०२८ सीतया रावणवाक्यमननम्

वाचनम्
ಭಾಗಸೂಚನಾ

ಸೀತಾದೇವಿಯು ಪ್ರಾಣತೊರೆಯಲು ಸಿದ್ಧಳಾದುದು

ಮೂಲಮ್ - 1

ಸಾ ರಾಕ್ಷಸೇಂದ್ರಸ್ಯ ವಚೋ ನಿಶಮ್ಯ
ತದ್ರಾವಣಸ್ಯಾಪ್ರಿಯಮಪ್ರಿಯಾರ್ತಾ ।
ಸೀತಾ ವಿತತ್ರಾಸ ಯಥಾ ವನಾಂತೇ
ಸಿಂಹಾಭಿಪನ್ನಾ ಗಜರಾಜಕನ್ಯಾ ॥

ಅನುವಾದ

ಪತಿಯಿಂದ ಅಗಲಿ ವಿರಹ ಪೀಡಿತಳಾಗಿದ್ದ ಆ ಸೀತಾದೇವಿಯು ರಾಕ್ಷಸೇಂದ್ರನಾದ ರಾವಣನ ಕಠೋರ ವಚನಗಳನ್ನು ಸ್ಮರಿಸಿಕೊಂಡು ದುಃಖಿತಳಾಗಿ, ಅಡವಿಯಲ್ಲಿ ಸಿಂಹದ ಕೈಗೆ ಸಿಕ್ಕಿದ ಹೆಣ್ಣಾನೆಯಂತೆ ಭಯಗೊಂಡಳು.॥1॥

ಮೂಲಮ್ - 2

ಸಾ ರಾಕ್ಷಸೀಮಧ್ಯಗತಾ ಚ ಭೀರು-
ರ್ವಾಗ್ಭಿರ್ಭೃಶಂ ರಾವಣತರ್ಜಿತಾ ಚ ।
ಕಾಂತಾರಮಧ್ಯೇ ವಿಜನೇ ವಿಸೃಷ್ಟಾ
ಬಾಲೇವ ಕನ್ಯಾ ವಿಲಲಾಪ ಸೀತಾ ॥

ಅನುವಾದ

ಭಯ ಸ್ವಭಾವದ ಸೀತಾದೇವಿಯು ರಾಕ್ಷಸೀಯರ ನಡುವೆ ದಿಕ್ಕುತೋಚದೆ ವಿಲಾಪಿಸುತ್ತಿದ್ದಳು. ರಾವಣನು ಕರ್ಣ ಕಠೋರವಾದ ವಾಗ್ಬಾಣಗಳಿಂದ ಅವಳನ್ನು ಘಾಸಿಗೊಳಿಸಿದ್ದನು. ಅಂತಹ ಸ್ಥಿತಿಯಲ್ಲಿ ಅವಳು ಗೊಂಡಾರಣ್ಯದಲ್ಲಿ ಬಂಧುಗಳಿಂದ ದೂರವಾಗಿ ದುಃಖಿಸುತ್ತಿರುವ ಅಮಾಯಕ ಹೆಣ್ಣು ಹುಡುಗಿಯಂತೆ ಅಳುತ್ತಿದ್ದಳು.॥2॥

ಮೂಲಮ್ - 3

ಸತ್ಯಂ ಬತೇದಂ ಪ್ರವದಂತಿ ಲೋಕೇ
ನಾಕಾಲಮೃತ್ಯುರ್ಭವತೀತಿ ಸಂತಃ ।
ಯತ್ರಾಹಮೇವಂ ಪರಿಭರ್ತ್ಸ್ಯಮಾನಾ
ಜೀವಾಮಿ ಕಿಂಚಿತ್ ಕ್ಷಣಮಪ್ಯಪುಣ್ಯಾ ॥

ಅನುವಾದ

‘‘ಜಗತ್ತಿನಲ್ಲಿ ಯಾರಿಗೂ ಅವರು ಬಯಸಿದಾಗ ಮರಣವು ಸಂಭವಿಸುವುದಿಲ್ಲ’’ ಎಂದು ಪ್ರಾಜ್ಞರು ಆಡಿದ ಮಾತು ತ್ರಿಕಾಲ ಸತ್ಯವಾದುದು. ರಾವಣನೂ, ಈ ರಾಕ್ಷಸಿಯರೂ ನನ್ನನ್ನು ಇಷ್ಟೊಂದು ಭಯಪಡಿಸುತ್ತಿದ್ದರೂ ಪುಣ್ಯರಹಿತಳಾದ ನಾನು ಕ್ಷಣಕಾಲವಾದರೂ, ಜೀವಿಸಿಯೇ ಇದ್ದೇನಲ್ಲ! ಇದು ಎಲ್ಲರಿಗೂ ಪ್ರಬಲವಾದ ನಿದರ್ಶನ.॥3॥

