वाचनम्
ಭಾಗಸೂಚನಾ
ಹನುಮಂತನು ಸೀತಾದೇವಿಯು ಕೇಳುವಂತೆ ಶ್ರೀರಾಮಕಥೆಯನ್ನು ಸುಮಧುರವಾಗಿ ಹಾಡಿದುದು
ಮೂಲಮ್ - 1
ಏವಂ ಬಹು ವಿಧಾಂ ಚಿಂತಾಂ ಚಿಂತಯಿತ್ವಾ ಮಹಾಕಪಿಃ ।
ಸಂಶ್ರವೇ ಮಧುರಂ ವಾಕ್ಯಂ ವೈದೇಹ್ಯಾ ವ್ಯಾಜಹಾರ ಹ ॥
ಅನುವಾದ
ಮಹಾಮತಿಯಾದ ಹನುಮಂತನು ಹೀಗೆ ಹಲವು ವಿಧದಿಂದ ಆಲೋಚಿಸಿ ಕರ್ತವ್ಯವನ್ನು ನಿರ್ಣಯಿಸಿಕೊಂಡು, ಸೀತಾದೇವಿಗೆ ಮಾತ್ರವೇ ಚೆನ್ನಾಗಿ ಕೇಳುವಂತೆ ಸುಮಧುರವಾಗಿ ಶ್ರೀರಾಮಕಥೆಯನ್ನು ಹೇಳಲು ಉಪಕ್ರಮಿಸಿದನು.॥1॥
ಮೂಲಮ್ - 2
ರಾಜಾ ದಶರಥೋ ನಾಮ ರಥಕುಂಜರವಾಜಿಮಾನ್ ।
ಪುಣ್ಯಶೀಲೋ ಮಹಾಕೀರ್ತಿರ್ಋಜುರಾಸೀನ್ಮಹಾಯಶಾಃ ॥
ಅನುವಾದ
‘‘ಇಕ್ಷ್ವಾಕು ವಂಶದಲ್ಲಿ ದಶರಥನೆಂಬ ಪ್ರಸಿದ್ಧನೂ, ಪುಣ್ಯಾತ್ಮನೂ ಆದ ರಾಜನಿದ್ದನು. ಅವನು ಮಹಾಕೀರ್ತಿಶಾಲಿಯಾಗಿದ್ದು ಅವನಲ್ಲಿ ಹೇರಳವಾದ ಆನೆಗಳೂ, ಶ್ಯಾಮಕರ್ಣ ಅಶ್ವಗಳೂ, ದಿವ್ಯರಥಗಳೂ ಇದ್ದುವು.॥2॥
ಮೂಲಮ್ - 3
ರಾಜರ್ಷೀಣಾಂ ಗುಣಶ್ರೇಷ್ಠ ಸ್ತಪಸಾ ಚರ್ಷಿಭಿಃ ಸಮಃ ।
ಚಕ್ರವರ್ತಿಕುಲೇ ಜಾತಃ ಪುರಂದರಸಮೋ ಬಲೇ ॥
ಅನುವಾದ
ರಾಜರ್ಷಿಗಳಲ್ಲಿ ಇರುವ ಶ್ರೇಷ್ಠವಾದ ಗುಣಗಳೆಲ್ಲವೂ ಅವನಲ್ಲಿದ್ದುವು. ತಪಸ್ಸಿನಲ್ಲಿ ಋಷಿಗಳಿಗೆ ಸಮಾನವಾಗಿದ್ದನು. ಚಕ್ರವರ್ತಿಗಳ ಕುಲದಲ್ಲಿ ಹುಟ್ಟಿದ್ದ ಅವನು ಬಲದಲ್ಲಿ ಇಂದ್ರನಿಗೆ ಸಮನಾಗಿದ್ದನು.॥3॥
ಮೂಲಮ್ - 4
ಅಹಿಂಸಾರತಿರಕ್ಷುದ್ರೋ ಘೃಣೀ ಸತ್ಯಪರಾಕ್ರಮಃ ।
ಮುಖ್ಯಶ್ಚೇಕ್ಷ್ವಾಕುವಂಶಸ್ಯ ಲಕ್ಷ್ಮೀವಾನ್ ಲಕ್ಷ್ಮಿವರ್ಧನಃ ॥
ಅನುವಾದ
