०२४ सीता-राक्षसीसंवादः

वाचनम्
ಭಾಗಸೂಚನಾ

ಸೀತಾದೇವಿಯು ರಾಕ್ಷಸಿಯರ ಮಾತನ್ನು ತಿರಸ್ಕರಿಸಿದುದು, ರಾಕ್ಷಸಿಯರು ಅವಳನ್ನು ಕೊಲ್ಲುವುದಾಗಿ ಬೆದರಿಸಿದುದು

ಮೂಲಮ್ - 1

ತತಃ ಸೀತಾಂ ಸಮಸ್ತಾಸ್ತಾ ರಾಕ್ಷಸ್ಯೋ ವಿಕೃತಾನನಾಃ ।
ಪರುಷಂ ಪರುಷಾ ನಾರ್ಯ ಊಚುಸ್ತಾಂ ವಾಕ್ಯಮಪ್ರಿಯಮ್ ॥

ಅನುವಾದ

ವಿಕೃತಾನನೆಯರಾದ ಆ ರಾಕ್ಷಸ ಸ್ತ್ರೀಯರು ಸೀತಾದೇವಿಯ ಹತ್ತಿರ ಸರಿದು ಕಠೋರವಾದ ಮಾತುಗಳು ತಟ್ಟದೇ ಇರುವ ಆ ಸುಕುಮಾರಿಯನ್ನು ಗದರಿಸಿ ಅಪ್ರಿಯವಾದ ಮಾತುಗಳನ್ನು ಪುನಃ ಹೇಳತೊಡಗಿದರು.॥1॥

ಮೂಲಮ್ - 2

ಕಿಂ ತ್ವಮಂತಃಪುರೇ ಸೀತೇ ಸರ್ವಭೂತಮನೋಹರೇ ।
ಮಹಾರ್ಹಶಯನೋಪೇತೇ ನ ವಾಸಮನುಮನ್ಯಸೇ ॥

ಅನುವಾದ

ಎಲೈ ಸೀತೆ! ರಾವಣನ ಅಂತಃಪುರವು ಎಲ್ಲರಿಗೂ ಆಹ್ಲಾದಕರವಾಗಿದ್ದು ಮನೋಹರವಾಗಿದೆ. ಅತ್ಯುತ್ತಮವಾದ ಹಂಸ ತೂಲಿಕಾತಲ್ಪಯುಕ್ತವಾದ ಅದರಲ್ಲಿ ವಾಸಿಸಲು ನೀನೇಕೆ ಒಪ್ಪಿಕೊಳ್ಳುವುದಿಲ್ಲ?.॥2॥

ಮೂಲಮ್ - 3

ಮಾನುಷೀ ಮಾನುಷಸ್ಯೈವ ಭಾರ್ಯಾತ್ವಂ ಬಹು ಮನ್ಯಸೇ ।
ಪ್ರತ್ಯಾಹರ ಮನೋ ರಾಮಾನ್ನ ತ್ವಂ ಜಾತು ಭವಿಷ್ಯಸಿ ॥

ಅನುವಾದ

ಮಾನವ ಕಾಂತೆಯಾದ ನೀನು ಸಾಮಾನ್ಯ ಮನುಷ್ಯನೊಬ್ಬನ ಹೆಂಡತಿಯಾಗಿರುವುದನ್ನು ದೊಡ್ಡದೆಂದು ತಿಳಿದುಕೊಂಡಿರುವೆ. ಇದು ಸರಿಯಲ್ಲ. ನೀನು ಎಂದೂ, ಯಾವ ವಿಧದಿಂದಲೂ ಪುನಃ ರಾಮನನ್ನು ಸೇರಲಾರೆ. ಆದುದರಿಂದ ನಿನ್ನ ಮನಸ್ಸು ಅವನಿಂದ ಹಿಂದಿರುಗಿಸು.॥3॥

ಮೂಲಮ್ - 4

ತ್ರೈಲೋಕ್ಯವಸುಭೋಕ್ತಾರಂ ರಾವಣಂ ರಾಕ್ಷಸೇಶ್ವರಮ್ ।
ಭರ್ತಾರಮುಪಸಂಗಮ್ಯ ವಿಹರಸ್ವ ಯಥಾಸುಖಮ್ ॥

ಅನುವಾದ

ಮೂರು ಲೋಕಗಳ ಐಶ್ವರ್ಯವನ್ನು ಉಪಭೋಗಿಸುತ್ತಿರುವ ರಾಕ್ಷಸೇಶ್ವರನಾದ ರಾವಣನನ್ನು ಪತಿಯನ್ನಾಗಿಸಿಕೊಂಡು ಸುಖವಾಗಿ ಅವನೊಡನೆ ವಿಹರಿಸು.॥4॥

ಮೂಲಮ್ - 5

ಮಾನುಷೀ ಮಾನುಷಂ ತಂ ತು ರಾಮಮಿಚ್ಛಸಿ ಶೋಭನೇ ।
ರಾಜ್ಯಾದ್ಭ್ರಷ್ಟಮಸಿದ್ಧಾರ್ಥಂ ವಿಕ್ಲವಂ ತ್ವಮನಿಂದಿತೇ ॥

ಅನುವಾದ

ಎಲೈ ಮಂಗಳ ಸ್ವರೂಪಳೆ! ಪೂಜ್ಯಳೇ! ಮನುಷ್ಯಮಾತ್ರಳಾಗಿರುವ ನಿನಗೆ ಇಂತಹ ಸುವರ್ಣಾವಕಾಶ ದೊರೆತಾಗ, ಹುಲು ಮನುಜನಾದ ರಾಜ್ಯಭ್ರಷ್ಟನಾದ, ಅಪ್ರಯೋಜಕನಾದ, ಶಕ್ತಿಹೀನನಾದ ಆ ರಾಮನನ್ನೇ ಪುನಃ ಸೇರಲು ಬಯಸುತ್ತಿರುವೆ. ನಿಶ್ಚಯವಾಗಿಯೂ ನೀನು ಮೂಢಳೇ ಸರಿ.’’॥5॥