ಮೂಲಮ್ - 4

ಸುಖಾದ್ವಿಹೀನಂ ಬಹುದುಃಖಪೂರ್ಣ
ಮಿದಂ ತು ನೂನಂ ಹೃದಯಂ ಸ್ಥಿರಂ ಮೇ ।
ವಿದಿರ್ಯತೇ ಯನ್ನ ಸಹಸ್ರಧಾದ್ಯ
ವಜ್ರಾಹತಂ ಶೃಂಗಮಿವಾಚಲಸ್ಯ ॥

ಅನುವಾದ

ಸುಖದಿಂದ ವಂಚಿತಳಾದ, ದುಃಖದಲ್ಲಿ ಮುಳುಗಿದ ನನ್ನ ಹೃದಯವು ವಜ್ರಾಯುಧದಿಂದ ಹೊಡೆಯಲ್ಪಟ್ಟ ಪರ್ವತಶಿಖರದಂತೆ ಚೂರು-ಚೂರು ಆಗಬೇಕಾಗಿತ್ತು. ಆದರೆ ಅದು ಇನ್ನು ಗಟ್ಟಿಯಾಗಿರುವುದನ್ನು ನೋಡಿದರೆ, ಅದು ವಜ್ರಕ್ಕಿಂತಲೂ ಕಠಿಣವಾಗಿದೆ ಎಂದು ಭಾಸವಾಗುತ್ತದೆ.॥4॥

ಮೂಲಮ್ - 5

ನೈವಾಸ್ತಿ ದೋಷೋ ಮಮ ನೂನಮತ್ರ
ವಧ್ಯಾಹಮಸ್ಯಾಪ್ರಿಯದರ್ಶನಸ್ಯ ।
ಭಾವಂ ನ ಚಾಸ್ಯಾಹಮನುಪ್ರದಾತು-
ಮಲಂ ದ್ವಿಜೋ ಮಂತ್ರಮಿವಾದ್ವಿಜಾಯ ॥

ಅನುವಾದ

ಈ ಭಯಂಕರನಾದ ರಾವಣನು ಹೇಗಾದರೂ ನನ್ನನ್ನು ವಧಿಸಿಯೇ ತೀರುವನು. ನಾನು ಆತ್ಮಹತ್ಯೆಯನ್ನು ಮಾಡಿಕೊಂಡರೆ ಯಾವುದೇ ದೋಷವಿಲ್ಲ, ಇದು ನಿಜವಾದುದು. ದ್ವಿಜನಲ್ಲದವನಿಗೆ ದ್ವಿಜನು ಮಂತ್ರೋಪದೇಶ ಮಾಡದಂತೆ ನಾನು ಈ ರಾಕ್ಷಸನಿಗೆ ನನ್ನ ಮನಸ್ಸನ್ನು ಕೊಡಲಾರೆ.॥5॥

ಮೂಲಮ್ - 6

ನೂನಂ ಮಮಾಂಗಾನ್ಯಚಿರಾದನಾರ್ಯಃ
ಶಸ್ತ್ರೈಃ ಶಿತೈಶ್ಛೇತ್ಸ್ಯತಿ ರಾಕ್ಷಸೇಂದ್ರಃ ।
ತಸ್ಮಿನ್ನನಾಗಚ್ಛತಿ ಲೋಕನಾಥೇ
ಗರ್ಭಸ್ಥ ಜಂತೋರಿವ ಶಲ್ಯಕೃಂತಃ ॥

