०३० हनुमत्संभ्रमः

वाचनम्
ಭಾಗಸೂಚನಾ

ಸೀತೆಯೊಡನೆ ಹೇಗೆ ಮಾತಾಡಬೇಕೆಂಬುದರ ಬಗೆಗೆ ಹನುಮಂತನ ವಿವೇಚನೆ

ಮೂಲಮ್ - 1

ಹನುಮಾನಪಿ ವಿಶ್ರಾಂತಃ ಸರ್ವಂ ಶುಶ್ರಾವ ತತ್ತ್ವತಃ ।
ಸೀತಾಯಾಸ್ತ್ರಿಜಟಾಯಾಶ್ಚ ರಾಕ್ಷಸೀನಾಂ ಚ ತರ್ಜನಮ್ ॥

ಅನುವಾದ

ಅಶೋಕವೃಕ್ಷದ ಮೇಲೆ ಪ್ರಶಾಂತವಾಗಿ ಕುಳಿತ್ತಿದ್ದು ಎಲ್ಲವನ್ನು ಗಮನಿಸುತ್ತಿದ್ದ ಹನುಮಂತನು-ಸೀತಾದೇವಿ ಹೇಳಿದ ಮಾತುಗಳನ್ನು, ತ್ರಿಜಟೆಯು ತಿಳಿಸಿದ ಸ್ವಪ್ನ ವೃತ್ತಾಂತವನ್ನು, ರಾಕ್ಷಸಿಯರು ಸೀತೆಗೆ ಭಯಪಡಿಸಿ ಹೇಳಿದ ಮಾತುಗಳನ್ನು ಯಥಾವತ್ತಾಗಿ ಕಿವಿಗೊಟ್ಟು ಕೇಳಿದನು.॥1॥

ಮೂಲಮ್ - 2

ಅವೇಕ್ಷಮಾಣಸ್ತಾಂ ದೇವಿಂ ದೇವತಾಮಿವ ನಂದನೇ ।
ತತೋ ಬಹುವಿಧಾಂ ಚಿಂತಾಂ ಚಿಂತಯಾಮಾಸ ವಾನರಃ ॥

ಅನುವಾದ

ಬಳಿಕ ವಾನರಶ್ರೇಷ್ಠನಾದ ಹನುಮಂತನು ನಂದನವನದಲ್ಲಿ ದೇವತಾಸ್ತ್ರೀಯು ಕುಳಿತಿರುವಂತೆ ಅಶೋಕವನದಲ್ಲಿ ಕುಳಿತ್ತಿದ್ದ ಸೀತಾದೇವಿಯನ್ನು ನೋಡುತ್ತಾ ಅನೇಕವಿಧವಾಗಿ ಚಿಂತಿಸತೊಡಗಿದನು.॥2॥

ಮೂಲಮ್ - 3

ಯಾಂ ಕಪೀನಾಂ ಸಹಸ್ರಾಣಿ ಸುಬಹೂನ್ಯಯುತಾನಿ ಚ ।
ದಿಕ್ಷು ಸರ್ವಾಸು ಮಾರ್ಗಂತೇ ಸೇಯಮಾಸಾದಿತಾ ಮಯಾ ॥

ಅನುವಾದ

ಈ ಸೀತಾದೇವಿಯನ್ನು ಹುಡುಕಲಿಕ್ಕಾಗಿ ಸಾವಿರಾರು ವಾನರರು ಎಲ್ಲ ದಿಕ್ಕುಗಳಿಗೂ ತೆರಳಿ ಹುಡುಕುತ್ತಿದ್ದಾರೆ. ಆದರೆ ಇವಳ ದರ್ಶನ ಭಾಗ್ಯವು ನನಗೆ ದಕ್ಕಿತು.॥3॥

ಮೂಲಮ್ - 4

ಚಾರೇಣ ತು ಸುಯುಕ್ತೇನ ಶತ್ರೋಃ ಶಕ್ತಿಮವೇಕ್ಷತಾ ।
ಗೂಢೇನ ಚರತಾ ತಾವದವೇಕ್ಷಿತಮಿದಂ ಮಯಾ ॥

ಅನುವಾದ

ಯುಕ್ತಿಶಾಲಿಯಾದ ಸೇವಕನಿಗೆ (ಗೂಢಚಾರಿ) ಶತ್ರುವಿನ ಬಲಾಬಲಗಳನ್ನು ಚೆನ್ನಾಗಿ, ಸಮಗ್ರವಾಗಿ ತಿಳಿಯುವುದು ಆವಶ್ಯಕ. ಆ ಕಾರ್ಯಕ್ಕಾಗಿ ಬಂದಿರುವ ನಾನು ಯಾರೂ ತಿಳಿಯದಂತೆ ಸಂಚರಿಸಿ ಎಲ್ಲ ವಿಷಯಗಳನ್ನು ಪೂರ್ತಿಯಾಗಿ ತಿಳಿದುಕೊಂಡಿರುವೆನು.॥4॥

ಮೂಲಮ್ - 5

ರಾಕ್ಷಸಾನಾಂ ವಿಶೇಷಶ್ಚ ಪುರೀ ಚೇಯಮವೇಕ್ಷಿತಾ ।
ರಾಕ್ಷಸಾಧಿಪತೇರಸ್ಯ ಪ್ರಭಾವೋ ರಾವಣಸ್ಯ ಚ ॥

ಅನುವಾದ

ರಾಕ್ಷಸರ ಎಲ್ಲ ವಿಶೇಷಗಳನ್ನು ಗಮನಿಸಿದೆ. ಈ ಲಂಕಾ ಪಟ್ಟಣವನ್ನು ಪೂರ್ಣವಾಗಿ ನೋಡಿದೆನು. ರಾಕ್ಷಸರಾಜನಾದ ರಾವಣನ ಪ್ರಭಾವವನ್ನು, ಅವನ ಧೋರಣೆಗಳನ್ನು ತಿಳಿದುಕೊಂಡಿರುವೆನು.॥5॥

