಿವೃತ್ತಯೋಧಾ ।
ಹನೂಮತಃ ಕ್ರೋಧಬಲಾಭಿಭೂತಾ
ಬಭೂನ ಶಾಪೋಪಹತೇವ ಲಂಕಾ ॥

ಅನುವಾದ

ಹನುಮಂತನ ಕ್ರೋಧಪ್ರಭಾವದಿಂದ ಲಂಕೆಯು ನಿರ್ಜೀವವಾಯಿತು. ಅದರ ಸುತ್ತಲೂ ಅಗ್ನಿಜ್ವಾಲೆಗಳು ಆವರಿಸಿಕೊಂಡವು. ಅದರಲ್ಲಿರುವ ಕೆಲವು ವೀರರು ಹತರಾದರು. ಸೈನಿಕರೆಲ್ಲರೂ ಪಲಾಯನ ಮಾಡಿದರು. ಲಂಕಾನಗರವು ಶಾಪಗ್ರಸ್ತವಾದಂತೆ ಕಾಣುತ್ತಿತ್ತು.॥43॥

ಮೂಲಮ್ - 44

ಸ ಸಂಭ್ರಮತ್ರಸ್ತವಿಷಣ್ಣರಾಕ್ಷಸಾಂ
ಸುಮುಜ್ವಲಜ್ಜ್ವಾಲಹುತಾಶನಾಂಕಿತಾಮ್ ।
ದದರ್ಶ ಲಂಕಾಂ ಹನುಮಾನ್ ಮಹಾಮನಾಃ
ಸ್ವಯಃಭುಕೋಪೋಪಹತಾಮಿವಾವನಿಮ್ ॥

ಅನುವಾದ

ಭಯದಿಂದ ವಿಹ್ವಲರಾಗಿ ವಿಷಣ್ಣವದನರಾಗಿದ್ದ, ರಾಕ್ಷಸರಿಂದ ಕೂಡಿದ್ದ, ಊರ್ಧ್ವಮುಖವಾಗಿ ಉರಿಯುತ್ತಿದ್ದ ಜ್ವಾಲೆಗಳುಳ್ಳ ಬೆಂಕಿಯು ಸುಟ್ಟ ಗುರುತಿನಿಂದ ವ್ಯಾಪ್ತವಾಗಿದ್ದ, ಬ್ರಹ್ಮನ ಕೋಪದಿಂದ ವಿನಾಶಹೊಂದಿದ ಭೂಮಿಯಂತೆ ಕಾಣುತ್ತಿದ್ದ ಲಂಕಾಪಟ್ಟಣವನ್ನು ಮಹಾತ್ಮನಾದ ಹನುಮಂತನು ನೋಡಿದನು.॥44॥

ಮೂಲಮ್ - 45

ಭಂಕ್ತ್ವಾ ವನಂ ಪಾದಪರತ್ನಸಂಕುಲಂ
ಹತ್ವಾ ತು ರಕ್ಷಾಂಸಿ ಮಹಾಂತಿ ಸಂಯುಗೇ ।
ದಗ್ಧ್ವಾಪುರೀಂ ತಾಂ ಗೃಹರತ್ನ ಮಾಲಿನೀಂ
ತಸ್ಥೌ ಹನೂಮಾನ್ ಪವನಾತ್ಮಜಃ ಕಪಿಃ ॥

ಅನುವಾದ

ಮರುತಾತ್ಮಜನಾದ ಮಾರುತಿಯು ಶ್ರೇಷ್ಠವಾದ ವೃಕ್ಷಗಳಿಂದ ಒಡಗೊಂಡ ಅಶೋಕವನವನ್ನು ಭಂಗಗೊಳಿಸಿದನು. ರಣರಂಗದಲ್ಲಿ ಮಹಾರಾಕ್ಷಸ ಯೋಧರನ್ನು ಸಂಹರಿಸಿದನು. ಎತ್ತರವಾದ ಮನೆಗಳ ಸಾಲುಗಳಿಂದ ಸಮಲಂಕೃತವಾದ ಲಂಕೆಯನ್ನು ಸುಟ್ಟುಹಾಕಿದನು. ಹೀಗೆ ಸಂಕಲ್ಪಿಸಿದ ಕಾರ್ಯಗಳೆಲ್ಲವನ್ನು ಚೆನ್ನಾಗಿ ಪೂರ್ತಿಗೊಳಿಸಿ ನೆಮ್ಮದಿಯನ್ನು ಹೊಂದಿದನು.॥45॥

