वाचनम्
ಭಾಗಸೂಚನಾ
ರಾಕ್ಷಸಿಯರು ಪ್ರಮದಾವನದ ನಾಶವನ್ನು ರಾವಣನಿಗೆ ತಿಳಿಸಿದುದು, ರಾವಣನು ಕಿಂಕರರೆಂಬ ರಾಕ್ಷಸರನ್ನು ಕಳಿಸಿಕೊಟ್ಟಿದ್ದು, ಮಾರುತಿಯಿಂದ ಅವರ ಸಂಹಾರ
ಮೂಲಮ್ - 1
ತತಃ ಪಕ್ಷಿನಿನಾದೇನ ವೃಕ್ಷಭಂಗಸ್ವನೇನ ಚ ।
ಬಭೂವುಸ್ತ್ರಾಸಸಂಭ್ರಾಂತಾಃ ಸರ್ವೇ ಲಂಕಾನಿವಾಸಿನಃ ॥
ಅನುವಾದ
ಬಳಿಕ ಪಕ್ಷಿಗಳ ಆರ್ತನಾದಗಳನ್ನೂ, ಮರಗಳು ಮುರಿಯುವಿಕೆಯಿಂದ ಟ-ಟಾ ಶಬ್ದವನ್ನು ಕೇಳಿ ಲಂಕಾನಿವಾಸಿಗಳೆಲ್ಲರೂ ಭಯಭ್ರಾಂತರಾದರು.॥1॥
ಮೂಲಮ್ - 2
ವಿದ್ರುತಾಶ್ಚ ಭಯತ್ರಸ್ತಾ ವಿನೇದುರ್ಮೃಗಪಕ್ಷಿಣಃ ।
ರಕ್ಷಸಾಂ ಚ ನಿಮಿತ್ತಾನಿ ಕ್ರೂರಾಣಿ ಪ್ರತಿಪೇದಿರೇ ॥
ಅನುವಾದ
ಭಯದಿಂದ ಗಾಬರಿಗೊಂಡು ದಿಕ್ಕುಗಾಣದೇ ಓಡುತ್ತಿದ್ದ ಮೃಗಪಕ್ಷಿಗಳು ಕೆಟ್ಟದಾಗಿ ಅರಚಿಕೊಳ್ಳುತ್ತಿದ್ದವು. ರಾಕ್ಷಸರಿಗೆ ಭಯವನ್ನು ಹುಟ್ಟಿಸುವಂತಹ ಅಪಶಕುನಗಳು ಕಾಣಿಸಿಕೊಂಡವು.॥2॥
ಮೂಲಮ್ - 3
ತತೋ ಗತಾಯಾಂ ನಿದ್ರಾಯಾಂ ರಾಕ್ಷಸ್ಯೋ ವಿಕೃತಾನನಾಃ ।
ತದ್ವನಂ ದದೃಶುರ್ಭಗ್ನಂ ತಂ ಚ ವೀರಂ ಮಹಾಕಪಿಮ್ ॥
ಅನುವಾದ
ಸುತ್ತಲೂ ಕೇಳಿ ಬರುತ್ತಿದ್ದ ವನಭಂಗದ ಘೋರವಾದ ಶಬ್ದಗಳಿಂದ ಭ್ರಾಂತರಾಗಿ ನಿದ್ದೆಯಿಂದ ಎಚ್ಚೆತ್ತ ವಿಕೃತವದನೆಯರಾದ ರಾಕ್ಷಸ ಸ್ತ್ರೀಯರು ಹಾಳಾಗಿಹೋಗಿದ್ದ ಪ್ರಮದಾವನವನ್ನೂ, ವೀರನಾದ ಮಹಾಕಪಿಯನ್ನು ನೋಡಿದರು.॥3॥
ಮೂಲಮ್ - 4
ಸ ತಾ ದೃಷ್ಟ್ವಾ ಮಹಾಬಾಹುರ್ಮಹಾಸತ್ತ್ವೋ ಮಹಾಬಲಃ ।
ಚಕಾರ ಸುಮಹದ್ರೂಪಂ ರಾಕ್ಷಸೀನಾಂ ಭಯಾವಹಮ್ ॥
ಅನುವಾದ
ಮಹಾಬಲನೂ, ಮಹಾಸತ್ವಶಾಲಿಯೂ, ಮಹಾಬಾಹುವೂ ಆದ ಹನುಮಂತನು ಆ ರಾಕ್ಷಸಿಯರನ್ನು ಕಂಡೊಡನೆ ಅವರಿಗೆ ಮತ್ತಷ್ಟು ಭಯವನ್ನುಂಟುಮಾಡಲು ಮಹಾಘೋರವಾದ ರೂಪವನ್ನಾಂತನು.॥4॥
ಮೂಲಮ್ - 5
ತತಸ್ತಂ ಗಿರಿಸಂಕಾಶಮತಿಕಾಯಂ ಮಹಾಬಲಮ್ ।
ರಾಕ್ಷಸ್ಯೋ ವಾನರಂ ದೃಷ್ಟ್ವಾ ಪಪ್ರಚ್ಛುರ್ಜನಕಾತ್ಮಜಾಮ್ ॥
ಅನುವಾದ
ಪರ್ವತಾಕಾರವಾಗಿ ಕಾಣುತ್ತಿದ್ದ, ಮಹಾಕಾಯನಾದ ಹಾಗೂ ಮಹಾಬಲನಾದ ವಾನರನನ್ನು ನೋಡಿ ರಾಕ್ಷಸಿಯರು ಜಾನಕಿಯನ್ನು ಪ್ರಶ್ನಿಸಿದರು.॥5॥
ಮೂಲಮ್ - 6
ಕೊಯಂ ಕಸ್ಯ ಕುತೋ ವಾಯಂ ಕಿಂನಿಮಿತ್ತಮಿಹಾಗತಃ ।
ಕಥಂ ತ್ವಯಾ ಸಹಾನೇನ ಸಂವಾದಃ ಕೃತ ಇತ್ಯುತ ॥
