०३२ हनुमन्तं वीक्ष्य सीतायाः भयम्

वाचनम्
ಭಾಗಸೂಚನಾ

ಸೀತಾದೇವಿಯ ತರ್ಕ - ವಿತರ್ಕಗಳು

ಮೂಲಮ್ - 1

ತತಃ ಶಾಖಾಂತರೇ ಲೀನಂ ದೃಷ್ಟ್ವಾ ಚಲಿತಮಾನಸಾ ।
ವೇಷ್ಟಿತಾರ್ಜುನವಸ್ತ್ರಂ ತಂ ವಿದ್ಯುತ್ಸಂಘಾತಪಿಂಗಲಮ್ ॥

ಮೂಲಮ್ - 2

ಸಾ ದದರ್ಶ ಕಪಿಂ ತತ್ರ ಪ್ರಶ್ರಿತಂ ಪ್ರಿಯವಾದಿನಮ್ ।
ಫುಲ್ಲಾಶೋಕೋತ್ಕರಾಭಾಸಂ ತಪ್ತಚಾಮೀಕರೇಕ್ಷಣಮ್ ॥

ಅನುವಾದ

ಅನಂತರ ಸೀತಾದೇವಿಯು ರೆಂಬೆಗಳ ಮಧ್ಯದಲ್ಲಿ ಅಡಗಿಕೊಂಡಿದ್ದ ಹನುಮಂತನನ್ನು ನೋಡಿದಳು. ಅವನು ಆಗ ಬಿಳುಪಾದ ವಸ್ತ್ರವನ್ನುಟ್ಟಿದ್ದನು. ಮಿಂಚಿನ ಸಮೂಹದಂತೆ ಪಿಂಗಳ ವರ್ಣದವನಾಗಿದ್ದನು. ವಿನಯಶೀಲನಾಗಿ ಪ್ರಿಯವಾದ ಮಾತುಗಳನ್ನಾಡುತ್ತಿದ್ದನು. ಪುಷ್ಪಭರಿತವಾದ ಅಶೋಕ ವೃಕ್ಷದಂತೆ ಶೋಭಾಯಮಾನವಾಗಿದ್ದನು. ಅವನ ಕಣ್ಣುಗಳು ಪುಟಕ್ಕೆ ಹಾಕಿದ ಚಿನ್ನದಂತೆ ಳಳಿಸುತ್ತಿದ್ದವು. ಅಂತಹ ಸುಂದರಕಾಯನಾದ ಹನುಮಂತನನ್ನು ನೋಡಿದೊಡನೆ ಸೀತಾದೇವಿಯ ಮನಸ್ಸಿನಲ್ಲಿ ಕುತೂಹಲವುಂಟಾಯಿತು.॥1-2॥

ಮೂಲಮ್ - 3

ಮೈಥಿಲೀ ಚಿಂತಯಾಮಾಸ ವಿಸ್ಮಯಂ ಪರಮಂ ಗತಾ ।
ಅಹೋ ಭೀಮಮಿದಂ ರೂಪಂ ವಾನರಸ್ಯ ದುರಾಸದಮ್ ॥

ಅನುವಾದ

ಮತ್ತೆ ಮೈಥಿಲಿಯು ಮರದ ಮೇಲೆ ವಿನಯದಿಂದ ಕುಳಿತಿರುವ ಕಪಿವರವನ್ನು ನೋಡಿ, ಹೆಚ್ಚಾದ ಆಶ್ಚರ್ಯಪಟ್ಟು ಚಿಂತಿಸ ತೋಡಗಿದಳು.॥3॥

ಮೂಲಮ್ - 4

ದುರ್ನಿರೀಕ್ಷ್ಯಮಿತಿ ಜ್ಞಾತ್ವಾ ಪುನರೇವ ಮುಮೋಹ ಸಾ ।
ವಿಲಲಾಪ ಭೃಶಂ ಸೀತಾ ಕರುಣಂ ಭಯಮೋಹಿತಾ ॥

ಅನುವಾದ

ಆಹಾ! ಈ ವಾನರನ ರೂಪವು ಎಷ್ಟು ಆಶ್ಚರ್ಯವಾಗಿದೆ. ಇದು ಭಯಂಕರವೂ, ಬಳಿಗೆ ಹೋಗಲೂ, ನೋಡಲೂ ಅಸಾಧ್ಯವಾಗಿದೆ. ಹೀಗೆ ಭಾವಿಸಿ ಸೀತಾದೇವಿಯು ಪುನಃ ಮೋಹಿತಳಾದಳು.॥4॥

