०४६ हनुमता पञ्चचमूनायकवधः

वाचनम्
ಭಾಗಸೂಚನಾ

ರಾವಣನ ಐದುಮಂದಿ ಸೇನಾಪತಿಗಳ ಸಂಹಾರ

ಮೂಲಮ್ - 1

ಹತಾನ್ ಮಂತ್ರಿಸುತಾನ್ ಬುದ್ಧ್ವಾ ವಾನರೇಣ ಮಹಾತ್ಮನಾ ।
ರಾವಣಃ ಸಂವೃತಾಕಾರಶ್ಚಕಾರ ಮತಿಮುತ್ತಮಾಮ್ ॥

ಅನುವಾದ

ಮಹಾತ್ಮನಾದ ವಾನರನು ಸೈನ್ಯಸಮೇತರಾದ ಅಮಾತ್ಯ ಪುತ್ರರನ್ನು ಸಂಹರಿಸಿದನೆಂಬ ವಾರ್ತೆಯನ್ನು ಕೇಳಿ ರಾವಣನ ಮನಸ್ಸಿನಲ್ಲಿ ಭಯವುಂಟಾಯಿತು. ಆದರೆ ಅದನ್ನು ಬಹಿರಂಗಪಡಿಸದೆ, ಉತ್ತಮವಾದ ಬುದ್ಧಿಯಿಂದ ಮುಂದೆ ಮಾಡಬೇಕಾದ ಕರ್ತವ್ಯದ ಬಗ್ಗೆ ಆಲೋಚಿಸಿದನು.॥1॥

ಮೂಲಮ್ - 2

ಸ ವಿರೂಪಾಕ್ಷಯೂಪಾಕ್ಷೌ ದುರ್ಧರಂ ಚೈವ ರಾಕ್ಷಸಮ್ ।
ಪ್ರಘಸಂ ಭಾಸಕರ್ಣಂ ಚ ಪಂಚ ಸೇನಾಗ್ರನಾಯಕಾನ್ ॥

ಮೂಲಮ್ - 3

ಸಂದಿದೇಶ ದಶಗ್ರೀವೋ ವೀರಾನ್ನಯವಿಶಾರದಾನ್ ।
ಹನುಮದ್ಗ್ರಹಣೇ ವ್ಯಗ್ರಾನ್ ವಾಯುವೇಗಸಮಾನ್ ಯುಧಿ ॥

ಅನುವಾದ

ಬಳಿಕ ವಿರೂಪಾಕ್ಷ, ಯೂಪಾಕ್ಷ, ದುರ್ದರ, ಪ್ರಘಸ, ಭಾಸಕರ್ಣ ಎಂಬ ಐದು ಪ್ರಮುಖ ಸೇನಾನಾಯಕರನ್ನು ಕರೆಸಿದನು. ಅವರೆಲ್ಲರೂ ಮಹಾವೀರರು, ರಣನೀತಿ ಕೋವಿದರೂ, ಮಾರುತಿಯನ್ನು ಬಂಧಿಸಲಿಕ್ಕಾಗಿ ಉತ್ಸಾಹಿಗಳೂ, ವಾಯುವೇಗದಿಂದ ಹೋರಾಡುವವರೂ ಆಗಿದ್ದರು. ಅವರಿಗೆ ದಶಕಂಠನು ಹನುಮಂತನಲ್ಲಿ ಯುದ್ಧಮಾಡಲಿಕ್ಕಾಗಿ ಆಜ್ಞಾಪಿಸುತ್ತಾ ಇಂತೆಂದನು. ॥2-3॥

ಮೂಲಮ್ - 4

ಯಾತ ಸೇನಾಗ್ರಗಾಃ ಸರ್ವೇ ಮಹಾಬಲಪರಿಗ್ರಹಾಃ ।
ಸವಾಜಿರಥಮಾತಂಗಾಃ ಸ ಕಪಿಃ ಶಾಸ್ಯತಾಮಿತಿ ॥

ಮೂಲಮ್ - 5

ಯತ್ತೈಶ್ಚ ಖಲು ಭಾವ್ಯಂ ಸ್ಯಾತ್ತಮಾಸಾದ್ಯ ವನಾಲಯಮ್ ।
ಕರ್ಮ ಚಾಪಿ ಸಮಾಧೇಯಂ ದೇಶಕಾಲಾವಿರೋಧಿತಮ್ ॥

ಅನುವಾದ

ಎಲೈ ಸೇನಾಪತಿಗಳೇ! ನೀವೆಲ್ಲರೂ ರಥಗಜತುರಗ ಪದಾತಿಗಳಿಂದೊಡಗೂಡಿದ ಮಹಾಸೈನ್ಯದೊಂದಿಗೆ ಹೋಗಿ, ಆ ಕಾಡು ಕಪಿಯನ್ನು ಬಂಧಿಸಿರಿ, ಎಂದು ರಾವಣನು ಅಪ್ಪಣೆ ಕೊಟ್ಟನು. ಆ ವಾನರನ ಬಳಿ ಹೆಚ್ಚಾದ ಜಾಗರೂಕರಾಗಿರಬೇಕು. ದೇಶ-ಕಾಲಕ್ಕನುಕುಲವಾಗಿ ವರ್ತಿಸಬೇಕೆಂದೂ ಎಚ್ಚರಿಸಿದನು.॥4-5॥