ಮೂಲಮ್ - 6

ಯುಕ್ತಂ ತಸ್ಯಾಪ್ರಮೇಯಸ್ಯ ಸರ್ವಸತ್ತ್ವದಯಾವತಃ ।
ಸಮಾಶ್ವಾಸಯಿತುಂ ಭಾರ್ಯಾಂ ಪತಿದರ್ಶನಕಾಂಕ್ಷಿಣೀಮ್ ॥

ಅನುವಾದ

ಅಪ್ರಮೇಯನೂ, ಸರ್ವಪ್ರಾಣಿಗಳ ಮೇಲೆ ದಯೆ ತೋರುವವನೂ, ಅಪರಿಮಿತವಾದ ಬಲಪರಾಕ್ರಮವುಳ್ಳ ಶ್ರೀರಾಮನಿಗೆ ಭಾರ್ಯೆಯಾದ ಈ ಸೀತಾದೇವಿಯು ತನ್ನ ಪತಿಯ ದರ್ಶನಕ್ಕಾಗಿ ಹಾತೊರೆಯುತ್ತಿರುವಳು. ಈಗ ಇವಳನ್ನು ಸಂತೈಸುವುದು ಯುಕ್ತವಾಗಿದೆ.॥6॥

ಮೂಲಮ್ - 7

ಅಹಮಾಶ್ವಾಸಯಾಮ್ಯೇನಾಂ ಪೂರ್ಣಚಂದ್ರನಿಭಾನನಾಮ್ ।
ಅದೃಷ್ಟ ದುಃಖಾಂ ದುಃಖಾರ್ತಾಂ ದುಃಖಸ್ಯಾಂತಮಗಚ್ಛತೀಮ್ ॥

ಅನುವಾದ

ಪೂರ್ಣಚಂದ್ರ ಸದೃಶವಾದ ಮುಖದಿಂದ ಕೂಡಿರುವ, ಹಿಂದೆ ದುಃಖವೆಂಬುದನ್ನೇ ಕಾಣದಿದ್ದು, ಈಗ ದುಃಖಾರ್ತಳಾಗಿ, ದುಃಖಗಳಿಗೆ ಕೊನೆಯೇ ಕಾಣದಿರುವ ಇವಳನ್ನು ನಾನೀಗ ಸಂತೈಸಬೇಕಾಗಿದೆ.॥7॥

ಮೂಲಮ್ - 8

ಯದಿ ಹ್ಯಹಮಿಮಾಂ ದೇವೀಂ ಶೋಕೋಪಹತಚೇತನಾಮ್ ।
ಅನಾಶ್ವಾಸ್ಯ ಗಮಿಷ್ಯಾಮಿ ದೋಷವದ್ಗಮನಂ ಭವೇತ್ ॥

ಅನುವಾದ

ತೀವ್ರವಾದ ಶೋಕದಿಂದಾಗಿ ಈಕೆಯ ಮನಸ್ಸು ವ್ಯಾಕುಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿರುವ ಪತಿವ್ರತಾ ಶಿರೋಮಣಿಯನ್ನು ಸಮಾಧಾನಗೊಳಸದೆ ಹೋಗಿಬಿಟ್ಟರೆ ಲಂಕೆಗೆ ಬಂದ ನನ್ನ ಪ್ರಯಾಣವು ದೋಷಯುಕ್ತವಾದೀತು. ಅರ್ಥಾತ್-ಅರ್ಥವಿಲ್ಲದಂತಾದೀತು.॥8॥

ಮೂಲಮ್ - 9

ಗತೇ ಹಿ ಮಯಿ ತತ್ರೇಯಂ ರಾಜಪುತ್ರೀ ಯಶಸ್ವಿನೀ ।
ಪರಿತ್ರಾಣಮವಿಂದತೀ ಜಾನಕೀ ಜೀವಿತಂ ತ್ಯಜೇತ್ ॥

ಅನುವಾದ

ಯಶಸ್ವಿನಿಯಾದ, ರಾಜಪುತ್ರಿ ಸೀತಾದೇವಿಯನ್ನು ಸಮಾಧಾನಪಡಿಸದೇ ನಾನು ಸುಗ್ರೀವನ ಬಳಿಗೆ ಹೊರಟು ಹೋದೆನಾದರೆ, ಇವಳು ರಕ್ಷಕರನ್ನೇ ಕಾಣದೆ ಪ್ರಾಣಗಳನ್ನು ತೊರೆಯಲೂಬಹುದು.॥9॥

ಮೂಲಮ್ - 10

ಮಯಾ ಚ ಸ ಮಹಾಬಾಹುಃ ಪೂರ್ಣಚಂದ್ರ ನಿಭಾನನಃ ।
ಸಮಾಶ್ವಾಸಯಿತುಂ ನ್ಯಾಯ್ಯಃ ಸೀತಾದರ್ಶನಲಾಲಸಃ ॥

ಅನುವಾದ

ಆಜಾನುಬಾಹುವೂ, ಚಂದ್ರನಂತೆ ಆಹ್ಲಾದಕರವಾದ ಮುಖವುಳ್ಳವನೂ, ಸೀತಾದೇವಿಯನ್ನು ನೋಡಲು ತವಕಪಡುತ್ತಿರುವವನೂ ಆದ ಶ್ರೀರಾಮನಿಗೂ ಕೂಡ ಸೀತಾಸಂದೇಶವನ್ನು ತಿಳಿಸಿ ಸಮಾಧಾನಪಡಿಸುವುದು ನ್ಯಾಯವೂ, ಸಮುಚಿತವೂ ಆಗಿದೆ. ॥10॥

ಮೂಲಮ್ - 11

ನಿಶಾಚರೀಣಾಂ ಪ್ರತ್ಯಕ್ಷಮನರ್ಹಂ ಚಾಪಿಭಾಷಣಮ್ ।
ಕಥಂ ನು ಖಲು ಕರ್ತವ್ಯಮಿದಂ ಕೃಚ್ಛ್ರಗತೋ ಹ್ಯಹಮ್ ॥

ಅನುವಾದ

ಆದರೆ ಈ ರಾಕ್ಷಸಿಯರ ಎದುರಿನಲ್ಲಿ ಇವಳೊಡನೆ ಮಾತನಾಡುವುದು ಉಚಿತವಲ್ಲ. ಈಗ ನಾನೇನು ಮಾಡಲೀ? ದೊಡ್ಡ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಿಕ್ಕಿಕೊಡಿರುವೆನಲ್ಲ!॥11॥

