वाचनम्
ಭಾಗಸೂಚನಾ
ಶ್ರೀರಾಮನಿಗೆ ಸೀತಾಸಂದೇಶ, ಆಂಜನೇಯನು ಆಕೆಯನ್ನು ಸಮಾಧಾನಪಡಿಸಿದ್ದು, ಸಮುದ್ರವನ್ನು ದಾಟಿಕೊಂಡು ಬರುವುದರಲ್ಲಿ ಸಂದೇಹಿಸಿದ ಸೀತಾದೇವಿಗೆ ಮಾರುತಿಯು ವಾನರನಾಯಕರ ಪರಾಕ್ರಮವನ್ನು ವಿವರಿಸಿ ಹೇಳಿದುದು
ಮೂಲಮ್ - 1
ಮಣಿಂ ದತ್ವಾ ತತಃಸೀತಾ ಹನುಮಂತಮಥಾಬ್ರವೀತ್ ।
ಅಭಿಜ್ಞಾನಮಭಿಜ್ಞಾತಂ ಏತದ್ರಾಮಸ್ಯ ತತ್ತ್ವತಃ ॥
ಅನುವಾದ
ಚೂಡಾಮಣಿಯನ್ನು ಕೊಟ್ಟ ಬಳಿಕ ಸೀತಾದೇವಿಯು ಹನುಮಂತನ ಬಳಿ ಹೀಗೆ ಹೇಳಿದಳು - ಮಾರುತೀ! ನಾನೀಗ ಕೊಟ್ಟಿರುವ ಗುರುತು ಶ್ರೀರಾಮನು ಚೆನ್ನಾಗಿ ಗುರ್ತಿಸುವನು.॥1॥
ಮೂಲಮ್ - 2
ಮಣಿಂ ದೃಷ್ಟ್ವಾ ತು ರಾಮೋ ವೈ ತ್ರಯಾಣಾಂ ಸಂಸ್ಮರಿಷ್ಯತಿ ।
ವೀರೋ ಜನನ್ಯಾ ಮಮ ಚ ರಾಜ್ಞೋ ದಶರಥಸ್ಯ ಚ ॥
ಅನುವಾದ
ಈ ಚೂಡಾಮಣಿಯನ್ನು ಕೊಟ್ಟೊಡನೆಯೇ ವೀರವರನಾದ ಶ್ರೀರಾಮನು ನನ್ನ ತಾಯಿಯನ್ನೂ, ನನ್ನ ತಂದೆಯಾದ ಜನಕ ಮಹಾರಾಜನನ್ನೂ, ದಶರಥಮಹಾರಾಜರನ್ನೂ ಸ್ಮರಿಸಿಕೊಳ್ಳುವನು. ಹಾಗೆಯೇ ನನ್ನನ್ನೂ ನೆನೆಸಿಕೊಳ್ಳುವನು.॥2॥
ಮೂಲಮ್ - 3
ಸ ಭೂಯಸ್ತ್ವಂ ಸಮುತ್ಸಾಹ ಚೋದಿತೋ ಹರಿಸತ್ತಮ ।
ಅಸ್ಮಿನ್ ಕಾರ್ಯಸಮಾರಂಭೇ ಪ್ರಚಿಂತಯ ಯದುತ್ತರಮ್ ॥
ಮೂಲಮ್ - 4
ತ್ವಮಸ್ಮಿನ್ ಕಾರ್ಯನಿರ್ಯೋಗೇ ಪ್ರಮಾಣಂ ಹರಿಸತ್ತಮ ।
ಹನುಮನ್ ಯತ್ನಮಾಸ್ಥಾಯ ದುಃಖಕ್ಷಯಕರೋ ಭವ ॥
ಅನುವಾದ
ಹರಿಶ್ರೇಷ್ಠನೇ! ಮರಳಿ ಉತ್ಸಾಹವನ್ನು ಪಡೆದ ನೀನು ಈ ಕಾರ್ಯಸಿದ್ಧಿಗಾಗಿ ಮುಂದೆ ಮಾಡಬೇಕಾದ ಕರ್ತವ್ಯವನ್ನು ಆಲೋಚಿಸು. ಎಲೈ ಕಪೀಶ್ವರಾ! ಈ ಕಾರ್ಯವನ್ನು ನಿರ್ವಹಿಸಲು ನೀನೇ ತಕ್ಕವನಾದವನು. ಮಾರುತಿ! ಸೊಂಟಕಟ್ಟಿ ನನ್ನ ಬಿಡುಗಡೆಗಾಗಿ ಪ್ರಯತ್ನಶೀಲನಾಗಿ ನನ್ನ ದುಃಖವನ್ನು ನಿವಾರಿಸು.॥3-4॥
ಮೂಲಮ್ - 5
ತಸ್ಯ ಚಿಂತಯತೋ ಯತ್ನೋ ದುಃಖಕ್ಷಯಕರೋ ಭವೇತ್ ।
ಸ ತಥೇತಿ ಪ್ರತಿಜ್ಞಾಯ ಮಾರುತಿರ್ಭೀಮವಿಕ್ರಮಃ ॥
ಮೂಲಮ್ - 6
ಶಿರಸಾ ವಂದ್ಯ ವೈದೇಹೀಂ ಗಮನಾಯೋಪಚಕ್ರಮೇ ।
ಜ್ಞಾತ್ವಾ ಸಂಪ್ರಸ್ಥಿತಂ ದೇವೀ ವಾನರಂ ಮಾರುತಾತ್ಮಜಮ್ ॥
ಅನುವಾದ
ನೀನು ಚೆನ್ನಾಗಿ ಆಲೋಚಿಸಿ ಪ್ರಯತ್ನಿಸಿದರೆ ನಿಜವಾಗಿ ನನ್ನ ದುಃಖಗಳು ದೂರವಾಗುವುವು. ಸೀತೆಯ ಈ ಮಾತನ್ನು ಕೇಳಿದ ಬಳಿಕ ಭಯಂಕರ ಪರಾಕ್ರಮಿಯಾದ ಆ ಮಾರುತಿಯು ಹಾಗೇ ಮಾಡುವೆನು ಎಂದು ಪ್ರತಿಜ್ಞೆ ಮಾಡಿ ಅವಳಿಗೆ ಶಿರಬಾಗಿ ಪ್ರಣಾಮಗೈದು ಪ್ರಯಾಣಕ್ಕೆ ಸಿದ್ಧನಾದನು. ವಾಯುಸುತನಾದ ಹನುಮಂತನು ಪ್ರಯಾಣಮಾಡಲು ಹೊರಟಿರುವುದನ್ನು ಕಂಡು ಸೀತಾದೇವಿಯು ಕಣ್ಣಿರು ಸುರಿಸುತ್ತಾ ಗದ್ಗದ ಸ್ವರದಿಂದ ಇಂತೆಂದಳು.॥5-6॥
ಮೂಲಮ್ - 7
ಬಾಷ್ಪಗದ್ಗದಯಾ ವಾಚಾ ಮೈಥಿಲೀ ವಾಕ್ಯಮಬ್ರವೀತ್ ।
