०५२ हनुमद्वधाय रावणादेशः

वाचनम्
ಭಾಗಸೂಚನಾ

ದೂತನ ವಧೆಯನ್ನು ನಿಷಿದ್ಧವೆಂದು ವಿಭೀಷಣನು ರಾವಣನಿಗೆ ಸಲಹೆ ನೀಡಿದುದು

ಮೂಲಮ್ - 1

ತಸ್ಯ ತದ್ವಚನಂ ಶ್ರುತ್ವಾ ವಾನರಸ್ಯ ಮಹಾತ್ಮನಃ ।
ಆಜ್ಞಾಪಯತ್ತಸ್ಯ ವಧಂ ರಾವಣಃ ಕ್ರೋಧಮೂರ್ಛಿತಃ ॥

ಅನುವಾದ

ಮಹಾಪರಾಕ್ರಮಶಾಲಿಯಾದ ಆ ಹನುಮಂತನು ಆಡಿದ ಹಿತೋಕ್ತಿಗಳನ್ನು ಕೇಳಿ, ಕ್ರೋಧೋದ್ರಿಕ್ತನಾದ ರಾವಣನು ‘ಅವನನ್ನು ಕೊಂದುಬಿಡಿ’ ಎಂದು ಆಜ್ಞಾಪಿಸಿದನು.॥1॥

ಮೂಲಮ್ - 2

ವಧೇ ತಸ್ಯ ಸಮಾಜ್ಞಪ್ತೇ ರಾವಣೇನ ದುರಾತ್ಮನಾ ।
ನಿವೇದಿತವತೋ ದೌತ್ಯಂ ನಾನುಮೇನೇ ವಿಭೀಷಣಃ ॥

ಅನುವಾದ

ದುಷ್ಟನಾದ ರಾವಣನು ಹನುಮಂತನನ್ನು ಕೊಲ್ಲಲು ಆಜ್ಞಾಪಿಸಿದಾಗ ದೂತನಾಗಿ ಬಂದಿರುವವನನ್ನು ವಧಿಸುವುದಕ್ಕೆ ವಿಭೀಷಣನು ಅಂಗೀಕರಿಸಲಿಲ್ಲ. ಏಕೆಂದರೆ, ಒಡೆಯನ ಮಾತನ್ನು ಹೇಳುವುದು ದೂತನ ಧರ್ಮವಲ್ಲವೇ!॥2॥

ಮೂಲಮ್ - 3

ತಂ ರಕ್ಷೋಽಧಿಪತಿಂ ಕ್ರುದ್ಧಂ ತಚ್ಚ ಕಾರ್ಯಮುಪಸ್ಥಿತಮ್ ।
ವಿದಿತ್ವಾ ಚಿಂತಯಾಮಾಸ ಕಾರ್ಯಂ ಕಾರ್ಯವಿಧೌ ಸ್ಥಿತಃ ॥

ಅನುವಾದ

ರಾಕ್ಷಸೇಶ್ವರನಾದ ರಾವಣನು ಕೋಪಗೊಂಡಿರುವುದನ್ನು, ದೂತನ ವಧೆಗೆ ಆಜ್ಞೆಮಾಡಿರುವುದನ್ನೂ ಮನಗಂಡು, ಕಾರ್ಯಾಕಾರ್ಯ ವಿಚಕ್ಷಣನಾದ ವಿಭೀಷಣನು ಮುಂದೆ ತಾನು ಮಾಡಬೇಕಾದ ಕಾರ್ಯದ ಕುರಿತು ಚಿಂತಿಸತೊಡಗಿದನು.॥3॥

ಮೂಲಮ್ - 4

ನಿಶ್ಚಿತಾರ್ಥಸ್ತತಃ ಸಾಮ್ನಾ ಪೂಜ್ಯಂ ಶತ್ರುಜಿದಗ್ರಜಮ್ ।
ಉವಾಚ ಹಿತಮತ್ಯರ್ಥಂ ವಾಕ್ಯಂ ವಾಕ್ಯವಿಶಾರದಃ ॥

