वाचनम्
ಭಾಗಸೂಚನಾ
ಹನುಮಂತನು ಸೀತಾದೇವಿಗೆ ಮುದ್ರೆಯುಂಗುರವನ್ನು ಕೊಟ್ಟಿದ್ದು, ಶ್ರೀರಾಮನು ಯಾವಾಗ ತನ್ನನ್ನು ಉದ್ಧರಿಸುವನೆಂದು ಸೀತೆಯ ಉದ್ಗಾರ, ಶ್ರೀರಾಮನಿಗೆ ಸೀತೆಯಲ್ಲಿರುವ ಅನುರಾಗವನ್ನು ವರ್ಣಿಸಿ ಹೇಳಿ ಆಕೆಯನ್ನು ಸಮಾಧಾನಗೊಳಿಸಿದುದು
ಮೂಲಮ್ - 1
ಭೂಯ ಏವ ಮಹಾತೇಜಾ ಹನುಮಾನ್ ಮಾರುತಾತ್ಮಜಃ ।
ಅಬ್ರವೀತ್ ಪ್ರಶ್ರಿತಂ ವಾಕ್ಯಂ ಸೀತಾಪ್ರತ್ಯಯಕಾರಣಾತ್ ॥
ಅನುವಾದ
ಮಹಾತೇಜಸ್ವಿಯೂ, ವಾಯುಸುತನೂ ಆದ ಹನುಮಂತನು ಸೀತಾದೇವಿಗೆ ಇನ್ನೂ ಹೆಚ್ಚಿನ ವಿಶ್ವಾಸ ಹುಟ್ಟುವಂತೆ ವಿನಯ ಪೂರ್ವಕವಾದ ಮಾತನ್ನು ಪುನಃ ಹೇಳತೊಡಗಿದನು.॥1॥
ಮೂಲಮ್ - 2
ವಾನರೋಽಹಂ ಮಹಾಭಾಗೇ ದೂತೋ ರಾಮಸ್ಯ ಧೀಮತಃ ।
ರಾಮನಾಮಾಂಕಿತಂ ಚೇದಂ ಪಶ್ಯ ದೇವ್ಯಂಗುಲೀಯಕಮ್ ॥
ಮೂಲಮ್ - 3
ಪ್ರತ್ಯಯಾರ್ಥಂ ತವಾನೀತಂ ತೇನ ದತ್ತಂ ಮಹಾತ್ಮನಾ ।
ಸಮಾಶ್ವಸಿಹಿ ಭದ್ರಂ ತೇ ಕ್ಷೀಣದುಃಖಫಲಾ ಹ್ಯಸಿ ॥
ಅನುವಾದ
ಎಲೈ ಭಾಗ್ಯಶಾಲಿನೀ ದೇವಿ! ವಾನರನಾದ ನಾನು ಧೀಮಂತನಾದ ಶ್ರೀರಾಮನ ದೂತನು. ರಾಮನಾಮಾಂಕಿತವಾದ, ದಿವ್ಯವಾದ ಈ ಉಂಗುರವನ್ನು ನೋಡು. ಮಹಾತ್ಮನಾದ ಶ್ರೀರಾಮನು ಕೊಟ್ಟಿರುವ ಈ ಮುದ್ರಿಕೆಯನ್ನು ನಿನಗೆ ನಂಬಿಕೆ ಹುಟ್ಟಿಸುವ ಸಲುವಾಗಿಯೇ ತಂದಿರುವೆನು. ನಿನಗೆ ಮಂಗಳವಾಗಲಿ; ಇದುವರೆಗೆ ನೀನು ಅನುಭವಿಸಿದ ದುಃಖಗಳು ತೊಲಗಿ ಹೋಗಿವೆ. ಇನ್ನು ಮುಂದೆ ಆ ದುಷ್ಫಲಗಳನ್ನು ಅನುಭವಿಸಬೇಕಾಗಿಲ್ಲ.॥2-3॥
ಮೂಲಮ್ - 4
ಗೃಹೀತ್ವಾ ಪ್ರೇಕ್ಷಮಾಣಾ ಸಾ ಭರ್ತುಃ ಕರವಿಭೂಷಣಮ್ ।
ಭರ್ತಾರಮಿವ ಸಂಪ್ರಾಪ್ತಂ ಜಾನಕೀ ಮುದಿತಾಭವತ್ ॥
ಅನುವಾದ
ಆಂಜನೇಯನು ಹೀಗೆ ಹೇಳಿ ಸೀತಾದೇವಿಗೆ ರಾಮನ ಮುದ್ರಿಕೆಯನ್ನು ಭಕ್ತಿಯಿಂದ ಅರ್ಪಿಸಿದನು. ಜಾನಕೀದೇವಿಯು ತನ್ನ ಪತಿಯ ಕೈಗೆ ಭೂಷಣಪ್ರಾಯವಾಗಿದ್ದ ಅಂಗುಳೀಯಕವನ್ನು ಪಡೆದು ದಿಟ್ಟಿಸಿ ನೋಡುತ್ತಾ ಪತಿಯೇ ತನ್ನೆದುರಿಗೆ ಬಂದಿರುವನೆಂದು ಭಾವಿಸಿ ಆನಂದಭರಿತಳಾದಳು.॥4॥
ಮೂಲಮ್ - 5
ಚಾರು ತದ್ವದನಂ ತಸ್ಯಾಸ್ತಾಮ್ರಶುಕ್ಲಾಯತೇಕ್ಷಣಮ್ ।
ಬಭೂವ ಹರ್ಷೋದಗ್ರಂ ಚ ರಾಹುಮುಕ್ತ ಇವೋದುರಾಟ್ ॥
ಅನುವಾದ
ಎಣ್ಣೆಗೆಂಪಾಗಿಯೂ, ಬಿಳುಪಾಗಿಯೂ, ವಿಶಾಲವೂ ಆದ ಕಣ್ಣುಗಳಿಂದ ಕೂಡಿದ್ದ ಆಕೆಯ ಸುಂದರ ಮುಖವು ರಾಹುವಿನಿಂದ ವಿಮುಕ್ತನಾದ ಚಂದ್ರನಂತೆ ಹರ್ಷದಿಂದ ಕಂಗೊಳಿಸಿತು.॥5॥
ಮೂಲಮ್ - 6
ತತಃ ಸಾ ಹ್ರೀಮತೀ ಬಾಲಾ ಭರ್ತೃಸಂದೇಶಹರ್ಷಿತಾ ।
ಪರಿತುಷ್ಟಾ ಪ್ರಿಯಂ ಕೃತ್ವಾ ಪ್ರಶಶಂಸ ಮಹಾಕಪಿಮ್ ॥
ಅನುವಾದ
