वाचनम्
ಭಾಗಸೂಚನಾ
ಮಾರುತಿಯು ಪ್ರಹಸ್ತನ ಮಗ ಜಂಬುಮಾಲಿಯನ್ನು ಸಂಹರಿಸಿದುದು
ಮೂಲಮ್ - 1
ಸಂದಿಷ್ಟೋ ರಾಕ್ಷಸೇಂದ್ರೇಣ ಪ್ರಹಸ್ತಸ್ಯ ಸುತೋ ಬಲೀ ।
ಜಂಬುಮಾಲೀ ಮಹಾದಂಷ್ಟ್ರೋ ನಿರ್ಜಗಾಮ ಧನುರ್ಧರಃ ॥
ಅನುವಾದ
ರಾಕ್ಷಸೇಂದ್ರನಾದ ರಾವಣನಿಂದ ಅಪ್ಪಣೆ ಪಡೆದು, ಬಲಿಷ್ಠನೂ, ಉದ್ದವಾದ ಕೋರೆದಾಡೆಗಳುಳ್ಳವನೂ ಆದ ಪ್ರಹಸ್ತನ ಮಗ ಜಂಬುಮಾಲಿಯು ಧನುರ್ಧಾರಿಯಾಗಿ ಹನುಮಂತನನ್ನು ಎದುರಿಸಲು ಹೊರಟನು.॥1॥
ಮೂಲಮ್ - 2
ರಕ್ತಮಾಲ್ಯಾಂಬರಧರಃ ಸ್ರಗ್ವೀ ರುಚಿರಕುಂಡಲಃ ।
ಮಹಾನ್ ವಿವೃತ್ತನಯನಶ್ಚಂಡಃ ಸಮರದುರ್ಜಯಃ ॥
ಅನುವಾದ
ಅವನು ಕೆಂಪಾದ ವಸ್ತ್ರವನ್ನೂ, ಮಾಲೆಗಳನ್ನೂ ಧರಿಸಿದ್ದನು. ಕತ್ತಿನಲ್ಲಿ ಹೂವಿನ ಹಾರವನ್ನು ತೊಟ್ಟಿದ್ದನು. ಅವನ ಕರ್ಣಕುಂಡಲಗಳು ಮನೋಹರವಾಗಿದ್ದವು. ತೀಕ್ಷ್ಣವಾದ ಸ್ವಭಾವವುಳ್ಳವನೂ, ಯುದ್ಧದಲ್ಲಿ ಜಯಿಸಲು ಅಸಾಧ್ಯನೂ, ಅಗಲವಾದ ಕಣ್ಣುಗಳುಳ್ಳವನೂ ಆಗಿದ್ದನು.॥2॥
ಮೂಲಮ್ - 3
ಧನುಃ ಶಕ್ರಧನುಃಪ್ರಖ್ಯಂ ಮಹದ್ರುಚಿರಸಾಯಕಮ್ ।
ವಿಸ್ಫಾರಯಾನೋ ವೇಗೇನ ವಜ್ರಾಶನಿಸಮಸ್ವನಮ್ ॥
ಮೂಲಮ್ - 4
ತಸ್ಯ ವಿಸ್ಫಾರಘೋಷೇಣ ಧನುಷೋ ಮಹತಾ ದಿಶಃ ।
ಪ್ರದಿಶಶ್ಚ ನಭಶ್ಚೆವ ಸಹಸಾ ಸಮಪೂರ್ಯತ ॥
ಅನುವಾದ
ಅವನ ಧನುಸ್ಸು ಇಂದ್ರನ ಧನುಸ್ಸಿನಂತೇ ಇತ್ತು. ಹೆಚ್ಚಾದ ಶಕ್ತಿವುಳ್ಳ ಬಾಣಗಳನ್ನು ಪ್ರಯೋಗಿಸುವವನೂ ಆದ ಅವನು ವಜ್ರಾಯುಧ ಮತ್ತು ಸಿಡಿಲುಗಳಿಗೆ ಸಮಾನವಾಗಿ ಧನುಷ್ಟಂಕಾರ ಮಾಡಿ ಅತೀವೇಗವಾಗಿ ಮಾರುತಿಯ ಕಡೆಗೆ ಧಾವಿಸಿದನು. ಆ ದೊಡ್ಡದಾದ ಧನುಷ್ಟಂಕಾರದ ಶಬ್ದವು ಎಂಟು ದಿಕ್ಕುಗಳನ್ನೂ, ಭೂಮ್ಯಾಕಾಶವನ್ನೂ ಕ್ಷಣಮಾತ್ರದಲ್ಲಿ ತುಂಬಿಬಿಟ್ಟಿತು.॥3-4॥
