वाचनम्
ಭಾಗಸೂಚನಾ
ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿಯನ್ನು ಹಚ್ಚಿ ನಗರದಲ್ಲಿ ಮೆರವಣಿಗೆ ಮಾಡಿದುದು
ಮೂಲಮ್ - 1
ತಸ್ಯ ತದ್ವಚನಂ ಶ್ರುತ್ವಾ ದಶಗ್ರೀವೋ ಮಹಾತ್ಮನಃ ।
ದೇಶಕಾಲಹಿತಂ ವಾಕ್ಯಂ ಭ್ರಾತುರುತ್ತರಮಬ್ರವೀತ್ ॥
ಅನುವಾದ
ಮಹಾತ್ಮನೂ, ಅನುಜನೂ ಆದ ವಿಭೀಷಣನ ದೇಶ-ಕಾಲೋಚಿತವಾದ ಹಾಗೂ ಹಿತವಾದ ಮಾತನ್ನು ಕೇಳಿ ರಾವಣನು ಹೀಗೆ ಉತ್ತರಿಸಿದನು. -॥1॥
ಮೂಲಮ್ - 2
ಸಮ್ಯಗುಕ್ತಂ ಹಿ ಭವತಾ ದೂತವಧ್ಯಾ ವಿಗರ್ಹಿತಾ ।
ಅವಶ್ಯಂ ತು ವಧಾದನ್ಯಃ ಕ್ರಿಯತಾಮಸ್ಯ ನಿಗ್ರಹಃ ॥
ಅನುವಾದ
ವಿಭೀಷಣಾ! ನೀನು ಉಚಿತವಾದುದನ್ನೇ ಹೇಳಿರುವೆ. ದೂತನ ವಧೆಯು ನಿಂದ್ಯವೇ ಸರಿ! ಈ ವಾನರನಿಗೆ ವಧೆಯನ್ನು ಬಿಟ್ಟು ಬೇರೆ ರೀತಿಯ ಶಿಕ್ಷೆಯು ಅವಶ್ಯವಾಗಿ ಆಗಲಿ.॥2॥
ಮೂಲಮ್ - 3
ಕಪೀನಾಂ ಕಿಲ ಲಾಂಗೂಲಮಿಷ್ಟಂ ಭವತಿ ಭೂಷಣಮ್ ।
ತದಸ್ಯ ದೀಪ್ಯತಾಂ ಶೀಘ್ರಂ ತೇನ ದಗ್ಧೇನ ಗಚ್ಛತು ॥
ಅನುವಾದ
ಕಪಿಗಳಿಗೆ ಬಾಲವು ಇಷ್ಟವಾಗಿರುತ್ತದೆ. ಭೂಷಣವೂ ಆಗಿರುತ್ತದೆ. ಆದುದರಿಂದ ಈ ಕಪಿಯ ಬಾಲಕ್ಕೆ ಬೆಂಕಿಹಚ್ಚಿರಿ. ಸುಟ್ಟುಹೋದ ಬಾಲದೊಡನೆ ಇವನು ಹಿಂದಿರುಗಲಿ.॥3॥
ಮೂಲಮ್ - 4
ತತಃ ಪಶ್ಯಂತ್ವಿಮಂ ದೀನಮಂಗವೈರೂಪ್ಯಕರ್ಶಿತಮ್ ।
ಸಮಿತ್ರಜ್ಞಾತಯಃ ಸರ್ವೇ ಬಾಂಧವಾಃ ಸಸುಹೃಜ್ಜನಾಃ ॥
ಅನುವಾದ
ತಿರುಗಿಹೋದ ಬಳಿಕ ಅಂಗವಿಕಾರ ಬಾಧೆಯಿಂದ ದೀನನಾಗುವ ಈತನನ್ನು ಮಿತ್ರರೂ, ಆಪ್ತರೂ, ಬಂಧುಗಳೂ, ಸುಹೃಜ್ಜನರೂ, ಮೊದಲಾದ ಎಲ್ಲರೂ ನೋಡುವರು.॥4॥
ಮೂಲಮ್ - 5
ಆಜ್ಞಾಪಯದ್ರಾಕ್ಷಸೇಂದ್ರಃ ಪುರಂ ಸರ್ವಂ ಸಚತ್ವರಮ್ ।
ಲಾಂಗೂಲೇನ ಪ್ರದೀಪ್ತೇನ ರಕ್ಷೋಭಿಃ ಪರಿಣೀಯತಾಮ್ ॥
ಅನುವಾದ
ಕೂಡಲೇ ಈ ವಾನರನ ಬಾಲಕ್ಕೆ ಬೆಂಕಿಯನ್ನು ಹೊತ್ತಿಸಿ, ಉರಿಯುತ್ತಿರುವ ಬಾಲದಿಂದ ಇವನನ್ನು ನಗರದಲ್ಲೆಲ್ಲ ಮೆರವಣಿಗೆ ಮಾಡಿರಿ ಎಂದು ರಾವಣನು ಆಜ್ಞಾಪಿಸಿದನು.॥5॥
ಮೂಲಮ್ - 6
ತಸ್ಯ ತದ್ವಚನಂ ಶ್ರುತ್ವಾ ರಾಕ್ಷಸಾಃ ಕೋಪಕರ್ಕಶಾಃ ।
ವೇಷ್ಟಯಂತಿ ಸ್ಮ ಲಾಂಗೂಲಂ ಜೀರ್ಣೈಃ ಕಾರ್ಪಾಸಕೈಃ ಪಟ್ಟೆಃ ॥
ಅನುವಾದ
ರಾವಣನ ಆ ಆದೇಶವನ್ನು ಕೇಳಿದ ರಾಕ್ಷಸರು ಕೋಪೊದ್ರಿಕ್ತರಾಗಿ ಹನುಮಂತನ ಬಾಲಕ್ಕೆ ಹಳೆಯದಾದ ಹತ್ತಿಯ ಹಾಗೂ ರೇಶ್ಮೆಯ ಬಟ್ಟೆಗಳನ್ನು ಸುತ್ತಿದರು.॥6॥
