वाचनम्
ಭಾಗಸೂಚನಾ
ಸೀತಾದೇವಿಯ ಪ್ರಶ್ನೆಗಳಿಗೆ ಶ್ರೀರಾಮನ ಶರೀರದಲ್ಲಿದ್ದ ಶುಭಲಕ್ಷಣಗಳನ್ನು ಹನುಮಂತನು ವಿವರಿಸಿ ಹೇಳಿದುದು, ನರ-ವಾನರರ ಮೈತ್ರಿಯ ಪ್ರಸಂಗವನ್ನು ಕೇಳಿದ ನಂತರ ಸೀತಾದೇವಿಗೆ ಹನುಮಂತನ ಮೇಲೆ ವಿಶ್ವಾಸ ಹುಟ್ಟಿದುದು
ಮೂಲಮ್ - 1
ತಾಂ ತು ರಾಮಕಥಾಂ ಶ್ರುತ್ವಾ ವೈದೇಹೀ ವಾನರರ್ಷಭಾತ್ ।
ಉವಾಚ ವಚನಂ ಸಾಂತ್ವಂ ಇದಂ ಮಧುರಯಾ ಗಿರಾ ॥
ಅನುವಾದ
ವೈದೇಹಿಯು ವಾನರಶ್ರೇಷ್ಠನಾದ ಹನುಮಂತನಿಂದ ಶ್ರೀರಾಮನ ಕಥೆಯನ್ನು ಕೇಳಿದ ಬಳಿಕ ಮಧುರವಾದ ಧ್ವನಿಯಿಂದ ಸಮಾಧಾನಕರವಾದ ಮಾತನ್ನು ಹೇಳಿದಳು.॥1॥
ಮೂಲಮ್ - 2
ಕ್ವತೇ ರಾಮೇಣ ಸಂಸರ್ಗಃ ಕಥಂ ಜಾನಾಸಿ ಲಕ್ಷ್ಮಣಮ್ ।
ವಾನರಾಣಾಂ ನರಾಣಾಂ ಚ ಕಥಮಾಸೀತ್ ಸಮಾಗಮಃ ॥
ಅನುವಾದ
ಹನುಮಂತನೇ! ನಿನಗೆ ಶ್ರೀರಾಮನೊಡನೆ ಪರಿಚಯವು ಹೇಗೆ ಏರ್ಪಟಿತು? ಲಕ್ಷ್ಮಣನ ಪರಿಚಯ ಹೇಗಾಯಿತು? ನರ-ವಾನರರ ಸಮಾಗಮವು ಹೇಗೆ ಜರುಗಿತು?॥2॥
ಮೂಲಮ್ - 3
ಯಾನಿ ರಾಮಸ್ಯ ಲಿಂಗಾನಿ ಲಕ್ಷ್ಮಣಸ್ಯ ಚ ವಾನರ ।
ತಾನಿ ಭೂಯಃ ಸಮಾಚಕ್ಷ್ವ ನ ಮಾಂ ಶೋಕಃ ಸಮಾವಿಶೇತ್ ॥
ಅನುವಾದ
ಎಲೈ ವಾನರೋತ್ತಮಾ! ಶ್ರೀರಾಮ ಲಕ್ಷ್ಮಣರ ಶರೀರದಲ್ಲಿ ಯಾವ-ಯಾವ ಚಿಹ್ನೆಗಳಿವೆ? ನೀನು ಈ ವಿಷಯವನ್ನು ವಿವರಿಸಿ ಹೇಳಿದರೆ ನನ್ನ ಶೋಕವು ದೂರವಾಗುವುದು. ನೀನು ರಾಮನ ದೂತನೆಂಬ ಪೂರ್ಣವಿಶ್ವಾಸ ಉಂಟಾದೀತು.॥3॥
ಮೂಲಮ್ - 4
ಕೀದೃಶಂ ತಸ್ಯ ಸಂಸ್ಥಾನಂ ರೂಪಂ ರಾಮಸ್ಯ ಕೀದೃಶಮ್ ।
ಕಥಮೂರೂ ಕಥಂ ಬಾಹೂ ಲಕ್ಷ್ಮಣಸ್ಯ ಚ ಶಂಸ ಮೇ ॥
ಅನುವಾದ
ರಾಮ-ಲಕ್ಷ್ಮಣರ ಶರೀರ ಸೌಷ್ಠವಗಳು ಹೇಗಿವೆ? ಅವರ ರೂಪ-ಲಕ್ಷಣಗಳು ಹೇಗಿವೆ? ಅವರ ತೊಡೆಗಳೂ, ತೋಳುಗಳೂ ಹೇಗಿವೆ? ಈ ಎಲ್ಲವನ್ನು ವಿವರಿಸಿ ಹೇಳು.॥4॥
ಮೂಲಮ್ - 5
ಏವಮುಕ್ತಸ್ತು ವೈದೇಹ್ಯಾ ಹನುಮಾನ್ ಪವನಾತ್ಮಜಃ ।
ತತೋ ರಾಮಂ ಯಥಾತತ್ತ್ವಮಾಖ್ಯಾತುಮುಪಚಕ್ರಮೇ ॥
ಅನುವಾದ
ವೈದೇಹಿಯ ಪ್ರಶ್ನೆಗಳಿಗೆ ವಾಯುಪುತ್ರನಾದ ಹನುಮಂತನು ಶ್ರೀರಾಮನ ರೂಪ-ಲಕ್ಷಣಗಳನ್ನು ಯಥಾವತ್ತಾಗಿ ವರ್ಣಿಸತೊಡಗಿದನು.॥5॥
ಮೂಲಮ್ - 6
ಜಾನಂತಿ ಬತ ದಿಷ್ಟ್ವಾ ಮಾಂ ವೈದೇಹಿ ಪರಿಪೃಚ್ಛಸಿ ।
ಭರ್ತುಃ ಕಮಲಪತ್ರಾಕ್ಷಿ ಸಂಸ್ಥಾನಂ ಲಕ್ಷ್ಮಣಸ್ಯ ಚ ॥
ಅನುವಾದ
‘‘ಕಮಲಪತ್ರಾಕ್ಷಿಯೇ! ಎಲೈ ವೈದೇಹಿ! ಪತಿಯಾದ ಶ್ರೀರಾಮನ ಮತ್ತು ಲಕ್ಷ್ಮಣನ ಅವಯವ ಸೌಭಾಗ್ಯಗಳನ್ನು ನೀನು ತಿಳಿದಿರುವೆ. ಆದರೂ ಕೂಡ ನನ್ನನ್ನು ಕೇಳಿದುದು ನನ್ನ ಅದೃಷ್ಟವೇ, ತುಂಬಾ ಸಂತೋಷ.॥6॥
ಮೂಲಮ್ - 7
ಯಾನಿ ರಾಮಸ್ಯ ಚಿಹ್ನಾನಿ ಲಕ್ಷ್ಮಣಸ್ಯ ಚ ಯಾನಿ ವೈ ।
ಲಕ್ಷಿತಾನಿ ವಿಶಾಲಾಕ್ಷಿ ವದತಃ ಶೃಣು ತಾನಿ ಮೇ ॥
ಅನುವಾದ
ವಿಶಾಲಾಕ್ಷಿಯೇ! ಶ್ರೀರಾಮನ ಶುಭ ಲಕ್ಷಣಗಳನ್ನು, ಲಕ್ಷ್ಮಣನ ಚಿಹ್ನೆಗಳನ್ನು ನನಗೆ ತಿಳಿದ ಮಟ್ಟಿಗೆ ವಿವರಿಸಿ ಹೇಳುವೆನು; ಕೇಳು. (ನೀನು ತಿಳಿದುಕೊಂಡಿರುವುದನ್ನೇ ನಾನು ಯಥಾರ್ಥವಾಗಿ ಹೇಳಿದರೆ ನನ್ನ ವಿಷಯದಲ್ಲಿ ವಿಶ್ವಾಸಹುಟ್ಟುವುದು ಸಹಜ.)॥7॥
ಮೂಲಮ್ - 8
ರಾಮಃ ಕಮಲಪತ್ರಾಕ್ಷಃ ಸರ್ವಸತ್ತ್ವ ಮನೋಹರಃ ।
ರೂಪದಾಕ್ಷಿಣ್ಯಸಂಪನ್ನಃ ಪ್ರಸೂತೋ ಜನಕಾತ್ಮಜೇ ॥
ಅನುವಾದ
ಎಲೈ ಜನಕನಂದಿನಿಯೇ! ಶ್ರೀರಾಮನು ಕಮಲ ಪತ್ರದಂತೆ ಕಣ್ಣುಗಳುಳ್ಳವನು. ತನ್ನ ನಿರುಪಮ ಕಾಂತಿಯಿಂದ ಸಮಸ್ತ ಪ್ರಾಣಿಗಳಿಗೆ ಆನಂದವನ್ನು ಕೊಡುವವನು. ರೂಪಸಂಪನ್ನನು. ಸಹಜ ಸೌಜನ್ಯ ಸಂಪನ್ನನು.॥8॥
ಮೂಲಮ್ - 9
ತೇಜಸಾಽಽದಿತ್ಯಸಂಕಾಶಃ ಕ್ಷಮಯಾ ಪೃಥಿವೀಸಮಃ ।
ಬೃಹಸ್ಪತಿಸಮೋ ಬುದ್ಧ್ಯಾ ಯಶಸಾ ವಾಸವೋಪಮಃ ॥
ಅನುವಾದ
ಅವನು ತೇಜಸ್ಸಿನಲ್ಲಿ ಸೂರ್ಯನಂತಿರುವನು. ಸಹನೆಯಲ್ಲಿ ಭೂದೇವಿಯಂತೆಯೂ, ಬುದ್ಧಿಯಲ್ಲಿ ಬೃಹಸ್ಪತಿಯಂತೆಯೂ ಯಶಸ್ವಿನಲ್ಲಿ ದೇವೇಂದ್ರನಿಗೆ ಸಮಾನನಾಗಿರುವನು.॥9॥
ಮೂಲಮ್ - 10
ರಕ್ಷಿತಾ ಜೀವಲೋಕಸ್ಯ ಸ್ವಜನಸ್ಯ ಚ ರಕ್ಷಿತಾ ।
ರಕ್ಷಿತಾ ಸ್ವಸ್ಯ ವೃತ್ತಸ್ಯ ಧರ್ಮಸ್ಯ ಚ ಪರಂತಪಃ ॥
ಅನುವಾದ
ಪರಂತಪನಾದ ಶ್ರೀರಾಮನು ಜೀವಲೋಕಕ್ಕೆ ರಕ್ಷಕನು. ಆಶ್ರಿತರಾದ (ಶರಣಾಗತರಾದ)ವರನ್ನು ಪರಿರಕ್ಷಿಸುವವನು. ತನ್ನ ಚಾರಿತ್ರ್ಯವನ್ನು ರಕ್ಷಿಸಿಕೊಳ್ಳುವವನು. ಅಂತೆಯೇ ಧರ್ಮದ ರಕ್ಷಕನೂ ಆಗಿರುವನು.॥10॥
ಮೂಲಮ್ - 11
ರಾಮೋ ಭಾಮಿನಿ ಲೋಕೇಸ್ಮಿಂಶ್ಚಾ ತುರ್ವರ್ಣ್ಯಸ್ಯ ರಕ್ಷಿತಾ ।
ಮರ್ಯಾದಾನಾಂ ಚ ಲೋಕಸ್ಯ ಕರ್ತಾ ಕಾರಯಿತಾ ಚ ಸಃ ॥
ಅನುವಾದ
ಎಲೈ ಸೀತಾದೇವಿಯೇ! ಶ್ರೀರಾಮನು ಚಾತುರ್ವರ್ಣ್ಯ ಧರ್ಮಗಳ ರಕ್ಷಕನು. ಲೋಕಮರ್ಯಾದೆಗಳನ್ನು ತಾನು ಪಾಲಿಸುತ್ತಾ, ಪ್ರಜೆಗಳಿಂದ ಪಾಲಿಸುವಂತೆ ಪ್ರವರ್ತಿಸುವವನು.॥11॥
ಮೂಲಮ್ - 12
ಅರ್ಚಿಷ್ಮಾನರ್ಚಿತೋ ನಿತ್ಯಂ ಬ್ರಹ್ಮಚರ್ಯವ್ರತೇ ಸ್ಥಿತಃ ।
ಸಾಧೂನಾಮುಪಕಾರಜ್ಞಃ ಪ್ರಚಾರಜ್ಞಶ್ಚ ಕರ್ಮಣಾಮ್ ॥
ಅನುವಾದ
ಕಾಂತಿವಂತನೂ, ಸರ್ವಲೋಕಗಳಿಗೆ ಅತ್ಯಂತ ಪೂಜ್ಯನೂ, ಬ್ರಹ್ಮಚರ್ಯ ವ್ರತವನ್ನು ಪಾಲಿಸುವವನೂ, ಸತ್ಪುರುಷರು ಮಾಡಿದ ಉಪಕಾರವನ್ನು ಮರೆಯದಿರುವವನೂ, ವ್ಯವಹಾರ ಜ್ಞಾನ ಸಂಪನ್ನನೂ, ಲೋಕಕಲ್ಯಾಣಕ್ಕಾಗಿ ಕರ್ಮಗಳನ್ನು ಆಚರಿಸುವವನೂ ಆಗಿದ್ದಾನೆ.॥12॥
ಮೂಲಮ್ - 13
ರಾಜವಿದ್ಯಾವಿನೀತಶ್ಚ ಬ್ರಾಹ್ಮಣಾನಾಮುಪಾಸಿತಾ ।
ಶ್ರುತವಾನ್ ಶೀಲಸಂಪನ್ನೋ ವಿನೀತಶ್ಚ ಪರಂತಪಃ ॥
ಅನುವಾದ
ರಾಜವಿದ್ಯಾ ಕುಶಲನೂ,* ಬ್ರಾಹ್ಮಣರನ್ನು ಆದರಿಸುವವನೂ, ಸರ್ವವಿದ್ಯಾ ಪಾರಂಗತನೂ, ಸದಾಚಾರ ಸಂಪನ್ನನೂ, ವಿನಯಶೀಲನೂ, ಶತ್ರುತಾಪಕನೂ ಆಗಿರುವನು.॥13॥
ಟಿಪ್ಪನೀ
- ಆನ್ವೀಕ್ಷಕೀ ತ್ರಯೀ ವಾರ್ತಾ ದಂಡನೀತಿಶ್ಚ ಶಾಶ್ವತೀ ಏತಾವಿದ್ಯಾ ಚತಸ್ರಸ್ತು ಲೋಕಸಂಸ್ಥಿತಿ ಹೇತವಃ ॥
ಮೂಲಮ್ - 14
