वाचनम्
ಭಾಗಸೂಚನಾ
ಇಂದ್ರಜಿತು ಹನುಮಂತರ ಯುದ್ಧ, ಇಂದ್ರಜಿತುವು ಮಾರುತಿಯನ್ನು ಬ್ರಹ್ಮಾಸ್ತ್ರದಿಂದ ಬಂಧಿಸಿ ರಾವಣನ ಬಳಿಗೆ ಒಯ್ದುದು
ಮೂಲಮ್ - 1
ತತಸ್ತು ರಕ್ಷೋಽಧಿಪತಿರ್ಮಹಾತ್ಮಾ
ಹನೂಮತಾಕ್ಷೇ ನಿಹತೇ ಕುಮಾರೇ ।
ಮನಃ ಸಮಾಧಾಯ ತದೇಂದ್ರಕಲ್ಪಂ
ಸಮಾದಿದೇಶೇಂದ್ರಜಿತಂ ಸ ರೋಷಾತ್ ॥
ಅನುವಾದ
ಹನುಮಂತನ ಕೈಯಿಂದ ಅಕ್ಷಕುಮಾರನು ಹತನಾದಾಗ, ಮಹಾವೀರನಾದ ರಾಕ್ಷಸರ ರಾಜನಾದ ರಾವಣನು (ಒಳಗೊಳಗೆ ಅತೀವ ತಳಮಳಗೊಂಡಿದ್ದರೂ) ಮನಸ್ಸಿಗೆ ಸಮಾಧಾನವನ್ನು ತಂದುಕೊಂಡು, ಧೈರ್ಯವನ್ನು ವಹಿಸಿ, ಕೋಪಾವಿಷ್ಟನಾಗಿ ಇಂದ್ರನಿಗೆ ಸಮಾನವಾದ ಪರಾಕ್ರಮಿಯಾದ ಇಂದ್ರಜಿತುವನ್ನು ಯುದ್ಧಕ್ಕಾಗಿ ಆದೇಶಿಸಿ ಇಂತೆಂದನು.॥1॥
ಮೂಲಮ್ - 2
ತ್ವಮಸ್ತ್ರವಿಚ್ಛಸ್ತ್ರವಿದಾಂ ವರಿಷ್ಠಃ
ಸುರಾಸುರಾಣಾಮಪಿ ಶೋಕದಾತಾ ।
ಸುರೇಷು ಸೇಂದ್ರೇಷು ಚ ದೃಷ್ಟಕರ್ಮಾ
ಪಿತಾಮಹಾರಾಧನಸಂಚಿತಾಸ್ತ್ರಃ ॥
ಅನುವಾದ
‘‘ಮೇಘನಾದನೇ! ಅಸವೇತ್ತರಲ್ಲಿಯೂ, ಶಸ್ತ್ರಗಳನ್ನು ಪ್ರಯೋಗಿಸುವವರಲ್ಲಿಯೂ ನೀನು ಶ್ರೇಷ್ಠನಾಗಿರುವೆ. ಸುರಾ-ಸುರರೆಲ್ಲರೂ ನಿನ್ನ ಪರಾಕ್ರಮದಿಂದ ಗಡ-ಗಡ ನಡುಗುತ್ತಾರೆ. ನೀನು ಬ್ರಹ್ಮದೇವರನ್ನು ಆರಾಧಿಸಿ ಬ್ರಹ್ಮಾಸ್ತ್ರವೇ ಮೊದಲಾದ ಅನೇಕ ಅಸ್ತ್ರಗಳನ್ನು ಸಂಪಾದಿಸಿರುವೆ. ನಿನ್ನ ಯುದ್ಧ ಕೌಶಲ್ಯದ ರುಚಿಯನ್ನು ಇಂದ್ರಾದಿದೇವತೆಗಳೂ ಸವಿದಿರುವರು.॥2॥
ಮೂಲಮ್ - 3
ತವಾಸಬಲಮಾಸ್ತ್ರಾದ್ಯ ನಾಸುರಾ ನ ಮರುದ್ಗಣಾಃ ।
ನ ಶೇಕುಃ ಸಮರೇ ಸ್ಥಾತುಂ ಸುರೇಶ್ವರಸಮಾಶ್ರಿತಾಃ ॥
ಅನುವಾದ
ಅಸುರರಾಗಲೀ, ಇಂದ್ರಾದಿ ದೇವತೆಗಳಾಗಲೀ, ಮರುದ್ಗಣರಾಗಲೀ, ಯುದ್ಧರಂಗದಲ್ಲಿ ನಿನ್ನ ಅಸಬಲದ ಮುಂದೆ ನಿಲ್ಲಲಾರರು.॥3॥
ಮೂಲಮ್ - 4
ನ ಕಶ್ಚಿತ್ ತ್ರಿಷು ಲೋಕೇಷು ಸಂಯುಗೇ ನ ಗತಶ್ರಮಃ ।
ಭುಜವೀರ್ಯಾಭಿಗುಪ್ತಶ್ಚ ತಪಸಾ ಚಾಭಿರಕ್ಷಿತಃ ।
ದೇಶಕಾಲವಿಭಾಗಜ್ಞಃ ತ್ವಮೇವ ಮತಿಸತ್ತಮಃ ॥
ಅನುವಾದ
ಮೂರು ಲೋಕಗಳಲ್ಲಿಯೂ ಕದನ ರಂಗದಲ್ಲಿ ನಿನ್ನಿಂದ ಪರಜಿತರಾಗದೇ ಇದ್ದವರು ಯಾರೂ ಇಲ್ಲ, ನಿನ್ನ ಭುಜ-ಬಲ ಪರಾಕ್ರಮಗಳೇ ಸರ್ವದಾ ನಿನಗೆ ಭದ್ರಕವಚಗಳು. ನಿನ್ನ ತಪಃಪ್ರಭಾವವೇ ನಿನಗೆ ಸರ್ವರಕ್ಷೆ. ದೇಶ ಕಾಲವನ್ನನುಸರಿಸಿ ಕರ್ತವ್ಯವನ್ನು ನಿರ್ವಹಿಸುವ ನೀನು ನಿರುಪಮಾನ ಪ್ರಜ್ಞಾಶಾಲಿಯು. ಸಮಯ ಸ್ಫೂರ್ತಿಯುಳ್ಳವನು.॥4॥
ಮೂಲಮ್ - 5
ನ ತೇಽಸ್ತ್ಯಶಕ್ಯಂ ಸಮರೇಷು ಕರ್ಮಣಾ
ನ ತೇಸ್ತ್ಯಽಕಾರ್ಯಂ ಮತಿಪೂರ್ವಮಂತ್ರಣೇ ।
ನ ಸೋಽಸ್ತಿ ಕಶ್ಚಿತ್ ತ್ರಿಷು ಸಂಗ್ರಹೇಷು ವೈ
ನ ವೇದ ಯಸ್ತೇಽಸ್ತ್ರಬಲಂ ಬಲಂ ಚ ತೇ ॥
ಅನುವಾದ
ವಿವಿಧ ಯುದ್ಧ ರೀತಿಗಳಲ್ಲಿ ಕುಶಲನಾದ ನಿನಗೆ ಅಸಾಧ್ಯವಾದ ಯಾವ ಕಾರ್ಯವೂ ಇಲ್ಲ. ವಿವೇಕಪೂರ್ವಕವಾಗಿ ವಿಚಾರ ಮಾಡಿದಲ್ಲಿ ನಿನಗೆ ತಿಳಿಯದಿರುವ ಕಾರ್ಯವೂ ಯಾವುದೂ ಇಲ್ಲ. ಮೂರು ಲೋಕಗಳಲ್ಲಿಯೂ ನಿನ್ನ ಅಸ್ತ್ರಬಲವನ್ನಾಗಲೀ, ಭುಜಬಲವನ್ನಾಗಲೀ ತಿಳಿಯದವನು ಯಾವನೂ ಇಲ್ಲ.॥5॥
ಮೂಲಮ್ - 6
ಮಮಾನುರೂಪಂ ತಪಸೋ ಬಲಂ ಚ ತೇ
ಪರಾಕ್ರಮಶ್ಚಾಸ್ತ್ರಬಲಂ ಚ ಸಂಯುಗೇ ।
ನ ತ್ವಾಂ ಸಮಾಸಾದ್ಯ ರಣಾವಮರ್ದೇ
ಮನಃ ಶ್ರಮಂ ಗಚ್ಛತಿ ನಿಶ್ಚಿತಾರ್ಥಮ್ ॥ 6 ॥
ಅನುವಾದ
ತಪಸ್ಸು, ಪರಾಕ್ರಮ, ಅಸ್ತ್ರಬಲ ಇವೆಲ್ಲವೂ ನನ್ನಲ್ಲಿರುವಂತೆ ನಿನ್ನಲ್ಲೂ ಇವೆ. ರಣಸಂಕಟ ಎದುರಾದಾಗ ನೀನು ಇರುವ ಪಕ್ಷಕ್ಕೆ ಜಯವು ಶತಃಸಿದ್ಧ. ನೀನಿರುವಾಗ ನನ್ನ ಮನಸ್ಸಿಗೆ ಯಾವ ವಿಧವಾದ ಆತಂಕವೂ ಇರುವುದಿಲ್ಲ.॥6॥
ಮೂಲಮ್ - 7
ನಿಹತಾಃ ಕಿಂಕರಾಃ ಸರ್ವೇ ಜಂಬುಮಾಲೀ ಚ ರಾಕ್ಷಸಃ ।
ಅಮಾತ್ಯಪುತ್ರಾ ವೀರಾಶ್ಚ ಪಂಚ ಸೇನಾಗ್ರಯಾಯಿನಃ ॥
ಮೂಲಮ್ - 8
ಬಲಾನಿ ಸುಸಮೃದ್ಧಾನಿ ಶಾಶ್ವನಾಗರಥಾನಿ ಚ ।
ಸಹೋದರಸ್ತೇ ದಯಿತಃ ಕುಮಾರೋಕ್ಷಶ್ಚ ಸೂದಿತಃ ।
ನ ಹಿ ತೇಷ್ವೇವ ಮೇ ಸಾರೋ ಯಸ್ತ್ವಯ್ಯರಿನಿಷೂದನ ॥
ಅನುವಾದ
