०४७ अक्षकुमारवधः

वाचनम्
ಭಾಗಸೂಚನಾ

ರಾವಣನ ಮಗನಾದ ಅಕ್ಷಕುಮಾರನ ಪರಾಕ್ರಮದ ವರ್ಣನೆ, ಹನುಮಂತನಿಂದ ಅವನ ಸಂಹಾರ

ಮೂಲಮ್ - 1

ಸೇನಾಪತೀನ್ ಪಂಚ ಸ ತು ಪ್ರಮಾಪಿತಾನ್
ಹನೂಮತಾ ಸಾನುಚರಾನ್ ಸವಾಹನಾನ್ ।
ನಿಶಮ್ಯ ರಾಜಾ ಸಮರೋದ್ಧತೋನ್ಮುಖಂ
ಕುಮಾರಮಕ್ಷಂ ಪ್ರಸಮೈಕ್ಷತಾಗ್ರತಃ ॥

ಅನುವಾದ

ದುರ್ಧರನೇ ಮೊದಲಾದ ಐದು ಸೇನಾಪತಿಗಳು, ವಾಹನ ಸೈನ್ಯದೊಡನೆ ಹನುಮಂತನ ಕೈಯಿಂದ ಮಡಿದ ವಾರ್ತೆಯನ್ನು ರಾವಣನು ತಿಳಿದುಕೊಂಡನು. ಆಗ ಯುದ್ಧಕ್ಕೆ ಹೋಗಲು ಆತುರನಾಗಿ ಸಜ್ಜಾಗಿ ಎದುರಿಗೆ ನಿಂತಿದ್ದ ಅಕ್ಷಕುಮಾರನನ್ನು ನೋಡಿದನು.॥1॥

ಮೂಲಮ್ - 2

ಸ ತಸ್ಯ ದೃಷ್ಟ್ಯರ್ಪಣಸಂಪ್ರಚೋದಿತಃ
ಪ್ರತಾಪವಾನ್ ಕಾಂಚನಚಿತ್ರಕಾರ್ಮುಕಃ ।
ಸಮುತ್ಪಪಾತಾಥ ಸದಸ್ಯುದೀರಿತೋ
ದ್ವಿಜಾತಿಮುಖ್ಯೈರ್ಹವಿಷೇವ ಪಾವಕಃ ॥

ಅನುವಾದ

ರಾವಣನ ದೃಷ್ಟಿಪ್ರಸರಣದಿಂದ ಪ್ರಚೋದಿತನಾಗಿ ಇಮ್ಮಡಿಸಿದ ಉತ್ಸಾಹದಿಂದ, ಪ್ರತಾಪಶಾಲಿಯೂ, ಸುವರ್ಣದಿಂದ ಚಿತ್ರಿತವಾದ ಧನುಸ್ಸನ್ನು ಧರಿಸಿದವನೂ ಆದ ಅಕ್ಷಕುಮಾರನು, ಸಭಾಸದರಿಂದ ಪ್ರೋತ್ಸಾಹಿತನಾಗಿ ಬ್ರಾಹ್ಮಣೋತ್ತಮರು ಅರ್ಪಿಸಿದ ಹವಿಸ್ಸಿನಿಂದ ಪ್ರಜ್ವಲಿಸುವ ಅಗ್ನಿಯಂತೆ ಸಟ್ಟನೆ ಎದ್ದು ನಿಂತನು.॥2॥

ಮೂಲಮ್ - 3

ತತೋ ಮಹಾನ್ ಬಾಲದಿವಾಕರಪ್ರಭಂ
ಪ್ರತಪ್ತಜಾಂಬೂನದಜಾಲಸಂತತಮ್ ।
ರಥಂ ಸಮಾಸ್ಥಾಯ ಯಯೌ ಸ ವೀರ್ಯವಾನ್
ಮಹಾಹರಿಂ ತಂ ಪ್ರತಿ ನೈರ್ಋತರ್ಷಭಃ ॥

ಅನುವಾದ

ಬಳಿಕ ಮಹಾವೀರನೂ, ರಾಕ್ಷಸಶ್ರೇಷ್ಠನೂ ಆದ ಅಕ್ಷಕುಮಾರನು, ಬಾಲಸೂರ್ಯನಂತೆ ಮಹಾಪ್ರಭೆಯಿಂದ ಕೂಡಿದ್ದು, ಪುಟವಿಟ್ಟ ಬಂಗಾರದ ಜಾಲರಿಗಳಿಂದ ಸಮಾವೃತವಾಗಿದ್ದ ಉತ್ತಮ ರಥದಲ್ಲಿ ಆರೂಢನಾಗಿ ವಾನರೋತ್ತಮನಾದ ಹನುಮಂತನ ಬಳಿಗೆ ಯುದ್ಧಕ್ಕಾಗಿ ಹೊರಟನು.॥3॥

ಮೂಲಮ್ - 4

ತತಸ್ತಪಃಸಂಗ್ರಹಸಂಚಯಾರ್ಜಿತಂ
ಪ್ರತಪ್ತಜಾಂಬೂನದಜಾಲಶೋಭಿತಮ್ ।
ಪತಾಕಿನಂ ರತ್ನವಿಭೂಷಿತಧ್ವಜಂ
ಮನೋಜವಾಷ್ಟಾಶ್ವವರೈಃ ಸುಯೋಜಿತಮ್ ॥

ಅನುವಾದ

ಅಕ್ಷಕುಮಾರನ ರಥವು ಭಾರೀ ತಪಃ ಫಲದಿಂದ ಲಭಿಸಿತ್ತು. ಚೊಕ್ಕವಾದ ಚಿನ್ನದ ಬಲೆಗಳ ಆವರಣದಿಂದಾಗಿ ವಿಚಿತ್ರವಾಗಿ ಕಾಣುತ್ತಿತ್ತು. ಪತಾಕೆಗಳಿಂದಲೂ ರತ್ನಗಳಿಂದ ಸಮಲಂಕೃತವಾಗಿದ್ದು, ಧ್ವಜದಿಂದಲೂ ಶೋಭಿಸುತ್ತಿತ್ತು. ಮನೋವೇಗಕ್ಕೆ ಸಮಾನವಾದ ವೇಗವುಳ್ಳ ಎಂಟು ಕುದುರೆಗಳು ಆ ರಥಕ್ಕೆ ಹೂಡಿದ್ದರು.॥4॥

ಮೂಲಮ್ - 5

ಸುರಾಸುರಾಧೃಷ್ಯಮಸಂಗಚಾರಿಣಂ
ರವಿಪ್ರಭಂ ವ್ಯೋಮಚರಂ ಸಮಾಹಿತಮ್ ।
ಸತೂಣಮಷ್ಟಾಸಿನಿಬದ್ಧ ಬಂಧುರಂ
ಯಥಾಕ್ರಮಾವೇಶಿತ ಶಕ್ತಿ ತೋಮರಮ್ ॥

