वाचनम्
ಭಾಗಸೂಚನಾ
ಏಳು ಅಮಾತ್ಯ ಪುತ್ರರ ಸಂಹಾರ
ಮೂಲಮ್ - 1
ತತಸ್ತೇ ರಾಕ್ಷಸೇಂದ್ರೇಣ ಚೋದಿತಾ ಮಂತ್ರಿಣಾಂ ಸುತಾಃ ।
ನಿರ್ಯಯುರ್ಭವನಾತ್ತಸ್ಮಾತ್ ಸಪ್ತ ಸಪ್ತಾರ್ಚಿವರ್ಚಸಃ ॥
ಅನುವಾದ
ಬಳಿಕ ರಾವಣೇಶ್ವರನ ಆದೇಶದಂತೆ ಏಳು ಮಂದಿ ಮಂತ್ರಿ ಕುಮಾರರು, ಅಗ್ನಿಯ ಜ್ವಾಲೆಗಳಂತೆ ರಾವಣನ ಅರಮನೆಯಿಂದ ಹೊರಬಿದ್ದರು.॥1॥
ಮೂಲಮ್ - 2
ಮಹಾಬಲಪರೀವಾರಾ ಧನುಷ್ಮಂತೋ ಮಹಾಬಲಾಃ ।
ಕೃತಾಸ್ತ್ರಾಸ್ತ್ರವಿದಾಂ ಶ್ರೇಷ್ಠಾಃ ಪರಸ್ಪರಜಯೈಷಿಣಃ ॥
ಮೂಲಮ್ - 3
ಹೇಮಜಾಲಪರಿಕ್ಷಿಪ್ತೈಃ ಧ್ವಜವದ್ಭಿಃ ಪತಾಕಿಭಿಃ ।
ತೋಯದಸ್ವನನಿರ್ಘೋಷೈಃ ವಾಜಿಯುಕ್ತೈರ್ಮಹಾರಥೈಃ ॥
ಮೂಲಮ್ - 4
ತಪ್ತಕಾಂಚನಚಿತ್ರಾಣಿ ಚಾಪಾನ್ಯಮಿತವಿಕ್ರಮಾಃ ।
ವಿಸ್ಪಾರಯಂತಃ ಸಂಹೃಷ್ಟಾಸ್ತಟಿದ್ವಂತ ಇವಾಂಬುದಾಃ ॥
ಅನುವಾದ
ಮಹಾಬಲಿಷ್ಠರೂ, ಧನುರ್ಧಾರಿಗಳೂ ಆಗಿದ್ದ ಆ ಅಮಾತ್ಯಪುತ್ರರು ದೊಡ್ಡ ಸೈನ್ಯದಿಂದ ಪರಿವೃತರಾಗಿದ್ದರು. ಮಹಾಸ್ತ್ರಗಳನ್ನು ತಿಳಿದವರಲ್ಲಿ ಶ್ರೇಷ್ಠರಾಗಿದ್ದರು. ಹನುಮಂತನನ್ನು ಜಯಿಸಬೇಕೆಂಬುದರಲ್ಲಿ ಪರಸ್ಪರ ಸ್ಪರ್ಧಿಸುತ್ತಿದ್ದರು. ಮಹಾರಥಗಳಲ್ಲಿ ಕುಳಿತು ಆಂಜನೇಯನೊಡನೆ ಯುದ್ಧಮಾಡಲು ಹೊರಟಿದ್ದರು. ಉತ್ತಮ ಕುದುರೆಗಳನ್ನು ಹೂಡಿದ ಅವರ ರಥಗಳು ಸುವರ್ಣಮಯವಾದ ಜಾಲರಿಗಳಿಂದ ಸಮಾವೃತವಾಗಿದ್ದವು. ಧ್ವಜ-ಪತಾಕೆಗಳಿಂದ ಕೂಡಿದ್ದು, ಮೇಘಗರ್ಜನೆಯಂತೆ ಗರ್ಜಿಸುತ್ತಿದ್ದವು. ಅಮಿತ ಪರಾಕ್ರಮಿಗಳಾದ ಆ ಯೋಧರ ಧನುಸ್ಸುಗಳು ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಾ ಚಿತ್ರ-ವಿಚಿತ್ರವಾಗಿದ್ದವು. ಅವರು ರಣೋತ್ಸಾಹದಿಂದ ಮಿಂಚುಗಳನ್ನೊಳಗೊಂಡ ಮೋಡಗಳಂತೆ ಗರ್ಜಿಸುತ್ತಾ ಧನುಷ್ಟಂಕಾರ ಮಾಡುತ್ತಿದ್ದರು.॥2-4॥