ಹನುಮನ್ ಕುಶಲಂ ಬ್ರೂಯಾಃ ಸಹಿತೌ ರಾಮಲಕ್ಷ್ಮಣೌ ॥
ಮೂಲಮ್ - 8
ಸುಗ್ರೀವಂ ಚ ಸಹಾಮಾತ್ಯಂ ಸರ್ವಾನ್ ವೃದ್ಧಾಂಶ್ಚ ವಾನರಾನ್ ।
ಬ್ರೂಯಾಸ್ತ್ವಂ ವಾನರಶ್ರೇಷ್ಠ ಕುಶಲಂ ಧರ್ಮಸಂಹಿತಮ್ ॥
ಅನುವಾದ
‘‘ಎಲೈ ವಾನರ ಶ್ರೇಷ್ಠನೇ! ಯಾವಾಗಲೂ ಜೊತೆಯಲ್ಲಿಯೇ ಇರುವ ರಾಮಲಕ್ಷ್ಮಣರಿಗೂ, ಅಮಾತ್ಯರಿಂದೊಡಗೂಡಿದ ಸುಗ್ರೀವನಿಗೂ, ನಾನು ಅವರ ಕ್ಷೇಮ ಸಮಾಚಾರವನ್ನು ಕೇಳಿದೆನೆಂದು ಹೇಳು. ಕಪಿಪುಂಗವನೇ! ಹಾಗೆಯೇ ವೃದ್ಧರಾದ ವಾನರ ಭಲ್ಲೂಕರೆಲ್ಲರಿಗೂ, ಧರ್ಮಪುರಸ್ಸರವಾಗಿ ಅವರವರ ಕುಶಲವನ್ನು ಕೇಳಿದೆನೆಂದು ಹೇಳು.॥7-8॥
ಮೂಲಮ್ - 9
ಯಥಾ ಸ ಚ ಮಹಾಬಾಹುರ್ಮಾಂ ತಾರಯತಿ ರಾಘವಃ ।
ಅಸ್ಮಾದ್ದುಃಖಾಂಬುಸಂರೋಧಾತ್ತ್ವಂ ಸಮಾಧಾತುಮರ್ಹಸಿ ॥
ಅನುವಾದ
ಆಜಾನುಬಾಹುವಾದ ಶ್ರೀರಾಮನು ನಿನ್ನ ಮಾತನ್ನು ಕೇಳಿದೊಡನೆ ನನ್ನನ್ನು ಇಲ್ಲಿಂದ ಪಾರುಮಾಡುವಂತಾಗಬೇಕು. ನನ್ನನ್ನು ಈ ದುಃಖಸಾಗರದಿಂದ ಉದ್ಧರಿಸುವಂತೆ ಮಾಡಲು ನೀನೇ ಸಮರ್ಥನಾಗಿರುವೆ.॥9॥
ಮೂಲಮ್ - 10
ಜೀವಂತೀಂ ಮಾಂ ಯಥಾ ರಾಮಃ ಸಂಭಾವಯತಿ ಕೀರ್ತಿಮಾನ್ ।
ತತ್ತಥಾ ಹನುಮನ್ ವಾಚ್ಯಂ ವಾಚಾ ಧರ್ಮ ಮವಾಪ್ನುಹಿ ॥
ಅನುವಾದ
ಕೀರ್ತಿವಂತನಾದ ಶ್ರೀರಾಮನು ನಾನಿನ್ನು ಜೀವಿಸಿರುವಾಗಲೇ ನನ್ನನ್ನು ಪಡೆದುಕೊಳ್ಳಲು ಸಮಾಲೋಚಿಸುವಂತೆ ಅವನಿಗೆ ಹೇಳಬೇಕು. ಹಾಗೆ ಮಾಡುವುದರಿಂದ ನೀನು ಪುಣ್ಯಶಾಲಿಯಾಗುವೆ.॥10॥
ಮೂಲಮ್ - 11
ನಿತ್ಯಮುತ್ಸಾಹಯುಕ್ತಾಶ್ಚ ವಾಚಃ ಶ್ರುತ್ವಾ ತ್ವಯೇರಿತಾಃ ।
ವರ್ಧಿಷ್ಯತೇ ದಾಶರಥೇಃ ಪೌರುಷಂ ಮದವಾಪ್ತಯೇ ॥
ಅನುವಾದ
ಅನವರತನಾಗಿ ಉತ್ಸಾಹಗೊಳಿಸುವಂತಹ ಈ ನನ್ನ ಮಾತುಗಳನ್ನು ಕೇಳುವುದರಿಂದ ನನ್ನನ್ನು ಹೊಂದುವ ಸಲುವಾಗಿ ಶ್ರೀರಾಮನ ಪೌರುಷವು ವರ್ಧಿಸುತ್ತದೆ.॥11॥
ಮೂಲಮ್ - 12
ಮತ್ಸಂದೇಶಯುತಾ ವಾಚಃ ತ್ವತ್ತಃ ಶ್ರುತ್ವೈವ ರಾಘವಃ ।
ಪರಾಕ್ರಮೇ ಮತಿಂ ವೀರೋ ವಿಧಿವತ್ಸಂವಿಧಾಸ್ಯತಿ ॥
ಅನುವಾದ
ಸಂದೇಶಯುಕ್ತವಾದ ನನ್ನ ಮಾತುಗಳನ್ನು ಕೇಳಿದೊಡನೆಯೇ ರಾಘವನು ತನ್ನ ಪರಾಕ್ರಮವನ್ನು ಪ್ರಕಟಿಸಲು ಯೋಗ್ಯವಾದ ನಿರ್ಣಯವನ್ನು ಕೈಗೊಳ್ಳುವನು.॥12॥
ಮೂಲಮ್ - 13
ಸೀತಾಯಾ ವಚನಂ ಶ್ರುತ್ವಾ ಹನುಮಾನ್ ಮಾರುತಾತ್ಮಜಃ ।
ಶಿರಸ್ಯಂಜಲಿಮಾಧಾಯ ವಾಕ್ಯಮುತ್ತರಮಬ್ರವೀತ್ ॥
ಅನುವಾದ
ಸೀತಾದೇವಿಯು ಹೇಳಿದ ಮಾತುಗಳನ್ನು ಕೇಳಿದ ವಾಯುಸುತನಾದ ಹನುಮಂತನು ವಿನಮ್ರವಾಗಿ ಜೋಡಿಸಿದ ಕೈಗಳನ್ನು ತಲೆಯ ಮೇಲಿಟ್ಟುಕೊಂಡು ಇಂತೆಂದನು.॥13॥
ಮೂಲಮ್ - 14
ಕ್ಷಿಪ್ರಮೇಷ್ಯತಿ ಕಾಕುತ್ಥೋ ಹರ್ಯೃಕ್ಷಪ್ರವರೈರ್ವೃತಃ ।
ಯಸ್ತೇ ಯುಧಿ ವಿಜಿತ್ಯಾರೀನ್ ಶೋಕಂ ವ್ಯಪನಯಿಷ್ಯತಿ ॥
ಅನುವಾದ