ಮೂಲಮ್ - 6

ನ ಹ್ಯಹಂ ತಂ ಕಪಿಂ ಮನ್ಯೇ ಕರ್ಮಣಾ ಪ್ರತಿತರ್ಕಯನ್ ।
ಸರ್ವಥಾ ತನ್ಮಹದ್ಭೂತಂ ಮಹಾಬಲಪರಿಗ್ರಹಮ್ ॥

ಅನುವಾದ

ಯುದ್ಧಸಾಮರ್ಥ್ಯವನ್ನು ನೋಡಿದಾಗ ಅದೊಂದು ಸಾಮಾನ್ಯಕಪಿ ಎಂದು ಅನಿಸುವುದಿಲ್ಲ. ಅವನು ಮಹಾಬಲ ಪರಾಕ್ರಮಿಯಾದ ಒಂದು ಪ್ರಾಣಿಯೇ ಆಗಿದ್ದಾನೆ ಎಂದೆನಿಸುತ್ತದೆ.॥6॥

ಮೂಲಮ್ - 7

ವಾನರೋಯಮಿತಿ ಜ್ಞಾತ್ವಾ ನ ಹಿ ಶುಧ್ಯತಿ ಮೇ ಮನಃ ।
ನೈವಾಹಂ ತಂ ಕಪಿಂ ಮನ್ಯೇ ಯಥೇಯಂ ಪ್ರಸ್ತುತಾ ಕಥಾ ॥

ಅನುವಾದ

ಅದು ಕಪಿಯೆಂದು ತಿಳಿದಮೇಲಂತೂ ನನ್ನ ಮನಸ್ಸು ಹೆಚ್ಚು ಕಳವಳಗೊಂಡಿದೆ. ನನಗೆ ತಿಳಿದಿರುವ ವಿವರಣೆಯಂತೆ ಅದು ಸಾಮಾನ್ಯ ಕಪಿಯಿರಲಾರದು.॥7॥

ಮೂಲಮ್ - 8

ಭವೇದಿಂದ್ರೇಣ ವಾ ಸೃಷ್ಟಮಸ್ಮದರ್ಥಂ ತಪೋಬಲಾತ್ ।
ಸ ನಾಗಯಕ್ಷಗಂಧರ್ವಾ ದೇವಾಸುರಮಹರ್ಷಯಃ ॥

ಮೂಲಮ್ - 9

ಯುಷ್ಮಾಭಿಃ ಸಹಿತೈಃ ಸರ್ವೈರ್ಮಯಾ ಸಹ ವಿನಿರ್ಜಿತಾಃ ।
ತೈರವಶ್ಯಂ ವಿಧಾತವ್ಯಂ ವ್ಯಲೀಕಂ ಕಿಂಚಿದೇವ ನಃ ॥

ಅನುವಾದ

ದೇವೇಂದ್ರನೇನಾದರೂ ತನ್ನ ತಪೋಬಲದಿಂದ ಇಂತಹ ಮಹಾಪ್ರಾಣಿಯೊಂದನ್ನು ಸೃಷ್ಟಿಸಿ ನನ್ನ ವಿನಾಶಕ್ಕಾಗಿ ಕಳಿಸಿರಬಹುದೇ? ಹಿಂದೆ ನಾನು ನಿಮ್ಮೆಲ್ಲರ ಜೊತೆಗೂಡಿ ಅನೇಕ ಸಲ ದೇವತೆಗಳೊಡನೆ ಯುದ್ಧಕ್ಕೆ ಹೋಗಿ, ಗಂಧರ್ವ, ಯಕ್ಷ, ನಾಗ, ದೇವಾಸುರ, ಮಹರ್ಷಿಗಳು ಮುಂತಾದವರನ್ನು ಪರಾಜಯಗೊಳಿಸಿರುವೆನು. ಈಗ ಅವರೆಲ್ಲರೂ ಸೇರಿ ನನಗೆ ಅಹಿತವಾಗುವಂತಹ ಕಾರ್ಯವನ್ನು ಅವಶ್ಯವಾಗಿ ಮಾಡಿರಬೇಕು.॥8-9॥

ಮೂಲಮ್ - 10

ಯಾತ ಸೇನಾಗ್ರಗಾಸ್ಸರ್ವೇ ಮಹಾಬಲಪರಿಗ್ರಹಾಃ ।
ಸ ವಾಜಿರಥಮಾತಂಗಾಃ ಸ ಕಪಿಶ್ಶಾಸ್ಯತಾಮಿತಿ ॥

ಅನುವಾದ

ಅವರೇ ಈ ಕಪಿಯನ್ನು ಕಳಿಸಿರಬೇಕು. ಇದರಲ್ಲಿ ಸಂಶಯವೇ ಇಲ್ಲ. ಆದ್ದರಿಂದ ನೀವೆಲ್ಲರೂ ಈಗಲೇ ಹೋಗಿ ಆ ಕಪಿಯನ್ನು ಬಲಪ್ರಯೋಗದಿಂದ ಬಂಧಿಸಿರಿ.॥10॥