ಅನುವಾದ

ದೇವ-ದಾನವರಿಂದಲೂ ಅದು ಎದುರಿಸಲು ಅಸಾಧ್ಯವಾಗಿತ್ತು. ಭೂಮಿಯ ಸಂಪರ್ಕವೇ ಇಲ್ಲದೆ ಸಂಚರಿಸುತ್ತಿತ್ತು. ಸೂರ್ಯನ ಕಾಂತಿಯಿಂದ ಕಂಗೊಳಿಸುತ್ತಾ, ಆಕಾಶದಲ್ಲಿಯೂ ಸಂಚರಿಸುತ್ತಾ, ಬೇಕಾದ ಸ್ಥಳದಲ್ಲಿ ಸುಸ್ಥಿರವಾಗಿ ನಿಂತಿರುತ್ತಿತ್ತು. ರಥದಲ್ಲಿ ಅನೇಕ ಬತ್ತಳಿಕೆಗಳಿದ್ದು, ಮೂಕಿ ಕಂಬಕ್ಕೆ ಎಂಟು ಕತ್ತಿಗಳನ್ನು ಕಟ್ಟಿದ್ದರು. ಶಕ್ತಿ ತೋಮರಗಳನ್ನು ಅನುಕ್ರಮವಾಗಿ ರಥದಲ್ಲಿ ಇರಿಸಿದ್ದರು.॥5॥

ಮೂಲಮ್ - 6

ವಿರಾಜಮಾನಂ ಪ್ರತಿಪೂರ್ಣವಸ್ತುನಾ
ಸಹೇಮದಾಮ್ನಾ ಶಶಿಸೂರ್ಯವರ್ಚಸಾ ।
ದಿವಾಕರಾಭಂ ರಥಮಾಸ್ಥಿ ತಸ್ತತಃ
ಸ ನಿರ್ಜಗಾಮಾಮರತುಲ್ಯವಿಕ್ರಮಃ ॥

ಅನುವಾದ

ಸಕಲ ಯುದ್ಧೊಪಕರಣಗಳಿಂದ ಸಜ್ಜಾಗಿದ್ದು, ಸುವರ್ಣಮಯವಾದ ಮಾಲೆಗಳಿಂದ ವಿರಾಜಿಸುತ್ತಿತ್ತು. ಚಂದ್ರ-ಸೂರ್ಯರ ಕಾಂತಿಯಂತೆ ಪ್ರಕಾಶಮಾನವಾಗಿ ಕಂಗೊಳಿಸುತ್ತಿತ್ತು. ಸೂರ್ಯ ರಥದಂತೆ ಆಕಾಶದಲ್ಲೇ ಸಂಚರಿಸುವ ಆ ಅನುಪಮ ರಥದಲ್ಲಿ ಕುಳಿತು ದೇವ ಸದೃಶ ಪರಾಕ್ರಮವುಳ್ಳ ಅಕ್ಷಕುಮಾರನು ಯುದ್ಧಕ್ಕಾಗಿ ಹೊರಟನು.॥6॥

ಮೂಲಮ್ - 7

ಸ ಪೂರಯನ್ ಖಂ ಚ ಮಹೀಂ ಚ ಸಾಚಲಾಂ
ತುರಂಗಮಾತಂಗಮಹಾರಥಸ್ವನೈಃ ।
ಬಲೈಃ ಸಮೇತೈಃ ಸ ಹಿ ತೋರಣಸ್ಥಿತಂ
ಸಮರ್ಥಮಾಸೀನಮುಪಾಗಮತ್ ಕಪಿಮ್ ॥

ಅನುವಾದ

ಆನೆ, ಕುದುರೆ, ಮಹಾರಥಗಳ ಸಂಚಲನದ ಧ್ವನಿಯಿಂದ ಭೂಮ್ಯಾಕಾಶಗಳನ್ನೂ, ಪರ್ವತಗಳನ್ನೂ ಪ್ರತಿಧ್ವನಿಸುತ್ತಾ, ಸಕಲ ಬಲದಿಂದೊಡಗೂಡಿದ ಆ ಅಕ್ಷಕುಮಾರನು ವನಮುಖದ್ವಾರದಲ್ಲಿ ಆಸೀನನಾಗಿದ್ದ, ಯುದ್ಧವಿದ್ಯಾ ವಿಶಾರದನಾದ ಹನುಮಂತನ ಬಳಿಗೆ ಸಮೀಪಿಸಿದನು.॥7॥

ಮೂಲಮ್ - 8

ಸ ತಂ ಸಮಾಸಾದ್ಯ ಹರಿಂ ಹರೀಕ್ಷಣೋ
ಯುಗಾಂತಕಾಲಾಗ್ನಿ ಮಿವ ಪ್ರಜಾಕ್ಷಯೇ ।
ಅವಸ್ಥಿತಂ ವಿಸ್ಮಿತಜಾತಸಂಭ್ರಮಃ
ಸಮೈಕ್ಷತಾಕ್ಷೋ ಬಹುಮಾನಚಕ್ಷುಷಾ ॥

ಅನುವಾದ

ಸಿಂಹದಂತೆ ಕ್ರೂರದೃಷ್ಟಿಯುಳ್ಳ ಆ ಅಕ್ಷಕುಮಾರನು, ಪ್ರಳಯಕಾಲದಲ್ಲಿ ಪ್ರಜೆಗಳ ವಿನಾಶಕ್ಕಾಗಿ ಹುಟ್ಟಿದ ಕಾಲಾಗ್ನಿಯಂತೆ ಕಾಣುತ್ತಿದ್ದ ಆ ವಾನರೋತ್ತಮನನ್ನು ಸಮೀಪಿಸಿ, ಪ್ರಪಂಚದಲ್ಲಿ ಇಂತಹ ಬೃಹತ್ಕಾಯವುಳ್ಳ ಒಂದು ಕಪಿಯು ಇದೆಯೇ? ಎಂದು ಸಂಭ್ರಮಾಶ್ಚರ್ಯಗಳಲ್ಲಿ ಮುಳುಗಿದ ಅವನು ಮಾರುತಿಯನ್ನು ಗರ್ವದಿಂದ ದಿಟ್ಟಿಸಿ ನೋಡಿದನು.॥8॥

ಮೂಲಮ್ - 9

ಸ ತಸ್ಯ ವೇಗಂ ಚ ಕಪೇರ್ಮಹಾತ್ಮನಃ
ಪರಾಕ್ರಮಂ ಚಾರಿಷು ರಾವಣಾತ್ಮಜಃ ।
ವಿಚಾರಯನ್ ಸ್ವಂ ಚ ಬಲಂ ಮಹಾಬಲೋ
ಯುಗಕ್ಷಯೇ ಸೂರ್ಯ ಇವಾಭಿವರ್ಧತೇ ॥

ಅನುವಾದ

ಆ ಬಲಿಷ್ಠನಾದ ರಾವಣಕುಮಾರನು, ಮಹಾಶಕ್ತಿ ಸಂಪನ್ನನಾದ ವಾನರನು ಈ ಹಿಂದೆ ಶತ್ರುಗಳ ವಿಷಯದಲ್ಲಿ ತೋರಿದ ಪರಾಕ್ರಮವನ್ನೂ, ಅವನ ಅಪಾರ ಬಲವೇಗವನ್ನೂ ತನ್ನ ಬಲದೊಂದಿಗೆ ಹೋಲಿಸಿಕೊಂಡನು. ಆಗ ಛಳಿಕಾಲ ಕಳೆದು ಬೇಸಿಗೆಯಲ್ಲಿ ಸೂರ್ಯನ ತಾಪವು ಹೆಚ್ಚುವಂತೆ ಅವನ ಯುದ್ಧೋತ್ಸಾಹವು ಇಮ್ಮಡಿಸಿತು.॥9॥

