०२३ राक्षसीकृतसीताभीषणम्

वाचनम्
ಭಾಗಸೂಚನಾ

ರಾಕ್ಷಸಿಯರು ಸೀತೆಯನ್ನು ಸಮಾಧಾನಗೊಳಿಸಲು ಪ್ರತ್ನಿಸಿದುದು

ಮೂಲಮ್ - 1

ಇತ್ಯುಕ್ತ್ವಾ ಮೈಥಿಲೀಂ ರಾಜಾ ರಾವಣಃ ಶತ್ರು ರಾವಣಃ ।
ಸಂದಿಶ್ಯ ಚ ತತಃ ಸರ್ವಾ ರಾಕ್ಷಸೀರ್ನಿರ್ಜಗಾಮ ಹ ॥

ಅನುವಾದ

ಶತ್ರುಗಳನ್ನು ಹಾ ಹಾ ಎಂದು ಕೂಗಿಕೊಳ್ಳುವಂತೆ ಮಾಡಲು ಸಮರ್ಥನಾದ ರಾವಣನು ಸೀತೆಗೆ ಹೀಗೆ ಹೇಳಿ ಅವಳನ್ನು ಬಹಳ ಬೇಗ ತನ್ನ ವಶಳಾಗುವಂತೆ ಮಾಡಬೇಕೆಂದು ಎಲ್ಲ ರಕ್ಕಸಿಯರಿಗೆ ಆಜ್ಞಾಪಿಸಿ ಅಶೋಕವನದಿಂದ ನಿರ್ಗಮಿಸಿದನು.॥1॥

ಮೂಲಮ್ - 2

ನಿಷ್ಕ್ರಾಂತೇ ರಾಕ್ಷಸೇಂದ್ರೇ ತು ಪುನರಂತಃಪುರಂ ಗತೇ ।
ರಾಕ್ಷಸ್ಯೋ ಭೀಮರೂಪಾಸ್ತಾಃ ಸೀತಾಂ ಸಮಭಿದುದ್ರುವುಃ ॥

ಮೂಲಮ್ - 3

ತತಃ ಸೀತಾಮುಪಾಗಮ್ಯ ರಾಕ್ಷಸ್ಯಃ ಕ್ರೋಧಮೂರ್ಛಿತಾಃ ।
ಪರಂ ಪರುಷಯಾ ವಾಚಾ ವೈದೇಹೀಮಿದಮಬ್ರುವನ್ ॥

ಅನುವಾದ

ರಾಕ್ಷಸೇಂದ್ರನು ಅಂತಃಪುರಕ್ಕೆ ಹೊರಟು ಹೋದ ಬಳಿಕ ಭಯಂಕರ ಆಕೃತಿಯ ರಾಕ್ಷಸ ಸ್ತ್ರೀಯರು ಸೀತೆಯ ಬಳಿಗೆ ವೇಗವಾಗಿ ಧಾವಿಸಿ ಬಂದರು. ಸೀತೆಯ ಬಳಿಗೆ ಬಂದು ಕ್ರೋಧಾಭಿಭೂತೆಯರಾದ ಆ ರಕ್ಕಸಿಯರು ಅತ್ಯಂತ ಕಠೋರವಾಗಿ ಹೀಗೆ ಹೇಳಿದರು.॥2-3॥

