०५१ हनुमता रामकथानिरूपणम्

वाचनम्
ಭಾಗಸೂಚನಾ

ಹನುಮಂತನು ಶ್ರೀರಾಮನ ಪ್ರಭಾವವನ್ನು ವರ್ಣಿಸುತ್ತಾ ರಾವಣನಿಗೆ ಹಿತೋಪದೇಶವನ್ನು ಮಾಡಿದುದು

ಮೂಲಮ್ - 1

ತಂ ಸಮೀಕ್ಷ್ಯ ಮಹಾಸತ್ತ್ವಂ ಸತ್ತ್ವವಾನ್ ಹರಿಸತ್ತಮಃ ।
ವಾಕ್ಯಮರ್ಥವದವ್ಯಗ್ರಃ ತಮುವಾಚ ದಶಾನನಮ್ ॥

ಅನುವಾದ

ಮಹಾಸತ್ತ್ವನೂ, ಕಪಿಶ್ರೇಷ್ಠನೂ ಆದ ಹನುಮಂತನು ಮಹಾಬಲಿಷ್ಠನಾದ ದಶಗ್ರೀವನನ್ನು ಉದ್ದೇಶಿಸಿ, ನಿರ್ಭಯನಾಗಿ ಅರ್ಥವತ್ತಾದ ಮಾತುಗಳನ್ನು ಹೇಳತೊಡಗಿದನು-॥1॥

ಮೂಲಮ್ - 2

ಅಹಂ ಸುಗ್ರೀವಸಂದೇಶಾತ್ ಇಹ ಪ್ರಾಪ್ತಸ್ತವಾಲಯಮ್ ।
ರಾಕ್ಷಸೇಂದ್ರ ಹರೀಶಸ್ತ್ವಾಂ ಭ್ರಾತಾ ಕುಶಲಮಬ್ರವೀತ್ ॥

ಅನುವಾದ

ರಾಕ್ಷಸೇಶ್ವರನೇ! ವಾನರರಾಜನಾದ ಸುಗ್ರೀವನ ಸಂದೇಶವನ್ನು ಹೊತ್ತುಕೊಂಡು ನಾನು ಲಂಕೆಗೆ ಬಂದಿರುವೆನು. ನಿನಗೆ ಸೋದರನಂತಿರುವ* ಸುಗ್ರೀವನು ನಿನ್ನ ಕ್ಷೇಮಸಮಾಚಾರವನ್ನು ಕೇಳಿರುವನು.॥2॥

ಟಿಪ್ಪನೀ
  • ವಾಲಿಗೂ ರಾವಣನಿಗೂ ಸಖ್ಯವಿತ್ತು. (ಉತ್ತರಕಾಂಡ 34ನೇ ಸರ್ಗವನ್ನು ನೋಡಿರಿ.) ವಾಲಿಗೆ ಸೋದರನಾದ್ದರಿಂದ ಸುಗ್ರೀವನು ರಾವಣನ ಕ್ಷೇಮಸಮಾಚಾರಗಳನ್ನು ಕೇಳಿರುವುದು ರಾಜಮರ್ಯಾದೆ.
ಮೂಲಮ್ - 3

ಭ್ರಾತುಃ ಶ್ರುಣು ಸಮಾದೇಶಂ ಸುಗ್ರೀವಸ್ಯ ಮಹಾತ್ಮನಃ ।
ಧರ್ಮಾರ್ಥೋಪಹಿತಂ ವಾಕ್ಯಮಿಹ ಚಾಮುತ್ರ ಚ ಕ್ಷಮಮ್ ॥

ಅನುವಾದ

ನಿನಗೆ ಸಹೋದರ ಸಮಾನನಾದ ಮಹಾತ್ಮನಾದ ಸುಗ್ರೀವನ ಸಂದೇಶವನ್ನು ಕೇಳು. ಇದು ಧರ್ಮಾರ್ಥಯುಕ್ತವಾಗಿದೆ. ಇಹ-ಪರಗಳೆರಡರ ಸುಖಕ್ಕೂ ಸಾಧನಭೂತವಾಗಿದೆ.॥3॥

ಮೂಲಮ್ - 4

ರಾಜಾ ದಶರಥೋ ನಾಮ ರಥಕುಂಜರವಾಜಿಮಾನ್ ।
ಪಿತೇವ ಬಂಧುರ್ಲೋಕಸ್ಯ ಸುರೇಶ್ವರಸಮದ್ಯುತಿಃ ॥

ಅನುವಾದ

ದಶರಥನೆಂಬ ಓರ್ವ ರಾಜನಿದ್ದನು. ಅವನು ರಥಾಶ್ವಗಜಗಳನ್ನು ಹೊಂದಿದ್ದನು. ಪ್ರಜಾಜನರಿಗೆ ತಂದೆಯೋಪಾದಿಯಲ್ಲಿದ್ದು, ಲೋಕಕ್ಕೆ ಪ್ರಿಯಬಂಧುವಾಗಿದ್ದನು. ಇಂದ್ರನಂತೆ ತೇಜಃಶಾಲಿಯಾಗಿದ್ದನು.॥4॥

ಮೂಲಮ್ - 5

ಜ್ಯೇಷ್ಠಸ್ತಸ್ಯ ಮಹಾಬಾಹುಃ ಪುತ್ರಃ ಪ್ರಿಯಕರಃ ಪ್ರಭುಃ ।
ಪಿತುರ್ನಿದೇಶಾನ್ನಿಷ್ಕ್ರಾಂತಃ ಪ್ರವಿಷ್ಟೋ ದಂಡಕಾವನಮ್ ॥

ಮೂಲಮ್ - 6

ಲಕ್ಷ್ಮಣೇನ ಸಹ ಭ್ರಾತ್ರಾ ಸೀತಯಾ ಚಾಪಿ ಭಾರ್ಯಯಾ ।
ರಾಮೋ ನಾಮ ಮಹಾತೇಜಾ ಧರ್ಮ್ಯಂ ಪಂಥಾನಮಾಶ್ರಿತಃ ॥

ಅನುವಾದ

ಅವನ ಹಿರಿಯ ಮಗನು ಶ್ರೀರಾಮನು. ಅವನು ಆಜಾನುಬಾಹು, ಎಲ್ಲರಿಗೂ ಪ್ರಿಯಕರನೂ, ಸರ್ವಸಮರ್ಥನೂ ಆದ ಶ್ರೀರಾಮಚಂದ್ರನು ತಂದೆಯ ಆಜ್ಞಾನುಸಾರವಾಗಿ ತಮ್ಮನಾದ ಲಕ್ಷ್ಮಣ ಹಾಗೂ ಭಾರ್ಯೆಯಾದ ಸೀತಾದೇವಿಯೊಂದಿಗೆ ರಾಜ್ಯವನ್ನು ತ್ಯಜಿಸಿ ದಂಡಕಾರಣ್ಯವನ್ನು ಪ್ರವೇಶಿಸಿದನು.॥5-6॥