ಮೂಲಮ್ - 46

ತ್ರಿಕೂಟಶೃಂಗಾಗ್ರತಲೇ ವಿಚಿತ್ರೇ
ಪ್ರತಿಷ್ಠಿತೋ ವಾನರರಾಜಸಿಂಹಃ ।
ಪ್ರದೀಪ್ತಲಾಂಗೂಲಕೃತಾರ್ಚಿಮಾಲೀ
ವ್ಯರಾಜತಾದಿತ್ಯ ಇವಾಂಶುಮಾಲೀ ॥

ಅನುವಾದ

ವಿಚಿತ್ರವಾದ ತ್ರಿಕೂಟಪರ್ವತದ ತುದಿಯಲ್ಲಿ ನಿಂತಿದ್ದ ವಾನರೋತ್ತಮನು, ಬಾಲದಲ್ಲಿ ಪ್ರಜ್ವಲಿಸುತ್ತಿರುವ ಅಗ್ನಿಜ್ವಾಲಾ ಮಾಲಿಕೆಯಿಂದ ಶೋಭಿತನಾಗಿ, ಕಿರಣ ಪುಂಜದಿಂದ ಪ್ರಕಾಶಿಸುತ್ತಿರುವ ಸೂರ್ಯನಂತೆ ಪ್ರಕಾಶಿಸುತ್ತಿದ್ದನು.॥46॥

ಮೂಲಮ್ - 47

ಸ ರಾಕ್ಷಸಾಂಸ್ತಾನ್ ಸುಬಹೂಂಶ್ಚ ಹತ್ವಾ
ವನಂ ಚ ಭಂಕ್ತ್ವಾ ಬಹುಪಾದಪಂ ತತ್ ।
ವಿಸೃಜ್ಯ ರಕ್ಷೋಭವನೇಷು ಚಾಗ್ನಿಂ
ಜಗಾಮ ರಾಮಂ ಮನಸಾ ಮಹಾತ್ಮಾ ॥

ಅನುವಾದ

ಮಹಾತ್ಮನಾದ ಹನುಮಂತನು ಗುಂಪು-ಗುಂಪಾಗಿದ್ದ ರಾಕ್ಷಸರನ್ನು ಸಂಹರಿಸಿ, ಅನೇಕ ವೃಕ್ಷಗಳಿಂದ ನಿಬಿಡವಾದ ಅಶೋಕವನವನ್ನು ಧ್ವಂಸಮಾಡಿ, ರಾಕ್ಷಸರ ಮನೆಗಳಿಗೆ ಬೆಂಕಿಯನ್ನಿಟ್ಟು ರಾಮಧ್ಯಾನದಲ್ಲಿ ನಿಮಗ್ನನಾದನು.॥47॥

ಮೂಲಮ್ - 48

ತತಸ್ತು ತಂ ವಾನರವೀರಮುಖ್ಯಂ
ಮಹಾಬಲಂ ಮಾರುತತುಲ್ಯವೇಗಮ್ ।
ಮಹಾಮತಿಂ ವಾಯುಸುತಂ ವರಿಷ್ಠಂ
ಪ್ರತುಷ್ಟುವುರ್ದೇವಗಣಾಶ್ಚ ಸರ್ವೇ ॥

ಅನುವಾದ

ವಾನರ ವೀರರಲ್ಲಿ ಪ್ರಮುಖನಾದವನೂ, ಮಹಾ ಬಲಶಾಲಿಯೂ, ವಾಯುವಿನಂತೆ ವೇಗಶಾಲಿಯೂ, ಬುದ್ಧಿವಂತ ರಲ್ಲಿ ವರಿಷ್ಠನೂ, ಸರ್ವಶ್ರೇಷ್ಠನೂ ಆದ ಮಾರುತಿಯನ್ನು ಎಲ್ಲ ದೇವತೆಗಳು ಆದರದಿಂದ ಸ್ತೋತ್ರಮಾಡಿದರು.॥48॥

