०३४ हनुमता स्वरामदौत्यनिवेदनम्

वाचनम्
ಭಾಗಸೂಚನಾ

ಸೀತಾದೇವಿಯು ಹನುಮಂತನನ್ನು ಸಂದೇಹಿಸಿದುದು, ಹನುಮಂತನು ಸಮಾಧಾನಪಡಿಸುತ್ತಾಶ್ರೀರಾಮನ ಗುಣಗಳನ್ನು ವರ್ಣಿಸಿದುದು

ಮೂಲಮ್ - 1

ತಸ್ಯಾಸ್ತದ್ವಚನಂ ಶ್ರುತ್ವಾ ಹನುಮಾನ್ ಹರಿಯೂಥಪಃ ।
ದುಃಖಾದ್ದುಃಖಾಭಿಭೂತಾಯಾಃ ಸಾಂತ್ವಮುತ್ತರಮಬ್ರವೀತ್ ॥

ಅನುವಾದ

ವಾನರಶ್ರೇಷ್ಠನಾದ ಹನುಮಂತನು ದುಃಖಪರಂಪರೆಯಲ್ಲಿ ಮುಳುಗಿಹೋದ ಆ ಸೀತಾದೇವಿಯ ವಚನಗಳನ್ನು ಕೇಳಿ, ಅವಳಿಗೆ ಸಮಾಧಾನವಾಗುವಂತೆ ಹೀಗೆ ಹೇಳಿದನು.॥1॥

ಮೂಲಮ್ - 2

ಅಹಂ ರಾಮಸ್ಯ ಸಂದೇಶಾದ್ದೇವಿ ದೂತಸ್ತವಾಗತಃ ।
ವೈದೇಹಿ ಕುಶಲೀ ರಾಮಸ್ತ್ವಾಂ ಚ ಕೌಶಲಮಬ್ರವೀತ್ ॥

ಅನುವಾದ

ಓ ಜಾನಕಿದೇವೀ! ನಾನು ಶ್ರೀರಾಮನ ದೂತನು. ಆ ಸ್ವಾಮಿಯ ಸಂದೇಶದಿಂದ ನಾನು ಇಲ್ಲಿಗೆ ಬಂದಿರುವೆನು. ಶ್ರೀರಾಮನು ಕ್ಷೇಮವಾಗಿರುವನು. ನಿನ್ನ ಕುಶಲವನ್ನು ಕೇಳಿರುವನು.॥2॥

ಮೂಲಮ್ - 3

ಯೋ ಬ್ರಾಹ್ಮಮಸ್ತ್ರಂ ವೇದಾಂಶ್ಚ ವೇದ ವೇದವಿದಾಂ ವರಃ ।
ಸ ತ್ವಾಂ ದಾಶರಥೀ ರಾಮೋ ದೇವಿ ಕೌಶಲಮಬ್ರವೀತ್ ॥

ಅನುವಾದ

ದೇವಿಯೇ! ದಶರಥನ ಕುಮಾರನಾದ ಶ್ರೀರಾಮನು ವೇದವೇತ್ತರಲ್ಲಿ ಶ್ರೇಷ್ಠನು. ಬ್ರಹ್ಮಾಸ್ತ್ರವೇ ಮೊದಲಾದ ವಿವಿಧ ಅಸ್ತ್ರಗಳಲ್ಲಿ ಪಾರಂಗತನು. ಸಕಲ ವೇದಗಳನ್ನು ಚೆನ್ನಾಗಿ ತಿಳಿದಿರುವವನು. ಅಂಥವನು ನಿನ್ನ ಕ್ಷೇಮ ಸಮಾಚಾರವನ್ನು ಕೇಳಿರುವನು.॥3॥

ಮೂಲಮ್ - 4

ಲಕ್ಷ್ಮಣಶ್ಚ ಮಹಾತೇಜಾ ಭರ್ತುಸ್ತೇಽನುಚರಃ ಪ್ರಿಯಃ ।
ಕೃತವಾನ್ ಶೋಕಸಂತಪ್ತಃ ಶಿರಸಾ ತೇಽಭಿವಾದನಮ್ ॥

ಅನುವಾದ

ನಿನ್ನ ಪತಿಯಾದ ಶ್ರೀರಾಮನಿಗೆ ಪ್ರಿಯನೂ, ಅನುಚರನೂ, ಮಹಾತೇಜಶ್ಶಾಲಿ ಯಾದ ಲಕ್ಷ್ಮಣನು ಕೂಡ ಶೋಕಸಂತಪ್ತನಾಗಿದ್ದು, ವಿನಯದಿಂದ ತಲೆಬಾಗಿ ನಿನಗೆ ಅಭಿವಾದನ ಮಾಡಿರುವನು.॥4॥

ಮೂಲಮ್ - 5

ಸಾ ತಯೋಃ ಕುಶಲಂ ದೇವೀ ನಿಶಮ್ಯ ನರಸಿಂಹಯೋಃ ।
ಪ್ರೀತಿಸಂಹೃಷ್ಟ ಸರ್ವಾಂಗೀ ಹನುಮಂತಮಥಾಬ್ರವೀತ್ ॥

ಅನುವಾದ

ನರಶ್ರೇಷ್ಠರಾದ ರಾಮ - ಲಕ್ಷ್ಮಣರು ಕುಶಲಿಗಳಾಗಿರುವರೆಂಬ ವಾರ್ತೆಯನ್ನು ಕೇಳಿ ಸೀತೆಯು ಹರ್ಷದಿಂದ ಪುಳಕಿತಳಾಗಿ ಹನುಮಂತನ ಬಳಿ ಹೇಳಿದಳು.॥5॥

