०४० हनुमता सीताश्वासनम्

वाचनम्
ಭಾಗಸೂಚನಾ

ಸೀತಾದೇವಿಯು ಶ್ರೀರಾಮನಿಗೆ ಪುನಃ ಸಂದೇಶವನ್ನು ನೀಡಿದುದು, ಹನುಮಂತನು ಅವಳಿಗೆ ಆಶ್ವಾಸನೆಯನ್ನು ನೀಡಿದುದು

ಮೂಲಮ್ - 1

ಶ್ರುತ್ವಾ ತು ವಚನಂ ತಸ್ಯ ವಾಯುಸೂನೋರ್ಮಹಾತ್ಮನಃ ।
ಉವಾಚಾತ್ಮ ಹಿತಂ ವಾಕ್ಯಂ ಸೀತಾ ಸುರಸುತೋಪಮಾ ॥

ಅನುವಾದ

ದೇವಕನ್ಯೆಯಂತೆ ಕಾಣುತ್ತಿದ್ದ ಸೀತಾದೇವಿಯು ಮಹಾತ್ಮನಾದ ವಾಯುಪುತ್ರನ ಆ ಮಾತುಗಳನ್ನು ಕೇಳಿ, ತನಗೆ ಹಿತಕರವಾಗುವ ಮಾತನ್ನು ಹೇಳಿದಳು.॥1॥

ಮೂಲಮ್ - 2

ತ್ವಾಂ ದೃಷ್ಟ್ವಾ ಪ್ರಿಯವಕ್ತಾರಂ ಸಂಪ್ರಹೃಷ್ಯಾಮಿ ವಾನರ ।
ಅರ್ಧಸಂಜಾತಸಸ್ಯೇವ ವೃಷ್ಟಿಂ ಪ್ರಾಪ್ಯ ವಸುಂಧರಾ ॥

ಅನುವಾದ

ಎಲೈ ವಾನರೋತ್ತಮಾ! ಭೂಮಿಯಲ್ಲಿ ಮೊಳಕೆಯೊಡೆದು ಬಾಡಿಹೋಗುತ್ತಿರುವ ಸಸ್ಯವು ಮಳೆ ಬಿದ್ದಾಗ ವಿಕಸಿತವಾಗುವಂತೆ, ಪ್ರಿಯಭಾಷಿಯಾದ ನಿನ್ನನ್ನು ನೋಡಿ ನಾನು ಹೆಚ್ಚಾದ ಸಂತೋಷವನ್ನು ಪಡುತ್ತಿದ್ದೇನೆ.॥2॥

ಮೂಲಮ್ - 3

ಯಥಾ ತಂ ಪುರುಷವ್ಯಾಘ್ರಂ ಗಾತ್ರೈಃ ಶೋಕಾಭಿಕರ್ಶಿತೈಃ ।
ಸಂಸ್ಪೃಶೇಯಂ ಸಕಾಮಾಹಂ ತಥಾ ಕುರು ದಯಾಂ ಮಯಿ ॥

ಅನುವಾದ

ಶೋಕದಿಂದಾಗಿ ನಾನು ಅತಿಯಾಗಿ ಕೃಶಳಾಗಿರುವೆನು. ಹೇಗಾದರೂ ಮಹಾಪುರುಷನಾದ ನನ್ನ ಸ್ವಾಮಿಯ ಸ್ಪರ್ಶ ಸುಖವನ್ನು ಹೊಂದುವಂತಾಗಬೇಕು. ವಾಯುಪುತ್ರನೇ! ನನ್ನ ಮೇಲೆ ದಯೆದೋರಿ, ನನ್ನೀ ಮನೋರಥವನ್ನು ಈಡೇರುವಂತೆ ಕಾರ್ಯಮಾಡು.॥3॥

ಮೂಲಮ್ - 4

ಅಭಿಜ್ಞಾನಂ ಚ ರಾಮಸ್ಯ ದದ್ಯಾ ಹರಿಗಣೋತ್ತಮ ।
ಕ್ಷಿಪ್ತಾಮಿಷೀಕಾಂ ಕಾಕಸ್ಯ ಕೋಪಾದೇಕಾಕ್ಷಿಶಾತನೀಮ್ ॥