ಅನುವಾದ

ಅಂತಃಶತ್ರುಗಳನ್ನು ಜಯಿಸಿದವನೂ, ವಾಕ್ಯ ವಿಶಾರದನೂ, ಕರ್ತವ್ಯಾ-ಕರ್ತವ್ಯವನ್ನು ತಿಳಿದವನೂ ಆದ ವಿಭಿಷಣನು-ವಿನಮ್ರನಾಗಿ ಅಣ್ಣನನ್ನು ಪ್ರಶಂಸಿಸಿ ಹಿತಕರವಾದ ವಚನಗಳನ್ನು ಗೌರವಪೂರ್ಣವಾಗಿ ಹೇಳಿದನು.॥4॥

ಮೂಲಮ್ - 5

ಕ್ಷಮಸ್ವ ರೋಷಂ ತ್ಯಜ ರಾಕ್ಷಸೇಂದ್ರ
ಪ್ರಸೀದ ಮದ್ವಾಕ್ಯಮಿದಂ ಶೃಣುಷ್ವ ।
ವಧಂ ನ ಕುರ್ವಂತಿ ಪರಾವರಜ್ಞಾಃ
ದೂತಸ್ಯ ಸಂತೋ ವಸುಧಾಧಿಪೇಂದ್ರಾಃ ॥

ಅನುವಾದ

ಹೇ ರಾಕ್ಷಸೇಂದ್ರಾ! ಕ್ಷಮಿಸು. ಕೋಪವನ್ನು ಬಿಡು. ದಯವಿಟ್ಟು ನಾನು ಹೇಳಲಿರುವ ಮಾತನ್ನು ಕೇಳು. ಉಚಿತಾನುಚಿತಗಳನ್ನು ತಿಳಿದವರೂ, ಸಜ್ಜನರೂ, ರಾಜಶ್ರೇಷ್ಠರೂ, ದೂತನನ್ನು ವಧಿಸುವುದಿಲ್ಲ.॥5॥

ಮೂಲಮ್ - 6

ರಾಜಧರ್ಮವಿರುದ್ಧಂ ಚ ಲೋಕವೃತ್ತೇಶ್ಚ ಗರ್ಹಿತಮ್ ।
ತವ ಚಾಸದೃಶಂ ವೀರ ಕಪೇರಸ್ಯ ಪ್ರಮಾಪಣಮ್ ॥

ಅನುವಾದ

ಮಹಾವೀರನೇ! ದೂತನಾಗಿ ಬಂದಿರುವ ಈ ವಾನರನನ್ನು ವಧಿಸುವುದು ರಾಜಧರ್ಮಕ್ಕೆ ವಿರುದ್ಧವಾದುದು. ಇದು ಲೋಕ ಮರ್ಯಾದೆಯೂ ಅಲ್ಲ. ಅದರಿಂದ ನಿಂದ್ಯವು. ನಿನ್ನಂತಹವನಿಗೆ ಇದು ಎಷ್ಟಕ್ಕೂ ತಕ್ಕುದಾಗಿಲ್ಲ.॥6॥

ಮೂಲಮ್ - 7

ಧರ್ಮಜ್ಞಶ್ಚ ಕೃತಜ್ಞಶ್ಚ ರಾಜಧರ್ಮವಿಶಾರದಃ ।
ಪರಾವರಜ್ಞೋ ಭೂತಾನಾಂ ತ್ವಮೇವ ಪರಮಾರ್ಥವಿತ್ ॥

ಅನುವಾದ

ನೀನು ಧರ್ಮಜ್ಞನೂ, ಕೃತಜ್ಞನೂ, ರಾಜಧರ್ಮವಿಶಾರದನೂ, ಯುಕ್ತಾಯುಕ್ತಗಳನ್ನು ತಿಳಿದವನೂ, ಪ್ರಾಣಿಕೋಟಿಗಳ ಒಳಿತು-ಕೆಡುಕನ್ನು ಚೆನ್ನಾಗಿ ತಿಳಿದುಕೊಂಡವನೂ, ಪರಮಾರ್ಥವನ್ನು ಅರಿತವನೂ ಆಗಿರುವೆ.॥7॥

ಮೂಲಮ್ - 8

ಗೃಹ್ಯಂತೇ ಯದಿ ರೋಷೇಣ ತ್ವಾದೃಶೋಽಪಿ ವಿಪಶ್ಚಿತಃ ।
ತತಃ ಶಾಸ್ತ್ರವಿಪಶ್ಚಿತ್ತ್ವಂ ಶ್ರಮ ಏವ ಹಿ ಕೇವಲಮ್ ॥

