वाचनम्
ಭಾಗಸೂಚನಾ
ಸೀತಾದೇವಿಯು ರಾಕ್ಷಸಿಯರ ಮಾತುಗಳನ್ನು ತಿರಸ್ಕರಿಸುತ್ತಾ ಶೋಕಸಂತಪ್ತಳಾಗಿ ವಿಲಪಿಸಿದುದು
ಮೂಲಮ್ - 1
ತಥಾ ತಾಸಾಂ ವದಂತೀನಾಂ ಪರುಷಂ ದಾರುಣಂ ಬಹು ।
ರಾಕ್ಷಸೀನಾಮಸೌಮ್ಯಾನಾಂ ರುರೋದ ಜನಕಾತ್ಮಜಾ ॥
ಅನುವಾದ
ಕ್ರೂರಸ್ವಭಾವದ ಆ ರಾಕ್ಷಸಿಯರು ಹೆಚ್ಚಾಗಿ ಭಯಪಡಿಸುವ ಕಠೋರವೂ, ದಾರುಣವೂ ಆದ ಮಾತುಗಳನ್ನು ಕೇಳಿ ಜಾನಕಿಯು ಅಳತೊಡಗಿದಳು.॥1॥
ಮೂಲಮ್ - 2
ಏವಮುಕ್ತಾ ತು ವೈದೇಹೀ ರಾಕ್ಷಸೀಭಿರ್ಮನಸ್ವಿನೀ ।
ಉವಾಚ ಪರಮತ್ರಸ್ತಾ ಬಾಷ್ಪಗದ್ಗದಯಾ ಗಿರಾ ॥
ಅನುವಾದ
ಭಯಗ್ರಸ್ತಳಾಗಿದ್ದರೂ ಪಾತಿವ್ರತ್ಯದಲ್ಲಿ ದೃಢಚಿತ್ತಳಾಗಿದ್ದ ಸೀತಾದೇವಿಯು ಕಣ್ಣೀರಿಡುತ್ತಾ ಗದ್ಗದವಾದ ಸ್ವರದಿಂದ ಕೂಡಿ ತಡವರಿಸುತ್ತಾ ಹೀಗೆ ಹೇಳಿದಳು.॥2॥
ಮೂಲಮ್ - 3
ನ ಮಾನುಷೀ ರಾಕ್ಷಸಸ್ಯ ಭಾರ್ಯಾ ಭವಿತುಮರ್ಹತಿ ।
ಕಾಮಂ ಖಾದತ ಮಾಂ ಸರ್ವಾ ನ ಕರಿಷ್ಯಾಮಿ ವೋ ವಚಃ ॥
ಅನುವಾದ
ರಾಕ್ಷಸಸ್ತ್ರೀಯರೇ! ಮನುಷ್ಯ ಸ್ತ್ರೀಯು ರಾಕ್ಷಸನ ಭಾರ್ಯೆಯಾಗಲು ಖಂಡಿತವಾಗಿ ಅರ್ಹಳಲ್ಲ. ನೀವು ಬಯಸುವಿರಾದರೆ ಎಲ್ಲರೂ ನನ್ನನ್ನು ತಿಂದು ಬಿಡಿ. ನಾನು ಮಾತ್ರ ನಿಮ್ಮ ಮಾತಿನಂತೆ ಎಂದಿಗೂ ನಡೆದುಕೊಳ್ಳುವುದಿಲ್ಲ.॥3॥
ಮೂಲಮ್ - 4
ಸಾ ರಾಕ್ಷಸೀಮಧ್ಯಗತಾ ಸೀತಾ ಸುರಸುತೋಪಮಾ ।
ನ ಶರ್ಮ ಲೇಭೇ ದುಃಖಾರ್ತಾ ರಾವಣೇನ ಚ ತರ್ಜಿತಾ ॥
ಅನುವಾದ
