०३३ हनुमति सीताविश्वासः

वाचनम्
ಭಾಗಸೂಚನಾ

ಸೀತೆಯು ಹನುಮಂತನಿಗೆ ತನ್ನ ಪರಿಚಯವನ್ನು ಮಾಡಿಕೊಡುತ್ತಾ ತನ್ನ ವೃತ್ತಾಂತವನ್ನು ತಿಳಿಸಿದುದು

ಮೂಲಮ್ - 1

ಸೋಽವತೀರ್ಯ ದ್ರುಮಾತ್ತಸ್ಮಾದ್ವಿದ್ರುಮಪ್ರತಿಮಾನನಃ ।
ವಿನೀತವೇಷಃ ಕೃಪಣಃ ಪ್ರಣಿಪತ್ಯೋಪಸೃತ್ಯ ಚ ॥

ಅನುವಾದ

ಹವಳದಂತೆ ಕೆಂಪಾದ ಮುಖವುಳ್ಳವನೂ, ಸಮುಚಿತ ವೇಷವುಳ್ಳವನೂ, ಸೀತೆಯ ದುಃಸ್ಥಿತಿಯನ್ನು ನೋಡಿ ದೀನನಾದ ಆ ಹನುಮಂತನು ಶಿಂಶುಪಾವೃಕ್ಷದಿಂದ ಕೆಳಗಿಳಿದು* ಅವಳನ್ನು ಸಮೀಪಿಸಿ ನಮಸ್ಕರಿಸಿದನು.॥1॥

ಟಿಪ್ಪನೀ
  • ತ್ರಿಜಟೆಯು ಹೇಳಿದ ಸ್ವಪ್ನವೃತ್ತಾಂತವನ್ನು ಕೇಳಿ ಎಲ್ಲ ರಾಕ್ಷಸ ಸ್ತ್ರೀಯರು ಹೆದರಿಕೊಂಡು ಸೀತೆಯ ಕುರಿತು ಆದರ ಭಾವವುಂಟಾಗಿ, ಸೀತೆಗೆ ಶರಣಾಗಿ ಅಲ್ಲಲ್ಲೇ ಮಲಗಿಬಿಟ್ಟರು. ಅಂತಹ ಸಮಯವನ್ನು ನೋಡಿ ಹನುಮಂತನು ಕೆಳಗಿಳಿದು ಬಿಚ್ಚುಮನಸ್ಸಿನಿಂದ ಮಾತಾಡತೊಡಗಿದನು.
ಮೂಲಮ್ - 2

ತಾಮಬ್ರವೀನ್ಮಹಾತೇಜಾ ಹನೂಮಾನ್ ಮಾರುತಾತ್ಮಜಃ ।
ಶಿರಸ್ಯಂಜಲಿಮಾಧಾಯ ಸೀತಾಂ ಮಧುರಯಾ ಗಿರಾ ॥

ಅನುವಾದ

ಮಹಾತೇಜಸ್ವಿಯೂ, ವಾಯುಸುತನೂ ಆದ ಮಾರುತಿಯು ಕೈಗಳನ್ನು ಜೋಡಿಸಿ, ಶಿರಸಾವಂದಿಸುತ್ತಾ ಆ ಸೀತಾದೇವಿಯ ಬಳಿ ಮಧುರ ವಚನಗಳನ್ನು ಹೇಳಿದನು.॥2॥

ಮೂಲಮ್ - 3

ಕಾ ನು ಪದ್ಮಪಲಾಶಾಕ್ಷಿ ಕ್ಲಿಷ್ಟಕೌಶೇಯವಾಸಿನಿ ।
ದ್ರುಮಸ್ಯ ಶಾಖಾಮಾಲಂಬ್ಯ ತಿಷ್ಠಸಿ ತ್ವಮನಿಂದಿತೇ ॥

ಅನುವಾದ

ಪದ್ಮಪತ್ರದಂತೆ ವಿಶಾಲನೇತ್ರವುಳ್ಳ ಎಲೈ ದೇವಿಯೇ! ಮಲಿನ ವಸ್ತ್ರವನ್ನುಟ್ಟಿರುವ ಓ ಸಾಧ್ವಿಯೇ! ವೃಕ್ಷದ ರೆಂಬೆಯನ್ನು ಹಿಡಿದುಕೊಂಡು ನಿಂತಿರುವ ನೀನು ಯಾರು?॥3॥

