०४३ हनुमता लङ्कादहनचिन्तनम्

वाचनम्
ಭಾಗಸೂಚನಾ

ಹನುಮಂತನು ಚೈತ್ಯಪ್ರಾಸಾದವನ್ನು ವಿನಾಶಗೊಳಿಸಿ, ಅಲ್ಲಿದ್ದ ರಾಕ್ಷಸರನ್ನು ಸಂಹರಿಸಿದುದು

ಮೂಲಮ್ - 1

ತತಃ ಸ ಕಿಂಕರಾನ್ ಹತ್ವಾ ಹನುಮಾನ್ ಧ್ಯಾನಮಾಸ್ಥಿತಃ ।
ವನಂ ಭಗ್ನಂ ಮಯಾ ಚೈತ್ಯಪ್ರಾಸಾದೋ ನ ವಿನಾಶಿತಃ ॥

ಮೂಲಮ್ - 2

ತಸ್ಮಾತ್ ಪ್ರಾಸಾದಮಪ್ಯೇನಂ ಭೀಮಂ ವಿಧ್ವಂಸಯಾಮ್ಯಹಮ್ ।
ಇತಿ ಸಂಚಿಂತ್ಯ ಮನಸಾ ಹನುಮಾನ್ ದರ್ಶಯನ್ ಬಲಮ್ ॥

ಮೂಲಮ್ - 3

ಚೈತ್ಯಪ್ರಾಸಾದಮಾಪ್ಲುತ್ಯ ಮೇರುಶೃಂಗಮಿವೋನ್ನತಮ್ ।
ಆರುರೋಹ ಹರಿಶ್ರೇಷ್ಠೋ ಹನುಮಾನ್ ಮಾರುತಾತ್ಮಜಃ ॥

ಅನುವಾದ

ಹನುಮಂತನು ಕಿಂಕರ ರಾಕ್ಷಸರನ್ನು ವಧಿಸಿದ ಬಳಿಕ ದೂರದಲ್ಲಿ ಒಂದು ಚೈತ್ಯಪ್ರಾಸಾದವನ್ನು ನೋಡಿದನು. ‘‘ನಾನು ಅಶೋಕವನವನ್ನು ಸಂಪೂರ್ಣವಾಗಿ ಧ್ವಂಸಮಾಡಿದೆ. ಆದರೆ ಈ ಚೈತ್ಯ (ರಾಕ್ಷಸರ ಕೆಲದೇವತೆಯ ದೇವಾಲಯ) ಪ್ರಾಸಾದವನ್ನು ಕೆಡಹಲಿಲ್ಲ. ಅದನ್ನು ಈಗಲೇ ಧ್ವಂಸಮಾಡಿ ಬಿಡುವೆನು’’ ಎಂದು ಮನಸ್ಸಿನಲ್ಲಿ ನಿಶ್ಚಯಿಸಿದನು. ಹೀಗೆ ಯೋಚಿಸಿ ಹನುಮಂತನು ತನ್ನ ಬಲವೆಷ್ಟೆಂಬುದನ್ನು ರಾಕ್ಷಸರಿಗೆ ತೋರ್ಪಡಿಸುತ್ತಾ, ತಾನು ಕುಳಿತಿದ್ದ ಮಹಾದ್ವಾರದಿಂದ ಹಾರಿ, ಮೇರುಶಿಖರದಂತೆ ಎತ್ತರವಾಗಿರುವ ಆ ಚೈತ್ಯ ಪ್ರಾಸಾದದ ಮೇಲೆ ನೆಗೆದು ಕುಳಿತುಕೊಂಡನು.॥1-3॥

ಮೂಲಮ್ - 4

ಆರುಹ್ಯ ಗಿರಿಸಂಕಾಶಂ ಪ್ರಾಸಾದಂ ಹರಿಯೂಥಪಃ ।
ಬಭೌ ಸ ಸುಮಹಾತೇಜಾಃ ಪ್ರತಿಸೂರ್ಯ ಇವೋದಿತಃ ॥

ಅನುವಾದ

ಪರ್ವತಸದೃಶವಾದ ಚೈತ್ಯಪ್ರಾಸಾದವನ್ನು ಹತ್ತಿ ಕುಳಿತಿದ್ದ ಮಹಾತೇಜಸ್ವಿಯಾದ ಹನುಮಂತನು - ಆಗ ತಾನೇ ಉದಯಿಸಿದ ಮತ್ತೊಬ್ಬ ಸೂರ್ಯನಂತೆ ಪ್ರಕಾಶಿಸುತ್ತಿದ್ದನು.॥4॥