ಮೂಲಮ್ - 5

ರಾಮ ರಾಮೇತಿ ದುಃಖಾರ್ತಾ ಲಕ್ಷ್ಮಣೇತಿ ಚ ಭಾಮಿನೀ ।
ರುರೋದ ಬಹುಧಾ ಸೀತಾ ಮಂದಂ ಮಂದಸ್ವರಾ ಸತೀ ॥

ಅನುವಾದ

ಭಯಮೋಹಿತಳೂ, ದುಃಖಪೀಡಿತಳೂ ಆದ ಸೀತೆಯು ಅತಿದೀನಳಾಗಿ ರಾಮಾ! ರಾಮಾ!! ಲಕ್ಷ್ಮಣಾ! ಎಂದು ವಿಲಾಪಿಸ ತೊಡಗಿದಳು.॥5॥

ಮೂಲಮ್ - 6

ಸಾ ತಂ ದೃಷ್ಟ್ವಾ ಹರಿಶ್ರೇಷ್ಠಂ ವಿನೀತವದುಪಸ್ಥಿತಮ್ ।
ಮೈಥಿಲೀ ಚಿಂತಯಾಮಾಸ ಸ್ವಪ್ನೋಯಽಮಿತಿ ಭಾಮಿನೀ ॥

ಅನುವಾದ

ಸಾಧ್ವಿಯಾದ ಸೀತೆಯು ಸಣ್ಣ ಸ್ವರದಿಂದ (ರಾಕ್ಷಸಿಯರು ಕೇಳದಂತೆ) ಮೆಲ್ಲಗೆ ಬಹಳವಾಗಿ ಅತ್ತಳು. ವಿನಮ್ರಮೂರ್ತಿಯಂತಿದ್ದ ಆ ಹರಿಶ್ರೇಷ್ಠನಾದ ಹನುಮಂತನನ್ನು ನೋಡಿ ‘ಇದೇನು ಸ್ವಪ್ನವಿರಬಹುದೇ?’ ಎಂದು ಚಿಂತಿಸತೊಡಗಿದಳು.॥6॥

ಮೂಲಮ್ - 7

ಸಾ ವೀಕ್ಷಮಾಣಾ ಪೃಥುಭುಗ್ನ ವಕ್ತ್ರಂ
ಶಾಖಾಮೃಗೇಂದ್ರಸ್ಯ ಯಥೋಕ್ತಕಾರಮ್ ।
ದದರ್ಶ ಪಿಂಗಾಧಿಪತೇರಮಾತ್ಯಂ
ವಾತಾತ್ಮಜಂ ಬುದ್ಧಿಮತಾಂ ವರಿಷ್ಠಮ್ ॥

ಅನುವಾದ

ಅವಳು ಆ ಕಡೆ - ಈ ಕಡೆ ನೋಡಿ ದಪ್ಪವಾಗಿದ್ದು ವಕ್ರವಾದ ಮುಖವುಳ್ಳವನೂ, ಪಿಂಗಳ ಕಣ್ಣಿನ ಸುಗ್ರೀವನಿಗೆ ಮಂತ್ರಿಯೂ, ಆಜ್ಞಾನುವರ್ತಿಯೂ, ಅತ್ಯಂತ ಶ್ಲಾಘನೀಯನೂ, ಬುದ್ಧಿವಂತರಲ್ಲಿ ಶ್ರೇಷ್ಠನೂ, ವಾಯುಪುತ್ರನೂ ಆದ ಕಪಿಶ್ರೇಷ್ಠ ಹನುಮಂತನನ್ನು ಪುನಃ-ಪುನಃ ನೋಡಿದಳು.॥7॥

ಮೂಲಮ್ - 8

ಸಾ ತಂ ಸಮೀಕ್ಷ್ಯೈವ ಭೃಶಂ ವಿಸಂಜ್ಞಾ
ಗತಾಸುಕಲ್ಪೇವ ಬಭೂವ ಸೀತಾ ।
ಚಿರೇಣ ಸಂಜ್ಞಾಂ ಪ್ರತಿಲಭ್ಯ ಭೂಯೋ
ವಿಚಿಂತಯಾಮಾಸ ವಿಶಾಲನೇತ್ರಾ ॥

ಅನುವಾದ

ನೋಡುತ್ತಿರುವಂತೆ ರಾವಣನೇ ಕಪಿರೂಪದಿಂದ ಬಂದಿರಬಹುದೆಂದು ಭಾವಿಸಿ ಮೂರ್ಛೆ ಹೊಂದಿ ಮೃತಪ್ರಾಯಳಾದಳು. ಸ್ವಲ್ಪ ಹೊತ್ತಿನಲ್ಲಿ ಎಚ್ಚರಗೊಂಡು ಮರಳಿ ಚಿಂತಿಸತೊಡಗಿದಳು.॥8॥

