०५० हनुमता रामदूतत्वोद्घोषणम्

वाचनम्
ಭಾಗಸೂಚನಾ

ರಾವಣನು ಪ್ರಹಸ್ತನ ಮೂಲಕ ಹನುಮಂತನು ಲಂಕೆಗೆ ಬಂದುದರ ಕಾರಣವನ್ನು ಪ್ರಶ್ನಿಸಿದುದು, ತಾನು ಶ್ರೀರಾಮನ ದೂತನೆಂದು ಹನುಮಂತನು ಹೇಳಿದುದು

ಮೂಲಮ್ - 1

ತಮುದ್ವೀಕ್ಷ್ಯ ಮಹಾಬಾಹುಃ ಪಿಂಗಾಕ್ಷಂ ಪುರತಃ ಸ್ಥಿತಮ್ ।
ರೋಷೇಣ ಮಹತಾವಿಷ್ಟೋ ರಾವಣೋ ಲೋಕರಾವಣಃ ॥

ಅನುವಾದ

ಮಹಾಬಾಹುವೂ, ಲೋಕಕಂಟಕನೂ ಆದ ರಾವಣನು ತನ್ನ ಮುಂಭಾಗದಲ್ಲಿಯೇ ನಿಂತಿದ್ದ ಕಂದು ಬಣ್ಣದ ಕಣ್ಣುಗಳಿಂದ ಕೂಡಿದ ಹನುಮಂತನನ್ನು ಪರಿಶೀಲಿಸುತ್ತಾ ನೋಡಿ ಕೋಪೋದ್ರಿಕ್ತನಾದನು.॥1॥

ಮೂಲಮ್ - 2

ಶಂಕಾಹತಾತ್ಮಾ ದಧ್ಯೌ ಸ ಕಪೀಂದ್ರಂ ತೇಜಸಾವೃತಮ್ ।
ಕಿಮೇಷ ಭಗವಾನ್ನಂದೀ ಭವೇತ್ ಸಾಕ್ಷಾದಿಹಾಗತಃ ॥

ಮೂಲಮ್ - 3

ಯೇನ ಶಪ್ತೋಽಸ್ಮಿ ಕೈಲಾಸೇ ಮಯಾ ಸಂಚಾಲಿತೇ ಪುರಾ ।
ಸೋಽಯಂ ವಾನರಮೂರ್ತಿಃ ಸ್ಯಾತ್ ಕಿಂಸ್ವಿದ್ಬಾಣೋಽಪಿ ವಾಸುರಃ ॥

ಅನುವಾದ

ಮಹಾತೇಜಸ್ಸಿನಿಂದ ಪ್ರಕಾಶಿಸುತ್ತಿರುವ ಕಪಿವರನನ್ನು ನೋಡಿ, ಸಂಶಯಚಿತ್ತನಾಗಿ ಇಂತು ಆಲೋಚಿಸಿದನು - ‘‘ಹಿಂದೊಮ್ಮೆ ನಾನು ಕೈಲಾಸಪರ್ವತವನ್ನು ಕದಲಿಸಿದಾಗ ನಂದಿಯನ್ನು ಕಪಿಯೆಂದು ಹಾಸ್ಯಮಾಡಿದ್ದೆನು. ಆಗ ಕುಪಿತನಾದ ನಂದೀಶ್ವರನು ‘ಕಪಿಯಿಂದಲೇ ನೀನು ವಿನಾಶ ಹೊಂದುವೆ’ ಎಂದು ಶಾಪವನ್ನಿತ್ತಿದ್ದನು. ಈಗ ಆ ನಂದಿಯೇ ಈ ರೂಪದಿಂದ ಪ್ರತ್ಯಕ್ಷವಾಗಿ ಇಲ್ಲಿಗೆ ಬಂದಿರುವನೇ? ಅಥವಾ ಬಾಣಾಸುರನೇನಾದರೂ ಕಪಿರೂಪವನ್ನು ಧರಿಸಿ ಬಂದಿರುವನೇ?॥2-3॥