ಅನುವಾದ

ಲೋಕನಾಥನಾದ ಶ್ರೀರಾಮನು ಎರಡು ತಿಂಗಳ ಅವಧಿಯೊಳಗೆ ಇಲ್ಲಿಗೆ ಬಾರದಿದ್ದರೆ ಅನಾರ್ಯನಾದ ರಾಕ್ಷಸೇಂದ್ರನು ಗರ್ಭದಲ್ಲಿರುವ ಮೃತಶಿಶುವನ್ನು ವೈದ್ಯನು ಕತ್ತರಿಸಿ ಹಾಕುವಂತೆ, ನನ್ನ ಅವಯವಗಳನ್ನು ಹರಿತವಾದ ಖಡ್ಗದಿಂದ ಖಂಡಿತವಾಗಿ ಚೂರು-ಚೂರಾಗಿ ಕತ್ತರಿಸಿ ಹಾಕುವನು.॥6॥

ಮೂಲಮ್ - 7

ದುಃಖಂ ಬತೇದಂ ಮಮ ದುಃಖಿತಾಯಾ
ಮಾಸೌ ಚಿರಾಯಾಧಿಗಮಿಷ್ಯತೋ ದ್ವೌ ।
ಬದ್ಧಸ್ಯ ವಧ್ಯಸ್ಯ ತಥಾ ನಿಶಾಂತೇ
ರಾಜಾಪರಾಧಾದಿವ ತಸ್ಕರಸ್ಯ ॥

ಅನುವಾದ

ಅಯ್ಯೋ! ಚಿರಕಾಲದಿಂದ ದುಃಖದಲ್ಲಿ ಮುಳುಗಿದ ನನಗೆ ರಾವಣನು ವಿಧಿಸಿರುವ ಎರಡು ತಿಂಗಳು ಅವಧಿ ಬೇಗನೇ ಮುಗಿಯುತ್ತಾ ಇದೆ. ರಾಜನಿಗೆ ಅಪರಾಧವನ್ನೆಸಗಿ ಗಲ್ಲು ಶಿಕ್ಷೆಗೆ ಗುರಿಯಾದ ಕಳ್ಳನಿಗೆ ಕ್ಷಣ-ಕ್ಷಣಕ್ಕೂ ದುಃಖವು ಹೆಚ್ಚುವಂತೆ, ನನ್ನ ಸ್ಥಿತಿಯಾಗಿದೆ.॥7॥

ಮೂಲಮ್ - 8

ಹಾ ರಾಮ ಹಾ ಲಕ್ಷ್ಮಣ ಹಾ ಸುಮಿತ್ರೇ
ಹಾ ರಾಮಮಾತಃ ಸಹ ಮೇ ಜನನ್ಯಾ ।
ಏಷಾ ವಿಪದ್ಯಾಮ್ಯಹಮಲ್ಪಭಾಗ್ಯಾ
ಮಹಾರ್ಣವೇ ನೌರಿವ ಮೂಢವಾತಾ ॥

ಅನುವಾದ

ಹಾ ರಾಮಾ! ಹಾ ಲಕ್ಷ್ಮಣಾ! ಹಾ ಸುಮಿತ್ರಾದೇವಿಯೇ! ಅತ್ತೆಯಾದ ಕೌಸಲ್ಯಾದೇವಿಯೇ! ನನ್ನ ತಾಯಿಯಾದ ಸುನಯನಾ ದೇವಿಯೇ! ನೀವೆಲ್ಲ ಕೇಳಿರಿ, ಅಲ್ಪಭಾಗ್ಯಳಾದ ನಾನು ಮಹಾಸಮುದ್ರದಲ್ಲಿ ಸುಂಟರಗಾಳಿಗೆ ಗುರಿಯಾದ ನಾವೆಯಂತೆ ತೀವ್ರವಾದ ಆಪತ್ತಿನಲ್ಲಿ ಸಿಕ್ಕಿಕೊಂಡಿರುವೆನು.॥8॥

ಮೂಲಮ್ - 9

ತರಸ್ವಿನೌ ಧಾರಯತಾ ಮೃಗಸ್ಯ
ಸತ್ತ್ವೇನ ರೂಪಂ ಮನುಜೇಂದ್ರಪುತ್ರೌ ।
ನೂನಂ ವಿಶಸ್ತೌ ಮಮ ಕಾರಣಾತ್ತೌ
ಸಿಂಹರ್ಷಭೌ ದ್ವಾವಿವ ವೈದ್ಯುತೇನ ॥