ನಿರ್ಮಲ ಹೃದಯವುಳ್ಳ ಆ ಸೀತಾದೇವಿಯು ತನ್ನ ಪತಿಯ ಸಂದೇಶ ಪ್ರಾಪ್ತಿಯಿಂದ ಸಂತೋಷದಲ್ಲಿ ಮುಳುಗಿಹೋದಳು. ಹರ್ಷಭರಿತಳಾಗಿ ಮಹಾಕಪಿಯನ್ನು ಸಮ್ಮಾನಿಸಿ ಪ್ರಶಂಸಿಸುತ್ತಾ ಪ್ರಿಯ ವಚನಗಳನ್ನು ನುಡಿದಳು.॥6॥
ಮೂಲಮ್ - 7
ವಿಕ್ರಾಂತಸ್ತ್ವಂ ಸಮರ್ಥಸ್ತ್ವಂ ಪ್ರಾಜ್ಞ ಸ್ತ್ವಂ ವಾನರೋತ್ತಮ ।
ಯೇನೇದಂ ರಾಕ್ಷಸಪದಂ ತ್ವಯೈಕೇನ ಪ್ರಧರ್ಷಿತಮ್ ॥
ಅನುವಾದ
‘ಎಲೈ ವಾನರ ಶ್ರೇಷ್ಠನೇ! ನಿಜವಾಗಿಯೂ ನೀನು ಮಹಾ ಪರಾಕ್ರಮಿಯು, ಸಮರ್ಥನು, ದೇಶ-ಕಾಲೋಚಿತವಾಗಿ ಕಾರ್ಯ ಮಾಡುವವರಲ್ಲಿ ಕುಶಲನು. ರಾಕ್ಷಸರ ಈ ದುರ್ಗಮವಾದ ಲಂಕೆಯನ್ನು ಒಬ್ಬಂಟಿಗನಾಗಿ ಮೆಟ್ಟಿದೆಯಲ್ಲ!॥7॥
ಮೂಲಮ್ - 8
ಶತಯೋಜನವಿಸ್ತೀರ್ಣಃ ಸಾಗರೋ ಮಕರಾಲಯಃ ।
ವಿಕ್ರಮಶ್ಲಾಘನೀಯೇನ ಕ್ರಮತಾ ಗೋಷ್ಪದೀಕೃತಃ ॥
ಅನುವಾದ
ಶ್ಲಾಘ್ಯ ವಿಕ್ರಮಿಯಾದ ನೀನು ಭಯಂಕರ ತಿಮಿಂಗಿಲ-ಮೊಸಳೆಗಳಿಗೆ ಆವಾಸವಾದ ನೂರು ಯೋಜನ ವಿಸ್ತಾರವಾದ ಸಮುದ್ರವನ್ನು ಗೋಷ್ಪಾದವನ್ನು ದಾಟುವಷ್ಟೇ ಸುಲಭವಾಗಿ ದಾಟಿ ಬಂದಿರುವೆ.॥8॥
ಮೂಲಮ್ - 9
ನ ಹಿತ್ವಾಂ ಪ್ರಾಕೃತಂ ಮನ್ಯೇ ವಾನರಂ ವಾನರರ್ಷಭ ।
ಯಸ್ಯ ತೇ ನಾಸ್ತಿ ಸಂತ್ರಾಸೋ ರಾವಣಾನ್ನಾಪಿ ಸಂಭ್ರಮಃ ॥
ಅನುವಾದ
ಓ ವಾನರ ಶ್ರೇಷ್ಠಾ! ನಿನಗೆ ರಾವಣನಿಂದ ಭಯವಾಗಲಿ, ವ್ಯಾಕುಲತೆಯಾಗಲೀ ಯಾವುದೂ ಇಲ್ಲ. ನೀನು ಸಾಮಾನ್ಯ ಕಪಿಯೆಂದು ನಾನು ಭಾವಿಸುವುದಿಲ್ಲ.॥9॥
ಮೂಲಮ್ - 10
ಅರ್ಹಸೇ ಚ ಕಪಿಶ್ರೇಷ್ಠ ಮಯಾ ಸಮಭಿಭಾಷಿತುಮ್ ।
ಯದ್ಯಸಿ ಪ್ರೇಷಿತಸ್ತೇನ ರಾಮೇಣ ವಿದಿತಾತ್ಮನಾ ॥
ಅನುವಾದ
‘‘ಎಲೈ ಕಪಿವರಾ! ಮಹಾತ್ಮನಾದ ಶ್ರೀರಾಮಚಂದ್ರ ಪ್ರಭುವು ನಿನ್ನನ್ನು ಕಳಿಸಿರುವುದರಿಂದ ನನ್ನೊಡನೆ ಮಾತಾಡಲು ಯೋಗ್ಯನಾಗಿರುವೆ.॥10॥
ಮೂಲಮ್ - 11
ಪ್ರೇಷಯಿಷ್ಯತಿ ದುರ್ಧರ್ಷೋ ರಾಮೋ ನ ಹ್ಯಪರೀಕ್ಷಿತಮ್ ।
ಪರಾಕ್ರಮಂ ಅವಿಜ್ಞಾಯ ಮತ್ಸಕಾಶಂ ವಿಶೇಷತಃ ॥
ಅನುವಾದ
ಸಾಟಿಯಿಲ್ಲದ ಪರಾಕ್ರಮಿಯಾದ ಶ್ರೀರಾಮನು ನನ್ನ ಬಳಿಗೆ ಪರೀಕ್ಷಿಸದೆ ಯಾವ ದೂತನನ್ನೂ ಕಳುಹಿಸುವುದಿಲ್ಲ. ಅದರಲ್ಲಿಯೂ ವಿಶೇಷವಾಗಿ ಅವನ ಪರಾಕ್ರಮವನ್ನು ತಿಳಿದೇ ಕಳಿಸುತ್ತಾನೆ.॥11॥
ಮೂಲಮ್ - 12
ದಿಷ್ಟ್ಯಾ ಸ ಕುಶಲೀ ರಾಮೋ ಧರ್ಮಾತ್ಮಾ ಸತ್ಯಸಂಗರಃ ।
ಲಕ್ಷ್ಮಣಶ್ಚ ಮಹಾತೇಜಾಃ ಸುಮಿತ್ರಾನಂದವರ್ಧನಃ ॥
ಅನುವಾದ
ಸತ್ಯಪರಾಕ್ರಮಿಯೂ, ಧರ್ಮಾತ್ಮನೂ ಆದ ಶ್ರೀರಾಮನೂ, ಸುಮಿತ್ರಾನಂದವರ್ಧನನೂ, ಮಹಾತೇಜಃಶಾಲಿಯೂ ಆದ ಲಕ್ಷ್ಮಣನೂ ಕ್ಷೇಮವಾಗಿರುವುದು ನನ್ನ ಅದೃಷ್ಟ ಫಲವೇ.॥12॥
ಮೂಲಮ್ - 13
ಕುಶಲೀ ಯದಿ ಕಾಕುತ್ಸ್ಥಃ ಕಿಂ ನ ಸಾಗರಮೇಖಲಾಮ್ ।
ಮಹೀಂ ದಹತಿ ಕೋಪೇನ ಯುಗಾಂತಾಗ್ನಿರಿವೋತ್ಥಿತಃ ॥
ಅನುವಾದ