ಮೂಲಮ್ - 6

ರಾಕ್ಷಸೀನಾಂ ವಚಃ ಶ್ರುತ್ವಾ ಸೀತಾ ಪದ್ಮನಿಭೇಕ್ಷಣಾ ।
ನೇತ್ರಾಭ್ಯಾಮಶ್ರುಪೂರ್ಣಾಭ್ಯಾಮಿದಂ ವಚನಮಬ್ರವೀತ್ ॥

ಅನುವಾದ

ಕಮಲಲೋಚನೆಯಾದ ಸೀತಾದೇವಿಯು ರಾಕ್ಷಸಿಯರ ಕರ್ಣ ಕರ್ಕಶವಾದ ಮಾತುಗಳನ್ನು ಕೇಳಿ ಕಣ್ಣಿರನ್ನು ತುಂಬಿಕೊಂಡು ಹೀಗೆಂದಳು.॥6॥

(ಶ್ಲೋಕ - 7

ಮೂಲಮ್

ಯದಿದಂ ಲೋಕವಿದ್ವಿಷ್ಟಮುದಾಹರಥ ಸಂಗತಾಃ ।
ನೈ ತನ್ಮನಸಿ ವಾಕ್ಯಂ ಮೇ ಕಿಲ್ಬಿಷಂ ಪ್ರತಿಭಾತಿ ವಃ ॥

ಅನುವಾದ

‘‘ರಾಕ್ಷಸಿಯರೇ! ನೀವೆಲ್ಲರೂ ಸೇರಿ ಹೇಳುತ್ತಿರುವ ಮಾತುಗಳು ಲೋಕಮರ್ಯಾದೆಗೆ ವಿರುದ್ಧವೂ, ಪಾಪಯುಕ್ತವೂ ಆಗಿದೆ. ಇವು ನನ್ನ ಮನಸ್ಸಿಲ್ಲಿ ಕ್ಷಣಕಾಲವೂ ಉಳಿಯುವುದಿಲ್ಲ. ನೀವು ಹೇಳುವ ಯಾವ ಮಾತೂ ನನ್ನ ಮನಸ್ಸಿಗೆ ಹಿಡಿಸುವುದಿಲ್ಲ.॥7॥

ಮೂಲಮ್ - 8

ನ ಮಾನುಷೀ ರಾಕ್ಷಸಸ್ಯ ಭಾರ್ಯಾ ಭವಿತುಮರ್ಹತಿ ।
ಕಾಮಂ ಖಾದತ ಮಾಂ ಸರ್ವಾ ನ ಕರಿಷ್ಯಾಮಿ ವೋ ವಚಃ ॥

ಅನುವಾದ

ಮಾನವ ಕಾಂತೆಯಾದ ನಾನು ರಾಕ್ಷಸನ ಪತ್ನಿಯಾಗಲಾರೆ. ನೀವೆಲ್ಲರೂ ಸೇರಿ ನನ್ನನ್ನು ಇಷ್ಟ ಬಂದಂತೆ ತಿಂದುಹಾಕಿರಿ. ನಾನು ನಿಮ್ಮ ಮಾತಿನಂತೆ ನಡೆಯಲಾರೆನು.॥8॥

ಮೂಲಮ್ - 9

ದೀನೋ ವಾ ರಾಜ್ಯಹೀನೋ ವಾ ಯೋ ಮೇ ಭರ್ತಾ ಸ ಮೇ ಗುರುಃ ।
ತಂ ನಿತ್ಯಮನುರಕ್ತಾಸ್ಮಿ ಯಥಾ ಸೂರ್ಯಂ ಸುವರ್ಚಲಾ ॥

ಅನುವಾದ

ನನ್ನ ಪತಿಯು ದೀನನಾಗಿರಲೀ, ರಾಜ್ಯಹೀನನಾಗಿರಲೀ, ಅವನೇ ನನಗೆ ಗುರುವು. ಸುವರ್ಚಲಾ ದೇವಿಯು ಸೂರ್ಯನಲ್ಲಿರುವಂತೆ ನಾನು ಸದಾ ಕಾಲ ಪತಿಯಲ್ಲೇ ಅನುರಕ್ತಳಾಗಿರುವವಳು.॥9॥

ಮೂಲಮ್ - 10

ಯಥಾ ಶಚೀ ಮಹಾಭಾಗಾ ಶಕ್ರಂ ಸಮುಪತಿಷ್ಠತಿ ।
ಅರುಂಧತೀ ವಸಿಷ್ಠಂ ಚ ರೋಹಿಣೀ ಶಶಿನಂ ಯಥಾ ॥

ಮೂಲಮ್ - 11

ಲೋಪಾಮುದ್ರಾ ಯಥಾಗಸ್ತ್ಯಂ ಸುಕನ್ಯಾ ಚ್ಯವನಂ ಯಥಾ ।
ಸಾವಿತ್ರೀ ಸತ್ಯವಂತಂ ಚ ಕಪಿಲಂ ಶ್ರೀಮತೀ ಯಥಾ ॥

ಮೂಲಮ್ - 12

ಸೌದಾಸಂ ಮದಯಂತೀವ ಕೇಶಿನೀ ಸಗರಂ ಯಥಾ ।
ನೈಷಧಂ ದಮಯಂತೀವ ಭೈಮೀ ಪತಿಮನುವ್ರತಾ ॥

ಅನುವಾದ

ಶಚಿದೇವಿಯು ಇಂದ್ರನನ್ನು ಅನುಸರಿಸುವಂತೆ, ಮಹಾಸಾಧ್ವಿ ಅರುಂಧತಿಯು ವಸಿಷ್ಠರನ್ನೂ, ರೋಹಿಣಿಯು ಚಂದ್ರನನ್ನೂ, ಲೋಪಾಮುದ್ರೆಯು ಅಗಸ್ತ್ಯರನ್ನೂ, ಸುಕನ್ಯೆಯು ಚ್ಯವನನನ್ನೂ, ಸಾವಿತ್ರಿಯು ಸತ್ಯವಂತನನ್ನೂ, ಶ್ರೀಮತಿಯು ಕಪಿಲ ಮಹರ್ಷಿಯನ್ನೂ, ಮದಯಂತಿಯು ಸೌದಾಸನನ್ನೂ. ಕೇಶಿನಿಯು ಸಗರನನ್ನೂ, ಭೀಮರಾಜನ ಮಗಳಾದ ಪತಿವ್ರತೆಯಾದ ದಮಯಂತಿಯು ನಳನನ್ನೂ, ಅನುಸರಿಸುವಂತೆ ನಾನು ನನ್ನ ಪತಿಯಾದ ಇಕ್ಷ್ವಾಕು ಕುಲತಿಲಕನಾದ ಶ್ರೀರಾಮನನ್ನೇ ಅನುಸರಿಸಿಕೊಂಡಿರುತ್ತೇನೆ.’’॥9-12॥