ಅನುವಾದ

ನನ್ನ ನೆನಪು ಬರುವಂತಹ ಈ ಚೂಡಾಮಣಿಯನ್ನು ಶ್ರೀರಾಮನಿಗೆ ಕೊಡು. ನನ್ನ ಸಲುವಾಗಿ ಐಷಿಕಾಸ್ತ್ರವನ್ನು ಕಾಕಾಸುರನ ಮೇಲೆ ಪ್ರಯೋಗಿಸಿ, ಅವನ ಒಂದು ಕಣ್ಣನ್ನು ಕಿತ್ತ ಕಥೆಯನ್ನೂ ಅವನಿಗೆ ಹೇಳು.॥4॥

ಮೂಲಮ್ - 5

ಮನಃಶಿಲಾಯಾಸ್ತಿಲಕೋ ಗಂಡಪಾರ್ಶ್ವೇ ನಿವೇಶಿತಃ ।
ತ್ವಯಾ ಪ್ರನಷ್ಟೇ ತಿಲಕೇ ತಂ ಕಿಲ ಸ್ಮರ್ತುಮರ್ಹಸಿ ॥

ಅನುವಾದ

ರಾಮಭದ್ರಾ! ಒಮ್ಮೆ ನನ್ನ ಹಣೆಯಲ್ಲಿದ್ದ ತಿಲಕವು ಅಳಿಸಿಹೋದಾಗ ನೀನು ಮಣಿಶಿಲೆಯ ತಿಲಕವನ್ನು ನನ್ನ ಕೆನ್ನೆಯ ಮೇಲೆ ತಿದ್ದಿದ್ದೆಯಲ್ಲ! ಆ ವಿಷಯವನ್ನು ಜ್ಞಾಪಿಸಿಕೊ.॥5॥

ಮೂಲಮ್ - 6

ಸ ವೀರ್ಯವಾನ್ ಕಥಂ ಸೀತಾಂ ಹೃತಾಂ ಸಮನುಮನ್ಯಸೇ ।
ವಸಂತೀಂ ರಕ್ಷಸಾಂ ಮಧ್ಯೇ ಮಹೇಂದ್ರವರುಣೋಪಮಃ ॥

ಅನುವಾದ

ಮಹೇಂದ್ರನಿಗೂ, ವರುಣನಿಗೂ ಸಮಾನವಾದ ಪರಾಕ್ರಮಶಾಲಿಯಾಗಿದ್ದರೂ, ನಿನ್ನ ಭಾರ್ಯೆಯಾದ ಸೀತೆಯನ್ನು (ನನ್ನನ್ನು) ರಾವಣನು ಅಪಹರಿಸಿ ತಂದು, ರಾಕ್ಷಸಿಯರ ಕಾವಲಿನಲ್ಲಿರಿಸಿದುದನ್ನು ನೀನು ಹೇಗೆ ತಾನೇ ಸಹಿಸಿಕೊಂಡಿರುವೆ?॥6॥

ಮೂಲಮ್ - 7

ಏಷ ಚೂಡಾಮಣಿರ್ದಿವ್ಯೋ ಮಯಾ ಸುಪರಿರಕ್ಷಿತಃ ।
ಏತಂ ದೃಷ್ಟ್ವಾ ಪ್ರಹೃಷ್ಯಾಮಿ ವ್ಯಸನೇ ತ್ವಾಮಿವಾನಘ ॥

ಅನುವಾದ

ಓ ಸತ್ಪುರುಷನೇ! ಈ ದಿವ್ಯವಾದ ಚೂಡಾಮಣಿಯನ್ನು ನಾನು ಇಷ್ಟರವರೆಗೆ ಕಾಪಾಡಿಕೊಂಡು ಬಂದಿರುವೆನು. ಈ ದುಃಖ ಸಮಯದಲ್ಲಿಯೂ ಕೂಡ ಇದನ್ನು ನೋಡುತ್ತಾ ನಿನ್ನನ್ನೇ ದರ್ಶಿಸಿದಂತೆ ಸಂತೋಷಪಡುತ್ತಿದ್ದೆ.॥7॥