‘‘ಅಮ್ಮಾ ! ಕಾಕುತ್ಸ್ಥನು ವಾನರ-ಭಲ್ಲೂಕ ಯೋಧರಿಂದೊಡಗೂಡಿ ಶೀಘ್ರವಾಗಿ ಇಲ್ಲಿಗೆ ಬರುವನು. ಆ ಸ್ವಾಮಿಯು ಯುದ್ಧದಲ್ಲಿ ಶತ್ರುಗಳನ್ನು ಜಯಿಸಿ ನಿನ್ನ ಶೋಕವನ್ನು ಹೋಗಲಾಡಿಸುತ್ತಾನೆ.॥14॥
ಮೂಲಮ್ - 15
ನ ಹಿ ಪಶ್ಯಾಮಿ ಮರ್ತ್ಯೇಷು ನಾಸುರೇಷ್ವಸುರೇಷು ವಾ ।
ಯಸ್ತಸ್ಯ ಕ್ಷಿಪತೋ ಬಾಣಾನ್ ಸ್ಥಾತುಮುತ್ಸಹತೇಗ್ರತಃ ॥
ಅನುವಾದ
ಎಡೆಬಿಡದೆ ಬಾಣಗಳನ್ನು ಪ್ರಯೋಗಿಸುವ ಶ್ರೀರಾಮನನ್ನು ಎದುರಿಸಿ ನಿಲ್ಲಲು ಇಂದಿನವರೆಗೆ ದೇವಾಸುರ ಮನುಷ್ಯರಲ್ಲಿ ಯಾರೂ ಸಮರ್ಥರಿಲ್ಲ. ಮುಂದೆಯೂ ಇರಲಾರರು.॥15॥
ಮೂಲಮ್ - 16
ಅಪ್ಯರ್ಕಮಪಿ ಪರ್ಜನ್ಯಂ ಅಪಿ ವೈವಸ್ವತಂ ಯಮಮ್ ।
ಸ ಹಿ ಸೋಢುಂ ರಣೇ ಶಕ್ತಸ್ತವ ಹೇತೋರ್ವಿಶೇಷತಃ ॥
ಅನುವಾದ
ಆ ಪ್ರಭುವು ರಣರಂಗದಲ್ಲಿ ತೀಕ್ಷ್ಣಕಿರಣಗಳುಳ್ಳ ಸೂರ್ಯನಿರಲೀ, ಇಂದ್ರನಿರಲೀ, ಸೂರ್ಯಪುತ್ರನಾದ ಆ ಯಮನೇ ಆಗಿರಲೀ ಅವರನ್ನು ಎದುರಿಸಲು ಸಮರ್ಥನಾಗಿದ್ದಾನೆ. ಅದರಲ್ಲಿಯೂ ನಿನಗೋಸ್ಕರವೆಂದಾದರೆ ಹೇಳುವುದೇನಿದೆ?॥16॥
ಮೂಲಮ್ - 17
ಸ ಹಿ ಸಾಗರಪರ್ಯಂತಾಂ ಮಹೀಂ ಶಾಸಿತುಮೀಹತೇ ।
ತ್ವನ್ನಿಮಿತ್ತೋ ಹಿ ರಾಮಸ್ಯ ಜಯೋ ಜನಕನಂದಿನಿ ॥
ಅನುವಾದ
ಸಾಗರಪರ್ಯಂತವಾದ ಭೂಮಂಡಲವನ್ನು ಶಾಸನ ಮಾಡಲು ಅವನು ಸಮರ್ಥನಾಗಿದ್ದಾನೆ. ನಿನ್ನ ನಿಮಿತ್ತವಾಗಿ ಶ್ರೀರಾಮನಿಗೆ ಜಯವು ಸಿದ್ಧಿಸಿಯೇ ತೀರುತ್ತದೆ.॥17॥
ಮೂಲಮ್ - 18
ತಸ್ಯ ತದ್ವಚನಂ ಶ್ರುತ್ವಾ ಸಮ್ಯಕ್ ಸತ್ಯಂ ಸುಭಾಷಿತಮ್ ।
ಜಾನಕೀ ಬಹುಮೇನೇಥ ವಚನಂ ಚೇದಮಬ್ರವೀತ್ ॥
ಮೂಲಮ್ - 19
ತತಸ್ತಂ ಪ್ರಸ್ಥಿತಂ ಸೀತಾ ವೀಕ್ಷಮಾಣಾ ಪುನಃ ಪುನಃ ।
ಭರ್ತೃಸ್ನೇಹಾನ್ವಿತಂ ವಾಕ್ಯಂ ಸೌಹಾರ್ದಾದನುಮಾನಯತ್ ॥
ಅನುವಾದ
ಜಾನಕಿಯು ಹನುಮಂತನ ಸತ್ಯವೂ, ಸುಂದರವೂ ಆದ ನುಡಿಗಳನ್ನು ಚೆನ್ನಾಗಿ ಆಲಿಸಿ ಕೇಳಿದಳು. ಅವನಲ್ಲಿ ವಿಶೇಷವಾದ ಆದರವನ್ನು ಹೊಂದಿ, ಪತಿಯ ಸ್ನೇಹದಿಂದ ಕೂಡಿದ್ದ ಹನುಮಂತನ ಆ ಮಾತುಗಳನ್ನು ಸೀತೆಯು ಸೌಹಾರ್ದದೊಡನೆ ಪುರಸ್ಕರಿಸಿದಳು. ಪ್ರಯಾಣ ಹೊರಟಿದ್ದ ಆಂಜನೇಯನನ್ನು ಬಾರಿ-ಬಾರಿಗೆ ಅವಲೋಕಿಸುತ್ತಾ ಹೀಗೆ ಹೇಳಿದಳು.॥18-19॥
ಮೂಲಮ್ - 20
ಯದಿ ವಾ ಮನ್ಯಸೇ ವೀರ ವಸೈಕಾಹಮರಿಂದಮ ।
ಕಸ್ಮಿನ್ ಚಿತ್ ಸಂವೃತೇ ದೇಶೇ ವಿಶ್ರಾಂತಃ ಶ್ವೋ ಗಮಿಷ್ಯಸಿ ॥
ಅನುವಾದ
ವೀರನೇ! ಉಚಿತವೆಂದು ನೀನು ಭಾವಿಸುವೆಯಾದರೆ ಯಾವುದಾದರೂ ನಿಗೂಢವಾದ ಪ್ರದೇಶದಲ್ಲಿ ಇಂದು ವಿಶ್ರಾಂತಿಯನ್ನು ಪಡೆದು ನಾಳೆಯ ದಿನ ಪ್ರಯಾಣ ಮಾಡಬಹುದು.॥20॥
ಮೂಲಮ್ - 21
ಮಮ ಚೈವಾಲ್ಪಭಾಗ್ಯಾಯಾಃ ಸಾನ್ನಿಧ್ಯಾತ್ತವ ವಾನರ ।
ಅಸ್ಯ ಶೋಕಸ್ಯ ಮಹತೋ ಮುಹೂರ್ತಂ ಮೋಕ್ಷಣಂ ಭವೇತ್ ॥
ಅನುವಾದ