ಮೂಲಮ್ - 13

ತಥಾಹಮಿಕ್ಷ್ವಾಕುವರಂ ರಾಮಂ ಪತಿಮನುವ್ರತಾ ।
ಸೀತಾಯಾ ವಚನಂ ಶ್ರುತ್ವಾ ರಾಕ್ಷಸ್ಯಃ ಕ್ರೋಧಮೂರ್ಛಿತಾಃ ॥

ಅನುವಾದ

ಸೀತಾದೇವಿಯು ಹೇಳಿದ ಮಾತನ್ನು ಕೇಳಿ, ರಾವಣನಿಂದ ಪ್ರೇರಿತರಾದ ರಾಕ್ಷಸ ಸ್ತ್ರೀಯರು ಕೋಪೋದ್ರಿಕ್ತರಾಗಿ ಕಠೋರವಾದ ಮಾತುಗಳಿಂದ ಅವಳನ್ನು ಭಯಪಡಿಸುತ್ತಲೇ ಇದ್ದರು.॥13॥

ಮೂಲಮ್ - 14

ಭರ್ತ್ಸಯಂತಿ ಸ್ಮ ಪರುಷೈರ್ವಾಕ್ಯೈ ರಾವಣಚೋದಿತಾಃ ।
ಅವಲೀನಃ ಸ ನಿರ್ವಾಕ್ಯೋ ಹನುಮಾನ್ ಶಿಂಶಪಾದ್ರುಮೇ ॥

ಅನುವಾದ

ಶಿಂಶುಪಾವೃಕ್ಷದಲ್ಲಿ ಮೌನವಾಗಿ ಹುದುಗಿಕೊಂಡಿದ್ದ ಹನುಮಂತನು ಸೀತಾದೇವಿಯನ್ನು ಭಯಪಡಿಸುತ್ತಿದ್ದ ರಾಕ್ಷಸಿಯರ ಮಾತುಗಳನ್ನು ಶಾಂತವಾಗಿ ಕೇಳುತ್ತಿದ್ದನು.॥14॥

ಮೂಲಮ್ - 15

ಸೀತಾಂ ಸಂತರ್ಜಯಂತೀಸ್ತಾ ರಾಕ್ಷಸೀರಶೃಣೋತ್ ಕಪಿಃ ।
ತಾಮಭಿಕ್ರಮ್ಯ ಸಂಕ್ರುದ್ಧಾ ವೇಪಮಾನಾಂ ಸಮಂತತಃ ॥

ಅನುವಾದ

ಕೋಪಗೊಂಡಿದ್ದ ಆ ರಾಕ್ಷಸಿಯರು ಭಯದಿಂದ ನಡುಗುತ್ತಿದ್ದ ಸೀತಾದೇವಿಯನ್ನು ಸುತ್ತುವರಿದು ಕುಳಿತು ಪ್ರದೀಪ್ತವಾಗಿಯೂ, ಜೋಲಾಡುತ್ತಲೂ ಇದ್ದ ತುಟಿಗಳನ್ನು ಆಗಾಗ ನೆಕ್ಕಿಕೊಳ್ಳುತ್ತಾ ಅವಳನ್ನು ತಿಂದುಬಿಡುವಂತೆ ಪ್ರವರ್ತಿಸುತ್ತಿದ್ದರು.॥15॥

ಮೂಲಮ್ - 16

ಭೃಶಂ ಸಂಲಿಲಿಹುರ್ದೀಪ್ತಾನ್ ಪ್ರಲಂಬಾನ್ ದಶನಚ್ಛದಾನ್ ।
ಊಚುಶ್ಚ ಪರಮಕ್ರುದ್ಧಾಃ ಪ್ರಗೃಹ್ಯಾಶು ಪರಶ್ವಧಾನ್ ॥

ಮೂಲಮ್ - 17

ನೇಯಮರ್ಹತಿ ಭರ್ತಾರಂ ರಾವಣಂ ರಾಕ್ಷಸಾಧಿಪಮ್ ।
ಸಂಭರ್ತ್ಸ್ಯಮಾನಾ ಭೀಮಾಭೀ ರಾಕ್ಷಸೀಭಿರ್ವರಾನನಾ ॥

ಅನುವಾದ

ಪರಮ ಕ್ರುದ್ಧೆಯರಾಗಿದ್ದ ಆ ರಾಕ್ಷಸಿಯರು ಗಂಡುಕೊಡಲಿಗಳನ್ನು ಮೇಲೆತ್ತಿಕೊಂಡು, ರಾಕ್ಷಸಾಧಿಪನಾದ ರಾವಣನನ್ನು ಪತಿಯಾಗಿ ವರಿಸಲು ಇವಳು ಖಂಡಿತವಾಗಿ ಯೋಗ್ಯಳಲ್ಲ. ಆದುದರಿಂದ ಇವಳನ್ನು ಸಂಹರಿಸುವುದೇ ಯುಕ್ತವಾಗಿದೆ ಎಂದು ಗಟ್ಟಿಯಾಗಿ ಕೂಗಿಕೊಳ್ಳುತ್ತಿದ್ದರು.॥16-17॥

ಮೂಲಮ್ - 18

ಸಾ ಬಾಷ್ಪಮಪಮಾರ್ಜಂತೀ ಶಿಂಶಪಾಂ ತಾಮುಪಾಗಮತ್ ।
ತತಸ್ತಾ ಶಿಂಶಪಾಂ ಸೀತಾ ರಾಕ್ಷಸೀಭಿಃ ಸಮಾವೃತಾ ॥

ಅನುವಾದ

ಭಯಂಕರರಾದ ರಾಕ್ಷಸಿಯರು ಹೀಗೆ ಭಯಪಡಿಸುತ್ತಿರುವಾಗ ವರಾಂಗನೆಯಾದ ಸೀತಾದೇವಿಯು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಹನುಮಂತನು ಅವಿತುಕೊಂಡಿದ್ದ ಶಿಂಶುಪಾ ವೃಕ್ಷದ ಬಳಿಗೆ ಹೋದಳು.॥18॥