ಆದರೆ ಒಂದು ಸಂದೇಹವು ನನ್ನನ್ನು ಬಾಧಿಸುತ್ತಿದೆ. ಕಾಕುಸ್ಥನು ಕುಶಲೀ, ಸಮರ್ಥನಾಗಿದ್ದಾನೆ. ತನ್ನ ಕೋಪದಿಂದ, ಪ್ರಳಯಾಗ್ನಿ ಜ್ವಾಲೆಗಳಿಂದ ಸಾಗರಗಳಿಂದ ಸುತ್ತುವರಿಯಲ್ಪಟ್ಟ ಇಡೀ ಭೂಮಂಡಲವನ್ನು ಇದುವರೆಗೆ ಏಕೆ ಸುಟ್ಟುಹಾಕಲಿಲ್ಲ? (ಪ್ರಳಯಕಾಲದಲ್ಲಿ ಸಾಗರದ ನೀರು ತುಪ್ಪವಾಗುತ್ತದಂತೆ) ಅಂದರೆ ಜಗತ್ಪ್ರಳಯವನ್ನು ಏಕೆ ಮಾಡಲಿಲ್ಲ?॥13॥
ಮೂಲಮ್ - 14
ಅಥವಾ ಶಕ್ತಿಮಂತೌ ತೌ ಸುರಾಣಾಮಪಿ ನಿಗ್ರಹೇ ।
ಮಮೈವ ತು ನ ದುಃಖಾನಾಮಸ್ತಿ ಮನ್ಯೇ ವಿಪರ್ಯಯಃ ॥
ಅನುವಾದ
ರಾಮ-ಲಕ್ಷ್ಮಣರು ದೇವತೆಗಳನ್ನಾದರೂ ನಿಗ್ರಹಿಸುವ ಸಾಮರ್ಥ್ಯವುಳ್ಳವರು. ಆದರೆ ಸೀತಾಪಹಾರಕನನ್ನು ನಿಗ್ರಹಿಸದೆ ಇರುವುದರಲ್ಲಿ ನನ್ನ ಪಾಪದ ಫಲ ಇನ್ನೂ ಕಳೆಯದೇ ಇರುವುದೇ ಕಾರಣವಿರಬಹುದು.॥14॥
ಮೂಲಮ್ - 15
ಕಚ್ಚಿನ್ನ ವ್ಯಥಿತೋ ರಾಮಃ ಕಚ್ಚಿನ್ನ ಪರಿತಪ್ಯತೇ ।
ಉತ್ತರಾಣಿ ಚ ಕಾರ್ಯಾಣಿ ಕುರುತೇ ಪುರುಷೋತ್ತಮಃ ॥
ಅನುವಾದ
ಪುರುಷಶ್ರೇಷ್ಠನಾದ ರಾಮನು ನನಗಾಗಿ ವ್ಯಥೆಪಡುತ್ತಿಲ್ಲವೇ? ಪರಿತಪಿಸುತ್ತಿಲ್ಲವೇ? ಮುಂದೆ ನನ್ನನ್ನು ಪಡೆಯಲು ಏನನ್ನಾದರೂ ಕಾರ್ಯವನ್ನು ಮಾಡುವನೇ?॥15॥
ಮೂಲಮ್ - 16
ಕಚ್ಚಿನ್ನ ದೀನಃ ಸಂಭ್ರಾಂತಃ ಕಾರ್ಯೇಷು ಚ ನ ಮುಹ್ಯತಿ ।
ಕಚ್ಚಿತ್ ಪುರುಷಕಾರ್ಯಾಣಿ ಕುರುತೇ ನೃಪತೇಃ ಸುತಃ ॥
ಅನುವಾದ
ನನ್ನ ಪತಿಯು ದುಃಖಿತನಾಗಿ, ಅನ್ಯಮನಸ್ಕನಾಗಿ, ಏನನ್ನೂ ತೋಚದೇ ಮಾಡಬೇಕಾಗಿರುವ ಕರ್ತವ್ಯದಲ್ಲಿ ಮೋಹಗೊಂಡಿಲ್ಲ ತಾನೆ? ಪ್ರಯತ್ನಶೀಲನಾಗಿ ಕಾರ್ಯವನ್ನು ಮಾಡುತ್ತಿರುವನೇ?॥16॥
ಮೂಲಮ್ - 17
ದ್ವಿವಿಧಂ ತ್ರಿವಿಧೋಪಾಯಮುಪಾಯಮಪಿ ಸೇವತೇ ।
ವಿಜಿಗೀಷುಃ ಸುಹೃತ್ ಕಚ್ಚಿನ್ ಮಿತ್ರೇಷು ಚ ಪರಂತಪಃ ॥
ಅನುವಾದ
ಶತ್ರುತಾಪಕನಾದ ಶ್ರೀರಾಮನು ಮಿತ್ರರ ವಿಷಯದಲ್ಲಿ ಸ್ನೇಹ-ಭಾವದಿಂದಿರುತ್ತಾ ಸಾಮ-ದಾನಗಳೆಂಬ ಎರಡು ಉಪಾಯಗಳನ್ನು ಆಶ್ರಯಿಸಿರುವನಲ್ಲ? ಶತ್ರುಗಳ ವಿಷಯದಲ್ಲಿ ವಿಜಯಾಪೇಕ್ಷಿಯಾಗಿ ದಾನ-ಭೇದ-ದಂಡಗಳೆಂಬ ಮೂರು ಉಪಾಯಗಳನ್ನು ಪ್ರಯೋಗಿಸುವನಲ್ಲವೇ?॥17॥
ಮೂಲಮ್ - 18
ಕಚ್ಚಿನ್ಮಿತ್ರಾಣಿ ಲಭತೇ ಮಿತ್ರೈಶ್ಚಾಪ್ಯಭಿಗಮ್ಯತೇ ।
ಕಚ್ಚಿತ್ ಕಲ್ಯಾಣಮಿತ್ರಶ್ಚ ಮಿತ್ರೈಶ್ಚಾಪಿ ಪುರಸೃತಃ ॥
ಅನುವಾದ
ಶ್ರೀರಾಮನಿಗೆ ಮಿತ್ರರು ದೊರಕಿರುವರೇ? ಉಪಕಾರವನ್ನು ಹೊಂದಿದ ಅವನ ಮಿತ್ರರು ಪ್ರತ್ಯುಪಕಾರ ಮಾಡಲು ಪುನಃ ಅವನ ಬಳಿಗೆ ಬರುವರೇ? ಅವನ ಮಿತ್ರರು ಕಲ್ಯಾಣ ಗುಣಸಂಪನ್ನರಾಗಿರುವರೇ? ಮಿತ್ರರು ಅವನನ್ನು ಗೌರವಿಸುತ್ತಿದ್ದಾರೋ?॥18॥
ಮೂಲಮ್ - 19
ಕಚ್ಚಿದಾಶಾಸ್ತಿ ದೇವಾನಾಂ ಪ್ರಸಾದಂ ಪಾರ್ಥಿವಾತ್ಮಜಃ ।
ಕಚ್ಚಿತ್ ಪುರುಶಕಾರಂ ಚ ದೈವಂ ಚ ಪ್ರತಿಪದ್ಯತೇ ॥