ಮೂಲಮ್ - 10

ಸ ಜಾತಮನ್ಯುಃ ಪ್ರಸಮೀಕ್ಷ್ಯ ವಿಕ್ರಮಂ
ಸ್ಥಿರಂ ಸ್ಥಿತಃ ಸಂಯತಿ ದುರ್ನಿವಾರಣಮ್ ।
ಸಮಾಹಿತಾತ್ಮಾ ಹನುಮಂತಮಾಹವೇ
ಪ್ರಚೋದಯಾಮಾಸ ಶರೈಸ್ತ್ರಿಭಿಃ ಶಿತೈಃ ॥

ಅನುವಾದ

ಆ ಅಕ್ಷಕುಮಾರನು, ಯುದ್ಧದಲ್ಲಿ ಎದುರಿಸಲು ಸಾಧ್ಯವಾದ, ಸ್ಥಿರವಾದ ಪರಾಕ್ರಮವುಳ್ಳ ಹನುಮಂತನನ್ನು ನೋಡಿ ಕ್ರುದ್ಧನಾದನು. ಯುದ್ಧಮಾಡಲು ಸುಸ್ಥಿರವಾಗಿ ನಿಂತಿದ್ದ ಅವನು ಏಕಾಗ್ರಚಿತ್ತದಿಂದ ತೀಕ್ಷ್ಣವಾದ ಮೂರು ಬಾಣಗಳನ್ನು ಪ್ರಯೋಗಿಸಿ ಆ ಕಪಿವರನನ್ನು ಯುದ್ಧಕ್ಕಾಗಿ ಪ್ರಚೋದಿಸಿದನು.॥10॥

ಮೂಲಮ್ - 11

ತತಃ ಕಪಿಂ ತಂ ಪ್ರಸಮೀಕ್ಷ್ಯ ಗರ್ವಿತಂ
ಜಿತಶ್ರಮಂ ಶತ್ರುಪರಾಜಯೋರ್ಜಿತಮ್ ।
ಅವೈಕ್ಷತಾಕ್ಷಃ ಸಮುದೀರ್ಣಮಾನಸಃ
ಸ ಬಾಣಪಾಣಿಃ ಪ್ರಗೃಹೀತಕಾರ್ಮುಕಃ ॥

ಅನುವಾದ

ಶತ್ರುವು ಪ್ರಯೋಗಿಸಿದ ಬಾಣಗಳಿಂದ ಹನುಮಂತನಿಗೆ ಯಾವ ಆಯಾಸವೂ ಆಗಲಿಲ್ಲ. ಶತ್ರುಗಳನ್ನು ಲೀಲಾಜಾಲವಾಗಿ ಪರಾಭವಗೊಳಿಸುವಂತಹ ಅವನು ಬಲಗರ್ವಿತನಾಗಿ ವಿಜೃಂಭಿಸುತ್ತಿದ್ದ ಅವನನ್ನು ಅಕ್ಷಕುಮಾರನು ಚೆನ್ನಾಗಿ ನಿರೀಕ್ಷಿಸಿದನು. ಧನುರ್ಬಾಣಗಳನ್ನು ಧರಿಸಿದ್ದ ಅವನು ಯುದ್ಧ ಸನ್ನದ್ಧನಾಗಿ ಮುಂದರಿದನು.॥11॥

ಮೂಲಮ್ - 12

ಸ ಹೇಮನಿಷ್ಕಾಂಗದಚಾರುಕುಂಡಲಃ
ಸಮಾಸಸಾದಾಶುಪರಾಕ್ರಮಃ ಕಪಿಮ್ ।
ತಯೋರ್ಬಭೂವಾಪ್ರತಿಮಃ ಸಮಾಗಮಃ
ಸುರಾಸುರಾಣಾಮಪಿ ಸಂಭ್ರಮಪ್ರದಃ ॥

ಅನುವಾದ

ಭಂಗಾರದ ಪದಕವನ್ನೂ, ಭುಜಕೀರ್ತಿಗಳನ್ನೂ, ಮನೋಹರವಾದ ಕುಂಡಲಗಳಿಂದಲೂ ಶೊಸಿಭಿಸುತ್ತಿದ್ದ, ವೇಗ ವಿಕ್ರಮಿಯಾದ ಅಕ್ಷನು ಹನುಮಂತನನ್ನು ಎದುರಿಸಿದನು. ಅವರ ಸಂಗ್ರಾಮವು ಅಪ್ರತಿಮವಾಗಿದ್ದು, ದೇವ-ದಾನವರಿಗೂ ಕುತೂಹಲವನ್ನುಂಟುಮಾಡುವುದಾಗಿತ್ತು.॥12॥

ಮೂಲಮ್ - 13

ರರಾಸ ಭೂಮಿರ್ನ ತತಾಪ ಭಾನುಮಾನ್
ವವೌ ನ ವಾಯುಃ ಪ್ರಚಚಾಲ ಚಾಚಲಃ ।
ಕಪೇಃ ಕುಮಾರಸ್ಯ ಚ ವೀಕ್ಷ್ಯ ಸಂಯುಗಂ
ನನಾದ ಚ ದ್ಯೌರುದಧಿಶ್ಚ ಚುಕ್ಷುಭೇ ॥

ಅನುವಾದ

ಹನುಮಂತನಿಗೂ ಅಕ್ಷಕುಮಾರನಿಗೂ ನಡೆದ ಘೋರವಾದ ಯುದ್ಧವನ್ನು ನೋಡಿ, ಭೂಮಿಯು ನಡುಗಿತು, ಸೂರ್ಯನು ಕಾಂತಿಹೀನನಾದನು, ಗಾಳಿಯು ಸ್ತಬ್ಧವಾಯಿತು, ಪರ್ವತಗಳು ನಡುಗಿದವು, ಆಕಾಶದಲ್ಲಿ ಘೋರಶಬ್ದವಾಯಿತು, ಸಮುದ್ರವು ಕ್ಷೋಭೆಗೊಂಡಿತು.॥13॥

ಮೂಲಮ್ - 14

ತತಃ ಸ ವೀರಃ ಸುಮುಖಾನ್ ಪತತ್ರಿಣಃ
ಸುವರ್ಣಪುಂಖಾನ್ ಸವಿಷಾನಿವೋರಗಾನ್ ।
ಸಮಾಧಿಸಂಯೋಗವಿಮೋಕ್ಷತತ್ತ್ವವಿತ್
ಶರಾನಥ ತ್ರೀನ್ ಕಪಿಮೂರ್ಧ್ನ್ಯಪಾತಯತ್ ॥

ಅನುವಾದ

ಗುರಿತಪ್ಪದೆ ಬಾಣಗಳನ್ನು ಹೂಡುವುದರಲ್ಲಿ, ಬಾಣಪ್ರಯೋಗದಲ್ಲಿ ಪ್ರಾವೀಣ್ಯವನ್ನು ಹೊಂದಿದ್ದ ರಾವಣಿಯು ಸುಂದರವಾದ ಅಗ್ರಭಾಗಗಳುಳ್ಳ, ಚಿನ್ನದ ಗರಿ ಕಟ್ಟಿದ, ವಿಷಸರ್ಪದಂತೆ ಇದ್ದ ಮೂರು ಬಾಣಗಳನ್ನು ಹನುಮಂತನ ತಲೆಗೆ ಹೊಡೆದನು. ॥14॥