ಮೂಲಮ್ - 6

ಕಲ್ಯಾಣೀ ಬತ ಗಾಥೇಯಂ ಲೌಕಿಕೀ ಪ್ರತಿಭಾತಿ ಮಾ ।
ಏತಿ ಜೀವಂತಮಾನಂದೋ ನರಂ ವರ್ಷಶತಾದಪಿ ॥

ಅನುವಾದ

‘‘ಬದುಕಿರುವ ಮನುಷ್ಯನಿಗೆ ನೂರು ವರ್ಷಗಳು ಕಳೆದ ಮೇಲಾದರೂ ಆನಂದವು ಲಭಿಸಿಯೇ ತೀರುತ್ತದೆ.’’ ಎಂಬ ಶುಭಕರವಾದ ಲೋಕದ ಗಾದೆಯು ಸತ್ಯವೆಂದೇ ತೋರುತ್ತದೆ.॥6॥

ಮೂಲಮ್ - 7

ತಯಾ ಸಮಾಗತೇ ತಸ್ಮಿನ್ ಪ್ರೀತಿರುತ್ಪಾದಿತಾದ್ಭುತಾ ।
ಪರಸ್ಪರೇಣ ಚಾಲಾಪಂ ವಿಶ್ವಸ್ತೌ ತೌ ಪ್ರಚಕ್ರತುಃ ॥

ಅನುವಾದ

ಶ್ರೀರಾಮನ ದೂತನಾಗಿ ಬಂದಿರುವ ಹನುಮಂತನ ಮೇಲೆ ಸೀತಾದೇವಿಗೆ ಪೂರ್ಣವಾದ ವಿಶ್ವಾಸವುಂಟಾಯಿತು. ಅವರಿಬ್ಬರೂ ಪರಸ್ಪರ ವಿಶ್ವಾಸವನ್ನು ಹೊಂದಿ ಪರಸ್ಪರ ಸಂಭಾಷಿಸತೊಡಗಿದರು.॥7॥

ಮೂಲಮ್ - 8

ತಸ್ಯಾಸ್ತದ್ವಚನಂ ಶ್ರುತ್ವಾ ಹನುಮಾನ್ ಹರಿಯೂಥಪಃ ।
ಸೀತಾಯಾಃ ಶೋಕದೀನಾಯಾಃ ಸಮೀಪಮುಪಚಕ್ರಮೇ ॥

ಅನುವಾದ

ಸೀತೆಯು ಹೇಳಿದ ಮಾತನ್ನು ಕೇಳಿ ಅವಳಿಗೆ ತನ್ನ ಕುರಿತು ಹಾಗೂ ತನ್ನ ಮಾತುಗಳಲ್ಲಿ ಸಂಪೂರ್ಣವಾದ ವಿಶ್ವಾಸ ಉಂಟಾಗಿದೆ ಎಂದು ಭಾವಿಸಿ, ವಾಯುಪುತ್ರನಾದ ಹನುಮಂತನು ಶೋಕಸಂತಪ್ತಳಾಗಿದ್ದ ಸೀತಾದೇವಿಯ ಬಳಿಗೆ ಸಾಗಿದನು.॥8॥

ಮೂಲಮ್ - 9

ಯಥಾ ಯಥಾ ಸಮೀಪಂ ಸ ಹನುಮಾನುಪಸರ್ಪತಿ ।
ತಥಾ ತಥಾ ರಾವಣಂ ಸಾ ತಂ ಸೀತಾ ಪರಿಶಂಕತೇ ॥

ಅನುವಾದ

ಹನುಮಂತನು ಸೀತೆಯ ಕಡೆಗೆ ಹೆಜ್ಜೆಗಳನ್ನು ಇಡುತ್ತಿರುವಂತೆ ಅವಳಿಗೆ ‘ಇವನೇನಾದರೂ ರಾವಣನೇ ಆಗಿರಬಹುದೇ?’ ಎಂಬ ಸಂದೇಹವು ಉಂಟಾಯಿತು.॥9॥

ಮೂಲಮ್ - 10

ಅಹೋ ಧಿಕ್ದುಷ್ಕೃತಮಿದಂ ಕಥಿತಂ ಹಿ ಯದಸ್ಯ ಮೇ ।
ರೂಪಾಂತರಮುಪಾಗಮ್ಯ ಸ ಏವಾಯಂ ಹಿ ರಾವಣಃ ॥

ಮೂಲಮ್ - 11

ತಾಮಶೋಕಸ್ಯ ಶಾಖಾಂ ಸಾ ವಿಮುಕ್ತ್ವಾ ಶೋಕಕರ್ಶಿತಾ ।
ತಸ್ಯಾಮೇವಾನವದ್ಯಾಂಗೀ ಧರಣ್ಯಾಂ ಸಮುಪಾವಿಶತ್ ॥