ಮೂಲಮ್ - 7
ಸಂವೇಷ್ಟ್ಯಮಾನೇ ಲಾಂಗೂಲೇ ವ್ಯವರ್ಧತ ಮಹಾಕಪಿಃ ।
ಶುಷ್ಕಮಿಂಧನಮಾಸಾದ್ಯ ವನೇಷ್ವಿವ ಹುತಾಶನಃ ॥
ಅನುವಾದ
ಆ ವಾನರೋತ್ತಮನು ತನ್ನ ಬಲಕ್ಕೆ ರಾಕ್ಷಸರು ಬಟ್ಟೆಯನ್ನು ಸುತ್ತುತ್ತಿರುವಾಗ - ಒಣಗಿಹೋದ ಕಟ್ಟಿಗೆಯಲ್ಲಿರುವ ಬೆಂಕಿಯು ಕ್ಷಣ-ಕ್ಷಣಕ್ಕೂ ವರ್ಧಿಸುವಂತೆ ತಾನು ಬೆಳೆಯತೊಡಗಿದನು. ಜೊತೆಗೆ ಅವನ ಬಾಲವೂ ಬೆಳೆಯಿತು.॥7॥
ಮೂಲಮ್ - 8
ತೈಲೇನ ಪರಿಷಿಚ್ಯಾಥ ತೇಽಗ್ನಿಂ ತತ್ರಾಭ್ಯಪಾತಯನ್ ।
ಲಾಂಗೂಲೇನ ಪ್ರದೀಪ್ತೇನ ರಾಕ್ಷಸಾಂಸ್ತಾನಪಾತಯತ್ ॥
ಅನುವಾದ
ರಾಕ್ಷಸರು ಅವನ ಬಾಲಕ್ಕೆ ಬಟ್ಟೆ ಸುತ್ತಿ ಎಣ್ಣೆಯಲ್ಲಿ ನೆನೆಯಿಸಿ, ಅದಕ್ಕೆ ಬೆಂಕಿಯನ್ನಿಟ್ಟರು. ಕೂಡಲೇ ಅವನು ರೋಷಾವೇಶದಿಂದ ಕ್ರೋಧೋದ್ರಿಕ್ತನಾಗಿ ಬಾಲಸೂರ್ಯನಂತೆ ಮುಖಕಾಂತಿಯಿಂದ ಶೋಭಿಸುತ್ತಿದ್ದು ತನ್ನ ಬಾಲದಿಂದ ಆ ರಾಕ್ಷಸರನ್ನು ಓಡಿಸಿದನು.॥8॥
ಮೂಲಮ್ - 9
ಸ ತು ರೋಷಪರೀತಾತ್ಮಾ ಬಾಲಸೂರ್ಯಸಮಾನನಃ ।
ಲಾಂಗೂಲಂ ಸಂಪ್ರದೀಪ್ತಂ ತು ದ್ರಷ್ಟುಂ ತಸ್ಯ ಹನೂಮತಃ ॥
ಅನುವಾದ
ರಾಕ್ಷಸರೆಲ್ಲರು ಅದರಿಂದ ಸಂತೋಷಪಟ್ಟು, ಚೆನ್ನಾಗಿ ಉರಿಯುತ್ತಿದ್ದ ಹನುಮಂತನ ಆ ಬಾಲವನ್ನು ವಿನೋದದಿಂದ ನೋಡಲಿಕ್ಕಾಗಿ ಸ್ತ್ರೀಯರೂ, ಬಾಲಕರೂ, ವೃದ್ಧರೂ ಹೀಗೆ ಎಲ್ಲರಿಂದ ಒಡಗೂಡಿ ಅಲ್ಲಿಗೆ ಬಂದು ಸೇರಿದರು.॥9॥
ಮೂಲಮ್ - 10
ಸಹಸ್ತ್ರೀಬಾಲವೃದ್ಧಾಶ್ಚ ಜಗ್ಮುಃ ಪ್ರೀತಾ ನಿಶಾಚರಾಃ ।
ಸ ಭೂಯಃ ಸಂಗತೈಃ ಕ್ರೂರೈ ರಾಕ್ಷಸೈರ್ಹರಿಸತ್ತಮಃ ॥
ಅನುವಾದ
ಕ್ರೂರರಾದ ಆ ರಾಕ್ಷಸರೆಲ್ಲರೂ ಸೇರಿ ವಾನರೋತ್ತಮನನ್ನು ದೃಢವಾಗಿ ಬಂಧಿಸಿದ್ದರು. ಆ ಬಂಧನದಿಂದ ಬಿಡುಗಡೆ ಹೊಂದಲು ಸಾಮರ್ಥ್ಯವಿದ್ದರೂ, ಆಗ ವೀರನು ಸಮಯೋಚಿತವಾಗಿ ಆಲೋಚಿಸುತ್ತಾ ಬಂಧನದಲ್ಲೇ ಇದ್ದು ಬಿಟ್ಟನು.॥10॥
ಮೂಲಮ್ - 11
ನಿಬದ್ಧಃ ಕೃತವಾನ್ ವೀರಸ್ತತ್ಕಾಲಸದೃಶೀಂ ಮತಿಮ್ ।
ಕಾಮಂ ಖಲು ನ ಮೇ ಶಕ್ತಾ ನಿಬದ್ಧಸ್ಯಾಪಿ ರಾಕ್ಷಸಾಃ ॥
ಅನುವಾದ
ನಾನು ಬಂಧಿಸಲ್ಪಟ್ಟರೂ ರಾಕ್ಷಸರು ನನ್ನನ್ನು ಏನೂ ಮಾಡಲಾರರು. ನನಗೆ ತೊಂದರೆ ಕೊಡುವ ಶಕ್ತಿಯು ಇವರಿಗಿಲ್ಲ. ಕಟ್ಟಿರುವ ಹಗ್ಗಗಳನ್ನು ಕ್ಷಣಮಾತ್ರದಲ್ಲಿ ಕತ್ತರಿಸಿ ಮೇಲಕ್ಕೆ ಹಾರಿ ಇವರೆಲ್ಲರನ್ನು ಸಂಹರಿಸಿಬಿಡುವೆನು.॥11॥
ಮೂಲಮ್ - 12
ಛಿತ್ವಾ ಪಾಶಾನ್ ಸಮುತ್ಪತ್ಯ ಹನ್ಯಾಮಹಮಿಮಾನ್ ಪುನಃ ।