ಮೂಲಮ್ - 7
ಆಚಕ್ಷ್ವ ನೋ ವಿಶಾಲಾಕ್ಷಿ ಮಾ ಭೂತ್ತೇ ಸುಭಗೇ ಭಯಂ ।
ಸಂವಾದಮಸಿತಾಪಾಂಗೇ ತ್ವಯಾ ಕಿಂ ಕೃತವಾನಯಮ್ ॥
ಅನುವಾದ
‘‘ಸೀತೇ! ಈ ವಾನರ ಯಾರು? ಯಾರಿಗೆ ಸಂಬಂಧಿಸಿದವನು? ಎಲ್ಲಿಂದ ಬಂದವನು? ಏಕೆ ಬಂದಿರುವನು? ನಿನ್ನ ಬಳಿಯಲ್ಲಿ ಏನು ಮಾತನಾಡಿದನು? ಎಲೈ ಸುಂದರೀ! ವಿಶಾಲಾಕ್ಷಿಯೇ! ನಿನ್ನನ್ನು ನಾವು ಏನೂ ಅನ್ನುವುದಿಲ್ಲ. ಭಯಪಡಬೇಡ. ಇವನು ನಿನ್ನೊಡನೆ ಏನು ಮಾತಾಡಿದನು? ತಿಳಿಸು.’’॥6-7॥
ಮೂಲಮ್ - 8
ಅಥಾಬ್ರವೀತ್ತದಾ ಸಾಧ್ವೀ ಸೀತಾ ಸರ್ವಾಂಗಸುಂದರೀ ।
ರಕ್ಷಸಾಂ ಕಾಮರೂಪಾಣಾಂ ವಿಜ್ಞಾನೇ ಮಮ ಕಾ ಗತಿಃ ॥
ಮೂಲಮ್ - 9
ಯೂಯಮೇವಾಭಿಜಾನೀತ ಯೋಯಂ ಯದ್ವಾ ಕರಿಷ್ಯತಿ ।
ಅಹಿರೇವ ಹ್ಯಹೇಃ ಪಾದಾನ್ ವಿಜಾನಾತಿ ನ ಸಂಶಯಃ ॥
ಮೂಲಮ್ - 10
ಅಹಮಪ್ಯಸ್ಯ ಭೀತಾಸ್ಮಿ ನೈವ ಜಾನಾಮಿ ಕೋ ನ್ವಯಮ್ ।
ವೇದ್ಮಿ ರಾಕ್ಷಸಮೇವೈನಂ ಕಾಮರೂಪಿಣಮಾಗತಮ್ ॥
ಅನುವಾದ
ಸರ್ವಾಂಗ ಸುಂದರಿಯೂ, ಸಾಧ್ವಿಯೂ ಆದ ಸೀತಾದೇವಿಯು ರಾಕ್ಷಸಿಯರ ಬಳಿ ಇಂತೆಂದಳು - ‘‘ಕಾಮ ರೂಪಿಗಳಾದ ಭಯಂಕರ ರಾಕ್ಷಸರ ವಿಷಯ ನನಗೇನು ತಿಳಿದಿದೆ? ಇವನಾರೋ? ಏನು ಮಾಡುವನೋ ನನಗೆ ತಿಳಿಯದು. ‘ಹಾವಿನ ಜಾಡನ್ನು ಹಾವೇ ತಿಳಿಯಬಲ್ಲದು’ ಇದು ಲೋಕವಿದಿತವು. ಇವನನ್ನು ನೋಡಿ ನಾನು ಬಹಳ ಭಯಗೊಂಡಿರುವೆನು. ಸ್ವೇಚ್ಛಾರೂಪಿಯಾದ ಇವನು ರಾಕ್ಷಸನೇ ಇರಬಹುದೆಂದು ನನಗೆ ಅನಿಸುತ್ತದೆ.’’॥8-10॥
ಮೂಲಮ್ - 11
ವೈದೇಹ್ಯಾ ವಚನಂ ಶ್ರುತ್ವಾ ರಾಕ್ಷಸ್ಯೋ ವಿದ್ರುತಾ ದಿಶಃ ।
ಸ್ಥಿತಾಃ ಕಾಶ್ಚಿದ್ಗತಾಃ ಕಾಶ್ಚಿದ್ರಾವಣಾಯ ನಿವೇದಿತುಮ್ ॥
ಅನುವಾದ
ವೈದೇಹಿಯ ಮಾತನ್ನು ಕೇಳಿ ರಾಕ್ಷಸಿಯರು ದಿಕ್ಕಾಪಾಲಾಗಿ ಓಡಿಹೋದರು. ಕೆಲವರು ಸೀತೆಯ ಬಳಿಯಲ್ಲೇ ಉಳಿದರು. ಮತ್ತೆ ಕೆಲವರು ರಾವಣನಿಗೆ ವಿಷಯವನ್ನು ಅರುಹಲು ಧಾವಿಸಿದರು.॥11॥
ಮೂಲಮ್ - 12
ರಾವಣಸ್ಯ ಸಮೀಪೇ ತು ರಾಕ್ಷಸ್ಯೋ ವಿಕೃತಾನನಾಃ ।
ವಿರೂಪಂ ವಾನರಂ ಭೀಮಮಾಖ್ಯಾತುಮುಪಚಕ್ರಮುಃ ॥
ಅನುವಾದ
ವಿಕಾರವಾದ ಮುಖವುಳ್ಳ ಆ ರಾಕ್ಷಸಿಯರು ರಾವಣನ ಸಮೀಪಕ್ಕೆ ಹೋಗಿ ವಿಶಿಷ್ಟರೂಪದಿಂದ ಭಯಂಕರವಾಗಿದ್ದ ವಾನರನ ವಿಷಯವನ್ನು ಹೇಳತೊಡಗಿದರು.॥12॥