ಮೂಲಮ್ - 11

ತ ದೇವ ನಾತ್ರ ಸಂದೇಹಃ ಪ್ರಸಹ್ಯ ಪರಿಗೃಹ್ಯತಾಮ್ ।
ನಾವಮಾನ್ಯೋ ಭವದ್ಭಿಶ್ಚ ಹರಿರ್ಧೀರಪರಾಕ್ರಮಃ ॥

ಅನುವಾದ

ಇವನನ್ನು ಆ ಇಂದ್ರನೇ ಕಳಿಸಿದುದರಲ್ಲಿ ಸಂದೇಹವೇ ಇಲ್ಲ. ಹೇಗಾದರೂ ಇವನನ್ನ ಬಂಧಿಸಿರಿ. ಈ ವಾನರನು ಧೀರನೂ, ಪರಾಕ್ರಮಿಯೂ ಆಗಿರುವನು. ಇವನನ್ನು ಎಷ್ಟು ಮಾತ್ರಕ್ಕೂ ಸಾಮಾನ್ಯನೆಂದು ಪರಿಗಣಿಸಬಾರದು.॥11॥

ಮೂಲಮ್ - 12

ದೃಷ್ಟಾ ಹಿ ಹರಯಃ ಪೂರ್ವಂ ಮಯಾ ವಿಪುಲವಿಕ್ರಮಾಃ ।
ವಾಲೀ ಚ ಸಹಸುಗ್ರೀವೋ ಜಾಂಬವಾಂಶ್ಚ ಮಹಾಬಲಃ ॥

ಮೂಲಮ್ - 13

ನೀಲಃ ಸೇನಾಪತಿಶ್ಚೈವ ಯೇ ಚಾನ್ಯೇ ದ್ವಿವಿದಾದಯಃ ।
ನೈವಂ ತೇಷಾಂ ಗತಿರ್ಭೀಮಾ ನ ತೇಜೋ ನ ಪರಾಕ್ರಮಃ ॥

ಮೂಲಮ್ - 14

ನ ಮತಿರ್ನ ಬಲೋತ್ಸಾಹೌ ನ ರೂಪಪರಿಕಲ್ಪನಮ್ ।
ಮಹತ್ಸತ್ತ್ವಮಿದಂ ಜ್ಞೇಯಂ ಕಪಿರೂಪಂ ವ್ಯವಸ್ಥಿತಮ್ ॥

ಅನುವಾದ

ನಾನು ಇದುವರೆಗೆ ಅತುಲಬಲ ಪರಾಕ್ರಮಿಗಳಾದ ಅನೇಕ ವಾನರರನ್ನು ನೋಡಿರುವೆನು. ವಾಲೀ, ಸುಗ್ರೀವ, ಮಹಾಬಲಶಾಲಿಯಾದ ಜಾಂಬವಂತ, ಸೇನಾಪತಿಯಾದ ನೀಲ, ದ್ವಿವಿದ ಮೊದಲಾದವರೆಲ್ಲರನ್ನೂ ನೋಡಿದ್ದೇನೆ. ಅವರಲ್ಲಿ ಇಂತಹ ಭಯಂಕರವಾದ ಗಮನ, ತೇಜಸ್ಸು, ಪರಾಕ್ರಮ, ಬುದ್ಧಿಬಲ, ಉತ್ಸಾಹಶಕ್ತಿ, ಕಾಮರೂಪ ಧಾರಣಶಕ್ತಿ ನನಗೆ ಕಂಡುಬಂದಿಲ್ಲ. ಇವನು ವಾನರ ರೂಪದಿಂದಿರುವ ಒಂದು ಮಹಾಪ್ರಾಣಿಯೆಂದೇ ಭಾವಿಸುತ್ತೇನೆ.॥12-14॥

ಮೂಲಮ್ - 15

ಪ್ರಯತ್ನಂ ಮಹದಾಸ್ಥಾಯ ಕ್ರಿಯತಾಮಸ್ಯ ನಿಗ್ರಹಃ ।
ಕಾಮಂ ಲೋಕಾಸ್ತ್ರಯಃ ಸೇಂದ್ರಾಃ ಸಸುರಾಸುರಮಾನವಾಃ ॥

ಮೂಲಮ್ - 16

ಭವತಾಮಗ್ರತಃ ಸ್ಥಾತುಂ ನ ಪರ್ಯಾಪ್ತಾ ರಣಾಜಿರೇ ।
ತಥಾಪಿ ತು ನಯಜ್ಞೇನ ಜಯಮಾಕಾಂಕ್ಷತಾ ರಣೇ ।
ಆತ್ಮಾ ರಕ್ಷ್ಯಃ ಪ್ರಯತ್ನೇನ ಯುದ್ಧಸಿದ್ಧಿರ್ಹಿ ಚಂಚಲಾ ॥

ಅನುವಾದ

ಮಹಾಪ್ರಯತ್ನದಿಂದ ನೀವು ಈ ಕಪಿಯನ್ನು ಬಂಧಿಸಿ ತನ್ನಿರಿ. ಇಂದ್ರನಾಗಲೀ, ಸುರಾ-ಸುರರಾಗಲೀ, ಮಾನವರಾಗಲೀ, ಮೂರು ಲೋಕಗಳೇ ಆಗಲೀ, ಯುದ್ಧದಲ್ಲಿ ನಿಮ್ಮೆದುರಿಗೆ ನಿಲ್ಲಲು ಸಮರ್ಥರಲ್ಲ. ಹಾಗಿದ್ದರೂ ಯುದ್ಧ ನೀತಿಯನ್ನು ತಿಳಿದವನು ಹಾಗೂ ವಿಜಯಾಕಾಂಕ್ಷಿಯಾದವನು ಪ್ರಯತ್ನ ಪೂರ್ವಕವಾಗಿ ತನ್ನನ್ನು ಕಾಪಾಡಿಕೊಳ್ಳಬೇಕು. ‘‘ಯುದ್ಧ ಸಿದ್ಧಿರ್ಹಿ ಚಂಚಲಾ’’ ಯುದ್ಧದಲ್ಲಿ ಜಯವು ಅನಿಶ್ಚಿತವಲ್ಲವೇ?॥15-16॥