ಮೂಲಮ್ - 4

ಕಿಮರ್ಥಂ ತವ ನೇತ್ರಾಭ್ಯಾಂ ವಾರಿ ಸ್ರವತಿ ಶೋಕಜಮ್ ।
ಪುಂಡರೀಕಪಲಾಶಾಭ್ಯಾಂ ವಿಪ್ರಕೀರ್ಣ ಮಿವೋದಕಮ್ ॥

ಅನುವಾದ

ಪದ್ಮಪತ್ರದಂತೆ ನಿನ್ನ ಕಣ್ಣುಗಳಿಂದ ದುಃಖಾಶ್ರುಗಳು ಧಾರಾಕಾರವಾಗಿ, ನಿರಂತರ ಏಕೆ ಹರಿಯುತ್ತಿವೆ?॥4॥

ಮೂಲಮ್ - 5

ಸುರಾಣಾಮಸುರಾಣಾಂ ವಾ ನಾಗಗಂಧರ್ವರಕ್ಷಸಾಮ್ ।
ಯಕ್ಷಾಣಾಂ ಕಿಂನರಾಣಾಂ ವಾ ಕಾ ತ್ವಂ ಭವಸಿ ಶೋಭನೇ ॥

ಅನುವಾದ

ಓ ಮಂಗಳಪ್ರದಳೇ! ನೀನು ದಿವ್ಯ ಭಾಮಿನಿಯೋ? ಅಸುರ ಕಾಂತೆಯೋ? ನಾಗಕನ್ಯೆಯೋ? ಗಂಧರ್ವಯೋಷಿತೆಯೋ? ರಾಕ್ಷಸಸ್ತ್ರೀಯೋ? ಯಕ್ಷ ತರುಣಿಯೋ? ಕಿನ್ನರನಾರಿಯೋ ನೀನುಯಾರಾಗಿರುವಿ?॥5॥

ಮೂಲಮ್ - 6

ಕಾ ತ್ವಂ ಭವಸಿ ರುದ್ರಾಣಾಂ ಮರುತಾಂ ವಾ ವರಾನನೇ ।
ವಸೂನಾಂ ವಾ ವರಾರೋಹೇ ದೇವತಾ ಪ್ರತಿಭಾಸಿ ಮೇ ॥

ಅನುವಾದ

ಸುಂದರಮುಖಿಯೇ! ಏಕಾದಶ ರುದ್ರರ ಪತ್ನಿಯರಲ್ಲಿ, ಸಪ್ತಮರುತ್ತರ ಪತ್ನಿಯರಲ್ಲಿ, ಅಷ್ಟವಸುಗಳ ಪತ್ನಿಯರಲ್ಲಿ, ನೀನು ಯಾರಾಗಿರುವೆ? ನೀನೊಬ್ಬಳು ನನಗೆ ದೇವತೆಯಂತೆ ಭಾಸವಾಗುತ್ತದೆ.॥6॥

ಮೂಲಮ್ - 7

ಕಿಂ ನು ಚಂದ್ರಮಸಾ ಹೀನಾ ಪತಿತಾ ವಿಬುಧಾಲಯಾತ್ ।
ರೋಹಿಣೀ ಜ್ಯೋತಿಷಾಂ ಶ್ರೇಷ್ಠಾ ಶ್ರೇಷ್ಠಾ ಸರ್ವಗುಣಾನ್ವಿತಾ ॥

ಅನುವಾದ

ಶ್ರೇಷ್ಠವಾದ ಸರ್ವಗುಣಗಳಿಂದಲೂ ಕೂಡಿರುವ, ನಕ್ಷತ್ರಗಳಲ್ಲೇ ಶ್ರೇಷ್ಠಳಾದ ಚಂದ್ರನಿಂದ ವಿಹೀನಳಾಗಿ ಸ್ವರ್ಗದಿಂದ ಭೂಮಿಗೆ ಬಿದ್ದಿರುವ ರೋಹಿಣಿಯಾಗಿರುವೆಯಾ?॥7॥