ಯಜುರ್ವೇದವಿನೀತಶ್ಚ ವೇದವಿದ್ಧಿಃ ಸುಪೂಜಿತಃ ।
ಧನುರ್ವೇದೇ ಚ ವೇದೇಷು ವೇದಾಂಗೇಷು ಚ ನಿಷ್ಠಿತಃ ॥
ಅನುವಾದ
ರಾಮನು ಯಜುರ್ವೇದದಲ್ಲಿ ಪಾರಂಗತನೂ ವೇದವಿದರಿಂದ ಪೂಜಿಸಲ್ಪಡುವವನೂ, ಧರ್ನುರ್ವೇದವನ್ನು, ಋಕ್ಸಾಮಾಥರ್ವಣ ವೇದಗಳನ್ನು ತಿಳಿದವನೂ, ಶಿಕ್ಷಾ-ವ್ಯಾಕರಣಾದಿ ವೇದಾಂಗಗಳಲ್ಲಿಯೂ ನಿಷ್ಣಾತನು.॥14॥
ಮೂಲಮ್ - 15
ವಿಪುಲಾಂಸೋ ಮಹಾಬಾಹುಃ ಕಂಬುಗ್ರೀವಃ ಶುಭಾನನಃ ।
ಗೂಢಜತ್ರುಃ ಸುತಾಮ್ರಾಕ್ಷೋ ರಾಮೋ ದೇವಿ ಜನೈಃ ಶ್ರುತಃ ॥
ಅನುವಾದ
ದೇವೀ! ರಾಮನೆಂಬ ಹೆಸರಿನಿಂದ ವಿಖ್ಯಾತನಾಗಿರುವ ನಿನ್ನ ಪತಿಯು ವಿಸ್ತಾರವಾದ ಹೆಗಲುಳ್ಳವನೂ, ಮಹಾಬಾಹು. ಶಂಖದಂತೆ ಕುತ್ತಿಗೆಯುಳ್ಳವನು. ಸುಂದರವಾದ ಮುಖವುಳ್ಳವನೂ, ಮುಚ್ಚಿಹೋದ ಜತ್ರು (ಶಿರಸ್ಸು-ಭುಜಗಳ ಸಂಧಿ)ವುಳ್ಳವನೂ, ಮನೋಹರವಾಗಿಯೂ, ಕೆಂಪಾಗಿಯೂ ಇರುವ ಕಣ್ಣುಗಳುಳ್ಳವನಾಗಿದ್ದಾನೆ.॥15॥
ಮೂಲಮ್ - 16
ದುಂದುಭಿಸ್ವನನಿರ್ಘೋಷಃ ಸ್ನಿಗ್ಧವರ್ಣಃ ಪ್ರತಾಪವಾನ್ ।
ಸಮಃ ಸಮವಿಭಕ್ತಾಂಗೋ ವರ್ಣಂ ಶ್ಯಾಮಂ ಸಮಾಶ್ರಿತಃ ॥
ಅನುವಾದ
ಅವನು ದುಂದುಭಿ ಧ್ವನಿಯಂತೆ ಗಂಭೀರವಾದ ಕಂಠಸ್ವರವುಳ್ಳವನೂ, ಳಳಿಸುತ್ತಿರುವ ದೇಹದ ಕಾಂತಿಯುಳ್ಳವನೂ, ಪ್ರತಾಪಶಾಲಿಯೂ, ಹೆಚ್ಚು-ಕಡಿಮೆಗಳಿಲ್ಲದೆ ಪರಿಪುಷ್ಟವಾದ ಅವಯವಗಳುಳ್ಳವನೂ, ಮೇಘಶ್ಯಾಮವರ್ಣದಿಂದ ಶೋಭಿತನು ಆಗಿರುವನು.॥16॥
ಮೂಲಮ್ - 17
ತ್ರಿಸ್ಥಿರಸಿಪ್ರಲಂಬಶ್ಚ ತ್ರಿಸಮಸ್ತ್ರಿಷು ಚೋನ್ನತಃ ।
ತ್ರಿತಾಮ್ರಸ್ತ್ರಿಷು ಚ ಸ್ನಿಗ್ಧೋಗಂಭೀರಸ್ತ್ರಿಷು ನಿತ್ಯಶಃ ॥
ಅನುವಾದ
ಶ್ರೀರಾಮನ ಅವಯವಗಳಲ್ಲಿ ವಕ್ಷಃಸ್ಥಳ, ಮಣಿಕಟ್ಟು ಮತ್ತು ಮುಷ್ಟಿಗಳು ಈ ಮೂರು ಸ್ಥಾನಗಳು ಸ್ಥಿರವಾಗಿದ್ದವು1. (ಇವು ರಾಜಲಕ್ಷಣಗಳು). ಹುಬ್ಬುಗಳು, ತೋಳುಗಳು, ಮುಷ್ಕಗಳು, ಇವುಗಳು ದೀರ್ಘವಾಗಿದ್ದವು2. (ಇದು ಚಿರಂಜೀವಿ ಹಾಗೂ ಧನಿಕನ ಲಕ್ಷಣಗಳು) ತಲೆಗೂದಲಿನ ಅಗ್ರಭಾಗಗಳು, ವೃಷಣ ಮತ್ತು ಮೊಣಕಾಲುಗಳು ಸಮಪ್ರಮಾಣವಾಗಿದ್ದವು3. (ಇವನು ಭೂಪತಿಯಾಗುತ್ತಾನೆ.) ನಾಭಿ, ಹೊಟ್ಟೆ ಮತ್ತು ಎದೆ ಉನ್ನತವಾಗಿದ್ದವು4. (ಇದೂ ರಾಜಲಕ್ಷಣಗಳೇ). ನೇತ್ರಾಂತಗಳು, ಉಗುರುಗಳು ಮತ್ತು ಅಂಗೈ-ಅಂಗಾಲುಗಳು ಕೆಂಪಗಿದ್ದವು5. (ಇವು ಸುಖೀಪುರುಷರ ಲಕ್ಷಣಗಳು). ಪಾದರೇಖೆಗಳು, ತಲೆ ಗೂದಲು, ಲಿಂಗವಣಿ ಇವು ನುಣುಪಾಗಿದ್ದವು6. (ಇವು ಭಾಗ್ಯವಂತನ ಲಕ್ಷಣಗಳು) ಅವನ ಗಂಭೀರವಾದ ನಡಿಗೆ, ನಾಭಿಯು ಆಳವಾಗಿದೆ7. (ಇದು ಪ್ರಶಂಸಾ ಪಾತ್ರನ ಲಕ್ಷಣಗಳು.)॥17॥
ಟಿಪ್ಪನೀ
- ಉರಶ್ಚ ಮಣಿಬಂಧಶ್ಚ ಮುಷ್ಟಿಶ್ಚ ನೃಪತೇ ಸ್ಥಿರಾಃ । 2. ದೀರ್ಘಭೂೃಬಾಹು ಮುಷ್ಕಸ್ತು ಚಿರಂಜೀವೀ ಧನೀ ನರಃ । 3. ಕೇಶಾಗ್ರಂ ವೃಷಣಂ ಜಾನು ಸಮಾ ಯಸ್ಯ ಸ ಭೂಪತಿಃ । 4. ನಾಭ್ಯಂತಃ ಕುಕ್ಷಿ ವಕ್ಷೋಭಿರುನ್ನತೈಃ ಕ್ಷಿತಿಪೋ ಭವೇತ್ । 5. ನೇತ್ರಾಂತ ನಖ ಪಾಣ್ಯಂ ಘ್ರಿತಲೈಸ್ತಾಮ್ರೈಸಿಭಿಃ ಸುಖೀ । 6. ಸ್ನಿಗ್ಧಾ ಭವಂತಿ ವೈಯೇಷಾಂ ಪಾದರೇಖಾಃ ಶಿರೋರುಹಾಃ । ತಥಾ ಲಿಂಗಮಣಿ ಸ್ತೇಷಾಂ ಮಹಾಭಾಗ್ಯಂ ವಿನಿರ್ದಿಶೇತ್ ॥ 7. ಸ್ಪರೇಗತೌ ಚ ನಾಭೌ ಚ ಗಂಭೀರಸ್ತ್ರಿಷು ಶಸ್ಯತೇ ।
ಮೂಲಮ್ - 18
ತ್ರಿವಲೀವಾಂಸ್ತ್ರ್ಯವನತಶ್ಚತುರ್ವ್ಯಂಗಸ್ತ್ರಿ ಶೀರ್ಷವಾನ್ ।
ಚತುಷ್ಕಲಶ್ಚತುರ್ಲೇಖಶ್ಚತುಷ್ಕಿಷ್ಕುಶ್ಚತುಃಸಮಃ ॥
ಅನುವಾದ
ರಾಮನ ಹೊಟ್ಟೆಯ ಮೇಲೆ ಅಥವಾ ಕುತ್ತಿಗೆಯಲ್ಲಿ ತ್ರಿವಳಿ (ಮೂರುಗೆರೆ)ಗಳಿವೆ. ಅವನ ಪಾದತಲಗಳು ತಗ್ಗಾಗಿವೆ, ಸ್ತನಗಳ ತೊಟ್ಟು ಕೆಳಮುಖವಾಗಿವೆ. ಕಾಲಿನಲ್ಲಿರುವ ರೇಖೆಗಳು ಕೆಳಮುಖವಾಗಿವೆ 1. (ಇವು ಧನಿಕನ ಲಕ್ಷಣಗಳು) ಕುತ್ತಿಗೆ, ಪ್ರಜನನ, ಪೃಷ್ಠ, ಮೊಣಕಾಲುಗಳು ಇವು ನಾಲ್ಕು ಹ್ರಸ್ವವಾಗಿವೆ2. (ಇವು ಪೂಜ್ಯರ ಲಕ್ಷಣಗಳು) ತಲೆಯಲ್ಲಿ ಮೂರು ಸುಳಿಗಳಿವೆ3. (ಇವು ಮಹಾರಾಜನ ಲಕ್ಷಣಗಳು) ಅವನ ಅಂಗುಷ್ಠದ ಮೂಲದಲ್ಲಿ ಚುತರ್ವೇದ ಪ್ರಾಪ್ತಿ ಲಕ್ಷಣವಾದ ನಾಲ್ಕುಗೆರೆಗಳಿವೆ4. ಹಣೆಯಲ್ಲಿ ಪಾದಗಳಲ್ಲಿ, ಕೈಗಳಲ್ಲಿ ನಾಲ್ಕು ಗೆರೆಗಳನ್ನು ಹೊಂದಿರುವನು5. (ಇವು ಆಯುರ್ದಾಯವು, ಮಹಾರಾಜನ ಲಕ್ಷಣಗಳು) ಎತ್ತರವಿರುವವನು6. (ಅವನು ತೊಂಭತ್ತಾರು ಅಂಗುಲಗಳು ಎತ್ತರವಿರುವವನು. ಇದು ದೇವತಾ ಲಕ್ಷಣವು.) ಬಾಹುಗಳು, ಮೊಣಕಾಲುಗಳು, ತೊಡೆ, ಮೀನಖಂಡ ಇವು ನಾಲ್ಕು ಸಮವಾಗಿದ್ದು ಸುಂದರವಾಗಿದ್ದವು7. ॥18 ॥
ಟಿಪ್ಪನೀ
- ‘‘ಪೀನೋಚಿತೈರ್ನಿಮ್ನೈಃ ಕ್ಷಿತಿಪತಯ ಶ್ಚೂಚುಕೈಃ ಸ್ತನೈಃ ಸುಖಿನಃ । ಸ್ನಿಗ್ಧಾ ವಿಮ್ನಾ ರೇಖಾ ಧನೀನಾಂ ತದ್ವ್ಯಾತ್ಯಯೇನ ನಿಸ್ವಾನಾಮ್ ॥’’
ಸ್ತನಗಳು ಪುಷ್ಟವಾಗಿ ಕೆಳಗೆ ಬಾಗಿದ್ದರೆ ಇದು ರಾಜಲಕ್ಷಣವು. ಸ್ತನಾಗ್ರಗಳೂ, ಪಾದರೇಖೆಗಳೂ, ಕೆಳಮುಖವಾಗಿದ್ದರೆ ಧನಿಕ ಲಕ್ಷಣವು. ಇದಕ್ಕೆ ವಿಪರೀತವಾಗಿದ್ದರೆ ದರಿದ್ರಲಕ್ಷಣವು. - ‘‘ಗ್ರೀವಾ ಪ್ರಜನನಂ ಪೃಷ್ಠಂ ಹ್ರಸ್ವಂ ಜಂಘಾ ಚ ಪೂಜ್ಯತೇ ।’’ 3. ‘‘ಆವರ್ತತ್ರಯರುಚಿರಂ ಯಸ್ಯ ಶಿರಃ ಸ ಕ್ಷಿತಿಭೃತಾಂ ನೇತಾ ।’’
- ‘‘ಮೂಲೇಽಗುಂಷ್ಠಸ್ಯ ವೇದಾನಾಂ ಚತಸ್ರಸ್ತಿಸ್ರ ಏವ ವಾ । ಏಕಾ ದ್ವೇವಾ ಯಥಾಯೋಗಂ ರೇಖಾ ಜ್ಞೇಯಾ ದ್ವಿಜಾತಿನಾಮ್ ॥’’
ಹೆಬ್ಬೆರಳಿನ ಮೂಲನದಲ್ಲಿ ಎಷ್ಟು ರೇಖೆಗಳಿವೆಯೋ ಅಷ್ಟು ವೇದಗಳಲ್ಲಿ ಪ್ರವೀಣಾನಾಗುತ್ತಾನೆ. - (ಅ) ‘‘ಲಲಾಟೇ ಯಸ್ಯ ದೃಶ್ಯಂತೇ ಚುತಸಿದ್ವ್ಯೇಕರೇಖಿಕಾಃ । ಶತದ್ವಯಂ ಶತಂ ಷಷ್ಠಿಃ ತಸ್ಯಾಯುರ್ವಿಂಶತಿಸ್ತಥಾ ॥’’
ಹಣೆಯಲ್ಲಿ ನಾಲ್ಕು ಗೆರೆಗಳಿದ್ದರೆ 200 ವರ್ಷ, ಮೂರು ಗೆರೆಗಳಿದ್ದರೆ 100, ಎರಡು ಗೆರೆಗಳಿದ್ದರೆ 60, ಒಂದೇ ಗೆರೆ ಇದ್ದರೆ 30 ವರ್ಷಗಳು ಆಯುಃ ಪ್ರಮಾಣವು.
