वाचनम्
ಭಾಗಸೂಚನಾ
ತ್ರಿಜಟೆಯ ಸ್ವಪ್ನ ವೃತ್ತಾಂತ
ಮೂಲಮ್ - 1
ಇತ್ಯುಕ್ತಾಃ ಸೀತಯಾ ಘೋರಾ ರಾಕ್ಷಸ್ಯಃ ಕ್ರೋಧಮೂರ್ಛಿತಾಃ ।
ಕಾಶ್ಚಿಜ್ಜಗ್ಮುಸ್ತದಾಖ್ಯಾತುಂ ರಾವಣಸ್ಯ ತರಸ್ವಿನಃ ॥
ಅನುವಾದ
ಸೀತಾದೇವಿಯು ಹೇಳಿದ ಪ್ರಾಣ ತ್ಯಾಗ ಮಾಡುವ ನಿಶ್ಚಯದ ಮಾತುಗಳನ್ನು ಕೇಳಿ ಘೋರರೂಪಿಯರಾದ ಕೆಲವು ರಾಕ್ಷಸಿಯರು ಕೋಪದಿಂದ ಮೈಮರೆತವರಾಗಿ, ದುರಾತ್ಮನಾದ ರಾವಣನಿಗೆ ಈ ವಿಷಯವನ್ನು ತಿಳಿಸಲು ಹೋದರು.॥1॥
ಮೂಲಮ್ - 2
ತತಃ ಸೀತಾಮುಪಾಗಮ್ಯ ರಾಕ್ಷಸ್ಯೋ ಘೋರದರ್ಶನಾಃ ।
ಪುನಃ ಪರುಷಮೇಕಾರ್ಥಮನರ್ಥಾರ್ಥಮಥಾಬ್ರುವನ್ ॥
ಅನುವಾದ
ಬಳಿಕ ಭಯಂಕರವಾಗಿ ಕಾಣುತ್ತಿದ್ದ ಕೆಲವು ರಾಕ್ಷಸಿಯರು ಪುನಃ ಸೀತೆಯ ಬಳಿಗೆ ಬಂದು ರಾವಣನನ್ನು ವರಿಸಬೇಕೆಂಬ ಒಂದೇ ಅಭಿಪ್ರಾಯದಿಂದ ಕೂಡಿದ್ದ, ಕ್ರೂರವಾದ ಹಾಗೂ ಅನರ್ಥಕರವಾದ ಮಾತನ್ನು ಹೇಳತೊಡಗಿದರು.॥2॥
ಮೂಲಮ್ - 3
ಅದ್ಯೇದಾನೀಂ ತವಾನಾರ್ಯೇ ಸೀತೇ ಪಾಪವಿನಿಶ್ಚಯೇ ।
ರಾಕ್ಷಸ್ಯೋ ಭಕ್ಷಯಿಷ್ಯಂತಿ ಮಾಂಸಮೇತದ್ಯಥಾಸುಖಮ್ ॥
ಅನುವಾದ
‘‘ದುರ್ಮಾರ್ಗಿಯಾದ ಎಲೈ ಸೀತೆಯೇ! ರಾವಣನನ್ನು ತಿರಸ್ಕರಿಸಿದ ನಿನ್ನ ನಿಶ್ಚಯವೂ ಅನುಚಿತವಾದುದು ಹಾಗೂ ಪಾಪಮಯವಾದುದು. ಎಲ್ಲ ರಾಕ್ಷಸಸ್ತ್ರೀಯರು ಸೇರಿ ಇಂದೇ ಈಗಲೇ ನಿನ್ನ ಶರೀರದಲ್ಲಿರುವ ಮಾಂಸವನ್ನು ತೃಪ್ತಿಯಾಗಿ, ಸುಖವಾಗಿ ತಿಂದು ಹಾಕುತ್ತೇವೆ.’’॥3॥
ಮೂಲಮ್ - 4
ಸೀತಾಂ ತಾಭಿರನಾರ್ಯಾಭಿರ್ದೃಷ್ಟ್ವಾ ಸಂತರ್ಜಿತಾಂ ತದಾ ।
ರಾಕ್ಷಸೀ ತ್ರಿಜಟಾ ವೃದ್ಧಾ ಪ್ರಬುದ್ಧಾ ವಾಕ್ಯಮಬ್ರವೀತ್ ॥
ಅನುವಾದ
ಅನಾರ್ಯೆಯರಾದ ಆ ರಕ್ಕಸಿಯರು ಸೀತೆಯನ್ನು ಹೀಗೆ ಭಯಪಡಿಸುತ್ತಿರುವುದನ್ನು ನೋಡಿ, ಆಗ ತಾನೇ ನಿದ್ದೆಯಿಂದ ಎಚ್ಚೆತ್ತ ಜ್ಞಾನವೃದ್ಧಳಾದ, ವಿಭೀಷಣನ ಮಗಳಾದ ತ್ರಿಜಟಾ ಎಂಬ ರಾಕ್ಷಸಿಯು ಹೀಗೆ ಹೇಳಿದಳು.॥4॥
ಮೂಲಮ್ - 5
ಆತ್ಮಾನಂ ಖಾದತಾನಾರ್ಯಾ ನ ಸೀತಾಂ ಭಕ್ಷಯಿಷ್ಯಥ ।
ಜನಕಸ್ಯ ಸುತಾಮಿಷ್ಟಾಂ ಸ್ನುಷಾಂ ದಶರಥಸ್ಯ ಚ ॥
ಅನುವಾದ
ಎಲೈ ದುಷ್ಟ ಸ್ತ್ರೀಯರೇ! ನೀವು ನಿಮ್ಮನ್ನೇ ಭಕ್ಷಿಸುವಿರಿ. ಇವಳು ಜನಕನ ಪ್ರಿಯ ಪುತ್ರಿಯೂ, ದಶರಥನಸೊಸೆಯೂ ಆಗಿರುವಳು. ಈ ಸೀತೆಯನ್ನು ಮಾತ್ರ ಭಕ್ಷಿಸಲಾರಿರಿ.॥5॥
ಮೂಲಮ್ - 6
ಸ್ವಪ್ನೋ ಹ್ಯದ್ಯ ಮಯಾ ದೃಷ್ಟೋ ದಾರುಣೋ ರೋಮಹರ್ಷಣಃ ।
ರಾಕ್ಷಸಾನಾಮಭಾವಾಯ ಭರ್ತುರಸ್ಯಾ ಜಯಾಯ ಚ ॥
ಅನುವಾದ
ಈಗ ತಾನೇ ನಾನು ರಾಕ್ಷಸರ ಅಳಿವನ್ನೂ, ಈಕೆಯ ಪತಿಯಾದ ಶ್ರೀರಾಮನ ಅಭ್ಯುದಯವನ್ನು ಸೂಚಿಸುವ ಭಯಂಕರವಾದ ಹಾಗೂ ರೋಮಾಂಚವನ್ನು ಉಂಟುಮಾಡುವ ಕನಸೊಂದನ್ನು ಕಂಡೆನು.॥6॥
ಮೂಲಮ್ - 7
ಏವಮುಕ್ತಾಸ್ತ್ರಿಜಟಯಾ ರಾಕ್ಷಸ್ಯಃ ಕ್ರೋಧಮೂರ್ಛಿತಾಃ ।
ಸರ್ವಾ ಏವಾಬ್ರುವನ್ ಭೀತಾಸ್ತ್ರಿಜಟಾಂ ತಾಮಿದಂ ವಚಃ ॥
ಅನುವಾದ
ಕೋಪೋದ್ರಿಕ್ತರಾಗಿದ್ದ ಆ ರಕ್ಕಸಿಯರು ತ್ರಿಜಟೆಯ ಮಾತನ್ನು ಕೇಳಿ ಬಹಳ ಭಯಗೊಂಡರು. ಮತ್ತೆ ಅವರೆಲ್ಲರೂ ಹೀಗೆ ಹೇಳತೊಡಗಿದರು.॥7॥
ಮೂಲಮ್ - 8
ಕಥಯಸ್ವ ತ್ವಯಾ ದೃಷ್ಟಃ ಸ್ವಪ್ನೋಽಯಂ ಕೀದೃಶೋ ನಿಶಿ ।
