०४९ हनुमता रावणदर्शनम्

वाचनम्
ಭಾಗಸೂಚನಾ

ರಾವಣನ ಪ್ರಭಾಯುಕ್ತವಾದ ಮಖವನ್ನು ನೋಡಿ ಹನುಮಂತನು ಆಶ್ಚರ್ಯಪಟ್ಟಿದ್ದು

ಮೂಲಮ್ - 1

ತತಃ ಸ ಕರ್ಮಣಾ ತಸ್ಯ ವಿಸ್ಮಿತೋ ಭೀಮವಿಕ್ರಮಃ ।
ಹನುಮಾನ್ ರೋಷತಾಮ್ರಾಕ್ಷೋ ರಕ್ಷೋಽಧಿಪಮವೈಕ್ಷತ ॥

ಅನುವಾದ

ಭಯಂಕರ ಪರಾಕ್ರಮಿಯಾದ ಹನುಮಂತನು ರಾವಣನ ವಂಚನೆಯ ಕೃತ್ಯವನ್ನು ನೋಡಿ ಆಶ್ಚರ್ಯಪಟ್ಟನು*. ಕ್ರೋಧದಿಂದ ಕಣ್ಣು ಕೆಂಪಗಾಗಿಸಿ** ಆ ರಾವಣನನ್ನು ನೋಡಿದನು.॥1॥

ಟಿಪ್ಪನೀ

.* ರಾವಣನು ಇಂದ್ರಜಿತುವಿನ ಮೂಲಕ ತನ್ನನ್ನು ಬಂಧಿಸಿ ಸಭೆಗೆ ಕರೆಸಿಕೊಂಡ ಬಗ್ಗೆ ಆಶ್ಚರ್ಯವಾಯಿತು.
** ರಾವಣನು ಸೀತಾದೇವಿಯನ್ನು ಕದ್ದು ತಂದುದಕ್ಕಾಗಿ, ಅಶೋಕವನದಲ್ಲಿ ಅವಳನ್ನು ಬೆದರಿಸಿದ್ದಕ್ಕಾಗಿ ಹನುಮಂತನು ಕಣ್ಣುಗಳನ್ನು ಕೆಂಪಾಗಿಸಿ ಕ್ರುದ್ಧನಾದುದು.

ಮೂಲಮ್ - 2

ಭ್ರಾಜಮಾನಂ ಮಹಾರ್ಹೇಣ ಕಾಂಚನೇನ ವಿರಾಜತಾ ।
ಮುಕ್ತಾಜಾಲಾವೃತೇನಾಥ ಮಕುಟೇನ ಮಹಾದ್ಯುತಿಮ್ ॥

ಅನುವಾದ

ಆಗ ರಾವಣನು ಅತಿಶಯವಾದ ಕಾಂತಿಯಿಂದ ಬೆಳಗುತ್ತಿದ್ದನು. ಮಹಾಮೌಲ್ಯದ, ಸುವರ್ಣಮಯವಾದ, ಮುತ್ತುಗಳ ಗೊಂಚಲುಗಳಿಂದ ಸಮಾವೃತವಾಗಿದ್ದ ಕಿರೀಟವನ್ನು ಧರಿಸಿದ್ದನು.॥2॥