ಅನುವಾದ

‘‘ಅಯ್ಯಯ್ಯೊ! ಇವನನ್ನು ಪೂರ್ತಿಯಾಗಿ ನಂಬಿ ನನ್ನ ಎಲ್ಲ ಕಥೆಯನ್ನು ಹೇಳಿಬಿಟ್ಟೆ. ಎಂತಹ ಅನುಚಿತವಾದ ಕಾರ್ಯವನ್ನು ಮಾಡಿಬಿಟ್ಟೆ ! ವೇಷವನ್ನು ಮರೆಸಿಕೊಂಡು ಆ ರಾವಣನೇ ಇಲ್ಲಿಗೆ ಆಗಮಿಸಿದ್ದಾನೋ ಏನೋ!’’ ದಿವ್ಯಶರೀರದಿಂದ ಶೋಭಿತೆಯೂ, ಶೋಕಾರ್ತೆಯೂ ಆದ ಆ ಸೀತಾದೇವಿಯು ಅಶೋಕವೃಕ್ಷದ ಕೊಂಬೆಯನ್ನು ಬಿಟ್ಟು ನೆಲದಮೇಲೆ ಕುಳಿತಳು.॥10-11॥

ಮೂಲಮ್ - 12

ಹನುಮಾನಪಿ ದುಃಖಾರ್ತಾಂ ತಾಂ ದೃಷ್ಟ್ವಾ ಭಯಮೋಹಿತಾಮ್ ।
ಅವಂದತ ಮಹಾ ಬಾಹುಸ್ತತಸ್ತಾಂ ಜನಕಾತ್ಮಜಾಮ್ ॥

ಅನುವಾದ

ಮಹಾಬಾಹುವಾದ ಹನುಮಂತನು ದುಃಖಾರ್ತಳಾಗಿ ಭಯವಿಹ್ವಲಳಾಗಿದ್ದ ಆಕೆಯನ್ನು ನೋಡಿ ಸ್ವಲ್ಪ ಸಮೀಪಕ್ಕೆ ಹೋಗಿ ಆ ಜಾನಕಿಯನ್ನು ನಮಸ್ಕರಿಸಿದನು. ಆದರೆ ಇವನು ಕಪಿವೇಷಧಾರಿ ರಾವಣನೆಂದೇ ಭಾವಿಸಿ ಭಯಾಕುಲಳಾದ ಸೀತಾದೇವಿಯು ಮಾತ್ರ ಪುನಃ ಅವನ ಕಡೆಗೆ ತಲೆಯೆತ್ತಿ ನೋಡಲೇ ಇಲ್ಲ.॥12॥

ಮೂಲಮ್ - 13

ಸಾ ಚೈನಂ ಭಯವಿತ್ರಸ್ತಾ ಭೂಯೋ ನೈವಾಭ್ಯುದೈಕ್ಷತ ।
ತಂ ದೃಷ್ಟ್ವಾ ವಂದಮಾನಂ ತು ಸೀತಾ ಶಶಿನಿಭಾನನಾ ॥

ಅನುವಾದ

ಮತ್ತೆ ಚಂದ್ರನಂತೆ ಆಹ್ಲಾದಕರವಾದ ಮುಖವುಳ್ಳ ಸೀತಾದೇವಿಯು ತನಗೆ ನಮಸ್ಕರಿಸುತ್ತಿದ್ದ ಕಪಿವರನನ್ನು ನೋಡಿ ನಿಟ್ಟುಸಿರುಬಿಡುತ್ತಾ ಮಧುರಕಂಠದಿಂದ ಹೀಗೆ ನುಡಿದಳು.॥13॥

ಮೂಲಮ್ - 14

ಅಬ್ರವೀದ್ದೀರ್ಘಮುಚ್ಛ್ವಸ್ಯ ವಾನರಂ ಮಧುರಸ್ವರಾ ।
ಮಾಯಾಂ ಪ್ರವಿಷ್ಟೋ ಮಾಯಾವೀ ಯದಿ ತ್ವಂ ರಾವಣಃ ಸ್ವಯಮ್ ॥

ಅನುವಾದ

ನೀನು ಮಾಯಾವಿಯಾದ ರಾವಣನೇ ಆಗಿರುವುದಾದರೆ, ಮಾಯಾ ವೇಷದಿಂದ ನನ್ನನ್ನು ಸಂತಾಪಗೊಳಿಸುವುದರಿಂದ ನಿನಗೆ ಖಂಡಿತವಾಗಿ ಒಳಿತಾಗುವುದಿಲ್ಲ.॥14॥

ಮೂಲಮ್ - 15

ಉತ್ಪಾದಯಸಿ ಮೇ ಭೂಯಃ ಸಂತಾಪಂ ತನ್ನ ಶೋಭನಮ್ ।
ಸ್ವಂ ಪರಿತ್ಯಜ್ಯ ರೂಪಂ ಯಃ ಪರಿವ್ರಾಜಕರೂಪಧೃತ್ ॥

ಅನುವಾದ

ನಿಜರೂಪವನ್ನು ಪರಿತ್ಯಜಿಸಿ ಪರಿವ್ರಾಜಕ ರೂಪವನ್ನು ಧರಿಸಿ ಬಂದಿದ್ದವನನ್ನು ಜನಸ್ಥಾನದಲ್ಲಿ ನಾನು ನೋಡಿದ್ದೇನೋ, ಆ ರಾವಣನೇ ನೀನೋ?॥15॥

