वाचनम्
ಭಾಗಸೂಚನಾ
ಸೀತೆಯ ವಿಲಾಪ, ಪ್ರಾಣತ್ಯಾಗಮಾಡಲು ನಿಶ್ಚಯ
ಮೂಲಮ್ - 1
ಪ್ರಸಕ್ತಾಶ್ರುಮುಖೀ ತ್ವೇವಂ ಬ್ರುವಂತೀ ಜನಕಾತ್ಮಜಾ ।
ಅಧೋಮುಖಮುಖೀ ಬಾಲಾ ವಿಲಪ್ತುಮುಪಚಕ್ರಮೇ ॥
ಅನುವಾದ
ಕಣ್ಣೀರಿನಿಂದ ತೊಯ್ದುಹೋಗಿದ್ದ ಮುಖದಿಂದ ಕೂಡಿದ್ದು ದಯನೀಯಳಾದ ಜಾನಕಿದೇವಿಯು ಹೀಗೆ ಹೇಳಿಕೊಳ್ಳುತ್ತಾ ತಲೆಯನ್ನು ತಗ್ಗಿಸಿಕೊಂಡು ಅಳತೊಡಗಿದಳು.॥1॥
ಮೂಲಮ್ - 2
ಉನ್ಮತ್ತೇವ ಪ್ರಮತ್ತೇವ ಭ್ರಾಂತಚಿತ್ತೇವ ಶೋಚತೀ ।
ಉಪಾವೃತ್ತಾ ಕಿಶೋರೀವ ವಿವೇಷ್ಟಂತಿ ಮಹೀತಲೆ ॥
ಅನುವಾದ
ಕೆಲವೊಮ್ಮೆ ಉನ್ಮತ್ತಳಂತೆ, ಮತ್ತೊಮ್ಮೆ ಮತ್ತೇರಿದವಳಂತೆ, ಮಗದೊಮ್ಮೆ ಚಿತ್ತಭ್ರಮೆಗೊಂಡವಳಂತೆ ಶೋಕಿಸುತ್ತಿದ್ದಳು. ಬಳಲಿಕೆಯ ಪರಿಹಾರಕ್ಕಾಗಿ ನೆಲದಮೇಲೆ ಹೊರಳಾಡುವ ಹೆಣ್ಣುಕುದುರೆ ಮರಿಯಂತೆ ಕೆಲವೊಮ್ಮೆ ಹೊರಳಾಡುತ್ತಿದ್ದಳು.॥2॥
ಮೂಲಮ್ - 3
ರಾಘವಸ್ಯ ಪ್ರಮತ್ತಸ್ಯ ರಕ್ಷಸಾ ಕಾಮರೂಪಿಣಾ ।
ರಾವಣೇನ ಪ್ರಮಥ್ಯಾಹಮಾನೀತಾ ಕ್ರೋಶತೀ ಬಲಾತ್ ॥
ಅನುವಾದ
ಶ್ರೀರಾಮನು ಬಂಗಾರದ ಜಿಂಕೆಯ ಕೋರಿಕೆಯಂತೆ ದೂರ ಹೋದಾಗ, ಕಾಮರೂಪಿಯಾದ, ಮಾಯಾವಿಯಾದ ರಾವಣನು ಕೂಗಿಕೊಳ್ಳುತ್ತಿದ್ದರೂ ಬಲಾತ್ಕಾರದಿಂದ ನನ್ನನ್ನು ಇಲ್ಲಿಗೆ ಸೆಳೆದು ತಂದನು.॥3॥
ಮೂಲಮ್ - 4
ರಾಕ್ಷಸೀವಶಮಾಪನ್ನಾ ಭರ್ತ್ಸ್ಯಮಾನಾ ಸುದಾರುಣಮ್ ।
ಚಿಂತಯಂತೀ ಸುದುಃಖಾರ್ತಾ ನಾಹಂ ಜೀವಿತುಮುತ್ಸಹೇ ॥
ಅನುವಾದ
ಈಗ ರಾಕ್ಷಸಸ್ತ್ರೀಯರು ನನ್ನನ್ನು ವಶದಲ್ಲಿರಿಸಿಕೊಂಡು ಕ್ರೂರವಾದ ರೀತಿಯಿಂದ ಬೆದರಿಸುತ್ತಿದ್ದಾರೆ. ಮಹಾ ದುಃಖದಲ್ಲಿ ಮುಳುಗಿರುವ ನನಗೆ ಚಿಂತಾವ್ಯಾಕುಲದಿಂದೊಡಗೊಂಡ ಈ ಜೀವಿತದ ಮೇಲೆ ಯಾವ ಆಶೆಯೂ ಇಲ್ಲ.॥4॥
ಮೂಲಮ್ - 5
ನ ಹಿ ಮೇ ಜೀವಿತೇನಾರ್ಥೋ ನೈವಾರ್ಥೈರ್ನ ಚ ಭೂಷಣೈಃ ।
ವಸಂತ್ಯಾ ರಾಕ್ಷಸೀಮಧ್ಯೇ ವಿನಾ ರಾಮಂ ಮಹಾರಥಮ್ ॥
ಅನುವಾದ
ಮಹಾರಥಿಯೂ, ಪ್ರಾಣನಾಥನೂ ಆದ ಶ್ರೀರಾಮನಿಂದ ದೂರವಾಗಿ ಈ ರಾಕ್ಷಸಿಯರ ನಡುವೆ ಸಿಕ್ಕಿಕೊಂಡಿರುವ ನನಗೆ ಸಂಪತ್ತುಗಳೇಕೆ? ಭೂಷಣಗಳೂ ಏಕೆ? ಕೊನೆಗೆ ಈ ಸ್ಥಿತಿಯಲ್ಲಿರುವ ನಾನು ಜೀವಿಸಿರುವುದು ಏತಕ್ಕಾಗಿ?॥5॥
ಮೂಲಮ್ - 6
ಅಶ್ಮಸಾರಮಿದಂ ನೂನಮಥವಾಪ್ಯಜರಾಮರಮ್ ।
ಹೃದಯಂ ಮಮ ಯೇನೇದಂ ನ ದುಃಖೇನಾವಶೀರ್ಯತೇ ॥
ಅನುವಾದ
ನನ್ನ ಹೃದಯವು ನಿಜವಾಗಿ ಕಬ್ಬಿಣದ್ದಾಗಿರಬೇಕು ಅಥವಾ ಮುಪ್ಪು-ಸಾವುಗಳಿಲ್ಲದ್ದಾಗಿರಬೇಕು. ಏಕೆಂದರೆ ಇಂತಹ ದಾರುಣವಾದ ದುಃಖವನ್ನು ಅನುಭವಿಸುತ್ತಿದ್ದರೂ ಸೀಳಿ ಹೊಗುತ್ತಿಲ್ಲವಲ್ಲ!॥6॥
ಮೂಲಮ್ - 7
ದಿಙ್ಮಾಮನಾರ್ಯಾಮಸತೀಂ ಯಾಹಂ ತೇನ ವಿನಾಕೃತಾ ।
ಮುಹೂರ್ತಮಪಿ ರಕ್ಷಾಮಿ ಜೀವಿತಂ ಪಾಪಜೀವಿತಾ ॥
ಅನುವಾದ