ಮೂಲಮ್ - 3

ವಜ್ರಸಂಯೋಗಸಂಯುಕ್ತೈರ್ಮಹಾರ್ಹಮಣಿವಿಗ್ರಹೈಃ ।
ಹೈಮೈರಾಭರಣೈಶ್ಚಿತ್ರೈರ್ಮನಸೇವ ಪ್ರಕಲ್ಪಿತೈಃ ॥

ಅನುವಾದ

ಸುವರ್ಣಮಯವಾದ ಆಭರಣಗಳನ್ನು ತೊಟ್ಟಿದ್ದನು. ಆ ಆಭರಣಗಳಲ್ಲಿ ಸಾಣೆಹಿಡಿದ ವಜ್ರಗಳಿಂದಲೂ, ಮಹಾಮೌಲ್ಯದ ಮಣಿಗಳಿಂದಲೂ, ಕೆಲವು ಬರೀ ಚಿನ್ನದಿಂದಲೂ ಮಾಡಲ್ಪಟ್ಟು, ಎಲ್ಲವೂ ಮನಸ್ಸಿನ ಸಂಕಲ್ಪದಿಂದಲೇ ನಿರ್ಮಿಸಲ್ಪಟ್ಟಿರುವೆಯೋ ಎಂಬಂತೆ ಚಿತ್ರ-ವಿಚಿತ್ರವಾದ ಭೂಷಣಗಳಿಂದ ಅಲಂಕೃತನಾಗಿದ್ದನು.॥3॥

ಮೂಲಮ್ - 4

ಮಹಾರ್ಹಕ್ಷೌಮಸಂವೀತಂ ರಕ್ತಚಂದನರೂಷಿತಮ್ ।
ಸ್ವನುಲಿಪ್ತಂ ವಿಚಿತ್ರಾಭಿರ್ವಿವಿಧಾಭಿಶ್ಚ ಭಕ್ತಿಭಿಃ ॥

ಅನುವಾದ

ಅವನು ಬೆಲೆ ಕಟ್ಟಲು ಸಾಧ್ಯವಿಲ್ಲದ ಪಟ್ಟವಸ್ತ್ರವನ್ನುಟ್ಟಿದ್ದನು. ರಕ್ತಚಂದನವನ್ನು ಪೂಸಿಕೊಂಡಿದ್ದನು. ವಿಚಿತ್ರವಾದ, ವಿಧ-ವಿಧವಾದ ಕಸ್ತೂರೀ, ಗೋರೋಚನಾದಿ ಸುಗಂಧ ದ್ರವ್ಯಗಳಿಂದಲೂ, ಹತ್ತು ತಲೆಗಳಲ್ಲಿಯೂ ಸುಂದರವಾದ ತ್ರಿಪುಂಡ್ರಗಳಿಂದ ಅಲಂಕೃತನಾಗಿದ್ದನು.॥4॥

ಮೂಲಮ್ - 5

ವಿವೃತೈರ್ದರ್ಶನೀಯೈಶ್ಚ ರಕ್ತಾಕ್ಷೈರ್ಭೀಮದರ್ಶನೈಃ ।
ದೀಪ್ತತೀಕ್ಷ್ಣ ಮಹಾದಂಷ್ಟ್ರೈಃ ಪ್ರಲಂಬದಶನಚ್ಛದೈಃ ॥

ಮೂಲಮ್ - 6

ಶಿರೋಭಿರ್ದಶಭಿರ್ವೀರಂ ಭ್ರಾಜಮಾನಂ ಮಹೌಜಸಮ್ ।
ನಾನಾವ್ಯಾಲಸಮಾಕೀರ್ಣೈಃ ಶಿಖರೈರಿವ ಮಂದರಮ್ ॥

ಅನುವಾದ

ಅವನ ಕಣ್ಣುಗಳು ವಿಶಾಲವಾಗಿದ್ದುದರಿಂದ ದರ್ಶನೀಯವಾಗಿದ್ದವು. ಕೆಂಪಾಗಿದ್ದುದರಿಂದ ವಿಚಿತ್ರವೂ ಭಯಂಕರವಾಗಿಯೂ ಕಾಣುತ್ತಿದ್ದವು. ಅವನ ಕೊರೆ ದಾಡೆಗಳು ಪ್ರಕಾಶಮಾನವಾಗಿ ತೀಕ್ಷ್ಣವಾಗಿ ಹೊಳೆಯುತ್ತಿದ್ದವು. ತುಟಿಗಳು ಜೋಲಾಡುತ್ತಿದ್ದವು. ಬಗೆ-ಬಗೆಯ ದುಷ್ಟಮೃಗಗಳಿಂದ ವ್ಯಾಪ್ತವಾದ ಶಿಖರಗಳಿಂದ ಕೂಡಿರುವ ಮಂದರ ಪರ್ವತದಂತೆ ಮಹಾತೇಜಸ್ವಿಯಾದ ರಾವಣನು ಹತ್ತು ತಲೆಗಳಿಂದ ಪ್ರಕಾಶಿಸುತ್ತಿದ್ದನು.॥5-6॥