ಮೂಲಮ್ - 13
ಅಶೋಕವನಿಕಾಮಧ್ಯೇ ರಾಜನ್ ಭೀಮವಪುಃ ಕಪಿಃ ।
ಸೀತಯಾ ಕೃತಸಂವಾದಸ್ತಿಷ್ಠತ್ಯಮಿತವಿಕ್ರಮಃ ॥
ಮೂಲಮ್ - 14
ನ ಚ ತಂ ಜಾನಕೀ ಸೀತಾ ಹರಿಂ ಹರಿಣಲೋಚನಾ ।
ಅಸ್ಮಾಭಿರ್ಬಹುಧಾ ಪೃಷ್ಟಾ ನಿವೇದಯಿತುಮಿಚ್ಛತಿ ॥
ಅನುವಾದ
‘‘ಎಲೈ ಮಹಾರಾಜಾ! ಭಯಂಕರ ಶರೀರವನ್ನು ಹೊಂದಿರುವ ಒಂದು ವಾನರನು ಅಶೋಕವನಕ್ಕೆ ಬಂದು ಸೀತೆಯೊಡನೆ ಮಾತಾಡುತ್ತಿದ್ದನು. ಅಮಿತ ಪರಾಕ್ರಮಿಯಾದ ಆ ವಾನರನ ವಿಷಯದಲ್ಲಿ ತಿಳಿಸುವಂತೆ ಜಾನಕಿಯನ್ನು ಅನೇಕ ರೀತಿಯಿಂದ ಕೇಳಿದೆವು. ಆದರೆ ಆ ಹರಿಣಲೋಚನೆಯಾದ ಸೀತೆಯು ಆ ವಿವರಗಳನ್ನು ಹೇಳಲೂ ಎಷ್ಟು ಮಾತ್ರವೂ ಇಷ್ಟಪಡುವುದಿಲ್ಲ. ಆ ವಾನರನು ಈಗಲೂ ಅಲ್ಲಿಯೇ ಇದ್ದಾನೆ.’’॥13-14॥
ಮೂಲಮ್ - 15
ವಾಸವಸ್ಯ ಭವೇದ್ದೂ ತೋ ದೂತೋ ವೈಶ್ರವಣಸ್ಯ ವಾ ।
ಪ್ರೇಷಿತೋ ವಾಪಿ ರಾಮೇಣ ಸೀತಾನ್ವೇಷಣಕಾಂಕ್ಷಯಾ ॥
ಅನುವಾದ
‘‘ರಾವಣೇಶ್ವರಾ! ಅವನು ಇಂದ್ರನ ದೂತನಾಗಿರಬಹುದು. ಕುಬೇರನ ದೂತನೂ ಆಗಿರಬಹುದು, ಅಥವಾ ಸೀತಾದೇವಿಯನ್ನು ಹುಡುಕಲು ಶ್ರೀರಾಮನಿಂದ ಕಳುಹಲ್ಪಟ್ಟ ದೂತನಾದರೂ ಇರಬಹುದು.॥15॥
ಮೂಲಮ್ - 16
ತೇನ ತ್ವದ್ಭುತರೂಪೇಣ ಯತ್ತತ್ತವ ಮನೋಹರಮ್ ।
ನಾನಾಮೃಗಗಣಾಕೀರ್ಣಂ ಪ್ರಮೃಷ್ಟಂ ಪ್ರಮದಾವನಮ್ ॥
ಅನುವಾದ
ಅದ್ಭುತವಾದ ರೂಪವನ್ನು ಹೊಂದಿರುವ ಆ ವಾನರನು - ನಾನಾಮೃಗಗಳ ಸಮೂಹಗಳಿಂದ ವ್ಯಾಪ್ತವಾಗಿದ್ದ, ನಿನ್ನ ಮನಸ್ಸಿಗೆ ಹೆಚ್ಚು ಆಹ್ಲಾದವನ್ನುಂಟುಮಾಡುತ್ತಿರುವ ಆ ಪ್ರಮಾದಾವನವನ್ನು ಧ್ವಂಸಗೊಳಿಸಿರುವನು.॥16॥
ಮೂಲಮ್ - 17
ನ ತತ್ರ ಕಶ್ಚಿದ್ದುದ್ದೇಶೋ ಯಸ್ತೇನ ನ ವಿನಾಶಿತಃ ।
ಯತ್ರ ಸಾ ಜಾನಕೀ ಸೀತಾ ಸ ತೇನ ನ ವಿನಾಶಿತಃ ॥
ಅನುವಾದ
ಆ ಮಹಾವೀರನು ವಿನಾಶಗೊಳಿಸದಿರುವ ಪ್ರದೇಶವೇ ಇಲ್ಲ. ಆದರೆ ಸೀತೆಯಿರುವ ಸ್ಥಳವನ್ನು ಮಾತ್ರ ಅವನು ಹಾಳುಗೆಡಹಲಿಲ್ಲ.॥17॥
ಮೂಲಮ್ - 18
ಜಾನಕೀರಕ್ಷಣಾರ್ಥಂ ವಾ ಶ್ರಮಾದ್ವಾ ನೋಪಲಕ್ಷ್ಯತೇ ।
ಅಥವಾ ಕಃ ಶ್ರಮಸ್ತಸ್ಯ ಸೈವ ತೇನಾಭಿರಕ್ಷಿತಾ ॥
ಅನುವಾದ