ಮೂಲಮ್ - 8

ಏಷ ನಿರ್ಯಾತಿತಃ ಶ್ರೀಮಾನ್ ಮಯಾ ತೇ ವಾರಿಸಂಭವಃ ।
ಅತಃ ಪರಂ ನ ಶಕ್ಷ್ಯಾಮಿ ಜೀವಿತುಂ ಶೋಕಲಾಲಸಾ ॥

ಅನುವಾದ

ಸಮುದ್ರದಲ್ಲಿ ಹುಟ್ಟಿದ*, ಕಾಂತಿಯುಕ್ತವಾದ ಈ ಮಣಿಯನ್ನು ನಿನಗೆ ಕಳಿಸಿಕೊಡುತ್ತಿದ್ದೇನೆ. ಶೋಕಮಗ್ನಳಾದ ನಾನು ಇದನ್ನು ಕಾಣಲಾರದೆ ಇನ್ನು ಮುಂದೆ ಜೀವಿಸಿರಲೂ ಶಕ್ಯವಿಲ್ಲ.॥8॥

ಟಿಪ್ಪನೀ
  • ರತ್ನಾಕರದಲ್ಲಿ ಹುಟ್ಟಿದ ಈ ಚೂಡಾಮಣಿಯನ್ನು ಸಮುದ್ರವು ವರುಣನಿಗೆ ಕೊಟ್ಟಾಗ ವರುಣನು ಜನಕನೀಗೆ ನೀಡಿದನು. ಜನಕಮಹಾರಾಜನು ಆ ಮಣಿಯನ್ನು ತನ್ನ ಪತ್ನಿಯ ಕೈಗೆ ಇತ್ತನು. ಅವಳು ದಶರಥ ಮಹಾರಾಜರ ಸಮಕ್ಷಮದಲ್ಲಿ ಸೀತೆಯ ವಿವಾಹ ಕಾಲದಲ್ಲಿ ಅದನ್ನು ಸೀತೆಗೆ ಕೊಟ್ಟಿದ್ದಳು.
ಮೂಲಮ್ - 9

ಅಸಹ್ಯಾನಿ ಚ ದುಃಖಾನಿ ವಾಚಶ್ಚ ಹೃದಯಚ್ಛಿದಃ ।
ರಾಕ್ಷಸೀನಾಂ ಸುಘೋರಾಣಾಂ ತ್ವತ್ಕೃತೇ ಮರ್ಷಯಾಮ್ಯಹಮ್ ॥

ಅನುವಾದ

ಭಯಂಕರವಾದ ರಾಕ್ಷಸ ಸ್ತ್ರೀಯರು ಕೊಟ್ಟಿರುವ ಅಸಹ್ಯವಾದ ದುಃಖಗಳನ್ನೂ, ಹೃದಯವಿದ್ರಾವಕವಾದ ಮಾತುಗಳೆಲ್ಲವನ್ನೂ ನಿಮ್ಮ ಸಲುವಾಗಿ (ಎಂದಾದರು ನೀವು ಬಂದು ನನ್ನನ್ನು ರಕ್ಷಿಸುವಿರಿ ಎಂಬ ಆಶೆಯಿಂದ) ಇಷ್ಟರವರೆಗೆ ಸಹಿಸಿಕೊಂಡೆನು. ॥9॥

ಮೂಲಮ್ - 10

ಧಾರಯಿಷ್ಯಾಮಿ ಮಾಸಂ ತು ಜೀವಿತಂ ಶತ್ರುಸೂದನ ।
ಮಾಸಾದೂರ್ಧ್ವಂ ನ ಜೀವಿಷ್ಯೇ ತ್ವಯಾ ಹೀನಾ ನೃಪಾತ್ಮಜ ॥

ಅನುವಾದ

ರಾಜಕುಮಾರನೇ! ಶತ್ರುಸೂದನಾ! ರಾಮಾ! ಒಂದು ತಿಂಗಳವರೆಗೆ ಮಾತ್ರ ನಾನು ಪ್ರಾಣಗಳನ್ನು ಧರಿಸಿಕೊಂಡಿರುತ್ತೇನೆ. ಅಷ್ಟರೊಳಗೆ ನೀನು ಬಾರದಿದ್ದರೆ ನಾನು ಜೀವಿಸಿ ಇರುವುದಿಲ್ಲ.॥10॥

