०३७ अङ्गुलीयकं दृष्ट्वा सीतामोदनम्

वाचनम्
ಭಾಗಸೂಚನಾ

ಸೀತೆಯು ಹನುಮಂತನಿಗೆ ಶ್ರೀರಾಮನನ್ನು ಶೀಘ್ರವಾಗಿ ಕರೆತರಲು ಹೇಳಿದುದು, ಹನುಮಂತನು ಸೀತೆಯನ್ನು ತನ್ನ ಜೊತೆಯಲ್ಲೇ ಬರಲು ಹೇಳಿದುದು, ಸೀತೆಯ ಅಸಮ್ಮತಿ

ಮೂಲಮ್ - 1

ಸೀತಾ ತದ್ವಚನಂ ಶ್ರುತ್ವಾ ಪೂರ್ಣಚಂದ್ರನಿಭಾನನಾ ।
ಹನುಮಂತಮುವಾಚೇದಂ ಧರ್ಮಾರ್ಥಸಹಿತಂ ವಚಃ ॥

ಅನುವಾದ

ಹನುಮಂತನಿಂದ ಶ್ರೀರಾಮಚಂದ್ರನ ಕುಶಲ ಸಮಾಚಾರಗಳನ್ನು ಕೇಳಿದಾಕ್ಷಣ ಸೀತಾದೇವಿಯ ಮುಖವು ಪೂರ್ಣಚಂದ್ರನಂತೆ ಶೋಭಿಸುತ್ತಿತ್ತು. ಅವಳು ಹನುಮಂತನಲ್ಲಿ ಧರ್ಮಾರ್ಥಯುಕ್ತವಾದ ಮಾತುಗಳನ್ನು ಹೇಳಿದಳು.॥1॥

ಮೂಲಮ್ - 2

ಅಮೃತಂ ವಿಷಸಂಸೃಷ್ಟಂ ತ್ವಯಾ ವಾನರ ಭಾಷಿತಮ್ ।
ಯಚ್ಚ ನಾನ್ಯಮನಾ ರಾಮೋ ಯಚ್ಚ ಶೋಕಪರಾಯಣಃ ॥

ಅನುವಾದ

‘‘ಹೇ ವಾನರೋತ್ತಮಾ! ಶ್ರೀರಾಮನು ಅನನ್ಯ ಚಿತ್ತನಾಗಿ ಯಾವಾಗಲೂ ನಿನ್ನನ್ನೇ ಧ್ಯಾನಿಸುತ್ತಿರುವನು’’ ಎಂಬ ನಿನ್ನ ಮಾತು ಅಮೃತಕ್ಕೆ ಸಮಾನವಾಗಿದೆ. ‘ಅವನು ಶೋಕಮಗ್ನನಾಗಿರುವನು’ ಇದು ನನಗೆ ಅತ್ಯಂತ ದುಃಖವನ್ನುಂಟುಮಾಡಿದೆ. ॥2॥

ಮೂಲಮ್ - 3

ಐಶ್ವರ್ಯೇ ವಾ ಸುವಿಸ್ತೀರ್ಣೇ ವ್ಯಸನೇ ವಾ ಸುದಾರುಣೇ ।
ರಜ್ಜ್ವೇವ ಪುರುಶಂ ಬದ್ಧ್ವಾ ಕೃತಾಂತಃ ಪರಿಕರ್ಷತಿ ॥

ಅನುವಾದ

ಅಪಾರವಾದ ಐಶ್ವರ್ಯದಲ್ಲಿ ಮುಳುಗಿರಲೀ, ಅತಿದಾರುಣವಾದ ದುಃಖದಲ್ಲಿ ಸಿಲುಕಿರಲಿ - ದೈವವು ಮನುಷ್ಯನನ್ನು ಹಗ್ಗದಿಂದ ಬಂಧಿಸುವಂತೆ ಬಂಧಿಸಿ ಸೆಳೆದಾಡುತ್ತದೆ.॥3॥

ಮೂಲಮ್ - 4

ವಿಧಿರ್ನೂನಮಸಂಹಾರ್ಯಃ ಪ್ರಾಣಿನಾಂ ಪ್ಲವಗೋತ್ತಮ ।
ಸೌಮಿತ್ರಿಂ ಮಾಂ ಚ ರಾಮಂ ಚ ವ್ಯಸನೈಃ ಪಶ್ಯ ಮೋಹಿತಾನ್ ॥

ಅನುವಾದ

ಕಪಿಶ್ರೇಷ್ಠನೇ! ನಿಶ್ಚಯವಾಗಿಯೂ ಪ್ರಾಣಿಗಳಿಗೆ ವಿಧಿ ನಿಯಮವನ್ನು ಉಲ್ಲಂಘಿಸಲು ಸಾಧ್ಯವೇ ಇಲ್ಲ. ನಾನು ಮತ್ತು ರಾಮ-ಲಕ್ಷ್ಮಣರು ವಿಧಿಯ ಕೈಗೆ ಸಿಕ್ಕಿ ಸಣ್ಣದಾದ ಒಂದು ಕೋರಿಕೆಯಿಂದಾಗಿ ಎಷ್ಟೊಂದು ದುಃಖಗಳನ್ನು ಅನುಭವಿಸುತ್ತಿರುವೆವು ನೋಡು.॥4॥

ಮೂಲಮ್ - 5

ಶೋಕಸ್ಯಾಸ್ಯ ಕದಾ ಪಾರಂ ರಾಘವೋಽಧಿಗಮಿಷ್ಯತಿ ।
ಪ್ಲವಮಾನಃ ಪರಿಶ್ರಾಂತೋ ಹತನೌಃ ಸಾಗರೇ ಯಥಾ ॥

ಅನುವಾದ

ಸಮುದ್ರದಲ್ಲಿ ನೌಕೆಯು ಭಗ್ನವಾಗಿ ನೀರಿಗೆ ಬಿದ್ದ ಮನುಷ್ಯನು ಈಜುತ್ತಾ ಆಯಾಸಗೊಂಡವನಂತೆ, ಶ್ರೀರಾಮನು ಈ ಶೋಕಸಾಗರದಿಂದ ಎಂದು ದಡ ಕಾಣುವನೋ? ತಿಳಿಯದು.॥5॥

ಮೂಲಮ್ - 6

ರಾಕ್ಷಸಾನಾಂ ವಧಂ ಕೃತ್ವಾ ಸೂದಯಿತ್ವಾ ಚ ರಾವಣಮ್ ।
ಲಂಕಾಮುನ್ಮೂಲಿತಾಂ ಕೃತ್ವಾ ಕದಾ ದ್ರಕ್ಷ್ಯತಿ ಮಾಂ ಪತಿಃ ॥

ಅನುವಾದ

ನನ್ನ ಪ್ರಭುವು ರಾಕ್ಷಸರೆಲ್ಲರನ್ನು ಸಂಹರಿಸಿ, ಲಂಕೆಯನ್ನು ಧ್ವಂಸ ಮಾಡಿ, ರಾವಣನನ್ನು ವಿನಾಶಗೊಳಿಸಿ ನನ್ನನ್ನು ಎಂದು ಸೇರುವನೋ?॥6॥

ಮೂಲಮ್ - 7

ಸ ವಾಚ್ಯಃ ಸಂತ್ವರಸ್ವೇತಿ ಯಾವದೇವ ನ ಪೂರ್ಯತೇ ।
ಅಯಂ ಸಂವತ್ಸರಃ ಕಾಲಸ್ತಾವದ್ಧಿ ಮಮ ಜೀವಿತಮ್ ॥

ಮೂಲಮ್ - 8

ವರ್ತತೇ ದಶಮೋ ಮಾಸೋ ದ್ವೌತು ಶೇಷೌ ಪ್ಲವಂಗಮ ।
ರಾವಣೇನ ನೃಶಂಸೇನ ಸಮ ಯೋ ಯಃ ಕೃತೋ ಮಮ ॥

ಅನುವಾದ

ವಾನರಶ್ರೇಷ್ಠನೇ! ದುಷ್ಟನಾದ ರಾವಣನು ನನಗೆ ಒಂದು ಸಂವತ್ಸರ ಕಾಲ ಅವಧಿಯನ್ನು ಕೊಟ್ಟಿರುವನು. ಅವನು ವಿಧಿಸಿದ ಆ ಒಂದು ವರ್ಷದಲ್ಲಿ ಹತ್ತು ತಿಂಗಳು ಕಳೆದುಹೋದುವು. ಇನ್ನು ಎರಡು ಮಾಸಗಳು ಮಾತ್ರ ಉಳಿದಿರುವುದು. ಆ ಗಡುವು ಮುಗಿಯುವವರೆಗೆ ನಾನು ಜೀವಿಸಿರುವೆನು. ಅದರಿಂದ ನನ್ನ ವಿಮೋಚನೆಗೆ ತ್ವರೆಗೊಳ್ಳುವಂತೆ ನೀನು ರಾಮನಿಗೆ ಹೇಳಬೇಕು.॥7-8॥

ಮೂಲಮ್ - 9

ವಿಭೀಷಣೇನ ಚ ಭ್ರಾತ್ರಾ ಮಮ ನಿರ್ಯಾತನಂ ಪ್ರತಿ ।
ಅನುನೀತಃ ಪ್ರಯತ್ನೇನ ನ ಚ ತತ್ ಕುರುತೇ ಮತಿಮ್ ॥

