०३८ हनुमता सीताचूडामणियाचना

वाचनम्
ಭಾಗಸೂಚನಾ

ಸೀತಾದೇವಿಯು ಹನುಮಂತನಿಗೆ ಗುರುತಿಗಾಗಿ ಕಾಕಾಸುರನ ವೃತ್ತಾಂತವನ್ನು ಹೇಳಿ ಚೂಡಾಮಣಿಯನ್ನು ಕೊಟ್ಟಿದ್ದು

ಮೂಲಮ್ - 1

ತತಃ ಸ ಕಪಿಶಾರ್ದೂಲಸ್ತೇನ ವಾಕ್ಯೇನ ಹರ್ಷಿತಃ ।
ಸೀತಾಮುವಾಚ ತಚ್ಛ್ರುತ್ವಾ ವಾಕ್ಯಂ ವಾಕ್ಯವಿಶಾರದಃ ॥

ಅನುವಾದ

ಬಳಿಕ ಕಪಿಶ್ರೇಷ್ಠನಾದ, ವಾಕ್ಯವಿಶಾರದನಾದ ಹನುಮಂತನು ಸೀತೆಯು ಹೇಳಿದ ಯುಕ್ತಿಯುಕ್ತವಾದ ಮಾತುಗಳಿಂದ ಬಹಳವಾಗಿ ಸಂತಸಗೊಂಡು ಆಕೆಯ ಬಳಿ ಇಂತೆಂದನು.॥1॥

ಮೂಲಮ್ - 2

ಯುಕ್ತರೂಪಂ ತ್ವಯಾ ದೇವಿ ಭಾಷಿತಂ ಶುಭದರ್ಶನೇ ।
ಸದೃಶಂ ಸ್ತ್ರೀಸ್ವಭಾವಸ್ಯ ಸಾಧ್ವೀನಾಂ ವಿನಯಸ್ಯ ಚ ॥

ಅನುವಾದ

ಮಂಗಳ ಸ್ವರೂಪಳಾದ ದೇವಿಯೇ! ನೀನಾಡಿದ ಮಾತು ಹೆಚ್ಚು ಸಮೀಚೀನವಾಗಿದೆ, ಯುಕ್ತವೂ ಆಗಿದೆ. ಅವು ಸ್ತ್ರೀಯರ ಸ್ವಭಾವಕ್ಕನುಸಾರವೂ, ಪಾತಿವ್ರತ್ಯ ವ್ರತಕ್ಕೂ ತಕ್ಕುದಾಗಿವೆ.॥2॥

ಮೂಲಮ್ - 3

ಸ್ತ್ರೀತ್ವಂ ನ ತು ಸಮರ್ಥಂ ಹಿ ಸಾಗರಂ ವ್ಯತಿವರ್ತಿತುಮ್ ।
ಮಾಮಧಿಷ್ಠಾಯ ವಿಸ್ತೀರ್ಣಂ ಶತಯೋಜನಮಾಯತಮ್ ॥

ಅನುವಾದ

ನನ್ನ ಬೆನ್ನಿನ ಮೇಲೆ ಕುಳಿತು ನೂರು ಯೋಜನೆಗಳುಳ್ಳ ಮಹಾಸಾಗರವನ್ನು ದಾಟುವುದು ಸ್ತ್ರೀಸಹಜವಾದ ಭಯ ಸ್ವಭಾವದಿಂದಾಗಿ ಶಕ್ಯವಾಗಲಾರದು.॥3॥

ಮೂಲಮ್ - 4

ದ್ವಿತೀಯಂ ಕಾರಣಂ ಯಚ್ಚ ಬ್ರವೀಷಿ ವಿನಯಾನ್ವಿತೇ ।
ರಾಮಾದನ್ಯಸ್ಯ ನಾರ್ಹಾಮಿ ಸಂಸ್ಪರ್ಶಮಿತಿ ಜಾನಕಿ ॥

ಮೂಲಮ್ - 5

ಏತತ್ತೇ ದೇವಿ ಸದೃಶಂ ಪತ್ನ್ಯಾಸ್ತಸ್ಯ ಮಹಾತ್ಮನಃ ।
ಕಾ ಹ್ಯನ್ಯಾ ತ್ವಾಮೃತೇ ದೇವಿ ಬ್ರೂಯಾದ್ವಚನಮೀದೃಶಮ್ ॥

ಅನುವಾದ

ವಿನಯ ಸಂಪನ್ನಳಾದ ತಾಯೇ! ‘‘ರಾಮನ ಶರೀರವನ್ನು ಬಿಟ್ಟು ಬೇರೆಯವರ ಶರೀರವನ್ನು ನಾನಾಗಿ ಮುಟ್ಟಲು ನಾನು ಇಚ್ಛೆಪಡುವುದಿಲ್ಲ’’ ಎಂದು ಎರಡನೆಯ ಕಾರಣವನ್ನು ಕೊಟ್ಟಿರುವುದು ಮಹಾತ್ಮನಾದ ಶ್ರೀರಾಮನ ಪತ್ನಿಯಾದ ನಿನಗೆ ಸಮುಚಿತವಾದ ಮಾತೇ ಆಗಿದೆ. ನಿನ್ನ ಹೊರತಾಗಿ ಯಾವಳು ತಾನೇ ಇಂತಹ ಮಾತನ್ನು ಆಡಬಲ್ಲಳು?॥4-5॥

ಮೂಲಮ್ - 6

ಶ್ರೋಷ್ಯತೇ ಚೈವ ಕಾಕುತ್ಸ್ಥಃ ಸರ್ವಂ ನಿರವಶೇಷತಃ ।
ಚೇಷ್ಟಿತಂ ಯತ್ತ್ವಯಾ ದೇವಿ ಭಾಷಿತಂ ಚ ಮಮಾಗ್ರತಃ ॥

ಅನುವಾದ

ದೇವಿಯೇ! ಇಲ್ಲಿಯ ನಿನ್ನ ಚರ್ಯೆಗಳನ್ನು, ನೀನು ನುಡಿದ ಪ್ರತಿಯೊಂದು ಮಾತನ್ನೂ* ಶ್ರೀರಾಮನಿಗೆ ವಿಶ್ವಾಸ ಹುಟ್ಟುವಂತೆ ನಾನು ಪೂರ್ಣವಾಗಿ ವಿವರಿಸುತ್ತೇನೆ.॥6॥

ಟಿಪ್ಪನೀ
  • ರಾವಣನು ನಿನ್ನನ್ನು ಭಯಪಡಿಸಿದ್ದು, ನೀನು ರಾವಣನನ್ನು ತೃಣೀಕರಿಸಿದ್ದು, ರಾಕ್ಷಸ ಸ್ತ್ರೀಯರು ನಿನ್ನನ್ನು ಬೆದರಿಸಿದ್ದು, ವಿರಹತಾಪವನ್ನು ತಾಳಲಾರದೆ ನೀನು ಪ್ರಾಣತ್ಯಾಗಕ್ಕೆ ಸಿದ್ಧವಾದುದನ್ನು, ನಿರಂತರ ಶ್ರೀರಾಮನನ್ನು ಧ್ಯಾನಿಸುತ್ತಿರುವುದನ್ನು, ನಿನ್ನ ಪಾತಿವ್ರತ್ಯ ಧರ್ಮಾಚರಣೆಯನ್ನು, ನೀನು ರಾಮನಿಗಾಗಿ ಹೇಳಿದ ಸಂದೇಶವನ್ನು ಮುಂತಾದ ಎಲ್ಲ ವಿಷಯಗಳನ್ನು ನಾನು ಯಥಾವತ್ತಾಗಿ ಶ್ರೀರಾಮನಿಗೆ ತಿಳಿಸುತ್ತೇನೆ.
ಮೂಲಮ್ - 7

ಕಾರಣೈರ್ಬಹುಭಿರ್ದೇವಿ ರಾಮಪ್ರಿಯಚಿಕೀರ್ಷಯಾ ।
ಸ್ನೇಹಪ್ರಸ್ಕನ್ನಮನಸಾ ಮಯೈತತ್ ಸಮುದೀರಿತಮ್ ॥

ಅನುವಾದ

ಅಮ್ಮಾ! ನಿನಗೂ ಶ್ರೀರಾಮನಿಗೂ ಪ್ರಿಯವನ್ನುಂಟುಮಾಡಬೇಕೆಂಬ ಇಚ್ಛೆಯಿಂದಲೂ, ಸ್ನೇಹದಿಂದ ಕರಗಿದ ಮನಸ್ಸಿನಿಂದಲೂ, ನನ್ನ ಬೆನ್ನಮೇಲೆ ಕುಳಿತು ಶ್ರೀರಾಮನ ಸಮೀಪಕ್ಕೆ ಬರುವಂತೆ ನಿನಗೆ ಹೇಳಿದನು.॥7॥

ಮೂಲಮ್ - 8

ಲಂಕಾಯಾ ದುಷ್ಪ್ರವೇಶತ್ವಾದ್ದುಸ್ತರತ್ವಾನ್ಮಹೋದಧೇಃ ।
ಸಾಮರ್ಥ್ಯಾದಾತ್ಮನಶ್ಚೆ ವ ಮಯೈತತ್ ಸಮುದೀರಿತಮ್ ॥

(ಶ್ಲೋಕ - 9

ಮೂಲಮ್

ಇಚ್ಛಾಮಿ ತ್ವಾಂ ಸಮಾನೇತುಮದ್ಯೈವ ರಘುಬಂಧುನಾ ।
ಗುರುಸ್ನೇಹೇನ ಭಕ್ತ್ಯಾ ಚ ನಾನ್ಯಥೈತದುದಾಹೃತಮ್ ॥

ಅನುವಾದ

ಲಂಕೆಯನ್ನು ಇತರರಿಂದ ಪ್ರವೇಶಿಸಲು ದುಸ್ಸಾಧ್ಯವಾದುದರಿಂದಲೂ, ಮಹಾಸಮುದ್ರವನ್ನು ಇತರರಿಂದ ದಾಟಲು ಸಾಧ್ಯವಾಗದೇ ಇರುವುದರಿಂದ, ಪ್ರಕೃತದಲ್ಲಿ ನನ್ನ ಸಾಮರ್ಥ್ಯದ ಅರಿವಿನಿಂದಲೂ, ರಘುವಂಶೀಯರಿಗೆ ಆನಂದವನ್ನುಂಟುಮಾಡುವ ಶ್ರೀರಾಮನ ಬಳಿಗೆ ಈಗಲೇ ನಿನ್ನನ್ನು ಕರೆದೊಯ್ಯಲು ಆಶಿಸಿದೆನು. ಅಮ್ಮಾ! ನಾನು ಹೀಗೆ ಹೇಳಲು ನನಗೆ ರಾಮನಲ್ಲಿರುವ ಅಪಾರವಾದ ಸ್ನೇಹವೂ, ಗೌರವವೂ, ಭಕ್ತಿ-ಪ್ರಪತ್ತಿಗಳೇ ಕಾರಣ ಹೊರತು ಬೇರೆಯಾವ ಕಾರಣವೂ ಇಲ್ಲ.॥8-9॥