ಪುರುಷೋತ್ತಮನಾದ ಶ್ರೀರಾಮನಿಂದ ರಹಿತಳಾಗಿರುವ ನಾನು ಇನ್ನೂ ಜೀವಿಸಿರುವೆನಲ್ಲ! ಅನಾರ್ಯೆಯಂತೆಯೂ, ಪತಿತೆಯಂತೆಯೂ, ಪರಪುರುಷನ ಮನೆಯಲ್ಲಿರುವ ನನಗೆ ಧಿಕ್ಕಾರವಿರಲಿ! ಇದು ನಿಶ್ಚಯವಾಗಿಯೂ ಪಾಪಜೀವಿಕೆಯೇ ಸರಿ!॥7॥
ಮೂಲಮ್ - 8
ಕಾ ಚ ಮೇ ಜೀವಿತೇ ಶ್ರದ್ಧಾ ಸುಖೇ ವಾ ತಂ ಪ್ರಿಯಂ ವಿನಾ ।
ಭರ್ತಾರಂ ಸಾಗರಾಂತಾಯಾ ವಸುಧಾಯಾಃ ಪ್ರಿಯಂವದಮ್ ॥
ಅನುವಾದ
ಸಮುದ್ರದಿಂದ ಆವೃತವಾದ ಈ ಭೂಮಂಡಲಕ್ಕೆ ಒಡೆಯನಾದ ನನ್ನ ಪತಿ ಶ್ರೀರಾಮನು. ಅವನು ಪ್ರಿಯಭಾಷಿ, ಅಂತಹ ಪ್ರಾಣಪ್ರಿಯನಿಂದ ದೂರವಿರುವ ನನಗೆ ಸುಖಗಳಲ್ಲಿ, ಜೀವಿತದಲ್ಲಿ ಆಸಕ್ತಿ ಏಕೆ?॥8॥
ಮೂಲಮ್ - 9
ಭಿದ್ಯತಾಂ ಭಕ್ಷ್ಯತಾಂ ವಾಪಿ ಶರೀರಂ ವಿಸೃಜಾಮ್ಯಹಮ್ ।
ನ ಚಾಪ್ಯಹಂ ಚಿರಂ ದುಃಖಂ ಸಹೇಯಂ ಪ್ರಿಯವರ್ಜಿತಾ ॥
ಅನುವಾದ
ಈ ರಾಕ್ಷಸಸ್ತ್ರೀಯರು ನಾಶವುಳ್ಳ ಈ ಶರೀರವನ್ನು ತುಂಡು-ತುಂಡು ಮಾಡಿದರೂ, ತಿಂದು ಹಾಕಿದರೂ ನನಗೆ ಸಮ್ಮತವೇ. ಇದನ್ನು ತ್ಯಜಿಸಲಿಕ್ಕಾಗಿ ನಾನು ಸಿದ್ಧಳೇ ಆಗಿದ್ದೇನೆ. ಪ್ರಿಯನಿಗೆ ದೂರವಾಗಿದ್ದು ಅಂತ್ಯವಿಲ್ಲದ ಈ ದುಃಖಗಳನ್ನು ಇನ್ನು ಯಾವ ರೀತಿಯಿಂದಲೂ ಸಹಿಸಲಾರೆನು.॥9॥
ಮೂಲಮ್ - 10
ಚರಣೇನಾಪಿ ಸವ್ಯೇನ ನ ಸ್ಪೃಶೇಯಂ ನಿಶಾಚರಮ್ ।
ರಾವಣಂ ಕಿಂ ಪುನರಹಂ ಕಾಮಯೇಯಂ ವಿಗರ್ಹಿತಮ್ ॥
ಅನುವಾದ
ನಿಕೃಷ್ಟವಾದ ಆ ನಿಶಾಚರನನ್ನು ನಾನು ಎಡಗಾಲಿನಿಂದಲೂ ಮುಟ್ಟುವುದಿಲ್ಲ. ಹೀಗಿರುವಾಗ ಆ ರಾವಣನ ಕೋರಿಕೆಗಳನ್ನು ಈಡೇರಿಸುವೆನೇ?॥10॥
ಮೂಲಮ್ - 11
ಪ್ರತ್ಯಾಖ್ಯಾನಂ ನ ಜಾನಾತಿ ನಾತ್ಮಾನಂ ನಾತ್ಮನಃ ಕುಲಮ್ ।
ಯೋ ನೃಶಂಸಸ್ವಭಾವೇನ ಮಾಂ ಪ್ರಾರ್ಥಯಿತುಮಿಚ್ಛತಿ ॥
ಅನುವಾದ
ಕ್ರೂರವಾದ ಸ್ವಭಾವದಿಂದ ನನ್ನನ್ನು ಪಡೆದುಕೊಳ್ಳಲು ಬಯಸಿರುವ ಆ ರಾವಣನು ತನ್ನ ಸ್ವರೂಪವನ್ನಾಗಲೀ, ಕುಲವನ್ನಾಗಲೀ, ನಾನು ಮಾಡುತ್ತಿರುವ ತಿರಸ್ಕಾರವನ್ನಾಗಲೀ ತಿಳಿಯುವುದೇ ಇಲ್ಲವಲ್ಲ!॥11॥
ಮೂಲಮ್ - 12
ಛಿನ್ನಾ ಭಿನ್ನಾ ಪ್ರಭಿನ್ನಾ ವಾ ದೀಪ್ತಾ ವಾಗ್ನೌ ಪ್ರದೀಪಿತಾ ।
ರಾವಣಂ ನೋಪತಿಷ್ಠೇಯಂ ಕಿಂ ಪ್ರಲಾಪೇನ ವಶ್ಚಿರಮ್ ॥
ಅನುವಾದ
ರಾಕ್ಷಸಿಯರೇ! ನೀವು ನನ್ನನ್ನು ಚೂರು-ಚೂರಾಗಿ ಕತ್ತಿರಿಸಿರಿ, ಜಜ್ಜಿರಿ, ಅಥವಾ ಅಂಗಾಂಗಗಳನ್ನು ಬೇರ್ಪಡಿಸಿರಿ; ಉರಿಯುತ್ತಿರುವ ಬೆಂಕಿಯಲ್ಲಿ ಸುಟ್ಟುಬಿಡಿರಿ. ಆದರೆ ನಾನು ಮಾತ್ರ ರಾವಣನ ಬಳಿಗೆ ಸೇರೆನು. ನೀವು ಹೀಗೆ ಹಗಲು - ರಾತ್ರಿಗಳಹುತ್ತಿದ್ದರೂ ವ್ಯರ್ಥವೇ.॥12॥
ಮೂಲಮ್ - 13
ಖ್ಯಾತಃ ಪ್ರಾಜ್ಞಃ ಕೃತಜ್ಞಶ್ಚ ಸಾನುಕ್ರೋಶಶ್ಚ ರಾಘವಃ ।
ಸದ್ವೃತ್ತೋ ನಿರನುಕ್ರೋಶಃ ಶಂಕೇ ಮದ್ಭಾಗ್ಯಸಂಕ್ಷಯಾತ್ ॥
ಅನುವಾದ