ಅನುವಾದ

ನನ್ನನ್ನು ರಾಮನಿಗೆ ಒಪ್ಪಿಸುವ ವಿಷಯದಲ್ಲಿ ರಾವಣನ ತಮ್ಮನಾದ ವಿಭೀಷಣನು ಅಣ್ಣನ ಮನಸ್ಸನ್ನು ಒಲಿಸಲು ಬಹಳವಾಗಿ ಪ್ರಯತ್ನಿಸಿದನು. ಆದರೆ ರಾವಣನು ಅವನ ಮಾತಿಗೆ ಲಕ್ಷ್ಯಕೊಡಲಿಲ್ಲ.॥9॥

ಮೂಲಮ್ - 10

ಮಮ ಪ್ರತಿಪ್ರದಾನಂ ಹಿ ರಾವಣಸ್ಯ ನ ರೋಚತೇ ।
ರಾವಣಂ ಮಾರ್ಗತೇ ಸಂಖ್ಯೇ ಮೃತ್ಯುಃ ಕಾಲವಶಂ ಗತಮ್ ॥

ಅನುವಾದ

ಕಾಲವಶನಾಗಿ ಹೋಗಿರುವ ರಾವಣನನ್ನು ಯುದ್ಧರಂಗದಲ್ಲಿ ಮೃತ್ಯುವೇ ಹುಡುಕಾಡುತ್ತಿದೆ. ಆದುದರಿಂದ ಶ್ರೀರಾಮನಿಗೆ ನನ್ನನ್ನು ಒಪ್ಪಿಸಿಕೊಡುವ ವಿಷಯವು ರಾವಣನಿಗೆ ರುಚಿಸುತ್ತಿಲ್ಲ.॥10॥

ಮೂಲಮ್ - 11

ಜ್ಯೇಷ್ಠಾ ಕನ್ಯಾಽನಲಾ ನಾಮ ವಿಭೀಶಣಸುತಾ ಕಪೇ ।
ತಯಾ ಮಮೇದಮಾಖ್ಯಾತಂ ಮಾತ್ರಾ ಪ್ರಹಿತಯಾ ಸ್ವಯಮ್ ॥

ಅನುವಾದ

ವಿಭೀಷಣನ ಹಿರಿಯ ಮಗಳು ಅನಲಾ ಎಂಬುವಳು ನನಗೆ ಈ ವಿಷಯವನ್ನು ತಿಳಿಸಿದಳು. ಅನಲೆಯ ತಾಯಿಯೇ ನನಗೆ ಈ ವಿಷಯವನ್ನು ತಿಳಿಸಲಿಕ್ಕಾಗಿ ಆಕೆಯನ್ನು ಕಳಿಸಿಕೊಟ್ಟಿದ್ದಳು.॥11॥

ಮೂಲಮ್ - 12

ಅವಿಂಧ್ಯೋ ನಾಮ ಮೇಧಾವೀ ವಿದ್ವಾನ್ ರಾಕ್ಷಸಪುಂಗವಃ ।
ಧೃತಿಮಾನ್ ಶೀಲವಾನ್ ವೃದ್ಧೋ ರಾವಣಸ್ಯ ಸುಸಮ್ಮತಃ ॥

ಮೂಲಮ್ - 13

ರಾಮಾತ್ ಕ್ಷಯಮನುಪ್ರಾಪ್ತಂ ರಕ್ಷಸಾಮ್ ಪ್ರತ್ಯಚೋದಯತ್ ।
ನ ಚ ತಸ್ಯ ಸ ದುಷ್ಟಾತ್ಮಾ ಶೃಣೋತಿ ವಚನಂ ಹಿತಮ್ ॥

ಅನುವಾದ

ಮೇಧಾವಿಯೂ, ವಿದ್ವಾಂಸನೂ, ರಾಕ್ಷಸ ಶ್ರೇಷ್ಠನೂ, ಬುದ್ಧಿವಂತನೂ, ಶೀಲವಂತನೂ, ವೃದ್ಧನೂ, ರಾವಣನಿಗೆ ಸುಸಮ್ಮತನೂ ಆದ ಅವಿಂಧ್ಯನೆಂಬ ರಾಕ್ಷಸ ಮಂತ್ರಿಯು - ‘ರಾಕ್ಷಸರೆಲ್ಲರಿಗೂ ಶ್ರೀರಾಮನಿಂದ ವಿನಾಶವೂ ಸಂಭವಿಸಲಿದೆ’ ಎಂದು ಹೇಳಿದನಂತೆ. ಆದರೆ ಅವನ ಆ ಹಿತಕರವಾದ ಮಾತನ್ನು ದುಷ್ಟನಾದ ರಾವಣನು ಲೆಕ್ಕಿಸಲಿಲ್ಲ.’॥12-13॥

ಮೂಲಮ್ - 14

ಆಶಂಸೇಯಂ ಹರಿಶ್ರೇಷ್ಠ ಕ್ಷಿಪ್ರಂ ಮಾಂ ಪ್ರಾಪ್ಸ್ಯತೇ ಪತಿಃ ।
ಅಂತರಾತ್ಮಾ ಹಿ ಮೇ ಶುದ್ಧಸ್ತಸ್ಮಿಂಶ್ಚ ಬಹವೋಗುಣಾಃ ॥

ಮೂಲಮ್ - 15

ಉತ್ಸಾಹಃ ಪೌರುಷಂ ಸತ್ತ್ವಮಾನೃಶಂಸ್ಯಂ ಕೃತಜ್ಞತಾ ।
ವಿಕ್ರಮಶ್ಚ ಪ್ರಭಾವಶ್ಚ ಸಂತಿ ವಾನರ ರಾಘವೇ ॥

ಅನುವಾದ

ಎಲೈ ಕಪೀಶ್ವರಾ! ಶ್ರೀರಾಮನಲ್ಲಿ ಅನೇಕ ಕಲ್ಯಾಣ ಗುಣಗಳಿವೆ. ನನ್ನ ಅಂತರಾತ್ಮವು ಪರಿಶುದ್ಧವಾಗಿದೆ. ಆ ನನ್ನ ಪತಿಯು ಬಹಳ ಬೇಗನೇ ನನ್ನನ್ನು ಪಡೆದುಕೊಳ್ಳುವನು. ಇದರಲ್ಲಿ ಸಂಶಯವೇ ಇಲ್ಲ. ಉತ್ಸಾಹ, ಪೌರುಷ, ಸತ್ತ್ವ, ದಯೆ, ಕೃತಜ್ಞತೆ, ಪರಾಕ್ರಮ ಮತ್ತು ಪ್ರಭಾವಗಳು ಶ್ರೀರಾಮನಲ್ಲಿ ಮೂರ್ತಿವತ್ತಾಗಿ ನೆಲೆಸಿವೆ.॥14-15॥

ಮೂಲಮ್ - 16

ಚತುರ್ದಶ ಸಹಷ್ರಾಣಿ ರಾಕ್ಷಸಾನಾಂ ಜಘಾನ ಯಃ ।
ಜನಸ್ಥಾನೇ ವಿನಾ ಭ್ರಾತ್ರಾ ಶತ್ರುಃ ಕಸ್ತಸ್ಯ ನೋದ್ವಿಜೇತ್ ॥

ಅನುವಾದ

ಜನಸ್ಥಾನದಲ್ಲಿ ತಮ್ಮನ ಸಹಾಯವಿಲ್ಲದೆ ಒಬ್ಬಂಟಿಗನಾಗಿ ಹದಿನಾಲ್ಕು ಸಾವಿರ ರಾಕ್ಷಸರನ್ನು ಸಂಹರಿಸಿದ ಶ್ರೀರಾಮನ ವಿಷಯದಲ್ಲಿ ಯಾವ ಶತ್ರುವು ಹೆದರದೇ ಇರುವನು?॥16॥

ಮೂಲಮ್ - 17

ನ ಸ ಶಕ್ಯಸ್ತುಲಯಿತುಂ ವ್ಯಸನೈಃ ಪುರುಷರ್ಷಭಃ ।
ಅಹಂ ತಸ್ಯ ಪ್ರಭಾವಜ್ಞಾ ಶಕ್ರಸ್ಯೇವ ಪುಲೋಮಜಾ ॥

ಅನುವಾದ

ಪುರುಷಶ್ರೇಷ್ಠನಾದ ಶ್ರೀರಾಮನ ಪರಾಕ್ರಮದ ಮುಂದೆ ನಮಗೆ ದುಃಖ ಕೊಡುತ್ತಿರುವ ರಾಕ್ಷಸರ ಪರಾಕ್ರಮವೂ ಎಂದೂ ಸರಿದೂಗಲಾರದು. ರಾಕ್ಷಸರಿಗೆ ಅವನ ಸಾಮರ್ಥ್ಯವು ತಿಳಿಯದು. ಶಚಿದೇವಿಯು ಇಂದ್ರನ ಪ್ರಭಾವವನ್ನು ತಿಳಿದಿರುವಂತೆ, ನಾನು ಶ್ರೀರಾಮನ ಪ್ರಭಾವವನ್ನು ಚೆನ್ನಾಗಿ ಬಲ್ಲೆನು.॥17॥