ಮೂಲಮ್ - 5
ಜನನ್ಯಸ್ತು ತತಸ್ತೇಷಾಂ ವಿದಿತ್ವಾ ಕಿಂಕರಾನ್ ಹತಾನ್ ।
ಬಭೂವುಃ ಶೋಕಸಂಭ್ರಾಂತಾಃ ಸಬಾಂಧವಸುಹೃಜ್ಜನಾಃ ॥
ಅನುವಾದ
ಎಂಭತ್ತುಸಾವಿರ ಮಂದಿ ಕಿಂಕರ ರಾಕ್ಷಸರು ರಣರಂಗದಲ್ಲಿ ಹತರಾದರೆಂಬ ವಾರ್ತೆಯನ್ನು ಕೇಳಿ, ಅವರ ತಾಯಂದಿರು, ಬಂಧುಗಳೂ, ಮಿತ್ರರೂ ಮುಂತಾದವರು ಶೋಕಸಂಭ್ರಾಂತರಾದರು.॥5॥
ಮೂಲಮ್ - 6
ತೇ ಪರಸ್ಪರಸಂಘರ್ಷಾತ್ತಪ್ತಕಾಂಚನಭೂಷಣಾಃ ।
ಅಭಿಪೇತುರ್ಹನೂಮಂತಂ ತೋರಣಸ್ಥಮವಸ್ಥಿತಮ್ ॥
ಅನುವಾದ
ಚೊಕ್ಕವಾದ ಚಿನ್ನದ ಆಭರಣಗಳನ್ನೂ ಧರಿಸಿದ ಆ ಮಂತ್ರಿಕುಮಾರರು ‘ನಾಮುಂದು-ತಾಮುಂದು’ ಎಂದು ಪರಸ್ಪರ ಸ್ಪರ್ಧಿಸುತ್ತಾ, ಮಹಾದ್ವಾರದ ಮೇಲೆ ಕುಳಿತಿದ್ದ ಹನುಮಂತನನ್ನು ಮುತ್ತಿದರು.॥6॥
ಮೂಲಮ್ - 7
ಸೃಜಂತೋ ಬಾಣವೃಷ್ಟಿಂ ತೇ ರಥಗರ್ಜಿತನಿಃಸ್ವನಾಃ ।
ವೃಷ್ಟಿಮಂತ ಇವಾಂಭೋದಾ ವಿಚೇರುರ್ನೈರ್ಋತಾಂಬುದಾಃ ॥
ಅನುವಾದ
ವರ್ಷಾಕಾಲದ ಮೇಘಗಳಂತೆ ಆ ರಾಕ್ಷಸರು ಮೇಘಗರ್ಜನೆಯಂತೆ ರಥಧ್ವನಿಗಳಿಂದ, ಬಾಣಗಳ ಮಳೆಗರೆಯುತ್ತಾ, ಮಳೆಯನ್ನು ಸುರಿಸುವ ಮೋಡಗಳಂತೆ ಸಂಚರಿಸುತ್ತಿದ್ದರು.॥7॥
ಮೂಲಮ್ - 8
ಅವಕೀರ್ಣಸ್ತತಸ್ತಾಭಿರ್ಹನುಮಾನ್ ಶರವೃಷ್ಟಿಭಿಃ ।
ಅಭವತ್ ಸಂವೃತಾಕಾರಃ ಶೈಲರಾಡಿವ ವೃಷ್ಟಿಭಿಃ ॥
ಅನುವಾದ
ಆಗ ಶರವರ್ಷದಿಂದ ಮುಚ್ಚಿಹೋದ ಹನುಮಂತನು - ಮಳೆಯಿಂದ ಮುಚ್ಚಿಹೋದ ಪರ್ವತರಾಜನಂತೆ ಶೋಭಿಸಿದನು.॥8॥
ಮೂಲಮ್ - 9
ಸ ಶರಾನ್ ಮೋಘಯಾಮಾಸ ತೇಷಾಮಾಶುಚರಃ ಕಪಿಃ ।
ರಥವೇಗಂ ಚ ವೀರಾಣಾಂ ವಿಚರನ್ ವಿಮಲೇಂಬರೇ ॥
ಅನುವಾದ
ಕಪೀಶ್ವರನಾದ ಹನುಮಂತನು ಆಕಾಶದಲ್ಲಿ ವೇಗವಾಗಿ ಸಂಚರಿಸುತ್ತಾ, ರಾಕ್ಷಸವೀರರ ರಥಗಳ ವೇಗವನ್ನೂ, ಬಾಣಗಳನ್ನೂ ವ್ಯರ್ಥಗೊಳಿಸಿದನು.॥9॥
ಮೂಲಮ್ - 10
ಸ ತೈಃ ಕ್ರೀಡನ್ ಧನುಷ್ಮ ದ್ಭಿರ್ವ್ಯೋಮ್ನಿ ವೀರಃ ಪ್ರಕಾಶತೇ ।