ಮೂಲಮ್ - 10

ಯದಿ ನೋತ್ಸಹಸೇ ಯಾತುಂ ಮಯಾ ಸಾರ್ಧಮನಿಂದಿತೇ ।
ಅಭಿಜ್ಞಾನಂ ಪ್ರಯಚ್ಛ ತ್ವಂ ಜಾನೀಯಾದ್ರಾಘವೋ ಹಿ ಯತ್ ॥

ಅನುವಾದ

ನನ್ನ ಸಂಗಡ ಬರಲು ಸಮ್ಮತವಿಲ್ಲದಿದ್ದರೆ, ಶ್ರೀರಾಮನು ಗುರುತಿಸಬಹುದಾದ, ನಿನ್ನ ನೆನಪನ್ನುಂಟುಮಾಡುವ ಯಾವುದಾದರೊಂದು ಅಭಿಜ್ಞಾನ (ಕುರುಹು)ವನ್ನು ಕರುಣಿಸು.॥10॥

ಮೂಲಮ್ - 11

ಏವಮುಕ್ತಾ ಹನುಮತಾ ಸೀತಾ ಸುರಸುತೋಪಮಾ ।
ಉವಾಚ ವಚನಂ ಮಂದಂ ಬಾಷ್ಟಪ್ರಗ್ರಥಿತಾಕ್ಷರಮ್ ॥

ಅನುವಾದ

ದೇವಕನ್ನಿಕೆಯಂತಿದ್ದ ಸೀತಾದೇವಿಯು ಹನುಮಂತನ ಮಾತುಗಳನ್ನು ಕೇಳಿ, ಬಿಕ್ಕಿ-ಬಿಕ್ಕಿ ಅಳುತ್ತಾ ಕಣ್ಣೀರು ಸುರಿಯುತ್ತಿದ್ದುದರಿಂದ ತಡೆ-ತಡೆದು ಮೆಲ್ಲಗೆ (ರಾಕ್ಷಸಿಯರು ಕೇಳದಂತೆ) ಹೀಗೆ ನುಡಿದಳು -॥11॥

ಮೂಲಮ್ - 12

ಇದಂ ಶ್ರೇಷ್ಠಮಭಿಜ್ಞಾನಂ ಬ್ರೂಯಾಸ್ತ್ವಂ ತು ಮಮ ಪ್ರಿಯಮ್ ।
ಶೈಲಸ್ಯ ಚಿತ್ರಕೂಟಸ್ಯ ಪಾದೇ ಪೂರ್ವೋತ್ತರೇ ಪುರಾ ॥

ಮೂಲಮ್ - 13

ತಾಪಸಾಶ್ರಮವಾಸಿನ್ಯಾಃ ಪ್ರಾಜ್ಯಮೂಲಫಲೋದಕೇ ।
ತಸ್ಮಿನ್ ಸಿದ್ಧಾಶ್ರಿತೇ ದೇಶೇ ಮಂದಾಕಿನ್ಯಾ ಹ್ಯದೂರತಃ ॥

ಅನುವಾದ

ವಾಯುಪುತ್ರನೇ! ನನ್ನ ನೆನಪನ್ನು ತರುವ ಶ್ರೇಷ್ಠವಾದ ಈ ಸನ್ನಿವೇಶವನ್ನು ಶ್ರೀರಾಮನಿಗೆ ವಿವರಿಸಿ ಹೇಳು. ಚಿತ್ರಕೂಟ ಪರ್ವತದ ಈಶಾನ್ಯ ದಿಕ್ಕಿನ ತಪ್ಪಲಿನಲ್ಲಿರುವ, ಫಲ-ಮೂಲ ಜಲಗಳಿಂದ ಸಮೃದ್ಧವಾದ, ಸಿದ್ಧರಿಂದ ಆಶ್ರಯಿಸಲ್ಪಡುತ್ತಿರುವ, ಮಂದಾಕಿನೀ ನದಿಗೆ ಸಮೀಪದಲ್ಲಿರುವ ತಪಸ್ವಿಗಳ ಆಶ್ರಮದಲ್ಲಿ ವಾಸಮಾಡುತ್ತಿದ್ದಾಗ ಜರುಗಿದ ಈ ಘಟನೆಯನ್ನು ನನ್ನ ಪ್ರಿಯನಿಗೆ ಯಥಾವತ್ತಾಗಿ ಹೇಳು.॥12-13॥

ಮೂಲಮ್ - 14

ತಸ್ಯೋಪವನಷಂಡೇಷು ನಾನಾಪುಷ್ಪಸುಗಂಧಿಷು ।
ವಿಹೃತ್ಯ ಸಲಿಲಕ್ಲಿನ್ನಾ ತವಾಂಕೇ ಸಮುಪಾವಿಶಮ್ ॥

ಅನುವಾದ

‘‘ರಾಘವಾ! ನಾನಾ ವಿಧವಾದ ಪುಷ್ಪಗಳಿಂದ ಸುಗಂಧಿತವಾಗಿದ್ದ ಆ ಚಿತ್ರಕೂಟ ಪರ್ವತದ ಉಪವನದಲ್ಲಿ ಬಹಳ ಹೊತ್ತಿನವರೆಗೆ ವಿಹರಿಸಿ ಬೆವರಿನಿಂದ ತೊಯ್ದುಹೋಗಿದ್ದ ನಾನು ನಿನ್ನ ತೊಡೆಯಲ್ಲಿ ಕುಳಿತುಕೊಂಡೆ.॥14॥

ಮೂಲಮ್ - 15

ತತೋ ಮಾಂಸ ಸಮಾಯುಕ್ತೋ ವಾಯಸಃ ಪರ್ಯತುಂಡಯತ್ ।
ತಮಹಂ ಲೋಷ್ಟಮುದ್ಯಮ್ಯ ವಾರಯಾಮಿ ಸ್ಮ ವಾಯಸಮ್ ॥

ಅನುವಾದ

ಅಷ್ಟರಲ್ಲಿ ಮಾಂಸಾಪೇಕ್ಷಿಯಾದ ಕಾಗೆಯೊಂದು ನನ್ನ ಸ್ತನಾಂತರದಲ್ಲಿ ಕೊಕ್ಕಿನಿಂದ ಕುಕ್ಕಿತು. ಆಗ ನಾನು ಅದನ್ನು ಹತ್ತಿರಕ್ಕೆ ಬರದಂತೆ ತಡೆಯಲು ಮಣ್ಣುಹೆಂಟೆಯನ್ನು ಅದರ ಕಡೆಗೆ ಎಸೆಯುತ್ತಾ ದೂರ ಓಡಿಸುತ್ತಿದ್ದೆ.॥15॥

ಮೂಲಮ್ - 16

ದಾರಯನ್ ಸ ಚ ಮಾಂ ಕಾಕಸ್ತತ್ರೈವ ಪರಿಲೀಯತೇ ।
ನ ಚಾಪ್ಯುಪಾರಮನ್ಮಾಂಸಾತ್ ಭಕ್ಷಾರ್ಥೀ ಬಲಿಭೋಜನಃ ॥

ಅನುವಾದ

ಆದರೆ ಆ ಕಾಗೆಯು ನನ್ನನ್ನು ಪದೇ-ಪದೇ ಬಾಧಿಸುತ್ತಿತ್ತು. ನನ್ನಿಂದ ತಪ್ಪಿಸಿಕೊಂಡು ಅಲ್ಲಲ್ಲೇ ತಿರುಗುತ್ತಿತ್ತು. ಮಾಂಸಭಕ್ಷಣದಲ್ಲಿ ಆಸಕ್ತವಾದ ಆ ಕಾಗೆಯು ತನ್ನ ಪ್ರಯತ್ನವನ್ನು ಬಿಡಲೊಲ್ಲದು.॥16॥

ಮೂಲಮ್ - 17

ಉತ್ಕರ್ಷಂತ್ಯಾಂ ಚ ರಶನಾಂ ಕ್ರುದ್ಧಾಯಾಂ ಮಯಿ ಪಕ್ಷಿಣೇ ।
ಸ್ರಸ್ಯಮಾನೇ ಚ ವಸನೇ ತತೋ ದೃಷ್ಟಾ ತ್ವಯಾ ಹ್ಯಹಮ್ ॥

ಅನುವಾದ

ನಾನು ಕೋಪದಿಂದ ಆ ವಾಯಸವನ್ನು ಓಡಿಸುತ್ತಿದ್ದಾಗ, ಸಡಲಿದ ಓಡ್ಯಾಣವನ್ನು ಬಿಗಿಗೊಳಿಸಿದಾಗ, ಜಾರುತ್ತಿದ್ದ ಸೀರೆಯನ್ನು ಸರಿಪಡಿಸಿಕೊಳ್ಳುತ್ತಿರುವಾಗ ನೀನು ನನ್ನನ್ನು ನೋಡಿ ಮುಗುಳ್ನಕ್ಕೆ.॥17॥

ಮೂಲಮ್ - 18

ತ್ವಯಾಪಹಸಿತಾ ಚಾಹಂ ಕ್ರುದ್ಧಾ ಸಂಲಜ್ಜಿತಾ ತದಾ ।
ಭಕ್ಷಗೃಧ್ನೇನ ಕಾಕೇನ ದಾರಿದಾ ತ್ವಾಮುಪಾಗತಾ ॥

ಅನುವಾದ

ಅದರಿಂದ ನನಗೆ ಕೋಪವು ನಾಚಿಕೆಯೂ ಆಯಿತು. ಮಾಂಸವನ್ನು ಭಕ್ಷಿಸುವುದರಲ್ಲಿಯೇ ಆಸಕ್ತವಾಗಿದ್ದ ಆ ಕಾಗೆಯು ನನ್ನನ್ನು ಬಹಳವಾಗಿ ಗಾಯಗೊಳಿಸಿತು. ಅದನ್ನು ಓಡಿಸುತ್ತಾ ನಿನ್ನ ಬಳಿಗೆ ಬಂದೆನು.॥18॥