ಮೂಲಮ್ - 9

ಸ್ವಪ್ನೇ ಮಯಾಯಂ ವಿಕೃತೋಽದ್ಯ ದೃಷ್ಟಃ
ಶಾಖಾಮೃಗಃ ಶಾಸ್ತ್ರಗಣೈರ್ನಿಷಿದ್ಧಃ ।
ಸ್ವಸ್ತ್ಯಸ್ತು ರಾಮಾಯ ಸಲಕ್ಷ್ಮಣಾಯ
ತಥಾ ಪಿತುರ್ಮೇ ಜನಕಸ್ಯ ರಾಜ್ಞಃ ॥

ಅನುವಾದ

ನಾನು ಕನಸಿನಲ್ಲಿ ವಿಕೃತಾಕಾರದಿಂದ ಇರುವ ಒಂದು ವಾನರನನ್ನು ನೋಡಿದೆ. ‘‘ಸ್ವಪ್ನದಲ್ಲಿ ವಾನರನನ್ನು ನೋಡುವುದು ಒಳೆಯದಲ್ಲ’’ ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಿದೆ. ಈ ದುಃಸ್ವಪ್ನದಿಂದ ಯಾರಿಗೆ ಆಪತ್ತು ಕಾದಿದೆಯೋ ತಿಳಿಯದು. ಶ್ರೀರಾಮನಿಗೆ, ಲಕ್ಷ್ಮಣನಿಗೆ, ನನ್ನ ತಂದೆಯಾದ ಜನಕನಿಗೆ, ನನಗೂ; ಹೀಗೆ ಯಾರಿಗೂ ಈ ಸ್ವಪ್ನ ಪ್ರಭಾವವು ತಟ್ಟದಿರಲಿ. ಎಲ್ಲರಿಗೆ ಮಂಗಳವೇ ಆಗಲೀ.॥9॥

ಮೂಲಮ್ - 10

ಸ್ವಪ್ನೋಽ ಹಿ ನಾಯಂ ನ ಹಿ ಮೇಽ ಸ್ತಿ ನಿದ್ರಾ
ಶೋಕೇನ ದುಃಖೇನ ಚ ಪೀಡಿತಾಯಾಃ ।
ಸುಖಂ ಹಿ ಮೇ ನಾಸ್ತಿ ಯತೋಽಸ್ಮಿ ಹೀನಾ
ತೇನೇಂದುಪೂರ್ಣಪ್ರತಿಮಾನನೇನ ॥

ಅನುವಾದ

ಕ್ಷಣಕಾಲ ಯೋಚಿಸಿ ಸೀತೆಯು ಪುನಃ ಅಂದುಕೊಂಡಳು. ಇದು ಖಂಡಿತವಾಗಿ ಸ್ವಪ್ನವಲ್ಲ. ಏಕೆಂದರೆ ನಿದ್ದೆ ಬಂದರಲ್ಲವೇ ಕನಸು ಕಾಣುವುದು? ಶೋಕ-ದುಃಖಪೀಡಿತಳಾಗಿರುವ ನನಗೆ ನಿದ್ದೆ ಎಲ್ಲಿಂದ ಬಂತು? ಪೂರ್ಣೆಂದು ಸದೃಶವಾದ ಮುಖವುಳ್ಳ ಶ್ರೀರಾಮನಿಂದ ದೂರವಿರುವ ನನಗೆ ಸುಖವೂ ಇಲ್ಲ, ನಿದ್ದೆಯೂ ಇಲ್ಲ.॥10॥

ಮೂಲಮ್ - 11

ರಾಮೇತಿ ರಾಮೇತಿ ಸದೈವ ಬುದ್ಧ್ಯಾ
ವಿಚಿಂತ್ಯ ವಾಚಾ ಬ್ರುವತೀ ತಮೇವ ।
ತಸ್ಯಾನುರೂಪಾಂ ಚ ಕಥಾಂ ತಮರ್ಥಮ್
ಏವಂ ಪ್ರಪಶ್ಯಾಮಿ ತಥಾ ಶೃಣೋಮಿ ॥

ಅನುವಾದ

ನಾನು ನಿರಂತರವೂ ಮನಸ್ಸಿನಲ್ಲೇ ಶ್ರೀರಾಮನನ್ನೇ ಸ್ಮರಿಸುತ್ತಾ ರಾಮಾ! ರಾಮಾ! ಎಂದು ಹೇಳುತ್ತಿದ್ದೇನೆ. ಆ ಕಾರಣದಿಂದ ಅದಕ್ಕನುರೂಪವಾಗಿ ನನಗೆ ಅವನ ಕಥೆಯೇ ಕೇಳಿ ಬರುತ್ತಿದೆ. ಅವನ ರೂಪವನ್ನೇ ನೋಡುತ್ತಿದ್ದೇನೆ.॥11॥