ಮೂಲಮ್ - 5
ರಥೇನ ಖರಯುಕ್ತೇನ ತಮಾಗತಮುದೀಕ್ಷ್ಯ ಸಃ ।
ಹನುಮಾನ್ ವೇಗಸಂಪನ್ನೋ ಜಹರ್ಷ ಚ ನನಾದ ಚ ॥
ಅನುವಾದ
ಕತ್ತೆಗಳು ಹೂಡಿದ ರಥದಲ್ಲಿ ಕುಳಿತು ತನ್ನೊಡನೆ ಯುದ್ಧಕ್ಕೆ ಬಂದ ಜಂಬುಮಾಲಿಯನ್ನು ನೋಡಿ, ಬಲಸಂಪನ್ನನಾದ ಹನುಮಂತನು ಹರ್ಷದಿಂದೊಡಗೂಡಿ ಸಿಂಹನಾದವನ್ನು ಮಾಡಿದನು.॥5॥
ಮೂಲಮ್ - 6
ತಂ ತೋರಣವಿಟಂಕಸ್ಥಂ ಹನುಮಂತಂ ಮಹಾಕಪಿಮ್ ।
ಜಂಬುಮಾಲೀ ಮಹಾಬಾಹುರ್ವಿವ್ಯಾಧ ನಿಶಿತೈಃ ಶರೈಃ ॥
ಅನುವಾದ
ಮಹಾಬಾಹುವಾದ ಜಂಬುಮಾಲಿಯು ಚೈತ್ಯಪ್ರಾಸಾದದ ಮಹಾದ್ವಾರದ ಮೇಲೆ ಕುಳಿತಿರುವ ಮಹಾಕಪಿಯಾದ ಹನುಮಂತನ ಮೇಲೆ ಹರಿತವಾದ ಬಾಣಗಳನ್ನು ಪ್ರಯೋಗಿಸಿದನು.॥6॥
ಮೂಲಮ್ - 7
ಅರ್ಧಚಂದ್ರೇಣ ವದನೇ ಶಿರಸ್ಯೇಕೇನ ಕರ್ಣಿನಾ ।
ಬಾಹ್ವೋರ್ವಿವ್ಯಾಧ ನಾರಾಚೈರ್ದಶಭಿಸ್ತಂ ಕಪೀಶ್ವರಮ್ ॥
ಅನುವಾದ
ಅರ್ಧಚಂದ್ರಾಕಾರ ಬಾಣವನ್ನು ಹನುಮಂತನ ಮುಖದಲ್ಲಿಯೂ, ಕರ್ಣೀ ಎಂಬ ಬಾಣವನ್ನು ಕಂಠಕ್ಕೂ, ತೀವ್ರವಾದ ಹತ್ತು ಬಾಣಗಳನ್ನು ಭುಜಗಳಲ್ಲಿಯೂ ಪ್ರಯೋಗಿಸಿ ಅವನನ್ನು ಬಾಧಿಸಿದನು.॥7॥
ಮೂಲಮ್ - 8
ತಸ್ಯ ತಚ್ಛುಶುಭೇ ತಾಮ್ರಂ ಶರೇಣಾಭಿಹತಂ ಮುಖಮ್ ।
ಶರದೀವಾಂಬುಜಂಫುಲ್ಲಂ ವಿದ್ಧಂ ಭಾಸ್ಕರರಶ್ಮಿನಾ ॥
ಅನುವಾದ
ಜಂಬುಮಾಲಿಯು ಪ್ರಯೋಗಿಸಿದ ಬಾಣಗಳಿಂದ ಯುಕ್ತನಾದ ಹನುಮಂತನ ಕೆಂಪಾದ ಮುಖವು ಶರತ್ಕಾಲದ ಸೂರ್ಯರಶ್ಮಿಯಿಂದ ವಿಕಸಿತವಾದ ಕೆಂದಾವರೆಯಂತೆ ಕಾಣುತ್ತಿತ್ತು.॥8॥
ಮೂಲಮ್ - 9
ತತ್ತಸ್ಯ ರಕ್ತಂ ರಕ್ತೇನ ರಂಜಿತಂ ಶುಶುಭೇ ಮುಖಮ್ ।