ಮೂಲಮ್ - 19

ಆಸೀನಸ್ಯ ಚ ತೇ ಶ್ರಾಂತಾ ಪುನರುತ್ಸಂಗಮಾವಿಶಮ್ ।
ಕ್ರುಧ್ಯಂತೀ ಚ ಪ್ರಹೃಷ್ಟೇನ ತ್ವಯಾಹಂ ಪರಿಸಾಂತ್ವಿತಾ ॥

ಅನುವಾದ

ಆಯಾಸಗೊಂಡಿದ್ದ ನಾನು, ಕುಳಿತಿರುವ ನಿನ್ನ ತೊಡೆಯ ಮೇಲೆ ಪುನಃ ಕುಳಿತೆನು. ಕುಪಿತಳಾದ ನನ್ನನ್ನು ಮರುಕ್ಷಣದಲ್ಲೇ ನೀನು ಪ್ರಸನ್ನಗೊಳಿಸಲು ಸಂತೈಸಿದೆ.॥19॥

ಮೂಲಮ್ - 20

ಬಾಷ್ಪ ಪೂರ್ಣಮುಖೀ ಮಂದಂ ಚಕ್ಷುಷೀ ಪರಿಮಾರ್ಜತೀ ।
ಲಕ್ಷಿತಾಹಂ ತ್ವಯಾ ನಾಥ ವಾಯಸೇನ ಪ್ರಕೋಪಿತಾ ॥

ಅನುವಾದ

ಕಾಗೆಯಿಂದ ಕುಕ್ಕಿಸಿಕೊಂಡು ಕೋಪಗೊಂಡಿದ್ದ ನನ್ನ ಮುಖವೆಲ್ಲವೂ ಕಣ್ಣೀರಿನಿಂದ ತೊಯ್ದು ಹೋಗಿತ್ತು. ಕಂಬನಿಗಳನ್ನು ನಾನು ಮೆಲ್ಲನೆ ಒರೆಸಿಕೊಳ್ಳುವಾಗ ಅದನ್ನು ನೀನು ನೋಡಿದೆ.॥20॥

ಮೂಲಮ್ - 21

ಪರಿಶ್ರಮಾತ್ ಪ್ರಸುಪ್ತಾ ಚ ರಾಘವಾಂಕೇಪ್ಯಹಂ ಚಿರಮ್ ।
ಪರ್ಯಾಯೇಣ ಪ್ರಸುಪ್ತಶ್ಚ ಮಮಾಂಕೇ ಭರತಾಗ್ರಜಃ ॥

ಅನುವಾದ

ಆಯಾಸದಿಂದಾಗಿ ನಾನು ಬಹಳ ಹೊತ್ತಿನವರೆಗೆ ನಿನ್ನ ತೊಡೆಯಲ್ಲೇ ಮಲಗಿದ್ದೆನು. ನಾನು ಎಚ್ಚರಗೊಂಡ ನಂತರ ಭರತಾಗ್ರಜನಾದ ನೀನು ನನ್ನ ತೊಡೆಯ ಮೇಲೆ ಮಲಗಿದೆ.॥21॥

ಮೂಲಮ್ - 22

ಸ ತತ್ರ ಪುನರೇವಾಥ ವಾಯಸಃ ಸಮುಪಾಗಮತ್ ।
ತತಃ ಸುಪ್ತಪ್ರಬುದ್ಧಾಂ ಮಾಂ ರಾಘವಾಂಕಾತ್ ಸಮುತ್ಥಿತಾಮ್ ॥

ಅನುವಾದ

ಅದಾದ ಬಳಿಕ ಪುನಃ ಆ ಕಾಗೆಯು ಅಲ್ಲಿಗೆ ಹಾರಿ ಬಂದು ಕುಳಿತುಕೊಂಡಿತು. ಸ್ವಲ್ಪ ಹೊತ್ತು ಶ್ರೀರಾಮನು ಮಡಿಲಲ್ಲಿ ಮಲಗಿಕೊಂಡಿದ್ದಾಗ ಆ ಕಾಗೆಯು ವೇಗವಾಗಿ ನನ್ನನ್ನು ಸಮೀಪಿಸಿ, ಕಾಲುಗುರುಗಳಿಂದ ನನ್ನ ಎದೆಯನ್ನು ಗಾಯಗೊಳಿಸಿತು. ॥22॥

ಮೂಲಮ್ - 23

ವಾಯಸಃ ಸಹಸಾಗಮ್ಯ ವಿದದಾರ ಸ್ತನಾಂತರೇ ।
ಪುನಃ ಪುನರಥೋತ್ಪತ್ಯ ವಿದದಾರ ಸ ಮಾಂ ಭೃಶಮ್ ॥

ಅನುವಾದ

ಅದು ಪದೇ-ಪದೇ ಹಾರಿ-ಹಾರಿ ನನ್ನನ್ನು ಕುಕ್ಕಿ ಬಾಧಿಸುತ್ತಲೇ ಇತ್ತು. ಆಗ ಶ್ರೀರಾಮನ ಮೇಲೆ ನನ್ನ ವಕ್ಷಸ್ಥಳದಿಂದ ಸ್ರವಿಸುತ್ತಿದ್ದ ರಕ್ತಬಿಂದುಗಳು ಬಿದ್ದುವು.॥23॥

ಮೂಲಮ್ - 24

ತತಃ ಸಮುಕ್ಷಿತೋ ರಾಮೋ ಮುಕ್ತೈಃ ಶೋಣಿತಬಿಂದುಭಿಃ ।
ವಾಯಸೇನ ತತಸ್ತೇನ ಬಲವತ್ ಕ್ಲಿಶ್ಯಮಾನಯಾ ॥

ಅನುವಾದ

ಆಗ ಆ ವಾಯಸದಿಂದ ಬಾಧೆಪಡುತ್ತಿದ್ದ ನಾನು ಸಕಲೈಶ್ವರ್ಯ ಸಂಪನ್ನನೂ, ಅರಿಸೂದನೂ ಆದ ಶ್ರೀರಾಮನನ್ನು ಗಾಢನಿದ್ದೆಯಿಂದ ಎಬ್ಬಿಸಿದೆನು.॥24॥

ಮೂಲಮ್ - 25

ಸ ಮಯಾ ಬೋಧಿತಃ ಶ್ರೀಮಾನ್ ಸುಖಸುಪ್ತಃ ಪರಂತಪಃ ।
ಸ ಮಾಂ ದೃಷ್ಟ್ವಾ ಮಹಾಬಾಹುರ್ವಿತುನ್ನಾಂ ಸ್ತನಯೋಸ್ತದಾ ॥

ಅನುವಾದ

ಆಗ ಆ ಕಾಗೆಯಿಂದ ಸ್ತನಗಳ ಮಧ್ಯದಲ್ಲಿ ಪೀಡಿಸುತ್ತಿರುವುದನ್ನು ನೋಡಿದ ಮಹಾಬಾಹುವಾದ ರಾಮನು ರೊಚ್ಚಿಗೆದ್ದ ವಿಷಸರ್ಪವು ಬುಸುಗುಟ್ಟುವಂತೆ, ಕ್ರುದ್ಧನಾಗಿ ನಿಟ್ಟಿಸುರುಬಿಡುತ್ತಾ ಇಂತೆಂದನು.॥25॥

ಮೂಲಮ್ - 26

ಆಶೀವಿಷ ಇವ ಕ್ರುದ್ಧಃ ಶ್ವಸನ್ ವಾಕ್ಯಮಭಾಷತ ।
ಕೇನ ತೇ ನಾಗನಾಸೋರು ವಿಕ್ಷತಂ ವೈ ಸ್ತನಾಂತರಮ್ ॥

ಅನುವಾದ

ಎಲೈ ಸುಂದರಿ ಸೀತಾ! ನಿನ್ನ ಸ್ಥನಗಳ ಮಧ್ಯಭಾಗದಲ್ಲಿ ಪರಚಿ ಗಾಯಗೊಳಿಸಿದವರು ಯಾರು? ಕೋಪಗೊಂಡಿರುವ ಐದು ಹೆಡೆಗಳ ಮಹಾಸರ್ಪದೊಡನೆ ಯಾವನು ಹೀಗೆ ಆಟವಾಡುತ್ತಿರುವನು?॥26॥

ಮೂಲಮ್ - 27

ಕಃ ಕ್ರೀಡತಿ ಸರೋಷೇಣ ಪಂಚವಕ್ತ್ರೇಣ ಭೋಗಿನಾ ।
ವೀಕ್ಷಮಾಣಸ್ತತಸ್ತಂ ವೈ ವಾಯುಸಂ ಸಮುದೈಕ್ಷತ ॥

ಅನುವಾದ

ಶ್ರೀರಾಮನು ಹೀಗೆ ಹೇಳಿ ಸುತ್ತಲೂ ಪರಿಕಿಸಿ ನೋಡುತ್ತಿರುವಾಗ, ರಕ್ತಸಿಕ್ತವಾದ ತೀಕ್ಷ್ಣವಾದ ಕಾಲುಗುರುಗಳಿರುವ ಕಾಗೆಯೊಂದು ಇದಿರ್ಗಡೆ ಕುಳಿತಿರುವುದನ್ನು ನೋಡಿದನು.॥27॥

ಮೂಲಮ್ - 28

ನಖೈಃ ಸರುಧಿರೈಸ್ತಿಕ್ಷ್ಣೈರ್ಮಾಮೇವಾಭಿಮುಖಂ ಸ್ಥಿತಮ್ ।
ಪುತ್ರಃ ಕಿಲ ಸ ಶಕ್ರಸ್ಯ ವಾಯಸಃ ಪತತಾಂ ವರಃ ॥

ಅನುವಾದ

ಆ ಕಾಗೆಯು ಇಂದ್ರನ ಮಗನು. ವಾಯುವೇಗಕ್ಕೆ ಸಮವೇಗವುಳ್ಳ ಆ ಇಂದ್ರಪುತ್ರನು ಶ್ರೀರಾಮನನ್ನು ನೋಡಿ ತನ್ನ ರಕ್ಷಣೆಗಾಗಿ ಸ್ವಲ್ಪದೂರ ಹಾರಿ ಹೋಗಿ ಕುಳಿತುಕೊಂಡಿತು.॥28॥