ಮೂಲಮ್ - 12

ಅನೇನ ರಾತ್ರಿಶೇಷೇಣ ಯದಿ ನಾಶ್ವಾಸ್ಯತೇ ಮಯಾ ।
ಸರ್ವಥಾ ನಾಸ್ತಿ ಸಂದೇಹಃ ಪರಿತ್ಯಕ್ಷ್ಯತಿ ಜೀವಿತಮ್ ॥

ಅನುವಾದ

ಸ್ವಲ್ಪವೇ ಉಳಿದಿರುವ ಈ ರಾತ್ರಿಯ ಸಮಯದಲ್ಲೇ ನಾನು ಇವಳನ್ನು ಸಮಾಧಾನಪಡಿಸದಿದ್ದರೆ ಇವಳು ತನ್ನ ಜೀವಿತವನ್ನು ತ್ಯಜಿಸುವುದು ನಿಶ್ಚಯ. ಇದರಲ್ಲಿ ಸಂದೇಹವೇ ಇಲ್ಲ.॥12॥

ಮೂಲಮ್ - 13

ರಾಮಶ್ಚ ಯದಿ ಪೃಚ್ಛೇನ್ಮಾಂ ಕಿಂ ಮಾಂ ಸೀತಾಬ್ರವೀದ್ವಚಃ ।
ಕಿಮಹಂ ತಂ ಪ್ರತಿಬ್ರೂಯಾಮಸಂಭಾಷ್ಯ ಸುಮಧ್ಯಮಾಮ್ ॥

ಅನುವಾದ

ಸುಂದರಿಯಾದ ಇವಳೊಡನೆ ನಾನು ಮಾತನಾಡದೆ ಶ್ರೀರಾಮನ ಬಳಿಗೆ ಹೋದಾಗ ‘ಸೀತೆಯು ನನ್ನ ಕುರಿತು ಏನು ಹೇಳಿದಳು?’ ಎಂದು ರಾಮನು ಕೇಳಿದರೆ ಏನೆಂದುತ್ತರಿಸಲೀ?॥13॥

ಮೂಲಮ್ - 14

ಸೀತಾಸಂದೇಶರಹಿತಂ ಮಾಮಿತಸ್ತ್ವರಯಾ ಗತಮ್ ।
ನಿರ್ದಹೇದಪಿ ಕಾಕುತ್ಸ್ಥಃ ಕ್ರುದ್ಧಸ್ತೀವ್ರೇಣ ಚಕ್ಷುಷಾ ॥

ಅನುವಾದ

ಸೀತೆಯ ಸಂದೇಶವನ್ನು ಪಡೆಯದೆ ನಾನು ಅವಸರದಿಂದ ಅಲ್ಲಿಗೆ ಹೊರಟುಹೋದರೆ ಕಾಕುತ್ಸ್ಥನಾದ ಶ್ರೀರಾಮನು ಕ್ರುದ್ಧನಾಗಿ ತನ್ನ ತೀಕ್ಷ್ಣವಾದ ಕಣ್ಣುಗಳಿಂದ ನನ್ನನ್ನು ಸುಟ್ಟು ಬಿಡಬಹುದು.॥14॥

ಮೂಲಮ್ - 15

ಯದಿ ಚೋದ್ಯೋಜಯಿಷ್ಯಾಮಿ ಭರ್ತಾರಂ ರಾಮಕಾರಣಾತ್ ।
ವ್ಯರ್ಥಮಾಗಮನಂ ತಸ್ಯ ಸಸೈನ್ಯಸ್ಯ ಭವಿಷ್ಯತಿ ॥

ಅನುವಾದ

ರಾಮಕಾರ್ಯಾರ್ಥವಾಗಿ ಯುದ್ಧಕ್ಕಾಗಿ ಸುಗ್ರೀವನನ್ನು ಪ್ರಚೋದಿಸಿ, ಅವನು ಸೈನ್ಯಸಮೇತ ಇಲ್ಲಿಗೆ ಬಂದರೂ, ಅವನ ಬರುವಿಕೆಯು ವ್ಯರ್ಥವೇ ಆಗುತ್ತದೆ. ಏಕೆಂದರೆ ಆ ವೇಳೆಗೆ ಸೀತೆಯೇ ಬದುಕಿರುವುದಿಲ್ಲ.॥15॥

ಮೂಲಮ್ - 16

ಅಂತರಂ ತ್ವಹಮಾಸಾದ್ಯ ರಾಕ್ಷಸೀನಾಮಿಹ ಸ್ಥಿತಃ ।
ಶನೈರಾಶ್ವಾಸಯಿಷ್ಯಾಮಿ ಸಂತಾಪಬಹುಲಾಮಿಮಾಮ್ ॥

ಅನುವಾದ

ಆದುದರಿಂದ ನಾನು ಇಲ್ಲಿಯೇ ಕುಳಿತ್ತಿದ್ದು, ರಾಕ್ಷಸಿಯರ ಲಕ್ಷ್ಯ ಬೆರೆಡೆಗೆ ಹೋದಾಗ ಅಥವಾ ಬಳಿಯಲ್ಲಿ ಇಲ್ಲದಿರುವ ಸಮಯವನ್ನು ಸಾಧಿಸಿ ಹೆಚ್ಚಾಗಿ ಸಂತಾಪಪಡುತ್ತಿರುವ ಸೀತಾದೇವಿಯನ್ನು ನಿಧಾನವಾಗಿ ಸಮಾಧಾನಗೊಳಿಸುತ್ತೇನೆ.॥16॥