ನನಗನಿಸುತ್ತದೆ ವಿಶ್ವವಿಖ್ಯಾತನೂ, ಜ್ಞಾನಿಯೂ, ಕೃತಜ್ಞನೂ, ಸದಾಚಾರಿಯೂ, ಪರಮ ದಯಾಳುವೂ ಆದ ಶ್ರೀರಘುನಾಥನು ನನ್ನ ಕುರಿತು ನಿಷ್ಠುರನಾಗಿರುವನಲ್ಲ! ಇದು ನನ್ನ ದುರದೃಷ್ಟವೇ ಆಗಿದೆ.॥13॥
ಮೂಲಮ್ - 14
ರಾಕ್ಷಸಾನಾಂ ಜನಸ್ಥಾನೇ ಸಹಸ್ರಾಣಿ ಚತುರ್ದಶ ।
ಯೇನೈಕೇನ ನಿರಸ್ತಾನಿ ಸ ಮಾಂ ಕಿಂ ನಾಭಿಪದ್ಯತೇ ॥
ಅನುವಾದ
ಶ್ರೀರಾಮನು ತಾನೊಬ್ಬನೇ ದಂಡಕಾರಣ್ಯದಲ್ಲಿ ಹದಿನಾಲ್ಕು ಸಾವಿರ ರಾಕ್ಷಸರನ್ನು ಧ್ವಂಸಮಾಡಿದನು. ಅಂತಹ ಮಹಾನುಭಾವನು ನನ್ನನ್ನು ಪುನಃ ಪಡೆಯಲಾರನೇ?॥14॥
ಮೂಲಮ್ - 15
ನಿರುದ್ಧಾ ರಾವಣೇನಾಹಮಲ್ಪವೀರ್ಯೇಣ ರಕ್ಷಸಾ ।
ಸಮರ್ಥಃ ಖಲು ಮೇ ಭರ್ತಾ ರಾವಣಂ ಹಂತುಮಾಹವೇ ॥
ಅನುವಾದ
ಅಲ್ಪವೀರ್ಯನಾದ, ರಾಕ್ಷಸನಾದ ರಾವಣನು ನನ್ನನ್ನು ಇಂದು ಬಂಧಿಸಿಟ್ಟಿರುವನು. ಆದರೆ ಯುದ್ಧದಲ್ಲಿ ನನ್ನ ಪತಿಯು ಇವನನ್ನು ಸಂಹರಿಸಲು ಖಂಡಿತವಾಗಿ ಸಮರ್ಥನಾಗಿದ್ದಾನೆ.॥15॥
ಮೂಲಮ್ - 16
ವಿರಾಧೋ ದಂಡಕಾರಣ್ಯೇ ಯೇನ ರಾಕ್ಷಸಪುಂಗವಃ ।
ರಣೇ ರಾಮೇಣ ನಿಹತಃ ಸ ಮಾಂ ಕಿಂ ನಾಭಿಪದ್ಯತೇ ॥
ಅನುವಾದ
ದಂಡಕಾರಣ್ಯದಲ್ಲಿ ನಡೆದ ಯುದ್ಧದಲ್ಲಿ ನನ್ನ ಪತಿಯು ವಿರಾಧನೇ ಮೊದಲಾದ ಪ್ರಮುಖ ರಾಕ್ಷಸರನ್ನು ಸಂಹರಿಸಿದನು. ಅಂತಹ ಮಹಾವೀರನು ನನ್ನನ್ನು ರಕ್ಷಿಸಲು ಏಕೆ ಬರುವುದಿಲ್ಲ?॥16॥
ಮೂಲಮ್ - 17
ಕಾಮಂ ಮಧ್ಯೇ ಸಮುದ್ರಸ್ಯ ಲಂಕೇಯಂ ದುಷ್ಟ್ರಧರ್ಷಣಾ ।
ನ ತು ರಾಘವಬಾಣಾನಾಂ ಗತಿರೋಧೀಹ ವಿದ್ಯತೇ ॥
ಅನುವಾದ
ಸಮುದ್ರದ ಮಧ್ಯದಲ್ಲಿರುವ ಈ ಲಂಕಾ ಪಟ್ಟಣವು ಇತರರಿಗೆ ದುರ್ಭೇದ್ಯವಾಗಿರಬಹುದು. ಆದರೆ ಶ್ರೀರಾಮನ ಬಾಣಗಳಿಗೆ ಎಲ್ಲಿಯೂ ಯಾವ ವಿಧವಾದ ಅಡೆತಡೆಯೂ ಇರುವುದಿಲ್ಲ.॥17॥
ಮೂಲಮ್ - 18
ಕಿಂ ನು ತತ್ ಕಾರಣಂ ಯೇನ ರಾಮೋ ದೃಢಪರಾಕ್ರಮಃ ।
ರಕ್ಷಸಾಪಹೃತಾಂ ಭಾರ್ಯಾಂ ಇಷ್ಟಾಂ ನಾಭ್ಯವಪದ್ಯತೇ ॥
ಅನುವಾದ
ದೃಢಪರಾಕ್ರಮಿಯಾದ ಶ್ರೀರಾಮನು ರಾಕ್ಷಸನಿಂದ ಅಪಹೃತಳಾಗಿರುವ, ತನಗೆ ಇಷ್ಟವಾದ ಭಾರ್ಯೆಯಾಗಿರುವ ನನ್ನನ್ನು ಪುನಃ ಪಡೆಯಲು ಪ್ರಯತ್ನಿಸದಿರುವುದಕ್ಕೆ ಕಾರಣವಾದರೂ ಏನಿರಬಹುದು?॥18॥
ಮೂಲಮ್ - 19
ಇಹಸ್ಥಾಂ ಮಾಂ ನ ಜಾನೀತೇ ಶಂಕೇ ಲಕ್ಷ್ಮಣಪೂರ್ವಜಃ ।
ಜಾನನ್ನ ಪಿ ಹಿ ತೇಜಸ್ವೀ ಧರ್ಷಣಂ ಮರ್ಷಯಿಷ್ಯತಿ ॥
ಅನುವಾದ
ಲಕ್ಷ್ಮಣಾಗ್ರಜನು ನಾನಿಲ್ಲಿರುವುದನ್ನು ತಿಳಿಯಲಾರನೆಂದೇ ಅರಿಯುತ್ತೇನೆ. ಒಂದು ವೇಳೆ ತಿಳಿದಿದ್ದರೆ ತೇಜಸ್ವಿಯಾದ ಶ್ರೀರಾಮನು ರಾವಣನ ಈ ದುರಾಕ್ರಮಣವನ್ನು ಸಹಿಸಿಕೊಂಡಿರುವನೇ? ಎಂದಿಗೂ ಇಲ್ಲ.॥19॥
ಮೂಲಮ್ - 20
ಹೃತೇತಿ ಯೋಧಿಗತ್ವಾ ಮಾಂ ರಾಘವಾಯ ನಿವೇದಯೇತ್ ।
ಗೃಧ್ರರಾಜೋಽಪಿ ಸ ರಣೇ ರಾವಣೇನ ನಿಪಾತಿತಃ ॥