ಮೂಲಮ್ - 29

ಧರಾಂ ತರಗತಃ ಶೀಘ್ರಂ ಪವನಸ್ಯ ಗತೌ ಸಮಃ ।
ತತಸ್ತಸ್ಮಿನ್ ಮಹಾಬಾಹುಃ ಕೋಪಸಂವರ್ತಿತೇಕ್ಷಣಃ ॥

ಅನುವಾದ

ಬಳಿಕ ಮಹಾಬುದ್ಧಿಶಾಲಿಯೂ, ಮಹಾಬಾಹುವೂ ಆದ, ರಾಮನ ಕಣ್ಣುಗಳು ಕೋಪದಿಂದ ಗರ-ಗರನೆ ತಿರುಗುತ್ತಿವೆಯೋ ಎಂಬಂತಿದ್ದ ಅವನು ಆ ಕಾಗೆಯನ್ನು ಚೆನ್ನಾಗಿ ಶಿಕ್ಷಿಸಲು ನಿರ್ಣಯಿಸಿದನು.॥29॥

ಮೂಲಮ್ - 30

ವಾಯಸೇ ಕೃತವಾನ್ ಕ್ರೂರಾಂ ಮತಿಂ ಮತಿಮತಾಂ ವರಃ ।
ಸ ದರ್ಭಂ ಸಂಸ್ತರಾದ್ಗೃಹ್ಯ ಬ್ರಾಹ್ಮೇಣಾಸೇಣ ಯೋಜಯತ್ ॥

ಅನುವಾದ

ಅಲ್ಲಿಯೇ ಹಾಸಿದ್ದ ದರ್ಭೆಯಲ್ಲಿ ಒಂದು ದರ್ಭೆಯನ್ನು ಎತ್ತಿಕೊಂಡು ಅದನ್ನು ಬ್ರಹ್ಮಾಸದಿಂದ ಅಭಿಮಂತ್ರಿಸಿದನು. ಆ ಬ್ರಹ್ಮಾಸವು ಪ್ರಳಯಾಗ್ನಿಯೋಪಾದಿಯಲ್ಲಿ ಪ್ರಜ್ವಲಿಸುತ್ತಾ ಕಾಗೆಯನ್ನು ಎದುರಿಸಿ ನಿಂತಿತು.॥30॥

ಮೂಲಮ್ - 31

ಸ ದೀಪ್ತ ಇವ ಕಾಲಾಗ್ನಿರ್ಜಜ್ವಾಲಾಭಿಮುಖೋ ದ್ವಿಜಮ್ ।
ಸ ತಂ ಪ್ರದೀಪ್ತಂ ಚಿಕ್ಷೇಪ ದರ್ಭಂ ತಂ ವಾಯಸಂ ಪ್ರತಿ ॥

ಅನುವಾದ

ಮತ್ತೆ ರಾಮನು ಆ ಪ್ರಜ್ವಲಿಸುತ್ತಿರುವ ದರ್ಭೆಯನ್ನು (ಬ್ರಹ್ಮಾಸವನ್ನು) ಕಾಗೆಯ ಮೇಲೆ ಪ್ರಯೋಗಿಸಿದನು. ಆಗ ಆ ಇಷಿಕಾಸವು (ದರ್ಭಾಸವು) ಆಕಾಶದಲ್ಲಿ ಹಾರಿಹೋಗುತ್ತಿದ್ದ ಕಾಗೆಯನ್ನು ಎಡೆಬಿಡದೆ ಹಿಂಬಾಲಿಸಿತು.॥31॥

ಮೂಲಮ್ - 32

ತತಸ್ತಂ ವಾಯಸಂ ದರ್ಭಃ ಸೋಂಬರೇನುಜಗಾಮ ಹ ।
ಅನುಸೃಷ್ಟಸ್ತದಾ ಕಾಕೋ ಜಗಾಮ ವಿವಿಧಾಂ ಗತಿಮ್ ॥

ಅನುವಾದ

ಹಾಗೆ ಆ ಅಸವು ಹಿಂಬಾಲಿಸಸುತ್ತಿರುವಾಗ ಆ ಕಾಗೆಯು ಒದಗಿದ ಆಪತ್ತಿನಿಂದ ತಪ್ಪಿಸಿಕೊಳ್ಳಲು ಅನೇಕ ಕಡೆಗಳಲ್ಲಿ ಸುತ್ತಾಡಿತು. ತನ್ನನ್ನು ರಕ್ಷಿಸಿಕೊಳ್ಳಲು ಭೂಲೋಕವೇ ಮೊದಲ್ಗೊಂಡು ಸತ್ಯಲೋಕದವರೆಗಿನ ಎಲ್ಲ ಲೋಕಗಳನ್ನು ತಿರುಗಿತು.॥32॥

ಮೂಲಮ್ - 33

ತ್ರಾಣಕಾಮ ಇಮಂ ಲೋಕಂ ಸರ್ವಂ ವೈ ವಿಚಚಾರ ಹ ।
ಸ ಪಿತ್ರಾ ಚ ಪರಿತ್ಯಕ್ತಃ ಸುರೈಃ ಸರ್ವೈರ್ಮಹರ್ಷಿಭಿಃ ॥

ಮೂಲಮ್ - 34

ತ್ರೀನ್ ಲೋಕಾನ್ ಸಂಪರಿಕ್ರಮ್ಯ ತಮೇವ ಶರಣಂ ಗತಃ ।
ಸ ತಂ ನಿಪತಿತಂ ಭೂಮೌ ಶರಣ್ಯಃ ಶರಣಾ ಗತಮ್ ॥

ಅನುವಾದ

ತಂದೆಯಾದ ದೇವೇಂದ್ರನು, ಇತರ ದೇವತೆಗಳು, ಮಹರ್ಷಿಗಳು ಆ ಕಾಗೆಯನ್ನು ರಕ್ಷಿಸಲು ತಮ್ಮ ಅಶಕ್ತತೆಯನ್ನು ಪ್ರಕಟಪಡಿಸಿದರು. ಹಾಗೆ ಅದು ಮೂರು ಲೋಕಗಳಲ್ಲಿಯೂ ಸಂಚರಿಸಿ, ತನ್ನನ್ನು ರಕ್ಷಿಸುವವರು ಯಾರೂ ಇಲ್ಲವೆಂದು ಅರಿತು, ತಿರುಗಿ ಬಂದು ಶ್ರೀರಾಮನಿಗೆ ಶರಣಾಯಿತು. ಶರಣಾಗತ ರಕ್ಷಕನಾದ ಆ ರಾಘವನು ಶರಣಾಗತನಾಗಿ ನೆಲದ ಮೇಲೆ ಬಿದ್ದಿರುವ ಕಾಗೆಯನ್ನು ಅದು ವಧಾರ್ಹವೇ ಆಗಿದ್ದರೂ ಅದನ್ನು ರಕ್ಷಿಸಿದನು.॥33-34॥

ಮೂಲಮ್ - 35

ವಧಾರ್ಹಮಪಿ ಕಾಕುತ್ಸ್ಥಃ ಕೃಪಯಾ ಪರ್ಯಪಾಲಯತ್ ।
ಪರಿದ್ಯೂನಂ ವಿಷಣ್ಣಂ ಚ ಸ ತಮಾಯಾಂತಮಬ್ರವೀತ್ ॥

ಮೂಲಮ್ - 36

ಮೋಘಂ ಕರ್ತುಂ ನ ಶಕ್ಯಂ ತು ಬ್ರಾಹ್ಮಮಸ್ತ್ರಂ ತದುಚ್ಯತಾಮ್ ।
ಹಿನಸ್ತು ದಕ್ಷಿಣಾಕ್ಷಿ ತ್ವಚ್ಛರ ಇತ್ಯಥ ಸೋಬ್ರವೀತ್ ॥

ಮೂಲಮ್ - 37

ತತಸ್ತಸ್ಯಾಕ್ಷಿ ಕಾಕಸ್ಯ ಹಿನಸ್ತಿ ಸ್ಮ ಸ ದಕ್ಷಿಣಮ್ ।
ದತ್ತ್ವಾಸ ದಕ್ಷಿಣಂ ನೇತ್ರಂ ಪ್ರಾಣೇಭ್ಯಃ ಪರಿರಕ್ಷಿತಃ ॥

ಅನುವಾದ

ಪಶ್ಚಾತ್ತಾಪದಿಂದ ಶಕ್ತಿಗುಂದಿ ವಿಷಣ್ಣವದನನಾಗಿ ತನಗೆ ಶರಣಾದ ಆ ಕಾಗೆಯ ಬಳಿ ಶ್ರೀರಾಮನು ಇಂತೆಂದನು - ‘‘ನಾನು ಪ್ರಯೋಗಿಸಿದ ಬ್ರಹ್ಮಾಸವು ವ್ಯರ್ಥವಾಗದು. ಆದುದರಿಂದ ಏನು ಮಾಡಬಹುದೋ ತಿಳಿಸು.’’ - ಮತ್ತೆ ಆ ಕಾಗೆಯು - ‘‘ನಿನ್ನ ಬ್ರಹ್ಮಾಸವು ನನ್ನನ್ನು ಕೊಲ್ಲದಿರಲಿ’’ ಎಂದು ನುಡಿಯಿತು. ಆಗ ಶ್ರೀರಾಮನು ಆ ಕಾಗೆಯ ಬಲಗಣ್ಣನ್ನು ಬ್ರಹ್ಮಾಸಕ್ಕೆ ಬಲಿಗೊಟ್ಟನು. ಆ ವಾಯಸವೂ ಕೂಡ ತನ್ನ ಬಲ ಕಣ್ಣನ್ನು ಒಪ್ಪಿಸಿಕೊಟ್ಟು ಪ್ರಾಣಗಳನ್ನು ಉಳಿಸಿಕೊಂಡಿತು. (ಅಂದಿನಿಂದ ಕಾಗೆಯು ಒಕ್ಕಣ್ಣನೆಂದೇ ಪ್ರಸಿದ್ಧಿ ).॥35-37॥