ಮೂಲಮ್ - 8

ಕಾ ತ್ವಂ ಭವಸಿ ಕಲ್ಯಾಣಿ ತ್ವಮನಿಂದಿತಲೋಚನೇ ।
ಕೋಪಾದ್ವಾ ಯದಿ ವಾ ಮೋಹಾದ್ಭರ್ತಾರಮಸಿತೇಕ್ಷಣೇ ॥

ಅನುವಾದ

ಕಪ್ಪಾದ ಕಣ್ಣುಗಳುಳ್ಳ ಎಲೈ ಕಲ್ಯಾಣೀ! ಅಮ್ಮಾ ನೀನು ಯಾರು? ಕೋಪದಿಂದಲೋ, ಮೋಹದಿಂದಲೋ, ಪತಿಯಾದ ವಸಿಷ್ಠರನ್ನು ಸಿಟ್ಟಿಗೇಳಿಸಿ ಅವರಿಂದ ತಿರಸ್ಕೃತಳಾಗಿ ಬಂದಿರುವ ಮಂಗಳಮಯಿಯಾದ ಅರುಂಧತಿಯಲ್ಲ ತಾನೇ!॥8॥

ಮೂಲಮ್ - 9

ವಸಿಷ್ಠಂ ಕೋಪಯಿತ್ವಾ ತ್ವಂ ವಾಸಿ ಕಲ್ಯಾಣ್ಯರುಂಧತೀ ।
ಕೋ ನು ಪುತ್ರಃ ಪಿತಾ ಭ್ರಾತಾ ಭರ್ತಾ ವಾ ತೇ ಸುಮಧ್ಯಮೇ ॥

ಅನುವಾದ

ಎಲೈ ಸುಂದರೀ! ನೀವು ಯಾರ ಮಗಳು? ನಿಮ್ಮ ತಂದೆಯವರು ಯಾರು? ಸಹೋದರರು ಯಾರು? ಪತಿಯವರು ಯಾರು? ಪರಲೋಕಕ್ಕೆ ಹೋಗಿರುವ ಯಾರನ್ನಾದರೂ ನೆನೆಸಿಕೊಂಡು ಅಳುತ್ತಿರುವೆಯಾ?॥9॥

ಮೂಲಮ್ - 10

ಅಸ್ಮಾಲ್ಲೋಕಾದಮುಂ ಲೋಕಂ ಗತಂ ತ್ವಮನುಶೋಚಸಿ ।
ರೋದನಾದತಿನಿಃಶ್ವಾಸಾದ್ಭೂಮಿಸಂಸ್ಪರ್ಶನಾದಪಿ ॥

ಅನುವಾದ

ಅಳುತ್ತಿರುವುದರಿಂದಲೂ, ಬಹಳ ನಿಟ್ಟುಸಿರು ಬಿಡುವುದರಿಂದಲೂ, ನೆಲವನ್ನು ಮುಟ್ಟಿ ಕುಳಿತಿರುವುದರಿಂದಲೂ, ಮಹಾರಾಣಿಯರಲ್ಲಿರಬೇಕಾದ ರಾಜ ಚಿಹ್ನೆಗಳನ್ನು ಹೊಂದಿರುವುದರಿಂದಲೂ, ನಿನ್ನನ್ನು ದೇವತೆಯೆಂದು ನಾನು ಭಾವಿಸುವುದಿಲ್ಲ. ॥10॥

ಮೂಲಮ್ - 11

ನ ತ್ವಾಂ ದೇವೀಮಹಂ ಮನ್ಯೇ ರಾಜ್ಞಃ ಸಂಜ್ಞಾವಧಾರಣಾತ್ ।
ವ್ಯಂಜನಾನಿ ಚ ತೇ ಯಾನಿ ಲಕ್ಷಣಾನಿ ಚ ಲಕ್ಷಯೇ ॥

ಅನುವಾದ

ಉತ್ತಮ ಸ್ತ್ರೀತ್ವವನ್ನು ಸೂಚಿಸುವ ಶುಭಲಕ್ಷಣಗಳನ್ನು ನಾನು ನಿನ್ನಲ್ಲಿ ನೋಡುತ್ತಿದ್ದೇನೆ. ಅದರಿಂದ ನೀನು ರಾಜಕನ್ಯೆಯಾಗಿದ್ದು, ಭೂಪಾಲನೊಬ್ಬನ ಪಟ್ಟದರಸಿಯೆಂದೇ ನಾನು ಭಾವಿಸುತ್ತೇನೆ.॥11॥