ಮೂಲಮ್ - 5

ಸಂಪ್ರಧೃಷ್ಯ ಚ ದುರ್ಧರ್ಷಂ ಚೈತ್ಯಪ್ರಾಸಾದಮುತ್ತಮಮ್ ।
ಹನುಮಾನ್ ಪ್ರಜ್ವಲನ್ ಲಕ್ಷ್ಮ್ಯಾ ಪಾರಿಯಾತ್ರೋಪಮೋ ಭವತ್ ॥

ಮೂಲಮ್ - 6

ಸ ಭೂತ್ವಾ ಸುಮಹಾಕಾಯಃ ಪ್ರಭಾವಾನ್ಮಾರುತಾತ್ಮಜಃ ।
ಧೃಷ್ಟ ಮಾಸ್ಫೋಟಯಾಮಾಸ ಲಂಕಾಂ ಶಬ್ದೇನ ಪೂರಯನ್ ॥

ಅನುವಾದ

ಪ್ರಜ್ವಲಿಸುವ ತೇಜಸ್ಸಿನಿಂದ ಬೆಳಗುತ್ತಿದ್ದ ಹನುಮಂತನು ಕ್ಷಣ ಮಾತ್ರದಲ್ಲಿ ಹತ್ತಲು ಅಸಾಧ್ಯವಾದ ಎತ್ತರವಾಗಿದ್ದ ಚೈತ್ಯ ಪ್ರಾಸಾದವನ್ನು ಧ್ವಂಸಮಾಡಿ ಸಪ್ತಪರ್ವತಗಳಲ್ಲೊಂದಾದ ಪಾರಿಯಾತ್ರ ಪರ್ವತದಂತೆ ಪ್ರಕಾಶಿಸುತ್ತಿದ್ದನು. ತನ್ನ ಪ್ರಭಾವದಿಂದ ದೊಡ್ಡದಾದ ಶರೀರವನ್ನು ಧರಿಸಿ ನಿರ್ಭಯನಾಗಿ ಲಂಕೆಯನ್ನು ಶಬ್ದದಿಂದ ನಡುಗಿಸುವಂತೆ ಎರಡೂ ಭುಜಗಳನ್ನು ಆಸ್ಫೋಟಿಸಿದನು.॥5-6॥

ಮೂಲಮ್ - 7

ತಸ್ಯಾಸ್ಫೋಟಿತಶಬ್ದೇನ ಮಹತಾ ಶ್ರೋತ್ರಘಾತಿನಾ ।
ಪೇತುರ್ವಿಹಂಗಮಾಸ್ತತ್ರ ಚೈತ್ಯಪಾಲಾಶ್ಚ ಮೋಹಿತಾಃ ॥

ಅನುವಾದ

ಹನುಮಂತನು ಗೈದ ಭುಜಾಸ್ಫಾಟನೆಯಿಂದ ಕಿವಿಯ ತಮಟೆಗಳೇ ಒಡೆದುಹೋಗುವಂತಹ ಮಹತ್ತರವಾದ ಆ ಶಬ್ದದಿಂದಾಗಿ, ಆಗಸದಲ್ಲಿ ಹಾರಾಡುತ್ತಿದ್ದ ಪಕ್ಷಿಗಳು ತೊಪ-ತೊಪನೆ ಕೆಳಗೆ ಬಿದ್ದವು. ಚೈತ್ಯಪ್ರಾಸಾದವನ್ನು ಕಾಯುತ್ತಿದ್ದ ರಾಕ್ಷಸರು ಮೂರ್ಛೆಹೋದರು. ಬಳಿಕ ಹನುಮಂತನು ಗಟ್ಟಿಯಾಗಿ ಜಯಘೋಷ ಮಾಡಿದನು.॥7॥

ಮೂಲಮ್ - 8

ಅಸ್ತ್ರವಿಜ್ಜಯತಾಂ ರಾಮೋ ಲಕ್ಷ್ಮಣಶ್ಚ ಮಹಾಬಲಃ ।
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ ॥

ಮೂಲಮ್ - 9

ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ ।
ಹನುಮಾನ್ ಶತ್ರುಸೈನ್ಯಾನಾಂ ನಿಹಂತಾ ಮಾರುತಾತ್ಮಜಃ ॥