ಜಾನಕಿಯನ್ನು ರಕ್ಷಿಸುವ ಸಲುವಾಗಿಯೇ, ಇಲ್ಲ ಶ್ರಮಪರಿಹಾರಕ್ಕಾಗಿಯೇ ಆ ಸ್ಥಳವನ್ನು ಬಿಟ್ಟಿರಬಹುದು. ಮಹಾರಾಜಾ! ಈ ವಾನರನಿಗೆ ಬಳಲಿಕೆಯಾದರೂ ಎಲ್ಲಿಯದು? ಆದ್ದರಿಂದ ಜಾನಕಿಯನ್ನು ರಕ್ಷಿಸಲಿಕ್ಕಾಗಿಯೇ ಆ ಪ್ರದೇಶವನ್ನು ಹಾಳುಮಾಡಿಲ್ಲ; ಎಂದು ನಮಗೆ ಕಾಣುತ್ತದೆ.॥18॥
ಮೂಲಮ್ - 19
ಚಾರುಪಲ್ಲವಪುಷ್ಪಾಢ್ಯಂ ಯಂ ಸೀತಾ ಸ್ವಯಮಾಸ್ಥಿತಾ ।
ಪ್ರವೃದ್ಧಃ ಶಿಂಶಪಾವೃಕ್ಷಃ ಸ ಚ ತೇನಾಭಿರಕ್ಷಿತಃ ॥
ಅನುವಾದ
ಸೀತಾದೇವಿಯು ಆಶ್ರಯಿಸಿ ಕುಳಿತಿದ್ದ ಆ ಶಿಂಶುಪಾ ವೃಕ್ಷವು ಮನೋಹರವಾದ ಚಿಗುರುಗಳಿಂದಲೂ, ಎಲೆಗಳಿಂದಲೂ, ಹೂವುಗಳಿಂದಲೂ ಕೂಡಿ ಚೆನ್ನಾಗಿ ನಳಿನಳಿಸುತ್ತಿದೆ. ಅದನ್ನು ಮಾತ್ರ ಉರುಳಿಸದೇ ಬಿಟ್ಟಿರುವನು.॥19॥
ಮೂಲಮ್ - 20
ತಸ್ಯೋಗ್ರರೂಪಸ್ಯೋಗ್ರ ತ್ವಂ ದಂಡಮಾಜ್ಞಾತುಮರ್ಹಸಿ ।
ಸೀತಾ ಸಂಭಾಷಿತಾ ಯೇನ ತದ್ವನಂ ಚ ವಿನಾಶಿತಮ್ ॥
ಅನುವಾದ
ಎಲೈ ಉಗ್ರರೂಪವುಳ್ಳವನೇ! ಅವನು ಮೊದಲನೆಯದಾಗಿ ಸೀತೆಯೊಡನೆ ಮಾತಾಡಿದುದು, ಎರಡನೆಯದಾಗಿ ನಿನಗೆ ಅತಿಪ್ರಿಯವಾದ ಪ್ರಮದಾವನವನ್ನು ಹಾಳುಗೆಡಹಿದುದು. ಹೀಗೆ ಎರಡು ರೀತಿಯ ಅಪರಾಧವನ್ನೆಸಗಿದ ಭಯಂಕರ ರೂಪನಾದ ಅವನಿಗೆ ಕಠಿಣವಾದ ಶಿಕ್ಷೆಯನ್ನೇ ವಿಧಿಸಬೇಕು.॥20॥
ಮೂಲಮ್ - 21
ಮನಃಪರಿಗೃಹೀತಾಂ ತಾಂ ತವ ರಕ್ಷೋಗಣೇಶ್ವರ ।
ಕಃ ಸೀತಾಮಭಿಭಾಷೇತ ಯೋ ನ ಸ್ಯಾತ್ತ್ಯಕ್ತ ಜೀವಿತಃ ॥
ಅನುವಾದ
ರಾಕ್ಷಸೇಶ್ವರಾ! ನೀನು ಈಗಾಗಲೇ ಮನಸ್ಸಿಟ್ಟಿರುವ ಸೀತಾದೇವಿಯೊಡನೆ ಮಾತಾಡಲು ಸಾಹಸತೋರಿದವನು ನಿಜವಾಗಿ ತನ್ನ ಪ್ರಾಣಗಳ ಆಸೆಯನ್ನು ಬಿಟ್ಟಿರುವವನೇ ಆಗಿರಬೇಕು.॥21॥
ಮೂಲಮ್ - 22
ರಾಕ್ಷಸೀನಾಂ ವಚಃ ಶ್ರುತ್ವಾ ರಾವಣೋ ರಾಕ್ಷಸೇಶ್ವರಃ ।
ಹುತಾಗ್ನಿರಿವ ಜಜ್ವಾಲ ಕೋಪಸಂವರ್ತಿತೇಕ್ಷಣಃ ॥
ಅನುವಾದ
ರಕ್ಕಸಿಯರ ಮಾತನ್ನು ಕೇಳಿದೊಡನೆಯೇ ರಾಕ್ಷಸೇಶ್ವರನಾದ ರಾವಣನು ಕೋಪದಿಂದ ಕಣ್ಣಿಂದ ಕಿಡಿಕಾರುತ್ತಾ, ಪ್ರಜ್ವಲಿಸುವ ಚಿತಾಗ್ನಿಯಂತೆ ಉರಿದುಬಿದ್ದನು.॥22॥
ಮೂಲಮ್ - 23
ತಸ್ಯ ಕ್ರುದ್ಧಸ್ಯ ನೇತ್ರಾಭ್ಯಾಂ ಪ್ರಾಪತನ್ನಸ್ರುಬಿಂದವಃ ।
ದೀಪ್ತಾಭ್ಯಾಮಿವ ದೀಪಾಭ್ಯಾಂ ಸಾರ್ಚಿಷಃ ಸ್ನೇಹಬಿಂದವಃ ॥
ಅನುವಾದ
ಉರಿಯುತ್ತಿರುವ ದಿವಟಿಗೆಯಿಂದ ಕಾದ ಎಣ್ಣೆಯು ತೊಟ್ಟಿಕ್ಕುವಂತೆ ಕ್ರುದ್ಧನಾದ ರಾವಣನ ಕಣ್ಣುಗಳಿಂದ ಕಾದ ಕಂಬನಿಗಳು ಚಿಮ್ಮಿದವು.॥23॥