ವಾನರನೊಬ್ಬನಿಂದ ಸಾವಿರಾರು ಕಿಂಕರ ರಾಕ್ಷಸರು, ರಾಕ್ಷಸ ಶ್ರೇಷ್ಠನಾದ ಜಂಬುಮಾಲಿ, ವೀರರಾದ ಏಳುಮಂದಿ ಅಮಾತ್ಯ ಪುತ್ರರು, ಐವರು ಸೇನಾಪತಿಗಳೂ ರಣರಂಗದಲ್ಲಿ ಹತರಾದರು. ಗಜಾಶ್ವರಥಗಳಿಂದ ಸಮೃದ್ಧವಾದ ನಮ್ಮ ಸೈನ್ಯವೂ ವಿನಾಶ ಹೊಂದಿತು. ನಿನ್ನ ಪ್ರೀತಿಯ ತಮ್ಮನಾದ ಅಕ್ಷಕುಮಾರನೂ ಕೂಡ ವೀರಮರಣವನ್ನಪ್ಪಿದನು. ಎಲೈ ಅರಿಮರ್ದನಾ! ನನಗೆ ನಿನ್ನಲ್ಲಿರುವಷ್ಟು ಗಟ್ಟಿಯಾದ ಭರವಸೆ ಅವರ ಮೇಲಿರಲಿಲ್ಲ.॥7-8॥
ಮೂಲಮ್ - 9
ಇದಂ ಹಿ ದೃಷ್ಟ್ವಾ ನಿಹತಂ ಮಹದ್ಬಲಂ
ಕಪೇಃ ಪ್ರಭಾವಂ ಚ ಪರಾಕ್ರಮಂ ಚ ।
ತ್ವಮಾತ್ಮನಶ್ಚಾಪಿ ಸಮೀಕ್ಷ್ಯ ಸಾರಂ
ಕುರುಷ್ವ ವೇಗಂ ಸ್ವಬಲಾನುರೂಪಮ್ ॥
ಅನುವಾದ
ಕುಮಾರಾ! ನಮ್ಮ ಕಡೆಯ ಮಹಾಸೈನ್ಯವೂ, ಮಹಾನಾಯಕರೂ ಹತರಾಗಿರುವುದನ್ನು ನೋಡಿದರೆ ಆ ಕಪಿಯ ಪ್ರಶಸ್ತವಾದ ಬುದ್ಧಿಕೌಶಲ್ಯವನ್ನೂ, ಶಾರೀರಿಕ ಬಲವನ್ನೂ, ಪ್ರಭಾವವನ್ನೂ, ಪರಾಕ್ರಮವನ್ನೂ ದೃಷ್ಟಿಯಲ್ಲಿರಿಸಿಕೊಂಡು, ನಿನ್ನ ಬಲಪರಾಕ್ರಮಗಳನ್ನು ತೂಗಿ ನೋಡಬೇಕು. ಅನಂತರ ನೀನು ನಿನ್ನ ಬಲಕ್ಕೆ ಅನುರೂಪವಾದ ಪರಾಕ್ರಮವನ್ನು ತೋರು.॥9॥
ಮೂಲಮ್ - 10
ಬಲಾವಮರ್ದಸ್ತ್ವಯಿ ಸನ್ನಿಕೃಷ್ಟೇ
ಯಥಾಗತೇ ಶಾಮ್ಯತಿ ಶಾಂತಶತ್ರೌ ।
ತಥಾ ಸಮೀಕ್ಷ್ಯಾತ್ಮಬಲಂ ಪರಂ ಚ
ಸಮಾರಭಸ್ವಾಸ್ತ್ರವಿದಾಂ ವರಿಷ್ಠ ॥
ಅನುವಾದ
ಶಸ್ತ್ರಧಾರಿಗಳಲ್ಲಿ ವರಿಷ್ಠನೇ! ಆತ್ಮಬಲವನ್ನು ಶತ್ರುವಿನ ಬಲವನ್ನು ಸಮತೋಲನ ಮಾಡಿ, ನಿನ್ನನ್ನು ಇದಿರಿಸಿದಾಗ ಶತ್ರುವು ಧೈರ್ಯಗುಂದಿ ಶಾಂತನಾಗುವಂತಹ ನೀನು ಕಪಿಯ ಬಳಿಗೆ ಹೋಗಿ, ನಮ್ಮ ಸೈನ್ಯವು ನಶಿಸದಂತೆ, ಯುದ್ಧ ಪ್ರಯತ್ನವನ್ನು ಆರಂಭಿಸು.॥10॥
ಮೂಲಮ್ - 11
ನ ವೀರ ಸೇನಾ ಗಣಶೋಚ್ಯವಂತಿ
ನ ವಜ್ರಮಾದಾಯ ವಿಶಾಲಸಾರಮ್ ।
ನ ಮಾರುತಸ್ಯಾಸ್ಯ ಗತಿಪ್ರಮಾಣಂ
ನ ಚಾಗ್ನಿ ಕಲ್ಪಃ ಕರಣೇನ ಹಂತುಮ್ ॥
ಅನುವಾದ
ವೀರನೇ! ಹಿಂದಿನ ಅನುಭವದಿಂದ ಅವನ ಬಳಿಗೆ ಹೋದ ಸೈನ್ಯದ ಹಿಂಡು-ಹಿಂಡುಗಳೇ ನಾಶವಾದುವು. ಆದ್ದರಿಂದ ಎಷ್ಟೇ ಸೇನೆಗಳಿದ್ದರೂ ಅವನ ವಿಷಯದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಭಾರೀ ಸತ್ತ್ವವುಳ್ಳ ವಜ್ರಾಯುಧವನ್ನು ತೆಗೆದುಕೊಂಡು ಹೋದರೂ ಪ್ರಯೋಜನವಿಲ್ಲ. ಈ ವಾನರನ ವೇಗವು ವಾಯುವಿಗೂ ಇಲ್ಲ. ಇವನ ಮುಂದೆ ವಾಯುವೇಗವೂ ಕುಂಠಿತವಾಗುತ್ತದೆ. ಇವನು ಅಗ್ನಿಸದೃಶನಾಗಿರುವವನು. ಅವನ ಬಳಿಗೆ ಹೋದವರನ್ನು ಸುಟ್ಟುಬಿಡುವನು. ಆದುದರಿಂದ ಮುಷ್ಯ್ಟಾದಿ ಸಾಧನಗಳಿಂದ ಇವನನ್ನು ಪ್ರಹರಿಸಲೂ ಸಾಧ್ಯವಿಲ್ಲ.॥11॥
ಮೂಲಮ್ - 12
ತಮೇವಮರ್ಥಂ ಪ್ರಸಮೀಕ್ಷ್ಯ ಸಮ್ಯಕ್
ಸ್ವಕರ್ಮಸಾಮ್ಯಾದ್ಧಿ ಸಮಾಹಿತಾತ್ಮಾ ।
ಸ್ಮರಂಶ್ಚ ದಿವ್ಯಂ ಧನುಷೋಸ್ತ್ರವೀರ್ಯಂ
ವ್ರಜಾಕ್ಷತಂ ಕರ್ಮ ಸಮಾರಭಸ್ವ ॥
ಅನುವಾದ
ಕುಮಾರಾ! ನನ್ನ ಈ ಅಭಿಪ್ರಾಯವನ್ನು ಚೆನ್ನಾಗಿ ವಿಮರ್ಶಿಸಿ, ಸ್ವಕಾರ್ಯದ ಸಿದ್ಧಿಗಾಗಿ ಏಕಾಗ್ರವಾದ ಬುದ್ಧಿಯಿಂದ ನಿನ್ನ ಧನುಸ್ಸಿನ ಸಾಮರ್ಥ್ಯವನ್ನೂ, ಬ್ರಹ್ಮದೇವರು ಕರುಣಿಸಿದ ಬ್ರಹ್ಮಾಸ್ತ್ರವನ್ನೂ ಸ್ಮರಣೆಯಲ್ಲಿಟ್ಟುಕೊಂಡು ಆ ಕಪಿಯ ಬಳಿಗೆ ಹೋಗು. ಶತ್ರುಗಳನ್ನು ಕೊಲ್ಲುವಂತಹ ನೀನು ನಿಷ್ಫಲವಾಗದಂತೆ ಎಚ್ಚರಿಕೆಯನ್ನು ವಹಿಸಿ ಕಾರ್ಯಮಾಡು.॥12॥
ಮೂಲಮ್ - 13
ನ ಖಲ್ವಿದಂ ಮತಿಃ ಶ್ರೇಷ್ಠಾ ಯತ್ತ್ವಾಂ ಸಂಪ್ರೇಷಯಾಮ್ಯಹಮ್ ।
ಇಯಂ ಚ ರಾಜಧರ್ಮಾಣಾಂ ಕ್ಷತ್ರಸ್ಯ ಚ ಮತಿರ್ಮತಾ ॥
ಅನುವಾದ
ಬಾಲಕನಾದ ನಿನ್ನನ್ನು ಯುದ್ಧಕ್ಕೆ ಕಳುಹಿಸುವುದು ನನಗೆ ಉಚಿತವೆಂದು ತೋರುವುದಿಲ್ಲ. ಆದರೂ ಕ್ಷಾತ್ರಧರ್ಮವನ್ನು ಅನುಸರಿಸಿ ಹೀಗೆ ಮಾಡುವುದೇ ಯುಕ್ತವು. ಏಕೆಂದರೆ, ಸಮರ್ಥರಾದ ಯೋಧರಿರುವಾಗ ರಾಜನೇ ಸ್ವತಃ ಯುದ್ಧಕ್ಕೆ ಹೋಗಬಾರದೆಂಬುದು ರಾಜಧರ್ಮವು.॥13॥
ಮೂಲಮ್ - 14
ನಾನಾಶಸ್ತ್ರೇಶ್ಚ ಸಂಗ್ರಾಮೇ ವೈಶಾರದ್ಯಮರಿಂದಮ ।
ಅವಶ್ಯಮೇವ ಬೋದ್ಧವ್ಯಂ ಕಾಮ್ಯಶ್ಚ ವಿಜಯೋ ರಣೇ ॥