ರಾವಣನಿಂದ ಭಯಪಡಿಸಲ್ಪಟ್ಟ ದೇವಕನ್ಯೆಯಂತಿದ್ದ ಆ ಸೀತಾದೇವಿಯು ರಾಕ್ಷಸಸ್ತ್ರೀಯರ ಮಧ್ಯದಲ್ಲಿ ಬಿಕ್ಕಿ-ಬಿಕ್ಕಿಅಳುತ್ತಾ ದುಃಖಾರ್ತೆಯಾಗಿ ಶಾಂತಿಯನ್ನು ಕಳಕೊಂಡಿದ್ದಳು.॥4॥
ಮೂಲಮ್ - 5
ವೇಪತೇ ಸ್ಮಾಧಿಕಂ ಸೀತಾ ವಿಶಂತೀವಾಂಗಮಾತ್ಮನಃ ।
ವನೇ ಯೂಥ ಪರಿಭ್ರಷ್ಟಾ ಮೃಗೀ ಕೋಕೈರಿವಾರ್ದಿತಾ ॥
ಅನುವಾದ
ಅರಣ್ಯದಲ್ಲಿ ಗುಂಪಿನಿಂದ ತಪ್ಪಿಸಿಕೊಂಡು ತೋಳಗಳ ಮಧ್ಯದಲ್ಲಿ ಸಿಕ್ಕಿ ಪೀಡಿಸಲ್ಪಡುವ ಜಿಂಕೆಯಂತೆ ಸೀತಾದೇವಿಯು ತನ್ನ ಶರೀರವನ್ನು ಮುದುಡಿಸಿಕೊಂಡು ಗಡ-ಗಡನೆ ನಡುಗುತ್ತಿದ್ದಳು.॥5॥
ಮೂಲಮ್ - 6
ಸಾ ತ್ವಶೋಕಸ್ಯ ವಿಪುಲಾಂ ಶಾಕಾಮಾಲಂಬ್ಯ ಪುಷ್ಪಿತಾಮ್ ।
ಚಿಂತಯಾಮಾಸ ಶೋಕೇನ ಭರ್ತಾರಂ ಭಗ್ನಮಾನಸಾ ॥
ಅನುವಾದ
ಶೋಕಾಭಿಭೂತೆಯಾಗಿ, ಭಗ್ನಮಾನಸಳಾದ ಸೀತಾದೇವಿಯು ಚೆನ್ನಾಗಿ ಅರಳಿದ ಹೂವು ಗಳಿಂದೊಡಗೊಂಡ ಅಶೋಕ ವೃಕ್ಷದ ಒಂದು ದೊಡ್ಡ ಟೊಂಗೆಯನ್ನು ಆಧರಿಸಿಕೊಂಡು ಪತಿಯನ್ನೇ ಚಿಂತಿಸುತ್ತಾ ಇದ್ದಳು.॥6॥
ಮೂಲಮ್ - 7
ಸಾ ಸ್ನಾಪಯಂತೀ ವಿಪುಲೌ ಸ್ತನೌ ನೇತ್ರಜಲಸ್ರವೈಃ ।
ಚಿಂತಯಂತೀ ನ ಶೋಕಸ್ಯ ತದಾಂತಮಧಿಗಚ್ಛತಿ ॥
ಅನುವಾದ
ಸೀತಾದೇವಿಯು ತನ್ನ ಪತಿಯನ್ನು ಸ್ಮರಿಸುತ್ತಾ, ಕಣ್ಣಿರು ಸುರಿಸುತ್ತಾ ವಿಲಪಿಸುತ್ತಿದ್ದಳು. ನಿರಂತರವಾಗಿ ಹರಿಯುವ ಕಣ್ಣೀರಧಾರೆಯಿಂದ ಅವಳ ವಕ್ಷಸ್ಥಳವು ತೊಯ್ದುಹೋಗಿತ್ತು. ಅವಳ ಶೋಕಕ್ಕೆ ಅಂತ್ಯವೇ ಇಲ್ಲದಂತಾಯಿತು.॥7॥
ಮೂಲಮ್ - 8
ಸಾ ವೇಪಮಾನಾ ಪತಿತಾ ಪ್ರವಾತೇ ಕದಲೀ ಯಥಾ ।
ರಾಕ್ಷಸೀನಾಂ ಭಯತ್ರಸ್ತಾ ವಿಷಣ್ಣವದನಾಭವತ್ ॥