ಮೂಲಮ್ - 16

ಜನಸ್ಥಾನೇ ಮಯಾ ದೃಷ್ಟಸ್ತ್ವಂ ಸ ಏವಾಸಿ ರಾವಣಃ ।
ಉಪವಾಸಕೃಶಾಂ ದೀನಾಂ ಕಾಮರೂಪ ನಿಶಾಚರ ॥

ಅನುವಾದ

ಕಾಮರೂಪಿಯಾದ ನಿಶಾಚರನೇ! ನಾನು ಉಪವಾಸದಿಂದ ಕೃಶಳಾಗಿರುವೆನು. ದೀನೆಯಾಗಿರುವೆನು. ಪತಿವಿರಹ ಶೋಕದಿಂದ ಸಂತಪ್ತಳಾಗಿರುವೆನು. ಇಂತಹ ನನ್ನನ್ನು ನೀನು ಪುನಃ ಸಂತಾಪಗೊಳಿಸುವುದು ನಿನಗೆ ನಿಶ್ಚಯವಾಗಿ ಒಳ್ಳೆಯದಲ್ಲ.॥16॥

ಮೂಲಮ್ - 17

ಸಂತಾಪಯಸಿ ಮಾಂ ಭೂಯಃ ಸಂತಪ್ತಾಂ ತನ್ನ ಶೋಭನಮ್ ।
ಅಥವಾ ನೈತದೇವಂ ಹಿ ಯನ್ಮಯಾ ಪರಿಶಂಕಿತಮ್ ॥

ಅನುವಾದ

ಸೀತೆಯು ಕ್ಷಣಕಾಲ ಯೋಚಿಸಿ ಹೇಳಿದಳು ಅಥವಾ ನಾನು ಈ ರೀತಿ ಶಂಕಿಸುವುದು ಸರಿಯಿರಲಾರದು. ನೀನು ರಾವಣನಿರಲಾರೆ. ಏಕೆಂದರೆ, ನಿನ್ನ ದರ್ಶನದಿಂದ ನನ್ನ ಮನಸ್ಸಿನಲ್ಲಿ ಅನಿರ್ವಚನೀಯ ಪ್ರೀತಿಯು ಆವಿರ್ಭವಿಸಿದೆ.॥17॥

ಮೂಲಮ್ - 18

ಮನಸೋ ಹಿ ಮಮ ಪ್ರೀತಿರುತ್ಪನ್ನಾ ತವ ದರ್ಶನಾತ್ ।
ಯದಿ ರಾಮಸ್ಯ ದೂತಸ್ತ್ವಮಾಗತೋ ಭದ್ರಮಸ್ತು ತೇ ॥

ಅನುವಾದ

ಎಲೈ ಕಪಿಶ್ರೇಷ್ಠಾ! ನೀನು ನಿಜವಾಗಿ ರಾಮನ ದೂತನಾಗಿ ಇಲ್ಲಿಗೆ ಬಂದಿರುವೆಯಾದರೆ ನಿನಗೆ ಮಂಗಳವಾಗಲೀ. ನನಗೆ ಪ್ರಿಯವಾದ ರಾಮನ ಕಥೆಯನ್ನು ಹೇಳು.॥18॥

ಮೂಲಮ್ - 19

ಪೃಚ್ಛಾಮಿ ತ್ವಾಂ ಹರಿಶ್ರೇಷ್ಠ ಪ್ರಿಯಾ ರಾಮಕಥಾ ಹಿ ಮೇ ।
ಗುಣಾನ್ ರಾಮಸ್ಯ ಕಥಯ ಪ್ರಿಯಸ್ಯ ಮಮ ವಾನರ ॥

ಅನುವಾದ

ಹೇ ವಾನರನೇ! ಸೌಮ್ಯನೇ! ಪ್ರವಾಹದ ರಭಸವು ನದಿಯ ದಡವನ್ನು ಕೊಚ್ಚಿಕೊಂಡು ಹೋಗುವಂತೆ - ನನ್ನ ಮನಸ್ಸನ್ನು ನೀನು ಅಪಹರಿಸಿಬಿಟ್ಟಿರುವೆ. ಪ್ರಿಯನಾದ ನನ್ನ ರಾಮನ ಗುಣಗಳನ್ನು ವರ್ಣಿಸಿ ಹೇಳು.॥19॥

ಮೂಲಮ್ - 20

ಚಿತ್ತಂ ಹರಸಿ ಮೇ ಸೌಮ್ಯ ನದೀಕೂಲಂ ಯಥಾ ರಯಃ ।
ಅಹೋ ಸ್ವಪ್ನಸ್ಯ ಸುಖತಾ ಯಾಹಮೇವಂ ಚಿರಾಹೃತಾ ॥

ಅನುವಾದ

ಆಹಾ! ಈ ಸ್ವಪ್ನವೂ ಅತ್ಯಂತ ಸುಖಾವಹವೇ ಆಗಿದೆ. ನನ್ನನ್ನು ಅಪಹರಿಸಿ ಬಂದು ತುಂಬಾ ಕಾಲವಾಯಿತು. ಇಷ್ಟು ದಿನಗಳ ಬಳಿಕ ಶ್ರೀರಾಮನು ಕಳಿಸಿದ ದೂತನಾದ ವಾನರನನ್ನು ಇಂದು ನಾನು ಪ್ರತ್ಯಕ್ಷವಾಗಿನೋಡುತ್ತಿದ್ದೇನೆ.॥20॥