ಮೂಲಮ್ - 24
ಆತ್ಮನಃ ಸದೃಶಾನ್ ಶೂರಾನ್ ಕಿಂಕರಾನ್ನಾಮ ರಾಕ್ಷಸಾನ್ ।
ವ್ಯಾದಿದೇಶ ಮಹಾತೇಜಾ ನಿಗ್ರಹಾರ್ಥಂ ಹನೂಮತಃ ॥
ಅನುವಾದ
ಒಡನೆಯೇ ಮಹಾತೇಜಸ್ವಿಯಾದ ರಾವಣಾಸುರನು ತನ್ನಂತೆಯೇ ಅತುಲ ಪರಾಕ್ರಮಿಗಳಾಗಿದ್ದ ಕಿಂಕರರೆಂಬ ರಾಕ್ಷಸರನ್ನು ಹನುಮಂತನನ್ನು ನಿಗ್ರಹಿಸಲಿಕ್ಕಾಗಿ ಕಳಿಸಿಕೊಟ್ಟನು.॥24॥
ಮೂಲಮ್ - 25
ತೇಷಾಮಶೀತಿಸಾಹಸ್ರಂ ಕಿಂಕರಾಣಾಂ ತರಸ್ವಿನಾಮ್ ।
ನಿರ್ಯಯುರ್ಭವನಾತ್ತಸ್ಮಾತ್ ಕೂಟಮುದ್ಗರಪಾಣಯಃ ॥
ಅನುವಾದ
ಮಹಾಬಲಶಾಲಿಗಳಾದ ಎಂಭತ್ತು ಸಾವಿರ ಕಿಂಕರ ಸೈನಿಕರು ಕೂಟ, ಮುದ್ಗರಗಳೇ ಮುಂತಾದ ಆಯುಧಗಳನ್ನು ಪಿಡಿದು ರಾವಣನ ಆಜ್ಞೆಯಂತೆ ಹನುಮಂತನನ್ನು ನಿಗ್ರಹಿಸಲು ಅರಮನೆಯಿಂದ ಹೊರಬಿದ್ದರು.॥25॥
ಮೂಲಮ್ - 26
ಮಹೋದರಾ ಮಹಾದಂಷ್ಟ್ರಾ ಘೋರರೂಪಾ ಮಹಾಬಲಾಃ ।
ಯುದ್ಧಾಭಿಮನಸಃ ಸರ್ವೇ ಹನುಮದ್ಗ್ರಹಣೋನ್ಮುಖಾಃ ॥
ಅನುವಾದ
ಅವರೆಲ್ಲರೂ ಮಹೋದರರೂ, ದೊಡ್ಡ-ದೊಡ್ಡ ಕೋರೆದಾಡೆಗಳುಳ್ಳವರೂ, ಭಯಂಕರ ರೂಪವುಳ್ಳವರೂ, ಮಹಾಬಲಶಾಲಿಗಳೂ ಆಗಿದ್ದರು. ಯುದ್ಧಾಕಾಂಕ್ಷಿಗಳಾದ ಅವರು ಹನುಮಂತನನ್ನು ಸೆರೆಹಿಡಿಯಲು ಆಸಕ್ತರಾಗಿದ್ದರು.॥26॥
ಮೂಲಮ್ - 27
ತೇ ಕಪಿಂ ತಂ ಸಮಾಸಾದ್ಯ ತೋರಣಸ್ಥಮವಸ್ಥಿತಮ್ ।
ಅಭಿಪೇತುರ್ಮಹಾವೇಗಾಃ ಪತಂಗಾ ಇವ ಪಾವಕಮ್ ॥
ಅನುವಾದ
ಯುದ್ಧಸನ್ನದ್ಧರಾದ ಅವರೆಲ್ಲರೂ ಅಶೋಕವನ ಹೊರಬಾಗಿಲಲ್ಲಿ ಕುಳಿತಿದ್ದ ಹನುಮಂತನ ಬಳಿಗೆ ಹೋಗಿ - ಮಿಡತೆಗಳು ವೇಗವಾಗಿ ಬೆಂಕಿಯಲ್ಲಿ ಬೀಳುವಂತೆ ಅವನ ಮೇಲೆ (ತಮ್ಮ ನಾಶಕ್ಕಾಗಿ) ರಭಸದಿಂದ ಮುಗಿಬಿದ್ದರು.॥27॥
ಮೂಲಮ್ - 28
ತೇ ಗದಾಭಿರ್ವಿಚಿತ್ರಾಭಿಃ ಪರಿಘೈಃ ಕಾಂಚನಾಂಗದೈಃ ।
ಆಜಘ್ನುರ್ವಾನರಶ್ರೇಷ್ಠಂ ಶರೈಶ್ಚಾದಿತ್ಯಸಂನಿಭೈಃ ॥
ಅನುವಾದ
ಆ ಕಿಂಕರ ರಾಕ್ಷಸರು ವಿಚಿತ್ರವಾದ ಗದೆಗಳನ್ನೂ, ಚಿನ್ನದ ಹಿಡಿಯುಳ್ಳ ಪಟ್ಟಕತ್ತಿಗಳನ್ನೂ, ಪರಿಘಾಯುಧಗಳನ್ನೂ, ಸೂರ್ಯಸದೃಶ ಬಾಣಗಳನ್ನು ಆ ವಾನರೋತ್ತಮನ ಮೇಲೆ ಪ್ರಯೋಗಿಸಿದರು.॥28॥
ಮೂಲಮ್ - 29
ಮುದ್ಗರೈಃ ಪಟ್ಟಿಶೈಃ ಶೂಲೈಃ ಪ್ರಾಸತೋಮರಶಕ್ತಿಭಿಃ ।
ಪರಿವಾರ್ಯ ಹನೂಮಂತಂ ಸಹಸಾ ತಸ್ಥುರಗ್ರತಃ ॥