ವಾನರೋತ್ತಮಾ! ನಿನ್ನ ಸಾನ್ನಿಧ್ಯದಿಂದಾಗಿ ಮಂದ ಭಾಗ್ಯಳಾದ ನನ್ನ ಈ ಅಪಾರವಾದ ದುಃಖವು ಮುಹೂರ್ತಕಾಲದವರೆಗಾದರೂ ಕಡಿಮೆಯಾದಂತಾಗುತ್ತದೆ. ನೀನಿಲ್ಲಿ ಇರುವವರೆಗಾದರೂ ನಾನು ಶೋಕವನ್ನು ಮರೆಯುತ್ತೇನೆ. ॥21॥
ಮೂಲಮ್ - 22
ಗತೇ ಹಿ ಹರಿಶಾರ್ದೂಲ ಪುನರಾಗಮನಾಯ ತು ।
ಪ್ರಾಣಾನಾಮಪಿ ಸಂದೇಹೋ ಮಮ ಸ್ಯಾನ್ನಾತ್ರ ಸಂಶಯಃ ॥
ಅನುವಾದ
ಕಪೀಶ್ವರನೇ! ನೀನು ತಿರುಗಿ ಇಲ್ಲಿಗೆ ಬರುವ ತನಕ ನನ್ನ ಪ್ರಾಣಗಳು ಉಳಿಯುವವೋ ಇಲ್ಲವೋ ಎಂಬುದು ಸಂದೇಹಾಸ್ಪದವೇ. ಇದು ಸತ್ಯವಾಗಿದೆ.॥22॥
ಮೂಲಮ್ - 23
ತವಾದರ್ಶನಜಃ ಶೋಕೋ ಭೂಯೋ ಮಾಂ ಪರಿತಾಪಯೇತ್ ।
ದುಃಖಾದ್ದುಃಖಪರಾಮೃಷ್ಟಾಂ ದೀಪಯನ್ನಿವ ವಾನರ ॥
ಅನುವಾದ
ವಾನರೋತ್ತಮಾ! ನಿನ್ನನ್ನು ಪುನಃ ಕಾಣದೇ ಇರುವುದರಿಂದ ನನಗೆ ಉಂಟಾಗುವ ಶೋಕವು ಈ ಹಿಂದೆ ಇದ್ದ ಶೋಕಕ್ಕಿಂತಲೂ ಅಧಿಕವಾಗಿ ನನ್ನನ್ನು ದಹಿಸುತ್ತಾ ಸಂತಾಪಗೊಳಿಸೀತು.॥23॥
ಮೂಲಮ್ - 24
ಅಯಂ ಚ ವೀರ ಸಂದೇಹಸ್ತಿಷ್ಠತೀವ ಮಮಾಗ್ರತಃ ।
ಸುಮಹಾಂಸ್ತ್ವತ್ಸಹಾಯೇಷು ಹರ್ಯೃಕ್ಷೇಷು ಹರೀಶ್ವರ ॥
ಅನುವಾದ
ಮಹಾವೀರನಾದ ಕಪೀಶ್ವರಾ! ನಿಮಗೆ ಸಹಾಯಕರಾದ ವಾನರ-ಭಲ್ಲೂಕರ ವಿಷಯದಲ್ಲಿ ನನಗೊಂದು ದೊಡ್ಡ ಸಂದೇಹವು ಮೊದಲಿನಿಂದಲೇ ಇತ್ತು.॥24॥
ಮೂಲಮ್ - 25
ಕಥಂ ನು ಖಲು ದುಷ್ಪಾರಂ ತರಿಷ್ಯಂತಿ ಮಹೋದಧಿಮ್ ।
ತಾನಿ ಹರ್ಯೃಕ್ಷಸೈನ್ಯಾನಿ ತೌ ವಾ ನರವರಾತ್ಮಜೌ ॥
ಅನುವಾದ
ದಾಟಲಶಕ್ಯವಾದ ಈ ಮಹಾಸಮುದ್ರವನ್ನು ಆ ವಾನರ ಭಲ್ಲೂಕರಾಗಲೀ, ಆ ರಾಜಕುಮಾರರಾಗಲೀ, ಹೇಗೆ ದಾಟಬಲ್ಲರು? ॥25॥
ಮೂಲಮ್ - 26
ತ್ರಯಾಣಾಮೇವ ಭೂತಾನಾಂ ಸಾಗರಸ್ಯಾಸ್ಯ ಲಂಘನೇ ।
ಶಕ್ತಿಃ ಸ್ಯಾದ್ವೈನತೇಯಸ್ಯ ತವ ವಾ ಮಾರುತಸ್ಯ ವಾ ॥
ಅನುವಾದ
ಈ ಸಾಗರವನ್ನು ಲಂಘಿಸಲು ಗುರುತ್ಮಂತ (ಗರುಡ)ನಿಗೆ, ನಿನಗೆ ಮತ್ತು ವಾಯುದೇವರಿಗೆ ಹೀಗೆ ಮೂವರಿಗೆ ಮಾತ್ರ ಸಾಧ್ಯವಾಗಬಹುದು.॥26॥
ಮೂಲಮ್ - 27
ತದಸ್ಮಿನ್ ಕಾರ್ಯನಿರ್ಯೋಗೇ ವೀರೈವಂ ದುರತಿಕ್ರಮೇ ।
ಕಿಂ ಪಶ್ಯಸಿ ಸಮಾಧಾನಂ ತ್ವಂ ಹಿ ಕಾರ್ಯವಿದಾಂ ವರಃ ॥
ಅನುವಾದ
ನೀನಾದರೋ ಕಾರ್ಯಸಾಧನೆಯ ರಹಸ್ಯವನ್ನು ತಿಳಿದವರಲ್ಲಿ ಅಗ್ರಗಣ್ಯನು. ಅತಿಕ್ರಮಿಸಲು ದುಸ್ಸಾಧ್ಯವಾದ ಈ ಸಮುದ್ರವು ನಡುವಿನಲ್ಲಿರುವುದರಿಂದ ಈ ಕಾರ್ಯದ ಸಾಧನೆಗಾಗಿ ಇರುವ ಉಪಾಯವನ್ನು ನೀನೇ ಕಂಡುಕೊಳ್ಳಬೇಕು.॥27॥
ಮೂಲಮ್ - 28
ಕಾಮಮಸ್ಯ ತ್ವಮೇವೈಕಃ ಕಾರ್ಯಸ್ಯ ಪರಿಸಾಧನೇ ।
ಪರ್ಯಾಪ್ತಃ ಪರವೀರಘ್ನ ಯಶಸ್ಯಸ್ತೇ ಬಲೋದಯಃ ॥
ಅನುವಾದ
ಶತ್ರುಸೂದನಾ! ನೀನೊಬ್ಬನೇ ಈ ಎಲ್ಲ ರಾಕ್ಷಸರನ್ನು ಸಂಹರಿಸಿ ನನ್ನನ್ನು ವಿಮೋಚನೆಗೊಳಿಸುವ ಕಾರ್ಯವನ್ನು ಸಾಧಿಸಲು ಸಮರ್ಥನಾಗಿರುವೆ. ಆದರೆ ಹೀಗೆ ಮಾಡುವುದರಿಂದ ವಿಜಯರೂಪವಾದ ಯಶಸ್ಸು ನಿನಗೇ ಬಂದಂತಾಗುತ್ತದೆ. ಶ್ರೀರಾಮನಿಗೆ ಲಭಿಸುವುದಿಲ್ಲ. ಹಾಗಾಗಬಾರದು.॥28॥