ಮೂಲಮ್ - 38

ಸ ರಾಮಾಯ ನಮಸ್ಕೃತ್ವಾ ರಾಜ್ಞೇ ದಶರಥಾಯ ಚ ।
ವಿಸೃಷ್ಟಸ್ತೇತ ವೀರೇಣ ಪ್ರತಿಪೇದೇ ಸ್ವಮಾಲಯಮ್ ॥

ಅನುವಾದ

ಅನಂತರ ಆ ಕಾಕಾಸುರನು ವೀರವರನಾದ ಶ್ರೀರಾಮಚಂದ್ರ ಪ್ರಭುವಾದ ನಿನಗೆ ನಮಸ್ಕರಿಸಿದನು ಮತ್ತೆ ನಿನ್ನ ತಂದೆಯಾದ ದಶರಥ ಮಹಾರಾಜನನ್ನು ಮನಸ್ಸಿನಲ್ಲೇ ವಂದಿಸಿ, ನಿನ್ನ ಅಪ್ಪಣೆಯನ್ನು ಪಡೆದು ತನ್ನ ಭವನವಾದ ಇಂದ್ರಲೋಕಕ್ಕೆ ಹೊರಟುಹೋಯಿತು.॥38॥

ಮೂಲಮ್ - 39

ಮತ್ಕೃತೇ ಕಾಕಮಾತ್ರೇ ತು ಬ್ರಹ್ಮಾಸ್ತ್ರಂ ಸಮುದೀರಿತಮ್ ।
ಕಸ್ಮಾದ್ಯೋ ಮಾಹರೇತ್ ತ್ವತ್ತಃ ಕ್ಷಮಸೇ ತಂ ಮಹೀಪತೇ ॥

ಅನುವಾದ

ಮಹೀಪತೇ! ನನ್ನ ಸಲುವಾಗಿ ಕ್ಷುದ್ರವಾದ ಒಂದು ಕಾಗೆಯ ಮೇಲೆ ನೀನು ಬ್ರಹ್ಮಾಸವನ್ನು ಪ್ರಯೋಗಿಸಿದೆ. ಸ್ವಾಮಿ! ನನ್ನನ್ನು ಅಪಹರಿಸಿದ ಈ ರಾವಣನನ್ನು ಸಂಹರಿಸಲು ಉಪೇಕ್ಷಿಸಿದುದರ ಕಾರಣವೇನು? ಇದನ್ನು ನೀನು ಹೇಗೆ ಸಹಿಸುತ್ತಿರುವೆ?॥39॥

ಮೂಲಮ್ - 40

ಸ ಕುರುಷ್ವ ಮಹೋತ್ಸಾಹಃ ಕೃಪಾಂ ಮಯಿ ನರರ್ಷಭ ।
ತ್ವಯಾ ನಾಥವತೀ ನಾಥ ಹ್ಯನಾಥಾ ಇವ ದೃಶ್ಯತೇ ॥

ಅನುವಾದ

ಓ ಪ್ರಾಣನಾಥಾ! ನೀನು ಮಹಾ ಪುರುಷನು. ಹೆಚ್ಚಾದ ಉತ್ಸಾಹ ಶಕ್ತಿಯುಳ್ಳವನು. ಇಲ್ಲಿ ನಿನ್ನ ಧರ್ಮಪತ್ನಿಯು ದಿಕ್ಕಿಲ್ಲದವಳಂತೆ ಬಿದ್ದಿರುವಳು. ನನ್ನ ಮೇಲೆ ಕೃಪೆದೋರು. ‘‘ದೀನರ ಮೇಲೆ ಕರುಣೆ ತೋರುವುದೇ ಪರಮ ಧರ್ಮವು’’ ಎಂದು ನೀನೇ ನನಗೆ ತಿಳಿಸಿರುವೆ. ನಿನ್ನ ಪರಾಕ್ರಮ ವೈಭವಗಳನ್ನೂ, ಮಹೋತ್ಸಾಹ ಶಕ್ತಿಯನ್ನೂ, ಮಹಾಬಲ ಸಂಪನ್ನತೆಯನ್ನೂ ನಾನು ಅರಿತಿರುವೆನು.॥40॥

ಮೂಲಮ್ - 41

ಆನೃಶಂಸ್ಯಂ ಪರೋ ಧರ್ಮಸ್ತ್ವತ್ತ ಏವ ಮಯಾ ಶ್ರುತಃ ।
ಜಾನಾಮಿ ತ್ವಾಂ ಮಹಾವೀರ್ಯಂ ಮಹೋತ್ಸಾಹಂ ಮಹಾಬಲಮ್ ॥

ಅನುವಾದ

ನಿನ್ನ ಗುಣಗಳೂ, ಕರ್ಮಗಳೂ ದಿವ್ಯವೂ ಅನಂತವೂ ಆಗಿವೆ. ಅವು ಊಹೆಗೂ ನಿಲುಕದು. ನಿನ್ನನ್ನು ಯಾರೂ ಕ್ಷೋಭೆಗೊಳಿಸಲಾರರು. ಗಾಂಭೀರ್ಯದಲ್ಲಿ ಸಮುದ್ರದಂತೆ ಇರುವವನು. ಸಮುದ್ರಗಳಿಂದ ಆವೃತವಾದ ಭೂಮಂಡಲಕ್ಕೆ ಒಡೆಯನು. ಐಶ್ವರ್ಯದಲ್ಲಿ ದೇವೇಂದ್ರನಿಗೆ ಸಮಾನನು.॥41॥

ಮೂಲಮ್ - 42

ಅಪಾರಪಾರಮಕ್ಷೋಭ್ಯಂ ಗಾಂಭೀರ್ಯಾತ್ಸಾಗರೋಪಮಮ್ ।
ಭರ್ತಾರಂ ಸಸಮುದ್ರಾಯಾ ಧರಣ್ಯಾ ವಾಸವೋಪಮಮ್ ॥

ಅನುವಾದ

ನೀನು ಅಸ್ತ್ರವಿದ್ಯೆಯನ್ನು ಅರಿತವರಲ್ಲಿ ಶ್ರೇಷ್ಠನು. ಸತ್ಯಪರಾಕ್ರಮನು. ಮಹಾಬಲಶಾಲಿ. ಹೀಗೆಲ್ಲ ಆಗಿದ್ದರೂ ರಾಕ್ಷಸರ ಮೇಲೆ ಏಕೆ ಶಸ್ತ್ರ ಪ್ರಯೋಗಿಸುವುದಿಲ್ಲ?॥42॥

ಮೂಲಮ್ - 43

ಏವಮಸ್ತ್ರವಿದಾಂ ಶ್ರೇಷ್ಠಃ ಸತ್ವವಾನ್ ಬಲವಾನಪಿ ।
ಕಿಮರ್ಥಮಸ್ತ್ರಂ ರಕ್ಷಸ್ಸು ನ ಯೋಜಯಸಿ ರಾಘವ ॥

ಮೂಲಮ್ - 44

ನ ನಾಗಾ ನಾಪಿ ಗಂಧರ್ವಾನಾಸುರಾ ನ ಮರುದ್ಗಣಾಃ ।
ರಾಮಸ್ಯ ಸಮರೇ ವೇಗಂ ಶಕ್ತಾಃ ಪ್ರತಿಸಮೀಹಿತುಮ್ ॥

ಮೂಲಮ್ - 45

ತಸ್ಯ ವೀರ್ಯವತಃ ಕಶ್ಚಿದ್ ಯದ್ಯಸ್ತಿ ಮಯಿ ಸಂಭ್ರಮಃ ।
ಕಿಮರ್ಥಂ ನ ಶರೈಸ್ತೀಕ್ಷ್ಣೈಃ ಕ್ಷಯಂ ನಯತಿ ರಾಕ್ಷಸಾನ್ ॥

ಅನುವಾದ

ನಾಗ-ಗಂಧರ್ವ - ರಾಕ್ಷಸರೇ ಆಗಲೀ, ಮರುತ್ತುಗಳೇ ಆಗಲೀ, ಯುದ್ಧದಲ್ಲಿ ಶ್ರೀರಾಮನಾದ ನಿನ್ನ ಅಸ್ತ್ರಗಳ ವೇಗವನ್ನು ತಡೆಯಲು ಶಕ್ತರಲ್ಲ. ಅಂತಹ ವಿರ್ಯವಂತನಾದ ನಿನಗೆ ನನ್ನ ಮೇಲೆ ಸ್ವಲ್ಪವಾದರೂ ಕರುಣೆ ಇದ್ದಿದ್ದರೆ, ತೀಕ್ಷ್ಣವಾದ ಬಾಣಗಳಿಂದ ನನಗೆ ಉಪಟಳವನ್ನು ಕೊಡುತ್ತಿರುವ ರಾಕ್ಷಸರನ್ನು ಏಕೆ ನಾಶಮಾಡುತ್ತಿಲ್ಲ? ಮಹಾಬಲಿಷ್ಠನೂ, ವೀರನೂ, ಶತ್ರುತಾಪಕನೂ ಆದ ಲಕ್ಷ್ಮಣನು ಅಣ್ಣನ ಅನುಜ್ಞೆಯನ್ನು ಪಡೆದು ನನ್ನ ರಕ್ಷಣೆಗಾಗಿ ಏಕೆ ಪ್ರಯತ್ನಿಸುವುದಿಲ್ಲ?॥43-45॥

ಮೂಲಮ್ - 46

ಭ್ರಾತುರಾದೇಶಮಾದಾಯ ಲಕ್ಷ್ಮಣೋ ವಾ ಪರಂತಪಃ ।
ಕಸ್ಯ ಹೇತೋರ್ನಮಾಂ ವೀರಃ ಪರಿತ್ರಾತಿ ಮಹಾಬಲಃ ॥

ಮೂಲಮ್ - 47

ಯದಿ ತೌ ಪುರುಷವ್ಯಾಘ್ರೌ ವಾಯ್ವಗ್ನಿಸಮತೇಜಸೌ ।
ಸುರಾಣಾಮಪಿ ದುರ್ಧರ್ಷೌ ಕಿಮರ್ಥಂ ಮಾಮುಪೇಕ್ಷತಃ ॥