ಮೂಲಮ್ - 7

ನೀಲಾಂಜನಚಯಪ್ರಖ್ಯಂ ಹಾರೇಣೋರಸಿ ರಾಜತಾ ।
ಪೂರ್ಣಚಂದ್ರಾಭವಕೇಣ ಸಬಲಾಕಮಿವಾಂಬುದಮ್ ॥

ಅನುವಾದ

ಅವನ ಶರೀರವು ಕಾಡಿಗೆಯ ಬೆಟ್ಟದಂತೆ ಇತ್ತು. ವಕ್ಷಸ್ಥಳದಲ್ಲಿ ಮಿರಮಿರನೆ ಹೊಳೆಯುತ್ತಿದ್ದ ರತ್ನಹಾರಗಳಿಂದ ಶೋಭಿಸುತ್ತಿದ್ದನು. ಅವನು ಧರಿಸಿದ್ದ ಪೂರ್ಣಚಂದ್ರನಂತೆ ಕಾಂತಿಯುಕ್ತವಾದ ರತ್ನಹಾರಗಳು ಕಪ್ಪಾದ ಮೋಡಗಳಿಂದ ಆವೃತವಾದ ಆಕಾಶದಲ್ಲಿ ಹಾರುತ್ತಿದ್ದ ಕೊಕ್ಕರೆಗಳಂತೆ ಪ್ರಕಾಶಿಸುತ್ತಿದ್ದವು.॥7॥

ಮೂಲಮ್ - 8

ಬಾಹುಭಿರ್ಬದ್ಧ ಕೇಯೂರೈಶ್ಚಂದನೋತ್ತಮರೂಷಿತೈಃ ।
ಭ್ರಾಜಮಾನಾಂಗದೈಃ ಪೀನೈಃ ಪಂಚಶೀರ್ಷೈರಿವೋರಗೈಃ ॥

ಅನುವಾದ

ಅವನ ತೋಳುಗಳು ಭುಜಕೀರ್ತಿಗಳಿಂದ ಅಲಂಕೃತವಾಗಿದ್ದು, ಉತ್ತಮವಾದ ಚಂದನದಿಂದ ಲೇಪಿತವಾಗಿದ್ದವು. ಜಾಜ್ವಲ್ಯಮಾನವಾದ ತೋಳುಬಂದಿಗಳಿಂದ ಯುಕ್ತವಾಗಿದ್ದ ರಾವಣನ ದಪ್ಪವಾದ ತೋಳುಗಳು ಐದು ಹೆಡೆಗಳುಳ್ಳ ಸರ್ಪದಂತೆ ಕಾಣುತ್ತಿದ್ದವು.॥8॥

ಮೂಲಮ್ - 9

ಮಹತಿ ಸ್ಫಾಟಿಕೇ ಚಿತ್ರೇ ರತ್ನಸಂಯೋಗಸಂಸ್ಕೃತೇ ।
ಉತ್ತಮಾಸ್ತರಣಾಸ್ತೀರ್ಣೇ ಸೂಪವಿಷ್ಟಂ ವರಾಸನೇ ॥

ಅನುವಾದ

ಆಗ ರಾವಣನು ಶ್ರೇಷ್ಠವಾದ ಸಿಂಹಾಸನ ದಲ್ಲಿ ಹಾಯಾಗಿ ಕುಳಿತಿದ್ದನು. ಅದು ಸ್ಫಟಿಕದ್ದಾಗಿದ್ದು, ರತ್ನಗಳಿಂದ ಚಿತ್ರಿತವಾಗಿ ಆಶ್ಚರ್ಯಕರವಾಗಿ ನಿರ್ಮಿಸಲ್ಪಟ್ಟಿತ್ತು. ಆ ಸಿಂಹಾಸನಕ್ಕೆ ಉತ್ತಮವಾದ ರತ್ನಗಂಬಳಿಯ ಮೇಲು ಹೊದಿಕೆಯಿತ್ತು.॥9॥