ಮೂಲಮ್ - 17

ತೇ ಸ್ವಾಮಿವಚನಂ ಸರ್ವೇ ಪ್ರತಿಗೃಹ್ಯ ಮಹೌಜಸಃ ।
ಸಮುತ್ಪೇತುರ್ಮಹಾವೇಗಾ ಹುತಾಶಸಮತೇಜಸಃ ॥

ಅನುವಾದ

ಹೆಚ್ಚಾದ ಬಲಪರಾಕ್ರಮಿಗಳಾದ ಆ ರಾಕ್ಷಸವೀರರೆಲ್ಲರೂ ತಮ್ಮ ಒಡೆಯನ ಅಪ್ಪಣೆಯನ್ನು ಪಡೆದು, ಅಗ್ನಿಯ ತೇಜಸ್ಸಿನಿಂದ ಮಹಾವೇಗವಾಗಿ ಮುಂದಕ್ಕೆ ಸಾಗಿದರು.॥17॥

ಮೂಲಮ್ - 18

ರಥೈರ್ಮತ್ತೈಶ್ಚ ಮಾತಂಗೈರ್ವಾಜಿಭಿಶ್ಚ ಮಹಾಜವೈಃ ।
ಶಸ್ತ್ರೈಶ್ಚ ವಿವಿಧೈಸ್ತೀಕ್ಷ್ಣೈಃ ಸರ್ವೈಶ್ಚೋಪಚಿತಾ ಬಲೈಃ ॥

ಅನುವಾದ

ಅವರು ರಥಗಳನ್ನು, ಮದಗಜಗಳನ್ನು, ವೇಗವಾಗಿ ಧಾವಿಸುವ ಕುದುರೆಗಳನ್ನು ಹತ್ತಿಕೊಂಡು ತೀಕ್ಷ್ಣವಾದ ವಿವಿಧವಾದ ಅಸ್ತ್ರಗಳನ್ನು ಧರಿಸಿಕೊಂಡು ಬಲಸಂಪನ್ನರಾಗಿ ಒಪ್ಪುತ್ತಿದ್ದರು.॥18॥

ಮೂಲಮ್ - 19

ತತಸ್ತು ದದೃಶುರ್ವೀರಾ ದೀಪ್ಯಮಾನಂ ಮಹಾಕಪಿಮ್ ।
ರಶ್ಮಿಮಂತಮಿವೋದ್ಯಂತಂ ಸ್ವತೇಜೋರಶ್ಮಿಮಾಲಿನಮ್ ॥

ಮೂಲಮ್ - 20

ತೋರಣಸ್ಥಂ ಮಹೋತ್ಸಾಹಂ ಮಹಾಸತ್ತ್ವಂ ಮಹಾಬಲಮ್ ।
ಮಹಾಮತಿಂ ಮಹಾವೇಗಂ ಮಹಾಕಾಯಂ ಮಹಾಭುಜಮ್ ॥

ಮೂಲಮ್ - 21

ತಂ ಸಮೀಕ್ಷೈವ ತೇ ಸರ್ವೇ ದಿಕ್ಷು ಸರ್ವಾಸ್ವವಸ್ಥಿತಾಃ ।
ತೈಸ್ತೈಃ ಪ್ರಹರಣೈರ್ಭೀಮೈರಭಿಪೇತು ಸ್ತತ ಸ್ತತಃ ॥

ಅನುವಾದ

ಆಗ ಆ ವೀರರು-ಉದಯಿಸಿದ ಸೂರ್ಯನಂತೆ ತನ್ನ ದಿವ್ಯ ತೇಜಃಪುಂಜ ಕಿರಣಗಳಿಂದ ಒಡಗೊಂಡ ಮಹಾದ್ವಾರದ ಮೇಲೆ ಕುಳಿತಿದ್ದ ಹನುಮಂತನನ್ನು ನೋಡಿದರು. ಅವನು ಹೆಚ್ಚು ಉತ್ಸಾಹ ಶಕ್ತಿಸಂಪನ್ನನೂ, ಮಹಾಸತ್ತ್ವಸಂಪನ್ನನೂ, ಅದ್ಭುತ ಪರಾಕ್ರಮಶಾಲಿಯೂ, ಭಾರೀ ಪ್ರತಿಭಾವಂತನೂ, ಸಾಟಿಯಿಲ್ಲದ ವೇಗವುಳ್ಳವನೂ, ಎತ್ತರವಾದ ರೂಪವುಳ್ಳವನೂ, ದೀರ್ಘಬಾಹುವೂ ಆದ ಆ ವಾನರೋತ್ತಮನನ್ನು ದರ್ಶಿಸಿದ ಬಳಿಕ ರಾಕ್ಷಸ ವೀರರೆಲ್ಲರೂ ಎಲ್ಲ ಕಡೆಗಳಿಂದ ಸುತ್ತುವರಿದು ನಿಂತರು. ಅನಂತರ ಅವರು ಎಲ್ಲ ದಿಕ್ಕುಗಳಿಂದಲೂ ಭಯಂಕರವಾದ ವಿವಿಧವಾದ ಆಯುಧಗಳನ್ನು ಹನುಮಂತನ ಮೇಲೆ ಪ್ರಯೋಗಿಸಿದರು.॥19-21॥