ಮೂಲಮ್ - 12

ಮಹಿಷೀ ಭೂಮಿಪಾಲಸ್ಯ ರಾಜಕನ್ಯಾಸಿ ಮೇ ಮತಾ ।
ರಾವಣೇನ ಜನಸ್ಥಾನಾದ್ಬಲಾದಪಹೃತಾ ಯದಿ ॥

ಅನುವಾದ

ಜನಸ್ಥಾನದಲ್ಲಿ ರಾವಣನಿಂದ ಬಲವಂತವಾಗಿ ಅಪಹರಿಸಿ ತಂದಿರುವ ಸೀತಾದೇವಿಯೇ ನೀನಾಗಿದ್ದರೆ ನಿನಗೆ ಮಂಗಳವಾಗಲೀ. ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಕೃಪೆಮಾಡು.॥12॥

ಮೂಲಮ್ - 13

ಸೀತಾ ತ್ವಮಸಿ ಭದ್ರಂ ತೇ ತನ್ಮಮಾಚಕ್ಷ್ವ ಪೃಚ್ಛತಃ ।
ಯಥಾ ಹಿ ತವ ವೈ ದೈನ್ಯಂ ರೂಪಂ ಚಾಪ್ಯತಿಮಾನುಷಮ್ ॥

ಅನುವಾದ

ನಿನ್ನ ಲೋಕೋತ್ತರ ರೂಪವನ್ನು, ದೈನ್ಯಸ್ಥಿತಿಯನ್ನು, ತಾಪಸ ವೇಷವನ್ನು, ನೋಡಿದರೆ ನೀನು ನಿಶ್ಚಯವಾಗಿಯೂ ಶ್ರೀರಾಮನ ಪತ್ನಿಯೇ ಆಗಿರುವೆ ಎಂಬುದು ನನ್ನ ನಿಶ್ಚಯವು.॥13॥

ಮೂಲಮ್ - 14

ತಪಸಾ ಚಾನ್ವಿತೋ ವೇಷಸ್ತ್ವಂ ರಾಮಮಹಿಷೀ ಧ್ರುವಮ್ ।
ಸಾ ತಸ್ಯ ವಚನಂ ಶ್ರುತ್ವಾ ರಾಮಕೀರ್ತನಹರ್ಷಿತಾ ॥

ಅನುವಾದ

ಸೀತಾದೇವಿಯು ಹನುಮಂತನ ಮಾತುಗಳನ್ನು ಕೇಳಿ, ಶ್ರೀರಾಮನಾಮ ಸಂಕೀರ್ತನೆಯ ಶ್ರವಣದಿಂದ ಪರಮ ಹರ್ಷಿತಳಾಗಿ ಶಿಂಶುಪಾ ವೃಕ್ಷದ ಬುಡದಲ್ಲಿದ್ದ ಮಾರುತಿಗೆ ಹೀಗೆ ಹೇಳಿದಳು.॥14॥

ಮೂಲಮ್ - 15

ಉವಾಚ ವಾಕ್ಯಂ ವೈದೇಹೀ ಹನುಮಂತಂ ದ್ರುಮಾಶ್ರಿತಮ್ ।
ಪೃಥಿವ್ಯಾಂ ರಾಜಸಿಂಹಾನಾಂ ಮುಖ್ಯಸ್ಯ ವಿದಿತಾತ್ಮನಃ ॥

ಅನುವಾದ

ಪ್ರಪಂಚದಲ್ಲಿರುವ ರಾಜಶ್ರೇಷ್ಠರಲ್ಲಿ ಅಗ್ರಗಣ್ಯರಾದ, ಸುಪ್ರಸಿದ್ಧರಾದ, ಶತ್ರುಸೈನ್ಯವನ್ನು ನಾಶಮಾಡುತ್ತಿದ್ದ ದಶರಥ ರಾಜರ ಸೊಸೆಯು ನಾನು.॥15॥