ಮೂಲಮ್ - 10

ಅಲಂಕೃತಾಭಿರತ್ಯರ್ಥಂ ಪ್ರಮದಾಭಿಃ ಸಮಂತತಃ ।
ವಾಲವ್ಯಜನಹಸ್ತಾಭಿರಾರಾತ್ ಸಮುಪಸೇವಿತಮ್ ॥

ಅನುವಾದ

ಅತಿಶಯವಾಗಿ ಅಲಂಕರಿಸಿಕೊಂಡ ಪ್ರಮದೆಯರು ಚಾಮರಗಳನ್ನು ಹಿಡಿದುಕೊಂಡು ರಾವಣನ ಸಮೀಪದಲ್ಲಿ ನಿಂತುಕೊಂಡು ಗಾಳಿ ಬೀಸುತ್ತಿದ್ದರು.॥10॥

ಮೂಲಮ್ - 11

ದುರ್ಧರೇಣ ಪ್ರಹಸ್ತೇನ ಮಹಾಪಾರ್ಶ್ವೇನ ರಕ್ಷಸಾ ।
ಮಂತ್ರಿಭಿರ್ಮಂತ್ರತತ್ತ್ವಜ್ಞೈರ್ನಿಕುಂಭೇನ ಚ ಮಂತ್ರಿಣಾ ॥

ಮೂಲಮ್ - 12

ಉಪೋಪವಿಷ್ಟಂ ರಕ್ಷೋಭಿಶ್ಚತುರ್ಭಿರ್ಬಲದರ್ಪಿತೈಃ ।
ಕೃತ್ಸ್ನಂ ಪರಿವೃತಂ ಲೋಕಂ ಚತುರ್ಭಿರಿವ ಸಾಗರೈಃ ॥

ಅನುವಾದ

ರಾಜ್ಯಶಾಸ್ತ್ರವನ್ನು ಚೆನ್ನಾಗಿ ತಿಳಿದಿದ್ದವರೂ, ಬಲದರ್ಪಿತರೂ ಆದ ದುರ್ಧರ, ಪ್ರಹಸ್ತ, ಮಹಾಪಾರ್ಶ್ವ, ನಿಕುಂಭ ಮೊದಲಾದ ನಾಲ್ಕು ಮಂತ್ರಿಗಳು ಅವನ ಸುತ್ತಲೂ ಕುಳಿತಿದ್ದರು. ಆ ನಾಲ್ಕು ಸಚಿವರಿಂದ ಪರಿವೃತನಾಗಿ ಹಾಯಾಗಿ ಆಸೀನನಾಗಿದ್ದ ರಾವಣನು ನಾಲ್ಕು ಸಮುದ್ರಗಳಿಂದ ಪರಿವೃತವಾದ ಭೂಮಂಡಲದಂತೆ ಒಪ್ಪುತ್ತಿದ್ದನು.॥11-12॥

ಮೂಲಮ್ - 13

ಮಂತ್ರಿಭಿರ್ಮಂತ್ರತತ್ತ್ವಜ್ಞೈರನ್ಯೈಶ್ಚ ಶುಭಬುದ್ಧಿಭಿಃ ।
ಅನ್ವಾಸ್ಯಮಾನಂ ಸಚಿವೈಃ ಸುರೈರಿವ ಸುರೇಶ್ವರಮ್ ॥