ಯದಿ ಭರ್ತೃಹಿತಾರ್ಥಾಯ ಚರಂತಂ ಭರ್ತೃಶಾಸನಾತ್ ॥
ಅನುವಾದ
ನನ್ನ ಸ್ವಾಮಿಯಾದ ಶ್ರೀರಾಮನ ಕಾರ್ಯಸಿದ್ಧಿಗಾಗಿ ಪ್ರಯತ್ನಿಸುತ್ತಿರುವ ನನ್ನನ್ನು ಈ ದುರ್ಮಾರ್ಗಿಗಳು ರಾವಣನ ಆಜ್ಞೆಯಿಂದ ಬಂಧಿಸಿರುವರು. ಇದರಿಂದ ನಾನು ಅವರಿಗೆ ಮಾಡಿದ ಕಷ್ಟ-ನಷ್ಟಗಳ ಮುಂದೆ ಇದು ಯಾವ ಲೆಕ್ಕಕ್ಕೂ ಇಲ್ಲ.॥12॥
ಮೂಲಮ್ - 13
ಬಧ್ನಂತ್ಯೇತೇ ದುರಾತ್ಮಾನೋ ನ ತು ಮೇ ನಿಷ್ಕೃತಿಃ ಕೃತಾ ।
ಸರ್ವೇಷಾಮೇವ ಪರ್ಯಾಪ್ತೋ ರಾಕ್ಷಸಾನಾಮಹಂ ಯುಧಿ ॥
ಮೂಲಮ್ - 14
ರಾಮಸ್ಯ ಕಿಂ ತು ಪ್ರೀತ್ಯರ್ಥಂ ವಿಷಹಿಷ್ಯೇಽಹಮೀದೃಶಮ್ ।
ಲಂಕಾ ಚಾರಯಿತವ್ಯಾ ವೈ ಪುನರೇವ ಭವೇದಿತಿ ॥
ಅನುವಾದ
ಯುದ್ಧದಲ್ಲಿ ಎಲ್ಲ ರಾಕ್ಷಸರನ್ನು ಎದುರಿಸಲು ನಾನೊಬ್ಬನೇ ಸಾಕು. ಶ್ರೀರಾಮನ ಪ್ರೀತಿಗಾಗಿ ಈ ಬಂಧನವನ್ನು ಸುಮ್ಮನೆ ಸಹಿಸಿರುವೆನು. ಈ ನೆಪದಿಂದ ನನಗೆ ಲಂಕೆಯನ್ನು ಮತ್ತೊಮ್ಮೆ ಪರಿಶೀಲಿಸಲು, ಸುತ್ತಾಡಲು ಅವಕಾಶವಾಯಿತು.॥13-14॥
ಮೂಲಮ್ - 15
ರಾತ್ರೌ ನ ಹಿ ಸುದೃಷ್ಟಾ ಮೇ ದುರ್ಗಕರ್ಮವಿಧಾನತಃ ।
ಅವಶ್ಯಮೇವ ದ್ರಷ್ಟವ್ಯಾ ಮಯಾ ಲಂಕಾ ನಿಶಾಕ್ಷಯೇ ॥
ಅನುವಾದ
ಇಷ್ಟರವರೆಗೆ ರಾತ್ರಿಯಲ್ಲಿ ದುರ್ಗನಿರ್ಮಾಣ ವಿಧಾನವನ್ನು (ನಗರ ರಕ್ಷಣೆಯ ರಹಸ್ಯಮಯ ಏರ್ಪಾಟು) ನಾನು ಸರಿಯಾಗಿ ನೋಡಲಾಗಲಿಲ್ಲ. ಆದ್ದರಿಂದ ಹಗಲಿನಲ್ಲಿ ಈ ಲಂಕೆಯನ್ನು ತಪ್ಪದೇ ಪರಿಶೀಲಿಸಿ ನೋಡಬೇಕು. (ಅದರಿಂದ ಮುಂದೆ ಲಂಕೆಯಲ್ಲಿ ಹೇಗೆ ಹೋರಾಡಬಹುದೆಂಬುದನ್ನು ನಿಶ್ಚಯಿಸಬಹುದು.)॥15॥
ಮೂಲಮ್ - 16
ಕಾಮಂ ಬಧ್ನಂತು ಮೇ ಭೂಯಃ ಪುಚ್ಛಸ್ಯೋದ್ದೀಪನೇನ ಚ ।
ಪೀಡಾಂ ಕುರ್ವಂತು ರಕ್ಷಾಂಸಿ ನ ಮೇಽಸ್ತಿ ಮನಸಃ ಶ್ರಮಃ ॥
ಅನುವಾದ
ಈ ರಾಕ್ಷಸರು ಬಾಲವನ್ನು ಉರಿಸುವುದರ ಮೂಲಕ ತಮಗೆ ಇಚ್ಛೆಬಂದಂತೆ ಎಷ್ಟಾದರೂ ಪೀಡಿಸಲಿ. ಇದರಿಂದ ನನಗೆ ಯಾವ ಆಯಾಸವೂ ಇಲ್ಲ.॥16॥
ಮೂಲಮ್ - 17
ತತಸ್ತೇ ಸಂವೃತಾಕಾರಂ ಸತ್ತ್ವವಂತಂ ಮಹಾಕಪಿಮ್ ।
ಪರಿಗೃಹ್ಯ ಯಯುರ್ಹೃಷ್ಟಾ ರಾಕ್ಷಸಾಃ ಕಪಿಕುಂಜರಮ್ ॥
ಅನುವಾದ
ಅನಂತರ ಆ ರಾಕ್ಷಸರು ಸಂತೋಷಪಟ್ಟು - ಬಾಲವು ಹೊತ್ತಿ ಉರಿಯುತ್ತಿದ್ದ ಮಹಾಬಲಿಯೂ, ತನ್ನ ಮನೋಭಾವವನ್ನು ತೋರಿಸಿ ಕೊಡದಿದ್ದ ಆ ಕಪಿಶ್ರೇಷ್ಠನನ್ನು ಹಿಡಿದುಕೊಂಡು ಹೊರಟರು.॥17॥
ಮೂಲಮ್ - 18