ಮೂಲಮ್ - 10

ನ ರಾವಣಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್ ।
ಶಿಲಾಭಿಸ್ತು ಪ್ರಹರತಃ ಪಾದಪೈಶ್ಚ ಸಹಸ್ರಶಃ ॥

ಮೂಲಮ್ - 11

ಅರ್ದಯಿತ್ವಾ ಪುರೀಂ ಲಂಕಾಮಭಿವಾದ್ಯ ಚ ಮೈಥಿಲೀಮ್ ।
ಸಮೃದ್ಧಾರ್ಥೋ ಗಮಿಷ್ಯಾಮಿ ಮಿಷತಾಂ ಸರ್ವರಕ್ಷಸಾಮ್ ॥

ಅನುವಾದ

‘‘ಅಸ್ತ್ರವಿದ್ಯಾಪಾರಂಗತನಾದ ಶ್ರೀರಾಮಗೆ ಜಯವಾಗಲಿ. ಮಹಾಬಲನಾದ ಲಕ್ಷ್ಮಣನಿಗೆ ಜಯವಾಗಲೀ. ರಾಘವನ ಅನುಗ್ರಹಕ್ಕೆ ಪಾತ್ರನಾದ ರಾಜಾ ಸುಗ್ರೀವನಿಗೆ ಜಯವಾಗಲೀ. ಕ್ಲಿಷ್ಟವಾದ ಕಾರ್ಯಗಳನ್ನು ಆಯಾಸವಿಲ್ಲದೆ ಮಾಡುವ ಕೋಸಲೇಂದ್ರನಾದ ಶ್ರೀರಾಮನಿಗೆ ನಾನು ದಾಸನು. ಶತ್ರುಸಂಹಾರಕನೂ ಆದ ಹನುಮಂತನು ನಾನು. ಸಾವಿರಾರು ರಾವಣರೂ ನನಗೆ ಯುದ್ಧದಲ್ಲಿ ಸರಿಸಾಟಿಯಾಗಲಾರರು. ಅಸಂಖ್ಯಾತವಾದ ಬಂಡೆಗಳಿಂದಲೂ, ವೃಕ್ಷಗಳಿಂದಲೂ ಪ್ರಹರಿಸಿ ರಾಕ್ಷಸರೆಲ್ಲರನ್ನು ನಿರ್ನಾಮಗೈದು, ಲಂಕೆಯನ್ನು ಧ್ವಂಸಮಾಡಿ, ಸೀತಾದೇವಿಗೆ ಪ್ರಣಾಮಗೈದು, ಕೃತ-ಕೃತ್ಯನಾಗಿ, ಎಲ್ಲರೂ ನೋಡುತ್ತಿರುವಂತೆ ನಾನಿಲ್ಲಿಂದ ಹೊರಟು ಹೋಗುವೆನು.’’॥8-11॥

ಮೂಲಮ್ - 12

ಏವಮುಕ್ತ್ವಾ ಮಹಾಬಾಹುಶ್ಚೈತ್ಯಸ್ಥಾನ್ ಹರಿಯೂಥಪಃ ।
ನನಾದ ಭೀಮನಿರ್ಹ್ರಾದೋ ರಕ್ಷಸಾಂ ಜನಯನ್ ಭಯಮ್ ॥

ಅನುವಾದ

ಹೀಗೆ ಜಯಘೋಷ ಮಾಡುತ್ತಾ ಆ ಚೈತ್ಯಪ್ರಾಸಾದದ ಮೇಲೆ ಕುಳಿತಿದ್ದ, ಮಹಾಕಾಯನಾದ ಕಪಿನಾಯಕನು ಚೈತ್ಯಪಾಲಕರಾದ ರಾಕ್ಷಸರಿಗೆ ಭಯವನ್ನುಂಟುಮಾಡುತ್ತಾ ಗಟ್ಟಿಯಾಗಿ ಗರ್ಜಿಸಿದನು.॥12॥

ಮೂಲಮ್ - 13

ತೇನ ಶಬ್ದೇನ ಮಹತಾ ಚೈತ್ಯಪಾಲಾಃ ಶತಂ ಯಯುಃ ।
ಗೃಹೀತ್ವಾ ವಿವಿಧಾನಸಾನ್ ಪ್ರಾಸಾನ್ ಖಡ್ಗಾನ್ ಪರಶ್ವಧಾನ್ ॥