ಮೂಲಮ್ - 18

ಶರಜಾಲಾಂಶುಮಾನ್ ಶೂರಃ ಕಪೇ ರಾಮದಿವಾಕರಃ ।
ಶತ್ರುರಕ್ಷೋಮಯಂ ತೋಯಮುಪಶೋಶಂ ನಯಿಷ್ಯತಿ ॥

ಅನುವಾದ

ಸೂರ್ಯನು ತನ್ನ ತೀಕ್ಷ್ಣವಾದ ಕಿರಣಗಳಿಂದ ನೀರನ್ನು ಪೂರ್ಣವಾಗಿ ಇಂಗಿಸಿಬಿಡುವಂತೆ, ಶೂರನಾದ ಶ್ರೀರಾಮನು ತನ್ನ ಬಾಣ ಪರಂಪರೆಯಿಂದ ಶತ್ರುಗಳಾದ ರಾಕ್ಷಸ ಸಮೂಹವನ್ನು ನುಚ್ಚು ನೂರಾಗಿಸುವನು.॥18॥

ಮೂಲಮ್ - 19

ಇತಿ ಸಂಜಲ್ಪಮಾನಾಂ ತಾಂ ರಾಮಾರ್ಥೇ ಶೋಕಕರ್ಶಿತಾಮ್ ।
ಅಶ್ರುಸಂಪೂರ್ಣನಯನಾಮುವಾಚ ವಚನಂ ಕಪಿಃ ॥

ಅನುವಾದ

ಶ್ರೀರಾಮನ ಅಗಲುವಿಕೆಯ ಶೋಕದಿಂದ ಕೃಶಳಾದ ಸೀತಾದೇವಿಯು ಕಣ್ಣುಗಳಿಂದ ನೀರು ಸುರಿಸುತ್ತಾ ಹೀಗೆ ಹೇಳಿದುದನ್ನು ಕೇಳಿ, ಹನುಮಂತನು ಆಕೆಯ ಬಳಿ ಈ ರೀತಿಯಾಗಿ ಹೇಳಿದನು.॥19॥

ಮೂಲಮ್ - 20

ಶ್ರುತ್ವೆ ವ ತು ವಚೋ ಮಹ್ಯಂ ಕ್ಷಿಪ್ರಮೇಷ್ಯತಿ ರಾಘವಃ ।
ಚಮೂಂ ಪ್ರಕರ್ಷನ್ ಮಹತೀಂ ಹರ್ಯೃಕ್ಷಗಣಸಂಕುಲಾಮ್ ॥

ಅನುವಾದ

ತಾಯೇ! ದುಃಖಿಸಬೇಡ. ನನ್ನ ಮಾತನ್ನು ಕೇಳಿದೊಡನೆಯೇ ಶ್ರೀರಾಮನು ಕಪಿ-ಕರಡಿಗಳ ಮಹಾ ಸೈನ್ಯದೊಡನೆ ನಿನ್ನ ವಿಮುಕ್ತಿಗಾಗಿ ಬಹು ಬೇಗನೇ ಇಲ್ಲಿಗೆ ಬರುವನು.॥20॥

ಮೂಲಮ್ - 21

ಅಥವಾ ಮೋಚಯಿಷ್ಯಾಮಿ ತ್ವಾಮದ್ಯೈವ ವರಾನನೇ ।
ಅಸ್ಮಾದ್ದುಃಖಾದುಪಾರೋಹ ಮಮ ಪೃಷ್ಠಮನಿಂದಿತೇ ॥

ಅನುವಾದ

ಅಮ್ಮಾ! ನೀನು ಬಯಸುವೆಯಾದರೆ, ಈ ದುಃಖದಿಂದಲೂ, ರಾಕ್ಷಸನಿಂದಲೂ ನಿನ್ನನ್ನು ಈಗಲೇ ಮುಕ್ತಳನ್ನಾಗಿ ಮಾಡುತ್ತೇನೆ. ನನ್ನ ಬೆನ್ನಿನ ಮೇಲೆ ಕುಳಿತುಕೊ.॥21॥

ಮೂಲಮ್ - 23

ತ್ವಾಂ ತು ಪೃಷ್ಠಗತಾಂ ಕೃತ್ವಾ ಸಂತರಿಷ್ಯಾಮಿ ಸಾಗರಮ್ ।
ಶಕ್ತಿರಸ್ತಿ ಹಿ ಮೇ ವೋಢುಂ ಲಂಕಾಮಪಿ ಸರಾವಣಾಮ್ ॥

ಅನುವಾದ

ನಿನ್ನನ್ನು ನನ್ನ ಬೆನ್ನ ಮೇಲೆ ಕುಳ್ಳಿರಿಸಿಕೊಂಡು ಈ ಮಹಾಸಾಗರವನ್ನು ದಾಟುವೆನು. ನಿನ್ನನ್ನೇ ಏಕೆ! ರಾವಣ ಸಹಿತವಾಗಿ ಈ ಲಂಕೆಯನ್ನೇ ಎತ್ತಿಕೊಂಡು ಹೋಗುವ ಶಕ್ತಿಯೂ ನನಗಿದೆ.॥22॥

ಮೂಲಮ್ - 23

ಅಹಂ ಪ್ರಸ್ರವಣಸ್ಥಾಯ ರಾಘವಾಯಾದ್ಯ ಮೈಥಿಲಿ ।
ಪ್ರಾಪಯಿಷ್ಯಾಮಿ ಶಕ್ರಾಯ ಹವ್ಯಂ ಹುತಮಿವಾನಲಃ ॥

ಅನುವಾದ

ಓ ಮೈಥಿಲೀ! ಯಜ್ಞೇಶ್ವರರು ತನ್ನಲ್ಲಿ ಹೋಮ ಮಾಡಿದ ಹವಿಸ್ಸನ್ನು ಇಂದ್ರನಿಗೆ ಒಪ್ಪಿಸುವಂತೆ, ಪ್ರಸ್ರವಣ ಪರ್ವತದಲ್ಲಿರುವ ರಾಘವನಿಗೆ ನಿನ್ನನ್ನು ಈಗಲೇ ಒಪ್ಪಿಸುತ್ತೇನೆ.॥23॥

ಮೂಲಮ್ - 24

ದ್ರಕ್ಷ್ಯಸ್ಯದ್ಯೈವ ವೈದೇಹಿ ರಾಘವಂ ಸಹಲಕ್ಷ್ಮಣಂ ।
ವ್ಯವಸಾಯಸಮಾಯುಕ್ತಂ ವಿಷ್ಣುಂ ದೈತ್ಯವಧೇ ಯಥಾ ॥

ಮೂಲಮ್ - 25

ತ್ವದ್ದರ್ಶನಕೃತೋತ್ಸಾಹಮಾಸ್ರಮಸ್ಥಂ ಮಹಾಬಲಮ್ ।
ಪುರಂದರಮಿವಾಸೀನಂ ನಗರಾಜಸ್ಯ ಮೂರ್ಧನಿ ॥

ಅನುವಾದ

ಎಲೈ ವೈದೇಹೀ! ದೈತ್ಯ ಸಂಹಾರಕ್ಕಾಗಿ ಸನ್ನದ್ಧನಾಗಿರುವ, ವಿಷ್ಣುವಿನಂತೆ, ಲಕ್ಷ್ಮಣನೊಡಗೂಡಿ ಇರುವ ಶ್ರೀರಾಮನು ರಾಕ್ಷಸರನ್ನ ವಧಿಸಲಿಕ್ಕಾಗಿ ಸಿದ್ಧನಾಗಿಯೇ ಇದ್ದಾನೆ. ಮಹಾ ಬಲಶಾಲಿಯೂ, ಆಶ್ರಮನಿವಾಸಿಯೂ, ನಿನ್ನನ್ನು ನೋಡಲು ಕುತೂಹಲಿಯೂ ಆದ ಶ್ರೀರಾಮನು ಇಂದ್ರನು ಐರಾವತದ ಮೇಲೆ ಕುಳಿತಿರುವಂತೆ, ಪ್ರಸ್ರವಣ ಗಿರಿಯ ಮೇಲೆ ಆಸೀನನಾಗಿದ್ದಾನೆ. ಅಂತಹ ಪ್ರಭುವನ್ನು ನೀನು ಇಂದೇ ಕಾಣಬಹುದು.॥24-25॥

ಮೂಲಮ್ - 26

ಪೃಷ್ಠಮಾರೋಹ ಮೇ ದೇವಿ ಮಾ ವಿಕಾಂಕ್ಷಸ್ವ ಶೋಭನೇ ।
ಯೋಗಮನ್ವಿಚ್ಛ ರಾಮೇಣ ಶಶಾಂಕೇನೇವ ರೋಹಿಣೀ ॥

ಅನುವಾದ

ಎಲೈ ಮಂಗಳದಾಯಿನೀ! ನನ್ನ ಬೆನ್ನಿನ ಮೇಲೆ ಆಸೀನರಾಗಿರಿ. ನನ್ನ ಮಾತನ್ನು ಉಪೇಕ್ಷಿಸಬೇಡ. ರೋಹಿಣಿಯು ಚಂದ್ರನೊಡನೆ ಸೇರುವಂತೆ, ಶ್ರೀರಾಮನನ್ನು ಸೇರಲು ನಿಶ್ಚಯಿಸು.॥26॥