ಯಥಾಕಾಶೇ ಮಹಾಪದ್ಮಂ ಸಿಕ್ತಂ ಚಂದನಬಿಂದುಭಿಃ ॥
ಅನುವಾದ
ಸಹಜವಾಗಿ ಕೆಂಪಾಗಿದ್ದ ಹನುಮಂತನ ಮುಖವು ಬಾಣಗಳು ತಾಗಿ ರಕ್ತಚಂದನ ಬಿಂದುಗಳಿಂದ ನೆನೆಸಲ್ಪಟ್ಟ ಮಹಾಕಮಲದಂತೆ ಚೈತ್ಯಪ್ರಾಸಾದದ ಮೇಲ್ಭಾಗದಲ್ಲಿ ಪ್ರಕಾಶಿಸಿದನು.॥9॥
ಮೂಲಮ್ - 10
ಚುಕೋಪ ಬಾಣಾಭಿಹತೋ ರಾಕ್ಷಸಸ್ಯ ಮಹಾಕಪಿಃ ।
ತತಃ ಪಾರ್ಶ್ವೇತಿವಿಪುಲಾಂ ದದರ್ಶ ಮಹತೀಂ ಶಿಲಾಮ್ ॥
ಅನುವಾದ
ಜಂಬುಮಾಲಿಯ ಬಾಣಗಳು ತಾಕಿದಾಗ ಆ ಕಪಿವರನು ಬಹಳ ಕೋಪ ಗೊಂಡು ಪಕ್ಕದಲ್ಲಿಯೇ ಇದ್ದ ಅತಿದೊಡ್ಡ ಬಂಡೆಯೊಂದನ್ನು ನೋಡಿದನು.॥10॥
ಮೂಲಮ್ - 11
ತರಸಾ ತಾಂ ಸಮುತ್ಪಾಟ್ಯ ಚಿಕ್ಷೇಪ ಬಲವದ್ಬಲೀ ।
ತಾಂ ಶರೈರ್ದಶಭಿಃ ಕ್ರುದ್ಧಸ್ತಾಡಯಾಮಾಸ ರಾಕ್ಷಸಃ ॥
ಅನುವಾದ
ಮರುಕ್ಷಣದಲ್ಲೇ ಬಲಿಷ್ಠನಾದ ಹನುಮಂತನು ಆ ಬಂಡೆಯನ್ನು ವೇಗವಾಗಿ ಕಿತ್ತು ಜಂಬುಮಾಲಿಯ ಮೇಲೆ ರಭಸದಿಂದ ಎಸೆದನು. ಅದರಿಂದ ಕ್ರುದ್ಧನಾದ ರಕ್ಕಸನು ಹತ್ತು ಬಾಣಗಳಿಂದ ಆ ಬಂಡೆಯನ್ನು ಪುಡಿ-ಪುಡಿ ಮಾಡಿಬಿಟ್ಟನು.॥11॥
ಮೂಲಮ್ - 12
ವಿಪನ್ನಂ ಕರ್ಮ ತದ್ದೃಷ್ಟ್ವಾ ಹನುಮಾಂಶ್ಚಂಡವಿಕ್ರಮಃ ।
ಸಾಲಂ ವಿಪುಲಮುತ್ಪಾಟ್ಯ ಭ್ರಾಮಯಾಮಾಸ ವೀರ್ಯವಾನ್ ॥
ಅನುವಾದ
ಮಹಾವೀರನಾದ ಹನುಮಂತನು ತನ್ನ ಶಿಲಾಪ್ರಯೋಗವು ವ್ಯರ್ಥವಾಗಿರುವುದನ್ನು ಕಂಡು, ಪರಾಕ್ರಮದಿಂದ ವಿಜೃಂಭಿಸಿದ ಅವನು ಒಂದು ದೊಡ್ಡದಾದ ಸಾಲವೃಕ್ಷವನ್ನು ಬುಡಸಹಿತವಾಗಿ ಕಿತ್ತು ವೇಗವಾಗಿ ತಿರುಗಿಸತೊಡಗಿದನು.॥12॥
ಮೂಲಮ್ - 13
ಭ್ರಾಮಯಂತಂ ಕಪಿಂ ದೃಷ್ಟ್ವಾ ಸಾಲವೃಕ್ಷಂ ಮಹಾಬಲಮ್ ।