ಮೂಲಮ್ - 29
ಬಲೈಃ ಸಮಗ್ರೈರ್ಯದಿ ಮಾಂ ರಾವಣಂ ಜಿತ್ಯ ಸಂಯುಗೇ ।
ವಿಜಯಾ ಸ್ವಪುರೀಂ ಯಾಯಾತ್ ತತ್ತು ಮೇ ಸ್ಯಾದ್ಯಶಸ್ಕರಮ್ ॥
ಅನುವಾದ
ಶ್ರೀರಾಮನು ಯುದ್ಧದಲ್ಲಿ ರಾವಣನನ್ನೂ, ಆತನ ಸೈನ್ಯವನ್ನು ಜಯಿಸಿ, ಜಯಪತಾಕೆಯನ್ನು ಹಾರಿಸಿ ನನ್ನನ್ನು ತನ್ನ ರಾಜ್ಯಕ್ಕೆ ಕರೆದೊಯ್ದರೆ, ಅದು ಅವನಿಗೂ, ನನಗೂ ಶ್ರೇಯಸ್ಕರವಾದ ಕಾರ್ಯವಾಗುತ್ತದೆ.॥29॥
ಮೂಲಮ್ - 30
ಶರೈಸ್ತು ಸಂಕುಲಾಂ ಕೃತ್ವಾ ಲಂಕಾಂ ಪರಬಲಾರ್ದನಃ ।
ಮಾಂ ನಯೇದ್ಯದಿ ಕಾಕುಸ್ಥಃ ತತ್ ತಸ್ಯ ಸದೃಶಂ ಭವೇತ್ ॥
ಅನುವಾದ
ಶತ್ರುಬಲಮರ್ದನನಾದ ನನ್ನ ಸ್ವಾಮಿಯು ಶರಪರಂಪರೆಯಿಂದ ಲಂಕೆಯನ್ನು ತುಂಬಿ, ರಾವಣನನ್ನು ಸಂಹರಿಸಿ ನನ್ನನ್ನು ಕೊಂಡು ಹೋದರೆ ಅದು ಅವನ ಪರಾಕ್ರಮಕ್ಕೆ ಅನುರೂಪವಾಗುವುದು.॥30॥
ಮೂಲಮ್ - 31
ತದ್ಯಥಾ ತಸ್ಯ ವಿಕ್ರಾಂತಮನುರೂಪಂ ಮಹಾತ್ಮನಃ ।
ಭವೇದಾಹವಶೂರಸ್ಯ ತಥಾ ತ್ವಮುಪಪಾದಯ ॥
ಅನುವಾದ
ಯುದ್ಧದಲ್ಲಿ ಮಹಾಶೌರ್ಯವನ್ನು ತೋರುವ ಮಹಾತ್ಮನಾದ ಶ್ರೀರಾಮನ ಪರಾಕ್ರಮವು ಪ್ರಕಟವಾಗುವಂತಹ ಕಾರ್ಯವಿಧಾನವನ್ನು ರೂಪಿಸು.॥31॥
ಮೂಲಮ್ - 32
ತದರ್ಥೋಪಹಿತಂ ವಾಕ್ಯಂ ಸಹಿತಂ ಹೇತುಸಂಹಿತಮ್ ।
ನಿಶಮ್ಯ ಹನುಮಾನ್ ಶೇಷಂ ವಾಕ್ಯಮುತ್ತರಮಬ್ರವೀತ್ ॥
ಅನುವಾದ
ಅರ್ಥವತ್ತಾದ, ಸ್ನೇಹಯುಕ್ತವಾದ ಹಾಗೂ ಯುಕ್ತಿಯುಕ್ತವಾದ ಸೀತಾದೇವಿಯ ಮಾತನ್ನು ಕೇಳಿ, ಹನುಮಂತನು ಕಡೆಯದಾಗಿ ತನ್ನ ಮಾತನ್ನು ಹೀಗೆ ಹೇಳಿದನು.॥32॥
ಮೂಲಮ್ - 33
ದೇವಿ ಹರ್ಯೃಕ್ಷಸೈನ್ಯಾನಾಮೀಶ್ವರಃ ಪ್ಲವತಾಂ ವರಃ ।
ಸುಗ್ರೀವಃ ಸತ್ತ್ವಸಂಪನ್ನಃ ತವಾರ್ಥೇ ಕೃತನಿಶ್ಚಯಃ ॥
ಅನುವಾದ
ಅಮ್ಮಾ! ಸೀತಾದೇವಿ! ವಾನರ ಭಲ್ಲೂಕಗಳ ಸೈನ್ಯಕ್ಕೆ ಒಡೆಯನೂ, ಹಾರುವುದರಲ್ಲಿ ಅಗ್ರಗಣ್ಯನೂ, ಮಹಾಬಲ ಸಂಪನ್ನನೂ ಆದ ಸುಗ್ರೀವನು ನಿನ್ನ ವಿಮೋಚನೆಗಾಗಿ ಕೃತನಿಶ್ಚಯವನ್ನು ಮಾಡಿದ್ದಾನೆ.॥33॥
ಮೂಲಮ್ - 34
ಸ ವಾನರಸಹಸ್ರಾಣಾಂ ಕೋಟೀಭಿರಭಿಸಂವೃತಃ ।
ಕ್ಷಿಪ್ರಮೇಷ್ಯತಿ ವೈದೇಹಿ ರಾಕ್ಷಸಾನಾಂ ನಿಬರ್ಹಣಃ ॥
ಅನುವಾದ
ವೈದೇಹೀ! ಅವನು ಕೋಟಿ-ಕೋಟಿ ವಾನರರಿಂದ ಒಡಗೂಡಿ, ರಾಕ್ಷಸರನ್ನು ಸಂಹರಿಸಲಿಕ್ಕಾಗಿ ಬಹಳ ಬೇಗ ಇಲ್ಲಿಗೆ ಬರುತ್ತಾನೆ.॥34॥
ಮೂಲಮ್ - 35
ತಸ್ಯ ವಿಕ್ರಮಸಂಪನ್ನಾಃ ಸತ್ತ್ವವಂತೋ ಮಹಾಬಲಾಃ ।
ಮನಸ್ಸಂಕಲ್ಪಸಂಪಾತಾ ನಿದೇಶೇ ಹರಯಃ ಸ್ಥಿತಾಃ ॥
ಅನುವಾದ
ಪರಾಕ್ರಮ ಸಂಪನ್ನರೂ, ಶಕ್ತಿ ಶಾಲಿಗಳೂ, ಮಹಾಬಲಿಷ್ಠರೂ ಮನೋವೇಗದಿಂದ ಒಂದೇ ನೆಗೆತಕ್ಕೆ ಎಲ್ಲೆಂದರಲ್ಲಿಗೆ ಹಾರಿಹೋಗಬಲ್ಲರೂ ಆದ ವಾನರರು ರಾಜನ ಆಜ್ಞೆಯನ್ನು ಎಲ್ಲಾ ಹೊತ್ತಿನಲ್ಲಿ ಶಿರಸಾವಹಿಸುವವರು.॥35॥