ಮೂಲಮ್ - 7

ತಸ್ಯ ಭಾರ್ಯಾ ವನೇ ನಷ್ಟಾ ಸೀತಾ ಪತಿಮನುವ್ರತಾ ।
ವೈದೇಹಸ್ಯ ಸುತಾ ರಾಜ್ಞೋ ಜನಕಸ್ಯ ಮಹಾತ್ಮನಃ ॥

ಅನುವಾದ

ಪತಿಯನ್ನೇ ಅನುಸರಿಸಿ ಹೋಗುತ್ತಿದ್ದ, ಮಹಾತ್ಮನಾದ ಜನಕನ ಮಗಳೂ, ಶ್ರೀರಾಮನ ಪತ್ನಿಯೂ ಆದ ಸೀತಾದೇವಿಯು ಅರಣ್ಯದಲ್ಲಿ ಕಳೆದುಹೋದಳು.॥7॥

ಮೂಲಮ್ - 8

ಸ ಮಾರ್ಗಮಾಣ ಸ್ತಾಂ ದೇವೀಂ ರಾಜಪುತ್ರಃ ಸಹಾನುಜಃ ।
ಋಶ್ಯಮೂಕಮನುಪ್ರಾಪ್ತಃ ಸುಗ್ರೀವೇಣ ಸಮಾಗತಃ ॥

ಅನುವಾದ

ಶ್ರೀರಾಮನು ತಮ್ಮನಾದ ಲಕ್ಷ್ಮಣನೊಡನೆ ಸೀತಾದೇವಿಯನ್ನು ಹುಡುಕುತ್ತಾ ಋಷ್ಯಮೂಕ ಪರ್ವತಕ್ಕೆ ಬಂದು ಅಲ್ಲಿ ಸುಗ್ರೀವನೊಡನೆ ಗೆಳೆತನ ಮಾಡಿಕೊಂಡನು.॥8॥

ಮೂಲಮ್ - 9

ತಸ್ಯ ತೇನ ಪ್ರತಿಜ್ಞಾತಂ ಸೀತಾಯಾಃ ಪರಿಮಾರ್ಗಣಮ್ ।
ಸುಗ್ರೀವಸ್ಯಾಪಿ ರಾಮೇಣ ಹರಿರಾಜ್ಯಂ ನಿವೇದಿತಮ್ ॥

ಅನುವಾದ

ಸೀತಾದೇವಿಯನ್ನು ಹುಡುಕಿ ಕೊಡುವುದಾಗಿ ಸುಗ್ರೀವನು, ಸುಗ್ರೀವನಿಗೆ ಕಿಷ್ಕಿಂಧಾ ರಾಜ್ಯವನ್ನು ಕೊಡಿಸುವುದಾಗಿ ಶ್ರೀರಾಮನು ಹೀಗೆ ಇಬ್ಬರೂ ಪ್ರತಿಜ್ಞೆ ಮಾಡಿದರು.॥9॥

ಮೂಲಮ್ - 10

ತತಸ್ತೇನ ಮೃಧೇ ಹತ್ವಾ ರಾಜಪುತ್ರೇಣ ವಾಲಿನಮ್ ।
ಸುಗ್ರೀವಃ ಸ್ಥಾಪಿತೋ ರಾಜ್ಯೇ ಹರ್ಯೃಕ್ಷಾಣಾಂ ಗಣೇಶ್ವರಃ ॥

ಅನುವಾದ

ಬಳಿಕ ರಾಜಕುಮಾರನಾದ ಶ್ರೀರಾಮನು ತನ್ನ ಪ್ರತಿಜ್ಞೆಯಂತೆ ಯುದ್ಧದಲ್ಲಿ ವಾಲಿಯನ್ನು ಕೊಂದು, ಸುಗ್ರೀವನನ್ನು ವಾನರ- ಭಲ್ಲೂಕಗಳಿಗೆ ರಾಜನನ್ನಾಗಿಸಿದನು.॥10॥

ಮೂಲಮ್ - 11

ತ್ವಯಾ ವಿಜ್ಞಾತಪೂರ್ವಶ್ಚ ವಾಲೀ ವಾನರಪುಂಗವಃ ।
ರಾಮೇಣ ನಿಹತಃ ಸಂಖ್ಯೇ ಶರೇಣೈಕೇನ ವಾನರಃ ॥

ಅನುವಾದ

ರಾವಣೇಶ್ವರಾ! ವಾಲಿಯು ಯಾರೆಂಬುದನ್ನು, ಅವನ ಪರಾಕ್ರಮವನ್ನು ನೀನು ತಿಳಿದೇ ಇರುವೆ. ಅಂತಹ ಮಹಾ ಬಲಿಷ್ಠನಾದ ವಾಲಿಯನ್ನು ಶ್ರೀರಾಮನು ಒಂದೇ ಬಾಣದಿಂದ ಸಂಹರಿಸಿದನು.॥11॥

ಮೂಲಮ್ - 12

ಸ ಸೀತಾಮಾರ್ಗಣೇ ವ್ಯಗ್ರಃ ಸುಗ್ರೀವಃ ಸತ್ಯಸಂಗರಃ ।
ಹರೀನ್ ಸಂಪ್ರೇಷಯಾಮಾಸ ದಿಶಃ ಸರ್ವಾ ಹರೀಶ್ವರಃ ॥

ಅನುವಾದ

ಸತ್ಯಸಂಧನೂ, ವಾನರರಾಜನೂ, ಆದ ಸುಗ್ರೀವನು ಸೀತಾನ್ವೇಷಣೆಗಾಗಿ ಪ್ರಯತ್ನಶೀಲನಾಗಿ ಎಲ್ಲ ದಿಕ್ಕುಗಳಿಗೂ ವಾನರರನ್ನು ಕಳುಹಿದನು.॥12॥

ಮೂಲಮ್ - 13

ತಾಂ ಹರೀಣಾಂ ಸಹಸ್ರಾಣಿ ಶತಾನಿ ನಿಯುತಾನಿ ಚ ।
ದಿಕ್ಷು ಸರ್ವಾಸು ಮಾರ್ಗಂತೇ ಹ್ಯಧಶ್ಚೋಪರಿ ಚಾಂಬರೇ ॥