ಅನುವಾದ
ರಾಜಕುಮಾರನಾದ ಶ್ರೀರಾಮನು ದೇವತೆಗಳ ಅನುಗ್ರಹಕ್ಕಾಗಿ ಅವರನ್ನು ಪ್ರಾರ್ಥಿಸುತ್ತಿರುವನೋ? ಪುರುಷ ಪ್ರಯತ್ನವನ್ನು ಮಾಡಿ ಕಾರ್ಯಸಿದ್ಧಿಗಾಗಿ ದೈವಸಹಾಯವನ್ನು ಪಡೆಯುತ್ತಿರುವನೇ? (ಕಾರ್ಯಸಿದ್ಧಿಗಾಗಿ ಪುರುಷಪ್ರಯತ್ನ ಮತ್ತು ದೈವಾನುಗ್ರಹವು ಆವಶ್ಯಕವಾಗಿದೆ.)॥19॥
ಮೂಲಮ್ - 20
ಕಚ್ಚಿನ್ನ ವಿಗತಸ್ನೇಹಃ ವಿವಾಸಾನ್ಮಯಿ ರಾಘವಃ ।
ಕಚ್ಚಿನ್ಮಾಂ ವ್ಯಸನಾದಸ್ಮಾನ್ ಮೋಕ್ಷಯಿಷ್ಯತಿ ರಾಘವಃ ॥
ಅನುವಾದ
ಎಲೈ ವಾನರಾ! ನನ್ನ ಅಗಲುವಿಕೆಯಿಂದ ಶ್ರೀರಾಮನಿಗೆ ನನ್ನ ಮೇಲಿನ ಪ್ರೀತಿಯು ತೊಲಗಿ ಹೋಗಿಲ್ಲವಲ್ಲ? ಈ ಆಪತ್ತುಗಳಿಂದ ನನ್ನನ್ನು ಮುಕ್ತಿಗೊಳಿಸುತ್ತಾನಲ್ಲಾ?॥20॥
ಮೂಲಮ್ - 21
ಸುಖಾನಾಮುಚಿತೋ ನಿತ್ಯಮಸುಖಾನಾಮನೂಚಿತಃ ।
ದುಃಖಮುತ್ತರಮಾಸಾದ್ಯ ಕಚ್ಚಿದ್ರಾಮೋ ನ ಸೀದತಿ ॥
ಅನುವಾದ
ಶ್ರೀರಾಮನು ಯಾವಾಗಲೂ ಸುಖವಾಗಿರಲು ಅರ್ಹನಾದವನು, ದುಃಖಪಡಲು ಅನರ್ಹನಾದವನು, ಅತಿಯಾದ ದುಃಖವನ್ನು ಹೊಂದಿಯೂ, ಕೃಶನೂ, ಖಿನ್ನನೂ ಆಗಿಲ್ಲವಷ್ಟೇ?॥21॥
ಮೂಲಮ್ - 22
ಕೌಸಲ್ಯಾ ಯಾಸ್ತಥಾ ಕಚ್ಚಿತ್ ಸುಮಿತ್ರಾಯಾಸ್ತಥೈವ ಚ ।
ಅಭೀಕ್ಷ್ಣಂ ಶ್ರೂಯತೇ ಕಚ್ಚಿತ್ ಕುಶಲಂ ಭರತಸ್ಯ ಚ ॥
ಅನುವಾದ
ಕೌಸಲ್ಯಾ-ಸುಮಿತ್ರೆಯರ ಹಾಗೂ ಭರತನ ಕುಶಲವನ್ನು ಆಗಿಂದಾಗ್ಗೆ ಕೇಳಿ ತಿಳಿದುಕೊಳ್ಳುತ್ತಿರುವನಲ್ಲ?॥22॥
ಮೂಲಮ್ - 23
ಮನ್ನಿಮಿತ್ತೇನ ಮಾನಾರ್ಹಃ ಕಚ್ಚಿತ್ ಶೋಕೇನ ರಾಘವಃ ।
ಕಚ್ಚಿನ್ನಾನ್ಯಮನಾ ರಾಮಃ ಕಚ್ಚಿನ್ಮಾಂ ತಾರಯಿಷ್ಯತಿ ॥
ಅನುವಾದ
ಸರ್ವಲೋಕಪೂಜ್ಯನಾದ ರಾಘವನು ನನ್ನ ಸಲುವಾಗಿ ಶೋಕಪಡುತ್ತಿರುವನೇ? ಅನ್ಯಮನಸ್ಕನಾಗಿಲ್ಲ ತಾನೇ? ನಿಶ್ಚಯವಾಗಿಯೂ ರಾಮನು ನನ್ನನ್ನು ಈ ದುಃಖದಿಂದ ಪಾರುಮಾಡುವನೇ?॥23॥
ಮೂಲಮ್ - 24
ಕಚ್ಚಿದಕ್ಷೌಹಣೀಂ ಭೀಮಾಂ ಭರತೋ ಭ್ರಾತೃವತ್ಸಲಃ ।
ಧ್ವಜಿನೀಂ ಮಂತ್ರಿಭಿರ್ಗುಪ್ತಾಂ ಪ್ರೇಷಯಿಶ್ಯತಿ ಮತ್ಕೃತೇ ॥
ಅನುವಾದ
ಭ್ರಾತೃವತ್ಸಲನಾದ ಭರತನು ಮಂತ್ರಿಗಳಿಂದ ರಕ್ಷಿಸಲ್ಪಡುತ್ತಿರುವ ಭಯಂಕರವಾದ ಅಕ್ಷೌಹಿಣಿ ಸೈನ್ಯವನ್ನು ನನ್ನ ವಿಮುಕ್ತಿಗಾಗಿ ಕಳುಹಿಸುವನೇ?॥24॥
ಮೂಲಮ್ - 25
ವಾನರಾಧಿಪತಿಃ ಶ್ರೀಮಾನ್ ಸುಗ್ರೀವಃ ಕಚ್ಚಿದೇಷ್ಯತಿ ।
ಮತ್ಕೃತೇ ಹರಿಭಿರ್ವೀರೈರ್ವೃತೋ ದಂತನಖಾಯುಧೈಃ ॥
ಅನುವಾದ
ಶ್ರೀಮಂತನೂ, ವಾನರಾಧಿಪತಿಯೂ ಆದ ಸುಗ್ರೀವನು ನನ್ನ ಸಲುವಾಗಿ ಹಲ್ಲು ಮತ್ತು ಉಗುರುಗಳೇ ಆಯುಧವುಳ್ಳ ಕಪಿಸೈನ್ಯದೊಂದಿಗೆ ಇಲ್ಲಿಗೆ ಆಗಮಿಸುವನೇ?॥25॥
ಮೂಲಮ್ - 26
ಕಚ್ಚಿಚ್ಚ ಲಕ್ಷ್ಮಣಃ ಶೂರಃ ಸುಮಿತ್ರಾನಂದವರ್ಧನಃ ।
ಅಸ್ತ್ರವಿಚ್ಛರಜಾಲೇನ ರಾಕ್ಷಸಾನ್ ವಿಧಮಿಷ್ಯತಿ ॥