ಮೂಲಮ್ - 11

ಘೋರೋ ರಾಕ್ಷಸರಾಜೋಯಂ ದೃಷ್ಟಿಶ್ಚ ನ ಸುಖಾ ಮಯಿ ।
ತ್ವಾಂ ಚ ಶ್ರುತ್ವಾ ವಿಷಜ್ಜಂತಂ ನ ಜೀವೇಯಮಹಂ ಕ್ಷಣಮ್ ॥

ಅನುವಾದ

ಈ ರಾಕ್ಷಸನಾದರೋ ಬಹು ಭಯಂಕರನು. ಮೇಲಾಗಿ ಇವನ ನೋಟವೂ ನನ್ನನ್ನು ತುಂಬಾ ಬಾಧಿಸುತ್ತದೆ. ನೀನೂ ಬರಲು ವಿಳಂಬ ಮಾಡಿದರೆ, ಅವಧಿ ತೀರಿದಾಕ್ಷಣ ಒಂದರೆಕ್ಷಣವೂ ನನ್ನ ಪ್ರಾಣಗಳು ಇರಲಾರವು.॥11॥

ಮೂಲಮ್ - 12

ವೈದೇಹ್ಯಾ ವಚನಂ ಶ್ರುತ್ವಾ ಕರುಣಂ ಸಾಶ್ರುಭಾಷಿತಮ್ ।
ಅಥಾಬ್ರವೀನ್ಮಹಾತೇಜಾ ಹನುಮಾನ್ ಮಾರುತಾತ್ಮಜಃ ॥

ಅನುವಾದ

ವಾಯುಪುತ್ರನೇ! ನನ್ನ ಈ ಎಲ್ಲ ಮಾತುಗಳನ್ನು ನೀನು ಯಥಾವತ್ತಾಗಿ ಶ್ರೀರಾಮನಿಗೆ ಹೇಳು. ಹೀಗೆ ವೈದೇಹಿಯು ಕಣ್ಣೀರಿಡುತ್ತಾ ಕರುಣಾಜನಕವಾದ ಮಾತುಗಳನ್ನು ಕೇಳಿ ಮಹಾತೇಜಸ್ವಿಯಾದ ವಾಯುನಂದನನು ಹೀಗೆ ಹೇಳಿದನು.॥12॥

ಮೂಲಮ್ - 13

ತ್ವಚ್ಛೋಕವಿಮುಖೋ ರಾಮೋ ದೇವಿ ಸತ್ಯೇನ ತೇ ಶಪೇ ।
ರಾಮೇ ದುಃಖಾಭಿಭೂತೇ ತು ಲಕ್ಷ್ಮಣಃ ಪರಿತಪ್ಯತೇ ॥

ಅನುವಾದ

ದೇವಿಯೇ! ಶ್ರೀರಾಮನು ನಿನ್ನ ಶೋಕದಿಂದಾಗಿ ಸುಖ ಭೋಗಗಳಿಂದ ವಿಮುಖನಾಗಿದ್ದಾನೆ. ಇದನ್ನು ಸತ್ಯದ ಮೇಲೆ ಆಣೆಯಿಟ್ಟು ಹೇಳುತ್ತೇನೆ. ಶ್ರೀರಾಮನು ದುಃಖಿತನಾಗಿರುವುದನ್ನು ನೋಡಿ ಲಕ್ಷ್ಮಣನೂ ಹೆಚ್ಚಾಗಿ ಪರಿತಪಿಸುತ್ತಿದ್ದಾನೆ.॥13॥

ಮೂಲಮ್ - 14

ಕಥಂಚಿದ್ಭವತೀ ದೃಷ್ಟಾ ನ ಕಾಲಃ ಪರಿಶೋಚಿತುಂ ।
ಇಮಂ ಮುಹೂರ್ತಂ ದುಃಖಾನಾಮಂತಂ ದ್ರಕ್ಷ್ಯಸಿ ಭಾಮಿನಿ ॥