ಮೂಲಮ್ - 17

ಅಹಂ ತ್ವತಿತನುಶ್ಚೈವ ವಾನರಶ್ಚ ವಿಶೇಷತಃ ।
ವಾಚಂ ಚೋದಾಹರಿಷ್ಯಾಮಿ ಮಾನುಷೀಮಿಹ ಸಂಸ್ಕೃತಾಮ್ ॥

ಅನುವಾದ

ನಾನು ಪ್ರಸ್ತುತ ಸೂಕ್ಷ್ಮರೂಪವನ್ನು ಧರಿಸಿರುವೆನು. ಅದರಲ್ಲಿಯೂ ವಿಶೇಷವಾಗಿ ವಾನರನು. ಮಾನವರ ರೀತಿಯಲ್ಲಿ ನಾನು ಇವಳಲ್ಲಿ ಸರಳ ಸಂಸ್ಕೃತ ಭಾಷೆಯಲ್ಲೇ ಮಾತಾಡುತ್ತೇನೆ.॥17॥

ಮೂಲಮ್ - 18

ಯದಿ ವಾಚಂ ಪ್ರದಾಸ್ಯಾಮಿ ದ್ವಿಜಾತಿರಿವ ಸಂಸ್ಕೃತಾಮ್ ।
ರಾವಣಂ ಮನ್ಯಮಾನಾ ಮಾಂ ಸೀತಾ ಭೀತಾ ಭವಿಷ್ಯತಿ ॥

ಅನುವಾದ

ವಿದ್ವಾಂಸರಾಡುವ ಸಂಸ್ಕೃತದಲ್ಲಿ ನಾನು ಸಂಭಾಷಿಸಿದರೆ ವಾನರನಾದ ಈತನು ಹೀಗೆ ಸ್ವಚ್ಛವಾದ ಸಂಸ್ಕೃತದಲ್ಲಿ ಹೇಗೆ ಮಾತಾಡಬಲ್ಲನು? ಎಂದು ಸಂದೇಹಿಸಿ ಇವನು ರಾವಣನೆಂದೇ ಭಾವಿಸಿ ಭಯಪಡಬಹುದು.॥18॥

ಮೂಲಮ್ - 19

ವಾನರಸ್ಯ ವಿಶೇಷೇಣ ಕಥಂ ಸ್ಯಾದಭಿಭಾಷಣಮ್ ।
ಅವಶ್ಯಮೇವ ವಕ್ತವ್ಯಂ ಮಾನುಷಂ ವಾಕ್ಯಮರ್ಥವತ್ ॥

ಅನುವಾದ

ಆದರೂ ನಾನು ಇವಳೊಡನೆ ಅರ್ಥವತ್ತಾಗಿ ಸಾಮಾನ್ಯ ಮನುಷ್ಯರಂತೆ ಮಾತನಾಡುವೆನು. ಮಾನವ ಸಹಜವಾದ ಮಾತುಗಳನ್ನಾಡುವುದರಿಂದಲೇ ಅನಿಂದಿತೆಯಾದ ಇವಳನ್ನು ನಾನು ಸಮಾಧಾನಗೊಳಿಸಬಹುದು.॥19॥

ಮೂಲಮ್ - 20

ಮಯಾ ಸಾಂತ್ವಯಿತುಂ ಶಕ್ಯಾ ನಾನ್ಯಥೇಯಮನಿಂದಿತಾ ।
ಸೇಯಮಾಲೋಕ್ಯ ಮೇ ರೂಪಂ ಜಾನಕೀ ಭಾಷಿತಂ ತಥಾ ॥

ಅನುವಾದ

ಇಷ್ಟರವರೆಗೆ ರಾಕ್ಷಸಿಯರಿಂದ ಮೊದಲೇ ಇವಳು ಭಯಪಟ್ಟಿರುವಳು. ಈಗ ನನ್ನ ರೂಪವನ್ನು ನೋಡಿ ನನ್ನ ಮಾತುಗಳನ್ನು ಕೇಳಿ ಇವಳು ಇನ್ನೂ ಹೆಚ್ಚಾಗಿ ಭಯಪಡಬಹುದು.॥20॥

ಮೂಲಮ್ - 21

ರಕ್ಷೋಭಿಸ್ತ್ರಾಸಿತಾ ಪೂರ್ವಂ ಭೂಯಸ್ತ್ರಾಸಂ ಗಮಿಷ್ಯತಿ ।
ತತೋ ಜಾತಪರಿತ್ರಾಸಾ ಶಬ್ದಂ ಕುರ್ಯಾನ್ಮನಸ್ವಿನೀ ॥

ಅನುವಾದ

ಬುದ್ಧಿವಂತಳೂ, ವಿಶಾಲಾಕ್ಷಿಯೂ ಆದ ಸೀತಾದೇವಿಯು ನನ್ನನ್ನು ಕಾಮರೂಪಿಯಾದ ರಾವಣನೆಂದು ಭಾವಿಸಿ ಭಯಗೊಂಡು ಆರ್ತನಾದವನ್ನು ಮಾಡಬಹುದು.॥21॥

ಮೂಲಮ್ - 22

ಜಾನಾನಾ ಮಾಂ ವಿಶಾಲಾಕ್ಷೀ ರಾವಣಂ ಕಾಮರೂಪಿಣಮ್ ।
ಸೀತಯಾ ಚ ಕೃತೇ ಶಬ್ದೇ ಸಹಸಾ ರಾಕ್ಷಸೀಗಣಃ ॥

ಅನುವಾದ

ಸೀತಾದೇವಿಯ ಆರ್ತನಾದವನ್ನು ಕೇಳಿ ಯಮಕಿಂಕರರಂತೆ ಇರುವ ರಾಕ್ಷಸಿಯರ ಗುಂಪು ಒಡನೆಯೇ ನಾನಾವಿಧವಾದ ಆಯುಧಗಳನ್ನು ಹಿಡಿದುಕೊಂಡು ನನ್ನನ್ನು ಎದುರಿಸಲೂಬಹುದು.॥22॥

ಮೂಲಮ್ - 23

ನಾನಾಪ್ರಹರಣೋ ಘೋರಃ ಸಮೇಯಾದಂತಕೋಪಮಃ ।
ತತೋ ಮಾಂ ಸಂಪರಿಕ್ಷಿಪ್ಯ ಸರ್ವತೋ ವಿಕೃತಾನನಾಃ ॥

ಅನುವಾದ

ವಿಕಾರವಾದ ಮುಖವುಳ್ಳ, ಮಹಾಬಲಶಾಲಿಯಾದ ರಕ್ಕಸಿಯರೆಲ್ಲರೂ ಎಲ್ಲ ಕಡೆಯಿಂದ ನನ್ನನ್ನು ಸುತ್ತುವರಿದು ವಧೆ ಮಾಡಬಹುದು ಅಥವಾ ಬಂಧಿಸಲೂ ಪ್ರಯತ್ನಿಸಬಹುದು.॥23॥