ತಾಸಾಂ ತು ವಚನಂ ಶ್ರುತ್ವಾ ರಾಕ್ಷಸೀನಾಂ ಮುಖಾಚ್ಚ್ಯುತಮ್ ॥
ಮೂಲಮ್ - 9
ಉವಾಚ ವಚನಂ ಕಾಲೇ ತ್ರಿಜಟಾ ಸ್ವಪ್ನಸಂಶ್ರಿತಮ್ ।
ಗಜದಂತಮಯೀಂ ದಿವ್ಯಾಂ ಶಿಬಿಕಾಮಂತರಿಕ್ಷಗಾಮ್ ॥
ಮೂಲಮ್ - 10
ಯುಕ್ತಾಂ ಹಂಸಸಹಸ್ರೇಣ ಸ್ವಯಮಾಸ್ಥಾಯ ರಾಘವಃ ।
ಶುಕ್ಲಮಾಲ್ಯಾಂಬರಧರೋ ಲಕ್ಷ್ಮಣೇನ ಸಹಾಗತಃ ॥
ಅನುವಾದ
‘‘ಓ ತ್ರಿಜಟಾ! ಈ ರಾತ್ರಿಯಲ್ಲಿ ನೀನು ಕಂಡ ಸ್ವಪ್ನ ಎಂತಹುದು? ಎಂಬುದನ್ನು ಹೇಳು.’’ ಎಂದು ರಾಕ್ಷಸಿಯರು ನುಡಿದ ಮಾತನ್ನು ಕೇಳಿ ತ್ರಿಜಟೆಯು ಬೆಳಗಿನಜಾವದಲ್ಲಿ ತನಗೆ ಬಿದ್ದ ಸ್ವಪ್ನದ ವಿಚಾರವನ್ನು ಇಂತು ವಿವರಿಸತೊಡಗಿದಳು ‘‘ಆನೆಯ ದಂತದಿಂದಲೇ ನಿರ್ಮಿಸಲ್ಪಟ್ಟ, ಅಂತರಿಕ್ಷದಲ್ಲಿ ಸಂಚರಿಸಲು ಸಮರ್ಥವಾಗಿದ್ದು, ಸಾವಿರಾರು ಹಂಸಗಳು ಹೂಡಲ್ಪಟ್ಟ ಅಲಂಕೃತವಾದ ಪಲ್ಲಕ್ಕಿಯೊಂದನ್ನು ನೋಡಿದೆನು. ಅದರಲ್ಲಿ ಲಕ್ಷ್ಮಣನೊಡಗೂಡಿದ ಶ್ರೀರಾಮನು ಬಿಳುಪಾದ ಮಾಲೆಗಳಿಂದಲೂ, ವಸ್ತ್ರಗಳಿಂದಲೂ ಸಮಲಂಕೃತನಾಗಿ ಕುಳಿತು ಲಂಕೆಗೆ ಆಗಮಿಸಿದನು.॥8-10॥
ಮೂಲಮ್ - 11
ಸ್ವಪ್ನೇ ಚಾದ್ಯ ಮಯಾ ದೃಷ್ಟಾ ಸೀತಾ ಶುಕ್ಲಾಂಬರಾವೃತಾ ।
ಸಾಗರೇಣ ಪರಿಕ್ಷಿಪ್ತಂ ಶ್ವೇತಂ ಪರ್ವತಮಾಸ್ಥಿತಾ ॥
ಅನುವಾದ
ನಾನು ಸ್ವಪ್ನದಲ್ಲಿ ಸೀತೆಯನ್ನು ನೋಡಿದೆನು. ಅವಳು ಸಮುದ್ರದಿಂದ ಸುತ್ತುವರಿಯಲ್ಪಟ್ಟ ಶ್ವೇತಪರ್ವತದಲ್ಲಿ ಕುಳಿತಿದ್ದಳು. ಅವಳು ಬಿಳಿಯ ವಸ್ತ್ರವನ್ನು ಉಟ್ಟಿದ್ದಳು.॥11॥
ಮೂಲಮ್ - 12
ರಾಮೇಣ ಸಂಗತಾ ಸೀತಾ ಭಾಸ್ಕರೇಣ ಪ್ರಭಾ ಯಥಾ ।
ರಾಘವಶ್ಚ ಮಯಾ ದೃಷ್ಟಶ್ಚತುರ್ದಂತಂ ಮಹಾಗಜಮ್ ॥
ಅನುವಾದ
ಸೂರ್ಯನಿಗೂ, ಸೂರ್ಯಕಾಂತಿಗೂ ಭೇದವು ಇಲ್ಲದಂತೆ ಶ್ರೀರಾಮನನ್ನು ಈ ಸೀತಾದೇವಿಯು ಸೇರಿಕೊಂಡೇ ಇದ್ದಳು. ಮತ್ತೊಮ್ಮೆ ನಾಲ್ಕು ದಂತಗಳುಳ್ಳ ಪರ್ವತೋಪಮವಾದ ಮಹಾಗಜದ ಮೇಲೆ ಶ್ರೀರಾಮನು ಲಕ್ಷ್ಮಣನೊಡನೆ ಸಂಚರಿಸುತ್ತಿರುವುದನ್ನು ನಾನು ಕನಸಿನಲ್ಲಿ ಕಂಡೆನು.॥12॥
ಮೂಲಮ್ - 13
ಆರೂಢಃ ಶೈಲಸಂಕಾಶಂ ಚಕಾಸ ಸಹಲಕ್ಷ್ಮಣಃ ।
ತತಸ್ತೌ ನರಶಾರ್ದೂಲೌ ದೀಪ್ಯಮಾನೌ ಸ್ವತೇಜಸಾ ॥
ಅನುವಾದ
ಬಳಿಕ ತಮ್ಮ ತೇಜಸ್ಸಿನಿಂದ ಬೆಳಗುತ್ತಿದ್ದ, ಸೂರ್ಯಸದೃಶರಾಗಿದ್ದ ಬಿಳಿಯ ಮಾಲೆಗಳನ್ನು ಧರಿಸಿದ್ದ ರಾಮ-ಲಕ್ಷ್ಮಣರು ಜಾನಕಿಯ ಬಳಿಗೆ ಬಂದರು.॥13॥
ಮೂಲಮ್ - 14
ಶುಕ್ಲಮಾಲ್ಯಾಂಬರಧರೌ ಜಾನಕೀಂ ಪರ್ಯುಪಸ್ಥಿತೌ ।
ತತಸ್ತಸ್ಯ ನಗಸ್ಯಾಗ್ರೇ ಹ್ಯಾಕಾಶಸ್ಥಸ್ಯ ದಂತಿನಃ ॥
ಅನುವಾದ
ಅನಂತರ ಆ ಪರ್ವತದ ಶಿಖರದಲ್ಲಿ ಆಕಾಶದಲ್ಲಿ ಆನೆಯ ಮೇಲೆ ಕುಳಿತ್ತಿದ್ದ ಶ್ರೀರಾಮನು ಸೀತಾದೇವಿಯನ್ನು ಕೈಹಿಡಿದು ಆನೆಯ ಮೇಲೆ ಕುಳ್ಳಿರಿಸಿಕೊಂಡನು.*॥14॥
ಟಿಪ್ಪನೀ
- ಆರೋಹಣಂ ಗೋವೃಷಕುಂಜರಾಣಾಂ ಪ್ರಸಾದ ಶೈಲಾಗ್ರ ವನಸ್ಪತೀನಾಮ್ ॥ ‘‘ಧ್ರುವಮರ್ಥಲಾಭಮ್’’
ಸ್ವಪ್ನಫಲಭಾಗದಲ್ಲಿ ಹೀಗೆ ಹೇಳಿದೆ - ಗಜಾರೋಹಣ, ವೃಷಭಾರೋಹಣ, ಪರ್ವತಶಿಖರಕ್ಕೇರುವುದು, ವನಸ್ಪತಿಗಳನ್ನು ನೋಡುವುದು ಇವೆಲ್ಲವೂ ಮುಂದೆ ನಿಶ್ಚಯವಾಗಿ ಸಂಪತ್ತುಗಳು ದೊರೆಯುತ್ತವೆ, ಎಂಬುದನ್ನು ಸೂಚಿಸುತ್ತದೆ.