ಅನುವಾದ
ಶ್ರೀರಾಮನ ಬಳಿಗೆ ಹೋಗಿ ‘ಸೀತಾದೇವಿಯನ್ನು ರಾವಣನು ಅಪಹರಿಸಿರುವನು’ ಎಂಬ ವಾರ್ತೆಯನ್ನು ತಿಳಿಸಲು ಅವಕಾಶವುಳ್ಳವನು ಜಟಾಯುವು ಒಬ್ಬನೇ. ಆದರೆ ಅವನೂ ಕೂಡ ಯುದ್ಧದಲ್ಲಿ ರಾವಣನಿಂದ ಹತನಾದನು.॥20॥
ಮೂಲಮ್ - 21
ಕೃತಂ ಕರ್ಮ ಮಹತ್ತೇನ ಮಾಂ ತಥಾಭ್ಯವಪದ್ಯತಾ ।
ತಿಷ್ಠತಾ ರಾವಣದ್ವಂದ್ವೇ ವೃದ್ಧೇನಾಪಿ ಜಟಾಯುಷಾ ॥
ಅನುವಾದ
ಜಟಾಯುವು ವೃದ್ಧನಾದರೂ ನನ್ನನ್ನು ರಕ್ಷಿಸಲಿಕ್ಕಾಗಿ ದ್ವಂದ್ವಯುದ್ಧದಲ್ಲಿ ರಾವಣನನ್ನು ಎದುರಿಸಿದನು. ಅವನು ಮಾಡಿದ ಆ ಒಂದು ಮಹತ್ಕಾರ್ಯವು ಶ್ಲಾಘನೀಯವು.॥21॥
ಮೂಲಮ್ - 22
ಯದಿ ಮಾಮಿಹ ಜಾನೀಯಾದ್ವರ್ತಮಾನಾಂ ಸ ರಾಘವಃ ।
ಅದ್ಯ ಬಾಣೈರಭಿಕ್ರುದ್ಧಃ ಕುರ್ಯಾಲ್ಲೋಕಮರಾಕ್ಷಸಮ್ ॥
ಮೂಲಮ್ - 24
ವಿಧಮೇಚ್ಚ ಪುರೀಂ ಲಂಕಾಂ ಶೋಷಯೇಚ್ಚ ಮಹೋದಧಿಮ್ ।
ರಾವಣಸ್ಯ ಚ ನೀಚಸ್ಯ ಕೀರ್ತಿಂ ನಾಮ ಚ ನಾಶಯೇತ್ ॥
ಅನುವಾದ
ನಾನು ಇಲ್ಲಿರುವುದನ್ನು ರಾಘವನು ಏನಾದರೂ ತಿಳಿದರೆ, ಕ್ರುದ್ಧನಾದ ಅವನು ಕ್ಷಣಮಾತ್ರದಲ್ಲಿ ತೀಕ್ಷ್ಣವಾದ ಬಾಣಗಳಿಂದ ಈ ಲೋಕದಲ್ಲಿ ರಾಕ್ಷಸರಿಲ್ಲದಂತೆ ಮಾಡಿಯಾನು. ಅಷ್ಟೇ ಅಲ್ಲ ಈ ಲಂಕೆಯನ್ನು ಬೂದಿಮಾಡಿ ಬಿಡುವನು. ಈ ಮಹಾ ಸಮುದ್ರವನ್ನು ಇಂಗಿಸಿಬಿಡುವನು. ಈ ನೀಚ ರಾವಣನ ನಾಮ-ರೂಪಗಳು ಉಳಿಯದಂತೆ ಅಳಿಸಿಬಿಡುವನು.॥22-23॥
ಮೂಲಮ್ - 24
ತತೋ ನಿಹತನಾಥಾನಾಂ ರಾಕ್ಷಸೀನಾಂ ಗೃಹೇ ಗೃಹೇ ।
ಯಥಾಹಮೇವಂ ರುದತೀ ತಥಾ ಭೂಯೋ ನ ಸಸಂಶಯಃ ॥
ಅನುವಾದ
ಈಗ ನಾನು ಅಳುತ್ತಿರುವಂತೆ ಲಂಕೆಯ ಪ್ರತಿಯೊಂದು ಮನೆಗಳಲ್ಲಿಯೂ ಅನಾಥರಾದ ರಾಕ್ಷಸಿಯರು ಎದೆ ಬಡಿದುಕೊಂಡು ಅಳುವರು. ಇದರಲ್ಲಿ ಸಂದೇಹವೇ ಇಲ್ಲ.॥24॥
ಮೂಲಮ್ - 25
ಅನ್ವಿಷ್ಯ ರಕ್ಷಸಾಂ ಲಂಕಾಂ ಕುರ್ಯಾದ್ರಾಮಃ ಸಲಕ್ಷ್ಮಣಃ ।
ನ ಹಿ ತಾಭ್ಯಾಂ ರಿಪುರ್ದೃಷ್ಟೋ ಮುಹೂರ್ತಮಪಿ ಜೀವತಿ ॥
ಅನುವಾದ
ಲಕ್ಷ್ಮಣನೊಡಗೂಡಿದ ಶ್ರೀರಾಮನು ರಾಕ್ಷಸರ ಈ ಲಂಕೆಯನ್ನು ಹುಡುಕಿ, ಶತ್ರುಗಳನ್ನು ವಧಿಸುವನು. ಅವರ ಕಣ್ಣಿಗೆ ಬಿದ್ದ ಶತ್ರುವು ಯಾರೇ ಆಗಿರಲೀ ಕ್ಷಣಕಾಲವೂ ಕೂಡ ಪ್ರಾಣ ಸಹಿತ ಉಳಿಯಲಾರನು.॥25॥
ಮೂಲಮ್ - 26
ಚಿತಾಧೂಮಾಕುಲಪಥಾ ಗೃಧ್ರಮಂಡಲಸಂಕುಲಾ ।
ಅಚಿರೇಣ ತು ಲಂಕೇಯಂ ಶ್ಮಶಾನಸದೃಶೀ ಭವೇತ್ ॥
ಅನುವಾದ
ಅತ್ಯಲ್ಪಕಾಲದಲ್ಲೇ ಈ ಲಂಕಾಪಟ್ಟಣವು ಸ್ಮಶಾನದಂತಾಗುತ್ತದೆ. ಚಿತೆಗಳಿಂದ ಹೊರಡುವ ಹೊಗೆಯು ಲಂಕೆಯ ಎಲ್ಲೆಡೆ ತುಂಬಿ ಹೋಗುವುದು. ರಣಹದ್ದುಗಳು ಗುಂಪು-ಗುಂಪಾಗಿ ಆವರಿಸಿಕೊಳ್ಳುವವು.॥26॥
ಮೂಲಮ್ - 27
ಅಚಿರೇಣೈವ ಕಾಲೇನ ಪ್ರಾಪ್ಸ್ಯಾಮ್ಯೇವ ಮನೋರಥಮ್ ।
ದುಷ್ಪ್ರಸ್ಥಾನೋಽಯಮಾಭಾತಿ ಸರ್ವೇಷಾಂ ವೋ ವಿಪರ್ಯಯಃ ॥