ಮೂಲಮ್ - 15

ಸ ತೈಃ ಶರೈರ್ಮೂಧ್ನಿ ಸಮಂ ನಿಪಾತಿತೈಃ
ಕ್ಷರನ್ನ ಸೃಗ್ದಿಗ್ಧವಿವೃತ್ತ ಲೋಚನಃ ।
ನವೋದಿತಾದಿತ್ಯನಿಭಃ ಶರಾಂಶುಮಾನ್
ವ್ಯರೋಚತಾದಿತ್ಯ ಇವಾಂಶುಮಾಲಿಕಃ ॥

ಅನುವಾದ

ಆ ಮೂರು ಬಾಣಗಳು ಏಕಕಾಲದಲ್ಲಿ ಮಾರುತಿಯ ತಲೆಯನ್ನು ಹೊಕ್ಕುವು. ರಕ್ತಧಾರೆಯಿಂದ ತೊಯ್ದುಹೋದ ಕಣ್ಣುಗಳಿಂದ ದಿಟ್ಟಿಸುತ್ತಿದ್ದನು. ಆಗ ತಾನೇ ಹುಟ್ಟಿದ ಸೂರ್ಯನಂತಿದ್ದ ಹನುಮಂತನು ತಲೆಯಲ್ಲಿ ಬಾಣರೂಪವಾದ ಕಿರಣಗಳನ್ನು ಧರಿಸಿದ ಅಂಶುಮಾಲಿ ಸೂರ್ಯನಂತೆ ಪ್ರಕಾಶಿಸಿದನು.॥15॥

ಮೂಲಮ್ - 16

ತತಃ ಸ ಪಿಂಗಾಧಿಪಮಂತ್ರಿಸತ್ತಮಃ
ಸಮೀಕ್ಷ್ಯ ತಂ ರಾಜವರಾತ್ಮಜಂ ರಣೇ ।
ಉದಗ್ರಚಿತ್ರಾಯುಧಚಿತ್ರಕಾರ್ಮುಕಂ
ಜಹರ್ಷ ಚಾಪೂರ್ಯತ ಚಾಹವೋನ್ಮುಖಃ ॥

ಅನುವಾದ

ವಾನರಾಧಿಪತಿಯಾದ ಸುಗ್ರೀವನ ಅಮಾತ್ಯ ಶ್ರೇಷ್ಠನಾದ ಹನುಮಂತನು - ಚಿತ್ರವಾದ ಆಯುಧಗಳನ್ನೂ, ವಿಚಿತ್ರವಾದ ಧನುಸ್ಸನ್ನು ಧರಿಸಿದ್ದ, ರಾಜಶ್ರೇಷ್ಠನಾದ ರಾವಣನ ಮಗನನ್ನು ನೋಡಿ ಸಂತೋಷಗೊಂಡು ಉಬ್ಬಿಹೋಗಿ ಅವನೊಡನೆ ಯುದ್ಧಕ್ಕೆ ಸನ್ನದ್ಧನಾದನು.॥16॥

ಮೂಲಮ್ - 17

ಸ ಮಂದರಾಗ್ರಸ್ಥ ಇವಾಂಶುಮಾಲಿಕೋ
ವಿವೃದ್ಧ ಕೋಪೋ ಬಲವೀರ್ಯಸಂಯುತಃ ।
ಕುಮಾರಮಕ್ಷಂ ಸಬಲಂ ಸವಾಹನಂ
ದದಾಹ ನೇತ್ರಾಗ್ನಿಮರೀಚಿಭಿಸ್ತದಾ ॥

ಅನುವಾದ

ಬಲವೀರ್ಯಗಳಿಂದ ಸಂಪನ್ನನಾಗಿದ್ದ ಮಂದರ ಪರ್ವತದ ತುದಿಗೆ ಬಂದ ಮಧ್ಯಾಹ್ನದ ಸೂರ್ಯನಂತಿದ್ದ, ವೃದ್ಧಿಗೊಂಡ ಕೋಪದಿಂದ ಧಗ-ಧಗಿಸುತ್ತಿದ್ದ ಹನುಮಂತನು ಕಣ್ಣುಗಳಿಂದ ಹುಟ್ಟಿದ ಅಗ್ನಿ-ಜ್ವಾಲೆಗಳಿಂದ, ಬಲ-ವಾಹನಗಳಿಂದ ಯುಕ್ತನಾಗಿದ್ದ ಅಕ್ಷಕುಮಾರನನ್ನು ಸುಟ್ಟು ಬಿಡುವನೋ ಎಂಬಂತೆ ನೋಡುತ್ತಿದ್ದನು.॥17॥

ಮೂಲಮ್ - 18

ತತಃ ಸ ಬಾಣಾಸನಚಿತ್ರಕಾರ್ಮುಕಃ
ಶರಪ್ರವರ್ಷೋ ಯುಧಿ ರಾಕ್ಷಸಾಂಬುದಃ ।
ಶರಾನ್ ಮುಮೋಚಾಶು ಹರೀಶ್ವರಾಚಲೇ
ಬಲಾಹಕೋ ವೃಷ್ಟಿಮಿವಾಚಲೋತ್ತಮೇ ॥

ಅನುವಾದ

ಅಕ್ಷಕುಮಾರನ ವಿಚಿತ್ರವಾದ ಧನುಸ್ಸು ಕಾಮನಬಿಲ್ಲಿನ ರೂಪದಲ್ಲಿತ್ತು. ಬಾಣಗಳೇ ಮಳೆಯರೂಪದಲ್ಲಿದ್ದವು. ರಾಕ್ಷಸನು ಮೇಘದಂತಿದ್ದು, ಮೇಘವು ಉನ್ನತವಾದ ಪರ್ವತದ ಮೇಲೆ ಮಳೆಗರೆಯುವಂತೆ, ಹನುಮಂತ ನೆಂಬ ಪರ್ವತದ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದನು.॥18॥

ಮೂಲಮ್ - 19

ತತಃ ಕಪಿಸ್ತಂ ರಣಚಂಡವಿಕ್ರಮಂ
ವಿವೃದ್ಧತೇಜೋಬಲವೀರ್ಯಸಂಯುತಮ್ ।
ಕುಮಾರಮಕ್ಷಂ ಪ್ರಸಮೀಕ್ಷ್ಯ ಸಂಯುಗೇ
ನನಾದ ಹರ್ಷಾದ್ಘನತುಲ್ಯನಿಃಸ್ವನಃ ॥

ಅನುವಾದ

ಮೇಘದಂತೆ ಮಹಾಧ್ವನಿಯುಳ್ಳ ಹನುಮಂತನು - ರಣಚಂಡ ವಿಕ್ರಮಿಯಾದ, ಹೆಚ್ಚಾದ ತೇಜೋ-ಬಲ ಪರಾಕ್ರಮದಿಂದ ಕೂಡಿದ, ಬಾಣಗಳಿಂದ ಸಂಪನ್ನನಾಗಿದ್ದ, ಅಕ್ಷಕುಮಾರನನ್ನು ನೋಡಿ ಹರ್ಷಾತಿರೇಕದಿಂದ ಸಿಂಹನಾದ ಮಾಡಿದನು.॥19॥

ಮೂಲಮ್ - 20

ಸ ಬಾಲಭಾವಾದ್ಯುಧಿ ವೀರ್ಯದರ್ಪಿತಃ
ಪ್ರವೃದ್ಧಮನ್ಯುಃ ಕ್ಷತಜೋಪಮೇಕ್ಷಣಃ ।
ಸಮಾಸಸಾದಾಪ್ರತಿಮಂ ಕಪಿಂ ರಣೇ
ಗಜೋ ಮಹಾಕೂಪಮಿವಾವೃತಂ ತೃಣೈಃ ॥