ಮೂಲಮ್ - 24

ವಧೇ ಚ ಗ್ರಹಣೇ ಚೈವ ಕುರ್ಯುರ್ಯತ್ನಂ ಯಥಾಬಲಮ್ ।
ಗೃಹ್ಯ ಶಾಖಾಃ ಪ್ರಶಾಖಾಶ್ಚ ಸ್ಕಂಧಾಂಶ್ಚೋತ್ತಮಶಾಖಿನಾಮ್ ॥

ಅನುವಾದ

ರೆಂಬೆಗಳನ್ನೂ, ಚಿಕ್ಕಕೊಂಬೆಗಳನ್ನೂ, ದಪ್ಪವಾದ ಕೊಂಬೆಗಳುಳ್ಳ ಮರಗಳನ್ನು ಹಿಡಿದುಕೊಂಡು ಓಡುತ್ತಿರುವ ನನ್ನನ್ನು ನೋಡಿ ಆ ರಕ್ಕಸಿಯರು ಭಯ ಸಂದೇಹಗಳನ್ನು ಹೊಂದುವರು.॥24॥

ಮೂಲಮ್ - 25

ದೃಷ್ಟ್ವಾ ವಿಪರಿಧಾವಂತಂ ಭವೇಯುರ್ಭಯಶಂಕಿತಾಃ ।
ಮಮ ರೂಪಂ ಚ ಸಂಪ್ರೇಕ್ಷ್ಯವನೇ ವಿಚರತೋ ಮಹತ್ ॥

ಅನುವಾದ

ಈ ವನದಲ್ಲಿ ಅತ್ತ-ಇತ್ತ ಸಂಚರಿಸುತ್ತಿರುವ ನನ್ನ ಬೃಹದ್ರೂಪವನ್ನು ಕಂಡು ಭಯಭೀತರಾಗಿ ಅವರು ವಿಕಾರವಾದ ಧ್ವನಿಗಳಿಂದ ಕಿರಿಚಿಕೊಳ್ಳಬಹುದು.॥25॥

ಮೂಲಮ್ - 26

ರಾಕ್ಷಸ್ಯೋ ಭಯವಿತ್ರಸ್ತಾ ಭವೇಯುರ್ವಿಕೃತಾನನಾಃ ।
ತತಃ ಕುರ್ಯುಃ ಸಮಾಹ್ವಾನಂ ರಾಕ್ಷಸ್ಯೋ ರಕ್ಷಸಾಮಪಿ ॥

ಅನುವಾದ

ಬಳಿಕ ಅವರು ರಾಕ್ಷಸೇಂದ್ರನಾದ ರಾವಣನ ಭವನಕ್ಕೆ ಹೋಗಿ ರಕ್ಷಣೆಗಾಗಿ ಅವನಿಂದ ನಿಯುಕ್ತರಾದ ರಾಕ್ಷಸರನ್ನು ಆಹ್ವಾನಿಸಬಹುದು.॥26॥

ಮೂಲಮ್ - 27

ರಾಕ್ಷಸೇಂದ್ರನಿಯುಕ್ತಾನಾಂ ರಾಕ್ಷಸೇಂದ್ರನಿವೇಶನೇ ।
ತೇ ಶೂಲಶಕ್ತಿನಿಸ್ತ್ರಿಂಶವಿವಿಧಾಯುಧಪಾಣಯಃ ॥

ಅನುವಾದ

ಆ ರಾಕ್ಷಸರು ಶೂಲಗಳೂ, ಭಲ್ಲೆಗಳೂ, ಖಡ್ಗಗಳೂ ಮುಂತಾದ ಆಯುಧಗಳನ್ನು ಎತ್ತಿಕೊಂಡು ನನ್ನೊಡನೆ ಹೋರಾಡಲು ವೇಗವಾಗಿ ಇಲ್ಲಿಗೆ ಬರಬಹುದು.॥27॥

ಮೂಲಮ್ - 28

ಆಪತೇಯುರ್ವಿಮರ್ದೇಽಸ್ಮಿನ್ ವೇಗೇನೋದ್ವೇಗಕಾರಣಾತ್ ।
ಸಂರುದ್ಧಸ್ತೈಸ್ತು ಪರಿತೋ ವಿಧಮನ್ ರಕ್ಷಸಾಂ ಬಲಮ್ ॥

ಅನುವಾದ

ಅವರೆಲ್ಲರೂ ಒಟ್ಟಾಗಿ ಬಂದು ನನ್ನನ್ನು ಸುತ್ತುಗಟ್ಟಿ ಯುದ್ಧಕ್ಕೆ ನಿಂತರೂ ನಾನು ಆ ರಾಕ್ಷಸಸೈನ್ಯವನ್ನು ಧ್ವಂಸಮಾಡಬಲ್ಲೆ. ಆದರೆ ಕಾದಾಟದಲ್ಲಿ ಸಿಲುಕಿ ಮಹೋದಧಿಯ ಆಚೆ ದಡಕ್ಕೆ ಹೊಗಲು ನನಗೆ ಸಾಧ್ಯವಾಗದೇ ಇರಬಹುದು.॥28॥

ಮೂಲಮ್ - 29

ಶಕ್ನುಯಾಂ ನ ತು ಸಂಪ್ರಾಪ್ತುಂ ಪರಂ ಪಾರಂ ಮಹೋದಧೇಃ ।
ಮಾಂ ವಾ ಗೃಹ್ಣೀಯುರಾಪ್ಲುತ್ಯ ಬಹವಃ ಶೀಘ್ರಕಾರಿಣಃ ॥

