०४१ हनुमता रावणदर्शनचिन्तनम्

वाचनम्
ಭಾಗಸೂಚನಾ

ಹನುಮಂತನು ಪ್ರಮದಾವನವನ್ನು (ಅಶೋಕ ವನವನ್ನು) ಧ್ವಂಸ ಮಾಡಿದುದು

ಮೂಲಮ್ - 1

ಸ ಚ ವಾಗ್ಭಿಃ ಪ್ರಶಸ್ತಾಭಿರ್ಗಮಿಷ್ಯನ್ ಪೂಜಿತಸ್ತಯಾ ।
ತಸ್ಮಾದ್ದೇಶಾದಪಕ್ರಮ್ಯ ಚಿಂತಯಾಮಾಸ ವಾನರಃ ॥

ಅನುವಾದ

ಸೀತಾದೇವಿಯು ತನ್ನಲ್ಲಿ ಅನುಮತಿಯನ್ನು ಪಡೆದು ಹೊರಟುನಿಂತ ಹನುಮಂತನ ಬಗ್ಗೆ ಪೂಜ್ಯಭಾವದಿಂದ, ಕೃತಜ್ಞತಾಪೂರ್ವಕವಾಗಿ ಅವನನ್ನು ಆದರಿಸಿದಳು. ಬಳಿಕ ಆ ವಾನರೋತ್ತಮ ಅವಳಿದ್ದ ಪ್ರದೇಶದಿಂದ ಸ್ವಲ್ಪದೂರ ಹೋಗಿ ಹೀಗೆ ಆಲೋಚಿಸತೊಡಗಿದನು.॥1॥

ಮೂಲಮ್ - 2

ಅಲ್ಪಶೇಷಮಿದಂ ಕಾರ್ಯಂ ದೃಷ್ಟೇಯಮಸಿತೇಕ್ಷಣಾ ।
ತ್ರೀನುಪಾಯಾನತಿಕ್ರಮ್ಯ ಚತುರ್ಥ ಇಹ ದೃಶ್ಯತೇ ॥

ಅನುವಾದ

ಸೀತಾದೇವಿಯನ್ನು ನೋಡುವ ಒಂದು ಕೆಲಸವು ಮುಗಿಯಿತು. ಇನ್ನು ಮಾಡಬೇಕಾದ ಕಾರ್ಯವು ಸ್ವಲ್ಪ ಉಳಿದಿದೆ. ಅದು ರಾವಣನ ಬಲಾಬಲಗಳನ್ನು ಪರೀಕ್ಷಿಸುವುದು. ಅದನ್ನು ನಾನು ಮುಗಿಸಿಯೇ ಹೋಗಬೇಕು. ಚತುರೋಪಾಯಗಳಲ್ಲಿ ಮೊದಲ ಮೂರನ್ನೂ (ಸಾಮ, ದಾನ, ಭೇದ) ಪಕ್ಕಕ್ಕಿರಿಸಿ ನಾಲ್ಕನೆಯ ದಂಡೋಪಾಯವನ್ನು ಮಾತ್ರ ಆಶ್ರಯಿಸುವುದು ಯುಕ್ತವೆಂದು ತೋರುತ್ತದೆ.॥2॥

ಮೂಲಮ್ - 3

ನ ಸಾಮ ರಕ್ಷಃಸು ಗುಣಾಯ ಕಲ್ಪತೇ
ನ ದಾನಮರ್ಥೋಪಚಿತೇಷು ಯುಜ್ಯತೇ ।
ನ ಭೇದಸಾಧ್ಯಾ ಬಲದರ್ಪಿತಾ ಜನಾಃ
ಪರಾಕ್ರಮಸ್ತ್ವೇವ ಮಮೇಹ ರೋಚತೇ ॥