ಅನುವಾದ

ನಿನ್ನಂತಹ ವಿದ್ವಾಂಸರೂ ಕೂಡ ಕೋಪಕ್ಕೆ ವಶರಾಗುವುದಾದರೆ, ಕಷ್ಟಪಟ್ಟು ಶಾಸ್ತ್ರಪಾಂಡಿತ್ಯವನ್ನು ಸಂಪಾದಿಸುವುದು ಕೇವಲ ವೃಥಾ ಶ್ರಮವೇ ಸರಿ.॥8॥

ಮೂಲಮ್ - 9

ತಸ್ಮಾತ್ ಪ್ರಸೀದ ಶತ್ರುಘ್ನ ರಾಕ್ಷಸೇಂದ್ರ ದುರಾಸದ ।
ಯುಕ್ತಾಯುಕ್ತಂ ವಿನಿಶ್ಚಿತ್ಯ ದೂತೇ ದಂಡೋ ವಿಧೀಯತಾಮ್ ॥

ಅನುವಾದ

ಆದ್ದರಿಂದ ಎಲೈ ಅರಿಮರ್ದನಾ! ಎದುರಿಸಲು ಸಾಧ್ಯವಿಲ್ಲದ ರಾಕ್ಷಸೇಂದ್ರಾ! ಪ್ರಸನ್ನನಾಗು. ಉಚಿತಾನುಚಿತವನ್ನು ವಿಚಾರಗೈದು ದೂತನಿಗೆ ಯೋಗ್ಯವಾದ ಶಿಕ್ಷೆಯನ್ನು ವಿಧಿಸು.॥9॥

ಮೂಲಮ್ - 10

ವಿಭೀಷಣವಚಃ ಶ್ರುತ್ವಾ ರಾವಣೋ ರಾಕ್ಷಸೇಶ್ವರಃ ।
ರೋಷೇಣ ಮಹತಾವಿಷ್ಟೋ ವಾಕ್ಯಮುತ್ತರಮಬ್ರವೀತ್ ॥

ಮೂಲಮ್ - 11

ನ ಪಾಪಾನಾಂ ವಧೇ ಪಾಪಂ ವಿದ್ಯತೇ ಶತ್ರುಸೂದನ ।
ತಸ್ಮಾದೇನಂ ವಧಿಷ್ಯಾಮಿ ವಾನರಂ ಪಾಪಕಾರಿಣಮ್ ॥

ಅನುವಾದ

ರಾಕ್ಷಸರ ಒಡೆಯನಾದ ರಾವಣನು ವಿಭೀಷಣನ ವಚನಗಳನ್ನು ಕೇಳಿ ಪರಮಕ್ರುದ್ಧನಾಗಿ ಹೀಗೆ ಹೇಳಿದನು - ಎಲೈ ಶತ್ರುಹಂತಕನೇ! ಪಾಪಿಷ್ಟರನ್ನು ವಧಿಸುವುದರಿಂದ ಯಾವ ಪಾಪವೂ ಸೋಂಕದು. ಆದುದರಿಂದ ಪಾಪಕರ್ಮಿಯಾದ ಈ ವಾನರನನ್ನು ತಪ್ಪದೇ ವಧಿಸುತ್ತೇನೆ.॥10-11॥

ಮೂಲಮ್ - 12

ಅಧರ್ಮಮೂಲಂ ಬಹುರೋಷಯುಕ್ತ-
ಮನಾರ್ಯಜುಷ್ಟಂ ವಚನಂ ನಿಶಮ್ಯ ।
ಉವಾಚ ವಾಕ್ಯಂ ಪರಮಾರ್ಥತತ್ತ್ವಂ
ವಿಭೀಷಣೋ ಬುದ್ಧಿಮತಾಂ ವರಿಷ್ಠಃ ॥

ಅನುವಾದ

ಅಧರ್ಮಕ್ಕೆ ಮೂಲಭೂತವಾದ, ಅನೇಕ ದೋಷಗಳಿಂದ ಕೂಡಿರುವ, ಕ್ಷುದ್ರಜನರಿಗೆ ಉಚಿತವಾದ ರಾವಣೇಶ್ವರನ ಆ ಮಾತನ್ನು ಕೇಳಿ, ಬುದ್ಧಿವಂತರಲ್ಲಿ ಶ್ರೇಷ್ಠನಾದ ವಿಭೀಷಣನು ಪರಮಾರ್ಥತತ್ತ್ವ ರೂಪವಾದ ಹಿತಕರವಾದ ಈ ಮಾತನ್ನು ಹೇಳಿದನು.॥12॥