ಮೂಲಮ್ - 19

ಅಭಿಗಮ್ಯ ವಿಶಾಲಾಕ್ಷೀ ತಸ್ಥೌಶೋಕಪರಿಪ್ಲುತಾ ।
ತಾಂ ಕೃಶಾಂ ದೀನವದನಾಂ ಮಲಿನಾಂಬರಧಾರಿಣೀಮ್ ॥

ಮೂಲಮ್ - 20

ಭರ್ತ್ಸಯಾಂಚಕ್ರಿರೇ ಸೀತಾಂ ರಾಕ್ಷಸ್ಯಸ್ತಾಂ ಸಮಂತತಃ ।
ತತಸ್ತುಂ ವಿನತಾ ನಾಮ ರಾಕ್ಷಸೀ ಭೀಮದರ್ಶನಾ ॥

ಅನುವಾದ

ಹೀಗೆ ಶಿಂಶುಪಾವೃಕ್ಷದ ಬಳಿಗೆ ಹೋದ ಸೀತಾದೇವಿಯನ್ನು ಆ ರಾಕ್ಷಸ ಸ್ತ್ರೀಯರು ಸುತ್ತುವರಿದರು. ಆಗ ವಿಶಾಲಾಕ್ಷಿಯಾದ ಅವಳು ಶೋಕ ಮಗ್ನಳಾದಳು. ಸೀತೆಯು ರಾಮವಿಯೋಗ ವ್ಯಸನದಿಂದ ಅತ್ಯಂತ ಕೃಶಕಾಯಳಾಗಿದ್ದಳು. ದೀನವದನೆಯಾಗಿದ್ದಳು. ಮಲಿನವಾದ ವಸ್ತ್ರವನ್ನುಟ್ಟಿದ್ದಳು. ಸುತ್ತಲೂ ಕುಳಿತ್ತಿದ್ದ ಭಯಂಕರಾಕಾರದ ರಕ್ಕಸಿಯರು ಅವಳನ್ನು ಭಯಪಡಿಸುತ್ತಲೇ ಇದ್ದರು.॥19-20॥

ಮೂಲಮ್ - 21

ಅಬ್ರವೀತ್ ಕುಪಿತಾಕಾರಾ ಕರಾಲಾ ನಿರ್ಣತೋದರೀ ।
ಸೀತೇ ಪರ್ಯಾಪ್ತಮೇತಾವದ್ಭರ್ತುಃ ಸ್ನೇಹೋ ನಿದರ್ಶಿತಃ ॥

ಅನುವಾದ

ಅತ್ಯಂತ ಭಯಂಕರರಾಗಿ ಕಾಣುತ್ತಿದ್ದು, ಕೋಪಗೊಂಡಿದ್ದ, ಉಬ್ಬುಹಲ್ಲುಗಳಿದ್ದ, ಹಳ್ಳದಂತೆ ಹೊಟ್ಟೆಯಿದ್ದ, ‘ವಿನತಾ’ ಎಂಬ ರಕ್ಕಸಿಯು ಪುನಃ ಸೀತೆಗೆ ಹೇಳತೊಡಗಿದಳು.॥21॥

ಮೂಲಮ್ - 22

ಸರ್ವತ್ರಾತಿಕೃತಂ ಭದ್ರೇ ವ್ಯಸನಾಯೋಪಕಲ್ಪತೇ ।
ಪರಿತುಷ್ಟಾಸ್ಮಿ ಭದ್ರಂ ತೇ ಮಾನುಷಸ್ತೇ ಕೃತೋ ವಿಧಿಃ ॥

ಅನುವಾದ

‘‘ಎಲೈ ಸೀತೆ! ನಿನ್ನ ಗಂಡನ ವಿಷಯದಲ್ಲಿ ನಿನಗಿರುವ ಪ್ರೀತಿಯನ್ನು ಇಷ್ಟರವರೇಗೆ ಪ್ರದರ್ಶಿಸಿದ್ದನ್ನು ಸಾಕುಮಾಡು. ಮಂಗಳಾಂಗಿಯೇ! ಯಾವ ವಿಷಯದಲ್ಲೇ ಆಗಲೀ, ಯಾವಾಗಲೂ ಅತಿಯಾಗಿ ವರ್ತಿಸುವುದು ವ್ಯಸನಕ್ಕೆ ಕಾರಣವಾಗಿದೆ. ॥22॥

ಮೂಲಮ್ - 23

ಮಮಾಪಿ ತು ವಚಃ ಪಥ್ಯಂ ಬ್ರುವಂತ್ಯಾಃ ಕುರು ಮೈಥಿಲಿ ।
ರಾವಣಂ ಭಜ ಭರ್ತಾರಂ ಭರ್ತಾರಂ ಸರ್ವರಕ್ಷಸಾಮ್ ॥

ಅನುವಾದ

ಎಲೈ ಸೀತೆ! ಓರ್ವ ಮಾನವಸ್ತ್ರೀಯ ಧರ್ಮವನ್ನು ನೀನು ಚೆನ್ನಾಗಿ ಆಚರಿಸಿದ್ದಿಯೇ. ಇದರಿಂದ ನನಗೆ ಸಂತೋಷವಾಗಿದೆ. ನಿನಗೆ ಮಂಗಳವಾಗಲಿ. ಆದರೆ ನಿನಗೆ ಹಿತವಾಗುವುದನ್ನು ನಾನು ಹೇಳುತ್ತೇನೆ. ಅದರಂತೆ ನಡೆ.॥23॥