(ಆ) ‘‘ಯಸ್ಯ ಪಾದತಲೇ ವಜ್ರ ಧ್ವಜ ಶಂಖಾಂಕುಶೋಪಮಾಃ । ರೇಖಾ ಸಮ್ಯಕ್ಪ್ರಕಾಶಂತೇ ಮನುಜೇಂದ್ರಂ ತಮಾದಿಶೇತ್ ॥’’
ಅಂಗಾಲುಗಳಲ್ಲಿ ವಜ್ರ, ಧ್ವಜ, ಶಂಖ, ಅಂಕುಶ ಈ ಆಕಾರದಿಂದ ರೇಖೆಗಳುಳ್ಳವನು ಚಕ್ರವರ್ತಿಯಾಗುತ್ತಾನೆ.
(ಇ) ‘‘ಪಾಣೌ ಚತಸ್ರೋ ರೇಖಾಶ್ಚ ಯಸ್ಯತಿಷ್ಠತ್ಯಭಂಗುರಾಃ ।’’
ಅಂಗೈಯಲ್ಲಿ ಭಂಗವಿಲ್ಲದ ನಾಲ್ಕು ಗೆರೆಗಳಿದ್ದರೆ ಅವನು ಚಕ್ರವರ್ತಿಯಾಗುತ್ತಾನೆ. - ‘‘ಷಣ್ಣವತ್ಯಂಗುಲೋತ್ಸೇಧೋ ಯಃ ಪುಮಾನ್ ಸ ದಿವೌಕಸಃ’’ 7. ‘‘ಬಾಹೂಜಾನೂರು ಜಂಘಾಶ್ಚ ಚತ್ವಾರ್ಯಥಸಮಾನಿ ಚ ।’’
ಮೂಲಮ್ - 19
ಚತುರ್ದಶಸಮದ್ವಂದ್ವಶ್ಚತುರ್ದಂಷ್ಟ್ರಶ್ಚತುರ್ಗತಿಃ ।
ಮಹೋಷ್ಠ ಹನುನಾಸಶ್ಚ ಪಂಚಸ್ನಿಗ್ಧೋಷ್ಟವಂಶವಾನ್ ॥
ಅನುವಾದ
ಶ್ರೀರಾಮನ ಹದಿನಾಲ್ಕು ಜೊತೆಗಳು ಅಂದರೆ - ಹುಬ್ಬುಗಳು, ಮೂಗುಹೊಳ್ಳೆಗಳೂ, ಕಣ್ಣುಗಳು, ಕಿವಿಗಳು, ತುಟಿಗಳು, ಸ್ತನಾಗ್ರಗಳು, ಮೊಣಕೈಗಳು, ಮಣಿಕಟ್ಟುಗಳು, ಮೊಣಕಾಲುಗಳು, ವೃಷಣಗಳು, ಕಟಿಗಳು, ಕೈಗಳು, ಪಾದಗಳು, ಪಿರ್ರೆಗಳ ಮೇಲಿರುವ ಎತ್ತರವಾದ ಭಾಗಗಳು ಇವುಗಳು ಸಮಪ್ರಮಾಣದಲ್ಲಿವೆ1. (ಇವು ರಾಜಲಕ್ಷಣಗಳು) ‘ನಾಲ್ಕು ಲಕ್ಷಣಗಳಿಂದ ಕೂಡಿದ ಮುಂಭಾಗದ ಹಲ್ಲುಗಳಿರುವವು2. ಅವನು ಸಿಂಹ, ಶಾರ್ದೂಲ, ಗಜ, ವೃಷಭ ಇವುಗಳಂತೆ ನಾಲ್ಕು ಬಗೆಯಾದ ನಡೆಯುಳ್ಳವನು3. ಸುಂದರವಾದ ಕೆಂಪಾದ ತುಟಿಗಳುಳ್ಳವನು. ಮಾಂಸಲವಾದ ದವಡೆಗಳುಳ್ಳವನು. ಎತ್ತರವಾದ ಹಾಗೂ ನೀಳವಾದ ಮೂಗು ಉಳ್ಳವನಾಗಿದ್ದಾನೆ4. ಅವನ ಮಾತು, ಮುಖ, ಉಗುರು, ಕೂದಲು ಮತ್ತು ಚರ್ಮ ಈ ಐದು ಅವಯವಗಳು ಸ್ನಿಗ್ಧ (ಮೃದುವಾದ)ವಾಗಿವೆ5. ಅವನಿಗೆ ಪೃಷ್ಠವಂಶ, ಶರೀರ, ಕೈ ಬೆರಳುಗಳು, ಕಾಲ್ಬೆರಳುಗಳು, ಕೈಗಳು, ಮೂಗು, ಕಣ್ಣುಗಳು, ಕಿವಿಗಳು, ಪ್ರಜನವು ಈ ಎಂಟು ಅವಯವಗಳು ವಿಸ್ತಾರವಾಗಿಯೂ, ದೀರ್ಘವಾಗಿಯೂ ಇದ್ದವು6.॥19॥
ಟಿಪ್ಪನೀ
- ‘‘ಭ್ರುವೌ ನಾಸಾಪುಟೇ ನೇತ್ರೇ ಕರ್ಣಾವೋಷ್ಠೌ ಚ ಚೂಚುಕಾ । ಕೂರ್ಪಕಾ ಮಣಿಬಂಧೌ ಚ ಜಾನುನೀ ವೃಷಣೌ ಕಟೀ ॥
ಕರೌ ಪಾದೌ ಸ್ಫಿಜಾ ಯಸ್ಯ ಸವೌ ಜ್ಞೇಯಃ ಸ ಭೂಪತಿಃ ॥ - ‘‘ಸ್ನಿಗ್ಧಾ ಘನಾಶ್ಚ ದಶನಾಃ ಸುತೀಕ್ಷಣ ದಂಷ್ಟ್ರಾಃ ಸಮಾಶ್ಚ ಶುಭಾಃ ।’’
ಹಲ್ಲುಗಳ ನಾಲ್ಕು ಲಕ್ಷಣಗಳು ಇಂತಿವೆ - ಸುಂದರವಾಗಿಯೂ, ನುಣುವಾಗಿಯೂ, ಗಟ್ಟಿಯಾಗಿಯೂ, ತೀಕ್ಷ್ಣವಾಗಿಯೂ ಇರಬೇಕು. - ‘‘ಗಜಸಿಂಹಗತೀ ವೀರೌ ಶಾರ್ದೂಲವೃಷಭೋಪವೌ ।’’ 4. ‘‘ಬಂಧುಜೀವಕುಸುಮೋಪಮೋಧರೋ ಮಾಂಸಲೋ ರುಚಿರಬಿಂಬರೂಪಧೃಕ್। ಪೂರ್ಣಮಾಂಸಲಹನುಸ್ತುಭೂಮಿಸ್ತುಂಗತುಂಡರುಚಿರಾಕೃತಿಸ್ತಥಾ ॥’’
- ‘‘ಕೇಶನೇತ್ರ ದಂತತ್ವಕ್ ಪಾದತಲಾನಿ ಪಂಚಸ್ನಿಗ್ಧಾಃ ।’’
‘‘ಚಕ್ಷು ಸ್ನೇಹೇನ ಸೌಭಾಗ್ಯಂ ದಂತಹಸ್ತೇನ ಶೋಭನಮ್ । ತ್ವಚ ಸ್ನೇಹೇನ ಶಯನಮ್ ಪಾದಸ್ನೇಹೇನ ವಾಹನಮ್ ॥
ಸ್ನಿಗ್ಧನಲ ಮೃದುಕುಂಚಿತಾಸ್ತಥಾ ಮೂರ್ಧಜಾಸ್ಸುಖ ಕರಾಸ್ಸಮಂಶಿರಃ ।’’
ಮನೋಹರವಾದ ಕಣ್ಣುಗಳು ಸೌಭಾಗ್ಯವನ್ನೂ, ದಂತಗಳು ಭೋಜನ ಸೌಖ್ಯವನ್ನೂ, ಮೃದುವಾದ ಚರ್ಮವು ಶಯನ ಸೌಖ್ಯವನ್ನೂ, ಪಾದಗಳು ವಾಹನ ಸೌಖ್ಯವನ್ನು, ಕೂದಲುಗಳು ಸುಖಗಳನ್ನು ಕೊಡುವಂತಹವುಗಳು. - ಪೃಷ್ಠವಂಶಃ ಶರೀರಂ ಚ ಹಸ್ತ ಪಾದಾಂಗುಲೀ ಕರೌ । ನಾಸಿಕಾ ಚಕ್ಷುಷೀ ಕರ್ಣೌ ಪ್ರಜನೋಯಸ್ಯ ಚಾಯತಾಃ ॥
ಮೂಲಮ್ - 20
ದಶಪದ್ಮೋ ದಶಬೃಹತ್ ತ್ರಿಭಿರ್ವ್ಯಾಪ್ತೋ ದ್ವಿಶುಕ್ಲವಾನ್ ।
ಷಡುನ್ನತೋ ನವತನುಸ್ತ್ರಿಭಿರ್ವ್ಯಾಪ್ನೋತಿ ರಾಘವಃ ॥
ಅನುವಾದ
ಶ್ರೀರಾಮನಿಗೆ ಮುಖ, ಕಣ್ಣುಗಳು, ಬಾಯಿ, ನಾಲಿಗೆ, ತುಟಿ, ದವಡೆ, ಸ್ತನಗಳು, ಉಗುರುಗಳು, ಕೈಗಳು, ಕಾಲುಗಳು ಈ ಹತ್ತು ಅವಯವಗಳು ಪದ್ಮಾಕಾರದಲ್ಲಿವೆ1. ಅವನ ವಕ್ಷಃಸ್ಥಳ, ತಲೆ, ಕುತ್ತಿಗೆ, ತೋಳುಗಳು, ಹೆಗಲು, ನಾಭಿ, ಪಾರ್ಶ್ಚಗಳು, ಪೃಷ್ಠಗಳು, ಕಿವಿಗಳು ಈ ಹತ್ತು ವಿಸ್ತಾರ(ದೊಡ್ಡ)ವಾಗಿವೆ2. ಅವನಲ್ಲಿ ತೇಜಸ್ಸು , ಯಶಸ್ಸು ಸಂಪತ್ತು ಇವು ಮೂರು ವಿಸ್ತಾರವಾದುವುಗಳು3. ಬಿಳಿಯ ಬಣ್ಣದ, ಸ್ವಚ್ಛವಾದ ಹಲ್ಲು, ಕಣ್ಣುಗಳನ್ನು ಹೊಂದಿರುವವನು. ಪರಿಶುದ್ಧವಾದ, ಶುಭ್ರವಾದ ಮಾತೃವಂಶವನ್ನೂ, ಪಿತೃವಂಶವನ್ನು ಹೊಂದಿದವನು. ಅವನಿಗೆ ಕಂಕುಳು, ಹೊಟ್ಟೆ, ವಕ್ಷಃಸ್ಥಳ, ಮೂಗು, ಹೆಗಲು, ಮತ್ತು ಹಣೆ ಈ ಆರು ಎತ್ತರವಾಗಿದ್ದವು. ಇದು ಎತ್ತರವಾಗಿದ್ದರೆ ಶುಭವನ್ನುಂಟು ಮಾಡುತ್ತವೆ4. ಅವನಿಗೆ ತಲೆಗೂದಲು, ಗಡ್ಡ-ಮೀಸೆಗಳು, ಉಗುರು, ಮೈಗೂದಲೂ, ಚರ್ಮ, ಬೆರಳುಗಳ ಗಿಣ್ಣುಗಳು, ಲಿಂಗವು, ಬುದ್ಧಿ, ದೃಷ್ಟಿ ಹೀಗೆ ಈ ಒಂಭತ್ತು ಅವಯವಗಳು ಸೂಕ್ಷ್ಮವಾಗಿದ್ದವು. ಅವನು ಪೂರ್ವಾಹ್ನ, ಮಧ್ಯಾಹ್ನ, ಅಪರಾಹ್ಣ ಎಂಬ ಈ ಮೂರೂ ಕಾಲದಲ್ಲಿ ಧರ್ಮಾರ್ಥಕಾಮಗಳನ್ನು ಆಚರಿಸುವವನಾಗಿದ್ದಾನೆ.॥20॥
ಟಿಪ್ಪನೀ
- ಮುಖನೇತ್ರಾಸ್ಯ ಜಿಹ್ವೋಷ್ಠ ತಾಲುಸ್ತನನಖಾಃ ಕರೌ । ಪಾದೌ ಚ ದಶ ಪದ್ಮಾನಿ ಪದ್ಮಾಕಾರಾಣಿ ಯಸ್ಯ ಚ ॥
- ಶಿರೋಲಲಾಟೇ ಶ್ರವಣೇ ಗ್ರೀವಾ ವಕ್ಷಶ್ಚ ಹೃತ್ತಥಾ । ಉದರಂ ಪಾಣಿಪಾದೌ ಚ ಪೃಷ್ಠಂ ದಶ ಬೃಹಂತಿ ಚ ।
- ತ್ರಿಭಿರ್ವ್ಯಾಪ್ತಿಶ್ಚಯಸಸ್ಯಾತ್ತೇಜಸಾ ಯಶಸಾ ಶ್ರಿಯಾ । 4. ಕಕ್ಷಃ ಕುಕ್ಷಿಶ್ಚ ವಕ್ಷಶ್ಚ ಘ್ರಾಣಂ ಸ್ಕಂಧೋ ಲಲಾಟಕಾ । ಸರ್ವಭೂತೇಷು ನಿದಿರಷ್ಟಾ ಉನ್ನತಾಂಗಾಃ ಶುಭಪ್ರದಾಃ ॥
ಮೂಲಮ್ - 21
ಸತ್ಯಧರ್ಮಪರಃ ಶ್ರೀಮಾನ್ ಸಂಗ್ರಹಾನುಗ್ರಹೇ ರತಃ ।
ದೇಶಕಾಲವಿಭಾಗಜ್ಞಃ ಸರ್ವಲೋಕ ಪ್ರಿಯಂವದಃ ॥
ಅನುವಾದ
