०२९ सीतया शुभशकुनानुभवः

वाचनम्
ಭಾಗಸೂಚನಾ

ಸೀತಾದೇವಿಗೆ ಗೋಚರಿಸಿದ ಶುಭಶಕುನಗಳು

ಮೂಲಮ್ - 1

ತಥಾಗತಾಂ ತಾಂ ವ್ಯಥಿತಾಮನಿಂದಿತಾಂ
ವ್ಯಪೇತಹರ್ಷಾಂ ಪರಿದೀನಮಾನಸಾಮ್ ।
ಶುಭಾಂ ನಿಮಿತ್ತಾನಿ ಶುಭಾನಿ ಭೇಜಿರೇ
ನರಂ ಶ್ರಿಯಾ ಜುಷ್ಟಮಿವೋಪಜೀವಿನಃ ॥

ಅನುವಾದ

ಹಾಗೇ ಶಿಂಶುಪಾವೃಕ್ಷದ ರೆಂಬೆಯನ್ನು ಆಶ್ರಯಿಸಿ ನಿಂತಿದ್ದ, ಪ್ರಾಣತ್ಯಾಗಕ್ಕಾಗಿ ಸಿದ್ಧಳಾದ, ವ್ಯಥೆಪಡುತ್ತಿರುವ, ದೋಷರಹಿತೆಯೂ, ಸಂತೋಷವಿಲ್ಲದವಳೂ, ದೈನ್ಯದಲ್ಲಿರುವ ಆ ಶುಭಾಂಗಿ ಸೀತಾದೇವಿಗೆ ಶ್ರೀಮಂತನನ್ನು ಸೇವಕರು ಆಶ್ರಯಿಸುವಂತೆ ಶುಭಶಕುನಗಳು ಆಗತೊಡಗಿದವು.॥1॥

ಮೂಲಮ್ - 2

ತಸ್ಯಾಃ ಶುಭಂ ವಾಮಮರಾಳಪಕ್ಷ್ಮ-
ರಾಜೀವೃತಂ ಕೃಷ್ಣವಿಶಾಲಶುಕ್ಲಮ್ ।
ಪ್ರಾಸ್ಪಂದತೈಕಂ ನಯನಂ ಸುಕೇಶ್ಯಾ
ಮೀನಾಹತಂ ಪದ್ಮಮಿವಾಭಿತಾಮ್ರಮ್ ॥

ಅನುವಾದ

ಕೇಶಸೌಂದರ್ಯದಿಂದ ಒಪ್ಪುತ್ತಿದ್ದ ಆ ಸೀತಾದೇವಿಯ ಕಣ್ಣುಗಳು ಡೊಂಕಾದ ಮತ್ತು ಸುಂದರವಾದ ರೆಪ್ಪೆಯ ಕೂದಲಿನ ಸಾಲಿನಿಂದ ಆವೃತವಾಗಿದ್ದವು. ಮಧ್ಯದಲ್ಲಿ ಕಪ್ಪಾಗಿಯೂ ಸುತ್ತಲೂ ಬೆಳ್ಳಗೂ, ವಿಶಾಲವಾಗಿದ್ದವು. ಅವುಗಳಲ್ಲಿನ ಎಡಗಣ್ಣು ಮೀನಿನಿಂದ ಅಲ್ಲಾಡಿಸಲ್ಪಟ್ಟ ಕೆಂದಾವರೆಯಂತೆ ಅದರುತ್ತಿತ್ತು.॥2॥

ಮೂಲಮ್ - 3

ಭುಜಶ್ಚ ಚಾರ್ವಂಚಿತಪೀನವೃತ್ತಃ
ಪರಾರ್ಧ್ಯಕಾಲಾಗರುಚಂದನಾರ್ಹಃ ।
ಅನುತ್ತಮೇನಾಧ್ಯುಷಿತಃ ಪ್ರಿಯೇಣ
ಚಿರೇಣ ವಾಮಃ ಸಮವೇಪತಾಶು ॥