ಅನುವಾದ

ರಾಕ್ಷಸರ ಬಳಿ ಸಾಮೋಪಾಯವು ಕೆಲಸಮಾಡದು. ಧನಮದಾಂಧರಾದ್ದರಿಂದ ದಾನವು ನಿಷ್ಪ್ರಯೋಜಕವು. ಬಲಗರ್ವಿತ ರಾದ್ದರಿಂದ ಭೇದೋಪಾಯವೂ ನಡೆಯದು. ಆದ್ದರಿಂದ ಕಡೆಯದಾದ ಪರಾಕ್ರಮ ಸಾಧ್ಯವಾದ ದಂಡೋಪಾಯವೇ ರಾಕ್ಷಸರ ವಿಷಯದಲ್ಲಿ ಸಮಂಜಸವಾದುದು.॥3॥

ಮೂಲಮ್ - 4

ನ ಚಾಸ್ಯ ಕಾರ್ಯಸ್ಯ ಪರಾಕ್ರಮಾದೃತೇ
ವಿನಿಶ್ಚಯಃ ಕಶ್ಚಿದಿಹೋಪಪದ್ಯತೇ ।
ಹತಪ್ರವೀರಾಶ್ಚ ರಣೇ ಹಿ ರಾಕ್ಷಸಾಃ
ಕಥಂಚಿದೀಯುರ್ಯದಿಹಾದ್ಯ ಮಾರ್ದವಮ್ ॥

ಅನುವಾದ

ನಾನು ಪರಾಕ್ರಮವನ್ನು ತೋರದಿದ್ದರೆ, ಇವರ ಸತ್ತ್ವವೆಷ್ಟೆಂಬುದು ನಮಗೆ ತಿಳಿಯದು. ಯುದ್ಧಶೂರರಾದ ಹಲವಾರು ರಾಕ್ಷಸರು ಹತರಾದರೆ, ಆಗ ಉಳಿದವರು ಮೆತ್ತಗಾಗುವರು. ಆದ್ದರಿಂದ ಯುದ್ಧ ಮಾಡುವುದೇ ಉಚಿತವೆಂದು ನಿಶ್ಚಯಿಸಿದನು.॥4॥

ಮೂಲಮ್ - 5

ಕಾರ್ಯೇ ಕರ್ಮಣಿ ನಿರ್ದಿಷ್ಟೇ ಯೋ ಬಹೂನ್ಯಪಿ ಸಾಧಯೇತ್ ।
ಪೂರ್ವಕಾರ್ಯಾವಿರೋಧೇನ ಸ ಕಾರ್ಯಂ ಕರ್ತುಮರ್ಹತಿ ॥

ಅನುವಾದ

ಒಪ್ಪಿಸಿದ ಕಾರ್ಯವನ್ನು ಸಾಧಿಸಿ, ಅದಕ್ಕೆ ಭಂಗವಾಗದಂತೆ ಅದಕ್ಕೆ ಪೂರಕವಾಗಿ ಮತ್ತೊಂದು ಕಾರ್ಯವನ್ನು ಸಾಧಿಸುವವನೇ ನಿಜವಾಗಿ ಕಾರ್ಯದಕ್ಷನು.॥5॥

ಮೂಲಮ್ - 6

ನ ಹ್ಯೇಕಃ ಸಾಧಕೋ ಹೇತುಃ ಸ್ವಲ್ಪಸ್ಯಾಪೀಹ ಕರ್ಮಣಃ ।
ಯೋ ಹ್ಯರ್ಥಂ ಬಹುಧಾ ವೇದ ಸ ಸಮರ್ಥೋರ್ಥಸಾಧನೇ ॥

ಅನುವಾದ

ಸಣ್ಣ-ಪುಟ್ಟ ಕಾರ್ಯಗಳ ಸಿದ್ಧಿಗೆ ಒಂದೆ ಉಪಾಯವೂ ಸಾಕಾಗುವುದಿಲ್ಲ. ತನ್ನ ಕಾರ್ಯ ಸಿದ್ಧಿಗಾಗಿ ವಿವಿಧೋಪಾಯಗಳನ್ನು ತಿಳಿದಿರುವವನೇ ಕಾರ್ಯ ಸಾಧನೆಗೆ ಸಮರ್ಥನು.॥6॥