ಅನುವಾದ
ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿದ ಬಾಳೆಯು ನೆಲಕ್ಕುರುಳುವಂತೆ ಆ ಸೀತಾದೇವಿಯು ರಾಕ್ಷಸ ಸ್ತ್ರೀಯರ ಭಯದಿಂದ ನಡುಗುತ್ತಾ ನೆಲದ ಮೇಲೆ ಕುಸಿದುಬಿದ್ದಳು.॥8॥
ಮೂಲಮ್ - 9
ತಸ್ಯಾಃ ಸಾ ದೀರ್ಘವಿಪುಲಾ ವೇಪಂತ್ಯಾ ಸೀತಯಾ ತದಾ ।
ದದೃಶೇ ಕಂಪಿನೀ ವೇಣೀ ವ್ಯಾಲೀವ ಪರಿಸರ್ಪತೀ ॥
ಅನುವಾದ
ರಾಕ್ಷಸಿಯರ ಭಯದಿಂದಾಗಿ ಅವಳ ಮುಖವು ಬಹಳ ಬಾಡಿಹೋಗಿತ್ತು. ಉದ್ದವಾಗಿಯೂ, ದಪ್ಪವಾಗಿಯೂ ಇದ್ದ ಸೀತೆಯ ಜಡೆಯು ಡೊಂಕು-ಡೊಂಕಾಗಿ ಹರಿದುಹೋಗುತ್ತಿರುವ ಹೆಣ್ಣುಸರ್ಪದಂತೆ ಅಲ್ಲಾಡುತ್ತಿತ್ತು.॥9॥
ಮೂಲಮ್ - 10
ಸಾ ನಿಃಶ್ವಸಂತೀ ದುಃಖಾರ್ತಾ ಶೋಕೋಪಹತಚೇತನಾ ।
ಆರ್ತಾ ವ್ಯಸೃಜದಶ್ರೂಣಿ ಮೈಥಿಲೀ ವಿಲಲಾಪ ಹ ॥
ಅನುವಾದ
ಸೀತಾದೇವಿಯು ತನ್ನ ಪತಿಯ ಅಗಲುವಿಕೆಯಿಂದ ಹೆಚ್ಚಾಗಿ ಪರಿತಪಿಸುತ್ತಿದ್ದಳು. ಅದರಲ್ಲಿಯೂ ರಾಕ್ಷಸಸ್ತ್ರೀಯರ ಮಾತುಗಳು ಶೂಲದಂತೆ ಅವಳನ್ನು ಚುಚ್ಚುತ್ತಿದ್ದವು. ಆಗ ಅವಳು ನಿಟ್ಟುಸಿರು ಬಿಡುತ್ತಾ, ಕಣ್ಣೀರು ಸುರಿಸುತ್ತಾ ಹೀಗೆ ವಿಲಾಪಿಸತೊಡಗಿದಳು.॥10॥
ಮೂಲಮ್ - 11
ಹಾ ರಾಮೇತಿ ಚ ದುಃಖಾರ್ತಾ ಹಾ ಪುನರ್ಲಕ್ಷ್ಮಣೇತಿ ಚ ।
ಹಾ ಶ್ವಶ್ರು ಮಮ ಕೌಸಲ್ಯೆ ಹಾ ಸುಮಿತ್ರೇತಿ ಭಾಮಿನೀ ॥
ಅನುವಾದ
ಒಮ್ಮೆ ದುಃಖಾರ್ತಳಾಗಿ ಹಾ ರಾಮಾ! ಎನ್ನುವಳು. ಮತ್ತೊಮ್ಮೆ ಹಾ ಲಕ್ಷ್ಮಣಾ! ಎನ್ನುವಳು. ಅಯ್ಯೋ ಅತ್ತೆಯಾದ ಕೌಸಲ್ಯಾ ದೇವೀ! ಅಯ್ಯೋ ಸುಮಿತ್ರಾದೇವೀ! ನನ್ನ ಸ್ಥಿತಿಯು ಹೀಗಾಯಿತಲ್ಲ! ಎಂದು ಗೋಳಾಡುವಳು.॥11॥