ಅನುವಾದ

ಮಂತ್ರ ತತ್ತ್ವಜ್ಞರಾದ ಸಮರ್ಥರಾದವರೂ, ತನ್ನ ಒಳಿತನ್ನೇ ಬಯಸುವವರೂ ಆದ ಮಂತ್ರಿಗಳಿಂದ ಹಾಗೂ ಇತರ ರಾಕ್ಷಸರಿಂದಲೂ ಸೇವಿತನಾದ ರಾವಣನು, ದೇವತೆಗಳಿಂದ ಸೇವಿತನಾದ ದೇವೇಂದ್ರನಂತೆ ಶೋಭಿಸುತ್ತಿದ್ದನು.॥13॥

ಮೂಲಮ್ - 14

ಅಪಶ್ಯದ್ರಾಕ್ಷಸಪತಿಂ ಹನುಮಾನತಿತೇಜಸಮ್ ।
ವಿಷ್ಠಿ ತಂ ಮೇರುಶಿಖರೇ ಸತೋಯಮಿವ ತೋಯದಮ್ ॥

ಅನುವಾದ

ಮೇರು ಪರ್ವತದ ಶಿಖರದ ಮೇಲೆ ದಟ್ಟವಾಗಿ ಕವಿದಿರುವ, ನೀರಿನಿಂದ ಪೂರ್ಣವಾದ ಕಾರ್ಮುಗಿಲಿನಂತೆ ಕಾಣುತ್ತಿದ್ದ ಮಹಾತೇಜಸ್ವಿಯಾದ ರಾಕ್ಷಸೇಶ್ವರನನ್ನು ಹನುಮಂತನು ನೋಡಿದನು.॥14॥

ಮೂಲಮ್ - 15

ಸ ತೈಃ ಸಂಪೀಡ್ಯಮಾನೋಽಪಿ ರಕ್ಷೋಭಿರ್ಭೀಮವಿಕ್ರಮೈಃ ।
ವಿಸ್ಮಯಂ ಪರಮಂ ಗತ್ವಾ ರಕ್ಷೋಽಧಿಪಮವೈಕ್ಷತ ॥

ಅನುವಾದ

ಆಗ ಭಯಂಕರ ಪರಾಕ್ರಮಿಗಳಾದ ರಾಕ್ಷಸರು ಎಡೆಬಿಡದೆ ಬಹಳವಾಗಿ ಪೀಡಿಸುತ್ತಿದ್ದರೂ ಹನುಮಂತನು ರಾವಣೇಶ್ವರನನ್ನು ಎವೆಯಿಕ್ಕದೆ ನೋಡುತ್ತಲೇ ಇದ್ದನು.॥15॥

ಮೂಲಮ್ - 16

ಭ್ರಾಜಮಾನಂ ತತೋ ದೃಷ್ಟ್ವಾ ಹನುಮಾನ್ ರಾಕ್ಷಸೇಶ್ವರಮ್ ।
ಮನಸಾ ಚಿಂತಯಾಮಾಸ ತೇಜಸಾ ತಸ್ಯ ಮೋಹಿತಃ ॥

ಅನುವಾದ

ಜಾಜ್ವಲ್ಯಮಾನವಾಗಿ ಪ್ರಕಾಶಿಸುತ್ತಿದ್ದ ರಾಕ್ಷಸೇಶ್ವರನನ್ನು ನೋಡುತ್ತಾ ಅವನ ತೇಜಸ್ಸಿನಿಂದ ಆಕರ್ಷಿತನಾದ ಹನುಮಂತನು ಮನಸ್ಸಿನಲ್ಲೇ ಅಂದುಕೊಂಡನು.॥16॥

ಮೂಲಮ್ - 17

ಅಹೋ ರೂಪಮಹೋ ಧೈರ್ಯಮಹೋ ಸತ್ತ್ವಮಹೋದ್ಯುತಿಃ ।
ಅಹೋ ರಾಕ್ಷಸರಾಜಸ್ಯ ಸರ್ವಲಕ್ಷಣಯುಕ್ತತಾ ॥

ಅನುವಾದ

ಆಹಾ! ರಾವಣನ ಈ ರೂಪವು ಅತ್ಯದ್ಭುತವು. ಧೈರ್ಯವು ನಿರುಪಮಾನವು. ಸತ್ತ್ವವು ಪ್ರಶಂಸಾರ್ಹವು. ತೇಜಸ್ಸು ಅಸದೃಶವು. ನಿಜವಾಗಿ ಈ ರಾಕ್ಷಸರಾಜನು ಸರ್ವಲಕ್ಷಣ ಸಂಪನ್ನನಾಗಿರುವನು.॥17॥