ಮೂಲಮ್ - 49

ಭಂಕ್ತ್ವಾವನಂ ಮಹಾತೇಜಾ ಹತ್ವಾ ರಕ್ಷಾಂಸಿ ಸಂಯುಗೇ ।
ದಗ್ಧ್ವಾ ಲಂಕಾಪುರೀಂ ರಮ್ಯಾಂ ರರಾಜ ಸ ಮಹಾಕಪಿಃ ॥

ಅನುವಾದ

ಮಹಾತೇಜಶ್ಶಾಲಿಯಾದ ಆ ವಾನರೋತ್ತಮನು ಅಶೋಕವನವನ್ನು ಧ್ವಂಸಮಾಡಿ, ರಾಕ್ಷಸರನ್ನು ಸಮರ ಭೂಮಿಯಲ್ಲಿ ಬಲಿಗೊಟ್ಟು, ರಮ್ಯವಾದ ಲಂಕಾನಗರವನ್ನು ಧಗಧಗಿಸುವ ಬೆಂಕಿಗೆ ಪಾಲಾಗಿಸಿ, ವಿರಾಜಿಸುತ್ತಿದ್ದನು.॥49॥

ಮೂಲಮ್ - 50

ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ದೃಷ್ಟ್ವಾ ಲಂಕಾಂ ಪ್ರದಗ್ಧಾಂ ತಾಂ ವಿಸ್ಮಯಂ ಪರಮಂ ಗತಾಃ ॥

ಅನುವಾದ

ಆಗ ದೇವತೆಗಳೂ, ಗಂಧರ್ವರೂ, ಸಿದ್ಧರೂ, ಮಹರ್ಷಿಗಳೂ, ಅಗ್ನಿಜ್ವಾಲೆಗಳಿಂದ ಸುಟ್ಟುಹೋದ ಆ ಲಂಕೆಯನ್ನು ನೋಡಿ ಎಣೆಯಿಲ್ಲದ ಪ್ರೀತಿಯನ್ನು ಹೊಂದಿದರು.॥50॥

ಮೂಲಮ್ - 51

ತಂ ದೃಷ್ಟ್ವಾ ವಾನರಶ್ರೇಷ್ಠಂ ಹನುಮಂತಂ ಮಹಾಕಪಿಮ್ ।
ಕಾಲಾಗ್ನಿರಿತಿ ಸಂಚಿಂತ್ಯ ಸರ್ವಭೂತಾನಿ ತತ್ರಸುಃ ॥

ಅನುವಾದ

ಸಕಲ ಪ್ರಾಣಿಗಳು ವಾನರೋತ್ತಮನಾದ ಆ ಹನುಮಂತನನ್ನು ನೋಡಿ, ಅವನನ್ನು ಪ್ರಳಯಕಾಲಾಗ್ನಿ ಸ್ವರೂಪನೆಂದು ಭಾವಿಸಿ ಭಯಗೊಂಡರು.॥51॥

ಮೂಲಮ್ - 52

ದೇವಾಶ್ಚ ಸರ್ವೇ ಮುನಿಪುಂಗವಾಶ್ಚ
ಗಂಧರ್ವವಿದ್ಯಾಧರಕಿಂನರಾಶ್ಚ ।
ಭೂತಾನಿ ಸರ್ವಾಣಿ ಮಹಾಂತಿ ತತ್ರ
ಜಗ್ಮುಃ ಪರಾಂ ಪ್ರೀತಿಮತುಲ್ಯರೂಪಾಮ್ ॥

ಅನುವಾದ

ಸಮಸ್ತ ದೇವತೆಗಳು, ಮುನೀಶ್ವರರು, ಗಂಧರ್ವರು, ವಿದ್ಯಾಧರರು, ನಾಗಗಳು, ಯಕ್ಷರು ಹಾಗೂ ಅಲ್ಲಿರುವ ಸಕಲ ಪ್ರಾಣಿಗಳು ಅತುಳ ಆನಂದಭರಿತರಾದವು.॥52॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಚತುಃಪಂಚಾಶಃ ಸರ್ಗಃ ॥ 54 ॥
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತನಾಲ್ಕನೆಯ ಸರ್ಗವು ಮುಗಿಯಿತು.

ಅನುವಾದ