ಶ್ರೀರಾಮನು ಸಕಲಲೈಶ್ಚರ್ಯ ಸಂಪನ್ನನು ಸತ್ಯಭಾಷಣದಲ್ಲಿ, ಧರ್ಮಾಚರಣೆಯಲ್ಲಿ ನಿರತನು. ಧರ್ಮಮಾರ್ಗದಲ್ಲಿ ಧನವನ್ನು ಗಳಿಸಿ ಸತ್ಪಾತ್ರರಿಗೆ ದಾನ ಮಾಡುವವನು. ದೇಶಕಾಲಕ್ಕನುಸಾರವಾಗಿ ಪ್ರವರ್ತಿಸುವವನು. ಎಲ್ಲರೊಡನೆ ಪ್ರೀತಿಯಿಂದ ಮಾತಾಡುವವನು ಆಗಿದ್ದಾನೆ.॥21॥
ಮೂಲಮ್ - 22
ಭ್ರಾತಾ ಚ ತಸ್ಯ ದ್ವೈಮಾತ್ರಃ ಸೌಮಿತ್ರಿ ರಪರಾಜಿತಃ ।
ಅನುರಾಗೇಣ ರೂಪೇಣ ಗುಣೈಶ್ಚೈವ ತಥಾ ವಿಧಃ ॥
ಮೂಲಮ್ - 23
ಸ ಸುವರ್ಣಚ್ಛವಿಃ ಶ್ರೀಮಾನ್ ರಾಮಃಶ್ಯಾಮೋ ಮಹಾಯಶಾಃ ।
ತಾವುಭೌ ನರಶಾರ್ದೂಲೌ ತ್ವದ್ದರ್ಶನಸಮುತ್ಸುಕೌ ॥
ಅನುವಾದ
ಶ್ರೀರಾಮನ ಸೋದರನಾದ ಲಕ್ಷ್ಮಣನು ಕೌಸಲ್ಯಾ-ಸುಮಿತ್ರೆಯರಿಗೆ ಪ್ರೀತಿಪಾತ್ರನು. ಅವನು ಅನುರಾಗದಿಂದ, ರೂಪ-ಗುಣಗಳಿಂದ ಶ್ರೀರಾಮನನ್ನೇ ಹೋಲುತ್ತಾನೆ. ಅವನು ಸಾಟಿಯಿಲ್ಲದ ಪರಾಕ್ರಮ ಶಾಲಿಯು. ಪ್ರಸಿದ್ಧನಾದ ಶ್ರೀರಾಮನು ಮೇಘಶ್ಯಾಮನು, ಲಕ್ಷ್ಮಣನು ಭಂಗಾರವರ್ಣದವನು. ಆ ಪುರುಷಶ್ರೇಷ್ಠರಿಬ್ಬರೂ ನಿನ್ನನ್ನು ನೋಡಬೇಕೆಂದು ಕುತೂಹಲಿಗಳಾಗಿದ್ದಾರೆ.॥22-23॥
ಮೂಲಮ್ - 24
ವಿಚಿನ್ವಂತೌ ಮಹೀಂ ಕೃತ್ಸ್ನಾಮಸ್ಮಾಭಿರಭಿಸಂಗತೌ ।
ತ್ವಾಮೇವ ಮಾರ್ಗಮಾಣೌ ತೌ ವಿಚರಂತೌ ವಸುಂಧರಾಮ್ ॥
ಅನುವಾದ
ನರಶ್ರೇಷ್ಠರಾದ ಆ ರಾಮ-ಲಕ್ಷ್ಮಣರಿಬ್ಬರೂ ನಿನ್ನನ್ನು ನೋಡಬೇಕೆಂಬ ಉತ್ಸುಕತೆಯಿಂದ ಸಮಗ್ರವಾದ ಭೂಮಂಡಲದಲ್ಲಿ ಹುಡುಕುತ್ತಾ ಕಡೆಗೆ ನಮ್ಮ ಬಳಿಗೆ ಬಂದರು.॥24॥
ಮೂಲಮ್ - 25
ದದರ್ಶತುರ್ಮೃಗಪತಿಂ ಪೂರ್ವಜೇನಾವರೋಪಿತಮ್ ।
ಋಷ್ಯಮೂಕಸ್ಯ ಪೃಷ್ಠೇ ತು ಬಹುಪಾದಪಸಂಕುಲೇ ।
ಭ್ರಾತುರ್ಭಯಾರ್ತಮಾಸೀನಂ ಸುಗ್ರೀವಂ ಪ್ರಿಯದರ್ಶನಮ್ ॥
ಅನುವಾದ
ವಾನರ ರಾಜನಾದ ಸುಗ್ರೀವನು ತನ್ನ ಅಣ್ಣನಾದ ವಾಲಿಯಿಂದ ರಾಜ್ಯ ಭ್ರಷ್ಟನಾಗಿ, ಅವನಿಗೆ ಹೆದರಿ, ದಟ್ಟವಾದ ಮರಗಳಿಂದ ಕೂಡಿದ ಋಷ್ಯಮೂಕ ಪರ್ವತದ ಮೇಲೆ ವಾಸಿಸುತ್ತಿದ್ದನು. ಪ್ರಿಯದರ್ಶನನಾದ ಆ ಸುಗ್ರೀವನನ್ನು ರಾಮ-ಲಕ್ಷ್ಮಣರು ಅಲ್ಲಿ ನೋಡಿದರು.॥25॥
ಮೂಲಮ್ - 26
ವಯಂ ತು ಹರಿರಾಜಂ ತಂ ಸುಗ್ರೀವಂ ಸತ್ಯಸಂಗರಮ್ ।
ಪರಿಚರ್ಯಾಮಹೇ ರಾಜ್ಯಾತ್ ಪೂರ್ವಜೇನಾವರೋಪಿತಮ್ ॥
ಅನುವಾದ
ಅಗ್ರಜನಾದ ವಾಲಿಯಿಂದ ರಾಜ್ಯದಿಂದ ಹೊರ ಹಾಕಲ್ಪಟ್ಟ, ಸತ್ಯಪ್ರತಿಜ್ಞನಾದ, ವಾನರ ಪ್ರಭುವಾದ ಸುಗ್ರೀವನ ಸೇವೆಯನ್ನು ನಾವು ಮಾಡುತ್ತಿದ್ದೆವು.॥26॥
ಮೂಲಮ್ - 27
ತತಸ್ತೌ ಚೀರವಸನೌ ಧನುಃ ಪ್ರವರಪಾಣಿನೌ ।
ಋಷ್ಯಮೂಕಸ್ಯ ಶೈಲಸ್ಯ ರಮ್ಯಂ ದೇಶಮುಪಾಗತೌ ॥
ಮೂಲಮ್ - 28
ಸ ತೌ ದೃಷ್ಟ್ವಾ ನರವ್ಯಾಘ್ರೌ ಧನ್ವಿನೌ ವಾನರರ್ಷಭಃ ।
ಅವಪ್ಲುತೋ ಗಿರೇಸ್ತಸ್ಯ ಶಿಖರಂ ಭಯಮೋಹಿತಃ ॥
ಅನುವಾದ
ಅನಂತರ ನಾರುಮಡಿಯನ್ನು ಉಟ್ಟಿರುವ, ಕೈಯಲ್ಲಿ ಧನುರ್ಬಾಣಗಳನ್ನು ಧರಿಸಿಕೊಂಡಿರುವ, ನರಶ್ರೇಷ್ಠರೂ ಆದ ರಾಮ-ಲಕ್ಷ್ಮಣರು ರಮ್ಯವಾದ ಆ ಋಷ್ಯಮೂಕ ಪರ್ವತ ಪ್ರಾಂತ್ಯಕ್ಕೆ ಆಗಮಿಸಿದರು. ಧನುರ್ಧಾರಿಗಳಾದ ಆ ನರವೀರರನ್ನು ಆ ಕಪೀಂದ್ರನು ನೋಡಿದನು.॥27-28॥
ಮೂಲಮ್ - 29
ತತಃ ಸ ಶಿಖರೇ ತಸ್ಮಿನ್ ವಾನರೇಂದ್ರೋ ವ್ಯವಸ್ಥಿತಃ ।
ತಯೋಃ ಸಮೀಪಂ ಮಾಮೇವ ಷ್ರೇಷಯಾಮಾಸ ಸತ್ವರಮ್ ॥
ಅನುವಾದ
ಅವರನ್ನು ನೋಡಿದೊಡನೆ ಸುಗ್ರೀವನು ಭಯಕಂಪಿತನಾಗಿ ಒಂದೇ ನೆಗೆತಕ್ಕೆ ಪರ್ವತ ಶಿಖರವನ್ನು ಸೇರಿ ಅಲ್ಲಿ ಕುಳಿತನು. ಮತ್ತೆ ಕೂಡಲೇ ಅವರ ಬಳಿಗೆ ನನ್ನನ್ನು ಕಳಿಸಿದನು.॥29॥
ಮೂಲಮ್ - 30
ತಾವಹಂ ಪುರುಷವ್ಯಾಘ್ರೌ ಸುಗ್ರೀವವಚನಾತ್ ಪ್ರಭೂ ।
ರೂಪಲಕ್ಷಣಸಂಪನ್ನೌ ಕೃತಾಂಜಲಿರುಪಸ್ಥಿತಃ ॥
ಮೂಲಮ್ - 31
ತೌ ಪರಿಜ್ಞಾತತತ್ತ್ವಾರ್ಥೌ ಮಯಾ ಪ್ರೀತಿಸಮನ್ವಿತೌ ।
ಪೃಷ್ಠಮಾರೋಪ್ಯ ತಂ ದೇಶಂ ಪ್ರಾಪಿತೌ ಪುರುಷರ್ಷಭೌ ॥
ಮೂಲಮ್ - 32
ನಿವೇದಿತೌ ಚ ತತ್ತ್ವೇನ ಸುಗ್ರೀವಾಯ ಮಹಾತ್ಮನೇ ।
ತಯೋರನ್ಯೋನ್ಯಸಂಲಾಪಾದ್ಭೃಶಂ ಪ್ರೀತಿರಜಾಯತ ॥
ಅನುವಾದ
ಸುಗ್ರೀವನ ಆಜ್ಞಾನುಸಾರವಾಗಿ ನಾನು ಪ್ರಭಾವಶಾಲಿಗಳಾದ, ಪುರುಷಶ್ರೇಷ್ಠರಾದ, ರೂಪ-ಲಕ್ಷ ್ಮಣಸಂಪನ್ನರಾದ ರಾಮ-ಲಕ್ಷ್ಮಣರನ್ನು ಸಂಧಿಸಿ, ಅಂಜಲೀ ಬದ್ಧನಾಗಿ ಅವರ ಸಮೀಪಕ್ಕೆ ಹೋದೆನು. ನನ್ನಿಂದ ಸುಗ್ರೀವನ ಸತ್ಯ ಸಂಗತಿಯನ್ನು ತಿಳಿದನಂತರ ಇಬ್ಬರೂ ಸುಪ್ರೀತರಾದರು. ಬಳಿಕ ನಾನು ಅವರಿಬ್ಬರನ್ನು ನನ್ನ ಬೆನ್ನಿನ ಮೇಲೆ ಕುಳ್ಳಿರಿಸಿಕೊಂಡು ಸುಗ್ರೀವನಿದ್ದೆಡೆಗೆ ಕರೆದೊಯ್ದೆನು. ಅವರ ವಾಸ್ತವಿಕ ವಿಷಯವನ್ನು ಮಹಾತ್ಮನಾದ ಸುಗ್ರೀವನಿಗೆ ನಿವೇದಿಸಿಕೊಂಡೆನು.॥30-32॥
ಮೂಲಮ್ - 33
ತತ್ರ ತೌ ಪ್ರೀತಿಸಂಪನ್ನೌ ಹರೀಶ್ವರನರೇಶ್ವರೌ ।
ಪರಸ್ಪರಕೃತಾಶ್ವಾಸೌ ಕಥಯಾ ಪೂರ್ವವೃತ್ತಯಾ ॥
ಅನುವಾದ
ಪರಸ್ಪರ ಸಂಭಾಷಣೆಯಿಂದಾಗಿ ಇಬ್ಬರಲ್ಲೂ ಪ್ರೀತಿಯುಂಟಾಯಿತು. ಕೀರ್ತಿಸಂಪನ್ನರಾದ ಹರೀಶ್ವರ-ನರೇಶ್ವರರೂ ಹಿಂದಿನ ತಮ್ಮ ಕಷ್ಟ-ಸುಖಗಳ ವಿಚಾರ-ವಿನಿಮಯದಿಂದ ಅನ್ಯೋನ್ಯರಾಗಿ ವಿಶ್ವಾಸವನ್ನು ಹೊಂದಿದರು.॥33॥
ಮೂಲಮ್ - 34
ತಂ ತತಃ ಸಾಂತ್ವಯಾಮಾಸ ಸುಗ್ರೀವಂ ಲಕ್ಷ್ಮಣಾಗ್ರಜಃ ।
ಸ್ತ್ರೀಹೇತೋರ್ವಾಲಿನಾ ಭ್ರಾತ್ರಾ ನಿರಸ್ತಮುರುತೇಜಸಾ ॥
ಅನುವಾದ
ಬಳಿಕ ಪತ್ನಿಯ ಕಾರಣದಿಂದ ರಾಜ್ಯಭ್ರಷ್ಟನಾದ ಮಹಾ ತೇಜಸ್ವಿಯಾದ ಸುಗ್ರೀವನನ್ನು ಲಕ್ಷ್ಮಣಾಗ್ರಜನಾದ ಶ್ರೀರಾಮನು ಬಹಳವಾಗಿ ಸಂತೈಸಿದನು.॥34॥
ಮೂಲಮ್ - 35
ತತಸ್ತ್ವನ್ನಾಶಜಂ ಶೋಕಂ ರಾಮಸ್ಯಾಕ್ಲಿಷ್ಟ ಕರ್ಮಣಃ ।
ಲಕ್ಷ್ಮಣೋ ವಾನರೇಂದ್ರಾಯ ಸುಗ್ರೀವಾಯ ನ್ಯವೇದಯತ್ ॥
ಅನುವಾದ
ಮತ್ತೆ ಎಂತಹ ದುಷ್ಕರವಾದ ಕಾರ್ಯಗಳನ್ನು ಲೀಲಾಜಾಲವಾಗಿ ಸಾಧಿಸುವ ಶ್ರೀರಾಮನಿಗೆ ನಿನ್ನ ಅಪಹರಣದಿಂದ ಉಂಟಾಗಿರುವ ಶೋಕವನ್ನು ಲಕ್ಷ್ಮಣನು ವಾನರೇಂದ್ರನಾದ ಸುಗ್ರೀವನಿಗೆ ಪೂರ್ಣವಾಗಿ ವಿವರಿಸಿದನು.॥35॥