ಮೂಲಮ್ - 22

ತಸ್ಯ ಪಂಚಾಯಸಾಸ್ತೀಕ್ಷ್ಣಾಃ ಶಿತಾಃ ಪೀತಮುಖಾಃ ಶರಾಃ ।
ಶಿರಸ್ಯುತ್ಪಲಪತ್ರಾಭಾ ದುರ್ಧರೇಣ ನಿಪಾತಿತಾಃ ॥

ಅನುವಾದ

ದುರ್ಧರನೆಂಬ ರಾಕ್ಷಸನು ಹರಿತವಾಗಿದ್ದ ಹೊಂಬಣ್ಣದ ರೆಕ್ಕೆಗಳಿಂದ ಕೂಡಿದ್ದ, ಲೋಹಮಯವಾದ ಐದು ಬಾಣಗಳನ್ನು ಹನುಮಂತನ ಶಿರಸ್ಸಿನಲ್ಲಿ ಪ್ರಯೋಗಿಸಿದನು. ಆದರೆ ಅವುಗಳು ತಾಗುತ್ತಲೇ ಮಾರುತಿಗೆ ಕನ್ನೆದಿಲೆಗಳ ಸ್ಪರ್ಶದಂತೇ ಸುಖಾವಹವಾದುವು.॥22॥

ಮೂಲಮ್ - 23

ಸ ತೈಃ ಪಂಚಭಿರಾವಿದ್ಧಃ ಶರೈಃ ಶಿರಸಿ ವಾನರಃ ।
ಉತ್ಪಪಾತ ನದನ್ ವ್ಯೋಮ್ನಿ ದಿಶೋ ದಶ ನಿನಾದಯನ್ ॥

ಅನುವಾದ

ಆ ಐದು ಬಾಣಗಳು ಶಿರಸ್ಸಿಗೆ ತಾಕುತ್ತಲೇ ಹನುಮಂತನು ದಶದಿಕ್ಕುಗಳನ್ನು ಪ್ರತಿಧ್ವನಿಸುತ್ತಾ ಗರ್ಜಿಸಿ, ಆಕಾಶಕ್ಕೆ ನೆಗೆದನು.॥23॥

ಮೂಲಮ್ - 24

ತತಸ್ತು ದುರ್ಧರೋ ವೀರಃ ಸರಥಃ ಸಜ್ಯಕಾರ್ಮುಕಃ ।
ಕಿರನ್ ಶರಶತೈಸ್ತೀಕ್ಷ್ಣೈರಭಿಪೇದೇ ಮಹಾಬಲಃ ॥

ಅನುವಾದ

ರಥದಲ್ಲಿ ಕುಳಿತಿದ್ದ ಮಹಾಬಲನಾದ ದುರ್ಧರನು ಧನುಸ್ಸನ್ನು ಸಜ್ಜುಗೊಳಿಸಿ ಪುನಃ ನೂರಾರು ಬಾಣಗಳನ್ನು ಹನುಮಂತನ ಮೇಲೆ ಪ್ರಯೋಗಿಸುತ್ತಾ ಆಕ್ರಮಿಸಿದನು.॥24॥

ಮೂಲಮ್ - 25

ಸ ಕಪಿರ್ವಾರಯಾಮಾಸ ತಂ ವ್ಯೋಮ್ನಿ ಶರವರ್ಷಿಣಮ್ ।
ವೃಷ್ಟಿಮಂತಂ ಪಯೋದಾಂತೇ ಪಯೋದಮಿವ ಮಾರುತಃ ॥

ಅನುವಾದ

ಶರದೃತುವಿನ ಪ್ರಾರಂಭದಲ್ಲಿ ಮಳೆ ಗರೆಯುವ ಮೇಘಗಳನ್ನು ವಾಯುವು ನಿವಾರಿಸುವಂತೆ, ಆ ಕಪಿವರನು ತನ್ನ ಮೇಲೆ ಶರಗಳನ್ನು ಮಳೆಗರೆಯುವ ದುರ್ಧರನನ್ನು ಭಯಂಕರವಾದ ಹುಂಕಾರದಿಂದ ಆಗಸದಲ್ಲಿದ್ದೇ ನಿವಾರಿಸಿದನು.॥25॥

ಮೂಲಮ್ - 26

ಅರ್ದ್ಯಮಾನಸ್ತತಸ್ತೇನ ದುರ್ಧರೇಣಾನಿಲಾತ್ಮಜಃ ।
ಚಕಾರ ನಿನದಂ ಭೂಯೋ ವ್ಯವರ್ಧತ ಚ ವೇಗವಾನ್ ॥

ಮೂಲಮ್ - 27

ಸ ದೂರಂ ಸಹಸೋತ್ಪತ್ಯ ದುರ್ಧರಸ್ಯ ರಥೇ ಹರಿಃ ।
ನಿಪಪಾತ ಮಹಾವೇಗೋ ವಿದ್ಯುದ್ರಾಶಿರ್ಗಿರಾವಿವ ॥

ಅನುವಾದ

ಎದುರಿಸಲು ಅವಶ್ಯಕವಾದ ದುರ್ಧರನ ಶರವರ್ಷದಿಂದ ಪೀಡಿತನಾದ ಪರಾಕ್ರಮಶಾಲಿಯಾದ ವಾಯುಪುತ್ರನು ಪುನಃ ಗಟ್ಟಿಯಾಗಿ ಗರ್ಜಿಸುತ್ತಾ ಮತ್ತಷ್ಟು ಎತ್ತರವಾಗಿ ಬೆಳೆದನು. ಬಳಿಕ ಬಹಳ ಎತ್ತರಕ್ಕೆ ಹಾರಿ ಮಿಂಚುಗಳ ರಾಶಿಯು ಪರ್ವತದ ಮೇಲೆ ಬೀಳುವಂತೆ ದುರ್ಧರ ರಾಕ್ಷಸನ ರಥದ ಮೇಲೆ ಎಗರಿದನು.॥26-27॥