ಅನುವಾದ

ಸೀತಾದೇವಿಯ ಎಡಭುಜವು ಸುಂದರವಾಗಿಯೂ, ಮನೋಹರವಾಗಿಯೂ ಇದ್ದಿತು. ಅದು ದುಂಡಾಗಿಯೂ, ದಪ್ಪವಾಗಿಯೂ ಇದ್ದು, ಶ್ರೇಷ್ಠವಾದ ಅಗರು ಚಂದನಾದಿ ಸುಗಂಧದ್ರವ್ಯಗಳ ಅನುಲೇಪನಕ್ಕೆ ಅರ್ಹವಾಗಿದ್ದು ಸರ್ವಶ್ರೇಷ್ಠನಾದ ಶ್ರೀರಾಮಚಂದ್ರನ ಸಂಪರ್ಕವನ್ನು ಬಹಳ ಕಾಲದಿಂದ ಹೊಂದಿದ್ದ ಆ ಭುಜವು ಕೂಡ ಅದುರತೊಡಗಿತು.॥3॥

ಮೂಲಮ್ - 4

ಗಜೇಂದ್ರಹಸ್ತಪ್ರತಿಮಶ್ಚ ಪೀನ-
ಸ್ತಯೋರ್ದ್ವಯೋಃ ಸಂಹತಯೋಃ ಸುಜಾತಃ ।
ಪ್ರಸ್ಪಂದಮಾನಃ ಪುನರೂರು ರಸ್ಯಾ
ರಾಮಂ ಪುರಸ್ತಾತ್ ಸ್ಥಿತಮಾಚಚಕ್ಷೇ ॥

ಅನುವಾದ

ಸೀತೆಯ ಎರಡೂ ತೊಡೆಗಳು ಪರಸ್ಪರ ಘರ್ಷಿಸುತ್ತಿದ್ದವು. ಅದರಲ್ಲಿ ಮದಿಸಿದ ಆನೆಯ ಸೊಂಡಿಲಿನಂತಿದ್ದ, ದಪ್ಪವಾದ ಅವಳ ಎಡತೊಡೆಯು ಅದರುತ್ತಿದ್ದು, ಅದು ಶ್ರೀರಾಮನು ತನ್ನ ಎದುರಿಗೇ ಇರುವಂತೆ ಸೂಚಿಸುತ್ತಿತ್ತು.॥4॥

ಮೂಲಮ್ - 5

ಶುಭಂ ಪುನರ್ಹೇಮಸಮಾನವರ್ಣ-
ಮೀಷದ್ರಜೋಧ್ವಸ್ತಮಿವಾಮಲಾಕ್ಷ್ಯಾಃ ।
ವಾಸಃ ಸ್ಥಿತಾಯಾಃ ಶಿಖರಾಗ್ರದತ್ಯಾಃ
ಕಿಂಚಿತ್ ಪರಿಸ್ರಂಸತ ಚಾರುಗಾತ್ರ್ಯಾಃ ॥

ಅನುವಾದ

ಸುಂದರ ಗಾತ್ರಳಾದ ಆ ಸೀತಾದೇವಿಯ ನಯನಗಳು ನಿರ್ಮಲವಾಗಿದ್ದವು. ಅವಳ ದಂತಪಂಕ್ತಿಗಳು ದುಂಡಾಗಿಯೂ, ದಾಳಿಂಬೆಯ ಬೀಜದಂತೆ ಮನೋಹರವಾಗಿದ್ದವು. ಎಡತೊಡೆಯು ಅದರುವಿಕೆಯಿಂದಾಗಿ ಸೀತಾದೇವಿಯು ಉಟ್ಟಿದ್ದ, ಭಂಗಾರ ಬಣ್ಣದ, ಧೂಳಿನಿಂದ ಮಸಕಾದ ವಸ್ತ್ರವು ಸ್ವಲ್ಪ ಕೆಳಕ್ಕೆ ಜಾರಿತ್ತು. (ಇದು ಭರ್ತೃಸಮಾಗಮ ಸೂಚನೆಯಾಗಿದೆ.)॥5॥

ಮೂಲಮ್ - 6

ಏತೈರ್ನಿಮಿತ್ತೈರಪರೈಶ್ಚ ಸುಭ್ರೂಃ
ಸಂಬೋಧಿತಾ ಪ್ರಾಗಪಿ ಸಾಧು ಸಿದ್ಧೈಃ ।
ವಾತಾತಪಕ್ಲಾಂತಮಿವ ಪ್ರನಷ್ಟಂ
ವರ್ಷೇಣ ಬೀಜಂ ಪ್ರತಿಸಂಜಹರ್ಷ ॥