ಮೂಲಮ್ - 27

ಕಥಯಂತೀವ ಚಂದ್ರೇಣ ಸಂಗಮಿಷ್ಯಸಿ ರೋಹಿಣೀ ।
ಮತ್ಪೃಷ್ಠಮಧಿರೋಹ ತ್ವಂ ತರಾಕಾಶಮಹಾರ್ಣವಮ್ ॥

ಅನುವಾದ

ನೀನು ನನ್ನ ಬೆನ್ನ ಮೇಲೆ ಕುಳಿತುಕೊಂಡು ಚಂದ್ರನೊಡನೆ, ಮಹಾತೇಜಃಶಾಲಿಯಾದ ಸೂರ್ಯನೊಡನೆಯೂ ಸಂಭಾಷಿಸುವಂತೆ ಆಕಾಶಮಾರ್ಗದಲ್ಲಿ ಪಯಣಿಸುತ್ತಾ ಈ ಮಹಾ ಸಮುದ್ರವನ್ನು ದಾಟಿಬಿಡು.॥27॥

ಮೂಲಮ್ - 28

ನ ಹಿ ಮೇ ಸಂಪ್ರಯಾತಸ್ಯ ತ್ವಾಮಿತೋ ನಯತೋಽಂಗನೇ ।
ಅನುಗಂತುಂ ಗತಿಂ ಶಕ್ತಾಃ ಸರ್ವೇ ಲಂಕಾನಿವಾಸಿನಃ ॥

ಅನುವಾದ

ದೇವಿಯೇ! ನಾನು ಇಲ್ಲಿಂದ ಆಕಾಶಮಾರ್ಗದಿಂದ ನಿನ್ನನ್ನು ಕೊಂಡುಹೋಗುವಾಗ ನನ್ನ ವೇಗವಾದ ಗಮನವನ್ನನುಸರಿಸಿ ಬರಲು ಈ ಲಂಕಾನಿವಾಸಿಗಳಾರಿಗೂ ಶಕ್ಯವಿಲ್ಲ.॥28॥

ಮೂಲಮ್ - 29

ಯಥೈವಾಹಮಿಹ ಪ್ರಾಪ್ತಸ್ತಥೈವಾಹಮಸಂಶಯಮ್ ।
ಯಾಸ್ಯಾಮಿ ಪಶ್ಯ ವೈದೇಹಿ ತ್ವಾಮುದ್ಯಮ್ಯ ವಿಹಾಯಸಮ್ ॥

ಅನುವಾದ

ಎಲೈ ವೈದೇಹೀ! ನಾನು ಇಲ್ಲಿಗೆ ಬಂದಂತೆ ನಿಃಸಂದೇಹವಾಗಿ ನಿನ್ನನ್ನು ಎತ್ತಿಕೊಂಡು ಆಕಾಶಮಾರ್ಗವಾಗಿ ಕೊಂಡು ಹೋಗುವುದನ್ನು ನೀನೇ ನೋಡು.॥29॥

ಮೂಲಮ್ - 30

ಮೈಥಿಲೀ ತು ಹರಿಶ್ರೇಷ್ಠಾಚ್ಛ್ರುತ್ವಾ ವಚನಮದ್ಭುತಮ್ ।
ಹರ್ಷವಿಸ್ಮಿತಸರ್ವಾಂಗೀ ಹನುಮಂತಮಥಾಬ್ರವೀತ್ ॥

ಅನುವಾದ

ಸೀತಾದೇವಿಯು ಕಪಿವರನ ಪರಮಾದ್ಭುತವಾದ ಮಾತನ್ನು ಕೇಳಿ ಆನಂದಾಶ್ಚರ್ಯಗಳಿಂದ ಪುಳಕಿತಗಾತ್ರಳಾಗಿ, ಹನುಮಂತನ ಬಳಿ ಇಂತೆಂದಳು.॥30॥

ಮೂಲಮ್ - 31

ಹನುಮನ್ ದೂರಮಧ್ವಾನಂ ಕಥಂ ಮಾ ವೋಢುಮಿಚ್ಛಸಿ ।
ತದೇವ ಖಲು ತೇ ಮನ್ಯೇ ಕಪಿತ್ವಂ ಹರಿಯೂಥಪ ॥

ಅನುವಾದ

ಹನುಮಂತಾ! ಇಷ್ಟು ದೂರ ನನ್ನನ್ನು ಹೇಗೆ ಹೊತ್ತುಕೊಂಡು ಹೋಗಬಹುದು? ಇದನ್ನು ನೋಡಿದರೆ ಖಂಡಿತವಾಗಿ ನಿನ್ನ ವಾನರ ಲಕ್ಷಣವು ಪ್ರಕಟವಾದಂತಾಗಿದೆ.॥31॥

ಮೂಲಮ್ - 32

ಕಥಂ ವಾಲ್ಪಶರೀರಸ್ತ್ವಂ ಮಾಮಿತೋ ನೇತುಮಿಚ್ಛಸಿ ।
ಸಕಾಶಂ ಮಾನವೇಂದ್ರಸ್ಯ ಭರ್ತುರ್ಮೇ ಪ್ಲವಗರ್ಷಭ ॥

ಅನುವಾದ

ಕಪಿಶ್ರೇಷ್ಠನೇ! ನಿನ್ನ ಶರೀರವಾದರೋ ಚಿಕ್ಕದು. ಮಹಾಪುರುಷನಾದ ನನ್ನ ಸ್ವಾಮಿಯ ಬಳಿಗೆ ನನ್ನನ್ನು ಇಲ್ಲಿಂದ ಹೇಗೆಕೊಂಡು ಹೋಗಬಲ್ಲೆ?॥32॥

ಮೂಲಮ್ - 33

ಸೀತಾಯಾ ವಚನಂ ಶ್ರುತ್ವಾ ಹನುಮಾನ್ ಮಾರುತಾತ್ಮಜಃ ।
ಚಿಂತಯಾಮಾಸ ಲಕ್ಷ್ಮೀವಾನ್ನವಂ ಪರಿಭವಂ ಕೃತಮ್ ॥

ಅನುವಾದ

ಸರ್ವಶಕ್ತಿ ಸಂಪನ್ನನೂ, ವಾಯುಸುತನೂ ಆದ ಹನುಮಂತನು - ಸೀತಾದೇವಿಯ ಮಾತುಗಳನ್ನು ಕೇಳಿ, ತನಗೆ ಇದೊಂದು ಅಪಮಾನವೆಂದೇ ಭಾವಿಸಿದನು.॥33॥

ಮೂಲಮ್ - 34

ನ ಮೇ ಜಾನಾತಿ ಸತ್ತ್ವಂ ವಾ ಪ್ರಭಾವಂ ವಾಸಿತೇಕ್ಷಣಾ ।
ತಸ್ಮಾತ್ ಪಶ್ಯತು ವೈದೇಹೀ ಯದ್ರೂಪಂ ಮಮ ಕಾಮತಃ ॥

ಅನುವಾದ

ಅಸಿತೇಕ್ಷಣೆಯಾದ ಸೀತೆಯು ನನ್ನ ಇಚ್ಛಾನುಸಾರವಾದ ಪರ್ವತೋಪಮವಾದ ನನ್ನ ರೂಪವನ್ನು ಯಥೇಚ್ಛವಾಗಿ ನೋಡಲೀ.॥34॥

ಮೂಲಮ್ - 35

ಇತಿ ಸಂಚಿಂತ್ಯ ಹನುಮಾಂಸ್ತದಾ ಪ್ಲವಗಸತ್ತಮಃ ।
ದರ್ಶಯಾಮಾಸ ವೈದೇಹ್ಯಾಃ ಸ್ವಂ ರೂಪಮರಿಮರ್ದನಃ ॥

ಅನುವಾದ

ವಾನರೋತ್ತಮನೂ, ಶತ್ರು ಸಂಹಾರಕನೂ ಆದ ಹನುಮಂತನು ಹೀಗೆ ಆಲೋಚಿಸಿ, ಸೀತಾದೇವಿಗೆ ತನ್ನ ಬೃಹದ್ರೂಪವನ್ನು ತೋರಿಸಿದನು.॥35॥

ಮೂಲಮ್ - 36

ಸ ತಸ್ಮಾತ್ ಪಾದಪಾದ್ಧೀಮಾನಾಪ್ಲುತ್ಯ ಪ್ಲವಗರ್ಷಭಃ ।
ತತೋ ವರ್ಧಿತುಮಾರೇಭೇ ಸೀತಾಪ್ರತ್ಯಯಕಾರಣಾತ್ ॥

ಅನುವಾದ

ಬುದ್ಧಿಶಾಲಿಯಾದ ಆ ಕಪಿವರನು ಆ ಮರದಿಂದ ಸ್ವಲ್ಪದೂರ ಒಂದೇ ನೆಗೆತಕ್ಕೆ ಹಾರಿ, ಸೀತಾದೇವಿಗೆ ವಿಶ್ವಾಸವನ್ನು ಹುಟ್ಟಿಸುವ ಸಲುವಾಗಿ ತನ್ನ ಶರೀರವನ್ನು ಬೆಳೆಸತೊಡಗಿದನು*॥36॥