ಮೂಲಮ್ - 15
ಭರ್ತ್ರಾ ಪರಿಗೃಹೀತಸ್ಯ ಜಾನಕೀ ಸ್ಕಂಧಮಾಶ್ರಿತಾ ।
ಭರ್ತುರಂಕಾತ್ ಸಮುತ್ಪತ್ಯ ತತಃ ಕಮಲಲೋಚನಾ ॥
ಅನುವಾದ
ಮತ್ತೆ ಕಮಲದಂತೆ ವಿಶಾಲವಾದ ಕಣ್ಣುಗಳನ್ನು ಹೊಂದಿದ್ದ, ಪ್ರಸನ್ನಚಿತ್ತಳಾದ ಸೀತಾದೇವಿಯು ತನ್ನ ಪತಿಯ ತೊಡೆಯ ಮೇಲಿಂದ ನೆಗೆದು ಆಕಾಶದಲ್ಲಿದ್ದ ಸೂರ್ಯ-ಚಂದ್ರರನ್ನು ಎರಡೂ ಕೈಗಳಿಂದ ಸವರುತ್ತಿದ್ದುದನ್ನು ನಾನು ಕನಸಿನಲ್ಲಿ ಕಂಡೆನು.**॥15॥
ಟಿಪ್ಪನೀ
**ಕನಸಿನಲ್ಲಿ ಸೂರ್ಯ-ಚಂದ್ರರನ್ನು ಹಿಡಿದುಕೊಂಡರೆ ಅವರಿಗೆ ಮಹಾರಾಜ್ಯವು ಪ್ರಾಪ್ತವಾಗುತ್ತದೆ, ಎಂದು ಸ್ವಪ್ನಫಲ ನಿರ್ಣಯದಲ್ಲಿ ಹೇಳಿದೆ
ಆದಿತ್ಯಮಂಡಲಂ ಚಾಪಿ ಚಂದ್ರಮಂಡಲ ಮೇವವಾ ಸ್ವಪ್ನೆಗೃಹ್ಣಾತಿ ಹಸ್ತಾಭ್ಯಾಂ ಮಹದ್ರಾಜ್ಯಂ ಸಮಾಪ್ನುಯಾತ್ ॥ (ಗೋವಿಂದರಾಜೀಯವ್ಯಾಖ್ಯಾ)
ಮೂಲಮ್ - 16
ಚಂದ್ರಸೂರ್ಯೌ ಮಯಾ ದೃಷ್ಟೌ ಪಾಣಿನಾ ಪರಿಮಾರ್ಜತೀ ।
ತತಸ್ತಾಭ್ಯಾಂ ಕುಮಾರಾಭ್ಯಾಮಾಸ್ಥಿತಃ ಸ ಗಜೋತ್ತಮಃ ॥
ಅನುವಾದ
ಬಳಿಕ ದಶರಥನ ಕುಮಾರರಾದ ರಾಮ - ಲಕ್ಷ್ಮಣರನ್ನು ವಿಶಾಲಾಕ್ಷಿಯಾದ ಸೀತಾದೇವಿಯನ್ನು ಹೊತ್ತಿದ್ದ ಆ ಆನೆಯು ಲಂಕೆಯ ಮೇಲ್ಭಾಗದಲ್ಲಿ ನಿಂತಿತು.॥16॥
ಮೂಲಮ್ - 17
ಸೀತಯಾ ಚ ವಿಶಾಲಾಕ್ಷ್ಯಾ ಲಂಕಾಯಾ ಉಪರಿ ಸ್ಥಿತಃ ।
ಪಾಂಡರರ್ಷಭಯುಕ್ತೇನ ರಥೇನಾಷ್ಟಯುಜಾ ಸ್ವಯಮ್ ॥
ಅನುವಾದ
ಬಿಳುಪಾದ ಎಂಟು ಎತ್ತುಗಳನ್ನು ಹೂಡಿದ ರಥದಲ್ಲಿ ಪತ್ನಿಯಾದ ಸೀತಾದೇವಿಯೊಡನೆ ಕುಳಿತು ಕಾಕುತ್ಸ್ಥನು ಇಲ್ಲಿಗೆ ಆಗಮಿಸಿದ ಮತ್ತೊಂದು ದೃಶ್ಯವನ್ನು ನಾನು ಕನಸಿನಲ್ಲಿ ಕಂಡೆನು.॥17॥
ಮೂಲಮ್ - 18
ಇಹೋಪಯಾತಃ ಕಾಕುತ್ಸ್ಥಃ ಸೀತಯಾ ಸಹ ಭಾರ್ಯಯಾ ।
ಲಕ್ಷ್ಮಣೇನ ಸಹ ಭ್ರಾತ್ರಾ ವಿಮಾನೇ ಪುಷ್ಪಕೇ ಸ್ಥಿತಃ ॥
ಮೂಲಮ್ - 19
ಶುಕ್ಲಮಾಲ್ಯಾಂಬರಧರೋ ಲಕ್ಷ್ಮಣೇನ ಸಮಾಗತಃ ।
ಆರುಹ್ಯ ಪುಷ್ಪಕಂ ದಿವ್ಯಂ ವಿಮಾನಂ ಸೂರ್ಯಸನ್ನಿಭಮ್ ॥
ಮೂಲಮ್ - 20
ಉತ್ತರಾಂ ದಿಶಮಾಲೋಕ್ಯ ಜಗಾಮ ಪುರುಷೋತ್ತಮಃ ।
ಏವಂ ಸ್ವಪ್ನೇ ಮಯಾ ದೃಷ್ಟೋ ರಾಮೋ ವಿಷ್ಣು ಪರಾಕ್ರಮಃ ।
ಲಕ್ಷ್ಮಣೇನ ಸಹ ಭ್ರಾತ್ರಾ ಸೀತಯಾ ಸಹ ರಾಘವಃ ॥
ಅನುವಾದ
ಹೀಗೆ ನಾನು ಸ್ವಪ್ನದಲ್ಲಿ ತಮ್ಮನಾದ ಲಕ್ಷ್ಮಣನೊಡನೆಯೂ, ಪತ್ನಿಯಾದ ಜಾನಕಿಯೊಡನೆಯೂ ಇದ್ದ ಬಿಳಿಯ ಪುಷ್ಪಮಾಲೆಗಳಿಂದ ಅಲಂಕೃತನಾದ, ಸತ್ಯಪರಾಕ್ರಮಿಯಾದ ಶ್ರೀರಾಮನನ್ನು ನೋಡಿದೆನು. ಮರಳಿ ಮಹಾಪರಾಕ್ರಮಶಾಲಿಯೂ, ಮಹಾವೀರನೂ, ಪುರುಷೋತ್ತಮನೂ ಆದ ಶ್ರೀರಾಮನು ಪತ್ನಿಯಾದ ಸೀತೆಯೊಡನೆ, ತಮ್ಮನಾದ ಲಕ್ಷ್ಮಣನೊಡಗೂಡಿ ಸೂರ್ಯಕಾಂತಿಯಂತೆ ಬೆಳಗುತ್ತಿದ್ದ ದಿವ್ಯವಾದ ಪುಷ್ಪಕವಿಮಾನದಲ್ಲಿ ಕುಳಿತು ಉತ್ತರ ದಿಕ್ಕಿಗೆ ಪಯಣ ಬೆಳೆಸಿದನು. ಸೀತಾಲಕ್ಷ್ಮಣ ಸಮೇತನಾದ ವಿಷ್ಣುವಿನಂತೆ ಪರಾಕ್ರಮವುಳ್ಳ ಶ್ರೀರಾಮನನ್ನು ಈ ವಿಧವಾಗಿ ಸ್ವಪ್ನದಲ್ಲಿ ನಾನು ನೋಡಿದೆನು.॥18-20॥