ಅನುವಾದ
ಸುಮಿತ್ರಾದೇವಿಯ ಆನಂದವರ್ಧನೂ, ಶೂರನೂ, ಸರ್ವಾಸ್ತ್ರವಿದನೂ ಆದ ಲಕ್ಷ್ಮಣನು ಬಾಣಗಳ ಸಮೂಹಗಳಿಂದ ರಾಕ್ಷಸರನ್ನು ಧ್ವಂಸ ಮಾಡುವನೇ?॥26॥
ಮೂಲಮ್ - 27
ರೌದ್ರೇಣ ಕಚ್ಚಿದಸ್ತ್ರೇಣ ರಾಮೇಣ ನಿಹತಂ ರಣೇ ।
ದ್ರಕ್ಷ್ಯಾಮ್ಯಲ್ಪೇನ ಕಾಲೇನ ರಾವಣಂ ಸಸುಹೃಜ್ಜನಮ್ ॥
ಅನುವಾದ
ಭಯಂಕರವಾದ ಅಗ್ನಿಯ ಮಳೆಯಂತೆ ಶರಜಾಲದಿಂದ, ಬಂಧು-ಮಿತ್ರ ಪರಿವಾರ ಸಹಿತನಾಗಿ ರಣರಂಗದಲ್ಲಿ ಹತನಾದ ರಾವಣನನ್ನು ನಾನು ಬೇಗನೇ ನೋಡುವೆನೇ?॥27॥
ಮೂಲಮ್ - 28
ಕಚ್ಚಿನ್ನ ತದ್ಧೇಮಸಮಾನವರ್ಣಂ
ತಸ್ಯಾನನಂ ಪದ್ಮಸಮಾನಗಂಧಿ ।
ಮಯಾ ವಿನಾ ಶುಷ್ಯತಿ ಶೋಕದೀನಂ
ಜಲಕ್ಷಯೇ ಪದ್ಮಮಿವಾತಪೇನ ॥
ಅನುವಾದ
ಭಂಗಾರದ ಬಣ್ಣದಂತೆ, ಪದ್ಮ ಪರಿಮಳದಿಂದ ಆಹ್ಲಾದಕರವಾದ ಆ ಶ್ರೀರಾಮನ ಮುಖ ಕಮಲವು ನನ್ನ ಅಗಲುವಿಕೆಯ ಕಾರಣದಿಂದ, ಬತ್ತಿಹೋದ ಸರೋವರದಲ್ಲಿರುವ ಕಮಲದಂತೆ ಬಾಡಿಹೋಗಿಲ್ಲ ತಾನೇ?॥28॥
ಮೂಲಮ್ - 29
ಧರ್ಮಾಪದೇಶಾತ್ತ್ಯಜತಶ್ಚ ರಾಜ್ಯಂ
ಮಾಂ ಚಾಪ್ಯರಣ್ಯಂ ನಯತಃ ಪದಾತಿಮ್ ।
ನಾಸೀದ್ವ್ಯಥಾ ಯಸ್ಯ ನ ಭೀರ್ನ ಶೋಕಃ
ಕಚ್ಚಿತ್ ಸ ಧೈರ್ಯಂ ಹೃದಯೇ ಕರೋತಿ ॥
ಅನುವಾದ
ಧರ್ಮಪಾಲನೆಗಾಗಿ ಸ್ವರಾಜ್ಯವನ್ನು ತ್ಯಜಿಸಿದಾಗ, ನನ್ನನ್ನು ಕಾಲ್ನಡಿಗೆಯಿಂದ ಕಾಡಿಗೆ ಕರತಂದಾಗ, ಶ್ರೀರಾಮನಿಗೆ ಶೋಕವಾಗಲಿ, ವ್ಯಥೆಯಾಗಲೀ, ಭಯವಾಗಲೀ ಇರಲಿಲ್ಲ. ಅಂತಹ ನನ್ನ ಪತಿಯು ನನ್ನ ವಿಯೋಗ ದುಃಖದಿಂದ ಈಗ ಹೃದಯದಲ್ಲಿ ಧೈರ್ಯಗುಂದಿಲ್ಲವಲ್ಲ?॥29॥
ಮೂಲಮ್ - 30
ನ ಚಾಸ್ಯ ಮಾತಾ ನ ಪಿತಾ ಚ ನಾನ್ಯಃ
ಸ್ನೇಹಾದ್ವಿಶಿಷ್ಟೋಽಸ್ತಿ ಮಯಾ ಸಮೋ ವಾ ।
ತಾವತ್ತ್ವಹಂ ದೂತ ಜಿಜೀವಿಷೇಯಂ
ಯಾವತ್ ಪ್ರವೃತ್ತಿಂ ಶ್ರುಣುಯಾಂ ಪ್ರಿಯಸ್ಯ ॥
ಅನುವಾದ
ನಮ್ಮ ದಾಂಪತ್ಯದಲ್ಲಿ ಅನ್ಯೋನ್ಯಾನುರಾಗಗಳು ಅನನ್ಯವು. ಇದರಿಂದಲೇ ಶ್ರೀರಾಮನಿಗೆ ತಾಯಿಯಾಗಲೀ, ತಂದೆಯಾಗಲೀ, ಬೇರೆ ಯಾರೇ ಆಗಲೀ ನನ್ನಷ್ಟು ಪ್ರಿಯರೂ, ನನಗಿಂತ ಹೆಚ್ಚಿನ ಪ್ರಿಯರೂ ಆಗಿರಲಿಲ್ಲ. ಆದುದರಿಂದ ನಾನು ಶ್ರೀರಾಮನು ಕುಶಲಿಯಾಗಿರುವೆನೆಂಬ ವಾರ್ತೆಯನ್ನು ಕೇಳುತ್ತಿರುವವರೆಗೆ ಜೀವಿಸಿರುವೆನು.’’॥30॥
ಮೂಲಮ್ - 31
ಇತೀವ ದೇವೀ ವಚನಂ ಮಹಾರ್ಥಂ
ತಂ ವಾನರೇಂದ್ರಂ ಮಧುರಾರ್ಥಮುಕ್ತ್ವಾ ।
ಶ್ರೋತುಂ ಪುನಸ್ತಸ್ಯ ವಚೋಽಭಿರಾಮಂ
ರಾಮಾರ್ಥಯುಕ್ತಂ ವಿರರಾಮ ರಾಮಾ ॥
ಅನುವಾದ
ಹೀಗೆ ಸೀತಾದೇವಿಯು ವಾನರೇಂದ್ರನಾದ ಹನುಮಂತನಿಗೆ ಮಧುರವಾದ ಮತ್ತು ಮಹತ್ತಾದ ಅರ್ಥದಿಂದ ಕೂಡಿದ್ದ ಮಾತುಗಳನ್ನು ಹೇಳಿ, ಶ್ರೀರಾಮನನ್ನೇ ಮುಖ್ಯವಾಗಿ ಉದ್ದೇಶಿಸಿ ಮನೋಹರವಾಗಿ ಹೇಳುವ ಹನುಮಂತನ ಮಾತನ್ನು ಕೇಳುವ ಬಯಕೆಯಿಂದ ಸುಮ್ಮನಾದಳು.॥31॥