ಅನುವಾದ
ಶತ್ರುಸಂಹಾರಕನಾದ ಸಮರ್ಥನೇ! ಯುದ್ಧಸಮಯದಲ್ಲಿ ನಾನಾವಿಧವಾದ ಶಸ್ತ್ರ ಪ್ರಯೋಗಗಳ ನೈಪುಣ್ಯವು ಆವಶ್ಯಕ. ವಿಜಯದ ಕಾಮನೆಯಿಂದಲೇ ಯುದ್ಧಮಾಡಬೇಕು. ವಿಜಯಕ್ಕಾಗಿ ಎಲ್ಲ ಅಸ್ತ್ರಗಳನ್ನು ಸ್ಮರಣೆಯಲ್ಲಿರುವುದು ಆವಶ್ಯಕವೆಂದು ನೀನು ತಿಳಿ.॥14॥
ಮೂಲಮ್ - 15
ತತಃ ಪಿತುಸ್ತದ್ವಚನಂ ನಿಶಮ್ಯ
ಪ್ರದಕ್ಷಿಣಂ ದಕ್ಷಸುತಪ್ರಭಾವಃ ।
ಚಕಾರ ಭರ್ತಾರಮಹೀನಸತ್ತ್ವೋ
ರಣಾಯ ವೀರಃ ಪ್ರತಿಪನ್ನ ಬುದ್ಧಿಃ ॥
ಅನುವಾದ
ದೇವತೆಗಳಂತೆ ಅತ್ಯಂತ ಪ್ರಭಾವವುಳ್ಳ, ವೀರನಾದ ಇಂದ್ರಜಿತುವು ತಂದೆಯು ಹೇಳಿದ ಮಾತನ್ನು ಕೇಳಿ, ಹೆಚ್ಚಿನ ಬಲವನ್ನು ಹೊಂದಿದವನು ಯುದ್ಧಮಾಡಲು ನಿಶ್ಚಯಿಸಿಕೊಂಡು ಸ್ವಾಮಿಯಾದ ರಾವಣೇಶ್ವರನಿಗೆ ಪ್ರದಕ್ಷಿಣೆ ಸಹಿತ ನಮಸ್ಕರಿಸಿಕೊಂಡನು.॥15॥
ಮೂಲಮ್ - 16
ತತಸ್ತೈಃ ಸ್ವಗಣೈರಿಷ್ಟೆರಿಂದ್ರಜಿತ್ ಪ್ರತಿಪೂಜಿತಃ ।
ಯುದ್ಧೋದ್ಧತಃ ಕೃತೋತ್ಸಾಹಃ ಸಂಗ್ರಾಮಂ ಪ್ರತ್ಯಪದ್ಯತ ॥
ಅನುವಾದ
ಯುದ್ಧಗರ್ವಿತನಾದ ರಾವಣಿಯು ಇಷ್ಟರಾದವರಿಂದಲೂ, ತನ್ನ ಅಧೀನದಲ್ಲಿ ರಾಕ್ಷಸರಿಂದಲೂ ಸತ್ಕೃತನಾಗಿ ಅತ್ಯುತ್ಸಾಹದಿಂದಲೇ ಸಮರಾಂಗಣಕ್ಕೆ ಹೋಗಲು ಉದ್ಯುಕ್ತನಾದನು.॥16॥
ಮೂಲಮ್ - 17
ಶ್ರೀಮಾನ್ ಪದ್ಮಪಲಾಶಾಕ್ಷೋ ರಾಕ್ಷಸಾಧಿಪತೇಃ ಸುತಃ ।
ನಿರ್ಜಗಾಮ ಮಹಾತೇಜಾಃ ಸಮುದ್ರ ಇವ ಪರ್ವಸು ॥
ಅನುವಾದ
ವೈಭವೋಪೇತನೂ, ತಾವರೆಯ ಎಲೆಯಂತೆ ವಿಶಾಲವಾದ ಕಣ್ಣುಗಳುಳ್ಳವನೂ, ರಾಕ್ಷಸಪ್ರಭುವಾದ ರಾವಣನ ಕುಮಾರನೂ, ಮಹಾ ತೇಜಃಶ್ಶಾಲಿಯೂ ಆದ ಇಂದ್ರಜಿತುವು, ಪರ್ವಕಾಲದಲ್ಲಿ ಸಮುದ್ರವು ಭೋರ್ಗರೆಯುತ್ತಾ ಉಕ್ಕುವಂತೆ, ಉಕ್ಕಿಬರುತ್ತಿದ್ದ ಉತ್ಸಾಹದೊಡನೆ ಸಂಗ್ರಾಮಕ್ಕೆ ಹೊರಟನು.॥17॥
ಮೂಲಮ್ - 18
ಸ ಪಕ್ಷಿರಾಜೋಪಮತುಲ್ಯವೇಗೈ
ರ್ವ್ಯಾಲೈಶ್ಚತುರ್ಭಿಃ ಸಿತತೀಕ್ಷ್ಣ ದಂಷ್ಟ್ರೈಃ ।
ರಥಂ ಸಮಾಯುಕ್ತಮಸಂಗವೇಗಂ
ಸಮಾರುರೋಹೇಂದ್ರಜಿದಿಂದ್ರಕಲ್ಪಃ ॥
ಅನುವಾದ
ಪರಾಕ್ರಮದಲ್ಲಿ ಇಂದ್ರನಂತೆ ಸಮಾನವುಳ್ಳ ಆ ಇಂದ್ರಜಿತುವು ನಿರಾತಂಕವಾಗಿ ಹೆಚ್ಚಿನ ವೇಗದಿಂದ ಸಾಗಿಹೋಗುವ ರಥವನ್ನು ಅಡರಿದನು. ಅದಕ್ಕೆ ಪಕ್ಷಿರಾಜ ಗರುಡನ ವೇಗಕ್ಕೆ ಸಮಾನವೇಗವುಳ್ಳ, ತೀಕ್ಷ್ಣವಾದ ಕೋರೆ ದಾಡೆಗಳಿದ್ದ ನಾಲ್ಕು ಸಿಂಹಗಳು ಹೂಡಿದ್ದವು.॥18॥
ಮೂಲಮ್ - 19
ಸ ರಥೀ ಧನ್ವಿನಾಂ ಶ್ರೇಷ್ಠಃ ಶಸ್ತ್ರಜ್ಞೋಽಸ್ತ್ರವಿದಾಂವರಃ ।
ರಥೇನಾಭಿಯಯೌ ಕ್ಷಿಪ್ರಂ ಹನೂಮಾನ್ ಯತ್ರ ಸೋಽಭವತ್ ॥
ಅನುವಾದ
ಧನುಷ್ಮಂತರಲ್ಲಿ ಶ್ರೇಷ್ಠನಾದ, ಶಸ್ತ್ರಗಳ ರಹಸ್ಯವನ್ನು ಸಂಪೂರ್ಣವಾಗಿ ತಿಳಿದಿದ್ದ, ಅಸ್ತ್ರವಿದರಲ್ಲಿ ಉತ್ತಮನಾದ ಆ ಇಂದ್ರಜಿತುವು ಹನುಮಂತನಿದ್ದೆಡೆಗೆ ವೇಗವಾಗಿ ಹೋದನು.॥19॥
ಮೂಲಮ್ - 20
ಸ ತಸ್ಯ ರಥನಿರ್ಘೋಷಂ ಜ್ಯಾಸ್ವನಂ ಕಾರ್ಮುಕಸ್ಯ ಚ ।
ನಿಶಮ್ಯ ಹರಿವೀರೋಽಸೌ ಸಂಪ್ರಹೃಷ್ಟತರೋಽಭವತ್ ॥
ಅನುವಾದ
ವಾನರವೀರನಾದ ಹನುಮಂತನು ಇಂದ್ರಜಿತುವಿನ ರಥ ಚಕ್ರಗಳ ಗಡ-ಗಡ ಶಬ್ದವನ್ನೂ, ಧನುಷ್ಟಂಕಾರವನ್ನೂ ಕೇಳಿ, ತನಗೆ ಯೋಗ್ಯನಾದ ವೀರನು ಯುದ್ಧಕ್ಕಾಗಿ ದೊರೆತನೆಂದು ಆನಂದಿಸಿದನು.॥20॥
ಮೂಲಮ್ - 21
ಸಮಹಚ್ಚಾಪಮಾದಾಯ ಶಿತಶಲ್ಯಾಂಶ್ಚ ಸಾಯಕಾನ್ ।
ಹನುಮಂತಮಭಿಪ್ರೇತ್ಯ ಜಗಾಮ ರಣಪಂಡಿತಃ ॥
ಅನುವಾದ
ಯುದ್ಧವಿಶಾರದನಾದ ರಾವಣಿಯು ಶಕ್ತಿಶಾಲಿಯಾದ ಧನುಸ್ಸನ್ನೂ, ತೀಕ್ಷ್ಣವಾದ ತುದಿಗಳುಳ್ಳ ಬಾಣಗಳನ್ನು ಹಿಡಿದುಕೊಂಡು ಹನುಮಂತನಿಗೆ ಅಭಿಮುಖನಾಗಿ ಹೋದನು.॥21॥
ಮೂಲಮ್ - 22
ತಸ್ಮಿಂಸ್ತತಃ ಸಂಯತಿ ಜಾತಹರ್ಷೇ
ರಣಾಯ ನಿರ್ಗಚ್ಛತಿ ಬಾಣಪಾಣೌ ।
ದಿಶಶ್ಚ ಸರ್ವಾಃ ಕಲುಷಾ ಬಭೂವುಃ
ಮೃಗಾಶ್ಚ ರೌದ್ರಾ ಬಹುಧಾ ವಿನೇದುಃ ॥
ಅನುವಾದ
ಹೀಗೆ ರಾವಣಿಯು ಧನುಷ್ಪಾಣಿಯಾಗಿ ಸಂತಸದಿಂದ ಯುದ್ಧಕ್ಕಾಗಿ ಮುಂದೆ ಸಾಗುವಾಗ ರಥಚಕ್ರಗಳಿಂದ ಎದ್ದಿರುವ ಧೂಳಿನಿಂದ ಹತ್ತುದಿಕ್ಕುಗಳೂ ತುಂಬಿಹೋದುವು. ಕ್ರೂರಮೃಗಗಳು ವಿಕಾರವಾಗಿ ಕೂಗಿಕೊಂಡವು.॥22॥