ಮೂಲಮ್ - 28

ತತಃ ಸ ಮಥಿತಾಷ್ಟಾಶ್ವಂ ರಥಂ ಭಗ್ನಾಕ್ಷಕೂಬರಮ್ ।
ವಿಹಾಯ ನ್ಯಪತದ್ಭೂಮೌ ದುರ್ಧರಸ್ತ್ಯಕ್ತಜೀವಿತಃ ॥

ಅನುವಾದ

ಮರು ಕ್ಷಣದಲ್ಲೇ ಆ ರಥಕ್ಕೆ ಕಟ್ಟಿದ ಎಂಟು ಕುದುರೆಗಳೂ ಧ್ವಂಸವಾದುವು. ಅಚ್ಚುಮರ-ಮೂಕಿ ಮರಗಳೂ ಮುರಿದುಹೋಗಿ ರಥವು ನಾಶವಾಯಿತು. ದುರ್ಧರನು ಅಸುನೀಗಿ ಭಗ್ನವಾದ ರಥದಿಂದ ಕೆಳಕ್ಕೆ ಬಿದ್ದನು.॥28॥

ಮೂಲಮ್ - 29

ತಂ ವಿರೂಪಾಕ್ಷಯೂಪಾಕ್ಷೌ ದೃಷ್ಟ್ವಾ ನಿಪತಿತಂ ಭುವಿ ।
ಸಂಜಾತರೋಷೌ ದುರ್ಧರ್ಷಾವುತ್ಪೇತತುರರಿಂದಮೌ ॥

ಅನುವಾದ

ಅದನ್ನು ನೋಡಿ ಶತ್ರುಹಂತಕರಾದ, ಎದುರಿಸಲು ಅಸಾಧ್ಯರಾದ ವಿರೂಪಾಕ್ಷ - ಯುಪಾಕ್ಷರು - ಆ ವಿಧವಾಗಿ ದುರ್ಧರನು ನೆಲಕ್ಕುರುಳಿದುದನ್ನು ನೋಡಿ ರೋಷಾವೇಷಪೂರಿತರಾಗಿ ಅಂತರಿಕ್ಷಕ್ಕೆ ಹಾರಿದರು.॥29॥

ಮೂಲಮ್ - 30

ಸ ತಾಭ್ಯಾಂ ಸಹಸೋತ್ಪತ್ಯ ನಿಷ್ಠಿ ತೋ ವಿಮಲೇಂಬರೇ ।
ಮುದ್ಗರಾಭ್ಯಾಂ ಮಹಾಬಾಹುರ್ವಕ್ಷಸ್ಯಭಿಹತಃ ಕಪಿಃ ॥

ಅನುವಾದ

ಅತೀವೇಗವಾಗಿ ಆಕಾಶಕ್ಕೆ ಹಾರಿದ ಆ ರಾಕ್ಷಸಯೋಧರಿಬ್ಬರೂ, ನಿರ್ಮಲಾಕಾಶದಲ್ಲಿ ನಿಂತಿದ್ದ, ಮಹಾಬಾಹುವಾದ ಆ ಕಪಿವರನ ವಕ್ಷಸ್ಥಳವನ್ನು ಮುದ್ಗರಾಯುಧದಿಂದ ಪ್ರಹರಿಸಿದರು.॥30॥

ಮೂಲಮ್ - 31

ತಯೋರ್ವೇಗವತೋರ್ವೇಗಂ ವಿನಿಹತ್ಯ ಮಹಾಬಲಃ ।
ನಿಪಪಾತ ಪುನರ್ಭೂಮೌ ಸುಪರ್ಣಸಮವಿಕ್ರಮಃ ॥

ಮೂಲಮ್ - 32

ಸ ಸಾಲವೃಕ್ಷಮಾಸಾದ್ಯ ತಮುತ್ಪಾಟ್ಯ ಚ ವಾನರಃ ।
ತಾವುಭೌ ರಾಕ್ಷಸೌ ವೀರೌ ಜಘಾನ ಪವನಾತ್ಮಜಃ ॥

ಅನುವಾದ

ಮಹಾ ಬಲಶಾಲಿಯೂ, ವಾಯುಸುತನೂ ಆದ ಮಾರುತಿಯು ಮಹಾಬಲಶಾಲಿಗಳಾದ ಅವರಿಬ್ಬರ ಪ್ರಹಾರವನ್ನು ನಿಷ್ಛಲಗೊಳಿಸುತ್ತಾ, ಗರುಡನು ಭೂಮಿಯಲ್ಲಿದ್ದ ಸರ್ಪವನ್ನು ವೇಗವಾಗಿ ಎತ್ತಿಕೊಂಡು ಹೋಗುವಂತೆ, ಒಂದು ಸಾಲವೃಕ್ಷವನ್ನು ಬುಡಸಹಿತ ಕಿತ್ತುಕೊಂಡು ಅದರಿಂದಲೇ ಆ ಇಬ್ಬರೂ ರಾಕ್ಷಸ ಸೇನಾಪತಿಗಳನ್ನು ಸಂಹರಿಸಿದನು.॥31-32॥