ಮೂಲಮ್ - 21

ಪ್ರೇಷಿತಂ ನಾಮ ಪಶ್ಯಾಮಿ ರಾಘವೇಣ ವನೌಕಸಮ್ ।
ಸ್ವಪ್ನೇಽಪಿ ಯದ್ಯಹಂ ವೀರಂ ರಾಘವಂ ಸಹಲಕ್ಷ್ಮಣಮ್ ॥

ಅನುವಾದ

ಇದು ಸ್ವಪ್ನವೇ ಆಗಿದ್ದರೂ ಇದರಿಂದ ನನಗೆ ನೆಮ್ಮದಿ ಉಂಟಾಗಿದೆ. ಇದೇ ಸ್ವಪ್ನದಲ್ಲಿ ನಾನು ಲಕ್ಷ್ಮಣಸಹಿತ ವೀರನಾದ ಶ್ರೀರಾಮನನ್ನು ನೋಡಿದೆನಾದರೆ ನನ್ನ ಪರಿತಾಪಗಳೆಲ್ಲ ಕಳೆದುಹೋಗುವವು. ಆದರೆ ಸ್ವಪ್ನವೂ ನನ್ನ ವಿಷಯದಲ್ಲಿ ಮತ್ಸರಿಸುತ್ತದೆ.॥21॥

ಮೂಲಮ್ - 22

ಪಶ್ಯೇಯಂ ನಾವಸೀದೇಯಂ ಸ್ವಪ್ನೋಽಪಿ ಮಮ ಮತ್ಸರೀ ।
ನಾಹಂ ಸ್ವಪ್ನಮಿಮಂ ಮನ್ಯೇ ಸ್ವಪ್ನೇ ದೃಷ್ಟ್ವಾ ಹಿ ವಾನರಮ್ ॥

ಅನುವಾದ

ಸ್ವಪ್ನದಲ್ಲಿ ವಾನರನನ್ನು ನೋಡುವುದರಿಂದ ಶುಭವಾಗಲು ಅವಕಾಶವಿಲ್ಲ. ಆದರೆ ನನಗೆ ಶುಭವೇ ಜರಗಿದೆ. ಆದ್ದರಿಂದ ಇದನ್ನು ನಾನು ಸ್ವಪ್ನವೆಂದು ಭಾವಿಸುವುದಿಲ್ಲ.॥22॥

ಮೂಲಮ್ - 23

ನ ಶಕ್ಯೋಽಭ್ಯುದಯಃ ಪ್ರಾಪ್ತುಂ ಪ್ರಾಪ್ತಶ್ಚಾಭ್ಯುದಯೋ ಮಮ ।
ಕಿಂ ನು ಸ್ಯಾಚ್ಚಿತ್ತಮೋಹೋಽಯಂ ಭವೇದ್ವಾತಗತಿಸ್ತ್ವಿಯಮ್ ॥

ಅನುವಾದ

ಇದು ಶ್ರೀರಾಮನ ನಿರಂತರ ಚಿಂತನೆಯಿಂದ ಉಂಟಾದ ಚಿತ್ತ ಭ್ರಮೆಯೇ? ವಾತ ಪ್ರಕೋಪವೇ? ಉನ್ಮಾದದಿಂದ ಉಂಟಾದ ವಿಕಾರವೋ ಇಲ್ಲವೇ ಮರೀಚಿಕೆಯೇ?॥23॥

ಮೂಲಮ್ - 24

ಉನ್ಮಾದಜೋ ವಿಕಾರೋ ವಾ ಸ್ಯಾದಿಯಂ ಮೃಗತೃಷ್ಣಿಕಾ ।
ಅಥವಾ ನಾಯಮುನ್ಮಾದೋ ಮೋಹೋಽಪ್ಯುನ್ಮಾದಲಕ್ಷಣಃ ॥

ಅನುವಾದ

ಆದರೆ ನನಗೆ ದೇಹದ ಮೇಲೆ ಪ್ರಜ್ಞೆಯು ಚೆನ್ನಾಗಿದೆ. ನಾನು ಶ್ರೀರಾಮನ ಭಾರ್ಯೆಯಾದ ಸೀತೆಯೆಂಬುದು ಚೆನ್ನಾಗಿ ತಿಳಿಯುತ್ತಿದ್ದೇನೆ. ಇವನನ್ನು ನಾನು ವನಚರನೆಂದೂ ಗುರುತಿಸುತ್ತಿದ್ದೇನೆ. ಅದರಿಂದ ಇದು ಉನ್ಮಾದವಲ್ಲ. ಉನ್ಮಾದದ ಲಕ್ಷಣವಾದ ಮೋಹವೂ ಅಲ್ಲ.॥24॥

ಮೂಲಮ್ - 25

ಸಂಬುಧ್ಯೇ ಚಾಹಮಾತ್ಮಾನಮಿಮಂ ಚಾಪಿ ವನೌಕಸಮ್ ।
ಇತ್ಯೇವಂ ಬಹುಧಾ ಸೀತಾ ಸಂಪ್ರಧಾರ್ಯ ಬಲಾಬಲಮ್ ॥

ಅನುವಾದ

ಹೀಗೆ *ಈ ವಿಧವಾಗಿ ಸೀತಾದೇವಿಯು ಪರಿ-ಪರಿಯಾಗಿ ಬಲಾಬಲಗಳನ್ನು ಸಂಪೂರ್ಣವಾಗಿ ವಿಚಾರ ಮಾಡಿ, ರಾಕ್ಷಸರು ಕಾಮರೂಪಿಗಳಾದುದರಿಂದ ಇವನನ್ನು ರಾವಣನೆಂದೇ ಭವಿಸಿದಳು.॥25॥