ಮೂಲಮ್ - 16

ಸ್ನುಷಾ ದಶರಥಸ್ಯಾಹಂ ಶತ್ರುಸೈನ್ಯಪ್ರತಾಪಿನಃ ।
ದುಹಿತಾ ಜನಕಸ್ಯಾಹಂ ವೈದೇಹಸ್ಯ ಮಹಾತ್ಮನಃ ॥

ಅನುವಾದ

ಮಹಾತ್ಮನೂ, ವಿದೇಹ ಪತಿಯೂ ಆದ ಜನಕನ ಮಗಳು ನಾನು. ನನ್ನನ್ನು ‘ಸೀತಾ’ ಎಂದು ಹೇಳುತ್ತಾರೆ. ನಾನು ಧೀಮಂತನಾದ ಶ್ರೀರಾಮನ ಭಾರ್ಯೆಯು.॥16॥

ಮೂಲಮ್ - 17

ಸೀತಾ ಚ ನಾಮ ನಾಮ್ನಾಹಂ ಭಾರ್ಯಾ ರಾಮಸ್ಯ ಧೀಮತಃ ।
ಸಮಾ ದ್ವಾದಶ ತತ್ರಾಹಂ ರಾಘವಸ್ಯ ನಿವೇಶನೇ ॥

ಅನುವಾದ

ಶ್ರೀರಾಘವನ ಅರಮನೆಯಲ್ಲಿ ನಾನು ಹನ್ನೆರಡು ವರ್ಷಗಳ ಕಾಲ ಮನುಷ್ಯ ಸಂಬಂಧವಾದ ಭೋಗಗಳೆಲ್ಲವನ್ನು ಅನುಭವಿಸುತ್ತಾ ಸರ್ವಕಾಮನೆಗಳ ಸಮೃದ್ಧಿಯನ್ನು ಹೊಂದಿ ಸುಖವಾಗಿದ್ದೆನು.॥17॥

ಮೂಲಮ್ - 18

ಭುಂಜಾನಾ ಮಾನುಷಾನ್ ಭೋಗಾನ್ ಸರ್ವಕಾಮಸಮೃದ್ಧಿನೀ ।
ತತಸ್ತ್ರಯೋದಶೇ ವರ್ಷೇ ರಾಜ್ಯೇ ಚೇಕ್ಷ್ವಾಕುನಂದನಮ್ ॥

ಅನುವಾದ

ಅನಂತರ ಹದಿಮೂರನೆಯ ವರ್ಷದಲ್ಲಿ ಇಕ್ಷ್ವಾಕು ಕುಲನಂದನನಾದ ಶ್ರೀರಾಮನಿಗೆ ಪಟ್ಟಾಭಿಷೇಕಮಾಡಲು ದಶರಥ ಮಹಾರಾಜನು ಕುಲಪುರೋಹಿತರೊಡನೆ ಸಿದ್ಧತೆ ನಡೆಸಿದನು.॥18॥

ಮೂಲಮ್ - 19

ಅಭಿಷೇಚಯಿತುಂ ರಾಜಾ ಸೋಪಾಧ್ಯಾಯಃ ಪ್ರಚಕ್ರಮೇ ।
ತಸ್ಮಿನ್ ಸಂಭ್ರಿಯಮಾಣೇ ತು ರಾಘವಸ್ಯಾಭಿಷೇಚನೇ ॥

ಅನುವಾದ

ಆ ಶ್ರೀರಾಮನ ಪಟ್ಟಾಭಿಷೇಕದ ಸಲುವಾಗಿ ಸಕಲ ಸಾಮಗ್ರಿಗಳನ್ನು ಸಂಗ್ರಹಿಸುತ್ತಿರುವಾಗ ಕೈಕೇಯಿಯೆಂಬ ದಶರಥನ ರಾಣಿಯು ಹೀಗೆ ಹೇಳಿದಳು.॥19॥

ಮೂಲಮ್ - 20

ಕೈಕೇಯಾ ನಾಮ ಭರ್ತಾರಮಿದಂ ವಚನಮಬ್ರವೀತ್ ।
ನ ಪಿಬೇಯಂ ನ ಖಾದೇಯಂ ಪ್ರತ್ಯಹಂ ಮಮ ಭೋಜನಮ್ ॥

ಮೂಲಮ್ - 21

ಏಷ ಮೇ ಜೀವಿತಸ್ಯಾಂತೋ ರಾಮೋ ಯದ್ಯಭಿಷಿಚ್ಯತೇ ।
ಯತ್ತದುಕ್ತಂ ತ್ವಯಾ ವಾಕ್ಯಂ ಪ್ರೀತ್ಯಾ ನೃಪತಿಸತ್ತಮ ॥