ಮೂಲಮ್ - 4

ಪೌಲಸ್ತಸ್ಯ ವರಿಷ್ಠಸ್ಯ ರಾವಣಸ್ಯ ಮಹಾತ್ಮನಃ ।
ದಶಗ್ರೀವಸ್ಯ ಭಾರ್ಯಾತ್ವಂ ಸೀತೇ ನ ಬಹುಮನ್ಯಸೇ ॥

ಅನುವಾದ

‘‘ಎಲೈ ಸೀತೆ! ರಾವಣನು ಪುಲಸ್ತ್ಯ ವಂಶಜನೂ, ಮಹಾತ್ಮನೂ, ಶ್ರೇಷ್ಠನೂ ಆಗಿದ್ದಾನೆ. ಅಂತಹ ದಶಕಂಠನಿಗೆ ಭಾರ್ಯೆಯಾಗುವುದನ್ನು ನೀನು ಒಂದು ದೊಡ್ಡ ಪುರಸ್ಕಾರವೆಂದು ಏಕೆ ಭಾವಿಸುತ್ತಿಲ್ಲ? ಇದು ನಿನ್ನ ಮೌಢ್ಯವೇ ಸರಿ’’॥4॥

ಮೂಲಮ್ - 5

ತತಸ್ತ್ವೇಕ ಜಟಾ ನಾಮ ರಾಕ್ಷಸೀ ವಾಕ್ಯಮಬ್ರವೀತ್ ।
ಆಮಂತ್ರ್ಯ ಕ್ರೋಧತಾಮ್ರಾಕ್ಷೀ ಸೀತಾಂ ಕರತಲೋದರೀಮ್ ॥

ಅನುವಾದ

ರಾಕ್ಷಸಿಯರೆಲ್ಲರೂ ಒಟ್ಟಾಗಿ ಹೀಗೆ ಹೇಳಿದ ನಂತರ ಆ ರಾಕ್ಷಸಿಯರಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಿಂದ ಹೇಳತೊಡಗಿದರು. ಕ್ರೋಧದಿಂದ ಕೆಂಗಣ್ಣಳಾಗಿದ್ದ ‘ಏಕಜಟಾ’ ಎಂಬ ರಕ್ಕಸಿಯು ಸಣ್ಣನಡುವುಳ್ಳ ಸೀತಾದೇವಿಗೆ ಸಂಬೋಧಿಸಿ ಹೀಗೆ ಹೇಳಿದಳು.॥5॥

ಮೂಲಮ್ - 6

ಪ್ರಜಾಪತೀನಾಂ ಷಣ್ಣಾಂ ತು ಚತುರ್ಥೋ ಯಃ ಪ್ರಜಾಪತಿಃ ।
ಮಾನಸೋ ಬ್ರಹ್ಮಣಃ ಪುತ್ರಃ ಪುಲಸ್ತ್ಯ ಇತಿ ವಿಶ್ರುತಃ ॥

ಅನುವಾದ

ಎಲೆಗೆ ಸೀತೆ! ಮರಿಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತು ಎಂಬ ಆರು ಮಂದಿ ಪ್ರಜಾಪತಿಗಳಲ್ಲಿ ಪುಲಸ್ತ್ಯನು ನಾಲ್ಕನೆಯವನು. ಅವನು ಬ್ರಹ್ಮಮಾನಸ ಪುತ್ರನೂ, ವಿಖ್ಯಾತನೂ ಆಗಿರುವನು.॥6॥

ಮೂಲಮ್ - 7

ಪುಲಸ್ತ್ಯಸ್ಯ ತು ತೇಜಸ್ವೀ ಮಹರ್ಷಿರ್ಮಾನಸಃ ಸುತಃ ।
ನಾಮ್ನಾ ಸ ವಿಶ್ರವಾ ನಾಮ ಪ್ರಜಾಪತಿಸಮಪ್ರಭಃ ॥

ಅನುವಾದ

ತೇಜಸ್ವಿಯಾದ ವಿಶ್ರವಸನು ಮಹರ್ಷಿ ಪುಲಸ್ತ್ಯನಿಗೆ ಮಾನಸಪುತ್ರನು. ಅವನು ತೇಜಸ್ಸಿನಲ್ಲಿ ಬ್ರಹ್ಮನಂತೆ ಇರುವವನು.॥7॥