ಮೂಲಮ್ - 4

ಸ ರಾಜಾ ರೋಷತಾಮ್ರಾಕ್ಷಃ ಪ್ರಹಸ್ತಂ ಮಂತ್ರಿಸತ್ತಮಮ್ ।
ಕಾಲಯುಕ್ತಮುವಾಚೇದಂ ವಚೋ ವಿಪುಲಮರ್ಥವತ್ ॥

ಅನುವಾದ

ಹೀಗೆ ಯೋಚಿಸುತ್ತಾ ಕೋಪದಿಂದ ಕೆಂಗಣ್ಣನಾಗಿದ್ದ ರಾಕ್ಷಸ ರಾಜನು ಅಮಾತ್ಯಶ್ರೇಷ್ಠನಾದ ಪ್ರಹಸ್ತನನ್ನು ನೋಡಿ, ಸಂದರ್ಭೋಚಿತವಾದ, ಅನೇಕಾರ್ಥಗಳುಳ್ಳ ಮಾತನ್ನು ಹೇಳಿದನು-॥4॥

ಮೂಲಮ್ - 5

ದುರಾತ್ಮಾ ಪೃಚ್ಛ್ಯತಾಮೇಷ ಕುತಃ ಕಿಂ ವಾಸ್ಯ ಕಾರಣಮ್ ।
ವನಭಂಗೇ ಚ ಕೋಽಸ್ಯಾರ್ಥೋ ರಾಕ್ಷಸೀನಾಂ ಚ ತರ್ಜನೇ ॥

ಮೂಲಮ್ - 6

ಮತ್ಪುರೀಮಪ್ರಧೃಷ್ಯಾಂ ವಾ ಗಮನೇ ಕಿಂ ಪ್ರಯೋಜನಮ್ ।
ಆಯೋಧನೇ ವಾ ಕಿಂ ಕಾರ್ಯಂ ಪೃಚ್ಛ್ಯತಾಮೇಷ ದುರ್ಮತಿಃ ॥

ಅನುವಾದ

ಮಹಾಮಾತ್ಯನೇ! ‘‘ಈ ದುಷ್ಟನು ಎಲ್ಲಿಂದ ಬಂದವನು? ಇಲ್ಲಿಗೆ ಬರಲು ಕಾರಣವೇನು? ಉದ್ಯಾನವನ್ನು ನಾಶಮಾಡಿದ್ದು ಯಾವ ಪ್ರಯೋಜನಕ್ಕಾಗಿ? ರಾಕ್ಷಸಿಯರನ್ನು ಭಯಪಡಿಸಿದುದು ಏಕೆ? ಯಾರಿಂದಲೂ ಎದುರಿಸಲು ಅಸಾಧ್ಯವಾದ, ದುರ್ಭೇದ್ಯವಾದ ನನ್ನ ಪಟ್ಟಣಕ್ಕೆ ಬಂದುದೇಕೆ? ಕಿಂಕರಾದಿ ರಾಕ್ಷಸರೊಡನೆ ಯುದ್ಧ ಮಾಡಿದ ಉದ್ದೇಶವೇನು? ಇವೇ ಮುಂತಾಗಿ ಈ ವಾನರನಲ್ಲಿ ಕೇಳು.’’॥5-6॥

ಮೂಲಮ್ - 7

ರಾವಣಸ್ಯ ವಚಃ ಶ್ರುತ್ವಾ ಪ್ರಹಸ್ತೋ ವಾಕ್ಯಮಬ್ರವೀತ್ ।
ಸಮಾಶ್ವಸಿಹಿ ಭದ್ರಂ ತೇ ನ ಭೀಃ ಕಾರ್ಯಾ ತ್ವಯಾ ಕಪೇ ॥

ಮೂಲಮ್ - 8

ಯದಿ ತಾವತ್ತ್ವಮಿಂದ್ರೇಣ ಪ್ರೇಷಿತೋ ರಾವಣಾಲಯಮ್ ।
ತತ್ತ್ವಮಾಖ್ಯಾಹಿ ಮಾಭೂತ್ತೇ ಭಯಂ ವಾನರ ಮೋಕ್ಷ್ಯಸೇ ॥