ಅಹಿಂಸಾ ನಿಯಮಗಳನ್ನು ಪಾಲಿಸುವವನೂ, ಉದಾರಸ್ವಭಾವದವನೂ, ದಯಾಳುವೂ, ಸತ್ಯಸಂಧನೂ, ಐಶ್ವರ್ಯವಂತನೂ, ಸಂಪತ್ತುಗಳನ್ನು ರಕ್ಷಿಸುವುದರಲ್ಲಿ ದಕ್ಷನೂ, ಇಕ್ಷ್ವಾಕುವಂಶಕ್ಕೆ ತಿಲಕ ಪ್ರಾಯನಾಗಿದ್ದನು.॥4॥
ಮೂಲಮ್ - 5
ಪಾರ್ಥಿವವ್ಯಂಜನೈರ್ಯುಕ್ತಃ ಪೃಥುಶ್ರೀಃ ಪಾರ್ಥಿವರ್ಷಭಃ ।
ಪೃಥಿವ್ಯಾಂ ಚತುರಂತಾಯಾಂ ವಿಶ್ರುತಃ ಸುಖದಃ ಸುಖೀ ॥
ಅನುವಾದ
ರಾಜಶ್ರೇಷ್ಠನಾದ ಅವನು ಸಮಸ್ತ ರಾಜಚಿಹ್ನೆಗಳಿಂದಲೂ ಕೂಡಿದ್ದನು. ರಾಜಶಿರೋಮಣಿಯಾಗಿದ್ದು, ಶುಭಲಕ್ಷಣ ಸಂಪನ್ನನಾಗಿದ್ದನು. ಚತುಃಸಾಗರ ಪರ್ಯಂತವಾದ ಈ ಭೂಮಂಡಲದಲ್ಲಿ ಅವನು ಪ್ರಜೆಗಳಿಗೆ ಸುಖವನ್ನುಂಟು ಮಾಡುವವನೆಂದೂ, ಪರಮಸುಖಿಯೆಂದೂ, ಪ್ರಸಿದ್ಧನಾಗಿದ್ದನು.॥5॥
ಮೂಲಮ್ - 6
ತಸ್ಯ ಪುತ್ರಃ ಪ್ರಿಯೋ ಜ್ಯೇಷ್ಠಸ್ತಾರಾಧಿಪನಿಭಾನನಃ ।
ರಾಮೋ ನಾಮ ವಿಶೇಷಜ್ಞಃ ಶ್ರೇಷ್ಠಃ ಸರ್ವಧನುಷ್ಮತಾಮ್ ॥
ಅನುವಾದ
ಆ ದಶರಥ ಮಹಾರಾಜನಿಗೆ ಅತ್ಯಂತ ಪ್ರಿಯನಾದವನೂ, ಜೇಷ್ಠಪುತ್ರನೂ ಆದ ಶ್ರೀರಾಮನೆಂಬುವನು ಪ್ರಸಿದ್ಧನಾಗಿದ್ದನು. ಅವನು ಚಂದ್ರನಂತೆ ಪ್ರಸನ್ನವದನನೂ, ಜ್ಞಾನಸ್ವರೂಪನೂ, ಧನುರ್ಧಾರಿಗಳಲ್ಲಿ ಅಗ್ರೇಸರನೂ ಆಗಿದ್ದನು.॥6॥
ಮೂಲಮ್ - 7
ರಕ್ಷಿತಾ ಸ್ವಸ್ಯ ವೃತ್ತಸ್ಯ ಸ್ವಜನಸ್ಯಾಪಿ ರಕ್ಷಿತಾ ।
ರಕ್ಷಿತಾ ಜೀವಲೋಕಸ್ಯ ಧರ್ಮಸ್ಯ ಚ ಪರಂತಪಃ ॥
ಅನುವಾದ
ಶತ್ರುತಾಪಕನಾದ ಅವನು ಸ್ವಧರ್ಮವನ್ನು ಪಾಲಿಸುವವನೂ, ಆಶ್ರಿತರಿಗೆ ಕಲ್ಪವೃಕ್ಷನೂ, ಸಕಲಪ್ರಾಣಿಗಳನ್ನು, ಸಮಸ್ತಧರ್ಮಗಳನ್ನು ರಕ್ಷಿಸುವವನೂ ಆಗಿದ್ದನು.॥7॥
ಮೂಲಮ್ - 8
ತಸ್ಯ ಸತ್ಯಾಭಿಸಂಧಸ್ಯ ವೃದ್ಧಸ್ಯ ವಚನಾತ್ ಪಿತುಃ ।
ಸಭಾರ್ಯಃ ಸಹ ಚ ಭ್ರಾತ್ರಾ ವೀರಃ ಪ್ರವ್ರಾಜಿತೋ ವನಮ್ ॥