ಮೂಲಮ್ - 21
ನ ಹಿ ರಾಮೋ ಮಹಾತೇಜಾಃ ಶಕ್ಯೋ ಜೇತುಂ ಸುರಾಸುರೈಃ ।
ರಾಕ್ಷಸೈರ್ವಾಪಿ ಚಾನ್ಯೈರ್ವಾ ಸ್ವರ್ಗಃ ಪಾಪಜನೈರಿವ ॥
ಅನುವಾದ
ಪಾಪಿಗಳು ಸ್ವರ್ಗವನ್ನು ಸೇರಲಾರರು. ಅಂತೆಯೇ ಮಹಾ ತೇಜಶ್ಶಾಲಿಯಾದ ಶ್ರೀರಾಮನನ್ನು ಸುರಾಸುರರಾಗಲೀ, ರಾಕ್ಷಸರಾಗಲೀ, ಬೇರೆ ಯಾರೂ ಜಯಿಸಲು ಸಮರ್ಥರಲ್ಲ.॥21॥
ಮೂಲಮ್ - 22
ರಾವಣಶ್ಚ ಮಯಾ ದೃಷ್ಟಃ ಕ್ಷಿತೌ ತೈಲಸಮುಕ್ಷಿತಃ ॥
ಮೂಲಮ್ - 23
ರಕ್ತವಾಸಾಃ ಪಿಬನ್ ಮತ್ತಃ ಕರವೀರಕೃತಸ್ರಜಃ ।
ವಿಮಾನಾತ್ ಪುಷ್ಪಕಾದದ್ಯ ರಾವಣಃ ಪತಿತೋ ಭುವಿ ॥
ಅನುವಾದ
ಅದೇ ಕನಸಿನಲ್ಲಿ ನಾನು ರಾಕ್ಷಸ ರಾಜನಾದ ರಾವಣನು ಮೈಗೆಲ್ಲ ಎಣ್ಣೆಯನ್ನು ಹಚ್ಚಿಕೊಂಡಿದ್ದನು. ಕೆಂಪು ಬಟ್ಟೆಯನ್ನು ಉಟ್ಟಿದ್ದನು. ಸುರಾಪಾನದಿಂದ ಉನ್ಮತ್ತನಾಗಿದ್ದನು. ಕೆಂಪು ಕಣಗಿಲೆ ಹೂವಿನ ಹಾರವನ್ನು ಹಾಕಿಕೊಂಡಿದ್ದ ರಾವಣನು ಪುಷ್ಪಕವಿಮಾನದಿಂದ ಭೂಮಿಗೆ ಬೀಳುವುದನ್ನು ನೋಡಿದೆನು.॥22-23॥
ಮೂಲಮ್ - 24
ಕೃಷ್ಯಮಾಣಃ ಸ್ತ್ರಿಯಾ ದೃಷ್ಟೋ ಮುಂಡಃ ಕೃಷ್ಣಾಂಬರಃ ಪುನಃ ।
ರಥೇನ ಖರಯುಕ್ತೇನ ರಕ್ತಮಾಲ್ಯಾನುಲೇಪನಃ ॥
ಅನುವಾದ
ತಲೆಯನ್ನು ಬೋಳಿಸಿಕೊಂಡಿದ್ದು, ಕಪ್ಪುಬಟ್ಟೆಯನ್ನು ಧರಿಸಿದ್ದ ಆ ರಾವಣನನ್ನು ಓರ್ವ ಹೆಂಗಸು ಅತ್ತಿಂದಿತ್ತ ಎಳೆದಾಡುತ್ತಿದ್ದಳು. ಮತ್ತೊಮ್ಮೆ ಕೆಂಪಾದ ಮಾಲೆಗಳನ್ನು ಧರಿಸಿ, ಕೆಂಪುಗಂಧವನ್ನು ಹಚ್ಚಿಕೊಂಡು ಕತ್ತೆಗಳು ಹೂಡಿದ ರಥದಲ್ಲಿ ಸಾಗುತ್ತಿದ್ದನು.॥24॥
ಮೂಲಮ್ - 25
ಪಿಬಂಸ್ತೈಲಂ ಹಸನ್ನೃತ್ಯನ್ ಭ್ರಾಂತಚಿತ್ತಾಕುಲೇಂದ್ರಿಯಃ ।
ಗರ್ದಭೇನ ಯಯೌ ಶೀಘ್ರಂ ದಕ್ಷಿಣಾಂ ದಿಶಮಾಸ್ಥಿತಃ ॥
ಅನುವಾದ
ಅವನು ಭ್ರಾಂತವಾದ ಮನಸ್ಸಿನಿಂದ, ಇಂದ್ರಿಯ ಚಾಪಲ್ಯದಿಂದ, ಎಣ್ಣೆಯನ್ನು ಕುಡಿಯುತ್ತಾ, ನಗುತ್ತಾ, ಕುಣಿಯುತ್ತಾ, ಕತ್ತೆಗಳ ರಥದಲ್ಲಿ ದಕ್ಷಿಣ ದಿಕ್ಕಿಗೆ ಹೋಗುತ್ತಿದ್ದನು.॥25॥
ಮೂಲಮ್ - 26
ಪುನರೇವ ಮಯಾ ದೃಷ್ಟೋ ರಾವಣೋ ರಾಕ್ಷಸೇಶ್ವರಃ ।
ಪತಿತೋಽವಾಕ್ಶಿರಾ ಭೂಮೌ ಗರ್ದಭಾದ್ಭಯಮೋಹಿತಃ ॥
ಅನುವಾದ
ಪುನಃ ನಾನು ಸ್ವಪ್ನದಲ್ಲಿ ರಾಕ್ಷಸೇಶ್ವರನಾದ ರಾವಣನು ಭಯವಿಹ್ವಲನಾಗಿ ಕತ್ತೆಯ ಮೇಲಿನಿಂದ ತಲೆಕೆಳಗಾಗಿ ನೆಲಕ್ಕೆ ಬಿದ್ದಿರುವುದನ್ನು ನೋಡಿದೆ.॥26॥
ಮೂಲಮ್ - 27
ಸಹಸೋತ್ಥಾಯ ಸಂಭ್ರಾಂತೋ ಭಯಾರ್ತೋ ಮದವಿಹ್ವಲಃ ।
ಉನ್ಮತ್ತ ಇವ ದಿಗ್ವಾಸಾ ದುರ್ವಾಕ್ಯಂ ಪ್ರಲಪನ್ ಮುಹುಃ ॥
ಅನುವಾದ
ಹೀಗೆ ನೆಲಕ್ಕೆ ಬಿದ್ದ ರಾವಣನು ಭ್ರಾಂತನಾಗಿ ಭಯಪೀಡಿತನಾಗಿದ್ದನು. ಮದದಿಂದ ವಿಹ್ವಲನಾಗಿದ್ದನು. ಹುಚ್ಚನಂತೆ ಕಾಣುತ್ತಿದ್ದು, ದಿಗಂಬರನಾಗಿದ್ದನು. ಕೆಟ್ಟಮಾತುಗಳಿಂದ ಪ್ರಲಾಪಿಸುತ್ತಿದ್ದನು.॥27॥
ಮೂಲಮ್ - 28
ದುರ್ಗಂಧಂ ದುಃಸಹಂ ಘೋರಂ ತಿಮಿರಂ ನರಕೋಪಮಮ್ ।