ಮೂಲಮ್ - 12
ಲೋಕಪ್ರವಾದಃ ಸತ್ಯೋಯಂ ಪಂಡಿತೈಃ ಸಮುದಾಹೃತಃ ।
ಅಕಾಲೇ ದುರ್ಲಭೋ ಮೃತ್ಯುಃ ಸ್ತ್ರಿಯಾ ವಾ ಪುರುಷಸ್ಯ ವಾ ॥
ಮೂಲಮ್ - 13
ಯತ್ರಾಹಮೇವಂ ಕ್ರೂರಾಭೀ ರಾಕ್ಷಸೀಭಿರಿಹಾರ್ದಿತಾ ।
ಜೀವಾಮಿ ಹೀನಾ ರಾಮೇಣ ಮುಹೂರ್ತಮಪಿ ದುಃಖಿತಾ ॥
ಅನುವಾದ
‘‘ಸ್ತ್ರೀಯರಿಗಾಗಲೀ, ಪುರುಷರಿಗಾಗಲೀ, ಬಯಸಿದಾಗ ಮರಣವು ಸಂಭವಿಸುವುದಿಲ್ಲ’’ ಎಂಬ ಪ್ರಾಜ್ಞರು ಉದಾಹರಿಸುವ ಹಾಗೂ ಲೋಕದ ಜನರಾಡಿಕೊಳ್ಳುವ ಮಾತು ಸತ್ಯವಾಗಿಯೇ ಇದೆ. ರಾಮನಿಂದ ಅಗಲಿದ, ಈ ವಿಧವಾಗಿ ರಾಕ್ಷಸಸ್ತ್ರೀಯರು ಬಾಧೆಪಡಿಸುತ್ತಿರುವ ನಾನು ಕ್ಷಣ ಕಾಲವಾದರೂ ಜೀವಿಸಿ ಇರಬಾರದು. ಆದರೆ ಇಷ್ಟಾದರೂ ನಾನು ಜೀವಿಸಿದ್ದೇನಲ್ಲ! ಇದರಿಂದ ಪಂಡಿತರ ಮಾತು ನಿಶ್ಚಯವೆಂದೇ ಕಾಣುತ್ತದೆ.॥12-13॥
ಮೂಲಮ್ - 14
ಏಷಾಲ್ಪಪುಣ್ಯಾ ಕೃಪಣಾ ವಿನಶಿಷ್ಯಾಮ್ಯನಾಥವತ್ ।
ಸಮುದ್ರಮಧ್ಯೇ ನೌಃ ಪೂರ್ಣಾ ವಾಯುವೇಗೈರಿವಾಹತಾ ॥
ಅನುವಾದ
ಸಾಮಗ್ರಿಗಳಿಂದ ತುಂಬಿರುವ ಹಡಗು ಸಮುದ್ರ ಮಧ್ಯದಲ್ಲಿ ಬಿರುಗಾಳಿಯ ಬಡಿತದಿಂದ ಮುಳುಗಿಹೋಗುವಂತೆ, ದೀನಾವಸ್ಥೆಗೆ ಗುರಿಯಾದ ನಾನು ಶೋಕಭಾರದಿಂದ ವಿನಾಶ ಹೊಂದುವೆನು. ನಿಜವಾಗಿ ನಾನು ದುರದೃಷ್ಟವಂತೆಯೇ ಆಗಿರುವೆನು.॥14॥
ಮೂಲಮ್ - 15
ಭರ್ತಾರಂ ತಮಪಶ್ಯಂತೀ ರಾಕ್ಷಸೀವಶಮಾಗತಾ ।
ಸೀದಾಮಿ ಖಲು ಶೋಕೇನ ಕೂಲಂ ತೋಯಹತಂ ಯಥಾ ॥
ಅನುವಾದ