ಅನುವಾದ
ಸತ್ಯಪ್ರತಿಜ್ಞನೂ, ವೃದ್ಧನೂ, ಪಿತನೂ ಆದ ದಶರಥನ ಅಪ್ಪಣೆಯನ್ನು ಅನುಸರಿಸಿ, ವೀರನಾದ ಶ್ರೀರಾಮನು ತನ್ನ ಭಾರ್ಯೆಯಾದ ಸೀತಾದೇವಿ ಮತ್ತು ತಮ್ಮನಾದ ಲಕ್ಷ್ಮಣನೊಡನೆ ವನವಾಸಕ್ಕೆ ತೆರಳಿದನು.॥8॥
ಮೂಲಮ್ - 9
ತೇನ ತತ್ರ ಮಹಾರಣ್ಯೇ ಮೃಗಯಾಂ ಪರಿಧಾವತಾ ।
ರಾಕ್ಷಸಾ ನಿಹತಾಃ ಶೂರಾ ಬಹವಃ ಕಾಮರೂಪಿಣಃ ॥
ಅನುವಾದ
ಆ ಮಹಾರಣ್ಯದಲ್ಲಿ ಬೇಟೆಯಾಡುತ್ತಾ ಸಂಚರಿಸುತ್ತಿದ್ದಾಗ ಲೀಲಾಮಾತ್ರದಿಂದ ಕಾಮರೂಪಿಗಳೂ, ಶೂರರೂ ಆದ ಅನೇಕ ರಾಕ್ಷಸರನ್ನು ಸಂಹರಿಸಿದನು.॥9॥
ಮೂಲಮ್ - 10
ಜನಸ್ಥಾನವಧಂ ಶ್ರುತ್ವಾಹತೌ ಚ ಖರದೂಷಣೌ ।
ತತಸ್ತ್ವಮರ್ಷಾಪಹೃತಾ ಜಾನಕೀ ರಾವಣೇನ ತು ॥
ಮೂಲಮ್ - 11
ವಂಚಯಿತ್ವಾ ವನೇ ರಾಮಂ ಮೃಗರೂಪೇಣ ಮಾಯಯಾ ।
ಸ ಮಾರ್ಗಮಾಣಸ್ತಾಂ ದೇವೀಂ ರಾಮಃ ಸೀತಾಮನಿಂದಿತಾಮ್ ॥
ಮೂಲಮ್ - 12
ಆಸಸಾದ ವನೇ ಮಿತ್ರಂ ಸುಗ್ರೀವಂ ನಾಮ ವಾನರಮ್ ।
ತತಃ ಸ ವಾಲಿನಂ ಹತ್ವಾ ರಾಮಃ ಪರಪುರಂಜಯಃ ॥
ಮೂಲಮ್ - 13
ಪ್ರಾಯಚ್ಛತ್ ಕಪಿರಾಜ್ಯಂ ತತ್ ಸುಗ್ರೀವಾಯ ಮಹಾಬಲಃ ।
ಸುಗ್ರೀವೇಣಾಪಿ ಸಂದಿಷ್ಟಾ ಹರಯಃ ಕಾಮರೂಪಿಣಃ ॥
ಅನುವಾದ
ಜನಸ್ಥಾನದಲ್ಲಿದ್ದ ರಾಕ್ಷಸರ ನೆಲೆಯನ್ನು ಧ್ವಂಸಮಾಡಿ, ಖರ-ದೂಷಣರನ್ನು ಸಂಹರಿಸಿದನೆಂಬ ವಾರ್ತೆಯನ್ನು ಕೇಳಿ, ರಾಕ್ಷಸರ ಅಧಿಪತಿಯಾದ ರಾವಣನು ಕ್ರುದ್ಧನಾಗಿ, ಮಾಯಾಮೃಗರೂಪವನ್ನು ಧರಿಸಿದ ಮಾರೀಚನ ಸಹಾಯದಿಂದ ಶ್ರೀರಾಮನನ್ನು ವಂಚಿಸಿ ಅವನ ಭಾರ್ಯೆಯಾದ ಜಾನಕಿಯನ್ನು ಅಪಹರಿಸಿದನು. ಸಾಧ್ವಿಯಾದ ಸೀತಾದೇವಿಯನ್ನು ಶ್ರೀರಾಮನು ಕಾಡಿನಲ್ಲಿ ಹುಡುಕುತ್ತಿರುವಾಗ ಸುಗ್ರೀವನೆಂಬ ವಾನರನನ್ನು