ಚಿಕ್ಷೇಪ ಸುಬಹೂನ್ ಬಾಣಾನ್ ಜಂಬುಮಾಲೀ ಮಹಾಬಲಃ ॥
ಅನುವಾದ
ಸಾಲವೃಕ್ಷವನ್ನು ತನ್ನ ಮೇಲೆ ಪ್ರಯೋಗಿಸಲು ತಿರುಗಿಸುತ್ತಿರುವ ಹನುಮಂತನನ್ನು ನೋಡಿ, ಮಹಾಬಲಿಯಾದ ಜಂಬುಮಾಲಿಯು ಅನೇಕ ಬಾಣಗಳನ್ನು ಅವನ ಮೇಲೆ ಪ್ರಯೋಗಿಸಿದನು.॥13॥
ಮೂಲಮ್ - 14
ಸಾಲಂ ಚತುರ್ಭಿಶ್ಚಿಚ್ಛೇದ ವಾನರಂ ಪಂಚಭಿರ್ಭುಜೇ ।
ಶಿರಸ್ಯೇಕೇನ ಬಾಣೇನ ದಶಭಿಸ್ತು ಸ್ತನಾಂತರೇ ॥
ಅನುವಾದ
ರಾಕ್ಷಸನು ನಾಲ್ಕು ಬಾಣಗಳಿಂದ ಆ ಸಾಲವೃಕ್ಷವನ್ನು ಕತ್ತರಿಸಿಬಿಟ್ಟನು. ಭುಜಗಳಿಗೆ ಐದು ಬಾಣಗಳನ್ನು, ತಲೆಗೆ ಒಂದು ಬಾಣವನ್ನು, ವಕ್ಷಸ್ಥಳಕ್ಕೆ ಹತ್ತು ಬಾಣಗಳನ್ನು ಹೊಡೆದು ಅವನು ಕಪೀಶ್ವರನನ್ನು ಘಾಸಿಗೊಳಿಸಿದನು.॥14॥
ಮೂಲಮ್ - 15
ಸ ಶರೈಃ ಪೂರಿತತನುಃ ಕ್ರೋಧೇನ ಮಹತಾ ವೃತಃ ।
ತಮೇವ ಪರಿಘಂ ಗೃಹ್ಯ ಭ್ರಾಮಯಾಮಾಸ ವೇಗತಃ ॥
ಅನುವಾದ
ಹನುಮಂತನ ಶರೀರವೆಲ್ಲವೂ ಜಂಬುಮಾಲಿಯ ಬಾಣಗಳಿಂದ ತುಂಬಿ ಹೋಯಿತು. ಅದರಿಂದ ಕ್ರುದ್ಧನಾದ ವಾಯುಪುತ್ರನು ಪರಿಘವನೆತ್ತಿಕೊಂಡು ಗಿರ-ಗಿರನೆ ತಿರುಗಿಸತೊಡಗಿದನು.॥15॥
ಮೂಲಮ್ - 16
ಅತಿವೇಗೋತಿವೇಗೇನ ಭ್ರಾಮಯಿತ್ವಾ ಬಲೋತ್ಕಟಃ ।
ಪರಿಘಂ ಪಾತಯಾಮಾಸ ಜಂಬುಮಾಲೇರ್ಮಹೋರಸಿ ॥
ಅನುವಾದ
ಮಹಾ ಬಲಶಾಲಿಯೂ, ವೇಗಶಾಲಿಯೂ ಆದ ಹನುಮಂತನು ಆ ಪರಿಘವನ್ನು ರಭಸದಿಂದ ತಿರುಗಿಸುತ್ತಾ ಅದನ್ನು ಜಂಬುಮಾಲಿಯ ಎದೆಯಲ್ಲಿ ಪ್ರಹರಿಸಿದನು.॥16॥
ಮೂಲಮ್ - 17
ತಸ್ಯ ಚೈವ ಶಿರೋ ನಾಸ್ತಿ ನ ಬಾಹೂ ನ ಚ ಜಾನುನೀ ।
ನ ಧನುರ್ನರಥೋ ನಾಶ್ವಾಸ್ತತ್ರಾದೃಶ್ಯಂತ ನೇಷವಃ ॥
ಅನುವಾದ