ಟಿಪ್ಪನೀ
  • ರಾಕ್ಷಸರು ಮಹಾಬಲಸಂಪನ್ನರು. ಅವರೊಡನೆ ಹೋಲಿಸಿದರೆ ವಾನರರ ಬಲವು ಅತ್ಯಲ್ಪವು. ಮಹಾಸಮುದ್ರವನ್ನು ಲಂಘಿಸುವುದಾಗಲೀ, ಈ ರಾಕ್ಷಸರಿಂದ ತಪ್ಪಿಸಿಕೊಂಡು ಇಲ್ಲಿಗೆ ಬರುವುದಾಗಲೀ, ಓರ್ವ ವಾನರಮಾತ್ರನಿಗೆ ಅಸಾಧ್ಯವು.
ಮೂಲಮ್ - 26

ರಕ್ಷಸಾಂ ಕಾಮರೂಪತ್ವಾನ್ಮೇನೇ ತಂ ರಾಕ್ಷಸಾಧಿಪಮ್ ।
ಏತಾಂ ಬುದ್ಧಿಂ ತದಾ ಕೃತ್ವಾಸೀತಾ ಸಾ ತನುಮಧ್ಯಮಾ ॥

ಅನುವಾದ

ಸೌಂದರ್ಯವತಿಯಾದ ಆ ಸೀತಾದೇವಿಯು ಈ ವಿಧದಿಂದ ನಿಶ್ಚಯಿಸಿಕೊಂಡು ಮತ್ತೆ ಹನುಮಂತನ ಬಳಿ ಯಾವ ಮಾತನ್ನೂ ಆಡಲಿಲ್ಲ.॥26॥

ಮೂಲಮ್ - 27

ನ ಪ್ರತಿವ್ಯಾಜಹಾರಾಥ ವಾನರಂ ಜನಕಾತ್ಮಜಾ ।
ಸೀತಾಯಾಶ್ಚಿಂತಿತಂ ಬುದ್ಧ್ವಾ ಹನುಮಾನ್ ಮಾರುತಾತ್ಮಜಃ ॥

ಅನುವಾದ

ವಾಯುಸುತನಾದ ಹನುಮಂತನು ಅವಳ ಮನೋಭಾವವನ್ನು ತಿಳಿದು, ಕಿವಿಗಳಿಗೆ ಇಂಪಾಗಿರುವ ಮಧುರ ವಚನಗಳಿಂದ ಸೀತಾದೇವಿಯನ್ನು ಹೆಚ್ಚಾಗಿ ಹರ್ಷಗೊಳಿಸಿದನು.॥27॥

ಮೂಲಮ್ - 28

ಶ್ರೋತ್ರಾನುಕೂಲೈರ್ವಚನೈಸ್ತದಾ ತಾಂ ಸಂಪ್ರಹರ್ಷಯತ್ ।
ಆದಿತ್ಯ ಇವ ತೇಜಸ್ವೀ ಲೋಕಕಾಂತಃ ಶಶೀ ಯಥಾ ॥

ಮೂಲಮ್ - 29

ರಾಜಾ ಸರ್ವಸ್ಯ ಲೋಕಸ್ಯ ದೇವೋ ವೈಶ್ರವಣೋ ಯಥಾ ।
ವಿಕ್ರಮೇಣೋಪಪನ್ನಶ್ಚ ಯಥಾ ವಿಷ್ಣುರ್ಮಹಾಯಶಾಃ ॥

ಮೂಲಮ್ - 30

ಸತ್ಯವಾದೀ ಮಧುರವಾಗ್ದೇವೋ ವಾಚಸ್ಪತಿರ್ಯಥಾ ।
ರೂಪವಾನ್ ಸುಭಗಃ ಶ್ರೀಮಾನ್ ಕಂದರ್ಪ ಇವ ಮೂರ್ತಿಮಾನ್ ॥

ಮೂಲಮ್ - 31

ಸ್ಥಾನಕ್ರೋಧಃ ಪ್ರಹರ್ತಾ ಚ ಶ್ರೇಷ್ಠೋ ಲೋಕೇ ಮಹಾರಥಃ ।
ಬಾಹುಚ್ಛಾಯಾಮವಷ್ಟಬ್ಧೋ ಯಸ್ಯ ಲೋಕೋ ಮಹಾತ್ಮನಃ ॥

ಅನುವಾದ

‘‘ಶ್ರೀರಾಮನು ಸೂರ್ಯನಂತೆ ಮಹಾತೇಜಸ್ವಿಯೂ, ಚಂದ್ರನಂತೆ ಲೋಕಕ್ಕೆ ಆಹ್ಲಾದವನ್ನುಂಟುಮಾಡುವವನೂ, ರಾಜಾಧಿರಾಜನಾದ ಕುಬೇರನಂತೆ ಸಕಲ ಲೋಕಗಳಿಗೂ ರಾಜನಾಗಿದ್ದಾನೆ. ಶ್ರೀರಾಮನು ಮಹಾಯಶಸ್ವಿಯಾದ ವಿಷ್ಣುವಿನಂತೆ ಪರಾಕ್ರಮ ಸಂಪನ್ನನು. ಸತ್ಯವಾದಿಯು. ದೇವಗುರು ಬೃಹಸ್ಪತಿಯಂತೆ ಮಧುರವಾಗಿ ಮಾತಾಡುವವನು. ರೂಪಸಂಪನ್ನನು. ಸೌಭಾಗ್ಯಶಾಲಿಯು. ಶರೀರವನ್ನು ಧರಿಸಿರುವ ಮನ್ಮಥನಂತೆ ಸ್ಫುರದ್ರೂಪಿಯು. ಉಚಿತವಾದ ಸಮಯದಲ್ಲಿ ಕೋಪಗೊಳ್ಳುವವನು. ಸಮಯವರಿತು ಶತ್ರುಗಳನ್ನು ಸಂಹರಿಸುವವನು. ಲೋಕದಲ್ಲಿ ಸರ್ವಶ್ರೇಷ್ಠನಾದ ಮಹಾರಥನು. ಲೋಕವೇ ತನ್ನ ರಕ್ಷಣೆಗಾಗಿ ಮಹಾತ್ಮನಾದ ಶ್ರೀರಾಮನ ಬಾಹುಗಳ ಆಶ್ರಯವನ್ನು ಪಡೆದಿದೆ.॥28-31॥