ಮೂಲಮ್ - 7

ಇಹೈವ ತಾವತ್ ಕೃತನಿಶ್ಚಯೋ ಹ್ಯಹಂ
ಯದಿ ವ್ರಜೇಯಂ ಪ್ಲವಗೇಶ್ವರಾಲಯಮ್ ।
ಪರಾತ್ಮಸಂಮರ್ದವಿಶೇಷತತ್ತ್ವವಿತ್
ತತಃ ಕೃತಂ ಸ್ಯಾನ್ಮಮ ಭರ್ತೃಶಾಸನಮ್ ॥

ಅನುವಾದ

ನಾನು ಇಲ್ಲಿಯೇ ಶತ್ರುಬಲವನ್ನು, ನಮ್ಮವರ ಬಲವನ್ನು, ಯುದ್ಧ ನೈಪುಣ್ಯವನ್ನು ಅದರಲ್ಲಿನ ತಾರತಮ್ಯವನ್ನು ಚೆನ್ನಾಗಿ ತಿಳಿದುಕೊಳ್ಳುವುದು ಯುಕ್ತವು. ಬಳಿಕ ಕೃತನಿಶ್ಚಯನಾದ ಸುಗ್ರೀವನ ಬಳಿಗೆ ಹೋದರೆ ಆಗ ಒಡೆಯನ ಆಜ್ಞೆಯನ್ನು ಪೂರ್ಣಗೊಳಿಸಿದಂತಾಗುತ್ತದೆ.॥7॥

ಮೂಲಮ್ - 8

ಕಥಂ ನು ಖಲ್ವದ್ಯ ಭವೇತ್ ಸುಖಾಗತಂ
ಪ್ರಸಹ್ಯ ಯುದ್ಧಂ ಮಮ ರಾಕ್ಷಸೈಃ ಸಹ ।
ತಥೈವ ಖಲ್ವಾತ್ಮಬಲಂ ಚ ಸಾರವತ್
ಸಂಮಾನಯೇನ್ಮಾಂ ಚ ರಣೇ ದಶಾನನಃ ॥

ಅನುವಾದ

ಈಗ ನನಗೂ ರಾಕ್ಷಸರಿಗೂ ತೀವ್ರವಾದ ಯುದ್ಧವು ಸುಲಭವಾಗಿ ಒದಗುವಂತೆ ನೋಡಬೇಕಾಗಿದೆ. ಆಗಲೇ ರಾವಣನು ಯುದ್ಧದಲ್ಲಿ ತನ್ನ ಕಡೆಯವರ ಬಲವನ್ನೂ, ನನ್ನ ಬಲವನ್ನೂ ನಿಜವಾಗಿ ತಿಳಿದುಕೊಳ್ಳಬಹುದು.॥8॥

ಮೂಲಮ್ - 9

ತತಃ ಸಮಾಸಾದ್ಯ ರಣೇ ದಶಾನನಂ
ಸಮಂತ್ರಿವರ್ಗಂ ಸಬಲಪ್ರಯಾಯಿನಮ್ ।
ಹೃದಿ ಸ್ಥಿತಂ ತಸ್ಯ ಮತಂ ಬಲಂ ಚ ವೈ
ಸುಖೇನ ಮತ್ವಾಹಮಿತಃ ಪುನರ್ವ್ರಜೇ ॥

ಅನುವಾದ

ಆದರೆ ರಾವಣನನ್ನು, ಅವನ ಮಂತ್ರಿಗಳನ್ನು, ಸೈನ್ಯವನ್ನು, ಅನುಚರರನ್ನು ಯುದ್ಧದಲ್ಲಿ ಇದಿರಿಸಿ, ಅವರ ಶಕ್ತಿ ಸಾಮರ್ಥ್ಯವನ್ನೂ, ಮನಸ್ಸಿನ ಅಭಿಪ್ರಾಯವನ್ನೂ ಚೆನ್ನಾಗಿ ತಿಳಿದುಕೊಂಡು ತೃಪ್ತಿಯಾಗಿ ನಾನು ಇಲ್ಲಿಂದ ಹೋಗುವೆನು.॥9॥