ಶಂಖಭೇರೀನಿನಾದೈಶ್ಚ ಘೋಷಯಂತಃ ಸ್ವಕರ್ಮಭಿಃ ।
ರಾಕ್ಷಸಾಃ ಕ್ರೂರಕರ್ಮಾಣಶ್ಚಾರಯಂತಿ ಸ್ಮ ತಾಂ ಪುರೀಮ್ ॥
ಅನುವಾದ
ಕ್ರೂರಕರ್ಮಿಗಳಾದ ರಾಕ್ಷಸರು ಶಂಖ-ಭೇರಿ ನಿನಾದಗಳಿಂದಲೂ, ಚಪ್ಪಾಳೆಗಳಿಂದಲೂ, ಸಿಂಹನಾದಗಳಿಂದಲೂ ಶಬ್ದಮಾಡುತ್ತಾ ಹನುಮಂತನನ್ನು ಲಂಕಾಪಟ್ಟಣದ ಎಲ್ಲೆಡೆ ಸುತ್ತಾಡಿಸಿದರು.॥18॥
ಮೂಲಮ್ - 19
ಅನ್ವೀಯಮಾನೋ ರಕ್ಷೋಭಿರ್ಯಯೌ ಸುಖಮರಿಂದಮಃ ।
ಹನೂಮಾಂಶ್ಚಾರಯಾಮಾಸ ರಾಕ್ಷಸಾನಾಂ ಮಹಾಪುರೀಮ್ ॥
ಅನುವಾದ
ಶತ್ರುಸೂದನನಾದ ಹನುಮಂತನು - ರಾಕ್ಷಸರು ಜೊತೆಯಲ್ಲಿ ನಡೆಸಿಕೊಂಡು ಹೋಗುತ್ತಿರುವಾಗ, ರಾಕ್ಷಸರ ನಗರಿಯನ್ನು ಚೆನ್ನಾಗಿ ಪರಿಶೀಲಿಸಿದನು.॥19॥
ಮೂಲಮ್ - 20
ಅಥಾಪಶ್ಯದ್ವಿಮಾನಾನಿ ವಿಚಿತ್ರಾಣಿ ಮಹಾಕಪಿಃ ।
ಸಂವೃತಾನ್ ಭೂಮಿಭಾಗಾಂಶ್ಚ ಸುವಿಭಕ್ತಾಂಶ್ಚ ಚತ್ವರಾನ್ ॥
ಅನುವಾದ
ಆಗ ವಾನರೋತ್ತಮನು ವಿಚಿತ್ರವಾದ ರಾಜ ಪ್ರಾಸಾದವನ್ನು, ಗುಪ್ತವಾಗಿದ್ದ ಭೂಗೃಹಗಳನ್ನು, (ನೆಲಮಾಳಿಗೆ) ಚೆನ್ನಾಗಿ ವಿಭಾಗಿಸಲ್ಪಟ್ಟ ವೀಥಿಗಳನ್ನು, ವೃತ್ತಗಳನ್ನು, ಗಮನವಿಟ್ಟು ನೋಡಿದನು.॥20॥
ಮೂಲಮ್ - 21
ವೀಥೀಶ್ಚ ಗೃಹಸಂಬಾಧಾಃ ಕಪಿಃ ಶೃಂಗಾಟಕಾನಿ ಚ ।
ತಥಾ ರಥ್ಯೋಪರಥ್ಯಾಶ್ಚ ತಥೈವ ಚ ಗೃಹಾಂತರಾನ್ ॥
ಅನುವಾದ
ಮನೆಗಳ ಸಮೂಹಗಳನ್ನು, ರಾಜಮಾರ್ಗಗಳನ್ನು, ಚಿಕ್ಕ-ಚಿಕ್ಕ ಕಾಲುದಾರಿಗಳನ್ನು, ರಹಸ್ಯ ದ್ವಾರಗಳಿಂದ ಕೂಡಿದ ಸಣ್ಣ-ಸಣ್ಣ ಮನೆಗಳನ್ನು, ಗಗನಚುಂಬಿ ಸೌಧಗಳನ್ನು ಆ ಮಾರುತಿಯು ನೋಡಿದನು.॥21॥
ಮೂಲಮ್ - 22
ಗೃಹಾಂಶ್ಚ ಮೇಘಸಂಕಾಶಾನ್ ದದರ್ಶ ಪವನಾತ್ಮಜಃ ।
ಚತ್ವರೇಷು ಚತುಷ್ಕೇಷು ರಾಜಮಾರ್ಗೇ ತಥೈವ ಚ ॥
ಅನುವಾದ
ಎಲ್ಲ ರಾಕ್ಷಸರು ನಾಲ್ಕು ರಸ್ತೆಗಳು ಕೂಡುವಲ್ಲಿ, ವೃತ್ತದಲ್ಲಿ ಇರುವ ನಾಲ್ಕು ಕಂಬಗಳ ಮಂಟಪದಲ್ಲಿ ಸೇರಿಕೊಂಡು, ರಾಜಮಾರ್ಗದಲ್ಲಿ ಹೋಗುತ್ತಿರುವ ಹನುಮಂತನನ್ನು ನೋಡಿ-ಗೂಢಚಾರನು ಸಿಕ್ಕಿಬಿದ್ದನು ನೋಡಿ-ನೋಡಿ ಎಂದು ಮಾತಾಡಿಕೊಳ್ಳುತ್ತಿದ್ದರು.॥22॥
ಮೂಲಮ್ - 23
ಘೋಷಯಂತಿ ಕಪಿಂ ಸರ್ವೇ ಚಾರ ಇತ್ಯೇವ ರಾಕ್ಷಸಾಃ ।
ಸ್ತ್ರೀಬಾಲವೃದ್ಧಾ ನಿರ್ಜಗ್ಮುಸ್ತತ್ರ ತತ್ರಕುತೂಹಲಾತ್ ॥
ಅನುವಾದ
ಪ್ರಜ್ವಲಿಸುತ್ತಿದ್ದ ಬಾಲದಿಂದ ಕೂಡಿದ್ದ ಹನುಮಂತನನ್ನು ನೋಡುವ ಕುತೂಹಲದಿಂದ ಲಂಕಾಪಟ್ಟಣದ ಸ್ತ್ರೀ-ಬಾಲ-ವೃದ್ಧರೆಲ್ಲರೂ ಬೀದಿಗೆ ಧಾವಿಸಿದರು.॥23॥