ರಾಕ್ಷಸಿಯರ ಅಧೀನದಲ್ಲಿರುವ ನಾನು, ಮಹಾಮಹಿಮನಾದ ಪತಿಯನ್ನು ಕಾಣದೆ, ಜಲಪ್ರವಾಹದಿಂದ ಶಿಥಿಲಗೊಂಡ ದಡಗಳು ಕೊಚ್ಚಿಕೊಂಡುಹೋಗುವಂತೆ ಈ ಪತಿವಿರಹ ಶೋಕದಿಂದಲೇ ವಿನಾಶಹೊಂದುವೆನು.॥15॥
ಮೂಲಮ್ - 16
ತಂ ಪದ್ಮದಲಪತ್ರಾಕ್ಷಂ ಸಿಂಹವಿಕ್ರಾಂತಗಾಮಿನಮ್ ।
ಧನ್ಯಾಃ ಪಶ್ಯಂತಿ ಮೇ ನಾಥಂ ಕೃತಜ್ಞಂ ಪ್ರಿಯವಾದಿನಮ್ ॥
ಅನುವಾದ
ನನ್ನ ಪತಿಯಾದ ಶ್ರೀರಾಮನು ಪದ್ಮದಳಾಯನೇತ್ರನೂ, ಸಿಂಹದಂತೆ ಪರಾಕ್ರಮಶಾಲಿಯೂ ಹಾಗೂ ಗಂಭೀರ ನಡೆಯುಳ್ಳವನೂ, ಕೃತಜ್ಞನೂ, ಪ್ರಿಯವಾಗಿ ಮಾತಾಡುವವನೂ ಆದ ಆ ಪ್ರಭುವನ್ನು ದರ್ಶಿಸುವವರೇ ಧನ್ಯರು.॥16॥
ಮೂಲಮ್ - 17
ಸರ್ವಥಾ ತೇನ ಹೀನಾಯಾ ರಾಮೇಣ ವಿದಿತಾತ್ಮನಾ ।
ತೀಕ್ಷ್ಣಂ ವಿಷಮಿವಾಸ್ವಾದ್ಯ ದುರ್ಲಭಂ ಮಮ ಜೀವಿತಮ್ ॥
ಅನುವಾದ
ಸದ್ಗುಣಸಂಪನ್ನನೂ, ಜಗದ್ವಿಖ್ಯಾತನೂ ಆದ ಶ್ರೀರಾಮನಿಂದ ಅಗಲಿದವಳಾದ ನಾನು-ತೀಕ್ಷ್ಣವಾದ ವಿಷವನ್ನು ಕುಡಿದವನು ಹೆಚ್ಚು ಕಾಲ ಜೀವಿಸಿರಲಾರನೋ ಹಾಗೆಯೇ ಹೆಚ್ಚುಕಾಲ ಬದುಕಿರಲಾರೆನು.॥17॥
ಮೂಲಮ್ - 18
ಕೀದೃಶಂ ತು ಮಯಾ ಪಾಪಂ ಪುರಾ ಜನ್ಮಾಂತರೇ ಕೃತಮ್ ।
ಯೇನೇದಂ ಪ್ರಾಪ್ಯತೇ ದುಃಖಂ ಮಯಾಘೋರಂ ಸುದಾರುಣಮ್ ॥
ಅನುವಾದ
ನಾನು ಪೂರ್ವಜನ್ಮದಲ್ಲಿ ಎಂತಹ ಮಹಾಪಾಪವನ್ನು ಮಾಡಿರುವೆನೋ ತಿಳಿಯದು. ಅದರಿಂದಲೇ ಈಗ ನನಗೆ ಭಯಂಕರವಾದ, ಅತಿ ದಾರುಣವಾದ ಇಂತಹ ಸ್ಥಿತಿಯು ಉಂಟಾಗಿದೆ.॥18॥
ಮೂಲಮ್ - 19
ಜೀವಿತಂ ತ್ಯಕ್ತುಮಿಚ್ಛಾಮಿ ಶೋಕೇನ ಮಹತಾ ವೃತಾ ।