ಮೂಲಮ್ - 32
ಸೀತಾಯಾ ವಚನಂ ಶ್ರುತ್ವಾ ಮಾರುತಿರ್ಭೀಮವಿಕ್ರಮಃ ।
ಶಿರಸ್ಯಂಜಲಿಮಾಧಾಯ ವಾಕ್ಯಮುತ್ತರಮಬ್ರವೀತ್ ॥
ಅನುವಾದ
ಜಾನಕಿದೇವಿಯು ಹೇಳಿದ ಮೃದುಮಧುರ ವಚನಗಳನ್ನು ಕೇಳಿ, ಮಹಾಪರಾಕ್ರಮಿಯಾದ ಮಾರುತಿಯು ವಿನಮ್ರನಾಗಿ, ಅಂಜಲಿಬದ್ಧನಾಗಿ ಅವಳಲ್ಲಿ ಹೀಗೆ ಹೇಳತೊಡಗಿದನು.॥32॥
ಮೂಲಮ್ - 33
ನ ತ್ವಾಮಿಹಸ್ಥಾಂ ಜಾನೀತೇ ರಾಮಃ ಕಮಲಲೋಚನಃ ।
ತೇನ ತ್ವಾಂ ನಾನಯತ್ಯಾಶು ಶಚೀಮಿವ ಪುರಂದರಃ ॥
ಅನುವಾದ
ಎಲೈ ಕಮಲಲೋಚನೇ! ನೀನು ಈ ಲಂಕೆಯಲ್ಲಿ ಇರುವ ಸಂಗತಿ ರಾಮನು ಖಂಡಿತವಾಗಿ ತಿಳಿಯನು. ತಿಳಿದಿದ್ದರೆ ಇಂದ್ರನು ಶಚಿದೇವಿಯನ್ನು ಕರೆತರುವಂತೆ ರಾಮನು ನಿನ್ನನ್ನು ಕರೆದುಕೊಂಡು ಹೋಗುವನು.*॥33॥
ಟಿಪ್ಪನೀ
- ಅನುಹ್ಲಾದನೆಂಬುವನು ಇಂದ್ರಪತ್ನೀ ಶಚಿಯನ್ನು ಅಪಹರಿಸಿಕೊಂಡು ಹೋದನು. ಅವಳು ಎಲ್ಲಿದ್ದಾಳೆ ಎಂಬುದನ್ನು ತಿಳಿಯದ ಇಂದ್ರನು ಅವಳನ್ನು ಶಿಘ್ರವಾಗಿ ಕರಕೊಂಡು ಹೋಗಲು ಸಾಧ್ಯವಾಗಲಿಲ್ಲ. ಕೆಲಕಾಲದಲ್ಲೇ ಅವಳಿರುವ ಸ್ಥಳವು ತಿಳಿದಾಕ್ಷಣ ಅವನು ಅವಳನ್ನು ‘ಅಮರಾವತಿ’ಗೆ ಕರೆದುಕೊಂಡು ಹೋದನು.
ಮೂಲಮ್ - 34
ಶ್ರುತ್ವೈವ ತು ವಚೋ ಮಹ್ಯಂ ಕ್ಷಿಪ್ರಮೇಷ್ಯತಿ ರಾಘವಃ ।
ಚಮೂಂ ಪ್ರಕರ್ಷನ್ ಮಹತೀಂ ಹರ್ಯೃಕ್ಷಗಣಸಂಕುಲಾಮ್ ॥
ಅನುವಾದ
ನನ್ನ ಈ ಮಾತನ್ನು ಕೇಳುತ್ತಲೇ ಶ್ರೀರಾಮನು ಶೀಘ್ರವಾಗಿ ವಾನರ-ಭಲ್ಲೂಕರ ಮಹಾ ಸೈನ್ಯದೊಂದಿಗೆ ಇಲ್ಲಿಗೆ ಹೊತ್ತುಗಳೆಯದೆ ಬರುವನು.॥34॥
ಮೂಲಮ್ - 35
ವಿಷ್ಟಂಭಯಿತ್ವಾ ಬಾಣೌಘೈರಕ್ಷೋಭ್ಯಂ ವರುಣಾಲಯಮ್ ।
ಕರಿಷ್ಯತಿ ಪುರೀಂ ಲಂಕಾಂ ಕಾಕುತ್ಸ್ಥಃ ಶಾಂತರಾಕ್ಷಸಾಮ್ ॥
ಅನುವಾದ
ಕದಲಿಸಲು ಅವಶ್ಯವಾದ ಮಹಾ ಸಮುದ್ರವನ್ನು ಬಾಣಗಳ ಸಮೂಹಗಳಿಂದ ಸ್ತಂಭನಗೊಳಿಸಿ, ಲಂಕಾ ನಗರದಲ್ಲಿರುವ ಎಲ್ಲ ರಾಕ್ಷಸರನ್ನು ಭಸ್ಮ ಮಾಡುವನು.॥35॥
ಮೂಲಮ್ - 36
ತತ್ರ ಯದ್ಯಂತರಾ ಮೃತ್ಯುರ್ಯದಿ ದೇವಾಃ ಮಹಾಸುರಾಃ ।
ಸ್ಥಾಸ್ಯಂತಿ ಪಥಿ ರಾಮಸ್ಯ ಸ ತಾನಪಿ ವಧಿಷ್ಯತಿ ॥
ಅನುವಾದ
ಅವನು ಲಂಕಾ ಪಟ್ಟಣವನ್ನು ಧ್ವಂಸಮಾಡುತ್ತಿರುವಾಗ ಅವನನ್ನು ತಡೆಯಲು, ಮೃತ್ಯುವಾಗಲಿ, ದೇವತೆಗಳಾಗಲೀ, ಮಹಾಸುರರೇ ಆಗಲಿ, ಆಗಮಿಸಿದರೂ ಅವರೆಲ್ಲರನ್ನೂ ಶ್ರೀರಾಮನು ಸಂಹರಿಸಿ ಬಿಡುವನು.॥36॥
ಮೂಲಮ್ - 37
ತವಾದರ್ಶನಜೇನಾರ್ಯೇ ಶೋಕೇನ ಸ ಪರಿಪ್ಲುತಃ ।
ನ ಶರ್ಮ ಲಭತೇ ರಾಮಃ ಸಿಂಹಾರ್ದಿತ ಇವ ದ್ವಿಪಃ ॥
ಅನುವಾದ
ಆರ್ಯಳೇ! ನಿನ್ನನ್ನು ನೋಡದೇ ಇರುವುದರಿಂದ ಶೋಕಾಕುಲನಾದ ಶ್ರೀರಾಮನು ಸಿಂಹಪೀಡಿತವಾದ ಆನೆಯಂತೆ ದುಃಖ ಪಡುತ್ತಿದ್ದಾನೆ. ಅವನಿಗೆ ಸುಖವೆಂಬುದೇ ಇಲ್ಲವಾಗಿದೆ.॥37॥