ಮಲಪಂಕಂ ಪ್ರವಿಶ್ಶಾಶು ಮಗ್ನಸ್ತತ್ರ ಸ ರಾವಣಃ ॥
ಅನುವಾದ
ಸಹಿಸಲು ಅಸಾಧ್ಯವಾದ ದುರ್ಗಂಧವು ಅವನ ಶರೀರದಿಂದ ಹೊರ ಸೂಸುತ್ತಿತ್ತು. ಅವನು ಗಾಢಾಂಧಕಾರದಿಂದ ಕೂಡಿದ್ದ, ನರಕಸದೃಶವಾದ ಮಲದ ಹೊಂಡದಲ್ಲಿ ಬಿದ್ದು ಅಲ್ಲಿಯೇ ಮುಳುಗಿ ಹೋದ ಘೋರವಾದ ದೃಶ್ಯವನ್ನು ನಾನು ಕನಸಿನಲ್ಲಿ ಕಂಡೆನು.॥28॥
ಮೂಲಮ್ - 29
ಪ್ರಸ್ಥಿತೋ ದಕ್ಷಿಣಾ ಮಾಶಾಂ ಪ್ರವಿಷ್ಟೊ ಕರ್ದಮಂ ಹೃದಮ್ ।
ಕಂಠೇ ಬದ್ಧ್ವಾ ದಶಗ್ರೀವಂ ಪ್ರಮದಾ ರಕ್ತವಾಸಿನೀ ॥
ಮೂಲಮ್ - 30
ಕಾಲೀ ಕರ್ದಮಲಿಪ್ತಾಂಗೀ ದಿಶಂ ಯಾಮ್ಯಾಂ ಪ್ರಕರ್ಷತಿ ।
ಏವಂ ತತ್ರ ಮಯಾ ದೃಷ್ಟಃ ಕುಂಭಕರ್ಣೋ ನಿಶಾಚರಃ ॥
ಅನುವಾದ
ಅವನು ದಕ್ಷಿಣ ದಿಕ್ಕಿಗೆ ಹೋಗುವಾಗ ಕೆಸರಿನ ಹೊಂಡವನ್ನು ಪ್ರವೇಶಿಸಿದನು. ಆಗ ಕಪ್ಪಾದ ಓರ್ವ ಸ್ತ್ರೀಯು ಶರೀರಕ್ಕೆ ಕೆಸರನ್ನು ಮೆತ್ತಿಕೊಂಡು, ಕೆಂಪಾದ ಬಟ್ಟೆಯನ್ನುಟ್ಟು ರಾವಣನ ಕತ್ತಿಗೆ ಹಗ್ಗ ಕಟ್ಟಿ ದಕ್ಷಿಣ ದಿಕ್ಕಿಗೆ ಎಳೆದುಕೊಂಡು ಹೋಗುತ್ತಿದ್ದಳು. ಇದೇ ರೀತಿ ನಾನು ಕನಸಿನಲ್ಲಿ ರಾಕ್ಷಸನಾದ ಕುಂಭಕರ್ಣನನ್ನು ನೋಡಿದೆನು.॥29-30॥
ಮೂಲಮ್ - 31
ರಾವಣಸ್ಯ ಸುತಾಃ ಸರ್ವೇ ಮುಂಡಾಸ್ತೈಲಸಮುಕ್ಷಿತಾಃ ।
ವರಾಹೇಣ ದಶಗ್ರೀವಃ ಶಿಂಶುಮಾರೇಣ ಚೇಂದ್ರಜಿತ್ ॥
ಮೂಲಮ್ - 32
ಉಷ್ಟ್ರೇಣ ಕುಂಭಕರ್ಣಶ್ಚ ಪ್ರಯಾತೋ ದಕ್ಷಿಣಾಂ ದಿಶಮ್ ।
ಏಕಸ್ತತ್ರ ಮಯಾ ದೃಷ್ಟಃ ಶ್ವೇತಚ್ಛತ್ರೋ ವಿಭೀಷಣಃ ॥
ಅನುವಾದ
ರಾವಣನ ಎಲ್ಲ ಮಕ್ಕಳೂ ಬೋಳುತಲೆಗಳಾಗಿ ಎಣ್ಣೆಯಲ್ಲಿ ಮುಳುಗಿರುವವರನ್ನು ನೋಡಿದೆನು. ಹಂದಿಯ ಮೇಲೆ ರಾವಣನು, ಮೊಸಳೆಯ ಮೇಲೆ ಇಂದ್ರಜಿತುವು, ಒಂಟೆಯ ಮೇಲೆ ಕುಂಭಕರ್ಣನು ಕುಳಿತು ದಕ್ಷಿಣ ದಿಕ್ಕಿಗೆ ಪ್ರಯಾಣ ಮಾಡುತ್ತಿದ್ದರು. ಆದರೆ ವಿಭೀಷಣನು ಮಾತ್ರ ಶ್ವೇತಚ್ಛತ್ರದ ನೆರಳಿನಲ್ಲಿ ಕುಳಿತಿರುವುದನ್ನು ನೋಡಿದೆನು.॥31-32॥
ಮೂಲಮ್ - 33
ಶುಕ್ಲಮಾಲ್ಯಾಂಬರಧರಃ ಶುಕ್ಲಗಂಧಾನುಲೇಪನಃ ।
ಶಂಖದುಂದುಭಿನಿರ್ಘೋಷೈರ್ನೃತ್ತಗೀತೈರಲಂಕೃತಃ ॥
ಮೂಲಮ್ - 34
ಆರುಹ್ಯ ಶೈಲಸಂಕಾಶಂ ಮೇಘಸ್ತನಿತನಿಃಸ್ವನಮ್ ।
ಚತುರ್ದಂತಂ ಗಜಂ ದಿವ್ಯಮಾಸ್ತೇ ತತ್ರ ವಿಭೀಷಣಃ ॥
ಮೂಲಮ್ - 35
ಚತುರ್ಭಿಃ ಸಚಿವೈಃ ಸಾರ್ಧಂ ವೈಹಾಯಸಮುಪಸ್ಥಿತಃ ।
ಸಮಾಜಶ್ಚ ಮಯಾ ದೃಷ್ಟೋ ಗೀತವಾದಿತ್ರನಿಃಸ್ವನಃ ॥
ಅನುವಾದ
ಅವನು ಬಿಳಿಯ ವಸ್ತ್ರವನ್ನುಟ್ಟು, ಶ್ವೇತವರ್ಣದ ಮಾಲೆಗಳನ್ನು ಧರಿಸಿದ್ದು, ಶ್ವೇತಗಂಧವನ್ನು ಪೂಸಿಕೊಂಡಿದ್ದನು. ಅವನ ಸುತ್ತಲೂ ಶಂಖದುಂದುಭಿಗಳ ಧ್ವನಿಗಳಿಂದಲೂ, ನೃತ್ಯಗೀತಗಳಿಂದ ಆನಂದಿತನಾಗಿದ್ದನು. ಅಂತಹ ಪರಿವಾರದಿಂದ ಸಮಲಂಕೃತನಾಗಿದ್ದ ವಿಭೀಷಣನು, ಶೈಲಸದೃಶವಾದ ಮೇಘಗರ್ಜನೆಯಂತೆ ಘೀಳಿಡುತ್ತಿದ್ದ, ನಾಲ್ಕು ದಂತಗಳುಳ್ಳ ದಿವ್ಯವಾದ ಆನೆಯ ಮೇಲೆ ಕುಳಿತು, ನಾಲ್ಕು ಮಂದಿ ಸಚಿವರೊಡನೆ ಆಕಾಶದಲ್ಲಿ ಉಪಸ್ಥಿತನಾಗಿದ್ದನು.॥33-35॥