ಅನುವಾದ

ಸುಗ್ರೀವನ ಆಜ್ಞೆಯಂತೆ ಲಕ್ಷ-ಲಕ್ಷ ಕಪೀಶ್ವರರು ಅಂತರಿಕ್ಷದಲ್ಲಿಯೂ, ಭೂಮಿಯಲ್ಲಿಯೂ, ಪಾತಾಳದಲ್ಲಿಯೂ ಹೀಗೆ ಎಲ್ಲೆಡೆ ಸೀತೆಯನ್ನು ಹುಡುಕುತ್ತಿದ್ದಾರೆ.॥13॥

ಮೂಲಮ್ - 14

ವೈನತೇಯಸಮಾಃ ಕೇಚಿತ್ ಕೇಚಿತ್ತತ್ರಾನಿಲೋಪಮಾಃ ।
ಅಸಂಗಗತಯಃ ಶೀಘ್ರಾ ಹರಿವೀರಾ ಮಹಾಬಲಾಃ ॥

ಅನುವಾದ

ಅವರಲ್ಲಿ ಕೆಲವರು ಗರುತ್ಮಂತನಂತೆ ಪರಾಕ್ರಮಶಾಲಿಗಳು, ಕೆಲವರು ವಾಯುವಿನಂತೆ ವೇಗಶಾಲಿಗಳು. ಬಲವೀರ್ಯಸಂಪನ್ನರಾದ ಆ ವಾನರರು ಯಾವುದೇ ತಡೆಯಿಲ್ಲದೆ ಸಂಚರಿಸುವವರು. ಹಾಗೆ ಸೀತೆಯನ್ನು ಹುಡುಕಲು ಹೊರಟವರಲ್ಲಿ ನಾನೂ ಒಬ್ಬನು.॥14॥

ಮೂಲಮ್ - 15

ಅಹಂ ತು ಹನುಮಾನ್ನಾಮ ಮಾರುತಸ್ಯೌರಸಃ ಸುತಃ ।
ಸೀತಾಯಾಸ್ತು ಕೃತೇ ತೂರ್ಣಂ ಶತಯೋಜನಮಾಯತಮ್ ॥

ಮೂಲಮ್ - 16

ಸಮುದ್ರಂ ಲಂಘಯಿತ್ವೈವ ತಾಂ ದಿದೃಕ್ಷುರಿಹಾಗತಃ ।
ಭ್ರಮತಾ ಚ ಮಯಾ ದೃಷ್ಟಾ ಗೃಹೇ ತೇ ಜನಕಾತ್ಮ ಜಾ ॥

ಅನುವಾದ

ನನ್ನನ್ನು ಹನುಮಂತನೆಂದು ಹೇಳುತ್ತಾರೆ. ನಾನು ವಾಯುದೇವನ ಪುತ್ರನು. ಸೀತಾದೇವಿಯನ್ನು ಹುಡುಕುವುದಕ್ಕಾಗಿ ನೂರು ಯೋಜನ ವಿಸ್ತಾರವಾದ ಸಮುದ್ರವನ್ನು ವೇಗವಾಗಿ ಲಂಘಿಸಿ, ಈ ಲಂಕೆಗೆ ಬಂದಿರುವೆನು. ಅವಳನ್ನು ಹುಡುಕುತ್ತಾ ಸಂಚರಿಸುತ್ತಿರುವಾಗ ನನಗೆ ಅವಳು ಇಲ್ಲಿ ಕಂಡುಬಂದಳು.॥15-16॥

ಮೂಲಮ್ - 17

ತದ್ಭವಾನ್ ದೃಷ್ಟಧರ್ಮಾರ್ಥಸ್ತಪಃಕೃತಪರಿಗ್ರಹಃ ।
ಪರದಾರಾನ್ ಮಹಾಪ್ರಾಜ್ಞನೋಪರೋದ್ಧುಂ ತ್ವಮರ್ಹಸಿ ॥

ಅನುವಾದ

ಎಲೈ ಮಹಾಪ್ರಾಜ್ಞನೇ! ನೀನು ಧರ್ಮಾರ್ಥಗಳನ್ನು ಚೆನ್ನಾಗಿ ತಿಳಿದವನು. ತೀವ್ರವಾದ ತಪಸ್ಸನ್ನಾಚರಿಸಿ ಅನೇಕ ವರಗಳನ್ನು ಪಡೆದಿರುವೆ. ಅಂತಹ ನಿನಗೆ ಪರಸತಿಯನ್ನು ಬಂಧಿಸಿಡುವುದು ಯೋಗ್ಯವೆನಿಸುವುದಿಲ್ಲ.॥17॥

ಮೂಲಮ್ - 18

ನ ಹಿ ಧರ್ಮವಿರುದ್ಧೇಷು ಬಹ್ವಪಾಯೇಷು ಕರ್ಮಸು ।
ಮೂಲಘಾತಿಷು ಸಜ್ಜಂತೇ ಬುದ್ಧಿಮಂತೋ ಭವದ್ವಿಧಾಃ ॥

ಅನುವಾದ

ಧರ್ಮಕ್ಕೆ ವಿರುದ್ಧವಾದ, ಅಪಾಯದಿಂದ ಕೂಡಿರುವ ವಂಶವನ್ನೇ ತೊಡೆದುಹಾಕುವ ಇಂತಹ ಕುತ್ಸಿತ ಕಾರ್ಯಗಳಲ್ಲಿ ನಿನ್ನಂತಹ ಬುದ್ಧಿವಂತರು ಖಂಡಿತವಾಗಿಯೂ ತೊಡಗಬಾರದು.॥18॥

ಮೂಲಮ್ - 19

ಕಶ್ಚ ಲಕ್ಷ್ಮಣಮುಕ್ತಾನಾಂ ರಾಮಕೋಪಾನುವರ್ತಿನಾಮ್ ।
ಶರಾಣಾಮಗ್ರತಃ ಸ್ಥಾತುಂ ಶಕ್ತೋ ದೇವಾಸುರೇಷ್ವಪಿ ॥

ಅನುವಾದ

ಲಕ್ಷ್ಮಣನು ಬಿಡುವ ಹಾಗೂ ಕ್ರುದ್ಧನಾದ ಶ್ರೀರಾಮನ ಧನುಸ್ಸಿನಿಂದ ಹೊರಚಿಮ್ಮುವ ಬಾಣಗಳ ಮುಂದೆ ನಿಲ್ಲುವ ಶಕ್ತಿಯು ದೇವಾಸುರರಲ್ಲಿ ಯಾರಿಗಿದೆ? (ಯಾರೂ ನಿಲ್ಲರಾರರು.)॥19॥