ಅನುವಾದ

‘‘ಮಹಾರಾಜಾ! ನೀನು ರಾಮನಿಗೇನಾದರೂ ಪಟ್ಟಾಭಿಷೇಕ ಮಾಡಿದ್ದೇಯಾದರೆ - ಈ ಕ್ಷಣದಿಂದ ನಾನು ಜೀವಿಸಿ ಇರುವತನಕ ಊಟವನ್ನು ಮಾಡುವುದಿಲ್ಲ. ನೀರನ್ನು ಮುಟ್ಟುವುದಿಲ್ಲ. ನೃಪತಿಶ್ರೇಷ್ಠನೇ! ನನ್ನ ಮೇಲಿನ ಪ್ರಿತಿಯಿಂದ ಹಿಂದೆ ನೀನು ವಾಗ್ದಾನ ಮಾಡಿರುವಿ. ಆ ವರವು ಸುಳ್ಳಾಗದಿರಬೇಕಾದರೆ ರಾಮನು ಈಗಲೇ ಕಾಡಿಗೆ ಹೋಗಲೀ.’’॥20-21॥

ಮೂಲಮ್ - 22

ತಚ್ಚೇನ್ನ ವಿತಥಂ ಕಾರ್ಯಂ ವನಂ ಗಚ್ಛತು ರಾಘವಃ ।
ಸ ರಾಜಾ ಸತ್ಯವಾಗ್ದೇವ್ಯಾ ವರದಾನಮನುಸ್ಮರನ್ ॥

ಅನುವಾದ

ಸತ್ಯವಾಕ್ಯಪರಿಪಾಲಿತನಾದ ದಶರಥ ಮಹಾರಾಜನು ಕೈಕೇಯಿಗೆ ತಾನು ಕೊಟ್ಟಿದ್ದ ವರವನ್ನು ಸ್ಮರಿಸಿಕೊಳ್ಳುತ್ತಾ, ಅವಳ ಕರ್ಣಕಠೋರವೂ, ಅಪ್ರಿಯವೂ ಆದ ಮಾತನ್ನು ಕೇಳಿ ಮೂರ್ಛಿತನಾದನು.॥22॥

ಮೂಲಮ್ - 23

ಮುಮೋಹ ವಚನಂ ಶ್ರುತ್ವಾ ಕೈಕೇಯ್ಯಾಃ ಕ್ರೂರಮಪ್ರಿಯಮ್ ।
ತತಸ್ತು ಸ್ಥವಿರೋ ರಾಜಾ ಸತ್ಯೇ ಧರ್ಮೇ ವ್ಯವಸ್ಥಿತಃ ॥

ಅನುವಾದ

ಸತ್ಯ-ಧರ್ಮಗಳಲ್ಲಿಯೇ ನಿರತನಾಗಿದ್ದು , ವೃದ್ಧನಾದ ಆ ರಾಜನು ಅಳುತ್ತಳುತ್ತಾ ಭರತನಿಗೆ ರಾಜ್ಯವನ್ನು ಬಿಟ್ಟುಕೊಡುವಂತೆ, ಯಶೋವಂತನಾದ ಶ್ರೀರಾಮನನ್ನು ಪ್ರಾರ್ಥಿಸಿದನು.॥23॥

ಮೂಲಮ್ - 24

ಜ್ಯೇಷ್ಠಂ ಯಶಸ್ವಿನಂ ಪುತ್ರಂ ರುದನ್ ರಾಜ್ಯಮಯಾಚತ ।
ಸ ಪಿತುರ್ವಚನಂ ಶ್ರೀಮಾನಭಿಷೇಕಾತ್ ಪರಂ ಪ್ರಿಯಮ್ ॥

ಅನುವಾದ

ಸಕಲಸದ್ಗುಣ ಸಂಪನ್ನನಾದ ಶ್ರೀರಾಮಚಂದ್ರನು ಅಭಿಷೇಕಕ್ಕಿಂತಲೂ ಪ್ರಿಯವಾದ ತಂದೆಯ ಮಾತನ್ನು ಪೂರ್ಣ ಮನಸ್ಸಿನಿಂದ ಅಂಗೀಕರಿಸಿ, ಅನಂತರ ಮಾತಿನಿಂದಲೂ ಅರಣ್ಯಕ್ಕೆ ಹೋಗುವುದಾಗಿ ಹೇಳಿದನು.॥24॥