ಮೂಲಮ್ - 8

ತಸ್ಯ ಪುತ್ರೋ ವಿಶಾಲಾಕ್ಷಿ ರಾವಣಃ ಶತ್ರುರಾವಣಃ ।
ತಸ್ಯ ತ್ವಂ ರಾಕ್ಷಸೇಂದ್ರಸ್ಯ ಭಾರ್ಯಾ ಭವಿತುಮರ್ಹಸಿ ॥

ಅನುವಾದ

ಎಲೈ ವಿಶಾಲಾಕ್ಷಿಯೇ! ಸುಪ್ರಸಿದ್ಧನಾದ ವಿಶ್ರವಸುವಿನ ಮಗನೇ ರಾವಣನು. ಅವನು ಅತಿವೀರ ಭಯಂಕರನೂ, ರಾಕ್ಷಸರಿಗೆಲ್ಲ ಪ್ರಭುವೂ ಆದ ಅವನಿಗೆ ಭಾರ್ಯೆಯಾಗಲು ನೀನು ಯೋಗ್ಯಳಾಗಿರುವೆ.॥8॥

ಮೂಲಮ್ - 9

ಮಯೋಕ್ತಂ ಚಾರುಸರ್ವಾಂಗಿ ವಾಕ್ಯ ಕಿಂ ನಾನುಮನ್ಯಸೇ ।
ತತೋ ಹರಿಜಟಾ ನಾಮ ರಾಕ್ಷಸೀ ವಾಕ್ಯಮಬ್ರವೀತ್ ॥

ಮೂಲಮ್ - 10

ವಿವರ್ತ್ಯ ನಯನೇ ಕೋಪಾನ್ಮಾರ್ಜಾರಸದೃಶೇಕ್ಷಣಾ ।
ಯೇನ ದೇವಾಸ್ತ್ರಯಸ್ತ್ರಿಂಶದ್ದೇವರಾಜಶ್ಚ ನಿರ್ಜಿತಾಃ ॥

ಮೂಲಮ್ - 11

ತಸ್ಯ ತ್ವಂ ರಾಕ್ಷಸೇಂದ್ರಸ್ಯ ಭಾರ್ಯಾ ಭವಿತುಮರ್ಹಸಿ ।
ತತಸ್ತು ಪ್ರಘಸಾ ನಾಮ ರಾಕ್ಷಸೀ ಕ್ರೋಧಮೂರ್ಛಿತಾ ॥

ಅನುವಾದ

ಸುಂದರಾಂಗಿಯೇ! ನನ್ನ ಈ ಮಾತನ್ನು ನೀನು ಏಕೆ ಅನುಮೋದಿಸುವುದಿಲ್ಲ? ಆಗ ಸೀತೆಯು ಉತ್ತರಿಸದಿದ್ದಾಗ, ಬೆಕ್ಕಿನ ಕಣ್ಣಿನವಳಾದ ‘ಹರಿಜಟಾ’ ಎಂಬ ರಾಕ್ಷಸಿಯು ಕೋಪದಿಂದ ಕಣ್ಣುಗಳನ್ನು ಅರಳಿಸಿಕೊಂಡು ಹೀಗೆ ನುಡಿದಳು-ರಾವಣನು ದೇವೇಂದ್ರನ ಸಹಿತ ಮೂವತ್ತಮೂರು ಕೋಟಿ ಪ್ರಮುಖ ದೇವತೆಗಳನ್ನು ತನ್ನ ಅತುಲ ಪರಾಕ್ರಮದಿಂದ ಜಯಿಸಿರುವನು. ಅಂತಹ ರಾಕ್ಷಸೇಂದ್ರನಿಗೆ ಮಡದಿಯಾಗಲು ನೀನು ಅರ್ಹಳಾಗಿರುವೆ. ರಾವಣನು ಗರ್ವದಿಂದ ಉಬ್ಬಿ ಹೋದ ಮಹಾಪರಾಕ್ರಮಿಯು. ಶೂರನೂ, ಯುದ್ಧದಲ್ಲಿ ಎಂದೂ ಬೆನ್ನುತೋರದಿರುವವನೂ, ಮಹಾಬಲಶಾಲಿಯೂ, ಮಹಾವೀರ್ಯವಂತನೂ ಆದ ಅವನಿಗೆ ಭಾರ್ಯೆಯಾಗಲು ನೀನೇಕೆ ಅಪೇಕ್ಷಿಸುವುದಿಲ್ಲ?॥9-11॥