ಮೂಲಮ್ - 36
ಸ ಶ್ರುತ್ವಾ ವಾನರೇಂದ್ರಸ್ತು ಲಕ್ಷ್ಮಣೇನೇರಿತಂ ವಚಃ ।
ತದಾಸೀನ್ನಿಷ್ಪ್ರಭೋಽತ್ಯರ್ಥಂ ಗ್ರಹಗ್ರಸ್ತ ಇವಾಂಶುಮಾನ್ ॥
ಅನುವಾದ
ಲಕ್ಷ್ಮಣನು ತಿಳಿಸಿದ ವಿಷಯವನ್ನು ಕೇಳಿ ವಾನರೇಂದ್ರನಾದ ಸುಗ್ರೀವನು ಗ್ರಹಗ್ರಸ್ತನಾದ ಸೂರ್ಯನಂತೆ ತೇಜೋಹೀನನಾದನು.॥36॥
ಮೂಲಮ್ - 37
ತತಸ್ತ್ವದ್ಗಾತ್ರ ಶೋಭೀನಿ ರಕ್ಷಸಾ ಹ್ರಿಯಮಾಣಯಾ ।
ಯಾನ್ಯಾಭರಣಜಾಲಾನಿ ಪಾತಿತಾನಿ ಮಹೀತಲೇ ॥
ಮೂಲಮ್ - 38
ತಾನಿ ಸರ್ವಾಣಿ ರಾಮಾಯ ಆನೀಯ ಹರಿಯೂಥಪಾಃ ।
ಸಂಹೃಷ್ಟಾ ದರ್ಶಯಾಮಾಸುರ್ಗತಿಂ ತು ನ ವಿದುಸ್ತವ ॥
ಅನುವಾದ
ರಾವಣನು ನಿನ್ನನ್ನು ಅಪಹರಿಸಿಕೊಂಡು ಹೋಗುವಾಗ ನಿನ್ನ ಶರೀರದಲ್ಲಿ ಶೋಭಿಸುತ್ತಿರುವ ಆಭರಣಗಳನ್ನು ನೀನು ಭೂಮಿಗೆ ಬೀಳಿಸಿದಿ. ಅವೆಲ್ಲವನ್ನು ವಾನರವೀರರು ತಂದು ಸಂತೋಷದಿಂದ ಶ್ರೀರಾಮನಿಗೆ ತೋರಿಸಿದರು. ಆದರೆ ರಾವಣನು ನಿನ್ನನ್ನು ಕೊಂಡುಹೋದ ಮಾರ್ಗವನ್ನು ಮಾತ್ರ ತಿಳಿಯಲಿಲ್ಲ.॥37-38॥
ಮೂಲಮ್ - 39
ತಾನಿ ರಾಮಾಯ ದತ್ತಾನಿ ಮಯೈವೋಪಹೃತಾನಿ ಚ ।
ಸ್ವನವಂತ್ಯವಕೀರ್ಣಾನಿ ತಸ್ಮಿನ್ ವಿಗತಚೇತಸಿ ॥
ಮೂಲಮ್ - 40
ತಾನ್ಯಂಕೇ ದರ್ಶನೀಯಾನಿ ಕೃತ್ವಾ ಬಹುವಿಧಂ ತವ ।
ತೇನ ದೇವಪ್ರಕಾಶೇನ ದೇವೇನ ಪರಿದೇವಿತಮ್ ॥
ಮೂಲಮ್ - 41
ಪಶ್ಯತಸ್ತಾನಿ ರುದತಸ್ತಾಮ್ಯತಶ್ಚ ಪುನಃ ಪುನಃ ।
ಪ್ರಾದೀಪಯನ್ ದಾಶರಥೇಸ್ತಾನಿ ಶೋಕಹುತಾಶನಮ್ ॥
ಮೂಲಮ್ - 42
ಶಯಿತಂ ಚ ಚಿರಂ ತೇನ ದುಃಖಾರ್ತೇನ ಮಹಾತ್ಮನಾ ।
ಮಯಾಪಿ ವಿವಿಧೈವಾಕ್ಯೈಃ ಕೃಚ್ಛ್ರಾದುತ್ಥಾಪಿತಃ ಪುನಃ ॥
ಅನುವಾದ
ಆ ಆಭರಣಗಳೆಲ್ಲ ಥಳ-ಥಳಿಸುತ್ತಾ ಭೂಮಿಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನಾನೇ ಒಟ್ಟಾಗಿಸಿ ತಂದು ಸುಗ್ರೀವನಿಗೆ ಒಪ್ಪಿಸಿದ್ದೆ. ಆ ನಗಗಳನ್ನು ಸುಗ್ರೀವನು ಶ್ರೀರಾಮನಿಗೆ ಸಮರ್ಪಿಸಿದನು. ಒಡವೆಗಳನ್ನು ನೋಡಿದ ತತ್ಕ್ಷಣ ಶ್ರೀರಾಮನು ಎಚ್ಚರದಪ್ಪಿದವನಂತಾದನು. ಸುಂದರವಾದ ನಿನ್ನ ಆಭರಣಗಳನ್ನು ದಿವ್ಯ ಸ್ವರೂಪನಾದ ಶ್ರೀರಾಮನು ತನ್ನ ತೊಡೆಯಮೇಲೆ ಇಟ್ಟುಕೊಂಡು ಪರಿ-ಪರಿಯಾಗಿ ವಿಲಾಪಿಸತೊಡಗಿದನು. ರಾಮನು ಅದನ್ನು ಪದೇ-ಪದೇ ನೋಡುತ್ತಾ ಅಳುತ್ತಿದ್ದನು. ಈ ವಿಧವಾಗಿ ಅವು ಅವನ ಶೋಕಾಗ್ನಿಯನ್ನು ಪ್ರಜ್ವಲಿಸುವಂತಿತ್ತು.॥39-42॥
ಮೂಲಮ್ - 43
ತಾನಿ ದೃಷ್ಟ್ವಾ ಮಹಾರ್ಹಾಣಿ ದರ್ಶಯಿತ್ವಾ ಮುಹುರ್ಮುಹುಃ ।
ರಾಘವಃ ಸಹ ಸೌಮಿತ್ರಿಃ ಸುಗ್ರೀವೇ ಸಂನ್ಯವೇದಯತ್ ॥
ಅನುವಾದ
ದುಃಖಪೀಡಿತನಾಗಿದ್ದ ಮಹಾತ್ಮನಾದ ಶ್ರೀರಾಮನು ಶೋಕವನ್ನು ತಾಳಲಾರದೆ ಭೂಮಿಯಲ್ಲಿ ಬಿದ್ದುಬಿಟ್ಟನು. ಆಗ ನಾನು ವಿಧ-ವಿಧವಾದ ಆಶ್ವಾಸನೆಯ ಮಾತುಗಳನ್ನು ಹೇಳಿ ಸಂತೈಸುತ್ತಾ ಅವನನ್ನು ಬಹಳ ಕಷ್ಟದಿಂದ ಹಿಡಿದೆಬ್ಬಿಸಿದೆನು.॥43॥
ಮೂಲಮ್ - 44
ಸ ತವಾದರ್ಶನಾದಾರ್ಯೇ ರಾಘವಃ ಪರಿತಪ್ಯತೇ ।
ಮಹತಾ ಜ್ವಲತಾ ನಿತ್ಯಮಗ್ನಿ ನೇವಾಗ್ನಿ ಪರ್ವತಃ ॥
ಅನುವಾದ
ಸೌಮಿತ್ರಿ ಸಹಿತನಾದ ಮಹಾತ್ಮನಾದ ಶ್ರೀರಾಮನು ಆಭರಣಗಳನ್ನು ನೋಡುತ್ತಾ ಪುನಃ ಪುನಃ ನಮ್ಮೆಲ್ಲರಿಗೆ ತೋರಿಸುತ್ತಾ, ನಿನ್ನನ್ನು ನೆನೆ ನೆನೆದು ಬಹಳ ಹೊತ್ತು ವಿಲಪಿಸಿದನು. ಅನಂತರ ಆ ಎಲ್ಲ ಆಭರಣಗಳನ್ನು ಸುಗ್ರೀವನ ವಶಕ್ಕೆ ಒಪ್ಪಿಸಿದನು.॥44॥
ಮೂಲಮ್ - 45
ತ್ವತ್ಕೃತೇ ತಮನಿದ್ರಾ ಚ ಶೋಕಶ್ಚಿಂತಾ ಚ ರಾಘವಮ್ ।
ತಾಪಯಂತಿ ಮಹಾತ್ಮಾನಮಗ್ನ್ಯಗಾರಮಿವಾಗ್ನಯಃ ॥
ಅನುವಾದ
ಎಲೈ ಪೂಜ್ಯಳೇ! ನಿನ್ನನ್ನು ಕಾಣದೆ ಇರುವುದರಿಂದ ಆ ಶ್ರೀರಾಮನು ನಿತ್ಯವು ಉರಿಯುತ್ತಿರುವ ಅಗ್ನಿಪರ್ವತದಂತೆ ತಪಿಸುತ್ತಿರುವನು.॥45॥
ಮೂಲಮ್ - 46
ತವಾದರ್ಶನ ಶೋಕೇನ ರಾಘವಃ ಪರಿಚಾಲ್ಯತೇ ।
ಮಹತಾ ಭೂಮಿಕಂಪೇನ ಮಹಾನಿವ ಶಿಲೋಚ್ಚಯಃ ॥
ಅನುವಾದ
ದಕ್ಷಿಣಾಗ್ನಿ, ಗಾರ್ಹಪತ್ಯ, ಆಹವನೀಯಗಳೆಂಬ ಮೂರು ಅಗ್ನಿಗಳು ಅಗ್ನಿಗೃಹವನ್ನು ತಾಪಗೊಳಿಸುವಂತೆ-ನಿನ್ನ ಅಗಲುವಿಕೆಯಿಂದ ನಿದ್ರಾರಾಹಿತ್ಯ, ಶೋಕ ಮತ್ತು ಚಿಂತೆಗಳು ಮಹಾತ್ಮನಾದ ಶ್ರೀರಾಮನನ್ನು ಸಂತಾಪಗೊಳಿಸುತ್ತಿವೆ.॥46॥
ಮೂಲಮ್ - 47
ಕಾನನಾನಿ ಸುರಮ್ಯಾಣಿ ನದೀಃ ಪ್ರಸ್ರವಣಾನಿ ಚ ।
ಚರನ್ನ ರತಿಮಾಪ್ನೋತಿ ತ್ವಾಮಪಶ್ಯನ್ನೃಪಾತ್ಮಜೇ ॥
ಅನುವಾದ
ನಿನ್ನನ್ನು ಕಾಣದೇ ಇರುವ ಕಾರಣದಿಂದ ಶೋಕದಲ್ಲಿ ಮುಳುಗಿದ ರಾಘವನು ದೊಡ್ಡದಾದ, ಭಯಂಕರವಾದ ಭೂಕಂಪದಿಂದ ಪರ್ವತವು ಅಲ್ಲಾಡುವಂತೆ ಕಂಪಿಸುತ್ತಿದ್ದಾನೆ.॥47॥
ಮೂಲಮ್ - 48
ಸ ತ್ವಾಂ ಮನುಜಶಾರ್ದೂಲಃ ಕ್ಷಿಪ್ರಂ ಪ್ರಾಪ್ಸ್ಯತಿ ರಾಘವಃ ।
ಸಮಿತ್ರಬಾಂಧವಂ ಹತ್ವಾ ರಾವಣಂ ಜನಕಾತ್ಮಜೇ ॥
ಅನುವಾದ
ಎಲೈ ರಾಜಕುಮಾರೀ! ನಿನ್ನನ್ನು ಕಾಣದಿರುವ ಶ್ರೀರಾಮನು ಸುರಮ್ಯವಾದ ವನಗಳಲ್ಲಿ, ನದೀತೀರಗಳಲ್ಲಿ, ಚಿಲುಮೆಗಳ ಸಮೀಪದಲ್ಲಿ ಸಂಚರಿಸುತ್ತಿದ್ದರೂ ಅವುಗಳ ಸೊಬಗನ್ನು ನೋಡಿ ಸಂತೋಷಪಡುವುದಿಲ್ಲ.॥48॥
ಮೂಲಮ್ - 49
ಸಹಿತೌ ರಾಮಸುಗ್ರೀವಾವುಭಾವಕುರುತಾಂ ತದಾ ।
ಸಮಯಂ ವಾಲಿನಂ ಹಂತುಂ ತವ ಚಾನ್ವೇಷಣಂ ತಥಾ ॥
ಅನುವಾದ
ಎಲೈ ಜಾನಕೀ! ಆ ಮನುಜಶ್ರೇಷ್ಠನಾದ ಶ್ರೀರಾಮನು - ಬಂಧು ಮಿತ್ರರಿಂದ ಕೂಡಿದ ರಾವಣನನ್ನು ಸಂಹರಿಸಿ, ಶೀಘ್ರವಾಗಿ ನಿನ್ನನ್ನು ಸೇರಲಿರುವನು. (ನಿನ್ನನ್ನು ಕೊಂಡುಹೋಗುವನು)॥49॥
ಮೂಲಮ್ - 50
ತತಸ್ತಾಭ್ಯಾಂ ಕುಮಾರಾಭ್ಯಾಂ ವೀರಾಭ್ಯಾಂ ಸ ಹರೀಶ್ವರಃ ।
ಕಿಷ್ಕಿಂಧಾಂ ಸಮುಪಾಗಮ್ಯ ವಾಲೀ ಯುದ್ಧೇ ನಿಪಾತಿತಃ ॥
ಅನುವಾದ