ಮೂಲಮ್ - 36
ಪಿಬತಾಂ ರಕ್ತಮಾಲ್ಯಾನಾಂ ರಕ್ಷಸಾಂ ರಕ್ತವಾಸಸಾಮ್ ।
ಲಂಕಾ ಚೇಯಂ ಪುರೀ ರಮ್ಯಾ ಸವಾಜಿರಥಕುಂಜರಾ ॥
ಅನುವಾದ
ಗೀತವಾದ್ಯಗಳ ಧ್ವನಿಗಳಿಂದ ಸಮಾವೃತರಾಗಿ ಸುರಾಪಾನ ಮಾಡುತ್ತಾ ಕೆಂಪು ಮಾಲೆಗಳನ್ನು ಧರಿಸಿಕೊಂಡು, ಕೆಂಪು ವಸವನ್ನುಟ್ಟಿದ್ದ ರಾಕ್ಷಸ ಸಮೂಹವನ್ನು ನಾನು ಕನಸಿನಲ್ಲಿ ಕಂಡೆನು.॥36॥
ಮೂಲಮ್ - 37
ಸಾಗರೇ ಪತಿತಾ ದೃಷ್ಟಾ ಭಗ್ನಗೋಪುರತೋರಣಾ ।
ಲಂಕಾ ದೃಷ್ವಾ ಮಯಾ ಸ್ವಪ್ನೇ ರಾವಣೇನಾಭಿರಕ್ಷಿತಾ ॥
ಅನುವಾದ
ರಥಾಶ್ವ-ಗಜಗಳಿಂದ ಸಮಲಂಕೃತವಾಗಿರುವ, ರಮ್ಯವಾಗಿರುವ ಈ ಲಂಕಾಪಟ್ಟಣದ ಗೋಪುರಗಳೂ, ತೋರಣಗಳೂ, ಭಗ್ನವಾಗಿ ಸಮುದ್ರದಲ್ಲಿ ಬಿದ್ದುಹೋಗುವುದನ್ನು ನಾನು ನೋಡಿದೆನು.॥37॥
ಮೂಲಮ್ - 38
ದಗ್ಧಾ ರಾಮಸ್ಯ ದೂತೇನ ವಾನರೇಣ ತರಸ್ವಿನಾ ।
ಪೀತ್ವಾ ತೈಲಂ ಪ್ರನೃತ್ತಾಶ್ಚ ಪ್ರಹಸಂತ್ಯೋ ಮಹಾಸ್ವನಾಃ ॥
ಅನುವಾದ
ಇಲ್ಲಿಯವರೆಗೆ ರಾವಣನಿಂದ ರಕ್ಷಿಸಲ್ಪಟ್ಟ ಈ ಲಂಕೆಯನ್ನು ಶ್ರೀರಾಮನ ದೂತನಾದ ಮಹಾಬಲಶಾಲಿಯಾದ ಓರ್ವ ವಾನರ ಪ್ರಮುಖನು ಭಸ್ಮಮಾಡುತ್ತಿದ್ದುದನ್ನು ನೋಡಿದೆನು.॥38॥
ಮೂಲಮ್ - 39
ಲಂಕಾಯಾಂ ಭಸ್ಮರೂಕ್ಷಾಯಾಂ ಪ್ರವಿಷ್ಟಾ ರಾಕ್ಷಸಸ್ತ್ರಿಯಃ ।
ಕುಂಭಕರ್ಣಾದಯಶ್ಚೇಮೇ ಸರ್ವೇ ರಾಕ್ಷಸಪುಂಗವಾಃ ॥
ಅನುವಾದ
ರಾಕ್ಷಸ ಸ್ತ್ರೀಯರು ಎಣ್ಣೆಯನ್ನು ಕುಡಿದು ಪ್ರಮತ್ತರಾಗಿ ಗಹಗಹಿಸಿ ನಗುತ್ತಾ ಗಟ್ಟಿಯಾಗಿ ಶಬ್ದಮಾಡುತ್ತಾ ಬೆಂದು ಭಸ್ಮವಾಗಿ ಹೋಗಿದ್ದ ವಿಕಾರವಾದ ಲಂಕೆಯನ್ನು ಪ್ರವೇಶಿಸುತ್ತಿದ್ದರು.॥39॥
ಮೂಲಮ್ - 40
ರಕ್ತಂ ನಿವಸನಂ ಗೃಹ್ಯ ಪ್ರವಿಷ್ಟಾ ಗೋಮಯಹ್ರದೇ ।
ಅಪಗಚ್ಛತ ನಶ್ಯಧ್ವಂ ಸೀತಾಮಾಪ ಸ ರಾಘವಃ ॥
ಅನುವಾದ
ಕುಂಭಕರ್ಣನೇ ಮೊದಲಾದ ರಾಕ್ಷಸಯೋಧರೆಲ್ಲರೂ ಕೆಂಪು ಬಣ್ಣದ ಮಾಸಿದ ಬಟ್ಟೆಗಳನ್ನು ಧರಿಸಿಕೊಂಡು ಸೆಗಣಿಯ ಬಗ್ಗಡದಿಂದ ತುಂಬಿದ ಹೊಂಡವನ್ನು ಪ್ರವೇಶಿಸುತ್ತಿರುವುದನ್ನು ನಾನು ಕನಸಿನಲ್ಲಿ ಕಂಡೆನು.॥40॥
ಮೂಲಮ್ - 41
ಘಾತಯೇತ್ ಪರಮಾಮರ್ಷೀ ಸರ್ವೈಃ ಸಾರ್ಧಂ ಹಿ ರಾಕ್ಷಸೈಃ ।
ಪ್ರಿಯಾಂ ಬಹುಮತಾಂ ಭಾರ್ಯಾಂ ವನವಾಸಮನುವ್ರತಾಮ್ ॥
ಅನುವಾದ
ರಾಕ್ಷಸ್ತ್ರೀಯರೇ! ಸೀತೆಯಿಂದ ದೂರ ಸರಿಯಿರಿ. ಅವಳ ತಂಟೆಗೆ ಹೋಗಬೇಡಿರಿ. ರಾಘವನು ಸೀತೆಯನ್ನು ಪಡೆದೇ ತೀರುವನು. ಕ್ರುದ್ಧನಾದ ಶ್ರೀರಾಮನು ರಾಕ್ಷಸರೊಡನೆ ನಿಮ್ಮನ್ನು ಧ್ವಂಸಮಾಡುವನು.॥41॥
ಮೂಲಮ್ - 42
ಭರ್ತ್ಸಿತಾಂ ತರ್ಜಿತಾಂ ವಾಪಿ ನಾನುಮಂಸ್ಯತಿ ರಾಘವಃ ।
ತದಲಂ ಕ್ರೂರವಾಕ್ಯೈರ್ವಃ ಸಾಂತ್ವಮೇವಾಭಿಧೀಯತಾಮ್ ॥
ಅನುವಾದ
ಶ್ರೀರಾಮನಿಗೆ ಸೀತೆಯು ಬಹಿಃ ಪ್ರಾಣಳು. ಅವಳು ವನವಾಸದ ಆಪತ್ಕಾಲದಲ್ಲಿಯೂ ಅವನೊಡನೆ ದೀಕ್ಷೆಪಡೆದು ಸಾಗಿದ್ದ ಸಾಧ್ವಿಯು. ಪ್ರೇಮಕ್ಕೆ ಪ್ರತಿರೂಪವಾದ ತನ್ನ ಭಾರ್ಯೆಯನ್ನು ಯಾರಾದರು ಭಯಪಡಿಸಿದರೆ, ಹಿಂಸಿಸಿದರೆ ಅವನು ಖಂಡಿತವಾಗಿ ಸಹಿಸನು.॥42॥