ಮೂಲಮ್ - 23
ಸಮಾಗತಾಸ್ತತ್ರ ತು ನಾಗಯಕ್ಷಾ
ಮಹರ್ಷಯಶ್ಚಕ್ರಚರಾಶ್ಚ ಸಿದ್ಧಾಃ ।
ನಭಃ ಸಮಾವೃತ್ಯ ಚ ಪಕ್ಷಿಸಂಘಾಃ
ವಿನೇದುರುಚ್ಚೈಃ ಪರಮಪ್ರಹೃಷ್ಟಾಃ ॥
ಅನುವಾದ
ಯುದ್ಧವು ನಡೆಯಲಿದ್ದ ಸ್ಥಳಕ್ಕೆ ನಾಗ, ಯಕ್ಷರೂ, ಮಹರ್ಷಿಗಳೂ, ಜ್ಯೋತಿಶ್ಚಕ್ರ ಸಂಚಾರಿಗಳಾದ ಸಿದ್ಧರೂ ಆಗಮಿಸಿದರು. ಗೃಧ್ರ-ಕಾಗೆಗಳೇ ಮುಂತಾದ ಪಕ್ಷಿಗಳು (ತಮಗೆ ಆಹಾರ ಸಿಗಬಹುದೆಂದು) ಹೆಚ್ಚಿನ ಸಂತೋಷದಿಂದ ಆಕಾಶವನ್ನಾಶ್ರಯಿಸಿ ಗಟ್ಟಿಯಾಗಿ ಕೂಗಿಕೊಳ್ಳುತ್ತಿದ್ದವು.॥23॥
ಮೂಲಮ್ - 24
ಆಯಾಂತಂ ಸರಥಂ ದೃಷ್ಟ್ವಾ ತೂರ್ಣಮಿಂದ್ರಜಿತಂ ಕಪಿಃ ।
ವಿನನಾದ ಮಹಾನಾದಂ ವ್ಯವರ್ಧತ ಚ ವೇಗವಾನ್ ॥
ಅನುವಾದ
ರಥದಲ್ಲಿ ಕುಳಿತು ವೇಗವಾಗಿ ತನ್ನ ಕಡೆಗೆ ಬರುತ್ತಿದ್ದ ಇಂದ್ರಜಿತುವನ್ನು ಕಂಡು, ಕಪೀಶ್ವರನು ಅವನನ್ನು ಭಯಗೊಳಿಸಲು ಸಿಂಹನಾದವನ್ನು ಮಾಡುತ್ತಾ ಎತ್ತರವಾಗಿ ಬೆಳೆದುನಿಂತನು.॥24॥
ಮೂಲಮ್ - 25
ಇಂದ್ರಜಿತ್ತು ರಥಂ ದಿವ್ಯಮಾಸ್ಥಿತಶ್ಚಿತ್ರಕಾರ್ಮುಕಃ ।
ಧನುರ್ವಿಸ್ಫಾರಯಾಮಾಸ ತಟಿದೂರ್ಜಿತನಿಃಸ್ವನಮ್ ॥
ಅನುವಾದ
ಇಂದ್ರಜಿತುವು ದಿವ್ಯವಾದ ರಥದಲ್ಲಿ ಕುಳಿತಿದ್ದು ಅವನು ಚಿತ್ರಧನುಸ್ಸನ್ನು ಹಿಡಿದಿದ್ದು, ಆರ್ಭಟಿಸುವ ಸಿಡಿಲಿನ ಧ್ವನಿಯಯಂತೆ ಧನುಷ್ಟಂಕಾರಮಾಡಿದನು.॥25॥
ಮೂಲಮ್ - 26
ತತಃ ಸಮೇತಾವತಿತೀಕ್ಷ್ಣ ವೇಗೌ
ಮಹಾಬಲೌ ತೌ ರಣನಿರ್ವಿಶಂಕೌ ।
ಕಪಿಶ್ಚ ರಕ್ಷೋಽಧಿಪತೇಶ್ಚ ಪುತ್ರಃ
ಸುರಾಸುರೇಂದ್ರಾವಿವ ಬದ್ಧವೈರೌ ॥
ಅನುವಾದ
ಅತ್ಯಂತತೀಕ್ಷ್ಣವಾದವೇಗವುಳ್ಳ, ಮಹಾಬಲಿಷ್ಠರಾದ, ಯುದ್ಧದಲ್ಲಿ ಭಯರಹಿತರಾಗಿದ್ದ ವಾನರ-ರಾಕ್ಷಸನು, ಬದ್ಧವೈರಿಗಳಾದ ದೇವೇಂದ್ರ ರಾಕ್ಷಸೇಂದ್ರರಂತೆ ಪರಸ್ಪರ ಯುದ್ಧಕ್ಕೆ ತೊಡಗಿದರು.॥26॥
ಮೂಲಮ್ - 27
ಸ ತಸ್ಯ ವೀರಸ್ಯ ಮಹಾರಥಸ್ಯ
ಧನುಷ್ಮತಃ ಸಂಯತಿ ಸಂಮತಸ್ಯ ।
ಶರಪ್ರವೇಗಂ ವ್ಯಹನತ್ ಪ್ರವೃದ್ಧಃ
ಚಚಾರ ಮಾರ್ಗೇ ಪಿತುರಪ್ರಮೇಯಃ ॥
ಅನುವಾದ
ಸಾಟಿಯಿಲ್ಲದ ವೀರನೂ, ಎತ್ತರವಾಗಿ ಬೆಳೆದು ನಿಂತಿದ್ದ ಹನುಮಂತನು ತಂದೆಯಾದ ವಾಯುವಿನ ಮಾರ್ಗದಲ್ಲಿ (ಅಂತರೀಕ್ಷದಲ್ಲಿ) ಸಂಚರಿಸುತ್ತಾ - ವೀರನೂ, ಮಹಾರಥನೂ, ಧನುಷ್ಪಾಣಿಯೂ, ಯುದ್ಧದಲ್ಲಿ ಪ್ರಸಿದ್ಧನಾದವನೂ ಆದ ಇಂದ್ರಜಿತುವಿನ ಬಾಣಗಳ ವೇಗವನ್ನು ತಡೆದು ನಿಲ್ಲಿಸಿದನು.॥27॥
ಮೂಲಮ್ - 28
ತತಃ ಶರಾನಾಯತತೀಕ್ಷ್ಣ ಶಲ್ಯಾನ್
ಸುಪತ್ರಿಣಃ ಕಾಂಚನಚಿತ್ರಪುಂಖಾನ್ ।
ಮುಮೋಚ ವೀರಃ ಪರವೀರಹಂತಾ
ಸುಸನ್ನತಾನ್ ವಜ್ರನಿಪಾತವೇಗಾನ್ ॥
ಅನುವಾದ
ಶತ್ರು ವೀರರನ್ನು ಸಂಹರಿಸುವ ಸಾಮರ್ಥ್ಯದಿಂದ ಕೂಡಿದ್ದ, ವೀರನಾದ ಇಂದ್ರಜಿತುವು - ವಜ್ರಾಯುಧಕ್ಕೆ ಸಮಾನವಾದ ವೇಗವಾಗಿದ್ದ, ಸುಂದರವಾದ ರೆಕ್ಕೆಗಳಿಂದ ಕೂಡಿದ್ದ, ಮೂಲಭಾಗವು ಸುವರ್ಣದಿಂದ ಚಿತ್ರಿತವಾಗಿದ್ದ, ಉದ್ದವಾದ, ಮೊನಚಾದ ಮುಳ್ಳುಗಳಿದ್ದ, ಬಾಗಿಕೊಂಡಿರುವ ಬಾಣಗಳನ್ನು ಹನುಮಂತನ ಮೇಲೆ ಪ್ರಯೋಗಿಸಿದನು.॥28॥
ಮೂಲಮ್ - 29
ಸ ತಸ್ಯ ತು ಸ್ಯಂದನನಿಃಸ್ವನಂ ಚ
ಮೃದಂಗಭೇರೀಪಟಹಸ್ವನಂ ಚ ।
ವಿಕೃಷ್ಯಮಾಣಸ್ಯ ಚ ಕಾರ್ಮುಕಸ್ಯ
ನಿಶಮ್ಯ ಘೋಷಂ ಪುನರುತ್ಪಪಾತ ॥
ಅನುವಾದ
ರಥದ ಗಡ-ಗಡಾ ಶಬ್ದವನ್ನೂ, ಇಂದ್ರಜಿತುವಿನ ಕಡೆಯ ಸೈನಿಕರು ಮಾಡುತ್ತಿದ್ದ ಮೃದಂಗ, ಭೇರಿ, ನಗಾರಿಗಳ ನಿನಾದಗಳನ್ನೂ, ಇಂದ್ರಜಿತುವಿನ ಧನುಷ್ಟಂಕಾರದ ಧ್ವನಿಯನ್ನು ಕೇಳಿ ಹನುಮಂತನು ಪುನಃ ಗಗನಕ್ಕೆ ಹಾರಿದನು.॥29॥
ಮೂಲಮ್ - 30
ಶರಣಾಮಂತರೇಷ್ವಾಶು ವ್ಯವರ್ತತ ಮಹಾಕಪಿಃ ।
ಹರಿಸ್ತಸ್ಯಾಭಿಲಕ್ಷ್ಯಸ್ಯ ಮೋಹಯನ್ ಲಕ್ಷ್ಯಸಂಗ್ರಹಮ್ ॥
ಅನುವಾದ
ಲಕ್ಷ್ಯಭೇದದಲ್ಲಿ ನಿಪುಣನಾದ ರಾವಣಿಯ ಹಲವಾರು ಬಾಣಗಳ ಗುರಿಯನ್ನು ವಿಫಲಗೊಳಿಸುತ್ತಾ, ಅವನು ಬಿಡುತ್ತಿದ್ದ ಬಾಣಗಳ ಮಧ್ಯದಲ್ಲೇ ಸಂಚರಿಸುತ್ತಿದ್ದನು.॥30॥