ಅನುವಾದ

ಬಲಶಾಲಿಗಳಾದ, ಮನುಜೇಂದ್ರನಾದ ದಶರಥನ ಪುತ್ರರಾದ ರಾಮ-ಲಕ್ಷ್ಮಣರು ಮೃಗರೂಪವನ್ನು ಧರಿಸಿದ ಒಂದು ಪ್ರಾಣಿಯಿಂದಾಗಿ (ಮಾರೀಚನಿಂದಾಗಿ) ಆಪತ್ತಿಗೆ ಒಳಗಾಗಿ, ವನ-ವನಗಳಲ್ಲಿ ಅಲೆಯುತ್ತಿರುವ ಎರಡು ಸಿಂಹಗಳಂತೆ, ನನ್ನ ಕಾರಣದಿಂದಾಗಿ ಎಂತಹ ಕಷ್ಟಗಳಿಗೆ ಗುರಿಯಾಗಿದ್ದಾರೋ!॥9॥

ಮೂಲಮ್ - 10

ನೂನಂ ಸ ಕಾಲೋ ಮೃಗರೂಪಧಾರೀ
ಮಾಮಲ್ಪಭಾಗ್ಯಾಂ ಲುಲುಭೇ ತದಾನೀಮ್ ।
ಯತ್ರಾರ್ಯಪುತ್ರಂ ವಿಸಸರ್ಜ ಮೂಢಾ
ರಾಮಾನುಜಂ ಲಕ್ಷ್ಮಣಪೂರ್ವಜಂ ಚ ॥

ಅನುವಾದ

ಆ ಸಮಯದಲ್ಲಿ ಕಾಲ ಪುರುಷನೇ ಮೃಗರೂಪದಿಂದ ಬಂದು ಅಲ್ಪಭಾಗ್ಯಳಾದ ನನ್ನನ್ನು ಪ್ರಲೋಭನಗೊಳಿಸಿದನು. ಅದರಿಂದಾಗಿ ಮೂರ್ಖಳಾದ ನಾನು ಮೊದಲಿಗೆ ಆರ್ಯಪುತ್ರನಾದ ಶ್ರೀರಾಮನನ್ನು ಬಳಿಕ ಲಕ್ಷ್ಮಣನನ್ನು ಕಳಿಸಿದೆ.॥10॥

ಮೂಲಮ್ - 11

ಹಾ ರಾಮ ಸತ್ಯವ್ರತ ದೀರ್ಘಬಾಹೋ
ಹಾ ಪೂರ್ಣಚಂದ್ರ ಪ್ರತಿಮಾನವಕ್ತ್ರ ।
ಹಾ ಜೀವಲೋಕಸ್ಯ ಹಿತಃ ಪ್ರಿಯಶ್ಚ
ವಧ್ಯಾಂ ನ ಮಾಂ ವೇತ್ಸಿ ಹಿ ರಾಕ್ಷಸಾನಾಮ್ ॥

ಅನುವಾದ

ಓ ರಾಮಾ! ನೀನು ಸತ್ಯವ್ರತನೂ, ದೀರ್ಘಬಾಹುವೂ, ಪೂರ್ಣಚಂದ್ರನಂತೆ ಮುಖವುಳ್ಳವನೂ, ಸಕಲ ಪ್ರಾಣಿಗಳಿಗೂ ಹಿತವನ್ನುಂಟು ಮಾಡುವವನೂ, ಪ್ರಿಯನಾದವನೂ ಆಗಿರುವೆ. ನಿನ್ನ ಭಾರ್ಯೆಯಾದ ನನ್ನನ್ನು ರಾಕ್ಷಸರು ಸಂಹರಿಸುತ್ತಿರುವುದನ್ನು ನೀನರಿಯೆಯಾ?॥11॥

ಮೂಲಮ್ - 12

ಅನನ್ಯ ದೇವತ್ವಮಿಯಂ ಕ್ಷಮಾ ಚ
ಭೂಮೌ ಚ ಶಯ್ಯಾ ನಿಯಮಶ್ಚ ಧರ್ಮೇ ।
ಪತಿವ್ರತಾತ್ವಂ ವಿಫಲಂ ಮಮೇದಂ
ಕೃತಂ ಕೃತಘ್ನೇಷ್ವಿವ ಮಾನುಷಾಣಾಮ್ ॥