ಅನುವಾದ

ಹೇಗೋ ದೈವಕೃಪೆಯಿಂದ ನಾನು ನಿನ್ನನ್ನು ಕಂಡೆನು. ಆದುದರಿಂದ ಶೋಕಪಡಬೇಕಾದ ಕಾಲವಿನ್ನಿಲ್ಲ. ಈ ಕ್ಷಣದಿಂದಲೇ ದುಃಖಗಳು ದೂರಾದುವೆಂದು ನೀನು ಭಾವಿಸು.॥14॥

ಮೂಲಮ್ - 15

ತಾವುಭೌ ಪುರುಷವ್ಯಾಘ್ರೌ ರಾಜಪುತ್ರಾವರಿಂದಮೌ ।
ತ್ವದ್ದರ್ಶನಕೃತೋತ್ಸಾಹೌ ಲಂಕಾಂ ಭಸ್ಮೀಕರಿಷ್ಯತಃ ॥

ಅನುವಾದ

ಶತ್ರುಸಂಹಾರಕರೂ, ಪುರುಷವ್ಯಾಘ್ರರೂ ಆದ ಆ ರಾಜಕುಮಾರರು ಇಬ್ಬರೂ ನಿನ್ನನ್ನು ನೋಡಲು ಉತ್ಸಾಹಿತರಾಗಿದ್ದಾರೆ. ಈ ಕಾರಣದಿಂದ ಅವರು ಲಂಕೆಯನ್ನು ಸುಟ್ಟು ಬೂದಿಮಾಡಿಬಿಡುತ್ತಾರೆ.॥15॥

ಮೂಲಮ್ - 16

ಹತ್ವಾತು ಸಮರೇ ಕ್ರೂರಂ ರಾವಣಂ ಸಹಬಾಂಧವಮ್ ।
ರಾಘವೌ ತ್ವಾಂ ವಿಶಾಲಾಕ್ಷಿ ಸ್ವಾಂ ಪುರೀಂ ಪ್ರಾಪಯಿಷ್ಯತಃ ॥

ಅನುವಾದ

ಎಲೈ ವಿಶಾಲಾಕ್ಷಿಯೇ! ಆ ರಾಮ - ಲಕ್ಷ್ಮಣರು ದುರ್ಮಾರ್ಗಿಯಾದ ರಾವಣನನ್ನು ಬಂಧು-ಮಿತ್ರ ಪರಿವಾರ ಸಹಿತವಾಗಿ ರಣಭೂಮಿಯಲ್ಲಿ ಬಲಿಗೊಟ್ಟು, ನಿನ್ನನ್ನು ಅಯೋಧ್ಯೆಗೆ ಕರಕೊಂಡು ಹೋಗುತ್ತಾರೆ.॥16॥

ಮೂಲಮ್ - 17

ಯತ್ತು ರಾಮೋ ವಿಜಾನೀಯಾತ್ ಅಭಿಜ್ಞಾನಮನಿಂದಿತೇ ।
ಪ್ರೀತಿಸಂಜನನಂ ತಸ್ಯ ಭೂಯಸ್ತ್ವಂ ದಾತುಮರ್ಹಸಿ ॥

ಅನುವಾದ

ಓ ಪೂಜ್ಯಳೇ! ಶ್ರೀರಾಮನಿಗೆ ಸಂತೋಷವಾಗುವಂತಹ ಅವನು ಗುರುತಿಸುವಂತಹ ಇನ್ನೊಂದು ಅಭಿಜ್ಞಾನವನ್ನು ಕರುಣಿಸು.॥17॥

ಮೂಲಮ್ - 18

ಸಾಬ್ರವೀದ್ದ ತ್ತಮೇವೇತಿ ಮಯಾಭಿಜ್ಞಾನಮುತ್ತಮಮ್ ।
ಏತದೇವ ಹಿ ರಾಮಸ್ಯ ದೃಷ್ಟ್ವಾ ಮತ್ಕೇಶಭೂಷಣಮ್ ॥