ಟಿಪ್ಪನೀ
  • 33ನೇ ಸರ್ಗದ ಮೊದಲ ಶ್ಲೋಕದಲ್ಲಿ ಆಂಜನೇಯನು ಮರದಿಂದ ಕೆಳಗಿಳಿದು ಸೀತೆಯನ್ನು ಸಮೀಪಿಸಿದ ವಿಷಯ ಹೇಳಲಾಗಿತ್ತು. ಇಷ್ಟರವರೆಗೆ ವೃಕ್ಷದ ಬುಡದಲ್ಲಿ ನಿಂತೇ ಮಾತಾಡುತ್ತಿದ್ದನು. ಈಗ ಸೀತಾದೇವಿಗೆ ಬೃಹದಾಕಾರದ ರೂಪವನ್ನು ತೋರಲೂ ಸ್ವಲ್ಪ ದೂರ ಸರಿದು ನಿಂತನು ಎಂದು ಭಾವಿಸಬೇಕು.
ಮೂಲಮ್ - 37

ಮೇರುಮಂದರಸಂಕಾಶೋ ಬಭೌ ದೀಪ್ತಾನಲಪ್ರಭಃ ।
ಅಗ್ರತೋ ವ್ಯವತಸ್ಥೇ ಚ ಸೀತಾಯಾ ವಾನರೋತ್ತಮಃ ॥

ಅನುವಾದ

ಹನುಮಂತನು ಮೇರು, ಮಂದರ ಪರ್ವತದಂತೆ ಬೆಳೆದು, ಪ್ರಜ್ವಲಿಸುತ್ತಿರುವ ಅಗ್ನಿಜ್ವಾಲೆಗಳಂತೆ ಬೆಳಗುತ್ತಾ ಸೀತಾದೇವಿಯ ಸಮ್ಮುಖದಲ್ಲಿ ನಿಂತುಕೊಂಡನು.॥37॥

ಮೂಲಮ್ - 38

ಹರಿಃ ಪರ್ವತಸಂಕಾಶಸ್ತಾಮ್ರವಕ್ತ್ರೋ ಮಹಾಬಲಃ ।
ವಜ್ರದಂಷ್ಟ್ರನಖೋ ಭೀಮೋ ವೈದೇಹೀಮಿದಮಬ್ರವೀತ್ ॥

ಅನುವಾದ

ಆಗ ಹನುಮಂತನು ಪರ್ವತ ಸದೃಶವಾದ ಶರೀರವುಳ್ಳವನಾಗಿದ್ದನು. ಮುಖವು ಎಣ್ಣೆಗೆಂಪಾಗಿದ್ದಿತು. ಮಹಾಬಲಿಷ್ಠನಾಗಿದ್ದನು. ವಜ್ರ ಸದೃಶವಾದ ಕೋರೆದಾಡೆಗಳನ್ನೂ, ಉಗುರುಗಳನ್ನೂ ಹೊಂದಿದ್ದನು. ಭಯಂಕರವಾದ ರೂಪವನ್ನು ಧರಿಸಿದ ಹರಿಪುಂಗವನು ಸೀತಾದೇವಿಯ ಬಳಿ ಇಂತೆಂದನು.॥38॥

ಮೂಲಮ್ - 39

ಸಪರ್ವತವನೋದ್ದೇಶಾಂ ಸಾಟ್ಟಪ್ರಾಕಾರತೋರಣಾಮ್ ।
ಲಂಕಾಮಿಮಾಂ ಸನಾಥಾಂ ವಾ ನಯಿತುಂ ಶಕ್ತಿರಸ್ತಿ ಮೇ ॥

ಅನುವಾದ

‘‘ದೇವೀ! ಪರ್ವತಗಳಿಂದಲೂ, ವನಪ್ರದೇಶಗಳಿಂದಲೂ, ಮಹಾಸೌಧಗಳಿಂದಲೂ, ಕೋಟೆ-ಕೊತ್ತಲಗಳಿಂದಲೂ, ಬಹಿರ್ದ್ವಾರಗಳಿಂದಲೂ ಕೂಡಿರುವ ಈ ಲಂಕೆಯನ್ನು ರಾವಣನ ಸಮೇತವಾಗಿ ಎತ್ತಿಕೊಂಡು ಹೋಗುವಷ್ಟು ಶಕ್ತಿಯು ನನಗಿದೆ.॥39॥

ಮೂಲಮ್ - 40

ತದವಸ್ಥಾಪ್ಯತಾಂ ಬುದ್ಧಿರಲಂ ದೇವಿ ವಿಕಾಂಕ್ಷಯಾ ।
ವಿಶೋಕಂ ಕುರು ವೈದೇಹಿ ರಾಘವಂ ಸಹಲಕ್ಷ್ಮಣಮ್ ॥

ಅನುವಾದ

ದೇವೀ! ಆದುದರಿಂದ ನಾನು ನಿನ್ನನ್ನು ಒಯ್ಯಲು ಸಮರ್ಥನಾಗಿದ್ದೇನೆ ಎಂಬುದನ್ನು ನಿಶ್ಚಯಿಸಿಕೊ. ಇನ್ನಾದರೂ ನಿನ್ನಲ್ಲಿರುವ ಸಂದೇಹವನ್ನು ದೂರಮಾಡು. ನನ್ನ ಬೆನ್ನನ್ನು ಹತ್ತಿ ಕುಳಿತು, ರಾಮ-ಲಕ್ಷ್ಮಣರು ಇರುವಲ್ಲಿಗೆ ಹೋಗಿ ಅವರ ಶೋಕವನ್ನು ದೂರಮಾಡು.॥40॥

ಮೂಲಮ್ - 41

ತಂ ದೃಷ್ಟ್ವಾಚಲಸಂಕಾಶಮುವಾಚ ಜನಕಾತ್ಮಜಾ ।
ಪದ್ಮಪತ್ರವಿಶಾಲಾಕ್ಷೀ ಮಾರುತಸ್ಯೌರಸಂ ಸುತಮ್ ॥

ಅನುವಾದ

ಪದ್ಮಪದ್ಮದಂತೆ ವಿಶಾಲವಾದ ನೇತ್ರಗಳುಳ್ಳ ಆ ಜಾನಕಿಯು ಪರ್ವತೋಪಮನಾಗಿದ್ದ ಆ ವಾಯುಸುತನಾದ ಮಾರುತಿಯನ್ನು ನೋಡಿ ಅಚ್ಚರಿಗೊಂಡು ಇಂತೆಂದಳು.॥41॥

ಮೂಲಮ್ - 42

ತವ ಸತ್ತ್ವಂ ಬಲಂ ಚೈವ ವಿಜಾನಾಮಿ ಮಹಾಕಪೇ ।
ವಾಯೋರಿವ ಗತಿಂ ಚಾಪಿ ತೇಜಶ್ಚಾಗ್ನೇರಿವಾದ್ಭುತಮ್ ॥

ಅನುವಾದ

ಎಲೈ ವಾನರ ಪುಂಗವ! ನಿನ್ನ ಬಲ-ಪರಾಕ್ರಮಗಳನ್ನೂ, ವಾಯುವೇಗವನ್ನೂ, ಅಗ್ನಿಜ್ವಾಲೆಗಳಂತೆ ನಿನ್ನ ಅದ್ಭುತ ತೇಜಸ್ಸನ್ನೂ ನಾನು ಅರಿತುಕೊಂಡೆನು.॥42॥

ಮೂಲಮ್ - 43

ಪ್ರಾಕೃತೋಽನ್ಯಃ ಕಥಂ ಚೇಮಾಂ ಭೂಮಿಮಾಗಂತುಮರ್ಹತಿ ।
ಉದಧೇರಪ್ರಮೇಯಸ್ಯ ಪಾರಂ ವಾನರಪುಂಗವ ॥

ಅನುವಾದ

ವಾನರೋತ್ತಮನೇ! ಅಪಾರವಾದ ಸಮುದ್ರದ ಈಚಿನ ದಡದಲ್ಲಿರುವ ರಾಕ್ಷಸರ ಭೂಮಿಗೆ ನೀನಲ್ಲದೇ ಸಾಮಾನ್ಯವಾದ ಬೇರೆ ಯಾವನು ಬರಲು ಸಮರ್ಥನು?॥43॥

ಮೂಲಮ್ - 44

ಜಾನಾಮಿ ಗಮನೇ ಶಕ್ತಿಂ ನಯನೇ ಚಾಪಿ ತೇ ಮಮ ।
ಅವಶ್ಯಂ ಸಂಪ್ರಧಾರ್ಯಾಶು ಕಾರ್ಯಸಿದ್ಧಿರ್ಮಹಾತ್ಮನಃ ॥

ಅನುವಾದ

ನಿನ್ನ ವೇಗವನ್ನು, ನನ್ನನ್ನು ಎತ್ತಿಕೊಂಡು ಹೋಗುವ ಪರಮಾದ್ಭುತವಾದ ನಿನ್ನ ಶಕ್ತಿಯನ್ನು ನಾನು ತಿಳಿದಿರುವೆನು. ಮಹಾತ್ಮರೂ, ಬುದ್ಧಿವಂತರೂ ತಮ್ಮ ಕಾರ್ಯಸಿದ್ಧಿಗಾಗಿ ಮುಂದಾಗಿ ಚೆನ್ನಾಗಿ ಆಲೋಚಿಸುವರು. ನಾನೂ ಕೂಡ ಮೊದಲೇ ಆಗುಹೋಗುಗಳ ಬಗ್ಗೆ ಆಲೋಚಿಸಿ ಒಂದು ನಿರ್ಣಯಕ್ಕೆ ಬರಬೇಕಾಗಿದೆ.॥44॥