ಧನುಷ್ಮದ್ಭಿರ್ಯಥಾ ಮೇಘೈರ್ಮಾರುತಃ ಪ್ರಭುರಂಬರೇ ॥
ಅನುವಾದ
ಕಾಮನ ಬಿಲ್ಲಿನಿಂದ ಶೋಭಿಸುವ ಮೇಘಗಳೊಡನೆ ವಾಯುದೇವನು ಕ್ರೀಡಿಸುವನೋ ಎಂಬಂತೆ ಹನುಮಂತನು ಧನುಷ್ಮಂತರಾದ ಮಂತ್ರಿಕುಮಾರರೊಡನೆ ಆಟವಾಡುತ್ತಾ ಆಗಸದಲ್ಲಿ ಸಂಚರಿಸುತ್ತಿದ್ದನು.॥10॥
ಮೂಲಮ್ - 11
ಸ ಕೃತ್ವಾ ನಿನದಂ ಘೋರಂ ತ್ರಾಸಯಂಸ್ತಾಂ ಮಹಾಚಮೂಮ್ ।
ಚಕಾರ ಹನುಮಾನ್ ವೇಗಂ ತೇಷು ರಕ್ಷಃಸು ವೀರ್ಯವಾನ್ ॥
ಅನುವಾದ
ಸಾಟಿಯಿಲ್ಲದ ವೀರನಾದ ಮಾರುತಿಯು ಘೋರವಾದ ಗರ್ಜನೆಯನ್ನು ಗೈದು, ರಾಕ್ಷಸರ ಮಹಾಸೈನ್ಯವನ್ನು ಭಯಗೊಳಿಸುತ್ತಾ, ಅವರ ಮೇಲೆ ಹೆಚ್ಚು ಬಲ ಪ್ರಯೋಗಮಾಡಲು ಪ್ರಾರಂಭಿಸಿದನು.॥11॥
ಮೂಲಮ್ - 12
ತಲೇನಾಭ್ಯಹನತ್ ಕಾಂಶ್ಚಿತ್ ಪದ್ಭ್ಯಾಂ ಕಾಂಶ್ಚಿತ್ ಪರಂತಪಃ ।
ಮುಷ್ಟಿನಾಭ್ಯಹನತ್ ಕಾಂಶ್ಚಿನ್ನ ಖೈಃ ಕಾಂಶ್ಚಿದ್ವ್ಯದಾರಯತ್ ॥
ಮೂಲಮ್ - 13
ಪ್ರಮಮಾಥೋರಸಾ ಕಾಂಶ್ಚಿದೂರುಭ್ಯಾಮಪರಾನ್ ಕಪಿಃ ।
ಕೇಚಿತ್ತಸ್ಯ ನಿನಾದೇನ ತತ್ರೈವ ಪತಿತಾ ಭುವಿ ॥
ಅನುವಾದ
ಶತ್ರುಸಂಹಾರಕನಾದ ಹನುಮಂತನು ಅವರಲ್ಲಿ ಕೆಲವರನ್ನು ಅಂಗಾಲಿನಿಂದಲೂ, ಅಂಗೈಗಳಿಂದಲೂ ಬಡಿದು ಕೊಂದನು. ಕೆಲವರನನು ಕಾಲಿನಿಂದ ಒದೆದು ಸಂಹರಿಸಿದನು. ಕೆಲವರನ್ನು ಮುಷ್ಟಿಯಿಂದ ಕುಟ್ಟಿ, ಕೆಲವರನ್ನು ಉಗುರುಗಳಿಂದ ಸೀಳಿ ಹಾಕಿದನು. ಕೆಲವರನ್ನು ಎದೆಯಿಂದಲೂ, ಕೆಲವರನ್ನು ತೊಡೆಗಳಿಂದಲೂ ಸಂಹರಿಸಿದನು. ಕೆಲವು ರಾಕ್ಷಸರು ಅವನ ವೀರಗರ್ಜನೆಯನ್ನು ಕೇಳಿಯೇ ಅಸುನೀಗಿದರು.॥12,13॥
ಮೂಲಮ್ - 14
ತತಸ್ತೇಷ್ವವಸನ್ನೇಷು ಭೂಮೌ ನಿಪತಿತೇಷು ಚ ।
ತತ್ ಸೈನ್ಯಮಗಮತ್ ಸರ್ವಂ ದಿಶೋ ದಶ ಭಯಾರ್ದಿತಮ್ ॥
ಅನುವಾದ