ಮೂಲಮ್ - 12

ಅಹಂ ಹಿ ತಸ್ಯಾದ್ಯ ಮನೋಭವೇನ
ಸಂಪೀಡಿತಾ ತದ್ಗತಸರ್ವಭಾವಾ ।
ವಿಚಿಂತಯಂತೀ ಸತತಂ ತಮೇವ
ತಮೇವ ಪಶ್ಯಾಮಿ ತಥಾ ಶೃಣೋಮಿ ॥

ಅನುವಾದ

ನಾನು ಈಗ ಶ್ರೀರಾಮ ವಿರಹದಿಂದ ಬಾಧೆಪಡುತ್ತಿದ್ದೇನೆ. ನನ್ನ ಮನಸ್ಸಿನಲ್ಲಿ ಪೂರ್ಣವಾಗಿ ರಾಮನೇ ತುಂಬಿರುವನು. ಅನವರತವೂ ಅವನ ಕುರಿತೇ ಆಲೋಚಿಸುತ್ತಿದ್ದೇನೆ. ಅದರಿಂದಾಗಿ ‘‘ಭ್ರಮರ ಕೀಟನ್ಯಾಯ’’ದಂತೆ ನಾನು ಅವನ ರೂಪವನ್ನೇ ನೋಡುತ್ತಿದ್ದೇನೆ. ಅವನ ಕಥೆಯನ್ನೇ ಕೇಳುತ್ತಿದ್ದೇನೆ.॥12॥

ಮೂಲಮ್ - 13

ಮನೋರಥಃ ಸ್ಯಾದಿತಿ ಚಿಂತಯಾಮಿ
ತಥಾಪಿ ಬುದ್ಧ್ಯಾ ಚ ವಿತರ್ಕಯಾಮಿ ।
ಕಿಂ ಕಾರಣಂ ತಸ್ಯ ಹಿ ನಾಸ್ತಿ ರೂಪಂ
ಸುವ್ಯಕ್ತರೂಪಶ್ಚ ವದತ್ಯಯಂ ಮಾಮ್ ॥

ಅನುವಾದ

ಬಹುಶಃ ಇದು ನನ್ನ ಮನೋರಥವೇ ಆಗಿರಬಹುದು. ಚೆನ್ನಾಗಿ ತರ್ಕಿಸಿ ನೋಡಿದರೆ ಇದು ಮನೋರಥವು ಆಗಲಾರದು. ಏಕೆಂದರೆ ಮನೋರಥಗಳಿಗೆ ರೂಪವೇ ಇರುವುದಿಲ್ಲವಲ್ಲ! ಈ ವಾನರನು ಸ್ಪಷ್ಟವಾದ ರೂಪದಿಂದ ನನಗೆ ಪ್ರತ್ಯಕ್ಷವಾಗಿ ಕಂಡುಬರುತ್ತಿದ್ದಾನೆ. ಅವನೇ ಮಾತಾಡಿರಬಹುದು.॥13॥

ಮೂಲಮ್ - 14

ನಮೋಽಸ್ತು ವಾಚಸ್ಪತಯೇ ಸವಜ್ರಿಣೇ
ಸ್ವಯಂಭುವೇ ಚೈವ ಹುತಾಶನಾಯ ಚ ।
ಅನೇನ ಚೋಕ್ತಂ ಯದಿದಂ ಮಮಾಗ್ರತೋ
ವನೌಕಸಾ ತಚ್ಚ ತಥಾಸ್ತು ನಾನ್ಯಥಾ ॥

ಅನುವಾದ

ವಜ್ರಸಹಿತನಾದ ಇಂದ್ರನಿಗೆ ವಂದನೆ. ಬೃಹಸ್ಪತಿಗೆ ನಮಸ್ಕಾರಗಳು. ಬ್ರಹ್ಮದೇವರಿಗೆ ವಂದನೆಗಳು. ಅಗ್ನಿದೇವರಿಗೆ ಪ್ರಣಾಮಗಳು. ವನಚರನಾದ ಈ ಕಪೀಶ್ವರನು ಈಗ ಹೇಳಿದ ಮಾತುಗಳು ಸತ್ಯವಾಗಲೀ. ಸುಳ್ಳಾಗುವುದು ಬೇಡ. (ಈ ಸಂದೇಶ ವಾಹಕನಾದ ಕಪೀಶ್ವರನು ಶ್ರೀರಾಮನ ಪಕ್ಷದವನೇ ಆಗಿರಬೇಕು. ರಾವಣನ ಪಕ್ಷದವನಲ್ಲ.)॥14॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ದ್ವಾತ್ರಿಂಶಃ ಸರ್ಗಃ ॥ 32 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತೆರಡನೆಯ ಸರ್ಗವು ಮುಗಿಯಿತು.