ಮೂಲಮ್ - 36
ಯೇಷಾಂ ನೋಪರಿ ನಾಧಸ್ತಾನ್ನ ತಿರ್ಯಕ್ಸಜ್ಜತೇ ಗತಿಃ ।
ನ ಚ ಕರ್ಮಸು ಸೀದಂತಿ ಮಹತ್ಸ್ವಮಿತತೇಜಸಃ ॥
ಅನುವಾದ
ಭೂಮಿಯಲ್ಲಾಗಲೀ, ಆಕಾಶದಲ್ಲಾಗಲೀ, ವಿವಿಧ ದಿಕ್ಕುಗಳಲ್ಲಿ ಇರಲೀ, ಅವರಿಗೆ ತಡೆ-ತಡೆಗಳೇ ಇಲ್ಲ. ಅವರು ಅಮಿತ ತೇಜಃಶಾಲಿಗಳು, ಯಾವುದೇ ಮಹಾಕಾರ್ಯವನ್ನಾದರೂ ಸಾಧಿಸಿಯೇ ತೀರುವವರು.॥36॥
ಮೂಲಮ್ - 37
ಅಸಕೃತ್ತೈರ್ಮಹೋತ್ಸಾಹೈಃ ಸಸಾಗರಧರಾಧರಾ ।
ಪ್ರದಕ್ಷಿಣೀಕೃತಾ ಭೂಮಿಃ ವಾಯುಮಾರ್ಗಾನುಸಾರಿಭಿಃ ॥
ಅನುವಾದ
ಮಹೋತ್ಸಾಹಶಾಲಿಗಳಾದ ಆ ಕಪಿವೀರರು ಆಕಾಶಮಾರ್ಗದಿಂದ ಸಂಚರಿಸಿ ಮಹಾ ಸಮುದ್ರದಿಂದ, ದೊಡ್ಡ-ದೊಡ್ಡ ಪರ್ವತಗಳಿಂದ ಗೂಡಿದ ಈ ಭೂಮಂಡಲವನ್ನು ಎಷ್ಟೋ ಬಾರಿ ಪ್ರದಕ್ಷಿಣೆ ಮಾಡಿರುತ್ತಾರೆ.॥37॥
ಮೂಲಮ್ - 38
ಮದ್ವಿಶಿಷ್ಟಾಶ್ಚ ತುಲ್ಯಾಶ್ಚ ಸಂತಿ ತತ್ರ ವನೌಕಸಃ ।
ಮತ್ತಃ ಪ್ರತ್ಯವರಃ ಕಶ್ಚಿನ್ನಾಸ್ತಿ ಸುಗ್ರೀವಸನ್ನಿಧೌ ॥
ಅನುವಾದ
ಸುಗ್ರೀವನ ಬಳಿಯಲ್ಲಿರುವ ವಾನರ ಭಲ್ಲೂಕಗಳು ನನಗಿಂತಲೂ ಶಕ್ತಿಸಂಪನ್ನರೂ, ನನಗೆ ಸಮಾನ ಬಲರಾಗಿದ್ದಾರೆ. ನನಗಿಂತಲೂ ಕಡಿಮೆ ಬಲವುಳ್ಳವರು ಒಬ್ಬರೂ ಇಲ್ಲ.॥38॥
ಮೂಲಮ್ - 39
ಅಹಂ ತಾವದಿಹ ಪ್ರಾಪ್ತಃ ಕಿಂ ಪುನಸ್ತೇ ಮಹಾಬಲಾಃ ।
ನ ಹಿ ಪ್ರಕೃಷ್ಟಾಃ ಪ್ರೇಷ್ಯಂತೇ ಪ್ರೇಷ್ಯಂತೇ ಹೀತರೇ ಜನಾಃ ॥
ಅನುವಾದ
ನಾನೇ ಸಮುದ್ರವನ್ನು ಹಾರಿಕೊಂಡು ಇಲ್ಲಿಗೆ ಬಂದಿರುವೆನು. ಹಾಗಿರುವಾಗ ಮಹಾಬಲಶಾಲಿಗಳ ಕುರಿತು ಹೇಳುವುದೇನಿದೆ? ಸಾಧಾರಣವಾಗಿ ಲೋಕದಲ್ಲಿ ಮೊದಲು ಸಾಮಾನ್ಯರನ್ನೇ ಕಳಿಸುತ್ತಾರೆ. ಶ್ರೇಷ್ಠರಾದವರನ್ನು ಕಳಿಸುವುದಿಲ್ಲ.॥39॥
ಮೂಲಮ್ - 40
ತದಲಂ ಪರಿತಾಪೇನ ದೇವಿ ಶೋಕೋ ವ್ಯಪೈತು ತೇ ।
ಏಕೋತ್ಪಾತೇನ ತೇ ಲಂಕಾಮೇಷ್ಯಂತಿ ಹರಿಯೂಥಪಾಃ ॥
ಅನುವಾದ
ಆದುದರಿಂದ ಅಮ್ಮಾ! ಪರಿತಾಪವನ್ನು ಪಡಬೇಡ. ನಿನ್ನ ಶೋಕವು ತೊಲಗಿಹೋಗುವುದು. ಆ ವಾನರ ಯೋಧರು ಒಂದೇ ನೆಗೆತಕ್ಕೆ ಲಂಕೆಗೆ ಬರುವರು.॥40॥
ಮೂಲಮ್ - 41
ಮಮ ಪೃಷ್ಠಗತೌ ತೌ ಚ ಚಂದ್ರಸೂರ್ಯಾವಿವೋದಿತೌ ।
ತ್ವತ್ಸಕಾಶಂ ಮಹಾಸತ್ತೌ ನೃಸಿಂಹಾವಾಗಮಿಷ್ಯತಃ ॥
ಅನುವಾದ
ಮಹಾಸತ್ತ್ವಶಾಲಿಗಳೂ, ಪುರುಷ ಶ್ರೇಷ್ಠರೂ ಆದ ಶ್ರೀರಾಮ-ಲಕ್ಷ್ಮಣರು ನನ್ನ ಬೆನ್ನ ಮೇಲೆ ಅಧಿಷ್ಠಿತರಾಗಿ ಉದಯಿಸಿದ ಸೂರ್ಯ-ಚಂದ್ರರಂತೆ ನಿನ್ನ ಸನ್ನಿಧಿಗೆ ಬರುವರು.॥41॥
ಮೂಲಮ್ - 42
ತೌ ಹಿ ವೀರೌ ನರವರೌ ಸಹಿತೌ ರಾಮಲಕ್ಷ್ಮಣೌ ।
ಆಗಮ್ಯ ನಗರೀಂ ಲಂಕಾಂ ಸಾಯಕೈರ್ವಿಧಮಿಷ್ಯತಃ ॥
ಅನುವಾದ
ವೀರರೂ, ಮಹಾಪುರುಷರೂ ಆದ ಆ ರಾಮಲಕ್ಷ್ಮಣರಿಬ್ಬರೂ ಇಲ್ಲಿಗೆ ಬಂದು ಲಂಕಾನಗರವನ್ನು ತಮ್ಮ ಬಾಣಗಳಿಂದ ಧ್ವಂಸ ಮಾಡುವರು.॥42॥