ಮೂಲಮ್ - 24

ವಿಕ್ರಾಂತಂ ರೂಪವಂತಂ ಚ ಸುರೇಶಮಿವ ವಾಸವಮ್ ।
ದಕ್ಷಿಣಂ ತ್ಯಾಗಶೀಲಂ ಚ ಸರ್ವಸ್ಯ ಪ್ರಿಯದರ್ಶನಮ್ ॥

ಮೂಲಮ್ - 25

ಮಾನುಷಂ ಕೃಪಣಂ ರಾಮಂ ತ್ಯಕ್ತ್ವಾ ರಾವಣಮಾಶ್ರಯ ।
ದಿವ್ಯಾಂಗರಾಗಾ ವೈದೇಹೀ ದಿವ್ಯಾಭರಣಭೂಷಿತಾ ॥

ಅನುವಾದ

ದೇವತೆಗಳ ಒಡೆಯನಾದ ಇಂದ್ರನಂತೆ ಪರಾಕ್ರಮಿಯೂ, ರೂಪವಂತನೂ, ಎಲ್ಲ ರಾಕ್ಷಸರಿಗೆ ಒಡೆಯನೂ ಆದ ರಾವಣನನ್ನು ಪತಿಯಂತೆ ಸೇವಿಸು. ಸಮರ್ಥನೂ, ತ್ಯಾಗಶೀಲನೂ, ಪ್ರಿಯದರ್ಶಿಯೂ ಆದ ರಾವಣೇಶ್ವರನನ್ನು ಆಶ್ರಯಿಸು. ಕೃಪಣನೂ, ತುಚ್ಛಮಾನವನೂ ಆದ ರಾಮನನ್ನು ತ್ಯಜಿಸಿಬಿಡು.॥24-25॥

ಮೂಲಮ್ - 26

ಅದ್ಯ ಪ್ರಭೃತಿ ಸರ್ವೇಷಾಂ ಲೋಕಾನಾಮೀಶ್ವರೀ ಭವ ।
ಅಗ್ನೇಃ ಸ್ವಾಹಾ ಯಥಾ ದೇವೀ ಶಚೀವೇಂದ್ರಸ್ಯ ಶೋಭನೇ ॥

ಅನುವಾದ

ಎಲೈ ವೈದೇಹಿಯೇ! ಇಂದಿನಿಂದ ಲೋಕೇಶ್ವರನಾದ ರಾವಣನನ್ನು ವರಿಸಿ, ದಿವ್ಯವಾದ ಅಂಗರಾಗಗಳನ್ನು ಪೂಸಿಕೊಂಡು, ದಿವ್ಯಾಭರಣಗಳಿಂದ ಅಲಂಕೃತಳಾಗಿ ಎಲ್ಲ ಲೋಕಗಳಿಗೂ ಒಡತಿಯಾಗು.॥26॥

ಮೂಲಮ್ - 27

ಕಿಂ ತೇ ರಾಮೇಣ ವೈದೇಹಿ ಕೃಪಣೇನ ಗತಾಯುಷಾ ।
ಏತದುಕ್ತಂ ಚ ಮೇ ವಾಕ್ಯಂ ಯದಿ ತ್ವಂ ನ ಕರಿಷ್ಯಸಿ ॥

ಅನುವಾದ

ಎಲೈ ಮಂಗಳ ಸ್ವರೂಪಳೇ! ಅಗ್ನಿದೇವನಿಗೆ ಸ್ವಾಹಾದೇವಿಯಂತೆ, ಇಂದ್ರನಿಗೆ ಶಚೀದೇವಿಯಂತೆ ನೀನು ರಾವಣೇಶ್ವರನಿಗೆ ಪತ್ನಿಯಾಗು. ಅಲ್ಪಾಯುವೂ, ದೀನನೂ ಆದ ಆ ರಾಮನಿಂದ ನಿನಗೆ ಏನಾಗಬೇಕಾಗಿದೆ?॥27॥

ಮೂಲಮ್ - 28

ಅಸ್ಮಿನ್ ಮುಹೂರ್ತೇ ಸರ್ವಾಸ್ತ್ವಾಂ ಭಕ್ಷಯಿಷ್ಯಾಮಹೇ ವಯಮ್ ।
ಅನ್ಯಾ ತು ವಿಕಟಾ ನಾಮ ಲಂಬಮಾನಪಯೋಧರಾ ॥

ಅನುವಾದ

ನಾನು ಹೇಳುವ ಮಾತಿನಂತೆ ನೀನು ನಡೆದುಕೊಳ್ಳದಿದ್ದರೆ, ಈ ಕ್ಷಣದಲ್ಲೇ ನಿನ್ನನ್ನು ನಾವೆಲ್ಲರೂ ತಿಂದುಬಿಡುತ್ತೇವೆ.’’ ॥28॥

ಮೂಲಮ್ - 29

ಅಬ್ರವೀತ್ ಕುಪಿತಾ ಸೀತಾಂ ಮುಷ್ಟಿಮುದ್ಯಮ್ಯ ಗರ್ಜತೀ ।
ಬಹೂನ್ಯಪ್ರಿಯರೂಪಾಣಿ ವಚನಾನಿ ಸುದುರ್ಮತೇ ॥

ಅನುವಾದ

ಜೋತುಬಿದ್ದ ಸ್ತನಗಳ್ಳುಳ್ಳ ವಿಕಟೆಯೆಂಬ ಮತ್ತೊಬ್ಬ ರಕ್ಕಸಿಯು ಕುಪಿತಳಾಗಿ ಮುಷ್ಟಿಯನ್ನು ಮೇಲೆತ್ತಿ ಸೀತಾದೇವಿಯನ್ನು ಭಯಪಡಿಸುತ್ತಾ ಇಂತು ನುಡಿದಳು.॥29॥

ಮೂಲಮ್ - 30

ಅನುಕ್ರೋಶಾನ್ಮೃದುತ್ವಾಚ್ಚ ಸೋಢಾನಿ ತವ ಮೈಥಿಲಿ ।
ನ ಚ ನಃ ಕುರುಷೇ ವಾಕ್ಯಂ ಹಿತಂ ಕಾಲಪುರಃಸರಮ್ ॥

ಅನುವಾದ

ಬುದ್ಧಿಹೀನಳಾದ ಎಲೈ ಮೈಥಿಲೀ! ಅಪ್ರಿಯವಾದ ನಿನ್ನ ಎಲ್ಲ ಮಾತುಗಳನ್ನು ತಾಳ್ಮೆಯಿಂದ ನಾವು ಕೇಳಿದೆವು. ಆದರೆ ನಿನ್ನ ಕುರಿತು ಕರುಣೆಯುಂಟಾಗುತ್ತಿದೆ. ಅದರಿಂದ ನಾನು ಹೇಳುವ ಮಾತನ್ನು ಕೇಳು.॥30॥