ಅನುವಾದ

ರಾವಣನ ಮಾತನ್ನು ಕೇಳಿ ಪ್ರಹಸ್ತನು ವಾನರನ ಬಳಿ ಹೀಗೆ ಕೇಳಿದನು - ‘‘ಕಪೀಶ್ವರನೇ! ನಿನಗೆ ಮಂಗಳವಾಗಲೀ. ನೀನಿಲ್ಲಿ ಭಯಗೊಳ್ಳುವ ಕಾರಣವಿಲ್ಲ. ನಮ್ಮಲ್ಲಿ ವಿಶ್ವಾಸವನ್ನಿಡು. ನಿಜವನ್ನು ಹೇಳು. ಇಂದ್ರನಿಂದ ಕಳುಹಲ್ಪಟ್ಟು ನೀನಿಲ್ಲಿಗೆ ಬಂದಿರುವೆಯಾ? ಭಯಪಡುವ ಕಾರಣವಿಲ್ಲ. ನಿಜ ಹೇಳಿದರೆ ಬಿಡುಗಡೆ ಹೊಂದುವೆ.॥7-8॥

ಮೂಲಮ್ - 9

ಯದಿ ವೈಶ್ರವಣಸ್ಯ ತ್ವಂ ಯಮಸ್ಯ ವರುಣಸ್ಯ ವಾ ।
ಚಾರರೂಪಮಿದಂ ಕೃತ್ವಾ ಪ್ರವಿಷ್ಟೋ ನಃ ಪುರೀಮಿಮಾಮ್ ॥

ಮೂಲಮ್ - 10

ವಿಷ್ಣುನಾ ಪ್ರೇಷಿತೋ ವಾಪಿ ದೂತೋ ವಿಜಯಕಾಂಕ್ಷಿಣಾ ।
ನ ಹಿ ತೇ ವಾನರಂ ತೇಜೋ ರೂಪಮಾತ್ರಂ ತು ವಾನರಮ್ ॥

ಅನುವಾದ

ಗೂಢಚಾರಿಯಾಗಿ ನೀನು ನಮ್ಮ ನಗರವನ್ನು ಪ್ರವೇಶಿಸಿರುವೆಯಾ? ನಿನ್ನನ್ನು ಇಲ್ಲಿಗೆ ಕಳುಹಿಸಿದವರು ಕುಬೇರನೋ? ಯಮನೋ? ವರುಣನೋ? ಅಲ್ಲದಿದ್ದರೆ ವಿಜಯಾಕಾಂಕ್ಷೆಯಿಂದ ವಿಷ್ಣುವೇ ನಿನ್ನನ್ನು ದೂತನಾಗಿ ಇಲ್ಲಿಗೆ ಕಳಿಸಿರುವನೇ? ನಿನ್ನ ರೂಪಮಾತ್ರ ವಾನರನದು. ಇಂತಹ ಅದ್ಭುತವಾದ ನಿನ್ನ ತೇಜಸ್ಸು ವಾನರ ಮಾತ್ರರಿಗೆ ಇರಲಾರದು.॥9-10॥

ಮೂಲಮ್ - 11

ತತ್ತ್ವತಃ ಕಥಯಸ್ವಾದ್ಯ ತತೋ ವಾನರ ಮೋಕ್ಷ್ಯಸೇ ।
ಅನೃತಂ ವದತಶ್ಚಾಪಿ ದುರ್ಲಭಂ ತವ ಜೀವಿತಮ್ ॥

ಅನುವಾದ

ಎಲೈ ವಾನರಾ! ನಿಜವನ್ನು ಹೇಳಿದರೆ ನೀನು ಈಗಲೇ ಬಂಧನಮುಕ್ತನಾಗುವೆ. ಸುಳ್ಳನ್ನು ಹೇಳಿದರೆ ಪ್ರಾಣಗಳನ್ನು ಕಳಕೊಳ್ಳಬೇಕಾದೀತು.॥11॥