ಮೂಲಮ್ - 10

ಇದಮಸ್ಯ ನೃಶಂಸಸ್ಯ ನಂದನೋಪಮಮುತ್ತಮಮ್ ।
ವನಂ ನೇತ್ರಮನಃಕಾಂತಂ ನಾನಾದ್ರುಮಲತಾಯುತಮ್ ॥

ಅನುವಾದ

ಕ್ರೂರನಾದ ರಾವಣನ ಈ ಅಶೋಕವನವು ಶ್ರೇಷ್ಠವಾಗಿದೆ. ನಂದನವನಕ್ಕೆ ಸಮಾನವಾಗಿದೆ. ನಾನಾ ವಿಧವಾದ ವೃಕ್ಷಗಳಿಂದಲೂ, ಲತೆಗಳಿಂದಲೂ ನಿಬಿಡವಾಗಿರುವ ಇದು ನಯನಾನಂದಕರವಾಗಿಯೂ, ಮನೋಜ್ಞವಾಗಿಯೂ ಇದೆ.॥10॥

ಮೂಲಮ್ - 11

ಇದಂ ವಿಧ್ವಂಸಯಿಷ್ಯಾಮಿ ಶುಷ್ಕಂ ವನಮಿವಾನಲಃ ।
ಅಸ್ಮಿನ್ ಭಗ್ನೇ ತತಃ ಕೋಪಂ ಕರಿಷ್ಯತಿ ದಶಾನನಃ ॥

ಅನುವಾದ

ಒಣಗಿಹೋದ ವನವನ್ನು ಬೆಂಕಿಯು ಸುಟ್ಟು ಭಸ್ಮಮಾಡಿಬಿಡುವಂತೆ, ನಾನು ಈ ವನವನ್ನು ಧ್ವಂಸಮಾಡಿಬಿಡುವೆನು. ಇದು ಹಾಳುಗೆಡಹಿದ ವಾರ್ತೆಯನ್ನು ಕೇಳಿದಾಕ್ಷಣ ದಶಾನನನು ಕ್ರುದ್ಧನಾಗುವನು.॥11॥

ಮೂಲಮ್ - 12

ತತೋ ಮಹತ್ ಸಾಶ್ವಮಹಾರಥದ್ವಿಪಂ
ಬಲಂ ಸಮಾದೇಕ್ಷ್ಯತಿ ರಾಕ್ಷಸಾಧಿಪಃ ।
ತ್ರಿಶೂಲಕಾಲಾಯಸಪಟ್ಟಸಾಯುಧಂ
ತತೋ ಮಹದ್ಯುದ್ಧಮಿದಂ ಭವಿಷ್ಯತಿ ॥

ಅನುವಾದ

ಒಡನೆಯೇ ಅವನು ತ್ರಿಶೂಲ, ಮುದ್ಗರ, ಪಟ್ಟಾಕತ್ತಿಗಳು ಮುಂತಾದ ಆಯುಧಗಳನ್ನು ಧರಿಸಿದ, ಅಶ್ವ-ಮಹಾರಥ, ಮಹಾಗಜಗಳಿಂದ ಯುಕ್ತವಾದ ದೊಡ್ಡ ಸೈನ್ಯವನ್ನು ರಾವಣನು ಕಳಿಸುವನು. ಆಗ ಒಂದು ಘೋರವಾದ ಯುದ್ಧವು ಜರಗುತ್ತದೆ.॥12॥

ಮೂಲಮ್ - 13

ಅಹಂ ತು ತೈಃ ಸಂಯತಿ ಚಂಡವಿಕ್ರಮೈಃ
ಸಮೇತ್ಯ ರಕ್ಷೋಭಿರಸಹ್ಯವಿಕ್ರಮಃ ।
ನಿಹತ್ಯ ತದ್ರಾವಣಚೋದಿತಂ ಬಲಂ
ಸುಖಂ ಗಮಿಷ್ಯಾಮಿ ಕಪೀಶ್ವರಾಲಯಮ್ ॥