ಮೂಲಮ್ - 13

ಪ್ರಸೀದ ಲಂಕೇಶ್ವರ ರಾಕ್ಷಸೇಂದ್ರ
ಧರ್ಮಾರ್ಥಯುಕ್ತಂ ವಚನಂ ಶೃಣುಷ್ವ ।
ದೂತಾ ನ ವಧ್ಯಾಃ ಸಮಯೇಷು ರಾಜನ್
ಸರ್ವೇಷು ಸರ್ವತ್ರ ವದಂತಿ ಸಂತಃ ॥

ಅನುವಾದ

ಲಂಕೇಶ್ವರಾ! ರಾಕ್ಷಸೇಂದ್ರಾ! ಪ್ರಸನ್ನನಾಗು. ಧರ್ಮಾರ್ಥ ತತ್ತ್ವದಿಂದ ಕೂಡಿರುವ ಈ ನನ್ನ ಮಾತನ್ನು ಕೇಳು. ಸ್ವಾಮಿಯ ಸಂದೇಶವನ್ನು ತಿಳಿಸಲು ಬಂದ ದೂತನನ್ನು ಯಾವ ಕಾರಣದಿಂದಲೂ, ಎಂದೂ ವಧಿಸಬಾರದೆಂದು ಸತ್ಪುರುಷರು ಹೇಳುತ್ತಾರೆ.॥13॥

ಮೂಲಮ್ - 14

ಅಸಂಶಯಂ ಶತ್ರುರಯಂ ಪ್ರವೃದ್ಧಃ
ಕೃತಂ ಹ್ಯನೇನಾಪ್ರಿಯಮಪ್ರಮೇಯಮ್ ।
ನ ದೂತವಧ್ಯಾಂ ಪ್ರವದಂತಿ ಸಂತೋ
ದೂತಸ್ಯ ದೃಷ್ಟಾ ಬಹವೋ ಹಿ ದಂಡಾಃ ॥

ಅನುವಾದ

ಇವನು ಪ್ರಬಲ ಶತ್ರುವೇ, ಇದರಲ್ಲಿ ಸಂದೇಹವೇ ಇಲ್ಲ. ಇವನು ನಮಗೆ ಹೇಳಲಾರದಷ್ಟು ಅಪಕಾರ ಮಾಡಿರುವನು. ಆದರೂ ದೂತನನ್ನು ವಧಿಸಬಾರದೆಂದೇ ಸತ್ಪುರುಷರು ಹೇಳುತ್ತಾರೆ. ವಧೆಯನ್ನು ಬಿಟ್ಟು ದೂತನನ್ನು ದಂಡಿಸುವಂತಹ ಅನೇಕ ಪದ್ಧತಿಗಳು ಇವೆ.॥14॥

ಮೂಲಮ್ - 15

ವೈರೂಪ್ಯಮಂಗೇಷು ಕಶಾಭಿಘಾತೋ
ಮೌಂಡ್ಯಂ ತಥಾ ಲಕ್ಷಣಸಂನಿಪಾತಃ ।
ಏತಾನ್ ಹಿ ದೂತೇ ಪ್ರವದಂತಿ ದಂಡಾನ್
ವಧಸ್ತು ದೂತಸ್ಯ ನ ನಃ ಶ್ರುತೋಽಪಿ ॥

ಅನುವಾದ

ಅವಯವಗಳಲ್ಲಿ ವಿರೂಪವನ್ನುಂಟುಮಾಡುವುದು, ಚಾವಟಿಯಿಂದ ಏಟು ಕೊಡುವುದು, ತಲೆ ಬೋಳಿಸುವುದು, ಅವಲಕ್ಷಣ ಗೊಳಿಸುವುದು - ಇಂತಹ ಶಿಕ್ಷೆಗಳು ದೂತನಿಗೆ ಯುಕ್ತವೆಂದು ಪ್ರಾಜ್ಞರು ಹೇಳುತ್ತಾರೆ. ಆದರೆ ದೂತನನ್ನು ವಧಿಸುವುದನ್ನು ನಾವು ಎಲ್ಲಿಯೂ ಕೇಳಿಯೇ ಇಲ್ಲ.॥15॥