ಅನುವಾದ

ಅನನ್ಯ ಭಕ್ತಿಯಿಂದ ನಿನ್ನನ್ನೇ ಪರಮದೈವವೆಂದು ಸೇವಿಸುತ್ತಿರುವೆನು. ನಿನ್ನ ದರ್ಶನ ಭಾಗ್ಯವು ಕಣ್ಣುಗಳಿಗೆ ಉಂಟಾದೀತು ಎಂಬ ಆಶೆಯಿಂದ ರಾಕ್ಷಸರು ಕೊಡುತ್ತಿರುವ ಕಷ್ಟಪರಂಪರೆಗಳನ್ನು ಸಹಿಸುತ್ತಿದ್ದೇನೆ. ಬರೀ ನೆಲದಲ್ಲಿ ಮಲಗುತ್ತಾ, ನಿಯಮಪೂರ್ವಕವಾಗಿ ಧರ್ಮವನ್ನು ಆಚರಿಸುತ್ತಿದ್ದೇನೆ. ಪಾತಿವ್ರತ್ಯದಲ್ಲಿ ಮುಳುಗಿರುವೆನು. ಇವೆಲ್ಲವೂ ಕೃತಘ್ನರಾದ ಮಾನವರಿಗೆ ಗೈದ ಉಪಕಾರದಂತೆ ನಿಷ್ಫಲವಾದುವು.॥12॥

ಮೂಲಮ್ - 13

ಮೋಘೋ ಹಿ ಧರ್ಮಶ್ಚರಿತೋ ಮಯಾಯಂ
ತಥೈಕಪತ್ನೀತ್ವಮಿದಂ ನಿರರ್ಥಮ್ ।
ಯಾ ತ್ವಾಂ ನ ಪಶ್ಯಾಮಿ ಕೃಶಾ ವಿವರ್ಣಾ
ಹೀನಾ ತ್ವಯಾ ಸಂಗಮನೇ ನಿರಾಶಾ ॥

ಅನುವಾದ

ನಾನು ಆಚರಿಸಿದ ಧರ್ಮವು ನಿಷ್ಫಲವಾಯಿತು. ಶ್ರೀರಾಮನಿಗೆ ಏಕಪತ್ನಿಯಾಗಿದ್ದೇನೆಂಬ ಅಭಿಮಾನವು ನಿರರ್ಥಕವಾಯಿತು. ನಾನು ನಿನ್ನನ್ನು ಕಾಣದವಳಾಗಿದ್ದೇನೆ. ನಿನ್ನಿಂದ ವಿಹೀನಳಾಗಿದ್ದೇನೆ. ಈ ಕಾರಣದಿಂದಲೇ ಕೃಶಳೂ, ವಿವರ್ಣಳೂ ಆಗಿರುವೆ. ಪುನಃ ನಿನ್ನನ್ನು ಸೇರುವೆನೆಂಬ ಆಸೆಯೂ ನನಗೀಗ ಉಳಿಯಲಿಲ್ಲ.॥13॥

ಮೂಲಮ್ - 14

ಪಿತುರ್ನಿದೇಶಂ ನಿಯಮೇನ ಕೃತ್ವಾ
ವನಾನ್ನಿವೃತ್ತಶ್ಚರಿತವ್ರತಶ್ಚ ।
ಸ್ತ್ರೀಭಿಸ್ತು ಮನ್ಯೇ ವಿಪುಲೇಕ್ಷಣಾಭಿ-
ಸ್ತ್ವಂ ರಂಸ್ಯಸೇ ವೀತಭಯಃ ಕೃತಾರ್ಥಃ ॥

ಅನುವಾದ

ಎಲೈ ರಾಮಾ! ನೀನು ತಂದೆಯ ಆಜ್ಞೆಯನ್ನು ನಿಯಮದಿಂದ ಪಾಲಿಸಿ ಕೃತಕೃತ್ಯನಾಗಿ, ವನವಾಸವನ್ನು ಪೂರ್ಣಗೈದು, ಅವಧಿ ತೀರುತ್ತಲೇ ಅಯೋಧ್ಯೆಗೆ ಹೋಗುವಿ ಎಂದು ಭಾವಿಸುತ್ತೇನೆ. ಲಬ್ಧಮನೋರಥನಾಗಿ ನಿರ್ಭಯದಿಂದ ಸುಂದರೀ ಮಣಿಗಳೊಂದಿಗೆ ವಿಹರಿಸಬಹುದು.॥14॥