ಅನುವಾದ
ಮುದ್ಗರಗಳನ್ನೂ, ಪಟ್ಟಿಶಗಳನ್ನೂ, ಶೂಲಗಳನ್ನೂ, ಪ್ರಾಸ-ತೋಮರ-ಶಕ್ತ್ಯಾಯುಧಗಳನ್ನೂ ಧರಿಸಿ ಹನುಮಂತನನ್ನು ಸುತ್ತುಗಟ್ಟಿ ಅವನಿಗೆದುರಾಗಿ ನಿಂತರು.॥29॥
ಮೂಲಮ್ - 30
ಹನುಮಾನಪಿ ತೇಜಸ್ವೀ ಶ್ರೀಮಾನ್ ಪರ್ವತಸಂನಿಭಃ ।
ಕ್ಷಿತಾವಾವಿಧ್ಯ ಲಾಂಗೂಲಂ ನನಾದ ಚ ಮಹಾಸ್ವನಮ್ ॥
ಅನುವಾದ
ತೇಜಸ್ವಿಯೂ, ಅತುಲವಾದ ಕಾಂತಿಯಿಂದ ಸಂಪನ್ನನೂ, ಪರ್ವತದಂತೆ ಮಹಾಕಾಯನಾಗಿ ಕಾಣುತ್ತಿದ್ದ ಹನುಮಂತನು ತನ್ನ ಬಾಲವನ್ನೊಮ್ಮೆ ನೆಲಕ್ಕೆ ಅಪ್ಪಳಿಸಿ ಗಟ್ಟಿಯಾಗಿ ಸಿಂಹನಾದವನ್ನು ಮಾಡಿದನು.॥30॥
ಮೂಲಮ್ - 31
ಸ ಭೂತ್ವಾ ಸುಮಹಾಕಾಯೋ ಹನುಮಾನ್ ಮಾರುತಾತ್ಮಜಃ ।
ಧೃಷ್ಟಮಾಸ್ಫೋಟಯಾಮಾಸ ಲಂಕಾಂ ಶಬ್ಧೇನ ಪೂರಯನ್ ॥
ಅನುವಾದ
ವಾಯುಸುತನಾದ ಹನುಮಂತನು ತನ್ನ ಶರೀರವನ್ನು ಭಾರೀ ಬೆಳೆಸಿಕೊಂಡು ನಿರ್ಭಯನಾಗಿ ಸಿಂಹದಂತೆ ಗರ್ಜಿಸಿದನು. ಆ ಮಹಾ ನಿನಾದವು ಲಂಕೆಯನ್ನೇ ತುಂಬಿಬಿಟ್ಟಿತು.॥31॥
ಮೂಲಮ್ - 32
ತಸ್ಯಾಸ್ಫೋಟಿತಶಬ್ದೇನ ಮಹತಾ ಚಾನುನಾದಿನಾ ।
ಪೇತುರ್ವಿಹಂಗಾ ಗಗನಾದುಚ್ಚೈಶ್ಚೇದಮಘೋಷಯತ್ ॥
ಅನುವಾದ
ಆ ಹನುಮಂತನು ತನ್ನ ಭುಜವನ್ನು ಆಸ್ಫೋಟಿಸಿದ ಮಹಾಶಬ್ದದಿಂದ ಆಕಾಶದಲ್ಲಿ ಹಾರಾಡುತ್ತಿದ್ದ ಪಕ್ಷಿಗಳು ಭ್ರಮಿಸಿ ನೆಲಕ್ಕುರುಳಿದವು. ಬಳಿಕ ಅವನು ಗಟ್ಟಿಯಾಗಿ ಜಯಘೋಷ ಮಾಡಿದನು.॥32॥
ಮೂಲಮ್ - 33
ಜಯತ್ಯತಿಬಲೋ ರಾಮೋ ಲಕ್ಷ್ಮಣಶ್ಚ ಮಹಾಬಲಃ ।
ರಾಜಾ ಜಯತಿ ಸುಗ್ರೀವೋ ರಾಘವೇಣಾಭಿಪಾಲಿತಃ ॥
ಮೂಲಮ್ - 34
ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ ।
ಹನುಮಾನ್ ಶತ್ರು ಸೈನ್ಯಾನಾಂ ನಿಹಂತಾ ಮಾರುತಾತ್ಮಜಃ ॥
ಮೂಲಮ್ - 35
ನ ರಾವಣಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್ ।
ಶಿಲಾಭಿಸ್ತು ಪ್ರಹರತಃ ಪಾದಪೈಶ್ಚ ಸಹಸ್ರಶಃ ॥
ಮೂಲಮ್ - 36
ಅರ್ದಯಿತ್ವಾ ಪುರೀಂ ಲಂಕಾಮಭಿವಾದ್ಯಚ ಮೈಥಿಲೀಮ್ ।
ಸಮೃದ್ಧಾರ್ಥೋ ಗಮಿಷ್ಯಾಮಿ ಮಿಷತಾಂ ಸರ್ವರಕ್ಷಸಾಮ್ ॥
ಅನುವಾದ