ಅನುವಾದ

ಹನುಮಂತನ ಆ ಪ್ರಾರ್ಥನೆಗೆ ಉತ್ತರವಾಗಿ ಸೀತೆಯು ಹೇಳಿದಳು-ವೀರನೇ! ಅಂತಹ ಅಪೂರ್ವವಾದ ಅಭಿಜ್ಞಾನವನ್ನು ನಾನೀಗಲೇ ನಿನಗೆ ಕೊಟ್ಟಾಗಿದೆ. ನನ್ನ ಕೇಶ ಭೂಷಣವಾದ ಈ ಚೂಡಾಮಣಿಯನ್ನು ನೋಡಿದೊಡನೆಯೇ ಶ್ರೀರಾಮನಿಗೆ ನೀನು ಹೇಳುವ ಮಾತುಗಳಲ್ಲಿ ವಿಶ್ವಾಸ ಉಂಟಾಗುವುದು.॥18॥

ಮೂಲಮ್ - 19

ಶ್ರದ್ಧೇಯಂ ಹನುಮನ್ ವಾಕ್ಯಂ ತವ ವೀರ ಭವಿಷ್ಯತಿ ।
ಸ ತಂ ಮಣಿವರಂ ಗೃಹ್ಯ ಶ್ರೀಮಾನ್ ಪ್ಲವಗಸತ್ತಮಃ ॥

ಅನುವಾದ

ಸೀತಾದೇವಿಯು ಹೀಗೆ ಹೇಳಲು ಸರ್ವಶುಭಲಕ್ಷಣ ಸಂಪನ್ನನಾದ ಕಪಿಶ್ರೇಷ್ಠನು ಶ್ರೇಷ್ಠವಾದ ಆ ಮಣಿರತ್ನವನ್ನು ತೆಗೆದುಕೊಂಡು ಸೀತಾದೇವಿಗೆ ತಲೆಬಾಗಿ ನಮಸ್ಕರಿಸಿ ಹೊರಡಲನುವಾದನು.॥19॥

ಮೂಲಮ್ - 20

ಪ್ರಣಮ್ಯ ಶಿರಸಾ ದೇವೀಂ ಗಮನಾಯೋಪಚಕ್ರಮೇ ।
ತಮುತ್ಪಾತಕೃತೋತ್ಸಾಹಮವೇಕ್ಷ್ಯ ಹರಿಪುಂಗವಮ್ ॥

ಮೂಲಮ್ - 21

ವರ್ಧಮಾನಂ ಮಹಾವೇಗಮುವಾಚ ಜನಕಾತ್ಮಜಾ ।
ಅಶ್ರುಪೂರ್ಣಮುಖೀ ದೀನಾ ಬಾಷ್ಪಗದ್ಗದಯಾ ಗಿರಾ ॥

ಅನುವಾದ

ಸಮುದ್ರವನ್ನು ಲಂಘಿಸುವ ಉತ್ಸಾಹದಿಂದ, ಎತ್ತರವಾಗಿ ಬೆಳೆದಿದ್ದ, ಮಹಾವೇಗಶಾಲಿಯಾದ ಹನುಮಂತನನ್ನು ನೋಡಿ, ಕಂಬನಿದುಂಬಿದ ಮುಖವುಳ್ಳವಳಾಗಿದ್ದ, ದೀನಳಾದ ಜಾನಕಿಯು ಕಣ್ಣೀರು ಸುರಿಸುತ್ತಾ ಗದ್ಗದ ಧ್ವನಿಯಿಂದ ಇಂತೆಂದಳು. ॥20-21॥

ಮೂಲಮ್ - 22

ಹನುಮನ್ ಸಿಂಹಸಂಕಾಶೌ ಭ್ರಾತರೌ ರಾಮಲಕ್ಷ್ಮಣೌ ।
ಸುಗ್ರೀವಂ ಚ ಸಹಾಮಾತ್ಯಂ ಸರ್ವಾನ್ ಬ್ರೂಯಾ ಹ್ಯನಾಮಯಂ ॥

ಅನುವಾದ

‘‘ವಾಯುಪುತ್ರನೇ! ಸಿಂಹಸದೃಶರಾದ ಸಹೋದರರಾದ ರಾಮ-ಲಕ್ಷ್ಮಣರಲ್ಲಿ, ಸುಗ್ರೀವನಲ್ಲಿ ಹಾಗೂ ಅಲ್ಲಿ ಇರುವವರೆಲ್ಲರಲ್ಲಿ ನಾನು ಕುಶಲ ಪ್ರಶ್ನೆಯನ್ನು ಕೇಳಿದೆನೆಂದು ತಿಳಿಸು.॥22॥