ರಾಕ್ಷಸೀಭಿಶ್ಚ ರಕ್ಷಂತ್ಯಾ ರಾಮೋ ನಾಸಾದ್ಯತೇ ಮಯಾ ॥
ಅನುವಾದ
ರಾಕ್ಷಸ ಸ್ತ್ರೀಯರ ಅಧೀನದಲ್ಲಿರುವ ನಾನು ಶ್ರೀರಾಮನನ್ನು ಸೇರಲಾರೆನು. ಆದುದರಿಂದ ಇಂತಹ ವಿರಹ ಶೋಕದಿಂದ ಸಂಕಟಪಡುತ್ತಿರುವ ನಾನು ಜೀವನವನ್ನು ಮುಗಿಸುವುದೇ ಯುಕ್ತವು.॥19॥
ಮೂಲಮ್ - 20
ಧಿಗಸ್ತು ಖಲು ಮಾನುಷ್ಯಂ ಧಿಗಸ್ತು ಪರವಶ್ಯತಾಮ್ ।
ನ ಶಕ್ಯಂ ಯತ್ ಪರಿತ್ಯಕ್ತುಮಾತ್ಮಚ್ಛಂದೇನ ಜೀವಿತಮ್ ॥
ಅನುವಾದ
ನನ್ನ ಜೀವಿತವು ನನ್ನ ಪತಿಯಾದ ಶ್ರೀರಾಮನ ಅಧೀನವಾಗಿದೆ. ಭರ್ತೃಶರೀರವಾದ ಇದನ್ನು ಇಷ್ಟಾನುಸಾರವಾಗಿ ತ್ಯಜಿಸಲು ನನಗೆ ಅಧಿಕಾರವಿಲ್ಲ. ಮನುಷ್ಯತ್ವವು ಪಾಪಪುಣ್ಯಗಳನ್ನು ವಿಂಗಡಿಸುವಲ್ಲಿ ವಿಚಕ್ಷಣವಾದ ವಿವೇಕಯುತವಾಗಿದೆ. ಅದರಿಂದ ಈ ಜೀವಿತವನ್ನು ತ್ಯಜಿಸುವುದಕ್ಕೆ ನನಗೆ ಅವಕಾಶವಿಲ್ಲ.*॥20॥
ಟಿಪ್ಪನೀ
- ಈ ಮಾನವಜನ್ಮವನ್ನು ಕೊಟ್ಟವನು ಭಗವಂತನು. ಅದರಿಂದ ಇದು ಭಗವದಧೀನವಾಗಿದೆ. ಅಂದರೆ ಪರಾಧೀನವಾಗಿದೆ. ಇದರಿಂದ ನಮ್ಮದಲ್ಲದ ಇದನ್ನು ತ್ಯಜಿಸುವ ಅಧಿಕಾರ ಯಾವ ಮನುಷ್ಯನಿಗೂ ಇಲ್ಲ. ಅದಕ್ಕಾಗಿ ಯಾರೂ ಆತ್ಮಹತ್ಯೆಯನ್ನು ಮಾಡಿಕೊಳ್ಳಬಾರದು. ಆತ್ಮಹತ್ಯೆಯು ಮಹಾಪಾಪವೂ, ಭಗವದಪಚಾರವೂ ಆಗಿದೆ.
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪಂಚವಿಂಶಃ ಸರ್ಗಃ ॥ 25 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತೈದನೆಯ ಸರ್ಗವು ಮುಗಿಯಿತು.