ಮೂಲಮ್ - 12

ಬರ್ತ್ಸಯಂತೀ ತದಾ ಘೋರಮಿದಂ ವಚನಮಬ್ರವೀತ್ ।
ವೀರ್ಯೋತ್ತಿಸ್ಯ ಶೂರಸ್ಯ ಸಂಗ್ರಾಮೇಷ್ವನಿವರ್ತಿನಃ ॥

ಮೂಲಮ್ - 13

ಬಲಿನೋ ವೀರ್ಯಯುಕ್ತಸ್ಯ ಭಾರ್ಯಾತ್ವಂ ಕಿಂ ನ ಲಪ್ಸಸೇ ।
ಪ್ರಿಯಾಂ ಬಹುಮತಾಂ ಭಾರ್ಯಾಂ ತ್ಯಕ್ತ್ವಾ ರಾಜಾ ಮಹಾಬಲಃ ॥

ಅನುವಾದ

ಆಗಲೂ ಸೀತಾದೇವಿಯು ಮೌನದಿಂದಿರುವಾಗ - ‘ಪ್ರಘಸಾ’ ಎಂಬ ರಾಕ್ಷಸಿಯು ಕೋಪೋದ್ರಿಕ್ತಳಾಗಿ ಸೀತೆಯನ್ನು ಬೆದರಿಸುತ್ತಾ ಕಠೋರವಾದ ಈ ಮಾತನ್ನು ಹೇಳಿದಳು — ಎಲ್ಲ ಶ್ರೇಷ್ಠ ನಾರಿಯರಲ್ಲಿ ಅತ್ಯಂತ ಪ್ರಿಯಳಾದ, ಎಲ್ಲರಿಂದ ಗೌರವಿಸಲ್ಪಡುತ್ತಿರುವ, ಮಹಾಭಾಗ್ಯಶಾಲಿನಿಯಾದ ಮಂದೋದರಿಯನ್ನು ಕೂಡ ಪರಿತ್ಯಜಿಸಿ ಮಹಾಬಲನಾದ ರಾವಣನು ನಿನ್ನನ್ನು ಪಡೆಯಲು ಅಪೇಕ್ಷಿಸಿದ್ದಾನೆ.॥12-13॥

ಮೂಲಮ್ - 14

ಸರ್ವಾಸಾಂ ಚ ಮಹಾಭಾಗಾಂ ತ್ವಾಮುಪೈಷ್ಯತಿ ರಾವಣಃ ।
ಸಮೃದ್ಧಂ ಸ್ತ್ರೀಸಹಸ್ರೇಣ ನಾನಾರತ್ನೋಪಶೋಭಿತಮ್ ॥

ಅನುವಾದ

ಅಮೂಲ್ಯವಾದ ರತ್ನಗಳಿಂದ ಶೋಭಿಸುತ್ತಿರುವ ಸಾವಿರಾರು ಕಾಂತೆಯರು ರಾವಣನ ಅಂತಃಪುರದಲ್ಲಿ ಇದ್ದಾರೆ. ಅಂತಹ ತರುಣೀಮಣಿಗಳನ್ನು ಕಡೆಗಣಿಸಿದ ರಾವಣನು ನಿನ್ನನ್ನು ಸೇರಲು ತವಕಿಸುತ್ತಿದ್ದಾನೆ.॥14॥