ಮೂಲಮ್ - 20

ನ ಚಾಪಿ ತ್ರಿಷು ಲೋಕೇಷು ರಾಜನ್ ವಿದ್ಯೇತ ಕಶ್ಚನ ।
ರಾಘವಸ್ಯ ವ್ಯಲೀಕಂ ಯಃ ಕೃತ್ವಾ ಸುಖಮವಾಪ್ನುಯಾತ್ ॥

ಮೂಲಮ್ - 21

ತತ್ ತ್ರಿಕಾಲಹಿತಂ ವಾಕ್ಯಂ ಧರ್ಮ್ಯಮರ್ಥಾನುಬಂಧಿ ಚ ।
ಮನ್ಯಸ್ವ ನರದೇವಾಯ ಜಾನಕೀ ಪ್ರತಿದೀಯತಾಮ್ ॥

ಅನುವಾದ

ರಾಕ್ಷಸೇಶ್ವರಾ! ಧರ್ಮಸ್ವರೂಪನಾದ ಶ್ರೀರಾಮನಿಗೆ ಅಪರಾಧವನ್ನೆಸಗಿದವನಿಗೆ ಮೂರು ಲೋಕಗಳಲ್ಲಿಯೂ ಸುಖವು ಸಿಗಲಾರದು. ಆದ್ದರಿಂದ ನಾನೀಗ ಹೇಳಲಿರುವ ಮಾತುಗಳು ತ್ರಿಕಾಲಗಳಲ್ಲಿಯೂ ಹಿತಕರವೂ, ಧರ್ಮಾರ್ಥಸಾಧನೆಗೆ ಅನುಕೂಲಕರವೆಂದೂ ತಿಳಿದುಕೋ. ಸಾಕ್ಷಾತ್ ಪುರುಷೋತ್ತಮನಾದ ಶ್ರೀರಾಮನಿಗೆ ಸೀತಾದೇವಿಯನ್ನು ಒಪ್ಪಿಸಿಬಿಡು.॥20-21॥

ಮೂಲಮ್ - 22

ದೃಷ್ಟಾ ಹೀಯಂ ಮಯಾ ದೇವೀ ಲಬ್ಧಂ ಯದಿಹ ದುರ್ಲಭಮ್ ।
ಉತ್ತರಂ ಕರ್ಮ ಯಚ್ಛೇಷಂ ನಿಮಿತ್ತಂ ತತ್ರ ರಾಘವಃ ॥

ಅನುವಾದ

ರಾವಣೇಶ್ವರಾ! ಸೀತಾದೇವಿಯನ್ನು ನಾನು ಸಂದರ್ಶಿಸಿದೆನು. ಇತರ ವಾನರರಿಗೆ ಅಲಭ್ಯವಾದ ಜಾನಕೀದೇವಿಯ ದರ್ಶನವು ನನಗೆ ಲಭಿಸಿತು. ಇನ್ನು ಮುಂದೆ ಮಾಡಬೇಕಾದ ಕಾರ್ಯವನ್ನು ಶ್ರೀರಾಮನೇ ನಿರ್ಣಯಿಸುವನು.॥22॥

ಮೂಲಮ್ - 23

ಲಕ್ಷಿತೇಯಂ ಮಯಾ ಸೀತಾ ತಥಾ ಶೋಕಪರಾಯಣಾ ।
ಗೃಹ್ಯ ಯಾಂ ನಾಭಿಜಾನಾಸಿ ಪಂಚಾಸ್ಯಾಮಿವ ಪನ್ನಗೀಮ್ ॥

ಅನುವಾದ

ಶ್ರೀರಾಮನನ್ನು ಸ್ಮರಿಸುತ್ತಾ ಇಲ್ಲಿ ಶೋಕಾಕುಲಳಾದ ಸೀತಾದೇವಿಯನ್ನು ನಾನು ನೋಡಿದೆನು. ನೀನು ಅಪಹರಿಸಿ ತಂದಿರುವ ಈ ಸೀತಾದೇವಿಯು ನಿನ್ನನ್ನೂ, ನಿಮ್ಮವರನ್ನು ದಂಶಿಸುವ ಐದು ಹೆಡೆಗಳುಳ್ಳ ಹೆಣ್ಣು ಸರ್ಪರೂಪಿಣೀ ಎಂದು ನೀನು ತಿಳಿದಿಲ್ಲ. ಅವಳು ನಿಮಗೆಲ್ಲರ ಮೃತ್ಯುದೇವತೆಯಾಗಿದ್ದಾಳೆ.॥23॥

ಮೂಲಮ್ - 24

ನೇಯಂ ಜರಯಿತುಂ ಶಕ್ಯಾ ಸಾಸುರೈರಮರೈರಪಿ ।
ವಿಷಸಂಸೃಷ್ಟಮತ್ಯರ್ಥಂ ಭುಕ್ತಮನ್ನಮಿವೌಜಸಾ ॥

ಅನುವಾದ

ಹೆಚ್ಚು ವಿಷಪೂರಿತವಾದ ಅನ್ನವನ್ನು ತಿಂದು, ಎಂತಹ ಜಠರಾಗ್ನಿಯಿದ್ದವನಾದರೂ ಅದನ್ನು ಜೀರ್ಣಿಸಿಕೊಳ್ಳಲಾರನು. ಅಂತೆಯೇ ಎಷ್ಟೇ ಪರಾಕ್ರಮಶಾಲಿಗಳಾದ ಸುರಾಸುರರಿರಲಿ ಅವರಿಂದ ಸೀತೆಯನ್ನು ವಶಪಡಿಸಿಕೊಳ್ಳುವುದು ಸಾಧ್ಯವಾಗದು. ॥24॥

ಮೂಲಮ್ - 25

ತಪಃಸಂತಾಪಲಬ್ಧಸ್ತೇ ಯೋಯಂ ಧರ್ಮಪರಿಗ್ರಹಃ ।
ನ ಸ ನಾಶಯಿತುಂ ನ್ಯಾಯ್ಯ ಆತ್ಮಪ್ರಾಣಪರಿಗ್ರಹಃ ॥

ಅನುವಾದ

ನೀನು ಕಷ್ಟಪಟ್ಟು ತಪಸ್ಸನ್ನು ಮಾಡಿ ಧರ್ಮವನ್ನು ಸಂಪಾದಿಸಿರುವೆ. ಆತ್ಮರಕ್ಷಣೆಯನ್ನು ಪಡೆದಿರುವೆ. ಅದನ್ನು ನೀನನು ಸೀತಾಪಹರಣರೂಪೀ ಅಧರ್ಮದಿಂದ ಕೈಯಾರೆ ಕೆಡಿಸಿಕೊಳ್ಳುವುದು ನ್ಯಾಯವಲ್ಲ.॥25॥