ಮೂಲಮ್ - 12

ಅಥವಾ ಯನ್ನಿಮಿತ್ತಸ್ತೇ ಪ್ರವೇಶೋ ರಾವಣಾಲಯೇ ।
ಏವಮುಕ್ತೋ ಹರಿಶ್ರೇಷ್ಠಃ ತದಾ ರಕ್ಷೋಗಣೇಶ್ವರಮ್ ॥

ಮೂಲಮ್ - 13

ಅಬ್ರವೀನ್ನಾಸ್ಮಿ ಶಕ್ರಸ್ಯ ಯಮಸ್ಯ ವರುಣಸ್ಯ ವಾ ।
ಧನದೇನ ನ ಮೇ ಸಖ್ಯಂ ವಿಷ್ಣುನಾ ನಾಸ್ಮಿ ಚೋದಿತಃ ॥

ಅನುವಾದ

ಅಥವಾ ನೀನು ಈ ರಾವಣನಗರವನ್ನು ಏಕೆ ಪ್ರವೇಶಿಸಿದೆ?’’ ಎಂದು ಪ್ರಹಸ್ತನು ಕೇಳಿದಾಗ ಹನುಮಂತನು ರಾವಣನಲ್ಲಿ ಹೀಗೆ ಹೇಳಿದನು - ‘‘ನಾನು ಇಂದ್ರ, ಯಮ, ವರುಣ ಹೀಗೆ ಯಾರ ದೂತನೂ ಅಲ್ಲ. ಕುಬೇರನ ಸ್ನೇಹಿತನೂ ಅಲ್ಲ. ನಾನು ವಿಷ್ಣುವಿನ ಪ್ರೇರಣೆಯಿಂದ ಬಂದವನೂ ಅಲ್ಲ.॥12-13॥

ಮೂಲಮ್ - 14

ಜಾತಿರೇವ ಮಮತ್ವೇಷಾ ವಾನರೋಽಹಮಿಹಾಗತಃ
ದರ್ಶನೇ ರಾಕ್ಷಸೇಂದ್ರಸ್ಯ ದುರ್ಲಭೇ ತದಿದಂ ಮಯಾ ॥

ಅನುವಾದ

ನಾನು ವೇಷವನ್ನು ಬದಲಾಯಿಸಿ ಬಂದವನೂ ಅಲ್ಲ. ಹುಟ್ಟಿನಿಂದಲೇ ವಾನರನು ನಾನು. ಅದೇ ನಿಜರೂಪದಿಂದ ಇಲ್ಲಿಗೆ ಬಂದಿರುವೆನು. ರಾಕ್ಷಸರಾಜನಾದ ನಿನ್ನ ದರ್ಶನವು ಬಹಳ ಕಷ್ಟಕರವಾದುದರಿಂದ ನಾನು ಹೀಗೆ ಮಾಡಬೇಕಾಯಿತು.॥14॥

ಮೂಲಮ್ - 15

ವನಂ ರಾಕ್ಷಸರಾಜಸ್ಯ ದರ್ಶನಾರ್ಥೇ ವಿನಾಶಿತಮ್ ।
ತತಸ್ತೇ ರಾಕ್ಷಸಾಃ ಪ್ರಾಪ್ತಾ ಬಲಿನೋ ಯುದ್ಧಕಾಂಕ್ಷಿಣಃ ॥

ಮೂಲಮ್ - 16

ರಕ್ಷಣಾರ್ಥಂ ತು ದೇಹಸ್ಯ ಪ್ರತಿಯುದ್ಧಾ ಮಯಾ ರಣೇ ।
ಅಸ್ತ್ರಪಾಶೈರ್ನ ಶಕ್ಯೋಹಂ ಬದ್ಧುಂ ದೇವಾಸುರೈರಪಿ ॥