ಮೂಲಮ್ - 31
ಶರಾಣಾಮಗ್ರತಸ್ತಸ್ಯ ಪುನಃ ಸಮಭಿವರ್ತತ ।
ಪ್ರಸಾರ್ಯ ಹಸ್ತೌ ಹನುಮಾನುತ್ಪಪಾತಾನಿಲಾತ್ಮಜಃ ॥
ಅನುವಾದ
ಕೆಲವೊಮ್ಮೆ ಇಂದ್ರಜಿತುವು ಬಿಡುತ್ತಿದ್ದ ಬಾಣಗಳಿಗೆ ಎದುರಾಗಿ ನಿಂತಿರುತ್ತಿದ್ದನು. ಬಾಣಗಳ ಲಕ್ಷ್ಯಕ್ಕೆ ಗುರಿಯಾದನೆಂದು ರಾವಣಿಯು ಭಾವಿಸುವಷ್ಟರಲ್ಲೇ (ಕಣ್ಣುಮುಚ್ಚಾಲೆ ಆಟದಂತೆ) ಮಾರುತಿಯು ತನ್ನೆರಡು ಕೈಗಳನ್ನು ಮುಂದಕ್ಕೆ ಚಾಚಿ ರಿವ್ವನೇ ಮತ್ತೊಂದೆಡೆಗೆ ಹಾರಿ ಬಿಡುತ್ತಿದ್ದನು.॥31॥
ಮೂಲಮ್ - 32
ತಾವುಭೌ ವೇಗಸಂಪನ್ನೌ ರಣಕರ್ಮವಿಶಾರದೌ ।
ಸರ್ವಭೂತಮನೋಗ್ರಾಹಿ ಚಕ್ರತುರ್ಯುದ್ಧ ಮುತ್ತಮಮ್ ॥
ಅನುವಾದ
ಹೆಚ್ಚಾದ ವೇಗದಿಂದ ಯುದ್ಧ ಮಾಡಲು ಸಮರ್ಥರಾದ ಅವರಿಬ್ಬರೂ, ಸಕಲ ಪ್ರಾಣಿಗಳಿಗೆ ಆಶ್ಚರ್ಯವನ್ನುಂಟುಮಾಡುತ್ತಾ ಮಹಾಯುದ್ಧವನ್ನು ಮಾಡುತ್ತಿದ್ದರು.॥32॥
ಮೂಲಮ್ - 33
ಹನೂಮತೋ ವೇದ ನ ರಾಕ್ಷಸೋಽಂತರಂ
ನ ಮಾರುತಿಸ್ತಸ್ಯ ಮಹಾತ್ಮನೋಽಂತರಮ್ ।
ಪರಸ್ಪರಂ ನಿರ್ವಿಷಹೌ ಬಭೂವತುಃ
ಸಮೇತ್ಯ ತೌ ದೇವಸಮಾನವಿಕ್ರವೌ ॥
ಅನುವಾದ
ಹನುಮಂತನು ಇಂದ್ರಜಿತುವನ್ನು ಹೇಗೆ ಭೂಮಿಗೆ ಕೆಡಹಬೇಕೆಂದು ಯೋಚಿಸುತ್ತಿದ್ದನು. ಹಾಗೆಯೇ ಇಂದ್ರಜಿತುವಿಗೆ ಹನುಮಂತನನ್ನು ಹೇಗೆ ಪ್ರಹರಿಸಬೇಕೆನ್ನುವುದೇ ತಿಳಿಯದಾಯಿತು. ದೇವಸಮಾನ ಪರಾಕ್ರಮಿಗಳಾದ ಇಬ್ಬರೂ ಯುದ್ಧಮಾಡುತ್ತಿದ್ದು, ಒಬ್ಬರಿಗೊಬ್ಬರು ಪರಸ್ಪರ ಜಯಿಸಲು ಅಸಾಧ್ಯರಾಗಿದ್ದರು.॥33॥
ಮೂಲಮ್ - 34
ತತಸ್ತು ಲಕ್ಷ್ಯೇ ಸ ವಿಹನ್ಯಮಾನೇ
ಶರೇಷ್ವಮೋಘೇಷು ಚ ಸಂಪತತ್ಸು ।
ಜಗಾಮ ಚಿಂತಾಂ ಮಹತೀಂ ಮಹಾತ್ಮಾ
ಸಮಾಧಿಸಂಯೋಗಸಮಾಹಿತಾತ್ಮಾ ॥
ಅನುವಾದ
ಬಾಣಗಳನ್ನು ಸಂಧಾನಗೈದು ಪ್ರಯೋಗಿಸುವುದರಲ್ಲಿ ಏಕಾಗ್ರಚಿತ್ತನಾದ, ಪ್ರಭಾವಶಾಲಿಯಾದ ಆ ಇಂದ್ರಜಿತುವಿನ ಗುರಿಯು ಎಂದೂ ತಪ್ಪಿ ಹೋಗುತ್ತಿರಲಿಲ್ಲ. ಆದರೆ ಇಂದು ಅಮೋಘವಾದ ಶರಗಳೂ ಕೂಡ ಗುರಿತಪ್ಪಿ ಹೋಗುವುದನ್ನು ಕಂಡು ಚಿಂತಾಕ್ರಾಂತನಾದನು.॥34॥
ಮೂಲಮ್ - 35
ತತೋ ಮತಿಂ ರಾಕ್ಷಸರಾಜಸೂನುಃ
ಚಕಾರ ತಸ್ಮಿನ್ ಹರಿವೀರಮುಖ್ಯೇ ।
ಅವಧ್ಯತಾಂ ತಸ್ಯ ಕಪೇಃ ಸಮೀಕ್ಷ್ಯ
ಕಥಂ ನಿಗಚ್ಛೇದಿತಿ ನಿಗ್ರಹಾರ್ಥಮ್ ॥
ಅನುವಾದ
ಹನುಮಂತನು ಅವಧ್ಯನೆಂಬುದನ್ನು ಮನಗಂಡು, ಈ ವಾನರ ಪ್ರಮುಖನನ್ನು ಹೇಗೆ ಬಂಧಿಸಬಹುದು, ನಿಶ್ಚೇಷ್ಠಿತಗೊಳಿಸಬಹುದು ಎಂದು ವಿಚಾರಮಾಡತೊಡಗಿದನು.॥35॥
ಮೂಲಮ್ - 36
ತತಃ ಪೈತಾಮಹಂ ವೀರಃ ಸೋಽಸ್ತ್ರಮಸ್ತ್ರ ವಿದಾಂ ವರಃ ।
ಸಂದಧೇ ಸುಮಹಾತೇಜಾಸ್ತಂ ಹರಿಪ್ರವರಂ ಪ್ರತಿ ॥
ಅನುವಾದ
ಸ್ವಲ್ಪಹೊತ್ತು ವಿಚಾರ ಮಾಡಿದ ಬಳಿಕ ಅಸ್ತ್ರವಿದರಲ್ಲಿ ಶ್ರೇಷ್ಠನಾದ, ಮಹಾತೇಜಸ್ವಿಯಾದ, ವೀರನಾದ ಇಂದ್ರಜಿತುವು ಹನುಮಂತನನ್ನು ಅನುಲಕ್ಷಿಸಿ ಬ್ರಹ್ಮಾಸ್ತ್ರವನ್ನು ಅನುಸಂಧಾನ ಮಾಡಿದನು.॥36॥
ಮೂಲಮ್ - 37
ಅವಧ್ಯೋಽಯಮಿತಿ ಜ್ಞಾತ್ವಾ ತಮಸ್ತ್ರೇಣಾಸ್ತ್ರ ತತ್ತ್ವವಿತ್ ।
ನಿಜಗ್ರಾಹ ಮಹಾಬಾಹುಃ ಮಾರುತಾತ್ಮಜಮಿಂದ್ರಜಿತ್ ॥
ಅನುವಾದ
ಅಸ್ತ್ರಗಳ ರಹಸ್ಯವನ್ನು ತಿಳಿದಿದ್ದ ಮಹಾಬಾಹುವಾದ ಇಂದ್ರಜಿತುವು - ಹನುಮಂತನು ಅವಧ್ಯನೆಂಬುದನ್ನು ನಿರ್ಧರಿಸಿ, ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಅವನನ್ನು ಬಂಧಿಸಿದನು.॥37॥
ಮೂಲಮ್ - 38
ತೇನ ಬದ್ಧಸ್ತತೋಽಸ್ತ್ರೇಣ ರಾಕ್ಷಸೇನ ಸ ವಾನರಃ ।
ಅಭವನ್ನಿರ್ವಿಚೇಷ್ಟಶ್ಚ ಪಪಾತ ಚ ಮಹೀತಲೇ ॥
ಅನುವಾದ
ಇಂದ್ರಜಿತುವು ಪ್ರಯೋಗಿಸಿದ ಬ್ರಹ್ಮಾಸ್ತ್ರಕ್ಕೆ ಕಟ್ಟುಬಿದ್ದು ಆ ಕಪಿವರನು ನಿಶ್ಚೇಷ್ಠಿತನಾಗಿ ಭೂಮಿಯ ಮೇಲೆ ಬಿದ್ದನು.॥38॥
ಮೂಲಮ್ - 39
ತತೋಥ ಬುದ್ಧ್ವಾ ಸ ತದಸಬಂಧಂ
ಪ್ರಭೋಃ ಪ್ರಭಾವಾದ್ವಿಗತಾತ್ಮವೇಗಃ ।
ಪಿತಾಮಹಾನುಗ್ರಹಮಾತ್ಮನಶ್ಚ
ವಿಚಿಂತಯಾಮಾಸ ಹರಿಪ್ರವೀರಃ ॥
ಅನುವಾದ