ಮೂಲಮ್ - 16

ಕಥಂ ಚ ಧರ್ಮಾರ್ಥವಿನೀತಬುದ್ಧಿಃ
ಪರಾವರಪ್ರತ್ಯಯನಿಶ್ಚಿತಾರ್ಥಃ ।
ಭವದ್ವಿಧಃ ಕೋಪವಶೇ ಹಿ ತಿಷ್ಠೇತ್
ಕೋಪಂ ನಿಯಚ್ಛಂತಿ ಹಿ ಸತ್ತ್ವವಂತಃ ॥

ಅನುವಾದ

ನೀನು ಬುದ್ಧಿಬಲದಿಂದ ಧರ್ಮಾರ್ಥವನ್ನು ಚೆನ್ನಾಗಿ ತಿಳಿದುಕೊಂಡಿರುವೆ. ಯುಕ್ತಾಯುಕ್ತ ವಿಚಕ್ಷಣೆಯಿಂದ ಯಾವುದೇ ನಿರ್ಣಯವನ್ನು ಮಾಡುವವನಾಗಿರುವಿ. ಅಂತಹ ಪ್ರಾಜ್ಞನಾದ ನೀನು ಕೋಪಕ್ಕೆ ವಶನಾದರೆ ಹೇಗೆ? ಜ್ಞಾನಿಗಳು ಕೋಪವನ್ನು ನಿಗ್ರಹಿಸುವವರಲ್ಲವೇ?॥16॥

ಮೂಲಮ್ - 17

ನ ಧರ್ಮವಾದೇ ನ ಚ ಲೋಕವೃತ್ತೆ
ನ ಶಾಸ್ತ್ರಬುದ್ಧಿಗ್ರಹಣೇಷು ಚಾಪಿ ।
ವಿದ್ಯೇತ ಕಶ್ಚಿತ್ತವ ವೀರ ತುಲ್ಯ
ಸ್ತ್ವಂ ಹ್ಯುತ್ತಮಃ ಸರ್ವಸುರಾಸುರಾಣಾಮ್ ॥

ಅನುವಾದ

ಧರ್ಮವನ್ನು ಪ್ರತಿಪಾದಿಸುವುದರಲ್ಲಿ, ಲೌಕಿಕಾಚಾರದಲ್ಲಿ, ಶಾಸ್ತ್ರಜ್ಞಾನದಲ್ಲಿ ಹಾಗೂ ಧಾರಣೆಯಲ್ಲಿ ನಿನಗೆ ಸಮಾನರಾದವರು ಯಾರೂ ಇಲ್ಲ. ಸಮಸ್ತ ಸುರಾಸುರರಿಂದಲೂ ನೀನೇ ಶ್ರೇಷ್ಠನಾಗಿರುವೆ.॥17॥

ಮೂಲಮ್ - 18

ಶೂರೇಣ ವೀರೇಣ ನಿಶಾಚರೇಂದ್ರ
ಸುರಾಸುರಾಣಾಮಪಿ ದುರ್ಜಯೇನ ।
ತ್ವಯಾ ಪ್ರಗಲ್ಭಾಃ ಸುರದೈತ್ಯಸಂಘಾ
ಜಿತಾಶ್ಚ ಯುದ್ಧೇಷ್ವಸಕೃನ್ನರೇಂದ್ರಾಃ ॥

ಅನುವಾದ

ಪರಾಕ್ರಮ, ಉತ್ಸಾಹಶಕ್ತಿ, ಮನೋಛಲಗಳಿಂದ ಮಹಾತ್ಮರಾದ ಸುರಾಸುರರೂ ನಿನ್ನನ್ನು ಜಯಿಸಲಾರರು. ಅಂತಹ ಸಾಟಿಯಿಲ್ಲದ ಶಕ್ತಿಯಿಂದ ನಿನ್ನ ಕೈಯಲ್ಲಿ ದೇವತೆಗಳು, ನರೇಂದ್ರರೂ ಎಷ್ಟೋ ಬಾರಿ ಪರಾಜಿತರಾಗಿರುವರು.॥18॥