ಮೂಲಮ್ - 24
ತಂ ಪ್ರದೀಪಿತಲಾಂಗೂಲಂ ಹನುಮಂತಂ ದಿದೃಕ್ಷವಃ ।
ದೀಪ್ಯಮಾನೇ ತತಸ್ತಸ್ಯ ಲಾಂಗೂಲಾಗ್ರೇ ಹನೂಮತಃ ॥
ಅನುವಾದ
ಹನುಮಂತನ ಬಾಲದ ತುದಿಯು ಹೊತ್ತಿಕೊಂಡು ಉರಿಯುತ್ತಿರುವಾಗ, ಸೀತಾದೇವಿಯ ಸುತ್ತಲೂ ಕುಳಿತಿದ್ದ, ವಿಕೃತವಾದ ಕಣ್ಣುಗಳುಳ್ಳ ರಾಕ್ಷಸಿಯರು ಅಪ್ರಿಯವಾದ ಆ ವಿಷಯವನ್ನು ಸೀತಾದೇವಿಗೆ ಹೇಳಿದರು.॥24॥
ಮೂಲಮ್ - 25
ರಾಕ್ಷಸ್ಯಸ್ತಾ ವಿರೂಪಾಕ್ಷ್ಯಃ ಶಂಸುರ್ದೇವ್ಯಾಸ್ತದಪ್ರಿಯಮ್ ।
ಯಸ್ತ್ವಯಾ ಕೃತಸಂವಾದಃ ಸೀತೇ ತಾಮ್ರಮುಖಃ ಕಪಿಃ ॥
ಅನುವಾದ
ಎಲೈ ಸೀತೆ! ಕೆಂಪಾದ ಮುಖವುಳ್ಳ ಒಂದು ವಾನರನು ಸ್ವಲ್ಪ ಹೊತ್ತು ಮೊದಲು ನಿನ್ನೊಡನೆ ಮಾತಾಡುತ್ತಿದ್ದನಲ್ಲವೇ! ಅವನ ಬಾಲಕ್ಕೆ ಬೆಂಕಿಯನ್ನಿಟ್ಟು, ರಾಕ್ಷಸರು ಅವನನ್ನು ನಗರದಲ್ಲೆಲ್ಲ ಸುತ್ತಾಡಿಸುತ್ತಿದ್ದಾರೆ.॥25॥
ಮೂಲಮ್ - 26
ಲಾಂಗೂಲೇನ ಪ್ರದೀಪ್ತೇನ ಸ ಏಷ ಪರಿಣೀಯತೇ ।
ಶ್ರುತ್ವಾ ತದ್ವಚನಂ ಕ್ರೂರಮಾತ್ಮಾಪಹರಣೋಪಮಮ್ ॥
ಅನುವಾದ
ಆ ರಾಕ್ಷಸ ಸ್ತ್ರೀಯರ ವಚನಗಳು ಸೀತಾದೇವಿಯ ಕಿವಿಗಳಿಗೆ ಶೂಲಗಳಂತೆ ನಾಟಿದವು. ಆಗ ಅವಳು ರಾವಣನು ತನ್ನನ್ನು ಅಪಹರಿಸಿದಾಗ ಉಂಟಾದ ದುಃಖದಂತೆ ವಿಲಾಪಿಸಿ ಅಗ್ನಿದೇವನನ್ನು ಪ್ರಾರ್ಥಿಸತೊಡಗಿದಳು.॥26॥
ಮೂಲಮ್ - 27
ವೈದೇಹೀ ಶೋಕಸಂತಪ್ತಾ ಹುತಾಶನಮುಪಾಗಮತ್ ।
ಮಂಗಲಾಭಿಮುಖೀ ತಸ್ಯ ಸಾ ತದಾಸೀನ್ಮಹಾಕಪೇಃ ॥
ಅನುವಾದ
ವಿಶಾಲಾಕ್ಷಿಯೂ, ಸಾಧ್ವಿಯೂ ಆದ, ಸೀತಾದೇವಿಯು ಹನುಮಂತನ ಶ್ರೇಯಸ್ಸನ್ನೇ ಕೋರುತ್ತಾ ಅಗ್ನಿದೇವರಲ್ಲಿ ಹೀಗೆ ವಿನಂತಿಸಿಕೊಂಡಳು.॥27॥
ಮೂಲಮ್ - 28
ಉಪತಸ್ಥೇ ವಿಶಾಲಾಕ್ಷೀ ಪ್ರಯತಾ ಹವ್ಯವಾಹನಮ್ ।
ಯದ್ಯಸ್ತಿ ಪತಿಶುಶ್ರೂಷಾ ಯದ್ಯಸ್ತಿ ಚರಿತಂ ತಪಃ ॥
ಅನುವಾದ
ಓ ಯಜ್ಞೇಶ್ವರಾ! ನಾನು ಪತಿಸೇವಾಪರಾಯಣೆಯಾಗಿದ್ದು, ತಪಸ್ಸನ್ನು ಆಚರಿಸಿದ್ದರೆ, ನನ್ನಲ್ಲಿ ಪಾತಿವ್ರತ್ಯ ಇರುವುದಾದರೆ, ನೀನು ಹನುಮಂತನ ವಿಷಯದಲ್ಲಿ ಶೀತಲನಾಗು.॥28॥
ಮೂಲಮ್ - 29
ಯದಿ ವಾಸ್ತ್ಯೇಕಪತ್ನೀತ್ವಂ ಶೀತೋ ಭವ ಹನೂಮತಃ ।
ಯದಿ ಕಿಂಚಿದನುಕ್ರೋಶಸ್ತಸ್ಯ ಮಯ್ಯಸ್ತಿ ಧೀಮತಃ ॥
ಅನುವಾದ
ದೇವಾ! ನಾನು ಏನಾದರೂ ಧೀಮಂತನಾದ ಆ ಶ್ರೀರಾಮಪ್ರಭುವಿನ ಕರುಣೆಗೆ ಪಾತ್ರಳಾಗಿದ್ದರೆ, ನನ್ನಲ್ಲಿ ಭಾಗ್ಯವೇನಾದರೂ ಉಳಿದಿದ್ದರೆ, ಹನುಮಂತನ ವಿಷಯದಲ್ಲಿ ಶೀತಲನಾಗು.॥29॥