ಅನುವಾದ

ಸುಂದರವಾದ ಹುಬ್ಬುಗಳಿಂದ ಕೂಡಿದ್ದ, ಸೀತಾದೇವಿಯು ಕಂಡುಬಂದ ಶುಭಸೂಚಕ ಶಕುನಗಳಿಂದಲೂ, ಹಿಂದೆ ಸತ್ಪುರುಷರು ಹೇಳಿದ ಮಾತುಗಳಿಂದಲೂ ಪ್ರೋತ್ಸಾಹಿತಳಾಗಿ ಗಾಳಿಯಿಂದಲೂ, ಬಿಸಿಲಿನಿಂದಲೂ, ಒಣಗಿಹೋದ ಬೀಜವು ಮಳೆಯಿಂದ ಮೊಳಕೆಯೊಡೆದು ಮೇಲಕ್ಕೆ ಬರುವಂತೆ ಅವಳು ಸಂತೋಷಗೊಂಡಳು.॥6॥

ಮೂಲಮ್ - 7

ತಸ್ಯಾಃ ಪುನರ್ಬಿಂಬಫಲಾಧರೋಷ್ಠಂ
ಸ್ವಕ್ಷಿಭ್ರು ಕೇಶಾಂತಮರಾಲಪಕ್ಷ್ಮ ।
ವಕ್ತ್ರಂ ಬಭಾಸೇ ಸ್ಮಿತಶುಕ್ಲದಂಷ್ಟ್ರಂ
ರಾಹೋರ್ಮುಖಾಚ್ಚಂದ್ರ ಇವ ಪ್ರಮುಕ್ತಃ ॥

ಅನುವಾದ

ಸೀತಾದೇವಿಯ ಮುಖವು ತೊಂಡೆಹಣ್ಣಿನಂತೆ ಕೆಂಪಾದ ತುಟಿಗಳಿಂದ ಪರಿಶೋಭಿಸುತ್ತಿತ್ತು. ಸುಂದರವಾದ ಕಣ್ಣುಗಳಿಂದಲೂ, ಡೊಂಕಾದ ಹುಬ್ಬುಗಳಿಂದಲೂ, ರೆಪ್ಪೆಗಳಿಂದಲೂ, ಮುಂಗುರುಳುಗಳಿಂದಲೂ, ಶುಭ್ರವಾಗಿಯೂ ಬಿಳುಪಾಗಿಯು ಇದ್ದ ಹಲ್ಲುಗಳಿಂದಲೂ ರಾರಾಜಿಸುತ್ತಿದ್ದಿತು. ಅಂತಹ ಮುಖವು ರಾಹುವಿನಿಂದ ಬಿಡಲ್ಪಟ್ಟ ಚಂದ್ರಬಿಂಬದಂತೆ ಪ್ರಕಾಶಿಸುತ್ತಿತ್ತು.॥7॥

ಮೂಲಮ್ - 8

ಸಾ ವೀತಶೋಕಾ ವ್ಯಪನೀತತಂದ್ರೀ
ಶಾಂತಜ್ವರಾ ಹರ್ಷವಿವೃದ್ಧಸತ್ತ್ವಾ ।
ಅಶೋಭತಾರ್ಯಾ ವದನೇನ ಶುಕ್ಲೇ
ಶೀತಾಂಶುನಾ ರಾತ್ರಿರಿವೋದಿತೇನ ॥

ಅನುವಾದ

ಪೂಜ್ಯಳಾದ ಸೀತಾದೇವಿಯ ಶೋಕವು ದೂರವಾಯಿತು. ಆಂದೊಳನ ತೊಲಗಿಹೋಯಿತು. ಮನಸ್ಸಿನ ಸಂತಾಪವನ್ನು ದೂರಗೊಳಿಸಿ ಶಾಂತಳಾದಳು. ಆಕೆಯ ಚಿತ್ತವೃತ್ತಿಯು ಹರ್ಷದಿಂದ ವಿಕಾಸಗೊಂಡಿತು. ಶುಕ್ಲಪಕ್ಷದಲ್ಲಿ ಉದಯಿಸಿದ ಚಂದ್ರನಿಂದ ರಾತ್ರಿಯು ಶೋಭಾಯಮಾನವಾಗಿರುವಂತೆ ಹರ್ಷಗೊಂಡ ಮುಖದಿಂದ ವೈದೇಹಿಯು ಕಂಗೊಳಿಸಿದಳು.॥8॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕೋನತ್ರಿಂಶಃ ಸರ್ಗಃ ॥ 29 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತೊಂಭತ್ತನೆಯ ಸರ್ಗವು ಮುಗಿಯಿತು.