ಮೂಲಮ್ - 19

ಇತ್ಥಂವಿಧಸ್ಯಾಮರದೈತ್ಯಶತ್ರೋಃ
ಶೂರಸ್ಯ ವೀರಸ್ಯ ತವಾಜಿತಸ್ಯ ।
ಕುರ್ವಂತಿ ಮೂಢಾ ಮನಸೋ ವ್ಯಲೀಕಂ
ಪ್ರಾಣೈರ್ವಿಯುಕ್ತಾ ನತು ಭೊಃ ಪುರಾ ತೇ ॥

ಅನುವಾದ

ಇಂತಹ ಗುಣಗಳಿಂದ, ಅಮರರೂ, ದೈತ್ಯರೂ ನಿನಗೆ ಭಯಪಟ್ಟುಕೊಳ್ಳುವರು. ಶೂರನೂ, ವೀರನೂ, ಅಜೇಯನೂ ಆದ ನಿನಗೆ ಮನಸ್ಸಿನಲ್ಲಿ ಕೇಡುಬಗೆಯಲಾರರು. ಮಹರಾಜಾ! ಹಿಂದೆ ನಿನಗೆ ಹಾನಿ ಮಾಡಲು ಸಂಕಲ್ಪಿಸಿದ ವೀರರೆಲ್ಲರೂ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ.॥19॥

ಮೂಲಮ್ - 20

ನ ಚಾಪ್ಯ ಸ್ಯ ಕಪೇರ್ಘಾತೇ ಕಂಚಿತ್ ಪಶ್ಯಾಮ್ಯಹಂ ಗುಣಮ್ ।
ತೇಷ್ವಯಂ ಪಾತ್ಯತಾಂ ದಂಡೋ ಯೈರಯಂ ಪ್ರೇಷಿತಃ ಕಪಿಃ ॥

ಅನುವಾದ

ಈ ಕಪಿಯನ್ನು ವಧಿಸುವುದರಿಂದ ಯಾವ ಪ್ರಯೋಜನವನ್ನು ನಾನು ನೋಡುತ್ತಿಲ್ಲ. ಈ ಮರಣದಂಡನೆಯನ್ನು ಇವನನ್ನು ಕಳಿಸಿದವರಿಗೆ ವಿಧಿಸಬೇಕು.॥20॥

ಮೂಲಮ್ - 21

ಸಾಧುರ್ವಾ ಯದಿ ವಾಸಾಧುಃ ಪರೈರೇಷ ಸಮರ್ಪಿತಃ ।
ಬ್ರುವನ್ ಪರಾರ್ಥಂ ಪರವಾನ್ನ ದೂತೋ ವಧಮರ್ಹತಿ ॥

ಅನುವಾದ

ಇವನು ದುಷ್ಟನೇ ಆಗಿರಲಿ, ಒಳ್ಳೆಯವನೇ ಆಗಿರಲಿ, ಬೇರೆಯವರಿಂದ ಕಳುಹಲ್ಪಟ್ಟು ಇವನು ಇಲ್ಲಿಗೆ ಬಂದಿರುವನು. ದೂತನು ಯಾವಾಗಲೂ ಇತರರ ಪ್ರಯೋಜನದ ಕುರಿತೇ ಮಾತಾಡುತ್ತಾನೆ. ಇತರರಿಗೆ ಅಧೀನನಾಗಿರುತ್ತಾನೆ. ಆದ್ದರಿಂದ ದೂತನು ವಧಾರ್ಹನಲ್ಲ.॥21॥

ಮೂಲಮ್ - 22

ಅಪಿ ಚಾಸ್ಮಿನ್ ಹತೇ ರಾಜನ್ನಾನ್ಯಂ ಪಶ್ಯಾಮಿ ಖೇಚರಮ್ ।
ಇಹ ಯಃ ಪುನರಾಗಚ್ಛೇತ್ ಪರಂ ಪಾರಂ ಮಹೋದಧೇಃ ॥