ಮೂಲಮ್ - 30
ಯದಿ ವಾ ಭಾಗ್ಯಶೇಷೋ ಮೇ ಶೀತೋ ಭವ ಹನೂಮತಃ ।
ಯದಿ ಮಾಂ ವೃತ್ತಸಂಪನ್ನಾಂ ತತ್ಸಮಾಗಮಲಾಲಸಾಮ್ ॥
ಅನುವಾದ
ಧರ್ಮಾತ್ಮನಾದ ಶ್ರೀರಾಮನು ನನ್ನನ್ನು ಸದಾಚಾರ ಸಂಪನ್ನಳೆಂದೂ, ತನ್ನೊಡನೆ ಸಮಾಗಮ ಹೊಂದುವ ಆಕಾಂಕ್ಷೆಯುಳ್ಳವಳೆಂದೂ ತಿಳಿದಿರುವುದಾದರೆ, ಅಗ್ನಿದೇವಾ! ನೀನು ಹನುಮಂತನಿಗಾಗಿ ಶೀತಲನಾಗು.॥30॥
ಮೂಲಮ್ - 31
ಸ ವಿಜಾನಾತಿ ಧರ್ಮಾತ್ಮಾ ಶೀತೋ ಭವ ಹನೂಮತಃ ।
ಯದಿ ಮಾಂ ತಾರಯೇದಾರ್ಯಃ ಸುಗ್ರೀವಃ ಸತ್ಯಸಂಗರಃ ॥
ಅನುವಾದ
ಪೂಜ್ಯನಾದ, ಸತ್ಯಸಂಧನಾದ ಸುಗ್ರೀವನು ನನ್ನನ್ನು ಈ ದುಃಖಸಾಗರದಿಂದ ಪಾರುಮಾಡುವುದು ಸತ್ಯವಾದರೆ, ವೈಶ್ವಾನರಾ! ಹನುಮಂತನ ವಿಷಯದಲ್ಲಿ ಶೀತಲನಾಗು.॥31॥
ಮೂಲಮ್ - 32
ಅಸ್ಮಾದ್ದುಃಖಾಂಬುಸಂರೋಧಾಚ್ಛೀತೋ ಭವ ಹನೂಮತಃ ।
ತತಸ್ತೀಕ್ಷ್ಣಾರ್ಚಿರವ್ಯಗ್ರಃ ಪ್ರದಕ್ಷಿಣಶಿಖೋಽನಲಃ ॥
ಅನುವಾದ
ಸೀತಾದೇವಿಯ ಮಹಿಮೆಯಿಂದ ಹನುಮಂತನು ಸೌಖ್ಯನಾಗಿರುವನೆಂದು ಸೂಚಿಸುತ್ತಿರುವನೋ ಎಂಬಂತೆ ತೀಕ್ಷ್ಣವಾದ ಅಗ್ನಿಯು ಪ್ರದಕ್ಷಿಣ ಪೂರ್ವಕವಾಗಿ ಪ್ರಜ್ವಲಿಸುತ್ತಾ ಹೋದನು.॥32॥
ಮೂಲಮ್ - 33
ಜಜ್ವಾಲ ಮೃಗಶಾವಾಕ್ಷ್ಯಾಃ ಶಂಸನ್ನಿವ ಶಿವಂ ಕಪೇಃ ।
ಹನುಮಜ್ಜನಕಶ್ಚಾಪಿ ಪುಚ್ಛಾನಲಯುತೋಽನಿಲಃ ॥
ಅನುವಾದ
ಹನುಮಂತನ ತಂದೆಯಾದ ವಾಯುದೇವರೂ ಕೂಡ ಕಪೀಶ್ವರನ ಬಾಲದ ಬೆಂಕಿಯೊಡನೆ ಸೇರಿಕೊಂಡು, ಸೀತಾದೇವಿಯ ಪ್ರಭಾವದಿಂದ ಹನುಮಂತನಿಗಾಗಿ ಹಿಮಪರ್ವತದಲ್ಲಿ ಬೀಸುವ ಶೀತಲವಾದ ವಾಯುವಿನಷ್ಟು ತಂಪಾಗಿ ಬೀಸತೊಡಗಿದನು.॥33॥
ಮೂಲಮ್ - 34
ವವೌ ಸ್ವಾಸ್ಥ್ಯಕರೋ ದೇವ್ಯಾಃ ಪ್ರಾಲೇಯಾನಿಲಶೀತಲಃ ।
ದಹ್ಯಮಾನೇ ಚ ಲಾಂಗೂಲೇ ಚಿಂತಯಾಮಾಸ ವಾನರಃ ॥
ಮೂಲಮ್ - 35
ಪ್ರದೀಪ್ತೋಽಗ್ನಿರಯಂ ಕಸ್ಮಾನ್ನಮಾಂ ದಹತಿ ಸರ್ವತಃ ।
ದೃಶ್ಯತೇ ಚ ಮಹಾಜ್ವಾಲೋ ನ ಕರೋತಿ ಚ ಮೇ ರುಜಮ್ ॥
ಅನುವಾದ
ಬಾಲದಲ್ಲಿ ಬೆಂಕಿಯು ಧಗಧಗಿಸುತ್ತಾ ಇರುವಾಗ ವಾನರೋತ್ತಮನು ಹೀಗೆ ಆಲೋಚಿಸಿದನು - ಪ್ರಜ್ವಲಿಸುತ್ತಿರುವ ಈ ಅಗ್ನಿಯಿಂದ ನನ್ನ ಶರೀರಕ್ಕೆ ಯಾವ ಬಿಸಿಯೂ ತಟ್ಟುವುದಿಲ್ಲ. ಮಹಾಜ್ವಾಲೆಗಳಿಂದ ಕಂಡುಬಂದರೂ ಈ ಅಗ್ನಿಯು ನನ್ನನ್ನು ಬಾಧಿಸುವುದಿಲ್ಲವಲ್ಲ!॥34-35॥
ಮೂಲಮ್ - 36
ಶಿಶಿರಸ್ಯೇವ ಸಂಪಾತೋ ಲಾಂಗೂಲಾಗ್ರೇ ಪ್ರತಿಷ್ಠಿತಃ ।