ಮೂಲಮ್ - 26

ಅವಧ್ಯತಾಂ ತಪೋಭಿರ್ಯಾಂ ಭವಾನ್ ಸಮನುಪಶ್ಯತಿ ।
ಆತ್ಮನಃ ಸಾಸುರೈರ್ದೇವೈರ್ಹೇತುಸ್ತತ್ರಾಪ್ಯಯಂ ಮಹಾನ್ ॥

ಅನುವಾದ

ಕಠಿಣವಾದ ತಪಸ್ಸನ್ನಾಚರಿಸಿ ನೀನು ದೇವತೆಗಳಿಂದಾಗಲೀ, ಅಸುರರಿಂದಾಗಲೀ, ಮರಣವು ಬಾರದಿರುವಂತೆ ವರವನ್ನು ಪಡೆದಿರುವೆ. ಆದರೂ ನಿನ್ನ ಮರಣಕ್ಕಾಗಿ ಅನಿವಾರ್ಯವಾದ ದೊಡ್ಡ ಕಾರಣವಿದೆಯಲ್ಲ. (ನೀನು ನರವಾನರರಿಂದ ಅವಧ್ಯನಲ್ಲ ತಾನೆ!)॥26॥

ಮೂಲಮ್ - 27

ಸುಗ್ರೀವೋ ನ ಹಿ ದೇವೋಽಯಂ ನಾ ಸುರೋ ನ ಚ ರಾಕ್ಷಸಃ ।
ನ ದಾನವೋ ನ ಗಂಧರ್ವೋ ನ ಯಕ್ಷೋ ನ ಚ ಪನ್ನಗಃ ॥

ಮೂಲಮ್ - 28

ಮಾನುಷೋ ರಾಘವೋ ರಾಜನ್ ಸುಗ್ರೀವಶ್ಚ ಹರೀಶ್ಚರಃ ।
ತಸ್ಮಾತ್ ಪ್ರಾಣಪರಿತ್ರಾಣಂ ಕಥಂ ರಾಜನ್ ಕರಿಷ್ಯಸಿ ॥

ಅನುವಾದ

ನಮ್ಮ ಒಡೆಯನಾದ ಸುಗ್ರೀವನು ದೇವತೆ ಅಲ್ಲ ; ಅಸುರನಲ್ಲ, ರಾಕ್ಷಸನೂ ಅಲ್ಲ; ದಾನವನಲ್ಲ, ಗಂಧರ್ವನಲ್ಲ, ಯಕ್ಷನಲ್ಲ, ನಾಗಜಾತಿಗೆ ಸೇರಿದವನೂ ಅಲ್ಲ, ಅವನೊಬ್ಬ ವಾನರ ಶ್ರೇಷ್ಠನು. ಶ್ರೀರಾಮನೂ ಮಾನವನು ಇವರಿಬ್ಬರೊಡನೆಯೂ ನೀನು ಹಗೆತನವನ್ನು ಬೆಳೆಸಿಕೊಂಡಿರುವಾಗ ಪ್ರಾಣಗಳನ್ನು ಹೇಗೆ ತಾನೇ ಉಳಿಸಿಕೊಳ್ಳಬಲ್ಲೆ?॥27-28॥

ಮೂಲಮ್ - 29

ನ ತು ಧರ್ಮೋಪಸಂಹಾರಮಧರ್ಮಫಲಸಂಹಿತಮ್ ।
ತದೇವ ಫಲಮನ್ವೇತಿ ಧರ್ಮಶ್ಚಾಧರ್ಮನಾಶನಃ ॥

ಅನುವಾದ

ಧರ್ಮಫಲಗಳು, ಅಧರ್ಮಫಲಗಳು ಎಂದಿಗೂ ಕೂಡಿರುವುದಿಲ್ಲ. ಧರ್ಮಕಾರ್ಯಕ್ಕೆ ಶುಭಫಲಗಳೂ, ಅಧರ್ಮಕಾರ್ಯಕ್ಕೆ ಅಶುಭ ಲಗಳೂ ದೊರಕುವವು. ಧರ್ಮಕಾರ್ಯಾಚರಣೆಯಿಂದ ಅಧರ್ಮಕಾರ್ಯಲವು ನಶಿಸಲಾರದು. (‘‘ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಮ್’’ ಎಂಬುದು ಆರ್ಯೋಕ್ತಿಯಲ್ಲವೇ?)॥29॥

ಮೂಲಮ್ - 30

ಪ್ರಾಪ್ತಂ ಧರ್ಮಫಲಂ ಕೃತ್ಸ್ನಂ ಭವತಾ ನಾತ್ರ ಸಂಶಯಃ ।
ಫಲಮಸ್ಯಾಪ್ಯಧರ್ಮಸ್ಯ ಕ್ಷಿಪ್ರಮೇವ ಪ್ರಪತ್ಸ್ಯಸೇ ॥

ಅನುವಾದ

ನೀನು ಆಚರಿಸಿದ ಧರ್ಮಫಲವು ಪೂರ್ತಿಯಾಗಿ ನಿನಗೆ ಲಭಿಸಿದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಈಗ ನಿನ್ನ ಅಧರ್ಮಫಲಗಳು ಬಹುಬೇಗನೇ ಹೊಂದಲಿರುವೆ.॥30॥

ಮೂಲಮ್ - 31

ಜನಸ್ಥಾನವಧಂ ಬುದ್ಧ್ವಾ ಬುದ್ಧ್ವಾ ವಾಲಿವಧಂ ತಥಾ ।
ರಾಮಸುಗ್ರೀವಸಖ್ಯಂ ಚ ಬುದ್ಧ್ಯಸ್ವ ಹಿತಮಾತ್ಮನಃ ॥

ಅನುವಾದ

ದಂಡಕಾರಣ್ಯದಲ್ಲಿನ ಖರದೂಷಣರ ವಧೆಯನ್ನೂ, ಕಿಷ್ಕಿಂಧೆಯಲ್ಲಿನ ವಾಲಿವಧೆಯನ್ನೂ, ರಾಮ-ಸುಗ್ರೀವರ ಮೈತ್ರಿಯ ಸಂಬಂಧವನ್ನು ಮನಸ್ಸಿಗೆ ತಂದುಕೊಂಡು, ತನ್ನ ಹಿತವಾಗುವಂತೆ ಚೆನ್ನಾಗಿ ಆಲೋಚಿಸಿಕೋ.॥31॥