ಆಗ ಮಾರುತಿಯು ತಾನು ಬ್ರಹ್ಮಾಸ್ತ್ರದಿಂದ ಬಂಧಿತನಾಗಿದ್ದೇನೆಂದು ತಿಳಿದುಕೊಂಡನು. ಆದರೆ ಬ್ರಹ್ಮದೇವರ ಪ್ರಭಾವದಿಂದ ಆ ಅಸ್ತ್ರಶಕ್ತಿಯು ಕ್ಷಣಕಾಲದಲ್ಲೇ ತೊಲಗಿ ಹೋಗುತ್ತದೆ. ಅದು ನನ್ನನ್ನು ಏನೂ ಬಾಧಿಸಲಾರದು ಎಂದು ಹಿಂದೆ ತನಗೆ ಬ್ರಹ್ಮದೇವರು ಅನುಗ್ರಹಿಸಿದುದನ್ನು ಸ್ಮರಿಸಿಕೊಂಡನು.॥39॥
ಮೂಲಮ್ - 40
ತತಃ ಸ್ವಾಯಂಭುವೈರ್ಮಂತ್ರೈರ್ಬ್ರಹ್ಮಾಸ್ತ್ರಮಭಿಮಂತ್ರಿತಮ್ ।
ಹನೂಮಾಂಶ್ಚಿಂತಯಾಮಾಸ ವರದಾನಂ ಪಿತಾಮಹಾತ್ ॥
ಅನುವಾದ
‘‘ಅದು ಸ್ವಾಯಂಭುವ (ಬ್ರಹ್ಮಾ) ಮಂತ್ರದಿಂದ ಅಭಿಮಂತ್ರಿಸಿ ಇಂದ್ರಜಿತುವು ತನ್ನ ಮೇಲೆ ಪ್ರಯೋಗಿಸಿದ ಬ್ರಹ್ಮಾಸ್ತ್ರವು’’ ಎಂದು ತಿಳಿದು, ಬ್ರಹ್ಮನು ತನಗಿತ್ತಿದ್ದ ವರದ ವಿಷಯವಾಗಿ ಚಿಂತಿಸಿದನು.॥40॥
ಮೂಲಮ್ - 41
ನ ಮೇಽಸ್ತ್ರ ಬಂಧಸ್ಯ ಚ ಶಕ್ತಿರಸ್ತಿ
ವಿಮೋಕ್ಷಣೇ ಲೋಕಗುರೋಃ ಪ್ರಭಾವಾತ್ ।
ಇತ್ಯೇವ ಮತ್ವಾ ವಿಹಿತೋಽಸ್ತ್ರಬಂಧೋ
ಮಯಾತ್ಮಯೋನೇರನುವರ್ತಿತವ್ಯಃ ॥
ಅನುವಾದ
‘‘ಪಿತಾಮಹನ ಮಹಿಮೆಯಿಂದ ಪ್ರಭಾವಿತನಾದ ಈ ಬ್ರಹ್ಮಾಸ್ತ್ರದಿಂದ ತಪ್ಪಿಸಿಕೊಳ್ಳಲು ನನಗೆ ಶಕ್ತಿ ಇಲ್ಲ’’ ಎಂದು ತಿಳಿದ ಇಂದ್ರಜಿತುವು ಅದನ್ನು ನನ್ನ ಮೇಲೆ ಪ್ರಯೋಗಿಸಿದನು. ಸರಿ, ಈ ಬ್ರಹ್ಮಾಸ್ತ್ರಕ್ಕೆ ನಾನು ಕಟ್ಟಿ ಬೀಳುವುದೇ ಯುಕ್ತವು. ಇದರಿಂದ ನಾನು ಬ್ರಹ್ಮದೇವರನ್ನು ಗೌರವಿಸಿದಂತಾಗುತ್ತದೆ.॥41॥
ಮೂಲಮ್ - 42
ಸ ವೀರ್ಯಮಸ್ತ್ರಸ್ಯ ಕಪಿರ್ವಿಚಾರ್ಯ
ಪಿತಾಮಹಾನುಗ್ರಹಮಾತ್ಮನಶ್ಚ ।
ವಿಮೋಕ್ಷಶಕ್ತಿಂ ಪರಿಚಿಂತಯಿತ್ವಾ
ಪಿತಾಮಹಾಜ್ಞಾಮನುವರ್ತತೇ ಸ್ಮ ॥
ಅನುವಾದ
ಹೀಗೆ ಕಪೀಶ್ವರನು ಅಸ್ತ್ರದ ಶಕ್ತಿಯನ್ನು, ಪಿತಾಮಹನು ಹಿಂದೆ ಅನುಗ್ರಹಮಾಡಿರುವುದನ್ನು, ಅಸ್ತ್ರದಿಂದ ಬಿಡಿಸಿಕೊಳ್ಳುವ ಶಕ್ತಿ ತನಗಿದ್ದರೂ, ಪಿತಾಮಹನ ಆಜ್ಞೆಯಂತೆ ಮುಹೂರ್ತಕಾಲದವರೆಗೆ ಬ್ರಹ್ಮಾಸ್ತ್ರಕ್ಕೆ ಅಧೀನನಾಗಿದ್ದನು.॥42॥
ಮೂಲಮ್ - 43
ಅಸ್ತ್ರೇಣಾಪಿ ಹಿ ಬದ್ಧಸ್ಯ ಭಯಂ ಮಮ ನ ಜಾಯತೇ ।
ಪಿತಾಮಹಮಹೇಂದ್ರಾಭ್ಯಾಂ ರಕ್ಷಿತಸ್ಯಾನಿಲೇನ ಚ ॥
ಅನುವಾದ
ನಾನು ಬ್ರಹ್ಮಾಸ್ತ್ರದಿಂದ ಬಂಧಿತನಾಗಿದ್ದರೂ, ಬ್ರಹ್ಮದೇವರು, ಇಂದ್ರನು ನನ್ನ ತಂದೆಯಾದ ವಾಯುದೇವರು ಇವರುಗಳಿಂದ ಸದಾ ರಕ್ಷಿತನಾದ ನನಗೆ ಭಯಪಡುವ ಕಾರಣವೇ ಇಲ್ಲ.॥43॥
ಮೂಲಮ್ - 44
ಗ್ರಹಣೇ ವಾಪಿ ರಕ್ಷೋಭಿರ್ಮಹಾನ್ ಮೇ ಗುಣದರ್ಶನಃ ।
ರಾಕ್ಷಸೇಂದ್ರೇಣ ಸಂವಾದಸ್ತಸ್ಮಾದ್ಗೃಹ್ಣಂತು ಮಾಂ ಪರೇ ॥
ಅನುವಾದ
ರಾಕ್ಷಸರು ನನ್ನನ್ನು ಬಂಧಿಸಿ ಸೆಳೆದುಕೊಂಡು ಹೋಗುತ್ತಿರುವುದೂ ಒಳ್ಳೆಯದೆಂದೇ ನಾನು ಭಾವಿಸುತ್ತೇನೆ. ಏಕೆಂದರೆ, ಇದರಿಂದ ನನಗೆ ರಾಕ್ಷಸೇಂದ್ರನೊಡನೆ ಮಾತನಾಡಲು ಒಳ್ಳೆಯ ಅವಕಾಶ ಸಿಕ್ಕಿದಂತಾಗುವುದು. ಅದರಿಂದ ರಾಕ್ಷಸರು ನನ್ನನ್ನು ಕರೆದೊಯ್ಯಲಿ.॥44॥
ಮೂಲಮ್ - 45
ಸ ನಿಶ್ಚಿತಾರ್ಥಃ ಪರವೀರಹಂತಾ
ಸಮೀಕ್ಷ್ಯಕಾರೀ ವಿನಿವೃತ್ತಚೇಷ್ಟಃ ।
ಪರೈಃ ಪ್ರಸಹ್ಯಾಭಿಗತೈರ್ನಿಗೃಹ್ಯ
ನನಾದ ತೈಸ್ತೈಃ ಪರಿಭರ್ತ್ಸ್ಯಮಾನಃ ॥
ಅನುವಾದ
ಶತ್ರುಗಳನ್ನು ಸಂಹರಿಸುವವನೂ, ಸದಸದ್ವಿಚಕ್ಷಣದಲ್ಲಿ ದೂರದೃಷ್ಟಿಯುಳ್ಳವನೂ ಆದ ಹನುಮಂತನು ಕೃತನಿಶ್ಚಯನಾಗಿ, ನಿಶ್ಚೇಷ್ಠಿತನಾದನು. ಹಾಗೆ ಶತ್ರುಗಳು ಅವನ ಮೇಲೆ ವಿಜಯ ಸಾಧಿಸಿ, ಬಲಪ್ರಯೋಗದಿಂದ ಬಂಧಿಸಿ, ಸೆಳೆದೊಯ್ಯುತ್ತಾ ಭಯಪಡಿಸುತ್ತಿದ್ದಾಗ ಹನುಮಂತನು ಗಟ್ಟಿಯಾಗಿ ಕಿರಿಚಿಕೊಳ್ಳುತ್ತಿದ್ದನು.॥45॥
ಮೂಲಮ್ - 46
ತತಸ್ತಂ ರಾಕ್ಷಸಾ ದೃಷ್ಟ್ವಾ ನಿರ್ವಿಚೇಷ್ಟಮರಿಂದಮಮ್ ।
ಬಬಂಧುಃ ಶಣವಲ್ಕೈಶ್ಚ ದ್ರುಮಚೀರೈಶ್ಚ ಸಂಹತೈಃ ॥
ಅನುವಾದ
ಅನಂತರ ರಾಕ್ಷಸರು ಶತ್ರುಸಂಹಾರಕನಾದ ಹನುಮಂತನು ನಿಶ್ಚೇಷ್ಠಿತನಾಗಿರುವುದನ್ನು ಕಂಡು, ಚೆನ್ನಾಗಿ ಹೆಣೆದು ಹುರಿಹಾಕಿದ ನಾರು ಹಗ್ಗಗಳಿಂದಲೂ, ವಲ್ಕಲಗಳಿಂದಲೂ ಅವನನ್ನು ಬಲವಾಗಿ ಕಟ್ಟಿದರು.॥46॥
ಮೂಲಮ್ - 47
ಸ ರೋಚಯಾಮಾಸ ಪರೈಶ್ಚ ಬಂಧನಂ