ಅಥವಾ ತದಿದಂ ವ್ಯಕ್ತಂ ಯದ್ದೃಷ್ಟಂ ಪ್ಲವತಾ ಮಯಾ ॥
ಮೂಲಮ್ - 37
ರಾಮಪ್ರಭಾವಾದಾಶ್ಚರ್ಯಂ ಪರ್ವತಃ ಸರಿತಾಂ ಪತೌ ।
ಯದಿ ತಾವತ್ ಸಮುದ್ರಸ್ಯ ಮೈನಾಕಸ್ಯ ಚ ಧೀಮತಃ ॥
ಅನುವಾದ
ನನ್ನ ಬಾಲದ ಮೇಲೆ ಒಂದು ಮಂಜಿನರಾಶಿಯೇ ಇಟ್ಟಂತಿದೆಯಲ್ಲ ಅಥವಾ ಶ್ರೀರಾಮನ ಪ್ರಭಾವದಿಂದ ಬೆಂಕಿಯು ನನ್ನ ವಿಷಯದಲ್ಲಿ ಶೀತಲವಾಗಿ ಪರಿಣಮಿಸಿರಬಹುದು. ಏಕೆಂದರೆ, ನಿನ್ನೆ ನಾನು ಸಮುದ್ರದ ಮೇಲಿನಿಂದ ಹಾರಿಕೊಂಡು ಬರುವಾಗ ಶ್ರೀರಾಮನ ಮೇಲೆ ಹಾಗೂ ರಾಮದಾಸನ ಮೇಲೆ ಆದರ ವಿರುವುದರಿಂದ ಮೈನಾಕಪರ್ವತವು ನನಗೆ ಆತಿಥ್ಯವನ್ನೀಯಲು ಸಮುದ್ರದಿಂದ ಮೇಲಕ್ಕೆ ಬಂದುದು, ಇದೊಂದು ಆಶ್ಚರ್ಯಕರವಾದ ದೃಶ್ಯವಾಗಿತ್ತು. ಸಮುದ್ರಕ್ಕೆ, ಧೀಮಂತನಾದ ಮೈನಾಕಕ್ಕೆ ಶ್ರೀರಾಮನ ವಿಷಯದಲ್ಲಿ ಇಷ್ಟೊಂದು ಆದರವಿರುವಾಗ, ಅಗ್ನಿಯು ಏಕೆ ಸಹಾಯಮಾಡಲಾರನು?॥36-37॥
ಮೂಲಮ್ - 38
ರಾಮಾರ್ಥಂ ಸಂಭ್ರಮಸ್ತಾದೃಕ್ಕಿಮಗ್ನಿರ್ನ ಕರಿಷ್ಯತಿ ।
ಸೀತಾಯಾಶ್ಚಾನೃಶಂಸ್ಯೇನ ತೇಜಸಾ ರಾಘವಸ್ಯ ಚ ॥
ಮೂಲಮ್ - 39
ಪಿತುಶ್ಚ ಮಮ ಸಖ್ಯೇನ ನ ಮಾಂ ದಹತಿ ಪಾವಕಃ ।
ಭೂಯಃ ಸ ಚಿಂತಯಾಮಾಸ ಮುಹೂರ್ತಂ ಕಪಿಕುಂಜರಃ ॥
ಅನುವಾದ
ಸೀತಾದೇವಿಯ ದಯಾಪರತೆಯಿಂದಲೂ, ಶ್ರೀರಾಮನ ತೇಜಃ ಪ್ರಭಾವದಿಂದಲೂ, ಅಗ್ನಿಗೂ ಮತ್ತು ನನ್ನ ತಂದೆಯಾದ ವಾಯು ದೇವರಿಗೆ ಗೆಳೆತನವಿರುವುದರಿಂದಲೂ ಅಗ್ನಿಯು ನನ್ನನ್ನು ಸುಡುತ್ತಿಲ್ಲ. ಹನುಮಂತನು ಹೀಗೆ ಅಗ್ನಿಯು ಸುಡದಿರುವುದಕ್ಕೆ ನಾನಾ ಕಾರಣಗಳನ್ನು ಯೋಚಿಸುತ್ತಾ ಪುನಃ ತನ್ನ ಮುಂದಿನ ಕಾರ್ಯದ ವಿಷಯವಾಗಿ ಆಲೋಚಿಸತೊಡಗಿದನು.॥38-39॥
ಮೂಲಮ್ - 40
ಕಥಮಸ್ಮದ್ ವಿಧಸ್ಯೇಹ ಬಂಧನಂ ರಾಕ್ಷಸಾಧಮೈಃ ।
ಪ್ರತಿಕ್ರಿಯಾಸ್ಯ ಯುಕ್ತಾ ಸ್ಯಾತ್ ಸತಿ ಮಹ್ಯಂ ಪರಾಕ್ರಮೇ ॥
ಅನುವಾದ
ಈ ರಾಕ್ಷಸಾಧಮರು ಶ್ರೀರಾಮನ ಬಂಟನಾದ ನನ್ನನ್ನು ಹೀಗೆ ಬಂಧಿಸಿದ್ದಾರಲ್ಲ, ಸರಿ! ನಾನು ಪರಾಕ್ರಮವಂತನಹುದಾದರೆ ಇವರಿಗೆ ಪ್ರತೀಕಾರವನ್ನು ಮಾಡಿಯೇ ತೀರುವೆನು.॥40॥
ಮೂಲಮ್ - 41
ತತಚ್ಛಿತ್ವಾ ಚ ತಾನ್ ಪಾಶಾನ್ ವೇಗವಾನ್ ವೈ ಮಹಾಕಪಿಃ ।
ಉತ್ಪಪಾತಾಥ ವೇಗೇನ ನನಾದ ಚ ಮಹಾಕಪಿಃ ॥
ಅನುವಾದ
ಹೀಗೆ ನಿಶ್ಚಯಿಸಿ, ಮಹಾಬಲಶಾಲಿಯಾದ ಹನುಮಂತನು, ಆ ಬಂಧನವನ್ನು ಹರಿದೊಗೆದು, ವೇಗವಾಗಿ ಆಕಾಶಕ್ಕೆ ಹಾರಿ ಗಟ್ಟಿಯಾಗಿ ಗರ್ಜಿಸಿದನು.॥41॥