ಅನುವಾದ

ಆ ಮಹಾನಾದವನ್ನು ಕೇಳಿದೊಡನೆ ನೂರಾರು ಮಂದಿ ಚೈತ್ಯಪಾಲಕರು ವಿಧ-ವಿಧವಾದ ಅಸ್ತ್ರಗಳನ್ನೂ, ಖಡ್ಗಗಳನ್ನೂ, ಗಂಡುಕೊಡಲಿಗಳನ್ನೂ, ಹಿಡಿದುಕೊಂಡು ಹನುಮಂತನನ್ನು ಎದುರಿಸಲಿಕ್ಕಾಗಿ ಸುತ್ತುವರಿದು ನಿಂತರು.॥13॥

ಮೂಲಮ್ - 14

ವಿಸೃಜಂತೋ ಮಹಾಕಾಯಾ ಮಾರುತಿಂ ಪರ್ಯವಾರಯನ್ ।
ತೇ ಗದಾಭಿರ್ವಿಚಿತ್ರಾಭಿಃ ಪರಿಘೈಃ ಕಾಂಚನಾಂಗದೈಃ ॥

ಮೂಲಮ್ - 15

ಆಜಘ್ನುರ್ವಾನರಶ್ರೇಷ್ಠಂ ಬಾಣೈಶ್ಚಾದಿತ್ಯಸಂನಿಭೈಃ ।
ಆವರ್ತ ಇವ ಗಂಗಾಯಾಸ್ತೋಯಸ್ಯ ವಿಪುಲೋ ಮಹಾನ್ ॥

ಅನುವಾದ

ಬಳಿಕ ಮಹಾಕಾಯರಾದ ಆ ರಾಕ್ಷಸರು ವಿಚಿತ್ರವಾದ ಗದೆಗಳಿಂದಲೂ, ಸುವರ್ಣಮಯವಾದ ಪರಿಘಾಯುಧಗಳಿಂದಲೂ, ಸೂರ್ಯಸದೃಶವಾದ ತೀಕ್ಷ್ಣವಾದ ಬಾಣಗಳಿಂದಲೂ, ವಾನರ ಶ್ರೇಷ್ಠನಾದ ಹನುಮಂತನನ್ನು ಪ್ರಹರಿಸಿದರು. ಮಾರುತಿಯನ್ನು ಸುತ್ತುವರಿದು ನಿಂತಿದ್ದ ಆ ರಾಕ್ಷಸರ ಗುಂಪುಗಳು ಗಂಗಾನದಿಯಲ್ಲಿರುವ ದೊಡ್ಡದಾದ ಸುಳಿಯಂತೆ ಕಾಣುತ್ತಿದ್ದವು.॥14-15॥

ಮೂಲಮ್ - 16

ಪರಿಕ್ಷಿಪ್ಯ ಹರಿಶ್ರೇಷ್ಠಂ ಸ ಬಭೌ ರಕ್ಷಸಾಂ ಗಣಃ ।
ತತೋ ವಾತಾತ್ಮಜಃ ಕ್ರುದ್ಧೋ ಭೀಮರೂಪಂ ಸಮಾಸ್ಥಿತಃ ॥

ಮೂಲಮ್ - 17

ಪ್ರಾಸಾದಸ್ಯ ಮಹಾಂತಸ್ಯ ಸ್ತಂಭಂ ಹೇಮಪರಿಷ್ಕೃತಮ್ ।
ಉತ್ಪಾಟಯಿತ್ವಾ ವೇಗೇನ ಹನುಮಾನ್ ಪವನಾತ್ಮಜಃ ॥