ಸಂಧಿಸಿ ಅವನನ್ನು ಮಿತ್ರನಾಗಿಸಿಕೊಂಡನು. ಅನಂತರ ಶತ್ರುಗಳನ್ನು ಜಯಿಸುವ ಮಹಾಬಲಶಾಲಿಯಾದ ಶ್ರೀರಾಮನು ವಾಲಿಯನ್ನು ಸಂಹರಿಸಿ, ಮಹಾತ್ಮನಾದ ಸುಗ್ರೀವನಿಗೆ ಕಪಿಗಳ ರಾಜ್ಯವನ್ನು ವಹಿಸಿಕೊಟ್ಟನು. ಸುಗ್ರೀವನ ಅಪ್ಪಣೆಯಂತೆ ಕಾಮರೂಪಿಗಳಾದ ಸಾವಿರಾರು ವಾನರರು ಎಲ್ಲ ದಿಕ್ಕುಗಳಲ್ಲಿಯೂ ಆ ಸೀತೆಯನ್ನು ಹುಡುಕುತ್ತಿದ್ದಾರೆ.॥10-13॥
ಮೂಲಮ್ - 14
ದಿಕ್ಷು ಸರ್ವಾಸು ತಾಂ ದೇವೀಂ ವಿಚಿನ್ವಂತಿ ಸಹಸ್ರಶಃ ।
ಅಹಂ ಸಂಪಾತಿವಚನಾಚ್ಛತಯೋಜನಮಾಯತಮ್ ॥
ಅನುವಾದ
ಸಂಪಾತಿಯ ಸೂಚನೆಯ ಮೇರೆಗೆ ನಾನು ವಿಶಾಲಾಕ್ಷಿಯಾದ ಸೀತಾದೇವಿಯನ್ನು ಹುಡುಕುವ ಸಲುವಾಗಿ ನೂರು ಯೋಜನ ವಿಸ್ತಾರವಾದ ಸಮುದ್ರವನ್ನು ವೇಗವಾಗಿ ಹಾರಿದೆನು.॥14॥
ಮೂಲಮ್ - 15
ಅಸ್ಯಾ ಹೇತೋವಿಶಾಲಾಕ್ಷ್ಯಾಃ ಸಾಗರಂ ವೇಗವಾನ್ ಪ್ಲುತಃ ।
ಯಥಾರೂಪಾಂ ಯಥಾವರ್ಣಾಂ ಯಥಾಲಕ್ಷ್ಮೀಂ ಚ ನಿಶ್ಚಿತಾಮ್ ॥
ಮೂಲಮ್ - 16
ಅಶ್ರೌಷಂ ರಾಘವಸ್ಯಾಹಂ ಸೇಯಮಾಸಾದಿತಾ ಮಯಾ ।
ವಿರರಾಮೈವಮುಕ್ತ್ವಾಸೌ ವಾಚಂ ವಾನರಪುಂಗವಃ ॥
ಅನುವಾದ
ಸೀತಾದೇವಿಯ ರೂಪ ಸೌಭಾಗ್ಯಗಳನ್ನು, ತೇಜೋವಿಶೇಷತೆಯನ್ನೂ, ಚಿಹ್ನೆಗಳನ್ನು ನಾನು ಶ್ರೀರಾಮನಿಂದ ತಿಳಿದುಕೊಂಡಿರುವೆನು. ಅಂತಹ ಶುಭಲಕ್ಷಣಗಳುಳ್ಳ ಸೀತಾದೇವಿಯನ್ನು ನಾನು ಇಲ್ಲಿ ನೋಡಿದೆನು. ವಾನರ ಶ್ರೇಷ್ಠನಾದ ಹನುಮಂತನು ಹೀಗೆ ನುಡಿದು ಸುಮ್ಮನಾದನು.॥15-16॥
ಮೂಲಮ್ - 17
ಜಾನಕೀ ಚಾಪಿ ತಚ್ಫ್ರುತ್ವಾ ವಿಸ್ಮಯಂ ಪರಮಂ ಗತಾ ।
ತತಃ ಸಾ ವಕ್ರಕೇಶಾಂತಾ ಸುಕೇಶೀ ಕೇಶಸಂವೃತಮ್ ।
ಉನ್ನಮ್ಯ ವದನಂ ಭೀರುಃ ಶಿಂಶಪಾಮನ್ವವೈಕ್ಷತ ॥
ಅನುವಾದ