ಮೂಲಮ್ - 33

ತತಸ್ತಾಂಸ್ತ್ರೀನ್ ಹತಾನ್ ಜ್ಞಾತ್ವಾ ವಾನರೇಣ ತರಸ್ವಿನಾ ।
ಅಭಿಪೇದೇ ಮಹಾವೇಗಃ ಪ್ರಸಹ್ಯ ಪ್ರಘಸೋ ಹರಿಮ್ ॥

ಅನುವಾದ

ವೇಗವಂತನಾದ ಹನುಮಂತನ ಕೈಯಲ್ಲಿ ದುರ್ಧರನೇ ಮೊದಲಾದ ಮೂವರು ರಾಕ್ಷಸರು ಹತರಾದುದನ್ನು ನೋಡಿ, ಬಲಿಷ್ಠನೂ, ಮಹಾವೇಗಶಾಲಿಯೂ ಆದ ಪ್ರಘಸನು ಅಟ್ಟಹಾಸದಿಂದ ನಗುತ್ತಾ ಹನುಮಂತನ ಬಳಿಗೆ ಸಾರಿದನು.॥33॥

ಮೂಲಮ್ - 34

ಭಾಸಕರ್ಣಶ್ಚ ಸಂಕ್ರುದ್ಧಃ ಶೂಲಮಾದಾಯ ವೀರ್ಯವಾನ್ ।
ಏಕತಃ ಕಪಿಶಾರ್ದೂಲಂ ಯಶಸ್ವಿನಮವಸ್ಥಿತಮ್ ॥

ಅನುವಾದ

ಮತ್ತೊಂದು ಕಡೆಯಿಂದ ಪರಾಕ್ರಮಶಾಲಿಯಾದ ಭಾಸಕರ್ಣನೂ ಶೂಲವೆತ್ತಿಕೊಂಡು ಪರಮಕ್ರುದ್ಧನಾಗಿ ಕಪಿಶಾರ್ದೂಲನಾದ ಹನುಮಂತನ ಬಳಿಗೆ ಹೋದನು.॥34॥

ಮೂಲಮ್ - 35

ಪಟ್ಟಿಶೇನ ಶಿತಾಗ್ರೇಣ ಪ್ರಘಸಃ ಪ್ರತ್ಯಪೋಥಯತ್ ।
ಭಾಸಕರ್ಣಶ್ಚ ಶೂಲೇನ ರಾಕ್ಷಸಃ ಕಪಿಸತ್ತಮಮ್ ॥

ಅನುವಾದ

ಹರಿತವಾದ ಅಗ್ರ ಭಾಗವುಳ್ಳ ಪಟ್ಟಿಶವೆಂಬ ಆಯುಧದಿಂದ ಪ್ರಘಸನು ಹನುಮಂತನನ್ನು ಪ್ರಹರಿಸಿದನು. ಮತ್ತೊಂದು ಕಡೆಯಿಂದ ಭಾಸಕರ್ಣನೂ ಚೂಪಾದ ಶೂಲದಿಂದ ತಿವಿದನು.॥35॥

ಮೂಲಮ್ - 36

ಸ ತಾಭ್ಯಾಂ ವಿಕ್ಷತೈರ್ಗಾತ್ರೈ ರಸೃಗ್ದಿದ್ಧ ತನೂರುಹಃ ।
ಅಭವದ್ವಾನರಃ ಕ್ರುದ್ಧೋ ಬಾಲಸೂರ್ಯಸಮಪ್ರಭಃ ॥

ಅನುವಾದ

ಆ ಇಬ್ಬರೂ ರಾಕ್ಷಸಯೋಧರ ಆಯುಧಗಳಿಂದ ಗಾಯಗೊಂಡ ಹನುಮಂತನ ಶರೀರವೆಲ್ಲ ರಕ್ತಸಿಕ್ತವಾಯಿತು. ಆಗ ಪರಮಕ್ರುದ್ಧನಾದ ವಾನರೋತ್ತಮನು ಬಾಲಸೂರ್ಯನ ಪ್ರಭೆಯಂತೆ ವಿರಾಜಿಸುತ್ತಿದ್ದನು.॥36॥

ಮೂಲಮ್ - 37

ಸಮುತ್ಪಾಟ್ಯ ಗಿರೇಃ ಶೃಂಗಂ ಸಮೃಗ್ರವ್ಯಾಲಪಾದಪಮ್ ।
ಜಘಾನ ಹನುಮಾನ್ ವೀರೋ ರಾಕ್ಷಸೌ ಕಪಿಕುಂಜರಃ ।
ಗಿರಿಶೃಂಗ ಸುನಿಷ್ಪಿಷ್ಟೌ ತಿಲಶಸ್ತೌ ಬಭೂವತುಃ ॥