ಮೂಲಮ್ - 38
ಮಲಯೇನ ಚ ವಿಂಧ್ಯೇನ ಮೇರುಣಾ ಮಂದರೇಣ ಚ ।
ದರ್ದುರೇಣ ಚ ತೇ ದೇವೀ ಶಪೇ ಮೂಲಫಲೇನ ಚ ॥
ಮೂಲಮ್ - 39
ಯಥಾ ಸುನಯನಂ ವಲ್ಗು ಬಿಂಬೋಷ್ಠಂ ಚಾರುಕುಂಡಲಮ್ ।
ಮುಖಂ ದ್ರಕ್ಷ್ಯಸಿ ರಾಮಸ್ಯ ಪೂರ್ಣಚಂದ್ರಮಿವೋದಿತಮ್ ॥
ಅನುವಾದ
‘‘ಎಲೈ ದೇವಿ! ಚೆಲುವಾದ ಕಣ್ಣುಳ್ಳವನೂ, ಸುಂದರವಾಗಿಯೂ, ತೊಂಡೆಹಣ್ಣಿನಂತೆಯೂ ಇರುವ ತುಟಿಗಳುಳ್ಳವನೂ, ಸುಂದರವಾದ ಕುಂಡಲಗಳಿಂದ ವಿಭೂಷಿತನಾಗಿರುವವನೂ, ಆಗ ತಾನೇ ಉದಯಿಸಿದ ಹುಣ್ಣಿಮೆಯ ಚಂದ್ರನಂತೆ ಆಹ್ಲಾದಕರನಾಗಿರುವ ಶ್ರೀರಾಮನ ಮುಖವನ್ನು ನೀನು ಖಂಡಿತವಾಗಿ ಕಾಣಲಿರುವೆ. ಇದರ ಬಗ್ಗೆ ನಾನು ಸಂಚರಿಸುವ ಸುಂದರಮಲಯ, ಮೇರು, ದರ್ದುರ ಪರ್ವತಗಳ ಮೇಲೆ, ನನ್ನ ಪ್ರಾಣಾಧಾರವಾದ ಕಂದ - ಮೂಲ - ಫಲಗಳ ಮೇಲೆ ಆಣೆಯಿಟ್ಟು ಹೇಳುತ್ತೇನೆ.॥38-39॥
ಮೂಲಮ್ - 40
ಕ್ಷಿಪ್ರಂ ದ್ರಕ್ಷ್ಯಸಿ ವೈದೇಹಿ ರಾಮಂ ಪ್ರಸ್ರವಣೇ ಗಿರೌ ।
ಶತಕ್ರತುಮಿವಾಸೀನಂ ನಾಕಪ್ರಷ್ಠಸ್ಯ ಮೂರ್ಧನಿ ॥
ಅನುವಾದ
ವೈದೇಹೀ! ಐರಾವತದ ಮೇಲೆ ಕುಳಿತಿರುವ ಇಂದ್ರನಂತೆ, ಪ್ರಸ್ರವಣ ಪರ್ವತ ಮೇಲೆ ವಿರಾಜಿಸುತ್ತಿರುವ ಶ್ರೀರಾಮನನ್ನು ನೀನು ಬಹಳ ಬೇಗನೇ ಕಾಣಲಿರುವೆ.॥40॥
ಮೂಲಮ್ - 41
ನ ಮಾಂಸಂ ರಾಘವೋ ಭುಂಕ್ತೇ ನ ಚಾಪಿ ಮಧು ಸೇವತೇ ।
ವನ್ಯಂ ಸುವಿಹಿತಂ ನಿತ್ಯಂ ಭಕ್ತಮಶ್ನಾತಿ ಪಂಚಮಮ್ ॥
ಅನುವಾದ
ರಾಘವನು ಮಾಂಸವನ್ನು ಎಂದೂ ಮುಟ್ಟುವುದಿಲ್ಲ. ಮಧುವನ್ನು ಕುಡಿಯುವುದಿಲ್ಲ. ವನವಾಸಿಗಳಾದ ವಾನಪ್ರಸ್ಥರಿಗೆ* ವಿಹಿತವಾದ, ಸಾತ್ವಿಕವಾದ ವನ್ಯಫಲಗಳನ್ನು, ಕಂದಮೂಲಗಳನ್ನು ಐದುಭಾಗ ಮಾಡಿ, ಅದರಲ್ಲಿನ ಐದನೆಯ ಭಾಗವನ್ನು ಪ್ರತಿದಿನವು ಸಾಯಂಕಾಲದಲ್ಲಿ ಶರೀರ ಧಾರಣೆಗಾಗಿ ಮಾತ್ರ ತಿನ್ನುವನು.॥41॥
ಟಿಪ್ಪನೀ
- ವಾನಪ್ರಸ್ಥರು ಆಹಾರ ಪದಾರ್ಥಗಳನ್ನು ಐದು ಭಾಗಮಾಡಿ, ಮೊದಲನೆಯ ನಾಲ್ಕು ಭಾಗಗಳನ್ನು ದೇವತೆಗಳಿಗೆ, ಪಿತೃದೇವತೆಗಳಿಗೆ, ಅತಿಥಿಗಳಿಗೆ ಮತ್ತು ಭೂತ-ಪ್ರಾಣಿಗಳಿಗೆ ಅರ್ಪಿಸಿ, ಉಳಿದ ಐದನೆಯ ಭಾಗವನ್ನು ಸ್ವೀಕರಿಸುವರು. (ಗೋವಿಂದರಾಜೀಯ ವ್ಯಾಖ್ಯಾ)
ಮೂಲಮ್ - 42
ನೈವ ದಂಶಾನ್ನ ಮಶಕಾನ್ನ ಕೀಟಾನ್ನ ಸರೀಸೃಪಾನ್ ।
ರಾಘವೋಽಪನಯೇದ್ಧಾತ್ರಾತ್ತ್ವದ್ಗತೇನಾಂತರಾತ್ಮನಾ ॥
ಅನುವಾದ
ಯಾವಾಗಲೂ ನಿನ್ನಲ್ಲಿಯೇ ನೆಟ್ಟಿರುವ ಮನಸ್ಸುಳ್ಳ ಶ್ರೀರಾಮನು ತನ್ನ ಮೈಮೇಲೆ ಕುಳಿತುಕೊಳ್ಳುವ ನೊಣಗಳನ್ನಾಗಲೀ, ಸೊಳ್ಳೆಗಳನ್ನಾಗಲೀ, ಹರಿದಾಡುವ ಜೀವಿಗಳನ್ನಾಗಲೀ, ಕ್ರಿಮಿ-ಕೀಟಗಳನ್ನಾಗಲೀ ಓಡಿಸಲೂ ಕೂಡ ಪ್ರಯತ್ನಿಸುವುದಿಲ್ಲ.॥42॥
ಮೂಲಮ್ - 43