ಪ್ರಸಹ್ಯ ವೀರೈರಭಿಗರ್ಹಣಂ ಚ ।
ಕೌತೂಹಲಾನ್ಮಾಂ ಯದಿ ರಾಕ್ಷಸೇಂದ್ರೋ
ದ್ರಷ್ಟುಂ ವ್ಯವಸ್ಯೇದಿತಿ ನಿಶ್ಚಿತಾರ್ಥಃ ॥
ಅನುವಾದ
‘ಒಂದು ವೇಳೆ ರಾವಣನು ನನ್ನನ್ನು ನೋಡಲು ಕುತೂಹಲನಾಗಿರಲೂಬಹುದು’ ಎಂದು ನಿಶ್ಚಯಿಸಿ, ಹನುಮಂತನಿಗೆ ತನ್ನನ್ನು ಶತ್ರುವೀರರು ಕಟ್ಟಿರುವುದನ್ನೂ, ನಿಂದಿಸುವುದನ್ನೂ, ಇಷ್ಟವೇ ಆಯಿತು.॥47॥
ಮೂಲಮ್ - 48
ಸ ಬದ್ಧಸ್ತೇನ ವಲ್ಕೇನ ವಿಮುಕ್ತೋಽಸ್ತ್ರೇಣ ವೀರ್ಯವಾನ್ ।
ಅಸ್ತ್ರಬಂಧಃ ಸ ಚಾನ್ಯಂ ಹಿ ನ ಬಂಧಮನುವರ್ತತೇ ॥
ಅನುವಾದ
ಮಹಾವೀರನಾದ ಹನುಮಂತನು ವಲ್ಕಲದ ನಾರುಗಳಿಂದ ಬಂಧಿಸಿದಾಕ್ಷಣವೇ, ಬ್ರಹ್ಮಾಸ್ತ್ರದಿಂದ ಬಿಡುಗಡೆ ಹೊಂದಿದನು. ಏಕೆಂದರೆ-ಬ್ರಹ್ಮಾಸ್ತ್ರವು ತನ್ನ ಮೇಲೆ ಇತರ ಯಾವುದೇ ಬಂಧನವನ್ನು ಸಹಿಸುವುದಿಲ್ಲ. ಅದರಿಂದ ಅದು ನಿಷ್ಕ್ರಿಯವಾಯಿತು.॥48॥
ಮೂಲಮ್ - 49
ಅಥೇಂದ್ರಜಿತ್ತು ದ್ರುಮಚೀರಬದ್ಧಂ
ವಿಚಾರ್ಯ ವೀರಃ ಕಪಿಸತ್ತಮಂ ತಮ್ ।
ವಿಮುಕ್ತಮಸ್ತ್ರೇಣ ಜಗಾಮ ಚಿಂತಾಂ
ನಾನ್ಯೇನ ಬದ್ಧೋ ಹ್ಯನುವರ್ತತೇಽಸ್ತ್ರಮ್ ॥ 49 ॥
ಮೂಲಮ್ - 50
ಅಹೋ ಮಹತ್ ಕರ್ಮ ಕೃತಂ ನಿರರ್ಥಕಂ
ನ ರಾಕ್ಷಸೈರ್ಮಂತ್ರಗತಿರ್ವಿಮೃಷ್ಟಾ ।
ಪುನಶ್ಚ ನಾಸ್ತ್ರೇ ವಿಹತೇಸ್ತ್ರಮನ್ಯತ್
ಪ್ರವರ್ತತೇ ಸಂಶಯಿತಾಃ ಸ್ಮ ಸರ್ವೇ ॥ 50 ॥
ಅನುವಾದ
ತನ್ನ ಅನುಯಾಯಿಗಳು ವಲ್ಕಲಗಳ ಹಗ್ಗಗಳಿಂದ ಕಟ್ಟಿಹಾಕಿದ ಈ ವಾನರೋತ್ತಮನು ಬ್ರಹ್ಮಾಸ್ತ್ರದ ಬಂಧನದಿಂದ ಬಿಡುಗಡೆಗೊಂಡಿರುವುದನ್ನು ಗಮನಿಸಿ, ವೀರನಾದ ಇಂದ್ರಜಿತುವು ಹೀಗೆ ವಿಚಾರ ಮಾಡತೊಡಗಿದನು - ‘‘ಇತರ ಸಾಧನಗಳಿಂದ ಬಂಧಿಸಿದಾಕ್ಷಣ ಬ್ರಹ್ಮಾಸ್ತ್ರವು ತನ್ನ ಬಂಧನದಿಂದ ಬಿಡುಗಡೆಗೊಳ್ಳುವುದು. ಅಯ್ಯೋ! ಮಹಾಕಾರ್ಯವು ನಿರರ್ಥಕವಾಗಿ ಹೋಯಿತಲ್ಲ! ಬ್ರಹ್ಮಾಸ್ತ್ರಮಂತ್ರ ಪದ್ಧತಿಯನ್ನು ಅರಿಯದ ರಾಕ್ಷಸರು ಹೀಗೆ ಮಾಡಿದ್ದಾರೆ. ಬ್ರಹ್ಮಾಸ್ತ್ರವು ಪ್ರಯೋಗಿಸಿದ ಬಳಿಕ ಬೇರೆ ಯಾವ ಅಸ್ತ್ರವೂ ಉಪಯೋಗಕ್ಕೆ ಬರುವುದಿಲ್ಲ. ಬ್ರಹ್ಮಾಸ್ತ್ರವನ್ನು ಪುನಃ ಪ್ರಯೋಗಿಸುವಂತೆಯೂ ಇಲ್ಲ. ಇದರಿಂದ ನಾವೆಲ್ಲರೂ ಮಹಾಸಂಕಟಕ್ಕೆ ಈಡಾಗಿದ್ದೇವೆ. ಎಲ್ಲಾದರೂ ಈ ಕಪಿಯು ಎದ್ದು ಬಿಟ್ಟರೆ ಏನು ಮಾಡುವುದು?’’॥49-50॥
ಮೂಲಮ್ - 51
ಅಸ್ತ್ರೇಣ ಹನುಮಾನ್ ಮುಕ್ತೋ ನಾತ್ಮಾನಮವಬುಧ್ಯತ ।
ಕೃಷ್ಯಮಾಣಸ್ತು ರಕ್ಷೋಭಿಸ್ತೈಶ್ಚ ಬಂಧೈರ್ನಿಪೀಡಿತಃ ॥
ಮೂಲಮ್ - 52
ಹನ್ಯಮಾನಸ್ತತಃ ಕ್ರೂರೈ ರಾಕ್ಷಸೈಃ ಕಾಷ್ಠಮುಷ್ಟಿಭಿಃ ।
ಸಮೀಪಂ ರಾಕ್ಷಸೇಂದ್ರಸ್ಯ ಪ್ರಾಕೃಷ್ಯತ ಸ ವಾನರಃ ॥
ಅನುವಾದ
ಹನುಮಂತನು ಬ್ರಹ್ಮಾಸ್ತ್ರದಿಂದ ತಾನು ಬಿಡುಗಡೆ ಹೊಂದಿದ್ದರೂ ರಾಕ್ಷಸರಿಗೆ ತೋರ್ಪಡಿಸಲಿಲ್ಲ. ಕ್ರೂರರಾದ ರಾಕ್ಷಸರು ಅವನನ್ನು ಅತ್ತ-ಇತ್ತ ಸೆಳೆದಾಡುತ್ತಿದ್ದರು. (ಅವನು ಆ ಕಡೆ-ಈ ಕಡೆ ಹೊರಳುವಾಗ ಅವನಡಿಯಲ್ಲಿ ಬಿದ್ದು ಎಷ್ಟೋ ರಾಕ್ಷಸರು ಪುಡಿಯಾದರು.) ಹಗ್ಗಗಳಿಂದ ಬಿಗಿದು ಪೀಡಿಸುತ್ತಿದ್ದರು. ದೊಣ್ಣೆಗಳಿಂದಲೂ, ಮುಷ್ಟಿಗಳಿಂದಲೂ ಹೊಡೆಯುತ್ತಾ ರಾಕ್ಷಸೇಂದ್ರನಾದ ರಾವಣನ ಬಳಿಗೆ ಸೆಳೆದುಕೊಂಡು ಹೋದರು. (ರಾವಣನನ್ನು ನೋಡಬೇಕೆಂಬ ಉದ್ದೇಶದಿಂದ ರಾಕ್ಷಸರು ಕೊಡುತ್ತಿದ್ದ ಕಿರುಕುಳವನ್ನು ಹನುಮಂತನು ತಿಳಿದು, ತಿಳಿದು ಸಹಿಸುತ್ತಿದ್ದನು.)॥51-52॥
ಮೂಲಮ್ - 53
ಅಥೇಂದ್ರಜಿತ್ತಂ ಪ್ರಸಮೀಕ್ಷ್ಯ ಮುಕ್ತಂ
ಅಸ್ತ್ರೇಣ ಬದ್ಧಂ ದ್ರುಮಚೀರಸೂತ್ರೈಃ ।
ವ್ಯದರ್ಶಯತ್ತತ್ರ ಮಹಾಬಲಂ ತಂ
ಹರಿಪ್ರವೀರಂ ಸಗಣಾಯ ರಾಜ್ಞೇ ॥
ಅನುವಾದ
ಬಳಿಕ ಬ್ರಹ್ಮಾಸ್ತ್ರದಿಂದ ವಿಮುಕ್ತನಾಗಿದ್ದ, ಹಗ್ಗಗಳಿಂದ ಬಿಗಿಯಲ್ಪಟ್ಟಿದ್ದ, ಮಹಾಬಲನಾದ, ಕಪಿಶ್ರೇಷ್ಠನಾದ ಹನುಮಂತನನ್ನು ಇಂದ್ರಜಿತುವು ಪರಿವಾರದೊಡನೆ ಸಭಾಸ್ಥಾನದಲ್ಲಿ ಕುಳಿತಿದ್ದ ರಾವಣನಿಗೆ ‘ಇದೋ ಆ ಕಪಿಯು’ ಎಂದು ತೋರಿಸಿದನು. ॥53॥
ಮೂಲಮ್ - 54
ತಂ ಮತ್ತಮಿವ ಮಾತಂಗಂ ಬದ್ಧಂ ಕಪಿವರೋತ್ತಮಮ್ ।