ಅನುವಾದ

ಚುರುಕಾದ ಕೆಲವು ಮಂದಿ ರಾಕ್ಷಸರು ನನ್ನನ್ನು ಸುತ್ತುವರಿದು ಬಂಧಿಸಲುಬಹುದು. ಆ ಸ್ಥಿತಿಯಲ್ಲಿ ನಾನು ಶ್ರೀರಾಮನ ಸಂದೇಶವನ್ನು ಸೀತೆಗೆ ಮುಟ್ಟಿಸಲಾರೆನು. ನಾನು ಬಂದಿರುವ ಕಾರ್ಯವು ನೆರವೇರದು.॥29॥

ಮೂಲಮ್ - 30

ಸ್ಯಾದಿಯಂ ಚಾಗೃಹೀತಾರ್ಥಾ ಮಮ ಚ ಗ್ರಹಣಂ ಭವೇತ್ ।
ಹಿಂಸಾಭಿರುಚಯೋ ಹಿಂಸ್ಯುರಿಮಾಂ ವಾ ಜನಕಾತ್ಮಜಾಮ್ ॥

ಅನುವಾದ

ಹಿಂಸಾಪ್ರವೃತ್ತಿಯವರಾದ ರಾಕ್ಷಸರು ಈ ಜಾನಕಿದೇವಿಯನ್ನು ಇನ್ನೂ ಹೆಚ್ಚಾಗಿ ಹಿಂಸಿಸಬಹುದು. ಅದರಿಂದಾಗಿ ರಾಮ-ಸುಗ್ರೀವರು ನನಗೆ ಒಪ್ಪಿಸಿದ ಸೀತಾನ್ವೇಷಣ ಕಾರ್ಯವು ಭಂಗವಾಗಬಹುದು.॥30॥

ಮೂಲಮ್ - 31

ವಿಪನ್ನಂ ಸ್ಯಾತ್ತತಃ ಕಾರ್ಯಂ ರಾಮಸುಗ್ರೀವಯೋರಿದಮ್ ।
ಉದ್ದೇಶೇ ನಷ್ಟಮಾರ್ಗೇಽಸ್ಮಿನ್ ರಾಕ್ಷಸೈಃ ಪರಿವಾರಿತೇ ॥

ಅನುವಾದ

ಜಾನಕಿದೇವಿ ಇರುವ ಈ ರಹಸ್ಯ ಸ್ಥಳಕ್ಕೆ ಬರಲು ಯಾವ ಮಾರ್ಗವೂ ಇಲ್ಲ. ಸುತ್ತಲೂ ಸಮುದ್ರವಿದೆ. ಮೇಲಾಗಿ ರಾಕ್ಷಸರು ಈ ಸ್ಥಳವನ್ನು ನಿರಂತರವಾಗಿ ಕಾವಲು ಕಾಯುತ್ತಿದ್ದಾರೆ.॥31॥

(ಶ್ಲೋಕ - 32

ಮೂಲಮ್

ಸಾಗರೇಣ ಪರೀಕ್ಷಿಪ್ತೇ ಗುಪ್ತೇ ವಸತಿ ಜಾನಕೀ ।
ವಿಶಸ್ತೇ ವಾ ಗೃಹೀತೇ ವಾ ರಕ್ಷೋಭಿರ್ಮಯಿ ಸಂಯುಗೇ ॥

ಅನುವಾದ

ನಾನು ಯುದ್ಧದಲ್ಲಿ ರಾಕ್ಷಸರಿಂದ ಬಂಧಿತನಾದರೆ, ಇವಳ ಸುಳಿವು ಯಾರಿಗೂ ಸಿಕ್ಕದಂತಾಗಿ ರಾಮ-ಸುಗ್ರೀವರ ಪ್ರಯತ್ನವೆಲ್ಲವೂ ನಿಷ್ಫಲವಾಗುತ್ತದೆ.॥32॥

ಮೂಲಮ್ - 33

ನಾನ್ಯಂ ಪಶ್ಯಾಮಿ ರಾಮಸ್ಯ ಸಾಹಾಯ್ಯಂ ಕಾರ್ಯಸಾಧನೇ ।
ವಿಮೃಶಂಶ್ಚ ನ ಪಶ್ಯಾಮಿ ಯೋ ಹತೇ ಮಯಿ ವಾನರಃ ॥

ಅನುವಾದ

ರಾಕ್ಷಸರೊಡನೆ ಯುದ್ಧ ಮಾಡುವಾಗ ನಾನೇನಾದರೂ ಹತನಾದರೆ ಶ್ರೀರಾಮನ ಕಾರ್ಯಕ್ಕಾಗಿ ನೂರು ಯೋಜನ ವಿಸ್ತಾರವಾದ ಸಮುದ್ರವನ್ನು ದಾಟಿಕೊಂಡು ಬರಲು ಎಷ್ಟು ಆಲೋಚಿಸಿದರೂ ಸಮರ್ಥನಾದ ಬೇರೊಬ್ಬ ವಾನರನು ಕಂಡುಬರುವುದಿಲ್ಲ.॥33॥

ಮೂಲಮ್ - 34

ಶತಯೋಜನವಿಸ್ತೀರ್ಣಂ ಲಂಘಯೇತ ಮಹೋದಧಿಮ್ ।
ಕಾಮಂ ಹಂತುಂ ಸಮರ್ಥೋಽಸ್ಮಿ ಸಹಸ್ರಾಣ್ಯಪಿ ರಕ್ಷಸಾಮ್ ॥

ಅನುವಾದ

ಸಾವಿರಾರು ರಾಕ್ಷಸರನ್ನು ಸಂಹರಿಸಲು ನಾನು ಸಮರ್ಥನಾಗಿರುವೆನು. ಆದರೆ ಈ ರಾಕ್ಷಸರೊಡನೆ ಯುದ್ಧದಲ್ಲಿ ಸಿಲುಕಿ ಅನೇಕ ದಿನಗಳು ಕಳೆದರೆ ಮಹೋದಧಿಯ ಆಚೆ ದಡಕ್ಕೆ ಸಕಾಲದಲ್ಲಿ ಹೋಗಲು ಸಾಧ್ಯವಾಗಲಾರದು.॥34॥