ಮೂಲಮ್ - 44

ಅಯುಕ್ತಂ ತು ಕಪಿಶ್ರೇಷ್ಠ ಮಮ ಗಂತುಂ ತ್ವಯಾನಘ ।
ವಾಯುವೇಗಸವೇಗಸ್ಯ ವೇಗೋ ಮಾಂ ಮೋಹಯೇತ್ತವ ॥

ಅನುವಾದ

ಎಲೈ ಪುಣ್ಯಪುರುಷಾ! ಕಪಿಶ್ರೇಪ್ಠನೇ! ನಾನು ನಿನ್ನೊಡನೆ ಪಯಣಿಸುವುದು ಯುಕ್ತವಲ್ಲವೆಂದೇ ಭಾವಿಸುತ್ತೇನೆ. ವಾಯುವೇಗಕ್ಕೆ ಸಮಾನವಾದ ನಿನ್ನ ಗಮನವು ನನ್ನನ್ನು ಎಚ್ಚರದಪ್ಪಿಸಬಹುದು.॥45॥

ಮೂಲಮ್ - 46

ಅಹಮಾಕಾಶಮಾಪನ್ನಾ ಹ್ಯುಪರ್ಯುಪರಿ ಸಾಗರಮ್ ।
ಪ್ರಪತೇಯಂ ಹಿ ತೇ ಪೃಷ್ಠಾದ್ಭಯಾದ್ವೇಗೇನ ಗಚ್ಛತಃ ॥

ಅನುವಾದ

ಸಮುದ್ರದ ಮೇಲೆ ಎಷ್ಟೋ ಎತ್ತರದಲ್ಲಿ ವಾಯುವೇಗದಿಂದ ಆಕಾಶಮಾರ್ಗದಲ್ಲಿ ಹೋಗುತ್ತಿರುವಾಗ ಭಯದಿಂದ ನಾನು ನಿನ್ನ ಬೆನ್ನ ಮೇಲಿಂದ ಕೆಳಗೆ ಬಿದ್ದುಬಿಡಬಹುದು.॥46॥

ಮೂಲಮ್ - 47

ಪತಿತಾ ಸಾಗರೇ ಚಾಹಂ ತಿಮಿನಕ್ರಝಷಾಕುಲೇ ।
ಭವೇಯಮಾಶು ವಿವಶಾ ಯಾದಸಾಮನ್ನಮುತ್ತಮಮ್ ॥

ಅನುವಾದ

ತಿಮಿಂಗಿಲಗಳಿಂದ, ಮೊಸಳೆಗಳಿಂದ, ದೊಡ್ಡ - ದೊಡ್ಡ ಮೀನುಗಳಿಂದ ತುಂಬಿರುವ ಸಮುದ್ರದಲ್ಲಿ ನಾನು ಎಚ್ಚರದಪ್ಪಿ ಬಿದ್ದುಬಿಟ್ಟಾಗ ಕೂಡಲೇ ಜಲಜಂತುಗಳು ನನ್ನನ್ನು ತಿಂದುಬಿಟ್ಟಾರು.॥47॥

ಮೂಲಮ್ - 48

ನ ಚ ಶಕ್ಷ್ಯೇ ತ್ವಯಾ ಸಾರ್ಧಂ ಗಂತುಂ ಶತ್ರುವಿನಾಶನ ।
ಕಲತ್ರವತಿ ಸಂದೇಹಸ್ತ್ವಯ್ಯಪಿ ಸ್ಯಾದಸಂಶಯಃ ॥

ಅನುವಾದ

ಶತ್ರುಸೂದನಾ! ನಿನ್ನೊಡನೆ ಪ್ರಯಾಣ ಮಾಡಲು ನನಗೆ ಧೈರ್ಯ ಸಾಲದು. ಏಕೆಂದರೆ, ನನ್ನನ್ನು ರಕ್ಷಿಸುವ ಪ್ರಯತ್ನದಲ್ಲಿ ನಿನ್ನ ಭದ್ರತೆಗೂ ಆಪತ್ತು ಬರಬಹುದು.॥48॥

ಮೂಲಮ್ - 49

ಹ್ರಿಯಮಾಣಾಂತು ಮಾಂ ದೃಷ್ಟ್ವಾ ರಾಕ್ಷಸಾ ಭೀಮವಿಕ್ರಮಾಃ ।
ಅನುಗಚ್ಛೇಯುರಾದಿಷ್ಟಾ ರಾವಣೇನ ದುರಾತ್ಮನಾ ॥

ಅನುವಾದ

ನೀನು ನನ್ನನ್ನು ಎತ್ತಿಕೊಂಡು ಹೋಗುತ್ತಿರುವುದನ್ನು ನೋಡಿ, ರಾವಣನಿಂದ ಆಜ್ಞಪ್ತರಾದ, ದುರಾತ್ಮರಾದ, ಭಯಂಕರ ಪರಾಕ್ರಮಿಗಳಾದ ರಾಕ್ಷಸರು ನಿನ್ನನ್ನು ಬೆನ್ನಟ್ಟಬಹುದು.॥49॥

ಮೂಲಮ್ - 50

ತೈಸ್ತ್ವಂ ಪರಿವೃತಃ ಶೂರೈಃ ಶೂಲಮುದ್ಗರಪಾಣಿಭಿಃ ।
ಭವೇಸ್ತ್ವಂ ಸಂಶಯಂ ಪ್ರಾಪ್ತೋ ಮಯಾ ವೀರ ಕಲತ್ರವಾನ್ ॥

ಅನುವಾದ

ವೀರನೇ! ಶೂಲ-ಮುದ್ಗರಗಳೇ ಮುಂತಾದ ಆಯುಧಗಳನ್ನು ಹಿಡಿದ ಶೂರರಾದ ಆ ರಾಕ್ಷಸರು ನಿನ್ನನ್ನು ಸುತ್ತುವರಿಯಬಹುದು. ಆಗ ನನ್ನನ್ನು ರಕ್ಷಿಸುತ್ತಿರುವ ನೀನು ಸಂಕಟಕ್ಕೊಳಗಾಗಬಹುದು.॥50॥

ಮೂಲಮ್ - 51

ಸಾಯುಧಾ ಬಹವೋ ವ್ಯೋಮ್ನಿ ರಾಕ್ಷಸಾಸ್ತ್ವಂ ನಿರಾಯುಧಃ ।
ಕಥಂ ಶಕ್ಷ್ಯಸಿ ಸಂಯಾತುಂ ಮಾಂ ಚೈವ ಪರಿರಕ್ಷಿತುಮ್ ॥

ಅನುವಾದ

ನೀನಾದರೋ ಒಬ್ಬಂಟಿಗನೂ, ನಿರಾಯುಧನೂ ಆಗಿರುವೆ. ರಾಕ್ಷಸರು ಅನೇಕರಿದ್ದು, ಆಯುಧಗಳನ್ನು ಧರಿಸಿರುವರು. ಅಂತಹ ಸ್ಥಿತಿಯಲ್ಲಿ, ನನ್ನನ್ನು ರಕ್ಷಿಸಿಕೊಂಡು ಮುಂದೆ ಸಾಗುವುದು ನಿನಗೆ ಹೇಗೆ ಸಾಧ್ಯವಾಗಬಹುದು?॥51॥

ಮೂಲಮ್ - 52

ಯುಧ್ಯಮಾನಸ್ಯ ರಕ್ಷೋಭಿಸ್ತವ ತೈಃ ಕ್ರೂರಕರ್ಮಭಿಃ ।
ಪ್ರಪತೇಯಂ ಹಿ ತೇ ಪೃಷ್ಠಾದ್ಭಯಾರ್ತಾ ಕಪಿಸತ್ತಮ ॥

ಅನುವಾದ

ಎಲೈ ಕಪಿವರಾ! ಕ್ರೂರ ಕರ್ಮಿಗಳಾದ ರಾಕ್ಷಸರಿಗೂ ನಿನಗೂ ಘೋರವಾದ ಯುದ್ಧವು ನಡೆಯುತ್ತಿರುವಾಗ, ನಾನು ಭಯಗೊಂಡು ನಿನ್ನ ಬೆನ್ನಿನಿಂದ ಕೆಳಕ್ಕೆ ಬಿದ್ದುಬಿಡಬಹುದು.॥52॥

ಮೂಲಮ್ - 53

ಅಥ ರಕ್ಷಾಂಸಿ ಭೀಮಾನಿ ಮಹಾಂತಿ ಬಲವಂತಿ ಚ ।
ಕಥಂಚಿತ್ ಸಾಂಪರಾಯೇ ತ್ವಾಂ ಜಯೇಯುಃ ಕಪಿಸತ್ತಮ ॥

ಅನುವಾದ

ವಾನರೋತ್ತಮನೇ! ಭಯಂಕರರಾದ, ಮಹಾಕಾಯರಾದ, ಮಹಾಬಲಿಷ್ಠರಾದ ರಾಕ್ಷಸರು ಹೇಗಾದರೂ ಮಾಡಿ ನಿನ್ನನ್ನು ಯುದ್ಧದಲ್ಲಿ ಜಯಿಸಬಹುದು.॥53॥