ಅನುವಾದ

ಪ್ರಚಂಡ ಪರಾಕ್ರಮದಿಂದ ಆ ರಾಕ್ಷಸಯೋಧರೊಡನೆ ನಾನು ಸಾಟಿಯಿಲ್ಲದ ಪ್ರತಾಪದಿಂದ ಹೋರಾಡಿ, ಆ ರಾವಣ ಪ್ರೇರಿತ ಸೈನ್ಯವನ್ನು ಸಂಹರಿಸಿ, ಸುಖವಾಗಿ ಸುಗ್ರೀವನ ಬಳಿಗೆ ಹೋಗುವೆನು.॥13॥

ಮೂಲಮ್ - 14

ತತೋ ಮಾರುತವತ್ ಕ್ರುದ್ಧೋ ಮಾರುತಿರ್ಭೀಮವಿಕ್ರಮಃ ।
ಊರುವೇಗೇನ ಮಹತಾ ದ್ರುಮಾನ್ ಕ್ಷೇಪ್ತುಮಥಾರಭತ್ ॥

ಅನುವಾದ

ಬಳಿಕ ಭಯಂಕರ ಪರಾಕ್ರಮಿಯಾದ ಮಾರುತಿಯು ಪರಮಕ್ರುದ್ಧನಾಗಿ ಅತಿವೇಗದಿಂದ ಆ ಅಶೋಕವನದಲ್ಲಿದ್ದ ವೃಕ್ಷಗಳನ್ನು ಬಿರುಗಾಳಿಯಂತೆ ಒಂದೊಂದನ್ನಾಗಿ ಉರುಳಿಸಲು ಉಪಕ್ರಮಿಸಿದನು.॥14॥

ಮೂಲಮ್ - 15

ತತಸ್ತು ಹನುಮಾನ್ ವೀರೋ ಬಭಂಜ ಪ್ರಮದಾವನಮ್ ।
ಮತ್ತದ್ವಿಜಸಮಾಘುಷ್ಟಂ ನಾನಾದ್ರುಮಲತಾಯುತಮ್ ॥

ಅನುವಾದ

ಮದಿಸಿದ ಪಕ್ಷಿಗಳಿಂದ ಕಲಕಲಾಯಮಾನವಾಗಿದ್ದ, ನಾನಾ ವಿಧವಾದ ವೃಕ್ಷಗಳಿಂದಲೂ, ಲತೆಗಳಿಂದಲೂ ಕೂಡಿದ್ದ, ಅಂತಃಪುರದ ನಾರಿಯರ ವಿಹಾರಕ್ಕಾಗಿಯೇ ನಿರ್ಮಿಸಿದ್ದ ಆ ಪ್ರಮದಾವನವನ್ನು ಧ್ವಂಸ ಮಾಡಿದನು.॥15॥

ಮೂಲಮ್ - 16

ತದ್ವನಂ ಮಥಿತೈರ್ವೃಕ್ಷೈರ್ಭಿನ್ನೈಶ್ಚ ಸಲಿಲಾಶಯೈಃ ।
ಚೂರ್ಣಿತೈಃ ಪರ್ವತಾಗ್ರೈಶ್ಚ ಬಭೂವಾಪ್ರಿಯದರ್ಶನಮ್ ॥

ಅನುವಾದ

ಆ ವನದಲ್ಲಿದ್ದ ವೃಕ್ಷಗಳೆಲ್ಲ ನೆಲಸಮವಾದುವು. ಜಲಾಶಯಗಳು ಒಡೆದುಹೋದುವು. ಕ್ರೀಡಾ ಪರ್ವತಗಳು ನುಚ್ಚುನೂರಾದವು. ಆಗ ಆ ವನವು (ಪ್ರಾಣಗಳಿಲ್ಲದ ದೇಹದಂತೆ) ಶೋಭಾಹೀನವಾಯಿತು.॥16॥