ರಾಮ-ಸುಗ್ರೀವರಿಬ್ಬರೂ ವಾಲಿಯನ್ನು ಸಂಹರಿಸುವುದಕ್ಕೂ ಹಾಗೂ ನಿನ್ನನ್ನು ಹುಡುಕುವುದಕ್ಕೂ ಪರಸ್ಪರ ಪ್ರತಿಜ್ಞೆಯನ್ನು ಮಾಡಿಕೊಂಡರು.॥50॥
ಮೂಲಮ್ - 51
ತತೋ ನಿಹತ್ಯ ತರಸಾ ರಾಮೋ ವಾಲಿನಮಾಹವೇ ।
ಸರ್ವರ್ಕ್ಷಹರಿಸಂಘಾನಾಂ ಸುಗ್ರೀವಮಕರೋತ್ ಪತಿಮ್ ॥
ಅನುವಾದ
ಕಪೀಶ್ವರನಾದ ಸುಗ್ರೀವನು ವೀರ ರಾಜಕುಮಾರರಾದ ರಾಮ-ಲಕ್ಷ್ಮಣರೊಡನೆ ಕಿಷ್ಕಿಂಧೆಯನ್ನು ಸಮೀಪಿಸಿದನು. ಶ್ರೀರಾಮನ ಸಹಾಯದಿಂದ ಯುದ್ಧದಲ್ಲಿ ವಾಲಿಯು ಹತನಾದನು.॥51॥
ಮೂಲಮ್ - 52
ರಾಮಸುಗ್ರೀವಯೋರೈಕ್ಯಂ ದೇವ್ಯೇವಂ ಸಮಜಾಯತ ।
ಹನೂಮಂತಂ ಚ ಮಾಂ ವಿದ್ಧಿ ತಯೋರ್ದೂತಮಿಹಾಗತಮ್ ॥
ಅನುವಾದ
ಶ್ರೀರಾಮನು ಬಹಳ ಶೀಘ್ರವಾಗಿ ಯುದ್ಧಮಾಡುತ್ತಿದ್ದ ವಾಲಿಯನ್ನು ಸಂಹರಿಸಿ ಎಲ್ಲ ಕಪಿ-ಕರಡಿಗಳ ಸಮೂಹಕ್ಕೆ ಸುಗ್ರೀವನನ್ನು ರಾಜನನ್ನಾಗಿಸಿದನು. ಸೀತಮ್ಮಾ! ಹೀಗೆ ಶ್ರೀರಾಮ-ಸುಗ್ರೀವರಿಗೆ ಸಖ್ಯವು ಏರ್ಪಟ್ಟಿತು. ಆ ಇಬ್ಬರಿಗೂ ದೂತನಾಗಿ ನಾನು ಇಲ್ಲಿಗೆ ಬಂದಿರುವೆನು. ನನ್ನನ್ನು ಹನುಮಂತನೆಂದು ತಿಳಿ.॥52॥
ಮೂಲಮ್ - 53
ಸ್ವರಾಜ್ಯಂ ಪ್ರಾಪ್ಯ ಸುಗ್ರೀವಃ ಸಮಾನೀಯ ಹರೀಶ್ವರಾನ್ ।
ತ್ವದರ್ಥಂ ಪ್ರೇಷಯಾಮಾಸ ದಿಶೋ ದಶ ಮಹಾಬಲಾನ್ ॥
ಅನುವಾದ
ದೇವಿ! ಸುಗ್ರೀವನು ಕಿಷ್ಕಿಂಧೆಗೆ ರಾಜನಾದ ಬಳಿಕ ತನ್ನ ಅನುಯಾಯಿಗಳಾದ, ಮಹಾವೀರರಾದ ವಾನರಯೋಧರನ್ನು ಎಲ್ಲ ಕಡೆಗಳಿಂದ ಕರೆಯಿಸಿ, ನಿನ್ನನ್ನು ಹುಡುಕುವುದಕ್ಕಾಗಿ ಎಲ್ಲ ದಿಕ್ಕುಗಳಿಗೂ ಕಳಿಸಿಕೊಟ್ಟನು.॥53॥
ಮೂಲಮ್ - 54
ಆದಿಷ್ಟಾ ವಾನರೇಂದ್ರೇಣ ಸುಗ್ರೀವೇಣ ಮಹೌಜಸಾ ।
ಅದ್ರಿರಾಜಪ್ರತೀಕಾಶಾಃ ಸರ್ವತಃ ಪ್ರಸ್ಥಿತಾ ಮಹೀಮ್ ॥
ಅನುವಾದ
ಮಹಾತೇಜಸ್ವಿಗಳೂ, ಪರ್ವತಸದೃಶರಾಗಿಯೂ ಇರುವ ಕಪಿವೀರರು ವಾನರೇಂದ್ರನಾದ ಸುಗ್ರೀವನಿಂದ ಅಪ್ಪಣೆ ಪಡೆದು ಭೂಮಿಯ ಎಲ್ಲ ಕಡೆಗಳಲ್ಲಿಯೂ ನಿನ್ನನ್ನು ಹುಡುಕಲು ಹೋಗಿರುವರು.॥54॥
ಮೂಲಮ್ - 55
ತತಸ್ತು ಮಾರ್ಗಮಾಣಾ ವೈ ಸುಗ್ರೀವವಚನಾತುರಾಃ ।
ಚರಂತಿ ವಸುಧಾಂ ಕೃತ್ಸ್ನಾಂ ವಯಮನ್ಯೇ ಚ ವಾನರಾಃ ॥
ಅನುವಾದ
ಸುಗ್ರೀವನ ಕಠಿಣವಾದ ಆಜ್ಞೆಯಿಂದ ಭಯಗೊಂಡ ನಾವು ಮತ್ತು ಇತರ ಕಪಿನಾಯಕರು ನಿನ್ನನ್ನು ಹುಡುಕುತ್ತಾ ಈ ಭೂಮಂಡಲದಲ್ಲಿ ಸುತ್ತಾಡುತ್ತಿದ್ದೇವೆ.॥55॥
ಮೂಲಮ್ - 56
ಅಂಗದೋ ನಾಮ ಲಕ್ಷ್ಮೀನಾನ್ ವಾಲಿಸೂನುರ್ಮಹಾಬಲಃ ।
ಪ್ರಸ್ಥಿತಂ ಕಪಿಶಾರ್ದೂಲಸ್ತ್ರಿಭಾಗಬಲಸಂವೃತಃ ॥
ಅನುವಾದ
ಹಾಗೆ ನಾನಾ ದಿಕ್ಕುಗಳಿಗೆ ಹೊರಟವರಲ್ಲಿ ಶ್ರೀಮಂತನೂ, ಮಹಾಬಲಶಾಲಿಯೂ ಆದ ವಾಲಿಯ ಸುತನಾದ ಅಂಗದನು ಒಬ್ಬನು. ಅವನು ಸುಗ್ರೀವನ ಸೈನ್ಯದಲ್ಲಿ ಮೂರನೆಯ ಒಂದು ಭಾಗ ಸೈನ್ಯದೊಂದಿಗೆ ನಿನ್ನನ್ನು ಹುಡುಕಲು ದಕ್ಷಿಣ ದಿಕ್ಕಿಗೆ ಹೊರಟನು. ನಾನೂ ಅವನೊಡನೇ ಹೊರಟವನು.॥56॥
ಮೂಲಮ್ - 57
ತೇಷಾಂ ನೋ ವಿಪ್ರನಷ್ಟಾನಾಂ ವಿಂಧ್ಯೇ ಪರ್ವತಸತ್ತಮೇ ।
ಭೃಶಂ ಶೋಕಪರೀತಾನಾಮಹೋರಾತ್ರಗಣಾ ಗತಾಃ ॥
ಅನುವಾದ
ಹೀಗೆ ಹೊರಟ ನಾವೆಲ್ಲರೂ ಶ್ರೇಷ್ಠವಾದ ವಿಂಧ್ಯಪರ್ವತದಲ್ಲಿ ಸಂಚರಿಸುತ್ತಿದ್ದಾಗ ದಾರಿತಪ್ಪಿ ಒಂದು ಬಿಲದಲ್ಲಿ ಸಿಕ್ಕಿಹಾಕಿಕೊಂಡೆವು. ಹಾಗೆ ನಾವು ಅಲ್ಲಿ ಅತ್ಯಂತ ಪೀಡಿತರಾಗಿದ್ದಾಗಲೇ ಬಹಳ ದಿನಗಳು ಕಳೆದುಹೋದವು.॥57॥
ಮೂಲಮ್ - 58
ತೇ ವಯಂ ಕಾರ್ಯನೈರಾಶ್ಯಾತ್ ಕಾಲಸ್ಯಾತಿಕ್ರಮೇಣ ಚ ।
ಭಯಾಚ್ಚ ಕಪಿರಾಜಸ್ಯ ಪ್ರಾಣಾಂಸ್ತ್ಯಕ್ತುಂ ವ್ಯವಸ್ಥಿತಾಃ ॥
ಅನುವಾದ
ಕಾರ್ಯಸಾಧನೆಯಾಗಲಿಲ್ಲವೆಂಬ ನಿರಾಶೆಯಿಂದಲೂ, ಸುಗ್ರೀವನು ವಿಧಿಸಿದ್ದ ಗಡುವು ತೀರಿಹೋಗಿದ್ದುದರಿಂದಲೂ, ಕಾರ್ಯಸಾಧಿಸದೆ ಹಿಂತಿರುಗಿದರೆ ಕಪಿರಾಜನು ದಂಡಿಸುವನೆಂಬ ಭಯದಿಂದಲೂ ನಾವೆಲ್ಲರೂ ಪ್ರಾಯೋಪವೇಶದ ಮೂಲಕ ಪ್ರಾಣತ್ಯಾಗಮಾಡಲು ನಿಶ್ಚಯಿಸಿದೆವು.॥58॥
ಮೂಲಮ್ - 59
ವಿಚಿತ್ಯ ವನದುರ್ಗಾಣಿ ಗಿರಿಪ್ರಸ್ರವಣಾನಿ ಚ ।
ಅನಾಸಾದ್ಯ ಪದಂ ದೇವ್ಯಾಃ ಪ್ರಾಣಾಂಸ್ತ್ಯಕ್ತುಂ ವ್ಯವಸ್ಥಿತಾಃ ॥
ಅನುವಾದ
ನಾವು ಗಿರಿ, ದುರ್ಗಗಳಲ್ಲಿಯೂ, ನದೀತೀರಗಳಲ್ಲೂ, ನಿನ್ನನ್ನು ಹುಡುಕಿದೆವು. ದೇವೀ! ಅಲ್ಲೆಲ್ಲಾ ನಿನ್ನ ಜಾಡನ್ನು ತಿಳಿಯದೆ ಅಸುವನ್ನೀಗಲು ನಿಶ್ಚಯಿಸಿದೆವು.॥59॥
ಮೂಲಮ್ - 60
ತತಸ್ತಸ್ಯ ಗಿರೇರ್ಮೂರ್ಧ್ನಿ ವಯಂ ಪ್ರಾಯಮುಪಾಸ್ಮಹೇ ।
ದೃಷ್ಟ್ವಾ ಪ್ರಾಯೋಪವಿಷ್ಟಾಂಶ್ಚ ಸರ್ವಾನ್ ವಾನರಪುಂಗವಾನ್ ॥
ಮೂಲಮ್ - 61
ಭೃಶಂ ಶೋಕಾರ್ಣವೇ ಮಗ್ನಃ ಪರ್ಯದೇವಯದಂಗದಃ ।
ತವ ನಾಶಂ ಚ ವೈದೇಹಿ ವಾಲಿನಶ್ಚ ತಥಾ ವಧಮ್ ॥
ಮೂಲಮ್ - 62
ಪ್ರಾಯೋಪವೇಶಮಸ್ಮಾಕಂ ಮರಣಂ ಚ ಜಟಾಯುಷಃ ।
ತೇಷಾಂ ನಃ ಸ್ವಾಮಿಸಂದೇಶಾನ್ನಿರಾಶಾನಾಂ ಮುಮೂರ್ಷತಾಮ್ ॥
ಅನುವಾದ
ಅನಂತರ ಆ ಪರ್ವತದ ಮೇಲೆಯೇ ಪ್ರಾಯೋಪವೇಶವ್ರತವನ್ನು ಪ್ರಾರಂಭಿಸಿದೆವು. ನಿರಾಹಾರ ದೀಕ್ಷೆಯನ್ನು ಕೈಗೊಂಡ ವಾನರ ಪುಂಗವರೆಲ್ಲರನ್ನು ನೋಡಿ ಅಂಗದನು-ನಿನ್ನ ಸುಳಿವೇ ಸಿಕ್ಕದಿರುವುದನ್ನೂ, ವಾಲಿಯ ವಧೆಯನ್ನು, ಜಟಾಯುವಿನ ಮರಣವನ್ನು ಸ್ಮರಿಸುತ್ತಾ ಶೋಕ ಸಮುದ್ರದಲ್ಲಿ ಮುಳುಗಿ ಗೋಳಾಡುತ್ತಿದ್ದನು.॥60-62॥
ಮೂಲಮ್ - 63
ಕಾರ್ಯಹೇತೋರಿವಾಯಾತಃ ಶಕುನಿರ್ವೀರ್ಯವಾನ್ ಮಹಾನ್ ।
ಗೃಧ್ರರಾಜಸ್ಯ ಸೋದರ್ಯಃ ಸಂಪಾತಿರ್ನಾಮ ಗೃಧ್ರರಾಟ್ ॥
ಮೂಲಮ್ - 64
ಶ್ರುತ್ವಾ ಭ್ರಾತೃವಧಂ ಕೋಪಾದಿದಂ ವಚನಮಬ್ರವೀತ್ ।
ಯವೀಯಾನ್ ಕೇನ ಮೇ ಭ್ರಾತಾ ಹತಃ ಕ್ವ ಚ ನಿಪಾತಿತಃ ॥
ಅನುವಾದ