‘‘ಅತಿಬಲಿಷ್ಠನಾದ ಶ್ರೀರಾಮನಿಗೆ ಜಯವಾಗಲಿ. ಮಹಾಬಲನಾದ ಲಕ್ಷ್ಮಣನಿಗೆ ಜಯವಾಗಲೀ. ರಾಘವನಿಂದ ಪರಿಪಾಲಿಸಲ್ಪಟ್ಟ ಕಿಷ್ಕಿಂಧೆಗೆ ರಾಜನಾದ ಸುಗ್ರೀವನಿಗೂ ಜಯವಾಗಲೀ, ಅಸಹಾಯಶೂರನೂ, ಕೋಸಲದೇಶಕ್ಕೆ ಪ್ರಭುವೂ ಆದ ಶ್ರೀರಾಮನಿಗೆ ನಾನು ದಾಸನು. ವಾಯು ಪುತ್ರನಾದ ಹನುಮಂತನೆಂಬ ನಾಮಧೇಯವುಳ್ಳ ನಾನು ಶತ್ರು ಸೈನ್ಯವನ್ನೆಲ್ಲ ಪೂರ್ಣವಾಗಿ ಧ್ವಂಸಮಾಡುತ್ತೇನೆ. ಬಂಡೆಗಳಿಂದಲೂ, ವೃಕ್ಷಗಳಿಂದಲೂ ಸಾವಿರಾರು ಬಾರಿ ಅನವರತ ಪ್ರಹರಿಸುವ ನನಗೆ ಯುದ್ಧದಲ್ಲಿ ಸಾವಿರಾರು ರಾವಣರೂ ಸಾಟಿಯಾಗಲಾರರು. ಲಂಕಾಪುರವನ್ನು ಧ್ವಂಸಮಾಡಿ, ಮೈಥಿಲಿಗೆ ಅಭಿವಾದನ ಗೈದು, ಎಲ್ಲ ರಾಕ್ಷಸರು ಕೈಲಾಗದೆ ನೋಡುತ್ತಿರುವಂತೆ, ನಾನು ಬಂದ ಕಾರ್ಯವನ್ನು ಮುಗಿಸಿ ಇಲ್ಲಿಂದ ಹೊರಟು ಹೋಗುತ್ತೇನೆ.’’ ॥33-36॥
ಮೂಲಮ್ - 37
ತಸ್ಯ ಸಂನಾದಶಬ್ದೇನ ತೇಭವನ್ ಭಯಶಂಕಿತಾಃ ।
ದದೃಶುಶ್ಚ ಹನೂಮಂತಂ ಸಂಧ್ಯಾಮೇಘಮಿವೋನ್ನ ತಮ್ ॥
ಅನುವಾದ
ಹನುಮಂತನ ಘೋರ ನಿನಾದದಿಂದಲೂ, ಘೋಷಣೆಯಿಂದಲೂ, ಕಿಂಕರ ರಾಕ್ಷಸರು ಭಯಗೊಂಡು ಜಯಗೊಳಿಸುವುದರಲ್ಲಿ ಸಂದೇಹಗೊಂಡರು. ಸಂಧ್ಯಾಕಾಲದ ಮೇಘದಂತೆ ಉನ್ನತನಾಗಿದ್ದ, ಪದ್ಮರಾಗದಂತಿರುವ ಹನುಮಂತನನ್ನು ಪುನಃ ನೋಡಿದರು.॥37॥
ಮೂಲಮ್ - 38
ಸ್ವಾಮಿಸಂದೇಶನಿಃಶಂಕಾಸ್ತತಸ್ತೇ ರಾಕ್ಷಸಾಃ ಕಪಿಮ್ ।
ಚಿತ್ರೈಃ ಪ್ರಹರಣೈರ್ಭೀಮೈರಭಿಪೇತುಃ ಸಹಸ್ರಶಃ ॥
ಅನುವಾದ
(ಆ ವಿಧವಾಗಿ ರಾಕ್ಷಸ ವೀರರು ಭಯ ಕಂಪಿತರಾಗಿದ್ದರೂ) ಸ್ವಾಮಿಯಾದ ರಾವಣೇಶ್ವರನ ಆಜ್ಞೆಯಿಂದ ಒಳಗಿಂದ ಭಯಗೊಂಡಿದ್ದರೂ, ನಿಃಶಂಕೆಯಿಂದ ವಿಚಿತ್ರವಾದ ಮತ್ತು ಭಯಂಕರವಾದ ಆಯುಧಗಳಿಂದ ಹನುಮಂತನನ್ನು ಆಕ್ರಮಿಸಿದರು. ॥38॥
ಮೂಲಮ್ - 39
ಸ ತೈಃ ಪರಿವೃತಃ ಶೂರೈಃ ಸರ್ವತಃ ಸ ಮಹಾಬಲಃ ।
ಆಸಸಾದಾಯಸಂ ಭೀಮಂ ಪರಿಘಂ ತೋರಣಾಶ್ರಿತಮ್ ॥
ಅನುವಾದ
ಮಹಾಬಲಶಾಲಿಯಾದ ಆ ಹನುಮಂತನು ರಾಕ್ಷಸವೀರರು ಸುತ್ತುಗಟ್ಟಿದಾಗ ಅವನು ಮುಖ ದ್ವಾರಕ್ಕೆ ಜಿಗಿದು ಕಬ್ಬಿಣದ ಎಳಮುಂಡಿಗೆ (ಅಗುಳಿ)ಯನ್ನು ಕೈಗೆತ್ತಿಕೊಂಡನು.॥39॥
ಮೂಲಮ್ - 40
ಸ ತಂ ಪರಿಘಮಾದಾಯ ಜಘಾನ ಚ ನಿಶಾಚರಾನ್ ।
ಸ ಪನ್ನಗಮಿವಾದಾಯ ಸ್ಫುರಂತಂ ವಿನತಾಸುತಃ ॥
ಮೂಲಮ್ - 41
ವಿಚಚಾರಾಂಬರೇ ವೀರಃ ಪರಿಗೃಹ್ಯ ಚ ಮಾರುತಿಃ ।
ಸೂದಯಾಮಾಸ ವಜ್ರೇಣ ದೈತ್ಯಾನಿವ ಸಹಸ್ರದೃಕ್ ॥
ಅನುವಾದ