ಮೂಲಮ್ - 17

ನಾನಾಶಕುಂತವಿರುತೈಃ ಪ್ರಭಿನ್ನೈಃ ಸಲಿಲಾಶಯೈಃ ।
ತಾಮ್ರೈಃ ಕಿಸಲಯೈಃ ಕ್ಲಾಂತೈಃ ಕ್ಲಾಂತದ್ರುಮಲತಾಯುತಮ್ ॥

ಮೂಲಮ್ - 18

ನ ಬಭೌ ತದ್ವನಂ ತತ್ರ ದಾವಾನಲಹತಂ ಯಥಾ ।
ವ್ಯಾಕುಲಾವರಣಾ ರೇಜುರ್ವಿಹ್ವಲಾ ಇವ ತಾ ಲತಾಃ ॥

ಅನುವಾದ

ಆ ವನದಲ್ಲಿದ್ದ ನಾನಾವಿಧವಾದ ಪಕ್ಷಿಗಳು ವಿಕೃತ ಧ್ವನಿಗಳಿಂದ ಅರಚುತ್ತಿದ್ದವು. ಅಲ್ಲಿಯ ಜಲಾಶಯಗಳು ಛಿನ್ನ-ಭಿನ್ನವಾದವು. ಕೆಂಪಾದ ಹಾಗೂ ಬಾಡಿಹೋದ ಚಿಗುರುಗಳಿಂದಲೂ, ಮರ-ಬಳ್ಳಿಗಳಿಂದಲೂ ಸಮಾಕುಲವಾಗಿದ್ದ ಆ ಪ್ರಮದಾವನವು ಕಾಳ್ಗಿಚ್ಚಿನಿಂದ ಸುಟ್ಟುಹೋದ ವನದಂತೆ ಶೋಭಾಹೀನವಾಯಿತು. ಆಧಾರಭೂತವಾಗಿದ್ದ ವೃಕ್ಷಗಳು ನೆಲಸಮವಾದಾಗ ಅದರಲ್ಲಿ ಹಬ್ಬಿದ ಬಳ್ಳಿಗಳು ನಿರಾಶ್ರಯರಾಗಿ, ವಿಹ್ವಲಳಾದ ಸ್ತ್ರೀಯಂತೆ ಕಳಾಹೀನವಾದುವು.॥17-18॥

ಮೂಲಮ್ - 19

ಲತಾಗೃಹೈಶ್ಚಿತ್ರಗೃಹೈಶ್ಚ ನಾಶಿತೈ
ರ್ಮಹೋರಗೈರ್ವ್ಯಾಲಮೃಗೈಶ್ಚ ನಿರ್ಧುತೈಃ ।
ಶಿಲಾಗೃ ಹೈರುನ್ಮ ಥಿತೈಸ್ತಥಾ ಗೃಹೈಃ
ಪ್ರನಷ್ಟ ರೂಪಂ ತದಭೂನ್ಮಹದ್ವನಮ್ ॥

ಅನುವಾದ

ಮಾರುತಿಯ ದಾಂಧಲೆಯಿಂದ ಅಲ್ಲಿದ್ದ ಲತಾಗೃಹಗಳು, ಚಿತ್ರಶಾಲೆಗಳು ಉಧ್ವಸ್ತವಾದುವು. ಅಲ್ಲಿದ್ದ ಮಹಾಸರ್ಪಗಳೂ, ದೊಡ್ಡ ಹುಲಿಗಳೂ, ಮೃಗಗಳೂ ಮೊದಲಾದ ಕ್ರೂರಜಂತುಗಳು ಪೀಡಿತರಾಗಿ ಆರ್ತಧ್ವನಿಗಳನ್ನು ಮಾಡುತ್ತಿದ್ದವು. ಕ್ರೀಡಾಪರ್ವತ ಗುಹೆಗಳನ್ನು, ಇತರ ಗೃಹಗಳನ್ನು ಕಿತ್ತೆಸೆದನು. ಇದರಿಂದ ಆ ಸುಂದರ ವನವು ತನ್ನ ಹಿಂದಿನ ಸೌಂದರ್ಯವನ್ನು ಪೂರ್ಣವಾಗಿ ಕಳಕೊಂಡಿತು.॥19॥