ಮೂಲಮ್ - 15

ಅಹಂ ತು ರಾಮ ತ್ವಯಿ ಜಾತಕಾಮಾ
ಚಿರಂ ವಿನಾಶಾಯ ನಿಬದ್ಧಭಾವಾ ।
ಮೋಘಂ ಚರಿತ್ವಾಥ ತಪೋವ್ರತಂ ಚ
ತ್ಯಕ್ಷ್ಯಾಮಿ ಧಿಗ್ಜೀವಿತಮಲ್ಪಭಾಗ್ಯಾ ॥

ಅನುವಾದ

ಓ ರಾಮಚಂದ್ರಾ! ನಾನಾದರೋ ನಿನ್ನಲ್ಲಿಯೇ ಅನುರಕ್ತಳಾಗಿರುವವಳು. ಬಹಳ ಕಾಲದಿಂದ ನಿನ್ನಲ್ಲಿಯೇ ನನ್ನ ಪ್ರೀತಿಯು ನಿಬದ್ಧವಾಗಿದೆ. ಈ ರಾಕ್ಷಸರಿಂದ ಒದಗುವ ಸಾವನ್ನು ನಾನು ಲೆಕ್ಕಿಸುವುದಿಲ್ಲ. ನಿನ್ನನ್ನು ಸೇರಲು ನಾನು ಆಚರಿಸಿದ ಧರ್ಮಾಚರಣೆಗಳು, ನನ್ನ ತಪಸ್ಸು, ಪಾತಿವ್ರತ್ಯ ಇವೆಲ್ಲವೂ ನಿರರ್ಥಕವಾದುವು. ಅಲ್ಪ ಭಾಗ್ಯಳಾದ ನಾನು ಜೀವಿತವನ್ನೇ ತ್ಯಜಿಸಿಬಿಡುವೆನು. ಛೀ! ನಾನು ಎಂತಹ ದುರದೃಷ್ಟವಂತೆ!॥15॥

ಮೂಲಮ್ - 16

ಸಾ ಜೀವಿತಂ ಕ್ಷಿಪ್ರಮಹಂ ತ್ಯಜೇಯಂ
ವಿಷೇಣ ಶಸ್ತ್ರೇಣ ಶಿತೇನ ವಾಪಿ ।
ವಿಷಸ್ಯ ದಾತಾ ನ ಹಿ ಮೇಽಸ್ತಿ ಕಶ್ಚಿ-
ಚ್ಛಸ್ತ್ರಸ್ಯ ವಾ ವೇಶ್ಮನಿ ಏ ರಾಕ್ಷಸಸ್ಯ ॥

ಅನುವಾದ

ವಿಷಪ್ರಾಶನದಿಂದಾಗಲೀ, ಹರಿತವಾದ ಶಸ್ತ್ರದಿಂದಾಗಲೀ, ನಾನು ಬಹಳ ಬೇಗನೇ ನನ್ನ ಜೀವಿತವನ್ನು ಕೊನೆಗೊಳಿಸಿಯೇನು. ಆದರೆ ಈ ರಾಕ್ಷಸನ ಮನೆಯಲ್ಲಿ ನನಗೆ ವಿಷವನ್ನಾಗಲೀ, ತೀಕ್ಷ್ಣವಾದಶಸ್ತ್ರವನ್ನಾಗಲೀ ಕೊಡುವವರೂ ಯಾರೂ ಕಂಡುಬರುವುದಿಲ್ಲವಲ್ಲ!॥16॥

ಮೂಲಮ್ - 17

ಇತೀವ ದೇವೀ ಬಹುಧಾ ವಿಲಪ್ಯ
ಸರ್ವಾತ್ಮನಾ ರಾಮಮನುಸ್ಮರಂತೀ ।
ಪ್ರವೇಪಮಾನಾ ಪರಿಶುಷ್ಕವಕ್ತ್ರಾ
ನಗೋತ್ತಮಂ ಪುಷ್ಪಿತಮಾಸಸಾದ ॥

ಅನುವಾದ

ಸೀತಾದೇವಿಯು ಹೀಗೆ ವಿಧ-ವಿಧ ರೀತಿಯಿಂದ ವಿಲಪಿಸುತ್ತಿದ್ದಳು. ಜೊತೆಗೆ ಸರ್ವಾತ್ಮಭಾವದಿಂದ ಶ್ರೀರಾಮನನ್ನು ಸ್ಮರಿಸುತ್ತಿದ್ದಳು. ಅವಳು ಭಯದಿಂದ ಒಣಗಿಹೋದ ಮುಖದಿಂದ ಚೆನ್ನಾಗಿ ಪುಷ್ಪಿತವಾದ ಶಿಂಶುಪಾವೃಕ್ಷವನ್ನು ಸಮೀಪಿಸಿದಳು. ॥17॥