ಮೂಲಮ್ - 48

ಮಮೈವ ದುಷ್ಕೃತಂ ಕಿಂಚಿನ್ಮಹದಸ್ತಿ ನ ಸಂಶಯಃ ।
ಸಮರ್ಥಾವಪಿ ತೌ ಯನ್ಮಾಂ ನಾವೇಕ್ಷೇತೇ ಪರಂತಪೌ ॥

ಅನುವಾದ

ದೇವತೆಗಳಿಂದಲೂ ಎದುರಿಸಲು ಅಸಾಧ್ಯರಾದ, ಅಗ್ನಿ-ವಾಯುಗಳ ತೇಜಸ್ಸಿಗೂ, ಬಲಸಂಪನ್ನತೆಗೂ ಸಮಾನರಾಗಿದ್ದರೂ, ಪುರುಷ ಸಿಂಹರಾದ ಆ ರಾಜಕುಮಾರರು ನನ್ನನ್ನೇಕೆ ಉಪೇಕ್ಷಿಸುತ್ತಿದ್ದಾರೆ? ನಾನು ಹಿಂದೆ ಮಾಡಿದ ಪಾಪಗಳು ಮಹತ್ತಾಗಿಯೇ ಇರಬೇಕು. ಇದರಲ್ಲಿ ಸಂದೇಹವೇ ಇಲ್ಲ. ಇಲ್ಲದಿದ್ದರೆ ಶತ್ರುಗಳನ್ನು ಸಂಹರಿಸಲು ಹೆಚ್ಚಿನ ಸಮರ್ಥರಾಗಿದ್ದ ಅವರು ನನ್ನ ಕಡೆಗೆ ಏಕೆ ತಿರುಗಿನೋಡುವುದಿಲ್ಲ? (ಹನುಮಂತ! ಹೀಗೆಲ್ಲಾ ನಾನು ಹೇಳಿದೆನೆಂದು ನನ್ನೊಡೆಯನಿಗೆ ಹೇಳು.)॥46-48॥

ಮೂಲಮ್ - 49

ವೈದೇಹ್ಯಾ ವಚನಂ ಶ್ರುತ್ವಾ ಕರುಣಂ ಸಾಶ್ರುಭಾಷಿತಮ್ ।
ಅಥಾಬ್ರವೀನ್ಮಹಾತೇಜಾ ಹನುಮಾನ್ ಮಾರುತಾತ್ಮಜಃ ॥

ಮೂಲಮ್ - 50

ತ್ವಚ್ಛೋಕವಿಮುಖೋ ರಾಮೋ ದೇವಿ ಸತ್ಯೇನ ಮೇ ಶಪೇ ।
ರಾಮೇ ದುಃಖಾ ಭಿಪನ್ನೇ ಚ ಲಕ್ಷ್ಮಣಃ ಪರಿತಪ್ಯತೇ ॥

ಅನುವಾದ

ವೈದೇಹಿಯು ಕಣ್ಣೀರು ಸುರಿಸುತ್ತಾ ಕರುಣಾಜನಕವಾದ ರೀತಿಯಲ್ಲಿ ಹೇಳಿದ ಮಾತುಗಳನ್ನು ಕೇಳಿ ಕಪಿನಾಯಕನಾದ ಮಹಾ ತೇಜಸ್ವಿಯಾದ ಹನುಮಂತನು ಇಂತೆಂದನು ‘‘ದೇವಿಯೇ! ನಿನ್ನ ವಿರಹಶೋಕದಿಂದಾಗಿ ಶ್ರೀರಾಮನು ಎಲ್ಲ ವಿಷಯಗಳಿಂದಲೂ ವಿಮುಖನಾಗಿದ್ದಾನೆ. ಈ ಮಾತನ್ನು ನಾನು ಆಣೆಯಿಟ್ಟು ಹೇಳುತ್ತಿದ್ದೇನೆ. ಶ್ರೀರಾಮನು ದುಃಖಪಡುತ್ತಿದ್ದರೆ ಲಕ್ಷ್ಮಣನೂ ಪರಿತಪಿಸುತ್ತಿರುತ್ತಾನೆ.॥49-50॥

ಮೂಲಮ್ - 51

ಕಥಂಚಿದ್ಭವತೀ ದೃಷ್ಟಾ ನ ಕಾಲಃ ಪರಿಶೋಚಿತುಮ್ ।
ಇಮಂ ಮುಹೂರ್ತಂ ದುಃಖಾನಾಂ ದ್ರಕ್ಷ್ಯಸ್ಯಂತಮನಿಂದಿತೇ ॥

ಮೂಲಮ್ - 52

ತಾವುಭೌ ಪುರುಷವ್ಯಾಘ್ರೌ ರಾಜಪುತ್ರೌ ಮಹಾಬಲೌ ।
ತ್ವದ್ಧರ್ಶನಕೃತೋತ್ಸಾಹೌ ಲಂಕಾಂ ಭಸ್ಮೀಕರಿಷ್ಯತಃ ॥

ಅನುವಾದ

ಪೂಜ್ಯಳೇ! ಹೇಗೋ ನೀನು ಕಾಣಿಸಿಕೊಂಡಿರುವೆ. ನೀನಿರುವ ಸ್ಥಳವೂ ತಿಳಿದುಹೋಗಿದೆ. ಆದ್ದರಿಂದ ದುಃಖಿಸುವ ಸಮಯವಿದಲ್ಲ. ದುಃಖಿಸಬೇಕಾದ ಕಾಲ ಕಳೆದುಹೋಯಿತು. ಈಗಿನಿಂದಲೇ ನೀನು ನಿನ್ನ ದುಃಖಕ್ಕೆ ಕೊನೆಯನ್ನು ಕಾಣುವೆ. ನಿನ್ನನ್ನು ನೋಡುವುದಕ್ಕಾಗಿ ಹೆಚ್ಚು ಕಾತರರಾಗಿರುವ, ಮಹಾ ಬಲಿಷ್ಠರಾದ, ಪುರುಷಸಿಂಹರಾದ ರಾಮ-ಲಕ್ಷ್ಮಣರು ನಿನ್ನನ್ನು ಪಡೆಯುವುದಕ್ಕಾಗಿ ಲಂಕೆಯನ್ನೇ ಸುಟ್ಟು ಬೂದಿ ಮಾಡುವರು.॥51-52॥

ಮೂಲಮ್ - 53

ಹತ್ವಾ ಚ ಸಮರೇ ಕ್ರೂರಂ ರಾವಣಂ ಸಹಬಾಂಧವಮ್ ।
ರಾಘವಸ್ತ್ವಾಂ ವಿಶಾಲಾಕ್ಷಿ ನೇಷ್ಯತಿ ಸ್ವಾಂ ಪುರೀಂ ಪ್ರತಿ ॥

ಅನುವಾದ

ರಾಘವನು ಅತ್ಯಂತ ಕ್ರೂರಿಯಾದ ರಾವಣನನ್ನು ಸಮರಾಂಗಣದಲ್ಲಿ ಸಪರಿವಾರ ಸಹಿತ ಸಂಹರಿಸಿ, ವಿಶಾಲಾಕ್ಷಿಯಾದ ನಿನ್ನನ್ನು ಅಯೋಧ್ಯೆಗೆ ಕರೆದೊಯ್ಯುತ್ತಾನೆ.॥53॥

ಮೂಲಮ್ - 54

ಬ್ರೂಹಿ ಯದ್ರಾಘವೋ ವಾಚ್ಯೋ ಲಕ್ಷ್ಮಣಶ್ಚ ಮಹಾಬಲಃ ।
ಸುಗ್ರೀವೋ ವಾಪಿ ತೇಜಸ್ವೀ ಹರಯೋಽಪಿ ಸಮಾಗತಾಃ ॥

ಅನುವಾದ

ಒಡೆಯನಾದ ರಾಮನಿಗೆ, ಮಹಾಬಲಶಾಲಿಯಾದ ಲಕ್ಷ್ಮಣನಿಗೆ, ತೇಜಸ್ವಿಯಾದ ಸುಗ್ರೀವನಿಗೂ, ಸಮುದ್ರ ತೀರದಲ್ಲಿ ಕಾಯುತ್ತಿರುವ ವಾನರ ವೀರರಿಗೆ, ನಾನು ಹೋದಾಗ ಏನು ಹೇಳಬೇಕೆಂಬ ಸಂದೇಶವನ್ನು ತಿಳಿಸಿರಿ.॥54॥

ಮೂಲಮ್ - 55

ಇತ್ಯುಕ್ತವತಿ ತಸ್ಮಿಂಶ್ಚ ಸೀತಾ ಸುರಸುತೋಪಮಾ ।
ಉವಾಚ ಶೋಕಸಂತಪ್ತಾ ಹನುಮಂತಂ ಪ್ಲವಂಗಮಮ್ ॥

ಅನುವಾದ

ಹನುಮಂತನು ಹೀಗೆ ಹೇಳಿದ ಬಳಿಕ ದಿವ್ಯಭಾಮಿನಿಯಂತೆ ಒಪ್ಪುತ್ತಿದ್ದು ಶೋಕಸಂತಪ್ತಳಾದ ಸೀತಾದೇವಿಯು ಆ ವಾನರ ಶ್ರೇಷ್ಠನ ಬಳಿ ಪುನಃ ಹೇಳತೊಡಗಿದಳು. ‘‘ಮನನಶೀಲಳಾದ ಕೌಸಲ್ಯೆಯು ಲೋಕಕ್ಕೆ ಒಡೆಯನಾದ ಶ್ರೀರಾಮನನ್ನು ಹಡೆದಿದ್ದಳೋ, ಅವನಿಗೆ ನನ್ನ ಪರವಾಗಿ ಕುಶಲವನ್ನು ಕೇಳು. ಹಾಗೆಯೇ ನನ್ನ ಸಲುವಾಗಿ ತಲೆಬಾಗಿ ನಮಸ್ಕರಿಸು.॥55॥

ಮೂಲಮ್ - 56

ಕೌಸಲ್ಯಾ ಲೋಕಭರ್ತಾರಂ ಸುಷುವೇ ಯಂ ಮನಸ್ವಿನೀ ।
ತಂ ಮಮಾರ್ಥೇ ಸುಖಂ ಪೃಚ್ಛ ಶಿರಸಾ ಚಾಭಿವಾದಯ ॥

ಮೂಲಮ್ - 57

ವಿಸೃಜ್ಯ ಸರ್ವರತ್ನಾನಿ ಪ್ರಿಯಾ ಯಾಶ್ಚ ವರಾಂಗನಾಃ ।
ಐಶ್ಚರ್ಯಂ ಚ ವಿಶಾಲಾಯಾಂ ಪೃಥಿವ್ಯಾಮಪಿ ದುರ್ಲಭಮ್ ॥