ಮೂಲಮ್ - 43
ಸಗಣಂ ರಾವಣಂ ಹತ್ವಾ ರಾಘವೋ ರಘುನಂದನಃ ।
ತ್ವಾಮಾದಾಯ ವರಾರೋಹೇ ಸ್ವಪುರಂ ಪ್ರತಿಯಾಸ್ಯತಿ ॥
ಅನುವಾದ
ಸೀತಮ್ಮಾ! ರಘುವಂಶಕ್ಕೆ ಆನಂದದಾಯಕನಾದ ರಾಘವನು ಸಪರಿವಾರ ಸಹಿತ ರಾವಣನನ್ನು ಸಂಹರಿಸಿ ನಿನ್ನನ್ನು ಕರಕೊಂಡು ತನ್ನ ಅಯೋಧ್ಯೆಗೆ ಹೋಗುವನು.॥43॥
ಮೂಲಮ್ - 44
ತದಾಶ್ವಸಿಹಿ ಭದ್ರಂ ತೇ ಭವ ತ್ವಂ ಕಾಲಕಾಂಕ್ಷಿಣೀ ।
ನ ಚಿರಾದ್ದ್ರಕ್ಷ್ಯಸೇ ರಾಮಂ ಪ್ರಜ್ವಲಂತಮಿವಾನಲಮ್ ॥
ಅನುವಾದ
ದೇವೀ! ಸಮಾಧಾನವನ್ನು ಹೊಂದು, ನಿನಗೆ ಮಂಗಳವಾಗಲೀ. ಒಳ್ಳೆಯ ಕಾಲವು ಬರಲಿದೆ. ಪ್ರಜ್ವಲಿಸುವ ಯಜ್ಞೇಶ್ವರನಂತೆ ಇರುವ ಶ್ರೀರಾಮಚಂದ್ರನನ್ನು ನೀನು ಬಹಳ ಬೇಗನೇ ಕಾಣಲಿರುವೆ.॥44॥
ಮೂಲಮ್ - 45
ನಿಹತೇ ರಾಕ್ಷಸೇಂದ್ರೇಸ್ಮಿನ್ ಸಪುತ್ರಾಮಾತ್ಯಬಾಂಧವೇ ।
ತ್ವಂ ಸಮೇಷ್ಯಸಿ ರಾಮೇಣ ಶಶಾಂಕೇನೇವ ರೋಹಿಣೀ ॥
ಅನುವಾದ
ರಾಕ್ಷಸೇಂದ್ರನಾದ ರಾವಣನು ಪುತ್ರ, ಅಮಾತ್ಯ, ಬಂಧುಗಳೊಡನೆ ಹತನಾದೊಡನೆಯೇ, ರೋಹಿಣಿಯು ಚಂದ್ರನನ್ನು ಸೇರುವಂತೆ ನೀನು ಶ್ರೀರಾಮಚಂದ್ರ ಪ್ರಭುವನ್ನು ಸೇರುವೆ.॥45॥
ಮೂಲಮ್ - 46
ಕ್ಷಿಪ್ರಂ ತ್ವಂ ದೇವಿ ಶೋಕಸ್ಯ ಪಾರಂ ಯಾಸ್ಯಸಿ ಮೈಥಿಲಿ ।
ರಾವಣಂ ಚೈವ ರಾಮೇಣ ನಿಹತಂ ದ್ರಕ್ಷ್ಯಸೇಚಿರಾತ್ ॥
ಅನುವಾದ
ಮಿಥಿಲೇಶನಂದಿನೀ! ದೇವಿ! ನೀನು ಬಹಳ ಬೇಗನೆ ಶೋಕದ ಕೊನೆಯನ್ನು ಕಾಣಲಿರುವೆ. ಶ್ರೀರಾಮನ ಕೈಯಿಂದ ರಾವಣನು ಹತನಾಗುವುದನ್ನು ಕೆಲವೇ ದಿನಗಳಲ್ಲಿ ನೋಡಲಿರುವೆ.॥46॥
ಮೂಲಮ್ - 47
ಏವಮಾಶ್ವಾಸ್ಯ ವ್ವೆದೇಹೀಂ ಹನುಮಾನ್ ಮಾರುತಾತ್ಮಜಃ ।
ಗಮನಾಯ ಮತಿಂ ಕೃತ್ವಾ ವೈದೇಹೀಂ ಪುನರಬ್ರವೀತ್ ॥
ಅನುವಾದ
ವಾಯುನಂದನನಾದ ಮಾರುತಿಯು ಈ ವಿಧವಾಗಿ ವೈದೇಹಿಯನ್ನು ಸಮಾಧಾನಗೊಳಿಸಿ ಪ್ರಯಾಣ ಮಾಡಲು ಮನಸ್ಸು ಮಾಡಿ ಪುನಃ ಇಂತೆಂದನು.॥47॥
ಮೂಲಮ್ - 48
ತಮರಿಘ್ನಂ ಕೃತಾತ್ಮಾನಂ ಕ್ಷಿಪ್ರಂ ದ್ರಕ್ಷ್ಯಸಿ ರಾಘವಮ್ ।
ಲಕ್ಷ್ಮಣಂ ಚ ಧನುಷ್ಪಾಣಿಂ ಲಂಕಾದ್ವಾರಮುಪಸ್ಥಿತಮ್ ॥
ಅನುವಾದ
ತಾಯೇ! ಶತ್ರುಗಳನ್ನು ಸಂಹರಿಸಲು ಕೃತನಿಶ್ಚಯನಾದ ಶ್ರೀರಾಘವನನ್ನೂ, ಧನುರ್ಧಾರಿಯಾದ ಲಕ್ಷ್ಮಣನನ್ನೂ ತ್ವರಿತವಾಗಿ ಲಂಕಾನಗರವನ್ನು ಪ್ರವೇಶಿಸುವುದನ್ನು ನೀನು ನೋಡುವೆ.॥48॥
ಮೂಲಮ್ - 49
ನಖದಂಷ್ಟ್ರಾಯುಧಾನ್ ವೀರಾನ್ ಸಿಂಹಶಾರ್ದೂಲವಿಕ್ರಮಾನ್ ।
ವಾನರಾನ್ ವಾರಣೇಂದ್ರಾಭಾನ್ ಕ್ಷಿಪ್ರಂ ದ್ರಕ್ಷ್ಯಸಿ ಸಂಗತಾನ್ ॥
ಅನುವಾದ
ಉಗುರು ಮತ್ತು ಕೋರೆದಾಡೆಗಳೇ ಆಯುಧಗಳಾಗಿರುವ, ಸಿಂಹ-ಶಾರ್ದೂಲಗಳಂತೆ ಭಾರೀ ಪರಾಕ್ರಮಿಗಳಾದ, ಮದಗಜಗಳಂತೆ ಉನ್ನತವಾದ ಶರೀರವುಳ್ಳ ವಾನರರೆಲ್ಲರೂ ಬೇಗನೆ ಇಲ್ಲಿಗೆ ಬರುವುದನ್ನು ನೀನು ನೋಡುವೆ.॥49॥