ಮೂಲಮ್ - 32

ಅಪಕೃಷ್ಯಾಶ್ರಮಪದಾನ್ಮೃಗರೂಪೇಣ ರಾಘವಮ್ ।
ಶೂನ್ಯೇ ಯೇನಾಪನೀತಾಸಿ ತಸ್ಯ ದ್ರಕ್ಷ್ಯಸಿ ಯತ್ ಫಲಮ್ ॥

ಅನುವಾದ

ರಾಘವನನ್ನು ಮಾಯಾಮೃಗದ ಮೂಲಕ ಆಶ್ರಮದಿಂದ ಹೊರಗೆ ಹೋಗುವಂತೆ ಮಾಡಿ ಶೂನ್ಯವಾದ ಆಶ್ರಮದಲ್ಲಿದ್ದ ನಿನ್ನನ್ನು ಅಪಹರಿಸಿರುವವನ ದುಷ್ಕರ್ಮಕ್ಕೆ ಸಿಗುವ ಫಲವನ್ನು ನೀನೇ ಕಾಣಲಿರುವೆ.॥32॥

ಮೂಲಮ್ - 33

ನಚಿರಾದ್ರಾವಣಂ ಸಂಖ್ಯೇ ಯೋ ವಧಿಷ್ಯತಿ ವೀರ್ಯವಾನ್ ।
ರೋಷಪ್ರಯುಕ್ತೈರಿಷುಭಿಃ ಜ್ವಲದ್ಭಿರಿವ ಪಾವಕೈಃ ॥

ಅನುವಾದ

ಬಹು ಬೇಗನೇ ಮಹಾವೀರನಾದ ಶ್ರೀರಾಮನು ಯುದ್ಧದಲ್ಲಿ ಕ್ರೋಧಪೂರ್ವಕವಾಗಿ ಬಿಡುವ ಅಗ್ನಿಸದೃಶವಾದ ಹರಿತವಾದ ಬಾಣಗಳನ್ನು ಪ್ರಯೋಗಿಸಿ ಆ ರಾವಣನನ್ನು ವಧಿಸುವನು.॥33॥

ಮೂಲಮ್ - 34

ತೇನಾಹಂ ಪ್ರೇಷಿತೋ ದೂತಸ್ತ್ವತ್ಸಕಾಶಮಿಹಾಗತಃ ।
ತ್ವದ್ವಿಯೋಗೇನ ದುಃಖಾರ್ತಃ ಸ ತ್ವಾಂ ಕೌಶಲಮಬ್ರವೀತ್ ॥

ಅನುವಾದ

ಆ ಸ್ವಾಮಿಯು ಕಳಿಸಿದ ದೂತನಾದ ನಾನು ನಿನ್ನ ಬಳಿಗೆ ಬಂದಿರುವೆನು. ನಿನ್ನ ವಿಯೋಗದಿಂದ ಶ್ರೀರಾಮನು ದುಃಖಪೀಡಿತನಾಗಿರುವನು. ಅವನು ನಿನ್ನ ಕುಶಲವನ್ನು ವಿಚಾರಿಸಿದ್ದಾನೆ.॥34॥

ಮೂಲಮ್ - 35

ಲಕ್ಷ್ಮಣಶ್ಚ ಮಹಾತೇಜಾಃ ಸುಮಿತ್ರಾನಂದವರ್ಧನಃ ।
ಅಭಿವಾದ್ಯ ಮಹಾಬಾಹುಃ ಸ ತ್ವಾಂ ಕೌಶಲಮಬ್ರವೀತ್ ॥

ಅನುವಾದ

ಸುಮಿತ್ರಾನಂದವರ್ಧನನಾದ, ಮಹಾತೇಜಸ್ವಿಯಾದ, ಮಹಾಬಾಹುವಾದ, ಲಕ್ಷ್ಮಣನೂ ನಿನಗೆ ಅಭಿವಾದನೆ ಮಾಡಿ ನಿನ್ನ ಕುಶಲವನ್ನು ವಿಚಾರಿಸಿದ್ದಾನೆ.॥35॥

ಮೂಲಮ್ - 36

ರಾಮಸ್ಯ ಚ ಸಖಾ ದೇವಿ ಸುಗ್ರೀವೋ ನಾಮ ವಾನರಃ ।
ರಾಜಾ ವಾನರಮುಖ್ಯಾನಾಂ ಸ ತ್ವಾಂ ಕೌಶಲಮಬ್ರವೀತ್ ॥

ಅನುವಾದ

ಓ ದೇವೀ! ವಾನರನಾದ ಸುಗ್ರೀವನು ಶ್ರೀರಾಮನ ಗೆಳೆಯನು. ವಾನರರಿಗೆಲ್ಲ ಒಡೆಯನಾದ ಅವನೂ ಕೂಡ ನಿನ್ನ ಕುಶಲವನ್ನು ವಿಚಾರಿಸಿದ್ದಾನೆ.॥36॥