ಮೂಲಮ್ - 43
ಅಭಿಯಾಚಾಮ ವೈದೇಹೀಮೇತದ್ಧಿ ಮಮ ರೋಚತೇ ।
ಯಸ್ಯಾಮೇವಂವಿಧಃ ಸ್ವಪ್ನೊ ದುಃಖಿತಾಯಾಂ ಪ್ರದೃಶ್ಯತೇ ॥
ಅನುವಾದ
ನೀವುಗಳು ಇವಳೊಡನೆ ಆಡುವ ಕ್ರೂರ ವಚನಗಳನ್ನು ಸಾಕುಮಾಡಿರಿ. ಅವಳೊಡನೆ ಸಾಂತ್ವನದ ಮಾತುಗಳನ್ನೇ ಆಡಿರಿ. ನೀವೆಲ್ಲರೂ ಸೀತಾದೇವಿಗೆ ಶರಣುಹೋಗುವುದೇ ಉಚಿತವೆಂದು ನನಗೆ ತೊರುತ್ತದೆ.॥43॥
ಮೂಲಮ್ - 44
ಸಾ ದುಃಖೈರ್ವಿವಿಧೈರ್ಮುಕ್ತಾ ಪ್ರಿಯಂ ಪ್ರಾಪ್ನೋತ್ಯನುತ್ತಮಮ್ ।
ಭರ್ತ್ಸಿತಾಮಪಿ ಯಾಚಧ್ವಂ ರಾಕ್ಷಸ್ಯಃ ಕಿಂ ವಿವಕ್ಷಯಾ ॥
ಅನುವಾದ
ಇವಳು ಇಂತಹ ದುಃಖದಲ್ಲಿರುವಾಗ ಇವಳ ಕುರಿತು ಈ ವಿಧವಾದ ಸ್ವಪ್ನಗಳು ನನಗೆ ಬಿದ್ದವು. ಅದರಿಂದಾಗಿ ಸೀತೆಯು ದುಃಖಗಳಿಂದ ವಿಮುಕ್ತಳಾಗಿ ಸರ್ವೋತ್ಕೃಷ್ಟನಾದ ತನ್ನ ಪತಿಯನ್ನು ಹೊಂದುವಳು.॥44॥
ಮೂಲಮ್ - 45
ರಾಘವಾದ್ಧಿ ಭಯಂ ಘೋರಂ ರಾಕ್ಷಸಾನಾಮುಪಸ್ಥಿತಮ್ ।
ಪ್ರಣಿಪಾತಪ್ರಸನ್ನಾ ಹಿ ಮೈಥಿಲೀ ಜನಕಾತ್ಮಜಾ ॥
ಅನುವಾದ
ರಾಕ್ಷಸ ಸ್ತ್ರೀಯರೇ! ಇದುವರೆವಿಗೂ ಇವಳನ್ನು ಹೇಗೋ ಭಯಪಡಿಸಿ ಬಾಧಿಸಿದ್ದೇವೆ. ಈಗ ಇವಳು ನಮಗೆ ಕ್ಷಮಿಸುವಳೇ? ಎಂಬ ಶಂಕೆಯನ್ನು ಬಿಡಿರಿ. ಈಗ ನಾವು ಇವಳ ಕ್ಷಮೆಯನ್ನು ಯಾಚಿಸೋಣ. ರಾಘವನಿಂದ ರಾಕ್ಷಸರಿಗೆ ಅತಿಘೋರವಾದ ಭಯವು ಸನ್ನಿಹಿತವಾಗಿದೆ.॥45॥
ಮೂಲಮ್ - 46
ಅಲಮೇಷಾ ಪರಿತ್ರಾತುಂ ರಾಕ್ಷಸ್ಯೋ ಮಹತೋ ಭಯಾತ್ ।
ಅಪಿ ಚಾಸ್ಯಾ ವಿಶಾಲಾಕ್ಷ್ಯಾ ನ ಕಿಂಚಿದುಪಲಕ್ಷಯೇ ॥
ಅನುವಾದ
ಎಲೈ ರಕ್ಕಸಿಯರೇ! ಜನಕಸುತೆಯಾದ ಈ ಸೀತಾದೇವಿಗೆ ನಮಸ್ಕರಿಸಿದ ಮಾತ್ರದಿಂದ ಇವಳು ಪ್ರಸನ್ನಳಾಗುವಳು. ಇವಳು ದಯಾಮೂರ್ತಿಯಾಗಿದ್ದಾಳೆ. ಈ ಮಹಾಭಯದಿಂದ ನಮ್ಮನ್ನು ಪಾರುಮಾಡಲು ಇವಳು ಸಮರ್ಥಳಾಗಿದ್ದಾಳೆ.॥46॥
ಮೂಲಮ್ - 47
ವಿರೂಪಮಪಿ ಚಾಂಗೇಷು ಸುಸೂಕ್ಷ್ಮಮಪಿ ಲಕ್ಷಣಮ್ ।
ಛಾಯಾವೈಗುಣ್ಯಮಾತ್ರಂ ತು ಶಂಕೇ ದುಃಖಮುಪಸ್ಥಿತಮ್ ॥
ಅನುವಾದ
ವಿಶಾಲಾಕ್ಷಿಯಾದ ಈ ಸೀತಾದೇವಿಯ ಅವಯವಗಳಲ್ಲಿ ದುಃಖಸೂಚಕವಾದ ಯಾವ ಅವಲಕ್ಷಣಗಳು ಸೂಕ್ಷ್ಮವಾಗಿ ನೋಡಿದರೂ ಕಾಣಬರುವುದಿಲ್ಲ.॥47॥
ಮೂಲಮ್ - 48
ಅದುಃಖಾರ್ಹಾಮಿಮಾಂ ದೇವೀಂ ವೈಹಾಯಸಮುಪಸ್ಥಿತಾಮ್ ।
ಅರ್ಥಸಿದ್ಧಿಂ ತು ವೈದೇಹ್ಯಾಃ ಪಶ್ಯಾಮ್ಯಹಮುಪಸ್ಥಿತಾಮ್ ॥
ಅನುವಾದ
ಇಂತಹ ಶುಭ ಲಕ್ಷಣಗಳಿಂದ ಒಡಗೂಡಿದ ಈ ಸೀತಾದೇವಿಯು ದಿವ್ಯ ಸುಖಗಳಿಗೆ ಅರ್ಹಳಾಗಿದ್ದಾಳೆ. ಈಗ ಕಂಡುಬರುವ ಈ ದುಃಖಗಳು ಕೇವಲ ಛಾಯಾಮಾತ್ರವಾಗಿದ್ದು ಯಥಾರ್ಥವಾಗಿ ಖಂಡಿತವಾಗಿಯೂ ಇಲ್ಲ. ಇವು ತಾತ್ಕಾಲಿಕವಾದುವುಗಳು. ಈ ಮಬ್ಬು ಕಳೆದುಹೋದಾಗ ರಾಜ್ಯಲಾಭವು ಖಂಡಿತ. ಇವಳು ತನ್ನ ಪತಿಯಾದ ಶ್ರೀರಾಮನೊಡಗೂಡಿ ವಿಮಾನದಲ್ಲಿ ಕುಳಿತಂತೆ ನಾನು ಸ್ಪಷ್ಟವಾಗಿ ಕಂಡಿರುವೆನು. ಇದು ಅವಳಿಗೆ ಶುಭಸೂಚಕವು.॥48॥