ಮೂಲಮ್ - 18

ಯದ್ಯಧರ್ಮೋ ನ ಬಲವಾನ್ ಸ್ಯಾದಯಂ ರಾಕ್ಷಸೇಶ್ವರಃ ।
ಸ್ಯಾದಯಂ ಸುರಲೋಕಸ್ಯ ಸಶಕ್ರಸ್ಯಾಪಿ ರಕ್ಷಿತಾ ॥

ಅನುವಾದ

ಈ ರಾಕ್ಷಸೇಶ್ವರನಲ್ಲಿ ಅಧರ್ಮಾಚರಣೆಯು ಪ್ರಬಲವಾಗಿರದಿದ್ದರೆ ಇವನು ನಿಜವಾಗಿ ದೇವೇಂದ್ರನಿಂದೊಡಗೂಡಿದ ಸುರಲೋಕವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವನು.॥18॥

ಮೂಲಮ್ - 19

ಅಸ್ಯ ಕ್ರೂರೈರ್ನ್ಯಶಂಸೈಶ್ಚ ಕರ್ಮಭಿರ್ಲೋಕಕುತ್ಸಿತೈಃ ।
ತೇನ ಬಿಭ್ಯತಿ ಖಲ್ವಸ್ಮಾತ್ ಲೋಕಾಃ ಸಾಮರದಾನವಾಃ ॥

ಅನುವಾದ

ಕ್ರೂರನೂ, ಹಿಂಸಾತ್ಮಕನೂ, ಲೋಕನಿಂದಿತನೂ ಆದ ಇವನ ಅಧರ್ಮ ಕೃತ್ಯಗಳಿಂದ, ಸುರಾ-ಸುರರು ಒಡಗೊಂಡ ಎಲ್ಲ ಲೋಕಗಳು ಇವನಿಗೆ ಭಯಗೊಳ್ಳುತ್ತಿವೆ.॥19॥

ಮೂಲಮ್ - 20

ಅಯಂ ಹ್ಯುತ್ಸಹತೇ ಕ್ರುದ್ಧಃ ಕರ್ತುಮೇಕಾರ್ಣವಂ ಜಗತ್ ।
ಇತಿ ಚಿಂತಾಂ ಬಹುವಿಧಾಮಕರೋನ್ಮತಿಮಾನ್ ಕಪಿಃ ।
ದೃಷ್ಟ್ವಾ ರಾಕ್ಷಸರಾಜಸ್ಯ ಪ್ರಭಾವಮಮಿತೌಜಸಃ ॥

ಅನುವಾದ

ಇವನು ಕ್ರುದ್ಧನಾದರೆ ಸಮಸ್ತ ಜಗತ್ತನ್ನು ಸಮುದ್ರದಲ್ಲಿ ಮುಳುಗಿಸಿ ಪ್ರಳಯವನ್ನು ಸೃಷ್ಟಿಸಲು ಸಮರ್ಥನಾಗಿದ್ದಾನಲ್ಲಾ! ಭಾರೀ ಪರಾಕ್ರಮಶಾಲಿಯಾದ ರಾವಣನ ಪ್ರಭಾವವನ್ನು ಗ್ರಹಿಸಿ, ಬುದ್ಧಿಶಾಲಿಯಾದ ಹನುಮಂತನು ಹೀಗೆ ಚಿಂತಿಸಿದನು. ॥20॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕೋನಪಂಚಾಶಃ ಸರ್ಗಃ ॥ 49 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತೊಂಭತ್ತನೆಯ ಸರ್ಗವು ಮುಗಿಯಿತು.