ಮೂಲಮ್ - 42
ಪುರದ್ವಾರಂ ತತಃ ಶ್ರೀಮಾನ್ ಶೈಲಶೃಂಗಮಿವೋನ್ನತಮ್ ।
ವಿಭಕ್ತರಕ್ಷಃಸಂಬಾಧಮಾಸಸಾದಾನಿಲಾತ್ಮಜಃ ॥
ಅನುವಾದ
ಆಗ ಸರ್ವಶುಭಲಕ್ಷಣ ಸಂಪನ್ನನಾದ ಹನುಮಂತನು ಪರ್ವತ ಶಿಖರದಂತೆ ಎತ್ತರವಾಗಿ ಬೆಳೆದು, ರಾಕ್ಷಸರ ಹೆಚ್ಚು ಸಂಚಾರವಿಲ್ಲದ ಲಂಕಾನಗರದ ಮಹಾದ್ವಾರದ ಮೇಲೆ ಹಾರಿದನು.॥42॥
ಮೂಲಮ್ - 43
ಸ ಭೂತ್ವಾ ಶೈಲಸಂಕಾಶಃ ಕ್ಷಣೇನ ಪುನರಾತ್ಮವಾನ್ ।
ಹ್ರಸ್ವತಾಂ ಪರಮಾಂ ಪ್ರಾಪ್ತೋ ಬಂಧನಾನ್ಯವಶಾತಯತ್ ॥
ಅನುವಾದ
ಪ್ರತಿಭಾಶಾಲಿಯಾದ ಮಾರುತಿಯು ಪರ್ವತದಂತೆ ಬೆಳೆಸಿದ್ದ ತನ್ನ ದೇಹವನ್ನು ಮರುಕ್ಷಣದಲ್ಲೇ ಪುಟ್ಟದಾಗಿಸಿಕೊಂಡು, ಬಿಗಿದಿರುವ ಕಟ್ಟುಗಳಿಂದ ಬಿಡಿಸಿಕೊಂಡನು.॥43॥
ಮೂಲಮ್ - 44
ವಿಮುಕ್ತಶ್ಚಾಭವಚ್ಛ್ರೀಮಾನ್ ಪುನಃ ಪರ್ವತಸನ್ನಿಭಃ ।
ವೀಕ್ಷಮಾಣಶ್ಚ ದದೃಶೇ ಪರಿಘಂ ತೋರಣಾಶ್ರಿತಮ್ ॥
ಅನುವಾದ
ಧೀಮಂತನಾದ ಮಾರುತಿಯು ಬಂಧನದಿಂದ ಬಿಡುಗಡೆಹೊಂದಿ ಪುನಃ ಪರ್ವತದಂತಾದನು. ಅತ್ತ-ಇತ್ತ ಪರಿಶೀಲಿಸಿ ನೋಡುತ್ತಾ ಅವನ ದೃಷ್ಟಿಯು ಮಹಾದ್ವಾರದಲ್ಲಿದ್ದ ಕಬ್ಬಿಣದ ಅಗಳಿಯನ್ನು ನೋಡಿದನು.॥44॥
ಮೂಲಮ್ - 45
ಸ ತಂ ಗೃಹ್ಯ ಮಹಾಬಾಹುಃ ಕಾಲಾಯಸಪರಿಷ್ಕೃತಮ್ ।
ರಕ್ಷಿಣಸ್ತಾನ್ ಪುನಃ ಸರ್ವಾನ್ ಸೂದಯಾಮಾಸ ಮಾರುತಿಃ ॥
ಅನುವಾದ
ಮಹಾಬಾಹುವಾದ ಹನುಮಂತನು ಆ ಅಗಳಿಯನ್ನೆತ್ತಿಕೊಂಡು, ಅಲ್ಲಿದ್ದ ದ್ವಾರರಕ್ಷಕರಾದ ರಾಕ್ಷಸರೆಲ್ಲರನ್ನು ಸದೆ ಬಡಿದನು.॥45॥
ಮೂಲಮ್ - 46
ಸ ತಾನ್ನಿ ಹತ್ವಾ ರಣಚಂಡವಿಕ್ರಮಃ
ಸಮೀಕ್ಷಮಾಣಃ ಪುನರೇವ ಲಂಕಾಮ್ ।
ಪ್ರದೀಪ್ತಲಾಂಗೂಲಕೃತಾರ್ಚಿಮಾಲೀ
ಪ್ರಕಾಶತಾದಿತ್ಯ ಇವಾರ್ಚಿಮಾಲೀ ॥ 46 ॥
ಅನುವಾದ
ಯುದ್ಧದಲ್ಲಿ ಕಡುಗಲಿಯಾದ ಹನುಮಂತನು ಪುರದ್ವಾರದ ರಕ್ಷಕರೆಲ್ಲರನ್ನು ಸಂಹರಿಸಿ, ಪುನಃ ಲಂಕಾಪಟ್ಟಣವನ್ನೇ ನೋಡುತ್ತಿದ್ದನು. ಆಗ ಅವನು ಧಗ-ಧಗನೆ ಉರಿಯುತ್ತಿದ್ದ ಬಾಲದ ಬೆಂಕಿಯ ಜ್ವಾಲೆಗಳಿಂದ, ಕಿರಣಮಾಲೆಯಿಂದ ಪ್ರಕಾಶಿಸುತ್ತಿರುವ ಸೂರ್ಯನಂತೆ ಪ್ರಕಾಶಿಸುತ್ತಿದ್ದನು.॥46॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ತ್ರಿಪಂಚಾಶಃ ಸರ್ಗಃ ॥ 53 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತಮೂರನೆಯ ಸರ್ಗವು ಮುಗಿಯಿತು.