ಮೂಲಮ್ - 31

ಆನೀತಾಸಿ ಸಮುದ್ರಸ್ಯ ಪಾರಮನ್ಯೈರ್ದುರಾಸದಮ್ ।
ರಾವಣಾಂತಃಪುರಂ ಘೋರಂ ಪ್ರವಿಷ್ಟಾ ಚಾಸಿ ಮೈಥಿಲಿ ॥

ಅನುವಾದ

ಎಲೈ ಸೀತೆ! ಕಾಲಾನುಗುಣವಾಗಿ ನಿನಗೆ ಅತ್ಯಂತ ಹಿತಕರವಾದ ನಮ್ಮ ಮಾತಿನಂತೆ ನೀನು ನಡೆದುಕೊಳ್ಳುತ್ತಿಲ್ಲ. ಇತರರಿಂದ ದಾಟಲು ಅಶಕ್ಯವಾದ ಸಮುದ್ರದ ದಕ್ಷಿಣ ತೀರಕ್ಕೆ ರಾವಣನು ನಿನ್ನನ್ನು ಕರೆದು ತಂದಿರುವನು.॥31॥

ಮೂಲಮ್ - 32

ರಾವಣಸ್ಯ ಗೃಹೇ ರುದ್ಧಾಮಸ್ಮಾಭಿಸ್ತು ಸುರಕ್ಷಿತಾಮ್ ।
ನ ತ್ವಾಂ ಶಕ್ತಃ ಪರಿತ್ರಾತುಮಪಿ ಸಾಕ್ಷಾತ್ ಪುರಂದರಃ ॥

ಮೂಲಮ್ - 33

ಕುರುಷ್ವ ಹಿತವಾದಿನ್ಯಾ ವಚನಂ ಮಮ ಮೈಥಿಲಿ ।
ಅಲಮಶ್ರುಪ್ರಪಾತೇನ ತ್ಯಜ ಶೋಕಮನರ್ಥಕಮ್ ॥

ಅನುವಾದ

ಓ ಮೈಥಿಲೀ! ನೀನೀಗ ಅತಿಘೋರವಾಗಿ ಕಾಣುವ ರಾವಣನ ಅಂತಃಪುರದಲ್ಲಿ ಬಂಧಿತಳಾಗಿರುವೆ. ನಿನ್ನನ್ನು ನಾವೆಲ್ಲರೂ ಕಾವಲು ಕಾಯುತ್ತಿದ್ದೇವೆ. ಸಾಕ್ಷಾತ್ ಆ ದೇವೇಂದ್ರನೂ ಕೂಡ ನಿನ್ನನ್ನು ರಕ್ಷಿಸಲು ಸಮರ್ಥನಲ್ಲ. ಆದುದರಿಂದ ಹಿತಕರವಾದ ನನ್ನ ಮಾತಿನಂತೆ ನಡೆದುಕೊ.॥32-33॥

ಮೂಲಮ್ - 34

ಭಜ ಪ್ರೀತಿಂ ಪ್ರಹರ್ಷಂ ಚ ತ್ಯಜೈತಾಂ ನಿತ್ಯದೈನ್ಯತಾಮ್ ।
ಸೀತೇ ರಾಕ್ಷಸರಾಜೇನ ಸಹ ಕ್ರೀಡ ಯಥಾಸುಖಮ್ ॥

ಮೂಲಮ್ - 35

ಜಾನಾಸಿ ಹಿ ಯಥಾ ಭೀರು ಸ್ತ್ರೀಣಾಂ ಯೌವನಮಧ್ರುವಮ್ ।
ಯಾವನ್ನ ತೇ ವ್ಯತಿಕ್ರಾಮೇತ್ತಾವತ್ ಸುಖಮವಾಪ್ನು ಹಿ ॥

ಅನುವಾದ

ಎಲೈ ಸೀತಾದೇವೀ! ಅಳುವನ್ನು ನಿಲ್ಲಿಸು. ವ್ಯರ್ಥವಾದ ಶೋಕವನ್ನು ಪರಿತ್ಯಜಿಸು. ನಿತ್ಯದೈನ್ಯವನ್ನು ದೂರಮಾಡು. ಸುಪ್ರೀತಳಾಗು. ಉಲ್ಲಾಸದಿಂದಿರು. ಭಯಸ್ವಭಾವದವಳಾದ ಓ ಸೀತಾ! ಸ್ತ್ರೀಯರ ಯೌವನವೂ ಸ್ಥಿರವಾಗಿ ನಿಲ್ಲಲಾರದು. ಅದರ ಶೋಭೆಯು ಕ್ರಮವಾಗಿ ಕ್ಷಿಣಿಸುವುದು. ಅದು ಕಳೆದುಹೋಗುವುದರೊಳಗೆ ನೀನು ವಿಚಾರಮಾಡಿ ರಾಕ್ಷಸರಾಜನಾದ ರಾವಣನೊಡನೆ ಹಾಯಾಗಿ ರಮಿಸಿ ಸುಖವನ್ನು ಅನುಭವಿಸು.॥34-35॥

ಮೂಲಮ್ - 36

ಉದ್ಯಾನಾನಿ ಚ ರಮ್ಯಾಣಿ ಪರ್ವತೋಪವನಾನಿ ಚ ।
ಸಹ ರಾಕ್ಷಸರಾಜೇನ ಚರ ತ್ವಂ ಮದಿರೇಕ್ಷಣೇ ॥

ಮೂಲಮ್ - 37

ಸ್ತ್ರೀ ಸಹಸ್ರಾಣಿ ತೇ ಸಪ್ತ ವಶೇ ಸ್ಥಾಶ್ಯಂತಿ ಸುಂದರಿ ।
ರಾವಣಂ ಭಜ ಭರ್ತಾರಂ ಭರ್ತಾರಂ ಸರ್ವರಕ್ಷಸಾಮ್ ॥