ಅನುವಾದ

ಆ ಅಕ್ಷಕುಮಾರನು ಮೂರ್ಖತನದಿಂದ ಯುದ್ಧದಲ್ಲಿ ತಾನೊಬ್ಬ ಮಹಾವೀರನೆಂದು ಗರ್ವಿಷ್ಠನಾಗಿದ್ದನು. ಅಧಿಕವಾದ ಕೋಪದಿಂದ ಕೆಂಪಾದ ಕಣ್ಣುಗಳನ್ನು ಹೊಂದಿದ್ದ ಅವನು - ಆನೆಯು ಹುಲ್ಲು ಮುಚ್ಚಿರುವ ಖೆಡ್ಡದಲ್ಲಿ ಬೀಳಲು ವೇಗವಾಗಿ ಧಾವಿಸುವಂತೆ - ಅಪ್ರತಿಮ ಪರಾಕ್ರಮಿಯಾದ ಹನುಮಂತನ ಬಳಿಗೆ ಯುದ್ಧಕ್ಕಾಗಿ ಧಾವಿಸಿದನು. (ಅನೇಕ ಸಾವಿರಾರು ರಾಕ್ಷಸರನ್ನು ಒಬ್ಬಂಟಿಗನಾಗಿ ಸಂಹರಿಸಿದ ಹನುಮಂತನ ಪರಾಕ್ರಮವನ್ನು ಗುರುತಿಸದೆ ಅವನನ್ನು ಎದುರಿಸಿದುದೇ ಮೂರ್ಖತನವು.)॥20॥

ಮೂಲಮ್ - 21

ಸ ತೇನ ಬಾಣೈಃ ಪ್ರಸಭಂ ನಿಪಾತಿತೈ
ಶ್ಚಕಾರ ನಾದಂ ಘನನಾದನಿಃಸ್ವನಃ ।
ಸಮುತ್ಪಪಾತಾಶು ನಭಃ ಸ ಮಾರುತಿಃ
ಭುಜೋರುವಿಕ್ಷೇಪಣಘೋರದರ್ಶನಃ ॥

ಅನುವಾದ

ಆ ಅಕ್ಷಕುಮಾರನ ಬಾಣಗಳು ವೇಗವಾಗಿ ತನ್ನ ಮೇಲೆ ಬೀಳುತ್ತಿರುವಾಗ ಮಾರುತಿಯು ಮೇಘದಂತೆ ಭಾರೀ ಗರ್ಜಿಸಿದನು. ಬಳಿಕ ಭುಜಗಳನ್ನು, ತೊಡೆಗಳನ್ನು ತಟ್ಟಿಕೊಂಡು, ಭಯಂಕರ ಆಕಾರದಿಂದ ಆಕಾಶದಲ್ಲಿ ಅತೀ ಎತ್ತರಕ್ಕೆ ನೆಗೆದನು.॥21॥

ಮೂಲಮ್ - 22

ಸಮುತ್ಪತಂತಂ ಸಮಭಿದ್ರವದ್ಬಲೀ
ಸ ರಾಕ್ಷಸಾನಾಂ ಪ್ರವರಃ ಪ್ರತಾಪವಾನ್ ।
ರಥೀ ರಥಿಶ್ರೇಷ್ಠ ತಮಃ ಕಿರನ್ ಶರೈಃ
ಪಯೋಧರಃ ಶೈಲಮಿವಾಶ್ಮವೃಷ್ಟಿಭಿಃ ॥

ಅನುವಾದ

ಹೆಚ್ಚಿನ ಬಲಿಷ್ಠನೂ, ರಾಕ್ಷಸರಲ್ಲಿ ಶ್ರೇಷ್ಠನೂ, ಪ್ರತಾಪಶಾಲಿಯೂ, ರಥದಲ್ಲಿ ಅಧಿಷ್ಠಿತನಾಗಿದ್ದ. ರಥಿಕರಲ್ಲಿ ದಿಟ್ಟನಾದ ಆ ಅಕ್ಷಕುಮಾರನು-ಕಾರ್ಮುಗಿಲು ಪರ್ವತದ ಮೇಲೆ ಆಲಿಕಲ್ಲಿನ ಮಳೆಗರೆಯುವಂತೆ, ಆಕಾಶಕ್ಕೆ ಎಗರಿದ ಹನುಮಂತನನ್ನು ಬಾಣಗಳ ಮಳೆಯಿಂದ ಮುಚ್ಚುತ್ತಾ ಹಿಂಬಾಲಿಸಿದನು.॥22॥

ಮೂಲಮ್ - 23

ಸ ತಾನ್ ಶರಾಂಸ್ತಸ್ಯ ವಿಮೋಕ್ಷಯನ್ ಕಪಿಃ
ಚಚಾರ ವೀರಃ ಪಥಿ ವಾಯುಸೇವಿತೇ ।
ಶರಾಂತರೇ ಮಾರುತವದ್ವಿನಿಷ್ಪತನ್
ಮನೋಜವಃ ಸಂಯತಿ ಚಂಡವಿಕ್ರಮಃ ॥

ಅನುವಾದ

ಮನೋವೇಗದಿಂದ ಸಂಚರಿಸುವವನೂ, ಯುದ್ಧದಲ್ಲಿ ಭಾರೀ ಪರಾಕ್ರಮವನ್ನು ತೋರುವವನೂ, ಮಹಾವೀರನೂ ಆದ ಪವನನಂದನನು ರಾಕ್ಷಸನು ಎಸೆದ ಬಾಣಗಳ ಮಧ್ಯದಲ್ಲಿ ವಾಯುವಿನಂತೆ, ಅತಿಲಾಘವದಿಂದ ವೇಗವಾಗಿ ನುಸುಳುತ್ತಾ ಅವನ ಎಲ್ಲ ಬಾಣಗಳನ್ನು ವ್ಯರ್ಥಗೊಳಿಸಿದನು.॥23॥

ಮೂಲಮ್ - 24

ತಮಾತ್ತಬಾಣಾಸನಮಾಹವೋನ್ಮುಖಂ
ಖಮಾಸ್ತೃಣಂತಂ ವಿವಿಧೈಃ ಶರೋತ್ತಮೈಃ ।
ಅವೈಕ್ಷತಾಕ್ಷಂ ಬಹುಮಾನಚಕ್ಷುಷಾ
ಜಗಾಮ ಚಿಂತಾಂ ಚ ಸ ಮಾರುತಾತ್ಮಜಃ ॥

ಅನುವಾದ

ಯುದ್ಧೋತ್ಸುಕನಾಗಿ ಧನುಸ್ಸನ್ನು ಹಿಡಿದು ನಾನಾ ವಿಧವಾದ ತೀಕ್ಷ್ಣಬಾಣಗಳಿಂದ ಆಕಾಶವನ್ನೇ ಮುಚ್ಚುತ್ತಿದ್ದ ಅಕ್ಷಕುಮಾರನನ್ನು ಹನುಮಂತನು ಆದರ ಭಾವದಿಂದ ನೋಡಿ, ‘‘ಬಾಲಕನಾಗಿದ್ದರೂ ಇಂತಹಪರಾಕ್ರಮವನ್ನು ತೋರುವ ಇವನನ್ನು ಹೇಗೆ ವಧಿಸಲಿ?’’ ಎಂದು ಕ್ಷಣಕಾಲ ಚಿಂತಿಸಿದನು.॥24॥