ಅನುವಾದ

ರಾಕ್ಷಸಪ್ರಭುವೇ! ಇವನು ಹತನಾದರೆ ಆಕಾಶದಲ್ಲಿ ಹಾರಿಕೊಂಡು ಮಹೋದಧಿಯ ದಕ್ಷಿಣತೀರದ ಈ ಲಂಕೆಗೆ ಬರುವ ಮತ್ಯಾರನ್ನೂ ನಾನು ನೋಡುವುದಿಲ್ಲ. (ಇವನ ಪ್ರಾಣಗಳು ಉಳಿದರೆ ಇವನು ರಾಮ-ಲಕ್ಷ್ಮಣರಲ್ಲಿಗೆ ಹೋಗಿ, ಇಲ್ಲಿಯ ಎಲ್ಲ ಸಮಾಚಾರವನ್ನು ತಿಳಿಸುವನು. ಅದರಿಂದ ಅವರು ಇಲ್ಲಿಗೆ ಬರುವರು. ಬಳಿಕ ಶತ್ರುಗಳನ್ನು ಮಟ್ಟ ಹಾಕುವುದು ಸುಲಭವು.)॥22॥

ಮೂಲಮ್ - 23

ತಸ್ಮಾನ್ನಾಸ್ಯ ವಧೇ ಯತ್ನಃ ಕಾರ್ಯಃ ಪರಪುರಂಜಯ ।
ಭವಾನ್ ಸೇಂದ್ರೇಷು ದೇವೇಷು ಯತ್ನಮಾಸ್ಥಾತುಮರ್ಹತಿ ॥

ಅನುವಾದ

ಶತ್ರುಮರ್ದನಾ! ಆದ್ದರಿಂದ ಈತನನ್ನು ವಧಿಸುವ ಪ್ರಯತ್ನವನ್ನು ಬಿಟ್ಟುಬಿಡು. ಈ ಪ್ರಯತ್ನವನ್ನು ಇಂದ್ರಾದಿ ದೇವತೆಗಳ ವಿಷಯದಲ್ಲಿ ಕೈಗೊಳ್ಳುವುದು ಉಚಿತವು. (ಈ ಸಣ್ಣ ವಾನರನ ಮೇಲೆ ಬಲಪ್ರಯೋಗವೇಕೆ?)॥23॥

ಮೂಲಮ್ - 24

ಅಸ್ಮಿನ್ ವಿನಷ್ಟೇ ನ ಹಿ ದೂತಮನ್ಯಂ
ಪಶ್ಯಾಮಿ ಯಸ್ತೌ ನರರಾಜಪುತ್ರೌ ।
ಯುದ್ಧಾಯ ಯುದ್ಧಪ್ರಿಯ ದುರ್ವಿನೀತಾ-
ವುದ್ಯೋಜಯೇದ್ದೀರ್ಘಪಥಾವರುದ್ಧೌ ॥

ಅನುವಾದ

ಯುದ್ಧಪ್ರಿಯನೇ! ಬಲಗರ್ವಿತರಾದ ಆ ರಾಜಕುಮಾರರೂ ಇಲ್ಲಿಂದ ತುಂಬಾ ದೂರ ಸಮುದ್ರದ ಆಚೆ-ದಡದಲ್ಲಿದ್ದಾರೆ. ಇವನನ್ನು ವಧಿಸಿದರೆ ಶತ್ರುಗಳಿಗೆ ವಾರ್ತೆಯನ್ನು ತಿಳಿಸುವ ಬೇರೆ ಯಾವ ದೂತನೂ ನನಗೆ ಕಾಣುವುದಿಲ್ಲ.॥24॥

ಮೂಲಮ್ - 25

ಪರಾಕ್ರಮೋತ್ಸಾಹಮನಸ್ವಿನಾಂ ಚ
ಸುರಾಸುರಾಣಾಮಪಿ ದುರ್ಜಯೇನ ।
ತ್ವಯಾ ಮನೋನಂದನ ನೈರ್ಋತಾನಾಂ
ಯುದ್ಧಾಯತಿರ್ನಾಶಯಿತುಂ ನ ಯುಕ್ತಾ ॥

ಅನುವಾದ

ರಾಕ್ಷಸರಿಗೆ ಆನಂದವನ್ನು (ಸುಖವನ್ನು) ಕೊಡುವವನೇ! ನೀನು ಸುರಾಸುರರಿಗೆ ಅಜೇಯನಾಗಿರುವೆ. ರಾಕ್ಷಸರಿಗೆ ಪರಾಕ್ರಮವು, ಉತ್ಸಾಹವು, ಮನೋಬಲವು ದೊರಕುವಂತಹ ಈ ಯುದ್ಧಾವಕಾಶವನ್ನು ನೀನು ಕೈಯ್ಯಾರೆ ಕಡೆಗಣಿಸಬೇಡ.॥25॥