ಅನುವಾದ

ನೀನು ರಾವಣನಿಗೆ ವ್ಯತಿರೇಕವಾಗಿ ನಡೆದುಕೊಳ್ಳದೆ, ಅವನಿಗೆ ಅನುಕೂಲಳಾಗಿ ಇದ್ದರೆ ನಿನಗೆ ಸುಖಗಳು ದಕ್ಕುವುವು. ಆದುದರಿಂದ ಓ ಸುಂದರೀ! ರಾವಣೇಶ್ವರನೊಡನೆ ರಮ್ಯವಾದ ಉದ್ಯಾನವನಗಳಲ್ಲಿಯೂ, ಪರ್ವತದ ಉಪವನಗಳಲ್ಲಿಯೂ, ಆಮೋದದಿಂದ ವಿಹರಿಸು. ಆಗ ಏಳು ಸಾವಿರ ನಮ್ಮಂತಹ ಪರಿಚಾರಿಕೆಯರು ನಿನ್ನ ಅಧೀನದಲ್ಲಿರುತ್ತಾರೆ.॥36-37॥

ಮೂಲಮ್ - 38

ಉತ್ಪಾಟ್ಯ ವಾ ತೇ ಹೃದಯಂ ಭಕ್ಷಯಿಷ್ಯಾಮಿ ಮೈಥಿಲಿ ।
ಯದಿ ಮೇ ವ್ಯಾಹೃತಂ ವಾಕ್ಯಂ ನ ಯಥಾವತ್ ಕರಿಷ್ಯಸಿ ॥

ಅನುವಾದ

ಸರ್ವರಾಕ್ಷಸರಿಗೆ ಸ್ವಾಮಿಯಾದ ರಾವಣನಿಗೆ ನೀನು ಭಾರ್ಯೆಯಾಗಿ ಅವನನ್ನು ಸೇವಿಸು. ನಾನು ಈಗ ಹೇಳಿದಂತೆ ನೀನು ನಡೆದುಕೊಳ್ಳದಿದ್ದರೆ ನಿನ್ನ ಎದೆಯನ್ನು ಸೀಳಿ ನಿನ್ನನ್ನು ತಿಂದು ಹಾಕುತ್ತೇವೆ.॥38॥

ಮೂಲಮ್ - 39

ತತಶ್ಚಂಡೋದರೀ ನಾಮ ರಾಕ್ಷಸೀ ಕ್ರೋಧಮೂರ್ಛಿತಾ ।
ಭ್ರಾಮಯಂತೀ ಮಹಚ್ಛೂಲಮಿದಂ ವಚನಮಬ್ರವೀತ್ ॥

ಅನುವಾದ

ಅನಂತರ ಅತ್ಯಂತ ಕ್ರೂರಿಯಾಗಿ ಕಾಣುತ್ತಿದ್ದ ಚಂಡೋದರಿ ಎಂಬ ರಾಕ್ಷಸಿಯು ಮಹಾಶೂಲವನ್ನು ಎತ್ತಿಕೊಂಡು ಗರ-ಗರನೆ ತಿರುಗಿಸುತ್ತಾ ಇಂತು ಹೇಳಿದಳು.॥39॥

ಮೂಲಮ್ - 40

ಇಮಾಂ ಹರಿಣಲೋಲಾಕ್ಷೀಂ ತ್ರಾಸೋತ್ಕಂಪಿಪಯೋಧರಾಮ್ ।
ರಾವಣೇನ ಹೃತಾಂ ದೃಷ್ಟ್ವಾ ದೌಹೃದೋ ಮೇ ಮಹಾನಭೂತ್ ॥

ಅನುವಾದ

ಭಯದಿಂದ ಕಂಪಿಸುತ್ತಿರುವ ವಕ್ಷಸ್ಥಳವುಳ್ಳವಳೂ, ಜಿಂಕೆಯಂತೆ ಹೆದರಿದ ಚಂಚಲ ಕಣ್ಣುಗಳುಳ್ಳವಳೂ, ರಾವಣನಿಂದ ಅಪಹರಿಸಿ ತಂದಿರುವ ಈ ಸೀತೆಯನ್ನು ನೋಡಿ ಗರ್ಭಿಣಿಯರಂತೆ ನನಗೆ ಮಹತ್ತರವಾದೊಂದು ಬಯಕೆ ಉಂಟಾಗಿದೆ. ॥40॥

ಮೂಲಮ್ - 41

ಯಕೃತ್ಪ್ಲೀಹ ಮಥೋತ್ಪೀಡಂ ಹೃದಯಂ ಚ ಸಬಂಧನಮ್ ।
ಅಂತ್ರಾಣ್ಯಪಿ ತಥಾ ಶೀರ್ಷಂ ಖಾದೇಯಮಿತಿ ಮೇ ಮತಿಃ ॥

ಅನುವಾದ

ಇವಳ ಹೃದಯದ ಬಲಭಾಗದಲ್ಲಿರುವ ಕಾಲಖಂಡ (ಯಕೃತ್ತು) ಎಂಬ ಮಾಂಸಖಂಡವನ್ನು, ಎಡಭಾಗದಲ್ಲಿರುವ ಗುಲ್ಮ (ಪ್ಲೀಹ) ಎಂಬ ಮಾಂಸಖಂಡವನ್ನು, ಎದೆಯ ಮೇಲಿರುವ ಮಾಂಸವನ್ನು, ಕರುಳುಗಳನ್ನು, ತಲೆಯನ್ನು ತಿಂದುಹಾಕಿಬಿಡಬೇಕೆಂಬ ಬುದ್ಧಿಯು ನನಗೆ ಉಂಟಾಗಿದೆ.॥41॥

ಮೂಲಮ್ - 42

ತತಸ್ತು ಪ್ರಘಸಾ ನಾಮ ರಾಕ್ಷಸೀ ವಾಕ್ಯಮಬ್ರವೀತ್ ।
ಕಂಠಮಸ್ಯಾ ನೃ ಶಂಸಾಯಾಃ ಪೀಡಯಾಮ ಕಿಮಾಸ್ಯತೇ ॥

ಮೂಲಮ್ - 43

ನಿವೇದ್ಯತಾಂ ತತೋ ರಾಜ್ಞೇ ಮಾನುಷೀ ಸಾ ಮೃತೇತಿ ಹ ।
ನಾತ್ರ ಕಶ್ಚನ ಸಂದೇಹಃ ಖಾದತೇತಿ ಸ ವಕ್ಷ್ಯತಿ ॥