ಮೂಲಮ್ - 25

ತತಃ ಶರೈರ್ಭಿನ್ನಭುಜಾಂತರಃ ಕಪಿಃ
ಕುಮಾರವೀರ್ಯೇಣ ಮಹಾತ್ಮನಾ ನದನ್ ।
ಮಹಾಭುಜಃ ಕರ್ಮವಿಶೇಷತತ್ತ್ವವಿತ್
ವಿಚಿಂತಯಾಮಾಸ ರಣೇ ಪರಾಕ್ರಮಮ್ ॥

ಅನುವಾದ

ದೊಡ್ಡ ವೀರನಾದ ಅಕ್ಷಕುಮಾರನ ನಿಶಿತವಾದ ಬಾಣಗಳಿಂದ ಮಹಾಭುಜನಾದ ಕಪಿವರನ ವಕ್ಷಃಸ್ಥಳವು ಗಾಯಗೊಂಡಿತು. ಆಗ ಸಮಯ ಸ್ಫೂರ್ತಿಯಿಂದ ಕರ್ತವ್ಯವನ್ನು ನಿಶ್ಚಯಿಸಿಕೊಂಡ ಮಾರುತಿಯು ಗಟ್ಟಿಯಾಗಿ ಗರ್ಜನೆ ಮಾಡುತ್ತಾ ಆ ರಾಕ್ಷಸನ ಯುದ್ಧಪಟುತ್ವದ ಬಗ್ಗೆ ಪುನಃ ಆಲೋಚಿಸತೊಡಗಿದನು.॥25॥

ಮೂಲಮ್ - 26

ಆಬಾಲವದ್ಬಾಲದಿವಾಕರಪ್ರಭಃ
ಕರೋತ್ಯಯಂ ಕರ್ಮ ಮಹನ್ಮಹಾಬಲಃ ।
ನ ಚಾಸ್ಯ ಸರ್ವಾಹವಕರ್ಮಶೋಭಿನಃ
ಪ್ರಮಾಪಣೇ ಮೇ ಮತಿರತ್ರ ಜಾಯತೇ ॥

ಅನುವಾದ

‘‘ಬಾಲಸೂರ್ಯನಂತೆ ಮಹಾ ತೇಜಸ್ಸಿನಿಂದ ಬೆಳಗುತ್ತಿರುವ, ಮಹಾಬಲನಾದ ಈ ರಾಜಕುಮಾರನು ಪ್ರೌಢನಂತೆ ಮಹಾ ಸಾಹಸ ಕಾರ್ಯವನ್ನೇ ಮಾಡುತ್ತಿರುವನು. ಸಮಸ್ತವಾದ ಯುದ್ಧ ಪ್ರಕ್ರಿಯೆಗಳನ್ನು ತಿಳಿದಿರುವ ಇವನನ್ನು ಕೊಲ್ಲಲು ನನಗೆ ಮನಸ್ಸೇ ಬರುತ್ತಿಲ್ಲ.॥26॥

ಮೂಲಮ್ - 27

ಅಯಂ ಮಹಾತ್ಮಾ ಚ ಮಹಾಂಶ್ಚ ವೀರ್ಯತಃ
ಸಮಾಹಿತಶ್ಚಾತಿಸಹಶ್ಚ ಸಂಯುಗೇ ।
ಅಸಂಶಯಂ ಕರ್ಮಗುಣೋದಯಾದಯಂ
ಸನಾಗಯಕ್ಷೈರ್ಮುನಿಭಿಶ್ಚ ಪೂಜಿತಃ ॥

ಅನುವಾದ

ಇವನು ಮಹಾವೀರನೂ, ಏಕಾಗ್ರಚಿತ್ತನೂ, ಯುದ್ಧದಲ್ಲಿ ಇದಿರಾಳಿಯ ಪ್ರಹಾರವನ್ನು ಸಹಿಸಿಕೊಳ್ಳುವ ಸಾಮರ್ಥ್ಯವುಳ್ಳವನೂ ಆಗಿದ್ದಾನೆ. ಬಾಣಗಳ ಆದಾನ-ಸಂಧಾನ-ವಿಮೋಕ್ಷಣಾದಿಗಳಲ್ಲಿ ಮಹಾಚತುರನಾಗಿರುವ ಇವನು ನಿಃಸಂಶಯವಾಗಿ ನಾಗ-ಯಕ್ಷ-ಮುನಿಗಳ ಗೌರವಕ್ಕೂ ಪಾತ್ರನಾಗಿದ್ದಾನೆ.॥27॥

ಮೂಲಮ್ - 28

ಪರಾಕ್ರಮೋತ್ಸಾಹವಿವೃದ್ಧಮಾನಸಃ
ಸಮೀಕ್ಷತೇ ಮಾಂ ಪ್ರಮುಖಾಗತಃ ಸ್ಥಿತಃ ।
ಪರಾಕ್ರಮೋ ಹ್ಯಸ್ಯ ಮನಾಂಸಿ ಕಂಪಯೇತ್
ಸುರಾಸುರಾಣಾಮಪಿ ಶೀಘ್ರಗಾಮಿನಃ ॥

ಅನುವಾದ

ಪರಾಕ್ರಮದಿಂದಲೂ, ಉತ್ಸಾಹದಿಂದಲೂ, ಉತ್ತೇಜಿತವಾದ ಮನಸ್ಸಿನಿಂದ ಕೂಡಿರುವ ಇವನು ನನ್ನೆದುರಿಗೆ ನಿಂತು ನನ್ನನ್ನೇ ತೀಕ್ಷ್ಣ ದೃಷ್ಟಿಯಿಂದ ನೋಡುತ್ತಿರುವನು. ಬಾಣಗಳನ್ನು ಶೀಘ್ರವಾಗಿ ಬಿಡುವುದರಲ್ಲಿ ನಿಪುಣನಾದ ಇವನ ಪರಾಕ್ರಮವು ದೇವಾಸುರರ ಮನಸ್ಸನ್ನೂ ನಡುಗಿಸುವುದಾಗಿದೆ.॥28॥

ಮೂಲಮ್ - 29

ನ ಖಲ್ವಯಂ ನಾಭಿಭವೇದುಪೇಕ್ಷಿತಃ
ಪರಾಕ್ರಮೋ ಹ್ಯಸ್ಯ ರಣೇ ವಿವರ್ಧತೇ ।
ಪ್ರಮಾಪಣಂ ತ್ವೇವ ಮಮಾಸ್ಯ ರೋಚತೇ
ನ ವರ್ಧಮಾನೋಗ್ನಿ ರುಪೇಕ್ಷಿತುಂ ಕ್ಷಮಃ ॥