ಹನುಮಂತನು ಆ ಪರಿಘ (ಕಬ್ಬಿಣದ ಹಾರೆ)ದಿಂದ ಅನೇಕ ರಾಕ್ಷಸರನ್ನು ಸದೆಬಡಿದನು. ಮತ್ತೆ ಪರಿಘವನ್ನು ಕೈಗೆತ್ತಿಕೊಂಡ ಆ ಹನುಮಂತನು-ಹರಿದಾಡುವ ಹಾವನ್ನು ಗರುಡನು ಎತ್ತಿಕೊಂಡು ಆಗಸಕ್ಕೆ ಹಾರುವಂತೆ ಅವನು ಆಕಾಶದಲ್ಲಿ ಸಂಚರಿಸಿದನು. ಬಳಿಕ ಹನುಮಂತನು - ಇಂದ್ರನು ತನ್ನ ವಜ್ರಾಯುಧದಿಂದ ದೈತ್ಯರನ್ನು ಸಂಹರಿಸುವಂತೆ, ರಾವಣನ ಕಿಂಕರರಾಕ್ಷಸರೆಲ್ಲರನ್ನು ಧ್ವಂಸಮಾಡಿದನು.॥40-41॥
ಮೂಲಮ್ - 42
ಸ ಹತ್ವಾ ರಾಕ್ಷಸಾನ್ ವೀರಾನ್ ಕಿಂಕರಾನ್ ಮಾರುತಾತ್ಮಜಃ ।
ಯುದ್ಧಕಾಂಕ್ಷೀ ಪುನರ್ವೀರಸ್ತೋರಣಂ ಸಮುಪಾಶ್ರಿತಃ ॥
ಅನುವಾದ
ಪರಾಕ್ರಮಿಯಾದ ವಾಯುಸುತನು ಕಿಂಕರ ರಾಕ್ಷಸರೆಲ್ಲರನ್ನು ಸಂಹರಿಸಿ, ಪುನಃ ಯುದ್ಧಮಾಡುವ ಇಚ್ಛೆಯಿಂದ ವನಮುಖದ್ವಾರದಲ್ಲಿ ಹತ್ತಿ ಕುಳಿತುಕೊಂಡನು.॥42॥
ಮೂಲಮ್ - 43
ತತಸ್ತಸ್ಮಾದ್ಭಯಾನ್ಮುಕ್ತಾಃ ಕತಿಚಿತ್ತತ್ರ ರಾಕ್ಷಸಾಃ ।
ನಿಹತಾನ್ ಕಿಂಕರಾನ್ ಸರ್ವಾನ್ ರಾವಣಾಯ ನ್ಯವೇದಯನ್ ॥
ಅನುವಾದ
ಹನುಮಂತನ ಭಯದಿಂದ ಪ್ರಾಣಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಿಹೋದ ಕೆಲವು ರಾಕ್ಷಸರು ರಾವಣನ ಬಳಿಗೆ ಹೋಗಿ ‘ಕಿಂಕರರಾಕ್ಷಸರೆಲ್ಲರೂ ಹನುಮಂತನ ಕೈಯಿಂದ ಮಡಿದು ಹೋದರು’ ಎಂಬ ಸಾವಿನ ವಾರ್ತೆಯನ್ನು ತಿಳಿಸಿದರು. ॥43॥
ಮೂಲಮ್ - 44
ಸ ರಾಕ್ಷಸಾನಾಂ ನಿಹತಂ ಮಹದ್ಬಲಂ
ನಿಶಮ್ಯ ರಾಜಾ ಪರಿವೃತ್ತ ಲೋಚನಃ ।
ಸಮಾದಿದೇಶಾಪ್ರತಿಮಂ ಪರಾಕ್ರಮೇ
ಪ್ರಹಸ್ತ ಪುತ್ರಂ ಸಮರೇ ಸುದುರ್ಜಯಮ್ ॥
ಅನುವಾದ
ರಾಕ್ಷಸರ ಮಹಾ ಸೈನ್ಯವು ಹನುಮಂತನಿಂದ ಹತವಾದ ವಾರ್ತೆಯನ್ನು ಕೇಳಿ ರಾವಣನು ಪರಮಕ್ರುದ್ಧನಾಗಿ ಕಣ್ಣುಗಳನ್ನು ಗರ-ಗರನೆ ತಿರುಗಿಸುತ್ತಾ, ಪರಾಕ್ರಮದಲ್ಲಿ ಅಪ್ರತಿಮನಾದ, ಯುದ್ಧದಲ್ಲಿ ಜಯಿಸಲು ಅಸಾಧ್ಯನಾದ ಪ್ರಹಸ್ತನೆಂಬ ಮಂತ್ರಿಯ ಮಗನನ್ನು ಹನುಮಂತನೊಡನೆ ಯುದ್ಧಕ್ಕೆ ಹೋಗಲು ಆಜ್ಞಾಪಿಸಿದನು.॥44॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ದ್ವಿಚತ್ವಾರಿಂಶಃ ಸರ್ಗಃ ॥ 42 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತೆರಡನೆಯ ಸರ್ಗವು ಮುಗಿಯಿತು.