ಮೂಲಮ್ - 25

ಮನಸಾ ಪೂರ್ವಮಾಸಾದ್ಯ ವಾಚಾ ಪ್ರತಿಗೃಹೀತವಾನ್ ।
ದದ್ಯಾನ್ನ ಪ್ರತಿಗೃಹ್ಣೀಯಾನ್ನ ಬ್ರೂಯಾತ್ ಕಿಂಚಿದಪ್ರಿಯಮ್ ॥

ಅನುವಾದ

ಸತ್ಯ ಪರಾಕ್ರಮಿಯಾದ ನನ್ನ ಪತಿಯು ಯಾವಾಗಲೂ ದಾನ ಕೊಡತಕ್ಕವನೇ ಹೊರತು ಪಡೆಯುವವನಲ್ಲ. ಸತ್ಯವನ್ನು ಹೇಳತಕ್ಕವನೇ ಹೊರತು, ಪ್ರಾಣಗಳು ಹೋಗುವ ಸಂದರ್ಭ ಒದಗಿಬಂದರೂ, ಪ್ರಾಣಗಳನ್ನು ಉಳಿಸಿಕೊಳ್ಳುವ ಸಲುವಾಗಿ ಅಪ್ರಿಯವಾದ ಮಾತನ್ನು ಆಡುವವನಲ್ಲ.॥25॥

ಮೂಲಮ್ - 26

ಅಪಿ ಜೀವಿತಹೇತೋರ್ವಾ ರಾಮಃ ಸತ್ಯಪರಾಕ್ರಮಃ ।
ಸ ವಿಹಾಯೋತ್ತರೀಯಾಣಿ ಮಹಾರ್ಹಾಣಿ ಮಹಾಯಶಾಃ ॥

ಅನುವಾದ

ಅನಂತರ ಮಹಾಯಶಸ್ವಿಯಾದ ಶ್ರೀರಾಮನು ಧರಿಸಿದ್ದ ಅಮೂಲ್ಯವಾದ ವಸ್ತ್ರಗಳನ್ನೂ, ಆಭರಣಗಳನ್ನೂ ಪರಿತ್ಯಜಿಸಿ, ವಲ್ಕಲಗಳನ್ನು ಧರಿಸಿ, ಮನಃಪೂರ್ವಕವಾಗಿ ರಾಜ್ಯವನ್ನು ತ್ಯಜಿಸಿ, ತನ್ನ ತಾಯಿಯಾದ ಕೌಸಲ್ಯಾದೇವಿಗೆ ನನ್ನನ್ನು ಒಪ್ಪಿಸಿದನು.॥26॥

ಮೂಲಮ್ - 27

ವಿಸೃಜ್ಯ ಮನಸಾ ರಾಜ್ಯಂ ಜನನ್ಯೈ ಮಾಂ ಸಮಾದಿಶತ್ ।
ಸಾಹಂ ತಸ್ಯಾಗ್ರತಸ್ತೂರ್ಣಂ ಪ್ರಸ್ಥಿತಾ ವನಚಾರಿಣೀ ॥

ಅನುವಾದ

ಶ್ರೀರಾಮನ ಸಾಹಚರ್ಯವಿಲ್ಲದೆ ಸ್ವರ್ಗವಾಸವೂ ಕೂಡ ನನಗೆ ರುಚಿಸದು. ಅದರಿಂದ ಕೂಡಲೇ ವನವಾಸಕ್ಕೆ ಸಿದ್ಧಳಾಗಿ ಅವನಿಗಿಂತ ಮುಂದಾಗಿ ಅರಣ್ಯಕ್ಕೆ ಪ್ರಯಾಣ ಹೊರಟೆನು.॥27॥

ಮೂಲಮ್ - 28

ನ ಹಿ ಮೇ ತೇನ ಹೀನಾಯಾ ವಾಸಃ ಸ್ವರ್ಗೇಽ ಪಿ ರೋಚತೇ ।
ಪ್ರಾಗೇವ ತು ಮಹಾಭಾಗಃ ಸೌಮಿತ್ರಿರ್ಮಿತ್ರನಂದನಃ ॥