ಮೂಲಮ್ - 32

ಕಾಮಂ ಖಲ್ವಹಮಪ್ಯೇಕಃ ಸವಾಜಿರಥಕುಂಜರಾಮ್ ।
ಲಂಕಾಂ ನಾಶಯಿತುಂ ಶಕ್ತಸ್ತಸ್ಯೈಷ ತು ನ ನಿಶ್ಚಯಃ ॥

ಅನುವಾದ

ಹಯ, ರಥ, ಗಜ, ಬಲದಿಂದೊಡಗೂಡಿದ ನಿನ್ನ ಲಂಕೆಯನ್ನು ಸರ್ವನಾಶಮಾಡಲು ನಾನೊಬ್ಬನೇ ಖಂಡಿತವಾಗಿ ಸಾಕು. ಆದರೆ ಅದಕ್ಕೆ ಶ್ರೀರಾಮನ ಅನುಮತಿಯಿಲ್ಲ.॥32॥

ಮೂಲಮ್ - 33

ರಾಮೇಣ ಹಿ ಪ್ರತಿಜ್ಞಾತಂ ಹರ್ಯೃಕ್ಷಗಣಸಂನಿಧೌ ।
ಉತ್ಸಾದನಮಮಿತ್ರಾಣಾಂ ಸೀತಾ ಯೈಸ್ತು ಪ್ರಧರ್ಷಿತಾ ॥

ಅನುವಾದ

‘‘ಸೀತಾದೇವಿಯನ್ನು ಅಪಹರಿಸಿದ ಶತ್ರುವನ್ನು ಕೊಂದೇ ಕಳೆಯುತ್ತೇನೆ’’ ಎಂದು ಶ್ರೀರಾಮನು ಭಲ್ಲೂಕ-ವಾನರರ ಸಮಕ್ಷಮದಲ್ಲಿ ಪ್ರತಿಜ್ಞೆಯನ್ನು ಮಾಡಿರುವನು. (ಈ ಕಾರ್ಯವನ್ನು ನಾನು ಮಾಡಿದರೆ ಆ ಸ್ವಾಮಿಯ ಪ್ರತಿಜ್ಞೆಗೆ ಭಂಗ ಬರುವುದು.)॥33॥

ಮೂಲಮ್ - 34

ಅಪಕುರ್ವನ್ ಹಿ ರಾಮಸ್ಯ ಸಾಕ್ಷಾದಪಿ ಪುರಂದರಃ ।
ನ ಸುಖಂ ಪ್ರಾಪ್ನುಯಾದನ್ಯಃ ಕಿಂ ಪುನಸ್ತ್ವದ್ವಿಧೋ ಜನಃ ॥

ಅನುವಾದ

ಶ್ರೀರಾಮನಿಗೆ ಅಪಕಾರ ಮಾಡಿರುವವನು ಸಾಕ್ಷಾತ್ ದೇವೇಂದ್ರನೇ ಆಗಿದ್ದರೂ, ಅವನು ಸುಖವನ್ನು ಹೊಂದಲಾರನು (ಬದುಕಿರಲಾರನು). ಹೀಗಿರುವಾಗ ನಿನ್ನಂತಹ ಸಾಮಾನ್ಯನ ವಿಷಯದಲ್ಲಿ ಹೇಳುವುದೇನಿದೆ?॥34॥

ಮೂಲಮ್ - 35

ಯಾಂ ಸೀತೇತ್ಯಭಿಜಾನಾಸಿ ಯೇಯಂ ತಿಷ್ಠತಿ ತೇ ವಶೇ ।
ಕಾಲರಾತ್ರೀತಿ ತಾಂ ವಿದ್ಧಿ ಸರ್ವಲಂಕಾವಿನಾಶಿನೀಮ್ ॥

ಅನುವಾದ

ನೀನು ಅಪಹರಿಸಿಕೊಂಡು ಬಂದು ಲಂಕೆಯಲ್ಲಿ ಬಂಧಿಸಿಟ್ಟ ಸೀತಾದೇವಿಯು ಸಾಮಾನ್ಯ ಸ್ತ್ರೀಯೆಂದು ತಿಳಿದಿರುವೆ. ಆದರೆ ಅವಳು ನಿನ್ನ ಲಂಕೆಯನ್ನು ಸರ್ವನಾಶ ಮಾಡಲು ಬಂದಿರುವ ಕಾಳರಾತ್ರಿಯೆಂದು ತಿಳಿ.॥35॥

ಮೂಲಮ್ - 36

ತದಲಂ ಕಾಲಪಾಶೇನ ಸೀತಾವಿಗ್ರಹರೂಪಿಣಾ ।
ಸ್ವಯಂ ಸ್ಕಂಧಾವಸಕ್ತೇನ ಕ್ಷೇಮಮಾತ್ಮನಿ ಚಿಂತ್ಯತಾಮ್ ॥

ಅನುವಾದ

ಸೀತಾವಿಗ್ರಹ ರೂಪವಾದ ಪ್ರಬಲವಾದ ಕಾಲಪಾಶವನ್ನು ನೀನೇ ಸ್ವತಃ ಕತ್ತಿಗೆ ತೊಡಿಸಿಕೊಂಡಿರುವೆ. (ಅವಳೇನು ಸ್ವಯಂ ಇಲ್ಲಿಗೆ ಬಂದವಳಲ್ಲ.) ಹೀಗಿರುವಾಗ ನೀನು ಕ್ಷೇಮವಾಗಿ ಹೇಗಿರಬಲ್ಲೆ? ಆಲೋಚಿಸು.॥36॥

ಮೂಲಮ್ - 37

ಸೀತಾಯಾಸ್ತೇಜಸಾ ದಗ್ಧಾಂ ರಾಮಕೋಪಪ್ರದೀಪಿತಾಮ್ ।
ದಹ್ಯಮಾನಾಮಿಮಾಂ ಪಶ್ಯ ಪುರೀಂ ಸಾಟ್ಟಪ್ರತೋಲಿಕಾಮ್ ॥