ನಿತ್ಯಂ ಧ್ಯಾನವರೋ ರಾಮೋ ನಿತ್ಯಂ ಶೋಕಪರಾಯಣಃ ।
ನಾನ್ಯಚ್ಚಿಂತಯತೇ ಕಿಂಚಿತ್ ಸ ತು ಕಾಮವತಂ ಗತಃ ॥
ಅನುವಾದ
ಅವನು ನಿತ್ಯವೂ ನಿನ್ನ ಯೋಚನೆಯಲ್ಲಿಯೇ ಮಗ್ನನಾಗಿರುವನು. ನಿನ್ನ ವಿರಹ ಶೋಕದಲ್ಲಿಯೇ ಮುಳುಗಿ ಹೋಗಿರುವನು. ನಿನ್ನನ್ನು ಕಾಣಬೇಕೆಂಬ ಉತ್ಕಟವಾದ ಆಸೆಗೆ ವಶನಾಗಿರುವ ಶ್ರೀರಾಮನು ನಿನ್ನನ್ನು ಬಿಟ್ಟು ಬೇರೆ ಏನನ್ನೂ ಯೋಚಿಸುವುದಿಲ್ಲ. ॥43॥
ಮೂಲಮ್ - 44
ಅನಿದ್ರಃ ಸತತಂ ರಾಮಃ ಸುಪ್ತೋಽಪಿ ಚ ನರೋತ್ತಮಃ ।
ಸೀತೇತಿ ಮಧುರಾಂ ವಾಣೀಂ ವ್ಯಾಹರನ್ ಪ್ರತಿಬುದ್ಯತೇ ॥
ಅನುವಾದ
ಅವನು ನಿದ್ರೆಯನ್ನೇ ಮಾಡುತ್ತಿಲ್ಲ. ಕೆಲವು ವೇಳೆ ನಿದ್ದೆಯ ಜೋಂಪು ಹಿಡಿದರೂ ‘‘ಸೀತಾ! ಸೀತಾ!’’ ಎಂದು ಮಧುರವಾದ ಧ್ವನಿಯಲ್ಲಿ ಹಂಬಲಿಸುತ್ತಾ ಎಚ್ಚರಗೊಳ್ಳುತ್ತಾನೆ.॥44॥
ಮೂಲಮ್ - 45
ದೃಷ್ಟ್ವಾ ಫಲಂ ವಾ ಪುಷ್ಪಂ ವಾ ಯದ್ವಾನ್ಯತ್ ಸುಮನೋಹರಮ್ ।
ಬಹುಶೋ ಹಾ ಪ್ರಿಯೇತ್ವೇವಂ ಶ್ವಸಂಸ್ತ್ವಾಮಭಿಭಾಷತೇ ॥
ಅನುವಾದ
ಎಂದಾದರೂ ಫಲವನ್ನಾಗಲೀ, ಪುಷ್ಪವನ್ನಾಗಲೀ, ಮನೋಹರವಾದ ಬೇರೆ ವಸ್ತುವನ್ನು ನೋಡಿದರೆ ‘‘ಪ್ರಿಯ! ಪ್ರಿಯೆ!’’ ನೀನು ಇಲ್ಲಿರುವೆಯಾ? ಎಂದು ಹೇಳುತ್ತಾ ನಿಟ್ಟುಸಿರುಬಿಡುತ್ತಿರುತ್ತಾನೆ.॥45॥
ಮೂಲಮ್ - 46
ಸ ದೇವಿ ನಿತ್ಯಂ ಪರಿತಪ್ಯಮಾನ
ಸ್ತ್ವಾಮೇವ ಸೀತೇತ್ಯಭಿಭಾಷಮಾಣಃ ।
ಧೃತವ್ರತೋ ರಾಜಸುತೋ ಮಹಾತ್ಮಾ
ತವೈವ ಲಾಭಾಯ ಕೃತಪ್ರಯತ್ನಃ ॥
ಅನುವಾದ
ಎಲೈ ದೇವೀ! ಮಹಾತ್ಮನಾದ ಆ ರಾಜಕುಮಾರನು ಯಾವಾಗಲೂ ಸೀತೇ! ಸೀತೇ! ಎಂದು ಪರಿಪರಿಯಾಗಿ, ನೀನು ಸಮೀಪದಲ್ಲಿರದಿದ್ದರರೂ ಪರಿತಪಿಸುತ್ತಾ ಇರುತ್ತಾನೆ. ಅವನು ಕಠಿಣವಾದ ನಿಯಮಗಳನ್ನು ಆಚರಿಸುತ್ತಾ ನಿನ್ನನ್ನು ಪಡೆಯಲು ಪ್ರಯತ್ನಿಸುತ್ತಿರುತ್ತಾನೆ.॥46॥
ಮೂಲಮ್ - 47
ಸಾ ರಾಮಸಂಕೀರ್ತನವೀತಶೋಕಾ
ರಾಮಸ್ಯ ಶೋಕೇನ ಸಮಾನಶೋಕಾ ।
ಶರನ್ಮುಖೇ ಸಾಂಬುದಶೇಷಚಂದ್ರಾ
ನಿಶೇವ ವೈದೇಹಸುತಾ ಬಭೂವ ॥
ಅನುವಾದ
ಶ್ರೀರಾಮನ ಗುಣ ಸಂಕೀರ್ತನ ಶ್ರವಣ ಪ್ರಭಾವದಿಂದ ವೈದೇಹಿಯ ಶೋಕವು ತೊಲಗಿಹೋಯಿತು. ಆದರೆ ಶ್ರೀರಾಮನು ಶೋಕಮಗ್ನನಾಗಿರುವನೆಂದು ಕೇಳಿ, ಅವಳು ಶೋಕಮಗ್ನಳಾದಳು. ಶರತ್ಕಾಲದ ಪ್ರಾರಂಭದಲ್ಲಿ ಮೇಘಗಳಿಂದ ಮುಚ್ಚಿದ ಚಂದ್ರನು ಪ್ರಕಾಶಿಸುವುದಿಲ್ಲ. ಮೇಘಗಳು ತೊಲಗಿಹೋದಾಗ ಪ್ರಕಾಶಿಸುವಂತೆ, ಸೀತಾದೇವಿಯ ಸ್ಥಿತಿಯು ಶರತ್ಕಾಲದ ರಾತ್ರಿಯಂತೆ ಕಾಣುತ್ತಿತ್ತು.॥47॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಷಟ್ತ್ರಿಂಶಃ ಸರ್ಗಃ ॥ 36 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತಾರನೆಯ ಸರ್ಗವು ಮುಗಿಯಿತು.