ಮೂಲಮ್ - 54

ಅಥವಾ ಯುಧ್ಯಮಾನಸ್ಯ ಪತೇಯಂ ವಿಮುಖಸ್ಯ ತೇ ।
ಪತಿತಾಂ ಚ ಗೃಹೀತ್ವಾ ಮಾಂ ನಯೇಯುಃ ಪಾಪರಾಕ್ಷಸಾಃ ॥

ಅನುವಾದ

ಹಾಗಲ್ಲದೇ ರಾಕ್ಷಸರೊಡನೆ ಯುದ್ಧ ಮಾಡುತ್ತಾ ನನ್ನ ರಕ್ಷಣೆಯಿಂದ ವಿಮುಖನಾಗುವ ನಿನ್ನ ಬೆನ್ನಿನಿಂದ ನಾನು ಕೆಳಕ್ಕೆ ಬೀಳಬಹುದು. ಹಾಗೇ ಬೀಳುತ್ತಿರುವ ನನ್ನನ್ನು ಪಾಪಿಷ್ಠರಾದ ರಾಕ್ಷಸರು ಹಿಡಿದು ಪುನಃ ರಾವಣನಲ್ಲಿಗೆ ಒಯ್ಯಲೂಬಹುದು.॥54॥

ಮೂಲಮ್ - 55

ಮಾಂ ವಾ ಹರೇಯುಸ್ತ್ವದ್ಧಸ್ತಾದ್ವಿಶಸೇಯುರಥಾಪಿ ವಾ ।
ಅವ್ಯವಸ್ಥೌ ಹಿ ದೃಶ್ಯೇತೇ ಯುದ್ಧೇ ಜಯಪರಾಜಯೌ ॥

ಅನುವಾದ

ಇಲ್ಲವೇ ನಿನ್ನ ಕೈಯಿಂದ ನನ್ನನ್ನು ಅವರು ಕಸಿದುಕೊಂಡು ಹೋಗಬಹುದು. ಅಥವಾ ನನ್ನನ್ನು ತುಂಡು-ತುಂಡಾಗಿ ಕತ್ತರಿಸಲೂಬಹುದು. ಯುದ್ಧದಲ್ಲಿ ಜಯಾಪಜಯಗಳು ಅಸ್ಥಿರವೆಂದು ಎಲ್ಲರೂ ತಿಳಿದಿರುವರಲ್ಲ!॥55॥

ಮೂಲಮ್ - 56

ಅಹಂ ವಾಪಿ ವಿಪದ್ಯೇಯಂ ರಕ್ಷೋಭಿರಭಿತರ್ಜಿತಾ ।
ತ್ವತ್ಪ್ರಯತ್ನೋ ಹರಿಶ್ರೇಷ್ಠ ಭವೇನ್ನಿಷ್ಫಲ ಏವ ತು ॥

ಅನುವಾದ

ರಾಕ್ಷಸರಿಂದ ಭಯಗೊಳಿಸಲ್ಪಟ್ಟ ನಾನು ಪ್ರಾಣಗಳನ್ನು ತೊರೆಯಬಹುದು. ಹಾಗೇನಾದರೂ ಆದರೆ ನಿನ್ನ ಎಲ್ಲ ಪ್ರಯತ್ನಗಳೂ ಪೂರ್ಣವಾಗಿ ನಿಷ್ಫಲವಾಗಿ ಬಿಡುತ್ತವೆ.॥56॥

ಮೂಲಮ್ - 57

ಕಾಮಂ ತ್ವಮಸಿ ಪರ್ಯಾಪ್ತೋ ನಿಹಂತುಂ ಸರ್ವರಾಕ್ಷಸಾನ್ ।
ರಾಘವಸ್ಯ ಯಶೋ ಹೀಯೇತ್ತ್ವಯಾ ಶಸ್ತೈಸ್ತು ರಾಕ್ಷಸೈಃ ॥

ಅನುವಾದ

ಕಪೀಶ್ವರನೇ! ಎಲ್ಲ ರಾಕ್ಷಸರನ್ನು ಸಂಹರಿಸಲು ನೀನು ಸಮರ್ಥನೇ ಆಗಿರುವೆ. ರಾಕ್ಷಸ ಯೋಧರೆಲ್ಲರನ್ನು ಕೊಂದು ನನ್ನನ್ನು ಕೊಂಡು ಹೋದರೆ ರಾಘವನ ಕೀರ್ತಿಗೆ ಕಳಂಕ ಬರುವುದಲ್ಲ!॥57॥

ಮೂಲಮ್ - 58

ಅಥವಾದಾಯ ರಕ್ಷಾಂಸಿ ನ್ಯಸೇಯುಃ ಸಂವೃತೇ ಹಿ ಮಾಮ್ ।
ಯತ್ರ ತೇ ನಾಭಿಜಾನೀಯುರ್ಹರಯೋ ನಾಪಿ ರಾಘವೌ ॥

ಅನುವಾದ

ಅಥವಾ ರಾಕ್ಷಸರು ನಿನ್ನನ್ನು ಪರಾಜಯಗೊಳಿಸಿ ನನ್ನನ್ನು ಕೊಂಡುಹೋಗಿ, ವಾನರರಿಗಾಗಲೀ, ರಾಮ- ಲಕ್ಷ್ಮಣರಿಗಾಗಲೀ ತಿಳಿಯದಂತಹ ರಹಸ್ಯ ಪ್ರದೇಶದಲ್ಲಿ ಇರಿಸಬಹುದು.॥58॥

ಮೂಲಮ್ - 59

ಆರಂಭಸ್ತು ಮದರ್ಥೋಽಯಂ ತತಸ್ತವ ನಿರರ್ಥಕಃ ।
ತ್ವಯಾ ಹಿ ಸಹ ರಾಮಸ್ಯ ಮಹಾನಾಗಮನೇ ಗುಣಃ ॥

ಅನುವಾದ

ಅದರಿಂದಾಗಿ ನನ್ನ ಬಿಡುಗಡೆಗಾಗಿ ನೀವು ಮಾಡುವ ಪ್ರಯತ್ನಗಳೆಲ್ಲವೂ ವ್ಯರ್ಥವಾಗುತ್ತವೆ. ಆದುದರಿಂದ ನಿನ್ನೊಡನೆ ಶ್ರೀರಾಮನು ಇಲ್ಲಿಗೆ ಬರುವುದೇ ಹೆಚ್ಚು ಸಮಂಜಸವಾಗಿದೆ.॥59॥

ಮೂಲಮ್ - 60

ಮಯಿ ಜೀವಿತಮಾಯತ್ತಂ ರಾಘವಸ್ಯ ಮಹಾತ್ಮನಃ ।
ಭ್ರಾತೄಣಾಂ ಚ ಮಹಾ ಬಾಹೋ ತವ ರಾಜಕುಲಸ್ಯ ಚ ॥

ಅನುವಾದ

ಮಹಾಬಾಹುವೇ! ಮಹಾ ತೇಜಸ್ವಿಯಾದ ರಾಘವನ, ಅವನ ತಮ್ಮಂದಿರಾದ ಲಕ್ಷ್ಮಣ-ಭರತ-ಶತ್ರುಘ್ನರ, ನಿನ್ನ ರಾಜನಾದ ಸುಗ್ರೀವನ, ಅವನ ಪರಿವಾರವೆಲ್ಲರ ಜೀವಿತವು ನನ್ನನ್ನೇ ಆಶ್ರಯಿಸಿ ನಿಂತಿದೆಯಲ್ಲ!॥60॥

ಮೂಲಮ್ - 61

ತೌ ನಿರಾಶೌ ಮದರ್ಥಂ ತು ಶೋಕಸಂತಾಪಕರ್ಶಿತೌ ।
ಸಹ ಸರ್ವರ್ಕ್ಷಹರಿಭಿಸ್ತ್ಯಕ್ಷತಃ ಪ್ರಾಣಸಂಗ್ರಹಮ್ ॥

ಅನುವಾದ

ಶೋಕ ಸಂತಾಪಗಳಿಂದ ಸಂಕಟಪಡುತ್ತಿರುವ ರಾಮ-ಲಕ್ಷ್ಮಣರೀರ್ವರೂ ನನ್ನ ವಿಷಯದಲ್ಲಿ ನಿರಾಶರಾಗಿ, ಎಲ್ಲ ಕಪಿ-ಕರಡಿಗಳ ನಾಯಕರೊಡನೆ ಪ್ರಾಣತ್ಯಾಗ ಮಾಡುವರು.॥61॥

ಮೂಲಮ್ - 62

ಭರ್ತುರ್ಭಕ್ತಿಂ ಪುರಸ್ಕೃತ್ಯ ರಾಮಾದನ್ಯಸ್ಯ ವಾನರ ।
ನಾಹಂ ಸ್ಪ್ರಷ್ಟುಂ ಸ್ವತೋ ಗಾತ್ರಂ ಇಚ್ಛೇಯಂ ವಾನರೋತ್ತಮ ॥