ಮೂಲಮ್ - 35

ನ ತು ಶಕ್ಷ್ಯಾಮಿ ಸಂಪ್ರಾಪ್ತುಂ ಪರಂ ಪಾರಂ ಮಹೋದಧೇಃ ।
ಅಸತ್ಯಾನಿ ಚ ಯುದ್ಧಾನಿ ಸಂಶಯೋ ಮೇ ನ ರೋಚತೇ ॥

ಅನುವಾದ

ಯುದ್ಧರಂಗದಲ್ಲಿ ಜಯಾಪಜಯಗಳು ಅನಿಶ್ಚಿತವಾದುವುಗಳು. ಸಂಶಯಾತ್ಮಕವಾದ ಕಾರ್ಯವನ್ನು ಮಾಡುವುದು ನನಗೆ ರುಚಿಸುವುದಿಲ್ಲ. ಪ್ರಾಜ್ಞನಾದವನು ಯಾರೇ ಆಗಿರಲಿ, ಸಂಶಯಾಸ್ಪದ ಕಾರ್ಯವನ್ನು ವಿಚಾರವಿಲ್ಲದೆ ನಿಃಸಂಶಯವಾಗಿ ಹೇಗೆ ತಾನೇ ಮಾಡುವನು.॥35॥

ಮೂಲಮ್ - 36

ಕಶ್ಚನಿಃಸಂಶಯಂ ಕಾರ್ಯಂ ಕುರ್ಯಾತ್ ಪ್ರಾಜ್ಞಃ ಸಸಂಶಯಮ್ ।
ಪ್ರಾಣತ್ಯಾಗಶ್ಚ ವೈದೇಹ್ಯಾ ಭವೇದನಭಿಭಾಷಣೇ ॥

ಅನುವಾದ

ಸೀತೆಯೊಡನೆ ಮಾತನಾಡುವುದರಿಂದ ಈ ಒಂದು ಮಹತ್ತರವಾದ ವಿಪತ್ತು(ಯುದ್ಧವು) ಸಂಭವಿಸುವುದು. ಆದರೆ ಈಗ ನಾನು ಇವಳೊಡನೆ ಮಾತಾಡದಿದ್ದರೆ ವೈದೇಹಿಯ ಪ್ರಾಣತ್ಯಾಗವೇ ಆಗಿತ್ತದೆ.॥36॥

ಮೂಲಮ್ - 37

ಏಷ ದೋಷೋ ಮಹಾನ್ ಹಿ ಸ್ಯಾನ್ಮಮ ಸೀತಾಭಿಭಾಷಣೇ ।
ಭೂತಾಶ್ಚಾರ್ಥಾ ವಿನಶ್ಯಂತಿ ದೇಶಕಾಲವಿರೋಧಿತಾಃ ॥

ಅನುವಾದ

ನಿಶ್ಚಿತವಾಗಿ ಸಲವಾಗುವ ಕಾರ್ಯಗಳೂ ಕೂಡ ಅವಿವೇಕಿಯಾದ ದೂತನು ದೇಶ-ಕಾಲಗಳಿಗೆ ವಿರುದ್ಧವಾಗಿ ಕೈಗೊಂಡರೆ ಸೂರ್ಯೋದಯವಾದೊಡನೆ ಕತ್ತಲೆಯು ನಶಿಸುವಂತೆ ನಿಷ್ಫಲವಾಗುತ್ತವೆ.॥37॥

ಮೂಲಮ್ - 38

ವಿಕ್ಲವಂ ದೂತಮಾಸಾದ್ಯ ತಮಃ ಸೂರ್ಯೋದಯೇ ಯಥಾ ।
ಅರ್ಥಾನರ್ಥಾಂತರೇ ಬುದ್ಧಿರ್ನಿಶ್ಚಿತಾಪಿ ನ ಶೋಭತೇ ॥

ಅನುವಾದ

ಲಾಭ-ನಷ್ಟಗಳನ್ನು ನೋಡಿ ರಾಜನು ತನ್ನ ಮಂತ್ರಿಗಳೊಂದಿಗೆ ಚರ್ಚಿಸಿ ನಿಶ್ಚಯಿಸಿದ ಕಾರ್ಯವಾದರೂ, ಅವಿವೇಕಿಯಾದ ದೂತನಿಂದ ಅದು ಸಲವಾಗಲಾರದು. ಏಕೆಂದರೆ ಅಸಮರ್ಥನಾದರೂ ತಾನು ಸಮರ್ಥನೆಂಬ ಅಹಂಕಾರದಿಂದ ದೂತನು ಕಾರ್ಯಗಳನ್ನು ಹಾಳು ಮಾಡುತ್ತಾನೆ.॥38॥

ಮೂಲಮ್ - 39

ಘಾತಯಂತಿ ಹಿ ಕಾರ್ಯಾಣಿ ದೂತಾಃ ಪಂಡಿತಮಾನಿನಃ ।
ನ ವಿನಶ್ಯೇತ್ ಕಥಂ ಕಾರ್ಯಂ ವೈಕ್ಲವ್ಯಂ ನ ಕಥಂ ಭವೇತ್ ॥

ಅನುವಾದ

ಶ್ರೀರಾಮನ ಕಾರ್ಯವು ಹಾಳಾಗದೆ ಸಿದ್ಧಿಸುವುದು ಹೇಗೆ? ನಾನು ಬುದ್ಧಿಹೀನನೆಂದು ಕಾಣಿಸದೆ ಇರುವುದು ಹೇಗೆ? ಸಮುದ್ರ ಲಂಘನವು ವ್ಯರ್ಥವಾಗದಿರುವುದು ಹೇಗೆ?॥39॥

ಮೂಲಮ್ - 40

ಲಂಘನಂ ಚ ಸಮುದ್ರಸ್ಯ ಕಥಂ ನು ನ ವೃಥಾ ಭವೇತ್ ।
ಕಥಂ ನು ಖಲು ವಾಕ್ಯಂ ಮೇ ಶೃಣುಯಾನ್ನೋದ್ವಿಜೇತ ವಾ ॥