ಮೂಲಮ್ - 26

ಹಿತಾಶ್ಚ ಶೂರಾಶ್ಚ ಸಮಾಹಿತಾಶ್ಚ
ಕುಲೇಷು ಜಾತಾಶ್ಚ ಮಹಾಗುಣೇಷು ।
ಮನಸ್ವಿನಃ ಶಸ್ತ್ರಭೃತಾಂ ವರಿಷ್ಠಾಃ
ಕೋಟ್ಯಗ್ರತಸ್ತೇ ಸುಭೃತಾಶ್ಚ ಯೋಧಾಃ ॥

ಅನುವಾದ

ನಿನಗೆ ಹಿತವನ್ನು ಬಯಸುವವರೂ, ಶೂರರೂ, ಜಾಗರೂಕರಾಗಿ ಯುದ್ಧಸನ್ನದ್ಧರಾಗಿರುವವರೂ, ಸದ್ಗುಣ ವಂಶಸಂಜಾತರೂ, ಮನೋಬಲವುಳ್ಳವರೂ, ಶಸ್ತ್ರಧಾರಿಗಳಲ್ಲಿ ಶ್ರೇಷ್ಠರೂ, ನಿನ್ನಿಂದ ಪೋಷಿತರಾದ ಕೋಟ್ಯವಧಿ ಯೋಧರು ನಿನ್ನ ಕಡೆಗಿದ್ದಾರೆ. ॥26॥

ಮೂಲಮ್ - 27

ತದೇಕದೇಶೇನ ಬಲಸ್ಯ ತಾವತ್
ಕೇಚಿತ್ತವಾದೇಶಕೃತೋಭಿಯಾಂತು ।
ತೌ ರಾಜಪುತ್ರೌ ವಿನಿಗೃಹ್ಯ ಮೂಢೌ
ಪರೇಷು ತೇ ಭಾವಯಿತುಂ ಪ್ರಭಾವಮ್ ॥

ಅನುವಾದ

ಅಂತಹ ನಿನ್ನ ಸೈನ್ಯದಲ್ಲಿನ ಕೆಲವು ಯೋಧರು ನಿನ್ನ ಆಜ್ಞೆಯಂತೆ ಹೋಗಿ ಮೂಢರಾದ ಆ ರಾಜಕುಮಾರರನ್ನು ಬಂಧಿಸಲಿ. ಆಗ ನಿನ್ನ ಪರಾಕ್ರಮ ಎಂತಹುದು ಎಂದು ಶತ್ರುಗಳಿಗೆ ತಿಳಿದುಬಂದೀತು.॥27॥

ಮೂಲಮ್ - 28

ನಿಶಾಚರಾಣಾಮಧಿಪೋನುಜಸ್ಯ
ವಿಭೀಷಣಸ್ಯೋತ್ತಮವಾಕ್ಯಮಿಷ್ಟಮ್ ।
ಜಗ್ರಾಹ ಬುದ್ಧ್ಯಾಃ ಸುರಲೋಕಶತ್ರು
ರ್ಮಹಾಬಲೋ ರಾಕ್ಷಸರಾಜಮುಖ್ಯಃ ॥

ಅನುವಾದ

ರಾಕ್ಷಸರಿಗೆ ಅಧಿಪತಿಯೂ, ಸುರಲೋಕಶತ್ರುವೂ, ಮಹಾ ಬಲಶಾಲಿಯೂ, ರಾಕ್ಷಸರಾಜ ಮುಖ್ಯನಾದ ರಾವಣೇಶ್ವರನಿಗೆ ತಮ್ಮನಾದ ವಿಭೀಷಣನ ಉತ್ತಮವೂ, ಇಷ್ಟವೂ ಆದ ಮಾತುಗಳು ಮನವರಿಕೆಯಾದುವು. ಮನಃಪೂರ್ವಕವಾಗಿ ಅಂಗೀಕರಿಸಿದನು.॥28॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ದ್ವಿಪಂಚಾಶಃ ಸರ್ಗಃ ॥ 52 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತೆರಡನೆಯ ಸರ್ಗವು ಮುಗಿಯಿತು.