ಅನುವಾದ

ಮಹಾಭಾಗ್ಯಶಾಲಿಯೂ, ಮಿತ್ರರಿಗೆ ಸಂತೋಷವನ್ನು ಉಂಟುಮಾಡುವವನೂ ಆದ ಲಕ್ಷ್ಮಣನೂ ಶ್ರೀರಾಮನನ್ನು ಅನುಸರಿಸಿ ಕಾಡಿಗೆ ಹೋಗಲು ಅವನಿಗಿಂತ ಮುಂದಾಗಿಯೇ ನಾರುಮಡಿಯನ್ನು ಧರಿಸಿ ಸನ್ನದ್ಧನಾದನು.॥28॥

ಮೂಲಮ್ - 29

ಪೂರ್ವಜಸ್ಯಾನುಯಾತ್ರಾರ್ಥೇ ದ್ರುಮಚೀರೈರಲಂಕೃತಃ ।
ತೇ ವಯಂ ಭರ್ತುರಾದೇಶಂ ಬಹುಮಾನ್ಯ ದೃಢವ್ರತಾಃ ॥

ಅನುವಾದ

ಹೀಗೆ ದೃಢವ್ರತರಾದ ನಾವು ಮೂವರೂ ನಮ್ಮೆಲ್ಲರಿಗೂ ಸ್ವಾಮಿಯಾಗಿದ್ದ ದಶರಥ ಮಹಾರಾಜನ ಆದೇಶವನ್ನು ಗೌರವಿಸಿ, ಹಿಂದೆಂದೂ ಕಾಣದಿದ್ದ ಭಯಂಕರವಾದ ಅರಣ್ಯಕ್ಕೆ ಬಂದೆವು.॥29॥

ಮೂಲಮ್ - 30

ಪ್ರವಿಷ್ಟಾಃ ಸ್ಮ ಪುರಾಽದೃಷ್ಟಂ ವನಂ ಗಂಭೀರದರ್ಶನಮ್ ।
ವಸತೋ ದಂಡಕಾರಣ್ಯೇ ತಸ್ಯಾಹಮಮಿತೌಜಸಃ ॥

ಅನುವಾದ

ದಂಡಕಾರಣ್ಯದಲ್ಲಿ ನಾವು ಮೂವರೂ ವಾಸ ಮಾಡುತ್ತಿದ್ದಾಗ ಅಮಿತ ಪರಾಕ್ರಮಿಯಾದ ಶ್ರೀರಾಮನ ಪತ್ನಿಯಾದ ಭಾರ್ಯೆಯಾದ ನನ್ನನ್ನು ದುರಾತ್ಮನಾದ ರಾವನನು ಅಪಹರಿಸಿಕೊಂಡುಬಂದು ಇಲ್ಲಿರಿಸಿದನು.॥30॥

ಮೂಲಮ್ - 31

ರಕ್ಷಸಾಪಹೃತಾ ಭಾರ್ಯಾ ರಾವಣೇನ ದುರಾತ್ಮನಾ ।
ದ್ವೌ ಮಾಸೌ ತೇನ ಮೇ ಕಾಲೋ ಜೀವಿತಾನುಗ್ರಹಃ ಕೃತಃ ।
ಊರ್ಧ್ವಂ ದ್ವಾಭ್ಯಾಂತುಮಾಸಾಭ್ಯಾಂ ತತಸ್ತ್ಯಕ್ಷ್ಯಾಮಿ ಜೀವಿತಮ್ ॥

ಅನುವಾದ

ರಾವಣನು ನನಗೆ ಬದುಕಿರಲು ಎರಡು ತಿಂಗಳ ಅವಧಿಯನ್ನು ಕೊಟ್ಟಿರುವನು. ಆ ಅವಧಿ ಕಳೆದುಹೋದೊಡನೆಯೇ ನಾನು ಈ ದೇಹವನ್ನು ಪರಿತ್ಯಜಿಸುವೆನು.॥31॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ತ್ರಯಸ್ತ್ರಿಂಶಃ ಸರ್ಗಃ ॥33॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತಮೂರನೆಯ ಸರ್ಗವು ಮುಗಿಯಿತು.