ಅನುವಾದ

ದಿವ್ಯ ಪುಷ್ಪಮಾಲಿಕೆಗಳನ್ನೂ, ವಿವಿಧ ಭೋಗ್ಯ ವಸ್ತುಗಳನ್ನೂ, ಪ್ರೀತಿಪಾತ್ರಳಾದ ಭಾರ್ಯೆಯನ್ನೂ, ಅವಳ ಸುಖವನ್ನೂ, ವಿಶಾಲವಾದ ಭೂಮಂಡಲದಲ್ಲಿ ದುರ್ಲಭವಾದ ಐಶ್ವರ್ಯವನ್ನು ತ್ಯಜಿಸಿ, ತಂದೆ-ತಾಯಿಯರನ್ನು ಗೌರವಿಸಿ, ಅವರ ಅನುಗ್ರಹ-ಆಶೀರ್ವಾದಗಳನ್ನು ಹೊಂದಿ, ತನ್ನ ತಾಯಿಯಾದ ಸುಮಿತ್ರಾದೇವಿಗೆ ಕೀರ್ತಿಯನ್ನು ತಂದುಕೊಟ್ಟ ಲಕ್ಷ್ಮಣನು ಶ್ರೀರಾಮನನ್ನು ಅನುಸರಿಸಿ, ವನವಾಸಕ್ಕಾಗಿ ಬಂದನು. ಧರ್ಮಾತ್ಮನಾದ ಅವನು ದೊರೆತ ಸುಖಜೀವನವನ್ನು ಪರಿತ್ಯಜಿಸಿ, ಅಣ್ಣನಾದ ಶ್ರೀರಾಮನಿಗೆ ವನದಲ್ಲಿ ಅನುಕೂಲವಾದ ಸೇವೆಗಳನ್ನು ಮಾಡುತ್ತಾ ಅವನೊಂದಿಗೆ ನಡೆದನು.॥56-57॥

ಮೂಲಮ್ - 58

ಪಿತರಂ ಮಾತರಂ ಚೈವ ಸಂಮಾನ್ಯಾಭಿಪ್ರಸಾದ್ಯ ಚ ।
ಅನುಪ್ರವ್ರಜಿತೋ ರಾಮಂ ಸುಮಿತ್ರಾ ಯೇನ ಸುಪ್ರಜಾಃ ॥

ಮೂಲಮ್ - 59

ಆನುಕೂಲ್ಯೇನ ಧರ್ಮಾತ್ಮಾ ತ್ಯಕ್ತ್ವಾ ಸುಖಮನುತ್ತಮಮ್ ।
ಅನುಗಚ್ಛತಿ ಕಾಕುತ್ಸ್ಥಂ ಭ್ರಾತರಂ ಪಾಲಯನ್ ವನೇ ॥

ಮೂಲಮ್ - 60

ಸಿಂಹಸ್ಕಂಧೋ ಮಹಾಬಾಹುರ್ಮನಸ್ವೀ ಪ್ರಿಯದರ್ಶನಃ ।
ಪಿತೃವದ್ವರ್ತತೇ ರಾಮೇ ಮಾತೃವನ್ಮಾಂ ಸಮಾಚರನ್ ॥

ಅನುವಾದ

ಅವನು ಸಿಂಹದಂತೆ ಭುಜಬಲವುಳ್ಳವನು. ದೀರ್ಘಬಾಹುವು, ಬುದ್ಧಿವಂತನೂ, ಕಡು ಚೆಲುವನೂ ಆಗಿರುವನು. ಲಕ್ಷ್ಮಣನು ಶ್ರೀರಾಮನನ್ನು ತಂದೆಯೆಂದೂ, ನನ್ನನ್ನು ತಾಯಿಯೆಂದೂ ಭಾವಿಸಿ ನಡೆದುಕೊಳ್ಳುವನು. ರಾವಣನು ನನ್ನನ್ನು ಅಪಹರಿಸಿ, ಇಲ್ಲಿಗೆ ತಂದಿರುವ ವಿಷಯವನ್ನು ತಿಳಿಯನು. ಅವನು ಹಿರಿಯರ ಸೇವೆ ಮಾಡುವವನು. ಶುಭಲಕ್ಷಣಗಳಿಂದೊಡಗೂಡಿದವನೂ, ಕೀರ್ತಿಶಾಲಿಯೂ, ಮಿತಭಾಷಿಯೂ ಆಗಿರುವನು. ಆ ರಾಜಕುಮಾರನು ಶ್ರೀರಾಮನಿಗೆ ಅತ್ಯಂತ ಪ್ರೀತಿಪಾತ್ರನು. ನನ್ನ ರಕ್ಷಣೆಯ ವಿಷಯದಲ್ಲಿ ಮಾವನವರಾದ ದಶರಥ ಮಹಾರಾಜರಂತೆ ಇರುವವನು. ವನವಾಸದ ಸಮಯದಲ್ಲಿ ಅವನು ಗೈದ ಸೇವೆಯಿಂದ ನನಗೆ ಅತ್ತೆ-ಮಾವಂದಿರ ಕೊರತೆಯೇ ಕಂಡು ಬಂದಿಲ್ಲ.॥58-60॥

ಮೂಲಮ್ - 61

ಹ್ರಿಯಮಾಣಾಂ ತದಾ ವೀರೋ ನ ತು ಮಾಂ ವೇದ ಲಕ್ಷ್ಮಣಃ ।
ವೃದ್ಧೋಪಸೇವೀ ಲಕ್ಷ್ಮೀವಾನ್ ಶಕ್ತೋ ನ ಬಹುಭಾಷಿತಾ ॥

ಮೂಲಮ್ - 62

ರಾಜಪುತ್ರಃ ಪ್ರಿಯಃ ಶ್ರೇಷ್ಠಃ ಸದೃಶಃ ಶ್ವಶುರಸ್ಯ ಮೇ ।
ಮತ್ತಃ ಪ್ರಿಯತರೋ ನಿತ್ಯಂ ಭ್ರಾತಾ ರಾಮಸ್ಯ ಲಕ್ಷ್ಮಣಃ ॥

ಅನುವಾದ

ಸೋದರನಾದ ಲಕ್ಷ್ಮಣನು ಶ್ರೀರಾಮನಿಗೆ ನನಗಿಂತಲೂ ಹೆಚ್ಚಾದ ಪ್ರಿಯನಾದವನು. ಒಪ್ಪಿಸಿದ ಪ್ರತಿಯೊಂದು ಕಾರ್ಯವನ್ನು ಆ ವೀರನು ಆಗಲೇ ದಕ್ಷನಾಗಿ ನೆರವೇರಿಸುವವನು. ಅವನನ್ನು ನೋಡಿ ಶ್ರೀರಾಮನು ಸ್ವರ್ಗಸ್ಥನಾದ ತನ್ನ ತಂದೆಯ ನೆನಪನ್ನೂ ಕೂಡ ಮರೆತು ಹೋಗುವನು. ಅಂತಹ ಲಕ್ಷ್ಮಣನಿಗೆ ನಾನು ಕೇಳಿದೆನೆಂದು ಕ್ಷೇಮಸಮಾಚಾರವನ್ನು ನನ್ನ ಮಾತಿನಲ್ಲೇ ತಿಳಿಸು.॥61-62॥

ಮೂಲಮ್ - 63

ನಿಯುಕ್ತೋ ಧುರಿ ಯಸ್ಯಾಂ ತು ತಾಮುದ್ವಹತಿ ವೀರ್ಯವಾನ್ ।
ಯಂ ದೃಷ್ಟ್ವಾ ರಾಘವೋ ನೈವ ವೃತ್ತಮಾರ್ಯಮನುಸ್ಮರೇತ್ ॥

ಮೂಲಮ್ - 64

ಸ ಮಮಾರ್ಥಾಯ ಕುಶಲಂ ವಕ್ತವ್ಯೋ ವಚನಾನ್ಮಮ ।
ಮೃದುರ್ನಿತ್ಯಂ ಶುಚಿರ್ದಕ್ಷಃ ಪ್ರಿಯೋ ರಾಮಸ್ಯ ಲಕ್ಷ್ಮಣಃ ॥

ಅನುವಾದ

ಎಲೈ ವಾನರಶ್ರೇಷ್ಠಾ! ಶ್ರೀರಾಮನಿಗೆ ಪ್ರಿಯನೂ, ವಿಧೇಯನೂ, ಯಾವಾಗಲೂ ಮೃದು ಸ್ವಭಾವವುಳ್ಳವನೂ, ಪವಿತ್ರವಾಗಿ ಇರುವವನೂ, ಸರ್ವಸಮರ್ಥನೂ ಆದ ಲಕ್ಷ್ಮಣನು ನನ್ನ ದುಃಖಗಳನ್ನು ಪರಿಹರಿಸುವುದಕ್ಕಾಗಿ, ಶ್ರೀರಾಮನು ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುವುದಕ್ಕಾಗಿ ನೀನೇ ಪ್ರೇರೇಪಿಸಬೇಕು. ಈ ಕಾರ್ಯ ನಿರ್ವಹಣೆಗಾಗಿ ನೀನೇ ದಕ್ಷನಾಗಿರುವೆ. ॥63-64॥

ಮೂಲಮ್ - 65

ಯಥಾ ಹಿ ವಾನರಶ್ರೇಷ್ಠ ದುಃಖಕ್ಷಯಕರೋ ಭವೇತ್ ।
ತ್ವಮಸ್ಮಿನ್ ಕಾರ್ಯನಿರ್ಯೋಗೇ ಪ್ರಮಾಣಂ ಹರಿಸತ್ತಮ ॥

ಮೂಲಮ್ - 66

ರಾಘವಸ್ತ್ವತ್ಸಮಾರಂಭಾನ್ಮಯಿ ಯತ್ನಪರೋ ಭವೇತ್ ।
ಇದಂ ಬ್ರೂಯಾಶ್ಚ ಮೇ ನಾಥಂ ಶೂರಂ ರಾಮಂ ಪುನಃ ಪುನಃ ॥

ಅನುವಾದ

ಮಹಾವೀರನೂ, ನನ್ನ ಸ್ವಾಮಿಯೂ ಆದ ಶ್ರೀರಾಮನಿಗೆ ಪದೇ-ಪದೇ ಈ ವಿಷಯಗಳನ್ನೂ ಸರಿಯಾಗಿ ತಿಳಿಸು. ದಶರಥಾತ್ಮಜನೇ! ಒಂದು ತಿಂಗಳವರೆಗೆ ನಾನು ಪ್ರಾಣಧಾರಣ ಮಾಡಿಕೊಂಡಿರುತ್ತೇನೆ. ತಿಂಗಳು ಮುಗಿದಾಕ್ಷಣ ಒಂದು ಕ್ಷಣವೂ ಕೂಡ ನಾನು ಜೀವಿಸಿರುವುದಿಲ್ಲ, ಇದು ಸತ್ಯವಾದುದು. ಕ್ರೂರ ಕರ್ಮಿಯಾದ ರಾವಣನು ನನ್ನನ್ನು ಮೋಸದಿಂದ ಅಪಹರಿಸಿ, ನಿರ್ಬಂಧದಲ್ಲಿ ಇಟ್ಟಿರುವನು. ಅಂತಹ ಮಹಾವೀರನೇ! ಪಾತಾಳದಲ್ಲಿದ್ದ ಇಂದ್ರನ ಐಶ್ವರ್ಯವನ್ನು ನಾರಾಯಣನು ಕಾಪಾಡಿದಂತೆ* ನನ್ನನ್ನು ರಕ್ಷಿಸಲು ನೀನೇ ಸಮರ್ಥನಾಗಿರುವೆ.॥65-66॥