ಅನುವಾದ
ಸ್ವಲ್ಪಕಾಲದಲ್ಲೇ ನನ್ನ ಮನೋರಥವು ಈಡೇರಿಯೇ ತೀರುವುದು. ರಾಕ್ಷಸಿಯರೇ! ನಿಮ್ಮ ದುರಾಚಾರವು ನಿಮಗೆ ವಿಪರೀತವಾದ ಪರಿಣಾಮವನ್ನುಂಟುಮಾಡುತ್ತದೆ. ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ.॥27॥
ಮೂಲಮ್ - 28
ಯಾದೃಶಾನೀಹ ದೃಶ್ಯಂತೇ ಲಂಕಾಯಾಮಶುಭಾನಿ ವೈ ।
ಅಚಿರೇಣೈವ ಕಾಲೇನ ಭವಿಷ್ಯತಿ ಹತಪ್ರಭಾ ॥
ಅನುವಾದ
ಈ ಲಂಕೆಯಲ್ಲಿ ಕಂಡುಬರುವ ಅಪಶಕುನಗಳಿಂದ ಇದು ಬಹುಬೇಗನೇ ಖಂಡಿತವಾಗಿ ಪಾಳು ಬೀಳುತ್ತದೆ ಎಂಬುದು ಸೂಚಿಸುತ್ತದೆ.॥28॥
ಮೂಲಮ್ - 29
ನೂನಂ ಲಂಕಾ ಹತೇ ಪಾಪೇ ರಾವಣೇ ರಾಕ್ಷಸಾಧಮೇ ।
ಶೋಷಂ ಯಾಸ್ಯತಿ ದುರ್ಧರ್ಷಾ ಪ್ರಮದಾ ವಿಧವಾ ಯಥಾ ॥
ಅನುವಾದ
ರಾಕ್ಷಸಾಧಿಪತಿಯಾದ ಪಾಪಿಷ್ಠನಾದ ರಾವಣನು ಹತನಾಗುತ್ತಲೇ ಇಷ್ಟರವರೆಗೆ ದುರ್ಭೇದ್ಯವಾಗಿದ್ದ ಈ ಲಂಕೆಯು ಗಂಡ ಸತ್ತ ವಿಧವೆಯಂತೆ ಕಳಾಹೀನವಾಗುತ್ತದೆ. ಇದು ನಿಶ್ಚಯ.॥29॥
ಮೂಲಮ್ - 30
ಪುಣ್ಯೋತ್ಸವಸಮುತ್ಥಾ ಚ ನಷ್ಟಭರ್ತ್ರೀ ಸರಾಕ್ಷಸಿ ।
ಭವಿಷ್ಯತಿ ಪುರೀ ಲಂಕಾ ನಷ್ಟಭರ್ತ್ರೀ ಯಥಾಂಗನಾ ॥
ಅನುವಾದ
ರಾಕ್ಷಸರಿಂದ ತುಂಬಿರುವ, ಮಂಗಳೋತ್ಸವಗಳಿಂದ ಸಮೃದ್ಧವಾದ ಈ ಲಂಕಾಪಟ್ಟಣವು ಅತ್ಯಲ್ಪಕಾಲದಲ್ಲೇ ಒಡೆಯನನ್ನು ಕಳೆದುಕೊಂಡು ಗಂಡನಿಲ್ಲದ ಹೆಂಗಸಿನಂತಾಗುತ್ತದೆ.॥30॥
ಮೂಲಮ್ - 31
ನೂನಂ ರಾಕ್ಷಸಕನ್ಯಾನಾಂ ರುದಂತೀನಾಂ ಗೃಹೇ ಗೃಹೇ ।
ಶ್ರೋಷ್ಯಾಮಿ ನಚಿರಾದೇವ ದುಃಖಾರ್ತಾನಾಮಿಹ ಧ್ವನಿಮ್ ॥
ಅನುವಾದ
ಪ್ರತಿಯೊಂದು ಮನೆಯಲ್ಲೂ ಪತಿವಿಯೋಗ ದುಃಖದಿಂದ ಪೀಡಿತರಾಗಿ ರೋದಿಸುವ ರಾಕ್ಷಸಕನ್ಯೆಯರ ಅಳುವಿನ ಧ್ವನಿಯನ್ನು ನಾನು ಬಹು ಬೇಗನೇ ಕೇಳಲಿದ್ದೇನೆ.॥31॥
ಮೂಲಮ್ - 32
ಸಾಂಧಕಾರಾ ಹತದ್ಯೋತಾ ಹತರಾಕ್ಷಸ ಪುಂಗವಾ ।
ಭವಿಷ್ಯತಿ ಪುರೀ ಲಂಕಾ ನಿರ್ದಗ್ಧಾ ರಾಮಸಾಯಕೈಃ ॥
ಮೂಲಮ್ - 33
ಯದಿ ನಾಮ ಸ ಶೂರೋ ಮಾಂ ರಾಮೋ ರಕ್ತಾಂತಲೋಚನಃ ।
ಜಾನಿಯಾದ್ವರ್ತಮಾನಾಂ ಹಿ ರಾವಣಸ್ಯ ನಿವೇಶನೇ ॥
ಅನುವಾದ
ರಕ್ತಾಂತಲೋಚನನಾದ ಹಾಗೂ ಶೂರನಾದ ಶ್ರೀರಾಮನು ನಾನು ರಾಕ್ಷಸನಾದ ರಾವಣನ ಮನೆಯಲ್ಲಿರುವೆನೆಂಬ ವಾರ್ತೆಯನ್ನು ತಿಳಿದನಾದರೆ, ಅವನ ನಿಶ್ಚಿತವಾದ ಬಾಣಗಳಿಂದ ಈ ಲಂಕಾಪಟ್ಟಣವು ಕ್ಷಣಮಾತ್ರದಲ್ಲಿ ದಗ್ಧವಾಗಿ ಅಂಧಕಾರಮಯವಾಗುತ್ತದೆ. ಕಾಂತಿಹೀನವಾಗುತ್ತದೆ. ಲಂಕೆಯಲ್ಲಿರುವ ಎಲ್ಲ ರಾಕ್ಷಸ ಶ್ರೇಷ್ಠರು ಹತರಾಗುತ್ತಾರೆ.॥32-33॥
ಮೂಲಮ್ - 34
ಅನೇನ ತು ನೃ ಶಂಸೇನ ರಾವಣೇನಾಧಮೇನ ಮೇ ।
ಸಮಯೋ ಯಸ್ತು ನಿರ್ದಿಷ್ಟಃ ತಸ್ಯ ಕಾಲೋಽಯಮಾಗತಃ ॥
ಮೂಲಮ್ - 35
ಸ ಚ ಮೇ ವಿಹಿತೋ ಮೃತ್ಯುರಸ್ಮಿನ್ ದುಷ್ಟೇನ ವರ್ತತೇ ।