ಅನುವಾದ

ಬಳಿಕ ಪ್ರಘಸಾ ಎಂಬ ರಾಕ್ಷಸಿಯು ಹೀಗೆ ಹೇಳಿದಳು ‘‘ವ್ಯರ್ಥವಾಗಿ ಆಲೋಚಿಸುತ್ತಾ ಸುಮ್ಮನೆ ಏಕೆ ಕುಳಿತಿರುವಿರಿ? ಮೂರ್ಖಳಾದ ಇವಳ ಕತ್ತನ್ನು ಹಿಸುಕಿ ಕೊಂದುಬಿಡೋಣ. ಮತ್ತೆ ಈ ಮಾನವ ಕಾಂತೆಯು ಸತ್ತುಹೋದಳೆಂದು ರಾವಣನ ಬಳಿಗೆ ಹೋಗಿ ಹೇಳಿಬಿಡೋಣ. ಆಗ ನಮ್ಮ ರಾಜನು ನಮಗೆ ‘ಅವಳನ್ನು ತಿಂದುಬಿಡಿ’ ಎಂದು ಆಜ್ಞಾಪಿಸುವನು. ಇದರಲ್ಲಿ ಸಂದೇಹವೇ ಇಲ್ಲ.॥42-43॥

ಮೂಲಮ್ - 44

ತತಸ್ತ್ವಜಾಮುಖೀ ನಾಮ ರಾಕ್ಷಸೀ ವಾಕ್ಯಮಬ್ರವೀತ್ ।
ವಿಶಸ್ಯೇಮಾಂ ತತಃ ಸರ್ವಾಃ ಸಮಾನ್ ಕುರುತ ಪಿಂಡಕಾನ್ ॥

ಮೂಲಮ್ - 45

ವಿಭಜಾಮ ತತಃ ಸರ್ವಾಃ ವಿವಾದೋ ಮೇ ನ ರೋಚತೇ ।
ಪೇಯಮಾನೀಯತಾಂ ಕ್ಷಿಪ್ರಂ ಲೇಹ್ಯಮುಚ್ಚಾವಚಂ ಬಹು ॥

ಅನುವಾದ

ಅನಂತರ ಅಜಾಮುಖಿ ಎಂಬ ರಾಕ್ಷಸಿಯು ಇಂತು ಅರುಹಿದಳು ‘‘ಗೆಳತಿಯರೇ! ನಾವೆಲ್ಲ ಸೇರಿ ಇವಳನ್ನು ಕತ್ತರಿಸಿ ಚೂರು-ಚೂರು ಮಾಡಿ ಮಾಂಸಖಂಡಗಳೆಲ್ಲವನ್ನೂ ಉಂಡೆಗಳನ್ನಾಗಿಮಾಡಿ ಸಮಾನವಾಗಿ ಹಂಚಿಕೊಳ್ಳೋಣ. ಹಂಚಿಕೆಯ ವಿಷಯದಲ್ಲಿ ವಿವಾದ ಉಂಟಾಗುವುದು ನನಗೆ ರುಚಿಸುವುದಿಲ್ಲ. ಇವಳ ಮಾಂಸದ ಜೊತೆಗೆ ಕುಡಿಯಲು ಮದ್ಯವನ್ನು, ವಿಧ-ವಿಧವಾದ ಲೇಹ್ಯ-ಚೋಷ್ಯಗಳನ್ನು ತಂದು ನಾವೆಲ್ಲರೂ ಔತಣವನ್ನು ಮಾಡೋಣ.॥44-45॥

ಮೂಲಮ್ - 46

ತತಃ ಶೂರ್ಪಣಖಾ ನಾಮ ರಾಕ್ಷಸೀ ವಾಕ್ಯಮಬ್ರವೀತ್ ।
ಅಜಾಮುಖ್ಯಾ ಯದುಕ್ತಂ ಹಿ ತದೇವ ಮಮ ರೋಚತೇ ॥

ಮೂಲಮ್ - 47

ಸುರಾ ಚಾನೀಯತಾಂ ಕ್ಷಿಪ್ರಂ ಸರ್ವಶೋಕವಿನಾಶಿನೀ ।
ಮಾನುಷಂ ಮಾಂಸಮಾಸ್ವಾದ್ಯ ನೃತ್ಯಾಮೋಥ ನಿಕುಂಭಿಲಾಮ್ ॥

ಅನುವಾದ

ಆಗ ಶೂರ್ಪನಖಿ ಎಂಬ ರಕ್ಕಸಿಯು ಹೇಳುತ್ತಾಳೆಸಖಿಯರೇ! ಅಜಾಮುಖಿಯು ಹೇಳುತ್ತಿರುವುದು ನನಗೂ ಸಮ್ಮತವಾಗಿದೆ. ಸರ್ವಶೋಕವನ್ನು ವಿನಾಶಗೊಳಿಸುವ ಮದ್ಯವನ್ನು ಬೇಗನೇ ತನ್ನಿರಿ. ಮದ್ಯದೊಡನೆ ಮನುಷ್ಯ ಮಾಂಸವನ್ನು ಭಕ್ಷಿಸಿ ನಿಕುಂಭಿಳೆಯೆಂಬ ಭದ್ರಕಾಲಿಯ ಸನ್ನಿಧಿಯಲ್ಲಿ ನರ್ತಿಸೋಣ.॥46-47॥

ಮೂಲಮ್ - 48

ಏವಂ ಸಂಭರ್ತ್ಸ್ಯಮಾನಾ ಸಾ ಸೀತಾ ಸುರಸುತೋಪಮಾ ।
ರಾಕ್ಷಸೀಭಿಃ ಸುಘೋರಾಭಿರ್ಧೈರ್ಯಮುತ್ಸೃಜ್ಯ ರೋದಿತಿ ॥

ಅನುವಾದ

ವಿಕಾರರೂಪಿಣಿಯರಾದ ರಾಕ್ಷಸಿಯರು ದೇವಕನ್ಯೆಯಂತಿದ್ದ ಸೀತಾದೇವಿಯನ್ನು ಹೀಗೆ ಭಯಗೊಳಿಸುತ್ತಿರುವಾಗ ಸೀತೆಯು ಧೈರ್ಯವನ್ನು ಕಳಕೊಂಡು ಅಳತೊಡಗಿದಳು.॥48॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಚತುರ್ವಿಂಶಃ ಸರ್ಗಃ ॥ 24 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತನಾಲ್ಕನೆಯ ಸರ್ಗವು ಮುಗಿಯಿತು.