ಅನುವಾದ

ಹೀಗಿದ್ದರೂ, ನಾನಿವನನ್ನು ಬಾಲಕನೆಂದು ಉಪೇಕ್ಷಿಸಬಾರದು. ಉಪೇಕ್ಷಿಸುವುದರಿಂದ ಯುದ್ಧದಲ್ಲಿ ಇವನ ಕೈ ಮೇಲಾದೀತು. ಮೇಲಾಗಿ ಯುದ್ಧದಲ್ಲಿ ಇವನ ಪರಾಕ್ರಮವು ಕ್ಷಣ-ಕ್ಷಣಕ್ಕೂ ಹೆಚ್ಚುತ್ತಲೇ ಇದೆ. ಸುತ್ತಲೂ ಹರಡುತ್ತಿರುವ ಬೆಂಕಿಯಂತಿರುವ ಇವನನ್ನು ಉಪೇಕ್ಷಿಸಬಾರದು. ಆದುದರಿಂದ ಮನಸ್ಸಿಲ್ಲದಿದ್ದರೂ ಈ ಸಮಯದಲ್ಲಿ ಇವನನ್ನು ವಧಿಸುವುದೇ ಸೂಕ್ತವಾಗಿದೆ.’’ ॥29॥

ಮೂಲಮ್ - 30

ಇತಿ ಪ್ರವೇಗಂ ತು ಪರಸ್ಯ ತರ್ಕಯನ್
ಸ್ವಕರ್ಮಯೋಗಂ ಚ ವಿಧಾಯ ವೀರ್ಯವಾನ್ ।
ಚಕಾರ ವೇಗಂ ತು ಮಹಾಬಲಸ್ತದಾ
ಮತಿಂ ಚ ಚಕ್ರೇಸ್ಯ ವಧೇ ಮಹಾಕಪಿಃ ॥

ಅನುವಾದ

ಈ ವಿಧವಾಗಿ ಮಹಾಬಲಶಾಲಿಯಾದ ಹನುಮಂತನು ಶತ್ರುವಿನಲ್ಲಿರುವ ಸಾಮರ್ಥ್ಯವನ್ನು ತರ್ಕಿಸುತ್ತಾ, ತಾನು ಮಾಡಬೇಕಾದ ಕಾರ್ಯವನ್ನು ನಿರ್ಧರಿಸಿಕೊಂಡು, ಅಕ್ಷನನ್ನು ಸಂಹರಿಸುವುದೇ ಯೋಗ್ಯವೆಂದು ನಿಶ್ಚಯಿಸಿ ವೇಗವಾಗಿ ಮುಂದಕ್ಕೆ ನುಗ್ಗಿದನು.॥30॥

ಮೂಲಮ್ - 31

ಸ ತಸ್ಯ ತಾನಷ್ಟ ಹಯಾನ್ ಮಹಾಜವಾನ್
ಸಮಾಹಿತಾನ್ ಭಾರಸಹಾನ್ ನಿವರ್ತನೇ ।
ಜಘಾನ ವೀರಃ ಪಥಿ ವಾಯುಸೇವಿತೇ
ತಲಪ್ರಹಾರೈಃ ಪವನಾತ್ಮಜಃ ಕಪಿಃ ॥

ಅನುವಾದ

ಮಹಾವೀರನೂ, ವಾಯುಸುತನೂ ಆದ ಆ ವಾನರೋತ್ತಮನು - ಅನೇಕ ಮಂಡಲ ಸಂಚಲನಗಳಲ್ಲಿ ಸುಶಿಕ್ಷಿತವಾಗಿದ್ದ, ಮಹಾಭಾರವನ್ನು ಹೊತ್ತು ನಡೆಯಲು ಸಮರ್ಥನಾಗಿದ್ದ, ಅಕ್ಷಕುಮಾರನ ರಥಕ್ಕೆ ಹೂಡಿದ್ದ ಶ್ರೇಷ್ಠವಾದ ಎಂಟು ಕುದುರೆಗಳನ್ನು ಆಗಸದಲ್ಲೇ ಅಂಗೈ ಹೊಡೆತದಿಂದಲೇ ಕೊಂದುಹಾಕಿದನು.॥31॥

ಮೂಲಮ್ - 32

ತತಸ್ತಲೇನಾಭಿಹತೋ ಮಹಾರಥಃ
ಸ ತಸ್ಯ ಪಿಂಗಾಧಿಪಮಂತ್ರಿನಿರ್ಜಿತಃ ।
ಪ್ರಭಗ್ನನೀಡಃ ಪರಿಮುಕ್ತಕೂಬರಃ
ಪಪಾತ ಭೂಮೌ ಹತವಾಜಿರಂಬರಾತ್ ॥

ಅನುವಾದ

ಬಳಿಕ ಸುಗ್ರೀವನ ಸಚಿವನಾದ ಮರುತಾತ್ಮಜನ ಅಂಗೈ ಹೊಡೆತಕ್ಕೆ ರಾಕ್ಷಸನ ರಥವು ಪುಡಿ-ಪುಡಿಯಾಯಿತು. ರಥದ ಮೂತಿಯೂ ತಲೆಕೆಳಗಾಯಿತು. ಕುದುರೆಗಳೂ ಸತ್ತುಹೋದವು. ಆಕಾಶದಲ್ಲಿದ್ದ ಅಕ್ಷಕುಮಾರನು ಭೂಮಿಯ ಮೇಲೆ ಬಿದ್ದನು. ॥32॥

ಮೂಲಮ್ - 33

ಸ ತಂ ಪರಿತ್ಯಜ್ಯ ಮಹಾರಥೋ ರಥಂ
ಸಕಾರ್ಮುಕಃ ಖಡ್ಗಧರಃ ಖಮುತ್ಪತನ್ ।
ತಪೋಭಿಯೋಗಾದೃಷ್ಟಿರುಗ್ರವೀರ್ಯವಾನ್
ವಿಹಾಯ ದೇಹಂ ಮರುತಾಮಿವಾಲಯಮ್ ॥

ಅನುವಾದ

ಆಗ ಅವನು ನುಚ್ಚು-ನೂರಾಗಿದ್ದ ರಥವನ್ನು ತ್ಯಜಿಸಿ ಧನುರ್ಧರನಾಗಿ, ಕೈಯಲ್ಲಿ ಕತ್ತಿಯನ್ನು ಝಳಪಿಸುತ್ತಾ - ತಪಶ್ಶಕ್ತಿ ಸಂಪನ್ನನಾದ ಋಷಿಯು ದೇಹವನ್ನು ತ್ಯಜಿಸಿ ದೇವಲೋಕಕ್ಕೆ ಹೋಗುವಂತೆ ಅಂತರಿಕ್ಷಕ್ಕೆ ಹಾರಿದನು.॥33॥

ಮೂಲಮ್ - 34

ತತಃ ಕಪಿಸ್ತಂ ವಿಚರಂತಮಂಬರೇ
ಪತತ್ರಿರಾಜಾನಿಲಸಿದ್ಧ ಸೇವಿತೇ ।
ಸಮೇತ್ಯ ತಂ ಮಾರುತತುಲ್ಯವಿಕ್ರಮಃ
ಕ್ರಮೇಣ ಜಗ್ರಾಹ ಸ ಪಾದಯೋರ್ದೃಢಮ್ ॥

ಅನುವಾದ

ಪಕ್ಷಿಗಳ ರಾಜನಾದ ಗರುಡನಿಂದಲೂ, ವಾಯು ಹಾಗೂ ಸಿದ್ಧರಿಂದಲೂ ಸೇವಿತವಾದ ಆಕಾಶದಲ್ಲಿ ಸಂಚರಿಸುತ್ತಿದ್ದ ಅಕ್ಷಕುಮಾರನನ್ನು, ಪರಾಕ್ರಮಿಯಾದ ಹನುಮಂತನು ಹಿಂಬಾಲಿಸಿ ಅವನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡನು. ॥34॥