ಮೂಲಮ್ - 37

ನಿತ್ಯಂ ಸ್ಮರತಿ ತೇ ರಾಮಃ ಸಸುಗ್ರೀವಃ ಸಲಕ್ಷ್ಮಣಃ ।
ದಿಷ್ಟ್ಯಾ ಜೀವಸಿ ವೈದೇಹಿ ರಾಕ್ಷಸೀವಶಮಾಗತಾ ॥

ಅನುವಾದ

ಎಲೈ ವೈದೇಹೀ! ಆ ರಾಮಚಂದ್ರಪ್ರಭುವು, ಲಕ್ಷ್ಮಣನೂ, ಸುಗ್ರೀವನೂ, ಹೀಗೆ ಎಲ್ಲರೂ ಕ್ಷಣ-ಕ್ಷಣಕ್ಕೂ ನಿನ್ನನ್ನು ಸ್ಮರಿಸುತ್ತಿದ್ದಾರೆ. ನೀನು ರಾಕ್ಷಸಿಯರ ಮಧ್ಯದಲ್ಲಿದ್ದರೂ ಅದೃಷ್ಟ ವಿಶೇಷದಿಂದ ಇನ್ನೂ ಜೀವಿಸಿರುವೆ.॥37॥

ಮೂಲಮ್ - 38

ನಚಿರಾದ್ದ್ರಕ್ಷ್ಯಸೇ ರಾಮಂ ಲಕ್ಷ್ಮಣಂ ಚ ಮಹಾಬಲಮ್ ।
ಮಧ್ಯೇ ವಾನರಕೋಟೀನಾಂ ಸುಗ್ರೀವಂ ಚಾಮಿತೌಜಸಮ್ ॥

ಅನುವಾದ

ನೀನು ಬಹಳ ಶೀಘ್ರವಾಗಿಯೇ ಮಹಾಬಲಶಾಲಿಗಳಾದ ಶ್ರೀರಾಮ - ಲಕ್ಷ್ಮಣರನ್ನು ನೋಡಲಿರುವೆ. ಕೋಟಿ-ಕೋಟಿ ವಾನರರ ಮಧ್ಯದಲ್ಲಿರುವ ಅಮಿತ ತೇಜಸ್ವಿಯಾದ ಸುಗ್ರೀವನನ್ನು ಕಾಣಲಿರುವೆ.॥38॥

ಮೂಲಮ್ - 39

ಅಹಂ ಸುಗ್ರೀವಸಚಿವೋ ಹನುಮನ್ನಾಮ ವಾನರಃ ।
ಪ್ರವಿಷ್ಟೋ ನಗರೀಂ ಲಂಕಾಂ ಲಂಘಯಿತ್ವಾ ಮಹೋದಧಿಮ್ ॥

ಅನುವಾದ

ಸುಗ್ರೀವನ ಮಂತ್ರಿಯಾದ ಹನುಮಂತ ಎಂಬ ಹೆಸರಿನ ವಾನರನು ನಾನು. ಮಹಾಸಮುದ್ರವನ್ನು ಲಂಘಿಸಿ ಈ ಲಂಕಾನಗರವನ್ನು ಪ್ರವೇಶಿಸಿದೆ.॥39॥

ಮೂಲಮ್ - 40

ಕೃತ್ವಾ ಮೂರ್ಧ್ನಿ ಪದನ್ಯಾಸಂ ರಾವಣಸ್ಯ ದುರಾತ್ಮನಃ ।
ತ್ವಾಂ ದ್ರಷ್ಟುಮುಪಯಾತೋಽಹಂ ಸಮಾಶ್ರಿತ್ಯ ಪರಾಕ್ರಮಮ್ ॥

ಅನುವಾದ

ದುರಾತ್ಮನಾದ ರಾವಣನ ತಲೆಯನ್ನು ಮೆಟ್ಟಿ ನನ್ನಲ್ಲಿರುವ ಪರಾಕ್ರಮದ ಮೇಲೆ ಭರವಸೆಯನ್ನಿಟ್ಟು ನಿನ್ನನ್ನು ನೋಡುವ ಸಲುವಾಗಿ ಇಲ್ಲಿಗೆ ಬಂದಿರುವೆನು.॥40॥

ಮೂಲಮ್ - 41

ನಾಹಮಸ್ಮಿ ತಥಾ ದೇವಿ ಯಥಾ ಮಾಮವಗಚ್ಛಸಿ ।
ವಿಶಂಕಾ ತ್ಯಜ್ಯತಾಮೇಷಾ ಶ್ರದ್ಧತ್ಸ್ವವದತೋ ಮಮ ॥

ಅನುವಾದ

ನೀನು ಭಾವಿಸುತ್ತಿರುವಂತೆ ನಾನು ಕಾಮರೂಪಿಯಾದ ರಾವಣನಲ್ಲ. ಸಂದೇಹವನ್ನು ದೂರಮಾಡು. ನನ್ನ ಮಾತುಗಳಲ್ಲಿ ನಂಬಿಕೆಯನ್ನಿಡು.॥41॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಚತುಸ್ತ್ರಿಂಶಃ ಸರ್ಗಃ ॥ 34 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತನಾಲ್ಕನೆಯ ಸರ್ಗವು ಮುಗಿಯಿತು.