ರಾಜನು ನಿರ್ದೇಶಿಸಿದ್ದ ಕಾರ್ಯಸಾಧನೆಯಲ್ಲಿ ನಾವೆಲ್ಲರೂ ಸಂಪೂರ್ಣವಾಗಿ ನಿರಾಶರಾಗಿದ್ದೆವು. ಆ ಕಾರಣದಿಂದಲೇ ಅಸುನೀಗಲು ಸಿದ್ಧರಾಗಿದ್ದೆವು. ಆ ಸಮಯದಲ್ಲಿ ಅದೃಷ್ಟವಶಾತ್ ನಮ್ಮ ಕಾರ್ಯವನ್ನು ಸಾಧಿಸಿಕೊಡಲು ಆ ಸ್ಥಳಕ್ಕೆ ಮಹಾ ಬಲಶಾಲಿಯಾದ ಪಕ್ಷಿಯೊಂದು ಆಗಮಿಸಿತು. ಗೃಧ್ರರಾಜನಾದ ಜಟಾಯುವಿನ ಸೋದರನಾದ ಸಂಪಾತಿ ಎಂಬ ಹೆಸರಿನ ಆ ಗೃಧ್ರರಾಜನು ತನ್ನ ತಮ್ಮನು ಹತನಾದನೆಂಬ ವಾರ್ತೆಯನ್ನು ನಮ್ಮಿಂದ ಕೇಳಿ ಕೋಪಗೊಂಡು ಇಂತೆಂದನು.॥63-64॥
ಮೂಲಮ್ - 65
ಏತದಾಖ್ಯಾತುಮಿಚ್ಛಾಮಿ ಭವದ್ಭಿರ್ವಾನರೋತ್ತಮಾಃ ।
ಅಂಗದೋಽಕಥಯತ್ತಸ್ಯ ಜನಸ್ಥಾನೇ ಮಹದ್ವಧಮ್ ॥
ಅನುವಾದ
ಎಲೈ ವಾನರೋತ್ತಮರೇ! ನನ್ನ ತಮ್ಮನಾದ ಜಟಾಯುವನ್ನು ಯಾರು, ಎಲ್ಲಿ ಕೊಂದರು? ಇದನ್ನು ನಿಮ್ಮಿಂದ ಕೇಳಬಯಸುತ್ತೇನೆ.॥65॥
ಮೂಲಮ್ - 66
ರಕ್ಷಸಾ ಭೀಮರೂಪೇಣ ತ್ವಾಮುದ್ಧಿಶ್ಯ ಯಥಾತಥಮ್ ।
ಜಟಾಯುಷೋ ವಧಂ ಶ್ರುತ್ವಾ ದುಃಖಿತಃ ಸೋಽರುಣಾತ್ಮಜಃ ॥
ಅನುವಾದ
ವೈದೇಹಿ! ಸಂಪಾತಿಯು ಹೀಗೆ ಪ್ರಶ್ನಿಸಲು, ಜನಸ್ಥಾನದಲ್ಲಿ ನಿನ್ನನ್ನು ರಕ್ಷಿಸುವ ಸಲುವಾಗಿ ರಾವಣನನ್ನು ಎದುರಿಸಿ ನಿಂತ ಜಟಾಯುವನ್ನು ಮಹಾಭಯಂಕರನಾದ ರಾಕ್ಷಸರಾಜನು ಸಂಹರಿಸಿದನು. ಪರೋಪಕಾರಕ್ಕಾಗಿ ಪ್ರಶಂಸನೀಯ ಮೃತ್ಯುವನ್ನು ಪಡೆದ ವಿಷಯವನ್ನು ಅಂಗದನು ಸಂಪಾತಿಗೆ ತಿಳಿಸಿದನು.॥66॥
ಮೂಲಮ್ - 67
ತ್ವಾಮಾಹ ಸ ವರಾರೋಹೇ ವಸಂತೀಂ ರಾವಣಾಲಯೇ ।
ತಸ್ಯ ತದ್ವಚನಂ ಶ್ರುತ್ವಾ ಸಂಪಾತೇಃ ಪ್ರೀತಿವರ್ಧನಮ್ ॥
ಅನುವಾದ
ಅರುಣನ ಮಗನಾದ ಸಂಪಾತಿಯು ಜಟಾಯುವಿನ ನಿಧನ ವಾರ್ತೆಯನ್ನು ಕೇಳಿ ಅತಿ ದುಃಖಿತನಾಗಿ, ನೀನು ರಾವಣನ ಅಶೋಕವನದಲ್ಲಿ (ಲಂಕೆಯಲ್ಲಿ) ಇರುವ ಶುಭವಾರ್ತೆಯನ್ನು ನಮಗೆ ತಿಳಿಸಿದನು.॥67॥
ಮೂಲಮ್ - 68
ಅಂಗದ ಪ್ರಮುಖಾಃ ಸರ್ವೇ ತತಃ ಸಂಪ್ರಸ್ಥಿತಾ ವಯಮ್ ।
ವಿಂಧ್ಯಾದುತ್ಥಾಯ ಸಂಪ್ರಾಪ್ತಾಃ ಸಾಗರಸ್ಯಾಂತಮುತ್ತರಮ್ ॥
ಅನುವಾದ
ಮತ್ತೆ ಆ ಸಂಪಾತಿಯು ಹೇಳಿದ ಸಂತೋಷಕರವಾದ ಮಾತನ್ನು ಕೇಳಿ, ಅಂಗದ ಪ್ರಮುಖರಾದ ನಾವೆಲ್ಲರೂ ಅಲ್ಲಿಂದ ಹೊರಟೆವು.॥68॥
ಮೂಲಮ್ - 69
ತ್ವದ್ದರ್ಶನಕೃತೋತ್ಸಾಹಾ ಹೃಷ್ಟಾಸ್ತುಷ್ಟಾಃ ಪ್ಲವಂಗಮಾಃ ।
ಅಂಗದಪ್ರಮುಖಾಃ ಸರ್ವೇ ವೇಲೋಪಾಂತಮುಪಸ್ಥಿತಾಃ ॥
ಮೂಲಮ್ - 70
ಚಿಂತಾಂ ಜಗ್ಮುಃ ಪುನರ್ಭೀತಾಸ್ತ್ವದ್ದರ್ಶನಸಮುತ್ಸುಕಾಃ ।
ಅಥಾಹಂ ಹರಿಸೈನ್ಯಸ್ಯ ಸಾಗರಂ ಪ್ರೇಕ್ಷ್ಯಸೀದತಃ ॥
ಅನುವಾದ
ನಿನ್ನನ್ನು ಕಾಣುವುದರಲ್ಲೇ ವಿಶೇಷವಾದ ಉತ್ಸಾಹವುಳ್ಳ ನಾವುಗಳು ಸಂತೋಷದಲ್ಲಿ ಮುಳುಗಿ ಹೋಗಿ, ವಿಂಧ್ಯಪರ್ವತದಿಂದ ಹೊರಟು ಶ್ರೇಷ್ಠವಾದ ಸಮುದ್ರದ ಉತ್ತರ ತೀರಕ್ಕೆ ಬಂದೆವು.॥69-70॥
ಮೂಲಮ್ - 71
ವ್ಯವಧೂಯ ಭಯಂ ತೀವ್ರಂ ಯೋಜನಾನಾಂ ಶತಂ ಪ್ಲುತಃ ।
ಲಂಕಾ ಚಾಪಿ ಮಯಾ ರಾತ್ರೌ ಪ್ರವಿಷ್ಟಾ ರಾಕ್ಷಸಾಕುಲಾ ॥
ಮೂಲಮ್ - 72
ರಾವಣಶ್ಚ ಮಯಾ ದೃಷ್ಟಸ್ತ್ವಂ ಚ ಶೋಕಪರಿಪ್ಲುತಾ ।
ಏತತ್ತೇ ಸರ್ವಮಾಖ್ಯಾತಂ ಯಥಾವೃತ್ತಮನಿಂದಿತೇ ॥
ಮೂಲಮ್ - 73
ಅಭಿಭಾಷಸ್ವ ಮಾಂ ದೇವಿ ದೂತೋ ದಾಶರಥೇರಹಂ ।
ತಂ ಮಾಂ ರಾಮಕೃತೋದ್ಯೋಗಂ ತ್ವನ್ನಿಮಿತ್ತಮಿಹಾಗತಮಮ್ ॥
ಮೂಲಮ್ - 74
ಸುಗ್ರೀವಸಚಿವಂ ದೇವಿ ಬುಧ್ಯಸ್ವ ಪವನಾತ್ಮಜಮ್ ।
ಕುಶಲೀ ತವ ಕಾಕುತ್ಸ್ಥಃ ಸರ್ವಶಸ್ತ್ರಭೃತಾಂ ವರಃ ॥
ಅನುವಾದ
ನಿನ್ನ ದರ್ಶನದ ಆಕಾಂಕ್ಷೆಯಿಂದ ಸಾಗರ ತಟವನ್ನು ಸೇರಿದ ಅಂಗದಾದಿ ಪ್ರಮುಖರೆಲ್ಲರೂ ಮತ್ತೊಂದು ಭಯದಿಂದ ಚಿಂತಾಗ್ರಸ್ಥರಾದರು. ಅಪಾರವಾದ ಸಮುದ್ರವನ್ನು ನೋಡಿದೊಡನೆಯೇ ಕುಸಿದುಹೋದ ಆ ಕಪಿಸೈನ್ಯದ ಮಹಾ ಭಯವನ್ನು ದೂರಗೊಳಿಸಿ, ನಾನು ನೂರು ಯೋಜನ ವಿಸ್ತಾರವಾದ ಮಹಾಸಾಗರವನ್ನು ಹಾರಿಕೊಂಡು ಇಲ್ಲಿಗೆ ಬಂದೆನು. ಅದೇ ರಾತ್ರಿಯಲ್ಲಿ ರಾಕ್ಷಸರಿಂದ ನಿಬಿಡವಾದ ಲಂಕೆಯನ್ನು ಪ್ರವೇಶಿಸಿದೆನು. ಪೂಜ್ಯಳೇ! ನಾನು ರಾವಣನನ್ನು ನೋಡಿದೆನು. ಶೋಕಾಕುಲಳಾದ ನಿನ್ನನ್ನು ದರ್ಶಿಸಿದೆನು. ನಡೆದುದೆಲ್ಲವನ್ನು ಯಥಾವತ್ತಾಗಿ ನಿವೇದಿಸಿಕೊಂಡಿರುವೆನು. ಎಲೈ ದೇವಿಯೇ! ನಾನು ಶ್ರೀರಾಮನ ದೂತನು. ನನ್ನಲ್ಲಿ ವಿಶ್ವಾಸವನ್ನಿಡು. ಆ ಸ್ವಾಮಿಯ ಪ್ರೋತ್ಸಾಹದಿಂದಲೇ ನಿನ್ನನ್ನು ಹುಡುಕುತ್ತಾ ಇಲ್ಲಿಗೆ ಬಂದಿರುವೆನು. ದಯಮಾಡಿ ನನ್ನೊಡನೆ ಮಾತಾಡು.॥71-74॥
ಮೂಲಮ್ - 75
ಗುರೋರಾರಾಧನೇ ಯುಕ್ತೋ ಲಕ್ಷ್ಮಣಶ್ಚ ಸುಲಕ್ಷಣಃ ।
ತಸ್ಯ ವೀರ್ಯವತೋ ದೇವಿ ಭರ್ತುಸ್ತವ ಹಿತೇ ರತಃ ॥
ಮೂಲಮ್ - 76
ಅಹಮೇಕಸ್ತು ಸಂಪ್ರಾಪ್ತಃ ಸುಗ್ರೀವವಚನಾದಿಹ ।
ಮಯೇಯಮಸಹಾಯೇನ ಚರತಾ ಕಾಮರೂಪಿಣಾ ॥
ಅನುವಾದ
ಅಮ್ಮಾ! ನಾನು ವಾಯುಸುತನು. ಸುಗ್ರೀವನ ಮಂತ್ರಿಯು. ನನ್ನನ್ನು ನಂಬು. ಶಸ್ತ್ರಧಾರಿಗಳಲ್ಲಿಯೇ ಶ್ರೇಷ್ಠನಾದ ನಿನ್ನ ಪತಿಯಾದ ಶ್ರೀರಾಮನು ಕುಶಲಿಯಾಗಿದ್ದಾನೆ. ಸರ್ವಶುಭಲಕ್ಷಣಗಳಿಂದ ಕೂಡಿರುವ, ನಿನ್ನ ಪತಿಯ ಹಾಗೂ ತನ್ನ ಗುರುವಾದ ಶ್ರೀರಾಮನ ಹಿತದಲ್ಲಿಯೂ, ಸೇವೆಯಲ್ಲಿಯೂ ನಿರತನಾಗಿರುವ ವೀರ ಲಕ್ಷ್ಮಣನೂ ಕುಶಲಿಯಾಗಿದ್ದಾನೆ.॥75-76॥
ಮೂಲಮ್ - 77
ದಕ್ಷಿಣಾ ದಿಗನುಕ್ರಾಂತಾ ತ್ವನ್ಮಾರ್ಗ ವಿಚಯೈಷಿಣಾ ।
ದಿಷ್ಟ್ಯಾಹಂ ಹರಿಸೈನ್ಯಾನಾಂ ತ್ವನ್ನಾಶಮನುಶೋಚತಾಮ್ ॥
ಅನುವಾದ
ಸುಗ್ರೀವನ ಆಜ್ಞೆಯನ್ನು ಅನುಸರಿಸಿ ನಾನೊಬ್ಬನೇ ಈ ಲಂಕಾನಗರವನ್ನು ಸೇರಿದೆನು. ಕಾಮರೂಪಿಯಾದ ನಾನು ನಿನ್ನನ್ನು ಹುಡುಕುತ್ತಾ ಒಬ್ಬಂಟಿಗನಾಗಿ ಸಂಚರಿಸಿ ಈ ಅಶೋಕ ವನಕ್ಕೆ (ದಕ್ಷಿಣ ದಿಕ್ಕಿಗೆ) ಬಂದಿರುವೆನು.॥77॥
ಮೂಲಮ್ - 78
ಅಪನೇಷ್ಯಾಮಿ ಸಂತಾಪಂ ತವಾಭಿಗಮಶಂಸನಾತ್ ।
ದಿಷ್ಟ್ಯಾಹಿ ಮಮ ನ ವ್ಯರ್ಥಂ ದೇವಿ ಸಾಗರಲಂಘನಮ್ ॥
ಮೂಲಮ್ - 79
ಪ್ರಾಪ್ಸ್ಯಾಮ್ಯಹಮಿದಂ ದಿಷ್ಟ್ಯಾ ತ್ವದ್ದರ್ಶನಕೃತಂ ಯಶಃ ।