ಅನುವಾದ

ವಾನರ ಶ್ರೇಷ್ಠನೇ! ನಿನ್ನೊಡನೆ ಬರದಿರಲು ಮುಖ್ಯವಾದ ಮತ್ತೊಂದು ಕಾರಣವೂ ಇದೆ. ಪತಿಭಕ್ತಿಯನ್ನೇ ಶ್ರೇಷ್ಠವೆಂದು ಭಾವಿಸಿರುವ ನಾನು ಶ್ರೀರಾಮನ ಹೊರತಾಗಿ ಬೇರೆ ಯಾರೇ ಪುರುಷನ ಶರೀರವನ್ನು ನಾನಾಗಿಯೇ ಪ್ರಾಣವಿರುವ ತನಕ ಮುಟ್ಟುವುದಿಲ್ಲ.॥62॥

ಮೂಲಮ್ - 63

ಯದಹಂ ಗಾತ್ರ ಸಂಸ್ಪರ್ಶಂ ರಾವಣಸ್ಯ ಬಲಾದ್ಗತಾ ।
ಅನೀಶಾ ಕಿಂ ಕರಿಷ್ಯಾಮಿ ವಿನಾಥಾ ವಿವಶಾ ಸತೀ ॥

ಅನುವಾದ

ರಾವಣನು ಬಲವಂತವಾಗಿ ನನ್ನನ್ನು ಅಪಹರಿಸಿಕೊಂಡು ಹೋಗುವಾಗ ಅವನ ಶರೀರ ಸ್ಪರ್ಶವೇನೋ ನನಗುಂಟಾಯಿತು. ಆಗ ಪ್ರಾಣೇಶನಿಂದ ರಹಿತಳೂ, ರಕ್ಷಕರಿಲ್ಲದವಳೂ, ಅಸ್ವತಂತ್ರಳೂ ಆಗಿದ್ದ ನಾನು ಏನು ತಾನೇ ಮಾಡಲು ಸಾಧ್ಯವಿದ್ದಿತು?॥63॥

ಮೂಲಮ್ - 64

ಯದಿ ರಾಮೋ ದಶಗ್ರೀವಮಿಹ ಹತ್ವಾ ಸಬಾಂಧವಮ್ ।
ಮಾಮಿತೋ ಗೃಹ್ಯ ಗಚ್ಛೇತ ತತ್ತಸ್ಯ ಸದೃಶಂ ಭವೇತ್ ॥

ಅನುವಾದ

ಆದುದರಿಂದ ಶ್ರೀರಾಮನೇ ಇಲ್ಲಿಗೆ ಬಂದು ರಾಕ್ಷಸರ ಸಹಿತ ರಾವಣನನ್ನು ಸಂಹರಿಸಿ ನನ್ನನ್ನು ಕರಕೊಂಡು ಹೋದರೆ, ಅದು ಅವನ ಶೌರ್ಯ-ಪರಾಕ್ರಮಗಳಿಗೆ ತಕ್ಕುದಾದ ಕಾರ್ಯವಾಗುತ್ತದೆ.॥64॥

ಮೂಲಮ್ - 65

ಶ್ರುತಾ ಹಿ ದೃಷ್ಟಾಶ್ಚ ಮಯಾ ಪರಾಕ್ರಮಾ
ಮಹಾತ್ಮನಸ್ತಸ್ಯ ರಣಾವಮರ್ದಿನಃ ।
ನ ದೇವಗಂಧರ್ವಭುಜಂಗರಾಕ್ಷಸಾ
ಭವಂತಿ ರಾಮೇಣ ಸಮಾ ಹಿ ಸಂಯುಗೇ ॥

ಅನುವಾದ

ರಣರಂಗದಲ್ಲಿ ಶತ್ರುಗಳನ್ನು ಮರ್ದಿಸುವ ಮಹಾತ್ಮನಾದ ಶ್ರೀರಾಮನ ಪರಾಕ್ರಮಗಳನ್ನು ನಾನು ಬಹಳವಾಗಿ ಕೇಳಿದ್ದೇನೆ ಹಾಗೂ ಪ್ರತ್ಯಕ್ಷವಾಗಿ ನೋಡಿದ್ದೇನೆ. ಯುದ್ಧದಲ್ಲಿ ದೇವತೆಗಳಾಗಲೀ, ಗಂಧರ್ವರಾಗಲೀ, ಭುಜಂಗ-ರಾಕ್ಷಸರಾಗಲೀ ಯಾರೂ ಅವನಿಗೆ ಸಾಟಿಯಾಗಲಾರರು.॥65॥

ಮೂಲಮ್ - 66

ಸಮೀಕ್ಷ್ಯ ತಂ ಸಂಯತಿ ಚಿತ್ರಕಾರ್ಮುಕಂ
ಮಹಾಬಲಂ ವಾಸವತುಲ್ಯವಿಕ್ರಮಮ್ ।
ಸಲಕ್ಷ್ಮಣಂ ಕೋ ವಿಷಹೇತ ರಾಘವಂ
ಹುತಾಶನಂ ದೀಪ್ತಮಿವಾನಿಲೇರಿತಮ್ ॥

ಅನುವಾದ

ಶ್ರೀರಾಮನು ಅದ್ಭುತವಾದ ಧನುಸ್ಸುಳ್ಳವನು. ಮಹಾ ಬಲಶಾಲಿಯು, ಪರಾಕ್ರಮದಲ್ಲಿ ದೇವೇಂದ್ರನಿಗಿಂತಲೂ ಮಿಗಿಲಾದವನು. ವಾಯುವಿನಿಂದಾಗಿ ದೇದೀಪ್ಯಮಾನವಾಗಿ ಪ್ರಜ್ವಲಿಸುವ ಅಗ್ನಿಯಂತೆ ಇರುವ, ಲಕ್ಷ್ಮಣ ಸಹಿತನಾದ ಆ ವೀರನನ್ನು ನೋಡಿ ಯಾರು ತಾನೇ ಸಂಗ್ರಾಮದಲ್ಲಿ ಅವನಿಗೆ ಇದಿರಾಗಿ ನಿಲ್ಲಬಲ್ಲರು?॥66॥

ಮೂಲಮ್ - 67

ಸಲಕ್ಷ್ಮಣಂ ರಾಘವಮಾಜಿಮರ್ದನಂ
ದಿಶಾಗಜಂ ಮತ್ತಮಿವ ವ್ಯವಸ್ಥಿತಮ್ ।
ಸಹೇತ ಕೋ ವಾನರಮುಖ್ಯ ಸಂಯುಗೇ
ಯುಗಾಂತಸೂರ್ಯಪ್ರತಿಮಂ ಶರಾರ್ಚಿಷಮ್ ॥

ಅನುವಾದ

ವಾನರೋತ್ತಮನೇ! ಲಕ್ಷ್ಮಣನಿಂದ ಒಡಗೂಡಿರುವ, ಕದನ ರಂಗದಲ್ಲಿ ಶತ್ರುಗಳನ್ನು ಮರ್ದಿಸುವ, ಮದಿಸಿದ ದಿಗ್ಗಜದಂತೆ ನಿಂತಿರುವ, ಯುಗಾಂತದ ಸೂರ್ಯಕಿರಣ ಜ್ವಾಲೆಗಳಂತೆ ಬಾಣಗಳನ್ನು ಹೊಂದಿರುವ ಶ್ರೀರಾಮನ ಶರಪ್ರಹಾರವನ್ನು ಯುದ್ಧದಲ್ಲಿ ಯಾವನೂ ಸಹಿಸಲಾರನು.॥67॥

ಮೂಲಮ್ - 68

ಸ ಮೇ ಹರಿಶ್ರೇಷ್ಠ ಸಲಕ್ಷ್ಮಣಂ ಪತಿಂ
ಸಯೂಥಪಂ ಕ್ಷಿಪ್ರಮಿಹೋಪಪಾದಯ ।
ಚಿರಾಯ ರಾಮಂ ಪ್ರತಿ ಶೋಕಕರ್ಶಿತಾಂ
ಕುರುಷ್ವ ಮಾಂ ವಾನರಮುಖ್ಯ ಹರ್ಷಿತಾಮ್ ॥

ಅನುವಾದ

ಕಪಿಶ್ರೇಷ್ಠನೇ! ಲಕ್ಷ್ಮಣನಿಂದಲೂ, ವಾನರ ಸಮೂಹದಿಂದಲೂ ಒಡಗೂಡಿರುವ ನನ್ನ ಸ್ವಾಮಿಯನ್ನು ಬೇಗನೇ ಇಲ್ಲಿಗೆ ಕರಕೊಂಡು ಬಾ. ಬಹಳ ಕಾಲದಿಂದಲೂ ರಾಮವಿರಹ ಶೋಕದಿಂದ ಕೃಶರಾಗಿರುವೆ. ಶ್ರೀರಾಮನನ್ನು ಕರಕೊಂಡು ಬಂದು ನನಗೆ ಸಂತೋಷವನ್ನುಂಟು ಮಾಡು.॥68॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಸಪ್ತತ್ರಿಂಶಃ ಸರ್ಗಃ ॥ 37 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತೇಳನೆಯ ಸರ್ಗವು ಮುಗಿಯಿತು.