ಅಕಾರ್ಯಂ ಯೇ ನ ಜಾನಂತಿ ನೈರ್ಋತಾಃ ಪಾಪಕಾರಿಣಃ ॥
ಮೂಲಮ್ - 36
ಅಧರ್ಮಾತ್ತು ಮಹೋತ್ಪಾತೋ ಭವಿಷ್ಯತಿ ಹಿ ಸಾಂಪ್ರತಮ್ ।
ನೈತೇ ಧರ್ಮಂ ವಿಜಾನಂತಿ ರಾಕ್ಷಸಾಃ ಪಿಶಿತಾಶನಾಃ ॥
ಅನುವಾದ
ಕ್ರೂರಿಯಾದ, ಅಧಮನಾದ ರಾವಣನು ನನ್ನನ್ನು ಸಂಹರಿಸಲು ನಿಗದಿಪಡಿಸಿದ ಕಾಲವೀಗ ಅವನಿಗೇ ಸನ್ನಿಹಿತವಾಗಿದೆ. ಆ ದುಷ್ಟನು ನನಗೆ ವಿಧಿಸಿದ ಮೃತ್ಯುವು ಅವನಿಗೇ ವರ್ತಿಸುತ್ತದೆ. ಪಾಪಕರ್ಮನಿರತರಾದ ರಾಕ್ಷಸರು ಮಾಡಲು ಹೊರಟ ಕಾರ್ಯವನ್ನು ತಿಳಿಯರು. ಹಸಿಮಾಂಸವನ್ನು ತಿನ್ನುವ ಈ ರಾಕ್ಷಸರು ಧರ್ಮವನ್ನು ಅರಿಯರು. ಪರಸ್ತ್ರೀಯ ಅಪಹರಣವೆಂಬ ಅಧರ್ಮ ಕಾರ್ಯದಿಂದಾಗಿ ಈ ಪಟ್ಟಣದಲ್ಲಿ ಬೇಗನೇ ದೊಡ್ಡದಾದ ಅನರ್ಥವೇ ಸಂಭವಿಸುತ್ತದೆ.॥34-36॥
ಮೂಲಮ್ - 37
ಧ್ರುವಂ ಮಾಂ ಪ್ರಾತರಾಶಾರ್ಥೇ ರಾಕ್ಷಸಃ ಕಲ್ಪಯಿಷ್ಯತಿ ।
ಸಾಹಂ ಕಥಂ ಕರಿಷ್ಯಾಮಿ ತಂ ವಿನಾ ಪ್ರಿಯದರ್ಶನಮ್ ॥
ಮೂಲಮ್ - 38
ರಾಮಂ ರಕ್ತಾಂತನಯನಮಪಶ್ಯಂತೀ ಸುದುಃಖಿತಾ ।
ಯದಿ ಕಶ್ಚಿತ್ ಪ್ರದಾತಾ ಮೇ ವಿಷಸ್ಯಾದ್ಯ ಭವೇದಿಹ ॥
ಅನುವಾದ
ಆ ರಾಕ್ಷಸನಾದ ರಾವಣನು ಪ್ರಾತಃಕಾಲದ ಭೋಜನಕ್ಕಾಗಿ ನನ್ನನ್ನು ವಧಿಸಿಯೇ ತೀರುವನು. ಆಗ ಪ್ರಿಯದರ್ಶನನಾದ ರಾಮನಿಲ್ಲದೆ ಅಬಲೆಯಾದ ನಾನು ಏನು ತಾನೇ ಮಾಡಲು ಸಾಧ್ಯವಾಗುತ್ತದೆ. ಅಂದವಾದ ಕಣ್ಣುಗಳುಳ್ಳ ಶ್ರೀರಾಮನ ದರ್ಶನ ಭಾಗ್ಯವು ಇಲ್ಲದೆ ದುಃಖಾರ್ತಳಾಗಿ ಪತಿವಿಯೋಗವನ್ನು ಪಡೆದಿರುವೆ. ನನಗೆ ಯಾರಾದರೂ ಸ್ವಲ್ಪ ವಿಷವನ್ನು ಕೊಡುವ ಮಹಾನುಭಾವನು ಸಿಕ್ಕಿದರೆ ಚೆನ್ನಾಗಿತ್ತು. ಆಗ ಬೇಗನೇ ನಾನು ಪತಿಯನ್ನು ನೋಡದೆ ಯಮನನ್ನು ದರ್ಶಿಸುತ್ತಿದ್ದೆ. ॥37-38॥
ಮೂಲಮ್ - 39
ಕ್ಷಿಪ್ರಂ ವೈವಸ್ವತಂ ದೇವಂ ಪಶ್ಯೇಯಂ ಪತಿನಾ ವಿನಾ ।
ನಾಜಾನಾಜ್ಜೀವತೀಂ ರಾಮಃ ಸ ಮಾಂ ಲಕ್ಷ್ಮಣಪೂರ್ವಜಃ ॥
ಅನುವಾದ
ಲಕ್ಷ್ಮಣಾಗ್ರಜನಾದ ಶ್ರೀರಾಮನಿಗೆ ನಾನಿನ್ನು ಜೀವಿಸಿರುವೆನೆಂದು ಬಹುಶಃ ತಿಳಿಯಲಾರದು. ಹಾಗೇನಾದರೂ ತಿಳಿದಿದ್ದರೆ ಈ ಪೃಥ್ವಿಯಲ್ಲಿ ನನಗಾಗಿ ಹುಡುಕದೇ ಇರುತ್ತಿರಲಿಲ್ಲ. ತಪ್ಪದೆ ಹುಡುಕಿಯೇ ತೀರುವನು.॥39॥
ಮೂಲಮ್ - 40
ಜಾನಂತೌ ತೌ ನ ಕುರ್ಯಾತಾಂ ನೋರ್ವ್ಯಾಂ ಹಿ ಮಮ ಮಾರ್ಗಣಮ್ ।
ನೂನಂ ಮಮೈವ ಶೋಕೇನ ಸ ವೀರೋ ಲಕ್ಷ್ಮಣಾಗ್ರಜಃ ॥
ಅನುವಾದ
ಲಕ್ಷ್ಮಣನಿಗೆ ಅಣ್ಣನಾದ, ವೀರನಾದ ರಾಮನು ನನ್ನ ವಿರಹ ಬಾಧೆಯಿಂದ ಮನುಷ್ಯದೇಹವನ್ನು ತ್ಯಾಗಮಾಡಿ ಖಂಡಿತವಾಗಿ ದೇವಲೋಕಕ್ಕೆ ಹೋಗಿಬಿಟ್ಟಿರಬಹುದು.॥40॥
ಮೂಲಮ್ - 41
ದೇವಲೋಕಮಿತೋ ಯಾತಸ್ತ್ಯಕ್ತ್ವಾ ದೇಹಂ ಮಹೀತಲೇ ।
ಧನ್ಯಾ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ॥
ಅನುವಾದ