ಮೂಲಮ್ - 20

ಸಾ ವಿಹ್ವಲಾಶೋಕಲತಾಪ್ರತಾನಾ
ವನಸ್ಥಲೀ ಶೋಕಲತಾಪ್ರತಾನಾ ।
ಜಾತಾ ದಶಾಸ್ಯಪ್ರಮದಾವನಸ್ಯ
ಕಪೇರ್ಬಲಾದ್ಧಿ ಪ್ರಮದಾವನಸ್ಯ ॥

ಅನುವಾದ

ರಾವಣಾಸುರನ ಭಾರ್ಯೆಯರಿಗೆ ರಕ್ಷಕವಾಗಿದ್ದ, ಅಂತಃಪುರದ ಸ್ತ್ರೀಯರ ವಿಹಾರ ಪ್ರದೇಶವಾಗಿದ್ದ, ಅಶೋಕಲತೆಗಳಿಂದ ಶೋಭಾಯಮಾನವಾಗಿದ್ದ ಆ ಪ್ರಮದಾವನವು ಸೀತೆಯನ್ನು ರಕ್ಷಿಸುತ್ತಾ ಹನುಮಂತನ ಬಲದ ಕಾರಣದಿಂದಾಗಿ ವಿಹ್ವಲಗೊಂಡು ಬಾಡಿಹೋದ ಲತೆಗಳ ಸಮೂಹದಿಂದ ಕೂಡಿದ ಆ ಅಶೋಕವನವು ಶೋಕಪ್ರದವಾಗಿ ಪರಿಣಮಿಸಿತು.॥20॥

ಮೂಲಮ್ - 21

ಸ ತಸ್ಯ ಕೃತ್ವಾರ್ಥಪತೇರ್ಮಹಾಕಪಿಃ
ಮಹದ್ವ್ಯಲೀಕಂ ಮನಸೋ ಮಹಾತ್ಮನಃ ।
ಯುಯುತ್ಸು ರೇಕೋ ಬಹುಭಿರ್ಮಹಾಬಲೈಃ
ಶ್ರಿಯಾ ಜ್ವಲಂಸ್ತೋರಣಮಾಸ್ಥಿತಃ ಕಪಿಃ ॥

ಅನುವಾದ

ಹೀಗೆ ಆ ಕಪೀಶ್ವರನು ಹೆಚ್ಚಾದ ಬಲಶಾಲಿಯಾದ ರಾವಣನ ಮನಸ್ಸಿಗೆ ಕ್ಲೇಶವನ್ನುಂಟುಮಾಡಲು ವನಭಂಗವನ್ನು ಮಾಡಿದನು. ಬಳಿಕ ಮಹಾಬಲಶಾಲಿಗಳಾದ ರಾಕ್ಷಸಯೋಧರೊಡನೆ ಒಬ್ಬಂಟಿಗನಾಗಿ ಯುದ್ಧಮಾಡುವ ಬಯಕೆಯಿಂದ ಉತ್ಸಾಹ, ಶಕ್ತಿಯಿಂದ ಪ್ರಜ್ವಲಿಸುತ್ತಾ ಆ ಅಶೋಕವನದ ಹೊರಬಾಗಿಲಿಗೆ ಬಂದು ನಿಂತು, ಶತ್ರುಗಳನ್ನು ಎದುರು ನೋಡತೊಡಗಿದನು.॥21॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕಚತ್ವಾರಿಂಶಃ ಸರ್ಗಃ ॥ 41 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತೊಂದನೆಯ ಸರ್ಗವು ಮುಗಿಯಿತು.