ಮೂಲಮ್ - 18

ತತಸ್ತಂ ಭ್ರಾಮಯಾಮಾಸ ಶತಧಾರಂ ಮಹಾಬಲಃ ।
ತತ್ರಚಾಗ್ನಿಃ ಸಮಭವತ್ ಪ್ರಾಸಾದಶ್ಚಾಪ್ಯದಹ್ಯತ ॥

ಅನುವಾದ

ಬಳಿಕ ಭಯಂಕರ ರೂಪವನ್ನು ಧರಿಸಿದ್ದ ಮಾರುತಿಯು ಚೈತ್ಯಪ್ರಾಸಾದದಲ್ಲಿ ಭಗ್ನಾವಶೇಷವಾಗಿ ಉಳಿದಿದ್ದ, ಎತ್ತರವಾಗಿದ್ದ, ಸುವರ್ಣಭೂಷಿತವಾಗಿದ್ದ, ನೂರಾರು ಅಂಚುಗಳುಳ್ಳ ಒಂದು ಕಂಬವನ್ನು ಕಿತ್ತು ಕೈಗೆತ್ತಿಕೊಂಡನು. ಅದನ್ನು ವೇಗವಾಗಿ ತಿರುಗಿಸತೊಡಗಿದನು. ಕಂಬ ಹಾಗೂ ಗಾಳಿಯ ಘರ್ಷಣೆಯ ಬಿರುಸಿನಿಂದ ಹುಟ್ಟಿದ ಬೆಂಕಿಯಿಂದ ಮೊದಲೇ ಹಾಳಾಗಿ ಹೋಗಿದ್ದ ಆ ಚೈತ್ಯಪ್ರಾಸಾದವು ಪೂರ್ಣವಾಗಿ ಸುಟ್ಟುಹೋಯಿತು.॥16-18॥

ಮೂಲಮ್ - 19

ದಹ್ಯಮಾನಂ ತತೋ ದೃಷ್ಟ್ವಾ ಪ್ರಾಸಾದಂ ಹರಿಯೂಥಪಃ ।
ಸ ರಾಕ್ಷಸಶತಂ ಹತ್ವಾ ವಜ್ರೇಣೇಂದ್ರ ಇವಾಸುರಾನ್ ।
ಅಂತರಿಕ್ಷೇ ಸ್ಥಿತಃ ಶ್ರೀಮಾನಿದಂ ವಚನಮಬ್ರವೀತ್ ॥

ಅನುವಾದ

ಹೊತ್ತಿಕೊಂಡು ಉರಿಯುತ್ತಿದ್ದ ಚೈತ್ಯಪ್ರಾಸಾದವನ್ನು ನೋಡಿ ಉತ್ಸಾಹಿತನಾಗಿದ್ದ ಹನುಮಂತನು-ವಜ್ರಾಯುಧದಿಂದ ಇಂದ್ರನು ದಾನವರನ್ನು ಸಂಹರಿಸುವಂತೆ, ಸ್ತಂಭದಿಂದಲೇ ನೂರಾರು ಮಂದಿ ಪ್ರಾಸಾದ ರಕ್ಷಕರಾದ ರಾಕ್ಷಸರನ್ನು ಕ್ಷಣ ಮಾತ್ರದಲ್ಲಿ ಸಂಹರಿಸಿದನು. ಬಳಿಕ ಮಹಾಪರಾಕ್ರಮಿಯಾದ ಹನುಮಂತನು ಮರುಕ್ಷಣದಲ್ಲೇ ಆಕಾಶಕ್ಕೆ ಹಾರಿ ಅಲ್ಲಿಯೇ ನಿಂತು, ರಾಕ್ಷಸರನ್ನು ಗದರಿಸುತ್ತಾ ಇಂತೆಂದನು.॥19॥

ಮೂಲಮ್ - 20

ಮಾದೃಶಾನಾಂ ಸಹಸ್ರಾಣಿ ವಿಸೃಷ್ಟಾನಿ ಮಹಾತ್ಮನಾಮ್ ॥

ಮೂಲಮ್ - 21

ಬಲಿನಾಂ ವಾನರೇಂದ್ರಾಣಾಂ ಸುಗ್ರೀವವಶವರ್ತಿನಾಮ್ ।
ಅಟಂತಿ ವಸುಧಾಂ ಕೃತ್ಸ್ನಾಂ ವಯಮನ್ಯೇ ಚ ವಾನರಾಃ ॥

ಅನುವಾದ

‘‘ನನ್ನಂತೆಯೇ ಮಹಾಪರಾಕ್ರಮಶಾಲಿಗಳಾದ ವಾನರ ಯೋಧರು ಸಾವಿರಾರು ಸಂಖ್ಯೆಯಲ್ಲಿ ಹೊರಟಿರುವರು. ಮಹಾ ಬಲಶಾಲಿಗಳಾದ ಅವರೆಲ್ಲರೂ ಸುಗ್ರೀವಾಜ್ಞೆಯನ್ನು ಶಿರಸಾ ವಹಿಸುವವರು. ನಾನೂ, ಇತರ ವಾನರರೂ ಭೂಮಂಡಲದಲ್ಲೆಲ್ಲ ಸಂಚರಿಸುತ್ತಿದ್ದೇವೆ.॥20-21॥