ಮೂಲಮ್ - 15

ಅಂತಃಪುರಂ ಸಮುತ್ಸೃಜ್ಯ ತ್ವಾಮುಪೈಷ್ಯತಿ ರಾವಣಃ ।
ಅನ್ಯಾ ತು ವಿಕಟಾ ನಾಮ ರಾಕ್ಷಸೀ ವಾಕ್ಯಮಬ್ರವೀತ್ ॥

ಮೂಲಮ್ - 16

ಅಸಕೃದ್ದೇವತಾ ಯುದ್ಧೇ ನಾಗಗಂಧರ್ವದಾನವಾಃ ।
ನಿರ್ಜಿತಾಃ ಸಮರೇ ಯೇನ ಸ ತೇ ಪಾರ್ಶ್ವಮುಪಾಗತಃ ॥

ಮೂಲಮ್ - 17

ತಸ್ಯ ಸರ್ವಸಮೃದ್ಧಸ್ಯ ರಾವಣಸ್ಯ ಮಹಾತ್ಮನಃ ।
ಕಿಮದ್ಯ ರಾಕ್ಷಸೇಂದ್ರಸ್ಯ ಭಾರ್ಯಾತ್ವಂ ನೇಚ್ಛಸೇಧಮೇ ॥

ಅನುವಾದ

ಅವರು ಹೇಳುತ್ತಿದ್ದುದನ್ನು, ಕೇಳುತ್ತಾ ಸುಮ್ಮನೆ ಕುಳಿತಿರುವ ಸೀತೆಗೆ ‘ವಿಕಟಾ’ ಎಂಬ ಮತ್ತೋರ್ವ ರಕ್ಕಸಿಯು ಹೀಗೆ ಹೇಳುತ್ತಾಳೆ ರಾವಣನು ಸಮರಾಂಗಣದಲ್ಲಿ ದೇವತೆಗಳನ್ನು ನಾಗರನ್ನು, ಗಂಧರ್ವರನ್ನು, ಹಲವಾರು ಬಾರಿ ಪರಾಭವಗೊಳಿಸಿರುವನು. ಅಂತಹ ಮಹಾಭಯಂಕರ ಪರಾಕ್ರಮಿಯಾದ, ಮಹಾಶೂರನಾದ, ರಾವಣೇಶ್ವರನು ಪ್ರಣಯಭಿಕ್ಷೆಯನ್ನು ಬೇಡುತ್ತಾ ನಿನ್ನ ಬಳಿಗೆ ಬಂದಿರುವನು. ಸರ್ವ ಸಮೃದ್ಧಿಯನ್ನು ಹೊಂದಿರುವ ಮಹಾತ್ಮನಾದ ರಾಕ್ಷಸೇಂದ್ರನಿಗೆ ಭಾರ್ಯೆಯಾಗಲು ಬಯಸದೆ ಇರುವ ನೀನು ನಿಜವಾಗಿ ಅಧಮಳಾಗಿರುವೆ.॥15-17॥

ಮೂಲಮ್ - 18

ತತಸ್ತು ದುರ್ಮುಖೀ ನಾಮ ರಾಕ್ಷಸೀ ವಾಕ್ಯಮಬ್ರವೀತ್ ।
ಯಸ್ಯ ಸೂರ್ಯೋ ನ ತಪತಿ ಭೀತೋ ಯಸ್ಯ ಚ ಮಾರುತಃ ॥

ಮೂಲಮ್ - 19

ನ ವಾತಿ ಚಾಸಿತಾಪಾಂಗಿ ಕಿಂ ತ್ವಂ ತಸ್ಯ ನ ತಿಷ್ಠಸಿ ।
ಪುಷ್ಪವೃಷ್ಟಿಂ ಚ ತರವೋ ಮುಮುಚುರ್ಯಸ್ಯ ವೈ ಭಯಾತ್ ॥