ಮೂಲಮ್ - 17

ಪಿತಾಮಹಾದೇವ ವರೋ ಮಮಾಪ್ಯೇಷೋಽಭ್ಯುಪಾಗತಃ ।
ರಾಜಾನಂ ದ್ರಷ್ಟು ಕಾಮೇನ ಮಯಾಸ್ತ್ರಮನುವರ್ತಿತಮ್ ॥

ಅನುವಾದ

ನಿನ್ನನ್ನು ನೋಡಲಿಕ್ಕಾಗಿಯೇ ವನವನ್ನು ನಾಶಮಾಡಿದೆ. ಆಗ ಬಲಶಾಲಿಗಳಾದ ರಾಕ್ಷಸರು ಯುದ್ಧಾಕಾಂಕ್ಷೆಯಿಂದ ಬಂದರು. ನಾನು ದೇಹ ರಕ್ಷಣೆಗಾಗಿ ಅವರನ್ನು ಎದುರಿಸಿ, ಯುದ್ಧಮಾಡಬೇಕಾಯಿತು. ಸುರಾಸುರರೆಲ್ಲಾ ಸೇರಿದರೂ ನನ್ನನ್ನು ಅಸ್ತ್ರಗಳಿಂದ ಬಂಧಿಸಲಾರರು. ನಿನ್ನ ಕುಮಾರನಿಗೆ ಬ್ರಹ್ಮಾಸ್ತ್ರವನ್ನು ಕರುಣಿಸಿದ ಬ್ರಹ್ಮದೇವರೇ ನನಗೆ ಈ ವರವನ್ನು ಕೊಟ್ಟಿರುವನು. ರಾಕ್ಷಸರಾಜನಾದ ನಿನ್ನನ್ನು ನೋಡಲೆಂದೇ ಉದ್ದೇಶಪೂರ್ವಕವಾಗಿ ಈ ಬ್ರಹ್ಮಾಸ್ತ್ರಕ್ಕೆ ನಾನೇ ಕಟ್ಟಿಬಿದ್ದಿರುವೆ.॥15-17॥

ಮೂಲಮ್ - 18

ವಿಮುಕ್ತೋ ಹ್ಯಹಮಸ್ತ್ರೇಣ ರಾಕ್ಷಸೈಸ್ತ್ವಭಿಪೀಡಿತಃ ।
ಕೇನಚಿದ್ರಾಜಕಾರ್ಯೇಣ ಸಂಪ್ರಾಪ್ತೋಽಸ್ಮಿ ತವಾಂತಿಕಮ್ ॥

ಅನುವಾದ

ನಾನು ಬ್ರಹ್ಮಾಸ್ತ್ರದ ಬಂಧನದಿಂದ ಪೂರ್ತಿಯಾಗಿ ಬಿಡುಗಡೆ ಹೊಂದಿರುವೆನು. ಯಾವುದೋ ರಾಜಕಾರ್ಯದ ನಿಮಿತ್ತವಾಗಿ ನಾನು ಇಲ್ಲಿಗೆ ಬಂದಿರುವೆನು. ನಿನ್ನನ್ನು ನೋಡಲೆಂದೇ ಈ ರಾಕ್ಷಸರ ಕಿರುಕುಳವನ್ನು ಸಹಿಸಿಕೊಂಡಿರುತ್ತೇನೆ.॥18॥

ಮೂಲಮ್ - 19

ದೂತೋಽಹಮಿತಿ ವಿಜ್ಞೇಯೋ ರಾಘವಸ್ಯಾಮಿತೌಜಸಃ ।
ಶ್ರೂಯತಾಂ ಚಾಪಿ ವಚನಂ ಮಮ ಪಥ್ಯಮಿದಂ ಪ್ರಭೋ ॥

ಅನುವಾದ

ರಾಜನೇ! ಭಾರೀ ಪರಾಕ್ರಮಶಾಲಿಯಾದ ಶ್ರೀರಾಮನ ದೂತನೆಂದು ನನ್ನನ್ನು ತಿಳಿದುಕೊ. ನಿನಗೆ ಹಿತವಾಗುವಂತಹ ನನ್ನ ಮಾತನ್ನು ಮನಸ್ಸಿಟ್ಟು ಕೇಳು.’’॥19॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪಂಚಾಶಃ ಸರ್ಗಃ ॥ 50 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐವತ್ತನೆಯ ಸರ್ಗವು ಮುಗಿಯಿತು.