ಮೂಲಮ್ - 22

ದಶನಾಗಬಲಾಃ ಕೇಚಿತ್ ಕೇಚಿದ್ದ ಶಗುಣೋತ್ತರಾಃ ।
ಕೇಚಿನ್ನಾಗಸಹಸ್ರಸ್ಯ ಬಭೂವುಸ್ತುಲ್ಯ ವಿಕ್ರಮಾಃ ॥

ಮೂಲಮ್ - 23

ಸಂತಿ ಚೌಘಬಲಾಃ ಕೇಚಿತ್ ಕೇಚಿದ್ವಾಯುಬಲೋಪಮಾಃ ।
ಅಪ್ರಮೇಯಬಲಾಶ್ಚಾನ್ಯೇ ತತ್ರಾಸನ್ ಹರಿಯೂಥಪಾಃ ॥

ಅನುವಾದ

ಅದರಲ್ಲಿ ಕೆಲವರು ಹತ್ತು ಆನೆಗಳ ಬಲವುಳ್ಳವರು. ಮತ್ತೆ ಕೆಲವರು ನೂರು ಆನೆಗಳ ಬಲವುಳ್ಳವರು. ಕೆಲವರಿಗೆ ಸಾವಿರ ಆನೆಗಳ ಬಲವಿದೆ. ಕೆಲವರು ಓಘಸಂಖ್ಯಾಕ (100 ಲಕ್ಷ) ಆನೆಗಳ ಬಲವುಳ್ಳವರು. ಮತ್ತೆ ಕೆಲವರು ವಾಯುವೇಗ ಸಂಪನ್ನರು. ಕೆಲವರು ಬಲವನ್ನು ಊಹಿಸಲು, ಅಳೆಯಲೂ ಸಾಧ್ಯವೇ ಇಲ್ಲದವರೂ ಇದ್ದಾರೆ.॥22-23॥

ಮೂಲಮ್ - 24

ಈದೃಗ್ವಿಧೈಸ್ತು ಹರಿಭಿರ್ವೃತೋ ದನ್ತನಖಾಯುಧೈಃ ।
ಶತೈಃ ಶತಸಹಸ್ರೈಶ್ಚ ಕೋಟೀಭಿರಯುತೈರಪಿ ॥

ಮೂಲಮ್ - 25

ಆಗಮಿಷ್ಯತಿ ಸುಗ್ರೀವಃ ಸರ್ವೇಷಾಂ ವೋ ನಿಷೂದನಃ ।
ನೇಯಮಸ್ತಿ ಪುರೀ ಲಂಕಾ ನ ಯೂಯಂ ನ ಚ ರಾವಣಃ ।
ಯಸ್ಮಾದಿಕ್ಷ್ವಾಕುನಾಥೇನ ಬದ್ಧಂ ವೈರಂ ಮಹಾತ್ಮನಾ ॥

ಅನುವಾದ

ದಂತಗಳೇ, ಉಗುರುಗಳೇ ಆಯುಧ ಹೊಂದಿದವರಾದ ವಾನರಯೋಧರು ನೂರು, ಸಾವಿರ, ಲಕ್ಷ, ಕೋಟಿ-ಕೋಟಿ ಸಂಖ್ಯೆಯಲ್ಲಿ ಸುಗ್ರೀವನೊಡನೆ ಇಲ್ಲಿಗೆ ಬಂದು ನಿಮ್ಮೆಲ್ಲರನ್ನು ಮಟ್ಟಹಾಕುವರು. ನೀವೆಲ್ಲ ಮಹಾತ್ಮನಾದ ರಾಮಚಂದ್ರ ಪ್ರಭುವಿನಲ್ಲಿ ವೈರವನ್ನು ಕಟ್ಟಿಕೊಂಡವರು. ಆ ಕಾರಣದಿಂದ ನೀವೂ ಉಳಿಯಲಾರಿರಿ. ನಿಮಗೆ ಆಧಾರ ಭೂಮಿಯಾದ ಲಂಕೆಯೂ ಉಳಿಯದು. ಕಡೆಗೆ ನಿಮ್ಮ ಒಡೆಯನಾದ ದುಷ್ಟನಾದ ರಾವಣನೂ ಉಳಿಯಲಾರನು.॥24-25॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ತ್ರಿಚತ್ವಾರಿಂಶಃ ಸರ್ಗಃ ॥ 43 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತಮೂರನೆಯ ಸರ್ಗವು ಮುಗಿಯಿತು.