ಅನುವಾದ

ಕಪಿಶ್ರೇಷ್ಠನೂ, ವೀರನೂ ಆದ ಹನುಮಂತನು ಪರಮ ಕ್ರುದ್ಧನಾಗಿ - ಮೃಗಗಳಿಂದಲೂ, ವಿಷಜಂತುಗಳಿಂದಲೂ, ವೃಕ್ಷಗಳಿಂದಲೂ ನಿಬಿಡವಾಗಿದ್ದ ಪರ್ವತ ಶಿಖರವೊಂದನ್ನು ಕಿತ್ತು ಪ್ರಘಸ ಮತ್ತು ಭಾಸಕರ್ಣರ ಮೇಲೆ ಪ್ರಹರಿಸಿದನು. ಪರ್ವತ ಶಿಖರದಿಂದ ಅರೆಯಲ್ಪಟ್ಟ ಆ ಇಬ್ಬರೂ ರಾಕ್ಷಸರು ಎಳ್ಳಿನ ಹಿಂಡಿಯಂತಾದರು.॥37॥

ಮೂಲಮ್ - 38

ತತಸ್ತೇಷ್ವವಸನ್ನೇಷು ಸೇನಾಪತಿಷು ಪಂಚಸು ।
ಬಲಂ ತದವಶೇಷಂ ಚ ನಾಶಯಾಮಾಸ ವಾನರಃ ॥

ಅನುವಾದ

ಹೀಗೆ ಹನುಮಂತನು ಐವರೂ ರಾಕ್ಷಸ ಸೇನಾಪತಿಗಳನ್ನು ಸಂಹರಿಸಿದ ಬಳಿಕ ಕಡೆಯಲ್ಲಿ ಅಳಿದುಳಿದಿದ್ದ ಎಲ್ಲ ರಾಕ್ಷಸ ಸೈನಿಕರನ್ನು ಸಂಹರಿಸಿದನು.॥38॥

ಮೂಲಮ್ - 39

ಅಶ್ವೆರಶ್ವಾನ್ ಗಜೈರ್ನಾಗಾನ್ ಯೋಧೈರ್ಯೋಧಾನ್ ರಥೈ ರಥಾನ್ ।
ಸ ಕಪಿರ್ನಾಶಯಾಮಾಸ ಸಹಸ್ರಾಕ್ಷ ಇವಾಸುರಾನ್ ॥

ಅನುವಾದ

ಆ ಕಪಿವರನು ಕುದುರೆಗಳಿಂದ ಕುದುರೆಗಳನ್ನು, ಆನೆಗಳಿಂದ ಆನೆಗಳನ್ನು, ರಥಗಳಿಂದ ರಥಗಳನ್ನು, ಪದಾತಿಗಳಿಂದ ಪದಾತಿಗಳನ್ನು ಪರಸ್ಪರ ಅಪ್ಪಳಿಸಿ, ದೇವೇಂದ್ರನು ಅಸುರರನ್ನು ಕೊಂದಂತೆ ಎಲ್ಲರನ್ನು ಮುಗಿಸಿದನು.॥39॥

ಮೂಲಮ್ - 40

ಹತೈರ್ನಾಗೈಶ್ಚ ತುರಂಗೈಃ ಭಗ್ನಾಕ್ಷೈಶ್ಚ ಮಹಾರಥೈಃ ।
ಹತೈಶ್ಚ ರಾಕ್ಷಸೈರ್ಭೂಮೀ ರುದ್ಧಮಾರ್ಗಾ ಸಮಂತತಃ ॥

ಅನುವಾದ

ಸತ್ತು ಬಿದ್ದಿರುವ ಆನೆಗಳಿಂದ, ಕುದುರೆಗಳ ಕಳೇಬರಗಳಿಂದ, ಚೂರು-ಚೂರಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮಹಾರಥಗಳ ತುಂಡುಗಳಿಂದ, ಹತರಾದ ರಾಕ್ಷಸರ ಶವಗಳಿಂದ ಆ ರಣಭೂಮಿಯು ತುಂಬಿಹೋಗಿ ಎಲ್ಲ ದಾರಿಗಳೂ ಮುಚ್ಚಿಹೋದುವು. ॥40॥

ಮೂಲಮ್ - 41

ತತಃ ಕಪಿಸ್ತಾನ್ ಧ್ವಜಿನೀಪತೀನ್ ರಣೇ
ನಿಹತ್ಯ ವೀರಾನ್ ಸಬಲಾನ್ ಸವಾಹನಾನ್ ।
ತದೇವ ವೀರಃ ಪರಿಗೃಹ್ಯ ತೋರಣಂ
ಕೃತಕ್ಷಣಃ ಕಾಲ ಇವ ಪ್ರಜಾಕ್ಷಯೇ ॥

ಅನುವಾದ

ಮಹಾವೀರನಾದ ಆ ಹನುಮಂತನು ಭಾರೀ ಬಲಶಾಲಿಗಳಾದ ಸೇನಾಪತಿಗಳನ್ನೂ, ಅವರ ರಥಾಶ್ವಗಜ ಪದಾತಿ ಸೈನ್ಯವನ್ನು ಸಂಗ್ರಾಮರಂಗದಲ್ಲಿ ಸಂಹರಿಸಿದ ಬಳಿಕ, ಮಹಾ ದ್ವಾರವನ್ನು ಸೇರಿ ಪ್ರಳಯಕಾಲದಲ್ಲಿ ಜಗತ್ತನ್ನೇ ನುಂಗುವ ಮೃತ್ಯುದೇವತೆಯಂತೆ ಅವನು ಶತ್ರುಗಳನ್ನು ಇದಿರು ನೋಡುತ್ತಾ ಕುಳಿತನು.॥41॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಷಟ್ಚತ್ವಾರಿಂಶಃ ಸರ್ಗಃ ॥ 46 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತಾರನೆಯ ಸರ್ಗವು ಮುಗಿಯಿತು.