ಮೂಲಮ್ - 49
ರಾಕ್ಷಸೇಂದ್ರವಿನಾಶಂ ಚ ವಿಜಯಂ ರಾಘವಸ್ಯ ಚ ।
ನಿಮಿತ್ತಭೂತಮೇತತ್ತು ಶ್ರೋತುಮಸ್ಯಾ ಮಹತ್ ಪ್ರಿಯಮ್ ॥
ಅನುವಾದ
ನಾನು ಸ್ವಪ್ನದಲ್ಲಿ ವಿಮಾನವನ್ನು ಕಂಡಿದ್ದರ ಸೂಚನೆಯಿಂದ ಸೀತಾದೇವಿಗೆ ಕಾರ್ಯಸಿದ್ಧಿ, ಅರ್ಥಸಿದ್ಧಿ; ರಾವಣನಿಗೆ ವಿನಾಶವನ್ನೂ; ಶ್ರೀರಾಮನಿಗೆ ವಿಜಯವು ತಪ್ಪದೆ ಆಗಿಯೇ ತೀರುವುದು ಎಂದು ನನಗೆ ತೋರುತ್ತದೆ.॥49॥
ಮೂಲಮ್ - 50
ದೃಶ್ಯತೇ ಚ ಸ್ಫುರಚ್ಚಕ್ಷುಃ ಪದ್ಮಪತ್ರಮಿವಾಯತಮ್ ।
ಈಷಚ್ಚ ಹೃಷಿತೋ ವಾಸ್ಯಾ ದಕ್ಷಿಣಾಯಾ ಹ್ಯದಕ್ಷಿಣಃ ॥
ಅನುವಾದ
ಕಮಲದಂತೆ ವಿಶಾಲವಾದ ಇವಳ ಎಡಗಣ್ಣು ಅದರುತ್ತದೆ. ಇದೂ ಶುಭ ಸೂಚನೆಯೇ. ಅತ್ಯಲ್ಪಕಾಲದಲ್ಲೇ ಇವಳು ಅತ್ಯಂತ ಸಂತೋಷಕರವಾದ ವಾರ್ತೆಯನ್ನು ಕೇಳಲಿರುವಳು ಎಂಬುದಕ್ಕೆ ಇದು ನಿಮಿತ್ತವಾಗಿದೆ.॥50॥
ಮೂಲಮ್ - 51
ಅಕಸ್ಮಾದೇವ ವೈದೇಹ್ಯಾ ಬಾಹುರೇಕಃ ಪ್ರಕಂಪತೇ ।
ಕರೇಣುಹಸ್ತಪ್ರತಿಮಃ ಸವ್ಯಶ್ಚೋರುರನುತ್ತಮಃ ।
ವೇಪಮಾನಃ ಸೂಚಯತಿ ರಾಘವಂ ಪುರತಃ ಸ್ಥಿತಮ್ ॥
ಅನುವಾದ
ಉದಾರಹೃದಯಳಾದ ವೈದೇಹಿಯ ಎಡತೋಳು ರೋಮಾಂಚಗೊಂಡು ಸ್ವಲ್ಪಮಟ್ಟಿಗೆ ಕಂಪಿಸುತ್ತದೆ. ಇದೂ ಕೂಡ ಅವಳಿಗೆ ಶುಭಸೂಚಕವೇ. ಹೆಣ್ಣಾನೆಯ ಸೊಂಡಿಲಿನಂತೆ ಶ್ರೇಷ್ಠವಾದ ಸೀತಾದೇವಿಯ ಎಡ ತೊಡೆಯೂ ಕೂಡ ಅದರುತ್ತಿದೆ. ಇದರಿಂದ ಬೇಗನೇ ಶ್ರೀರಾಮನು ಇವಳ ಮುಂದೆ ನಿಲ್ಲುವನೆಂಬುದನ್ನು ಸೂಚಿಸುತ್ತದೆ.॥51॥
ಮೂಲಮ್ - 52
ಪಕ್ಷೀ ಚ ಶಾಖಾನಿಲಯಂ ಪ್ರವಿಷ್ಟಃ
ಪುನಃ ಪುನಶ್ಚೋತ್ತಮಸಾಂತ್ವವಾದೀ ।
ಸುಸ್ವಾಗತಾಂ ವಾಚಮುದೀರಯಾಣಃ
ಪುನಃ ಪುನಶ್ಚೋದಯತೀವ ಹೃಷ್ಟಃ ॥
ಅನುವಾದ
ಅದೋ ಒಂದು ಪಕ್ಷಿಯು ರೆಂಬೆಯಲ್ಲಿರುವ ತನ್ನ ಗೂಡನ್ನು ಪ್ರವೇಶಿಸುತ್ತಿದೆ. ಆಗಾಗ ಮಧುರವಾಗಿ ಕೂಗುತ್ತಿದೆ. ಆ ಪಕ್ಷಿಯ ಕೂಜನವು ‘‘ಸೀತೆ! ನೀನು ಭಯಪಡಬೇಡ’’ ಎಂದು ಸಂತೈಸುವಂತೆ ಅನಿಸುತ್ತದೆ. ಅದು ಶ್ರೀರಾಮನಿಗೆ ಸ್ವಾಗತವನ್ನು ಹಾಡುತ್ತಿದೆಯೋ ಎಂಬಂತಿದೆ. ಮತ್ತು ಸಂತೋಷದಿಂದ ಸೀತಾದೇವಿಗೆ ಉತ್ಸಾಹವನ್ನು ತುಂಬುತ್ತಿದೆಯೋ ಎಂದು ಕೂಗುತ್ತಿದೆ.॥52॥
ಮೂಲಮ್ - 53
ತತಃ ಸಾ ಹ್ರೀಮತೀ ಬಾಲಾ ಭರ್ತುರ್ವಿಜಯಹರ್ಷಿತಾ ।
ಅವೋಚದ್ಯದಿ ತತ್ತಥ್ಯಂ ಭವೇಯಂ ಶರಣಂ ಹಿ ವಃ ॥
ಅನುವಾದ
ಬಳಿಕ ಸೀತಾದೇವಿಯು ತನ್ನ ಪತಿಗೆ ವಿಜಯವು ಸಿದ್ಧಿಸುವುದು ಎಂದರಿತು, ಸಂತಸಪಟ್ಟು, ಹರ್ಷದಿಂದ ಹೀಗೆಂದಳು ‘‘ತ್ರಿಜಟೆಯು ಹೇಳಿದ ಸ್ವಪ್ನ ವಿಶೇಷಗಳು ನಿಜವಾದರೆ ನಿಮಗೆಲ್ಲರಿಗೂ ಅಭಯವನ್ನು ಕೊಡುತ್ತೇನೆ.’’॥53॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಸಪ್ತವಿಂಶಃ ಸರ್ಗಃ ॥ 27 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತೇಳನೆಯ ಸರ್ಗವು ಮುಗಿಯಿತು.