ಸುಮಧುರವಾಗಿ ಆ ಮಾತುಗಳನ್ನು ಕೇಳಿ ಸೀತಾದೇವಿಯು ಅತ್ಯಂತ ವಿಸ್ಮಿತಳಾದಳು. ಗುಂಗುರು ಕೂದಲುಗಳಿಂದಲೂ, ಸುಂದರವಾದ ಕೇಶರಾಶಿಯಿಂದಲೂ ಕೂಡಿದ್ದ ಭಯ ಸ್ವಭಾವದವಳಾದ ಸೀತಾದೇವಿಯು ಕೂದಲುಗಳಿಂದ ಮುಚ್ಚಿ ಹೋಗಿದ್ದ ತನ್ನ ಮುಖವನ್ನು ಮೇಲೆತ್ತಿ ಶಿಂಶುಪಾವೃಕ್ಷದ ಕಡೆಗೆ ನೋಡಿದಳು.॥17॥
ಮೂಲಮ್ - 18
ನಿಶಮ್ಯ ಸೀತಾವಚನಂ ಕಪೇಶ್ಚ
ದಿಶಶ್ಚ ಸರ್ವಾಃ ಪ್ರದಿಶಶ್ಚ ವೀಕ್ಷ್ಯ ।
ಸ್ವಯಂ ಪ್ರಹರ್ಷಂ ಪರಮಂ ಜಗಾಮ
ಸರ್ವಾತ್ಮನಾ ರಾಮಮನುಸ್ಮರಂತೀ ॥
ಅನುವಾದ
ಎಲ್ಲ ರೀತಿಯಿಂದಲೂ ಯಾವಾಗಲೂ ಶ್ರೀರಾಮನನ್ನೇ ಸ್ಮರಿಸುತ್ತಿದ್ದ ಅವಳು ಹನುಮಂತನ ಮಾತುಗಳನ್ನು ಕೇಳಿ ಎಲ್ಲ ದಿಕ್ಕುಗಳನ್ನು ನೋಡುತ್ತಾ ಪರಮಾನಂದವನ್ನು ಹೊಂದಿದಳು.॥18॥
ಮೂಲಮ್ - 19
ಸಾ ತಿರ್ಯಗೂರ್ಧ್ವಂ ಚ ತಥಾಪ್ಯಧಸ್ತಾ
ನ್ನಿರೀಕ್ಷಮಾಣಾ ತಮಚಿಂತ್ಯಬುದ್ಧಿಮ್ ।
ದದರ್ಶ ಪಿಂಗಾಧಿಪತೇರಮಾತ್ಯಂ
ವಾತಾತ್ಮಜಂ ಸೂರ್ಯಮಿವೋದಯಸ್ಥಮ್ ॥
ಅನುವಾದ
ಶಿಂಶುಪಾವೃಕ್ಷದ ಅಕ್ಕ-ಪಕ್ಕಗಳಲ್ಲಿಯೂ, ಮೇಲ್ಭಾಗದಲ್ಲಿಯೂ, ಕೆಳಭಾಗದಲ್ಲಿಯೂ ನೋಡುತ್ತಿದ್ದ ಸೀತಾದೇವಿಯು, ಇತರರಿಂದ ಊಹಿಸಲು ಅಸಾಧ್ಯವಾದಷ್ಟು ಮಹಾಬುದ್ಧಿವಂತನಾಗಿದ್ದ, ಕಪಿರಾಜನಾದ ಸುಗ್ರೀವನಿಗೆ ಸಚಿವನಾಗಿದ್ದ, ಉದಯಾಚಲದಲ್ಲಿರುವ ಬಾಲಭಾನುವಿನಂತೆ ತೇಜೋಮಯನಾಗಿದ್ದ, ವಾಯುಪುತ್ರನಾದ ಹನುಮಂತನನ್ನು ನೋಡಿದಳು.॥19॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕತ್ರಿಂಶಃ ಸರ್ಗಃ ॥ 31 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತೊಂದನೆಯ ಸರ್ಗವು ಮುಗಿಯಿತು.