ಹೀಗೆ ರಾಕ್ಷಸ ಯೋಧರೆಲ್ಲ ರಣಭೂಮಿಯಲ್ಲಿ ಸತ್ತುಬಿದ್ದರು. ಅಳಿದುಳಿದ ಕೆಲವು ರಾಕ್ಷಸ ಸೈನಿಕರು ಭಯಗೊಂಡು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿಹೋದರು.॥14॥
ಮೂಲಮ್ - 15
ವಿನೇದುರ್ವಿಸ್ವರಂ ನಾಗಾ ವಿಪೇತುರ್ಭುವಿ ವಾಜಿನಃ ।
ಭಗ್ನನೀಡಧ್ವಜಚ್ಛತ್ರೈರ್ಭೂಶ್ಚ ಕೀರ್ಣಾಭವದ್ರಥೈಃ ॥
ಅನುವಾದ
ಆನೆಗಳು ಅಪಸ್ವರವಾಗಿ ಘೀಳಿಡುತ್ತಿದ್ದವು. ಕುದುರೆಗಳು ಭೂಮಿಯ ಮೇಲೆ ಬಿದ್ದು ಹೊರಳಾಡುತ್ತಿದ್ದವು. ಭಗ್ನವಾಗಿ ಹೋದ ಆಸನ, ಧ್ವಜ, ಛತ್ರಗಳಿಂದ ಕೂಡಿದ ರಥಗಳು ಚೂರು-ಚೂರಾಗಿ ರಣಭೂಮಿಯಲ್ಲಿ ಚೆಲ್ಲಾಪಿಲ್ಲಿಯಾಗಿ ತುಂಬಿಹೋದುವು. ॥15॥
ಮೂಲಮ್ - 16
ಸ್ರವತಾ ರುಧಿರೇಣಾಥ ಸ್ರವಂತ್ಯೋ ದರ್ಶಿತಾಃ ಪಥಿ ।
ವಿವಿಧೈಶ್ಚ ಸ್ವನೈರ್ಲಂಕಾ ನನಾದ ವಿಕೃತಂ ತದಾ ॥
ಅನುವಾದ
ಒಸರುತ್ತಿದ್ದ ರಕ್ತವು ಕೋಡಿಯಾಗಿ ಹರಿಯತೊಡಗಿತು. ಪರಿ-ಪರಿಯಾದ ಆರ್ತನಾದಗಳಿಂದ ಕೂಡಿದ್ದ ಲಂಕೆಯು ಆಗ ವಿಕಾರವಾಗಿ ಕೂಗಿಕೊಳ್ಳುತ್ತಿರುವಂತೆ ಭಾಸವಾಗುತ್ತಿತ್ತು.॥16॥
ಮೂಲಮ್ - 17
ಸ ತಾನ್ ಪ್ರವೃದ್ಧಾನ್ ವಿನಿಹತ್ಯ ರಾಕ್ಷಸಾನ್
ಮಹಾಬಲಶ್ಚಂಡಪರಾಕ್ರಮಃ ಕಪಿಃ ।
ಯುಯುತ್ಸುರನ್ಯೈಃ ಪುನರೇವ ರಾಕ್ಷಸೈಃ
ತದೇವ ವೀರೋಭಿಜಗಾಮ ತೋರಣಮ್ ॥
ಅನುವಾದ
ಮಹಾಬಲಸಂಪನ್ನನಾದ, ಚಂಡಪರಾಕ್ರಮಶಾಲಿಯಾದ ಹನುಮಂತನು ಎಲ್ಲರಾಕ್ಷಸರನ್ನು ಸಂಹರಿಸಿ, ಇನ್ನು ಇತರ ರಾಕ್ಷಸರೊಡನೆ ಯುದ್ಧಮಾಡಬೇಕೆನ್ನುವ ಅಪೇಕ್ಷೆಯಿಂದ ಪುನಃ ಹೊರಬಾಗಿಲಿನ ಮೇಲೇರಿ, ರಾಕ್ಷಸರನ್ನು ಎದುರು ನೋಡುತ್ತಾ ಕುಳಿತನು.॥17॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪಂಚಚತ್ವಾರಿಂಶಃ ಸರ್ಗಃ ॥ 45 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತೈದನೆಯ ಸರ್ಗವು ಮುಗಿಯಿತು.