ರಾಕ್ಷಸಾ ರಾಕ್ಷಸೇಂದ್ರಾಯ ರಾವಣಾಯ ನ್ಯವೇದಯನ್ ॥
ಅನುವಾದ
ಬಂಧಿತನಾಗಿದ್ದ, ಮದಿಸಿದ ಆನೆಯಂತಿದ್ದ ಕಪಿಶ್ರೇಷ್ಠನಾದ ಹನುಮಂತನನ್ನು ನೋಡಿ ರಾಕ್ಷಸರು - ಅಶೋಕವನವನ್ನು ಧ್ವಂಸಮಾಡಿದ ಕಪಿಯು ಇವನೇ ಎಂದು ರಾವಣೇಶ್ವರನಲ್ಲಿ ನಿವೇದಿಸಿಕೊಂಡರು.॥54॥
ಮೂಲಮ್ - 55
ಕೋಽಯಂ ಕಸ್ಯ ಕುತೋ ವಾತ್ರ ಕಿಂ ಕಾರ್ಯಂ ಕೋ ವ್ಯಪಾಶ್ರಯಃ ।
ಇತಿ ರಾಕ್ಷಸವೀರಾಣಾಂ ತತ್ರ ಸಂಜಜ್ಞಿರೇ ಕಥಾಃ ॥
ಅನುವಾದ
ರಾಜಸಭೆಯಲ್ಲಿದ್ದ ರಾಕ್ಷಸವೀರರು ಆ ವಾನರನನ್ನು ನೋಡಿ, ಇವನಾರು? ಎಲ್ಲಿಂದ ಬಂದಿರುವನು? ಇವನು ಬಂದ ಕೆಲಸವೇನು? ಇವನಿಗೆ ಆಶ್ರಯದಾತರು ಯಾರು? ಎಂದು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು.॥55॥
ಮೂಲಮ್ - 56
ಹನ್ಯತಾಂ ದಹ್ಯತಾಂ ವಾಪಿ ಭಕ್ಷ್ಯತಾಮಿತಿ ಚಾಪರೇ ।
ರಾಕ್ಷಸಾಸ್ತತ್ರ ಸಂಕ್ರುದ್ಧಾಃ ಪರಸ್ಪರಮಥಾಬ್ರುವನ್ ॥
ಅನುವಾದ
ಹನುಮಂತನನ್ನು ನೋಡಿ ಕ್ರುದ್ಧರಾದ ಕೆಲವು ರಾಕ್ಷಸರು ‘ಈ ಕಪಿಯನ್ನು ಕೊಂದುಹಾಕಿರಿ, ಸುಟ್ಟು ಹಾಕಿರಿ, ತಿಂದು ಹಾಕಿರಿ’ ಎಂದು ಒಬ್ಬರು ಮತ್ತೊಬ್ಬರಿಗೆ ಹೇಳಿಕೊಂಡು ಕೂಗಾಡುತ್ತಿದ್ದರು.॥56॥
ಮೂಲಮ್ - 57
ಅತೀತ್ಯ ಮಾರ್ಗಂ ಸಹಸಾ ಮಹಾತ್ಮಾ
ಸ ತತ್ರ ರಕ್ಷೋಽಧಿಪಪಾದಮೂಲೇ ।
ದದರ್ಶ ರಾಜ್ಞಃ ಪರಿಚಾರವೃದ್ಧಾನ್
ಗೃಹಂ ಮಹಾರತ್ನವಿಭೂಷಿತಂ ಚ ॥
ಅನುವಾದ
ಮಹಾತ್ಮನಾದ ಹನುಮಂತನು ಮಾರ್ಗವನ್ನು ದಾಟಿ ಮುಂದೆ ಹೋದ ನಂತರ, ಅಮೂಲ್ಯ ರತ್ನಗಳಿಂದ ಅಲಂಕೃತವಾಗಿದ್ದ, ರಾವಣನ ಸಭಾಭವನವನ್ನೂ, ಸಭೆಯಲ್ಲಿ ರಾಕ್ಷಸೇಶ್ವರನ ಪದತಲದಲ್ಲಿ ಕುಳಿತಿದ್ದ ವೃದ್ಧರಾದ ಅಮಾತ್ಯರನ್ನೂ ಒಮ್ಮೆ ಕಣ್ಣುಹಾಯಿಸಿ ನೋಡಿದನು.॥57॥
ಮೂಲಮ್ - 58
ಸ ದದರ್ಶಮಹಾತೇಜಾ ರಾವಣಃ ಕಪಿಸತ್ತಮಮ್ ।
ರಕ್ಷೋಭಿರ್ವಿಕೃತಾಕಾರೈಃ ಕೃಷ್ಯಮಾಣಮಿತಸ್ತತಃ ॥
ಅನುವಾದ
ಮಹಾತೇಜಸ್ವಿಯಾದ ರಾವಣನು ವಿಕಾರವಾದ ಆಕಾರಗಳನ್ನು ಹೊಂದಿದ್ದ ರಾಕ್ಷಸರಿಂದ ಸೆಳೆದಾಡಲ್ಪಡುತ್ತಿದ್ದ ಕಪಿಶ್ರೇಷ್ಠನಾದ ಹನುಮಂತನನ್ನು ನೋಡಿದನು.॥58॥
ಮೂಲಮ್ - 59
ರಾಕ್ಷಸಾಧಿಪತಿಂ ಚಾಪಿ ದದರ್ಶ ಕಪಿಸತ್ತಮಃ ।
ತೇಜೋಬಲಸಮಾಯುಕ್ತಂ ತಪಂತಮಿವ ಭಾಸ್ಕರಮ್ ॥
ಅನುವಾದ
ತೇಜಬಲ ಸಂಪನ್ನನಾಗಿದ್ದ, ಸೂರ್ಯನಂತೆ ವಿರಾಜಿಸುತ್ತಿದ್ದ ರಾಕ್ಷಸೇಶ್ವರನನ್ನು ಆ ಕಪಿಸತ್ತಮನು ನೋಡಿದನು.॥59॥
ಮೂಲಮ್ - 60
ಸ ರೋಷಸಂವರ್ತಿತತಾಮ್ರದೃಷ್ಟಿಃ
ದಶಾನನಸ್ತಂ ಕಪಿಮನ್ವವೇಕ್ಷ್ಯ ।
ಅಥೋಪವಿಷ್ಟಾನ್ ಕುಲಶೀಲವೃದ್ಧಾನ್
ಸಮಾದಿಶತ್ತಂ ಪ್ರತಿ ಮಂತ್ರಿಮುಖ್ಯಾನ್ ॥
ಅನುವಾದ
ಕ್ರುದ್ಧನಾಗಿದ್ದ ರಾಕ್ಷಸನ ಕಣ್ಣುಗಳು ಕೆಂಡದಂತೆ ಕೆಂಪಾಗಿ ಸುತ್ತುತ್ತಿದ್ದವು. ಕಪಿಯನ್ನು ಒಮ್ಮೆ ದುರುಗಟ್ಟಿ ನೋಡಿ ರಾವಣನು ತನ್ನ ಸುತ್ತಲೂ ಕುಳಿತಿದ್ದ, ಸತ್ಕುಲಪ್ರಸೂತರಾದ, ಶೀಲವಂತರಾದ, ವೃದ್ಧರಾದ ಮಂತ್ರಿ ಮುಖ್ಯರಿಗೆ - ‘ಈತನನ್ನು ಚೆನ್ನಾಗಿ ವಿಚಾರಿಸಿಕೊಳ್ಳಿ’ ಎಂದು ಆಜ್ಞಾಪಿಸಿದನು.॥60॥
ಮೂಲಮ್ - 61
ಯಥಾಕ್ರಮಂ ತೈಃ ಸ ಕಪಿರ್ವಿಪೃಷ್ಟಃ
ಕಾರ್ಯಾರ್ಥಮರ್ಥಸ್ಯ ಚ ಮೂಲಮಾದೌ ।
ನಿವೇದಯಾಮಾಸ ಹರೀಶ್ವರಸ್ಯ
ದೂತಃ ಸಕಾಶಾದಹಮಾಗತೋಽಸ್ಮಿ ॥
ಅನುವಾದ
ರಾವಣನ ಅಪ್ಪಣೆಯಂತೆ ಮಂತ್ರಿಮಹೋದಯರು ಕಪಿವರನನ್ನು ಅನುಕ್ರಮವಾಗಿ ಪ್ರಶ್ನಿಸಲು ಉಪಕ್ರಮಿಸಿದರು - ‘ನೀನಾರು? ಇಲ್ಲಿಗೇಕೆ ಬಂದಿರುವೆ? ಯಾವ ಕಾರ್ಯಕ್ಕಾಗಿ ಬಂದಿರುವೆ?’ ಎಂದು ಪ್ರಶ್ನಿಸಿದಾಗ, ಹನುಮಂತನು - ‘ವಾನರ ಪ್ರಭುವಾದ ಸುಗ್ರೀವನಿಂದ ಕಳಿಸಿಕೊಟ್ಟು ಬಂದಿರುವ ದೂತನು ನಾನು’ ಎಂದು ಉತ್ತರಿಸಿದನು.॥61॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಅಷ್ಟಚತ್ವಾರಿಂಶಃ ಸರ್ಗಃ ॥ 48 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತೆಂಟನೆಯ ಸರ್ಗವು ಮುಗಿಯಿತು.