ದೇವಲೋಕದಲ್ಲಿರುವ ದೇವತೆಗಳೂ, ಗಂಧರ್ವರೂ, ಸಿದ್ಧರೂ, ಮಹರ್ಷಿಗಳೂ, ರಾಜೀವಲೋಚನನಾದ ನನ್ನ ರಾಮಚಂದ್ರಪ್ರಭುವನ್ನು ದರ್ಶಿಸಿ ಧನ್ಯರಾಗುವರು.॥41॥
ಮೂಲಮ್ - 42
ಮಮ ಪಶ್ಯಂತಿ ಯೇ ನಾಥಂ ರಾಮಂ ರಾಜೀವಲೋಚನಮ್ ।
ಅಥವಾ ನ ಹಿ ತಸ್ಯಾರ್ಥೋ ಧರ್ಮಕಾಮಸ್ಯ ಧೀಮತಃ ॥
ಅನುವಾದ
ಆ ರಾಮಚಂದ್ರಪ್ರಭುವು ಧರ್ಮೈಕದೃಷ್ಟಿಯುಳ್ಳವನು, ಜ್ಞಾನನಿಧಿ. ಅಷ್ಟೇ ಅಲ್ಲ, ಅವನು ರಾಜರ್ಷಿ. ವಸ್ತುತಃ ಪರಮಾತ್ಮನು. ಅಂತಹ ಮಹಾನುಭಾವನಿಗೆ ಭಾರ್ಯೆಯಿಂದ ಏನಾಗಬೇಕು?॥42॥
ಮೂಲಮ್ - 43
ಮಯಾ ರಾಮಸ್ಯ ರಾಜರ್ಷೇರ್ಭಾರ್ಯಯಾ ಪರಮಾತ್ಮನಃ ।
ದೃಶ್ಯಮಾನೇ ಭವೇತ್ ಪ್ರೀತಿಃ ಸೌಹೃದಂ ನಾಸ್ತ್ಯಪಶ್ಯತಃ ॥
ಅನುವಾದ
ಸಾಮಾನ್ಯವಾಗಿ ಲೋಕದಲ್ಲಿ ಜನರಿಗೆ ಕಣ್ಣೆದುರಿಗೆ ಇದ್ದರೇನೇ ಪ್ರೇಮ, ಸೌಹಾರ್ದವು ಉಳಿಯುವುದು. ಅವರು ಕಾಣದಿದ್ದರೆ ಅವರ ಮೇಲಿನ ಪ್ರೇಮವು ಮುಗಿದುಹೋಗುತ್ತದೆ. ಇದು ಕೃತಘ್ನರ ಲಕ್ಷಣವು. ಆದರೆ ಶ್ರೀರಾಮನು ಕೃತಜ್ಞನು. ಆದುದರಿಂದ ಆ ಸ್ವಾಮಿಯು ನನ್ನನ್ನು ಮರೆಯತಕ್ಕವನಲ್ಲ.॥43॥
ಮೂಲಮ್ - 44
ನಾಶಯಂತಿ ಕೃತಘ್ನಾಸ್ತು ನ ರಾಮೋ ನಾಶಯಿಷ್ಯತಿ ।
ಕಿಂ ನು ಮೇ ನ ಗುಣಾಃ ಕೇಚಿತ್ ಕಿಂ ವಾ ಭಾಗ್ಯಕ್ಷಯೋ ಮಮ ॥
ಅನುವಾದ
ಜಗನ್ನಾಥನಾದ ಶ್ರೀರಾಮನಿಗೆ ಪತ್ನಿಯಾಗಿದ್ದರೂ ನಾನು ಈ ದುರವಸ್ಥೆಗೆ ಗುರಿಯಾಗಲು ಕಾರಣವೇನು? ನನ್ನಲ್ಲಿ ಯಾವ ಸದ್ಗುಣಗಳೂ ಇಲ್ಲವೇ? ಅಥವಾ ನನ್ನ ಸೌಭಾಗ್ಯವೆಲ್ಲವೂ ನಾಶವಾಗಿ ಹೋಯಿತೇ?॥44॥
ಮೂಲಮ್ - 45
ಯಾಹಂ ಸೀದಾಮಿ ರಾಮೇಣ ಹೀನಾ ಮುಖ್ಯೇನ ಭಾಮಿನೀ ।
ಶ್ರೇಯೋ ಮೇ ಜೀವಿತಾನ್ಮರ್ತುಂ ವಿಹೀನಾಯಾ ಮಹಾತ್ಮನಃ ॥
ಅನುವಾದ
ನನ್ನ ರಾಮನು ಉದಾತ್ತ ಚರಿತನು, ಶತ್ರುಗಳನ್ನು ನಿರ್ಮೂಲನಗೊಳಿಸುವಲ್ಲಿ ಏಕೈಕ ವೀರನು. ಮಹಾತ್ಮನಾದ ನನ್ನ ಪ್ರಭುವಿಗೆ ದೂರವಾಗಿದ್ದು ಜೀವಿಸಿರುವುದಕ್ಕಿಂತ ಈ ತನುವನ್ನು ತ್ಯಜಿಸುವುದೇ ಮೇಲು.॥45॥
ಮೂಲಮ್ - 46
ರಾಮಾದಕ್ಲಿಷ್ಟಚಾರಿತ್ರಾಚ್ಛೂರಾಚ್ಛತ್ರುನಿಬರ್ಹಣಾತ್ ।
ಅಥವಾ ನ್ಯಸ್ತಶಸ್ತ್ರೌ ತೌ ವನೇ ಮೂಲಫಲಾಶಿನೌ ॥
ಅನುವಾದ
ಅಥವಾ ಮಹಾಪುರುಷರಾದ ಸೋದರರೀರ್ವರೂ, ಅಸ್ತ್ರ-ಶಸ್ತ್ರಗಳನ್ನು ಬದಿಗಿರಿಸಿ, ವನದಲ್ಲಿ ಕಂದ-ಮೂಲಗಳನ್ನು ತಿನ್ನುತ್ತಾ ಮುನಿವೃತ್ತಿಯನ್ನು ಅವಲಂಬಿಸಿರುವರೋ ಏನೋ?॥46॥
ಮೂಲಮ್ - 47
ಭ್ರಾತರೌ ಹಿ ನರಶ್ರೇಷ್ಠೌ ಸಂವೃತ್ತೌ ವನಗೋಚರೌ ।
ಅಥವಾ ರಾಕ್ಷಸೇಂದ್ರೇಣ ರಾವಣೇನ ದುರಾತ್ಮನಾ ॥
ಅನುವಾದ
ಶೂರರೂ, ಸೋದರರೂ, ಆದ ಆ ರಾಮ-ಲಕ್ಷ್ಮಣರನ್ನು ದುರ್ಮಾರ್ಗಿಯಾದ ರಾಕ್ಷಸರಾಜನಾದ ರಾವಣನು ಕಪಟೋಪಾಯದಿಂದ ಸಂಹರಿಸಿಬಿಟ್ಟಿರಬಹುದೇ? (‘‘ಅತಿ ಪ್ರೇಮಃಪಾಪಶಂಕಿ’’ ಅಲ್ಲವೇ?)॥47॥