ಆ ಪರಿಘದ ಪ್ರಹಾರದಿಂದ ಜಂಬುಮಾಲಿಯು, ಅವನ ರಥವಾಹನಗಳು ನುಗ್ಗುನುಗ್ಗಾದುವು. ಮರುಕ್ಷಣದಲ್ಲಿ ಎದುರಿಗಿದ್ದ ಅವನ ತಲೆ, ಮೊಣಕಾಲುಗಳು, ತೋಳುಗಳು, ಧನುರ್ಬಾಣಗಳು, ರಥಾಶ್ವಗಳಾಗಲೀ ನೋಡಲೂ ಸಿಗಲಿಲ್ಲ.॥17॥
ಮೂಲಮ್ - 18
ಸ ಹತಸ್ತರಸಾ ತೇನ ಜಂಬುಮಾಲೀ ಮಹಾಬಲಃ ।
ಪಪಾತ ನಿಹತೋ ಭೂವೌ ಚೂರ್ಣಿತಾಂಗವಿಭೂಷಣಃ ॥
ಅನುವಾದ
ಮಹಾಬಲಿಷ್ಠನಾದ ಆ ಜಂಬುಮಾಲಿಯು, ಹನುಮಂತನು ಹೊಡೆದಾಗಲೇ ನೆಲಕ್ಕುರುಳಿದನು. ಅವನ ಅವಯವಗಳು, ಭೂಷಣಗಳೂ ಚೂರು-ಚೂರಾದವು.॥18॥
ಮೂಲಮ್ - 19
ಜಂಬುಮಾಲಿಂ ಚ ನಿಹತಂ ಕಿಂಕರಾಂಶ್ಚ ಮಹಾಬಲಾನ್ ।
ಚುಕ್ರೋಧ ರಾವಣಃ ಶ್ರುತ್ವಾ ಕೋಪಸಂರಕ್ತ ಲೋಚನಃ ॥
ಮೂಲಮ್ - 20
ಸ ರೋಷಸಂವರ್ತಿತತಾಮ್ರಲೋಚನಃ
ಪ್ರಹಸ್ತ ಪುತ್ರೇ ನಿಹತೇ ಮಹಾಬಲೇ ।
ಅಮಾತ್ಯಪುತ್ರಾನತಿವೀರ್ಯವಿಕ್ರಮಾನ್
ಸಮಾದಿದೇಶಾಶು ನಿಶಾಚರೇಶ್ವರಃ ॥
ಅನುವಾದ
ಮಹಾಬಲಶಾಲಿಗಳಾದ ಎಂಭತ್ತು ಸಾವಿರ ಕಿಂಕರರೂ, ಜಂಬುಮಾಲಿಯೂ ಹತರಾದರೆಂದು ಕೇಳಿದ ರಾಕ್ಷಸರಾಜನಾದ ರಾವಣನು ಬಹಳ ಕೋಪಗೊಂಡು ಕಣ್ಣುಗಳು ಕೆಂಪಾಗಿ ತಿರುಗತೊಡಗಿದವು. ಮಹಾಬಲಶಾಲಿಯಾದ ಪ್ರಸಹಸ್ತ ಪುತ್ರ ಜಂಬುಮಾಲಿಯು ರಣಭೂಮಿಯಲ್ಲಿ ಬಲಿಯಾದುದನ್ನು ತಿಳಿದು, ರೋಷದಿಂದ, ಅತುಲ ಬಲ ಪರಾಕ್ರಮಿಗಳಾದ ಅಮಾತ್ಯಪುತ್ರರನ್ನು ಹನುಮಂತನೊಡನೆ ಯುದ್ಧಮಾಡಲು ಕಳುಹಿಸಿದನು.॥19-20॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಚತುಶ್ಚತ್ವಾರಿಂಶಃ ಸರ್ಗಃ ॥ 44 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತನಾಲ್ಕನೆಯ ಸರ್ಗವು ಮುಗಿಯಿತು.