ಮೂಲಮ್ - 35

ಸ ತಂ ಸಮಾವಿಧ್ಯ ಸಹಸ್ರಶಃ ಕಪಿ
ರ್ಮಹೋರಗಂ ಗೃಹ್ಯ ಇವಾಂಡಜೇಶ್ವರಃ ।
ಮುಮೋಚ ವೇಗಾತ್ ಪಿತೃತುಲ್ಯವಿಕ್ರಮೋ
ಮಹೀತಲೇ ಸಂಯತಿ ವಾನರೋತ್ತಮಃ ॥

ಅನುವಾದ

ತನ್ನ ತಂದೆಯಾದ ವಾಯುದೇವರಂತೆ ಮಹಾಪರಾಕ್ರಮಶಾಲಿಯಾದ ಹನುಮಂತನು - ಗರುಡನು ಮಹಾಸರ್ಪವನ್ನು ಹಿಡಿದುಕೊಳ್ಳುವಂತೆ, ಆ ಅಕ್ಷಕುಮಾರನನ್ನು ಹಿಡಿದುಕೊಂಡು, ಸಾವಿರಾರು ಬಾರಿ ಗರ-ಗರನೆ ತಿರುಗಿಸಿ ವೇಗವಾಗಿ ನೆಲಕ್ಕೆ ಅಪ್ಪಳಿಸಿದನು.॥35॥

ಮೂಲಮ್ - 36

ಸ ಭಗ್ನಬಾಹೂರುಕಟೀಶಿರೋಧರಃ
ಕ್ಷರನ್ನ ಸೃಙ್ನಿರ್ಮಥಿತಾಸ್ಥಿಲೋಚನಃ ।
ಪ್ರಭಿನ್ನಸಂಧಿಃ ಪ್ರವಿಕೀರ್ಣಬಂಧನೋ
ಹತಃ ಕ್ಷಿತೌ ವಾಯುಸುತೇನ ರಾಕ್ಷಸಃ ॥ 36 ॥

ಅನುವಾದ

ಹನುಮಂತನ ಸಾಹಸಕರ್ಮದಿಂದ ಅಕ್ಷಕುಮಾರನ ತೋಳು-ತೊಡೆ-ಸೊಂಟ-ಕುತ್ತಿಗೆಗಳೆಲ್ಲವೂ ಜಜ್ಜಿಹೋದುವು. ಶರೀರದ ಎಲ್ಲ ಕಡೆಗಳಿಂದ ರಕ್ತವು ಹರಿಯತೊಡಗಿತು. ಮೂಳೆಗಳು ನುಚ್ಚುನೂರಾದವು. ಕಣ್ಣುಗುಡ್ಡೆಗಳು ಹೊರಚಾಚಿಕೊಂಡವು. ತೋಳು-ಕಾಲುಗಳಲ್ಲಿದ್ದ ಎಲ್ಲ ಕೀಲುಗಳೂ ಭಗ್ನವಾದುವು. ಹೀಗೆ ಅವನು ಪ್ರಾಣಗಳನ್ನು ಕಳಕೊಂಡು ನೆಲಕ್ಕೊರಗಿದನು. ॥36॥

ಮೂಲಮ್ - 37

ಮಹಾಕಪಿರ್ಭೂಮಿತಲೇ ನಿಪೀಡ್ಯ ತಂ
ಚಕಾರ ರಕ್ಷೋಧಿಪತೇರ್ಮಹದ್ಭಯಂ ।
ಮಹರ್ಷಿಭಿಶ್ಚಕ್ರಚರೈರ್ಮಹಾವ್ರತೈಃ
ಸಮೇತ್ಯ ಭೂತೈಶ್ಚ ಸಯಕ್ಷ ಪನ್ನಗೈಃ ।
ಸುರೈಶ್ಚ ಸೇಂದ್ರೈರ್ಭೃಶಜಾತವಿಸ್ಮಯೈ
ರ್ಹತೇ ಕುಮಾರೇ ಸ ಕಪಿರ್ನಿರೀಕ್ಷಿತಃ ॥ 37 ॥

ಅನುವಾದ

ಆ ವಾನರೋತ್ತಮನು-ಅಕ್ಷಕುಮಾರನು ನೆಲಕ್ಕೆ ಬಿದ್ದ ನಂತರವೂ ಚೆನ್ನಾಗಿ ತುಳಿದು ರಾಕ್ಷಸಾಧಿಪತಿಯಾದ ರಾವಣನಿಗೆ ಮಹಾ ಭಯವನ್ನುಂಟು ಮಾಡಿದನು. ಅಕ್ಷಕುಮಾರನನ್ನು ಸಂಹರಿಸಿದ ಹನುಮಂತನನ್ನು ಜ್ಯೋತಿಶ್ಚಕ್ರದಲ್ಲಿ ಸಂಚರಿಸುತ್ತಿರುವ, ವ್ರತನಿಯಮಗಳನ್ನು ಪಾಲಿಸುವ ಮಹರ್ಷಿಗಳೂ, ಯಕ್ಷರೂ, ನಾಗಗಳೂ, ಇತರ ಪ್ರಾಣಿಗಳೂ, ದೇವೇಂದ್ರನೇ ಮೊದಲುಗೊಂಡು ಎಲ್ಲ ದೇವತೆಗಳೂ ಹೆಚ್ಚಾದ ಅಚ್ಚರಿಯಿಂದ ಅಭಿಮಾನಪೂರ್ವಕವಾದ ದೃಷ್ಟಿಯಿಂದ ವೀಕ್ಷಿಸಿದರು.॥37॥

ಮೂಲಮ್ - 38

ನಿಹತ್ಯ ತಂ ವಜ್ರಿಸುತೋಪಮಂ ರಣೇ
ಕುಮಾರಮಕ್ಷಂ ಕ್ಷತಜೋಪಮೇಕ್ಷಣಮ್ ।
ತದೇವ ವೀರೋಭಿಜಗಾಮ ತೋರಣಂ
ಕೃತಕ್ಷಣಃ ಕಾಲ ಇವ ಪ್ರಜಾಕ್ಷಯೇ ॥ 38 ॥

ಅನುವಾದ

ಇಂದ್ರತನಯ ಜಯಂತನ ಕಾಂತಿಗೆ ಸಮಾನವಾಗಿ ರಾರಾಜಿಸುತ್ತಿದ್ದ ಅಕ್ಷಕುಮಾರನನ್ನು ರಕ್ತಾಕ್ಷನಾದ ವಾಯುನಂದನನು ಸಂಹರಿಸಿದ ಬಳಿಕ, ಪ್ರಳಯ ಕಾಲದಲ್ಲಿ ಸಮಯವನ್ನು ನಿರೀಕ್ಷಿಸುತ್ತಾ ಕುಳಿತಿರುವ ಯಮನಂತೆ ಹೊರಬಾಗಿಲಿಗೆ ಬಂದು ಹಿಂದಿನಂತೆಯೇ ಇನ್ನು ಯಾರು ಬರುವರು ಎಂದು ಎದುರು ನೋಡುತ್ತಾ ಕುಳಿತುಕೊಂಡನು.॥38॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಸಪ್ತಚತ್ವಾರಿಂಶಃ ಸರ್ಗಃ ॥ 47 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತೇಳನೆಯ ಸರ್ಗವು ಮುಗಿಯಿತು.