ಅನುವಾದ

ಎತ್ತರವಾದ ಉಪ್ಪರಿಗೆ ಮನೆಗಳಿಂದಲೂ, ವಿಶಾಲವಾದ ಬೀದಿಗಳಿಂದಲೂ ಶೋಭಿಸುತ್ತಿರುವ ಈ ಲಂಕೆಯು ಸೀತಾದೇವಿಯ ತೇಜಸ್ಸಿನಿಂದ ದಗ್ಧವಾಗಿದೆ. ಶ್ರೀರಾಮನ ಕೋಪಜ್ವಾಲೆಗಳಿಂದ ಇನ್ನೂ ಹೆಚ್ಚಾಗಿ ಪ್ರದೀಪ್ತವಾಗಿದೆ. ಹೀಗೆ ಉರಿಯುತ್ತಿರುವ ನಿನ್ನ ನಗರವನ್ನು ನೋಡು.॥37॥

ಮೂಲಮ್ - 38

ಸ್ವಾನಿ ಮಿತ್ರಾಣಿ ಮಂತ್ರೀಂಶ್ಚ ಜ್ಞಾತೀನ್ ಭ್ರಾತೄನ್ ಸುತಾನ್ಹಿತಾನ್ ।
ಭೋಗಾನ್ ದಾರಾಂಶ್ಚ ಲಂಕಾಂ ಚ ಮಾ ವಿನಾಶಮುಪಾನಯ ॥

ಅನುವಾದ

ನಿನ್ನೊಬ್ಬನ ಅಪರಾಧದಿಂದ ಆತ್ಮೀಯರಾದ ಮಿತ್ರರನ್ನು, ಮಂತ್ರಿಗಳನ್ನು, ಬಂಧುಗಳನ್ನು, ಜ್ಞಾತಿ-ಸಹೋದರರನ್ನು, ಮಡದಿ-ಮಕ್ಕಳನ್ನು, ಭೋಗೈಶ್ವರ್ಯಗಳನ್ನು, ಕಡೆಗೆ ನಿನ್ನ ಭಂಗಾರದ ಲಂಕೆಯನ್ನು ಕೈಯಾರೆ ಬಲಿಗೊಡಬೇಡ.॥38॥

ಮೂಲಮ್ - 39

ಸತ್ಯಂ ರಾಕ್ಷಸರಾಜೇಂದ್ರ ಶೃಣುಷ್ವ ವಚನಂ ಮಮ ।
ರಾಮದಾಸಸ್ಯ ದೂತಸ್ಯ ವಾನರಸ್ಯ ವಿಶೇಷತಃ ॥

ಅನುವಾದ

ರಾಕ್ಷಸೇಶ್ವರಾ! ನಾನು ಶ್ರೀರಾಮನ ಬಂಟನು. ಅವನ ಶಕ್ತಿಯಿಂದ ನಾನು ಏನು ಬೇಕಾದರೂ ಮಾಡಬಲ್ಲೆ. ದೂತನಾದವನು ಹೀತೋಪದೇಶ ಮಾಡುವುದು ನನ್ನ ಕರ್ತವ್ಯವು. ವಿಶೇಷವಾಗಿ ವಾನರನು. ಶ್ರೀರಾಮನು ಮಾನವನು. ನೀನು ರಾಕ್ಷಸನು. ಅದರಿಂದ ನಾನು ಮಧ್ಯಸ್ಥನು. ನನ್ನ ಸತ್ಯವಚನಗಳನ್ನು ಅವಧರಿಸು.॥39॥

ಮೂಲಮ್ - 40

ಸರ್ವಾನ್ ಲೋಕಾನ್ ಸುಸಂಹೃತ್ಯ ಸಭೂತಾನ್ ಸಚರಾಚರಾನ್ ।
ಪುನರೇವ ತಥಾ ಸ್ರಷ್ಟುಂ ಶಕ್ತೋ ರಾಮೋ ಮಹಾಯಶಾಃ ॥

ಅನುವಾದ

ಮಹಾಯಶಸ್ವಿಯಾದ ಶ್ರೀರಾಮನು ರುದ್ರನಂತೆ ಸಮಸ್ತಲೋಕಗಳನ್ನು ಸಂಹರಿಸಬಲ್ಲನು. ಪಂಚ ಭೂತಾತ್ಮಕವಾದ ಚರಾಚರಗಳಿಂದೊಡಗೂಡಿದ ಜಗತ್ತನ್ನು ಮರಳಿ ಅದೇ ರೀತಿಯಿಂದ ಕ್ಷಣಾರ್ಧದಲ್ಲಿ ಸೃಷ್ಟಿಸಬಲ್ಲನು.॥40॥

ಮೂಲಮ್ - 41

ದೇವಾಸುರನರೇಂದ್ರೇಷು ಯಕ್ಷರಕ್ಷೋಗಣೇಷು ಚ ।
ವಿದ್ಯಾಧರೇಷು ಸರ್ವೇಷು ಗಂಧರ್ವೇಷೂರಗೇಷು ಚ ॥

ಮೂಲಮ್ - 42

ಸಿದ್ಧೇಷು ಕಿನ್ನರೇಂದ್ರೇಷು ಪತತ್ರಿಷು ಚ ಸರ್ವತಃ ।
ಸರ್ವಭೂತೇಷು ಸರ್ವತ್ರ ಸರ್ವಕಾಲೇಷು ನಾಸ್ತಿ ಸಃ ।
ಯೋ ರಾಮಂ ಪ್ರತಿಯುಧ್ಯೇತ ವಿಷ್ಣುತುಲ್ಯಪರಾಕ್ರಮಮ್ ॥

ಅನುವಾದ

ಅಂತಹ ಮಹಾಮಹಿಮನಾದ, ವಿಷ್ಣುವಿನಂತೇ ಪರಾಕ್ರಮಶಾಲಿಯಾದ ಶ್ರೀರಾಮನನ್ನು ಪ್ರತಿಭಟಿಸಿ ಯುದ್ಧಮಾಡುವನು-ದೇವಾಸುರ-ಮನುಷ್ಯರಲ್ಲಾಗಲೀ, ಯಕ್ಷರಾಕ್ಷಸರ ಸಮೂಹದಲ್ಲಾಗಲೀ, ವಿದ್ಯಾಧರ-ಪನ್ನಗರಲ್ಲಾಗಲೀ, ಗಂಧರ್ವರಲ್ಲಾಗಲೀ, ಮೃಗಗಳಲ್ಲಾಗಲೀ, ಸಿದ್ಧ-ಕಿನ್ನರರಲ್ಲಾಗಲೀ, ಪಕ್ಷಿಗಳಲ್ಲಾಗಲೀ, ಸಮಸ್ತ ಪ್ರಾಣಿಗಳಲ್ಲೇ ಆಗಲೀ ಯಾವುದೇ ಕಾಲದಲ್ಲಿಯೂ, ಎಲ್ಲಿಯೂ ಇರಲು ಸಾಧ್ಯವಿಲ್ಲ.॥41-42॥