ಮೂಲಮ್ - 23

ಯಥಾ ಚ ಸ ಮಹಾಬಾಹುರ್ಮಾಂ ತಾರಯತಿ ರಾಘವಃ ।
ಅಸ್ಮಾದ್ದುಃಖಾಂಬುಸಂರೋಧಾತ್ತ್ವಂ ಸಮಾಧಾತುಮರ್ಹಸಿ ॥

ಅನುವಾದ

ನನ್ನನ್ನು ಈ ದುಃಖಸಾಗರದಿಂದ ಪಾರು ಮಾಡುವಂತೆ ಮಹಾಬಾಹುವಾದ ಶ್ರೀರಾಮನನ್ನು ತೊಡಗಿಸುವ ಕಾರ್ಯಭಾರವು ನಿನ್ನದಾಗಿದೆ.॥23॥

ಮೂಲಮ್ - 24

ಇಮಂ ಚ ತೀವ್ರಂ ಮಮ ಶೋಕವೇಗಂ
ರಕ್ಷೋಭಿರೇಭಿಃ ಪರಿಭರ್ತ್ಸನಂ ಚ ।
ಬ್ರೂಯಾಸ್ತು ರಾಮಸ್ಯ ಗತಃ ಸಮೀಪಂ
ಶಿವಶ್ಚತೇಽಧ್ವಾಸ್ತು ಹರಿಪ್ರವೀರ ॥

ಅನುವಾದ

ಕಪಿಶ್ರೇಷ್ಠನೇ! ಶ್ರೀರಾಮನ ಬಳಿಗೆ ಹೋದಾಕ್ಷಣ, ನನ್ನ ಶೋಕದ ಆವೇಗವನ್ನೂ, ಈ ರಾಕ್ಷಸಿಯರು ನನ್ನನ್ನು ಭಯಪಡಿಸಲು ಅನುದಿನವೂ ಆಡಿದ ಮಾತುಗಳನ್ನೂ, ನೀನು ಅವರಿಗೆ ನಿವೇದಿಸು. ನಿನ್ನ ಪ್ರಯಾಣವು ಮಂಗಳಮಯವಾಗಲೀ.॥24॥

ಮೂಲಮ್ - 25

ಸ ರಾಜಪುತ್ರ್ಯಾ ಪ್ರತಿವೇದಿತಾರ್ಥಃ
ಕಪಿಃ ಕೃತಾರ್ಥಃ ಪರಿಹೃಷ್ಟಚೇತಾಃ ।
ಅಲ್ಪಾವಶೇಷಂ ಪ್ರಸಮೀಕ್ಷ್ಯ ಕಾರ್ಯಂ
ದಿಶಂ ಹ್ಯುದೀಚೀಂ ಮನಸಾ ಜಗಾಮ ॥

ಅನುವಾದ

ರಾಜಪುತ್ರಿಯಾದ ಸೀತಾದೇವಿಯ ಅಭಿಪ್ರಾಯವನ್ನು ಸಂಪೂರ್ಣವಾಗಿ ಅರಿತುಕೊಂಡು, ಕೃತ-ಕೃತ್ಯನೂ, ಪರಮ ಸಂತುಷ್ಟನೂ ಆದ ಆಂಜನೇಯನು - ತನ್ನ ಕಾರ್ಯವು ಸ್ವಲ್ಪವೇ ಉಳಿದಿರುವುದೆಂಬುದನ್ನು ನಿಶ್ಚಯಿಸಿ, ಉತ್ತರ ದಿಕ್ಕಿನ ಕಡೆಗೆ ಹೋಗಲು ಮನಸ್ಸು ಮಾಡಿದನು.॥25॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಚತ್ವಾರಿಂಶಃ ಸರ್ಗಃ ॥ 40 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಲವತ್ತನೆಯ ಸರ್ಗವು ಮುಗಿಯಿತು.