ರಾಘವಶ್ಚ ಮಹಾವೀರ್ಯಃ ಕ್ಷಿಪ್ರಂ ತ್ವಾಮಭಿಪತ್ಸ್ಯತೇ ॥
ಅನುವಾದ
ಅಮ್ಮಾ! ನೀನು ವಿನಾಶಹೊಂದಿರುವೆಯೆಂದು ಭಾವಿಸಿ ಕಪಿನಾಯಕರೆಲ್ಲರೂ ಬಹಳ ದುಃಖಪಡುತ್ತಿದ್ದಾರೆ. ಸೌಭಾಗ್ಯವಶದಿಂದ ನಿನ್ನ ದರ್ಶನವಾದುದನ್ನು ಹೇಳುವುದರ ಮೂಲಕ ಅವರ ಸಂತಾಪವನ್ನು ಹೋಗಲಾಡಿಸುವೆನು. ದೇವೀ! ಸೌಭಾಗ್ಯವಶದಿಂದ ನಾನು ಸಮುದ್ರವನ್ನು ಲಂಘಿಸಿದುದು ವ್ಯರ್ಥವಾಗಲಿಲ್ಲ.॥78-79॥
ಮೂಲಮ್ - 80
ಸಪುತ್ರಬಾಂಧವಂ ಹತ್ವಾ ರಾವಣಂ ರಾಕ್ಷಸಾಧಿಪಮ್ ।
ಮಾಲ್ಯವಾನ್ನಾಮ ವೈದೇಹಿ ಗಿರೀಣಾಮುತ್ತಮೋ ಗಿರಿಃ ॥
ಅನುವಾದ
ಯಾವುದೇ ವಿಘ್ನಗಳು ಎದುರಾಗದೆ ಎಲ್ಲರಿಗಿಂತ ಮುಂದಾಗಿ ನಿನ್ನನ್ನು ದರ್ಶಿಸಿದ ಕೀರ್ತಿಯು ನನಗೇ ದಕ್ಕಿದೆ. ಇದು ನನಗೆ ಪ್ರಾಪ್ತವಾದ ಮಹದ್ಭಾಗ್ಯವು. ಮಹಾವೀರನಾದ ರಾಘವನು ರಾಕ್ಷಸಾಧಿಪನಾದ ರಾವಣನನ್ನು, ಆತನ ಬಂಧು, ಮಿತ್ರ ಪರಿವಾರವನ್ನು, ಸಂಹರಿಸಿ ಬಹುಬೇಗನೇ ನಿನ್ನನ್ನು ಸೇರುತ್ತಾನೆ.॥80॥
ಮೂಲಮ್ - 81
ತತೋ ಗಚ್ಛತಿ ಗೋಕರ್ಣಂ ಪರ್ವತಂ ಕೇಸರೀ ಹರಿಃ ।
ಸ ಚ ದೇವರ್ಷಿಭಿರ್ದಿಷ್ಟಃ ಪಿತಾ ಮಮ ಮಹಾಕಪಿಃ ॥
ಮೂಲಮ್ - 82
ತೀರ್ಥೇ ನದೀಪತೇಃ ಪುಣ್ಯೇ ಶಂಬಸಾದನಮುದ್ಧರತ್ ।
ತಸ್ಯಾಹಂ ಹರಿಣಃ ಕ್ಷೇತ್ರೇ ಜಾತೋ ವಾತೇನ ಮೈಥಿಲಿ ॥
ಮೂಲಮ್ - 83
ಹನುಮಾನಿತಿ ವಿಖ್ಯಾತೋ ಲೋಕೇ ಸ್ವೇನೈವ ಕರ್ಮಣಾ ।
ವಿಶ್ವಾಸಾರ್ಥಂ ತು ವೈದೇಹಿ ಭರ್ತುರುಕ್ತಾ ಮಯಾ ಗುಣಾಃ ॥
ಅನುವಾದ
ವೈದೇಹೀ! ‘ಮಾಲ್ಯವಂತ’ ಎಂಬ ಪರ್ವತವು ಎಲ್ಲ ಪರ್ವತಗಳಲ್ಲಿಯೂ ಶ್ರೇಷ್ಠವಾದುದು. ಅಲ್ಲಿ ವಾಸವಾಗಿದ್ದ ಕೇಸರಿ ಎಂಬ ಕಪೀಶ್ವರನು ಒಮ್ಮೆ ಗೋಕರ್ಣಪರ್ವತಕ್ಕೆ ಹೋದನು. ಪುಣ್ಯಪ್ರದವಾದ ಗೋಕರ್ಣಕ್ಷೇತ್ರದ ಸಮುದ್ರ ತೀರದಲ್ಲಿ ಯಾತ್ರಾರ್ಥಿಗಳಿಗೆ ತೊಂದರೆಯನ್ನು ಕೊಡುತ್ತಿದ್ದ ಶಂಬಸಾದನೆಂಬ ರಾಕ್ಷಸನನ್ನು ಸಂಹರಿಸುವಂತೆ ಬ್ರಹ್ಮರ್ಷಿಗಳು ಕಪಿಶ್ರೇಷ್ಠನಾದ ನನ್ನ ತಂದೆಗೆ ಆಜ್ಞೆಮಾಡಿದರು. ಅವರ ಆಜ್ಞೆಯಂತೆ ನನ್ನ ತಂದೆಯು ಆ ರಾಕ್ಷಸನನ್ನು ಸಂಹರಿಸಿದನು. ಅಂತಹ ಮಹಾಪರಾಕ್ರಮಿಯಾದ ಕೇಸರಿಯ ಭಾರ್ಯೆಯಾದ ಅಂಜನಾದೇವಿಯಲ್ಲಿ ವಾಯುದೇವರ ಅನುಗ್ರಹದಿಂದ ನಾನು ಹುಟ್ಟಿದೆನು. ನನ್ನ ಪರಾಕ್ರಮದಿಂದಲೇ ನಾನು ಲೋಕದಲ್ಲಿ ‘ಹನುಮಂತ’ ಎಂಬ ಹೆಸರಿನಿಂದ ಖ್ಯಾತನಾಗಿದ್ದೇನೆ.॥81-83॥
ಮೂಲಮ್ - 84
ಅಚಿರಾದ್ರಾಘವೋ ದೇವಿ ತ್ವಾಮಿತೋ ನಯಿತಾನಘೇ ।
ಏವಂ ವಿಶ್ವಾಸಿತಾ ಸೀತಾ ಹೇತುಭಿಃ ಶೋಕಕರ್ಶಿತಾ ॥
ಅನುವಾದ
ಪವಿತ್ರಳಾದ ಓ ವೈದೇಹೀ! ನಿನಗೆ ವಿಶ್ವಾಸ ಉಂಟಾಗಲೆಂದು ನಾನು ನಿನ್ನ ಪತಿಯ ಎಲ್ಲ ಗುಣಗಳನ್ನು ಹೇಳಿದ್ದೇನೆ. ದೇವೀ! ರಾಘವನು ನಿಶ್ಚಯವಾಗಿಯೂ ಬಹುಬೇಗನೇ ನಿನ್ನನ್ನು ಇಲ್ಲಿಂದ ಕರೆದೊಯ್ಯುವನು.॥84॥
ಮೂಲಮ್ - 85
ಉಪಪನ್ನೈರಭಿಜ್ಞಾನೈರ್ದೂತಂ ತಮವಗಚ್ಛತಿ ।
ಅತುಲಂ ಚ ಗತಾ ಹರ್ಷಂ ಪ್ರಹರ್ಷೇಣ ಚ ಜಾನಕೀ ॥
ಅನುವಾದ
ಹೀಗೆ ಹನುಮಂತನು ನಾನಾ ವಿಧವಾದ ವಿಶ್ವಾಸಾರ್ಹವಾದ ಸಂಗತಿಗಳನ್ನು ಹೇಳಿ ಶೋಕ ಪೀಡಿತಳಾಗಿದ್ದ ಸೀತಾದೇವಿಯಲ್ಲಿ ವಿಶ್ವಾಸವನ್ನು ಮೂಡಿಸಿದನು. ಹನುಮಂತನು ಹೇಳಿದ ಶ್ರೀರಾಮನಲ್ಲಿದ್ದ ಸಹಜವಾದ ಗುರುತುಗಳಿಂದ ಅವನು ಶ್ರೀರಾಮನ ದೂತನೆಂದೇ ಸೀತೆಯು ದೃಢಪಡಿಸಿಕೊಂಡಳು.॥85॥
ಮೂಲಮ್ - 86
ನೇತ್ರಾಭ್ಯಾಂ ವಕ್ರಪಕ್ಷ್ಮಾಭ್ಯಾಂ ಮುಮೋಚಾನಂದಜಂ ಜಲಮ್ ।
ಚಾರು ತದ್ವದನಂ ತಸ್ಯಾಸ್ತಾಮ್ರಶುಕ್ಲಾಯತೇಕ್ಷಣಮ್ ।
ಅಶೋಭತ ವಿಶಾಲಾಕ್ಷ್ಯಾ ರಾಹುಮುಕ್ತ ಇವೋಡುರಾಟ್ ॥
ಅನುವಾದ
ಅಪಾರವಾದ ಸಂತೋಷವನ್ನು ಹೊಂದಿದ ಜಾನಕಿಯ ಸುಂದರವಾದ ಕಣ್ಣುಗಳಿಂದ ಹರ್ಷಾತಿರೇಕದ ಆನಂದಬಾಷ್ಪಗಳು ಸುರಿದವು. ಎಣ್ಣೆಗೆಂಪಾಗಿಯೂ, ಬಿಳುಪಾಗಿಯೂ, ವಿಶಾಲವಾಗಿಯೂ ಇದ್ದ ಕಣ್ಣುಗಳಿಂದ ಕೂಡಿದ್ದ ವಿಶಾಲಾಕ್ಷಿ ಸೀತಾದೇವಿಯ ಸುಂದರವಾದ ಮುಖಾರವಿಂದವು ರಾಹುವಿನಿಂದ ಮುಕ್ತವಾದ ಚಂದ್ರನಂತೆ ಅರಳಿತು.॥86॥
ಮೂಲಮ್ - 87
ಹನುಮಂತಂ ಕಪಿಂ ವ್ಯಕ್ತಂ ಮನ್ಯತೇ ನಾನ್ಯಥೇತಿ ಸಾ ।
ಅಥೋವಾಚ ಹನೂಮಾಂಸ್ತಾಮುತ್ತರಂ ಪ್ರಿಯದರ್ಶನಾಮ್ ॥
ಅನುವಾದ
ಆಗ ಅವಳು ಹನುಮಂತನನ್ನು ನಿಶ್ಚಯವಾಗಿ ವಾನರನೆಂದೇ ಭಾವಿಸಿದಳು. ಬಳಿಕ ಹನುಮಂತನು ಪ್ರಿಯ ದರ್ಶನಳಾದ ಸೀತಾದೇವಿಗೆ ಹೀಗೆ ಪ್ರತ್ಯುತ್ತರಗಳನ್ನು ಕೊಟ್ಟನು.॥87॥
ಮೂಲಮ್ - 88
ಏತತ್ತೇ ಸರ್ವಮಾಖ್ಯಾತಂ ಸಮಾಶ್ವಸಿಹಿ ಮೈಥಿಲಿ ।
ಕಿಂ ಕರೋಮಿ ಕಥಂ ವಾ ತೇ ರೋಚತೇ ಪ್ರತಿಯಾಮ್ಯಹಮ್ ॥
ಅನುವಾದ
ಎಲೈ ಮೈಥಿಲೀ! ಎಲ್ಲ ವಿಷಯಗಳನ್ನು ನಿನಗೆ ಯಥಾವತ್ತಾಗಿ ಹೇಳಿರುವೆನು. ಇನ್ನಾದರೂ ನೀನು ಸಮಾಧಾನವನ್ನು ಹೊಂದು. ನಾನು ಮುಂದೇನು ಮಾಡಲೀ? ನಿನಗೆ ಸಂತೋಷವಾಗುವಂತೆ ತಿಳಿಸು. ನಿನ್ನ ಆಜ್ಞೆಯನ್ನು ಪಡೆದು ನಾನು ಶ್ರೀರಾಮನಲ್ಲಿಗೆ ಹಿಂದಿರುಗುವೆನು.॥88॥
ಮೂಲಮ್ - 89
ಹತೇಽಸುರೇ ಸಂಯತಿ ಶಂಬಸಾದನೇ
ಕಪಿಪ್ರವೀರೇಣ ಮಹರ್ಷಿಚೋದನಾತ್ ।
ತತೋಽಸ್ಮಿ ವಾಯುಪ್ರಭವೋ ಹಿ ಮೈಥಿಲಿ
ಪ್ರಭಾವತಸ್ತತ್ಪ್ರತಿಮಶ್ಚ ವಾನರಃ ॥
ಅನುವಾದ
ಮಹರ್ಷಿಗಳ ಪ್ರೇರಣೆಯಂತೆ ಕಪಿಶ್ರೇಷ್ಠನಾದ ಕೇಸರಿಯು ಶಂಬಸಾದನನ್ನು ಸಂಹರಿಸಿದನು. ವಾಯುವಿನ ಅನುಗ್ರಹದಿಂದ ನಾನು ಕೇಸರಿಯ ಪತ್ನಿಯಾದ ಅಂಜನಾದೇವಿಯಲ್ಲಿ ಜನ್ಮ ತಾಳಿದೆನು. ವಾನರನೂ, ವಾಯುಪುತ್ರನೂ ಆದ ನಾನು ವಾಯುವಿನಷ್ಟೇ ಬಲಿಷ್ಠನಾಗಿರುವೆನು.॥89॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪಂಚತ್ರಿಂಶಃ ಸರ್ಗಃ ॥ 35 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತೈದನೆಯ ಸರ್ಗವು ಮುಗಿಯಿತು.