ಅನುವಾದ

ಸೀತಾದೇವಿಯು ಭಯಸಂದೇಹಗಳಿಲ್ಲದ ರೀತಿಯಿಂದ ಅವಳಿಗೆ ನನ್ನ ಮಾತನ್ನು ಹೇಗೆ ತಿಳಿಸಲಿ? ಮುಂತಾಗಿ ಆಲೋಚಿಸಿ ಪ್ರಾಜ್ಞನಾದ ಹನುಮಂತನು ತತ್ಕಾಲೋಚಿತವಾದ ಕರ್ತವ್ಯವನ್ನು ಮಾಡಲು ನಿಶ್ಚಯಿಸಿದನು.॥40॥

ಮೂಲಮ್ - 41

ಇತಿ ಸಂಚಿಂತ್ಯ ಹನುಮಾಂಶ್ಚಕಾರ ಮತಿಮಾನ್ ಮತಿಮ್ ।
ರಾಮಮಕ್ಲಿಷ್ಟಕರ್ಮಾಣಂ ಸ್ವಬಂಧುಮನುಕೀರ್ತಯನ್ ॥

ಅನುವಾದ

ನನ್ನ ಸ್ವಾಮಿಯಾದ ಶ್ರೀರಾಮನು ಎಂತಹ ಕ್ಲಿಷ್ಟವಾದ ಕಾರ್ಯವನ್ನಾದರೂ ಲೀಲಾ ಮಾತ್ರದಿಂದ ನೆರವೇರಿಸುವನು. ಇವಳ ಮನಸ್ಸು ಶ್ರೀರಾಮನಲ್ಲೇ ಸಂಲಗ್ನವಾಗಿದೆ. ಅದರಿಂದ ಶ್ರೀರಾಮನನ್ನು ಕೀರ್ತಿಸಿ ಇವಳ ಭಯಸಂದೇಹಗಳನ್ನು ಇಲ್ಲವಾಗಿಸುತ್ತೇನೆ. (ನಾನು ಅವಳಿಗೆ ಕಂಡುಬಂದರೆ ಅವಳು ಉದ್ವೇಗಗೊಳ್ಳುವಳು. ಅದಕ್ಕಾಗಿ ಅವಳಿಗೆ ಕಾಣಿಸದೆ ಶ್ರೀರಾಮನ ಗುಣಕೀರ್ತನೆಯನ್ನು ಮಾಡುತ್ತಾ ಅವಳನ್ನು ಪ್ರಸನ್ನಗೊಳಿಸುತ್ತೇನೆ.)॥41॥

ಮೂಲಮ್ - 42

ನೈನಾಮುದ್ವೇಜಯಿಷ್ಯಾಮಿ ತದ್ಬಂಧುಗತಮಾನಸಾಮ್ ।
ಇಕ್ಷ್ವಾಕೂಣಾಂ ವರಿಷ್ಠಸ್ಯ ರಾಮಸ್ಯ ವಿದಿತಾತ್ಮನಃ ॥

ಮೂಲಮ್ - 43

ಶುಭಾನಿ ಧರ್ಮಯುಕ್ತಾನಿ ವಚನಾನಿ ಸಮರ್ಪಯನ್ ।
ಶ್ರಾವಯಿಷ್ಯಾಮಿ ಸರ್ವಾಣಿ ಮಧುರಾಂ ಪ್ರಬ್ರುವನ್ ಗಿರಮ್ ।
ಶ್ರದ್ಧಾಸ್ಯತಿ ಯಥಾ ಹೀಯಂ ತಥಾ ಸರ್ವಂ ಸಮಾದಧೇ ॥

ಅನುವಾದ

ಇಕ್ಷ್ವಾಕುವಂಶದಲ್ಲೇ ಶ್ರೇಷ್ಠನಾದ, ಆತ್ಮವಿದನಾದ, ಪರಮಾತ್ಮ ಸ್ವರೂಪನಾದ, ಶ್ರೀರಾಮನಿಗೆ ಸಂಬಂಧಿಸಿದ ಶುಭಕರವೂ, ಧರ್ಮಯುಕ್ತವೂ ಆದ ಸಮಸ್ತ ವಿಷಯಗಳನ್ನು ವಿವರಿಸುತ್ತೇನೆ. ಮೃದುಮಧುರ ವಚನಗಳನ್ನು ಇವಳು ಕೇಳುವಂತೆ ನಿವೇದಿಸಿಕೊಳ್ಳುವೆನು. ಈ ವಿಧದಿಂದ ಇವಳಿಗೆ ಪೂರ್ಣವಿಸ್ವಾಸವನ್ನೂ, ಶ್ರದ್ಧೆಯನ್ನೂ, ಮನಃಶಾಂತಿಯನ್ನು ದೊರಕುವಂತೆ ಮಾಡುವೆನು.॥42-43॥

ಮೂಲಮ್ - 44

ಇತಿ ಸ ಬಹುವಿಧಂ ಮಹಾನುಭಾವೋ
ಜಗತಿಪತೇಃ ಪ್ರಮದಾಮವೇಕ್ಷಮಾಣಃ ।
ಮಧುರಮವಿತಥಂ ಜಗಾದ ವಾಕ್ಯಂ
ದ್ರುಮವಿಟಪಾಂತರಮಾಸ್ಥಿತೋ ಹನೂಮಾನ್ ॥

ಅನುವಾದ

ಹೀಗೆ ಬಹಳವಾಗಿ ಯೋಚಿಸುತ್ತಿದ್ದ ಮಹಾನುಭಾವನಾದ ಹನುಮಂತನು ವೃಕ್ಷದಲ್ಲಿ ಕುಳಿತ್ತಿದ್ದು ಜಗತ್ಪತಿಯಾದ ಶ್ರೀರಾಮ ಚಂದ್ರನ ಭಾರ್ಯೆಯಾದ ಸೀತಾದೇವಿಯನ್ನು ನೋಡುತ್ತಾ ಸುಮಧುರವಾದ, ಕರ್ಣಾನಂದಕರವಾದ, ಯಥಾರ್ಥವಾದ ರಾಮಮಹಿಮೆಯನ್ನು ಹಾಡತೊಡಗಿದನು.॥44॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ತ್ರಿಂಶಃ ಸರ್ಗಃ ॥ 30 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೂವತ್ತನೆಯ ಸರ್ಗವು ಮುಗಿಯಿತು.