ಮೂಲಮ್ - 18

ಶೋಕಾಭಿತಪ್ತಾ ಬಹುಧಾ ವಿಚಿಂತ್ಯ
ಸೀತಾಥ ವೇಣ್ಯುದ್ಗ್ರಥನಂ ಗೃಹೀತ್ವಾ ।
ಉದ್ಬಧ್ಯ ವೇಣ್ಯುದ್ಗ್ರಥನೇನ ಶೀಘ್ರ-
ಮಹಂ ಗಮಿಷ್ಯಾಮಿ ಯಮಸ್ಯ ಮೂಲಮ್ ॥

ಅನುವಾದ

ದುಃಖದಿಂದ ಬಹಳವಾಗಿ ಪರಿತಪಿಸುತ್ತಿದ್ದ ಸೀತಾದೇವಿಯು ದೀರ್ಘವಾಗಿ ಸಮಾಲೋಚಿಸಿ ಕಡೆಗೊಂದು ನಿರ್ಧಾರಕ್ಕೆ ಬಂದು, ತಲೆಗೂದಲನ್ನು ಹಿಡಿದುಕೊಂಡು ‘ಈ ಕೇಶಪಾಶದಿಂದಲೇ ಉರುಲು ಹಾಕಿಕೊಂಡು ಅತಿಶೀಘ್ರವಾಗಿ ಯಮ ಸದನಕ್ಕೆ ಹೋಗುವೆನು’ ಎಂದು ನಿರ್ಧರಿಸಿದಳು.॥18॥

ಮೂಲಮ್ - 19

ಉಪಸ್ಥಿತಾ ಸಾ ಮೃದುಸರ್ವಗಾತ್ರೀ
ಶಾಖಾಂ ಗೃಹೀತ್ವಾಥ ನಗಸ್ಯ ತಸ್ಯ ।
ತಸ್ಯಾಸ್ತು ರಾಮಂ ಪ್ರವಿಚಿಂತಯಂತ್ಯಾ
ರಾಮಾನುಜಂ ಸ್ವಂ ಚ ಕುಲಂ ಶುಭಾಂಗ್ಯಾಃ ॥

ಮೂಲಮ್ - 20

ಶೋಕಾನಿಮಿತ್ತಾನಿ ತಥಾ ಬಹೂನಿ
ಧೈರ್ಯಾರ್ಜಿತಾನಿ ಪ್ರವರಾಣಿ ಲೋಕೇ ।
ಪ್ರಾದುರ್ನಿಮಿತ್ತಾನಿ ತದಾ ಬಭೂವುಃ
ಪುರಾಪಿ ಸಿದ್ಧಾನ್ಯುಪಲಕ್ಷಿತಾನಿ ॥

ಅನುವಾದ

ಸುಕುಮಾರಿಯಾದ ಸೀತಾದೇವಿಯು ಆ ಮರದ ರೆಂಬೆಯನ್ನು ಹಿಡಿದುಕೊಂಡು ನಿಂತಿದ್ದಳು. ಅವಳು ಶ್ರೀರಾಮನನ್ನು, ಲಕ್ಷ್ಮಣನನ್ನು, ತನ್ನ ವಂಶವನ್ನು ಸ್ಮರಿಸಿಕೊಂಡಳು. ಆಗ ಶುಭಾಂಗಿಯಾದ ಅವಳಿಗೆ ಶೋಕವು ತೊಲಗುವಂತಹ, ಧೈರ್ಯವನ್ನು ತುಂಬುವಂತಹ, ಸತ್ಫಲದಾಯಕವಾದ, ಲೋಕ ಪ್ರಸಿದ್ಧವಾದ ಶ್ರೀರಾಮನ ಆಗಮನವನ್ನು ಸೂಚಿಸುವಂತಹ ಹಿಂದೆ ಕಂಡುಬಂದು ಅನೇಕ ಶುಭಶಕುನಗಳು ಪುನಃ ಕಾಣಿಸಿಕೊಂಡವು.॥19-20॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಅಷ್ಟಾವಿಂಶಃ ಸರ್ಗಃ ॥ 28 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತೆಂಟನೆಯ ಸರ್ಗವು ಮುಗಿಯಿತು.