ಮೂಲಮ್ - 50
ಶೈಲಾಂಬುದನಿಕಾಶಾನಾಂ ಲಂಕಾಮಲಯಸಾನುಷು ।
ನರ್ದತಾಂ ಕಪಿಮುಖ್ಯಾನಾಂ ಆರ್ಯೇ ಯೂಥಾನ್ಯನೇಕಶಃ ॥
ಅನುವಾದ
ಆರ್ಯಳೇ! ಪರ್ವತಗಳಂತೆಯೂ, ಮೇಘಗಳಂತೆಯೂ ಇರುವ ಅಸಂಖ್ಯಾತ ವಾನರ ಯೋಧರ ಸಮೂಹಗಳು ಈ ಲಂಕೆಯಲ್ಲಿ ಮಲಯ ಪರ್ವತದ ಶಿಖರದಲ್ಲಿ ಗರ್ಜಿಸುವಂತಹ ಗರ್ಜನೆಯನ್ನು ನೀನು ಶೀಘ್ರವಾಗಿ ಕೇಳಲಿರುವೆ.॥50॥
ಮೂಲಮ್ - 51
ಸ ತು ಮರ್ಮಣಿ ಘೋರೇಣ ತಾಡಿತೋ ಮನ್ಮಥೇಷುಣಾ ।
ನ ಶರ್ಮ ಲಭತೇ ರಾಮಃ ಸಿಂಹಾರ್ದಿತ ಇವ ದ್ವಿಪಃ ॥
ಅನುವಾದ
ಮನ್ಮಥನ ಬಾಣಗಳಿಂದ ಮರ್ಮಸ್ಥಾನದಲ್ಲಿ ಭೇದಿಸಲ್ಪಟ್ಟು ವಿರಹ ವೇದನೆಯನ್ನು ಅನುಭವಿಸುತ್ತಿರುವ ಶ್ರೀರಾಮನು, ಸಿಂಹನಿಂದ ಪೀಡಿಸಲ್ಪಟ್ಟ ಆನೆಯಂತೆ ಸ್ವಲ್ಪವಾದರೂ ಸುಖವನ್ನು ಕಾಣುತ್ತಿಲ್ಲ.॥51॥
(ಶ್ಲೋಕ - 52
ಮೂಲಮ್
ಮಾ ರುದೋ ದೇವಿ ಶೋಕೇನ ಮಾ ಭೂತ್ತೇ ಮನಸೋ ಪ್ರಿಯಮ್ ।
ಶಚೀವ ಪತ್ಯಾ ಶಕ್ರೇಣ ಭರ್ತ್ರಾ ನಾಥವತೀ ಹ್ಯಸಿ ॥
ಅನುವಾದ
ಸೀತಾದೇವಿಯೇ! ಅಳಬೇಡ. ಮನಸ್ಸಿನಲ್ಲಿರುವ ವ್ಯಾಕುಲತೆಯನ್ನೂ, ಶೋಕವನ್ನೂ ಬಿಟ್ಟುಬಿಡು. ಇಂದ್ರನಿಂದ ರಕ್ಷಿತಳಾದ ಶಚೀದೇವಿಯಂತೆ ನೀವೂ ಕೂಡ ಶ್ರೀರಾಮನಿಂದ ರಕ್ಷಿತಳಾಗಿರುವೆ.॥52॥
ಮೂಲಮ್ - 53
ರಾಮಾದ್ವಿಶಿಷ್ಟಃ ಕೋನ್ಯೋಸ್ತಿ ಕಶ್ಚಿತ್ಸೌಮಿತ್ರಿಣಾ ಸಮಃ ।
ಅಗ್ನಿಮಾರುತಕಲ್ಪೌ ತೌ ಭ್ರಾತರೌ ತವ ಸಂಶ್ರಯೌ ॥
ಅನುವಾದ
ಶ್ರೀರಾಮನಿಗಿಂತ ವಿಶಿಷ್ಟರಾದವರು ಯಾರಿದ್ದಾರೆ? ಲಕ್ಷ್ಮಣ ಸ್ವಾಮಿಗಿಂತ ಪರಾಕ್ರಮಶಾಲಿಗಳು ಯಾರಿದ್ದಾರೆ? ಅಗ್ನಿ-ವಾಯುಗಳಂತೆ ಇರುವ ಆ ಸಹೋದರರು ನಿನ್ನ ಸಂರಕ್ಷರಾಗಿದ್ದಾರೆ. ಆದುದರಿಂದ ನಿನಗೆ ಚಿಂತೆ ಏತರದು?॥53॥
ಮೂಲಮ್ - 54
ನಾಸ್ಮಿಂಶ್ಚಿರಂ ವತ್ಸ್ಯಸಿ ದೇವಿ ದೇಶೇ
ರಕ್ಷೋಗಣೈರಧ್ಯುಷಿತೇಽತಿರೌದ್ರೇ ।
ನ ತೇ ಚಿರಾದಾಗಮನಂ ಪ್ರಿಯಸ್ಯ
ಕ್ಷಮಸ್ವ ಮತ್ಸಂಗಮಕಾಲಮಾತ್ರಮ್ ॥
ಅನುವಾದ
ರಾಕ್ಷಸರಿಗೆ ನಿವಾಸಸ್ಥಾನವಾಗಿರುವ ಹಾಗೂ ಅತಿ ಭಯಂಕರವಾಗಿರುವ ಈ ಸ್ಥಳದಲ್ಲಿ ನೀನು ಹೆಚ್ಚು ಕಾಲವಿರಲಾರೆ. ನಿನ್ನ ಪ್ರಿಯನಾದ ಶ್ರೀರಾಮನ ಆಗಮನಕ್ಕೆ ಬಹಳ ಕಾಲವೂ ಇಲ್ಲ. ನಾನು ರಾಮನ ಬಳಿಗೆ ಹೋಗುವಷ್ಟು ಕಾಲ ಸೈರಣೆಯಿಂದಿರು. ಶ್ರೀರಾಮನನ್ನು ಸಂಪರ್ಕಿಸಿ ನಿನ್ನ ವಾರ್ತೆಯನ್ನು ಅರುಹಿದೊಡನೆಯೇ ಅವನಿಲ್ಲಿಗೆ ಸಪರಿವಾರನಾಗಿ ಬಂದುಬಿಡುವನು. (ಬಳಿಕ ರಾವಣನು ಸತ್ತನೆಂದೇ ತಿಳಿ)॥54॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕೋನಚತ್ವಾರಿಂಶಃ ಸರ್ಗಃ ॥ 39 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತೊಂಭತ್ತನೆಯ ಸರ್ಗವು ಮುಗಿಯಿತು.