ಮೂಲಮ್ - 20

ಶೈಲಾಶ್ಚ ಸುಭ್ರು ಪಾನೀಯಂ ಜಲದಾಶ್ಚ ಯದೇಚ್ಛತಿ ।
ತಸ್ಯ ನೈರ್ಋತರಾಜಸ್ಯ ರಾಜರಾಜಸ್ಯ ಭಾಮಿನಿ ॥

ಅನುವಾದ

ಬಳಿಕ ‘ದುರ್ಮುಖಿ’ ಎಂಬ ರಾಕ್ಷಸಿಯು ಸೀತೆಗೆ ಹೀಗೆ ಉಪದೇಶಿಸತೊಡಗಿದಳು ಎಲೈ ಸುಂದರೀ! ರಾವಣನಿಗೆ ಭಯಪಟ್ಟು ಸೂರ್ಯನು ಕೂಡ ತೀಕ್ಷ್ಣವಾದ ಕಿರಣಗಳನ್ನು ಪಸರಿಸುವುದಿಲ್ಲ. ವಾಯುವು ಮಂದವಾಗಿ ಬೀಸುತ್ತಿರುವನು. ಓ ವಿಶಾಲಾಕ್ಷಿ! ಅಂತಹ ಪ್ರಭುವಿನ ಬಳಿಯಲ್ಲಿರಲು ನೀನೇಕೆ ಬಯಸುತ್ತಿಲ್ಲ? ಅವನಿಗೆ ಭಯಪಟ್ಟು ವೃಕ್ಷಗಳೂ ಕೂಡ ಅವನ ಬಯಕೆಯಂತೆ ಹೂವುಗಳನ್ನು ಸುರಿಸುತ್ತವೆ. ಹಾಗೆಯೇ ಪರ್ವತಗಳೂ, ಮೇಘಗಳೂ, ಕೂಡ ಅವನು ಬಯಸಿದಾಗ ಮಧುರ ಜಲವನ್ನು ಸುರಿಸುತ್ತವೆ. ಎಲೈ ಭಾಮಿನೀ! ಅಂತಹ ರಾಕ್ಷಸ ಚಕ್ರವರ್ತಿಯಾದ ರಾವಣೇಶ್ವರನ ಭಾರ್ಯೆಯಾಗಲು ನೀನೇಕೆ ಮನಸ್ಸು ಮಾಡುತ್ತಿಲ್ಲ? ಅವನ ಪತ್ನಿಯಾಗಲು ಏಕೆ ಸಿದ್ಧಳಾಗುವುದಿಲ್ಲ?॥18-20॥

ಮೂಲಮ್ - 21

ಕಿಂ ತ್ವಂ ನ ಕುರುಷೇ ಬುದ್ಧಿಂ ಭಾರ್ಯಾರ್ಥೆ ರಾವಣಸ್ಯ ಹಿ ।
ಸಾಧು ತೇ ತತ್ತ್ವತೋ ದೇವಿ ಕಥಿತಂ ಸಾಧು ಭಾಮಿನಿ ।
ಗೃಹಾಣ ಸುಸ್ಮಿತೇ ವಾಕ್ಯಮನ್ಯಥಾ ನ ಭವಿಷ್ಯಸಿ ॥

ಅನುವಾದ

ಮಂದಸ್ಮಿತೆಯಾದ ಎಲೈ ಭಾಮಿನೀ! ದೇವೀ! ಒಳ್ಳೆಯ ರೀತಿಯಿಂದ ಹೇಳುತ್ತಿರುವ ನಮ್ಮ ಮಾತನ್ನು ಚೆನ್ನಾಗಿ ಪರಿಗ್ರಹಿಸು. ಹಾಗೇನಾದರೂ ನಮ್ಮ ಮಾತುಗಳನ್ನು ಕೇಳದಿದ್ದರೆ ನೀನು ಖಂಡಿತವಾಗಿ ಉಳಿಯಲಾರೆ.॥21॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ತ್ರಯೋವಿಂಶಃ ಸರ್ಗಃ ॥ 23 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತಮೂರನೆಯ ಸರ್ಗವು ಮುಗಿಯಿತು.