ಮೂಲಮ್ - 48
ಛದ್ಮನಾ ಸಾದಿತೌ ಶೂರೌ ಭ್ರಾತರೌ ರಾಮಲಕ್ಷ್ಮಣೌ ।
ಸಾಹಮೇವಂ ಗತೇ ಕಾಲೇ ಮರ್ತುಮಿಚ್ಛಾಮಿ ಸರ್ವಥಾ ॥
ಅನುವಾದ
ಅತ್ಯಂತ ದುರ್ಭಾಗ್ಯಳಾಗಿರುವ ನನಗೆ ಇಂತಹ ಆಪತ್ಕಾಲದಲ್ಲಿ ಸರ್ವಥಾ ಸಾಯುವ ಇಚ್ಛೆಯೇ ಉಂಟಾಗುತ್ತದೆ. ಆದರೆ ಇಂತಹ ದುಃಖದ ಸಮಯದಲ್ಲಿಯೂ ನನಗೆ ಮರಣವು ಬರುವುದಿಲ್ಲವಲ್ಲ?॥48॥
ಮೂಲಮ್ - 49
ನ ಚ ಮೇ ವಿಹಿತೋ ಮೃತ್ಯುರಸ್ಮಿನ್ ದುಃಖೇಽಪಿ ವರ್ತತಿ ।
ಧನ್ಯಾಃ ಖಲು ಮಹಾತ್ಮಾನೋ ಮುನಯಸ್ತ್ಯಕ್ತ ಕಿಲ್ಬಿಷಾಃ ॥
ಅನುವಾದ
ಮುನೀಶ್ವರರೂ, ಪುಣ್ಯಪುರುಷರೂ, ಜಿತೇಂದ್ರಿಯರೂ, ಮಹಾನುಭಾವರೂ, ಆದ ಮಹಾತ್ಮರೂ ನಿಜವಾಗಿ ಧನ್ಯರು. ಅವರಿಗೆ ‘‘ಇದು ಪ್ರಿಯವು, ಇದು ಅಪ್ರಿಯವು’’ ಎನ್ನುವ ಧ್ಯಾಸವೇ ಇರುವುದಿಲ್ಲ.*॥49॥
ಟಿಪ್ಪನೀ
- ನ ಪ್ರಹೃಷ್ಯೇತ್ಪ್ರಿಯಂ ಪ್ರಾಪ್ಯ ನೋದ್ವಿಜೇತ್ಪ್ರಾಪ್ಯ ಚಾಪ್ರಿಯಮ್ । ಸ್ಥಿರಬುದ್ಧಿರಮ್ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ॥
(ಗೀತಾ 5/20)
ಯಾವ ಪುರುಷನು ಪ್ರಿಯವಾದುದನ್ನು ಪಡೆದರೂ ಹರ್ಷಿತನಾಗುವುದಿಲ್ಲವೋ ಮತ್ತು ಅಪ್ರಿಯವು ದೊರೆತಾಗಲೂ ಉದ್ವಿಗ್ನವಾಗುವುದಿಲ್ಲವೋ ಆ ಸ್ಥಿರಬುದ್ಧಿಯುಳ್ಳ ಸಂಶಯರಹಿತನಾದ, ಬ್ರಹ್ಮವೇತ್ತನಾದ ಪುರುಷನು ಸಚ್ಚಿದಾನಂದ ಘನ ಪರಬ್ರಹ್ಮಪರಮಾತ್ಮನಲ್ಲಿ ಏಕೀಭಾವದಿಂದ ಸದಾ ಸ್ಥಿತನಾಗಿರುತ್ತಾನೆ.
ಮೂಲಮ್ - 50
ಜಿತಾತ್ಮಾನೋ ಮಹಾಭಾಗಾ ಯೇಷಾಂ ನ ಸ್ತಃ ಪ್ರಿಯಾಪ್ರಿಯೇ ।
ಪ್ರಿಯಾನ್ನ ಸಂಭವೇದ್ದುಃಖಮಪ್ರಿಯಾನ್ನಾಧಿಕಂ ಭಯಮ್ ।
ತಾಭ್ಯಾಂ ಹಿ ಯೇ ವಿಯುಜ್ಯಂತೇ ನಮಸ್ತೇಷಾಂ ಮಹಾತ್ಮನಾಮ್ ॥
ಅನುವಾದ
ಸಾಮಾನ್ಯರಾದವರಿಗೆ ಪ್ರಿಯವಾದ ಕಾರ್ಯವು ನಡೆದರೆ ದುಃಖವಾಗದೆ ಸಂತೋಷವಾಗುತ್ತದೆ. ಅಪ್ರಿಯ ಕಾರ್ಯವು ನಡೆದರೆ ಅಧಿಕವಾದ ಭಯ ದುಃಖವೇ ಆಗುತ್ತದೆ. ಆದರೆ ಪ್ರಿಯಾಪ್ರಿಯಗಳೆರಡನ್ನು ಪರಿತ್ಯಜಿಸಿದವರೂ, ಪ್ರಿಯಾಪ್ರಿಯಗಳೆರಡನ್ನು ಸಮಾನವಾಗಿ ಕಾಣುವವರೂ ಆದ ಮಹಾತ್ಮರಿಗೆ ನನ್ನ ನಮಸ್ಕಾರವು.॥50॥
ಮೂಲಮ್ - 51
ಸಾಹಂ ತ್ಯಕ್ತಾ ಪ್ರಿಯಾರ್ಹೇಣ ರಾಮೇಣ ವಿದಿತಾತ್ಮನಾ ।
ಪ್ರಾಣಾಂಸ್ತ್ಯಕ್ಷ್ಯಾಮಿ ಪಾಪಸ್ಯ ರಾವಣಸ್ಯ ಗತಾ ವಶಮ್ ॥
ಅನುವಾದ
ಆತ್ಮಜ್ಞಾನಿಯಾದ, ಪ್ರಿಯನಾದ, ಶ್ರೀರಾಮನನ್ನು ಅಗಲಿದ್ದು, ಪಾಪಿಷ್ಠನಾದ ರಾವಣನ ವಶಳಾಗಿರುವ ನಾನು ಖಂಡಿತವಾಗಿಯೂ ಪ್ರಾಣಗಳನ್ನು ಪರಿತ್ಯಜಿಸುವೆನು.॥51॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಷಡ್ವಿಂಶಃ ಸರ್ಗಃ ॥ 26 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತಾರನೆಯ ಸರ್ಗವು ಮುಗಿಯಿತು.