ಟಿಪ್ಪನೀ
  • ಹಿಂದೆ ವೃತ್ರಾಸುರನನ್ನು ಕೊಂದ ಕಾರಣದಿಂದ ಇಂದ್ರನು ಬ್ರಹ್ಮಹತ್ಯಾ ಪಾಪಕ್ಕೆ ಗುರಿಯಾದನು. ಅದರಿಂದಾಗಿ ಇಂದ್ರನ ಐಶ್ವರ್ಯವು ಪಾತಾಳವನ್ನು ಸೇರಿತು. ದೇವತೆಗಳೂ, ಮಹಾವಿಷ್ಣು ಸೇರಿ ವೈಷ್ಣವ ಅಶ್ವಮೇಧ ಯಾಗವನ್ನು ನಡೆಸಿ ಇಂದ್ರನನ್ನು ಪವಿತ್ರರಾಗಿಸಿದರು. ಮಹಾವಿಷ್ಣುವು ಪಾತಾಳದಲ್ಲಿದ್ದ ಇಂದ್ರನ ಸಂಪತ್ತನ್ನು ತಂದು ಅವನಿಗೆ ಒಪ್ಪಿಸಿದನು.
ಮೂಲಮ್ - 67

ಜೀವಿತಂ ಧಾರಯಿಷ್ಯಾಮಿ ಮಾಸಂ ದಶರಥಾತ್ಮಜ ।
ಊರ್ಧ್ವಂ ಮಾಸಾನ್ನ ಜೀವೇಯಂ ಸತ್ಯೇನಾಹಂ ಬ್ರವೀಮಿ ತೇ ॥

ಅನುವಾದ

ಸೀತಾದೇವಿಯು ಹನುಮಂತನ ಬಳಿಯಲ್ಲಿ ಹೀಗೆ ಹೇಳಿದ ಬಳಿಕ, ಶುಭಪ್ರದವಾದ, ದಿವ್ಯವಾದ ತನ್ನ ಸೀರೆಯ ಸೆರಗಿನಲ್ಲಿ ಕಟ್ಟಿಟ್ಟಿದ್ದ ಚೂಡಾಮಣಿಯನ್ನು ಹೊರತೆಗೆದು ‘‘ಶ್ರೀರಾಮನಿಗೆ ಇದನ್ನು ಅರ್ಪಿಸು’’ ಎಂದು ಹೇಳಿ ಆಂಜನೇಯನಿಗೆ ಕೊಟ್ಟಳು.॥67॥

ಮೂಲಮ್ - 68

ರಾವಣೇನೋಪರುದ್ಧಾಂ ಮಾಂ ನಿಕೃತ್ಯಾ ಪಾಪಕರ್ಮಣಾ ।
ತ್ರಾತುಮರ್ಹಸಿ ವೀರ ತ್ವಂ ಪಾತಾಲಾದಿವ ಕೌಶಿಕೀಮ್ ॥

ಮೂಲಮ್ - 69

ತತೋ ವಸ್ತ್ರಗತಂ ಮುಕ್ತ್ವಾ ದಿವ್ಯಂ ಚೂಡಾಮಣಿಂ ಶುಭಮ್ ।
ಪ್ರದೇಯೋ ರಾಘವಾಯೇತಿ ಸೀತಾ ಹನುಮತೇ ದದೌ ॥

ಅನುವಾದ

ಆಗ ವೀರನಾದ ಹನುಮಂತನು ಅತ್ಯುತ್ತಮವಾದ ಆ ಚೂಡಾಮಣಿಯನ್ನು ಸ್ವೀಕರಿಸಿ, ಅದನ್ನು ತನ್ನ ಕಿರಿಬೆರಳಲ್ಲಿ ಇಟ್ಟುಕೊಂಡನು. ಬಳಿಕ ಸೀತಾದೇವಿಗೆ ಪ್ರದಕ್ಷಿಣೆ ಬಂದು, ನಮಸ್ಕರಿಸಿ, ವಿನಮ್ರನಾಗಿ ಪಕ್ಕದಲ್ಲಿ ನಿಂತುಕೊಂಡನು.॥68-69॥

ಮೂಲಮ್ - 70

ಪ್ರತಿಗೃಹ್ಯ ತತೋ ವೀರೋ ಮಣಿರತ್ನಮನುತ್ತಮಮ್ ।
ಅಂಗುಲ್ಯಾ ಯೋಜಯಾಮಾಸ ನ ಹ್ಯಸ್ಯ ಪ್ರಾಭವದ್ಭುಜಃ ॥

ಅನುವಾದ

ಸೀತಾದೇವಿಯ ದರ್ಶನದಿಂದಾಗಿ ಹನುಮಂತನಿಗೆ ಅಪಾರವಾದ ಹರ್ಷವುಂಟಾಯಿತು. ಅವನ ಶರೀರ ಮಾತ್ರ ಅಲ್ಲಿದ್ದಿತು. ಮನಸ್ಸು ಆಗಲೇ ಶ್ರೀರಾಮನ ಬಳಿಗೆ ಹೋಗಿದ್ದಿತು.॥70॥

ಮೂಲಮ್ - 71

ಮಣಿರತ್ನಂ ಕಪಿವರಃ ಪ್ರತಿಗೃಹ್ಯಾಭಿವಾದ್ಯ ಚ ।
ಸೀತಾಂ ಪ್ರದಕ್ಷಿಣಂ ಕೃತ್ವಾ ಪ್ರಣತಃ ಪಾರ್ಶ್ವತಃ ಸ್ಥಿತಃ ॥

ಮೂಲಮ್ - 72

ಹರ್ಷೇಣ ಮಹತಾ ಯಕ್ತಃ ಸೀತಾದರ್ಶನಜೇನ ಸಃ ।
ಹೃದಯೇನ ಗತೋ ರಾಮಂ ಶರೀರೇಣ ತು ನಿಷ್ಠಿತಃ ॥

ಮೂಲಮ್ - 73

ಮಣಿವರಮುಪಗೃಹ್ಯ ತಂ ಮಹಾರ್ಹಂ
ಜನಕನೃಪಾತ್ಮಜಯಾ ಧೃತಂ ಪ್ರಭಾವಾತ್ ।
ಗಿರಿರಿವ ಪವನಾವಧೂತಮುಕ್ತಃ
ಸುಖಿತಮನಾಃ ಪ್ರತಿಸಂಕ್ರಮಂ ಪ್ರಪೇದೇ ॥

ಅನುವಾದ

ಇಷ್ಟರವರೆಗೆ ಸೀತಾದೇವಿಯ ಶರೀರದಲ್ಲಿ ಅಲಂಕೃತವಾಗಿದ್ದ ಅಮೂಲ್ಯವಾದ ಆ ಚೂಡಾಮಣಿಯನ್ನು ಆಂಜನೇಯನು ಪಡೆದುಕೊಂಡನು. ಅದರ ಪ್ರಭಾವದಿಂದ, ಮಹಾವಾಯುವಿನಿಂದ ಕಂಪಿಸುತ್ತಿದ್ದ ಪರ್ವತವು ಮುಕ್ತವಾದಂತೆ, ಇಷ್ಟರವರೆಗೆ ಅವನಿಗೆ ಇದ್ದ ಆತಂಕಗಳನ್ನು ನೀಗಿ** ಸ್ವಸ್ಥಚಿತ್ತನಾಗಿ ಹಿಂದಿರುಗಲು ಸನ್ನದ್ಧನಾದನು.॥71-73॥

ಟಿಪ್ಪನೀ

** ಧೈರ್ಯಶಾಲಿಯಾದ ಹನುಮಂತನಿಗೆ ಇದಿರಾದ ಆತಂಕಗಳು - ಸಮುದ್ರ ತೀರವನ್ನು ಸೇರಿದಾಗ ಅನ್ವೇಷಣ ಅವಧಿಯು ಮುಗಿದಿದ್ದರಿಂದ ಸುಗ್ರೀವಾಜ್ಞೆಯಿಂದಾಗಿ ಮರಣಭಯ. ಸಮುದ್ರ ಲಂಘನದ ಹೊತ್ತಿನಲ್ಲಿ ಸುರಸಾ-ಸಿಂಹಿಕಾ ಇವರ ಅಡ್ಡಿಗಳು. ಲಂಕೆಯಲ್ಲಿ ಸೀತೆಯನ್ನು ಹುಡುಕುತ್ತಿರುವಾಗ ಅವಳು ಕಾಣದಿದ್ದಾಗ ದುಃಖಿತನಾಗಿ, ಪ್ರಾಣತ್ಯಾಗಕ್ಕೆ ಸಿದ್ಧನಾದುದು. ಸೀತಾದೇವಿಯ ದರ್ಶನ ಪಡೆದರೂ ಅವಳು ತನ್ನನ್ನು ರಾವಣನೆಂದು ಭಾವಿಸಿ ತನ್ನ ಜೊತೆ ಮಾತಾಡದಿದ್ದುದು - ಹೀಗೆ ಪ್ರಬಲವಾದ ಆತಂಕಗಳನ್ನು ದಾಟಿ, ಅವಳಿಗೆ ರಾಮಮುದ್ರಿಕೆಯನ್ನಿತ್ತು, ಅವಳಿಂದ ಚೂಡಾಮಣಿಯನ್ನು ಪಡೆದು ಈಗ ಅವನ ಮನಸ್ಸು ಸಮಾಧಾನ ಹೊಂದಿತು.

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಅಷ್ಟಾತ್ರಿಂಶಃ ಸರ್ಗಃ ॥ 38 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತೆಂಟನೆಯ ಸರ್ಗವು ಮುಗಿಯಿತು.