ಮೂಲಮ್ - 43

ಸರ್ವಲೋಕೇಶ್ವರಸ್ಯೈವಂ ಕೃತ್ವಾ ವಿಪ್ರಿಯಮೀದೃಶಮ್ ।
ರಾಮಸ್ಯ ರಾಜಸಿಂಹಸ್ಯ ದುರ್ಲಭಂ ತವ ಜೀವಿತಮ್ ॥

ಅನುವಾದ

ಸರ್ವಲೋಕೇಶ್ವರನೂ, ರಾಜಸಿಂಹನೂ ಆದ ಶ್ರೀರಾಮನಿಗೆ ಇಂತಹ ಮಹತ್ತರ ಅಪರಾಧ ಮಾಡಿರುವ ನಿನ್ನ ಜೀವವುಳಿಯುವುದು ದುರ್ಲಭವೇ ಸರಿ.॥43॥

ಮೂಲಮ್ - 44

ದೇವಾಶ್ಚ ದೈತ್ಯಾಶ್ಚ ನಿಶಾಚರೇಂದ್ರ
ಗಂಧರ್ವವಿದ್ಯಾಧರನಾಗಯಕ್ಷಾಃ ।
ರಾಮಸ್ಯ ಲೋಕತ್ರಯನಾಯಕಸ್ಯ
ಸ್ಥಾತುಂ ನ ಶಕ್ತಾಃ ಸಮರೇಷು ಸರ್ವೇ ॥

ಅನುವಾದ

ರಾಕ್ಷಸೇಶ್ವರಾ! ದೇವ-ದೈತ್ಯರಾಗಲೀ, ಗಂಧರ್ವ-ವಿದ್ಯಾಧರ-ನಾಗ-ಯಕ್ಷರಾಗಲೀ, ಪ್ರತ್ಯೇಕ-ಪ್ರತ್ಯೇಕವಾಗಲೀ, ಒಟ್ಟಾಗಿಯೇ ಆಗಲೀ, ಲೋಕತ್ರಯನಾಯಕನಾದ ಶ್ರೀರಾಮನ ಮುಂದೆ ಯುದ್ಧದಲ್ಲಿ ನಿಲ್ಲಲು ಖಂಡಿತವಾಗಿಯೂ ಸಮರ್ಥರಲ್ಲ.॥44॥

ಮೂಲಮ್ - 45

ಬ್ರಹ್ಮಾ ಸ್ವಯಂಭೂಶ್ಚತುರಾನನೋ ವಾ
ರುದ್ರಸ್ತ್ರಿನೇತ್ರಸ್ತ್ರಿಪುರಾಂತಕೋ ವಾ ।
ಇಂದ್ರೋ ಮಹೇಂದ್ರಃ ಸುರನಾಯಕೋ ವಾ
ತ್ರಾತುಂ ನ ಶಕ್ತಾ ಯುಧಿ ರಾಮವಧ್ಯಮ್ ॥

ಅನುವಾದ

ಸ್ವಯಂಭುವಾದ ಚತುರ್ಮುಖನಾದ ಬ್ರಹ್ಮನಾಗಲೀ, ಮುಕ್ಕಣ್ಣನಾದ ತ್ರಿಪುರಾಂತಕ-ರುದ್ರನಾಗಲೀ, ಮಹೇಂದ್ರನಾದ ಸುರನಾಯಕ ಇಂದ್ರನಾಗಲೀ ಯುದ್ಧದಲ್ಲಿ ಶ್ರೀರಾಮನಿಂದ ವಧ್ಯನಾಗುವವನನ್ನು ರಕ್ಷಿಸಲಾರರು. ಹಾಗಿರುವಾಗ ಅವನನ್ನು ಯಾರೂ ರಕ್ಷಿಸಲು ಸಮರ್ಥರಲ್ಲ.॥45॥

ಮೂಲಮ್ - 46

ಸ ಸೌಷ್ಠವೋಪೇತಮದೀನವಾದಿನಃ
ಕಪೇರ್ನಿಶಮ್ಯಾ ಪ್ರತಿಮೋಽ ಪ್ರಿಯಂ ವಚಃ ।
ದಶಾನನಃ ಕೋಪವಿವೃತ್ತಲೋಚನಃ
ಸಮಾದಿಶತ್ತಸ್ಯ ವಧಂ ಮಹಾಕಪೇಃ ॥

ಅನುವಾದ

ಹನುಮಂತನ ಮಾತಿನಲ್ಲಿ ಸುಂದರಭಾವ - ವಿಚಾರದಿಂದ ಕೂಡಿದ್ದವು. ದೈನ್ಯ-ಭಯವಿರಲಿಲ್ಲ. ಕಪೀಶ್ವರನ ಅಂತಹ ರಾವಣನಿಗೆ ಅಪ್ರಿಯವಾದರೂ ಹಿತವಚನವನ್ನು* ಕೇಳಿ ಅಪ್ರತಿಮ ಪರಾಕ್ರಮಿಯಾದ ರಾವಣನು ಕೋಪದಿಂದ ಕಣ್ಣುಗಳನ್ನು ತಿರುಗಿಸುತ್ತಾ ಮಹಾಕಪಿಯ ವಧೆಗೆ ಒಡನೆಯೇ ಆಜ್ಞೆಮಾಡಿದನು.॥46॥

ಟಿಪ್ಪನೀ

*‘‘ಸುಲಭಾಃ ಪುರುಷಾರಾಜನ್ ಸತತಂ ಪ್ರಿಯವಾದಿನ) ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ॥’’
ಓ ರಾಜನೇ! ಮುಖಸ್ತುತಿಗಾಗಿ ಪ್ರಿಯವಾಗಿ ಮಾತಾಡುವವರು ಲೋಕದಲ್ಲಿ ಬಹುಮಂದಿ ಇದ್ದಾರೆ. ಆದರೆ ಅದು ಹಿತಕರವಾಗಲಾರವು. ಹಿತಕರವೂ, ಪ್ರಿಯಕರವೂ ಮಾತಾಡುವವರು ಜಗತ್ತಿನಲ್ಲಿ ದುರ್ಲಭರೇ ಆಗಿದ್ದಾರೆ.

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕಪಂಚಾಶಃ ಸರ್ಗಃ ॥ 51 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತೊಂದನೆಯ ಸರ್ಗವು ಮುಗಿಯಿತು.